Tag: Childrens

  • ಜ್ಯೂಸ್ ಎಂದು ವಿಷ ಕುಡಿದ ಮಕ್ಕಳ ಪ್ರಕರಣಕ್ಕೆ ಟ್ವಿಸ್ಟ್- ಪೊಲೀಸ್ ಠಾಣೆ ಮೆಟ್ಟಿಲೇರಿದ ತಂದೆ

    ಜ್ಯೂಸ್ ಎಂದು ವಿಷ ಕುಡಿದ ಮಕ್ಕಳ ಪ್ರಕರಣಕ್ಕೆ ಟ್ವಿಸ್ಟ್- ಪೊಲೀಸ್ ಠಾಣೆ ಮೆಟ್ಟಿಲೇರಿದ ತಂದೆ

    – ಮಣ್ಣು ಮಾಡಿದ ಶವಗಳ ಪರೀಕ್ಷೆಗೆ ಮುಂದಾದ ಪೊಲೀಸರು

    ಯಾದಗಿರಿ: ಜ್ಯೂಸ್ ಎಂದು ಇಬ್ಬರು ಕಂದಮ್ಮಗಳು ವಿಷ ಸೇವಿಸಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ಬೇಧಿಸುವಂತೆ ಮಕ್ಕಳ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಫೆಬ್ರವರಿ 25 ರಂದು ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಕೋಡಾಲ್ ಗ್ರಾಮದಲ್ಲಿ ಮಕ್ಕಳಿಬ್ಬರು ಸಾವನ್ನಪ್ಪಿದ್ದರು. ಆದರೆ ಮರಣೋತ್ತರ ಪರೀಕ್ಷೆ ಮಾಡದೇ 2 ವರ್ಷದ ಖೈರಾನ್ ಬಿ ಹಾಗೂ 4 ತಿಂಗಳ ಮಗು ಅಪ್ಸಾನಾ ಶವವನ್ನು ಹಾಗೇ ಹೂಳಲಾಗಿತ್ತು. ಮಕ್ಕಳು ಜಿಲ್ಲಾಸ್ಪತ್ರೆಗೆ ದಾಖಲಾದರೂ, ಮರಣೋತ್ತರ ಪರೀಕ್ಷೆ ಮಾಡದೇ ಮಕ್ಕಳ ಮೃತ ದೇಹಗಳನ್ನು ಪಾಲಕರಿಗೆ ನೀಡಲಾಗಿತ್ತು. ಪೊಲೀಸರು ಸಹ ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ, ಕೈ ತೊಳೆದುಕೊಂಡಿದ್ದರು.

    ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಘಟನೆ ನಡೆದು ಮೂರು ದಿನಗಳ ಬಳಿಕ ಸ್ವತಃ ಮಕ್ಕಳ ತಂದೆ ಗೋರೆಸಾಬ್ ತನ್ನ ಮಕ್ಕಳ ಸಾವಿನ ರಹಸ್ಯ ಬೇಧಿಸುವಂತೆ, ಎಸ್‍ಪಿಗೆ ದೂರು ನೀಡಿದ್ದಾರೆ. ಮಕ್ಕಳ ತಾಯಿ ಶಹನಾಹಾಜ್ ಹೇಳುವ ಪ್ರಕಾರ ತನ್ನ 2 ವರ್ಷದ ಮಗು ಖೈರಾನ್ ಹಾಗೂ 4 ತಿಂಗಳ ಅಪ್ಸಾನ ಕಟ್ಟೆಯ ಮೇಲೆ ಆಟವಾಡುತ್ತಿದ್ದಾಗ ಜ್ಯೂಸ್ ಎಂದು ಭಾವಿಸಿ ಅಲ್ಲಿಯೇ ಇದ್ದ ಕ್ರಿಮಿನಾಶಕವನ್ನು ಕುಡಿದಿದ್ದರು. ನಂತರ ಮಕ್ಕಳ ನರಳಾಟ ನೋಡದೆ ತಾನೂ ಸಹ ವಿಷ ಕುಡಿದಿರುವುದಾಗಿ ಮಕ್ಕಳ ತಾಯಿ ಹೇಳಿಕೆ ನೀಡಿದ್ದರು.


    ನಂತರ ಊರಿನ ಕೆಲ ಪ್ರಮುಖರು ಮಧ್ಯಸ್ಥಿಕೆ ವಹಿಸಿ ಪ್ರಕರಣ ದಾಖಲಿಸಬಾರದು ಎಂದು ಮನವಿ ಮಾಡಿದರು. ಈ ಮನವಿಗೆ ಮಣಿದ ವಡಗೇರಾ ಪೊಲೀಸರು ಕೇಸ್ ಮಾಡದೆ, ತಾಯಿ ಹೇಳಿಕೆ ನಿಜವೆಂದು, ಮಕ್ಕಳ ದೇಹವನ್ನು ಆಸ್ಪತ್ರೆಯಿಂದ ನೇರವಾಗಿ ಕುಟುಂಬಸ್ಥರಿಗೆ ಒಪ್ಪಿಸಿದ್ದರು. ಆದರೆ ಶಹನಾಹಾಜ್ ಮನೆಯಲ್ಲಿ ಕೆಲ ಕೌಟುಂಬಿಕ ಜಗಳವಿದ್ದು, ಮನನೊಂದ ಶಹನಾಹಾಜ್ ತಾನು ವಿಷ ಕುಡಿದು ಮಕ್ಕಳಿಗೆ ಕುಡಿಸಿದ್ದಾಳೆ. ದುರದೃಷ್ಟವಶಾತ್ ತಾಯಿ ಬದುಕುಳಿದು ಪುಟ್ಟ ಕಂದಮ್ಮಗಳು ಜೀವ ಕಳೆದುಕೊಂಡಿವೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಮಕ್ಕಳ ತಂದೆ ದೂರು ನೀಡಿದ್ದು, ಪ್ರಕರಣವನ್ನು ರೀ ಓಪನ್ ಮಾಡಲಾಗಿದೆ. ಈ ಕೇಸನ್ನು ಗಂಭೀರವಾಗಿ ಪರಿಗಣಿಸಿರುವ ಯಾದಗಿರಿ ಜಿಲ್ಲಾ ಪೋಲಿಸ್ ತಂಡ, ಎಸಿ ಶಂಕರಗೌಡ, ತಹಶೀಲ್ದಾರ್ ಸುರೇಶ್ ನೇತೃತ್ವದಲ್ಲಿ ಮಣ್ಣು ಮಾಡಿದ ಶವಗಳನ್ನು ಹೊರ ತೆಗೆದು ಶವ ಪರೀಕ್ಷೆಗೆ ಮುಂದಾಗಿದ್ದಾರೆ.

  • ಸಚಿವರ ಶಾಲಾ ವಾಸ್ತವ್ಯದಿಂದ ಮಕ್ಕಳಿಗೆ ಸಿಕ್ತು ವಾಹನ ಸೌಲಭ್ಯ

    ಸಚಿವರ ಶಾಲಾ ವಾಸ್ತವ್ಯದಿಂದ ಮಕ್ಕಳಿಗೆ ಸಿಕ್ತು ವಾಹನ ಸೌಲಭ್ಯ

    ಚಾಮರಾಜನಗರ: ಜಿಲ್ಲೆಯ ಅರಣ್ಯದಂಚಿನ ಗ್ರಾಮ ಪಚ್ಚೆದೊಡ್ಡಿ ವಿದ್ಯಾರ್ಥಿಗಳಿಗೆ ಕೊನೆಗೂ ವಾಹನ ಸೌಲಭ್ಯ ಕಲ್ಪಿಸಲಾಗಿದೆ.

    ಹನೂರು ತಾಲೋಕಿನ ಅರಣ್ಯ ಗ್ರಾಮವಾದ ಪಚ್ಚೆದೊಡ್ಡಿಯಿಂದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರತಿದಿನ ಅಜ್ಜೀಪುರಕ್ಕೆ ಕಾಡಿನ ದಾರಿಯಲ್ಲೇ ನಡೆದು ಬರುತ್ತಿದ್ದರು. ಕಲ್ಲು ಮುಳ್ಳುಗಳ ಹಾದಿಯಲ್ಲಿ ಪ್ರಾಣಿಗಳ ಭಯದ ನಡುವೆ 10 ಕಿಲೋಮೀಟರ್ ನಡೆಯಬೇಕಿದ್ದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕುಂಠಿತಗೊಂಡಿತ್ತು.

    ಇತ್ತೀಚೆಗೆ ಪಚ್ಚೆದೊಡ್ಡಿಯಲ್ಲಿ ಶಾಲಾ ವಾಸ್ತವ್ಯ ಮಾಡಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ವಾಹನ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಅರಣ್ಯ ಇಲಾಖೆಯ ಪರಿಸರ ಅಭಿವೃದ್ಧಿ ಸಮಿತಿಯಿಂದ ವಾಹನ ಸೌಲಭ್ಯ ಕಲ್ಪಿಸಲಾಗಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಡಂಚಿನ ಗ್ರಾಮದಲ್ಲಿ ಶಿಕ್ಷಣ ಸಚಿವರ ಮೂರನೇ ಶಾಲಾ ವಾಸ್ತವ್ಯ

  • ‘ಸ್ವಲ್ಪ ಹೊತ್ತು ನನ್ನೊಂದಿಗೆ ಆಡು’- ಮಕ್ಕಳೊಂದಿಗೆ ಆಟವಾಡಲು ಬಂದ ಬಾಲಕಿಯ ರೇಪ್

    ‘ಸ್ವಲ್ಪ ಹೊತ್ತು ನನ್ನೊಂದಿಗೆ ಆಡು’- ಮಕ್ಕಳೊಂದಿಗೆ ಆಟವಾಡಲು ಬಂದ ಬಾಲಕಿಯ ರೇಪ್

    ಅಹಮದಾಬಾದ್: ತನ್ನ ಮಕ್ಕಳೊಂದಿಗೆ ಆಟವಾಡಲು ಬಂದ ಪುಟ್ಟ ಬಾಲಕಿಯ ಮೇಲೆ 40 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಹೀನಾಯ ಘಟನೆಯೊಂದು ಅಹಮದಾಬಾದ್‍ನಲ್ಲಿ ನಡೆದಿದೆ.

    ಬಾಲಕಿಯ ಮನೆ ಆರೋಪಿ ಮನೆಯ ಪಕ್ಕದಲ್ಲಿಯೇ ಇದೆ. ಹೀಗಾಗಿ ಬಾಲಕಿ ಆರೋಪಿಯ ಮಕ್ಕಳ ಜೊತೆ ಆಟವಾಡಲೆಂದು ಭಾನುವಾರ ತೆರಳಿದ್ದಾಳೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡಿರುವ ಆರೋಪಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಆರೋಪಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನ ಇಬ್ಬರು ಮಕ್ಕಳೊಂದಿಗೆ ಆಟವಾಡಲು ಬಾಲಕಿ ಆಗಾಗ್ಗೆ ಆರೋಪಿ ಮನೆಗೆ ಬರುತ್ತಿದ್ದಳು. ಭಾನುವಾರವೂ ಬಾಲಕಿ ತನ್ನ ಗೆಳೆಯರೊಂದಿಗೆ ಆಟವಾಡಲೆಂದು ಆರೋಪಿ ಮನೆಗೆ ತೆರಳಿದ್ದಾಳೆ. ಈ ಸಂದರ್ಭವನ್ನೇ ಉಪಯೋಗಿಸಿಕೊಂಡ ಆರೋಪಿ, ತನ್ನಿಬ್ಬರು ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕಿಯನ್ನು ಕರೆದು ‘ಸ್ವಲ್ಪ ಹೊತ್ತು ನನ್ನೊಂದಿಗೆ ಆಟವಾಡು’ ಎಂದು ಹೇಳಿ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಸೋಲ ಹೈಕೋರ್ಟ್ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಯಾರಿಗೂ ತಿಳಿಯಬಾರದೆಂದು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಸ್ಪತ್ರೆಯಿಂದ ಭಯದಿಂದಲೇ ಬಂದ ಬಾಲಕಿ, ತನ್ನ ತಾಯಿ ಬಳಿ ನಡೆದ ಘಟನೆಯನ್ನೆಲ್ಲ ವಿವರಿಸಿದ್ದಾಳೆ. ಕೂಡಲೇ ಗಾಬರಿಯಾದ ಬಾಲಕಿ ತಾಯಿ, ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಆರೋಪಿ ವಿರುದ್ಧ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಅಲ್ಲದೆ ಆತನನ್ನು ಟ್ರೇಸ್ ಮಾಡಲು ಕೂಡ ಸಾಧ್ಯವಿಲ್ಲ. ಯಾಕಂದರೆ ಆತ ತನ್ನ ಮೊಬೈಲನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಹೀಗಾಗಿ ಆತನ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ.

  • ಅವಳಿಗೆ ಗಂಡ ಬೇಡವಾಗಿದ್ದ, ಇವನಿಗೆ ಹೆಂಡ್ತಿ ಬೇಡವಾಗಿದ್ಳು- ಇಬ್ಬರು ಸೇರಲು ಪತ್ನಿಯನ್ನ ಕೊಂದ ಡಾಕ್ಟರ್

    ಅವಳಿಗೆ ಗಂಡ ಬೇಡವಾಗಿದ್ದ, ಇವನಿಗೆ ಹೆಂಡ್ತಿ ಬೇಡವಾಗಿದ್ಳು- ಇಬ್ಬರು ಸೇರಲು ಪತ್ನಿಯನ್ನ ಕೊಂದ ಡಾಕ್ಟರ್

    – ಕೊಲೆಗೈದು ‘ಈಟಿಂಗ್ ದೋಸೆ ವಿಥ್ ಸನ್’ ಅಂತ ಸ್ಟೇಟಸ್ ಹಾಕ್ದ
    – ಶವದ ಜೊತೆ 6 ತಿಂಗ್ಳ ಕಂದಮ್ಮನ ಬಿಟ್ಟು ಹೋದ
    – ಪರಸ್ತ್ರೀ ಸೆರಗಲ್ಲಿ ಮಲಗಲು ಹೆಂಡ್ತಿಯನ್ನ ಕೊಂದ
    – ಒಂದು ಕೊಲೆ, ಎರಡು ಆತ್ಮಹತ್ಯೆ, ಮೂರು ಮಕ್ಕಳು ಅನಾಥ
    – ಅವ್ಳು ಬಿಟ್ಟು ಬಂದ್ಳು, ಇವ್ನು ಕೊಂದು ಹೋಗಲು ರೆಡಿಯಾಗಿದ್ದ

    ಚಿಕ್ಕಮಗಳೂರು: ಜಿಲ್ಲೆಯ ಕಡೂರಿನಲ್ಲಿ ನಡೆದಿದ್ದ ಒಂಟಿ ಮಹಿಳೆ ಕತ್ತು ಸೀಳಿ ಮನೆ ದೋಚಿದ್ದ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ಹೆಂಡತಿ ಸತ್ತಾಗ ಮೊಸಳೆ ಕಣ್ಣೀರಿಟ್ಟಿದ್ದ ವೈದ್ಯ ಮಹಾಶಯನೇ ಮರ್ಡರ್ ಮಿಸ್ಟರಿ ಹಿಂದಿರುವ ಸರ್ಜರಿ ಎಕ್ಸ್ ಪರ್ಟ್ ಆಗಿದ್ದಾನೆ.

    ದಂತವೈದ್ಯ ರೇವಂತ್ ಪತ್ನಿ ಕವಿತಾಳನ್ನು ಕೊಂದ ಪ್ರಕರಣಕ್ಕೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಈ ಮೂಲಕ ಒಂಟಿ ಮಹಿಳೆಯ ಕೊಲೆ ಪ್ರಕರಣದಿಂದ ಇಡೀ ಕಡೂರು ತಲ್ಲಣವಾಗಿದೆ. ಆರು ತಿಂಗಳ ಮಗು ನೋಡಿ ಕಣ್ಣೀರಿಟ್ಟಿದ್ದ ಕಡೂರಿನ ಜನತೆ ಮೂಕ ವಿಸ್ಮಿತರಾಗಿದ್ದಾರೆ. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ವೈದ್ಯನ ಕಣ್ಣಲ್ಲೇ ಹಂತಕ ಕಂಡಿದ್ದು, ಬುದ್ಧಿವಂತ ಡಾಕ್ಟರ್ ಏನು ಆಟವಾಡುತ್ತಾನೋ ಆಡಲಿ ಎಂದು ಪೊಲೀಸರು ಮೂಕ ಪ್ರೇಕ್ಷಕರಂತೆ ನಟಿಸಿದ್ದರು. ಆದರೆ ವಿಚಾರಣೆಯಲ್ಲಿ ಪೊಲೀಸರ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾಗಿದ್ದ ವೈದ್ಯ ಅಂದರ್ ಆಗೋದು ಗ್ಯಾರಂಟಿ ಎಂದು ಖಚಿತವಾಗುತ್ತಿದ್ದಂತೆ ಭಯ ಭೀತನಾಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಾಣಾಗಿದ್ದ.

    ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಡೂರಿನ ಜನ ಬೇಸರ ವ್ಯಕ್ತಪಡಿಸಿದ್ದರು. ಹೆಂಡತಿ ಸತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಭಾವಿಸಿದ್ದರು. ಅಲ್ಲದೆ ವೈದ್ಯನ ಎರಡು ಮಕ್ಕಳನ್ನು ಕಂಡು ಕಣ್ಣೀರಿಟ್ಟಿದ್ದರು. ಆದರೆ ಅಸಲಿ ವಿಷಯ ಪೊಲೀಸರಿಗೆ ಮಾತ್ರ ತಿಳಿದಿತ್ತು. ನಾಲ್ಕು ದಿನದಿಂದ ಹಗಲಿರುಳು ಮಾಹಿತಿ ಸಂಗ್ರಹಿಸಿದ್ದೆವು, ಬಂಧಿಸುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡ ಬುದ್ಧಿವಂತ, ಹಂತಕ ಜಸ್ಟ್ ಮಿಸ್ ಎಂದು ಬೇಸರ ವ್ಯಕ್ತಪಡಿಸಿದರು. ಮತ್ತೊಬ್ಬಳ ಮೇಲಿನ ಆಸೆಗೆ ವೈದ್ಯ ತನ್ನ ಪತ್ನಿಯನ್ನೇ ಕೊಂದ, ಪೊಲೀಸರ ಮೇಲಿನ ಭಯಕ್ಕೆ ತಾನೂ ಆತ್ಮಹತ್ಯೆ ಮಾಡಿಕೊಂಡ. ಆದರೆ ಅನಾಥವಾಗಿದ್ದು ಮಾತ್ರ ನಾಲ್ಕು ಹಾಗೂ ಆರು ತಿಂಗಳ ಕಂದಮ್ಮಗಳು.

    ಪತ್ನಿ ಕೊಲ್ಲಲು ಕಾರಣವೇನು?
    ಬೀರೂರಿನಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದ ದಂತವೈದ್ಯ ರೇವಂತ್‍ಗೆ, ಉಡುಪಿ ಮೂಲದ ಕವಿತಾ ಜೊತೆಗೆ ಏಳು ವರ್ಷದ ಹಿಂದೆ ಮದುವೆಯಾಗಿತ್ತು. ನಾಲ್ಕು ವರ್ಷ ಹಾಗೂ ಆರು ತಿಂಗಳ ಎರಡು ಮಕ್ಕಳಿದ್ದರು. ಸುಖಿ ಕುಟುಂಬ, ಕವಿತಾ ಕೂಡ ಸುಂದರ ಹೆಣ್ಣು. ಇಬ್ಬರದ್ದು ಸುಂದರ ಸಂಸಾರ. ಆದರೆ ಡಾಕ್ಟರ್ ರೇವಂತ್‍ಗೆ ಪತ್ನಿಯಿಂದ ದೂರವಿರುವ ಮಾಯಾಂಗನೆಯ ಸ್ನೇಹವಾಗಿತ್ತು. ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯಂದು 45ರ ಹರೆಯದ ಡಾಕ್ಟರ್ ಅಂಕಲ್ ಪರಸ್ತ್ರೀಯೊಂದಿಗೆ ಲವರ್ಸ್ ಡೇ ಆಚರಿಸಿದ್ದ. ಈ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಗಲಾಟೆ ಕೂಡ ನಡೆದಿತ್ತಂತೆ. ಹಾಗಾಗಿ ಏಳು ವರ್ಷದಿಂದ ಸಂಸಾರ ಮಾಡಿ ಬೇಜಾರಾಗಿದ್ದ ವೈದ್ಯ ಪರ ಸ್ತ್ರೀಯ ಸೆರಗಲ್ಲಿ ಸರಸವಾಡಲು ಹೆಂಡತಿಯನ್ನೇ ಮರ್ಡರ್ ಮಾಡಲು ಸ್ಕೆಚ್ ಹಾಕಿದ್ದ. ದರೋಡೆಕೋರರ ತಲೆಗೆ ಕಟ್ಟುವಂತೆ ಪತ್ನಿಯ ಕೊಲೆ ಮಾಡಿದ್ದ.

    ಬ್ಲೂಪ್ರಿಂಟ್ ರೆಡಿ ಮಾಡಿದ್ದ:
    ವೈದ್ಯ ಆವೇಶದಲ್ಲೋ-ಆತಂಕದಲ್ಲೋ ಅಥವಾ ಮುಗಿಸಿ ಬಿಡೋಣವೆಂದೋ ಏಕಾಏಕಿ ಕೊಲೆ ಮಾಡಿಲ್ಲ. ಬದಲಿಗೆ ಹೀಗೆ ಮಾಡಿದರೆ ಹೀಗೆ ಆಗುತ್ತದೆ. ಏನು ಮಾಡಬೇಕು ಎಂದೆಲ್ಲ ಬ್ಲೂಪ್ರಿಂಟ್ ಸಿದ್ಧ ಮಾಡಿಕೊಂಡಿದ್ದ. ಪೊಲೀಸರನ್ನ ದಡ್ಡರೆಂದು ಭಾವಿಸಿದ್ದ ಡಾಕ್ಟರ್, ಪ್ಲ್ಯಾನ್ ಮಾಡಿದ ರೀತಿಯಲ್ಲೇ ಎಲ್ಲ ಮಾಡಿ ಮುಗಿಸಿದ್ದ. ಆದರೆ ಘಟನೆ ನಡೆದು ಮೂರೇ ದಿನಕ್ಕೆ ಹಂತಕನಿವನೇ ಎಂದು ಕಡೂರು ಪೊಲೀಸರಿಗೆ ಖಚಿತವಾಗಿತ್ತು. ಆದರೆ ಇರಲಿ ನೋಡೋಣ ಎಂದು ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದರು. ನಂತರ ಕೊಲೆಗಡುಕ ಯಾರೂ ಅಲ್ಲ ಅವನೇ ಎಂಬುದು ಪಕ್ಕಾಗಿದೆ. ನಂತರ ಬಂಧಿಸುವಷ್ಟರಲ್ಲಿ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ದೃಶ್ಯಂ ಚಿತ್ರದ ರೀತಿಯಲ್ಲೇ ಮರ್ಡರ್ ಗೆ ಸ್ಕೆಚ್:
    ಫೆಬ್ರವರಿ 17ರ ಮಧ್ಯಾಹ್ನ 3.30ಕ್ಕೆ ಪತ್ನಿಗೆ ಆಭರಣ ಕೊಡಿಸಿಕೊಂಡು ಬಂದಿದ್ದಾನೆ. ಆಗ ನಾಲ್ಕು ವರ್ಷದ ಮಗುವೂ ಜೊತೆಗಿತ್ತು. ಮನೆಗೆ ಬಂದವನೇ ಸಿದ್ಧವಿದ್ದ ಪ್ಲ್ಯಾನ್‍ನಂತೆ ಔಷಧಿಯಿಂದ ಪತ್ನಿಯ ಜ್ಞಾನ ತಪ್ಪಿಸಿ, ಹೊಟ್ಟೆಗೆ ಇಂಜಕ್ಷನ್ ನೀಡಿದ್ದಾನೆ. ಜ್ಞಾನ ತಪ್ಪಿದ ನಂತರ ಕಾರ್ ಶೆಡ್‍ಗೆ ಎಳೆದೊಯ್ದು, ಎದೆಹಾಲು ಕುಡಿಯುವ ಆರು ತಿಂಗಳ ಮಗುವಿನ ಎದುರೇ ಒಂದು ಬಾರಿ ಬ್ಲೆಡ್‍ನಿಂದ ಕುತ್ತಿಗೆಗೆ ಹೊಡೆದು, ರಕ್ತ ಹರಿಯಬಾರದೆಂದು ಕಾಲು ಓರೆಸುವ ಮ್ಯಾಟ್‍ಗಳನ್ನು ದೇಹದ ಸುತ್ತ ಹಾಕಿ, ಬಾಗಿಲು ಹಾಕಿ ಬಂದಿದ್ದಾನೆ. ನಂತರ ಮನೆಯಲ್ಲಿನ ವಸ್ತುಗಳನ್ನ ಕದಲಿದ್ದಾನೆ. ಬೀರೂವಿನಲ್ಲಿದ್ದ ಹಣ-ಬೆಳ್ಳಿ-ಬಂಗಾರವನ್ನು ಅವನೇ ಎಸ್ಕೇಪ್ ಮಾಡಿದ್ದಾನೆ. ನಾಲ್ಕು ವರ್ಷದ ಮಗ ಅಮ್ಮ ಎಂದು ಕೂಗಿದಾಗ ವಾಶ್ ರೂಂಗೆ ಹೋಗಿದ್ದಾಳೆಂದು ಮಗನ ಬುಕ್‍ಗಳನ್ನು ಬ್ಯಾಗಿಗೆ ಹಾಕಿಕೊಂಡು ಕ್ಲಿನಿಕ್‍ನಲ್ಲೇ ಹೋಂ ವರ್ಕ್ ಮಾಡುವಂತೆ ಬಾ ಎಂದು ಕರೆದೊಯ್ದಿದ್ದಾನೆ. ಪತ್ನಿಯ ಹೆಣ ಜೊತೆ ಆರು ತಿಂಗಳ ಕೂಸನ್ನೂ ಬಿಟ್ಟು ಬೀಗ ಹಾಕಿ ಹೋಗಿದ್ದಾನೆ.

    ದೋಸೆ ತಿನ್ನೋ ಫೋಟೋ ಹಾಕಿ ಫೋನ್:
    ಮನೆಯಿಂದ ಕ್ಲಿನಿಕ್‍ಗೆ ಮಗನ ಜೊತೆ ಹೋದ ವೈದ್ಯ, ‘ಐ ಆ್ಯಮ್ ಈಟೀಂಗ್ ದೋಸಾ, ವಿಥ್ ಮೈ ಸನ್ ಅಟ್ ಫೇಮಸ್ ಹೋಟೆಲ್ ಇನ್ ಬೀರೂರು’ ಎಂದು ವಾಟ್ಸಪ್‍ನಲ್ಲಿ ಸ್ಟೇಟಸ್ ಹಾಕಿದ್ದಾನೆ. ಅಲ್ಲದೆ ಫ್ರೆಂಡ್ಸ್‍ಗಳಿಗೆ ಸಹ ಫೋಟೋ ಕಳುಹಿಸಿದ್ದಾನೆ. ತಾನು ಅಮಾಯಕ ಎಂದು ತೋರಿಸಲು ಎಲ್ಲಾ ಮಾಡಿದ್ದಾನೆ. ಅಲ್ಲದೆ ಬೀರೂರಿನ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನಿಗೆ ಫೋನ್ ಮಾಡಿ ಕ್ಲಿನಿಕ್‍ಗೆ ಕರೆಸಿಕೊಂಡಿದ್ದಾನೆ. ನಂತರ ಮನೆಗೆ ಹೋಗೋಣ ಬಾ ಎಂದು ತಾಯಿ ಕರೆದರೆ, ಇರು ಅಮ್ಮ ಕೆಲಸ ಇದೆ ಹೋಗೋಣ ಎಂದು ಎರಡು ಗಂಟೆ ಸಮಯ ತಳ್ಳಿದ್ದಾನೆ. ಅಲ್ಲದೆ ಸಾಯಿಸಿ ಬಂದ ಹೆಂಡತಿಗೆ ಬೇಕೆಂದೇ ಫೋನ್ ಮಾಡಿದ್ದಾನೆ.

    ಇಬ್ಬರು ಸಂಬಂಧಿಕರಿಗೆ ಕರೆ ಮಾಡಿ, ಕ್ಲಿನಿಕ್ ಬಳಿ ಕರೆಸಿಕೊಂಡ. ಬಾಳೆಕಾಯಿ ಮಂಡಿಗೆ ಹೋಗ್ಬೇಕು ಎಂದರೂ ಬಿಡದೆ ಹೇ.. ಬರ್ರೋ.. ಎಂದು ಜೊತೆಗೆ ಕರೆತಂದಿದ್ದಾನೆ. ಅಲ್ಲದೆ ಮನೆಯಿಂದ ಹೊರಡುವಾಗ ತನ್ನ ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ತಾನೇ ಎರಡ್ಮೂರು ಬಾರಿ ನೋಡಿದ್ದ. ಬರುವಾಗಲು ಮತ್ತೆ-ಮತ್ತೆ ನೋಡಿದ್ದಾನೆ. ಮನೆಗೆ ಹೋದವನೆ ಸೋಫಾ ಮೇಲೆ ಕೂತು ಕವಿತಾ… ಕವಿತಾ… ಎಂದು ಕೂಗಿದ್ದಾನೆ. ಹುಡುಕಿಲ್ಲ, ಮಗು ಅಮ್ಮ.. ಅಮ್ಮ.. ಎಂದು ಹುಡುಕಿದೆ. ತಮ್ಮಂದಿರು ಅತ್ತಿಗೆ… ಅತ್ತಿಗೆ… ಎಂದು ಕೂಗಿದ್ದಾರೆ. ವೈದ್ಯ ರೇವಂತ್ ತಾಯಿ ಕೂಡ ಕೂಗಿದ್ದಾರೆ, ನಂತರ ಒಳಗೆ ಹೋಗಿ ನೋಡಿದಾಗ ದಿಗ್ಭ್ರಾಂತರಾಗಿದ್ದಾರೆ. ಆಗ ವೈದ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.

    ವಿಷಯ ಕೇಳಿ ಸ್ಥಳಕ್ಕೆ ಬಂದ ಪೊಲೀಸರಿಗೂ ಶಾಕ್ ಆಗಿತ್ತು. 206 ರಾಷ್ಟ್ರೀಯ ಹೆದ್ದಾರಿ ಸದಾ ಜನ ಓಡಾಡೋ ಜಾಗ ಹೀಗಾಯ್ತಲ್ಲ ಎಂದು ಪೊಲೀಸರು ತಲೆಕೆಡಿಸಿಕೊಂಡು ಹುಡುಕಾಟ ನಡೆಸಿದ್ದಾರೆ. ಆದರೆ ಮಡದಿ ಕಳೆದುಕೊಂಡ ವೈದ್ಯನ ಮುಖದ ಭಾವ ಕಂಡು ಎಲ್ಲೋ ಮಿಸ್ ಹೊಡೀತಿದೆಯಲ್ಲಾ ಎಂದು ಕಡೂರು ಸರ್ಕಲ್ ಇನ್ಸ್‍ಪೆಕ್ಟರ್ ಮಂಜುನಾಥ್ ಭಾವಿಸಿದ್ದಾರೆ. ಬೀರೂರಿನ ಪಿಎಸ್‍ಐ ರಾಜಕುಮಾರ್, ಸಖರಾಯಪಟ್ಟಣ ಸಬ್ ಇನ್ಸ್‍ಪೆಕ್ಟರ್ ಮೌನೇಶ್, ಕಡೂರಿನ ಪಿಎಸ್‍ಐ ವಿಶ್ವನಾಥ್ ಹಾಗೂ ಸಿಬ್ಬಂದಿ ನಾಲ್ಕು ದಿನಗಳ ಕಾಲ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿ, ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನೇನು ವೈದ್ಯನನ್ನು ಬಂಧಿಸುವಷ್ಟರಲ್ಲಿ ಪಾಪ ಪ್ರಜ್ಞೆಯೋ ಅಥವಾ ಪೊಲೀಸರ ಮೇಲಿನ ಭಯಕ್ಕೋ ಆತ್ಮಹತ್ಯಗೆ ಶರಣಾಗಿದ್ದಾನೆ. ಆದರೆ ಎರಡು ಮಕ್ಕಳು ಮಾತ್ರ ಅನಾಥವಾಗಿವೆ.

    ಡಾ.ರೇವಂತ್ ಏನೋ ಆತ್ಮಹತ್ಯೆಗೆ ಶರಣಾದ. ಹೆಂಡತಿ ಕೊಲೆ ಹಿಂದೆ ಅವನೊಬ್ಬನೇ ಇಲ್ಲ. ಅವನು-ಅವಳ ಮಧ್ಯೆ ಮತ್ತೊಬ್ಬಳಾಗಿದ್ದ ಹರ್ಷಿತಾ ಹಾಗೂ ಮತ್ತಿಬ್ಬರ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಅವನನ್ನು ಬಂಧಿಸಿದ ಬಳಿಕ ಆ ಮೂವರನ್ನು ಬಂಧಿಸಲು ಯೋಚಿಸಿದ್ದರು. ಆದರೆ ಇದೀಗ ನಾನೂ ಪ್ರಕರಣದಲ್ಲಿ ಭಾಗಿಯಾಗುತ್ತೇನೆ, ಪೊಲೀಸರು ನನ್ನನ್ನೂ ಬಂಧಿಸುತ್ತಾರೆ ಎಂಬ ಭಯದಿಂದಲೋ, ಕುಟುಂಬ ಸರ್ವನಾಶ ಮಾಡಿದ ಪಾಪಪ್ರಜ್ಞೆಯಿಂದಲೋ ವೈದ್ಯನ ಲವರ್ 32ರ ಹರ್ಷಿತಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಗ ಅವಳ ಮಗುವೂ ಅನಾಥವಾಗಿದೆ. ಹರ್ಷಿತಾಳಿಗೂ ಗಂಡ ಬೇಡವಾಗಿದ್ದ, ರೇವಂತ್‍ಗೆ ಪತ್ನಿ ಕವಿತಾ ಬೇಡವಾಗಿದ್ದಳು, ಅವಳು ಬಿಟ್ಟು ಬಂದಳು, ಇವನು ಕೊಲೆ ಮಾಡಿಯೇ ಬರಲು ರೆಡಿಯಾಗಿದ್ದ. ಆದರೆ ಇದೀಗ ಒಂದು ಕೊಲೆ, ಎರಡು ಆತ್ಮಹತ್ಯೆಯಲ್ಲಿ ಮೂರು ಮಕ್ಕಳು ಅನಾಥವಾಗಿವೆ.

  • ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆಗೆ ಶರಣು

    ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆಗೆ ಶರಣು

    – ಪೊಲೀಸರಿಗೆ ಕರೆ ಮಾಡಿ ಮಕ್ಕಳನ್ನು ಕೊಂದೆ ಎಂದ
    – ಆರ್ಥಿಕ ಸಮಸ್ಯೆಯಿಂದ ಕೊಲೆ ಮಾಡಿ ಸೂಸೈಡ್

    ಲಕ್ನೋ: ಆರ್ಥಿಕ ಸಮಸ್ಯೆಯಿಂದ ಬೇಸತ್ತ ದಂಪತಿ ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

    ಚೇತನ್, ಋತು, ಹರ್ಷ್ ಹಾಗೂ ಗುಣ್‍ಗುಣ್ ಮೃತ ದುರ್ದೈವಿಗಳು. ಚೇತನ್ ಹಾಗೂ ಋತು ತಮ್ಮ ಮಕ್ಕಳ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದರು. ಈ ವೇಳೆ ಇಬ್ಬರು ಪ್ರಜ್ಞೆ ತಪ್ಪಿದ್ದಾಗ ದಂಪತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ತಮ್ಮ ಮಕ್ಕಳನ್ನು ಕೊಲೆ ಮಾಡಿದ ಬಳಿಕ ಚೇತನ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಕರೆ ಮಾಡಿ ನಾನು ನನ್ನ ಇಬ್ಬರು ಮಕ್ಕಳನ್ನು ಕೊಂದಿದ್ದೇನೆ. ಈಗ ನಾನು ಹಾಗೂ ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ ಅಷ್ಟರಲ್ಲಿ ನಾಲ್ವರು ಮೃತಪಟ್ಟಿದ್ದರು.

    ಐಜಿ ವಿಜಯ್ ಸಿಂಗ್ ಮೀಣಾ ವಿಧಿವಿಜ್ಞಾನ ಪ್ರಯೋಗಾಲಯ ತಂಡದ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಕ್ಕಳ ಮೃತದೇಹ ಒಂದು ರೂಮಿನಲ್ಲಿ ಪತ್ತೆಯಾದರೆ, ಮತ್ತೊಂದು ರೂಮಿನಲ್ಲಿ ದಂಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿತ್ತು.

    ಈ ಬಗ್ಗೆ ಐಜಿ ವಿಯಯ್ ಪ್ರತಿಕ್ರಿಯಿಸಿ, ದಂಪತಿ ಮಕ್ಕಳ ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಪ್ರಜ್ಞೆ ತಪ್ಪಿದ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್‍ನೋಟ್ ಪತ್ತೆಯಾಗಿದ್ದು, ಅದರಲ್ಲಿ ಪತಿ-ಪತ್ನಿ ಜಗಳ, ಆರ್ಥಿಕ ಖಿನ್ನತೆ ಸೇರಿದಂತೆ ಹಲವು ಕಾರಣಗಳನ್ನು ಬರೆದಿದ್ದಾರೆ.

  • ಅಪ್ರಾಪ್ತ ಮಕ್ಕಳನ್ನು ಕೊಂದು ಮೆಟ್ರೋ ರೈಲಿನ ಮುಂದೆ ಜಿಗಿದು ಉದ್ಯಮಿ ಆತ್ಮಹತ್ಯೆ

    ಅಪ್ರಾಪ್ತ ಮಕ್ಕಳನ್ನು ಕೊಂದು ಮೆಟ್ರೋ ರೈಲಿನ ಮುಂದೆ ಜಿಗಿದು ಉದ್ಯಮಿ ಆತ್ಮಹತ್ಯೆ

    – ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಉದ್ಯಮಿ
    – ಮಕ್ಕಳ ಫೀಸ್ ಕಟ್ಟಲು ಹಣವಿರಲಿಲ್ಲ

    ನವದೆಹಲಿ: ಉದ್ಯಮಿಯೊಬ್ಬ ತನ್ನ ಅಪ್ರಾಪ್ತ ಮಕ್ಕಳನ್ನು ಕೊಂದು ಮೆಟ್ರೋ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಮಧುರ್, ಶ್ರೇಯಾಂಶ್ ಹಾಗೂ ಸಮೀಕ್ಷಾ ಮೃತ ದುರ್ದೈವಿಗಳು. ಆರು ತಿಂಗಳ ಹಿಂದೆ ಮಧುರ್ ತನ್ನ ಕೆಲಸವನ್ನು ಕಳೆದುಕೊಂಡಿದ್ದನು. ಇದರಿಂದ ಯಾವಾಗಲೂ ಚಿಂತೆ ಮಾಡುತ್ತಾ ಖಿನ್ನತೆಗೆ ಒಳಗಾಗಿದ್ದನು. ಅಲ್ಲದೆ ಮನೆಯ ಆರ್ಥಿಕ ಸ್ಥಿತಿ ಕೂಡ ಹದಗೆಡಲು ಶುರುವಾಯಿತು. ಮಧುರ್ ತನ್ನ ಕಷ್ಟವನ್ನು ಪತ್ನಿ ರೂಪಾಲಿ ಬಳಿ ಹೇಳಿಕೊಳ್ಳುತ್ತಿದ್ದನು.

    ಮಧುರ್ ತನ್ನ ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದನು. ಅಲ್ಲದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಡಾಕ್ಟರ್ ಅಥವಾ ಎಂಜಿನಿಯರ್ ಮಾಡಿಸಬೇಕು ಎಂದುಕೊಂಡಿದ್ದನು. ಆದರೆ ಮಕ್ಕಳ ಶಾಲೆಯ ಫೀಸ್ ಕಟ್ಟಲು ಮಧುರ್ ಗೆ ಕಷ್ಟವಾಗುತ್ತಿತ್ತು. ಹಾಗಾಗಿ ಮಧುರ್ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಈ ಘಟನೆಯ ವಿಷಯ ತಿಳಿದ ಮಧುರ್ ಪೋಷಕರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಮಧುರ್ ಪೋಷಕರನ್ನು ನೋಡುತ್ತಿದ್ದಂತೆ ಪತ್ನಿ ರೂಪಾಲಿ ದುಃಖದಿಂದ ಕೆಳಗೆ ಬಿದ್ದಳು.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಈ ಘಟನೆ ನಡೆದ ನಂತರ ನಾವು ಮನೆಯನ್ನಯ ಪರಿಶೀಲಿಸಿದ್ದೇವು. ಈ ವೇಳೆ ನಮಗೆ ಯಾವುದೇ ಡೆತ್‍ನೋಟ್ ಸಿಗಲಿಲ್ಲ. ಮಧುರ್ ಮೃತದೇಹವನ್ನು ವಶಕ್ಕೆ ಪಡೆದಾಗ ಅವರ ಜೇಬಿನಲ್ಲಿ ಡೆತ್‍ನೋಟ್ ಇದೀಯಾ ಎಂದು ಪರಿಶೀಲಿಸಿದ್ದೇವೆ. ಆದರೆ ಡೆತ್‍ನೋಟ್ ಸಿಗಲಿಲ್ಲ. ಸದ್ಯ ಅವರ ಸೋಶಿಯಲ್ ಮೀಡಿಯಾ ಅಕೌಂಟ್ ಹಾಗೂ ಕಾಲ್ ಡಿಟೇಲ್ಸ್ ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದ್ದರು.

    ಮಧುರ್ ಪತ್ನಿ ರೂಪಾಲಿ ಈ ಬಗ್ಗೆ ಪ್ರತಿಕ್ರಿಯಿಸಿ, ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದ ಪತಿಯೇ ಕೊಲೆ ಮಾಡಿದ್ದಾರೆ ಎಂಬುದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಈ ಘಟನೆ ನಡೆದ ಒಂದು ಗಂಟೆ ಮೊದಲು ಮಧುರ್ ತನ್ನ ಇಬ್ಬರು ಮಕ್ಕಳೊಂದಿಗೆ ಉಪಹಾರ ಸೇವಿಸಿದ್ದರು. ಬಳಿಕ ನಾನು ಮಾರ್ಕೆಟ್‍ಗೆ ಹೋದ ಸಮಯದಲ್ಲಿ ಮಧುರ್ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಮನೆಯಲ್ಲಿಯೇ ಇದ್ದಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

  • ಪತಿಯ ಕುಡಿತಕ್ಕೆ ಬೇಸತ್ತ ಪತ್ನಿ – ನಾಲ್ವರು ಹೆಣ್ಣು ಮಕ್ಕಳಿಗೆ ವಿಷ ಹಾಕಿ ಆತ್ಮಹತ್ಯೆ

    ಪತಿಯ ಕುಡಿತಕ್ಕೆ ಬೇಸತ್ತ ಪತ್ನಿ – ನಾಲ್ವರು ಹೆಣ್ಣು ಮಕ್ಕಳಿಗೆ ವಿಷ ಹಾಕಿ ಆತ್ಮಹತ್ಯೆ

    – ಮನೆ ಬಾಗಿಲು ಒಡೆದು ನೋಡಿದಾಗ ಐವರ ಶವ ಪತ್ತೆ

    ಲಕ್ನೋ: ಪತಿಯ ಕುಡಿತಕ್ಕೆ ಬೇಸತ್ತ ಪತ್ನಿ ತನ್ನ ನಾಲ್ವರು ಹೆಣ್ಣು ಮಕ್ಕಳಿಗೆ ವಿಷ ಹಾಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಫತೇಪುರದಲ್ಲಿ ನಡೆದಿದೆ.

    ಶ್ಯಾಮಾ(40), ಪಿಂಕಿ (21), ಪ್ರಿಯಾಂಕ (14), ವರ್ಷ್ (13) ಹಾಗೂ ನನ್ಕಿ(10) ಮೃತಪಟ್ಟ ತಾಯಿ- ಮಕ್ಕಳು. ಹಲವು ದಿನಗಳಿಂದ ಶ್ಯಾಮಾ ಮನೆಯ ಬಾಗಿಲು ಲಾಕ್ ಆಗಿತ್ತು. ಶನಿವಾರ ಅಂದರೆ ಇಂದು ಬೆಳಗ್ಗೆ ಮನೆಯಿಂದ ದುರ್ವಾಸನೆ ಬರಲು ಶುರುವಾದಾಗ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಬಾಗಿಲನ್ನು ಒಡೆದು ಒಳಗೆ ಹೋಗಿ ನೋಡಿದಾಗ ಐವರ ಶವ ಪತ್ತೆಯಾಗಿತ್ತು.

    ಈ ವೇಳೆ ಸ್ಥಳೀಯರು ಪೊಲೀಸರ ಬಳಿ, ಮಹಿಳೆಯ ಪತಿ ರಾಮ್ ಡಾಬಾದಲ್ಲಿ ಕೆಲಸ ಮಾಡುತ್ತಿದ್ದು, ಯಾವಾಗಲೂ ಮದ್ಯ ಸೇವಿಸುತ್ತಿದ್ದನು. ಪತಿಯ ಕುಡಿತಕ್ಕೆ ಪತ್ನಿ ಶ್ಯಾಮಾ ಬೇಸತ್ತು ಹೋಗಿದ್ದಳು. ಪತಿ- ಪತ್ನಿ ನಡುವೆ ಯಾವಾಗಲೂ ಜಗಳವಾಗುತ್ತಿತ್ತು. ನಾಲ್ಕು ದಿನದ ಹಿಂದೆಯೂ ಪತಿ-ಪತ್ನಿ ನಡುವೆ ಜಗಳವಾಗಿದ್ದು, ಈ ಘಟನೆ ನಂತರ ಪತಿ ರಾಮ್ ನಾಪತ್ತೆ ಆಗಿದ್ದನು. ಕೆಲವು ದಿನಗಳಿಂದ ಈ ಮನೆಯ ಬಾಗಿಲು ಲಾಕ್ ಆಗಿದ್ದು, ಕುಟುಂಬಸ್ಥರು ಮನೆಯ ಹೊರಗೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಎಂದು ಮಾಹಿತಿ ನೀಡಿದರು.

    ಸದ್ಯ ಪೊಲೀಸರು ಬಾಗಿಲನ್ನು ಒಡೆದು ಒಳಗೆ ಹೋದಾಗ ರೂಮಿನಲ್ಲಿ ವಿಷದ ಪುಡಿ ದೊರೆಯಿತು. ಬಾಗಿಲು ಒಳಗಿನಿಂದ ಲಾಕ್ ಆಗಿದ್ದ ಕಾರಣ ತಾಯಿ- ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿಯಿತು. ಶ್ಯಾಮಾ ಕಾಲೇಜ್‍ವೊಂದರಲ್ಲಿ ಅಡುಗೆ ಮಾಡುವ ಕೆಲಸ ಮಾಡುತ್ತಿದ್ದಳು. ಇತ್ತ ರಾಮ್ ತನ್ನ ಹಣವನ್ನೆಲ್ಲಾ ಕುಡಿತಕ್ಕಾಗಿ ಬಳಸಿಕೊಳ್ಳುತ್ತಿದ್ದನು. ಹೀಗಾಗಿ ಶ್ಯಾಮಾ ತನ್ನ ಮನೆಯ ಖರ್ಚು ಹಾಗೂ ನಾಲ್ವರು ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳುತ್ತಿದ್ದಳು.

    ಸ್ಥಳೀಯರ ಪ್ರಕಾರ, ರಾಮ್ ಮದ್ಯ ಸೇವಿಸಿ ತನ್ನ ಪತ್ನಿ ಬಳಿ ಹಣ ಕೇಳುತ್ತಿದ್ದನು. ಪತ್ನಿ ಹಣ ಕೊಡದೆ ಇದ್ದಾಗ ಆತ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದನು. ಶ್ಯಾಮಾ ತನ್ನ ಹಿರಿಯ ಮಗಳ ಮದುವೆ ಬಗ್ಗೆ ತುಂಬಾ ಯೋಚಿಸುತ್ತಿದ್ದಳು ಎಂದು ಹೇಳಿದರು.

  • ನ್ಯೂಜಿಲ್ಯಾಂಡ್ ಜ್ವಾಲಾಮುಖಿಯಲ್ಲಿ ಭಾರತೀಯ ಮೂಲದ ಅಮೆರಿಕ ದಂಪತಿ ಸಾವು

    ನ್ಯೂಜಿಲ್ಯಾಂಡ್ ಜ್ವಾಲಾಮುಖಿಯಲ್ಲಿ ಭಾರತೀಯ ಮೂಲದ ಅಮೆರಿಕ ದಂಪತಿ ಸಾವು

    ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್‍ನಲ್ಲಿ ಸಂಭವಿಸಿದ ಜ್ವಾಲಾಮುಖಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಮೂಲದ ಅಮೆರಿಕ ದಂಪತಿ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಜೋಡಿಯ ಮೂವರು ಮಕ್ಕಳು ಅನಾಥರಾಗಿದ್ದಾರೆ.

    ಪ್ರತಾಪ್ ಸಿಂಗ್ ಹಾಗೂ ಮಯೂರಿ ಸಿಂಗ್ ಮೃತಪಟ್ಟ ದಂಪತಿ. ಪ್ರತಾಪ್ ಹಾಗೂ ಮಯೂರಿ ಡಿ. 9ರಂದು ರಜೆ ದಿನಗಳನ್ನು ಕಳೆಯಲು ನ್ಯೂಜಿಲೆಂಡ್‍ನ ವೈಟ್ ಐಲ್ಯಾಂಡ್‍ಗೆ ತೆರೆಳಿದ್ದರು. ಈ ವೇಳೆ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಮಯೂರಿ ಹಾಗೂ ಪ್ರತಾಪ್ ಗಂಭೀರವಾಗಿ ಗಾಯಗೊಂಡಿದ್ದರು. ಮಯೂರಿ ಡಿ. 22ರಂದು ಮೃತಪಟ್ಟರೆ, ಪ್ರತಾಪ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಪ್ರತಾಪ್ ಅವರು ಕೂಡ ಆಕ್ಲೆಂಡ್ ನಲ್ಲಿರುವ ಮಿಡಿಲ್‍ಮೋರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಪ್ರತಾಪ್ ಅವರ ಸಾವಿನ ನಂತರ ಜ್ವಾಲಾಮುಖಿಯಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿದೆ. ಮಯೂರಿ ಮೃತಪಟ್ಟ ಆಸ್ಪತ್ರೆಯಲ್ಲೇ ಪ್ರತಾಪ್ ಕೂಡ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಪ್ರತಾಪ್ ಅವರ ದೇಹ ಅರ್ಧದಷ್ಟು ಸುಟ್ಟು ಹೋಗಿದೆ. ಜ್ವಾಲಾಮುಖಿ ಸ್ಫೋಟಿಸಿದಾಗ ಅಲ್ಲಿ 47 ಮಂದಿ ಇದ್ದು, ಅದರಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಇನ್ನು ಹಲವು ಮಂದಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ.

    ಈ ಜೋಡಿಯ 11 ವರ್ಷ ಮಗ ಹಾಗೂ 6 ವರ್ಷದ ಅವಳಿ ಹೆಣ್ಣು ಮಕ್ಕಳು ರಾಯಲ್ ಕೆರಿಬಿಯನ್ ಕ್ರೂಸ್ ಶಿಪ್‍ನಲ್ಲಿ ಸಂಚರಿಸುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಈಗ ತಂದೆ-ತಾಯಿ ಇಬ್ಬರು ಮೃತಪಟ್ಟಿದ್ದು, ಮಕ್ಕಳು ಅನಾಥರಾಗಿದ್ದಾರೆ.

  • ಶಾಲೆಗೆ ಹೋಗಿದ್ದ ಮಗಳನ್ನು ದೇವಸ್ಥಾನಕ್ಕೆಂದು ಕರ್ಕೊಂಡು ಬಂದು ನಾಲೆಗೆ ತಳ್ಳಿದ್ಳು

    ಶಾಲೆಗೆ ಹೋಗಿದ್ದ ಮಗಳನ್ನು ದೇವಸ್ಥಾನಕ್ಕೆಂದು ಕರ್ಕೊಂಡು ಬಂದು ನಾಲೆಗೆ ತಳ್ಳಿದ್ಳು

    – ಮಕ್ಕಳಿಬ್ಬರನ್ನು ನಾಲೆಗೆ ತಳ್ಳಿ, ತಾನೂ ಆತ್ಮಹತ್ಯೆ ಮಾಡ್ಕೊಂಡ ತಾಯಿ

    ಮಂಡ್ಯ: ತಾಯಿ ತನ್ನ ಇಬ್ಬರು ಮಕ್ಕಳನ್ನು ನಾಲೆಗೆ ತಳ್ಳಿ ಬಳಿಕ ತಾನೂ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮದಲ್ಲಿ ಜರುಗಿದೆ.

    ಹುಳ್ಳೇನಹಳ್ಳಿ ಗ್ರಾಮದ ಜ್ಯೋತಿ (33) ತನ್ನ ಮಕ್ಕಳಾದ ನಿಸರ್ಗ (7) ಮತ್ತು ಪವನ್ (4) ರನ್ನು ಕರೆದುಕೊಂಡು ಹೋಗಿ ಹುಲ್ಲೇನಹಳ್ಳಿ ಗ್ರಾಮದ ಬಳಿ ಇರುವ ವಿಸಿ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮನೆಯಲ್ಲಿ ಇದ್ದ ಜ್ಯೋತಿ ಮಗ ಪವನ್‍ನನ್ನು ಕರೆದುಕೊಂಡು ಮಗಳು ನಿಸರ್ಗ ಓದುತ್ತಿದ್ದ ಶಾಲೆಯ ಬಳಿ ಹೋಗಿ ನಿಸರ್ಗಳನ್ನು ದೇವಸ್ಥಾನಕ್ಕೆ ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದಾಳೆ. ನಂತರ ಹುಳ್ಳೇನಹಳ್ಳಿ ಗ್ರಾಮದ ಬಳಿ ಹರಿಯುವ ವಿಸಿ ನಾಲೆಗೆ ಮೊದಲು ಇಬ್ಬರು ಮಕ್ಕಳನ್ನು ಜ್ಯೋತಿ ತಳ್ಳಿದ್ದಾಳೆ. ನಂತರ ತಾನು ಕೂಡ ನಾಲೆಗೆ ಹಾರಿದ್ದಾಳೆ. ಇದನ್ನು ಕಂಡ ಸ್ಥಳೀಯರು ಮೂವರ ಪ್ರಾಣ ಉಳಿಸಲು ಮುಂದಾಗಿದ್ದಾರೆ. ಜ್ಯೋತಿಯನ್ನು ನಾಲೆಯಿಂದ ಮೇಲೆ ಎತ್ತಿ ಕಾಪಡಲು ಸ್ಥಳೀಯರು ಮುಂದಾಗಿದ್ದಾರೆ.

    ಆದರೆ ಜ್ಯೋತಿ ಹೆಚ್ಚು ನೀರು ಕುಡಿದ್ದಿದ್ದರಿಂದ ಸಾವನ್ನಪ್ಪಿದ್ದಾಳೆ. ಮಕ್ಕಳು ಇದುವರೆಗೂ ಸಹ ಪತ್ತೆಯಾಗಿಲ್ಲ. ನೀರು ಭಾರೀ ಪ್ರಮಾಣದಲ್ಲಿ ಇರುವ ಕಾರಣ ಮಕ್ಕಳ ಶೋಧ ಕಾರ್ಯ ನಡೆಯುತ್ತಿದೆ. ಯಾವ ಕಾರಣಕ್ಕೆ ಈ ಪ್ರಕರಣ ಜರುಗಿದೆ ಎಂದು ತಿಳಿದು ಬಂದಿಲ್ಲ.

    ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಶ್ರಮದಲ್ಲಿರುವ ಮಕ್ಕಳಿಗೆ ಕಿರುಕುಳ ನೀಡಿದವನಿಗೆ ಧರ್ಮದೇಟು

    ಆಶ್ರಮದಲ್ಲಿರುವ ಮಕ್ಕಳಿಗೆ ಕಿರುಕುಳ ನೀಡಿದವನಿಗೆ ಧರ್ಮದೇಟು

    ಧಾರವಾಡ: ಆಶ್ರಮದಲ್ಲಿರುವ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದವನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಹೊರವಲಯದ ಅಕ್ಕಮಹಾದೇವಿ ಆಶ್ರಮದಲ್ಲಿ ಶಿಕ್ಷಕಿ ಮಕ್ಕಳ ಆರೈಕೆ ಮಾಡಿಕೊಂಡಿದ್ದಾರೆ. ಆಕೆಯ ಗಂಡ ಲಕ್ಷ್ಮಣ ಪೂರದ ಕೂಡ ಇದೇ ಆಶ್ರಮದಲ್ಲಿ ಬಂದು ಇರುತ್ತಿದ್ದನು. ಲಕ್ಷ್ಮಣ ಇಲ್ಲಿರುವ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದನು. ಈ ವಿಷಯ ಮಂಡ್ಯದಿಂದ ಕೆಲಸದ ನಿಮಿತ್ತ ಬಂದಿದ್ದ ಕೆಲ ಯುವಕರಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಮಂಡ್ಯದ ಯುವಕರು ಆತನಿಗೆ ಪ್ರಶ್ನೆ ಮಾಡಿ ಚೆನ್ನಾಗಿ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಮಕ್ಕಳಿಂದ ಮಸಾಜ್ ಮಾಡಿಸುವುದು, ಅವರಿಗೆ ವಿಡಿಯೋ ತೋರಿಸುವ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಕಿತಾಪತಿ ಇಷ್ಟು ದಿನ ಗೊತ್ತಿರಲಿಲ್ಲ. ಆದರೆ ಈ ಮಕ್ಕಳು ಮಂಡ್ಯದಿಂದ ಬಂದಿರುವ ಯುವಕರ ಕೊಠಡಿಗೆ ಹೋಗಿ ಊಟ ಕೇಳಿದ್ದಾರೆ. ಆಗ ಯುವಕರು ಮಕ್ಕಳಿಗೆ ಯಾಕೆ ಊಟ ಮಾಡಿಲ್ಲ ಎಂದು ಪ್ರಶ್ನೆ ಮಾಡಿದಾಗ, ಮಕ್ಕಳು ಊಟ ಸರಿಯಾಗಿ ನೀಡುತ್ತಿಲ್ಲ, ಹಾಗೂ ಕೇಳಿದ್ರೆ ಆತ ಹೊಡೆಯುತ್ತಾನೆ ಎಂಬ ಎಲ್ಲಾ ವಿಷಯ ಬಿಚ್ಚಿಟ್ಟಿದ್ದಾರೆ.

    ಈ ಹಿನ್ನೆಲೆಯಲ್ಲಿ ಭಾನುವಾರ ಮಂಡ್ಯದ ಯುವಕರ ಜೊತೆ ಸ್ಥಳೀಯ ಯುವಕರು ಕೂಡ ಸೇರಿ ಆತನಿಗೆ ಧರ್ಮದೇಟು ನೀಡಿದ್ದಾರೆ. ಕೂಡಲ ಸಂಗಮದಲ್ಲಿ ಕಳೆದ ನಾಲ್ಕು ದಿನಗಳಿಂದ ಶರಣ ಮೇಳ ನಡೆಯುತ್ತಿರುವುದರಿಂದ ಆಶ್ರಮದ ಎಲ್ಲರೂ ಅಲ್ಲಿಗೆನೇ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ಜವಾಬ್ದಾರಿಯನ್ನು ಲಕ್ಷ್ಮಣ ಮೇಲೆ ಬಿಟ್ಟು ಹೋಗಿದ್ದಾರೆ. ಆದರೆ ಲಕ್ಷ್ಮಣ ಮಕ್ಕಳಿಗೆ ಊಟ ನೀಡದೇ ಸತಾಯಿಸಿದ್ದಾನೆ.

    ಈ ಹಿಂದೆ ಮಾತೇ ಮಹಾದೇವಿ ಇದ್ದಾಗ ಈತನಿಗೆ ಮಾತೇ ಅವರೇ ಇರಲು ಅವಕಾಶ ನೀಡಿದ್ದರು. ಅದಕ್ಕಾಗಿ ಆಶ್ರಮದ ಉಳಿದವರು ಇವನನ್ನು ಏನೂ ಪ್ರಶ್ನೆ ಮಾಡುತ್ತಿರಲಿಲ್ಲ. ಸದ್ಯ ಉಪನಗರ ಪೊಲೀಸರು ಲಕ್ಷ್ಮಣ ಪೂರದಗೆ ವಾರ್ನಿಂಗ್ ಮಾಡಿ ಬಿಟ್ಟಿದ್ದಾರೆ. ಆದರೆ ಆಶ್ರಮದ ಹಿರಿಯರು ಇದರ ಮೇಲೆ ಏನೂ ಕ್ರಮ ಕೈಗೊಳ್ಳುತ್ತಾರೆ ಎಂಬುದು ಶರಣ ಮೇಳ ಮುಗಿದ ಮೇಲೆ ಎಲ್ಲರೂ ಕೂಡಲಸಂಗಮದಿಂದ ವಾಪಸ್ಸಾದ ಮೇಲೆನೇ ಗೊತ್ತಾಗಲಿದೆ.