Tag: Childrens

  • ಆನ್‍ಲೈನ್ ಕ್ಲಾಸ್ ಎಫೆಕ್ಟ್- ಜೀವನಾಧಾರವಾಗಿದ್ದ ಹಸು ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ ತಂದೆ

    ಆನ್‍ಲೈನ್ ಕ್ಲಾಸ್ ಎಫೆಕ್ಟ್- ಜೀವನಾಧಾರವಾಗಿದ್ದ ಹಸು ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ ತಂದೆ

    – ಬಿಜೆಪಿ ಆಡಳಿತವಿರೋ ರಾಜ್ಯದಲ್ಲೇ ಘಟನೆ

    ಶಿಮ್ಲಾ: ಕೊರೊನಾ ವೈರಸ್ ಭೀತಿಯಿಂದ ಮಕ್ಕಳಿಗೆ ಶಾಲೆ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಶಾಲೆಯ ಶಿಕ್ಷಕರು ಆನ್‍ಲೈನ್ ತರಗತಿಗಳನ್ನು ಆರಂಭಿಸಿದ್ದಾರೆ. ಈ ಆನ್‍ಲೈನ್ ಕ್ಲಾಸಿಗೆ ಮೊಬೈಲ್ ಬಹುಮುಖ್ಯವಾಗಿದೆ. ಹೀಗಾಗಿ ಬಡ ತಂದೆಯೊಬ್ಬ ತನ್ನ ಕುಟುಂಬಕ್ಕೆ ಜೀವನಾಧಾರವಾಗಿದ್ದ ಹಸುವನ್ನೇ ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ್ದಾರೆ. ಈ ಮೂಲಕ ತನ್ನ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂದು ಪಣತೊಟ್ಟಿದ್ದಾರೆ.

    ಹೌದು. ಈ ಘಟನೆ ನಡೆದಿರುವುದು ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ. ಕೋವಿಡ್ 19 ಲಾಕ್‍ಡೌನ್ ಪರಿಣಾಮ ಶಾಲೆಯ ಮಕ್ಕಳಿಗೆ ಆನ್‍ಕ್ಲಾಸ್ ಆರಂಭಿಸಿದ್ದಾರೆ. ಆದರೆ ಕಡು ಬಡ ಕುಟುಂಬದ ಕುಲ್ದೀಪ್ ಕುಮಾರ್ ತನ್ನ ಮಕ್ಕಳು ಇತರರಂತೆ ಓದಬೇಕು ಎಂದು ತಾನು ಸಾಕಿದ್ದ ಹಸುವನ್ನೇ ಮಾರಿ 6 ಸಾವಿರ ರೂ. ಕೊಟ್ಟು ಮೊಬೈಲ್ ಖರೀದಿಸಿದ್ದಾರೆ.

    ಹಸುವನ್ನು ಪುಣ್ಯಕೋಟಿ ಎಂದು ಬಣ್ಣಿಸಲಾಗುತ್ತಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ತಾಯಿಯಂತೆ ಹಸುವನ್ನು ಪೂಜಿಸಲಾಗುತ್ತಿದೆ. ಈ ಮಧ್ಯೆ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಸುವನ್ನೇ ಮಾರಿರುವುದು ನಿಜಕ್ಕೂ ಬೇಸರದ ಸಂಗತಿ. ಪರಿಶಿಷ್ಠ ಜಾತಿಗೆ ಸೇರಿರುವ ಕುಲ್ದೀಪ್, ಕಾಂಗ್ರಾ ಜಿಲ್ಲೆಯ ತಹಸಿಲ್ ನ ಗುಮ್ಮರ್ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಮಗಳು ಅನು ಹಾಗೂ ಮಗ ವಾನ್ಶ್ ಸರ್ಕಾರಿ ಶಾಲೆಯಲ್ಲಿ 4 ಮತ್ತು 2ನೇ ತರಗತಿಯಲ್ಲಿ ಓದುತ್ತಿದ್ದಾರೆ.

    ಕೊರೊನಾ ಎಂಬ ಮಹಾಮಾರಿ ವೈರಸ್ ಭೀತಿಯಿಂದ ರಾಜ್ಯದಲ್ಲಿ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಗಳನ್ನು ಆರಂಭಿಸಲಾಯಿತು. ಆದರೆ ಕುಲ್ದೀಪ್ ಮಕ್ಕಳಿಗೆ ತರಗತಿಗೆ ಹಾಜರಾಗಲು ಮೊಬೈಲ್ ಫೋನ್ ಹಾಗೂ ನೆಟ್ ಕನೆಕ್ಷನ್ ಇರಲಿಲ್ಲ. ಇದರಿಂದ ಬೇಸರಗೊಂಡು ತನ್ನ ಮಕ್ಕಳ ಓದು ಅರ್ಧಕ್ಕೆ ನಿಲ್ಲಬಾರದೆಂದು ಮೊಬೈಲ್ ಖರೀದಿ ಮಾಡಿದ್ದೇನೆ ಎಂದು ಕುಮಾರ್ ತಿಳಿಸಿದ್ದಾರೆ.

    ನನ್ನ ಮಕ್ಕಳು ಆನ್‍ಲೈನ್ ತರಗತಿಗೆ ಹಾಜರಾಗಲು ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ನನ್ನ ಕೈಯಲ್ಲಿ ಸಾಧ್ಯವಿರಲಿಲ್ಲ. ಹೀಗಾಗಿ ನಾನು ಸಾಕಿದ್ದ ಹಸುವನ್ನು ಮಾರಲು ನಿರ್ಧರಿಸಿದೆ. ಅಲ್ಲದೆ 6 ಸಾವಿರ ರೂಪಾಯಿಗೆ ಹಸುವನ್ನು ಮಾರಿಬಿಟ್ಟೆ ಎಂದು ಕುಮಾರ್ ಗದ್ಗದಿತರಾದರು. ಕುಮಾರ್ ಹಾಲು ಮಾರಾಟ ಮಾಡುತ್ತಿದ್ದರೆ, ಪತ್ನಿ ಕೂಲಿ ಕೆಸ ಮಾಡುತ್ತಿದ್ದರು. ಈ ಮೂಲಕ ಇಬ್ಬರು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದರು.

    ಹಸು ಮಾರುವ ಮೊದಲು ಕುಮಾರ್ ಕುಟುಂಬ, ಬ್ಯಾಂಕ್ ಬಾಗಿಲು ತಟ್ಟಿದೆ. ಅಲ್ಲದೆ ಖಾಸಗಿ ಸಾಲಗಾರರ ಮೊರೆಯೂ ಹೋಗಿದ್ದಾರೆ. ಆದರೆ ಎಲ್ಲಿಯೂ ಕುಮಾರ್ ಗೆ ಸಾಲ ದೊರಕಿರಲಿಲ್ಲ. ಇತ್ತ ಅದಾಗಲೇ ಆನ್‍ಕ್ಲಾಸ್ ಆರಂಭಿಸಿರುವ ಶಿಕ್ಷಕರು, ನಿಮ್ಮ ಮಕ್ಕಳ ಓದು ಮುಂದುವರಿಯಬೇಕಾದರೆ ಅವರಿಗೆ ಮೊಬೈಲ್ ಕೊಡಿಸಿ ತರಗತಿಗೆ ಹಾಜರುಪಡಿಸಿ ಎಂದು ಒತ್ತಡ ಹಾಕಲು ಆರಂಭಿಸಿದ್ದಾರೆ. ಪರಿಣಾಮ ಬೇರೆ ದಾರಿ ಇಲ್ಲದೆ ಹಸುವನ್ನು ಮಾರಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಕುಮಾರ್ ಬೇಸರ ವ್ಯಕ್ತಪಡಿಸಿದರು.

    ಸದ್ಯ ಅವರಲ್ಲಿ ಉಳಿದ ಇನ್ನೊಂದು ಹಸುವೇ ಜೀವನಾಧಾರವಾಗಿದೆ. ಇಷ್ಟು ಮಾತ್ರವಲ್ಲದೆ ಇದೀಗ ಕುಟುಂಬ ಮತ್ತೊಂದು ಕಷ್ಟವನ್ನು ಅನುಭವಿಸುತ್ತಿದೆ. ಅದೇನೆಂದರೆ, ಒಂದೇ ಫೋನಿನಲ್ಲಿ ಇಬ್ಬರು ಮಕ್ಕಳು ಏಕಕಾಲದಲ್ಲಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪರಿಣಾಮ ತರಗತಿಗೆ ಹಾಜರಾಗಲು ಇಬ್ಬರು ಮಕ್ಕಳು ಬೆಳಗೆದ್ದು ಜಗಳವಾಡುತ್ತಿರುವುದನ್ನು ನೋಡಲು ಕುಮಾರ್ ಕೈಯಲ್ಲಿ ಆಗುತ್ತಿಲ್ಲ.

    ಬಡವರಿಗೆ ನೀಡುವ ಸೌಲಭ್ಯಗಳನ್ನು ಪಡೆಯುವಲ್ಲಿ ಕುಮಾರ್ ವಂಚಿತರಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸಮಗ್ರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯುವ ಅರ್ಹತೆ ಕುಮಾರ್ ಕುಟುಂಬಕ್ಕಿದೆ. ಕುಮಾರ್ ಅವರ ಆರ್ಥಿಕ ಸ್ಥಿತಿಯ ಬಗ್ಗೆ ಸ್ಥಳೀಯ ಬಿಜೆಪಿ ಶಾಸಕ ರಮೇಶ್ ಧವಾಲಾಗೆ ತಿಳಿಸಿದಾಗ, ಸರ್ಕಾರದಿಂದ ಕುಮಾರ್ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನಿಡಿದ್ದಾರೆ.

  • ಮನೆ ಮನೆಗೆ ತೆರಳಿ ಪಾಠದ ಜೊತೆ ಕೊರೊನಾ ಜಾಗೃತಿ ಮೂಡಿಸ್ತಿರೋ ಶಿಕ್ಷಕರು

    ಮನೆ ಮನೆಗೆ ತೆರಳಿ ಪಾಠದ ಜೊತೆ ಕೊರೊನಾ ಜಾಗೃತಿ ಮೂಡಿಸ್ತಿರೋ ಶಿಕ್ಷಕರು

    ರಾಯಚೂರು: ಕೋವಿಡ್ 19 ಅಟ್ಟಹಾಸದಿಂದ ಜನಜೀವನವೇ ಬದಲಾಗಿದೆ. ಶಾಲಾ ಕಾಲೇಜುಗಳು ಯಾವಾಗ ಆರಂಭವಾಗುತ್ತವೆ ಅನ್ನೋ ಸ್ಪಷ್ಟತೆ ಇನ್ನೂ ಮೂಡಿಲ್ಲ. ಹೀಗಾಗಿ ಮಕ್ಕಳ ಅಕ್ಷರಭ್ಯಾಸ ತಪ್ಪಬಾರದು ಅಂತ ಶಾಲೆಗೆ ಬೀಗ ಹಾಕಿದ್ರೂ ರಾಯಚೂರಿನ ಲಿಂಗಸುಗೂರಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತೆರಳಿ ಪಾಠ ಮಾಡುತ್ತಿದ್ದಾರೆ.

    ತಾಲೂಕಿನ ಪುಟ್ಟಹಳ್ಳಿ ಕೆಸರಟ್ಟಿ ಗ್ರಾಮದ ಮುಖ್ಯೋಪಾಧ್ಯಾಯ ಚಂದ್ರಶೇಖರಪ್ಪ ಹಾಗೂ ಸಹ ಶಿಕ್ಷಕರು ಮಧ್ಯಾಹ್ನದವರೆಗೆ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಠ ಹೇಳುತ್ತಿದ್ದಾರೆ. ಹೋಂ ವರ್ಕ್ ಕೊಟ್ಟು ಮರುದಿನ ಬಂದು ಪರಿಶೀಲಿಸುತ್ತಿದ್ದಾರೆ. ಪಾಠದ ಜೊತೆಗೆ ಮಕ್ಕಳು ಹಾಗೂ ಪೋಷಕರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

    ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪಾಠ ಮಾಡುತ್ತಾರೆ. ಮಕ್ಕಳಿಗೆ ನೀಡಿದ ಹೋಂ ವರ್ಕ್‍ನ್ನ ಮಾಡಿಸುವಂತೆ ಪೋಷಕರಿಗೆ ಸೂಚನೆ ನೀಡುತ್ತಿದ್ದಾರೆ. ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ, ಗ್ರಾಮದ ಸ್ವಚ್ಛತೆ ಬಗ್ಗೆಯೂ ಅರಿವು ಮೂಡಿಸುತ್ತಿದ್ದಾರೆ. ಶಿಕ್ಷಕರ ನಡೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಆನ್‍ಲೈನ್ ಕ್ಲಾಸ್ ಎಫೆಕ್ಟ್- ಬ್ಯಾಂಕಲ್ಲಿ ಚಿನ್ನ ಅಡವಿಡಲು ಮುಂದಾದ ಪೋಷಕರು

    ಆನ್‍ಲೈನ್ ಕ್ಲಾಸ್ ಎಫೆಕ್ಟ್- ಬ್ಯಾಂಕಲ್ಲಿ ಚಿನ್ನ ಅಡವಿಡಲು ಮುಂದಾದ ಪೋಷಕರು

    ಮಂಗಳೂರು: ಸರ್ಕಾರ ಆನ್‍ಲೈನ್ ಕ್ಲಾಸ್ ಮಾಡಲು ತಯಾರಿ ನಡೆಸುತ್ತಿದ್ದರೆ ಇತ್ತ ಆನ್‍ಲೈನ್ ಕ್ಲಾಸ್‍ಗೆ ಪೋಷಕರು ಸಾಲಕ್ಕಾಗಿ ಬ್ಯಾಂಕಿನ ಮೊರೆ ಹೋಗಿದ್ದಾರೆ.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಸಹಕಾರಿ ಬ್ಯಾಂಕುಗಳಿಗೆ ಪೋಷಕರು ಸಾಲಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಆನ್‍ಲೈನ್ ಕ್ಲಾಸಿಗಾಗಿ ಮೊಬೈಲ್, ಲ್ಯಾಪ್ ಟಾಪ್ ಹಾಗೂ ಟಿವಿ ಖರೀದಿಗಾಗಿ ಅನ್ನೋ ಮಾಹಿತಿ ಹೊರ ಬಿದ್ದಿದೆ.

    ಗ್ರಾಮೀಣ ಪ್ರದೇಶದ ಹೆಚ್ಚಿನ ಜನರಲ್ಲಿ ಆನ್‍ಲೈನ್ ಕ್ಲಾಸ್ ಗಾಗಿ ಬೇಕಾದ ಆಧುನಿಕ ತಂತ್ರಜ್ಞಾನ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗೂ ಟಿವಿ ಇಲ್ಲ. ಆದರೆ ಆನ್‍ಲೈನ್ ಕ್ಲಾಸ್‍ಗೆ ಇವೆಲ್ಲದರ ಅಗತ್ಯ ಮಕ್ಕಳಿಗೆ ಇದೆ. ಹೀಗಾಗಿ ಚಿನ್ನಾಭರಣಗಳನ್ನು ಅಡವಿಟ್ಟು ಹಾಗೂ ಹೆಚ್ಚಿನ ಬಡ್ಡಿಗೆ ವೈಯಕ್ತಿಕ ಸಾಲ ಪಡೆಯಲು ಪೋಷಕರು ಮುಂದಾಗಿದ್ದಾರೆ.

    ಈ ವಿಚಾರನ್ನು ಪೋಷಕರು ಬ್ಯಾಂಕಿನಲ್ಲಿ ಹೇಳಿಕೊಂಡು ಸಾಲ ಕೇಳಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಇಂತಹ ಅಗತ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಬೇಕೆಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಚಿತ್ತರಂಜನ್ ಬೋಳಾರ್ ಒತ್ತಾಯಿಸಿದ್ದಾರೆ.

  • ಗುಡ್ಡ ಕುಸಿತ ಪ್ರಕರಣ- ಮೃತ ಮಕ್ಕಳ ಕುಟುಂಬಸ್ಥರಿಗೆ 5 ಲಕ್ಷ ರೂ. ಚೆಕ್ ಹಸ್ತಾಂತರ

    ಗುಡ್ಡ ಕುಸಿತ ಪ್ರಕರಣ- ಮೃತ ಮಕ್ಕಳ ಕುಟುಂಬಸ್ಥರಿಗೆ 5 ಲಕ್ಷ ರೂ. ಚೆಕ್ ಹಸ್ತಾಂತರ

    ಮಂಗಳೂರು: ಇಲ್ಲಿನ ಗುರುಪುರದ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಕ್ಕಳ ಕುಟುಂಬಸ್ಥರಿಗೆ ಇಂದು 5 ಲಕ್ಷ ರೂಪಾಯಿಯ ಚೆಕ್ ಹಸ್ತಾಂತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಚೆಕ್ ವಿತರಿಸಿದರು.

    ಮಂಗಳೂರು ಹೊರವಲಯದ ಗುರುಪುರ ಬಳಿ ಭಾನುವಾರ ಗುಡ್ಡ ಕುಸಿತದಿಂದಾಗಿ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದರು. ಎನ್‍ಡಿಆರೆಫ್ ಸಿಬ್ಬಂದಿ ಹಾಗೂ ಪೊಲೀಸರು ಸತತ ಕಾರ್ಯಾಚರಣೆ ನಡೆಸಿದರೂ ಮಕ್ಕಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. 16 ವರ್ಷದ ಅಣ್ಣ ಸಫ್ವಾನ್ ಹಾಗೂ 10 ವರ್ಷದ ತಂಗಿ ಸಹಲಾ ಇಬ್ಬರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು.

    ಈ ಸಂಬಂಧ ಟ್ವೀಟ್ ಮಾಡಿದ್ದ ಸಿಎಂ ಬಿಎಸ್‍ವೈ, ಸಂತಾಪ ಸೂಚಿಸಿ ಮಕ್ಕಳ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದರು. ಅಲ್ಲದೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ದುಃಖಕರ. ರಕ್ಷಣಾ ಕಾರ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದರು. ಜಿಲ್ಲಾಡಳಿತದ ಸಕಾಲಿಕ ಪ್ರಯತ್ನದ ಹೊರತಾಗಿಯೂ ಮಕ್ಕಳನ್ನು ಬದುಕಿಸಿಕೊಳ್ಳಲು ಸಾಧ್ಯವಾಗದಿರುವುದು ವಿಷಾದನೀಯ ಎಂದು ತಿಳಿಸಿದ್ದರು.

  • ಗುಡ್ಡ ಕುಸಿತ- ಸಾವನ್ನಪ್ಪಿದ ಮಕ್ಕಳ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ

    ಗುಡ್ಡ ಕುಸಿತ- ಸಾವನ್ನಪ್ಪಿದ ಮಕ್ಕಳ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ

    ಬೆಂಗಳೂರು: ಮಂಗಳೂರಿನ ಗುರುಪುರದ ಬಳಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದು, ಮಕ್ಕಳ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿ ಇಬ್ಬರು ಮಕ್ಕಳ ಕುಟುಂಬಕ್ಕೆ ತಲಾ 5 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ದುಃಖಕರ. ರಕ್ಷಣಾ ಕಾರ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದರು. ಜಿಲ್ಲಾಡಳಿತದ ಸಕಾಲಿಕ ಪ್ರಯತ್ನದ ಹೊರತಾಗಿಯೂ ಮಕ್ಕಳನ್ನು ಬದುಕಿಸಿಕೊಳ್ಳಲು ಸಾಧ್ಯವಾಗದಿರುವುದು ವಿಷಾದನೀಯ ಎಂದು ತಿಳಿಸಿದ್ದಾರೆ.

    ಈಗಾಗಲೇ 19 ಮನೆಗಳಿಂದ 118 ಮಂದಿಯನ್ನು ತೆರವುಗೊಳಿಸಿ, ಸ್ಥಳಾಂತರಿಸಲಾಗಿದೆ. ಉಳಿದ 60 ಮನೆಗಳಿಂದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಬೋಂಡಂತಿಲ ಗ್ರಾಮದ ಬಳಿ ಗುರುತಿಸಿರುವ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಎಲ್ಲ ಸಂತ್ರಸ್ತರನ್ನು ಸ್ಥಳಾಂತರಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಿಎಂ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಮಂಗಳೂರು ಹೊರವಲಯದ ಗುರುಪುರ ಬಳಿ ಗುಡ್ಡ ಕುಸಿತದಿಂದಾಗಿ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದರು. ಸತತ ಐದು ಗಂಟೆಯಿಂದ ಎನ್‍ಡಿಆರ್‍ಎಫ್ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. 16 ವರ್ಷದ ಅಣ್ಣ ಸಫ್ವಾನ್ ಹಾಗೂ 10 ವರ್ಷದ ತಂಗಿ ಸಹಲಾ ಇಬ್ಬರ ಮೃತ ದೇಹವನ್ನು ಹೊರ ತೆಗೆಯಲಾಗಿದೆ.

    ಈ ಮನೆಯಲ್ಲಿ ಸುಮಾರು 6 ಜನ ವಾಸವಿದ್ದರು. ಗುಡ್ಡ ಕುಸಿಯುತ್ತಿರುವುದು ತಿಳಿಯುತ್ತಿದ್ದಂತೆ ಮನೆಯವರು ಹೊರಗಡೆ ಓಡಿ ಬಂದಿದ್ದಾರೆ. ಆದರೆ ಇಬ್ಬರು ಮಕ್ಕಳು ಮನೆಯಲ್ಲಿ ಮಲಗಿದ್ದರು. ಹೀಗಾಗಿ ಮನೆಯಲ್ಲೇ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.

  • ಮಧ್ಯರಾತ್ರಿ ಮಕ್ಕಳೇ ತಂದೆಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಂದ್ರು

    ಮಧ್ಯರಾತ್ರಿ ಮಕ್ಕಳೇ ತಂದೆಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಂದ್ರು

    ಮಂಗಳೂರು: ತಂದೆಯನ್ನೇ ಇಬ್ಬರು ಮಕ್ಕಳು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ನಡೆದಿದೆ.

    ಇಲ್ಲಿನ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿನ ನಿವಾಸಿ ಧರ್ನಪ್ಪ ಪೂಜಾರಿ (65) ಕೊಲೆಯಾದ ವ್ಯಕ್ತಿ. ಇವರನ್ನು ಮಕ್ಕಳಾದ ಮೋನಪ್ಪ ಹಾಗೂ ನವೀನ್ ಎಂಬವರು ಭಾನುವಾರ ತಡರಾತ್ರಿ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ.

    ಮನೆಯಲ್ಲಿದ್ದ ತೆಂಗಿನ ಮರದ ತೆಂಗಿನಕಾಯಿ, ಸೀಯಾಳವನ್ನು ತೆಗೆದು ತಂದೆ ಮಾರಾಟ ಮಾಡುತ್ತಿದ್ದರು. ಇದೇ ವಿಚಾರಕ್ಕೆ ತಂದೆ ಹಾಗೂ ಮಕ್ಕಳಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

    ನಿನ್ನೆ ಮಧ್ಯರಾತ್ರಿಯೂ ಇದೇ ವಿಚಾರಕ್ಕೆ ತಂದೆ-ಮಕ್ಕಳ ಮಧ್ಯೆ ಜಗಳ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಮಕ್ಕಳು ತಂದೆಯನ್ನು ಕತ್ತಿಯಿಂದ ಕಡಿದಿದ್ದಾರೆ. ಗಂಭೀರ ಗಾಯಗೊಂಡ ಧರ್ನಪ್ಪ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಪ್ರಕರಣ ಇಂದು ಬೆಳಕಿಗೆ ಬಂದಿದ್ದು, ಆರೋಪಿಗಳಿಬ್ಬರನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

  • ಕೊರೊನಾಗೆ ವ್ಯಾಕ್ಸಿನ್ ಸಿಗುವವರೆಗೂ ಶಾಲೆ ಬೇಡ: ಪೋಷಕರು

    ಕೊರೊನಾಗೆ ವ್ಯಾಕ್ಸಿನ್ ಸಿಗುವವರೆಗೂ ಶಾಲೆ ಬೇಡ: ಪೋಷಕರು

    ಧಾರವಾಡ: ಕೊರೊನಾ ಮಹಾಮಾರಿಗೆ ವ್ಯಾಕ್ಸಿನ್ ಸಿಗುವವರೆಗೆ ಶಾಲೆ ಬೇಡ ಎಂದು ಧಾರವಾಡದ ಶಾಲಾ ಮಕ್ಕಳ ಪೋಷಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಕೊರೊನಾ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಇಲ್ಲ, ಹೀಗಾಗಿ ಶಾಲೆಗೆ ಹೋದರೆ ಮಕ್ಕಳೆಲ್ಲ ಊಟಕ್ಕೆ ಹಾಗೂ ಆಟದಲ್ಲಿ ಗುಂಪಾಗಿ ಭಾಗವಹಿಸ್ತಾರೆ ಎಂದು ಬಹುತೇಕ ಪೋಷಕರು ಹೇಳುತ್ತಿದ್ದಾರೆ. ಅಲ್ಲದೆ ಮಕ್ಕಳು ಶಾಲೆಗೆ ಹೋಗಬೇಕಾದ್ರು ಆಟೋ ಹಾಗೂ ವ್ಯಾನ್‍ಗಳಲ್ಲಿ ಒಟ್ಟಿಗೆ ಕುಳಿತುಕೊಳ್ಳಬೇಕಾಗುತ್ತೆ. ಈ ಸಂದರ್ಭದಲ್ಲಿ ಒಂದು ಮಗುವಿಗೆ ಏನಾದ್ರು ಕೊರೊನಾ ಇದ್ರೆ ಅದು ಎಲ್ಲ ಮಕ್ಕಳಿಗೆ ಹಬ್ಬಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

    ಮಕ್ಕಳು ಶಾಲೆಗೆ ಹೋಗಿ ಬರುವವರೆಗೆ ಪೋಷಕರಿಗೂ ಭಯ ಇರುತ್ತೆ ಎಂದು ಕೆಲ ಪೋಷಕರು ಹೇಳುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಗಳಿಂದ ಸದ್ಯಕ್ಕೆ ಸರ್ಕಾರ ಶಾಲೆ ಆರಂಭ ಮಾಡುವ ಬಗ್ಗೆ ಚಿಂತನೆ ಮಾಡೊದು ಅಷ್ಟು ಸೂಕ್ತವಲ್ಲ ಎಂದಿದ್ದಾರೆ.

    ಇನ್ನೊಂದೆಡೆ ಮಕ್ಕಳ ಪೋಷಕರು, ‘ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ. ನನ್ನ ಮಕ್ಕಳ ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.

  • ಪತಿ, ಪತ್ನಿ ನಡುವೆ ರಾತ್ರಿ ಜಗಳ- ಮರುದಿನ ಮಕ್ಕಳಿಗೆ ವಿಷವಿಕ್ಕಿ ಹೆಂಡ್ತಿ ಆತ್ಮಹತ್ಯೆಗೆ ಯತ್ನ

    ಪತಿ, ಪತ್ನಿ ನಡುವೆ ರಾತ್ರಿ ಜಗಳ- ಮರುದಿನ ಮಕ್ಕಳಿಗೆ ವಿಷವಿಕ್ಕಿ ಹೆಂಡ್ತಿ ಆತ್ಮಹತ್ಯೆಗೆ ಯತ್ನ

    ಹೈದರಾಬಾದ್: ಪತಿ ಜೊತೆ ಜಗಳವಾಡಿ ನೊಂದ ಪತ್ನಿ ತನ್ನ ಇಬ್ಬರು ಮಕ್ಕಳಿಗೆ ವಿಷ ಕೊಟ್ಟು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೈದರಾಬಾದ್ ನ ಶಮೀರ್ ಪೇಟ್ ಎಂಬಲ್ಲಿ ಬುಧವಾರ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದಾಕೆಯನ್ನು ಪ್ರೀತಿ ಎಂದು ಗುರುತಿಸಲಾಗಿದೆ. ಈಕೆ ತನ್ನಿಬ್ಬರು ಅಪ್ರಾಪ್ತ ಮಕ್ಕಳಾದ ಗೌರವ್ ಹಾಗೂ ಕೌಶಿಕ್ ಗೆ ವಿಷ ನೀಡಿ ಕೊಲೆ ಮಾಡಿದ್ದಾಳೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಪ್ರೀತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ತನ್ನ ಮಕ್ಕಳಿಗೆ ಆಹಾರದಲ್ಲಿ ಕೀಟನಾಶಕ ನೀಡಿದ್ದಾಳೆ. ಅಲ್ಲದೆ ತಾನೂ ಅದನ್ನು ಸೇವನೆ ಮಾಡಿದ್ದಾಳೆ ಎಂಬುದಾಗಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಪ್ರೀತಿಯ ಪತಿ ಗೋಪಿನಾಥ್ ಕೆಲಸ ಮುಗಿಸಿ ಮನೆಗೆ ವಾಪಸ್ಸಾದಾಗ ಮಕ್ಕಳು ಹಾಗೂ ಪತ್ನಿ ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು.

    ಸಣ್ಣ ವಿಚಾರಕ್ಕೆ ಜಗಳ:
    ಮಂಗಳವಾರ ರಾತ್ರಿ ಗೋಪಿನಾಥ್ ಹಾಗೂ ಪ್ರೀತಿ ನಡುವೆ ಸಣ್ಣ ವಿಚಾರವೊಂದಕ್ಕೆ ಜಗಳವಾಗಿದೆ. ಆದರೆ ಬುಧವಾರ ಬೆಳಗ್ಗೆ ಗೋಪಿನಾಥ್ ಎಂದಿನಂತೆ ಕಚೇರಿಗೆ ತೆರಳಿದ್ದಾರೆ. ಹೀಗೆ ಹೋದ ಗೋಪಿನಾಥ್ ಸಂಜೆ ಮನೆಗೆ ವಾಪಸ್ಸಾದಾಗ ಪತ್ನಿ ಹಾಗೂ ಮಕ್ಕಳು ಪ್ರಜ್ಞಾಹೀನರಾಗಿ ಬಿದ್ದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಕ್ಕಳು ಹಾಗೂ ಪತ್ನಿ ಬಿದ್ದಿರುವುದನ್ನು ನೋಡಿದ ಗೋಪಿನಾಥ್ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರ ಬಳಿ ಹೇಳಿಕೆಗಳನ್ನು ಕೂಡ ಪಡೆದುಕೊಂಡಿದ್ದಾರೆ.

    ಮಕ್ಕಳಿಬ್ಬರು ಮೃತಪಟ್ಟಿದ್ದು, ಪ್ರೀತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪ್ರೀತಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಕೊಳ್ಳಲಾಗಿದೆ. ಅಲ್ಲದೆ ಆಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಪೊಲೀಸರೇ ಮಕ್ಕಳಿಗೆ ಆಶ್ಲೀಲ ವಿಡಿಯೋ ತೋರಿಸಿದ್ರು: ನಿತ್ಯಾನಂದನ ಶಿಷ್ಯ

    ಪೊಲೀಸರೇ ಮಕ್ಕಳಿಗೆ ಆಶ್ಲೀಲ ವಿಡಿಯೋ ತೋರಿಸಿದ್ರು: ನಿತ್ಯಾನಂದನ ಶಿಷ್ಯ

    – ತನಿಖಾಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲು

    ಅಹಮದಾಬಾದ್: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನ ವಿರುದ್ಧ ಅಹಮದಾಬಾದ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆಶ್ರಮದಲ್ಲಿನ ಮಕ್ಕಳನ್ನೂ ವಿಚಾರಣೆಗೊಳಪಡಿಸಿದ್ದರು. ಆದರೆ ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ನಿತ್ಯಾನಂದನ ಶಿಷ್ಯ, ತನಿಖಾಧಿಕಾರಿಗಳು ಆಶ್ರಮದ ಮಕ್ಕಳಿಗೆ ಅಶ್ಲೀಲ ವಿಡಿಯೋ ತೋರಿಸಿ, ಭಾವನಾತ್ಮಕವಾಗಿ ಬೆದರಿಸಿ ತಮಗೆ ಬೇಕಾದಂತೆ ಹೇಳಿಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾನೆ.

    ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಮಾರ್ಚ್ 6ರಂದು ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯುಸಿ)ಯ ಸದಸ್ಯರೂ ಸೇರಿದಂತೆ 14 ಜನ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅಹಮದಾಬಾದ್‍ನ ಹೊರವಲಯದಲ್ಲಿರುವ ಗುರುಕುಲ ಹಾಗೂ ಆಶ್ರಮದಲ್ಲಿ ನಿತ್ಯಾನಂದನ ಅನುಯಾಯಿಗಿದ್ದ ಗಿರೀಶ್ ತುರ್ಲಪತಿ ಸಲ್ಲಿಸಿದ್ದ ದೂರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಅಧಿಕಾರಿಗಳ ವಿರುದ್ಧ ಪೊಕ್ಸೊ ಕಾಯ್ದೆ, ಐಪಿಸಿ ಸೆಕ್ಷನ್ಸ್ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ. ಅದರಂತೆ ಅಹಮದಾಬಾದ್ ಜಿಲ್ಲೆಯ ವಿವೇಕಾನಂದ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಈ ಮೂಲಕ ಇನ್‍ಸ್ಪೆಕ್ಟರ್ ಆರ್.ಬಿ.ರಾಣಾ, ಡಿಎಸ್‍ಪಿ ಕೆ.ಟಿ.ಕರಿಮಾರಿಯಾ, ರಿಯಾಜ್ ಸರ್ವಾಯಿಯಾ, ಎಸ್.ಎಚ್.ಶಾರದಾ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ದಿಲೀಪ್ ಮೇರ್, ಸಿಡಬ್ಲ್ಯುಸಿ ಅಧ್ಯಕ್ಷರು ಹಾಗೂ ಸದಸ್ಯರ ಆರೋಪಿ ಸ್ಥಾನದಲ್ಲಿದ್ದಾರೆ.

    ವಿಚಾರಣೆ ನಡೆಸಿದ್ದಕ್ಕಾಗಿ ನಿತ್ಯಾನಂದನ ಶಿಷ್ಯ ತುರ್ಲಪತಿ ಪೊಲೀಸರು ಹಾಗೂ ಸಿಡಬ್ಲ್ಯುಸಿ ಸದಸ್ಯರ ವಿರುದ್ಧವೇ ಕೇಸ್ ಹಾಕಿದ್ದಾರೆ. ವಿವೇಕಾನಂದ ನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಆರ್.ಬಿ.ರಾಣಾ ಹಾಗೂ ಸಿಡಬ್ಲ್ಯುಸಿ ಸದಸ್ಯರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಆಶ್ರಮದ ಅಪ್ರಾಪ್ತರಿಗೆ ಅಸಭ್ಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ ತನಿಖಾಧಿಕಾರಿಗಳು ಮಕ್ಕಳಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪೊಲೀಸ್ ಅಧಿಕಾರಿಗಳು ಹಾಗೂ ಸಿಡಬ್ಲ್ಯುಸಿ ಸದಸ್ಯರು ಮಕ್ಕಳಿಂದ ಅನುಕೂಲಕರ ಹೇಳಿಕೆ ಪಡೆಯಲು ಮಕ್ಕಳನ್ನು ಭಾವನಾತ್ಮಕವಾಗಿ ಬ್ಲ್ಯಾಕ್‍ಮೇಲ್ ಮಾಡಲು ಪ್ರಯತ್ನಿಸಿದರು. ಅಲ್ಲದೆ ಅವರಿಗೆ ಪೋರ್ನ್ ವಿಡಿಯೋ ಹಾಗೂ ಫೋಟೋಗಳನ್ನು ತೋರಿಸಿದ್ದಾರೆ. ಈ ಮೂಲಕ ಮಕ್ಕಳಿಗೆ ಮಾನಸಿಕ ಹಿಮಸೆ ನಿಡಿದ್ದಾರೆ ಎಂದು ತುರ್ಲಪತಿ ಆರೋಪಿಸಿದ್ದಾರೆ.

    ಕೋರ್ಟ್ ಆದೇಶದ ಮೇರೆಗೆ ಮಾರ್ಚ್ 6ರಂದು ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 14 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇವೆ. ಈವರೆಗೆ ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಮುಂದಿನ ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಕಳೆದ ವರ್ಷ ನವೆಂಬರ್‍ನಲ್ಲಿ ಇದೇ ಪೊಲೀಸ್ ಠಾಣೆಯಲ್ಲಿ ಮೂವರು ಮಕ್ಕಳನ್ನು ಅಪಹರಿಸಿ ಬಂಧಿಸಿರುವ ಕುರಿತು ನಿತ್ಯಾನಂದನ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಹುಡುಗನನ್ನು ಅಪಹರಿಸಲಾಗಿದೆ ಎಂದು ದೂರು ದಾಖಲಾಗಿತ್ತು. ಅಲ್ಲದೆ ಇತ್ತೀಚೆಗೆ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಬಂಧನದಲ್ಲಿಟ್ಟುಕೊಂಡಿದ್ದ ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದಾನೆ. ಹೀಗಾಗಿ ನಿತ್ಯಾನಂದನ ಕುರಿತು ಮಾಹಿತಿ ಕೋರಿ ಇಂಟರ್‍ಪೋಲ್ ಬ್ಲ್ಯೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

  • ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಟೆಕ್ಕಿ ಆತ್ಮಹತ್ಯೆ

    ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಟೆಕ್ಕಿ ಆತ್ಮಹತ್ಯೆ

    – 6 ಹಾಗೂ 2 ವರ್ಷದ ಮಕ್ಕಳನ್ನೇ ಕೊಂದ
    – ಹಣಕಾಸಿನ ಸಮಸ್ಯೆಯಿಂದ ಆತ್ಮಹತ್ಯೆ ಶಂಕೆ

    ಹೈದರಾಬಾದ್: ಟೆಕ್ಕಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

    ಪ್ರದೀಪ್(40), ಸ್ವಾತಿ(35), ಕಲ್ಯಾಣ ಕೃಷ್ಣ(6) ಹಾಗೂ ಜಯ ಕೃಷ್ಣ(2) ಮೃತಪಟ್ಟವರು. ಸೋಮವಾರ ಎಲ್.ಬಿ ನಗರದ ಹಸ್ತಿನಾಪುರದಲ್ಲಿರುವ ಮನೆಯಲ್ಲಿ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್ ಆತನ ಪತ್ನಿ ಹಾಗೂ ಮಕ್ಕಳ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಪ್ರದೀಪ್ ಊಟದಲ್ಲಿ ವಿಷ ಬೆರಸಿ ಪತ್ನಿ- ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಮಕ್ಕಳ ಮೃತದೇಹ ಬೆಡ್‍ರೂಮಿನಲ್ಲಿ ಪತ್ತೆಯಾಗಿತ್ತು. ಹಣಕಾಸಿನ ಸಮಸ್ಯೆಯಿಂದಾಗಿ ಪ್ರದೀಪ್ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಪ್ರದೀಪ್ ಊಟದಲ್ಲಿ ವಿಷಯ ಬೆರಸಿ ತನ್ನ ಪತ್ನಿ ಹಾಗೂ ಮಕ್ಕಳನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದಾನೆ ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ್ದಾರೆ.

    ಭಾನುವಾರ ಪ್ರದೀಪ್ ಮನೆಯಿಂದ ಯಾರು ಹೊರ ಬರದನ್ನು ನೋಡಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಾಗಿಲನ್ನು ಒಡೆದು ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ನಾಲ್ವರ ಮೃತದೇಹ ಹಾಸಿಗೆ ಮೇಲೆ ಪತ್ತೆಯಾಗಿದೆ.

    ಸದ್ಯ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ವರದಿ ಬಂದ ನಂತರ ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ಪ್ರದೀಪ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ತಂದೆಗೆ ಪತ್ರ ಬರೆದಿದ್ದು, ಅದರಲ್ಲಿ ನಾನು ನಿಮಗೆ ಭಾರವಾಗಿರಲು ಇಷ್ಟವಿಲ್ಲ ಎಂದು ಉಲ್ಲೇಖಿದ್ದನು.