Tag: Childrens

  • ಹಾಸನ ಪೊಲೀಸರ ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಪೋಷಕರನ್ನು ಸೇರಿದ ಹೆಣ್ಣುಮಕ್ಕಳು

    ಹಾಸನ ಪೊಲೀಸರ ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಪೋಷಕರನ್ನು ಸೇರಿದ ಹೆಣ್ಣುಮಕ್ಕಳು

    ಹಾಸನ: ಹೊರ ಜಿಲ್ಲೆಯಿಂದ ಕೂಲಿ ಅರಸಿ ಬಂದ ಎರಡು ಬಡ ಕುಟುಂಬದ ಹೆಣ್ಣು ಮಕ್ಕಳಿಬ್ಬರು ಜೂ.21ರಂದು ನಾಪತ್ತೆಯಾಗಿದ್ದರು. ಆದರೆ ಇದೀಗ ಹಾಸನ ಪೊಲೀಸರ ಕಾರ್ಯಚರಣೆಯ ಫಲವಾಗಿ ಮಕ್ಕಳು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾರೆ.

    ಎರಡು ಬಡ ಕುಟುಂಬಗಳು ಹಾಸನ ನಗರದ ಜವೇನಹಳ್ಳಿ ಮಠದ ಸಮೀಪ ಗುಡಿಸಲಿನಲ್ಲಿ ವಾಸವಾಗಿತ್ತು. ಆ ಕುಟುಂಬದ ಲೋಕೇಶ್ ಎಂಬವರಿಗೆ ಹನ್ನೊಂದು ವರ್ಷದ (ಕಾಂಚನ) ಹೆಣ್ಣು ಮಗಳಿದ್ದು, ಇನ್ನೊಬ್ಬರು ಪತಿ ಕಳೆದುಕೊಂಡಿರುವ ನಾಗರತ್ನಗೆ ಎಂಟು ವರ್ಷದ (ಹಂಸವೇಣಿ) ಮಗಳಿದ್ದಾಳೆ. ಇದನ್ನೂ ಓದಿ: ಮೀನು ಹಿಡಿಯಲು ಮುಗಿಬಿದ್ದ ನೂರಾರು ಜನ- ಕೊರೊನಾ ರೂಲ್ಸ್ ಬ್ರೇಕ್

    ಪ್ರತಿದಿನವೂ ಎರಡು ಕುಟುಂಬಗಳು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳುತ್ತಿದ್ದರು. ಅಕ್ಕಪಕ್ಕದ ಮನೆಯ ಎರಡು ಮಕ್ಕಳು ಪ್ರತಿನಿತ್ಯವೂ ಜೊತೆಯಲ್ಲಿಯೇ ಆಟವಾಡುತ್ತಿದ್ದರು. ಆದರೆ ಜೂ.21 ರಂದು ಪೋಷಕರು ಎಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಇಬ್ಬರು ಮಕ್ಕಳು ಕಾಣೆಯಾಗಿದ್ದು ಕಣ್ಣೀರಿಡುತ್ತಾ ಪೋಷಕರು ಎಸ್‍ಪಿ ಆಫೀಸ್ ಮೆಟ್ಟಿಲೇರಿದ್ದರು. ಚಿಕ್ಕಮಕ್ಕಳು ಕಾಣೆಯಾಗಿದ್ದಾರೆ ದಯವಿಟ್ಟು ಹುಡುಕಿಕೊಡಿ ಎಂದು ಗೋಗರೆದಿದ್ದರು. ಹಾಸನ ಎಸ್.ಪಿ ಶ್ರೀನಿವಾಸ್ ಗೌಡ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಾಸನದ ಹುಡುಕಾಟ ನಡೆಸಿದ್ದರೂ ಮಕ್ಕಳು ಪತ್ತೆಯಾಗದ ಕಾರಣ ಆತಂಕಕ್ಕೆ ಕಾರಣವಾಗಿತ್ತು.

    ಮಕ್ಕಳು ಜಿಲ್ಲೆಯೊಳಗೆ ಪತ್ತೆಯಾಗದಿದ್ದಾಗ ಹೊರ ಜಿಲ್ಲೆಗಳ ರೈಲ್ವೆ ನಿಲ್ದಾಣ, ಪೊಲೀಸ್ ಠಾಣೆ ಹಾಗೂ ಬಸ್ ನಿಲ್ದಾಣಗಳಿಗೆ ಮಕ್ಕಳು ಕಾಣೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಬೆಂಗಳೂರಿನ ಯಶವಂತಪುರ ರೈಲ್ವೆ ಪೊಲೀಸರು ರೈಲ್ವೆ ನಿಲ್ದಾಣವನ್ನು ಮುಂಜಾನೆ 4.30 ರ ಸಮಯದಲ್ಲಿ ಪರಿಶೀಲಿಸಿದ ವೇಳೆ ಇಬ್ಬರು ಹೆಣ್ಣುಮಕ್ಕಳು ಪತ್ತೆಯಾಗಿದ್ದಾರೆ. ಇದರೊಂದಿಗೆ ಮಕ್ಕಳು ಕಾಣೆಯಾದ ರಹಸ್ಯವೂ ಬಯಲಾಗಿದೆ. ಎರಡು ಮಕ್ಕಳು ಆಟವಾಡುತ್ತಲೆ ಮನೆಯ ಬಳಿಯಿಂದ ಹಾಸನದ ರೈಲ್ವೆ ನಿಲ್ದಾಣಕ್ಕೆ ಹೋಗಿ, ಬೆಂಗಳೂರಿಗೆ ಹೊರಟಿದ್ದ ರೈಲು ಏರಿದ್ದಾರೆ. ಇವರನ್ನು ನೋಡಿದ ಸಹಪ್ರಯಾಣಿಕರು ಕೂಡ ಇವರ ಪೋಷಕರು ಕೂಡ ರೈಲಿನಲ್ಲೇ ಇರಬೇಕು ಎಂದು ಸುಮ್ಮನಾಗಿದ್ದಾರೆ. ಆದರೆ ಇದೀಗ ಹಾಸನ ಪೊಲೀಸರ ಕಾರ್ಯವೈಖರಿಯಿಂದ ಮಕ್ಕಳು ಸುರಕ್ಷಿತವಾಗಿ ಪೋಷಕರನ್ನು ಸೇರಿದ್ದಾರೆ.

    ಕಾಣೆಯಾದ ಎರಡು ಹೆಣ್ಣುಮಕ್ಕಳನ್ನು ಪೋಷಕರ ಮಡಿಲಿಗೆ ಒಪ್ಪಿಸಿದ ಎಸ್.ಪಿ ಆರ್.ಶ್ರೀನಿವಾಸ್ ಗೌಡ ಹಾಗೂ ಹಾಸನ ಪೊಲೀಸರಿಗೆ ಬಡ ಕುಟುಂಬಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಎಸ್.ಪಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

  • ಎರಡನೇ ಹೆಂಡತಿ ಮಾತು ಕೇಳಿ ಮಕ್ಕಳಿಗೆ ಕಬ್ಬಿಣದ ರಾಡ್‍ನಿಂದ ಸುಟ್ಟ ಪಾಪಿ ತಂದೆ

    ಎರಡನೇ ಹೆಂಡತಿ ಮಾತು ಕೇಳಿ ಮಕ್ಕಳಿಗೆ ಕಬ್ಬಿಣದ ರಾಡ್‍ನಿಂದ ಸುಟ್ಟ ಪಾಪಿ ತಂದೆ

    ಬೆಂಗಳೂರು: ಮಲತಾಯಿಯ ಮಾತು ಕೇಳಿ ತಂದೆಯೊಬ್ಬ ಮೂವರು ಅಪ್ರಾಪ್ತ ಮಕ್ಕಳಿಗೆ ಮನಸೋ ಇಚ್ಛೆ ಕಬ್ಬಿಣದ ರಾಡ್‍ನಿಂದ ಸುಟ್ಟ ಅಮಾಯಕ ಘಟನೆಯೊಂದು ಜೆಪಿ ನಗರದಲ್ಲಿ ವರದಿಯಾಗಿದೆ.

    ಮಕ್ಕಳಿಗೆ ಸುಟ್ಟ ಪಾಪಿ ತಂದೆಯನ್ನು ಸೆಲ್ವಂ ಎಂದು ಗುರುತಿಸಲಾಗಿದೆ. ಸೆಲ್ವಂ ಮೊದಲ ಪತ್ನಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸತ್ಯ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ. ಮೊದಲ ಪತ್ನಿಗೆ ಮೂವರು ಮಕ್ಕಳಿದ್ದರು. ಮೊದಲ ಹೆಂಡತಿಯ ಮಕ್ಕಳ ಬಗ್ಗೆ ಸತ್ಯ ಗಂಡನ ಬಳಿ ಚಾಡಿ ಹೇಳುತ್ತಿದ್ದರಿಂದ ಕೋಪಗೊಂಡು ಮಕ್ಕಳ ಮೇಲೆ ಸೆಲ್ವಂ ರಾಡ್‍ನಿಂದ ಸುಟ್ಟು ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ಸ್ಪರ್ಧಿಗಳ ಗೇಮ್ ಪ್ಲ್ಯಾನ್ ಕೇಳಿ ಅಚ್ಚರಿಗೊಳಗಾದ್ರು ಸುದೀಪ್..!

    ಪುಟ್ಟ ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಮಕ್ಕಳು ಕಿರುಚಾಟ ನಡೆಸಲು ಆರಂಭಿಸಿದ್ದಾರೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತರಾದ ಪೊಲೀಸರು ಸುಟ್ಟ ಗಾಯಗೊಂಡಿದ್ದ ಮೂವರು ಮಕ್ಕಳನ್ನು ರಕ್ಷಣೆ ಮಾಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಸೆಲ್ವಂ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಜೆಪಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೀದಿಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳ ನೆರವಿಗೆ ನಿಂತ ಕಿಚ್ಚ

    ಬೀದಿಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳ ನೆರವಿಗೆ ನಿಂತ ಕಿಚ್ಚ

    ಹುಬ್ಬಳ್ಳಿ: ಮಕ್ಕಳು ಶಾಲೆಗಾಗಿ ಕಣ್ಣೀರು ಹಾಕಿದ್ದರು. ಕಲಿಯಲು ಕಟ್ಟಡವಿಲ್ಲದೆ, ಬೀದಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ಅಂತಹ ಮಕ್ಕಳ ಸಂಕಷ್ಟಕ್ಕೆ ಈಗ ಕಿಚ್ಚ ಸುದೀಪ್ ನಿಂತಿದ್ದು, ಈ ಮೂಲಕ ಮಕ್ಕಳ ಬಾಳಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ.

    ಹುಬ್ಬಳ್ಳಿಯ ರಾಮನಗರದಲ್ಲಿರುವ ಸರ್ಕಾರಿ ಅನುದಾನಿತ ಹರಿಜನ ಹೆಣ್ಣು ಮಕ್ಕಳ ಶಾಲೆಯ ಮಕ್ಕಳು ಕಳೆದೊಂದು ವಾರದಿಂದ ಶಾಲೆಗಾಗಿ ಕಣ್ಣೀರು ಹಾಕಿದ್ದರು. ಬೀದಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ಮಕ್ಕಳ ಸಂಕಷ್ಟದ ಕುರಿತು ಮಾಧ್ಯಮದಲ್ಲಿ ವರದಿ ನೋಡಿದ್ದ ಕಿಚ್ಚ ಸುದೀಪ್, ಮಕ್ಕಳಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಇಂದು ಅಭಿನಯ ಚರ್ಕವರ್ತಿ ತಮ್ಮ ಟ್ರಸ್ಟ್ ಮೂಲಕ ಮಕ್ಕಳ ಕಲಿಕೆಗೆ ಸಹಾಯದ ಹಸ್ತ ಚಾಚಿದ್ದಾರೆ.

    ಕಳೆದ ಒಂದು ವಾರದ ಹಿಂದೆ ನಡೆದಿದ್ದ ಘಟನೆಯಿಂದ ಮಕ್ಕಳು ಮುಂದೇನು ಎಂಬ ಯೋಚನೆಗೆ ಸಿಲುಕಿದ್ದರು. ಕೋರ್ಟ್ ನ ಆದೇಶವನ್ನು ಹಿಡಿದು ಬಂದಿದ್ದ ಗಾಂಧಿವಾಡ ಸೊಸೈಟಿ, ಮಕ್ಕಳ ಕಲಿಕೆಯನ್ನು ನೋಡದೆ ಪೀಠೋಪಕರಣಗಳನ್ನು ಹೊರ ಹಾಕಿತ್ತು. ಮಕ್ಕಳು ಎಷ್ಟೇ ಗೋಗರೆದರೂ, ಅವರ ಮಾತನ್ನೂ ಕೇಳದೆ ಮಕ್ಕಳನ್ನು ಹೊರಹಾಕಲಾಗಿತ್ತು. ಆದರೆ ಅಂದು ಮಕ್ಕಳ ಆ ಗೋಳಾಟವನ್ನು ಕಂಡಿದ್ದ ಕೋಟಿಗೊಬ್ಬ ಇದೀಗ ಮಕ್ಕಳ ಸಹಾಯಕ್ಕೆ ಮುಂದಾಗಿದ್ದಾರೆ. ಹುಬ್ಬಳ್ಳಿಯ ಹರಿಜನ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮಕ್ಕಳ ಕಲಿಕೆಗೆ ನಟ ಸುದೀಪ್ ಕೈಜೋಡಿಸಿದ್ದು, ಅವರ ಸಂಪೂರ್ಣ ಕಲಿಕೆಗೆ ನಾನು ಸದಾ ಸಿದ್ಧ ಎನ್ನುವ ಮೂಲಕ ತಮ್ಮ ಟ್ರಸ್ಟ್ ನ್ನು ಹುಬ್ಬಳ್ಳಿಗೆ ಕಳುಹಿಸಿ ಕೊಟ್ಟಿದ್ದಾರೆ. ಇಂದು ರಾಮನಗರಕ್ಕೆ ಸುದೀಪ್ ಟ್ರಸ್ಟ್ ಸದಸ್ಯರು ಬೇಟಿ ನೀಡಿ, ಮಕ್ಕಳ ಪರಿಸ್ಥಿತಿಯನ್ನು ಆಲಿಸಿದರು.

    ಮಾತ್ರವಲ್ಲದೆ ಸ್ವತಃ ಕಿಚ್ಚ ಸುದೀಪ್ ವೀಡಿಯೋ ಕಾಲ್ ಮಾಡುವ ಮೂಲಕ ಮಕ್ಕಳು ಹಾಗೂ ಶಾಲೆಯ ಸಿಬ್ಬಂದಿ ಜೊತೆ ಮಾತನಾಡಿ ಧೈರ್ಯ ತುಂಬಿದರು. ಮಕ್ಕಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನು ನೀಡುವುದಾಗಿ ಅವರು ಇದೇ ವೇಳೆ ಭರವಸೆ ನೀಡಿದರು.

    ಬಿಸಿಲಿನಲ್ಲಿ ಮಕ್ಕಳು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದ್ದು, ಅವರಿಗೆ ಬೇರೆ ಕೊಠಡಿಯ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಸ್ಥಳೀಯ ಜನರು ಮತ್ತು ಶಾಲೆಯ ಹಳೆಯ ವಿದ್ಯಾರ್ಥಿ ಸಂಘದವರು ಸೇರಿ ಸುದೀಪ್ ಟ್ರಸ್ಟ್ ಗೆ ಸದ್ಯದ ಸ್ಥಿತಿಯನ್ನು ಮನವರಿಕೆ ಮಾಡಿದರು. ಇದನ್ನು ಆಲಿಸಿದ ಸುದೀಪ್ ಚಾರಿಟೇಬಲ್ ಟ್ರಸ್ಟ್ ನವರು, ಶಾಲೆಗೆ ಬೇಕಾದ ಎಲ್ಲ ಸಹಾಯ ಮಾಡಲು ನಾವು ಸಿದ್ಧ, ಕಾನೂನು ಮೂಲಕವೂ ಶಾಲೆ ಮರಳಿ ಪಡೆಯುವ ಕಾರ್ಯಕ್ಕೆ ಮುಂದಾದರೆ ಅದಕ್ಕೂ ನಾವು ಬೆಂಬಲ ನೀಡುತ್ತೇವೆ ಎಂದು ಟ್ರಸ್ಟ್ ತಿಳಿಸಿದೆ. ಸಂಕಷ್ಟಕ್ಕೆ ಸ್ಪಂದಿಸಿದ ಸುದೀಪ್ ಗೆ ಶಾಲಾ ಮಕ್ಕಳು ಅಭಿನಂದನೆ ಸಲ್ಲಿಸಿದ್ದಾರೆ.

    ಕಿಚ್ಚನ ಈ ಸಹಾಯ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದ್ದು, ಗಾಂಧಿವಾಡ ಸೊಸೈಟಿ ಮತ್ತು ಸ್ಕೂಲ್ ನ ಈ ಕಾನೂನು ಸಮರಕ್ಕೂ ಸುದೀಪ ಚಾರಿಟೇಬಲ್ ಟ್ರಸ್ಟ್ ಸಪೋರ್ಟ್ ನೀಡಲಿದೆ. ಸದ್ಯ ಮಕ್ಕಳಿಗೆ ಪಾಠ ಕೇಳಲು ಇದೀಗ ಕೊಠಡಿಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಹೊಸ ಕಟ್ಟಡಕ್ಕೆ ಮುಂದಾದರೂ ಕಟ್ಟಿಕೊಡಲಾಗುವುದು ಎಂಬ ಆಶ್ವಾಸನೆಯನ್ನು ಇದೀಗ ಕಿಚ್ಚ ಸುದೀಪ್ ಚಾರಿಟೇಬಲ್ ನೀಡಿದೆ. ಹೀಗಾಗಿ ಮಕ್ಕಳು ಮತ್ತು ಶಿಕ್ಷಕರಲ್ಲಿ ಅಪಾರ ಸಂತಸ ಮನೆ ಮಾಡಿದೆ.

  • ಮಾಜಿ ಶಾಸಕ ಹಂಪಯ್ಯ ನಾಯಕ್ ಮೊಮ್ಮಕ್ಕಳನ್ನು ಅಪಹರಿಸಿ ಕೊಲೆಗೈದ್ರಾ?

    ಮಾಜಿ ಶಾಸಕ ಹಂಪಯ್ಯ ನಾಯಕ್ ಮೊಮ್ಮಕ್ಕಳನ್ನು ಅಪಹರಿಸಿ ಕೊಲೆಗೈದ್ರಾ?

    ರಾಯಚೂರು: ಭಾನುವಾರ ಕಾಣೆಯಾಗಿದ್ದ ಜಿಲ್ಲೆಯ ಮಾನ್ವಿಯ ಮಾಜಿ ಶಾಸಕ ಹಂಪಯ್ಯ ನಾಯಕ್ ಮೊಮ್ಮಕ್ಕಳು ಶವವಾಗಿ ಪತ್ತೆಯಾಗಿರುವ ಪ್ರಕರಣ ಹಲವಾರು ಅನುಮಾನಗಳನ್ನ ಸೃಷ್ಟಿಸಿದೆ.

     

    ಬಾಲಕರನ್ನ ಕೊಲೆ ಮಾಡಿ ಹಳ್ಳದಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಶವ ಪತ್ತೆಯಾದ ಸ್ಥಳದಲ್ಲಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಸಿಕ್ಕಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ.

    ಮಾರ್ಚ್ 7 ಭಾನುವಾರ ಮಧ್ಯಾಹ್ನ 2 ಗಂಟೆ ವೇಳೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಕಾಣೆಯಾಗಿದ್ದ ಹಂಪಯ್ಯ ನಾಯಕ್ ಮೊಮ್ಮಕ್ಕಳಾದ 9 ವರ್ಷದ ವರುಣ್ ಹಾಗೂ 5 ವರ್ಷದ ಸಣ್ಣಯ್ಯ ಇಂದು ಬೆಳಿಗ್ಗೆ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆದ್ರೆ ಇಡೀದಿನ ಹಾಗೂ ಬೆಳಗಿನ ಜಾವ 3 ಗಂಟೆವರೆಗೂ ಗ್ರಾಮದಲ್ಲಿ ಹಳ್ಳದಲ್ಲಿ ಹುಡುಕಿದರೂ ಸಿಗದ ಮಕ್ಕಳು ಬೆಳಿಗ್ಗೆ 10 ಗಂಟೆ ಸುಮಾರಿಗೆ ಹಳ್ಳದಲ್ಲಿ ಪತ್ತೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.

    ಹಳ್ಳದಲ್ಲಿ ಮೊಣಕಾಲು ಮಟ್ಟಕ್ಕೆ ನೀರಿದ್ದು ಮಕ್ಕಳು ಈಜಲು ಬಂದು ಸಾವನ್ನಪ್ಪಿದ್ದಾರೆ ಎನ್ನುವುದು ಸಾಧ್ಯವಿಲ್ಲ ಅಂತ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

    ಗ್ರಾಮದಲ್ಲಿ ಈ ಹಿಂದೆಯೂ ಇದೇ ರೀತಿ ಅನುಮಾನಾಸ್ಪದವಾಗಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಈಗ ಪುನಃ ಘಟನೆ ಮರುಕಳಿಸಿರುವುದರಿಂದ ಮಕ್ಕಳ ಸಾವಿನ ಹಿಂದೆ ಬಲವಾದ ಕಾರಣವಿದೆ ಅಂತ ಅನುಮಾನಿಸಲಾಗಿದೆ. ಅಲ್ಲದೆ ಬಾಲಕರ ಶವಪತ್ತೆಯಾದ ಸ್ಥಳದಲ್ಲಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ಸಿರವಾರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದ ಕುಟುಂಬ ಕೊಲೆ ಶಂಕೆ ಪ್ರಕರಣ ದಾಖಲಿಸಲು ಮುಂದಾಗಿದೆ. ಪ್ರಭಾವಿ ರಾಜಕಾರಣಿ ಮೊಮ್ಮಕ್ಕಳಿಗೆ ರಕ್ಷಣೆಯಿಲ್ಲದೆ ಹೋದರೆ ಸಾಮಾನ್ಯರ ಗತಿ ಏನು ಅಂತ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

     

    ಎರಡು ಬಾರಿ ಕಾಂಗ್ರೆಸ್‍ನಿಂದ ಮಾನ್ವಿ ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಯಾಗಿದ್ದ ಹಂಪಯ್ಯ ನಾಯಕ್ ಸ್ವಗ್ರಾಮ ಬಲ್ಲಟಗಿಯಲ್ಲೇ ವಾಸವಾಗಿದ್ದಾರೆ. ಹಂಪಯ್ಯ ನಾಯಕ್ ಪುತ್ರ ಶಿವಾನಂದ ಮಕ್ಕಳಾದ ವರುಣ್ ಹಾಗೂ ಸಣ್ಣಯ್ಯ ಊರಜಾತ್ರೆಗೆ ಮಾನ್ವಿಯಿಂದ ಬಂದಿದ್ದರು. ಮಧ್ಯಾಹ್ನ ವೇಳೆ ಮನೆಯ ಹೊರಗಡೆ ಆಟವಾಡುತ್ತಿದ್ದ ಬಾಲಕರು ಏಕಾಏಕಿ ನಾಪತ್ತೆಯಾಗಿದ್ದರು. ಸಿರವಾರ ಹಾಗೂ ಕವಿತಾಳ ಠಾಣೆ ಪೊಲೀಸರಿಂದ ಬಾಲಕರಿಗಾಗಿ ಹುಡುಕಾಟ ನಡೆದಿತ್ತು, ಗ್ರಾಮದ ಹಳ್ಳದಲ್ಲೇ ಇಂದು ಬೆಳಿಗ್ಗೆ ಶವಗಳು ಪತ್ತೆಯಾಗಿವೆ. ತನಿಖೆ ಆರಂಭಗೊಡಿದ್ದು ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ತಿಳಿದು ಬರಲಿದೆ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕಮ್ ಹೇಳಿದ್ದಾರೆ.

    ಇಬ್ಬರು ಮಕ್ಕಳನ್ನು ಕಳೆದುಕೊಂಡ ಹಂಪಯ್ಯ ನಾಯಕ್ ಕುಟುಂಬ ದುಃಖದಲ್ಲಿ ಮುಳುಗಿದೆ. ಆದ್ರೆ ಸಾವಿನ ಬಗ್ಗೆ ಅನುಮಾನಗಳು ಇರುವುದರಿಂದ ಇದೊಂದು ವ್ಯವಸ್ಥಿತ ಕೊಲೆ ಎಂದು ಶಂಕಿಸಿದ್ದಾರೆ. ಘಟನೆ ಹಿನ್ನೆಲೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಬಳಿಕವಷ್ಟೇ ಮಕ್ಕಳ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಾಗಿದೆ. ಮಕ್ಕಳ ಸಾವಿಗೆ ಮಾಜಿ ಎಂಎಲ್ ಸಿ ಎನ್ ಎಸ್ ಬೋಸರಾಜು, ಮಾಜಿ ಸಂಸದ ಬಿ.ವಿ.ನಾಯಕ್ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.

  • ಮಕ್ಕಳನ್ನು ಹೇರುವವರು ನೀವು, ಖರ್ಚು ಸರ್ಕಾರ ನೋಡಿಕೊಳ್ಳಬೇಕೇ – ಬಿಜೆಪಿ ಶಾಸಕನ ಪ್ರಶ್ನೆ

    ಮಕ್ಕಳನ್ನು ಹೇರುವವರು ನೀವು, ಖರ್ಚು ಸರ್ಕಾರ ನೋಡಿಕೊಳ್ಳಬೇಕೇ – ಬಿಜೆಪಿ ಶಾಸಕನ ಪ್ರಶ್ನೆ

    ಲಕ್ನೋ: ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಶುಲ್ಕವನ್ನು ಮನ್ನಾ ಮಾಡುವಂತೆ ಕೇಳಿಕೊಂಡ ಮಹಿಳೆಯರ ವಿರುದ್ಧ ಬಿಜೆಪಿ ಶಾಸಕ ರಮೇಶ್ ದಿವಾಕರ್, ನೀವು ಮಕ್ಕಳನ್ನು ಹೇರುತ್ತಿರಿ ನಂತರ ಮಕ್ಕಳ ಶಿಕ್ಷಣದ ವೆಚ್ಚ ಸರ್ಕಾರ ಕೊಡಬೇಕೆಂದು ಬಯಸುತ್ತೀರಿ ಎಂದು ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಉತ್ತರ ಪ್ರದೇಶದ ಔರೈಯಲ್ಲಿ ನಡೆದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ದಿವಾಕರ್ ಮಾತನಾಡಿ, ಬಚ್ಚೆ ಪೈದಾ ಕರನ್ ಆಪ್ ಔರ್ ಖರ್ಚ್ ಉತಾಯ್ ಸರ್ಕಾರ್(ನೀವು ಮಕ್ಕಳನ್ನು ಹೇರುತ್ತಿರಿ, ಸರ್ಕಾರ ಅವರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಬೇಕಾ) ಎಂದು ಪ್ರಶ್ನಿಸಿ, ಸರ್ಕಾರಿ ಶಾಲೆಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಶಾಲೆಗೆ ಸೇರಿಸಿ ಕಲಿಸಬಹುದು ಎಂದು ಮಹಿಳೆಯರಿಗೆ ಸಲಹೆ ಕೊಟ್ಟಿದ್ದಾರೆ.

    ದಿವಾಕರ್ ಅವರ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದ್ದು, ಇದು ಬಿಜೆಪಿ ಪಕ್ಷದಲ್ಲಿರುವ ಮಹಿಳಾ ವಿರೋಧಿ ನಡೆಯನ್ನು ಬಿಂಬಿಸುತ್ತದೆ ಟೀಕಿಸಿದ್ದಾರೆ. ಸಮಾಜವಾದಿ ಪಕ್ಷದ ಹಿರಿಯ ನಾಯಕರೊಬ್ಬರು, ಬಿಜೆಪಿಯಲ್ಲಿರುವ ನಾಯಕರಿಗೆ ಮಹಿಳೆಯರ ಬಗ್ಗೆ ಗೌರವಿಲ್ಲ ಎಂದು ಕಿಡಿಕಾರಿದ್ದಾರೆ.

  • ಹೊಸ ರೂಪದಲ್ಲಿ ಮತ್ತೆ ವಿದ್ಯಾಗಮ ಜಾರಿ – ಜಿಲ್ಲಾ ಪಂಚಾಯತ್ ಸಿಇಒಗೆ ಮೇಲುಸ್ತುವಾರಿ

    ಹೊಸ ರೂಪದಲ್ಲಿ ಮತ್ತೆ ವಿದ್ಯಾಗಮ ಜಾರಿ – ಜಿಲ್ಲಾ ಪಂಚಾಯತ್ ಸಿಇಒಗೆ ಮೇಲುಸ್ತುವಾರಿ

    – ಮಕ್ಕಳಿಗೆ ದಿನ ಬಿಟ್ಟು ದಿನ ತರಗತಿ

    ಬೆಂಗಳೂರು: ಮೂರು ತಿಂಗಳ ಬಳಿಕ ವಿದ್ಯಾಗಮ ತರಗತಿಗಳು ಮತ್ತೆ ಆರಂಭವಾಗುತ್ತದೆ. ಪರಿಷ್ಕೃತ ರೂಪದಲ್ಲಿ ವಿದ್ಯಾಗಮ ಜಾರಿಗೆ ತರಲು ಸರ್ಕಾರ ಆದೇಶ ನೀಡಿದೆ. ಹೀಗಾಗಿ ಹೊಸ ಮಾರ್ಗಸೂಚಿ, ನಿಯಮದಲ್ಲಿ ವಿದ್ಯಾಗಮ ಶುರುವಾಗುತ್ತದೆ. ಹಾಗಿದ್ರೆ ಪರಿಷ್ಕೃತ ವಿದ್ಯಾಗಮ ಕ್ಲಾಸ್‍ಗಳಿಗೆ ಮಾರ್ಗಸೂಚಿ ಏನು..?, ಹೇಗಿದೆ ಪರಿಷ್ಕೃತ ವಿದ್ಯಾಗಮ…? ಎಂಬುದರ ಕಂಪ್ಲೀಟ್ ವರದಿ ಇಲ್ಲಿದೆ.

    ವಿದ್ಯಾಗಮ ಮಾರ್ಗಸೂಚಿಗಳೇನು..?
    ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮ ನಡೆಯುತ್ತದೆ. ಆನ್‍ಲೈನ್, ಡಿಡಿ ವಾಹಿನಿಯ ಪಾಠಗಳನ್ನು ಮುಂದುವರಿಸಬೇಕು. ಆನ್‍ಲೈನ್ ಕ್ಲಾಸ್ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅರ್ಧ ದಿನ ಪಾಠ ಮಾಡಬೇಕು.

    ಪೋಷಕರ ಲಿಖಿತ ಒಪ್ಪಿಗೆಯೊಂದಿಗೆ ಮಕ್ಕಳು ವಿದ್ಯಾಗಮಕ್ಕೆ ಹಾಜರಾಗಬೇಕು. ಪ್ರತಿ ಶಾಲೆಯಲ್ಲಿ ಮಕ್ಕಳಿಗೆ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆ ನಡೆಸಬೇಕು. ಜ್ವರ, ಕೆಮ್ಮು, ನೆಗಡಿ, ಕೊರೊನಾ ಲಕ್ಷಣಗಳಿರುವ ವಿದ್ಯಾರ್ಥಿಗಳು ಹಾಜರಾಗುವಂತಿಲ್ಲ. ಪ್ರತಿ ವಿದ್ಯಾರ್ಥಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.

    ಶಾಲೆಗಳಲ್ಲಿ ಸ್ಯಾನಿಟೈಸರ್, ಸೋಪ್, ಇತರೆ ನೈರ್ಮಲೀಕರಣ ವ್ಯವಸ್ಥೆ ಮಾಡಬೇಕು. ಗ್ರಾಪಂ, ನಗರಸಭೆ, ಪುರಸಭೆಗಳು ಈ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳು ಬೇರೆ ಕಡೆ ಇದ್ದಲ್ಲಿ, ಸನಿಹದ ಶಾಲೆಗೆ ತೆರಳಿ ವಿದ್ಯಾಗಮದಲ್ಲಿ ಪಾಲ್ಗೊಳ್ಳಬಹುದು. ಶಿಕ್ಷಕರು, ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಮಕ್ಕಳನ್ನು ಗುಂಪುಗಳಾಗಿ ವಿಂಗಡಣೆ ಮಾಡಬೇಕು.

    ಪ್ರತಿ ಗುಂಪಿನಲ್ಲಿ ಗರಿಷ್ಠ 15-20 ವಿದ್ಯಾರ್ಥಿಗಳು ಇರಬಹುದು, 7ರಿಂದ 8 ಗುಂಪು ಇರಬೇಕು. ಕೊಠಡಿ ಲಭ್ಯ ಇಲ್ಲದೇ ಇದ್ದಲ್ಲಿ ವಾಚನಾಲಯ, ಪ್ರಯೋಗಾಲಯ, ವರಂಡಾಗಳಲ್ಲಿ ವಿದ್ಯಾಗಮ ನಡೆಸಬೇಕು. ಪಾಳಿ ಪದ್ದತಿಯಲ್ಲಿ ವಿದ್ಯಾಗಮ, ಪ್ರತಿ ತರಗತಿಯ ಅವಧಿ 45 ನಿಮಿಷ ಇರಬೇಕು. ಬೆಳಗಿನ ಪಾಳಿಯಲ್ಲಿ 3 ತರಗತಿ, ಮಧ್ಯಾಹ್ನದ ಪಾಳಿಯಲ್ಲಿ 3 ತರಗತಿ ನಡೆಸಬೇಕು.

    ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರಲು ಸೂಚಿಸಬೇಕು. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯಗಳ ನೈರ್ಮಲ್ಯ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಸೋಂಕು ಲಕ್ಷಣ ಕಂಡು ಬಂದಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಹಾಗೂ ಜಿಲ್ಲಾ ಪಂಚಾಯತ್ ಸಿಇಓಗೆ ಮೇಲ್ವೀಚಾರಣೆ, ಉಸ್ತುವಾರಿ ಹೊಣೆ ವಹಿಸಬೇಕು.

    ವಿದ್ಯಾಗಮ ಯಾವ್ಯಾವ ತರಗತಿಗೆ ನಡೆಯುತ್ತೆ?
    10ನೇ ತರಗತಿ: ಪ್ರತಿದಿನವೂ ವಿದ್ಯಾಗಮ ಕ್ಲಾಸ್ ನಡೆಯುತ್ತೆ. 8 ತಂಡಗಳಿಂದ ವಿದ್ಯಾರ್ಥಿಗಳಿಗೆ ಬೋಧನೆ ನೀಡಲಾಗುತ್ತದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನೆಲೆ ಪ್ರತಿದಿನ ತರಗತಿ ನಡೆಸಲಾಗುತ್ತದೆ.

    9ನೇ ತರಗತಿ: ದಿನ ಬಿಟ್ಟು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ವಿದ್ಯಾಗಮ ಕ್ಲಾಸ್ ನಡೆಯಲಿದ್ದು, ವಾರದಲ್ಲಿ 3 ದಿನ ಅಷ್ಟೇ ವಿದ್ಯಾಗಮ ತರಗತಿ ನಡೆಯುತ್ತದೆ.

    8ನೇ ತರಗತಿ: ಮಂಗಳವಾರ, ಗುರುವಾರ ಪಾಠ ಬೋಧನೆ ಮಾಡಲಾಗುತ್ತದೆ. ವಾರದಲ್ಲಿ 2 ದಿನ ಮಾತ್ರ ವಿದ್ಯಾಗಮ ತರಗತಿ ನಡೆಯುತ್ತದೆ.

    1-5 ನೇ ತರಗತಿ: ದಿನ ಬಿಟ್ಟು ದಿನ ತರಗತಿ ನಡೆಸಲಾಗುತ್ತದೆ. 1- 3ರವರೆಗೆ ಸೋಮವಾರ, ಬುಧವಾರ, ಶುಕ್ರವಾರ ತರಗತಿಗಖಳು ನಡೆದರೆ, 4-5 ನೇ ತರಗತಿ- ಮಂಗಳವಾರ, ಗುರುವಾರ, ಶನಿವಾರ ಕ್ಲಾಸ್ ಇರುತ್ತದೆ. 1-8ನೇ ಕ್ಲಾಸ್ ಹೊಂದಿರೋ ಶಾಲೆಯಲ್ಲಿಯೂ ದಿನ ಬಿಟ್ಟು ದಿನ ತರಗತಿ ನಡೆಯುತ್ತದೆ. 1-5ನೇ ತರಗತಿವರೆಗೆ ಸೋಮವಾರ, ಬುಧವಾರ, ಶುಕ್ರವಾರ ಕ್ಲಾಸ್ ಇದ್ದರೆ, 6-8ನೇ ತರಗತಿವರೆಗೆ ಮಂಗಳವಾರ, ಗುರುವಾರ, ಶನಿವಾರ ತರಗತಿ ಇರುತ್ತದೆ.

    ಪುನರಾರಂಭಿಸಲು ಕಾರಣಗಳೇನು..?
    ಶಾಲೆ ಆರಂಭದವರೆಗೆ ಶಿಕ್ಷಣ ತಲುಪಿಸುವ ಉದ್ದೇಶವಾಗಿದೆ. ಖಾಸಗಿ ಶಾಲೆ ಮಕ್ಕಳಿಗೆ ಆನ್‍ಲೈನ್ ಕ್ಲಾಸ್, ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾಗಮ ಮೂಲಕ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀಳದಂತೆ ತಡೆಯೋದು. ಬಾಲ್ಯವಿವಾಹ ಹೆಚ್ಚಳ ತಡೆಗೆ ವಿದ್ಯಾಗಮ ಮರು ಜಾರಿ ಮಾಡಲಾಗುತ್ತಿದೆ.

    ಗ್ರಾಮೀಣ ಭಾಗದಲ್ಲಿ ಬಾಲ ಕಾರ್ಮಿಕ ಪದ್ಧತಿ ತಡೆಯಲು ಮರುಜಾರಿ. ಗ್ರಾಮೀಣ ಭಾಗದಲ್ಲಿ ಆನ್‍ಲೈನ್ ಶಿಕ್ಷಣ, ದೂರದರ್ಶನ ಕಲಿಕೆಯಿಂದ ವಂಚಿತ, ವಿದ್ಯಾಗಮದಿಂದ ಮಕ್ಕಳಿಗೆ ನಿತ್ಯ ಶಿಕ್ಷಣ, ಕಲಿಕಾ ಸಾಮರ್ಥ್ಯ ಸಮಚಿತ್ತದಲ್ಲಿಡಲು ವಿದ್ಯಾಗಮ ಮರುಜಾರಿ ಮಾಡಲಾಗುತ್ತಿದೆ.

  • ಶೈಕ್ಷಣಿಕ ಸೌಲಭ್ಯವಿಲ್ಲದೆ ಮುಚ್ಚುತ್ತಿವೆ ಗಡಿನಾಡಿನ ಕನ್ನಡ ಶಾಲೆಗಳು- ವಿದ್ಯಾರ್ಥಿಗಳು ಅನಾಥ

    ಶೈಕ್ಷಣಿಕ ಸೌಲಭ್ಯವಿಲ್ಲದೆ ಮುಚ್ಚುತ್ತಿವೆ ಗಡಿನಾಡಿನ ಕನ್ನಡ ಶಾಲೆಗಳು- ವಿದ್ಯಾರ್ಥಿಗಳು ಅನಾಥ

    ರಾಯಚೂರು: ನವೆಂಬರ್ ತಿಂಗಳು ಬಂದರೆ ರಾಜ್ಯದೆಲ್ಲಡೆ ಕನ್ನಡ ಕಹಳೆ ಮೊಳಗುತ್ತೆ, ಇಡೀ ತಿಂಗಳು ರಾಜ್ಯೋತ್ಸವ ಆಚರಣೆ ಮಾಡಲಾಗುತ್ತೆ. ಆದರೆ ಗಡಿನಾಡು ಕನ್ನಡಿಗರ ಸಮಸ್ಯೆಗಳಿಗೆ ಮಾತ್ರ ದಶಕಗಳೇ ಕಳೆದರು ಪರಿಹಾರ ಸಿಕ್ಕಿಲ್ಲ. ಹೀಗಾಗಿ ರಾಯಚೂರಿನ ಗಡಿಯ ತೆಲಂಗಾಣದಲ್ಲಿ ಶಾಲೆ ಸೇರಿದಂತೆ ಕನ್ನಡಿಗರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ.

    ಜಿಲ್ಲೆಯ ಗಡಿಯಲ್ಲಿ ಬರುವ ತೆಲಂಗಾಣದ 13 ಗ್ರಾಮಗಳಲ್ಲಿ ನಿತ್ಯದ ವ್ಯವಹಾರಿಕ ಭಾಷೆ ಈಗಲೂ ಕನ್ನಡವೇ ಆಗಿದೆ. ಇಲ್ಲಿ 13 ಕನ್ನಡ ಮಾಧ್ಯಮ ಶಾಲೆಗಳಿದ್ದು, 942 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಹತ್ತನೆ ತರಗತಿ ಮುಗಿದ ನಂತರ ಇವರು ಕನ್ನಡಕ್ಕೆ ತಿಲಾಂಜಲಿ ಹಾಡಬೇಕಿದೆ. ಕರ್ನಾಟಕದಲ್ಲಿ ಈ ವಿದ್ಯಾರ್ಥಿಗಳಿಗೆ ಓದು ಮುಂದುವರೆಸಲು ಸಾಕಷ್ಟು ತೊಡಕುಗಳಿದ್ದು, ಸರ್ಕಾರ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ. ತೆಲಂಗಾಣ, ಆಂಧ್ರ ಪ್ರದೇಶದ ಮೆದಕ್, ನಾರಾಯಣಪೇಟ, ಕರ್ನೂಲ್, ಮೆಹಬೂಬ್ ನಗರ ಜಿಲ್ಲೆಗಳಲ್ಲಿ ಒಟ್ಟು 24 ಸಾವಿರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ.

    ಇವರ ಉನ್ನತ ವ್ಯಾಸಂಗಕ್ಕೆ ರಾಜ್ಯದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ರಾಜ್ಯದಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರವೇಶ ಸಿಗುತ್ತಿಲ್ಲ. ಪಿಯುಸಿಗೆ ಸೀಟ್ ಸಿಕ್ಕರೂ ಸೌಲಭ್ಯಗಳಿಲ್ಲ. ಸಿಇಟಿ ಬರೆಯಲು ಅವಕಾಶ ಸಿಗುತ್ತಿಲ್ಲ. ಕಡ್ಡಾಯವಾಗಿ ಏಳು ವರ್ಷ ಕರ್ನಾಟಕದಲ್ಲೇ ಓದಿರಬೇಕು ಅನ್ನೋ ನಿಯಮ ಅಡ್ಡಿ ಬರುತ್ತಿದೆ. ಎಷ್ಟೇ ಹತ್ತಿರದಲ್ಲಿ ಇದ್ದರೂ ವಿದ್ಯಾರ್ಥಿಗಳಿಗೆ ಸಿಟಿ ಬಸ್ ಸೌಕರ್ಯ ಇಲ್ಲ. ಆದಾಯ ಮತ್ತು ಜಾತಿ ಪ್ರಮಾಣ ಪತ್ರ ತೆಲಂಗಾಣದ್ದಾಗಿರುವುದರಿಂದ ಇಲ್ಲಿ ನಡೆಯೊದಿಲ್ಲ ಎಂದು ಅಧಿಕಾರಿಗಳು ವಸತಿ ನಿಲಯಗಳಲ್ಲಿ ಅವಕಾಶ ಕೊಡುವುದಿಲ್ಲ. ವಿದ್ಯಾರ್ಥಿ ವೇತನದನ ಮಾತಂತೂ ದೂರವೇ ಉಳಿದಿದೆ. ಹೀಗಾಗಿ ಗಡಿನಾಡಲ್ಲಿ ಕನ್ನಡ ಓದುತ್ತಿರುವ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಬೇಕು ಎಂದು ಸುಮಾರು ವರ್ಷಗಳಿಂದ ಹೋರಾಟ ನಡೆದೇ ಇದೆ.

    2011 ರಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಬೇಕು ಎಂದು ಗೆಜೆಟ್ ನೋಟಿಫಿಕೇಷನ್ ಕೂಡ ಆಗಿದೆ. ಆದರೆ ಆನ್ ಲೈನ್ ಅರ್ಜಿ ತುಂಬಲು ಹೋದಾಗ ಗಡಿನಾಡು ಎಂದು ನಮ್ಮ ಪ್ರದೇಶಗಳನ್ನು ತೋರಿಸುತ್ತಲೇ ಇಲ್ಲ ಎಂದು ಗಡಿನಾಡು ಜನ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೃಷ್ಣ, ಇಂದುಪುರ, ಗುರ್ಜಾಲ, ತಂಗಡಗಿ ಸೇರಿ ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳು ಈಗ ಒಂದೊಂದಾಗಿ ಮುಚ್ಚುವ ಪರಸ್ಥಿತಿಯಿದೆ. 30 ಜನ ಶಿಕ್ಷಕರು ತೆಲಂಗಾಣ ಸರ್ಕಾರದಿಂದ ನೇಮಕಗೊಂಡರು ಕೆಲಸ ಮಾಡುತ್ತಿದ್ದಾರೆ. ಆದರೆ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳ ಭವಿಷ್ಯವೇ ಮಂಕಾಗುತ್ತಿದೆ.

    ಸುಮಾರು ಹೋರಾಟಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗಡಿನಾಡ ಕನ್ನಡಿಗರ ಸಮಸ್ಯೆ ಕುರಿತು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಕುಂ.ವೀರಭದ್ರಪ್ಪ ನೇತೃತ್ವದಲ್ಲಿ ಪ್ರತ್ಯೇಕ ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾದರೂ ಉಪಯೋಗವಾಗಿಲ್ಲ.

  • ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    – ತಾಯಿ ಪಾರು, ಮಕ್ಕಳು ಸಾವು

    ಪಾಲಕ್ಕಾಡ್(ಕೇರಳ): ಮಹಿಳೆಯೊಬ್ಬರು ತನ್ನಿಬ್ಬರು ಪುಟ್ಟ ಕಂದಮ್ಮಗಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.

    ಮಹಿಳೆಯನ್ನು ಮಂಜುಳಾ ಎಂದು ಗುರುತಿಸಲಾಗಿದೆ. ಈಕೆ ಅಭಿನ್(6) ಹಾಗೂ ಅಭಿತ್(3) ಎಂಬ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿದ್ದಾರೆ. ಮಂಜುಳಾ ಅವರು ಗಂಡನ ಬಿಟ್ಟಿದ್ದು, ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

    ಇತ್ತ ಮಹಿಳೆ ತನ್ನ ಮಕ್ಕಳೊಂದಿಗೆ ಬಾವಿಗೆ ಹಾರಿದ್ದು, ಚೀರಾಟ ಕೇಳುತ್ತಿದ್ದಂತೆಯೇ ಸ್ಥಳೀಯರು ರಕ್ಷಣೆಗೆ ಯತ್ನಿಸಿದ್ದಾರೆ. ಆದರೆ ಮಕ್ಕಳಿಬ್ಬರು ಅದಾಗಲೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮಹಿಳೆ ಪಾರಾಗಿದ್ದಾರೆ.

    ಮಕ್ಕಳ ಮೃತದೇಹವನ್ನು ಬಾವಿಯಿಂದ ಹೊರ ತೆಗೆಯಲಾಗಿದೆ. ಮದುವೆಯಲ್ಲಿನ ಸಮಸ್ಯೆಗಳಿಂದಾಗಿ ಮಂಜುಳಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆಕೆಯ ವಿಚ್ಚೇದನ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

    ಮಂಜುಳಾ ಅವರು ಪಾಲಕ್ಕಾಡ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

  • ಹೊಸ ಶಿಕ್ಷಣ ನೀತಿ- ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರವನ್ನೂ ನೀಡಿ

    ಹೊಸ ಶಿಕ್ಷಣ ನೀತಿ- ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರವನ್ನೂ ನೀಡಿ

    ನವದೆಹಲಿ: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಹಾರವನ್ನು ನೀಡಬೇಕೆಂಬ ಮಹತ್ವದ ಅಂಶ ಎಂದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ)ಯಲ್ಲಿದೆ.

    ರಾಷ್ಟ್ರೀಯ ಶಿಕ್ಷಣ ನೀತಿ 2020ಗೆ ಕೇಂದ್ರ ಸರ್ಕಾರ ಬುಧವಾರ ಒಪ್ಪಿಗೆ ಸೂಚಿಸಿದ್ದು, ಇದರಲ್ಲಿ ಎಲಿಮೆಂಟರಿ ತರಗತಿವರೆಗೆ ಓದುತ್ತಿರುವ ಮಕ್ಕಳಿಗೆ ಬೆಳಗ್ಗಿನ ಉಪಹಾರದ ಕುರಿತು ಪ್ರಸ್ತಾಪಿಸಲಾಗಿದೆ. ಉಪಹಾರ, ಊಟದ ಜೊತೆಗೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಅವರ ಮಾನಸಿಕ ಆರೋಗ್ಯ ಕಾಪಾಡಲು ಶಾಲೆಯಲ್ಲಿ ನುರಿತ ಸಾಮಾಜಿಕ ಕಾರ್ಯಕರ್ತರು ಹಾಗೂ ಕೌನ್ಸಿಲರ್‍ಗಳನ್ನು ನೇಮಿಸಬೇಕು ಎಂದು ತಿಳಿಸಲಾಗಿದೆ.

    ಉಪಹಾರ ಸೇವಿಸಿದ ಬಳಿಕ ಬೆಳಗಿನ ಅವಧಿಯಲ್ಲಿ ಮಕ್ಕಳ ಅಧ್ಯಯನ ಬಹಳ ಚೆನ್ನಾಗಿ ನಡೆಯುತ್ತದೆ ಎಂದು ಸಂಶೋಧನಾ ವರದಿಗಳು ತಿಳಿಸಿದ ಹಿನ್ನೆಲೆಯಲ್ಲಿ ಈ ಅಂಶವನ್ನು ಎನ್‍ಇಪಿಯಲ್ಲಿ ಸೇರಿಸಲಾಗಿದೆ.

    ವಿದ್ಯಾರ್ಥಿಗಳ ಪೋಷಣೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಮುದಾಯವನ್ನು ಶಾಲಾ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಬೇಕು. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಹಾರವನ್ನೂ ನೀಡಬೇಕು ಎಂದು ಶಿಫಾರಸು ಮಾಡಿದೆ.

    ಬೆಳಗ್ಗೆ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಉಪಹಾರ ನೀಡುವುದರಿಂದ ಅಧ್ಯಯನಕ್ಕೆ ಹೆಚ್ಚು ಉಪಯುಕ್ತವಾಗುತ್ತದೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಹಾರವನ್ನೂ ನೀಡಬೇಕು ಎಂದು ಹೇಳಿದೆ. ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ಬಳಿಕ ಸರ್ಕಾರ ಬಿಡುಗಡೆ ಮಾಡಿದ ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳು ಅಪೌಷ್ಠಿಕತೆಯಿಂದ ಹಾಗೂ ಅನಾರೋಗ್ಯದಿಂದ ಬಳಲುವುದರಿಂದ ಉತ್ತಮ ಕಲಿಕೆ ಸಾಧ್ಯವಿಲ್ಲ. ಹೀಗಾಗಿ ಮಕ್ಕಳಿಗೆ ಪೋಷಣೆ ಮತ್ತು ಮಾನಸಿಕ ಆರೋಗ್ಯವೂ ಅಗತ್ಯ. ಶಿಕ್ಷಿತ ಸಾಮಾಜಿಕ ಕಾರ್ಯಕರ್ತರು, ಸಲಹೆಗಾರರು ಹಾಗೂ ಶಾಲಾ ವ್ಯವಸ್ಥೆಯಲ್ಲಿ ಸಮುದಾಯದ ಒಳಗೊಳ್ಳುವಿಕೆ ಅಗತ್ಯ ಎಂದು ಪ್ರಸ್ತಾಪಿಸಲಾಗಿದೆ.

    ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕನಿಷ್ಠ 11.59 ಕೋಟಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಊಟ ನೀಡಲಾಗುತ್ತಿದೆ. ಇದಕ್ಕಾಗಿ ಅಡುಗೆ ತಯಾರಕರು ಹಾಗೂ ಸಹಾಯಕರು ಸೇರಿ 26 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ.

  • ನಜ್ಜುಗುಜ್ಜಾದ ಕಾರಿನಲ್ಲಿ ಆಟವಾಡುತ್ತಿದ್ದ ಬಾಲಕಿಯರಿಬ್ಬರು ಉಸಿರುಗಟ್ಟಿ ಸಾವು

    ನಜ್ಜುಗುಜ್ಜಾದ ಕಾರಿನಲ್ಲಿ ಆಟವಾಡುತ್ತಿದ್ದ ಬಾಲಕಿಯರಿಬ್ಬರು ಉಸಿರುಗಟ್ಟಿ ಸಾವು

    ಚೆನ್ನೈ: ಮಕ್ಕಳನ್ನು ಕಾರಿನೊಳಗೆ ಬಿಟ್ಟು ತಂದೆ-ತಾಯಿ ಶಾಪಿಂಗ್ ಹೋಗಿ ಬರುವಾಗ ಉಸಿರುಗಟ್ಟಿ ಸಾವನ್ನಪ್ಪಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲಿ ಮಕ್ಕಳೇ ನಜ್ಜುಗುಜ್ಜಾದ ಕಾರಿನ ಒಳಗಡೆ ಹೋಗಿ ಆಟವಾಡುತ್ತಿರುವಾಗ ಉಸಿರುಗಟ್ಟಿ ಮೃತಪಟ್ಟ ದುರಂತ ಘಟನೆಯೊಂದು ನಡೆದಿದೆ.

    ಹೌದು. ಈ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಗುರುವಾರ ಸಂಜೆ ನಡೆದಿದೆ. ಮೃತ ದುರ್ದೈವಿ ಮಕ್ಕಳನ್ನು ರಾಜೇಶ್ವರಿ(4) ಹಾಗೂ ವನಿತಾ (7) ಎಂದು ಗುರುತಿಸಲಾಗಿದ್ದು, ಇಬ್ಬರೂ ಕಲದೀಪಮಂಗಲಂ ನಿವಾಸಿಗಳಾಗಿದ್ದಾರೆ. ಮೃತ ಮಕ್ಕಳಿಬ್ಬರು ಸ್ನೇಹಿತರಾಗಿದ್ದು, ಇವರ ತಂದೆ ಕೃಷಿ ಕಾರ್ಮಿಕರಾಗಿದ್ದಾರೆ.

    ಗುರುವಾರ ಸಂಜೆ ಇಬ್ಬರು ಕೂಡ ಹಾನಿಗೊಳಗಾದ ಕಾರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಳೆದ 2 ವರ್ಷಗಳ ಹಿಂದೆ ಈ ಕಾರು ಅಪಘಾತಕ್ಕೀಡಾಗಿತ್ತು. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಳಕೆಯಿಲ್ಲದೆ ಅನಾಥವಾಗಿ ಬಿದ್ದಿತ್ತು. ಈ ಕಾರಿನ ಒಳಗಡೆ ಬಾಲಕಿಯರು ಹೋಗಿ ಆಟವಾಡಿದ್ದಾರೆ. ನಂತರ ಹೊರಗಡೆ ಬರಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ ಅಪಘಾತಕ್ಕೀಡಾದ ಪರಿಣಾಮ ಕಾರಿನ ನಾಲ್ಕು ಗ್ಲಾಸ್ ಗಳು ಕೂಡ ಜಾಮ್ ಆಗಿದ್ದವು. ಹೀಗಾಗಿ ಕಾರೊಳಗೆ ಉಸಿರುಗಟ್ಟಿ ಮಕ್ಕಳು ಸಾವನ್ನಪ್ಪಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಾರಿನ ಪಕ್ಕ ಹೋಗುತ್ತಿದ್ದ ದಾರಿ ಹೋಕರು ಮಕ್ಕಳು ಕಾರಿನ ಒಳಗಡೆ ಪ್ರಜ್ಞಾಹೀನರಾಗಿ ಬಿದ್ದಿದ್ದನ್ನು ಗಮನಿಸಿದ್ದಾರೆ. ಅಲ್ಲದೆ ಅವರ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಮಕ್ಕಳ ಕುಟುಂಬಸ್ಥರು, ಬಾಲಕಿಯರನ್ನು ಕಾರಿನಿಂದ ಹೊರಗೆ ತೆಗೆದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಮಕ್ಕಳು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಮರಣೋತ್ತರ ಪರೀಕ್ಷೆಯ ಬಳಿಕ ಮಕ್ಕಳ ಮೃತದೇಹವನ್ನು ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಈ ಬಗ್ಗೆ ತನಿಖೆ ನಡೆಸುತ್ತೇವೆ. ಇದೂವರೆಗೂ ಮಕ್ಕಳ ಪೋಷಕರು ಈ ಬಗ್ಗೆ ಪೊಲೀಸ್ ಠಾಣೆಗೆ ಯಾವುದೇ ದೂರು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.