Tag: Childrens

  • ಮಕ್ಕಳಿಬ್ಬರಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ಪೊಲೀಸ್- ಬೀದರ್ ನಲ್ಲಿ ಮನಕಲಕುವ ಘಟನೆ

    ಮಕ್ಕಳಿಬ್ಬರಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ಪೊಲೀಸ್- ಬೀದರ್ ನಲ್ಲಿ ಮನಕಲಕುವ ಘಟನೆ

    ಬೀದರ್: ಕೌಟುಂಬಿಕ ಸಮಸ್ಯೆ ಹಿನ್ನಲೆಯಿಂದಾಗಿ ಇಬ್ಬರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆಯೊಂದು ಬೀದರ್ ನಲ್ಲಿ ನಡೆದಿದೆ.

    ಈ ಘಟನೆ ಬೀದರ್ ನ ಮಂಗಲ್‍ಪೇಟೆ ಬಳಿ ನಡೆದಿದ್ದು, ಮೃತರನ್ನು ವಿನೋದ್(40), ಮಕ್ಕಳಾದ ಏಡಿಷನ್(10) ಮತ್ತು ಜೆನ್ನಿಫರ್(7) ಎಂದು ಗುರುತಿಸಲಾಗಿದೆ.

    ಬೆಂಗಳೂರಿನಲ್ಲಿ ಆಂತರಿಕ ಭದ್ರತಾ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿನೋದ್ ಕುಟುಂಬ ಕ್ರಿಸ್ ಮಸ್ ಹಬ್ಬಕ್ಕೆಂದು ಬೀದರ್ ಗೆ ಬಂದಿದ್ದರು. ಕೌಟುಂಬಿಕ ಸಮಸ್ಯೆಯಿಂದ ವಿನೋದ್ ವಿಷ ಸೇವಿಸಿ ಮಕ್ಕಳಿಗೂ ನೀಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

    ಗಂಡ ಮತ್ತು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಪತ್ನಿ ಶಾಂಪಿಂಗ್ ಹೋಗಿದ್ದರು ಎಂದು ಹೇಳಲಾಗುತ್ತಿದ್ದು, ಆತ್ಮಹತ್ಯೆಯ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಬಹಿರಂಗವಾಗಬೇಕಿದೆ. ಸಾಲಬಾಧೆಯಿಂದ ಆತ್ಯಹತ್ಯೆಗೆ ಶರಣರಾಗಿದ್ದಾರೆ ಎಂದು ಪತ್ನಿಯ ತಂದೆ ಆರೋಪ ಮಾಡುತ್ತಿದ್ದಾರೆ.

    ಜಿಲ್ಲಾಸ್ಪತ್ರೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ ಶವವನ್ನು 10 ಕಿ.ಮೀ ಹೊತ್ತೊಯ್ದಿದ್ದ ವ್ಯಕ್ತಿ ಈಗ ಹೇಗಿದ್ದಾರೆ ಗೊತ್ತಾ?

    ಪತ್ನಿ ಶವವನ್ನು 10 ಕಿ.ಮೀ ಹೊತ್ತೊಯ್ದಿದ್ದ ವ್ಯಕ್ತಿ ಈಗ ಹೇಗಿದ್ದಾರೆ ಗೊತ್ತಾ?

    ಭುವನೇಶ್ವರ: ಕಳೆದ ವರ್ಷ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಿಗದೇ ಸುಮಾರು 10 ಕಿ.ಮೀ ದೂರದವರೆಗೆ ತನ್ನ ಹೆಗಲ ಮೇಲೆ ಪತ್ನಿಯ ಶವ ಸಾಗಿಸಿ ಸುದ್ದಿಯಾಗಿದ್ದ ಒಡಿಶಾದ ದಾನಾ ಮಾಝಿ ಜೀವನ ಇದೀಗ ಪೂರ್ತಿ ಬದಲಾಗಿದೆ.

    ಹೌದು. ಹೊಸ ಮನೆ ಕಟ್ಟುತ್ತಿರೋ ಮಾಝಿ, ಎರಡನೇ ಮದುವೆಯಾಗಿ ಸದ್ಯ 65 ಸಾವಿರ ರೂ. ಮೌಲ್ಯದ ಹೊಸ ಹೊಂಡಾ ಬೈಕ್ ಕೂಡ ಖರೀದಿ ಮಾಡಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಮಾಝಿ ಪತ್ನಿ ಅಮಾಂಗ್ ಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದ್ರೆ ಇವರ ಮೃತ ದೇಹವನ್ನು ಮನೆಗೆ ಸಾಗಿಸಲು ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿರಲಿಲ್ಲ. ಹೀಗಾಗಿ ಮಾಝಿ , ಬಟ್ಟೆಯಿಂದ ಸುತ್ತಲಾಗಿದ್ದ ತನ್ನ ಪತ್ನಿಯ ಮೃತದೇಹವನ್ನ ಹೆಗಲ ಮೇಲೆ ಹೊತ್ತು, ಮಗಳೊಂದಿಗೆ 10 ಕಿ. ಮೀ ದೂರದವರೆಗೆ ನಡೆದಿದ್ದರು. ಈ ರೀತಿ ಸಾಗುತ್ತಿರುವ ಮಾಝಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಇಡೀ ದೇಶವೇ ಮರುಕ ವ್ಯಕ್ತಪಡಿಸಿತ್ತು. ಈ ಫೋಟೋವನ್ನು ನೋಡಿದ ಬಹ್ರೈನ್ ಪ್ರಧಾನಿ ಮಾಝಿಯ ಅಸಾಹಯಕ ಸ್ಥಿತಿಯನ್ನು ಕಂಡು ಅವರೂ ಸಹಾಯಕ್ಕೆ ಮುಂದಾದ್ರು.

    ಅಂತೆಯೇ ಪ್ರಧಾನಿ ರಾಜಕುಮಾರ ಖಲಿಫಾ ಬಿನ್ ಸ್ಮಾನ್ ಅಲ್ ಖಲೀಫಾ, ಮಾಝಿಗೆ 9 ಲಕ್ಷ ರೂ. ನೆರವು ನೀಡಿದ್ದರು. ಹಾಗೆಯೇ ಕೆಲ ವ್ಯಕ್ತಿಗಳು ಹಾಗೂ ಹಲವು ಸಂಘ-ಸಂಸ್ಥೆಗಳು ಕೂಡ ಮಾಝಿಗೆ ನೆರವು ನೀಡಿದ್ದವು. ಹೀಗಾಗಿ ಸದ್ಯ ಮಾಝಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಸರ್ಕಾರದ ಪ್ರಧಾನ ಮಂತ್ರಿ ಗ್ರಾಮೀಣ ಅವಾಜ್ ಯೋಜನೆ ವತಿಯಿಂದ ಮನೆ ಕೂಡ ನಿರ್ಮಾಣವಾಗುತ್ತಿದೆ. ಸದ್ಯ ಅವರು ಗ್ರಾಮದ ಅಂಗನವಾಡಿಯೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಇನ್ನು ಮಾಝಿಯ ಮೂವರು ಹೆಣ್ಣು ಮಕ್ಕಳಿಗೆ ಶಾಲೆಯೊಂದು ಉಚಿತ ಶಿಕ್ಷಣ ನೀಡುತ್ತಿದೆ. ಹೀಗಾಗಿ ಮಕ್ಕಳು ಆ ಶಾಲೆಯ ಹಾಸ್ಟೆಲ್ ನಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ ಮಾಝಿ ಎರಡನೇ ಮದುವೆಯಾಗಿದ್ದಾರೆ. ಸದ್ಯ ಪತ್ನಿ ಅಲಮಟಿ ಡೀ ಗರ್ಭಿಣಿಯಾಗಿದ್ದಾರೆ.

    ಹೊಸ ಮನೆಯ ಬಳಿಕ ಸುತ್ತಾಡಲು ಹೊಸ ಬೈಕ್ ಬೇಕು ಅಂತ ಹೇಳಿದ್ದರು. ಹೀಗಾಗಿ ಅವರು ಸದ್ಯ ಹೊಸ ಹೊಂಡಾ ಬೈಕ್ ಖರೀದಿ ಮಾಡಿದ್ದಾರೆ ಅಂತ ಹೊಂಡಾ ಬೈಕ್ ಶೋ ರೂಮ್ ಮಾಲಕ ಮನೋಜ್ ಅಗರ್‍ವಾಲ್ ಹೇಳಿದ್ದಾರೆ.

    ಒಟ್ಟಿನಲ್ಲಿ ಮಾಝಿ ಜೀವನ ಸಂಪೂರ್ಣ ಬದಲಾಗಿದ್ದು, ಗ್ರಾಮಸ್ಥರು ಮಾತ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ಮಾಝಿಗೆ ಸರ್ಕಾರ, ಸಂಘ ಸಂಸ್ಥೆಗಳು ನೆರವು ನೀಡಿದ್ದರಿಂದ ಅವರ ಜೀವನ ಶೈಲಿಯೇ ಬದಲಾಗಿದೆ. ಆದರೆ ಗ್ರಾಮಕ್ಕೆ ಯಾವುದೇ ಸವಲತ್ತು ಸಿಕ್ಕಿಲ್ಲ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಆದ್ರೆ ಮಾಝಿಗೆ ಬೈಕ್ ಚಾಲನೆ ಬರದ ಕಾರಣ ಸಂಬಂಧಿಯ ಹಿಂದೆ ಬೈಕ್‍ನಲ್ಲಿ ಕೂರಬೇಕಿದೆ. ಹೀಗಾಗಿ ಮಾಝಿಗೆ ಈಗ ಬೈಕ್ ಚಾಲನೆ ಕಲಿಯೋ ಬಗ್ಗೆಯೇ ಚಿಂತೆ.

    https://www.youtube.com/watch?v=Jh2S18AyIiY

    https://www.youtube.com/watch?v=I2xPTfluFqI

     

  • ಮಂಡ್ಯದಲ್ಲಿ ಆಸ್ತಿಗಾಗಿ ಸ್ವಂತ ಮಗನೇ ತಂದೆಯಿಂದ ಅಮ್ಮನಿಗೆ ತಲಾಖ್ ಕೊಡಿಸಿದ!

    ಮಂಡ್ಯದಲ್ಲಿ ಆಸ್ತಿಗಾಗಿ ಸ್ವಂತ ಮಗನೇ ತಂದೆಯಿಂದ ಅಮ್ಮನಿಗೆ ತಲಾಖ್ ಕೊಡಿಸಿದ!

    ಮಂಡ್ಯ: ಆಸ್ತಿಗಾಗಿ ಸ್ವಂತಮಗನೇ ಗಂಡನಿಂದ ತಲಾಖ್ ಕೊಡಿಸಿದ್ದಾನೆ ಎಂದು ಹೆತ್ತ ತಾಯಿ ಆರೋಪ ಮಾಡುತ್ತಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ನಾಗಮಂಗಲ ತಾಲೂಕಿನ, ಬೆಳ್ಳೂರು ಗ್ರಾಮದ ನಿವಾಸಿಗಳಾದ ಅಬ್ದುಲ್ ಮಜೀದ್ ಮತ್ತು ಫಾತೀಮಾ ಬೀ ಎಂಬ ವೃದ್ಧ ದಂಪತಿಗಳು ಮಗನ ವಿರುದ್ಧ ಆರೋಪ ಮಾಡುತ್ತಿದ್ದಾರೆ.

    ತಂದೆ ಮತ್ತು ತಾಯಿ ಹೆಸರನಲ್ಲಿರೋ ಆಸ್ತಿಗಾಗಿ ಇವರ ನಾಲ್ವರು ಮಕ್ಕಳು ವೃದ್ಧ ತಂದೆ-ತಾಯಿ ದಂಪತಿಯನ್ನು ಹೊರ ಹಾಕಿದ್ದಾರೆ. ಇನ್ನು ಇವರ ಕೊನೆಯ ಮಗ ನಾಗಮಂಗಲದಲ್ಲಿ ವಕೀಲನಾಗಿರೋ ಮಹಮದ್ ಗೌಸ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ತಂದೆಯಿಂದ ತಾಯಿಗೆ ತಲಾಖ್ ಕೊಡಿಸಿರುವುದಾಗಿ ಖಾಲಿ ಪೇಪರ್ ಗೆ ಸಹಿ ಮಾಡಿಸಿಕೊಂಡು ತವರಿಗೆ ಅಟ್ಟಿ ತನ್ನ ದುಷ್ಟತನ ಮೆರೆದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ವೃದ್ಧ ದಂಪತಿಗಳಿಗೆ ಒಟ್ಟು ಆರು ಜನ ಮಕ್ಕಳು. ಐದು ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಹೆಣ್ಣು ಮಗಳು ಮತ್ತು ಹಿರಿಯ ಮಗನನ್ನು ಬಿಟ್ಟು ಉಳಿದ ನಾಲ್ವರು ಮಕ್ಕಳು ಆಸ್ತಿ ಬರೆಸಿಕೊಂಡು ವೃದ್ಧ ದಂಪತಿಯನ್ನು ಬೀದಿಗೆ ತಳ್ಳಿದ್ದಾರಂತೆ. ಇದ್ರಿಂದ ಮಾನಸಿಕವಾಗಿ ನೊಂದು, ಬೆಂದಿರೋ ಈ ವೃದ್ಧ ಜೀವಗಳು ಈಗ ಮಂಡ್ಯದ ಹಿರಿಯ ನಾಗರೀಕರ ಸಹಾಯವಾಣಿಯ ಮೊರೆ ಹೋಗಿದ್ದಾರೆ.

    ನಾನು ಪತ್ನಿಗೆ ತಲಾಖ್ ಕೊಟ್ಟಿಲ್ಲ. ನಾವಿಬ್ಬರೂ ಒಟ್ಟಿಗೆ ಇದ್ದೇವೆ. ಆದ್ರೆ ಆಸ್ತಿಗಾಗಿ ಮಗ ಈ ರೀತಿ ಮಾಡಿದ್ದಾನೆ. ಹೀಗಾಗಿ ತಮಗೆ ಮೋಸ ಮಾಡಿ ಲಪಟಾಯಿಸಿರೋ ತಮ್ಮ ಆಸ್ತಿ ಮತ್ತು ಮನೆಯನ್ನು ವಾಪಸ್ಸು ಕೊಡಿಸಿ. ನಮಗೆ ರಕ್ಷಣೆ ಕೊಡಿಸಿ ಅಂತ ಈಗ ಇಲಾಖೆಗೆ ದೂರು ಕೊಟ್ಟಿದ್ದಾರೆ. ಅಲ್ದೆ ನಮಗೆ ಅದೇ ನಮ್ಮ ಮನೆಯಲ್ಲಿ ಬಾಳಲು ಅವಕಾಶ ಮಾಡಿ ಕೊಡಿ ಅಂತ ಮೊರೆ ಇಡ್ತಿದ್ದಾರೆ.

  • ಆಕ್ಸೆಲ್ ಕಟ್ಟಾಗಿ ಟ್ರ್ಯಾಕ್ಟರ್ ಪಲ್ಟಿ- ಗರ್ಭಿಣಿ ಸೇರಿ 20 ಮಂದಿಗೆ ಗಾಯ, ನಾಲ್ವರು ಗಂಭೀರ

    ಆಕ್ಸೆಲ್ ಕಟ್ಟಾಗಿ ಟ್ರ್ಯಾಕ್ಟರ್ ಪಲ್ಟಿ- ಗರ್ಭಿಣಿ ಸೇರಿ 20 ಮಂದಿಗೆ ಗಾಯ, ನಾಲ್ವರು ಗಂಭೀರ

    ಬೆಂಗಳೂರು: ಆಕ್ಸೆಲ್ ಕಟ್ಟಾಗಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಗರ್ಭಿಣಿ ಸೇರಿ 20 ಮಂದಿಗೆ ಗಾಯಗೊಂಡ ಘಟನೆ ನಡೆದಿದೆ.

    ಈ ಘಟನೆ ಬೆಂಗಳೂರಿನ ಹಲಸೂರು ಲೇಕ್‍ನ ಸಂತ್ ಜಾನ್ ಸರ್ಕಲ್ ಬಳಿ ಇಂದು ಬೆಳಗ್ಗೆ 10.20 ರ ಸುಮಾರಿಗೆ ನಡೆದಿದೆ. ಘಟನೆಯಿಂದ ಗಾಯಗೊಂಡ 20 ಮಂದಿ ಕಾರ್ಮಿಕರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

    ಬಳ್ಳಾರಿ ಮೂಲದ ಸುಮಾರು 40 ಮಂದಿ ಕಟ್ಟಡ ಕಾರ್ಮಿಕರು ಥಣಿಸಂಧ್ರದಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಇಂದು ಭಾನುವಾರ ರಜೆ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ನಲ್ಲಿ ಬನಶಂಕರಿ ದೇವಸ್ಥಾನಕ್ಕೆ ತೆರಳಿದ್ದರು. ಹೀಗಾಗಿ ಹಲಸೂರು ಕಡೆಯಿಂದ ಜಯನಗರದ ಕಡೆಗೆ ಟ್ರ್ಯಾಕ್ಟರ್ ಚಲಿಸುತ್ತಿದ್ದ ಸಂದರ್ಭದಲ್ಲಿ ಆಕ್ಸೆಲ್ ಕಟ್ಟಾಗಿ ಪಲ್ಟಿ ಆಗಿದೆ. ಪರಿಣಾಮ 20 ಮಂದಿ ಗಾಯಗೊಂಡಿದ್ದಾರೆ.

    ಘಟನೆಯಿಂದ ದೇವಿ ಎನ್ನುವ 7 ತಿಂಗಳ ಗರ್ಭಿಣಿ ತಲೆಗೆ, ಭುಜಕ್ಕೆ ಗಾಯ ಆಗಿದೆ. ಟ್ರ್ಯಾಕ್ಟರ್‍ನಲ್ಲಿದ್ದ ಐದು ಚಿಕ್ಕ ಮಕ್ಕಳಿಗೂ ಗಾಯಗಳಾಗಿವೆ. ಟ್ರ್ಯಾಕ್ಟರ್ ಪಲ್ಟಿ ಆದ ಕೂಡಲೇ ಗಾಯಾಳುಗಳನ್ನು ರಕ್ಷಣೆ ಮಾಡಿ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳುಗಳು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ಥಳಕ್ಕೆ ಪುಲಿಕೇಶಿ ನಗರ ಟ್ರಾಫಿಕ್ ಪೊಲೀಸ್ರು ಬಂದು ಪರಿಶೀಲನೆ ನಡೆಸಿದ್ದಾರೆ.

  • ಚಿಕ್ಕ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಪಾಠ ಮಾಡಿದ ಯೋಗೀಶ್ ಮಾಸ್ಟರ್ – ವಿಡಿಯೋ ವೈರಲ್

    ಚಿಕ್ಕ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಪಾಠ ಮಾಡಿದ ಯೋಗೀಶ್ ಮಾಸ್ಟರ್ – ವಿಡಿಯೋ ವೈರಲ್

    ಬೆಂಗಳೂರು: ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಬಗ್ಗೆ ದೇಶಾದ್ಯಂತ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗಲ್ಲೇ ಯೋಗೀಶ್ ಮಾಸ್ಟರ್ ತಮ್ಮ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಬಗ್ಗೆ ಪಾಠ ಮಾಡಿದ್ದಾರೆ. ಮಕ್ಕಳು ಸೆಕ್ಸ್ ಎಜುಕೇಷನ್ ಬಗ್ಗೆ ಮಾತನಾಡುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ ವಿರೋಧದ ಚರ್ಚೆ ಕೂಡ ಜೋರಾಗಿದೆ.

    ಡುಂಡಿ ಎಂಬ ಪುಸ್ತಕದಿಂದ ಹೆಸರುವಾಸಿಯಾದ ಯೋಗೀಶ್ ಮಾಸ್ಟರ್ ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ತಮ್ಮ ಇಬ್ಬರು ಮಕ್ಕಳಿಗೆ ಸೆಕ್ಸ್ ಆರ್ಗನ್ಸ್ ಹಾಗೂ ಸೆಕ್ಸ್ ಎಜುಕೇಷನ್ ಬಗ್ಗೆ ಪಾಠ ಮಾಡಿದ್ದಾರೆ.

    ಮಾಸ್ಟರ್: ಸೆಕ್ಸ್ ಎಜುಕೇಷನ್ ಬೇಕು ಅಥವಾ ಬೇಡ ಎಂದು ಒಬ್ಬೊಬ್ಬರು ಒಂದೊಂದು ಥರಾ ಹೇಳ್ತಾರೆ. ನೀವೇನು ಹೇಳ್ತೀರಿ?
    ಇಬ್ಬರೂ: ಬೇಕು
    ಮಾಸ್ಟರ್: ಸೆಕ್ಸ್ ಎಜುಕೇಷನ್ ಬೇಕು ಅಂತೀರಿ. ಸೆಕ್ಸ್ ಅಂದರೆ ಏನು? ಸೆಕ್ಸ್ ಎಜುಕೇಷನ್ ಅಂದ್ರೆ ಏನು?
    ದೇವಿ (ಮಗಳು): ಹುಡುಗ – ಹುಡುಗಿ ಅಂತ ಐಡೆಂಟಿಫೈ ಮಾಡೋದು, ಗುರುತಿಸೋದು ಅವರವರ ಸೆಕ್ಸ್ ಆರ್ಗನ್ಸ್ ಮೇಲೆ. ಈ ಸೆಕ್ಸ್ ಆರ್ಗನ್ ಏನು ಕೆಲಸ ಮಾಡುತ್ತೆ ಅಂತ ತಿಳಿದುಕೊಳ್ಳೋದೇ ಸೆಕ್ಸ್ ಎಜುಕೇಷನ್.
    ಮಾಸ್ಟರ್: ಸರಿ ಸೆಕ್ಸ್ ಎಜುಕೇಷನ್ ಎಲ್ಲಿಂದ ಶುರು ಮಾಡೋದು?
    ದೇವಿ (ಮಗಳು): ನಮಗೆ ಅದರ ಹೆಸರೇಳಿ? ಅದೇನು ಕೆಲಸ ಮಾಡುತ್ತೆ ಅಂತಾನೆ ಶುರು ಮಾಡ್ಬೇಕು.
    ಮಾಸ್ಟರ್: ನಿಮಗೆ ಅದರ ಹೆಸರು ಗೊತ್ತಾ….?
    ಕೈವಲ್ಯ (ಮಗಳು): ಗೊತ್ತು. ತಿ……..!
    ದೇವಿ (ಮಗಳು): ತಿ…..ಅಲ್ಲ. ತಿ……ಅಂದ್ರೆ ಹಿಂದೆ ಇರೋದು. ಸೆಕ್ಸ್ ನ ಐಡೆಂಟಿಫೈ ಮಾಡೋ ಆರ್ಗನ್ನು ಹುಡುಗಿಯರಿಗೆ…… ಅಂತ ಇಂಗ್ಲಿಷ್‍ ನಲ್ಲಿ. ಕನ್ನಡದಲ್ಲಿ ……. ಅಂತೀವಿ. ಹುಡುಗರದಕ್ಕೆ…..ಅಂತ ಅಂತೀವಿ
    ಮಾಸ್ಟರ್: ನೀವು ಹೀಗೆಲ್ಲಾ ಓಪನ್ನಾಗಿ ಸೆಕ್ಸ್ ಬಗ್ಗೆ ಮಾತಾಡ್ಬೋದಾ?
    ಕೈವಲ್ಯ (ಮಗಳು): ಹೌದು. ಕಣ್ಣು ಮೂಗು ಬಾಯಿ ಇದ್ದಂತೆ ಅದೂನೂ ಪಾರ್ಟ್ ಆಫ್ ದಿ ಬಾಡಿ.
    ಮಾಸ್ಟರ್: ಸರಿ, ನಿಮ್ಮ ಸ್ಕೂಲಲ್ಲಿ ಪಾರ್ಟ್ ಆಫ್ ದಿ ಬಾಡಿನೆಲ್ಲಾ ಹೇಳ್ಕೊಟ್ರಾ?
    ಕೈವಲ್ಯ (ಮಗಳು): ಇಲ್ಲ. ಪಾರ್ಟ್ ಆಫ್ ದಿ ಬಾಡಿ ಪಿಕ್ಚರ್ ನಲ್ಲಿ ಏನೂ ಹೇಳಿಕೊಟ್ಟಿಲ್ಲ
    ಮಾಸ್ಟರ್: ಅವೆಲ್ಲಾ ಹೇಳಲೇಬೇಕಾ?
    ಕೈವಲ್ಯ (ಮಗಳು): ಹೌದಲ್ವಾ ದಿನಾನು ನಾವು ಅದನೆಲ್ಲಾ ನೋಡ್ತೀವಿ. ಅದರ ಫಂಕ್ಷನ್ಸ್ ನೆಲ್ಲಾ ನೋಡ್ತಾ ಇರ್ತೀವಿ
    ಮಾಸ್ಟರ್: ಇದೆನೆಲ್ಲಾ ಯಾರು ಹೇಳಿದ್ದು?
    ದೇವಿ (ಮಗಳು): ನೀನು ಮತ್ತು ಅಮ್ಮ
    ಮಾಸ್ಟರ್: ಸೆಕ್ಸ್ ಎಜುಕೇಷನ್ ಯಾರು ಕೊಡಬೇಕು?
    ದೇವಿ (ಮಗಳು): ಪೇರೆಂಟ್ಸ್ ಮತ್ತು ಟೀಚರ್ಸ್
    ಮಾಸ್ಟರ್: ಮತ್ತೆ ಸೆಕ್ಸ್ ಎಜುಕೇಷನ್ ಸಪರೇಟ್ ಲೆಸನ್ ಬೇಕಾ?
    ದೇವಿ (ಮಗಳು): ಏನೂ ಬೇಡ ಅನ್ಸುತ್ತೆ. ಪಾರ್ಟ್ ಆಫ್ ದಿ ಬಾಡಿ ಹೇಳಿಕೊಟ್ರೆ ಅದನ್ನೂ ಹೇಳಿಕೊಟ್ರೆ ಸಾಕು.
    ಕೈವಲ್ಯ (ಮಗಳು): ಮತ್ತೆ ಅದನ್ನು ನೋಡ್ದಾಗ ಮಕ್ಕಳಿಗೆ ಶೇಮ್ ಶೇಮ್ ಅನ್ನಬಾರದು. ಶೇಮ್ ಶೇಮ್ ಅಂದ್ರೆ ಮಕ್ಕಳು ಅದರ ಬಗ್ಗೆ ಯಾರತ್ರನೂ ಮಾತಾಡದೇ ಇಲ್ಲ

    ನೋಡಿದ್ರಲ್ಲ ಮಕ್ಕಳು ಸೆಕ್ಸ್ ಎಜುಕೇಷನ್ ಬಗ್ಗೆ ಹೇಗೆಲ್ಲ ಮಾತನಾಡಿದ್ದು ಎಂದು. ಇಂತಹ ಎಜುಕೇಷನ್ ಮನೆಯಲ್ಲೇ ಹೇಳಿಕೊಟ್ಟರೆ ಮಕ್ಕಳು ಮುಂದೆ ತಪ್ಪು ಮಾಡುವುದು ಶೇಕಡಾ 90 ರಷ್ಟು ಕಡಿಯಾಗುತ್ತೆ ಎಂದು ಯೋಗೀಶ್ ಮಾಸ್ಟರ್ ಹೇಳುತ್ತಾರೆ.

  • ಮನೆ ಬಾಗಿಲಲ್ಲೇ ತುಂಬಿ ಹರಿಯುತ್ತೆ ಕೃಷ್ಣಾ ನದಿಯ ಕಾಲುವೆ

    ಮನೆ ಬಾಗಿಲಲ್ಲೇ ತುಂಬಿ ಹರಿಯುತ್ತೆ ಕೃಷ್ಣಾ ನದಿಯ ಕಾಲುವೆ

    ಯಾದಗಿರಿ: ಇಲ್ಲಿನ ನಿವಾಸಿಗಳು ಮನೆ ಮುಂದೆ ಹರಿಯುವ ನೀರಿನಿಂದ ಭಯಪಡುವಂತಾಗಿದೆ. ಈ ಅಪಾಯದ ಕಾಲುವೆ ಮಕ್ಕಳ ಜೀವವನ್ನೇ ಬಲಿ ಪಡೆದಿವೆ. ಹೀಗಿದ್ದರು ಅಧಿಕಾರಿಗಳು ಈ ಸಮಸ್ಯೆ ಬಗೆ ಹರಿಸುವ ಗೋಜಿಗೆ ಹೋಗಿಲ್ಲ.

    ಸಾಮಾನ್ಯವಾಗಿ ಕಾಲುವೆಗಳು ಊರಾಚೆಗಿನ ಹೊಲದಲ್ಲೋ ರಸ್ತೆ ಬದಿಯಲ್ಲೋ ಹರಿಯೋದನ್ನ ನೋಡಿದ್ದೀವಿ. ಆದರೆ ಯಾದಗಿರಿಯ ಸುರಪುರ ತಾಲೂಕಿನ ಕೀರದಳ್ಳಿ ತಾಂಡಾದಲ್ಲಿ ಮನೆಗಳ ಮುಂದೆಯೇ ಕಾಲುವೆ ಹರಿಯುತ್ತಿದೆ. ಬಸವಸಾಗರ ಜಲಾಶಯದ ಎಡದಂಡೆ ಕಾಲುವೆ ಈ ತಾಂಡಾದ ಮನೆಗಳ ಮುಂಭಾಗದಲ್ಲಿದ್ದು, ಯಾವುದೇ ಸುರಕ್ಷಾ ಕ್ರಮಗಳಿಲ್ಲದ ಪರಿಣಾಮ ಇಲ್ಲಿನ ಜನರು ಜೀವ ಭಯದಲ್ಲಿ ಓಡಾಡುವ ಪರಿಸ್ಥಿತಿ ಇದೆ.

    ಮಕ್ಕಳು, ವೃದ್ಧರಂತೂ ಇಲ್ಲಿ ನಡೆದುಕೊಂಡು ಹೋಗಲು ಪ್ರಯಾಸ ಪಡುತ್ತಾರೆ. ಇನ್ನೂ ಈ ಹಿಂದೆ ಹಲವು ಮಕ್ಕಳು ಈ ಕಾಲುವೆಗೆ ಬಲಿಯಾಗಿದ್ದಾರಂತೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.

    ಇನ್ನೂ ಈ ಕಾಲುವೆ ನೀರು ಹರಿದು ಹೋಗುವ ಚಿಕ್ಕದಾದ ಸೇತುವೆ ಕೂಡ ಕಿತ್ತು ಹೋಗಿದೆ. 5 ವರ್ಷಗಳಿಂದ ಸೇತುವೆ ದುಸ್ಥಿತಿಯಲ್ಲಿದೆ. ಹೆಚ್ಚಿನ ನೀರು ಕಾಲುವೆಗೆ ಬಿಟ್ಟರೆ ಮನೆಗಳಿಗೆ ಹಾಗೂ ಊರಿನೊಳಗೆ ನೀರು ನುಗ್ಗುತ್ತಿವೆ. ಅಧಿಕಾರಿಗಳು ಭೇಟಿ ನೀಡಿ ಜನರಿಗೆ ಭರವಸೆ ನೀಡುವ ಕೆಲಸ ಮಾಡಿದ್ದಾರೆ ಹೊರತು ಕಾಲುವೆಗೆ ತಡೆಗೊಡೆ ನಿರ್ಮಿಸುವ ಕೆಲಸ ಮಾಡಿಲ್ಲ.

  • ಪುಟ್ಟ ಮಕ್ಕಳಿಗೆ ಬೀಡಿ, ಸಿಗರೇಟು ಸೇದಿಸಿ ವಿಕೃತಿ ಮೆರೆದ ಕಿಡಿಗೇಡಿಗಳು

    ಪುಟ್ಟ ಮಕ್ಕಳಿಗೆ ಬೀಡಿ, ಸಿಗರೇಟು ಸೇದಿಸಿ ವಿಕೃತಿ ಮೆರೆದ ಕಿಡಿಗೇಡಿಗಳು

    ತುಮಕೂರು: ಅಪ್ರಾಪ್ತ ಮಕ್ಕಳಿಗೆ ಚಾಕ್ಲೇಟ್ ಆಸೆ ತೋರಿಸಿ ಬಲವಂತವಾಗಿ ಬೀಡಿ ಸೇದಿಸಿ ಅದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಕಿಡಿಗೇಡಿಗಳು ವಿಕೃತಿ ಮರೆದಿದ್ದಾರೆ.

    ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಕೆ. ಮೇಲನಹಳ್ಳಿ ಈ ಘಟನೆ ನಡೆದಿದೆ. ಗ್ರಾಮದ ಶಿವಣ್ಣ, ಚಿಕ್ಕಣ್ಣ, ಬೀರಲಿಂಗಪ್ಪ, ಚೇತನ್, ಕೀರ್ತನ್, ಕನಕದಾಸ್ ಎಂಬುವರು ಮಕ್ಕಳಿಗೆ ಬಲವಂತವಾಗಿ ಬೀಡಿ ಸೇದಿಸಿದ್ದಾರೆ. ಕಿಡಿಗೇಡಿಗಳ ಗುಂಪು ಗ್ರಾಮದ ಅಂಗನವಾಡಿ ಮಕ್ಕಳಿಗೆ ಚಾಕ್ಲೇಟ್ ಕೊಡಿಸುತ್ತೇವೆಂದು ಆಸೆ ತೋರಿಸಿ, ಅದಕ್ಕೂ ಮೊದಲು ನೀವು ಬೀಡಿ ಸೇದಿ ತೋರಿಸಬೇಕೆಂದು ಕಿರುಕುಳ ನೀಡಿದ್ದಾರೆ.

    ಧೂಮಪಾನ ಮಾಡದ ಮಕ್ಕಳು ಬೀಡಿ ಸೇದಲಾಗದೆ ಈ ಕಿಡಿಗೇಡಿಗಳ ಕೈಗೆ ಸಿಲುಕಿ ನರಳಿದ್ದಾರೆ. ಮಕ್ಕಳನ್ನು ಅನೈತಿಕ ಚಟುವಟಿಕೆಗೆ ದೂಡುವ ಗುಂಪಿನ ವಿರುದ್ಧ ಗ್ರಾಮಸ್ಥರು ತುರುವೇಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಆರೋಪಿಗಳನ್ನ ಶಿಕ್ಷೆಗೆ ಗುರಿಪಡಿಸಿಲ್ಲ. ಈ ಬಗ್ಗೆ ಮಕ್ಕಳ ರಕ್ಷಣಾಧಿಕಾರಿಗಳ ಗಮನಕ್ಕೂ ಬಂದರೂ ಕಿಡಿಗೇಡಿಗಳ ಕೃತ್ಯ ನಿಂತಿಲ್ಲ. ದೂರು ನೀಡಿದ ಬಳಿಕವೂ ಮಕ್ಕಳಿಗೆ ಬೀಡಿ ಸೇದಿಸುತ್ತಿದ್ದಾರೆ ಎಂದು ಮತ್ತೆ ದೂರಿದ್ದಾರೆ.

  • ಶಿಥಿಲಗೊಂಡಿದೆ ಸರ್ಕಾರಿ ನರ್ಸರಿ ಶಾಲಾ ಕಟ್ಟಡ- ಅಪಾಯದಲ್ಲಿದೆ ಶಾಲಾ ಮಕ್ಕಳ ಜೀವ

    ಶಿಥಿಲಗೊಂಡಿದೆ ಸರ್ಕಾರಿ ನರ್ಸರಿ ಶಾಲಾ ಕಟ್ಟಡ- ಅಪಾಯದಲ್ಲಿದೆ ಶಾಲಾ ಮಕ್ಕಳ ಜೀವ

    ಬೆಂಗಳೂರು: ನಗರದಲ್ಲಿ ಒಂದು ನರ್ಸರಿ ಶಾಲೆಯಿದೆ. ಈ ಶಾಲೆಯಲ್ಲಿ ಒಟ್ಟು 30 ಪುಟ್ಟ ಮಕ್ಕಳು ಇದ್ದಾರೆ. ಆದರೆ ಶಾಲೆಯ ಕಟ್ಟಡ ನೋಡಿದರೆ ಎದೆ ಜಲ್ ಎನ್ನುವುದು ಪಕ್ಕಾ. ಈ ಶಾಲೆಗೆ ಮಕ್ಕಳನ್ನು ಕಳಿಸುತ್ತಿರೋ ಪೋಷಕರ ಧೈರ್ಯವನ್ನು ಮೆಚ್ಚಲೇ ಬೇಕು.

    ಸಿಮೆಂಟ್ ಕಿತ್ತು ಬಂದಿರೋ ಮೇಲ್ಛಾವಣಿ, ಬಿರುಕುಬಿಟ್ಟಿರೋ ಗೋಡೆ. ಮೊದಲ ನೋಟದಲ್ಲಿ ಯಾವುದೋ ಪಾಳು ಬಿದ್ದ ಕಟ್ಟಡದಂತೆ ಕಾಣುವ ಇದು ಸರ್ಕಾರಿ ನರ್ಸರಿ ಶಾಲೆ ಎಂದು ಹೇಳಿದರೆ ನೀವು ನಂಬಲ್ಲೇಬೇಕು. ಬೆಂಗಳೂರಿನ ಎಪಿಎಂಸಿ ಯಾರ್ಡ್ ಪಕ್ಕದಲ್ಲಿರೋ ಅಶೋಕಪುರದ ಸರ್ಕಾರಿ ನರ್ಸರಿ ಶಾಲೆ ಶಿಥಿಲಾವಸ್ಥೆಗೆ ತಲುಪಿ 4 ವರ್ಷಗಳೇ ಕಳೆದಿವೆ.

    30 ಮಕ್ಕಳಿರುವ ಈ ಶಾಲೆಗೆ ಬೆರಳೆಣಿಕೆಯ ಮಕ್ಕಳು ಮಾತ್ರ ಬರುತ್ತಾರೆ. ಏಕೆಂದರೆ ಕಟ್ಟಡ ಕುಸಿದು ಮಕ್ಕಳ ಜೀವ ಹೋಗುತ್ತೋ ಎನ್ನುವ ಭಯದಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಕೆಲ ಪೋಷಕರು ಮಕ್ಕಳ ಜೊತೆ ಶಾಲೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಸಂಬಂಧಪಟ್ಟವರು ಯಾವುದೇ ಕೆಲಸ ಮಾಡುತ್ತಿಲ್ಲ ಎನ್ನುವುದು ಪೋಷಕರ ಆರೋಪ.

    ಶಾಲಾ ಕಟ್ಟಡದ ದುಸ್ಥಿತಿ ಬಗ್ಗೆ ಹೇಳಿದರೆ ಶಾಸಕ ಗೋಪಾಲಯ್ಯ ಮತ್ತು ಕಾರ್ಪೋರೇಟರ್ ಮಹಾದೇವು ಮಕ್ಕಳಿಗೆ ರಜೆ ಕೊಟ್ಟು ಕಳಿಸಿ ಎಂದು ಬಿಟ್ಟಿ ಸಲಹೆ ಕೊಡುತ್ತಿದ್ದಾರಂತೆ. ನಾವು ಬೇರೆ ಕಡೆ ಶಾಲೆ ಮಾಡೋಕೆ ಹೇಳಿದ್ದೇವೆ. ಆದರೆ ಇವರು ಇಲ್ಲೇ ಮಾಡಿದರೆ ಏನ್ ಮಾಡೋದು ಎಂದು ಸ್ಥಳೀಯ ನಾಯಕರೊಬ್ಬರು ತಮ್ಮ ತಪ್ಪನ್ನು ಮುಚ್ಚಿಕೊಂಡರು.

    ಮೊದಲೇ ಜನರು ಸರ್ಕಾರಿ ಶಾಲೆಗಳು ಎಂದು ಮಾರುದ್ದ ದೂರ ನಿಲುತ್ತಾರೆ. ಈ ಬಡ ಪುಟ್ಟ ಮಕ್ಕಳ ಜೀವಕ್ಕೇನಾದರು ಆದರೆ ಯಾರು ಹೊಣೆ ಎನ್ನುವ ಪ್ರಶ್ನೆಗೆ ಸರ್ಕಾರ ಉತ್ತರಿಸಲೇಬೇಕು.

  • ಮಕ್ಕಳಿಗೆ ಬೇಡವಾದ ಹೆತ್ತ ತಾಯಿ – ಗಂಗಾವತಿಯಲ್ಲೊಂದು ಹೃದಯವಿದ್ರಾವಕ ಘಟನೆ

    ಮಕ್ಕಳಿಗೆ ಬೇಡವಾದ ಹೆತ್ತ ತಾಯಿ – ಗಂಗಾವತಿಯಲ್ಲೊಂದು ಹೃದಯವಿದ್ರಾವಕ ಘಟನೆ

    ಕೊಪ್ಪಳ: ಹೆತ್ತ ತಾಯಿಯನ್ನು ಮಕ್ಕಳಿಬ್ಬರು ದೂರ ಮಾಡಿರುವ ಹೃದಯವಿದ್ರಾವಕ ಘಟನೆ ಗಂಗಾವತಿಯಲ್ಲಿ ನಡೆದಿದೆ.

    ಬೆಂಗಳೂರಿನಲ್ಲಿರುವ ಗುರುನಾಥ್ ತನ್ನ ತಾಯಿ 95 ವರ್ಷದ ಶಾರದಾಬಾಯಿಯನ್ನು ಖಾಸಗಿ ಬಸ್ ಮೂಲಕ ಗಂಗಾವತಿ ಗೆ ಕಳುಹಿಸಿದ್ದಾರೆ. ಈ ವೇಳೆ ಗಂಗಾವತಿಯಲ್ಲಿರುವ ಸಹೋದರ ಸುರೇಶ್ ತಾಯಿಯನ್ನು ಕರೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದ್ದಾರೆ.

    ಬಸ್ ಗಂಗಾವತಿಗೆ ನಿಲ್ದಾಣಕ್ಕೆ ಆಗಮಿಸಿದಾಗ ಸುರೇಶ್ ಸ್ಥಳದಲ್ಲಿ ಇರಲಿಲ್ಲ. ಈ ವೇಳೆ ಬಸ್ ಸಿಬ್ಬಂದಿ ಸುರೇಶ್ ಅವರಿಗೆ ಕರೆ ಮಾಡಿದಾಗ ನನಗೆ ಆ ಮಹಿಳೆ ಯಾರು ಎನ್ನುವುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ವೃದ್ಧೆ ತಾಯಿ ಖಾಸಗಿ ಬಸ್ ನಲ್ಲೇ ಕಳೆದ ಐದು ಗಂಟೆಗಳಿಂದ ಪರದಾಡಿದ್ದಾರೆ. ಇದನ್ನು ಗಮನಿಸಿದ ಖಾಸಗಿ ಬಸ್ ಚಾಲಕರು ವೃದ್ಧೆಗೆ ಉಪಹಾರ ಕೊಟ್ಟು ಮಾನವೀಯತೆ ತೋರಿದ್ದಾರೆ. ವೃದ್ಧೆ ಅಸ್ವಸ್ಥಗೊಂಡಿದ್ದು, ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ಗುರುನಾಥ್ ಮತ್ತು ಸುರೇಶ್ ಅವರಿಗೆ ಫೋನ್ ಮಾಡಿದಾಗ ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಚಾಲಕ ಕಳಕಪ್ಪ ಹೇಳಿದ್ದಾರೆ.

  • ಪಾಠ ಮಾಡೋ ಜಾಗದಲ್ಲೇ ಅಡುಗೆ- ಗದಗ ಹೆದ್ದಾರಿಯಲ್ಲೊಂದು ಡೇಂಜರಸ್ ಅಂಗನವಾಡಿ

    ಪಾಠ ಮಾಡೋ ಜಾಗದಲ್ಲೇ ಅಡುಗೆ- ಗದಗ ಹೆದ್ದಾರಿಯಲ್ಲೊಂದು ಡೇಂಜರಸ್ ಅಂಗನವಾಡಿ

    ಗದಗ: ಜಿಲ್ಲೆಯ ಬೆಟಗೇರಿಯ ಟರ್ನಲ್ ಪೇಟೆಯಲ್ಲಿ ಅಂಗನವಾಡಿಯಿದೆ. ಕಲಿಯೋಕೆ ನಲಿಯೋಕೆ ಎಂದು ಈ ಅಂಗನವಾಡಿಗೆ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಬರುತ್ತಿದ್ದಾರೆ. ಆದರೆ ಇದರ ಸ್ಥಿತಿ ಆ ದೇವರಿಗೆ ಪ್ರೀತಿ.

    ಈ ಅಂಗನವಾಡಿಯಲ್ಲಿ ಮಕ್ಕಳಿಗೆ ಕೂರಕ್ಕೆ ಜಾಗ ಸಾಕಾಗಲ್ಲ ಅಂತಾದರಲ್ಲಿ ಅಲ್ಲೇ ಅಡುಗೆ ಕೂಡ ಮಾಡುತ್ತಾರೆ. ಸಿಲಿಂಡರ್ ಅಲ್ಲಿಯೇ ಇರೋದರಿಂದ ಅಗ್ನಿ ಅವಘಡ ಸಂಭವಿಸೋ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಪಾಲಾ ಬದಾಮಿ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಈ ಅಂಗನವಾಡಿ ಇರೋದ್ರಿಂದ ವಾಹನ ಸಂಚಾರ ಕೂಡ ಯಥೇಚ್ಚವಾಗಿದೆ.

    ಡೇಂಜರ್ ಝೋನ್ ನಲ್ಲಿರುವ ಈ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಿ, ಮಕ್ಕಳ ಜೀವ ಕಾಪಾಡಿ ಎಂದು ಸಿಡಿಪಿಒ ಸೇರಿದಂತೆ ಹಲವು ಅಧಿಕಾರಿಗಳಿಗೆ ಇಲ್ಲಿನ ಸಾರ್ವಜನಿಕರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಾವು ಮಕ್ಕಳನ್ನು ಅಂಗನವಾಡಿಗೆ ಕಳಿಸೋಕೆ ಹಿಂದು-ಮುಂದು ನೋಡುವಂತಾಗಿದೆ ಎಂದು ಪೋಷಕರು ಹೇಳುತ್ತಾರೆ.

    ಇನ್ನು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಕುರಿತು ಸಿಡಿಪಿಓ ಅವರಿಗೆ ತಿಳಿಸಿದ್ದೇನೆ. ಶೀಘ್ರದಲ್ಲಿ ನಾನು ಭೇಟಿ ನೀಡಿ ಪರಿಶೀಲಿಸಿ ಒಂದು ವಾರದಲ್ಲಿ ಈ ಅಂಗನವಾಡಿ ಕೇಂದ್ರವನ್ನ ಸ್ಥಳಾಂತರ ಮಾಡಿಸುತ್ತೀವಿ ಎಂದು ಹೇಳುತ್ತಾರೆ.