Tag: Childrens

  • ಬೇಕರಿ ತಿನಿಸು ತಿಂದು ಗರ್ಭಿಣಿ ಸೇರಿದಂತೆ 9 ಮಕ್ಕಳು ಅಸ್ವಸ್ಥ

    ಬೇಕರಿ ತಿನಿಸು ತಿಂದು ಗರ್ಭಿಣಿ ಸೇರಿದಂತೆ 9 ಮಕ್ಕಳು ಅಸ್ವಸ್ಥ

    ಮಂಡ್ಯ: ಬೇಕರಿಯಲ್ಲಿ ಖರೀದಿಸಿದ ತಿನಿಸು ತಿಂದು ಗರ್ಭಿಣಿ ಸೇರಿದಂತೆ 9 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದಿದೆ.

    ಕೆಆರ್ ಪೇಟೆ ಪಟ್ಟಣದ ಬೇಕರಿಯೊಂದರಲ್ಲಿ ವಿವಿಧ ಗ್ರಾಮಗಳ ಜನ ಕೇಕ್ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿದ್ದರು. ಕೇಕ್ ತಿಂದ ನಂತರ ಗರ್ಭಿಣಿ ಸೇರಿದಂತೆ 9 ಮಕ್ಕಳು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ.

    ಗುರುವಾರ ಸಂಜೆ 6 ಗಂಟೆಯಿಂದ ಒಬ್ಬರಾದ ಮೇಲೆ ಒಬ್ಬರಂತೆ ರಾತ್ರಿ 11 ಗಂಟೆವರೆಗೂ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಕೆಆರ್ ಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

    ಏಳು ಮಕ್ಕಳನ್ನು ಮುಂಜಾಗ್ರತಾ ಕ್ರಮವಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಎಲ್ಲರ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದ್ದು, ಈ ಪ್ರಕರಣದಿಂದಾಗಿ ಪೋಷಕರಲ್ಲಿ ಆತಂಕ ಮೂಡಿದೆ. ಘಟನೆ ನಡೆದ ತಕ್ಷಣ ಬೇಕರಿಗೆ ದೌಡಾಯಿಸಿದ ಅಧಿಕಾರಿಗಳು ಅನಾರೋಗ್ಯಕ್ಕೆ ಕಾರಣವಾದ ಕೇಕ್ ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.

  • ಮುಂಜಾನೆ ಎದ್ದು ಲೈಟ್ ಆನ್ ಮಾಡುತ್ತಿದ್ದಂತೆ ಸ್ಫೋಟಗೊಂಡ ಸಿಲಿಂಡರ್- ನಾಲ್ವರು ಮಕ್ಕಳು ಸೇರಿ ಆರು ಜನರಿಗೆ ಗಾಯ!

    ಮುಂಜಾನೆ ಎದ್ದು ಲೈಟ್ ಆನ್ ಮಾಡುತ್ತಿದ್ದಂತೆ ಸ್ಫೋಟಗೊಂಡ ಸಿಲಿಂಡರ್- ನಾಲ್ವರು ಮಕ್ಕಳು ಸೇರಿ ಆರು ಜನರಿಗೆ ಗಾಯ!

    ಬೆಂಗಳೂರು: ಮನೆಯಲ್ಲಿ ಅಡುಗೆ ಸಿಲಿಂಡರ್ ಸ್ಪೋಟವಾಗಿ ನಾಲ್ವರು ಮಕ್ಕಳು ಹಾಗೂ ಆರು ಜನರಿಗೆ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ ಪೀಣ್ಯಾ ಸಮೀಪದ ದಾಸರಹಳ್ಳಿಯಲ್ಲಿ ನಡೆದಿದೆ.

    ದೇವರಾಜು(38), ಲಕ್ಷಮ್ಮ (35), ವೆಂಕಟೇಶ್(38), ಮಹೇಳ್ವರಮ್ಮ(35), ಹೋನ್ನೂರಪ್ಪ(70), ಸೋಮಶೇಖರ್(16), ನಿರಂಜನ್(7), ಸಂಗೀತ(16) ಹಾಗೂ ದೇವಿಕ(4) ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದಾರೆ.

    ಈ ಕುಟುಂಬ ಪಾವಗಡ ಮೂಲದವರಾಗಿದ್ದು, ದೇವರಾಜು ನಗರದಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಮನೆಗೆ ನೆಂಟರು ಬಂದಿದ್ದು ಎಲ್ಲರು ಮಲಗಿದ್ದರು. ದೇವರಾಜು ರಾತ್ರಿ ನೈಟ್ ಶಿಫ್ಟ್ ಕೆಲಸ ಮುಗಿಸಿ ಮನೆಗೆ ವಾಪಸ್ ಬಂದಿದ್ದರು. ಮನೆಗೆ ಬಂದು ಬಾಗಿಲು ತಟ್ಟಿದ ಸಮಯದಲ್ಲಿ ಒಳಗಿಂದ ಲೈಟ್ ಅನ್ ಮಾಡಿದ್ದಾಗ ಈ ಘಟನೆ ಸಂಭವಿಸಿದೆ.

    ಇಂದು ಮುಂಜಾನೆ ಸುಮಾರು 4:30ಕ್ಕೆ ಈ ಘಟನೆ ನಡೆದಿದ್ದು, ಮನೆಯವರು ಮಲಗುವಾಗ ಗ್ಯಾಸ್ ಸಿಲಿಂಡರ್ ಆಫ್ ಮಾಡದೆ ಮಲಗಿದ್ದರು. ಮುಂಜಾನೆ ಎದ್ದು ಲೈಟ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿದೆ.

    ಘಟನೆಯಲ್ಲಿ ಗಾಯಗೊಂಡಿದ್ದ ನಾಲ್ವರು ಮಕ್ಕಳು ಸೇರಿ ಆರು ಜನರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ತಂದೆಯ ಶವವನ್ನು ಸೈಕಲ್ ರಿಕ್ಷಾದಲ್ಲಿ 8 ಕಿ.ಮೀ ಸಾಗಿಸಿದ್ರು ಮಕ್ಕಳು!

    ತಂದೆಯ ಶವವನ್ನು ಸೈಕಲ್ ರಿಕ್ಷಾದಲ್ಲಿ 8 ಕಿ.ಮೀ ಸಾಗಿಸಿದ್ರು ಮಕ್ಕಳು!

    ಲಕ್ನೋ: ಶವ ಸಾಗಿಸಲು ಅಂಬುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಬಾರಾಬಂಕಿಯಲ್ಲಿ ಮಕ್ಕಳಿಬ್ಬರು ತನ್ನ ತಂದೆಯ ಶವವನ್ನು ಸೈಕಲ್ ರಿಕ್ಷಾದಲ್ಲಿ ಸಾಗಿಸಿದ್ದಾರೆ.

    50 ವರ್ಷದ ತ್ರಿವೇಂದಿಗಂಜ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದರು. ಮೃತಪಟ್ಟ ಬಳಿಕ ಶವ ಸಾಗಿಸಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳಿಬ್ಬರು ತನ್ನ ತಂದೆಯ ಶವವನ್ನು ಆಸ್ಪತ್ರೆಯಿಂದ ಮನೆಗೆ 8 ಕಿ.ಮೀ ದೂರದಲ್ಲಿರುವ ಮನೆಗೆ ಸೈಕಲ್‍ನಲ್ಲಿ ಸಾಗಿಸಿದ್ದಾರೆ.

    ಇಬ್ಬರು ಮಕ್ಕಳು ಚಿಕ್ಕವರಾಗಿದ್ದು, ಅವರ ಬಳಿ ಹಣ ಕೂಡ ಇರಲಿಲ್ಲ ಎಂದು ವರದಿಯಾಗಿದೆ. ಇಡೀ ಜಿಲ್ಲೆಯಲ್ಲಿ 2 ಅಂಬುಲೆನ್ಸ್ ಮಾತ್ರವಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಂಬುಲೆನ್ಸ್ ಸೇವೆ ಇಲ್ಲ. ಅಷ್ಟೇ ಅಲ್ಲದೇ ಶವ ಸಾಗಿಸಲು ಅಂಬುಲೆನ್ಸ್ ನೀಡುವುದಿಲ್ಲ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಆರ್ ಚಂದ್ರ ತಿಳಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಆರೋಗ್ಯ ಸೇವೆ ಹದಗೆಟ್ಟಿರುವುದು ಇದೇ ಮೊದಲಲ್ಲ. ಈ ಹಿಂದೆ ರೋಗದಿಂದ ಬಳಲುತ್ತಿದ್ದ ಪತ್ನಿಯನ್ನು ಸಾಗಿಸಲು ಅಂಬುಲೆನ್ಸ್ ಸಿಗದ್ದಕ್ಕೆ ಪತಿ ಆಕೆಯನ್ನು 8 ಕಿ.ಮೀ ಹೊತ್ತುಕೊಂಡು ಮೇನ್‍ಪುರಿ ಜಿಲ್ಲಾಸ್ಪತ್ರೆಗೆ ಬಂದಿದ್ದ ವರದಿ ಪ್ರಕಟವಾಗಿತ್ತು.

  • ಮದುವೆ ಆಗಿ ಎರಡು ಮಕ್ಕಳಾದ ಮೇಲೆ ನಾನು ಗಂಡಸಲ್ಲ ಎಂದ ಪಾದ್ರಿ

    ಮದುವೆ ಆಗಿ ಎರಡು ಮಕ್ಕಳಾದ ಮೇಲೆ ನಾನು ಗಂಡಸಲ್ಲ ಎಂದ ಪಾದ್ರಿ

    ಬೆಂಗಳೂರು: ಚರ್ಚ್ ಪಾದ್ರಿಯೊಬ್ಬ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದು, ಮದುವೆ ಆಗಿ ಎರಡು ಮಕ್ಕಳಾದ ಮೇಲೆ ನಾನು ಗಂಡಸಲ್ಲ ಎಂದು ಹೇಳಿಕೊಳ್ಳುತ್ತಿರೋ ಪ್ರಕರಣವೊಂದು ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಬೆಳಕಿಗೆ ಬಂದಿದೆ.

    ರುಬೆನ್ ಜೋಶ್ವ, ಕಮ್ಮನಹಳ್ಳಿಯ ಜೀಸಸ್ ಪವರ್ ಫುಲ್ ಚರ್ಚ್ ನ ಪಾದ್ರಿ. ಈತ ಮೇರಿ ಮಿಲ್ಕಾ ಎಂಬಾಕೆಯ ಜೊತೆ 2009ರಲ್ಲಿ ಮದುವೆ ಆಗಿದ್ದ. ಸದ್ಯ ಪಾದ್ರಿ ರುಬೇನ್ ಜೋಶ್ವ ಹಾಗೂ ಮೇರಿ ಮಿಲ್ಕಾ ದಂಪತಿಗೆ 6 ವರ್ಷದ ಹೆಣ್ಣು ಹಾಗೂ 4 ವರ್ಷದ ಗಂಡು ಮಗುವಿದೆ.

    ಮದುವೆಯಾಗಿ ಎರಡು ಮಕ್ಕಳಾದ ನಂತರ ಪಾದ್ರಿ, ನಾನು ಗಂಡಸಲ್ಲ. ಹಾಗಿದ್ದ ಮೇಲೆ ನನಗೆ ಮಕ್ಕಳಾಗಲು ಹೇಗೆ ಸಾಧ್ಯ ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದಾನೆ. ಆರೋಪಿ ಪಾದ್ರಿ ವಿರುದ್ಧ ಪತ್ನಿ ಮೇರಿ ಮಿಲ್ಕಾ ಇದೇ ತಿಂಗಳ 9ರಂದು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಶನಿವಾರ ವನಿತಾ ಸಹಾಯವಾಣಿಗೂ ದೂರು ನೀಡಿದ್ದಾರೆ.

    ಪೊಲೀಸರಿಗೆ ಪತ್ನಿ ದೂರು ನೀಡಲು ಮುಂದಾದಾಗ ಪಾದ್ರಿ ಡೋಂಟ್ ಕೇರ್ ಎಂದು ಹೇಳಿದ್ದಾನೆ. ಪತ್ನಿ ಮಾಧ್ಯಮಗಳ ಮುಂದೆ ಬರುತ್ತಾರೆ ಎಂದಾಗ ತಡರಾತ್ರಿ ಮನೆಗೆ ಇತರೆ ಪಾದ್ರಿಗಳ ಜೊತೆ ಬಂದು ರುಬೇನ್ ತನ್ನ ಪತ್ನಿ ಮೇರಿಗೆ, ಈ ವಿಚಾರ ಹೊರಗಡೆ ಗೊತ್ತಾದ್ರೆ ನಮ್ಮ ಧರ್ಮದ ಮರ್ಯಾದೆ ಹೋಗುತ್ತೆ ಎಂದು ಧಮ್ಕಿ ಹಾಕಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

    ದೂರಿನಲ್ಲೇನಿದೆ?: ಈ ಹಿಂದೆ ನನ್ನ ಗಂಡ ಹೊಡೆಯುವುದು ಹಾಗೂ ಬೈಯೋದು ಮಾಡುತ್ತಿದ್ದನು. ನಂತರ ಈ ಬಗ್ಗೆ ನಾನು ಫೆಬ್ರವರಿ 27, 2018ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಆಗ ಪೊಲೀಸರು ನನ್ನ ಗಂಡನನ್ನು ಪೊಲೀಸ್ ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೂ ಸಹ ನನ್ನ ಗಂಡ ಇದೇ ತಿಂಗಳು 7ರಂದು ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆದಿದ್ದಾರೆ. ಹಾಗಾಗಿ ನನ್ನ ಗಂಡನನ್ನು ಕರೆಸಿ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೇರಿ ದೂರಿನಲ್ಲಿ ದಾಖಲಿಸಿದ್ದಾರೆ.

  • ಮಕ್ಕಳಿಲ್ಲದ ಕಾರಣ ಪತ್ನಿಗೆ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ ಪತಿ!

    ಮಕ್ಕಳಿಲ್ಲದ ಕಾರಣ ಪತ್ನಿಗೆ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ ಪತಿ!

    ಬೆಂಗಳೂರು: ಮಕ್ಕಳಿಲ್ಲದ ಕಾರಣ ಗಂಡನೊಬ್ಬ ತನ್ನ ಪತ್ನಿಗೆ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಶಿವಕುಮಾರ್ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿ ಪತಿ. ಎರಡು ವರ್ಷದ ಹಿಂದೆ ಉಮಾದೇವಿ ಹಾಗೂ ಶಿವಕುಮಾರ್ ವಿವಾಹವಾಗಿತ್ತು. ಆದರೆ ಮದುವೆಯಾಗಿ ಎರಡು ವರ್ಷವಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಮೂರು ತಿಂಗಳ ಹಿಂದೆ ಇದೇ ವಿಚಾರಕ್ಕೆ ಗಲಾಟೆ ನಡೆದು ಹಲ್ಲೆ ಮಾಡಿದ್ದನು ಎಂದು ಹೇಳಲಾಗಿದೆ.

    ಈ ಹಿಂದೆ ಶಿವಕುಮಾರ್ ಕೆಂಗೇರಿ ಬ್ರಿಜ್ಡ್ ಬಳಿ ಉಮಾದೇವಿಯನ್ನು ತಳ್ಳಿದ್ದ. ಆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಮಾದೇವಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಮತ್ತೆ ಉಮಾದೇವಿಯನ್ನ ಗಂಡನ ಮನೆಗೆ ಕಳುಹಿಸಲಾಗಿತ್ತು. ಆದರೆ ಶಿವಕುಮಾರ್ ಮತ್ತೆ ತನ್ನ ಪತ್ನಿಯ ಮೇಲೆ ವಿಕೃತಿ ಮೆರದಿದ್ದಾನೆ.

    ಸದ್ಯ ಗಾಯಾಳು ಉಮಾದೇವಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಮಾದೇವಿಗೆ ಅತ್ತೆ-ಮಾವ ಕೂಡ ಕಿರುಕುಳ ನೀಡುತ್ತಿದ್ದರು. ಶಿವಕುಮಾರ್ ಗೆ ಇನ್ನೊಂದು ಮದುವೆ ಮಾಡಲು ಪ್ಲಾನ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

    ಈ ಬಗ್ಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆರೆಯಲ್ಲಿ ಈಜಲು ಹೋದ ಹುಣಸೂರಿನ 10 ತರಗತಿಯ ನಾಲ್ವರು ಮಕ್ಕಳು ಜಲಸಮಾಧಿ!

    ಕೆರೆಯಲ್ಲಿ ಈಜಲು ಹೋದ ಹುಣಸೂರಿನ 10 ತರಗತಿಯ ನಾಲ್ವರು ಮಕ್ಕಳು ಜಲಸಮಾಧಿ!

    ಮೈಸೂರು: ಕೆರೆಗೆ ಈಜಲು ಹೋದ ಹತ್ತನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ ಹುಣಸೂರು ತಾಲ್ಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ.

    ಮಂಗಳವಾರ ಮಧ್ಯಾಹ್ನ ಹೈರೆಗೆ ಗ್ರಾಮದ ಕೆರೆಯಲ್ಲಿ ಈಜಾಡಲು ಹೋಗಿದ್ದ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದರು. ಘಟನೆ ನಡೆದ ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಇಬ್ಬರು ಮಕ್ಕಳ ಮೃತದೇಹವನ್ನು ಮೇಲಕ್ಕೆ ಎತ್ತಿದ್ದರು. ರಾತ್ರಿಯಾದ ಕಾರಣ ಕಾರ್ಯಚರಣೆಯನ್ನ ಸ್ಥಗಿತಗೊಳಿಸಿ ಇಂದು ಬೆಳಗ್ಗೆ ಮತ್ತೆ ಕಾರ್ಯಚರಣೆ ಆರಂಭ ಮಾಡಿ ಮತ್ತಿಬ್ಬರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ.

    ನಾಪತ್ತೆಯಾಗಿದ್ದ ನಾಲ್ವರೂ ಸಹಪಾಠಿಗಳಾಗಿದ್ದು, ಹುಣಸೂರಿನ ಸೆಂಟ್ ಜೋಸೆಫ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹುಣಸೂರಿನ ನಿವಾಸಿಗಳಾದ ಅನಿಲ್, ಭರತ್, ಧನಂಜಯ್, ಯಶವಂತ್ ಮೃತ ವಿದ್ಯಾರ್ಥಿಗಳು.

    ಕಾರ್ಯಾಚರಣೆ ನಡೆಸಿದ ಕೆರೆಯ ದಡದಲ್ಲಿ ಚಪ್ಪಲಿ, ವಾಚ್, ಬೈಕ್ ಪತ್ತೆಯಾಗಿದ್ದು, ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೇಕ್ ತಿಂದು ಮಂಡ್ಯದ 5 ಮಕ್ಕಳು ಅಸ್ವಸ್ಥ

    ಕೇಕ್ ತಿಂದು ಮಂಡ್ಯದ 5 ಮಕ್ಕಳು ಅಸ್ವಸ್ಥ

    ಮಂಡ್ಯ: ಕೇಕ್ ತಿಂದು 5 ಮಕ್ಕಳು ವಾಂತಿ ಭೇದಿಯಿಂದ ನರಳಾಡಿದಂತ ಘಟನೆ ಮಂಡ್ಯದಲ್ಲಿ ನಡೆದಿದೆ.

    ಬುಧವಾರ ಸಂಜೆ ಮಂಡ್ಯದ ಕೆ.ಎಂ ದೊಡ್ಡಿಯ ಭೈರವೇಶ್ವರ ಬೇಕರಿಯಲ್ಲಿ ಸುತ್ತಮುತ್ತಲ ಗ್ರಾಮದ ಕೆಲವರು ಕೇಕ್ ಖರೀದಿಸಿದ್ದಾರೆ. ಬಳಿಕ ಆ ಕೇಕನ್ನು ಮನೆಗೆ ತೆಗೆದುಕೊಂಡು ಹೋಗಿ ತಮ್ಮ ಮಕ್ಕಳಿಗೆ ತಿನ್ನಿಸಿದ್ದಾರೆ. ಪರಿಣಾಮ ಕೆಎಂ ದೊಡ್ಡಿ ಪಕ್ಕದ ಮಾದರಹಳ್ಳಿ ಗ್ರಾಮದ ಧನುಷ್ (6), ಹುಲಿಗೆರೆಪುರ ಗ್ರಾಮದ ದರ್ಶನ್ (9), ಕೊಳ್ಳೇಗಾಲದ ಶ್ರೇಯ (3), ಅಜ್ಜಳ್ಳಿಯ ಅನುಷಾ (4) ಹಾಗೂ ನಿಶ್ಚಿತ ಕೇಕ್ ತಿಂದು ಅಸ್ವಸ್ಥಗೊಂಡಿದ್ದಾರೆ.

    ಬಳಿಕ ಆತಂಕಗೊಂಡ ಮಕ್ಕಳ ಪೋಷಕರು ಕೆಎಂ ದೊಡ್ಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಮಿಮ್ಸ್ ನಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

  • ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ಯಶಸ್ವಿಯಾಗಿ ಕರೆತಂದ ಶ್ರೀ

    ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ಯಶಸ್ವಿಯಾಗಿ ಕರೆತಂದ ಶ್ರೀ

    ಕಲಬುರಗಿ: ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಸರ್ಕಾರ ಹಲವು ಯೋಜನೆ ತಂದರೂ ಪ್ರಯೋಜನವಾಗಿಲ್ಲ. ಆದ್ರೆ ಕಲಬುರಗಿಯ ಮಹೇಶ್ವರನಂದ ಸ್ವಾಮೀಜಿಗಳು, ಅಲೆಮಾರಿ ಮಕ್ಕಳಿಗಾಗಿಯೇ ಶಾಲೆ ತೆಗೆದಿದ್ದಾರೆ. ರಾಜ್ಯದ ಮೂಲೆ-ಮೂಲೆ ಸುತ್ತಿ ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ಜೊತೆ ವಸತಿ ಸೌಕರ್ಯ ನೀಡುತ್ತಿದ್ದಾರೆ.

    ಕಲಬುರಗಿ ತಾಲೂಕಿನ ತಾಡತೆಗನೂರ ಗ್ರಾಮದ ವಿವೇಕಾನಂದ ವಿದ್ಯಾಪೀಠದ ಅಧ್ಯಕ್ಷರಾದ ಮಹೇಶ್ವರನಂದ ಸ್ವಾಮೀಜಿ ಅಲೆಮಾರಿ ಜನಾಂಗದ ಮಕ್ಕಳ ಪೋಷಕರಿಗೆ ಶಿಕ್ಷಣದ ಬಗ್ಗೆ ತಿಳುವಳಿಕೆ ನೀಡುತ್ತಾರೆ. ರಾಜ್ಯದ ಮೂಲೆ ಮೂಲೆಗೆ ಹೋಗಿ ಅಲೆಮಾರಿ ಜನಾಂಗದ ಮಕ್ಕಳನ್ನು ಕರೆ ತಂದು ತಮ್ಮ ಶಾಲೆಯಲ್ಲಿ ಶಿಕ್ಷಣ ಕೊಡುತ್ತಿದ್ದಾರೆ. ಈ ಮೂಲಕ, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಮಕ್ಕಳಿಗೆ ದಾರಿದೀಪವಾಗಿದ್ದಾರೆ.

    2002ರಲ್ಲಿ ಶ್ರೀಗಳು ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಈ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದರು. ಕಳೆದ 15 ವರ್ಷಗಳಲ್ಲಿ ಈ ಶಾಲೆಯಲ್ಲಿ 8 ಸಾವಿರಕ್ಕೂ ಅಧಿಕ ಅಲೆಮಾರಿ ಜನಾಂಗದ ಮಕ್ಕಳು ಶಿಕ್ಷಣ ಪಡೆದಿದ್ದಾರೆ. ಶ್ರೀಗಳ ಕಾರ್ಯ ಮೆಚ್ಚಿ ಹಿಂದಿನ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಖುದ್ದು ಶಾಲೆಗೆ ಭೇಟಿ ನೀಡಿ, ಶ್ಲಾಘಿಸಿದ್ದರು.

    ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಸರ್ಕಾರದ ಯತ್ನ ವಿಫಲವಾಗಿದ್ದರೂ, ಶ್ರೀಗಳು ಯಶಸ್ವಿಯಾಗಿದ್ದಾರೆ.

    https://www.youtube.com/watch?v=TxziRBYSK44&pbjreload=10

  • ಹನಿ ಕೇಕ್ ತಿಂದು 2 ವರ್ಷದ ಮಕ್ಕಳು ಸೇರಿ ಒಂದೇ ಕುಟುಂಬದ 10 ಮಂದಿ ಅಸ್ವಸ್ಥ

    ಹನಿ ಕೇಕ್ ತಿಂದು 2 ವರ್ಷದ ಮಕ್ಕಳು ಸೇರಿ ಒಂದೇ ಕುಟುಂಬದ 10 ಮಂದಿ ಅಸ್ವಸ್ಥ

    ಗದಗ: ಹನಿ ಕೇಕ್ ತಿಂದು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ 10 ಜನ ಅಸ್ವಸ್ಥಗೊಂಡಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಆದ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಅಸ್ವಸ್ಥಗೊಂಡವರು ಎಲ್ಲರೂ ಆದ್ರಹಳ್ಳಿ ಉಮೇಶ ವಡ್ಡರ್ ಎಂಬವರ ಕುಟುಂಬಸ್ಥರು ಎನ್ನಲಾಗಿದೆ. ಸಮೀಪದ ಲಕ್ಷ್ಮೇಶ್ವರ ಪಟ್ಟಣದ ಲಕ್ಷ್ಮೀ ವೆಂಕಟೇಶ ಬೇಕರಿಯಿಂದ ನಿನ್ನೆ ಹನಿ ಕೇಕ್ ತರಲಾಗಿತ್ತು. 19 ವರ್ಷದ ಯುವತಿ ಸೇರಿ ಇನ್ನುಳಿದವರು 2 ರಿಂದ 14 ವಯಸ್ಸಿನ ಮಕ್ಕಳು ಎನ್ನಲಾಗಿದೆ.

    ತನುಶ್ರೀ(2), ಅಶ್ವಿನಿ(2), ಜಯಶ್ರೀ(3), ಸಪ್ನ(4), ನೀಲವ್ವ, ಸುವರ್ಣ, ನೇತ್ರಾ, ಷಣ್ಮುಖ, ಉಡಚವ್ವ, ಪ್ರವೀಣ ಅಸ್ವಸ್ಥಗೊಂಡವರು. ಗುರುವಾರ ರಾತ್ರಿ ಹನಿ ಕೇಕ್ ತಿಂದು ಮಲಗಿದವರು ಮಧ್ಯ ರಾತ್ರಿ ವಾಂತಿ ಭೇದಿಯಿಂದ ನರಳಾಡಲಾರಂಭಿಸಿದರು.

    ಅಸ್ವಸ್ಥರನ್ನು ಲಕ್ಷ್ಮೇಶ್ವರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ನಂತರ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

  • ಹುಬ್ಬಳ್ಳಿ ಕಿಮ್ಸ್ ನಲ್ಲಿ ಮತ್ತೊಂದು ಎಡವಟ್ಟು- ಪೋಷಕರ ಸಮಯ ಪ್ರಜ್ಞೆಯಿಂದ ತಪ್ಪಿತು ಅನಾಹುತ

    ಹುಬ್ಬಳ್ಳಿ ಕಿಮ್ಸ್ ನಲ್ಲಿ ಮತ್ತೊಂದು ಎಡವಟ್ಟು- ಪೋಷಕರ ಸಮಯ ಪ್ರಜ್ಞೆಯಿಂದ ತಪ್ಪಿತು ಅನಾಹುತ

    ಹುಬ್ಬಳ್ಳಿ: ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ಬಯಲಾಗಿದೆ. ಅವಧಿ ಮುಗಿದಿರುವ ಔಷಧಿಯನ್ನು ಕಿಮ್ಸ್ ನ ಚಿಕ್ಕ ಮಕ್ಕಳ ವಾರ್ಡ್ ನಲ್ಲಿ ಇರುವ ನೂರಾರು ಚಿಕ್ಕ ಮಕ್ಕಳಿಗೆ ವೈದ್ಯರೊಬ್ಬರು ನೀಡಿದ್ದಾರೆ.

    ಇಂದು ಬೆಳಗ್ಗಿನ ಜಾವ ಚಿಕ್ಕ ಮಕ್ಕಳ ವಿಭಾಗಕ್ಕೆ ಬಂದ ವೈದ್ಯರೊಬ್ಬರು ವಿಟಮಿನ್ ಡಿ ಔಷಧಿಯನ್ನು ನೀಡಿ ದಿನಕ್ಕೆ ಎರಡು ಹೊತ್ತು ಮಗುವಿಗೆ ನೀಡುವಂತೆ ಸೂಚಿಸಿದ್ದಾರೆ. ಆದ್ರೆ ಅದೃಷ್ಟವಶಾತ್ ಆ ಪೋಷಕ ಮಗುವಿಗೆ ಔಷಧಿ ನೀಡುವ ಮೊದಲು ಅದನ್ನು ಗಮನಿಸಿದಾಗ ಡೇಟ್ ಬಾರ್ ಆಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಬದುಕಿದ್ದ ಯುವಕನನ್ನು ಮೃತಪಟ್ಟಿದ್ದಾನೆಂದು ಶವಾಗಾರದಲ್ಲಿಟ್ರು- ಹುಬ್ಬಳ್ಳಿ ಕಿಮ್ಸ್ ವೈದ್ಯರ ಎಡವಟ್ಟಿಗೆ ತೀವ್ರ ಆಕ್ರೋಶ

    ಕೂಡಲೇ ಡೇಟ್ ಬಾರ್ ಆಗರುವ ಔಷಧಿಯನ್ನು ಮಕ್ಕಳಿಗೆ ಯಾರು ನೀಡದಂತೆ ಎಲ್ಲ ಪೋಷಕರಿಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಪೋಷಕರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ಒಂದು ತಪ್ಪಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಕಿಮ್ಸ್ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.