Tag: Childrens

  • ಗಾಳಿಪಟ ಹಾರಿಸಿ ಸಂಕ್ರಾಂತಿ ಆಚರಿಸಿದ ರಾಯಚೂರಿನ ಜನತೆ

    ಗಾಳಿಪಟ ಹಾರಿಸಿ ಸಂಕ್ರಾಂತಿ ಆಚರಿಸಿದ ರಾಯಚೂರಿನ ಜನತೆ

    ರಾಯಚೂರು: ಸಂಕ್ರಾಂತಿ ಹಬ್ಬವನ್ನ ರಾಯಚೂರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗಾಳಿಪಟ ಹಾರಿಸಿ ಜನ ಸಂಭ್ರಮಿಸಿದ್ದಾರೆ.

    ಸಂಕ್ರಾಂತಿ ಹಬ್ಬದ ವಿಶೇಷ ಖಾದ್ಯಗಳಾದ ಎಳ್ಳುಹಚ್ಚಿದ ಸಜ್ಜೆ ರೊಟ್ಟಿ, ಭರ್ತಾ, ಎಳ್ಳು ಹೋಳಿಗೆ ಶೇಂಗಾ ಹೋಳಿಗೆಯ ಊಟವನ್ನ ಉಣಬಡಿಸಲಾಯಿತು. ನಗರದ ರೋಟರಿ ಕ್ಲಬ್ ಹಾಗೂ ಜೆಸಿಐ ವತಿಯಿಂದ ಸಂಕ್ರಾಂತಿ ಹಿನ್ನೆಲೆಯಲ್ಲಿ ಗಾಳಿಪಟ ಸಂಭ್ರಮ ಹಾಗೂ ಊಟದ ವ್ಯವಸ್ಥೆ ಆಯೋಜಿಸಲಾಯಿತು. ಅಲ್ಲದೆ ಈ ಸಡಗರದಲ್ಲಿ ಭಾಗಿಯಾಗಿರುವ ಜನರು ಎಳ್ಳು ಬೆಲ್ಲವನ್ನ ಪರಸ್ಪರ ವಿನಿಮಯ ಮಾಡಿಕೊಂಡು ಸಂಕ್ರಾಂತಿ ಹಬ್ಬವನ್ನು ಸವಿದಿದ್ದಾರೆ.

    ಕ್ರೀಡಾಂಗಣದಲ್ಲಿ ಚಿಣ್ಣರು ಗಾಳಿಪಟವನ್ನು ಹಾರಿಸುತ್ತ ಖುಷಿ ಪಡುತ್ತಿದ್ದಾರೆ. ವಯಸ್ಸಿನ ಬೇಧವಿಲ್ಲದೆ ಚಿಕ್ಕಮಕ್ಕಳಿಂದ ಹಿಡಿದು ಎಲ್ಲರೂ ಬಣ್ಣಬಣ್ಣದ ಪತಂಗಗಳನ್ನ ಹಾರಿಸಿ ಹಬ್ಬ ಆಚರಿಸಿದರು.

    ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅನೇಕ ಜನರು ನದಿ ದಡಗಳಿಗೆ ತೆರಳಿ ಪುಣ್ಯ ಸ್ನಾನವನ್ನು ಮಾಡುತ್ತಿದ್ದಾರೆ. ಕೃಷ್ಣಾ ಹಾಗೂ ತುಂಗಾಭದ್ರ ನದಿಯಲ್ಲಿ ನೀರಿನ ಕೊರತೆಯ ಮಧ್ಯೆಯೂ ಜನರು ಪುಣ್ಯ ಸ್ನಾನ ಮಾಡಿ ಸಂಕ್ರಾಂತಿಯನ್ನ ಆಚರಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ಯಪಾನ ಸೇವಿಸಿ ನೇಣಿಗೆ ಶರಣಾದ ದಂಪತಿ!

    ಮದ್ಯಪಾನ ಸೇವಿಸಿ ನೇಣಿಗೆ ಶರಣಾದ ದಂಪತಿ!

    ಕೊಪ್ಪಳ: ಕೌಟುಂಬಿಕ ಕಲಹದ ಹಿನ್ನೆಲೆ ಪತಿ ಪತ್ನಿ ಇಬ್ಬರು ಮದ್ಯಪಾನ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹುಲ್ಕಿಹಾಳ್ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

    ಹುಲ್ಕಿಹಾಳ್ ಗ್ರಾಮದ ನಿವಾಸಿ ಈರಪ್ಪ(38) ಮತ್ತು ಉಮಾದೇವಿ(32) ನೇಣಿಗೆ ಶರಣಾದ ದಂಪತಿ. ಈರಪ್ಪ ಹಾಗೂ ಉಮಾದೇವಿ ಕುಟುಂಬದಲ್ಲಿ ಕೆಲ ದಿನಗಳಿಂದ ಇವರಿಬ್ಬರನ್ನು ನೋಡಿಕೊಳ್ಳುವ ವಿಚಾರದ ಬಗ್ಗೆ ಅವರ ಮಕ್ಕಳ ನಡುವೆ ಜಗಳ ನಡೆಯುತ್ತಿತ್ತು. ವಯಸ್ಸಾದ ಈರಪ್ಪ ಹಾಗೂ ಉಮಾದೇವಿಯನ್ನು ಅವರ ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅಲ್ಲದೆ ತಂದೆ ತಾಯಿಯ ಬಳಿ ಹೊರಗಿನವರಂತೆ ವರ್ತಿಸುತ್ತಿದ್ದರು. ಆದರೂ ದಂಪತಿ ಹೇಗೋ ಜೀವನ ಸಾಗಿಸುತ್ತ ಬಂದಿದ್ದರು.

    ತಮ್ಮ ಕೊನೆಕಾಲದಲ್ಲಿ ಹೆತ್ತ ಮಕ್ಕಳೇ ತಮ್ಮನ್ನು ನೋಡಿಕೊಳ್ಳುತ್ತಿಲ್ಲ ಅಂತ ದಂಪತಿ ಬೇಸತ್ತು ಹೋಗಿದ್ದರು. ಜೀವನದಲ್ಲಿ ಬಹಳ ನೊಂದಿದ್ದರು. ಆದ್ರೆ ಶನಿವಾರ ರಾತ್ರಿ ಅದೇನಾಯ್ತೋ ಗೊತ್ತಿಲ್ಲ ಈರಪ್ಪ ಹಾಗೂ ಉಮಾದೇವಿ ಇಬ್ಬರು ಮದ್ಯಪಾನ ಸೇವಿಸಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.

    ಘಟನೆ ಕುರಿತು ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಳ್ಳಾರಿಯಲ್ಲಿ ಬೋನಿಗೆ ಬಿತ್ತು ಮತ್ತೊಂದು ನರಭಕ್ಷಕ ಚಿರತೆ!

    ಬಳ್ಳಾರಿಯಲ್ಲಿ ಬೋನಿಗೆ ಬಿತ್ತು ಮತ್ತೊಂದು ನರಭಕ್ಷಕ ಚಿರತೆ!

    ಬಳ್ಳಾರಿ: ಮಕ್ಕಳನ್ನು ಹೊತ್ತೊಯ್ದು ಬಲಿ ಪಡೆದಿದ್ದ ನರಭಕ್ಷಕ ಚಿರತೆಗಳನ್ನು ಸೆರೆಹಿಡಿಯಲು ಜಿಲ್ಲೆಯ ಕಂಪ್ಲಿ ಭಾಗದ ದೇವಲಾಪುರ ಹೊರವಲಯದಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿನಲ್ಲಿ ಮತ್ತೊಂದು ಚಿರತೆ ಸೆರೆಯಾಗಿದೆ. ನಿನ್ನೆಯಷ್ಟೇ ಒಂದು ಚಿರತೆಯನ್ನು ಸೆರೆಹಿಡಿಯಲಾಗಿತ್ತು.

    ಕಂಪ್ಲಿ ಭಾಗದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಇದೂವರೆಗೆ ಇಬ್ಬರು ಮಕ್ಕಳನ್ನು ಚಿರತೆ ಬಲಿ ಪಡೆದುಕೊಂಡಿದೆ. ಇದರಿಂದ ಈ ಭಾಗದ ಜನರು ಮನೆಯಿಂದ ಹೊರಬರಲು ಹೆದರುವಂತ ಪರಿಸ್ಥಿತಿ ಎದುರಾಗಿತ್ತು. ಕಂಪ್ಲಿ ಭಾಗದ ಸೋಮಲಾಪುರ ಹಾಗೂ ದೇವಾಲಾಪುರವು ಕಾಡಂಚಿನ ಗ್ರಾಮವಾಗಿರುವುದರಿಂದ ಇಲ್ಲಿ ಚಿರತೆಗಳು ಗ್ರಾಮಕ್ಕೆ ಆಹಾರ ಅರಸಿಕೊಂಡು ಬರುತ್ತದೆ. ಹೀಗೆ ಬಂದಾಗ ಜನರ ಮೇಲೆ ದಾಳಿಯೂ ಕೂಡ ನಡೆಸುತ್ತದೆ. ಇದನ್ನೂ ಓದಿ:ಕೊನೆಗೂ ಬೋನಿಗೆ ಬಿದ್ದ ಎರಡನೇ ನರಭಕ್ಷಕ ಚಿರತೆ

    ಡಿ.25ರಂದು ಜಯಸುಧಾ(13) ಬಾಲಕಿಯನ್ನು ಚಿರತೆಯೊಂದು ಹೊತ್ತೊಯ್ದು ಬಲಿ ಪಡೆದಿತ್ತು. ಶಾಲೆಗೆ ಕಿಸ್ಮಸ್ ರಜೆಯಿದ್ದ ಕಾರಣ ಜಮೀನಿಗೆ ಪೋಷಕರ ಜೊತೆ ಹೋಗುತ್ತಿದ್ದ ಜಯಸುಧಾ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿ ಆಕೆಯನ್ನು ಹೊತ್ತೊಯ್ದಿತ್ತು. ಚಿರತೆ ದಾಳಿ ನಡೆಸುತ್ತಿದ್ದಂತೆಯೇ ಪೋಷಕರ ಚೀರಾಟ ಕೇಳಿ ಬಾಲಕಿಯನ್ನು ತುಸು ದೂರದಲ್ಲೇ ಬಿಟ್ಟು ಹೋಗಿತ್ತು. ತಕ್ಷಣ ಕಂಪ್ಲಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಜಯಸುಧಾ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಳು.

    ಡಿ.12ರಂದು ಬಾಲಕ ವೆಂಕಟಸಾಯಿಯನ್ನು ಚಿರತೆ ಬಲಿ ಪಡೆದಿತ್ತು. ಸಂಜೆ ಆಟವಾಡುವಾಗ ಮನೆಯವರು ನೋಡ ನೋಡುತ್ತಿದ್ದಂತೆಯೇ ಚಿರತೆ ಬಾಲಕನನ್ನು ಎಳೆದೊಯ್ದಿತ್ತು. ಬಳಿಕ ಆತನ ಪೋಷಕರು ಹಾಗೂ ಗ್ರಾಮಸ್ಥರು ಬಾಲಕನನ್ನ ಹುಡುಕಾಡಿದಾಗ ಗ್ರಾಮದ ಹೊರವಲಯದಲ್ಲಿ ಆತ ಶವವಾಗಿ ಪತ್ತೆಯಾಗಿದ್ದನು. ಆದರೆ ಅರಣ್ಯ ಇಲಾಖೆಯವರು ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ ಅಂತ ತಿಳಿದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

    ಈ ಸರಣಿ ಸಾವುಗಳಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಳನ್ನು ಸೆರೆಹಿಡಿಯಲು ಸೋಮಲಾಪುರ ಹಾಗೂ ದೇವಾಲಾಪುರವು ಗ್ರಾಮದ ಸುತ್ತಮುತ್ತ ಒಟ್ಟು 11 ಕಡೆ ಬೋನು ಅಳವಡಿಸಿದ್ದರು. ಈ ಹಿಂದೆ ಸೋಮಲಾಪುರ ಗ್ರಾಮದಲ್ಲಿ ಎರಡು ಚಿರತೆಗಳು ಹಾಗೂ ಇಂದು ದೇವಾಲಪುರದಲ್ಲಿ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ. ಇದುವರೆಗೂ ಒಟ್ಟು ಮೂರು ಚಿರತೆಗಳನ್ನು ಅರಣ್ಯ ಇಲಾಖೆ ಅವರು ಯಶಸ್ವಿಯಾಗಿ ಸೆರೆಹಿಡಿದು ಜನರ ಆತಂಕವನ್ನು ಕೊಂಚ ಮಟ್ಟಿಗೆ ದೂರ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೀದಿ ನಾಯಿಗಳು ಕಚ್ಚಿ 8 ಮಕ್ಕಳು ಗಂಭೀರ..!

    ಬೀದಿ ನಾಯಿಗಳು ಕಚ್ಚಿ 8 ಮಕ್ಕಳು ಗಂಭೀರ..!

     ಸಾಂದರ್ಭಿಕ ಚಿತ್ರ

    ವಿಜಯಪುರ: ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಮುಂದುವರಿದಿದ್ದು, 8 ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿದ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಅಸ್ಕಿ ಗ್ರಾಮದಲ್ಲಿ ನಡೆದಿದೆ.

    ಅಸ್ಕಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಕುರಿತು ಗ್ರಾಮ ಪಂಚಾಯ್ತಿ ಸದಸ್ಯರಿಗೆ ವಿಷಯ ತಿಳಿಸಿದ್ರೂ ಪ್ರಯೋಜನವಾಗುತ್ತಿಲ್ಲ. ಇದುವರೆಗೂ ನಾಯಿಗಳ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದ ಗ್ರಾಮ ಪಂಚಾಯ್ತಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹುಚ್ಚು ನಾಯಿಗಳು ಹಾಗೂ ಬೀದಿ ನಾಯಿಗಳ ಕಡಿತಕ್ಕೆ ಅಸ್ಕಿ ಗ್ರಾಮದ 8 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಕ್ಕಳ ದೇಹದ ವಿವಿಧ ಭಾಗಗಳಿಗೆ ಕಚ್ಚಿ ನಾಯಿಗಳು ಗಾಯ ಮಾಡಿವೆ. ಗಾಯಗೊಂಡ ಮಕ್ಕಳಿಗೆ ಚಿಕಿತ್ಸೆ ನೀಡಲು ಸ್ಥಳೀಯ ವೈದ್ಯರು ನಿರಾಕರಿಸಿದ್ದು ತಬ್ಬಿಬ್ಬಾಗಿರುವ ಪಾಲಕರು ಸಿಂಧಗಿ ತಾಲೂಕು ಆಸ್ಪತ್ರೆಗೆ ಹೋಗಲು ಯೋಚಿಸುತ್ತಿದ್ದಾರೆ.

    ಇಷ್ಟೆಲ್ಲಾ ಅವಾಂತರವಾದರೂ ಗ್ರಾಮ ಪಂಚಾಯ್ತಿ ಸದಸ್ಯರು ಮಾತ್ರ ಏನೂ ಕ್ರಮ ತೆಗೆದುಕೊಳ್ಳದೆ ಕಣ್ಣುಮುಚ್ಚಿ ಕುಳಿತಿದ್ದಾರೆ. ಇತ್ತ ಬೀದಿ ನಾಯಿಗಳ ಕಾಟದಿಂದ ಆತಂಕಕ್ಕೆ ಒಳಗಾಗಿರುವ ಪೋಷಕರು, ತಮ್ಮ ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಲು ಹೆದರುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಕ್ಕಳೊಡನೆ ನೀರಾಟವಾಡಿ ಸಂಭ್ರಮಿಸಿದ ಕುಕ್ಕೆಯ ಗಜರಾಜ- ವಿಡಿಯೋ ನೋಡಿ

    ಮಕ್ಕಳೊಡನೆ ನೀರಾಟವಾಡಿ ಸಂಭ್ರಮಿಸಿದ ಕುಕ್ಕೆಯ ಗಜರಾಜ- ವಿಡಿಯೋ ನೋಡಿ

    ಮಂಗಳೂರು: ವಾರ್ಷಿಕ ಚಂಪಾ ಷಷ್ಠಿ ಉತ್ಸವದ ಅಂಗವಾಗಿ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ನೀರಬಂಡಿ ಉತ್ಸವದಲ್ಲಿ ದೇಗುಲದ ಆನೆಯು ಮಕ್ಕಳೊಡನೆ ನೀರಾಟವಾಡಿ ಸಂಭ್ರಮಿಸಿತು.

    ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಚಂಪಾ ಷಷ್ಠಿ ಉತ್ಸವದ ಕೊನೆಯ ಆಚರಣೆಯ ಅಂಗವಾಗಿ ನೀರಬಂಡಿ ಉತ್ಸವ ಗುರುವಾರದಂದು ನಡೆಸಲಾಯಿತು. ನೀರಬಂಡಿ ಉತ್ಸವ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಗರ್ಭಗುಡಿಯ ಆವರಣದ ಅಂಗಳದಲ್ಲಿ ನೀರು ತುಂಬಿಸಿ, ದೇವರ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಈ ಉತ್ಸವದಲ್ಲಿ ದೇಗುಲದ ಆನೆ ಮಕ್ಕಳೊಡನೆ ನೀರಾಟವಾಡಿದ್ದು ಎಲ್ಲರ ಗಮನ ಸೆಳೆಯಿತು.

    ಗುರುವಾರ ರಾತ್ರಿ ಮಹಾಪೂಜೆಯ ಬಳಿಕ ಪಲ್ಲಕ್ಕಿ ಉತ್ಸವ ನೇರೆವೇರಿತು. ನಂತರ ನೀರಿನಲ್ಲಿ ನಡೆದ ಬಂಡಿ ರಥೋತ್ಸವ ಆಕರ್ಷಣೀಯವಾಗಿತ್ತು. ಅದರಲ್ಲೂ ದೇಗುಲದ ಆನೆ ಯಶಸ್ವಿ ಮಕ್ಕಳೊಂದಿಗೆ ನೀರಾಟವಾಡುತ್ತಾ ಸೊಂಡಿಲಿನಿಂದ ನೀರನ್ನು ಚಿಮ್ಮಿಸಿ ಸಂಭ್ರಮಿಸಿದೆ. ನೀರಾಟದಲ್ಲಿ ದೇಗುಲದ ಸಿಬ್ಬಂದಿ ಮತ್ತು ಮಕ್ಕಳು ಭಾಗವಹಿಸಿದ್ದು, ನೀರಬಂಡಿ ಉತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

    ಈ ವಿಶೇಷ ನೀರಬಂಡಿ ಉತ್ಸವದಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಉತ್ಸವ ಕೊನೆಯಾಗಿದ್ದು, ಇಂದಿನಿಂದ 15 ದಿನಗಳಿಂದ ಸ್ಥಗಿತಗೊಂಡಿದ್ದ ಸರ್ಪ ಸಂಸ್ಕಾರ ಸೇವೆಗಳು ಎಂದಿನಂತೆ ದೇಗುಲದಲ್ಲಿ ನಡೆಯಲಿದೆ.

    https://www.youtube.com/watch?v=I445kVV9My8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಂತಾ ಕ್ಲಾಸ್ ಆಗಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ರು ಅಮೆರಿಕಾ ಮಾಜಿ ಅಧ್ಯಕ್ಷ

    ಸಾಂತಾ ಕ್ಲಾಸ್ ಆಗಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ರು ಅಮೆರಿಕಾ ಮಾಜಿ ಅಧ್ಯಕ್ಷ

    ವಾಷಿಂಗ್ಟನ್: ಅಮೆರಿಕದಲ್ಲಿ ಕ್ರಿಸ್‍ಮಸ್ ತಯಾರಿ ಜೋರಾಗಿ ನಡೆಯುತ್ತಿದ್ದು, ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ್ ಸಾಂತಾ ಕ್ಲಾಸ್ ವೇಷ ಧರಿಸಿ, ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲರಿಗೂ ಆಶ್ಚರ್ಯ ಚಕಿತರನ್ನಾಗುವಂತೆ ಮಾಡಿದ್ದಾರೆ.

    ಬರಾಕ್ ಒಬಾಮಾ ತಮ್ಮ ಸರಳತೆಯಿಂದ ಹೆಸರಾದವರು. ಕ್ರಿಸ್‍ಮಸ್ ನಿಮಿತ್ತ ಅವರು ಸಾಂತಾ ಕ್ಲಾಸ್‍ನಂತೆ ಕೆಂಪು ಟೋಪಿ ಧರಿಸಿ, ಕೈಯಲ್ಲಿ ಉಡುಗೊರೆಗಳ ಜೋಳಿಗೆ ಹಿಡಿದು ವಾಷಿಂಗ್ಟನ್ ಡಿಸಿಯಲ್ಲಿರುವ ನ್ಯಾಷನಲ್ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ಓಡಾಡಿ, ಕಾಯಿಲೆಯಿಂದ ದಾಖಲಾಗಿರುವ ಮಕ್ಕಳಿಗೆ ಅಪ್ಪುಗೆ ನೀಡಿ, ಶುಭಾಶಯ ಕೋರಿ ಜೊತೆಗೆ ಉಡುಗೊರೆಗಳನ್ನು ನೀಡಿ ಸಂತಸ ಹಂಚಿಕೊಂಡಿದ್ದಾರೆ.

    ಒಬಾಮರವರ ಭೇಟಿಯಿಂದಾಗಿ ಆಸ್ಪತ್ರೆಯಲ್ಲಿದ್ದ ಮಕ್ಕಳ ಖುಷಿಯಿಂದ ಕೇಕೆ ಹಾಕುತ್ತಾ ಜೋರಾಗಿ ಕೂಗಿಕೊಂಡಿದ್ದಾರೆ. ಇವನ್ನೆಲ್ಲಾ ಅವರ ಸಹಾಯಕರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದರು. ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಈಗಾಗಲೇ 2.6 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಅಲ್ಲದೇ ಒಬಾಮಾರವರ ಕರುಣೆ ತುಂಬಿದ ಕಾರ್ಯಕ್ಕೆ ಮೆಚ್ಚುಗೆಯ ಸುರಿಮಳೆಯೇ ಬಂದಿದೆ.

    ನ್ಯಾಷನಲ್ ಆಸ್ಪತ್ರೆ ಕೂಡ ವಿಡಿಯೋವನ್ನು ಶೇರ್ ಮಾಡಿ, ಬರಾಕ್ ಒಬಾಮಾ ಅವರಿಗೆ ಕೃತಜ್ಞತೆ ಸಲ್ಲಿಸಿದೆ. ನಮ್ಮಲ್ಲಿನ ರೋಗಪೀಡಿತ ಮಕ್ಕಳಲ್ಲಿ ಉತ್ಸಾಹ ಮೂಡಿಸಿದ್ದೀರಿ. ನಿಮ್ಮೊಂದಿಗೆ ಕಳೆದ ಕ್ಷಣಗಳು ಅವರಿಗೆ ಸದಾ ಸ್ಮರಣೀಯ. ನಿಮ್ಮ ಉಡುಗೊರೆಗಳಿಂದ ತುಂಬ ಸಂತೋಷ ಹೊಂದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನು ಆಸ್ಪತ್ರೆಯಲ್ಲಿ ಮಾತನಾಡಿದ ಒಬಾಮಾ ಅವರು, ನನಗೆ ಇಲ್ಲಿನ ಮಕ್ಕಳು ಹಾಗೂ ಅವರ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಎರಡು ಹೆಣ್ಣು ಮಕ್ಕಳ ತಂದೆಯಾಗಿ ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಪಾಲಕರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿ ಜಗಳವಾಡಿದ್ದಕ್ಕೆ ಮಕ್ಕಳನ್ನೇ ಕೊಂದೇ ಬಿಟ್ಟ!

    ಪತ್ನಿ ಜಗಳವಾಡಿದ್ದಕ್ಕೆ ಮಕ್ಕಳನ್ನೇ ಕೊಂದೇ ಬಿಟ್ಟ!

    ಚೆನ್ನೈ: ಪತ್ನಿ ಜಗಳ ಮಾಡಿದಕ್ಕೆ ಇಬ್ಬರು ಮಕ್ಕಳನ್ನು ತಂದೆಯೇ ಉಸಿರುಗಟ್ಟಿಸಿ ಕೊಂದ ಮನಕಲಕುವ ಘಟನೆ ಗುರುವಾರ ರಾತ್ರಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ.

    ಹೇಮವರ್ಷಿಣಿ (15) ಹಾಗೂ ಶ್ರೀಜಾ (8) ಕೊಲೆಯಾದ ದುರ್ದೈವಿಗಳು. ಸಿಂಗನಲ್ಲೂರು ನಿವಾಸಿ ಪದ್ಮಾನಾಭನ್ ಎಂಬಾತ ಕೊಲೆ ಮಾಡಿರುವ ಪಾಪಿ ತಂದೆ. ಪದ್ಮಾನಾಭನ್ ಹಾಗೂ ಸೆಲ್ವಾರಾಣಿ ಮಧ್ಯೆ ಮನಸ್ತಾಪ ಉಂಟಾಗಿತ್ತು, ಆದರಿಂದ ಯಾವಾಗಲೂ ಅವರಿಬ್ಬರು ಜಗಳವಾಡುತ್ತಲೇ ಇದ್ದರು. ಆದರೆ ಗುರುವಾರ ರಾತ್ರಿಯ ಜಗಳ ತಾರಕಕ್ಕೇರಿದ ಪರಿಣಾಮ ಪತ್ನಿ ಮನೆ ಬಿಟ್ಟು ತನ್ನ ತವರಿಗೆ ಹೋಗಿದ್ದಾಳೆ. ಈ ವೇಳೆ ಪತ್ನಿ ಮೇಲಿನ ಕೋಪಕ್ಕೆ ಪದ್ಮಾನಾಭನ್ ತನ್ನಿಬ್ಬರು ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ಮರುದಿನ ಸೆಲ್ವಾರಾಣಿ ತನ್ನ ಮಕ್ಕಳು ತನ್ನೊಂಡನೆ ಕರೆದುಕೊಂಡು ಹೊಗಲು ಮನೆಗೆ ಬಂದಾಗ ಮಕ್ಕಳು ಸಾವನ್ನಪ್ಪಿದ್ದನ್ನು ಕಂಡು ಕಂಗಾಲಾಗಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದಾಗ ಮಕ್ಕಳನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂಬುದು ಬೆಳಕಿಗೆ ಬಂದಿದೆ.

    ಘಟನೆ ಕುರಿತು ಆರೋಪಿ ಮೇಲೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಸಿಂಗನಲ್ಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೀಟರ್ ಬಡ್ಡಿ ದಂಧೆ- ಮೂವರು ಮಕ್ಕಳ ಕತ್ತು ಕೊಯ್ದು ತಾಯಿ ಆತ್ಮಹತ್ಯೆಗೆ ಯತ್ನ!

    ಮೀಟರ್ ಬಡ್ಡಿ ದಂಧೆ- ಮೂವರು ಮಕ್ಕಳ ಕತ್ತು ಕೊಯ್ದು ತಾಯಿ ಆತ್ಮಹತ್ಯೆಗೆ ಯತ್ನ!

    ಚಿಕ್ಕಬಳ್ಳಾಪುರ: ಮೀಟರ್ ಬಡ್ಡಿದಂಧೆಕೋರರ ಕಾಟದಿಂದ ಬೇಸತ್ತ ತಾಯಿ, ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ತಾಯಿ ರಾಜಮ್ಮ, ತನ್ನ ಮಕ್ಕಳಾದ ಮನೋಜ್, ಅಮೃತ, ಭೂಮಿಕಾಳ ಕತ್ತನ್ನು ಬ್ಲೇಡ್ ನಿಂದ ಕೊಯ್ದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಸದ್ಯ ನಾಲ್ವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ರಾಜಮ್ಮ ತನ್ನ ಮೂವರು ಮಕ್ಕಳ ಕತ್ತನ್ನು ಬ್ಲೇಡ್ ನಿಂದ ಕೊಯ್ದು ಬಳಿಕ ಜಿರಳೆ ಔಷಧಿ ನುಂಗಿ, ತನ್ನ ಕತ್ತನ್ನು ಕೂಡ ಕೊಯ್ದುಕೊಳ್ಳುವ ಮೂಲಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕತ್ತು ಕೊಯ್ಯುವಾಗ ನೋವಿನಿಂದ ಚೀರಾಡುತ್ತಿರುವ ಮಕ್ಕಳ ಧ್ವನಿ ಅಕ್ಕ-ಪಕ್ಕದ ಮನೆಯವರಿಗೆ ಕೇಳಿಸಿದೆ. ಕೂಡಲೇ ನೆರೆಹೊರೆಯವರು ಸ್ಥಳಕ್ಕೆ ದೌಡಾಯಿಸಿ ಎಲ್ಲರನ್ನು ರಕ್ಷಿಸಿದ್ದಾರೆ. ಸದ್ಯ ತಾಯಿ ಸೇರಿ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಅಕ್ಕ-ಪಕ್ಕದ ಮನೆಯ ಮಹಿಳೆಯರು ಬಡ್ಡಿಗೆ ಹಣ ಕೊಡುತ್ತಿದ್ದರು. ಹೀಗಾಗಿ ನಾನು 1 ಲಕ್ಷದಷ್ಟು ಹಣವನ್ನು ಬಡ್ಡಿಗೆ ಪಡೆದುಕೊಂಡಿದ್ದೆ. ಆದ್ರೆ ಪತಿ ವೆಂಕಟೇಶ್ ಕುಡಿತದ ದಾಸನಾಗಿದ್ದರಿಂದ ಬಡ್ಡಿ ಕಟ್ಟಿಲ್ಲ. ಸದ್ಯ ನನಗೆ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಬಡ್ಡಿಯವರು ಪದೇ ಪದೇ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ. ಪರಿಣಾಮ ಮನನೊಂದು ಈ ಕೃತ್ಯ ಎಸಗಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆಯನ್ನು ಹೋಗಲಾಡಿಸಬೇಕು ಅಂತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪ್ರಯತ್ನ ಮಾಡುತ್ತಿದ್ದರೂ, ಕೆಲವೆಡೆ ದಂಧೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಇದೊಂದು ನೈಜ ಉದಾಹರಣೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷಪೂರಿತ ಬೀಜ ಸೇವಿಸಿ 20 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

    ವಿಷಪೂರಿತ ಬೀಜ ಸೇವಿಸಿ 20 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

    ಗದಗ: ಕಡಲೆ ಬೀಜ ಎಂದು ಭಾವಿಸಿ ವಿಷಪೂರಿತ ಅರಳೆಣ್ಣೆ (ಔಡಲ) ಬೀಜ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಗದಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಂಭಾಗದ ಜಮೀನಿನಲ್ಲಿ ರೈತರೊಬ್ಬರು ಅರಳೆಣ್ಣೆ ಬೀಜ ಒಣಗಿಸಲು ಹಾಕಿದ್ದರು. ಮಂಗಳವಾರ ಸಂಜೆ ಶಾಲೆ ಬಿಟ್ಟ ನಂತರ ಮನೆಗೆ ಹೊರಡುವ ಸಂದರ್ಭದಲ್ಲಿ ಅರಳೆಣ್ಣೆ ಬೀಜ ನೋಡಿದ ಮಕ್ಕಳು ಕಡಲೆ ಬೀಜವೆಂದು ಭಾವಿಸಿ ಸೇವಿಸಿದ್ದಾರೆ. ನಂತರ ಮಕ್ಕಳಿಗೆ ವಾಂತಿ, ಭೇದಿ, ತಲೆ ಸುತ್ತುವಿಕೆ ಪ್ರಾರಂಭವಾಗಿ ಅಸ್ವಸ್ಥಗೊಂಡಿದ್ದಾರೆ.

    ವಿಷಯ ತಿಳಿದ ತಕ್ಷಣ ಪಾಲಕರು ಆತಂಕಕ್ಕೆ ಒಳಗಾಗಿ ಅಸ್ವಸ್ಥಗೊಂಡ ಮಕ್ಕಳನ್ನು ಹತ್ತಿರದ ಮುಳಗುಂದ ಖಾಸಗಿ ಆಸ್ಪತ್ರೆ ಹಾಗೂ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ತೀವ್ರ ಅಸ್ವಸ್ಥಗೊಂಡ 19 ಮಕ್ಕಳು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನುಳಿದ ಐದು ಮಕ್ಕಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯ ಬಸ್ ದುರಂತ- ಇಬ್ಬರು ಹೆಣ್ಣುಮಕ್ಕಳ ಸಮಾಧಿ ಬಳಿ ಹೋಗಿ ತಂದೆ ಕಣ್ಣೀರು

    ಮಂಡ್ಯ ಬಸ್ ದುರಂತ- ಇಬ್ಬರು ಹೆಣ್ಣುಮಕ್ಕಳ ಸಮಾಧಿ ಬಳಿ ಹೋಗಿ ತಂದೆ ಕಣ್ಣೀರು

    ಮಂಡ್ಯ: ಬಸ್ ದುರಂತದಲ್ಲಿ ಮೃತಪಟ್ಟ ತನ್ನಿಬ್ಬರ ಹೆಣ್ಣು ಮಕ್ಕಳ ಸಮಾಧಿಯ ಬಳಿ ಹೋಗಿ ಕುಳಿತು ಮಕ್ಕಳಿಗಾಗಿ ಗೋಳಾಡುತ್ತಿರುವ ಮನಕಲಕುವ ಘಟನೆಯೊಂದು ಮಂಡ್ಯದಲ್ಲಿ ಕಂಡುಬಂದಿದೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೋಡಿ ಶೆಟ್ಟಿಪುರ ಗ್ರಾಮದ ದೇವರಾಜು ಮತ್ತು ಪವಿತ್ರ ದಂಪತಿಗೆ ಕಲ್ಪನ(6) ಮತ್ತು ಸೌಮ್ಯ(4) ಎಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದರು. ಅಜ್ಜಿಯ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಬಸ್ ದುರಂತ ಪ್ರಕರಣದಲ್ಲಿ ಅಜ್ಜಿಯೊಂದಿಗೆ ತಾವು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

    ಇತ್ತ ಇದ್ದ ಇಬ್ಬರೇ ಹೆಣ್ಣು ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಯ ಬದುಕು ನಿತ್ಯ ನರಕವಾಗಿ ಹೋಗಿದೆ. ದೇವರಾಜು ಬಾರದ ಲೋಕಕ್ಕೆ ಹೋದ ತನ್ನ ಮುದ್ದಾದ ಎರಡು ಹೆಣ್ಣು ಮಕ್ಕಳನ್ನು ಮಣ್ಣು ಮಾಡಿ ಅವರ ಸಮಾಧಿಯ ಮುಂದೆ ಕರುಳು ಹಿಂಡುವಂತೆ ರೋಧಿಸುತ್ತಿದ್ದಾರೆ.

    ನವೆಂಬರ್ 24 ರಂದು ಕೋಡಿ ಶೆಟ್ಟಿಪುರ ಗ್ರಾಮಕ್ಕೆ ಬಂದಿದ್ದ ಪವಿತ್ರ ಅವರ ತಾಯಿ 55 ವರ್ಷದ ಜಯಮ್ಮ ಮೊಮ್ಮಕ್ಕಳನ್ನು ನನ್ನ ಜೊತೆ ಊರಿಗೆ ಕಳುಹಿಸಿಕೊಡು, ಅವರು ಒಂದೆರೆಡು ದಿನ ಇದ್ದು ಬರುತ್ತಾರೆ ಎಂದು ಹೇಳಿ ಕರೆದುಕೊಂಡು ಹೋಗಿದ್ದರು. ಆದರೆ ಅವರು ಹೊರಟ ಖಾಸಗಿ ಬಸ್ ಪಾಂಡವಪುರ ತಾಲೂಕಿನ, ಕನಗನಮರಡಿ ಗ್ರಾಮದ ಬಳಿ ನಾಲೆಗೆ ಬಿದ್ದು 30 ಜನ ಜಲಸಮಾಧಿಯಾಗಿದರು. ಹಾಗೇ ಜಲಸಮಾಧಿಯಾದವರಲ್ಲಿ ಅಜ್ಜಿ ಮತ್ತು ಮೊಮ್ಮಕ್ಕಳೂ ಸೇರಿದ್ದು, ಇದ್ದ ಇಬ್ಬರೇ ಇಬ್ಬರು ಹೆಣ್ಣು ಮಕ್ಕಳನ್ನು ಕಳೆದುಕೊಂಡು ತಂದೆ-ತಾಯಿ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ.

    ಕಲ್ಪನ ಮತ್ತು ಸೌಮ್ಯ ಇಬ್ಬರೂ ಹೆಣ್ಣು ಮಕ್ಕಳು ತಂದೆ-ತಾಯಿಯಷ್ಟೇ ಅಲ್ಲದೇ ಸುತ್ತಮುತ್ತಲ ಮನೆಯವರ ಪ್ರೀತಿಯ ಮಕ್ಕಳಾಗಿದ್ದರು. ಅವರ ತುಂಟಾಟ, ಆಟೋಟವನ್ನು ನೆನೆದು ಇಡೀ ಊರಿನ ಜನರೇ ಅಯ್ಯೋ ಅಂತಿದ್ದಾರೆ. ಮೃತ ಮಕ್ಕಳ ತಂದೆಯಂತೂ ಪ್ರತಿ ದಿನವೂ ತನ್ನ ಮಕ್ಕಳ ಸಮಾಧಿಯ ಬಳಿ ತೆರಳಿ ಇಬ್ಬರ ಸಮಾಧಿಯ ಮಧ್ಯೆ ಕುಳಿತು ಕಣ್ಣೀರಿಡುತ್ತಿರುವ ದೃಶ್ಯ ಮನಕಲಕುವಂತಿದೆ.

    ಬಸ್ ದುರಂತದಲ್ಲಿ 30 ಜನ ಸಾವನ್ನಪ್ಪಿ ಐದು ದಿನ ಕಳೆದರೂ ತಮ್ಮವರನ್ನು ಕಳೆದುಕೊಂಡ ಕುಟುಂಬದಲ್ಲಿ ನೋವು ಮಾತ್ರ ಕಡಿಮೆಯಾಗಿಲ್ಲ. ತಮ್ಮದಲ್ಲದ ತಪ್ಪಿಗೆ ಪ್ರಾಣ ತೆತ್ತ 30 ಜನರ ಕುಟುಂಬದ ಸಂಕಟ ನೋಡಿ ಕ್ರೂರ ವಿಧಿಗೆ ಮಂಡ್ಯ ಜನ ಹಿಡಿಶಾಪ ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv