Tag: Childrens

  • ಫ್ಲೈಓವರ್ ಮೇಲೆ ಹೊತ್ತಿ ಉರಿದ ಕಾರು – ತಾಯಿ, ಇಬ್ಬರು ಮಕ್ಕಳು ಸಜೀವದಹನ

    ಫ್ಲೈಓವರ್ ಮೇಲೆ ಹೊತ್ತಿ ಉರಿದ ಕಾರು – ತಾಯಿ, ಇಬ್ಬರು ಮಕ್ಕಳು ಸಜೀವದಹನ

    ನವದೆಹಲಿ: ಚಲಿಸುತ್ತಿದ್ದ ಕಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ವಾಹನದ ಒಳಗಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ಪೂರ್ವ ದೆಹಲಿಯ ಅಕ್ಷರಧಾಮ ಫ್ಲೈಓವರ್ ನಲ್ಲಿ ನಡೆದಿದೆ.

    ಭಾನುವಾರ ಸಂಜೆ ಸುಮಾರು 6.30ರ ಹೊತ್ತಿಗೆ ಈ ದುರಂತ ಸಂಭವಿಸಿದೆ. ದೆಹಲಿಯ ನಿವಾಸಿಗಳಾದ ರಂಜನಾ ಮಿಶ್ರಾ, ರಿಧಿ ಹಾಗೂ ನಿಕ್ಕಿ ಮೃತ ದುರ್ದೈವಿಗಳು. ಭಾನುವಾರ ಸಂಜೆ ಅಕ್ಷರಧಾಮ ದೇವಾಲಯಕ್ಕೆ ರಂಜನಾ, ಪತಿ ಉಪೇಂದ್ರ ಮಿಶ್ರಾ ಹಾಗೂ ಅವರ ಮೂವರು ಮಕ್ಕಳು ಕಾರಿನಲ್ಲಿ ತೆರೆಳುತ್ತಿದ್ದರು. ಈ ವೇಳೆ ಅಕ್ಷರಧಾಮ ಫ್ಲೈಓವರ್ ಮೇಲೆ ಬರುತ್ತಿರುವಾಗ ಕಾರಿನಲ್ಲಿ ಗ್ಯಾಸ್ ಲೀಕ್ ಆದ ಕಾರಣ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕಾರು ಹೊತ್ತಿ ಉರಿದಿದೆ.

    ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರು ಚಲಾಯಿಸುತ್ತಿದ್ದ ಪತಿ, ತನ್ನ ಪಕ್ಕದಲ್ಲೇ ಕೂತಿದ್ದ ಮೂರನೇ ಮಗಳನ್ನು ಎತ್ತಿಕೊಂಡು ಹೊರಗಡೆ ಹಾರಿದ್ದಾರೆ. ಆದ್ರೆ ಪತ್ನಿ ಹಾಗೂ ಇನ್ನಿಬ್ಬರು ಮಕ್ಕಳು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಕಾರಣಕ್ಕೆ ಅವರನ್ನು ಕಾಪಾಡುವಷ್ಟರಲ್ಲಿ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಮೂವರು ಕೂಡ ಸಜೀವದಹನವಾಗಿದ್ದಾರೆ.

    ಕಾರಿಗೆ ಬೆಂಕಿ ಹೇಗೆ ತಗುಲಿತು ಅಂತ ನನಗೆ ಗೊತ್ತಿಲ್ಲ ಎಂದು ಶಾಕ್‍ನಲ್ಲಿ ಉಪೇಂದ್ರ ಮಿಶ್ರಾ ಹೇಳುತ್ತಿದ್ದಾರೆ. ಸದ್ಯ ಬೆಂಕಿ ಅನಾಹುತದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ಜಸ್ಮೀತ್ ಸಿಂಗ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಲಸಿಕೆ ಹಾಕಿಸಿಕೊಂಡ ಬಳಿಕ ಮಕ್ಕಳು ಅಸ್ವಸ್ಥ- 1 ಮಗು ಸಾವು, 26 ಮಕ್ಕಳು ಆಸ್ಪತ್ರೆಗೆ ದಾಖಲು

    ಲಸಿಕೆ ಹಾಕಿಸಿಕೊಂಡ ಬಳಿಕ ಮಕ್ಕಳು ಅಸ್ವಸ್ಥ- 1 ಮಗು ಸಾವು, 26 ಮಕ್ಕಳು ಆಸ್ಪತ್ರೆಗೆ ದಾಖಲು

    ಹೈದರಾಬಾದ್: ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದ ಬಳಿಕ ಒಂದು ಮಗು ಸಾವನ್ನಪ್ಪಿದ್ದು, ಸುಮಾರು 26 ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆಂಧ್ರ ಪ್ರದೇಶದ ನಾಮ್‍ಪಲ್ಲಿಯಲ್ಲಿ ನಡೆದಿದೆ.

    ಗುರುವಾರ ನಾಮ್‍ಪಲ್ಲಿಯಲ್ಲಿರುವ ಸಾರ್ವಜನಿಕರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳು ಲಸಿಕೆ ಹಾಕಿಸಿಕೊಂಡ ಬಳಿಕ ಅಸ್ವಸ್ಥರಾಗಿದ್ದಾರೆ. ಲಸಿಕೆ ಪಡೆದ ಮಕ್ಕಳಲ್ಲಿ 26 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಒಂದು ಗಂಡು ಮಗು ಮೃತಪಟ್ಟಿದೆ ಹಾಗೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಮಕ್ಕಳಿಗೆ ನೀಲೋಫರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಕ್ಕಳ ವಯಸ್ಸು ಹಾಗೂ ಇತರೇ ವಿವರಗಳನ್ನು ಮಾಧ್ಯಮಗಳಿಗೆ ನೀಡಲು ವೈದ್ಯರು ನಿರಾಕರಿಸಿದ್ದಾರೆ.

    ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿದ ಬಳಿಕ ಮಕ್ಕಳು ಅಸ್ವಸ್ಥರಾಗಿದ್ದಾರೆ. ಇದಕ್ಕೇ ಲಸಿಕೆ ನೀಡಿದ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ. ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಅಲ್ಲದೆ ನಾಮ್‍ಪಲ್ಲಿ ಆರೋಗ್ಯ ಕೇಂದ್ರದಲ್ಲಿ ಯಾವೆಲ್ಲ ಮಕ್ಕಳಿಗೆ ಲಸಿಕೆ ಹಾಕಲಾಗಿತ್ತೋ, ಎಲ್ಲಾ ಮಕ್ಕಳ ಪೋಷಕರಿಗೆ ಅವರನ್ನು ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆಂದು ಕರೆತರಲು ಸೂಚಿಸಲಾಗಿದೆ. ಅಲ್ಲದೆ ಘಟನೆ ನಡೆದ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಇದಕ್ಕೆ ಸಂಬಂಧ ಪಟ್ಟವರ ಮೇಲೂ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಜೃಂಭಣೆಯಿಂದ ನಡೀತು ಆವನಿ ಕ್ಷೇತ್ರದ ಪ್ರಸನ್ನ ರಾಮಲಿಂಗೇಶ್ವರ ರಥೋತ್ಸವ

    ವಿಜೃಂಭಣೆಯಿಂದ ನಡೀತು ಆವನಿ ಕ್ಷೇತ್ರದ ಪ್ರಸನ್ನ ರಾಮಲಿಂಗೇಶ್ವರ ರಥೋತ್ಸವ

    – ಹರಕೆ ಹೊತ್ತರೆ ಮಕ್ಕಳಾಗುತ್ತೆ ಅನ್ನೋ ನಂಬಿಕೆ
    – ಮಕ್ಕಳೊಂದಿಗೆ ಆಗಮಿಸಿ ಹರಕೆ ತೀರಿಸಿದ ದಂಪತಿ

    ಕೋಲಾರ: ಕರ್ನಾಟಕದ ರಾಮೇಶ್ವರ, ಆವಂತಿಕಾ ಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ಕೋಲಾರದ ಮುಳಬಾಗಿಲು ತಾಲೂಕಿನ ಸುಪ್ರಸಿದ್ಧ ಆವನಿ ಕ್ಷೇತ್ರದ ಪ್ರಸನ್ನ ರಾಮಲಿಂಗೇಶ್ವರ ರಥೋತ್ಸವ ಇಂದು ವಿಜೃಂಭಣೆಯಿಂದ ನಡೆಯಿತು.

    ರಥೋತ್ಸವದ ವಿಶೇಷತೆ ಎಂಬಂತೆ ಆವನಿ ಕ್ಷೇತ್ರ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಇದೇ ಸ್ಥಳದಲ್ಲಿ ಸೀತಾಮಾತೆ ಲವ-ಕುಶರಿಗೆ ಜನ್ಮ ನೀಡಿದ್ದರು ಎನ್ನುವುದಕ್ಕೆ ಇಲ್ಲಿ ಸಾಕಷ್ಟು ನಿದರ್ಶನಗಳಿವೆ. ಹಾಗಾಗಿ ಮಕ್ಕಳು ಇಲ್ಲದವರು, ಮಕ್ಕಳ ಮೇಲಿನ ಮಮತೆ ಇರುವವರು, ಈ ಬೆಟ್ಟದಲ್ಲಿರುವ ಧನಷ್ಕೋಟಿಯಲ್ಲಿ ಸ್ನಾನ ಮಾಡಿ, ದೇವಿ ಮುಂದೆ ಮಗ್ನರಾದಾಗ ಕನಸಿನಲ್ಲಿ ತೊಟ್ಟಿಲು, ಹೂವು, ಮಗು ಕಾಣಿಸಿಕೊಳ್ಳುತ್ತದೆ. ಆಗ ಮಕ್ಕಳಾಗುವುದು ಖಚಿತ ಎಂಬ ನಂಬಿಕೆ ಇಲ್ಲಿದೆ.

    ದೇವರ ಪ್ರಾರ್ಥನೆ ಮಾಡುತ್ತಾ ಇಲ್ಲಿರುವ ಹೊರಳುಗುಂಡಿಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹುರಳಿದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ಪ್ರಬಲವಾದ ನಂಬಿಕೆ ಇಲ್ಲಿದೆ. ಹಿರಿಯರು ಹೇಳುವ ಹಾಗೆ ಈ ಹಿಂದೆ ಇಂತಹ ಸೇವೆ ಮಾಡಿ ಮಕ್ಕಳಾಗಿರುವ ಸಾವಿರಾರು ನಿದರ್ಶನಗಳಿವೆ. ತಮ್ಮ ಮಕ್ಕಳ ಜೊತೆ ಬಂದು ಹರಕೆ ತೀರಿಸುವುದು ಇಲ್ಲಿಯ ವಿಶೇಷ. ಹಾಗಾಗಿ ಇಂದು ನೂರಾರು ಮಹಿಳೆಯರು ಮಕ್ಕಳಾಗೋ ಕನಸು ಹೊತ್ತು, ರಥೋತ್ಸವದಲ್ಲಿ ಭಾಗವಹಿಸಿ ಹರಕೆ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಸಿಯೂಟ ಸೇವಿಸಿದ್ದ 30 ಮಕ್ಕಳು ರಾತ್ರಿ ಅಸ್ವಸ್ಥ

    ಬಿಸಿಯೂಟ ಸೇವಿಸಿದ್ದ 30 ಮಕ್ಕಳು ರಾತ್ರಿ ಅಸ್ವಸ್ಥ

    ಬೆಳಗಾವಿ: ಬಿಸಿಯೂಟ ಸೇವಿಸಿದ್ದ ಮಕ್ಕಳು ರಾತ್ರಿ ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಡಿ ನಾಗಲಾಪುರದಲ್ಲಿ ನಡೆದಿದೆ.

    ನಾಗಲಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಮಕ್ಕಳು ಮಧ್ಯಾಹ್ನ ಬಿಸಿಯೂಟ ಸೇವಿಸಿದ್ದಾರೆ. ಶಾಲೆಯ ಅವಧಿ ಮುಗಿದ ನಂತರ ರಾತ್ರಿ ಮಕ್ಕಳಿಗೆ ವಾಂತಿ ಹಾಗೂ ಭೇದಿ ಆರಂಭವಾಗಿದೆ. ತಕ್ಷಣ ಕುಟುಂಬಸ್ಥರು ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ಬಿಸಿಯೂಟ ಸೇವಿಸಿ 30 ಮಕ್ಕಳು ಅಸ್ವಸ್ಥರಾಗಿದ್ದು, ಅವರನ್ನು ಹಿರೇಬಾಗೇವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಳೆದ ರಾತ್ರಿಯೇ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಶಾಸಕ ಮಹಾಂತೇಶ ದೊಡ್ಡಗೌಡರ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಡ್ಡ ಬಂದ ಬೈಕ್- ಗೇಟ್ ಮುರಿದು ಶಾಲೆಯೊಳಗೆ ನುಗ್ಗಿದ ಕಾರು

    ಅಡ್ಡ ಬಂದ ಬೈಕ್- ಗೇಟ್ ಮುರಿದು ಶಾಲೆಯೊಳಗೆ ನುಗ್ಗಿದ ಕಾರು

    – ತಪ್ಪಿತು ಭಾರೀ ದುರಂತ

    ಹಾಸನ: ಕಾರೊಂದು ಶಾಲೆಯ ಕಂಪೌಂಡ್ ಹಾಗೂ ಗೇಟ್ ಮುರಿದು ಒಳಗೆ ನುಗ್ಗಿದ್ದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ಹಾಸನದ ರವೀಂದ್ರ ನಗರದ ಎಂಜಿ ರಸ್ತೆಯಲ್ಲಿ ನಡೆದಿದೆ.

    ಎಂ.ಜಿ ರಸ್ತೆಯನ್ನು ಪ್ರವೇಶಿಸಿದ ಕಾರು ಮತ್ತೊಂದು ಕಡೆಗೆ ದಾಟುವಾಗ ಬೈಕ್ ಸವಾರನೊಬ್ಬ ಅಡ್ಡ ಬಂದಿದ್ದಾನೆ. ಈ ವೇಳೆ ಕಾರು ಚಾಲಕ ವಿಚಲಿತನಾಗಿ ಕಾರನ್ನು ವೇಗವಾಗಿ ಚಲಾಯಿಸಿದ್ದಾನೆ. ಪರಿಣಾಮ ಎದುರಿಗಿದ್ದ ಶಾಲೆಯ ಗೇಟ್‍ಗೆ ಡಿಕ್ಕಿ ಹೊಡೆದು ಕಾರು ಒಳಗೆ ನುಗ್ಗಿದೆ. ನಂತರ ಕಾರು ಚಾಲಕ ಕೂಡ ಸೇಫಾಗಿ ಹೊರಗೆ ಬಂದು ಅಬ್ಬಾ ಎಂದು ನಿಟ್ಟಿಸಿರುಬಿಟ್ಟಿದ್ದಾನೆ.

    ಈ ಘಟನೆ ನಡೆಯುವಾಗ ಅದೃಷ್ಟವಶಾತ್ ಶಾಲೆಯಲ್ಲಿ ಯಾವುದೇ ಮಕ್ಕಳು ಇರಲಿಲ್ಲ. ಶಿಕ್ಷಕರು ಕೂಡ ಶಾಲೆಯಿಂದ ಮನೆಯ ಕಡೆ ತೆರಳಿದ್ದರು. ಗುರುವಾರ ಸಂಜೆ 6.20ಕ್ಕೆ ಈ ಅಪಘಾತ ಸಂಭವಿಸಿದ್ದು, ಸದ್ಯ ಶಾಲೆಯ ಮಕ್ಕಳೆಲ್ಲ ಮನೆಗೆ ತೆರಳಿದ್ದರಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ.

    ಖಾಸಗಿ ಶಾಲೆಗೆ ಬಹುತೇಕ ಪ್ರತಿಷ್ಠಿತ ಕುಟುಂಬಗಳ ಮಕ್ಕಳು ಬರುತ್ತಾರೆ. ಎಲ್‍ಕೆಜಿ ಮತ್ತು ಯುಕೆಜಿ ಮಕ್ಕಳು ಸೇರಿದಂತೆ ಪುಟ್ಟ ಮಕ್ಕಳ ಶಾಲೆ ಇದಾಗಿದೆ. ಕ್ಷಣಾರ್ಧದಲ್ಲಿ ವೇಗವಾಗಿ ನುಗ್ಗಿ ಬಂದ ಕಾರಿನ ವೇಗಕ್ಕೆ ಶಾಲೆಯ ಕಾಂಪೌಂಡ್ ಮತ್ತು ಗೇಟ್ ಎಲ್ಲ ಮುರಿದು ಹೋಗಿದೆ.

    ಈ ಬಗ್ಗ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗು ಆಗದ್ದಕ್ಕೆ ಮನನೊಂದು ಗೃಹಿಣಿ ನೇಣಿಗೆ ಶರಣು!

    ಮಗು ಆಗದ್ದಕ್ಕೆ ಮನನೊಂದು ಗೃಹಿಣಿ ನೇಣಿಗೆ ಶರಣು!

    ಬೆಂಗಳೂರು: ಮಗು ಆಗಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಮನನೊಂದು ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಲಸೂರು ಬಳಿ ನಡೆದಿದೆ.

    ಸಂಗೀತಾ(23) ಮೃತ ಗೃಹಿಣಿ. ಹಲಸೂರು ಗೇಟ್ ಬಳಿ ಇರುವ ಸಂಗಲ್ ಪೇಟೆಯ ಮನೆಯಲ್ಲಿ ಬುಧವಾರ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಐದು ವರ್ಷಗಳ ಹಿಂದೆ ಕೊಲ್ಕತ್ತಾದಲ್ಲಿ ಸಂಗೀತ ನಬೀತ್ ಎಂಬಾತನನ್ನು ವಿವಾಹವಾಗಿದ್ದರು. ಬಳಿಕ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ದಂಪತಿ ವಾಸಿಸುತ್ತಿದ್ದರು. ವಿವಾಹವಾಗಿ ಐದು ವರ್ಷ ಕಳೆದರೂ ನಬೀತ್ ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಸಂಗೀತಾ ಬಹಳ ನೊಂದಿದ್ದರು.

    ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಮನೆಯ ಅಕ್ಕಪಕ್ಕದವರು ಹಾಗೂ ಸಂಬಂಧಿಕರು ಸಂಗೀತಾ ಅವರನ್ನು ಪ್ರಶ್ನೆ ಮಾಡುತ್ತಿದ್ದರು. ಮೊದಲೇ ಮಕ್ಕಳಿಲ್ಲದ ಕೊರಗಿನಲ್ಲಿದ್ದ ಸಂಗೀತಾ ನೆರೆಹೊರೆಯವರ ಪ್ರಶ್ನೆಗಳಿಂದ ಬೇಸತ್ತುಹೋಗಿದ್ದರು. ಹೀಗಾಗಿ ಪತಿ ಮನೆಯಲ್ಲಿರದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಘಟನೆ ಕುರಿತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿಯನ್ನು ವಿಚಾರಿಸಿದಾಗ ನಮ್ಮ ನಡುವೆ ಯಾವುದೇ ಗಲಾಟೆ ಇರಲಿಲ್ಲ. ಪತ್ನಿ ಮಗು ಆಗದೇ ವಿಚಾರಕ್ಕೆ ನೊಂದಿದ್ದಳು. ನೆರೆ ಹೊರೆಯವರು ಪದೇ ಪದೇ ಪ್ರಶ್ನಿಸುತ್ತಿದ್ದರಿಂದ ಸಂಗೀತಾ ನೊಂದು ಹೋಗಿದ್ದಳು. ಈ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಡ ಅರಳೆ ತಿಂದು 9 ಮಕ್ಕಳು ಅಸ್ವಸ್ಥ

    ಕಾಡ ಅರಳೆ ತಿಂದು 9 ಮಕ್ಕಳು ಅಸ್ವಸ್ಥ

    ಚಿಕ್ಕಬಳ್ಳಾಪುರ: ಕಾಡ ಅರಳೆ ತಿಂದು 9 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಶನಿವಾರ ಸಂಜೆ ಶಿಡ್ಲಘಟ್ಟ ತಾಲೂಕಿನ ಜೋಡಿ ಕಾಚಹಳ್ಳಿಯಲ್ಲಿ ನಡೆದಿದೆ.

    ಜೋಡಿ ಕಾಚಹಳ್ಳಿ ಗ್ರಾಮದ ಕಾರ್ತಿಕ್, ನವೀನ್ ಕುಮಾರ್, ನವ್ಯ, ರವಿತೇಜ, ದರ್ಶನ್, ಗಗನ್, ಮಾನಸ, ನಿತಿನ್, ಅಮೂಲ್ಯ ಅಸ್ವಸ್ಥರಾಗಿರುವ ಮಕ್ಕಳು. ಕಾಡ ಅರಳೆ ಕಾಯಿಯನ್ನು ಅರಳೆಣ್ಣೆ ತಯಾರಿಸಲು ಉಪಯೋಗಿಸುತ್ತಾರೆ. ಈ ಕಾಯಿಯನ್ನು ಮಕ್ಕಳು ತಿಂದು ಅಸ್ವಸ್ಥರಾಗಿದ್ದಾರೆ.

    ಶನಿವಾರ ಒಂಬತ್ತು ಮಕ್ಕಳು ಶಾಲೆ ಬಿಟ್ಟ ನಂತರ ಕೆರೆ ಕಡೆ ಹೋಗಿ ಆಟವಾಡುತ್ತಿದ್ದರು. ಈ ವೇಳೆ ಅಲ್ಲಿ ಮರದಲ್ಲಿ ಬೆಳೆದಿದ್ದ ಕಾಡ ಅರಳೆ ಕಾಯಿಯನ್ನು ತಿಂದಿದ್ದಾರೆ. ಬಳಿಕ ಮಕ್ಕಳಿಗೆ ವಾಂತಿ ಭೇದಿಯಾಗಿ ಅಸ್ವಸ್ಥರಾಗಿದ್ದಾರೆ.

    9 ಜನ ಮಕ್ಕಳು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀರಿನ ಸಮಸ್ಯೆಯಿಂದ ಶಾಲೆಗೆ ಗೈರಾಗುತ್ತಿದ್ದಾರೆ ವಿದ್ಯಾರ್ಥಿಗಳು..!

    ನೀರಿನ ಸಮಸ್ಯೆಯಿಂದ ಶಾಲೆಗೆ ಗೈರಾಗುತ್ತಿದ್ದಾರೆ ವಿದ್ಯಾರ್ಥಿಗಳು..!

    ಬೀದರ್: ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕು ಎಂದು ಸರ್ಕಾರ ಹಲವು ಕಸರತ್ತು ಮಾಡ್ತಿದೆ. ಆದ್ರೆ ಜಿಲ್ಲೆಯಲ್ಲಿ ಮಾತ್ರ ನೀರಿನ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಗೈರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಹೌದು, ಇದಕ್ಕೆ ಕಾರಣ ಕುಡಿಯುವ ನೀರು. ಬೇಸಿಗೆ ಇನ್ನು ದೂರ ಇರುವಾಗಲೇ ಗಡಿ ಜಿಲ್ಲೆಯಲ್ಲಿ ನೀರಿನ ಪಾಲಿಟಿಕ್ಸ್ ಶುರುವಾಗಿದೆ. ಬೀದರ್ ನಗರದಿಂದ 15 ಕಿಲೋ ಮೀಟರ್ ದೂರದಲ್ಲಿರುವ ಖಾಜಾಪೂರ್ ಅಲ್ಪಸಂಖ್ಯಾತ ಕಲ್ಯಾಣ ಸಚಿವ ರಹೀಂಖಾನ್ ಕ್ಷೇತ್ರವಾಗಿದ್ದು, ಇಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಒಂದು ಹನಿ ನೀರಿಗಾಗಿ ಮಹಿಳೆಯರು ಕೂಲಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಮಕ್ಕಳು ಶಾಲೆಗೆ ಚಕ್ಕರ್ ಹಾಕಬೇಕಾಗಿದೆ. ನೀರು ಕೊಡುತ್ತೆನೆ ಎಂದು ಚುನಾವಣೆಯ ಟೈಂನಲ್ಲಿ ಕಲರ್ ಕಲರ್ ಕಾಗೆ ಹಾರಿಸಿದ ಮಿನಿಸ್ಟರ್ ಮಾತ್ರ ಇಂದು ಬಿಂದಾಸ್ ಆಗಿದ್ದಾರೆ.

    ಚುನಾವಣೆಯ ಸಮಯದಲ್ಲಿ ನೀರು ಕೊಡ್ತೇನೆ, ಕ್ಷೇತ್ರದ ಸಮಸ್ಯೆಗಳನ್ನು ನಿವಾರಿಸುತ್ತೇನೆ ಅಂತ ರಹೀಂಖಾನ್ ಅವರು ಜನರಿಗೆ ಆಶ್ವಾಸನೆ ಕೊಟ್ಟಿದ್ದರು. ಆದ್ರೆ ಈಗ ಗೆದ್ದು ಮಂತ್ರಿಯಾದ ಬಳಿಕ ರಹೀಂಖಾನ್ ಅವರು ಮಾತ್ರ ಏನೂ ಟೆನ್ಶನ್ ಇಲ್ಲದೇ ಬಿಂದಾಸಾಗಿದ್ದಾರೆ. ಜನರು ನೀರಿಲ್ಲದೆ ಪರದಾಡುತ್ತಿದ್ದರೂ ಅವರ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ದಿನನಿತ್ಯ ಸಾಕಷ್ಟು ದೂರ ಹೋಗಿ ಕುಡಿಯುವ ನೀರನ್ನು ತರುವುದೇ ಈ ಭಾಗದ ಜನರಿಗೆ ಕೆಲಸವಾಗಿ ಬಿಟ್ಟಿದೆ. ಆದ್ದರಿಂದ ಈ ಭಾಗದಲ್ಲಿ ಮಕ್ಕಳು ಶಾಲೆಗೆ ಗೈರಾಗಿ ನೀರು ತರಲು ಕಿಲೋ ಮೀಟರ್‍ಗಟ್ಟಲೆ ಹೋಗುತ್ತಿದ್ದಾರೆ.

    ಪ್ರತಿವರ್ಷ ಸರ್ಕಾರ ಕುಡಿಯೋ ನೀರಿಗೆ ಅಂತಾನೆ ಕೋಟ್ಯಂತರ ರೂಪಾಯಿ ಅನುದಾನ ಕೊಡ್ತಿದೆ. ಆದ್ರೆ ಇಲ್ಲಿಯವರೆಗೆ ಈ ಭಾಗಕ್ಕೆ ಯಾವುದೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹೈರಾಣಾಗಿ ಹೋಗಿದ್ದಾರೆ. ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂಖಾನ್ ಗೆದ್ದು ಮಂತ್ರಿಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದ್ರೆ ಕ್ಷೇತ್ರದ ಜನರು ನೀರಿನ ಸಮಸ್ಯೆಗೆ ಪರಿಹಾರ ಕಾಣದಿರೋದು ಮಾತ್ರ ವಿಪರ್ಯಾಸ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಮಗೆ ದೇವರ ದರ್ಶನ ಆಗಿದ್ಯಾ – ಶ್ರೀಗಳು ನೀಡಿದ ಉತ್ತರಕ್ಕೆ ಅಚ್ಚರಿಗೊಂಡ ಡಾ. ರೇಲಾ

    ನಿಮಗೆ ದೇವರ ದರ್ಶನ ಆಗಿದ್ಯಾ – ಶ್ರೀಗಳು ನೀಡಿದ ಉತ್ತರಕ್ಕೆ ಅಚ್ಚರಿಗೊಂಡ ಡಾ. ರೇಲಾ

    ಬೆಂಗಳೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ ಡಾ. ರೇಲಾ ಸ್ವಾಮೀಜಿ ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ಅವರ ಜೊತೆ ನಡೆದ ಒಂದು ಸಂದರ್ಭವನ್ನು ಹಂಚಿಕೊಂಡಿದ್ದಾರೆ.

    ಸಿದ್ದಗಂಗಾ ಶ್ರೀಗಳು ಎರಡು ತಿಂಗಳ ಹಿಂದೆ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ನಡೆದ ಎರಡೇ ದಿನಗಳಲ್ಲಿ ಪವಾಡ ಸದೃಶ ರೀತಿಯಲ್ಲಿ ಶ್ರೀಗಳು ಚೇತರಿಸಿಕೊಂಡು ಐಸಿಯುನಲ್ಲೇ ಇಷ್ಟ ಲಿಂಗ ಪೂಜೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಡಾಕ್ಟರ್ ಮೊಹ್ಮದ್ ರೇಲಾ ಮತ್ತು ಶ್ರೀಗಳ ನಡುವೆ ಆಸಕ್ತಿಕರ ಸಂಭಾಷಣೆ ನಡೆದಿದೆ. ಶ್ರೀಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಡಾಕ್ಟರ್ ರೇಲಾ ಅವರು, ಅಂದು ಶ್ರೀಗಳೊಂದಿಗೆ ನಡೆದ ಸಂಭಾಷಣೆಯನ್ನು ತಮ್ಮ ಆಪ್ತರ ಜೊತೆ ಹಂಚಿಕೊಂಡಿದ್ದಾರೆ.

    ಡಾ.ರೇಲಾ ಹೇಳಿದ್ದು ಹೀಗೆ:
    “ಸ್ವಾಮೀಜಿ, ನೀವು ನಿತ್ಯ ಪೂಜೆ ಮಾಡುತ್ತೀರಿ ಅಲ್ಲವೇ? ನಿಮಗೆ ದೇವರ ದರ್ಶನ ಆಗಿದ್ಯಾ” ಎಂದು ನಾನು ಪ್ರಶ್ನೆ ಮಾಡಿದೆ. ಈ ವೇಳೆ ಸ್ವಾಮೀಜಿ ನಗುತ್ತಾ, “ಹೌದು. ನಾನು ದೇವರನ್ನು ನೋಡಿದ್ದೇನೆ” ಎಂದು ಉತ್ತರಿಸಿದರು. ಬಳಿಕ ನಾನು, “ಹಾಗಿದ್ದರೆ, ದೇವರು ಎಲ್ಲಿದ್ದಾರೆ ಹಾಗೂ ಹೇಗಿದ್ದಾರೆ ಎಂಬುದನ್ನು ನಮಗೂ ತೋರಿಸಿ” ಎಂದು ಕೇಳಿದೆ. ಅದಕ್ಕೆ ಸಿದ್ದಗಂಗಾ ಸ್ವಾಮೀಜಿ ಅವರು, “ಮತ್ತೊಮ್ಮೆ ನಗುತ್ತಾ ನನ್ನ ಮಠಕ್ಕೆ ಒಮ್ಮೆ ಬನ್ನಿ ನಾನು ನಿಮಗೆ 10 ಸಾವಿರ ದೇವರುಗಳನ್ನು ತೋರಿಸುತ್ತೇನೆ” ಎಂದು ಹೇಳಿದರು. ಈ ಉತ್ತರ ಕೇಳಿ ನಾನು ಆಶ್ಚರ್ಯಪಟ್ಟೆ. ಮತ್ತೆ ಮಾತನ್ನು ಮುಂದುವರಿಸಿದ ಶ್ರೀಗಳು, “ಹೌದು ನನಗೆ ಮಕ್ಕಳೇ ದೇವರು. ಅವರಲ್ಲಿ ನಾನು ದೇವರನ್ನು ಕಂಡಿದ್ದೇನೆ. ಮಠದ ಮಕ್ಕಳಿಗಾಗಿಯೇ ನಾನು ನಿತ್ಯ ಇಷ್ಟಲಿಂಗ ಪೂಜೆ ಮಾಡುತ್ತೇನೆ” ಎಂದು ಹೇಳಿದರು.

    ಶ್ರೀಗಳ ಈ ಮಾತುಗಳನ್ನು ಕೇಳಿ ಮೂಕವಿಸ್ಮಿತರಾಗಿ ಕ್ಷಣಕಾಲ ಡಾ. ರೇಲಾ ಅವರು ಮೌನಕ್ಕೆ ಜಾರಿದ್ದರಂತೆ. 111 ವರ್ಷದ ವಿಶ್ವ ಸಂತ, ಐಸಿಯುನಲ್ಲಿ ಇರುವಾಗಲೂ ಮಠದ ಮಕ್ಕಳಿಗಾಗಿ ಪೂಜೆ ಮಾಡುವುದು ಒಂದು ಮಹೋನ್ನತ ಸಂಗತಿಯೇ ಸರಿ ಎಂದು ರೇಲಾ ಅವರು ಹೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ತುಮಕೂರು: ಸಿದ್ದಗಂಗಾ ಶ್ರೀ ಶಿವೈಕ್ಯಗೊಂಡ ಹಿನ್ನಲೆಯಲ್ಲಿ ಮಠದ ಮಕ್ಕಳು ಶ್ರೀಗಳು ಇಲ್ಲದ ರಾತ್ರಿಯನ್ನು ಕಳೆದಿದ್ದಾರೆ. ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿರುವ ದೃಶ್ಯ ಮನಕಲುಕುವಂತೆ ಇತ್ತು.

    ಸೋಮವಾರ ಶ್ರೀಗಳು ಶಿವೈಕ್ಯ ವಿಚಾರ ತಿಳಿದು ಮಕ್ಕಳು ಭಾವುಕರಾಗಿದ್ದರು. ಸಿದ್ದಗಂಗಾ ಮಠದಲ್ಲೇ ಮಕ್ಕಳು ರಾತ್ರಿಯನ್ನು ಕಳೆದಿದ್ದಾರೆ. ಅಲ್ಲದೇ ಮಠದಲ್ಲೇ ಸಾವಿರಾರು ಭಕ್ತರು ಮಲಗಿದ್ದರು. ಬೇರೆ ಬೇರೆ ಜಿಲ್ಲೆಗಳಿಂದ ಶ್ರೀಗಳ ದರ್ಶನಕ್ಕೆ ಬಂದ ಭಕ್ತರು ಹೊಸ ಮಠದ ಆವರಣ ಸೇರಿದಂತೆ ಹಲವೆಡೆ ಮಲಗಿದ್ದರು.

    ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ಹಾಸ್ಟೆಲ್ ಆವರಣದೊಳಗೆ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಾರೆ. ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಶ್ರೀಗಳು ಮಠದ ಆವರಣದಲ್ಲಿ ಅನೇಕ ಬೀದಿನಾಯಿಗಳಿಗೆ ಖುದ್ದು ಆಹಾರ ನೀಡುತ್ತಿದ್ದರು. ಇಂದು ವಿದ್ಯಾರ್ಥಿಗಳ ಪ್ರಾರ್ಥನೆಯ ಸಮಯದಲ್ಲಿ ಶಾಲಾ ಅವರಣದಲ್ಲಿ ನಾಯಿಯೊಂದು ಮಲಗಿದ್ದ ದೃಶ್ಯ ಕಂಡುಬಂತು.

    ಪ್ರತಿದಿನ ಬೆಳಗ್ಗೆ ಶಿವಕುಮಾರ ಸ್ವಾಮಿಜಿಗಳೇ ಮಕ್ಕಳಿಗೆ ಪ್ರಾರ್ಥನೆ ಹೇಳಿಕೊಡುತ್ತಿದ್ದರು. ಆದರೆ ಈಗ ಅವರ ಅಗಲಿಕೆಯಿಂದಾಗಿ ಮಕ್ಕಳು ಗೋಸಲ ಸಿದ್ದೇಶ್ವರ ವೇದಿಕೆ ಮುಂದೆ ಪ್ರಾರ್ಥನೆ ಮಾಡುತ್ತಿದ್ದಾರೆ. ಶಾಲಾ ಮಕ್ಕಳು ಶ್ರೀಗಳನ್ನು ನೆನೆದು ಬೆಳಗಿನ ಪ್ರಾರ್ಥನೆ ಸಲ್ಲಿಸಿದ್ದಾರೆ. ಸೋಮವಾರ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ವಿಷಯ ತಿಳಿದು ಮಠದ ಮಕ್ಕಳು ಬಿಕ್ಕಳಿಸಿ ಸುಡುಬಿಸಿಲಿನಲ್ಲಿಯೇ ನಿಂತು ಅಳುತ್ತಿದ್ದರು.

    ಶ್ರೀಗಳು ತಮ್ಮ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ತಾವು ಮೃತಪಟ್ಟರೆ ಮಕ್ಕಳು ಮಧ್ಯಾಹ್ನದ ಭೋಜನವನ್ನು ಸ್ವೀಕರಿಸಿದ ಬಳಿಕವಷ್ಟೇ ಘೋಷಣೆ ಮಾಡಬೇಕು. ಯಾಕಂದ್ರೆ ಅವರು ಹಸಿವಿನಿಂದ ಇರುವುದು ತಮಗೆ ಇಷ್ಟವಿಲ್ಲ ಎಂದು ಮಠದ ಸಿಬ್ಬಂದಿ ಬಳಿ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದರು. ಹಾಗಾಗಿ ಸೋಮವಾರ ಶ್ರೀಗಳು ಬೆಳಗ್ಗೆ 11.44ಕ್ಕೆ ಶಿವೈಕ್ಯರಾದ್ರೂ ಮಠದ ಸಿಬ್ಬಂದಿ, ಮಕ್ಕಳು ಊಟ ಮಾಡಿದ ಮೇಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಅಂದರೆ ಸುಮಾರು ಮಧ್ಯಾಹ್ನ 1.56ಕ್ಕೆ ವೈದ್ಯರು ಶ್ರೀಗಳು ಸಾವಿನ ವಿಚಾರವನ್ನು ಘೋಷಣೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv