Tag: Childrens

  • ಒಂದೇ ನಿಮಿಷದಲ್ಲಿ 6 ಇಡ್ಲಿ ತಿಂದು ಮೊದಲ ಸ್ಥಾನ ಪಡೆದ 60 ವರ್ಷದ ಅಜ್ಜಿ

    ಒಂದೇ ನಿಮಿಷದಲ್ಲಿ 6 ಇಡ್ಲಿ ತಿಂದು ಮೊದಲ ಸ್ಥಾನ ಪಡೆದ 60 ವರ್ಷದ ಅಜ್ಜಿ

    -ಅತ್ತೆ-ಸೊಸೆಯರಿಂದ ಅಡುಗೆ, ಬ್ಯಾನರ್ ನೋಡಿ ಗರಂ ಆದ ಸೋಮಣ್ಣ

    ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇಂದು ದಸರಾದ ಎರಡನೇ ದಿನ ಅರಮನೆ ನಗರಿಯಲ್ಲಿ ವಿವಿಧ ಕಾರ್ಯಕ್ರಮಗಳು ಜನರಿಗೆ ಮಸ್ತ್ ಮನರಂಜನೆ ನೀಡಿತು.

    ಭಾನುವಾರ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾಗೆ ವಿದ್ಯುಕ್ತವಾದ ಚಾಲನೆ ಸಿಕ್ಕಿದೆ. ಇಂದು ಎರಡನೇ ದಿನದ ದಸರೆಯನ್ನು ಸ್ತ್ರೀಯರ ಕಲಾನೈಪುಣ್ಯತೆಯಾದ ರಂಗೋಲಿ ಸ್ಪರ್ಧೆಯಿಂದ ಆರಂಭಗೊಳಿಸಲಾಯಿತು. ಅಂಬಾ ವಿಲಾಸ ಅರಮನೆಯ ಮುಂಭಾಗ ಆಯೋಜಿಸಿದ್ದ, ದಸರಾ ರಂಗೋಲಿ ಸ್ಪರ್ಧೆಗೆ ಶಾಸಕ ಆರ್. ರಾಮದಾಸ್ ಚಾಲನೆ ನೀಡಿದರು. ಇಲ್ಲಿ ಮಹಿಳೆಯರು ಚಿತ್ತಾರಗಳನ್ನು ತುಂಬಿದ ರಂಗೋಲಿಗಳನ್ನು ಬಿಡಿಸುವ ಮೂಲಕ ಅರಮನೆಯ ಆವರಣವನ್ನು ವರ್ಣರಂಚಿತಗೊಳಿಸಿದರು.

    ಇನ್ನೊಂದೆಡೆ ಜಗನ್ಮೋಹನ ಅರಮನೆಯಲ್ಲಿ ಮಕ್ಕಳಿಗಾಗಿ ನಡೆಯುತ್ತಿರುವ ಚಿಣ್ಣರ ದಸರಾಗೆ ವಿ.ಸೋಮಣ್ಣ ಚಾಲನೆ ನೀಡಿದರು. ಮಹಿಳಾ ದಸರಾಗೆ ಬಂದರೆ ಅಲ್ಲಿ ಹಾಲಿ ಮಾಜಿ ಎಂದು ಬಿಜೆಪಿಯ ಮಹಿಳೆಯರು ಹಾಗೂ ಸಚಿವರು ಗರಂ ಆಗಿದರು. ಜೆಕೆ ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ದಸರಾದ ಬ್ಯಾನರ್ ಅಲ್ಲಿ ಮಾಜಿ ಸಚಿವೆ ಉಮಾಶ್ರೀ ಫೋಟೋ ಇದ್ದ ಕಾರಣ ಸಚಿವ ಸೋಮಣ್ಣ ಮತ್ತು ಬಿಜೆಪಿಯ ಮಹಿಳೆಯರು ಗರಂ ಆಗಿದರು.

    ಒಂದು ಕಡೆ ಮೈಸೂರಿನಲ್ಲಿ ದಸರಾ ಕಾರ್ಯಕ್ರಮಗಳ ಮೂಲಕ ಮನರಂಜನೆ ದೊರೆಯುತ್ತಿದ್ರೆ, ಇನ್ನೊಂದೆಡೆ ಆಹಾರ ಮೇಳದಲ್ಲಿ ನೋಡುಗರ ಬಾಯಲ್ಲಿ ನೀರೂರಿಸುವ ಹಾಗೂ ಬಿದ್ದು ನಕ್ಕು ನಲಿಯುವ ಸ್ಪರ್ಧೆಗಳು ನಡೆದವು. ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಅತ್ತೆ-ಸೊಸೆ ಜೋಡಿ ಅಡುಗೆ ಮಾಡುವ ಸ್ಪರ್ಧೆ ಕಮಾಲ್ ಮಾಡಿತು. ಅತ್ತೆ-ಸೊಸೆಯರಿಬ್ಬರು ಕೂಡಿಗೊಂಡು ಅಕ್ಕಿ ರೊಟ್ಟಿ ಮತ್ತು ಎಣಗಾಯಿ ಪಲ್ಯ ಮಾಡುತ್ತಿದ್ದು, ಎಲ್ಲರ ಬಾಯಲ್ಲಿ ನೀರೂರಿಸುವಂತೆ ಇತ್ತು.

    ಮಹಿಳೆಯರಿಗಾಗಿಯೇ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆ ನೋಡುಗರು ನಕ್ಕು ನಲಿಯುವುದರ ಜೊತೆಗೆ ಬಾಯಿಯ ಮೇಲೆ ಬೆರಳಟ್ಟುಕೊಳ್ಳುವ ಹಾಗೆ ಮಾಡಿತು. ಈ ಸ್ಪರ್ಧೆಯಲ್ಲಿ 60 ವರ್ಷದ ಅಜ್ಜಿ ಸರೋಜಮ್ಮ ಒಂದೇ ನಿಮಿಷದಲ್ಲಿ 6 ಇಡ್ಲಿ ತಿನ್ನುವ ಮೂಲಕ ಮೊದಲ ಸ್ಥಾನ ಪಡೆದುಕೊಂಡರು.

    ದಸರಾ ಮಹೋತ್ಸವ ಮೈಸೂರಿಗೆ ವಿಶೇಷ ಮೆರಗನ್ನು ನೀಡುತ್ತಿದ್ದು, ಹಗಲಿನ ವೇಳೆ ವಿವಿಧ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸುತ್ತಿದ್ರೆ, ರಾತ್ರಿಯ ವೇಳೆ ವಿದ್ಯುತ್ ಅಲಂಕಾರದ ಮೂಲಕ ಕೈಲಾಸವೇ ಧರೆಗಿಳಿದಂತೆ ಬಾಸವಾಗುತ್ತಿದೆ. ಈ ರಂಗು ಇನ್ನೂ ಎಂಟು ದಿನಗಳ ಕಾಲ ಮೈಸೂರನ್ನು ಗತಕಾಲಕ್ಕೆ ಕರೆದೊಯ್ಯಲಿದೆ.

  • ಹೆತ್ತವರನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಮಕ್ಕೆ ಕೇಂದ್ರ ಚಿಂತನೆ

    ಹೆತ್ತವರನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಮಕ್ಕೆ ಕೇಂದ್ರ ಚಿಂತನೆ

    ನವದೆಹಲಿ: ವಯಸ್ಸಾದ ಮೇಲೆ ವೃದ್ಧ ತಂದೆ, ತಾಯಿಯನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದೆ ಬೀದಿಯಲ್ಲಿ ಬಿಟ್ಟು, ನಿರ್ಲಕ್ಷಿಸಿ ಶೋಷಿಸುವ ಮಕ್ಕಳ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈಗಿರುವ ಕಾನೂನನ್ನು ಬಲಗೊಳಿಸಿ ಹೊಸ ಕರಡನ್ನು ರೂಪಿಸಿದೆ.

    2007ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹೆತ್ತವರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು. ಇದರಲ್ಲಿ ಹಿರಿಯರನ್ನು ಶೋಷಿಸುವವರು, ಉಪೇಕ್ಷಿಸುವವರಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಮೂರು ತಿಂಗಳಿನಿಂದ ಆರು ತಿಂಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಒಳಗೊಂಡಿತ್ತು.

    ಹೆತ್ತವರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳದೆ ನಿರ್ಲಕ್ಷಿಸುವ ಮಕ್ಕಳ ಮೇಲೆ ಕ್ರಮ ತೆಗೆದುಕೊಳ್ಳುವ ಕಾನೂನನ್ನು ಬಲಪಡಿಸಿ, ಹಿರಿಯರಿಗೆ ನೆಮ್ಮದಿಯನ್ನು ನೀಡುವುದು ಮೋದಿ ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ. ಆದ್ದರಿಂದ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ಈ ಆದ್ಯತೆಗೆ ಒತ್ತು ನೀಡಲು ನಿರ್ಧರಿಸಿದೆ.

    ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ತಿದ್ದುಪಡಿಗಳನ್ನು ಗಮನಿಸಿದ ಪ್ರಧಾನಿ ಕಚೇರಿ, ಅದರ ಕಾರ್ಯಸಾಧುತ್ವ ಮತ್ತು ಪರಿಣಾಮವನ್ನು ಹೆಚ್ಚಿಸಲು ಮೂರನೇ ಸಂಸ್ಥೆಯೊಂದರ ಸಹಾಯ ಪಡೆಯಲಿದ್ದು, ಆ ಸಂಸ್ಥೆಗೆ ಈ ಬಗ್ಗೆ ಪರಿಶೀಲನೆಗೆ ಒಪ್ಪಿಸಲು ಮುಂದಾಗಿದೆ. ಈ ಮೂಲಕ ಈಗಿರುವ ಕಾನೂನನ್ನು ಇನ್ನಷ್ಟು ಬಲಗೊಳಿಸುವ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಖುದ್ದು ಪ್ರಧಾನಿ ಕಚೇರಿಯೇ ಮಧ್ಯಪ್ರವೇಶಿಸಿದೆ. ಹಿಂದಿನ ಕಾನೂನಿನ ಪರಿಣಾಮ ಹೇಗಿದೆ? ಇದರಿಂದ ವೃದ್ಧ ಪೋಷಕರಿಗೆ ಯಾವ ರೀತಿ ಸಹಾಯವಾಗಿದೆ? ಹೀಗೆ ಹಲವು ವಿಚಾರಗಳ ಬಗ್ಗೆ ಮೂರನೇ ಸಂಸ್ಥೆಯಿಂದ ಪರಿಶೀಲನೆಗೆ ಸೂಚಿಸಲಿದೆ.

    ಇಲ್ಲಿಯವರೆಗೆ ಹೆತ್ತವರನ್ನು ನೋಡಿಕೊಳ್ಳುವ ಮಕ್ಕಳ ವ್ಯಾಖ್ಯಾನದಡಿ ಕೇವಲ ಪುತ್ರರು, ಪುತ್ರಿಯರು ಮತ್ತು ಮೊಮ್ಮಕ್ಕಳು ಬರುತ್ತಿದ್ದರು. ಆದರೆ ಮುಂದೆ ಅದನ್ನು ಮಕ್ಕಳು/ದತ್ತು ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು ಮತ್ತು ಅಪ್ರಾಪ್ತರಿಗೂ ವಿಸ್ತರಿಸಲಾಗಿದೆ.

    ಅಲ್ಲದೆ ಪೋಷಕರ ಜೀವನ ನಿರ್ವಹಣೆಗೆ ಗರಿಷ್ಠ ಮೊತ್ತವನ್ನು ತಿಂಗಳಿಗೆ 10,000 ರೂ. ಎಂದು ನಿಗದಿಪಡಿಸಲಾದೆ. ಆದರೆ ಈ ಮೊತ್ತ ಪ್ರಕರಣದಿಂದ ಪ್ರಕರಣಕ್ಕೆ ಬದಲಾಗಬಹುದು. ಯಾಕೆಂದರೆ ಒಳ್ಳೆಯ ಕೆಲಸದಲ್ಲಿದ್ದು, ಹೆಚ್ಚು ಸಂಬಳ ಗಳಿಸುವವರು ಹೆಚ್ಚು ಪಾವತಿ ಮಾಡಬೇಕಾಗುತ್ತದೆ.

    ಹಾಗೆಯೇ ಹಿರಿಯ ನಾಗರಿಕರ ಪಾಲನಾ ಕೇಂದ್ರಗಳು, ಡೇ-ಕೇರ್ ಸೆಂಟರ್ ಗಳು, ವೃದ್ಧಾಶ್ರಮಗಳ ಗುಣಮಟ್ಟವನ್ನು ಹೆಚ್ಚಳವನ್ನು ಕಡ್ಡಾಯ ಮಾಡಲಾಗಿದೆ. ಜೊತೆಗೆ ಕ್ಯಾಲಿಟಿ ಕಂಟ್ರೋಲ್ ಆಫ್ ಇಂಡಿಯಾ ರೀತಿಯ ಸಂಸ್ಥೆಗಳು ವೃದ್ಧಾಶ್ರಮಗಳು, ಡೇ-ಕೇರ್ ಸೆಂಟರ್‍ ಗಳ ಪರಿಶೀಲನೆ ನಡೆಸಿ, ಅವುಗಳಿಗೆ ರೇಟಿಂಗ್ ಕೊಟ್ಟು ಗುಣಮಟ್ಟ ತಿಳಿಯಲು ಮುಂದಾಗಿದೆ.

  • ಹೌಡಿ ಮೋದಿ ನಂತರ ಈಗ ಹೌಡಿ ಬೆಂಗಳೂರು

    ಹೌಡಿ ಮೋದಿ ನಂತರ ಈಗ ಹೌಡಿ ಬೆಂಗಳೂರು

    ಬೆಂಗಳೂರು: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ನಡೆಸಿಕೊಟ್ಟ ಹೌಡಿ ಮೋದಿ ಕಾರ್ಯಕ್ರಮ ವಿಶ್ವದ ಗಮನ ಸೆಳೆದಿತ್ತು. ಇದರಿಂದ ಪ್ರೇರಿತರಾದ ಬೆಂಗಳೂರಿನ ಶಾಲಾ ಮಕ್ಕಳು “ಹೌಡಿ ಬೆಂಗಳೂರು”, “ಹೌಡಿ ಹೆಚ್‍ಎನ್‍ಹಳ್ಳಿ” ಎಂಬ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದರು.

    ನಗರದ ಹೆಚ್‍ಎನ್ ಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳ ನೂರಕ್ಕೂ ಹೆಚ್ಚು ಚಿಕ್ಕ ಮಕ್ಕಳು ಹಾಗೂ ನಾಗರೀಕರು ರಸ್ತೆ ಸರಿಪಡಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ಮಕ್ಕಳು ಗುಂಡಿಗಳು ಬಿದ್ದ ರಸ್ತೆಯ ನೀರಿನಲ್ಲಿ ಕಾಗದದ ದೋಣಿಗಳ ಆಟವಾಡಿದರು.

    ಪ್ರತಿ ದಿನ ಶಾಲೆಗೆ ಹೋಗಬೇಕಾದರೆ ಗುಂಡಿ, ಧೂಳು, ಮೋರಿಯ ದುರ್ನಾತದಿಂದ ನಾವೆಲ್ಲಾ ಬೇಸತ್ತಿದ್ದೇವೆ. ನಮ್ಮ ಸ್ಕೂಲ್ ವ್ಯಾನ್ ಒಂದು ಕಿ.ಮೀ ರಸ್ತೆ ದಾಟಲು ಮುಕ್ಕಾಲು ಗಂಟೆ ಬೇಕಾಗುತ್ತೆ. ಹೀಗಾಗಿ ಗ್ರ್ಯಾಂಡ್ ಫಾದರ್ ಮೋದಿಯವರು ನಮ್ಮ ರೋಡ್ ಸರಿಪಡಿಸಬೇಕೆಂದು ಕೇಳಿಕೊಂಡರು.

    ಏನಿದು ಹೌಡಿ ಮೋದಿ ಕಾರ್ಯಕ್ರಮ?
    ನೈಋತ್ಯ ಅಮೆರಿಕದಲ್ಲಿ `ಹೌ ಡು ಯು ಡು'(ನೀವು ಹೇಗಿದ್ದೀರಿ) ಎಂದು ಕೇಳಲು ಸಂಕ್ಷಿಪ್ತವಾಗಿ `ಹೌಡಿ’ ಎಂದು ಕರೆಯುತ್ತಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಹ್ಯೂಸ್ಟನ್ ನಗರದಲ್ಲಿರುವ ಭಾರತೀಯರು `ಹೌಡಿ ಮೋದಿ’ ಹೆಸರನ್ನಿಟ್ಟಿದ್ದರು.

    ಸೆಪ್ಟೆಂಬರ್ 22 ಭಾನುವಾರದಂದು ಹ್ಯೂಸ್ಟನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು. ಅಲ್ಲದೆ, 50 ಸಾವಿರ ಭಾರತೀಯ ಅಮೆರಿಕನ್ನರ ದಾಖಲೆಯ ಜನಸಮೂಹವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.

  • ವಿಧವೆ ತಾಯಿಯ, ಪ್ರಿಯಕರನ ತಲೆ ಕೂದಲು ಕತ್ತರಿಸಿದ ಮಕ್ಕಳು

    ವಿಧವೆ ತಾಯಿಯ, ಪ್ರಿಯಕರನ ತಲೆ ಕೂದಲು ಕತ್ತರಿಸಿದ ಮಕ್ಕಳು

    -ಹಲ್ಲೆ ಮಾಡಿ ಮೂತ್ರ ಕುಡಿಸಲು ಯತ್ನ

    ಜೈಪುರ: ಮಕ್ಕಳೇ ತನ್ನ ವಿಧವೆ ತಾಯಿ ಹಾಗೂ ಆಕೆಯ ಪ್ರಿಯಕರನ ತಲೆ ಕೂದಲು ಕತ್ತರಿಸಿ ಹಲ್ಲೆ ಮಾಡಿದ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳವಾರ 45 ವರ್ಷದ ಮಹಿಳೆಯ ಇಬ್ಬರು ಮಕ್ಕಳು ಆಕೆಯ ಪ್ರಿಯಕರನಿಗೆ ಮೂತ್ರ ಕುಡಿಸಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಾವು ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಹುಡುಕಲು ಶುರು ಮಾಡಿದ್ದೇವು. ಮಂಗಳವಾರ ಮಹಿಳೆ ನಿಂಬಿ ಜೋಧ ಗ್ರಾಮದಲ್ಲಿ ಪತ್ತೆಯಾಗಿದ್ದಳು. ಮಹಿಳೆಗೆ 35 ವರ್ಷದ ಅವಿವಾಹಿತ ವ್ಯಕ್ತಿ ಜೊತೆ ಪ್ರೇಮವಿತ್ತು. ವ್ಯಕ್ತಿ ಮಹಿಳೆ ದೂರದ ಸಂಬಂಧಿಯಾಗಿದ್ದು, 10 ದಿನದ ಮೊದಲು ಇಬ್ಬರು ಮನೆಯಿಂದ ಓಡಿ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯ ಮಕ್ಕಳು ಹಾಗೂ ಕೆಲವು ಸಂಬಂಧಿಕರು ನಾಲ್ಕು ದಿನಗಳ ಹಿಂದೆ ನಿಂಬಿ ಜೋಧ ಗ್ರಾಮದಲ್ಲಿ ಆಕೆಯನ್ನು ಹುಡುಕಿ ಮೆನೆಗೆ ಕರೆದುಕೊಂಡು ಬಂದಿದ್ದರು. ಮನೆಗೆ ಕರೆದುಕೊಂಡು ಬಂದ ಬಳಿಕ ಆಕೆಯ ತಲೆ ಕೂದಲನ್ನು ಕತ್ತರಿಸಿ, ಹಲ್ಲೆ ಮಾಡಿದ್ದಾರೆ. ಅಲ್ಲದೆ ಆ ವ್ಯಕ್ತಿಗೆ ಮೂತ್ರ ಕುಡಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ನಿತೇಶ್ ಆರ್ಯ ತಿಳಿಸಿದ್ದಾರೆ.

    ಸದ್ಯ ಮಹಿಳೆಯ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆಕೆಯ ಮಕ್ಕಳನ್ನು ಬಂಧಿಸಿದ್ದಾರೆ.

  • 38ನೇ ವಯಸ್ಸಿನಲ್ಲಿ 20ನೇ ಬಾರಿ ಗರ್ಭಿಣಿಯಾದ 16 ಮಕ್ಕಳ ತಾಯಿ

    38ನೇ ವಯಸ್ಸಿನಲ್ಲಿ 20ನೇ ಬಾರಿ ಗರ್ಭಿಣಿಯಾದ 16 ಮಕ್ಕಳ ತಾಯಿ

    ಮುಂಬೈ: 16 ಮಕ್ಕಳ ತಾಯಿಯೊಬ್ಬರು ತಮ್ಮ 38ನೇ ವಯಸ್ಸಿನಲ್ಲಿ 20ನೇ ಬಾರಿ ಗರ್ಭಿಣಿ ಆಗಿರುವ ಅಪರೂಪದ ಸಂಗತಿಯೊಂದು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಲಂಕಾಬಾಯಿ ಖರತ್(38) 20ನೇ ಮಗುವಿಗೆ ಜನ್ಮ ನೀಡಲಿರುವ ಮಹಿಳೆ. ಲಂಕಾಬಾಯಿ ಅವರು ಈವರೆಗೂ 16 ಮಕ್ಕಳಿಗೆ ಜನ್ಮ ನೀಡಿದ್ದು, ಮೂರು ಅರ್ಬಾಷನ್ ಆಗಿದೆ. ಈಗ ಅವರು ಮತ್ತೆ 7 ತಿಂಗಳು ಗರ್ಭಿಣಿ ಆಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಅಲ್ಲದೆ ಪ್ರತಿ ಬಾರಿ ಅವರು ಒಂದು ಮಗುವಿಗೆ ಜನ್ಮ ನೀಡುತ್ತಿದ್ದರು. ಹೀಗೆ ಡೆಲಿವರಿ ಆದ ಕೆಲವೇ ದಿನಗಳಲ್ಲಿ ಅಥವಾ ಕೆಲವೇ ಗಂಟೆಗಳಲ್ಲಿ ಮಗು ಸಾವನ್ನಪ್ಪುತ್ತಿತ್ತು. ಹೀಗೆ 5 ಮಕ್ಕಳು ಮೃತಪಟ್ಟಿವೆ. ಈಗ ಅವರ 11 ಮಕ್ಕಳು ಬದುಕಿದ್ದಾರೆ. ಲಂಕಾಬಾಯಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಮೂರು ಬಾರಿ ಗರ್ಭಪಾತ ಆಗಿದೆ. 38 ವರ್ಷದಲ್ಲಿ ಅವರು 20ನೇ ಬಾರಿ ಗರ್ಭಿಣಿ ಆಗಿದ್ದಾರೆ ಎಂದು ಬೀಡ್ ಜಿಲ್ಲೆಯ ಸಿವಿಲ್ ಸರ್ಜನ್ ಡಾ. ಅಶೋಕ್ ತೋರಟ್ ತಿಳಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಮತ್ತೊಬ್ಬ ವೈದ್ಯರು, ಅವರು ಗರ್ಭಿಣಿ ಎಂಬ ವಿಷಯ ತಿಳಿದಾಗ ಮೊದಲು ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಗತ್ಯವಿರುವ ಎಲ್ಲ ಪರೀಕ್ಷೆ ನಡೆಸಿದ್ದೇವೆ. ಸದ್ಯ ತಾಯಿ ಹಾಗೂ ಮಗು ಕ್ಷೇಮವಾಗಿದ್ದಾರೆ. ಇದು ಆಸ್ಪತ್ರೆಯಲ್ಲಿ ಮಹಿಳೆಯ ಮೊದಲ ಹೆರಿಗೆ ಆಗಿದ್ದು, ಈ ಹಿಂದೆ ಎಲ್ಲ ಹೆರಿಗೆ ಮನೆಯಲ್ಲೇ ನಡೆದಿತ್ತು. ಆರೋಗ್ಯದ ಅಪಾಯವನ್ನು ತಪ್ಪಿಸಲು ಎರಡು ತಿಂಗಳಲ್ಲಿ ನಿಗದಿಯಾದ ಹೆರಿಗೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದೇವೆ ಎಂದು ಹೇಳಿದ್ದಾರೆ.

  • ಮಳೆಯಲ್ಲೇ ಕೂತು ಬಯಲಲ್ಲಿ ಪಾಠ ಕೇಳ್ಬೇಕು- ಗೋವಿಂದ ಕಾರಜೋಳ ಸ್ವಕ್ಷೇತ್ರದ ಕಥೆ

    ಮಳೆಯಲ್ಲೇ ಕೂತು ಬಯಲಲ್ಲಿ ಪಾಠ ಕೇಳ್ಬೇಕು- ಗೋವಿಂದ ಕಾರಜೋಳ ಸ್ವಕ್ಷೇತ್ರದ ಕಥೆ

    ಬಾಗಲಕೋಟೆ: ನೂತನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳಲಿಲ್ಲದೆ ಸಂತ್ರಸ್ತರು ಪರದಾಡುತ್ತಿದ್ದು, ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಇತ್ತ ಮುಧೋಳ ತಾಲೂಕಿನ ಒಂಟಗೋಡಿಯಲ್ಲಿ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಘಟಪ್ರಭಾ ನದಿ ಪ್ರವಾಹದದಿಂದಾಗಿ ಸರ್ಕಾರಿ ಶಾಲೆ ಮುಳುಗಡೆಯಾಗಿದ್ದು, ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಆದರೂ ಮಕ್ಕಳಿಗೆ ಪಾಠ ಮಾಡಲು ಬೇರೆ ಕಟ್ಟಡವಿಲ್ಲ. ಹೀಗಾಗಿ ಮಕ್ಕಳು ಬಯಲಲ್ಲೇ ಕುಳಿತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

    ಶಾಲೆಯ ಕಟ್ಟಡ ಬೀಳುವ ಭಯದಿಂದ ಸಿಬ್ಬಂದಿ ಈಗಾಗಲೇ ಕಟ್ಟಡಕ್ಕೆ ಬೀಗ ಜಡಿದಿದ್ದಾರೆ. ಹೀಗಾಗಿ ಮಳೆ ಬಂದರೆ ಶಾಲೆಯ ಹೊರಗಡೆ ತಲೆ ಮೇಲೆ ಟಾರ್ಪಲ್ ಹಾಕಿಕೊಂಡು ಪಾಠ ಕೇಳುವ ಅನಿವಾರ್ಯ ಮಕ್ಕಳದ್ದಾಗಿದೆ.

    ಶಾಲಾ ಕಟ್ಟಡ ನೀರಲ್ಲಿ ಮುಳುಗಿ ಹಾಳಾಗಿ ಹೋಗಿದ್ದರಿಂದ ಯಾವಾಗ ಬೀಳುತ್ತೋ ಅನ್ನೋ ಆತಂಕದಲ್ಲಿರುವ ಸ್ಥಳೀಯರು ಇಷ್ಟೆಲ್ಲ ಆದರೂ ಯಾವೊಬ್ಬ ನಾಯಕರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಸ್ಥಿತಿ ಆಲಿಸಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಕೂಡಲೇ ಮಕ್ಕಳಿಗೆ ಶಾಲಾ ಕಟ್ಟಡದ ವ್ಯವಸ್ಥೆ ಮಾಡಿಸುವಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

  • ಆಸ್ತಿಗಾಗಿ ತಂದೆಯನ್ನೇ ಹೊರಹಾಕಿದ ಮಕ್ಕಳು – ಕೊರೆಯುವ ಚಳಿ, ಮಳೆಯಲ್ಲಿ ವೃದ್ಧನ ಬದುಕು

    ಆಸ್ತಿಗಾಗಿ ತಂದೆಯನ್ನೇ ಹೊರಹಾಕಿದ ಮಕ್ಕಳು – ಕೊರೆಯುವ ಚಳಿ, ಮಳೆಯಲ್ಲಿ ವೃದ್ಧನ ಬದುಕು

    ಬೆಂಗಳೂರು: ವಯಸ್ಸಾದ ತಂದೆ-ತಾಯಿಯನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳುವ ಅದೆಷ್ಟೋ ಉದಾಹರಣೆಗಳಿವೆ. ಹೀಗೆ ಕೆಲವರು ಆಸ್ತಿಗಾಗಿ ಪೋಷಕರನ್ನೇ ಮನೆಯಿಂದ ಹೊರಹಾಕಿದ ಘಟನೆಗಳು ಕೂಡ ನಡೆದಿದೆ. ಹೀಗಿರುವಾಗ ಇಲ್ಲಿಬ್ಬರು ಪುತ್ರರು 70 ವರ್ಷದ ವೃದ್ಧ ತಂದೆಯನ್ನೇ ಮನೆಯಿಂದ ಹೊರಹಾಕಿದ್ದಾರೆ.

    ಲಗ್ಗೆರೆಯ ಕಾವೇರಿನಗರದ ನಿವಾಸಿಯಾದ ವೃದ್ಧ ನರಸಿಂಹಯ್ಯ ಈಗ ನಡುಬೀದಿಯಲ್ಲಿ ಮಲಗುವಂತ ಪರಿಸ್ಥಿತಿ ಬಂದಿದೆ. ನರಸಿಂಹಯ್ಯಗೆ ನಾಗರಾಜ್ ಮತ್ತು ರಾಘವೇಂದ್ರ ಎಂದು ಇಬ್ಬರು ಮಕ್ಕಳಿದ್ದಾರೆ. ನರಸಿಂಹಯ್ಯ ತನ್ನ ಬಳಿಯಿದ್ದ ಹಣದಿಂದ ಸ್ವಂತ ಮನೆ ಕಟ್ಟಿಸಿದ್ದು, ಅದರಲ್ಲೇ ವಾಸವಾಗಿದರು. ಯಾವಾಗ ತಂದೆಗೆ ಸ್ಟೋಕ್ ಆಯ್ತೋ ಅವರಿಗೆ ಹಿಂಸೆ ಕೊಟ್ಟು, ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

    ದಿನ ಕಳೆದಂತೆ ಇಬ್ಬರೂ ಮಕ್ಕಳು ತಂದೆಯನ್ನು ಬಿಟ್ಟು ಬೇರೆಡೆ ಮನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಂದೆ ಕಟ್ಟಿಸಿದ ಮನೆಯನ್ನು ಕೂಡ ಗೊತ್ತಾಗದಂತೆ ಬೇರೆಯವರಿಗೆ ಬಾಡಿಗೆಗೆ ಕೊಟ್ಟು, ಅದನ್ನೂ ಬೀಗ ಹಾಕಿ ಹೊರದಬ್ಬಿದ್ದಾರೆ. ತಿನ್ನಲು ಊಟವಿಲ್ಲದೆ ಮಲಗಲೂ ಜಾಗವಿಲ್ಲದೆ ಮನೆ ಮುಂದೆಯೇ ಒದ್ದಾಡುವಂಥಾಗಿದೆ. ಇದನ್ನು ನೋಡಿದ ಲಗ್ಗೆರೆಯ ಅಕ್ಕಪಕ್ಕ ನಿವಾಸಿಗಳು ಚಳಿಯಲ್ಲಿ ನಡುಗುತ್ತಿದ್ದ ವೃದ್ಧನಿಗೆ ಬ್ಲಾಂಕೆಟ್ ಹೊದಿಸಿ, ತಿಂಡಿ ನೀಡಿದ್ದಾರೆ.

    ಈ ನಡುವೆ ಮಕ್ಕಳ ಜೊತೆ ಹೋಗಿರುವ ಪತ್ನಿಗೆ ಪತಿ ಕೂಡ ಬೇಡವಾಗಿದೆ. ಮತ್ತೊಂದು ವಿಷಯ ಏನೆಂದರೆ ಇಬ್ಬರು ಮಕ್ಕಳು ಸ್ಟಾಫ್ಟ್ ವೇರ್ ಇಂಜಿನಿಯರ್ ಗಳಾಗಿದ್ದು, ಲಕ್ಷಾಂತರ ರೂ. ಸಂಬಳ ಕೂಡ ತೆಗೆದುಕೊಳ್ಳುತ್ತಾರೆ.

    ನಂದಿನಿ ಲೇಔಟ್ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಮಕ್ಕಳನ್ನು ಸಂಪರ್ಕ ಮಾಡಲು ಮುಂದಾಗಿದ್ದಾರೆ.

  • ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

    ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

    ರಾಯಚೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿಯೊಬ್ಬರು ತನ್ನ ಮೂವರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

    ನಸೀಮಾ(28), ಮಹ್ಮದ್ ಹನೀಫ್(5), ಐಯಾನ್(3) ಹಾಗೂ ರಿಗಾನ್(1) ಮೃತಪಟ್ಟ ತಾಯಿ-ಮಕ್ಕಳು. ದೇವದುರ್ಗ ತಾಲೂಕಿನ ಕೊದ್ದೊಡ್ಡಿ ಬಳಿ ನಾರಾಯಣಪುರ ಬಲದಂಡೆ ಮುಖ್ಯ ನಾಲೆಯಲ್ಲಿ ನಾಲ್ಕು ಜನರ ಶವ ಪತ್ತೆಯಾಗಿವೆ.

    ಐದು ವರ್ಷಗಳ ಹಿಂದೆ ದೇವದುರ್ಗ ತಾಲೂಕಿನ ದೇವತಗಲ್ ಗ್ರಾಮದ ನಸೀಮಾಳನ್ನು ಸಿರವಾರದ ಅತ್ತನೂರು ಗ್ರಾಮದ ಮಹಿಬೂಬ್ ಜೊತೆ ಮದುವೆ ಮಾಡಲಾಗಿತ್ತು. ನಸಿಮಾಳಿಗೆ ಮೂರು ಮಕ್ಕಳಾಗಿದ್ದು, ಪತಿಯ ಮನೆಯಲ್ಲಿ ದಿನನಿತ್ಯ ಕಿರುಕುಳ ನೀಡಲಾಗುತ್ತಿತ್ತು.

    ಕಿರುಕುಳದಿಂದ ಬೇಸತ್ತ ನಸೀಮಾ ಸಿರವಾರದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಅತ್ತನೂರು ಗ್ರಾಮದಿಂದ ತೆರಳಿ ಕಾಲುವೆಗೆ ತನ್ನ ಮೂವರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ ಮಾಡಿ ನೀನು ದರಿದ್ರದವಳು ಎಂದು ನಸೀಮಾಳನ್ನು ಪತಿ, ಅತ್ತೆ, ನಾದಿನಿ ಕಿರುಕುಳ ನೀಡುತ್ತಿದ್ದರು ಎಂದು ಪ್ರಕರಣ ದಾಖಲಾಗಿದೆ.

    ಈ ಬಗ್ಗೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಪತಿ ಮಹಿಬೂಬ, ಅತ್ತೆ ಹಮೀದಾ, ಮೈದುನಾ ಮುಸ್ತಫಾ ಮತ್ತು ನಾದಿನಿ ಮುಮ್ತಾಜ್ ರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ಕಮರಿಗೆ ಉರುಳಿದ ಶಾಲಾ ವಾಹನ – 8 ಮಕ್ಕಳು ದುರ್ಮರಣ

    ಕಮರಿಗೆ ಉರುಳಿದ ಶಾಲಾ ವಾಹನ – 8 ಮಕ್ಕಳು ದುರ್ಮರಣ

    ಡೆಹ್ರಾಡೂನ್: ಸುಮಾರು 18 ಮಕ್ಕಳು ಪ್ರಯಾಣಿಸುತ್ತಿದ್ದ ಶಾಲಾ ವಾಹನವೊಂದು ಆಳವಾದ ಕಮರಿಗೆ ಉರುಳಿ ಅಪಘಾತಕ್ಕೀಡಾಗಿದ್ದು, 8 ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

    ಡೆಹ್ರಾಡೂನ್‍ನ ತೆಹ್ರಿ ಗರ್ವಾಲ್‍ನ ಕಂಗ್ಸಾಲಿ ಗ್ರಾಮದ ಬಳಿ ಶಾಲಾ ವಾಹನ ಅಪಘಾತಕ್ಕೀಡಾಗಿದೆ. ಸುಮಾರು 18 ವಿದ್ಯಾರ್ಥಿಗಳು ಶಾಲಾ ವಾಹನದಲ್ಲಿ ಶಾಲೆಗೆ ತೆರೆಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆ ಪಕ್ಕದಲ್ಲಿದ್ದ ಕಮರಿಗೆ ಪಲ್ಟಿಯಾಗಿದೆ. ಈ ದುರಂತದಲ್ಲಿ 8 ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು, 10 ಮಕ್ಕಳು ಗಾಯಗೊಂಡಿದ್ದಾರೆ.

    ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‍ಡಿಆರ್‍ಎಫ್) ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಸದ್ಯ ಗಾಯಗೊಂಡ ವಿದ್ಯಾರ್ಥಿಗಳನ್ನು ವಾಹನದಿಂದ ಹೊರಗೆ ಕರೆತಂದು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

    ಘಟನೆಯಲ್ಲಿ 8 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ (ಗರ್ವಾಲ್) ಅಜಯ್ ರೌತೆಲಾ ಖಚಿತಪಡಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಮಳೆರಾಯ ನಮ್ಮೂರ ಮೇಲೂ ಕೃಪೆ ತೋರಪ್ಪ- ಪುಟಾಣಿಗಳ ಪ್ರಾರ್ಥನೆ

    ಮಳೆರಾಯ ನಮ್ಮೂರ ಮೇಲೂ ಕೃಪೆ ತೋರಪ್ಪ- ಪುಟಾಣಿಗಳ ಪ್ರಾರ್ಥನೆ

    ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಅತೀವೃಷ್ಟಿ ಉಂಟಾಗಿದ್ದರೆ ಇನ್ನೊಂದೆಡೆ ಅನಾವೃಷ್ಟಿ ಎದುರಾಗಿದೆ. ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಮಳೆಗೆ ಪ್ರವಾಹ ಉಂಟಾಗಿದೆ. ಆದರೆ ರಾಜ್ಯದ ಕೆಲವೆಡೆ ಯಾಕೋ ಮಳೆರಾಯನ ಸುಳಿವೇ ಇಲ್ಲದಂತಾಗಿದೆ. ಹೀಗಾಗಿ ಮಳೆರಾಯ ಕೃಪೆ ತೋರಲೆಂದು ನೆಲಮಂಗಲದಲ್ಲಿ ಪುಟಾಣಿ ಮಕ್ಕಳು ದೇವರ ಮೊರೆ ಹೋಗಿದ್ದಾರೆ.

    ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಬಯಲು ಸೀಮೆ ಪ್ರದೇಶದಲ್ಲಿ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಹಲವು ಭಾಗದಲ್ಲಿ ಮಳೆರಾಯನ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಒಂದೆಡೆ ಮಳೆಯಿಂದ ರೈತರ ಬೆಳೆಗಳು ಜಲಾವೃಗೊಂಡಿದ್ದರೆ, ಇನ್ನೊಂದೆಡೆ ಮಳೆಯಿಲ್ಲದೆ ಬೆಳೆಗಳು ನಾಶವಾಗುತ್ತಿದೆ ಎಂದು ರೈತರು ಕಂಗಾಲಾಗಿದ್ದಾರೆ. ಈ ನಡುವೆ ಮಳೆಗಾಗಿ ನೆಲಮಂಗಲದ ಕೆರೆಕತ್ತಿಗನೂರು ಗ್ರಾಮದಲ್ಲಿ ಮಕ್ಕಳ ಗುಂಪೊಂದು ಸೇರಿಕೊಂಡು ಮಳೆರಾಯನ ಮೂರ್ತಿಯನ್ನು ತಲೆಮೇಲೆ ಹೊತ್ತು, ಮನೆ ಮನೆಗೆ ತೆರಳಿ ಮಳೆರಾಯನಿಗೆ ಪೂಜೆ ಪುನಸ್ಕಾರ ಸಲ್ಲಿಸಿದ್ದಾರೆ.

    ಹಳೆಯ ಜಾನಪದ ಶೈಲಿಯಲ್ಲಿ ಮಕ್ಕಳು ಮಳೆರಾಯನಿಗೆ ತಮ್ಮ ಊರಿಗೆ ಬಾ ಎಂದು ಪ್ರಾರ್ಥಿಸುತ್ತಿದ್ದಾರೆ. ಪುಟಾಣಿಗಳ ಕಾರ್ಯಕ್ಕೆ ಗ್ರಾಮಸ್ಥರು ಸಾಥ್ ನೀಡಿದ್ದು, ಮನೆ ಮನೆಯಲ್ಲಿ ಮಳೆರಾಯ ಮೂರ್ತಿಗೆ ಕುಂಕುಮ, ಅರಿಶಿಣ ಹಚ್ಚಿ, ಅಗರಬತ್ತಿ ಬೆಳಗಿ, ಮಳೆರಾಯನ ಹೊತ್ತವರಿಗೆ ನೀರು ಹಾಕಿ ಮಳೆಗಾಗಿ ಪ್ರಾರ್ಥನೆ ಮಾಡಲಾಗುತ್ತಿದೆ.