Tag: child marriage

  • 40ರ ವಿವಾಹಿತನೊಡನೆ 16ರ ಅಪ್ರಾಪ್ತೆಯ ಮದುವೆ!

    40ರ ವಿವಾಹಿತನೊಡನೆ 16ರ ಅಪ್ರಾಪ್ತೆಯ ಮದುವೆ!

    ಮೈಸೂರು: 16 ವರ್ಷದ ಅಪ್ರಾಪ್ತ ಬಾಲಕಿಗೆ 40 ವರ್ಷದ ವಿವಾಹಿತ ವ್ಯಕ್ತಿಯ ಜೊತೆ ತಾಯಿಯೇ ಮದುವೆ ಮಾಡಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಕೆ.ಬೆಳತ್ತೂರು ಗ್ರಾಮದಲ್ಲಿ ನಡೆದಿದೆ.

    ನಾಗರಾಜಶೆಟ್ಟಿ ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ವ್ಯಕ್ತಿ. ಮದುವೆ ಒಂದು ವಾರದ ಹಿಂದೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಮೊಲದ ಪತ್ನಿ ಇರುವಾಗಲೇ ಎರಡನೇ ಮದುವೆಯಾಗಿದ್ದಾನೆ. ಅಪ್ರಾಪ್ತ ಬಾಲಕಿಯ ತಾಯಿ ಪತಿಗೆ ತಿಳಿಸದೇ ಮದುವೆ ಕಾರ್ಯ ನಡೆಸಿದ್ದಾಳೆ. ಆನಂತರ ಮದುವೆಯ ವಿಷಯ ತಿಳಿದ ಬಾಲಕಿಯ ತಂದೆ ಮಕ್ಕಳ ಮತ್ತು ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದಾರೆ.

    ಈ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಪೊಲೀಸರ ಸಹಾಯ ಪಡೆದು ಪ್ರಕರಣವನ್ನು ಬೇಧಿಸಿದ್ದಾರೆ. ಪ್ರಸ್ತುತ ಅಪಾಪ್ತ ಬಾಲಕಿಗೆ ಕೌನ್ಸಿಲಿಂಗ್ ನಡೆಸಲಾಗಿದ್ದು, ತಾಲೂಕು ಮಹಿಳಾ ಸಾಂತ್ವನ ಕೇಂದ್ರದ ವಶಕ್ಕೆ ಆಕೆಯನ್ನು ನೀಡಲಾಗಿದೆ. ಘಟನೆ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ ಪ್ರಕರಣ ದೂರು ದಾಖಲಾಗಿದೆ.

  • 10 ವರ್ಷದ ಬಾಲಕನ ಜೊತೆ 21 ವರ್ಷದ ಯುವತಿಯ ಮದ್ವೆ ಮಾಡಿಸಿದ ಅಣ್ಣ!

    10 ವರ್ಷದ ಬಾಲಕನ ಜೊತೆ 21 ವರ್ಷದ ಯುವತಿಯ ಮದ್ವೆ ಮಾಡಿಸಿದ ಅಣ್ಣ!

    ಚಂಡೀಗಢ: ಆಸ್ತಿಗಾಗಿ ಅಣ್ಣನೇ 21 ವರ್ಷದ ಸಹೋದರಿಯನ್ನು ತನ್ನ ಸೋದರ ಸಂಬಂಧಿ 10 ವರ್ಷದ ಬಾಲಕನ ಜೊತೆ ಮದುವೆ ಮಾಡಿಸಿರುವ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಈ ಘಟನೆ ಪಿಂಡ ಭಟಿಯಾನ್ ನಗರದ ಹೊರವಲಯದಲ್ಲಿರುವ ಭಾಂಗ್ಸಿಕಾ ಗ್ರಾಮದಲ್ಲಿ ನಡೆದಿದ್ದು, ಯುವತಿಯ ಅಣ್ಣ ಮೇಹ್‍ವಿಷ್ ಮುಂದೇ ನಿಂತು ತನ್ನ ಸಹೋದಸಂಬಂಧಿ ಅಲ್ಲಾ ದತ್ತಾ ಬಾಲಕನ ಜೊತೆ ಮದುವೆ ಮಾಡಿಸಿದ್ದಾನೆ. ಇದನ್ನೂ ಓದಿ: ಅತ್ತಿಗೆಯ ಜೊತೆ ಮದುವೆ- ಮನನೊಂದು ಆತ್ಮಹತ್ಯೆಗೆ ಶರಣಾದ 9ನೇ ಕ್ಲಾಸ್ ಬಾಲಕ

    ತಮ್ಮ ಕುಟುಂಬದ ಆಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಉದ್ದೇಶದಿಂದ ಬಲವಂತವಾಗಿ ಯುವತಿಗೆ ಮದುವೆ ಮಾಡಲಾಗಿದೆ. ಈ ಮದುವೆ ಕುರಿತು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ವಿವಾಹ ಕಾನೂನು ಬಾಹಿರವಾಗಿದ್ದು, ಇದನ್ನು ತಡೆಯವಲ್ಲಿ ಮಕ್ಕಳ ರಕ್ಷಣಾ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವಿಫಲವಾಗಿದ್ದಾರೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಪಂಜಾಬ್ ಕಾನೂನು ಪ್ರಕಾರ, 18 ವರ್ಷದೊಳಗೆ ಮದುವೆಯಾದರೆ ಅದನ್ನು ಬಾಲ್ಯವಿವಾಹ ಎಂದು ಪರಿಗಣಿಸಲಾಗುತ್ತದೆ. ಬಾಲ್ಯವಿವಾಹ ಮಾಡಿಸಿದ ಅಪರಾಧಕ್ಕೆ 6 ತಿಂಗಳು ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

  • ಅತ್ತಿಗೆಯ ಜೊತೆ ಮದುವೆ- ಮನನೊಂದು ಆತ್ಮಹತ್ಯೆಗೆ ಶರಣಾದ 9ನೇ ಕ್ಲಾಸ್ ಬಾಲಕ

    ಅತ್ತಿಗೆಯ ಜೊತೆ ಮದುವೆ- ಮನನೊಂದು ಆತ್ಮಹತ್ಯೆಗೆ ಶರಣಾದ 9ನೇ ಕ್ಲಾಸ್ ಬಾಲಕ

    ಪಾಟ್ನಾ: ಅಣ್ಣನ ಸಾವಿನ ಬಳಿಕ ಹಿರಿಯರ ಬಲವಂತದಿಂದ ಅತ್ತಿಗೆಯನ್ನು ಮದುವೆಯಾಗಿದ್ದ 15 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಗಯಾ ಜಿಲ್ಲೆಯ ವಿನೋಭಾನಗರದಲ್ಲಿ ನಡೆದಿದೆ.

    9ನೇ ತರಗತಿ ಓದುತ್ತಿದ್ದ ಮಹದೇವ್ ಕುಮಾರ್ ದಾಸ್ ಆತ್ಮಹತ್ಯೆಗೆ ಶರಣಾದ ಬಾಲಕ. ಮಹದೇವನಿಗೆ ತನಗಿಂತ 10 ವರ್ಷ ದೊಡ್ಡವರಾದ ಅತ್ತಿಗೆ ರೂಬಿ ದೇವಿಯೊಂದಿಗೆ ಮದುವೆ ಮಾಡಲಾಗಿತ್ತು. ಮಹದೇವ್ ಸಾವನ್ನಪ್ಪಿದ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಆದರೆ ನೆರೆಹೊರೆಯವರು ಹೇಳುವಂತೆ ಬಾಲಕನಿಗೆ ಬಲವಂತಾಗಿ ಮದುವೆ ಮಾಡಲಾಗಿತ್ತು. ಹಾಗಾಗಿ ಆತ ಪೋಷಕರ ವಿರುದ್ಧ ಹರಿಹಾಯ್ದಿದ್ದ. ಈ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹದೇವ್ ಅಣ್ಣ ಸಂತೋಷ್ ಕುಮಾರ್ ದಾಸ್, 2013ರಲ್ಲಿ ಎಲೆಕ್ಟ್ರಿಕ್ ಶಾಪ್ ನಲ್ಲಿ ಕೆಲಸ ಮಾಡುವಾಗ ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿದ್ದರು. ಮಹದೇವ್ ತನ್ನ ಅತ್ತಿಗೆಯನ್ನು ತಾಯಿಯ ರೂಪದಲ್ಲಿ ಕಾಣುತ್ತಿದ್ದನು. ಆದರೂ ಮಹದೇವ್ ಪೋಷಕರು ಬಲವಂತವಾಗಿ ಮದುವೆ ಮಾಡಿಸಿದ್ದರು.

    ಹಣಕ್ಕಾಗಿ ಬಲವಂತದ ಮದುವೆ: ಸಂತೋಷ್ ಕುಮಾರ್ ಸಾವನ್ನಪ್ಪಿದ ಬಳಿಕ 80 ಸಾವಿರ ರೂ. ಪರಿಹಾರ ಹಣ ಬಂದಿತ್ತು. ಈ ಹಣ ಸಂಪೂರ್ಣವಾಗಿ ತಮಗೆ ಸೇರಬೇಕೆಂದು ರೂಬಿ ದೇವಿ ಪೋಷಕರು ಗಲಾಟೆ ತೆಗೆದಿದ್ದರು. ಬಂದ ಪರಿಹಾರ ಯಾರಿಗೆ ಲಭಿಸಬೇಕು ಎಂಬುದರ ಬಗ್ಗೆ ಎರಡು ಕುಟುಂಬಗಳ ನಡುವೆ ಸಾಕಷ್ಟು ಗಲಾಟೆಯೂ ನಡೆದಿತ್ತು. ಕೊನೆಗೆ ರೂಬಿದೇವಿಯ ಮಾವ ಚಂದ್ರೇಶ್ವರ್ ದಾಸ್ ತನ್ನ ಕಿರಿಯ ಮಗನೊಂದಿಗೆ ಸೊಸೆಯ ಮದುವೆ ಮಾಡುತ್ತೇನೆ ಎಂದು ಹೇಳಿ ರೂಬಿದೇವಿ ಪೋಷಕರಿಗೆ ಕೇವಲ 27 ಸಾವಿರ ರೂ. ಹಣ ನೀಡಿದ್ದನು. ಹೀಗಾಗಿ ಮಹದೇವ ಪೋಷಕರು ಹಣದ ದುರಾಸೆಗಾಗಿ ಮಗನಿಗಿಂತ ದೊಡ್ಡವರಾದ ಮತ್ತು ತಾಯಿ ಸಮಾನಳಾದ ಅತ್ತಿಗೆಯನ್ನು ಆತನೊಂದಿಗೆ ವಿವಾಹ ಮಾಡಿಸಿದ್ದರು.

    ರೂಬಿದೇವಿಗೆ 5 ವರ್ಷದ ಮತ್ತು 7 ವರ್ಷದ ಇಬ್ಬರು ಮಕ್ಕಳಿದ್ದಾರೆ. ಬಾಲಕನಿಗೆ ಬಲವಂತವಾಗಿ ಮದುವೆ ಮಾಡಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾಗಾಗಿ ಪ್ರಕರಣ ಸಂಬಂಧ ಮಹದೇವ್ ಪೋಷಕರ ವಿರುದ್ಧ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಹಣಕ್ಕೆ ಹೆಣ್ಣು: ಗುಜ್ಜರ್ ಕೀ ಶಾದಿಯನ್ನು ನಿಲ್ಲಿಸಿದ ಅಧಿಕಾರಿಗಳು

    ಹಣಕ್ಕೆ ಹೆಣ್ಣು: ಗುಜ್ಜರ್ ಕೀ ಶಾದಿಯನ್ನು ನಿಲ್ಲಿಸಿದ ಅಧಿಕಾರಿಗಳು

    ಕಲಬುರಗಿ: ಜಿಲ್ಲೆಯಲ್ಲಿ ಮತ್ತೊಂದು ಗುಜ್ಜರ್ ಕೀ ಶಾದಿ ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳ ಸಹಾಯವಾಣಿ ಕೇಂದ್ರ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ತಂಡದವರು ಬಂದು ದಾಳಿ ನಡೆಸಿ ಮದುವೆಯನ್ನು ತಪ್ಪಿಸಿದ್ದಾರೆ.

    ಚಿತ್ತಾಪೂರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಗುಜರಾತ್ ಮೂಲದ ಜಾಮ್‍ನಗರ ನಿವಾಸಿ 22 ವರ್ಷದ ಜಿತೇಂದ್ರ ಜೊತೆ 16 ವರ್ಷದ ಬಾಲಕಿಯ ಮದುವೆಗೆ ಸಿದ್ಧತೆ ನಡೆದಿತ್ತು. ಈ ವಿಚಾರ ತಿಳಿದು ವಿವಿಧ ಇಲಾಖೆಯ ಅಧಿಕಾರಿಗಳು ಬಂದು ದಾಳಿ ನಡೆಸಿ ಶಾದಿಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಕುರಿತಾಗಿ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಈ ರೀತಿಯ ಮದುವೆಯಾಗುವುದು ಹೊಸದೆನಲ್ಲ ಈ ಹಿಂದೆಯೂ ನಡೆದಿತ್ತು. ಬಡ ಕುಟುಂಬಗಳಿಗೆ ಹಣದ ಆಸೆಯನ್ನು ತೋರಿಸಿ ಅವರ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮದುವೆಯಾಗುವ ದಂಧೆ ಜಿಲ್ಲೆಯಲ್ಲಿ ಕೆಲ ವರ್ಷಗಳಿಂದ ನಡೆದುಕೊಂಡು ಬಂದಿದೆ.

  • ಇಂದು ನಡೆಯಬೇಕಿದ್ದ ಯುವತಿಯ ಮದುವೆ 1 ವರ್ಷ ಪೋಸ್ಟ್ ಪೋನ್ ಆಯ್ತು!

    ಇಂದು ನಡೆಯಬೇಕಿದ್ದ ಯುವತಿಯ ಮದುವೆ 1 ವರ್ಷ ಪೋಸ್ಟ್ ಪೋನ್ ಆಯ್ತು!

    ಚಿಕ್ಕಬಳ್ಳಾಪುರ: 17 ವರ್ಷದ ವಧುವಿಗೆ 35 ವರ್ಷದ ವರನೊಂದಿಗೆ ನಡೆಯುತ್ತಿದ್ದ ಮದುವೆಯನ್ನು ಪೊಲೀಸರು ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಡೆದಿದ್ದಾರೆ.

    ಇಂದು ನಗರದ ಕೃಷ್ಣಾ ಟಾಕೀಸ್ ಬಳಿಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಈ ಬಾಲ್ಯ ವಿವಾಹ ನಡೆಯುತ್ತಿತ್ತು. ಶನಿವಾರ ರಾತ್ರಿ ಆರತಕ್ಷತೆ ಕಾರ್ಯಕ್ರಮವು ಸಹ ನಡೆದಿತ್ತು. ಬೆಂಗಳೂರು ನಗರದ ಸರ್ಜಾಪುರ ಮೂಲದ ವಧುವಿನೊಂದಿಗೆ ಚಿಕ್ಕಬಳ್ಳಾಪುರದ ವರನ ಮದುವೆ ನಡೆಸಲಾಗುತ್ತಿತ್ತು.

    ವಿಷಯ ತಿಳಿದು ಕಲ್ಯಾಣ ಮಂಟಪಕ್ಕೆ ಆಗಮಿಸಿದ ಪೊಲೀಸರು ಮತ್ತು ಅಧಿಕಾರಿಗಳು ಬಾಲ್ಯ ವಿವಾಹ ತಡೆದಿದ್ದಾರೆ. ಕೊನೆಗೆ ವಧು-ವರರ ಪೋಷಕರು ವಧುವಿಗೆ 18 ವರ್ಷ ತುಂಬಿದ ನಂತರ ಅದೇ ವರನ ಜೊತೆ ವಿವಾಹ ಮಾಡುವುದಾಗಿ ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟಿದ್ದಾರೆ.

     

  • ಹಸೆಮಣೆಯಿಂದ ಸೆರೆಮನೆಗೆ: ಬಾಲೆಗೆ ತಾಳಿ ಕಟ್ಟಿದ ಗಂಡ ಜೈಲು ಕಂಡ

    ಶಿವಮೊಗ್ಗ: ಮಧು ಮಗಳಿಗೆ ತಾಳಿ ಕಟ್ಟಿದ ಗಂಡು ಹಸೆಮಣೆಯಿಂದ ಸೀದಾ ಸೆರೆಮನೆ ಸೇರಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಶರಾವತಿ ನಗರದ ಯೋಗೀಶ್ ಪಾಂಡಿಯನ್ ಹೀಗೆ ಹಸೆಮಣೆಯಿಂದ ಸೆರೆಮನೆ ಕಂಡ ಮಧುಮಗ. ಅಪ್ರಾಪ್ತೆಗೆ ತಾಳಿ ಕಟ್ಟಿದ್ದೇ ಇವನು ಮಾಡಿದ ಅಪರಾಧ.

    ಶಿವಮೊಗ್ಗದ ಸೀತಮ್ಮ ಅನಂತಯ್ಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮದುವೆಯಲ್ಲಿ ವಧು ಇನ್ನೂ ಅಪ್ರಾಪ್ತೆ ಎಂಬ ಮಾಹಿತಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯೂ ಆಗಿರುವ ನ್ಯಾಯಾಧೀಶ ಸೋಮಶೇಖರ ಬಾದಾಮಿ ಅವರಿಗೆ ಬಂದಿತ್ತು. ತಕ್ಷಣವೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಸಮೇತ ಕಲ್ಯಾಣ ಮಂಟಪಕ್ಕೆ ಧಾವಿಸಿದರು. ಇವರು ಹೋದಾಗ ಮುಹೂರ್ತಕ್ಕೆ ಇನ್ನೂ ಅರ್ಧಗಂಟೆ ಬಾಕಿ ಇತ್ತು.

    ವಧೂ-ವರರ ಪೋಷಕರನ್ನು ಕರೆಸಿ ಅವರೊಂದಿಗೆ ಮಾತುಕತೆ ನಡೆಸಿದ ನ್ಯಾಯಾಧೀಶರು, ಈ ರೀತಿ ಬಾಲ್ಯ ವಿವಾಹ ಕಾನೂನು ಬಾಹಿರ ಎಂದು ತಿಳವಳಿಕೆ ಹೇಳಿದರು. ಇತ್ತ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲೇ ಅತ್ತ ಕೆಲ ಸಂಬಂಧಿಗಳು ವರನಿಗೆ ಉತ್ಸಾಹ ತುಂಬಿ, ತಾಳಿ ಕಟ್ಟು.. ಕಟ್ಟು ಎಂದರು. ಅವರ ಮಾತು ಕೇಳಿ ವರ ಮಹಾಶಯ ತಾಳಿ ಕಟ್ಟೇ ಬಿಟ್ಟ, ತಕ್ಷಣವೇ ಅಲ್ಲಿದ್ದವರು ಚಪ್ಪಾಳೆ ತಟ್ಟಿ, ಅಕ್ಷತೆ ಹಾಕಿದರು. ಈ ಎಲ್ಲಾ ಘಟನೆಗಳೂ ನ್ಯಾಯಾಧೀಶರ ಜೊತೆ ಹೋಗಿದ್ದ ತಂಡದಲ್ಲಿದ್ದ ಹಲವರ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದರು.

    ನ್ಯಾಯಾಧೀಶರು ತಕ್ಷಣವೇ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ತಾವೇ ಸ್ಥಳದಲ್ಲಿ ಹಾಜರಿದ್ದು, ವರನನ್ನು ಬಂಧಿಸುವಂತೆ ಆದೇಶಿಸಿದರು. ವರನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಆತನಿಗೆ ಸೆರೆಮನೆ ದಾರಿ ತೋರಿದರು. ವಧುವನ್ನು ಸುರಭಿ ಮಹಿಳಾ ಸಂರಕ್ಷಣಾ ಕೇಂದ್ರಕ್ಕೆ ಸೇರಿಸಲಾಯಿತು. ಮದುವೆ ಮಾಡಿಸಿ, ಓಡಿ ಹೋಗಲು ಯತ್ನಿಸಿದ ಪುರೋಹಿತ, ಕಲ್ಯಾಣ ಮಂಟಪದ ವ್ಯವಸ್ಥಾಪಕ ಹಾಗೂ ಸಂಬಂಧಿಗಳು ಸೇರಿ ಒಟ್ಟು ಹದಿನೈದು ಜನರನ್ನು ಬಂಧಿಸಲಾಗಿದೆ.

    ನಾಗರಿಕರ ಶ್ಲಾಘನೆ: ಬಾಲಕಿಯನ್ನು ಮದುವೆ ಆಗಲು ಹೋಗಿ ಜೈಲುಪಾಲಾದ ಈ ಘಟನೆ ಜಿಲ್ಲಾದ್ಯಂತ ತೀವ್ರ ಚರ್ಚಾಸ್ಪದ ವಿಷಯವಾಗಿದೆ. ನ್ಯಾಯಾಧೀಶರೊಬ್ಬರು ಬಾಲ್ಯ ವಿವಾಹ ತಡೆಗಟ್ಟಲು ತಾವೆ ಸ್ವತಃ ಕಲ್ಯಾಣ ಮಂಟಪಕ್ಕೆ ಹೋಗಿದ್ದು ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಹೀಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನ್ಯಾಯಾಧೀಶ ಸೋಮಶೇಖರ್ ಬಾದಾಮಿ ಅವರ ಕೆಲಸಕ್ಕೆ ನಾಗರಿಕರಿಂದ ಶ್ಲಾಘನೆ ದೊರಕಿದೆ.

    ಈಗ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಆದರೆ, ನಮ್ಮ ಉದ್ದೇಶ ಇದು ಆಗಿರಲಿಲ್ಲ. ಅವರಲ್ಲಿ ತಿಳವಳಿಕೆ ಮೂಡಿಸಿ, ಮದುವೆ ಮುಂದೂಡಲು ಯತ್ನಿಸಿದೆವು. ಆದರೆ, ಕಣ್ಣೆದುರೇ ಕಾನೂನು ಭಂಗ ಆಗಿದ್ದು ಸಹಿಸಲಾಗಲಿಲ್ಲ. ಈ ಪ್ರಕರಣಕ್ಕೆ ನಾನೇ ಮುಖ್ಯ ಸಾಕ್ಷಿಯಾಗಿ ನಿಲ್ಲುವನಿದ್ದೇನೆ ಎಂದು ನ್ಯಾಯಾಧೀಶ ಸೋಮಶೇಖರ ಬಾದಾಮಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಗ್ರಾಮೀಣ ಪ್ರದೇಶದವರಿಗೆ ಕಾನೂನಿನ ಅರಿವು ಇರೊಲ್ಲ ಎಂದು ಸಾಮಾನ್ಯವಾಗಿ ಹೇಳುತ್ತೇವೆ. ಆದರೆ ನಗರ ಪ್ರದೇಶದಲ್ಲೇ ಬಾಲ್ಯ ವಿವಾಹ ನಡೆದಿರುವುದು ವಿಷಾಧನೀಯ. ಈ ನಿಟ್ಟಿನಲ್ಲಿ ಇನ್ನಷ್ಟು ಜನಜಾಗೃತಿ ಅಗತ್ಯ ಎಂದು ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶ ಶಿವನಗೌಡ ನಾಯಿಕ್ ಅವರು ಹೇಳಿದ್ದಾರೆ.