Tag: child marriage

  • ಬಾಲ್ಯ ವಿವಾಹದ ಎಫೆಕ್ಟ್ – ಮೂವರು ಅಪ್ರಾಪ್ತೆಯರು ಗರ್ಭಿಣಿಯರು

    ಬಾಲ್ಯ ವಿವಾಹದ ಎಫೆಕ್ಟ್ – ಮೂವರು ಅಪ್ರಾಪ್ತೆಯರು ಗರ್ಭಿಣಿಯರು

    ರಾಮನಗರ: ರಾಜ್ಯ ಸರ್ಕಾರ ಬಾಲ್ಯ ವಿವಾಹಗಳನ್ನು ತಡೆಯಬೇಕೆಂದು ಹಲವು ರೀತಿಯಲ್ಲಿ ಯೋಜನೆಗಳನ್ನು ಕೈಗೊಂಡಿದೆ. ಆದರೆ ಚನ್ನಪಟ್ಟಣ ತಾಲೂಕಿನ ಇರುಳಿಗರ ಕಾಲೋನಿಯಲ್ಲಿ ಯಾವ ಕಾನೂನುಗಳು ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಈ ಗ್ರಾಮದ ಮಕ್ಕಳು ಬಾಲ್ಯದಲ್ಲೇ ಮದುವೆಯಾಗಿ ಗರ್ಭಿಣಿಯಾಗ್ತಿದ್ದು, ಹುಟ್ಟುವ ಮಕ್ಕಳು ಕೂಡ ಅಪೌಷ್ಟಿಕತೆಯಿಂದಾಗಿ ಬಳಲಿ ಅನಾರೋಗ್ಯಕ್ಕೆ ತುತ್ತಾಗುತಿದ್ರು ಜನರಲ್ಲಿ ಅರಿವು ಮಾತ್ರ ಮೂಡಿಲ್ಲ.

    ಈ ಗ್ರಾಮದಲ್ಲಿ 50 ಕುಟುಂಬಗಳು ವಾಸವಾಗಿದ್ದು, ಒಟ್ಟು ಜನಸಂಖ್ಯೆ 381 ಆಗಿದ್ರೆ, ಇದರಲ್ಲಿ 120 ಮಕ್ಕಳೇ ಇದ್ದಾರೆ. 6 ವರ್ಷದೊಳಗಿನ ಮಕ್ಕಳು 42 ಜನ, 1 ರಿಂದ 5ನೇ ತರಗತಿ ವ್ಯಾಸಂಗ ಮಾಡುವ ಮಕ್ಕಳು 45 ಜನ, 6 ರಿಂದ 10ನೇ ತರಗತಿ ವ್ಯಾಸಂಗ ಮಾಡುವ ಮಕ್ಕಳು 35 ಜನ ಸದ್ಯ ಈ ಗ್ರಾಮದಲ್ಲಿದ್ದಾರೆ. ಆದರೆ ಈ ಗ್ರಾಮದಲ್ಲಿ ಸುಮಾರು ವರ್ಷಗಳಿಂದಲೂ ಕೂಡ ಬಾಲ್ಯ ವಿವಾಹ ಎಂಬ ಪಿಡುಗು ಎಗ್ಗಿಲ್ಲದೇ ನಡೆದುಕೊಂಡು ಬಂದಿದೆ.

    ಕಳೆದ 3 ತಿಂಗಳ ಹಿಂದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 3 ಜನ ಹೆಣ್ಣುಮಕ್ಕಳು ಗರ್ಭಿಣಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಜಿಲ್ಲಾ ರಕ್ಷಣಾ ಘಟಕದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟು ಸಂಬಂಧಪಟ್ಟ ಕುಟುಂಬಸ್ಥರಿಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

    ನಾಲ್ಕು ತಿಂಗಳ ಹಿಂದೆ ಗ್ರಾಮದಲ್ಲಿ ನಾಲ್ವರ ಬಾಲ್ಯ ವಿವಾಹ ನಡೆದಿದ್ದು, ಮೂವರು ಅಪ್ರಾಪ್ತೆಯರು ಗರ್ಭಿಣಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣ ಘಟಕದ ಅಧಿಕಾರಿಗಳು ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪ್ರಾಪ್ತೆಯರು ಗರ್ಭಿಣಿಯರಾಗಿರುವ ವಿಚಾರವಾಗಿ ಪೋಕ್ಸೋ ಅಡಿಯಲ್ಲಿ ದೂರು ದಾಖಲಾಗಿದ್ರೆ, ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ್ದಕ್ಕೆ ಹೆದರಿ ಓರ್ವ ಅಪ್ರಾಪ್ತೆ ಗರ್ಭಿಣಿ ಹಾಗೂ ಆಕೆಯ ಪತಿ ಇಬ್ಬರೂ ಕೂಡ ನಾಪತ್ತೆಯಾಗಿದ್ದಾರೆ.

    ಈ ಗ್ರಾಮದಲ್ಲಿನ ಜನ ಸರ್ಕಾರದ ಯೋಜನೆಗಳಾದ ಮಾತೃಶ್ರೀ ಯೋಜನೆ, ತಾಯಿ ಕಾರ್ಡ್, ಭಾಗ್ಯಲಕ್ಷ್ಮಿ ಬಾಂಡ್ ಸೇರಿದಂತೆ ಆಧಾರ್ ಕಾರ್ಡ್, ಪಡಿತರ ಯಾವುದೊಂದು ಸೌಲಭ್ಯಗಳನ್ನು ಸಹ ಬಹುತೇಕ ಮಂದಿ ಪಡೆದುಕೊಂಡಿಲ್ಲ. ಈ ಯೋಜನೆಗಳ ಪಲಾನುಭವಿಗಳಾದ್ರೆ ಬಾಲ್ಯ ವಿವಾಹ ಹೊರ ಬೀಳುತ್ತೆ ಅಂತಲೇ ದೂರ ಉಳಿದಿದ್ದಾರೆ ಎನ್ನಲಾಗಿದೆ.

    ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಡಳಿತ ಬಾಲ್ಯ ವಿವಾಹ ತಡೆಗೆ ಮುಂದಾಗಿದ್ದು ಇರುಳಿಗರ ಕಾಲೋನಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಅಲ್ಲದೇ ಜನರಲ್ಲಿ ಮೂಢನಂಬಿಕೆಯನ್ನು ಹೊರ ಹಾಕಿ ಉತ್ತಮ ಜೀವನ ನಡೆಸಲು ಅಗತ್ಯ ರೀತಿಯ ಅರಿವು ಹಾಗೂ ಮನಪರಿವರ್ತನೆಗೆ ಮುಂದಾಗಿದೆ.

  • ಪ್ಲೀಸ್.. ನನ್ನ ಮದ್ವೆ ನಿಲ್ಲಿಸಿ- ಸಿಎಂ ಮನೆ ಬಾಗಿಲು ತಟ್ಟಿದ ಬಾಲಕಿ

    ಪ್ಲೀಸ್.. ನನ್ನ ಮದ್ವೆ ನಿಲ್ಲಿಸಿ- ಸಿಎಂ ಮನೆ ಬಾಗಿಲು ತಟ್ಟಿದ ಬಾಲಕಿ

    ಜೈಪುರ: 15 ವರ್ಷದ ಬಾಲಕಿ ತನ್ನ ಮದುವೆ ನಿಲ್ಲಿಸುವಂತೆ ಸಿಎಂ ಅಶೋಕ್ ಗೆಹ್ಲೋಟ್ ಅವರ ನಿವಾಸ ಬಾಗಿಲು ತಟ್ಟಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜಸ್ತಾನದ ಟೊಂಕ್ ಜಿಲ್ಲೆಯ ನಿವಾಸಿಯಾಗಿರುವ ಬಾಲಕಿ ಸೋಮವಾರ ನಡೆದ ಮುಖ್ಯಮಂತ್ರಿಗಳ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಈ ವೇಳೆ ತನ್ನ ಮದುವೆ ನಿಲ್ಲಿಸುವಂತೆ ಸಿಎಂ ಅವರ ಎದುರು ಮನವಿ ಮಾಡಿದ್ದಾಳೆ.

    ಬಾಲಕಿ ತನ್ನ ಚಿಕ್ಕಪ್ಪನೊಂದಿಗೆ ಮುಖ್ಯಮಂತ್ರಿಗಳ ನಿವಾಸದ ಬಳಿ ಆಗಮಿಸಿದ್ದು, ಈ ವೇಳೆ ತನಗೆ ಬಲವಂತದ ಮದುವೆ ಮಾಡಲು ತಂದೆ ಮುಂದಾಗಿದ್ದಾರೆ ಎಂದು ಸಿಎಂ ಅವರಿಗೆ ತಿಳಿಸಿದ್ದಾಳೆ. ಇದೇ ವೇಳೆ ನನ್ನ ತಾಯಿ ನನಗೆ ಜನ್ಮ ನೀಡಿ ಸಾವನ್ನಪ್ಪಿದ್ದಾಳೆ. ನನಗೆ ತಾಯಿ ಇಲ್ಲ. ಆದ್ದರಿಂದ ತಂದೆ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ವಿವರಿಸಿದ್ದಾಳೆ.

    ಬಾಲಕಿಯ ಮನವಿ ಕೇಳಿದ ಸಿಎಂ ಅವರು, ಆಕೆಗೆ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಈ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದರು. ಬಾಲಕಿ ಓದಲು ಇಷ್ಟಪಡುವವರೆಗೂ ಉಚಿತ ಶಿಕ್ಷಣ ನೀಡಲು ಶಾರದಾ ಬಾಲಿಕಾ ವಸತಿ ಶಾಲಾ ಯೋಜನೆ ಅಡಿ ಅವಕಾಶ ನೀಡಿದರು. ಬಾಲಕಿಗೆ ಧೈರ್ಯದಿಂದ ಇರುವಂತೆ ಹೇಳಿದ ಸಿಎಂ ಅವರು, ನಮ್ಮ ಸರ್ಕಾರ ನಿನ್ನ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಆತ್ಮವಿಶ್ವಾಸ ತುಂಬಿದ್ದಾರೆ.

    ಬಾಲಕಿಯ ತಾಯಿ ಮೃತರಾದ ಬಳಿಕ ನನ್ನ ಸಹೋದರ (ತಂದೆ) ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳದೆ ನಿರ್ಲಕ್ಷ ವಹಿಸಿದ್ದ. ಆದರೆ ನಾನು ಆಕೆಯನ್ನು ಸಾಕಿ ಬೆಳೆಸಿದ್ದೇನೆ. ಆದರೆ ಈಗ ಆತ ಬಂದು ಮದುವೆ ಮಾಡಲು ಮುಂದಾಗಿದ್ದಾನೆ. ಬಾಲಕಿಗೆ ಮದುವೆಯಾಗಲು ಇಷ್ಟವಿಲ್ಲ. ಹೆಚ್ಚಿನ ಶಿಕ್ಷಣ ಪಡೆಯುವ ಆಸೆ ಹೊಂದಿದ್ದಾಳೆ. ಆದ್ದರಿಂದ ಸಿಎಂ ಅವರ ಸಹಾಯ ಪಡೆಯಲು ಅವರ ಬಳಿ ಆಗಮಿಸಿದ್ದಾಗಿ ಬಾಲಕಿಯ ಚಿಕ್ಕಪ್ಪ ತಿಳಿಸಿದ್ದಾರೆ.

    ಇದೇ ವೇಳೆ ಸಿಎಂ ಅವರಿಗೆ ಧನ್ಯವಾದ ತಿಳಿಸಿದ ಅವರು, ನಮ್ಮ ಮನವಿಗೆ ಕೂಡಲೇ ಅವರು ಸ್ಪಂದಿಸಿದರು. ಅವರನ್ನು ಭೇಟಿ ಮಾಡಿದ್ದು ಸಂಸತ ತಂದಿದೆ. ಬಾಲಕಿಗೆ 18 ವರ್ಷ ಆದ ಬಳಿಕವೇ ಮದುವೆ ಮಾಡುತ್ತೇವೆ. ಆಕೆಗೆ ಇಂಜಿನಿಯರಿಂಗ್ ಓದುವ ಆಸೆ ಇದೆ ಎಂದರು.

  • ಅಪ್ರಾಪ್ತೆಯ ಶವ ಸಂಸ್ಕಾರ ತಡೆದು ಅಧಿಕಾರಿಯಿಂದ ಪರಿಶೀಲನೆ

    ಅಪ್ರಾಪ್ತೆಯ ಶವ ಸಂಸ್ಕಾರ ತಡೆದು ಅಧಿಕಾರಿಯಿಂದ ಪರಿಶೀಲನೆ

    ವಿಜಯಪುರ: ಬಾಲ್ಯ ವಿವಾಹ ಮಾಡಿಕೊಡಲಾಗಿದ್ದ ಅಪ್ರಾಪ್ತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಕಾರಣ ಮಕ್ಕಳ ಸಹಾಯವಾಣಿ ಅಧಿಕಾರಿ ಶವ ಸಂಸ್ಕಾರವನ್ನು ತಡೆದು ಪರಿಶೀಲನೆ ನಡೆಸಿರುವ ಘಟನೆ ಜಿಲ್ಲೆಯ ರಾಣಿ ಬಗಿಚಾದಲ್ಲಿ ನಡೆದಿದೆ.

    ರಾಣಿ ಬಗಿಚಾ ನಿವಾಸಿ ಅಪ್ರಾಪ್ತೆಯನ್ನು ಮೂರು ವರ್ಷದ ಹಿಂದೆ ಮಹಾರಾಷ್ಟ್ರದ ಕರಾಡ ತಾಲೂಕಿನ ವಾಟಾರ್ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಗುರುವಾರ ಅಪ್ರಾಪ್ತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಇಂದು ವಿಜಯಪುರಕ್ಕೆ ಅಪ್ರಾಪ್ತೆಯ ಶವ ತಂದು ಅಂತ್ಯ ಸಂಸ್ಕಾರಕ್ಕೆ ಪೋಷಕರು ಮುಂದಾಗಿದ್ದರು.

    ಈ ಬಗ್ಗೆ ವಿಷಯ ತಿಳಿದ ಮಕ್ಕಳ ಸಹಾಯವಾಣಿ ಅಧಿಕಾರಿ ಸುನಂದಾ ತೋಳಬಂದಿ ಅವರು ಸ್ಥಳಕ್ಕೆ ಭೇಟಿ ನೀಡಿ ಶವ ಸಂಸ್ಕಾರಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗದಂತೆ ಕೆಲಕಾಲ ತಡೆದಿದ್ದರು.

    ಇದು ಕೇವಲ ಆತ್ಮಹತ್ಯೆ ಎಂದು ಮಹಾರಾಷ್ಟ್ರದ ಕರಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಈ ಪ್ರಕರಣ ಸಂಬಂಧ ಪೋಕ್ಸೋ ಹಾಗೂ ಜೆ.ಜೆ (ಬಾಲ್ಯವಿವಾಹ) ಕಾಯ್ದೆ ಅಡಿಯಲ್ಲಿ ದಾಖಲಿಸಿಕೊಳ್ಳಲು ಆದೇಶಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ನಂತರ ಶವ ಸಂಸ್ಕಾರಕ್ಕೆ ಮಕ್ಕಳ ಸಹಾಯವಾಣಿ ಅಧಿಕಾರಿ ತೋಳಬಂದಿ ಅನುಮತಿ ನೀಡಿದರು.

  • 16ರ ಬಾಲಕಿಗೆ ಬಾಲ್ಯ ವಿವಾಹ – ಮದುಮಗ ಸೇರಿದಂತೆ 6 ಮಂದಿ ಅರೆಸ್ಟ್

    16ರ ಬಾಲಕಿಗೆ ಬಾಲ್ಯ ವಿವಾಹ – ಮದುಮಗ ಸೇರಿದಂತೆ 6 ಮಂದಿ ಅರೆಸ್ಟ್

    ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಕ್ಷೇತ್ರದಲ್ಲೇ ಬಾಲ್ಯವಿವಾಹ ನಡೆದಿದ್ದು, ಈ ಬಾಲ್ಯ ವಿವಾಹದ ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ಯತ್ನವೂ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಸ್ವಕ್ಷೇತ್ರ ಚಾಮರಾಜನಗರದ ಕಲ್ಯಾಣ ಮಂಟಪವೊಂದರಲ್ಲಿ ಬಾಲ್ಯ ವಿವಾಹ ನಡೆದಿದೆ. ಸಚಿವರ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಗೆ 24 ವರ್ಷದ ಯುವಕನೊಂದಿಗೆ ವಿವಾಹ ನೆರವೇರಿದೆ.

    ಚಾಮರಾಜನಗರದ ಉಪ್ಪಾರ ಬಡಾವಣೆಯ ಬಾಲಕಿಯೊಂದಿಗೆ ಅದೇ ಬಡಾವಣೆಯ ಯುವಕನೊಂದಿಗೆ ಮದುವೆ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರವಾಣಿ ಕರೆಯೊಂದು ಬಂದಿದೆ. ಈ ಮಾಹಿತಿ ಆಧರಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪೊಲೀಸರೊಂದಿಗೆ ಕಲ್ಯಾಣಮಂಟಪಕ್ಕೆ ಹೋಗಿದ್ದಾರೆ. ಆದರೆ ಅಷ್ಟೊತ್ತಿಗೆ ಮಾಂಗಲ್ಯಧಾರಣೆ ಆಗಿ ಹೋಗಿತ್ತು. ಬಾಲಕಿಗೆ 18 ವರ್ಷ ತುಂಬಿರುವ ಬಗ್ಗೆ ದಾಖಲಾತಿ ಒದಗಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮದುಮಗ ಮಹೇಶ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಬಾಲಕಿಯನ್ನು ವಶಕ್ಕೆ ಪಡೆದು ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ. ಈ ಸಂದರ್ಭದಲ್ಲಿ ವರದಿ ಮಾಡಲು ಹೋದ ಮಾಧ್ಯಮದವರ ಮೇಲೆ ಬಾಲಕಿಯ ಸಂಬಂಧಿಕರು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಜೊತೆಗೆ ವಿಡಿಯೋ ಮಾಡದಂತೆ ಧಮ್ಕಿ ಹಾಕಿದ್ದಾರೆ.

    ಬಾಲ್ಯ ವಿವಾಹದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಪುಟ್ಟರಂಗಶೆಟ್ಟಿ, ಬಾಲ್ಯ ವಿಹಾಹಕ್ಕೆ ತಮ್ಮ ತೀವ್ರ ವಿರೋಧವಿದ್ದು ಯಾವುದೇ ಮುಲಾಜಿಲ್ಲದೆ ಪೋಷಕರ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

  • ಮದ್ವೆಯಾದ 3 ಗಂಟೆಗೆ ನವ ದಂಪತಿ ವಶ

    ಮದ್ವೆಯಾದ 3 ಗಂಟೆಗೆ ನವ ದಂಪತಿ ವಶ

    ಚಿಕ್ಕಬಳ್ಳಾಪುರ: ಬಾಲ್ಯ ವಿವಾಹವಾದ ಹಿನ್ನೆಲೆಯಲ್ಲಿ ಮದುವೆಯಾದ ಮೂರೇ ಗಂಟೆಗೆ ನೂತನ ದಂಪತಿಯನ್ನು ಚಿಕ್ಕಬಳ್ಳಾಪುರ ಬಾಲ್ಯವಿವಾಹ ತಡೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಚಿತ್ರಾವತಿ ಕಲ್ಯಾಣ ಮಂಪಟದಲ್ಲಿ ಇಂದು ಮುಂಜಾನೆ ಬಾಲ್ಯ ವಿವಾಹ ನಡೆದಿದೆ. ಚಿಕ್ಕಬಳ್ಳಾಪುರ ಮೂಲದ ವರ ಹಾಗೂ ಚಿಂತಾಮಣಿ ಮೂಲದ ವಧುವಿನೊಂದಿಗೆ ವಿವಾಹ ನಡೆದಿದೆ. 16 ವರ್ಷದ ಬಾಲಕಿಗೆ 28 ವರ್ಷದ ಯುವಕನ ಜೊತೆ ಮದುವೆ ಮಾಡಲಾಗಿದೆ.

    ಈ ಬಗ್ಗೆ ಮಾಹಿತಿ ಪಡೆದ ಬಾಲ್ಯವಿವಾಹ ತಡೆ ಅಧಿಕಾರಿಗಳು ಕಲ್ಯಾಣ ಮಂಪಟಕ್ಕೆ ಹೋಗಿ ವಧು ವರ ಸೇರಿದಂತೆ ಅವರ ಪಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಮಕ್ಕಳ ಕಲ್ಯಾಣ ಸಮಿತಿ ಅವರ ಮುಂದೆ ಹಾಜರು ಪಡಿಸಿದ್ದು, ವಿಚಾರಣೆ ಮಾಡಿದ್ದಾರೆ.

    ಸದ್ಯಕ್ಕೆ ಬಾಲಕಿಯ ಜವಾಬ್ದಾರಿಯನ್ನು ಮಕ್ಕಳ ಕಲ್ಯಾಣ ಸಮಿತಿ ವಹಿಸಿಕೊಂಡಿದ್ದು, ಈ ಬಗ್ಗೆ ವರ ಮತ್ತು ಬಾಲಕಿಯ ಪೋಷಕರ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರ ದಾಖಲಿಸಲು ಮುಂದಾಗಿದ್ದಾರೆ.

  • ವಧುವಿಗೆ 16 ವರ್ಷ, ವರನಿಗೆ 32 ವರ್ಷ- SSLC ಫಲಿತಾಂಶಕ್ಕೂ ಮುನ್ನವೇ ವಿದ್ಯಾರ್ಥಿನಿಗೆ ಬಾಲ್ಯವಿವಾಹ

    ವಧುವಿಗೆ 16 ವರ್ಷ, ವರನಿಗೆ 32 ವರ್ಷ- SSLC ಫಲಿತಾಂಶಕ್ಕೂ ಮುನ್ನವೇ ವಿದ್ಯಾರ್ಥಿನಿಗೆ ಬಾಲ್ಯವಿವಾಹ

    ಚಿಕ್ಕಬಳ್ಳಾಪುರ: 16 ವರ್ಷದ ಅಪ್ರಾಪ್ತ ಬಾಲಕಿಯನ್ನು 32 ವರ್ಷದ ವ್ಯಕ್ತಿಯೊರ್ವ ಬಾಲ್ಯ ವಿವಾಹವಾಗಿರುವ ಘಟನೆ ಬೆಳಕಿಗೆ ಬಂದಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಯಗವಬಂಡ್ಲ ಕೆರೆ ಗ್ರಾಮದ ಅಪ್ರಾಪ್ತ ಬಾಲಕಿ ಕುಸುಮ (ಹೆಸರು ಬದಲಾಯಿಸಲಾಗಿದೆ) ಜೊತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೂದಿಗೆರೆ ಗ್ರಾಮದ 32 ವರ್ಷದ ವ್ಯಕ್ತಿ ಮದುವೆಯಾಗಿದ್ದಾನೆ.

    ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಈ ಬಾರಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮುಗಿಸಿ ಪರೀಕ್ಷೆ ಬರೆದಿದ್ದ ಅಪ್ರಾಪ್ತ ಬಾಲಕಿಗೆ ಮನೆಯವರು ಮದುವೆ ಮಾಡಿದ್ದಾರೆ. ಮದುವೆ ನಂತರ ಮಾಹಿತಿ ತಿಳಿದ ಬಾಗೇಪಲ್ಲಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಯಗವಬಂಡ್ಲಕೆರೆ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

    ಮನೆಯಲ್ಲಿ ಅಜ್ಜಿ ಹೊರತುಪಡಿಸಿ ಬೇರೆ ಯಾರು ಇಲ್ಲ. ಮದುವೆ ನಂತರ ಎಲ್ಲರೂ ಬಳ್ಳಾರಿ ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಾಲಕಿಯನ್ನು ಇಂದು ಕಚೇರಿಗೆ ಕರೆ ತರುವಂತೆ ದೂರವಾಣಿ ಮೂಲಕ ಬಾಲಕಿ ತಾಯಿಗೆ ತಾಕೀತು ಮಾಡಿರುವುದಾಗಿ ಸಿಡಿಪಿಓ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

  • ಬಾಲ್ಯ ವಿವಾಹ ನೋಂದಣಿ ಮಾಡಿಕೊಂಡ ಉಪನೋಂದಣಾಧಿಕಾರಿ!

    ಬಾಲ್ಯ ವಿವಾಹ ನೋಂದಣಿ ಮಾಡಿಕೊಂಡ ಉಪನೋಂದಣಾಧಿಕಾರಿ!

    ಬಳ್ಳಾರಿ: ಬಾಲ್ಯ ವಿವಾಹ ಅಪರಾಧ ಎನ್ನುವುದು ಸಾಮಾನ್ಯ ಜನರಿಗೂ ಗೊತ್ತು. ಆದರೆ ಬಳ್ಳಾರಿಯಲ್ಲಿ ಅಧಿಕಾರಿಯೊಬ್ಬರು 18 ವರ್ಷ ತುಂಬುವುದಕ್ಕೂ ಮುನ್ನವೇ ಇಬ್ಬರು ಬಾಲಕಿಯರ ವಿವಾಹವನ್ನು ನೋಂದಣಿ ಮಾಡಿಕೊಂಡಿದ್ದಾರೆ.

    ಬಳ್ಳಾರಿಯಲ್ಲಿ ವಾಸವಾಗಿರುವ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಯುವತಿ, ಹಾಗೂ ಬಳ್ಳಾರಿಯ ಮತ್ತೊಬ್ಬ ಯುವತಿಗೆ 2018ರ ಜೂನ್‍ನಲ್ಲಿ ವಿವಾಹವಾಗಿದೆ. ಆದರೆ ಈ ಇಬ್ಬರಿಗೂ 18 ವರ್ಷ ಪೂರ್ಣವಾಗುವುದಕ್ಕೂ ಮುನ್ನವೇ ಮದುವೆ ಮಾಡಲಾಗಿದೆ. ಜೊತೆಗೆ ವಿವಾಹವನ್ನು ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:
    ಈ ಎರಡು ಕುಟುಂಬದವರು ಕಟ್ಟಡ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಗುರುತಿನ ಚೀಟಿ ಹೊಂದಿದ್ದು, ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಗುರುತಿನ ಚೀಟಿ ಹೊಂದಿದವರಿಗೆ ಕಾರ್ಮಿಕ ಇಲಾಖೆಯಿಂದ 50 ಸಾವಿರ ರೂ. ವಿವಾಹ ಸಹಾಯ ಧನ ನೀಡಲಾಗುತ್ತಿದೆ. ಸಹಾಯ ಧನ ಪಡೆಯಲು ವಿವಾಹ ನೋಂದಣಿ ಕಡ್ಡಾಯವಾಗಿದ್ದರಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿಯೇ ಕುಟುಂಬಸ್ಥರು ನೋಂದಣಿ ಮಾಡಿಸಿದ್ದಾರೆ. ಈ ವೇಳೆ ಅಧಿಕಾರಿಗಳು ಪರಿಶೀಲನೆ ನಡೆಸದೇ ಎಡವಟ್ಟು ಮಾಡಿದ್ದಾರೆ.

    ಸಹಾಯಧನ ಕೋರಿ ಉಪನೋಂದಣಿ ಇಲಾಖೆಯಲ್ಲಿ ವಿವಾಹವನ್ನು ನೋಂದಣಿ ಮಾಡಿಸಿರುವ ಪತ್ರ ಹಾಗೂ ವಿವಿಧ ದಾಖಲೆಗಳನ್ನು ಕುಟುಂಬಸ್ಥರು ಕಾರ್ಮಿಕ ಇಲಾಖೆಗೆ ನೀಡಿದ್ದಾರೆ. ಈ ದಾಖಲೆಗಳನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಯುವತಿಯರಿಗೆ 18 ವರ್ಷ ಭರ್ತಿಯಾಗುವ ಮುನ್ನವೇ ವಿವಾಹವಾಗಿದೆ ಎನ್ನುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಇದೀಗ ತಿರಸ್ಕರಿಸಲಾಗಿದೆ.

    ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ದಮನಿತ ಮಹಿಳೆಯರ ಜೀವನ ಮಟ್ಟ ಸುಧಾರಿಸಲು ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಯೋಜನೆಗಳ ಅನುಷ್ಠಾನ ಹಾಗೂ ಮಹಿಳಾ ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಸಭೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಪಂಚಾಯತಿ ಸಿಇಓ ಕೆ.ವಿ.ರಾಜೇಂದ್ರ ಅವರು, ಯಾವ ದಾಖಲೆಗಳನ್ನು ಆಧರಿಸಿ ವಿವಾಹ ನೋಂದಣಿ ಮಾಡಲಾಗಿದೆ ಹಾಗೂ ಜಿಲ್ಲಾ ನೋಂದಣಿ ವೇಳೆ ಅಧಿಕಾರಿಗಳು ತಪ್ಪು ಮಾಡಿದ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲ್ಯ ವಿವಾಹ ತಡೆದ ಅಧಿಕಾರಿಗಳು: ನಾಪತ್ತೆಯಾದ್ರು ವಧು-ವರ

    ಬಾಲ್ಯ ವಿವಾಹ ತಡೆದ ಅಧಿಕಾರಿಗಳು: ನಾಪತ್ತೆಯಾದ್ರು ವಧು-ವರ

    ಬೆಂಗಳೂರು: ಬಾಲ್ಯ ವಿವಾಹ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮದುವೆ ಮನೆ ಮೇಲೆ ದಾಳಿ ನಡೆಸಿ, ಮದುವೆ ತಡೆದ ಘಟನೆ ನೆಲಮಂಗಲ ತಾಲೂಕಿನ ಹೊನ್ನಗಂಗಯ್ಯನ ಪಾಳ್ಯದಲ್ಲಿ ನಡೆದಿದೆ.

    ಹೊನ್ನಗಂಗಯ್ಯನ ಪಾಳ್ಯದ ಗಂಗಮ್ಮ ತಿಮ್ಮಯ್ಯ ಸಮುದಾಯ ಭವನದಲ್ಲಿ ಮದುವೆ ಆಯೋಜಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕಲ್ಯಾಣ ಮಂಟಪಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನೆಲಮಂಗಲ ತಾಲೂಕು ಆಡಳಿತ ಅಧಿಕಾರಿಗಳು ವಿವಾಹ ತಡೆದಿದ್ದಾರೆ. ಆದರೆ ಅಧಿಕಾರಿಗಳು ಕಲ್ಯಾಣ ಮಂಟಪಕ್ಕೆ ಬಂದಿದ್ದಾರೆ ಎನ್ನುವುದು ವಧು-ವರರಿಗೆ ಗೊತ್ತಾಗಿದ್ದು ಅವರಿಬ್ಬರು ಮದುವೆ ಮಂಟಪಕ್ಕೆ ಆಗಮಿಸದೇ ನಾಪತ್ತೆಯಾಗಿದ್ದಾರೆ.

    ವಿವಾಹಕ್ಕೆ ಆಗಮಿಸಲಿದ್ದ ಸಂಬಂಧಿಕರಿಗಾಗಿ ತರತರಿಯ ಭೋಜನವನ್ನು ಸಿದ್ಧಪಡಿಸಲಾಗುತ್ತಿತ್ತು. ಹೀಗಾಗಿ ಅದನ್ನು ಕೂಡಾ ಅಧಿಕಾರಿಗಳು ತಡೆದರು. ಘಟನೆ ಸಂಬಂಧ ವಧು ಹಾಗೂ ವರನ ಪೋಷಕರ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾಲ್ಯವಿವಾಹ ತಡೆಯಲು ಬಂದ ಅಧಿಕಾರಿಗಳೇ ಕನ್‍ಫ್ಯೂಸ್

    ಬಾಲ್ಯವಿವಾಹ ತಡೆಯಲು ಬಂದ ಅಧಿಕಾರಿಗಳೇ ಕನ್‍ಫ್ಯೂಸ್

    ಮೈಸೂರು: ಬಾಲ್ಯ ವಿವಾಹ ನಡೆಯುತ್ತಿದ್ದಾಗ ತಡೆಯಲು ಬಂದ ಅಧಿಕಾರಿಗಳು ಮದುವೆ ಮನೆಯಲ್ಲಿ ಒಂದು ಕ್ಷಣ ಗೊಂದಲಕ್ಕೊಳಗಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕೆಲವು ದಾಖಲಾತಿಗಳಲ್ಲಿ ವಧುವಿನ ವಯಸ್ಸು 17 ಅಂತಾ ಇದ್ದರೆ, ಆಧಾರ್ ಕಾರ್ಡ್ ನಲ್ಲಿ 18 ವರ್ಷ ದಾಖಲಾಗಿದ್ದರಿಂದ ಅಧಿಕಾರಿಗಳು ಕೆಲ ಕಾಲ ಗೊಂದಲಕ್ಕೆ ಒಳಗಾಗಿದ್ದರು.

    ರಮ್ಮನಹಳ್ಳಿ ಗ್ರಾಮದ ನಿವಾಸಿಗಳಾದ ವಧು ತೇಜಾ (17) ಹಾಗೂ ವರ ಕುಮಾರ್ (26)ನಡುವೆ ವಿವಾಹ ನಿಶ್ಚಯವಾಗಿತ್ತು. ಹಿರಿಯರ ಅಣತಿಯಂತೆ ಮೈಸೂರಿನ ರಾಘವೇಂದ್ರನಗರದ ಕೆ.ಪಿ.ಟಿ.ಸಿ.ಎಲ್ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆಯುತ್ತಿತ್ತು.

    ವಧು ತೇಜಾಗೆ 18 ವರ್ಷ ಪೂರ್ಣವಾಗಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಎನ್.ಆರ್.ಪೊಲೀಸ್ ಜಂಟಿ ಕಾರ್ಯಾಚರಣೆ ನಡೆಸಿ ವಧು-ವರರನ್ನು ಹಿಡಿದು ಮದುವೆ ನಿಲ್ಲಿಸಿದ್ದಾರೆ.

    Child marriage. Illustration: Ratna Sagar Shrestha

    ಪರಿಶೀಲನೆ ವೇಳೆ ವಧು ತೇಜಾಗೆ ಶಾಲಾ ದಾಖಲಾತಿಗಳಲ್ಲಿ 17 ವರ್ಷ 4 ತಿಂಗಳು ಎಂದು ತಿಳಿದುಬಂದಿದೆ. ಆದರೆ ಆಧಾರ್ ಕಾರ್ಡ್ ನಲ್ಲಿ ವಧುಗೆ 18 ವರ್ಷ 4 ತಿಂಗಳು ನಮೂದಾಗಿದೆ. ಪೊಲೀಸರು ಮದುವೆ ಮಂಟಪದ ಮೇಲೆ ದಾಳಿ ನಡೆಸಿದಾಗ ಸಿಕ್ಕಿಬಿದ್ದ ವಧು-ವರರನ್ನು ಪಾಲಕರು ಪೊಲೀಸರ ಕಣ್ಣುತಪ್ಪಿಸಿ ಮದುವೆ ಮಂಟಪದಿಂದ ಎಸ್ಕೇಪ್ ಮಾಡಿದ್ದಾರೆ.

    ಇನ್ನು ಈ ವಿವಾಹ ಕುರಿತು ಪೊಲೀಸರು ವಧು ವರರ ಪೋಷಕರು ಹಾಗೂ ವಿವಾಹ ನಡೆಸುತ್ತಿದ್ದ ಪುರೋಹಿತರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಬಾಲ್ಯ ವಿವಾಹ ತಡೆಯಲು ಬಂದ ಅಧಿಕಾರಿಗಳ ಮೇಲೆ ಸಂಬಂಧಿಕರಿಂದ ಹಲ್ಲೆ!

    ಬಾಲ್ಯ ವಿವಾಹ ತಡೆಯಲು ಬಂದ ಅಧಿಕಾರಿಗಳ ಮೇಲೆ ಸಂಬಂಧಿಕರಿಂದ ಹಲ್ಲೆ!

    ಮಂಡ್ಯ: ಬಾಲ್ಯ ವಿವಾಹ ತಡೆಯಲು ಮುಂದಾದ ಅಧಿಕಾರಿಗಳಿಗೆ ಘೆರಾವ್ ಹಾಕಿ, ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ನಡೆದಿದೆ.

    ಬಾಲ್ಯ ವಿವಾಹದ ಕುರಿತು ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಅಧಿಕಾರಿಗಳು ಬಂದಿದ್ದಾರೆ. ಪರಿಶೀಲನೆ ನಡೆಸುತ್ತಿದ್ದ ವೇಳೆ ಅವರನ್ನು ತಡೆದ ಸಂಬಂಧಿಕರು, ಇಲ್ಲಿ ಯಾವುದೇ ಮದುವೆ ನಡೆಯುತ್ತಿಲ್ಲವೆಂದು ಗಲಾಟೆ ಮಾಡಿದ್ದಾರೆ. ಅಲ್ಲದೇ, ವಿಡಿಯೋ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದು, ಅವರ ಮೊಬೈಲ್ ಕಿತ್ತುಕೊಂಡಿದ್ದಾರೆ.

    ಸದ್ಯ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ನಾಗಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.