Tag: child marriage

  • ಲಾಕ್‍ಡೌನ್ ವೇಳೆ ಚಾಮರಾಜನಗರದಲ್ಲಿ 33 ಬಾಲ್ಯ ವಿವಾಹ ತಡೆ

    ಲಾಕ್‍ಡೌನ್ ವೇಳೆ ಚಾಮರಾಜನಗರದಲ್ಲಿ 33 ಬಾಲ್ಯ ವಿವಾಹ ತಡೆ

    – ಸದ್ದಿಲ್ಲದೆ 80ಕ್ಕೂ ಅಧಿಕ ವಿವಾಹಗಳು ನಡೆದಿರುವ ಶಂಕೆ

    ಚಾಮರಾಜನಗರ: ಎಷ್ಟೇ ಅರಿವು ಮೂಡಿಸಿದರೂ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಲ್ಲುತ್ತಿಲ್ಲ. ಪೋಷಕರು ಕದ್ದುಮುಚ್ಚಿ ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ವಿವಾಹ ಮಾಡುತ್ತಿದ್ದಾರೆ. ಅದರಲ್ಲೂ ಈ ವರ್ಷ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲೇ ಹೆಚ್ಚಿನ ಬಾಲ್ಯವಿವಾಹಗಳು ನಡೆದಿರುವುದು ಬೆಳಕಿಗೆ ಬಂದಿದೆ.

    ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅನಕ್ಷರತೆ, ಅರಿವಿನ ಕೊರತೆ, ಮಕ್ಕಳು ದಾರಿ ತಪ್ಪುವ ಭಯದಿಂದಾಗಿ ಪೋಷಕರು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ವಿವಾಹ ಮಾಡುತ್ತಿದ್ದಾರೆ. ಕಳೆದ ಸಾಲಿನಲ್ಲಿ 2019ರ ಏಪ್ರಿಲ್ ನಿಂದ 2020ರ ಮಾರ್ಚ್ ವರೆಗಿನ ಅವಧಿಯಲ್ಲಿ 22 ಬಾಲ್ಯ ವಿವಾಹ ತಡೆಗಟ್ಟಲಾಗಿತ್ತು. ಆದರೆ ಈ ವರ್ಷ ಕೇವಲ ಐದು ತಿಂಗಳ ಅವಧಿಯಲ್ಲಿ 33 ಬಾಲ್ಯ ವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ. ಲಾಕ್‍ಡೌನ್ ಸಂದರ್ಭವನ್ನೇ ಬಳಸಿಕೊಂಡು ಕೆಲ ಪೋಷಕರು ತಮ್ಮ ಮಕ್ಕಳಿಗೆ ಕದ್ದುಮುಚ್ಚಿ ಬಾಲ್ಯ ವಿವಾಹ ಮಾಡಲು ಮುಂದಾಗಿರುವುದು ಕಂಡು ಬಂದಿದೆ.

    ಕಳೆದ ಸಾಲಿನಲ್ಲಿ ಮೂರು ಎಫ್‍ಐಆರ್ ದಾಖಲಿಸಲಾಗಿದೆ. ಈ ಸಾಲಿನಲ್ಲಿ ಈ ವರೆಗೆ ಒಂದು ಎಫ್‍ಐಆರ್ ದಾಖಲಿಸಲಾಗಿದೆ. ಆದರೆ ಬೆಳಕಿಗೆ ಬಾರದೆ 80ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ನಡೆದು ಹೋಗಿರುವ ಶಂಕೆ ಇದೆ. ಹೀಗೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಮದುವೆ ಮಾಡುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಪ್ರಾಪ್ತ ವಯಸ್ಸಿಗೆ ಹೆಣ್ಣು ಮಕ್ಕಳು ಗರ್ಭಿಣಿಯಾಗುವುದರಿಂದ ಹುಟ್ಟುವ ಮಗು ಸಹ ಆನಾರೋಗ್ಯಕ್ಕೀಡಾಗುವ ಹಾಗೂ ತಾಯಿ ನಾನಾ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಷ್ಟೇ ಅರಿವು ಮೂಡಿಸಿದರೂ ಜನ ಮಾತ್ರ ಕ್ಯಾರೆ ಎನ್ನುತ್ತಿಲಲ್ಲ.

    ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿ ಅರಿವು ಮೂಡಿಸುತ್ತಿವೆ. ಆದರೆ ಇದ್ಯಾವುದನ್ನೂ ಜನ ಕೇಳುತ್ತಿಲ್ಲ. ಹಿಂದುಳಿದ ಸಮುದಾಯಗಳಲ್ಲಿ ಹೆಚ್ಚಿನ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬರುತ್ತಿದೆ.

  • ಹಾಸನದಲ್ಲಿ ಹೆಚ್ಚಾಯ್ತು ಬಾಲ್ಯ ವಿವಾಹ – ಪೋಷಕರಿಗೆ ಪೊಲೀಸರಿಂದ ಖಡಕ್ ಎಚ್ಚರಿಕೆ

    ಹಾಸನದಲ್ಲಿ ಹೆಚ್ಚಾಯ್ತು ಬಾಲ್ಯ ವಿವಾಹ – ಪೋಷಕರಿಗೆ ಪೊಲೀಸರಿಂದ ಖಡಕ್ ಎಚ್ಚರಿಕೆ

    – ಮದುವೆಯಾಗುವ ಯುವಕರಿಗೂ ಖಡಕ್ ಸೂಚನೆ

    ಹಾಸನ: ಕೊರೊನಾ ಬಂದು ಇಡೀ ದೇಶವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆಯೇ ಲಾಕ್‍ಡೌನ್ ಅವಧಿಯಲ್ಲಿ ಕೆಲವು ಪೋಷಕರು ತಮ್ಮ ಅಪ್ರಾಪ್ತ ಹೆಣ್ಣು ಮಕ್ಕಳ ಮದುವೆ ಮಾಡಿ ಮುಗಿಸಲು ತಯಾರಿ ನಡೆಸಿದ ಪ್ರಕರಣಗಳು ಹಾಸನದಲ್ಲಿ ಹೆಚ್ಚಾಗಿ ವರದಿಯಾಗಿದೆ.

    ಅಪ್ರಾಪ್ತ ಯುವತಿಯರ ಮದುವೆಗೆ ಮುಂದಾಗುತ್ತಿರುವ ಯುವಕರಿಗೆ ಖಡಕ್ ಎಚ್ಚರಿಕೆ ರವಾನಿಸಲಾಗಿದೆ. ಲಾಕ್‍ಡೌನ್ ಆರಂಭವಾದ ನಂತರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆಗಳು ಕಡಿಮೆಯಾಗಿದ್ದು, ಪೋಷಕರು ಮನೆಯ ಸಮೀಪವೇ ಮದುವೆ ಮಾಡಿ ಮುಗಿಸಲು ಮುಂದಾಗುತ್ತಿದ್ದಾರೆ. ಅದರಲ್ಲೂ ಹಾಸನದಲ್ಲಿ ಕೆಲವು ಪೋಷಕರು ಲಾಕ್‍ಡೌನ್ ಸಮಯದಲ್ಲಿ ತಮ್ಮ ಅಪ್ರಾಪ್ತ ಹೆಣ್ಣುಮಕ್ಕಳನ್ನು ಸದ್ದಿಲ್ಲದೆ ಮದುವೆ ಮಾಡಿ ಮುಗಿಸಲು ಮುಂದಾಗಿದ್ದು ಈಗ ಅಂಕಿ ಅಂಶದಿಂದ ಬಯಲಾಗಿದೆ.

    ಕಳೆದ ಏಪ್ರಿಲ್ ತಿಂಗಳಿಂದ ಜುಲೈ ತಿಂಗಳವರೆಗೆ ಇಂತಹ ಸುಮಾರು 51 ಬಾಲ್ಯವಿವಾಹ ಪ್ರಕರಣಗಳನ್ನು ಅಧಿಕಾರಿಗಳು ತಡೆದಿರುವುದು ಅಂಕಿ ಅಂಶದಿಂದ ಗೊತ್ತಾಗಿದೆ. ಲಾಕ್‍ಡೌನ್ ನಂತರ ಹಾಸನದಲ್ಲಿ ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗುತ್ತಿರುವುದನ್ನು ಮನಗಂಡ ಅಧಿಕಾರಿಗಳು, ಅಪ್ರಾಪ್ತ ಬಾಲಕಿಯರ ಮದುವೆಗೆ ಮುಂದಾದ ಪೋಷಕರಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಯುವತಿಯರ ಮದುವೆಗೆ ಮುಂದಾಗುತ್ತಿರುವ ಯುವಕರಿಗೆ ಕೂಡ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿ, ಬುದ್ಧಿವಾದ ಹೇಳಿದ್ದಾರೆ.

    ಈ ವರ್ಷ 18 ಬಾಲ್ಯ ವಿವಾಹ ನಡೆದಿದ್ದು ಎಫ್‍ಐಆರ್ ದಾಖಲಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಅಷ್ಟೇ ಅಲ್ಲದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರನ್ನು ಮದುವೆಯಾಗಿ, ಲೈಂಗಿಕ ದೌರ್ಜನ್ಯ ನೀಡಿರುವ ಮಾಹಿತಿ ಮೇಲೆ, ಈ ವರ್ಷ ಸುಮಾರು 30 ಪೋಕ್ಸೋ ಪ್ರಕರಣ ಕೂಡ ದಾಖಲಿಸಲಾಗಿದೆ.

  • ಅಪ್ರಾಪ್ತ ಮಗಳ ಮದ್ವೆಗೆ ವಿರೋಧ- ಪತ್ನಿಯನ್ನ ಕೊಂದ ಪತಿ

    ಅಪ್ರಾಪ್ತ ಮಗಳ ಮದ್ವೆಗೆ ವಿರೋಧ- ಪತ್ನಿಯನ್ನ ಕೊಂದ ಪತಿ

    -ಕಂಠಪೂರ್ತಿ ಕುಡಿದಿದ್ದ ದಂಪತಿ

    ಲಕ್ನೋ: ಅಪ್ರಾಪ್ತ ಮಗಳ ಮದುವೆಗೆ ವಿರೋಧಿಸಿದ ಪತ್ನಿಯನ್ನ ಪತಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗೌತಮಬುದ್ಧ ಜಿಲ್ಲೆಯ ಮಂಗರೌಲಿ ಗ್ರಾಮದಲ್ಲಿ ನಡೆದಿದೆ.

    ಬಿಹಾರ ಮೂಲದ ಗುಲ್ಜಾರ್ ಪತ್ನಿಯನ್ನು ಕೊಂದು ಪೊಲೀಸರು ಅತಿಥಿಯಾಗಿದ್ದಾನೆ. ಗುಲ್ಜಾರ್ ತನ್ನ ಅಪ್ರಾಪ್ತ ಪುತ್ರಿಯ ಮದುವೆ ನಿಶ್ಚಯ ಮಾಡಿದ್ದನು. ಆದ್ರೆ ಮದುವೆಗೆ ಬಾಲಕಿಯ ತಾಯಿ ತಾರಾ ದೇವಿ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಮಧ್ಯೆ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಕೋಪಗೊಂಡ ಗುಲ್ಜಾರ್ ಪತ್ನಿಯನ್ನು ಕೊಲೆ ಮಾಡಿದ್ದಾನೆ.

    ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ರಣ್‍ವಿಜಯ್ ಸಿಂಗ್, ಸೋಮವಾರ ರಾತ್ರಿ ದಂಪತಿ ಜೊತೆಯಾಗಿ ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ಮಗಳ ಮದುವೆ ಪ್ರಸ್ತಾಪವಾಗಿ ಜಗಳ ನಡೆದಿದೆ. ಮಾತು ವಿಕೋಪಕ್ಕೆ ತಿರುಗಿದಾಗ ಗುಲ್ಜಾರ್ ಪತ್ನಿಯ ತೆಲೆಗೆ ಬಲವಾದ ವಸ್ತುವಿನಿಂದ ಹೊಡೆದು ಕೊಲೆಗೈದಿದ್ದಾನೆ, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಚಾಮರಾಜನಗರದಲ್ಲಿ ಒಂದೇ ದಿನ 7 ಬಾಲ್ಯ ವಿವಾಹಕ್ಕೆ ಬ್ರೇಕ್

    ಚಾಮರಾಜನಗರದಲ್ಲಿ ಒಂದೇ ದಿನ 7 ಬಾಲ್ಯ ವಿವಾಹಕ್ಕೆ ಬ್ರೇಕ್

    – ತಿಂಗಳಲ್ಲಿ ಒಟ್ಟು 20 ಬಾಲ್ಯ ವಿವಾಹಕ್ಕೆ ತಡೆ

    ಚಾಮರಾಜನಗರ: ಜಿಲ್ಲೆಯಲ್ಲಿ ಒಂದೇ ದಿನ 7 ಬಾಲ್ಯವಿವಾಹಕ್ಕೆ ತಯಾರಿ ನಡೆಸಲಾಗುತ್ತಿದ್ದು, ಈ ಎಲ್ಲಾ ಮದುವೆಗಳನ್ನು ಮಕ್ಕಳ ಸಹಾಯವಾಣಿ ಸಿಬ್ಬಂದಿ ನಿಲ್ಲಿಸಿದ್ದಾರೆ.

    ಒಂದೇ ದಿನ ಜಿಲ್ಲೆಯ ವಿವಿಧೆಡೆ ಬರೋಬ್ಬರಿ 7 ಬಾಲ್ಯವಿವಾಹ ನಡೆಸಲು ಪಾಲಕರು ಸಕಲ ತಯಾರಿ ಮಾಡಿಕೊಂಡಿದ್ದರು. ಒಡಿಪಿ ಸಂಸ್ಥೆ ಈ ಎಲ್ಲಾ ಮದುವೆಗಳನ್ನು ನಿಲ್ಲಿಸಿದೆ.

    ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಇಂಡಿಗನತ್ತ ಗ್ರಾಮದ ಕುಟುಂಬವೊಂದು 16 ವರ್ಷದ ಬಾಲೆಗೆ ದೇಗುಲವೊಂದರಲ್ಲಿ ಇಂದು ಮುಂಜಾನೆ 5 ಗಂಟೆಗೆ ಮದುವೆ ಮಾಡಲು ತಯಾರಿಕೊಂಡಿದ್ದರು. ಈ ಮಾಹಿತಿ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿಗಳು ತೆರಳಿ ಮದುವೆ ನಿಲ್ಲಿಸಿದ್ದಾರೆ.

    ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ 15 ವರ್ಷದ ಬಾಲಕಿಗೆ ವಿಜೃಂಭಣೆಯ ಮದುವೆ ಮಾಡುತ್ತಿರುವ ಮಾಹಿತಿ ಪಡೆದು ಅದನ್ನೂ ನಿಲ್ಲಿಸಿದ್ದಾರೆ. ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮದಲ್ಲಿ 16 ವರ್ಷದ ಬಾಲಕಿಯ ಮದುವೆ, ವೈ.ಕೆ.ಮೋಳೆಯ 14 ವರ್ಷದ ಬಾಲೆಯೊಂದಿಗಿನ ವಿವಾಹ, ಅಮಚವಾಡಿ ಹಾಗೂ ಶೆಟ್ಟಿಹಳ್ಳಿಯ ಬಾಲ್ಯವಿವಾಹವನ್ನು ಕೂಡ ಅಧಿಕಾರಿಗಳು ಇಂದು ನಿಲ್ಲಿಸಿದ್ದಾರೆ.

    ಈ ತಿಂಗಳಿನಲ್ಲಿ ಒಟ್ಟು 20 ಬಾಲ್ಯ ವಿವಾಹಗಳನ್ನು ನಿಲ್ಲಿಸಿದ್ದು, ಕಳೆದ ಮೇ ತಿಂಗಳಿನಲ್ಲಿ 18 ಬಾಲ್ಯ ವಿವಾಹ ಪ್ರಕರಣಗಳನ್ನು ಮಕ್ಕಳ ಸಹಾಯವಾಣಿ ನಿಲ್ಲಿಸಿದೆ. ಮೇ ತಿಂಗಳಲ್ಲಿ ಮೂರು ಬಾಲ್ಯ ವಿವಾಹ ನಡೆದಿದ್ದು ಎರಡು ಪ್ರಕರಣದಲ್ಲಿ ಎಫ್‍ಐಆರ್ ದಾಖಲಾಗಿದೆ.

    ಜಾಗೃತಿ ಮೂಡಿಸಿ ಮದುವೆಯನ್ನು ನಿಲ್ಲಿಸಿರುವುದರಿಂದ ಇಂದು ಮದುವೆ ಮಾಡುತ್ತಿದ್ದ 7 ಬಾಲಕಿಯರ ಪಾಲಕರ ವಿರುದ್ಧ ಒಡಿಪಿ ಸಂಸ್ಥೆ ದೂರು ನೀಡಿಲ್ಲ.

  • ಬಳ್ಳಾರಿಯಲ್ಲಿ ಏಕಕಾಲಕ್ಕೆ ನಡೆಯಬೇಕಿದ್ದ 8 ಬಾಲ್ಯ ವಿವಾಹಕ್ಕೆ ಬ್ರೇಕ್

    ಬಳ್ಳಾರಿಯಲ್ಲಿ ಏಕಕಾಲಕ್ಕೆ ನಡೆಯಬೇಕಿದ್ದ 8 ಬಾಲ್ಯ ವಿವಾಹಕ್ಕೆ ಬ್ರೇಕ್

    ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿಯಲ್ಲಿ ನಾನಾ ಕಡೆಗಳಲ್ಲಿ ಏಕಕಾಲಕ್ಕೆ ನಡೆಯಬೇಕಿದ್ದ ಎಂಟು ಬಾಲ್ಯ ವಿವಾಹಗಳನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ತಡೆಹಿಡಿದಿದ್ದಾರೆ.

    ಜಿಲ್ಲಾ ಮಕ್ಕಳ ಸಹಾಯವಾಣಿಗೆ ಬಂದ ಖಚಿತ ಮಾಹಿತಿ ಮೇರೆಗೆ ಶನಿವಾರ-ಭಾನುವಾರ ಎರಡು ದಿನಗಳ ಕಾಲ ದಾಳಿ ನಡೆಸಿ ಬಾಲ್ಯ ವಿವಾಹಗಳನ್ನು ತಡೆ ಹಿಡಿಯಲಾಗಿದೆ. ಬಳ್ಳಾರಿ ತಾಲೂಕಿನ ರೂಪನಗುಡಿಯಲ್ಲಿ 2, ಕಪ್ಪಗಲ್ಲು, ಸಿರವಾರ, ವದ್ದಟ್ಟಿ, ಕೊಳಗಲ್ಲು ಗ್ರಾಮಗಳಲ್ಲಿ ತಲಾ ಒಂದೊಂದು ಹಾಗೂ ಸಿರುಗುಪ್ಪ ತಾಲೂಕಿನ ತೊಂಡೆಹಾಳ್ ಗ್ರಾಮದ ಬಾಲಕ- ಬಾಲಕಿಯೊಂದಿಗೆ ನಡೆಯಬೇಕಿದ್ದ ಬಾಲ್ಯ ವಿವಾಹಗಳನ್ನ ತಡೆದ ಅಧಿಕಾರಿಗಳ ತಂಡ, ಅವರ ಪೋಷಕರಿಂದ ಮುಚ್ಚಳಿಕೆ ಪತ್ರಗಳನ್ನು ಬರೆಸಿಕೊಂಡಿದ್ದಾರೆ.

    ಪೋಷಕರ ವಿರುದ್ಧ ಪ್ರತ್ಯೇಕವಾಗಿ ನಾಲ್ಕು ಪ್ರಕರಣಗಳು ದಾಖಲಿಸಲಾಗಿದೆ. ಬಳ್ಳಾರಿ ಗ್ರಾಮಾಂತರ ಸಿಡಿಪಿಒ ಉಷಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೈಯದ್ ಚಾಂದ್ ಪಾಷಾ, ಸಿಬ್ಬಂದಿಯಾದ ರಾಜಾನಾಯ್ಕ, ಈಶ್ವರ್ ರಾವ್, ಉಮೇಶ್, ಜ್ಯೋತಿ, ನಾಗುಬಾಯಿ ನೇತೃತ್ವದ ಪೊಲೀಸ್ ಅಧಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ತಂಡವು ಈ ದಾಳಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಆರ್.ನಾಗರಾಜ ತಿಳಿಸಿದ್ದಾರೆ.

  • ಗಣಿ ಜಿಲ್ಲೆಯಲ್ಲಿ 7 ಬಾಲ್ಯ ವಿವಾಹಕ್ಕೆ ಬ್ರೇಕ್

    ಗಣಿ ಜಿಲ್ಲೆಯಲ್ಲಿ 7 ಬಾಲ್ಯ ವಿವಾಹಕ್ಕೆ ಬ್ರೇಕ್

    ಬಳ್ಳಾರಿ: ಜಿಲ್ಲೆಯಲ್ಲಿ ನಡೆಯಬೇಕಿದ್ದ 7 ಬಾಲ್ಯ ವಿವಾಹಗಳನ್ನ ಪತ್ತೆಹಚ್ಚಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ಅವುಗಳನ್ನ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬಳ್ಳಾರಿ ತಾಲೂಕಿನ ಕುಂಟನಾಳು ಗ್ರಾಮದಲ್ಲಿ ಮೇ 10-13ರಂದು ಪ್ರತ್ಯೇಕವಾಗಿ 7 ಬಾಲ್ಯವಿವಾಹಗಳನ್ನ ಗುರು-ಹಿರಿಯರು ನಿಶ್ಚಯಿಸಿದ್ದರು. ಈ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ತೆರಳಿ, ಬಾಲ್ಯ ವಿವಾಹಗಳನ್ನ ತಡೆದಿದ್ದಾರೆ.

    17 ವರ್ಷದ ಇಬ್ಬರು, 16 ವರ್ಷದ ನಾಲ್ವರು ಹಾಗೂ 14 ವರ್ಷದ ಓರ್ವ ಬಾಲಕಿಯನ್ನ ಅಧಿಕಾರಿಗಳ ತಂಡ ರಕ್ಷಣೆ ಮಾಡಿ ಬಳ್ಳಾರಿಯ ಶಾಂತಿ ಧಾಮದಲ್ಲಿರಿಸಿದ್ದಾರೆ. ಈ ಎಲ್ಲ ಬಾಲ್ಯ ವಿವಾಹಗಳನ್ನು ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು. ಜಿಲ್ಲೆಯ ಕುರುಗೋಡು ತಾಲೂಕಿನ ಲಕ್ಷ್ಮಿಪುರದಲ್ಲಿ ಮೇ 11ರಂದು ನಡೆಯಬೇಕಿದ್ದ ಈ ಬಾಲ್ಯ ವಿವಾಹಗಳನ್ನ ತಡೆಯಲಾಗಿದೆ. ವಧು- ವರರ ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಂಡು ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಒಂದೇ ದಿನ ನಾಲ್ಕು ಬಾಲ್ಯ ವಿವಾಹ ತಡೆದ ಅಧಿಕಾರಿಗಳು

    ಒಂದೇ ದಿನ ನಾಲ್ಕು ಬಾಲ್ಯ ವಿವಾಹ ತಡೆದ ಅಧಿಕಾರಿಗಳು

    – ಪ್ರೀತಿ, ಪ್ರೇಮದ ನೆಪವೊಡ್ಡಿ ವಿವಾಹ

    ಬಳ್ಳಾರಿ: ಲಾಕ್‍ಡೌನ್ ನಡುವೆಯೂ ಅಕ್ಷಯ ತೃತಿಯ ನಿಮಿತ್ತ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ನಾಲ್ಕು ಜೋಡಿ ಬಾಲ್ಯವಿವಾಹ ಪ್ರಕರಣಗಳು ಪತ್ತೆ ಯಾಗಿವೆ.

    ಕೂಡ್ಲಿಗಿ ತಾಲೂಕು, ಬಳ್ಳಾರಿ ನಗರ, ಸಂಡೂರು ತಾಲೂಕು ಹಾಗೂ ಬಳ್ಳಾರಿ ತಾಲೂಕಿನಲ್ಲಿ ನಡೆಯುತ್ತಿದ್ದ ಎರಡು ನಿಶ್ಚಿತಾರ್ಥ ಹಾಗೂ ಎರಡು ಬಾಲ್ಯವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ.

    ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಮೂಲದ 17 ವರ್ಷದ ಯುವತಿಗೆ ಬೆಳಗ್ಗೆ 5 ಗಂಟೆಗೆ ತರಾತುರಿಯಲ್ಲಿ ನಿಶ್ಚಿತಾರ್ಥ ಮಾಡಿ ಮುಗಿಸಿದ್ದಾರೆ. ಇನ್ನೊಂದೆಡೆ ಬಳ್ಳಾರಿ ಗಾಂಧಿನಗರ ಮೂಲದ 16.8 ವರ್ಷದ ಬಾಲಕಿಗೆ ನಿಶ್ಚಿತಾರ್ಥ ಮಾಡಲು ಮುಂದಾದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ರಕ್ಷಿಸಿದ್ದಾರೆ. ಈ ಇಬ್ಬರು ಬಾಲಕಿಯೊಂದಿಗೆ ಮದುವೆಯಾಗಲು ಮುಂದಾಗಿದ್ದ ವರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಜಿಲ್ಲೆಯ ಸಂಡೂರು ತಾಲೂಕು ಹಾಗೂ ಬಳ್ಳಾರಿ ತಾಲೂಕಿನ ಯಾಳ್ಪಿ ಗ್ರಾಮದಲ್ಲಿ ನಡೆಯಬೇಕಿದ್ದ ಎರಡು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಅಲ್ಲದೆ ಬಾಲ್ಯ ವಿವಾಹ ತಡೆಯಲು ಹೋಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವಧು-ವರರ ಕಡೆಯವರು ಕಟ್ಟುಕಥೆಗಳನ್ನು ಹೇಳಿದ್ದಾರೆ. ಬಳ್ಳಾರಿಯ ಗಾಂಧಿನಗರ ಮೂಲದ 16 ವರ್ಷದ ಬಾಲಕಿಯ ಕಡೆಯವರು ಪ್ರೀತಿ, ಪ್ರೇಮ, ಪ್ರಣಯದ ಮಾತುಗಳನ್ನಾಡಿದ್ದಾರೆ. ನನ್ನ ಮಗಳು ಕಾಲೇಜು ಹಂತದಲ್ಲಿ ಹುಡುಗನನ್ನು ಪ್ರೀತಿ ಮಾಡಿದ್ದಾಳೆ. ಹೀಗಾಗಿ ನನ್ನ ಮನೆತನದ ಪ್ರತಿಷ್ಠೆ- ಗೌರವ ಏನಾದೀತು ಎಂಬ ಕಟ್ಟುಕಥೆಯನ್ನು ಕಟ್ಟಿದ್ದಾರೆ.

    ಇಬ್ಬರು ಬಾಲಕಿಯರು ಶಾಂತಿಧಾಮದಲ್ಲಿ, ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹಾಗೂ ಬಳ್ಳಾರಿ ಗಾಂಧಿನಗರ ಮೂಲದ ಇಬ್ಬರು ಬಾಲಕಿಯರನ್ನು ರಕ್ಷಣೆ ಮಾಡಿ ನಗರದ ಶಾಂತಿಧಾಮದಲ್ಲಿ ಇರಿಸಲಾಗಿದೆ. ಅಲ್ಲದೆ ನಾಲ್ಕು ಜನ ವರನ ಅವಲಂಬಿತರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

  • ಬಾಲ್ಯ ವಿವಾಹ ತಡೆದು ಬಾಲಕಿಯರಿಬ್ಬರ ರಕ್ಷಣೆ

    ಬಾಲ್ಯ ವಿವಾಹ ತಡೆದು ಬಾಲಕಿಯರಿಬ್ಬರ ರಕ್ಷಣೆ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಗ್ರಾಮದಲ್ಲಿ ನಡೆಯುತ್ತಿದ್ದ ಎರಡು ಬಾಲ್ಯ ವಿವಾಹಗಳನ್ನ ತಡೆದು ಅಧಿಕಾರಿಗಳು ಬಾಲಕಿಯರನ್ನ ರಕ್ಷಿಸಿದ್ದಾರೆ. ಹಟ್ಟಿಯ ಸಂತೆ ಬಜಾರ ಪಕ್ಕದ ಮನೆಯೊಂದರಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹಗಳನ್ನ ತಡೆಯಲಾಗಿದೆ.

    ಇಬ್ಬರು ಹಟ್ಟಿ ಕಂಪನಿ ಕಾರ್ಮಿಕರಿಗೆ ಸುರಪುರ ತಾಲೂಕಿನ ಯಾಳಗಿ, ದೇವದುರ್ಗ ತಾಲ್ಲೂಕಿನ ಕವಡಿಮಟ್ಟಿ ಗ್ರಾಮದ ಬಾಲಕಿಯರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಖಚಿತ ದೂರಿನನ್ವಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಹಟ್ಟಿ ಠಾಣೆ ಪೊಲೀಸರ ನೇತೃತ್ವದಲ್ಲಿ ದಾಳಿ ಮಾಡಿ ಮದುವೆ ನಿಲ್ಲಿಸಲಾಗಿದೆ.

    ಇಬ್ಬರು ಅಪ್ರಾಪ್ತರಾಗಿರುವ ಬಗ್ಗೆ ಖಚಿತವಾದ ಹಿನ್ನೆಲೆ ಅಧಿಕಾರಿಗಳು ಮದುವೆಯನ್ನ ನಿಲ್ಲಿಸಿ ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡಿದ್ದಾರೆ.

  • ಫೇಸ್‍ಬುಕ್ ಪೋಸ್ಟ್‌ನಿಂದ ಮದ್ವೆ ಕ್ಯಾನ್ಸಲ್

    ಫೇಸ್‍ಬುಕ್ ಪೋಸ್ಟ್‌ನಿಂದ ಮದ್ವೆ ಕ್ಯಾನ್ಸಲ್

    ಮೈಸೂರು: ಫೇಸ್‍ಬುಕ್ ಪೋಸ್ಟ್‌ನಿಂದ ಬೆಂಗಳೂರು ಪೊಲೀಸರ ಸಹಾಯದಿಂದ ಮೈಸೂರು ಪೊಲೀಸರು ಅಪ್ರಾಪ್ತೆಗೆ ನಿಶ್ಚಯವಾಗಿದ್ದ ಮದುವೆಯನ್ನು ತಡೆದಿದ್ದಾರೆ.

    15 ವರ್ಷದ ಬಾಲಕಿಯೊಬ್ಬಳಿಗೆ ಮನೆಯಲ್ಲಿ ಮದುವೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಕುಟುಂಬಸ್ಥರ ಸಂಬಂಧದಲ್ಲೇ ಬಾಲಕಿಗೆ ಮದುವೆ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಜನವರಿ 30ರಂದು ಮದುವೆ ನಿಶ್ಚಯ ಮಾಡಲು ಮಾತುಕತೆಗೆ ಎರಡು ಕುಟುಂಬಗಳು ಸಜ್ಜಾಗಿದ್ದವು.  ಬಾಲಕಿ ತನಗೆ ಮದುವೆ ಇಷ್ಟವಿಲ್ಲವೆಂದು ಬೆಂಗಳೂರು ಸಿಟಿ ಪೊಲೀಸ್ (ಬಿಸಿಪಿ) ಫೇಸ್‍ಬುಕ್ ಪೇಜ್‍ನಲ್ಲಿ ತನ್ನ ಕಷ್ಟವನ್ನು ತೋಡಿಕೊಂಡಿದ್ದಳು. ಅಷ್ಟೇ ಅಲ್ಲದೇ ತಂದೆಯ ನಂಬರ್ ಹಾಕಿ ತಿಳಿ ಹೇಳಲು ಅಪ್ರಾಪ್ತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಳು.

    ಬಾಲಕಿಯ ಪೋಸ್ಟ್ ಆಧಾರದ ಮೇಲೆ ಮೈಸೂರು ಪೊಲೀಸರಿಗೆ ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. ಮೈಸೂರು ತಾಲೂಕಿನ ಮಾರ್ಬಳ್ಳಿಹುಂಡಿ ಗ್ರಾಮದಲ್ಲಿ ಬಾಲಕಿಯ ಮದುವೆ ಮಾತುಕತೆ ನಡೆಯುತ್ತಿತ್ತು. ಈ ವೇಳೆ ಗ್ರಾಮಕ್ಕೆ ಭೇಟಿ ನೀಡಿ ಮದುವೆ ಮಾತುಕತೆಯನ್ನು ಜಯಪುರ ಠಾಣೆಯ ಪೊಲೀಸರು ತಡೆದಿದ್ದಾರೆ.

    ಅಪ್ರಾಪ್ತೆ ತಂದೆ ಹಾಗೂ ಕುಟುಂಬಸ್ಥರಿಗೆ ತಿಳಿ ಹೇಳಿ ಮದುವೆ ಮಾಡದಂತೆ ಸೂಚನೆ ನೀಡಿದ್ದಾರೆ. ಎರಡು ದಿನದ ಒಳಗಾಗಿ ಠಾಣೆಗೆ ಬಂದು ಮುಚ್ಚಳಿಕೆ ಬರೆದುಕೊಡಬೇಕಾಗಿಯೂ ಸೂಚನೆ ನೀಡಿದ್ದಾರೆ.

  • ಜಸ್ಟ್ ಒಂದು ಕರೆಯಿಂದ ಮಕ್ಕಳ ಮದುವೆಗೆ ತಡೆ

    ಜಸ್ಟ್ ಒಂದು ಕರೆಯಿಂದ ಮಕ್ಕಳ ಮದುವೆಗೆ ತಡೆ

    ಯಾದಗಿರಿ: ಜಿಲ್ಲೆಯ ಅಂಬೇಡ್ಕರ್ ನಗರದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಅಂಬೇಡ್ಕರ್ ನಗರದ ವೆಂಕಟರಮಣ ದೇವಸ್ಥಾನದಲ್ಲಿ ಬಾಲ್ಯವಿವಾಹ ನಡೆಯುತ್ತಿರುವ ಬಗ್ಗೆ ಜಿಲ್ಲೆಯ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಅನಾಮಧೇಯ ಕರೆ ಬಂದಿತ್ತು. ಕರೆಯ ಅನುಸಾರ ತಕ್ಷಣವೇ ಕಾರ್ಯಪ್ರವೃತ್ತರಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಿವಾಹವನ್ನು ನಿಲ್ಲಿಸಿದ್ದಾರೆ.

    ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ ಅಧಿಕಾರಿಗಳು ವಧು ಮತ್ತು ವರನ ತಂದೆ-ಯಿಗೆ ಬುದ್ಧಿ ಹೇಳಿದ್ದಾರೆ. ಬಾಲ್ಯವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಸಹ ಮಾಡಿದ್ದಾರೆ. ಬಾಲಕಿಯನ್ನು ಸದ್ಯ ಬಾಲ ಭವನದಲ್ಲಿ ಉಪಚರಿಸಲಾಗುತ್ತಿದೆ.

    ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ಯೋಜನೆ ನಿರ್ದೇಶಕ ರಘುವೀರ ಸಿಂಗ್ ಠಾಕೂರ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ರಾಧಾ ಎಚ್. ಚನ್ನಕ್ಕಿ, ಡಿಸಿಪಿಯು ಘಟಕದ ಸಿಬ್ಬಂದಿ ಗೋವಿಂದ್ ಸೇರಿದಂತೆ ಇತರೆ ಅಧಿಕಾರಿಗಳು ಬಾಲ್ಯವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.