Tag: Chikodi

  • ಜೋಡೆತ್ತುಗಳ ಬೆಲೆ ಹನ್ನೆರಡು ಲಕ್ಷ!

    ಜೋಡೆತ್ತುಗಳ ಬೆಲೆ ಹನ್ನೆರಡು ಲಕ್ಷ!

    ಚಿಕ್ಕೋಡಿ: ಕಳೆದ ಎರಡು ವರ್ಷದಿಂದ ನೆರೆ ಹಾಗೂ ಬರದ ಛಾಯೆಯಿಂದ ರೈತರು ಪಶು ಸಂಗೋಪನೆ ನಿರ್ವಹಣೆ ಕಷ್ಟ ಎಂದು ಕಂಗಾಲಾಗಿದ್ದಾರೆ. ಆದರೆ ಇಲ್ಲೊಬ ರೈತನ ಬಾಳಿನಲ್ಲಿ ಜೋಡಿ ಎತ್ತುಗಳೆ ಬೆಳಕಾಗಿವೆ. ಅಂದರೆ ರೈತ ತನ್ನ ಜೋಡೆತ್ತುಗಳನ್ನು ಬರೋಬ್ಬರಿ 12 ಲಕ್ಷ ರೂ.ಗೆ ಮಾರಾಟ ಮಾಡಿ ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದಾನೆ.

    ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಪ್ರತಿ ಶುಕ್ರವಾರ ಉತ್ತರ ಕರ್ನಾಟಕದ ಪ್ರಸಿದ್ಧ ದನಗಳ ಸಂತೆ ನಡೆಯುತ್ತದೆ. ಈ ದನಗಳ ಸಂತೆಯಲ್ಲಿ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಖುಶಪ್ಪಾ ಕೆಂಪ್ಪಣ್ಣಾ ಹುಲೋಳ್ಳಿ ಅವರಿಗೆ ಸೇರಿದ್ದ ಜೋಡೆತ್ತುಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

    ನಗರದ ದನಗಳ ಸಂತೆಯಲ್ಲಿ ಪಾಲ್ಗೊಂಡ ರಾಸುಗಳಲ್ಲಿ ಇದೇ ಅತ್ಯಂತ ದುಬಾರಿ ಜೋಡೆತ್ತು ಎನ್ನಲಾಗಿದೆ. ಹೀಗಾಗಿ ಈ ಜೋಡೆತ್ತುಗಳು ಸಂತೆಯಲ್ಲಿ ರೈತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು. ಈ ಜೋಡೆತ್ತು ದೇಸಿ ತಳಿಯಾಗಿದ್ದು, ಎತ್ತರವಾಗಿ, ದಪ್ಪವಾಗಿ ಬೆಳೆದಿದ್ದವು. ಜೊತೆಗೆ ಈ ಜೋಡೆತ್ತು ಮುಂದೆ ತುಂಬಾ ಉಪಯೋಗದ ಕೆಲಸಕ್ಕೆ ಬರುತ್ತವೆ. ಹೀಗಾಗಿ ಈ ಜೋಡೆತ್ತುಗಳು ದುಬಾರಿ ಬೆಲೆಗೆ ಮಾರಾಟವಾಗಿವೆ.

    ಮಹಾರಾಷ್ಟ್ರದ ಪುಣೆ ಹತ್ತಿರದ ಹಳ್ಳಿಯೊಂದರ ರೈತ ಮಹಾದೇವ ನಂದೇಶ್ವರ ಎಂಬವರು ಬರೋಬ್ಬರಿ 12 ಲಕ್ಷ ರೂ.ಕೊಟ್ಟು ಈ ಜೋಡೆತ್ತುಗಳನ್ನು ಖರೀದಿ ಮಾಡಿದ್ದಾರೆ. ಈ ದುಬಾರಿ ಜೋಡೆತ್ತುಗಳನ್ನು ವೀಕ್ಷಿಸಲು ಜನರು ಸಂತೆಯಲ್ಲಿ ಮುಗಿಬಿದ್ದಿದ್ದರು. ಕೆಲವರಂತೂ ಜೋಡೆತ್ತುಗಳ ಮುಂದೆ ನಿಂತುಕೊಂಡು ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು.

  • ಮಂಗಳಾರತಿ ವೇಳೆ ಆಂಜನೇಯನ ದರ್ಶನಕ್ಕೆ ಆಗಮಿಸುತ್ತಿದೆ ಕೋತಿ

    ಮಂಗಳಾರತಿ ವೇಳೆ ಆಂಜನೇಯನ ದರ್ಶನಕ್ಕೆ ಆಗಮಿಸುತ್ತಿದೆ ಕೋತಿ

    ಚಿಕ್ಕೋಡಿ (ಬೆಳಗಾವಿ): ಶನಿವಾರ ಆಂಜನೇಯನ ವಾರ ಎನ್ನುವ ವಾಡಿಕೆ. ಹೀಗಾಗಿ ಅಂದು ಆಂಜನೇಯನ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ. ಆದರೆ ಭಕ್ತರ ಜೊತೆಗೆ ಹನುಮನ ಅವತಾರ ಎನ್ನುವ ಕೋತಿ ಆಂಜನೇಯನಿಗೆ ನಡೆಯುವ ಮಂಗಳಾರತಿ ವೇಳೆ ದೇವಸ್ಥಾನದಲ್ಲಿ ಹಾಜರಾಗುತ್ತಿದೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದ ಸುಪ್ರಸಿದ್ಧ ಹನುಮ ದೇವಾಲಯದಲ್ಲಿ ಕೋತಿ ಕಳೆದ ಒಂದು ವಾರದಿಂದ ಮಂಗಳಾರತಿ ಸಂದರ್ಭದಲ್ಲಿ ಹಾಜರಾಗಿ, ಆಂಜನೇಯನ ದರ್ಶನ ಪಡೆಯುತ್ತಿದೆ. ಜೊತೆಗೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಆಶೀರ್ವಾದ ಮಾಡುತ್ತಿದೆ.

    ಈ ಕೋತಿಯನ್ನು ಜನ ಅಷ್ಟೇ ಪ್ರೀತಿಯಿಂದ ಹಾರೈಸುತ್ತಿದ್ದು ಹನುಮನಿಗೆ ತಂದ ಪ್ರಸಾದವನ್ನು ಕೋತಿಗೆ ನೀಡುತ್ತಿದ್ದಾರೆ. ಕೋತಿ ಆಗಮನದಿಂದ ದೇವಸ್ಥಾನದಲ್ಲಿ ಸಾಕ್ಷಾತ್ ಆಂಜನೇಯನೇ ನಮಗೆ ದರ್ಶನ ನೀಡಿದ್ದಾನೆ ಎನ್ನುವ ಭಾವನೆಯನ್ನ ಭಕ್ತರು ವ್ಯಕ್ತಪಡಿಸುತ್ತಿದ್ದಾರೆ. ಕೋತಿಯನ್ನ ನೋಡಲು ಭಕ್ತರ ದಂಡೇ ದೇವಸ್ಥಾನಕ್ಕೆ ಹರಿದು ಬರುತ್ತಿದೆ.

  • ವರುಣನ ಅಬ್ಬರಕ್ಕೆ ನಿಂತ ಜಾಗದಿಂದ ಕೊಚ್ಚಿ ಹೋಗಿ ಮೋರಿಗೆ ಬಿದ್ದ ಕಾರು

    ವರುಣನ ಅಬ್ಬರಕ್ಕೆ ನಿಂತ ಜಾಗದಿಂದ ಕೊಚ್ಚಿ ಹೋಗಿ ಮೋರಿಗೆ ಬಿದ್ದ ಕಾರು

    – ಕೃಷ್ಣಾ, ವೇದಗಂಗಾ, ದೂದಗಂಗಾ ನದಿಯ ನೆರೆಯಿಂದ ತತ್ತರಿಸಿರುವ ಜನ

    ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಮತ್ತೆ ವರುಣಾಘಾತವಾಗಿದೆ. ಗಾಯದ ಮೇಲೆ ಬರೆ ಎಂಬಂತೆ ಈಗಷ್ಟೇ ನೆರೆ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುತ್ತಿರುವ ಉತ್ತರ ಕರ್ನಾಟಕದ ಜನರು ಮತ್ತೆ ಆತಂಕಕ್ಕೀಡಾಗಿದ್ದಾರೆ. ಮತ್ತೊಂದ್ಕಡೆ ಮಡಿಕೇರಿ ಸಂತ್ರಸ್ತರಿಗೆ ಸರ್ಕಾರ ಶಾಕ್ ಕೊಟ್ಟಿದೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಆಡಿ ಗ್ರಾಮದಲ್ಲಿ ಹಳ್ಳದ ನೀರು ಅವಾಂತರ ಸೃಷ್ಟಿಸಿದೆ. ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ ಮನೆಗಳ ಮೊದಲ ಮಹಡಿ ದಾಟಿದೆ. ನೀರಿನ ರಭಸಕ್ಕೆ ನಿಂತ ಜಾಗದಿಂದ ಕಾರು ಮತ್ತು ವಾಹನಗಳು ಕೊಚ್ಚಿ ಹೋಗಿ ಮೋರಿಗೆ ಬಿದ್ದಿವೆ. ಗ್ರಾಮಸ್ಥರು ತಮ್ಮ ಮನೆಯ ಮಹಡಿ ಮೇಲೆ ನಿಂತು ಮೂಕ ಪ್ರೇಕ್ಷರಂತೆ ಹಳ್ಳದ ನೀರಿನ ಹರಿವು ವೀಕ್ಷಿಸುತ್ತಿದ್ದಾರೆ. ಈಗಾಗಲೇ ಕೃಷ್ಣಾ, ವೇದಗಂಗಾ, ದೂದಗಂಗಾ ನದಿಯ ನೆರೆಯಿಂದ ಜನರು ತತ್ತರಿಸಿದ್ದಾರೆ. ಈ ಬೆನ್ನಲ್ಲೇ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜನರು ಹೈರಾಣ ಆಗಿದ್ದಾರೆ.

    ಧಾರವಾಡದಲ್ಲಿ ಧಾರಾಕಾರ ಮಳೆಗೆ ನಗರದ ಟೋಲನಾಕಾ ರಸ್ತೆ ಜಲಾವೃತಗೊಂಡು ರಸ್ತೆ ಸಂಚಾರಕ್ಕೆ ಅಡ್ಡಿಯಾದರೆ, ನವಲಗುಂದ ತಾಲೂಕಿನ ಬೆಣ್ಣಿಹಳ್ಳಕ್ಕೆ ಪ್ರವಾಹಕ್ಕೆ ಕಾಲವಾಡ ಗ್ರಾಮಕ್ಕೆ ನುಗ್ಗಿದ ಕಾರಣ ಗ್ರಾಮದಲ್ಲಿ ಬೆಣ್ಣಿಹಳ್ಳದ ನೀರು ಆವರಿಸಿಕೊಂಡಿತ್ತು. ಹಳ್ಳದ ರಭಸಕ್ಕೆ ಜಿಲ್ಲೆಯ ಅಳ್ನಾವರ-ಕಾಶೆನಟ್ಟಿ ಮಧ್ಯದ ರಸ್ತೆ ಕೊಚ್ಷಿ ಹೋಗಿ ಸಂಪರ್ಕ ಕಡಿತಗೊಂಡಿತು. ಅಷ್ಟೇ ಅಲ್ಲದೆ ಧಾರವಾಡದಲ್ಲಿ ಮಳೆ ನಿಲ್ಲದ ಕಾರಣ ನಗರದ ಜನ್ನತನಗರದಲ್ಲಿ ಹಳ್ಳದಂತೆ ನೀರು ಹರಿದರೆ, ಸಿಬಿನಗರದಲ್ಲಿ ನೀರಿನಿಂದ ಕೆರೆಯೇ ನಿರ್ಮಾಣವಾಗಿತ್ತು. ಲಕ್ಷ್ಮಿಸಿಂಗನಕೆರೆ, ಗುಲಗಂಜಿಕೊಪ್ಪ, ಕೊಪ್ಪದಕೆರೆ, ರಾಜೀವಗಾಂಧಿನಗರದ, ಕಂಠಿಗಲ್ಲಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

    ಮಡಿಕೇರಿಯಲ್ಲಿ ಮತ್ತೆ ಮಳೆಯಾಗುತ್ತಿದ್ದು, ಭಾನುವಾರದಿಂದ ಇನ್ನೂ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಆರೆಂಜ್ ಅಲರ್ಟ್ ಘೋಷಿಸಿದ್ದಾರೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಬೆಳ್ತಂಗಡಿ ತಾಲೂಕಿನ ಕುಕ್ಕಾವಿನಲ್ಲಿ ಜೀಪು ಚಾಲಕನೊಬ್ಬ ಹುಚ್ಚು ಸಾಹಸ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ತುಂಬಿಹರಿಯುತ್ತಿದ್ದ ನೀರಿನಲ್ಲಿ ಜೀಪು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕೊನೆಗೆ ಸ್ಥಳೀಯರು ಹರಸಾಹಸಪಟ್ಟು ಹಗ್ಗದಿಂದ ಜೀಪ್ ಮೇಲಕ್ಕೆತ್ತಿದ್ದಾರೆ.

    ವಿಜಯಪುರದಲ್ಲಿ ಶನಿವಾರವಷ್ಟೇ ದ್ಯಾಬೇರಿ-ಜಂಬಗಿ ಸೇತುವೆಯಲ್ಲಿ ಬೈಕ್ ಸವಾರ ಹೊಳೆ ನೀರಿನಲ್ಲಿ ಕೊಚ್ಚಿಹೋಗಿ ಈಜಿ ಬಂದು ಸೇಫ್ ಆಗಿದ್ದರು. ಇವತ್ತು ಅದೇ ಸೇತುವೆ ಮೇಲೆ ಯುವಕ ತನ್ನ ಬೈಕ್‍ನಲ್ಲಿ ಹೋಗಿ ತಗ್ಲಾಕೊಂಡು ಬೈಕ್ ಕಳೆದುಕೊಂಡಿದ್ದಾನೆ. ಅಧಿಕಾರಿಗಳು ಎಚ್ಚರಿಕೆ ನೀಡಿದರು ಹರಿಯುವ ನೀರಿನಲ್ಲಿ ಸಂಚರಿಸಿದ್ದಾನೆ.

    ಗದಗ, ಹಾವೇರಿ, ಕೊಲಾರದಲ್ಲೂ ಭಾರಿ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮನೆ, ಹೊಲ ಗದ್ದೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಗದಗನ ಗಂಗಿಮಡಿ ಬಡವಾಣೆಗೆ ಜಲ ದಿಗ್ಭಂಧನವಾಗಿದೆ. ಇನ್ನೂ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆಯಿದ್ದು, ಉತ್ತರ ಕರ್ನಾಟಕ ಮಂದಿ ಆತಂಕಕ್ಕೀಡಾಗಿದ್ದಾರೆ. ಮತ್ತೆ ಎಲ್ಲಿ ಮುಳುಗುಹೋಗುತ್ತೇವೋ ಎನ್ನುವ ಭಯದಲ್ಲಿದ್ದಾರೆ.

  • ನನಗೆ ಕಾಮನ್ ಸೆನ್ಸ್ ಇಲ್ಲ, ಕಲಿಸಿದ್ರೆ ಕಲಿಯುತ್ತೇನೆ: ಎಂಬಿಪಿಗೆ ಬಿಎಸ್‍ವೈ ತಿರುಗೇಟು

    ನನಗೆ ಕಾಮನ್ ಸೆನ್ಸ್ ಇಲ್ಲ, ಕಲಿಸಿದ್ರೆ ಕಲಿಯುತ್ತೇನೆ: ಎಂಬಿಪಿಗೆ ಬಿಎಸ್‍ವೈ ತಿರುಗೇಟು

    ಬೆಳಗಾವಿ (ಚಿಕ್ಕೋಡಿ): ನನಗೆ ಕಾಮನ್ ಸೆನ್ಸ್ ಇಲ್ಲ. ಅವರು ಕಲಿಸಿದರೆ ನಾನು ಕಲಿಯುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಸಚಿವ ಎಂ.ಬಿ.ಪಾಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಮಾತನಾಡಿದ ಅವರು, ಗೃಹ ಸಚಿವ ಎಂ.ಬಿ.ಪಾಟೀಲ್ ಬುದ್ಧಿವಂತರು. ಅವರಿಗೆ ಕಾಮನ್ ಸೆನ್ಸ್ ಇದೆ. ಸಚಿವರು ಟೀಚರ್ ಆಗಿ ಬಂದು ನನಗೆ ಪಾಠ ಮಾಡಿದರೆ ಕಲಿತುಕೊಳ್ಳಲು ಪ್ರಯತ್ನಿಸುತ್ತೇನೆ. ಅವರಿಂದ ಕಲಿಯುವುದು ಬಹಳಷ್ಟಿದೆ. ಕಲಿಸಿದರೆ ಕಲಿಯೋಣ ತೊಂದರೆ ಏನು ಇಲ್ಲ ಎಂದು ವ್ಯಂಗ್ಯವಾಡಿದರು.

    ಚಿಕ್ಕೋಡಿ ಕ್ಷೇತ್ರದಿಂದ ಬಿಜೆಪಿಯ ಯಾವ ಅಭ್ಯರ್ಥಿ ಕಣಕ್ಕೆ ಇಳಿಯುತ್ತಾರೆ ಎಂದು ಮಾಧ್ಯಮಗಳು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡಲ್ಲ. ಇದು ಹೈಕಮಾಂಡ್‍ಗೆ ಬಿಟ್ಟ ನಿರ್ಧಾರವಾಗಿದೆ. ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಅಂತಿಮ ತೀರ್ಮಾನ ದೆಹಲಿಯಲ್ಲೇ ಆಗುತ್ತದೆ ಎಂದು ಹೇಳಿದರು.

    ಚಿಕ್ಕೋಡಿ ತಾಲೂಕಿನ ಚಂದೂರು ಗ್ರಾಮದ ಯೋಧ ಪ್ರವೀಣ ಹುತಾತ್ಮರಾಗಿದ್ದಾರೆ. ಯೋಧ ಪ್ರವೀಣ ಅವರ ಕುಟುಂಬಸ್ಥರಿಗೆ ಸ್ವಾಂತನ ಹೇಳಲು ಚಂದೂರಿಗೆ ಹೋಗುತ್ತಿರುವೆ. ಜೊತೆಗೆ ಚಿಕ್ಕೋಡಿಯಲ್ಲಿ ಆಯೋಜಿಸಿದ್ದ ಮೆರವಣಿಯನ್ನು ರದ್ದು ಮಾಡಲಾಗಿದ್ದು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅತ್ತ ಕಾಂಗ್ರೆಸ್ ಶಾಸಕರ ರೆಸಾರ್ಟ್ ಪಾಲಿಟಿಕ್ಸ್ – ಇತ್ತ ಸಚಿವರ ಕ್ಷೇತ್ರದಲ್ಲಿ ಪಿಎಗಳ ದರ್ಬಾರ್..!

    ಅತ್ತ ಕಾಂಗ್ರೆಸ್ ಶಾಸಕರ ರೆಸಾರ್ಟ್ ಪಾಲಿಟಿಕ್ಸ್ – ಇತ್ತ ಸಚಿವರ ಕ್ಷೇತ್ರದಲ್ಲಿ ಪಿಎಗಳ ದರ್ಬಾರ್..!

    ಚಿಕ್ಕೋಡಿ/ಬೆಳಗಾವಿ: ಒಂದು ಕಡೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ಲಜ್ಜೆ ಬಿಟ್ಟು ರೆಸಾರ್ಟ್ ರಾಜಕಾರಣದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಇದೇ ಅವಕಾಶ ಅಂತ ಸಚಿವರ ಪಿಎಗಳು ದರ್ಪ ಮೆರೆಯುತ್ತಿದ್ದಾರೆ.

    ಆಪರೇಷನ್ ಕಮಲ ಭೀತಿಯಿಂದ ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರಿದ್ದೇ ಸೇರಿದ್ದು ಸಚಿವರ ಪಿಎಗಳ ದರ್ಬಾರ್ ಶುರುವಾಗಿದೆ. ಯಮಕನಮರಡಿ ಕ್ಷೇತ್ರದ ಶಾಸಕ ಹಾಗೂ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಾಯಕ ಪ್ರಕಾಶ್ ಬಸ್ಸಾಪೂರೆ, ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದಲ್ಲಿ ರಾಜ್ಯ ಹೆದ್ದಾರಿಯ ರಸ್ತೆ ಅಗಲೀಕರಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಈಗ ಶಾಸಕರ ಪಿಎಗಳ ಶಿಷ್ಟಾಚಾರ ಉಲ್ಲಂಘನೆ ಹಾಗೂ ದರ್ಬಾರ್ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ

    ಸತೀಶ್ ಜಾರಕಿಹೊಳಿ ಅವರಿಗೆ 10 ಕ್ಕೂ ಹೆಚ್ಚು ಜನ ಪಿಎಗಳಿದ್ದಾರೆ. ಕ್ಷೇತ್ರದಲ್ಲಿ ಶಾಸಕರಗಿಂತ ಪಿಎಗಳ ದೌಲತ್ತೆ ಹೆಚ್ಚು. ಯಾವುದೇ ಕೆಲಸ ಕಾರ್ಯಗಳು ಆಗಬೇಕಾದರೆ ಪಿಎಗಳ ರೆಕಮೆಂಡ್ ಇರಲೇಬೇಕು ಎಂದು ಕ್ಷೇತ್ರದ ಜನ ಅಳಲು ತೋಡಿಕೊಳ್ಳುತ್ತಿದ್ದರು ಶಾಸಕರು ಕೇರ್ ಮಾಡುತ್ತಿಲ್ಲ. ಹೀಗಾಗಿ ಪಿಎಗಳ ದರ್ಬಾರ್ ಹಾಗೂ ಅರಣ್ಯ ಸಚಿವರ ರೆಸಾರ್ಟ್ ರಾಜಕಾರಣದ ವಿರುದ್ಧ ಬಿಜೆಪಿ ಮುಖಂಡ ಹಾಗೂ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಾರುತಿ ಅಷ್ಟಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಲು-ಬಾಯಿ ಜ್ವರದಿಂದ ಸಾವನ್ನಪ್ಪಿದ ಹಸುಗಳು- ರೆಸಾರ್ಟ್ ನಲ್ಲಿ ಕುಳಿತ್ರು ಕಷ್ಟ ಕೇಳಬೇಕಾದ ಶಾಸಕರು !

    ಇನ್ನೂ ಭೂಮಿ ಪೂಜೆಗೆ ಲೋಕೋಪಯೋಗಿ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿ ಪಿಎಗಳಿಗೆ ಅವಕಾಶ ಕೊಟ್ಟಿದ್ದು, ಕೂಡ ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಒಂದು ಕಡೆ ಜನ ಬರಗಾಲದಿಂದ ನೀರು, ಜಾನುವಾರುಗಳ ಮೇವಿಗಾಗಿ ಪರದಾಡುತ್ತಿದ್ದರೆ ಇತ್ತ ಶಾಸಕರು ರೆಸಾರ್ಟ್ ರಾಜಕಾರಣದಲ್ಲಿ ಬ್ಯುಸಿ ಆಗಿರುವುದು ನಿಜಕ್ಕೂ ದುರಂತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಬಾಲಕಿಗೆ ಬೇಕಿದೆ ಸಹಾಯ

    ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಬಾಲಕಿಗೆ ಬೇಕಿದೆ ಸಹಾಯ

    ಬೆಳಗಾವಿ (ಚಿಕ್ಕೋಡಿ): ಓದಿನಲ್ಲಿ ಮುಂದಿರುವ ಬಾಲಕಿ ಈಗ ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬ ಉತ್ಸಾಹದಲ್ಲಿರುವ ಬಾಲಕಿಗೆ ಬಡತನ ಅಡ್ಡಿಯಾಗಿದೆ.

    ಅಥಣಿ ತಾಲೂಕಿನ ಮೋಳೆ ಗ್ರಾಮದ ವಲೀಮಾ ಗಡ್ಡೇಕರ ಪುತ್ರಿಯಾಗಿರುವ ಅಲ್ಮಾಸ್‍ಗೆ ಈಗ 14 ವರ್ಷ. ಚಿಕ್ಕೋಡಿ ತಾಲೂಕಿನ ಯಾದನವಾಡಿ ಮೊರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತೆ. ಓದಿನಲ್ಲಿ ಸದಾ ಮುಂದು. ಕುಸ್ತಿ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

    ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡುವುದೇ ಅಪರೂಪ. ಆದರೆ ಈ ಬಾಲಕಿಗೆ ಯಾವುದೇ ಕಟ್ಟಪ್ಪಣೆಗಳನ್ನು ವಿಧಿಸದೇ ಕ್ರೀಡೆ ಮತ್ತು ವಿದ್ಯಾಭ್ಯಾಸಕ್ಕೆ ತಾಯಿ ಪ್ರೋತ್ಸಾಹ ನೀಡುತ್ತಿರೋದು ಹೆಮ್ಮೆಯ ಸಂಗತಿ. ತಾಯಿಯ ಪ್ರೋತ್ಸಾಹಕ್ಕೆ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕರು ಹಾಗೂ ಸಂಬಂಧಿಕರು ಸಹಕಾರ ನೀಡುತ್ತಿದ್ದಾರೆ.

    ಕಡು ಬಡತನದಲ್ಲಿಯೂ ವಿದ್ಯಾಭ್ಯಾಸ ಮಾಡುತ್ತಾ ಅಲ್ಮಾಸ್ ಕುಸ್ತಿಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆದ್ದು ಕೀರ್ತಿ ತರಬೇಕೆಂದು ಬಾಲಕಿಯ ತಾಯಿ ವಲೀಮಾ ಮಗಳ ಸಾಧನೆಗೆ ಸೂಕ್ತ ತರಬೇತಿ ಹಾಗೂ ಕುಸ್ತಿ ಕ್ರೀಡೆಗೆ ಬೇಕಾಗಿರುವ ಗುಣಮಟ್ಟದ ಸಲಕರಣೆಗಳನ್ನು ಕೊಡಿಸಿ ಅವಳ ಪ್ರತಿಭೆಗೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    ಒಟ್ಟಿನಲ್ಲಿ ಮುಸ್ಲಿಂ ಬಾಲಕಿಯೋರ್ವಳು ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಸಾಧನೆಯ ಹಾದಿಯಲ್ಲಿ ಬೆಳೆಯುತ್ತಿರುವ ಉದಯೋನ್ಮುಖ ಪ್ರತಿಭಾವಂತೆಗೆ ಯಾರಾದ್ರೂ ದಾನಿಗಳು ಸಹಾಯ ಮಾಡುತ್ತಾರೆಂವ ವಿಶ್ವಾಸದಲ್ಲಿ ಪೋಷಕರಿದ್ದಾರೆ.

    https://www.youtube.com/watch?v=danIGq60-E0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಭಾರೀ ಮಳೆಯಿಂದಾಗಿ ಚಿಕ್ಕೋಡಿಯ 4 ಕೆಳ ಹಂತದ ಸೇತುವೆ ಮುಳುಗಡೆ!

    ಭಾರೀ ಮಳೆಯಿಂದಾಗಿ ಚಿಕ್ಕೋಡಿಯ 4 ಕೆಳ ಹಂತದ ಸೇತುವೆ ಮುಳುಗಡೆ!

    ಚಿಕ್ಕೋಡಿ: ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಕೃಷ್ಣಾ ಹಾಗೂ ಕೃಷ್ಣೆಯ ಉಪ ನದಿಗಳಾದ ದೂದ ಗಂಗಾ ಹಾಗೂ ವೇದಗಂಗಾ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಚಿಕ್ಕೋಡಿ ತಾಲೂಕಿನ 4 ಕೆಳ ಹಂತದ ಸೇತುವೆ ಮುಳುಗಡೆಯಾಗಿವೆ.

    ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರು- ಕಲ್ಲೋಳ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಭೋಜ- ಕಾರದಗಾ ಹಾಗೂ ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಭೋಜವಾಡ-ಕುನ್ನೂರು, ದತ್ತವಾಡ-ಮಲಿಕವಾಡ ಸೇತುವೆಗಳು ಮುಳುಗಡೆಯಾಗಿದ್ದು ಪರ್ಯಾಯ ಮಾರ್ಗವಾಗಿ ಜನರು ಸಂಚಾರ ಮಾಡುತ್ತಿದ್ದಾರೆ.

    ಎರಡು ಕೆಳ ಹಂತದ ಸೇತುವೆಗಳು ಇಂದು ಮುಳುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ 80 ಸಾವಿರ ಕ್ಕೂ ಹೆಚ್ಚು ಕ್ಯೂಸೆಕ್ ನೀರು ಕೃಷ್ಣಾ ನದಿಯ ಒಳ ಹರಿದು ಬರುತ್ತಿದೆ. 60 ಸಾವಿರ ಕ್ಯೂಸೆಕ್ ನೀರನ್ನ ಹಿಪ್ಪರಗಿ ಜಲಾಶಯದ ಮೂಲಕ ಹೊರ ಬಿಡಲಾಗುತ್ತಿದ್ದು, ಈ ಕುರಿತು ನದಿ ತೀರದ ಜನರಲ್ಲಿ ನದಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಗುಂಪು ಘರ್ಷಣೆ- ಪರಸ್ಪರ ಕಲ್ಲು ತೂರಾಟ

    ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಗುಂಪು ಘರ್ಷಣೆ- ಪರಸ್ಪರ ಕಲ್ಲು ತೂರಾಟ

    ಚಿಕ್ಕೋಡಿ: ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.

    ಎರಡು ಗುಂಪುಗಳ ನಡುವೆ ನಡೆದ ಗಲಭೆಯಲ್ಲಿ ಸುಮಾರು 30 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಹಾಗೂ 4 ಕಾರುಗಳು ಜಖಂಗೊಂಡಿವೆ. ಅಲ್ಲದೇ 5 ಕ್ಕೂ ಹೆಚ್ಚು ಅಂಗಡಿಗಳು ಹಾಗೂ ಮನೆಗಳ ಗಾಜುಗಳನ್ನ ಧ್ವಂಸಗೊಳಿಸಲಾಗಿದೆ.

     

    ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆ ವೇಳೆ ಸವರ್ಣೀಯರ ಕೇರಿಯಲ್ಲಿ ಹೋದ ಸಂದರ್ಭದಲ್ಲಿ ಎರಡು ಗುಂಪುಗಳ ನಡೆದ ವಾಗ್ವಾದವೇ ಘಟನೆಗೆ ಕಾರಣ ಎನ್ನಲಾಗಿದೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಸ್ಥಳಕ್ಕೆ ಅರೆ ಸೇನಾ ಪಡೆ ಸೇರಿದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

    ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಗಲಾಟೆಯಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

  • ಅಂತ್ಯಕ್ರಿಯೆಗೆ ಹೊರಟ್ಟಿದ್ದಾಗ ಭೀಕರ ಅಪಘಾತ- ಒಂದೇ ಕುಟುಂಬದ ಐವರ ದುರ್ಮರಣ

    ಅಂತ್ಯಕ್ರಿಯೆಗೆ ಹೊರಟ್ಟಿದ್ದಾಗ ಭೀಕರ ಅಪಘಾತ- ಒಂದೇ ಕುಟುಂಬದ ಐವರ ದುರ್ಮರಣ

    ಬೆಳಗಾವಿ: ಸಂಬಂಧಿಕರೊಬ್ಬರ ಅಂತ್ಯಕ್ರಿಯಿಗೆ ತೆರಳುತ್ತಿದ್ದಾಗ ಬಸ್ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಹೊರವಲಯದ ಅಥಣಿ – ಗುಡ್ಡಾಪೂರ ರಸ್ತೆಯಲ್ಲಿ ಈ ದಾರುಣ ಘಟನೆ ನಡೆದಿದೆ.

    ಅಣ್ಣಪ್ಪ ಜಾಧವ್(40), ಅರ್ಚನಾ ಜಾಧವ್(35), ರಾಧಮ್ಮ ಜಾಧವ್(55), ರವಿ ಜಾಧವ್(12) ಮತ್ತು ಗೌರವ್ವ ಜಾಧವ್(75) ಮೃತ ದುರ್ದೈವಿಗಳು. ಮೃತರು ಅಥಣಿ ತಾಲೂಕಿನ ಕಕಮರಿ ಮೂಲದವರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

    ಸಂಬಂಧಿಕರ ಅಂತ್ಯಕ್ರಿಯೆಗೆಂದು ಒಂದೇ ಕುಟುಂಬದ ಐವರು ಸೇರಿ ಒಟ್ಟು ಸುಮಾರು 16 ಮಂದಿ ಕ್ರೂಸರ್ ನಲ್ಲಿ ಕಕಮರಿ ಗ್ರಾಮದಿಂದ ಅವರಕೋಡ ಗ್ರಾಮಕ್ಕೆ ತೆರಳುತ್ತಿದ್ದರು. ಕೆಎಸ್‍ಆರ್ ಟಿಸಿ ಬಸ್ ಬನ್ನೂರಿನಿಂದ ಅಥಣಿಗೆ ಬರುತ್ತಿತ್ತು. ಈ ಸಂದರ್ಭದಲ್ಲಿ ಚಿಕ್ಕೋಡಿಯ ಅಡ್ಡಹಳ್ಳಿ ಗ್ರಾಮದ ಬಳಿ ಕೆಎಸ್‍ಆರ್ ಟಿಸಿ ಬಸ್‍  ಕ್ರೂಸರ್ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಅಥಣಿ ತಾಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಘಟನೆ ಸಂಬಂಧ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.