Tag: Chikodi

  • ಮಾಸ್ಕ್ ಧರಿಸಿ ಕೊರೊನಾ ಜಾಗೃತಿ ಮೂಡಿಸಿದ ನೂತನ ವಧು-ವರರು

    ಮಾಸ್ಕ್ ಧರಿಸಿ ಕೊರೊನಾ ಜಾಗೃತಿ ಮೂಡಿಸಿದ ನೂತನ ವಧು-ವರರು

    ಚಿಕ್ಕೋಡಿ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಮದುವೆ ಸಮಾರಂಭದಲ್ಲಿ ಕೊರೊನಾ ಜಾಗೃತಿ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಆಯೋಜಿಸಲಾಗಿತ್ತು.

    ಯಕ್ಸಂಬಾ ಪಟ್ಟಣದಲ್ಲಿ ಚವ್ಹಾಣ, ಕಮತೆ ಕುಟುಂಬದ ಮದುವೆ ಸಮಾರಂಭದಲ್ಲಿ ಕೊರೊನಾ ರೋಗದ ಕುರಿತು ಮದುವೆಗೆ ಬಂದಿದ್ದ ಜನರಿಗೆ ವಿಶೇಷ ಜಾಗೃತಿ ನೀಡಲಾಯಿತು. ಶೇಖರ-ಪ್ರೀತಿ, ಮಲ್ಲಪ್ಪ-ದೀಪಾಲಿ ಜೋಡಿಗಳ ಮದುವೆ ಸಮಾರಂಭದಲ್ಲಿ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಯಿತು.

    ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಮಾರಂಭದಲ್ಲಿ ವಧು-ವರರು ಭಾಗಿಯಾಗಿದ್ದು ವಿಶೇಷವಾಗಿತ್ತು. ಮಾಸ್ಕ್ ಧರಿಸುವುದರಿಂದ ಕೊರೊನಾ ರೋಗ ಹರಡುವುದಿಲ್ಲ ಹಾಗೂ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಮುಖವನ್ನು ಕೈಗಳಿಂದ ಜಾಸ್ತಿ ಮುಟ್ಟಿಕೊಳ್ಳಬಾರದು ಎನ್ನುವ ಸಂದೇಶವನ್ನು ಜನರಿಗೆ ಮದುವೆ ಸಮಾರಂಭದಲ್ಲಿ ಆರೋಗ್ಯ ಇಲಾಖೆಯಿಂದ ನೀಡಲಾಯಿತು.

  • ಬೇರೆ ಕಡೆ ಅನುದಾನ ನೀಡಲು ಮುಂದಾದ ಅಧಿಕಾರಿ – ಗ್ರಾ.ಪಂ ಅಧ್ಯಕ್ಷೆಯಿಂದ ತರಾಟೆ

    ಬೇರೆ ಕಡೆ ಅನುದಾನ ನೀಡಲು ಮುಂದಾದ ಅಧಿಕಾರಿ – ಗ್ರಾ.ಪಂ ಅಧ್ಯಕ್ಷೆಯಿಂದ ತರಾಟೆ

    ಚಿಕ್ಕೋಡಿ/ಬೆಳಗಾವಿ: ದಲಿತರಿಗೆ ಬಂದಿದ್ದ ಅನುದಾನವನ್ನ ಬೇರೆ ಕಡೆ ನೀಡಲು ಬಂದಿದ್ದ ಅಧಿಕಾರಿಯನ್ನ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ನಡೆದಿದೆ.

    ಎಲಿಮುನ್ನೋಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಸ್ತೂರಿ ತಿಪ್ಪಾಗೋಳ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಹುಕ್ಕೇರಿ ತಾಲೂಕು ಪಂಚಾಯಿತಿ ಕಿರಿಯ ಅಭಿಯಂತರಾದ ಆರ್.ಬಿ.ಶ್ರೀಖಂಡೆ ಎಲಿಮುನ್ನೋಳಿ ಗ್ರಾಮದ ದಲಿತರಿಗೆ ಮೀಸಲಿಟ್ಟಿದ್ದ ಅನುದಾನವನ್ನ ಬೇರೆ ಕಡೆ ವರ್ಗಾವಣೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ವಿಚಾರಿಸಲು ತಾಲೂಕು ಪಂಚಾಯ್ತಿ ಕಚೇರಿಗೆ ಬಂದಿದ್ದರು. ಈ ವೇಳೆ ಅವರ ಜೊತೆಗೆ ಅಸಭ್ಯವಾಗಿ ವರ್ತಿಸಿದ ಅಭಿಯಂತರರ ವಿರುದ್ಧ ಗರಂ ಆದ ಅಧ್ಯಕ್ಷರು ಶ್ರೀಖಂಡೆರನ್ನು ತರಾಟೆಗೆ ತೆಗೆದುಕೊಂಡರು.

    ಇದನ್ನೆಲ್ಲಾ ಗಮನಿಸಿ ತೆಪ್ಪಗಾದ ಶ್ರೀಖಂಡೆ, ನೀವು ಎಲ್ಲಿ ಹೇಳುತ್ತೀರೋ ಅಲ್ಲಿಯೇ ಬೋರ್ ವೆಲ್ ಕೊರೆಸಿ ಕೊಡುತ್ತೇನೆ ಹೋಗಿ ಎಂದು ಸಮಾಧಾನ ಮಾಡಲು ಮುಂದಾಗಿದ್ದರು. ಅಧ್ಯಕ್ಷರು ತರಾಟೆಗೆ ತೆಗೆದುಕೊಳ್ಳುತ್ತಿದ್ದ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದ ಪತ್ರಕರ್ತರ ಮೇಲೂ ದರ್ಪ ತೋರಿದ್ದಾರೆ. ಮುಂದೆ ಬನ್ನಿ ಇನ್ನೂ ಚೆನ್ನಾಗಿ ಬರುತ್ತೆ ಎಂದು ಉಡಾಫೆಯಾಗಿ ಮಾತಾಡಿದ್ದಾರೆ. ಆಗ ಅಲ್ಲಿದ್ದ ಪತ್ರಕರ್ತರು ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡರು. ಬಳಿಕ ತೆಪ್ಪಗಾಗಿ ಕುಳಿತ ಅಧಿಕಾರಿ ಇರುಸು ಮುರಿಸುಗೊಂಡು ತಮ್ಮ ಕಾರ್ಯವನ್ನ ಆರಂಭಿಸಿದರು.

  • ಸಾಲಮನ್ನಾ ಬೇಡ, ಆಫೀಸ್‍ಗೆ ಹೋದ್ರೆ ರೈತರನ್ನ ಕೂರಿಸಿ ಏನಪ್ಪ ಅಂತ ಕೇಳುವಂತ ಅಧಿಕಾರಿ ಬೇಕು: ಡ್ರೋಣ್ ಪ್ರತಾಪ್

    ಸಾಲಮನ್ನಾ ಬೇಡ, ಆಫೀಸ್‍ಗೆ ಹೋದ್ರೆ ರೈತರನ್ನ ಕೂರಿಸಿ ಏನಪ್ಪ ಅಂತ ಕೇಳುವಂತ ಅಧಿಕಾರಿ ಬೇಕು: ಡ್ರೋಣ್ ಪ್ರತಾಪ್

    – ಪರಿಶ್ರಮ ಒಂದೇ ಸಾಧನೆಯ ಮುಖ್ಯ ಅಸ್ತ್ರ

    ಚಿಕ್ಕೋಡಿ/ಬೆಳಗಾವಿ:  ರೈತರಿಗೆ ಸರ್ಕಾರ ಸಾಲಮನ್ನಾ ಮಾಡುವುದು ಬೇಡ, ಆಫೀಸ್‍ಗೆ ಹೋದರೆ ರೈತರನ್ನ ಕೂರಿಸಿ ಏನಪ್ಪ ಅಂತ ಕೇಳುವಂತ ಅಧಿಕಾರಿ ಬೇಕು ಎಂದು  ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಹೇಳಿದರು.

    ಜಿಲ್ಲೆಯ ನದಿ ಇಂಗಳಗಾಂವದಲ್ಲಿ ನಡೆದ ಅದಮ್ಯ ಫೌಂಡೇಶನ್ ವತಿಯಿಂದ ಅದಮ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶೇಷ ಆಹ್ವಾನಿತರಾಗಿ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಆಗಮಿಸಿದ್ದರು. ಈ ವೇಳೆ ಮಾತನಾಡಿ, ಮೊಬೈಲ್‍ಗಳ ಮಿತವಾದ ಬಳಕೆಯ ಜೊತೆಗೆ ತಂತ್ರಜ್ಞಾನದ ಅರಿವು ಇರಬೇಕು. ಸತತವಾದ ಪರಿಶ್ರಮ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಬರುತ್ತದೆ ಎಂದರು.

    ನಮ್ಮ ದೇಶದಲ್ಲಿ ರೈತನಿಗೆ ಸರ್ಕಾರ ಮಾಡುವ ಸಾಲಮನ್ನಾ ಬೇಡ. ಅವರು ಒಂದು ಕಚೇರಿಗೆ ಹೋದರೆ ಕೂರಿಸಿ ಏನಪ್ಪ ಅಂತ ಕೇಳುವಂತ ಅಧಿಕಾರಿ ಬೇಕು. ನಾನು ಒಬ್ಬ ರೈತನ ಮಗನಾಗಿ ರೈತರ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.

    ಸಮಾಜದ ಮೂಲೆಯಲ್ಲಿರುವ ಯುವ ಸಾಧಕರನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ಕೆಲಸ ಅದಮ್ಯ ಫೌಂಡೇಶನ್ ಮಾಡುತ್ತಿದ್ದು, ಅವರ ಕೆಲಸ ಶ್ಲಾಘನೀಯ. ಸತತವಾದ ಪರಿಶ್ರಮ ಒಂದೇ ಸಾಧನೆಯ ಮುಖ್ಯ ಅಸ್ತ್ರ. ತಂದೆ ತಾಯಿಗಳನ್ನು ಪೂಜ್ಯನಿಯ ಭಾವದಿಂದ ನೋಡಿಕೊಂಡು ಮೌಲ್ಯಯುತವಾಗಿ ಇಂದಿನ ಯುವ ಸಮೂಹ ಜೀವನ ನಡೆಸಬೇಕು ಎಂದು ತಿಳಿಸಿದ್ದಾರೆ.

    ಅದಮ್ಯ ಫೌಂಡೇಶನ್ ಪ್ರಾರಂಭವಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅದಮ್ಯೋತ್ಸವ ಕಾರ್ಯಕ್ರಮದಲ್ಲಿ ಯುವ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ಯುವಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಳೆದ ವರ್ಷ ಪುಲ್ವಾಮಾ ದಾಳಿಯಲ್ಲಿ ವೀರ ಮರಣ ಹೊಂದಿದ್ದ ಭಾರತೀಯ ಯೋದರಿಗೆ ಗೀತ ನಮನ ಸಲ್ಲಿಸಲಾಗಿದೆ.

    ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಇಂದಿನ ಯುವಕರು ಬೇಡದ ಕೆಲಸಗಳಿಂದ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂತವರಿಗೆ ಬದುಕಿನ ಮೌಲ್ಯಗಳ ಜೊತೆಗೆ ಆಧ್ಯಾತ್ಮಿಕ ಸಾರ ನೀಡಬೇಕಾದ ಅವಶ್ಯಕತೆ ಇದೆ. ಈ ಕೆಲಸವನ್ನು ಕಳೆದ ಒಂದು ವರ್ಷದಿಂದ ಅದಮ್ಯ ಫೌಂಡೇಶನ್ ಮಾಡುತ್ತಿದೆ ಎಂದರು.

  • ಸ್ವಚ್ಛತೆ ಕಾಪಾಡದಿದ್ರೆ ಒದ್ದು ಬಿಹಾರಕ್ಕೆ ಕಳಿಸ್ತೀನಿ: ಉಮೇಶ್ ಕತ್ತಿ

    ಸ್ವಚ್ಛತೆ ಕಾಪಾಡದಿದ್ರೆ ಒದ್ದು ಬಿಹಾರಕ್ಕೆ ಕಳಿಸ್ತೀನಿ: ಉಮೇಶ್ ಕತ್ತಿ

    ಚಿಕ್ಕೋಡಿ: ಸ್ವಚ್ಛತೆ ಕಾಪಾಡದಿದ್ದರೆ ಒದ್ದು ಬಿಹಾರಕ್ಕೆ ಓಡಿಸುತ್ತೇನೆ ಎಂದು ಸ್ವಚ್ಛತಾ ನೌಕರರನ್ನು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ತರಾಟೆಗೆ ತೆಗೆದುಕೊಂಡಿದ್ದರು.

    ಬೆಳಗಾವಿ ಜಿಲ್ಲೆ ಹುಕ್ಕೇರಿ ಬಸ್ ನಿಲ್ದಾಣಕ್ಕೆ ಶಾಸಕ ಉಮೇಶ್ ಕತ್ತಿ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದ ವ್ಯವಸ್ಥೆ ನೋಡಿ ಗರಂ ಆದ ಶಾಸಕ ಕತ್ತಿ ಅಧಿಕಾರಿಗಳನ್ನ ಹಾಗೂ ಸ್ವಚ್ಛತೆ ಮಾಡುತ್ತಿದ್ದ ಕಾರ್ಮಿಕರನ್ನ ತರಾಟೆಗೆ ತೆಗೆದುಕೊಂಡರು.

    ಸ್ವಚ್ಛತೆ ಕಾಪಾಡದಿದ್ದರೆ ಒದ್ದು ಬಿಹಾರಕ್ಕೆ ಓಡಿಸುತ್ತೇನೆ ಎಂದು ಸ್ವಚ್ಛತಾ ನೌಕರನನ್ನ ತೀವ್ರ ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲದೇ ಬಸ್ ನಿಲ್ದಾಣದ ಅಸ್ವಚ್ಛತೆ ಕಂಡು ಸ್ವಚ್ಛತೆ ಕಾಪಾಡದ ಬಿಹಾರ ಮೂಲದ ಗುತ್ತಿಗೆದಾರನ ಲೈಸೆನ್ಸ್ ರದ್ದು ಮಾಡಲು ಸೂಚನೆ ನೀಡಿದರು. ಜೊತೆಗೆ ಸ್ಥಳೀಯರಿಗೆ ಸ್ವಚ್ಛತೆಯ ಗುತ್ತಿಗೆ ನೀಡುವಂತೆ ಒತ್ತಾಯಿಸಿದರು.

    ಬಸ್ ನಿಲ್ದಾಣದಲ್ಲಿ ವೃದ್ಧರು ಹಾಗೂ ಹಿರಿಯರಿಗೆ ಅನುಕೂಲವಾಗುವ ಆಸನಗಳ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸಂಕೇಶ್ವರ ಡಿಪೋ ಮ್ಯಾನೇಜರ್ ನಾಡಗೌಡ, ಬಿಜೆಪಿ ಮುಖಂಡರಾದ ಗುರು ಕುಲಕರ್ಣಿ, ಸದಾ ಮರಬಸ್ಸನವರ, ರಾಜು ಮುನ್ನೋಳಿ, ಶೇಖರ್ ತರೀಕರ ಸೇರಿದಂತೆ ಹಲವರು ಹಾಜರಿದ್ದರು.

  • ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ – ಕುಮಟಳ್ಳಿ ಸಂತಸ

    ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ – ಕುಮಟಳ್ಳಿ ಸಂತಸ

    ಚಿಕ್ಕೋಡಿ/ಬೆಳಗಾವಿ: ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ಹಂಚಿಕೆಯಾಗಿರುವುದಕ್ಕೆ ಅಥಣಿ ಶಾಸಕ ಹಾಗೂ ರಮೇಶ್ ಜಾರಕಿಹೊಳಿ ಆಪ್ತ ಸ್ನೇಹಿತ ಮಹೇಶ್ ಕುಮಟಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ – ಯಾರಿಗೆ ಯಾವ ಖಾತೆ ಸಿಗಬಹುದು?

    ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ಜಲಸಂಪನ್ಮೂಲ ಸಚಿವರಾಗಿರುವುದು ಸಂತಸ ತಂದಿದೆ. ಉತ್ತರ ಕರ್ನಾಟಕದವರಿಗೆ ಈ ಖಾತೆ ಸಿಕ್ಕಿದ್ದು ಮತ್ತಷ್ಟು ಖುಷಿ ತಂದಿದೆ. ಈ ಭಾಗದ ನೆನೆಗುದಿಗೆ ಬಿದ್ದಿರುವ ಹಾಗೂ ಹೊಸ ಯೋಜನೆಗಳನ್ನ ರಮೇಶ್ ಜಾರಕಿಹೊಳಿ ಅವರು ಜಾರಿಗೆ ತರುತ್ತಾರೆ ಎಂದರು.

    ರಮೇಶ್ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ಸಿಕ್ಕಿರುವುದರಿಂದ ಈ ಭಾಗದ ಜನರಿಗೆ ಸಾಕಷ್ಟು ಅನಕೂಲವಾಗಲಿದೆ. ಅವರಿಗೆ ಈ ಖಾತೆ ಕೊಟ್ಟಿದ್ದು ಯೋಗ್ಯವಾಗಿದೆ. ಅನೇಕ ಯೋಜನೆಗಳನ್ನ ಅವರು ಪೂರ್ಣ ಮಾಡಿಕೊಡುವ ವಿಶ್ವಾಸ ಇದೆ. ಹೀಗಾಗಿ ಅವರಿಗೆ ಈ ಸ್ಥಾನ ನೀಡಿದ್ದು ಹರ್ಷ ತಂದಿದೆ ಎಂದು ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

  • ಸ್ನೇಹಿತನನ್ನ ಅಪಘಾತದಲ್ಲಿ ಸಾಯಿಸಿ ಪೊದೆಗೆ ಶವ ಎಸೆದ ಚಾಲಾಕಿ ಅರೆಸ್ಟ್

    ಸ್ನೇಹಿತನನ್ನ ಅಪಘಾತದಲ್ಲಿ ಸಾಯಿಸಿ ಪೊದೆಗೆ ಶವ ಎಸೆದ ಚಾಲಾಕಿ ಅರೆಸ್ಟ್

    ಚಿಕ್ಕೋಡಿ: ರಸ್ತೆ ಉಬ್ಬು ದಾಟುವಾಗ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟ ಸ್ನೇಹಿತನ ಶವವನ್ನು ಪೊದೆಗೆ ಎಸೆದಿದ್ದ ಚಾಲಾಕಿ ಚಾಲಕ ಈಗ ಪೋಲಿಸರ ಅತಿಥಿಯಾಗಿದ್ದಾನೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅವರಗೋಳ ನಿವಾಸಿ ರಮೇಶ ಕುಗಟೋಳಿ ಎಂಬ ಆರೋಪಿಯನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಕ್ಕರೆ ಕಾರ್ಖಾನೆಗೆ ಕಬ್ಬು ತೆಗೆದುಕೊಂಡು ಹೋಗಿದ್ದ ರಮೇಶ್ ಹಾಗೂ ಆತನ ಸ್ನೇಹಿತ ಬಾಬು ಮುಲ್ತಾನಿ ಅನ್ ಲೋಡ್ ಮಾಡಿ ವಾಪಸ್ ಮನೆಗೆ ತೆರಳುವಾಗ ಮುಂದೆ ಕುಳಿತಿದ್ದ ಬಾಬು ಆಯತಪ್ಪಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದ. ಈ ಆರೋಪ ತನ್ನ ಮೇಲೆ ಬರುತ್ತದೆ ಎಂದು ಭಾವಿಸಿದ್ದ ರಮೇಶ್ ಆತನ ಶವವನ್ನು ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಬಳಿ ಇರುವ ಪೊದೆಯೊಂದರಲ್ಲಿ ಎಸೆದು ಮನೆಗೆ ಬಂದು ಸುಮ್ಮನೆ ಇದ್ದುಬಿಟ್ಟಿದ್ದ.

    ನಂತರ ಬಾಬು ಪೋಷಕರು ತಮ್ಮ ಮಗ ಒಂದು ವಾರವಾದರೂ ಮನೆಗೆ ಬರದಿದ್ದನ್ನು ಗಮನಿಸಿ ಹುಕ್ಕೇರಿ ಪೊಲೀಸರಿಗೆ ಕಾಣೆಯಾಗಿರುವ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದಾಗ, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಅನಾಥ ಶವ ಸಿಕ್ಕಿರುವ ಕುರಿತು ಪ್ರಕರಣ ದಾಖಾಲಾಗಿತ್ತು. ತಕ್ಷಣ ಯಮಕನಮರಡಿ ಪೊಲೀಸರು ಶವದ ಕುರಿತು ಬಾಬು ಪೋಷಕರಿಗೆ ಮಾಹಿತಿ ನೀಡಿದಾಗ ಅದು ಬಾಬು ಶವ ಎಂದು ಖಚಿತವಾಗಿತ್ತು.

    ಜನವರಿ 7ನೇ ತಾರೀಕು ಯಮಕನಮರಡಿ ಪೊಲೀಸರು ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ನೇತೃತ್ವದಲ್ಲಿ ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಸಿದ ಕೇವಲ 2 ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಮೇಶ್ ಮತ್ತು ಬಾಬು ಇಬ್ಬರೂ ಸಹ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದ್ದು, ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪೊಲೀಸ್ ತನಿಖೆ ನಡೆಸಿ ಪ್ರಕರಣ ಬೇಧಿಸಿದ ಯಮಕನಮರಡಿ ಪಿ.ಎಸ್.ಐ ರಮೇಶ ಪಾಟೀಲ, ಹುಕ್ಕೇರಿ ಪಿ.ಎಸ್.ಐ ಶಿವಾನಂದ ಗುಡಗನಟ್ಟಿ, ಸಿಬ್ಬಂದಿಗಳಾದ ಎಸ್.ಎಮ್ ಚಿಕ್ಕಣ್ಣವರ, ಆನಂದ ಜೈನಾಪೂರ, ವಿಠಲ ನಾಯಕ, ಬಿ.ವಿ ನೇರಲಿ, ಏಲ್ ವೈ ಖಿಲಾರಾಗಿ, ಆರ್ ಆರ್ ಗಿಡ್ಡಪ್ಪಗೋಳ, ಎಸ್ ಎ ಶೇಖ ಸೇರಿದಂತೆ ಹಲವರು ಭಾಗಿಯಾಗಿದ್ದು ತನಿಖಾ ತಂಡಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅಭಿನಂದಿಸಿದ್ದಾರೆ.

  • ಸ್ಮಶಾನದಲ್ಲಿ ಮಗಳ ಹುಟ್ಟುಹಬ್ಬ – ಮೌಢ್ಯಕ್ಕೆ ಸೆಡ್ಡು ಹೊಡೆದ ಕಾರ್ಯಕರ್ತ

    ಸ್ಮಶಾನದಲ್ಲಿ ಮಗಳ ಹುಟ್ಟುಹಬ್ಬ – ಮೌಢ್ಯಕ್ಕೆ ಸೆಡ್ಡು ಹೊಡೆದ ಕಾರ್ಯಕರ್ತ

    ಚಿಕ್ಕೋಡಿ: ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಹೋಟೆಲ್‍ನಲ್ಲಿ ಅಥವಾ ಮನೆಯಲ್ಲಿ ಆಚರಿಸುವುದು ಸಾಮಾನ್ಯ ಸಂಗತಿ. ಆದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಮಹೇಶ ಶಿಂಗೆ ಅವರು ತಮ್ಮ ಮಗಳ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.

    ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಸ್ಥಾಪಿಸಿರುವ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತನಾಗಿರುವ ಮಹೇಶ ಶಿಂಗೆ, ತಮ್ಮ ಮಗಳ ಹುಟ್ಟುಹಬ್ಬವನ್ನು ಸ್ಮಶಾನಲ್ಲಿ ಆಚರಿಸಿ ಮಾಢ್ಯಕ್ಕೆ ಸೆಡ್ಡು ಹೊಡಿದಿದ್ದಾರೆ. ಮಹೇಶ ಶಿಂಗೆ ತಮ್ಮ ಮಗಳಾದ ಜೀಜಾಬಾಯಿ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿದ್ದು, ಸ್ಮಶಾನದಲ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

    ಸ್ಮಶಾನದಲ್ಲಿ ಹಾಡು, ಮಾತು, ಚರ್ಚೆಯೊಂದಿಗೆ ಉಪಾಹಾರ ಸೇವಿಸಿ ಸಂಭ್ರಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾನವ ಬಂದುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ, ತಾ.ಪಂ ಸದಸ್ಯ ಹೂವಣ್ಣಾ ಚೌಗಲೆ, ಮುನ್ನಾ ಬಾಗವಾನ್, ಜೀವನ ಮಾಂಜರೇಕರ್, ಗಾಯತ್ರಿ ಮಾಳಗಿ ಆನಂದ ಗೋಕಾಕ್, ಪುಂಡಲೀಕ ದನವಾಡೆ ಸೇರಿದಂತೆ ನೂರಾರು ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಮತ್ತು ದಲಿತ ಮುಖಂಡರು ಇದ್ದರು.

  • ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ್ ವಿಧಿವಶ

    ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ್ ವಿಧಿವಶ

    ಚಿಕ್ಕೋಡಿ(ಬೆಳಗಾವಿ): ಮಾಜಿ ಸಚಿವ ಮಲ್ಲಾರಿಗೌಡ ಶಂಕರ್ ಪಾಟೀಲ್ ವಿಧಿವಶರಾಗಿದ್ದಾರೆ.

    ಸಂಕೇಶ್ವರ ವಿಧಾನಸಭಾ ಮತ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದ ಮಲ್ಲಾರಿಗೌಡ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಅವರ ಸ್ವಂತ ಊರು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಮನೆಯಲ್ಲಿ ಮಲ್ಲಾರಿಗೌಡ ಪಾಟೀಲ್ ಕೊನೆಯುಸಿರು ಎಳೆದಿದ್ದಾರೆ.

    ಕಾಂಗ್ರೇಸ್ ಪಕ್ಷದ ಶಾಸಕರಾಗಿ ಒಂದು ಬಾರಿ ಬೃಹತ್ ನೀರಾವರಿ ಇಲಾಖೆಯ ಸಚಿವರಾಗಿ ಮಲ್ಲಾರಿಗೌಡ ಪಾಟೀಲ್ ಕಾರ್ಯ ನಿರ್ವಹಿಸಿದ್ದರು. ಸಂಕೇಶ್ವರ ಪಟ್ಟಣದ ಸ್ವಂತ ಜಮೀನಿನಲ್ಲಿ ಮೃತರ ಅಂತ್ಯಸಂಸ್ಕಾರ ಜರುಗಿದೆ.

    ಹುಕ್ಕೇರಿ ತಾಲೂಕಿಗೆ ವಿವಿಧ ನೀರಾವರಿ ಯೋಜನೆಗಳನ್ನ ಜಾರಿ ಮಾಡಿ ಈ ಭಾಗದ ನೀರಾವರಿ ಹರಿಕಾರ ಎಂದು ಮಲ್ಲಾರಿಗೌಡ ಪಾಟೀಲ್ ಗುರುತಿಸಿಕೊಳ್ಳುತ್ತಿದ್ದರು. ಹಿಡಕಲ್ ಜಲಾಶಯದಿಂದ ಅನೇಕ ಕುಡಿಯುವ ನೀರಿನ ಯೋಜನೆಗಳನ್ನ ಮಲ್ಲಾರಿಗೌಡ ಜಾರಿಗೆ ತಂದಿದ್ದರು.

  • ಹಸುವಿಗೆ ಸೀಮಂತ ಮಾಡಿ, ಉಡಿ ತುಂಬಿದ್ರು

    ಹಸುವಿಗೆ ಸೀಮಂತ ಮಾಡಿ, ಉಡಿ ತುಂಬಿದ್ರು

    ಚಿಕ್ಕೋಡಿ/ಬೆಳಗಾವಿ: ಗೋ ಮಾತೆ ಎಂದು ಪೂಜಿಸುವ ಹಸುವಿಗೆ ಸೀಮಂತ ಕಾರ್ಯಕ್ರಮ ನೇರವೇರಿಸಿದ ಅಪರೂಪದ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾಂಗೂರ ಗ್ರಾಮದಲ್ಲಿ ನಡೆದಿದೆ.

    ಮಾಂಗೂರ ಗ್ರಾಮದ ರಾವಸಾಹೇಬ ಜಿನ್ನಪ್ಪಾ ಮಾಣಕಾಪುರೆ ಅವರಿಗೆ ಸೇರಿದ ಹಸು ಗರ್ಭ ಧರಿಸಿತ್ತು. ಮಣಕಾಪೂರೆ ಕುಟುಂಬಸ್ಥರು ತಮ್ಮ ಗರ್ಭವತಿ ಹಸುವಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಹಸುವಿಗೆ ಉಡಿ ತುಂಬಿ, ಹೂ ಮಾಲೆ ಹಾಕಿ ಹೂಗಳ ದಂಡಿಯನ್ನು ಕಟ್ಟಿ, ಹಸಿರು ಬಳೆ ತೊಡೆಸಿ, ಸೀರೆಯನ್ನು ತೊಡಿಸಿ ಶೃಂಗರಿಸಿದ್ದರು.

    ಜೊತೆಗೆ ಗ್ರಾಮದ ಮುತೈದೆಯರು ಉಡಿ ತುಂಬಿದ್ದಾರೆ. ಹಸುವಿಗೆ ಉಡಿ ತುಂಬುವ ಅಪರೂಪದ ಸೀಮಂತ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದರು. ಕಾರ್ಯಕ್ರಮಕ್ಕೆ ಮಣಕಾಪೂರೆ ಕುಟುಂಬಸ್ದರು ಸೇರಿದಂತೆ ಅನೇಕ ಹೆಣ್ಣು ಮಕ್ಕಳು ಹಾಗೂ ಪುರುಷರು ಭಾಗಿಯಾಗಿದ್ದರು. ಇವರೆಲ್ಲರೂ ಹಸುವಿನ ಸೀಮಂತ ಕಾರ್ಯಕ್ಕೆ ಸಾಕ್ಷಿಯಾಗಿದ್ದರು.

  • ಕೊಯ್ನಾದಲ್ಲಿ ಭೂಕಂಪ – ಕೃಷ್ಣಾ ನದಿ ತೀರದಲ್ಲಿ ಆತಂಕ

    ಕೊಯ್ನಾದಲ್ಲಿ ಭೂಕಂಪ – ಕೃಷ್ಣಾ ನದಿ ತೀರದಲ್ಲಿ ಆತಂಕ

    ಚಿಕ್ಕೋಡಿ: ಕೊಯ್ನಾ ಜಲಾಶಯದ ಪರಿಸರದಲ್ಲಿ ಮತ್ತೆ ಭೂಕಂಪನ ದಾಖಲಾಗಿದೆ. ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪಾಟಣ ತಾಲೂಕಿನ ಕೊಯ್ನಾ ಜಲಾಶಯದ ಪರಿಸರದಲ್ಲಿ ಭೂಕಂಪನ ಸಂಭವಿಸಿದೆ.

    ಇಂದು ಬೆಳಗ್ಗೆ 6:42 ಕ್ಕೆ ಭೂಮಿ ಕಂಪಿಸಿದ್ದು, 2.8 ರಷ್ಟು ರಿಕ್ಟರ್ ಮಾಪನದಲ್ಲಿ ಭೂಕಂಪನ ದಾಖಲಾಗಿದೆ. ಕೊಯ್ನಾ ಜಲಾಶಯದ 8 ಕಿ.ಮೀಗಳವರೆಗೆ ಭೂಕಂಪನದ ಅನುಭವವಾಗಿದೆ ಎಂದು ಕೊಯ್ನಾ ಜಲಾಶಯದ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

    105 ಟಿಎಂಸಿ ನೀರು ಸಂಗ್ರಹಣೆಯ ಕೊಯ್ನಾ ಜಲಾಶಯದಲ್ಲಿ ಈಗ 65 ಟಿಎಂಸಿಕ್ಕೂ ಹೆಚ್ಚು ಸಂಗ್ರಹ ಇದೆ. ಕೊಯ್ನಾ ಜಲಾಶಯದದಿಂದ ಹೆಚ್ಚಿನ ನೀರು ಹರಿದು ಬಂದು ಕೃಷ್ಣಾ ನದಿ ಸೇರಿಕೊಳ್ಳುತ್ತದೆ. ಕೊಯ್ನಾ ಜಲಾಶಯದಿಂದ ಹೆಚ್ಚಿನ ನೀರು ಹರಿದು ಬಂದಾಗ ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗಿ ಕೊಯ್ನಾ ಜಲಾಶಯದ ಪರಿಸರದಲ್ಲಿ ಭೂಕಂಪನ ಹಿನ್ನೆಲೆಯಲ್ಲಿ ಕೊಯ್ನಾ ಹಾಗೂ ಕೃಷ್ಣಾ ನದಿ ತೀರದಲ್ಲಿ ಆತಂಕ ಎದುರಾಗಿದೆ.

    ಕೊಯ್ನಾ ಜಲಾಶಯಕ್ಕೆ ಯಾವುದೇ ಧಕ್ಕೆ ಆದರೂ ಅದರ ನೇರ ಎಫೆಕ್ಟ್ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೃಷ್ಣಾ ನದಿ ತೀರದ ಮೇಲೆ ಆಗಲಿದೆ. ಹೀಗಾಗಿ ಈ ವರ್ಷದಲ್ಲಿ ಎರಡು ಬಾರಿ ಈ ಪರಿಸರದಲ್ಲಿ ಭೂಕಂಪನ ಸಂಭವಿಸಿರುವ ಕಾರಣ ಮತ್ತೆ ಆತಂಕಕ್ಕೆ ಕಾರಣವಾಗಿದೆ. ಸದ್ಯ ಭೂಕಂಪನ ಸಂಭವಿಸಿದ್ದರೂ ಹೆಚ್ಚಿನ ನೀರನ್ನ ಜಲಾಶಯದಿಂದ ಹೊರ ಬಿಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.