Tag: Chikodi

  • ರೈತರಿಂದ ತರಕಾರಿ ಖರೀದಿಸಿ ಬಡ ಜನರಿಗೆ ಉಚಿತವಾಗಿ ಹಂಚುತ್ತಿರೋ ಶಾಸಕ

    ರೈತರಿಂದ ತರಕಾರಿ ಖರೀದಿಸಿ ಬಡ ಜನರಿಗೆ ಉಚಿತವಾಗಿ ಹಂಚುತ್ತಿರೋ ಶಾಸಕ

    ಚಿಕ್ಕೋಡಿ/ಬೆಳಗಾವಿ: ಮಹಾಮಾರಿ ಕೊರೊನಾ ಲಾಕ್‍ಡೌನ್‍ನಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಬಡ ಜನರಿಗೆ ಹಾಗೂ ರೈತರಿಗೆ ಲಾಕ್‍ಡೌನ್‍ನಿಂದ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಶಾಸಕರೊಬ್ಬರು ರೈತರಿಂದ ತರಕಾರಿ ಖರೀದಿಸಿ ಬಡ ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ.

    ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ ಬಡ ಜನರಿಗೆ ಅನುಕೂಲ ಆಗಬೇಕು ಎನ್ನುವ ನಿಟ್ಟಿನಲ್ಲಿ ರೈತರು ಬೆಳೆದ ತರಕಾರಿಯನ್ನ ತಾವೇ ಖರೀದಿಸಿ ಬಡ ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ.

    ದಿನನಿತ್ಯ ತಮ್ಮ ಕ್ಷೇತ್ರದ ರೈತರನ್ನ ತಾವೇ ಖುದ್ದಾಗಿ ಭೇಟಿ ಆಗಿ ಅವರಿಂದ ಮಾರುಕಟ್ಟೆ ಬೆಲೆಯಲ್ಲಿ ತರಕಾರಿ ಖರೀದಿಸುತ್ತಿದ್ದಾರೆ. ನಂತರ ತಮ್ಮ 10 ಜನರ ಕಾರ್ಯಕರ್ತರ ಮೂಲಕ ಖರೀದಿಸಿದ ತರಕಾರಿಗಳನ್ನ  ಪ್ಯಾಕ್ ಮಾಡಿಸುತ್ತಾರೆ.

    ಬಳಿಕ ತಮ್ಮದೇ ವಾಹನದಲ್ಲಿ ಬಡ ಜನರು ಇರುವ ಏರಿಯಾಗಳಿಗೆ ಹೋಗಿ ತರಕಾರಿಯನ್ನ ತಲುಪಿಸುವ ಕಾರ್ಯವನ್ನ ಮಾಡುತ್ತಿದ್ದಾರೆ. ಇದರಿಂದ ರೈತರೂ ಹಾಗು ಬಡ ಜನ ಇಬ್ಬರಿಗೂ ಅನಕೂಲವಾಗುತ್ತಿದೆ. ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗುತ್ತಿದೆ.

  • 20 ರೂಪಾಯಿಗಾಗಿ 4 ವರ್ಷದ ಮಗುವನ್ನೇ ಕೊಂದ ಯುವತಿ

    20 ರೂಪಾಯಿಗಾಗಿ 4 ವರ್ಷದ ಮಗುವನ್ನೇ ಕೊಂದ ಯುವತಿ

    ಚಿಕ್ಕೋಡಿ: ಕೇವಲ 20 ರೂಪಾಯಿ ಆಸೆಗಾಗಿ ನಾಲ್ಕು ವರ್ಷದ ಪುಟ್ಟ ಮಗುವನ್ನು ಬಾವಿಗೆ ತಳ್ಳಿ ಕೊಲೆ ಮಾಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ದಿವ್ಯಾ ವಿನೋದ ಉಗಡೆ (4) ಕೊಲೆಯಾಗಿರುವ ದುರ್ದೈವಿ ಮಗು.

    ದಿವ್ಯಾ ಮನೆಯಲ್ಲಿ ಕೊಟ್ಟ 20 ರೂಪಾಯಿಯನ್ನು ಕೈಯಲ್ಲಿ ಹಿಡಿದುಕೊಂಡು ಅಂಗಡಿಗೆ ಹೊರಟಿದ್ದಳು. ದಿವ್ಯಾ ಕೈಯಲ್ಲಿ 20 ರೂ. ಇರುವುದನ್ನು ನೋಡಿದ ಆರೋಪಿ ಪೂಜಾ ದತ್ತಾರಾವ್ ಕಾಂಬಳೆ (25) ಆಕೆಯ ಕೈಯಿಂದ ಹಣ ಕಸಿದುಕೊಂಡಿದ್ದಾಳೆ.

    ಹಣ ಕಸಿದುಕೊಳ್ಳುತ್ತಲೆ ದಿವ್ಯಾ ರಸ್ತೆಯಲ್ಲೇ ಅಳಲು ಆರಂಭಿಸಿದ್ದಾಳೆ. ಎಲ್ಲಿ ಈ ವಿಷಯ ದೊಡ್ಡ ಸುದ್ದಿ ಆಗುತ್ತದೆ ಎಂದು ಹೆದರಿ ಕ್ರೂರಿ ಪೂಜಾ ಮಗುವನ್ನು ಹತ್ತಿರದ ಬಾವಿ ತಳ್ಳಿ ಕೊಲೆ ಮಾಡಿದ್ದಾಳೆ.

    ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಪೂಜಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

  • ಕುಡುಕನಿಂದ ವೈದ್ಯರ ಮೇಲೆ ಹಲ್ಲೆ, ಪೊಲೀಸ್ ಜೀಪ್ ಕೆಳಗೆ ಮಲಗಿ ರಂಪಾಟ

    ಕುಡುಕನಿಂದ ವೈದ್ಯರ ಮೇಲೆ ಹಲ್ಲೆ, ಪೊಲೀಸ್ ಜೀಪ್ ಕೆಳಗೆ ಮಲಗಿ ರಂಪಾಟ

    ಚಿಕ್ಕೋಡಿ (ಬೆಳಗಾವಿ): ಲಾಕ್‍ಡೌನ್ ಹಿನ್ನೆಲೆ ರಾಜ್ಯದಲ್ಲಿ ಕಳೆದ 43 ದಿನಗಳಿಂದ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿತ್ತು. ಆದರೆ ನಿನ್ನೆಯಿಂದ ರಾಜ್ಯ ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿ ಕಂಟೈನಮೆಂಟ್ ಝೋನ್‍ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ.

    ಮದ್ಯ ಸಿಕ್ಕಿದ್ದೇ ತಡ ಕೆಲವೆಡೆ ಕುಡುಕರ ರಂಪಾಟ, ಗಲಾಟೆಗಳು ಜೋರಾಗಿ ಶುರುವಾಗಿವೆ. ಹೌದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಕುಡುಕನೊಬ್ಬ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ತಾಲೂಕಿನ ಬೆಡಕಿಹಾಳ ಗ್ರಾಮದ ಸಂಜೀವ್ ಕುಮಾರ್ ಬಣವಾನೆ ವೈದ್ಯರ ಮೇಲೆ ಹಲ್ಲೆ ಮಾಡಿದ ಕುಡುಕ. ಇದನ್ನೂ ಓದಿ: ಕುಡುಕರ ಎಡವಟ್ಟಿನಿಂದ ಮೂರ್ನಾಲ್ಕು ಬಣವೆಗಳಿಗೆ ಬೆಂಕಿ

    ಸಂಜೀವ್ ಕುಮಾರ್ ಮದ್ಯದ ಮತ್ತಿನಲ್ಲಿ ತನ್ನ ಕೈಗೆ ಗಾಯ ಮಾಡಿಕೊಂಡು ಯಕ್ಸಂಬಾ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಂದಿದ್ದ. ಚಿಕಿತ್ಸೆ ನೀಡಲು ಮುಂದಾದ ವೈದ್ಯರ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾನೆ. ಆಸ್ಪತ್ರೆಯ ವೈದ್ಯರು ಪ್ರಕರಣ ಕುರಿತು ಸದಲಾಗ ಠಾಣೆಯಲ್ಲಿ ದೂರು ನೀಡಿದ್ದರು. ತಕ್ಷಣವೇ ಆಸ್ಪತ್ರೆಗೆ ದೌಡಾಯಿಸಿದ ಪೊಲೀಸರು ಸಂಜೀವ್ ಕುಮಾರ್ ನನ್ನ ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಕುಡಿಯಲು ಹಣ ಕೊಡದ್ದಕ್ಕೆ ಗರ್ಭಿಣಿ ಪತ್ನಿ ತಲೆಗೆ ಗುಂಡು ಹೊಡೆದ- ಭಯದಿಂದ ಪೊದೆಯಲ್ಲಿ ಅವಿತ ಮಗ

    ಠಾಣೆಯಲ್ಲೂ ಸಂಜೀವ್ ಕುಮಾರ್ ರಂಪಾಟ ನಿಲ್ಲಲಿಲ್ಲ. ಪೊಲೀಸ್ ಠಾಣೆ ಮುಂದೆ ನಿಂತಿದ್ದ ಜೀಪ್ ಕೆಳೆಗೆ ಮಲಗಿ ನನ್ನ ಮೇಲೆ ಜೀಪ್ ಹರಿಸಿ, ಸಾಯಿಸಿ ಎಂದು ರಂಪಾಟ ಮಾಡಿದ್ದಾನೆ. ಠಾಣೆ ಮುಂದೆ ಕುಡುಕನ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸರು ಸಂಜೀವ್ ಕುಮಾರ್ ಬಣವಾನೆ ವಿರುದ್ಧ ಪ್ರಕರಣ ದಾಖಲಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳಸಿದ್ದಾರೆ.

  • 11 ಟೈರ್ ಟ್ಯೂಬ್‍ನಲ್ಲಿ ಸಾಗಿಸುತ್ತಿದ್ದ 330 ಲೀಟರ್ ಕಳ್ಳಭಟ್ಟಿ ವಶ

    11 ಟೈರ್ ಟ್ಯೂಬ್‍ನಲ್ಲಿ ಸಾಗಿಸುತ್ತಿದ್ದ 330 ಲೀಟರ್ ಕಳ್ಳಭಟ್ಟಿ ವಶ

    ಚಿಕ್ಕೋಡಿ/ಬೆಳಗಾವಿ: ಕೊರೊನಾದಿಂದ ರಾಜ್ಯದಲ್ಲಿ ಮದ್ಯ ಮಾರಾಟ ಬಂದ್ ಆಗಿದ್ದ ಕಾರಣ ಕಳ್ಳ ಭಟ್ಟಿ ದಂಧೆಗೆ ಕಡಿವಾಣ ಹಾಕಲು ಚಿಕ್ಕೋಡಿ ವಿಭಾಗದ ಅಬಕಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

    ಚಿಕ್ಕೋಡಿ ವಿಭಾಗದ ಅಬಕಾರಿ ಪೊಲೀಸರು ಹುಕ್ಕೇರಿ ತಾಲೂಕಿನ ಶಹಬಂದರ ಗ್ರಾಮದಲ್ಲಿ ಕಳ್ಳ ಭಟ್ಟಿ ದಂಧೆಕೋರರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸುಮಾರು 330 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆದುಕೊಡಿದ್ದಾರೆ.

    ಶಹಬಂದರ್ ಗ್ರಾಮದ ಬಳಿ ಕಳ್ಳಭಟ್ಟಿ ಸಾಗಿಸುತ್ತಿದ್ದ ಎರಡು ದ್ವಿ-ಚಕ್ರ ವಾಹನ ಹಾಗೂ ತಲಾ 30 ಲೀಟರ್ ಇರುವ 11 ಟೈರ್ ಟ್ಯೂಬ್‍ಗಳಲ್ಲಿ ಸಂಗ್ರಹಿಸಿ ಸರಬರಾಜು ಮಾಡುತ್ತಿದ್ದ ಕಳ್ಳ ಭಟ್ಟಿಯನ್ನ ಅಬಕಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಪ್ರಕರಣದಲ್ಲಿನ ಮೂರು ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಬಕಾರಿ ದಾಳಿಯಲ್ಲಿ ಚಿಕ್ಕೋಡಿ ಅಬಕಾರಿ ಇನ್ಸ್‌ಪೆಕ್ಟರ್ ಬಸವರಾಜ್ ಕರಮಣ್ಣವರ್, ಸಬ್ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್, ಸಿಬ್ಬಂದಿಯಾದ ಹಸನ್ ಸಾಬ್, ವಿಜಯ್ ಉಪ್ಪರ್, ರಾಜು ಅಂಬಾರಿ ಹಾಗೂ ಮಹಾಬಲ ಉಗಾರ್ ಭಾಗವಹಿಸಿದ್ದರು.

  • ಶ್ರೀಕಂಠೇಗೌಡ ಪಟಾಲಂಗೆ ಬೇಲ್, ಕೋಬ್ರಾ ಕಮಾಂಡೋ ಯೋಧನಿಗೆ ಕೋಳ – ಪೊಲೀಸರ ವಿರುದ್ಧ ಆಕ್ರೋಶ

    ಶ್ರೀಕಂಠೇಗೌಡ ಪಟಾಲಂಗೆ ಬೇಲ್, ಕೋಬ್ರಾ ಕಮಾಂಡೋ ಯೋಧನಿಗೆ ಕೋಳ – ಪೊಲೀಸರ ವಿರುದ್ಧ ಆಕ್ರೋಶ

    ಚಿಕ್ಕೋಡಿ (ಬೆಳಗಾವಿ): ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಕರ್ತವ್ಯ ನಿರತ ಪೊಲೀಸರು ಸಿ.ಆರ್.ಪಿ.ಎಫ್ ಯೋಧನ ಮೇಲೆ ಹಲ್ಲೆ ನಡೆಸಿ ಬೇಡಿ ತೋಡಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

    ಏಪ್ರಿಲ್ 23ರಂದು ಈ ಘಟನೆ ನಡೆದಿದ್ದು, ಯೋಧ ಸಚಿನ ಸಾವಂತ್ ಅವರನ್ನು ಪೊಲೀಸ್ ಠಾಣೆಯಲ್ಲಿ ಕೈಗೆ ಬೇಡಿ ಹಾಕಿ ಕೂರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸದಲಾಗ ಪೊಲೀಸ್ ಠಾಣೆಯಲ್ಲಿ ಸಿ.ಆರ್.ಪಿ.ಎಫ್ ಕೋಬ್ರಾ ಕಮಾಂಡೋ ಯೋಧನಿಗೆ ಬೇಡಿ ಹಾಕಿ ಕೂರಿಸಿದ್ದ ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಸಿ.ಆರ್.ಪಿ.ಎಫ್ ಕೊಬ್ರಾ ಬಟಾಲಿಯನ್ ಕಾನ್ಸ್‍ಟೇಬಲ್ ಆಗಿರುವ ಸಚಿನ್ ಸಾವಂತ್‍ಗೆ ಇನ್ನೂ ಜಾಮೀನು ಕೂಡ ಸಿಕ್ಕಿಲ್ಲ.

    ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾ ಡಿದ ಮಂಡ್ಯ ಎಂ.ಎಲ್.ಸಿ ಶ್ರೀಕಂಠೇಗೌಡ ಹಾಗೂ ಅವರ ಪಟಾಲಂಗೆ ಬೇಲ್ ಸಿಕ್ಕಿದೆ. ಆದರೆ ದೇಶವನ್ನು ಕಾಪಾಡಿದ ಕೋಬ್ರಾ ಕಮಾಂಡೋ ಇನ್ನು ಜೈಲಿನಲ್ಲೇ ಇದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆ ನಡೆಯುತ್ತಿದೆ. ಮಾಸ್ಕ್ ಹಾಕಿಲ್ಲವೆಂಬ ಕಾರಣಕ್ಕೆ ಯೋಧನನ್ನು ಅಮಾನವೀಯವಾಗಿ ನಡೆಸಿಕೊಂಡ ಸದಲಗಾ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

    ಪೊಲೀಸರ ಕ್ರಮಕ್ಕೆ ಸಿ.ಆರ್.ಪಿ.ಎಫ್ ಕೋಬ್ರಾ ಬಟಾಲಿಯನ್ ಅಸಿಸ್ಟೆಂಟ್ ಕಮಾಂಡಂಟ್ ಶ್ಯಾಮ್ ಸುಂದರ್ ಅವರು ಕೂಡ ಕರ್ನಾಟಕ ಡಿಜಿಪಿಗೆ ಟ್ವೀಟ್ ಹಾಗೂ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆ ನಂತರ ಎಫ್‍ಐಆರ್ ದಾಖಲಿಸುವ ಮುನ್ನ ನಮ್ಮ ಗಮನಕ್ಕೂ ತರಬೇಕಿತ್ತು. ಪೊಲೀಸರು ಲಾಟಿಯಿಂದ ಹೊಡೆಯುವಾಗ ಆತ್ಮರಕ್ಷಣೆಗೆ ಪ್ರತಿದಾ ಳಿ ಮಾಡಿದ್ದಾನೆ. ಆದರೆ ಪೊಲೀಸರು ಯೋಧ ಎಂದು ತಿಳಿದ ಮೇಲೂ ಠಾಣೆಯಲ್ಲಿ ಕೈಗೆ ಬೇಡಿ ಹಾಕಿ ಕೂರಿಸಿದ್ದು ಸರಿಯಲ್ಲ ಎಂದು ಖಾರವಾಗಿ ಪತ್ರ ಬರೆದಿದ್ದಾರೆ.

    ಪ್ರಕರಣದ ಕುರಿತು ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯೆ ನೀಡಿದ್ದು, ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಕೆಲ ಪೊಲೀಸರು ಮಾತ್ರ ಇದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೈಗೆ ಬೇಡಿ ಹಾಕಿ ಕೂರಿಸಲಾಗಿದೆ. ಪೊಲೀಸರು ಲಾಕ್‍ಡೌನ್ ಕರ್ತವ್ಯದಲ್ಲಿ ಇರುವುದರಿಂದ ಠಾಣೆಯಲ್ಲಿ ಕಡಿಮೆ ಸಿಬ್ಬಂದಿ ಇರುತ್ತಾರೆ. ಘಟನೆ ನಡೆದ ದಿನ ಯೋಧ ಬಹಳ ಅಕ್ರಮಣಕಾರಿಯಾಗಿದ್ದ ಆದ್ದರಿಂದ ಹಾಗೆ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಜೊತೆಗೆ ಕೋರ್ಟ್ ಮಂಗಳವಾರ ಹಾಗೂ ಶುಕ್ರವಾರ ಕಾರ್ಯ ನಿರ್ವಹಣೆ ಮಾಡುವ ಹಿನ್ನೆಲೆಯಲ್ಲಿ ಯೋಧ ಸಚಿನ್ ಸಾಂವತ್‍ಗೆ ಇನ್ನೂ ಬೇಲ್ ಸಿಕ್ಕಿಲ್ಲ. ಮಂಗಳವಾರ ಕೋರ್ಟ್ ನಲ್ಲಿ ಬೇಲ್ ಸಿಗುವ ಸಾಧ್ಯತೆಯಿದೆ ಎಂದು ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

  • ಕಾಡಿನಿಂದ ಪಟ್ಟಣಕ್ಕೆ ಬಂದ ಕಾಡು ಕೋಣಗಳು

    ಕಾಡಿನಿಂದ ಪಟ್ಟಣಕ್ಕೆ ಬಂದ ಕಾಡು ಕೋಣಗಳು

    ಚಿಕ್ಕೋಡಿ/ಬೆಳಗಾವಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಜನ ಹಾಗೂ ವಾಹನ ಸಂಚಾರ ಕಡಿಮೆ ಆಗಿರುವ ಕಾರಣ ನಗರ ಪ್ರದೇಶಕ್ಕೆ ಕಾಡು ಕೋಣಗಳು ಲಗ್ಗೆ ಇಟ್ಟಿವೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣಕ್ಕೆ ಸುಮಾರು 25 ಕಿ.ಮೀ ದೂರದ ಕಾಡಿನಿಂದ 3 ಕಾಡು ಕೋಣಗಳು ಆಗಮಿಸಿ ಜನರಲ್ಲಿ ಅಚ್ಚರಿ ಮೂಡಿಸಿವೆ. ಸಂಕೇಶ್ವರ ಪಟ್ಟಣದ ಹೊರ ವಲಯದ ಜಮೀನುಗಳಿಗೆ ಆಹಾರ ಹುಡುಕಿಕೊಂಡು ಕಾಡುಕೋಣಗಳು ಬಂದಿದ್ದವು.

    ತಕ್ಷಣವೇ ಸ್ಥಳೀಯರು ಅರಣ್ಯ ಇಲಾಖೆಗೆ ಕಾಡು ಕೋಣಗಳ ಆಗಮನದ ಕುರಿತು ಮಾಹಿತಿ ತಿಳಿಸಿದ್ದಾರೆ. ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಸುತ್ತಾಡುತ್ತಿದ್ದ ಕಾಡು ಕೋಣಗಳನ್ನ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪಟಾಕಿ ಸಿಡಿಸಿ ಅರಣ್ಯ ಪ್ರದೇಶದತ್ತ ಓಡಿಸುವ ಕಾರ್ಯ ಮಾಡಿದ್ದಾರೆ.

    ಸಂಕೇಶ್ವರ ಪಟ್ಟಣದಲ್ಲಿ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಹಿನ್ನೆಲೆಯಲ್ಲಿ ಸಂಕೇಶ್ವರ ಪಟ್ಟಣ ಸಂಪೂರ್ಣ ಸೀಲ್‍ಡೌನ್ ಆಗಿದೆ. ಜನ ಸಂಚಾರ ಇಲ್ಲದ ಕಾರಣ ಕಾಡು ಕೋಣಗಳು ಆಹಾರ ಹುಡುಕುತ್ತಾ ಈ ಕಡೆ ಬಂದಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • ನಿರ್ಲಕ್ಷ್ಯ ತೋರಿದ್ರೆ ಹೊಡಿತೀನಿ- ಅಧಿಕಾರಿಗೆ ಉಮೇಶ್ ಕತ್ತಿ ತರಾಟೆ

    ನಿರ್ಲಕ್ಷ್ಯ ತೋರಿದ್ರೆ ಹೊಡಿತೀನಿ- ಅಧಿಕಾರಿಗೆ ಉಮೇಶ್ ಕತ್ತಿ ತರಾಟೆ

    ಚಿಕ್ಕೋಡಿ/ಬೆಳಗಾವಿ: ಲಾಕ್‍ಡೌನ್ ಸಂದರ್ಭದಲ್ಲಿ ಜಾಗೃತನಾಗಿ ಕಾರ್ಯನಿರ್ವಹಿಸು, ಇಲ್ಲದಿದ್ದರೆ ಹೊಡೆಯುವುದಾಗಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಇಂದು ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಶಾಸಕ ಉಮೇಶ್ ಕತ್ತಿ ಸಭೆ ನಡೆಸಿದರು. ಈ ವೇಳೆ ಸಮರ್ಪಕ ವಿದ್ಯುತ್ ಕಲ್ಪಿಸದ ಹುಕ್ಕೇರಿ ವಿದ್ಯುತ್ ಸರಬರಾಜು ಸಂಘದ ಅಭಿಯಂತ ನೇಮಿನಾಥ್ ಖೇಮಲಾಪೂರೆಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.

    ನಾನು ಕಳೆದ ಹಲವು ದಿನಗಳಿಂದ ನಿನ್ನನ್ನು ಗಮನಿಸುತ್ತಿದ್ದೇನೆ. ನೀನು ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಜನರ ಸಮಸ್ಯೆ ಸೇರಿದಂತೆ ಕುಡಿಯುವ ನೀರು, ವಿದ್ಯುತ್ ನೀಡುವಲ್ಲಿ ಬೇಜವಾಬ್ದಾರಿ ವರ್ತನೆ ಮಾಡುತ್ತಿರುವೆ. ಇದು ಹೀಗೆ ಮುಂದುವರಿದ್ರೆ, ನಿನ್ನ ಅಮಾನತು ಮಾಡಿಸುತ್ತೇನೆ. ಮತ್ತೆ ಲಾಕ್‍ಡೌನ್ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದರೆ ಹೊಡೆಯುವುದಾಗಿ ಉಮೇಶ್ ಕತ್ತಿ ಎಚ್ಚರಿಕೆ ನೀಡಿದರು.

    ಅಲ್ಲದೇ ಜನರಿಗೆ ನೀಡುತ್ತಿರುವ ಪಡಿತರ ವ್ಯವಸ್ಥೆಯಲ್ಲಿ, ಕುಡಿಯುವ ನೀರು ಸರಬರಾಜು, ಕೃಷಿ ಚಟುವಟಿಕೆಗಳು, ರೈತರು ಬೆಳೆದ ತರಕಾರಿಗೆ ಮಾರುಕಟ್ಟೆ ಕಲ್ಪಿಸಲು ಯಾವುದೇ ವ್ಯತ್ಯಯ ಆಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಉಮೇಶ್ ಕತ್ತಿ ಸೂಚನೆ ನೀಡಿದರು.

    ಇದಕ್ಕೂ ಮೊದಲು ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಉಮೇಶ್ ಕತ್ತಿ ಮಾಹಿತಿ ಪಡೆದರು. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ದಿನಸಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ದಿನ ಬಳಕೆ ವಸ್ತುಗಳನ್ನ ಮಾರಾಟ ಮಾಡಿದರೆ ಅಂತಹವರ ಮೇಲೆ ಶಿಸ್ತು ಕ್ರಮಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

  • 2 ಎಕರೆಯಲ್ಲಿ ಬೆಳೆದ ತರಕಾರಿಯನ್ನ ಕುರಿ-ಮೇಕೆಗಳಿಗೆ ಮೇವು ನೀಡಿದ ರೈತ

    2 ಎಕರೆಯಲ್ಲಿ ಬೆಳೆದ ತರಕಾರಿಯನ್ನ ಕುರಿ-ಮೇಕೆಗಳಿಗೆ ಮೇವು ನೀಡಿದ ರೈತ

    ಚಿಕ್ಕೋಡಿ/ಬೆಳಗಾವಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದಿದ್ದ ಬೆಳೆಗಳನ್ನು ಕೆಲವರು ಉಚಿತವಾಗಿ ಜನರಿಗೆ ನೀಡುತ್ತಿದ್ದಾರೆ. ಇನ್ನೂ ಕೆಲವರು ತಿಪ್ಪೆಗೆ ಸುರಿಯುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತ ತಾನು ಬೆಳೆದ ತರಕಾರಿಯನ್ನ ಕುರಿ ಮತ್ತು ಮೇಕೆಗಳಿಗೆ ಮೇವು ನೀಡಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ.

    ರೈತ ಗುರುನಾಥ್ ಹುಕ್ಕೇರಿ ತನ್ನ ಎರಡು ಎಕರೆ ಜಮೀನಿನಲ್ಲಿ ಒಂದು ಎಕರೆಯಲ್ಲಿ ಎಲೆಕೋಸು, ಇನ್ನೊಂದು ಎಕರೆಯಲ್ಲಿ ಹೂಕೋಸು ಬೆಳೆಯನ್ನ ಬೆಳೆಸಿದ್ದರು. ಸುಮಾರು 2 ಲಕ್ಷ ಖರ್ಚು ಮಾಡಿ ಫಲವತ್ತಾದ ತರಕಾರಿ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ರೈತ ಈಗ ಕಂಗಾಲಾಗಿದ್ದಾರೆ.

    ಎಲೆಕೋಸು ಮತ್ತು ಹೂಕೋಸು ಉತ್ತಮ ಫಸಲು ಬಂದಿದೆ. ಆದರೆ ಲಾಕ್‍ಡೌನ್ ಎಫೆಕ್ಟ್ ಹಿನ್ನೆಲೆಯಲ್ಲಿ ಬೆಳೆದ ಬೆಳೆ ಮಾರಾಟ ಮಾಡಲು ಸೂಕ್ತವಾದ ಮಾರುಕಟ್ಟೆ ಸಿಗುತ್ತಿಲ್ಲ. ಹೀಗಾಗಿ ಬೆಳೆದು ನಿಂತ ತನ್ನ ಎರಡು ಎಕರೆ ಜಮೀನಲ್ಲಿ ಕುರಿ ಮತ್ತು ಮೇಕೆಗಳನ್ನು ಮೇಯಲು ಬಿಟ್ಟಿದ್ದಾರೆ. ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

    ಎರಡು ಎಕರೆ ಪ್ರದೇಶದಲ್ಲಿ ಎಲೆಕೋಸು ಮತ್ತು ಹೂಕೋಸನ್ನು 2-3 ತಿಂಗಳ ಕಾಲ ನೀರುಣಿಸಿ ಪೋಷಣೆ ಮಾಡಿದ್ದೆ. ಆದರೆ ಕೊರೊನಾ ಮಹಾಮಾರಿ ದುಡಿದು ತಿನ್ನುವ ರೈತರ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳುವಂತೆ ಮಾಡಿದೆ. ರೈತರು ಬೆಳೆದ ಬೆಳೆಗಳನ್ನು ಕಸಿದುಕೊಂಡಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ಮೆಡಿಕಲ್ ಅಧ್ಯಯನಕ್ಕೆ ದೇಹ ದಾನ – ಒಪ್ಪಿಗೆ ಪತ್ರಕ್ಕೆ ವಯೋವೃದ್ಧೆಯರ ಸಹಿ

    ಮೆಡಿಕಲ್ ಅಧ್ಯಯನಕ್ಕೆ ದೇಹ ದಾನ – ಒಪ್ಪಿಗೆ ಪತ್ರಕ್ಕೆ ವಯೋವೃದ್ಧೆಯರ ಸಹಿ

    ಚಿಕ್ಕೋಡಿ/ಬೆಳಗಾವಿ: ಮೂವರು ವಯೋವೃದ್ಧೆಯರು ಸಾವಿನ ನಂತರ ತಮ್ಮ ದೇಹವನ್ನು ದಾನ ಮಾಡಲು ಬಯಸಿದ್ದು, ತಮ್ಮ ಸ್ವ-ಇಚ್ಛೆಯಿಂದ ಒಪ್ಪಿಗೆ ಪತ್ರ ಬರೆದುಕೊಟ್ಟು ಸಾರ್ಥಕತೆ ಮೆರೆದಿದ್ದಾರೆ.

    ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹರಿನಗರದ ನಿವಾಸಿಗಳಾದ ಮಹಾದೇವಿ (68), ಶಾಂತಾ (74) ಮತ್ತು ಬಸ್ಸವ್ವ (70) ಮೂವರು ತಮ್ಮ ಸಾವಿನ ಬಳಿಕ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ದೇಹದಾನ ಮಾಡಿರುವುದಾಗಿ ತಿಳಿಸಿದ್ದಾರೆ. ಇವರು ಬೆಳಗಾವಿಯ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿಗೆ ತಮ್ಮ ಸಾವಿನ ನಂತರ ದೇಹದಾನ ಮಾಡುವುದಾಗಿ ತಿಳಿಸಿದ್ದಾರೆ.

    ಮಹಾದೇವಿ ಮತ್ತು ಶಾಂತಾ ಸಹೋದರಿಯರಾಗಿದ್ದು, ಇವರ ಜೊತೆಗೆ ಪಕ್ಕದ ಮನೆಯ ಬಸ್ಸವ್ವ ಕೂಡ ದೇಹದಾನ ಮಾಡಿದ್ದಾರೆ. ಮನುಷ್ಯರಾದವರು ಸಾವಿನ ನಂತರವೂ ಇನ್ನೊಬ್ಬರ ಜೀವನದಲ್ಲಿ ಬೆಳಕು ತರಬೇಕೆಂದರೆ ದೇಹ ಮತ್ತು ಅಂಗಾಂಗ ದಾನ ಬಹುಮುಖ್ಯ. ಕಣ್ಣು, ಕಿಡ್ನಿ, ಲಿವರ್, ಹೃದಯ, ಚರ್ಮ ಏನು ಬೇಕಾದರೂ ದಾನ ಮಾಡಬಹುದು. ಜನರು ತಪ್ಪು ತಿಳಿವಳಿಕೆ ಬಿಟ್ಟು ದೇಹ ಮತ್ತು ಅಂಗಾಂಗ ದಾನಕ್ಕೆ ಮುಂದಾಗಬೇಕೆಂದು ವೈದ್ಯರಾದ ಡಾ.ದಯಾನಂದ ನೂಲಿ ಜನರಲ್ಲಿ ಜಾಗೃತಿ ಮೂಡಿಸಿದರು.

    ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ನಾವು ಮೂವರು ಗೆಳತಿಯರು ತಮ್ಮ ದೇಹವನ್ನು ಸಾವಿನ ಬಳಿಕ ದಾನ ಮಾಡಿರುವುದಾಗಿ ಬಸ್ಸವ್ವ ತಿಳಿಸಿದರು.

  • ಉಚಿತವಾಗಿ ಕೋಳಿ ಹಂಚಿಕೆ – ಭೀತಿ ನಡುವೆಯೂ ಕೋಳಿ ಒಯ್ಯಲು ಮುಗಿಬಿದ್ದ ಜನ

    ಉಚಿತವಾಗಿ ಕೋಳಿ ಹಂಚಿಕೆ – ಭೀತಿ ನಡುವೆಯೂ ಕೋಳಿ ಒಯ್ಯಲು ಮುಗಿಬಿದ್ದ ಜನ

    ಚಿಕ್ಕೋಡಿ/ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕೊರೊನಾ ವೈರಸ್ ಭೀತಿಯಿಂದ ಕೋಳಿ ವ್ಯಾಪಾರ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಕೋಳಿಗಳ ಹಂಚಿಕೆ ಮಾಡಲಾಗಿದೆ.

    ಕೋಳಿಗಳ ಜೀವಂತ ಸಮಾಧಿ ಬಳಿಕ ಈಗ ಫಾರಂ ಮಾಲೀಕರು ಚಿಕನ್ ಪ್ರಿಯರಿಗೆ ಉಚಿತವಾಗಿ ಕೋಳಿಗಳನ್ನ ಹಂಚಿಕೆ ಮಾಡಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ವಿವಿಧ ಕಾಲೋನಿಗಳಲ್ಲಿ ಲಾರಿಗಳಲ್ಲಿ ಕೋಳಿ ತಂದು ಜನರಿಗೆ ಉಚಿತವಾಗಿ ನೀಡಲಾಗಿದೆ. ಕೊರೊನಾ ಭೀತಿ ನಡುವೆಯೂ ಉಚಿತ ಕೋಳಿ ತೆಗೆದುಕೊಂಡು ಹೋಗಲು ಜನ ಮುಗಿ ಬಿದ್ದಿದ್ದರು.

    ಒಬ್ಬರು ಎರಡು ಮೂರು ಕೋಳಿಗಳನ್ನ ಪಡೆದುಕೊಂಡು ಹೋಗಿದ್ದಾರೆ. ಇತ್ತ ಚಿಕನ್ ತಿಂದರೆ ಕೊರೊನಾ ಹರಡುತ್ತೆ ಎನ್ನುವ ಭೀತಿಯಲ್ಲಿದ್ದವರು ಉಚಿತ ಕೋಳಿಗಳನ್ನ ನೀಡುವುದನ್ನ ನೋಡುತ್ತಾ ನಿಂತುಕೊಂಡಿದ್ದರು. ಚಿಕನ್ ತಿಂದರೆ ಕೊರೊನಾ ಬರುತ್ತದೆ ಎಂಬ ಸುಳ್ಳು ಸುದ್ದಿಯಿಂದ ಇಡಿ ಕುಕ್ಕುಟ ಉದ್ಯಮ ನೆಲೆಕಚ್ಚಿದೆ. ಹೀಗಾಗಿ ಈ ಉದ್ಯಮವನ್ನ ನಂಬಿದವರಿಗೆ ತುಂಬಾ ನಷ್ಟವಾಗಿದೆ.