Tag: chikmagaluru

  • ಸಂಚಾರಕ್ಕೆ ಮುಕ್ತವಾದ್ರೂ 2 ದಿನ ಚಾರ್ಮಾಡಿ ಘಾಟ್ ಬಂದ್-ಪ್ರಯಾಣಿಕರಿಗೆ ಆಹಾರ ನೀಡಿ ಮಾನವೀಯತೆ ತೋರಿದ್ರು ಸ್ಥಳೀಯರು

    ಸಂಚಾರಕ್ಕೆ ಮುಕ್ತವಾದ್ರೂ 2 ದಿನ ಚಾರ್ಮಾಡಿ ಘಾಟ್ ಬಂದ್-ಪ್ರಯಾಣಿಕರಿಗೆ ಆಹಾರ ನೀಡಿ ಮಾನವೀಯತೆ ತೋರಿದ್ರು ಸ್ಥಳೀಯರು

    ಮಂಗಳೂರು: ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಬಂದ್ ಆಗಿದ್ದ ಚಾರ್ಮಾಡಿ ಘಟ್ ಬಳಿ ಕೊನೆಗೂ ಸಂಚಾರಕ್ಕೆ ಮುಕ್ತಗೊಂಡಿದೆ. ಆದರೆ ಮತ್ತೆ ಮಣ್ಣು ಕುಸಿಯುವ ಸಾಧ್ಯತೆ ಇರುವುದರಿಂದ ಎರಡು ದಿನ ಕಾಮಗಾರಿ ನಡೆಸಲು ಮಾರ್ಗ ಬಂದ್ ಮಾಡುವುದಾಗಿ ದಕ್ಷಿಣ ಕನ್ನಡ ಎಸ್ಪಿ ರವಿಕಾಂತೇ ಗೌಡ ಮಾಹಿತಿ ನೀಡಿದ್ದಾರೆ.

    ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಭೂಕುಸಿತ ಆಗಿದ್ದರಿಂದ ಎರಡೂ ಕಡೆಯಿಂದ ವಾಹನ ಸಂಚಾರ ಬಂದ್ ಆಗಿತ್ತು. ಈ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಎಲ್ಲಾ ವಾಹನಗಳು ಸುಮಾರು ಮೂರು ಕಿಮೀ ಉದ್ದಕ್ಕೆ ಸಾಲುಗಟ್ಟಿ ನಿಂತಲ್ಲಿಯೇ ಸಿಲುಕಿಕೊಂಡಿದ್ದವು.

    ರಾತ್ರಿ 8 ಗಂಟೆಗೆ ಸಮಯದಲ್ಲಿ ಸಂಚಾರ ಬಂದ್ ಆಗಿದ್ದ ಕಾರಣ ವಾಹನಗಳಲ್ಲಿದ್ದ ಸುಮಾರು ಒಂದೂವರೆ ಸಾವಿರಕ್ಕಿಂತಲೂ ಹೆಚ್ಚು ಪ್ರಯಾಣಿಕರು ಸಮಸ್ಯೆ ಎದುರಿಸಿದರು. ಮಾರ್ಗವು ಕಡಿದಾದ ತಿರುವುಗಳ ರಸ್ತೆ ಆಗಿದ್ದರಿಂದ 250ಕ್ಕೂ ಹೆಚ್ಚು ವಾಹನಗಳು ಹಿಂದೆ ತಿರುಗಿ ಹೋಗುವುದಕ್ಕೂ ಸಾಧ್ಯವಾಗಲಿಲ್ಲ. ಹೀಗಾಗಿ ಸಾವಿರಾರು ಮಂದಿ ರಾತ್ರಿಯಿಡೀ ಮಳೆಯ ನಡುವೆ ತಾವಿದ್ದ ವಾಹನದಲ್ಲಿಯೇ ಕಾಲ ಕಳೆಯುವಂತಾಗಿತ್ತು.

    ಸ್ಥಳೀಯರ ಸಹಕಾರ: ರಾತ್ರಿ ಇಡೀ ವಾಹನದಲ್ಲೇ ಕಾಲ ಕಳೆದ ಹಲವು ಪ್ರಯಾಣಿಕರು ಬೆಳಗ್ಗಿನ ಹೊತ್ತಿಗೆ ಆಹಾರದ ಸಮಸ್ಯೆ ಎದುರಿಸಿದರು. ಈ ವೇಳೆ ಸ್ಥಳೀಯರು ಪ್ರಯಾಣಿಕರಿಗೆ ಹಾಲು, ಬ್ರೆಡ್ ವಿತರಣೆ ಮಾಡಿದರು. ಬಳಿಕ ಸ್ಥಳೀಯರು ಮತ್ತು ಬೆಳ್ತಂಗಡಿ ಪೊಲೀಸರು ಸೇರಿ ಮಣ್ಣು ತೆರವು ಮಾಡುವ ಪ್ರಯತ್ನ ಮಾಡಿದರು. ಆದರೆ, ಗುಡ್ಡ ಕುಸಿದ ಸ್ಥಳಕ್ಕೆ ಜೆಸಿಬಿ ಯಂತ್ರ ಒಯ್ಯಲು ಸಾಧ್ಯವಾಗದೇ ಕಾರ್ಯಾಚರಣೆಗೆ ಹಿನ್ನೆಡೆ ಆಯಿತು. ಕೊನೆಗೆ ಬೆಳ್ತಂಗಡಿ ಭಾಗದಿಂದ ವಾಹನಗಳನ್ನು ತೆರವುಗೊಳಿಸಿ ಜೆಸಿಬಿಗಳನ್ನು ಸ್ಥಳಕ್ಕೆ ಒಯ್ಯಲಾಯಿತು.

    ಮತ್ತೆ ಚಾರ್ಮಾಡಿ ಘಾಟ್ ಬಂದ್: ಚಾರ್ಮಾಡಿ ಘಾಟ್ ಭೂಕುಸಿತ ಹಿನ್ನೆಲೆ ಸದ್ಯ ಕಾಮಗಾರಿ ಮುಂದುವರಿಕೆಗೆ ಅವಕಾಶ ಕೇಳಿದ ಅಧಿಕಾರಿಗಳು ಮತ್ತೆರಡು ದಿನ ಚಾರ್ಮಾಡಿ ಘಾಟ್ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಬುಧವಾರ ಮತ್ತು ಗುರುವಾರ ಈ ರಸ್ತೆ ಬಂದ್ ಆಗಲಿದೆ.

    ಮಳೆಯಿಂದ ಮತ್ತಷ್ಟು ಮರ, ಗುಡ್ಡಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ನಮಗೆ 48 ಗಂಟೆಗೆ ಸಮಯ ಕೊಡಿ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲಾಡಳಿತದ ನೆರವಿಂದ ಎಲ್ಲವನ್ನೂ ತೆರವುಗೊಳಿಸ್ತೇವೆ ಎಂದು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಹೇಳಿದ್ದಾರೆ.

    ಬದಲಿ ಮಾರ್ಗ: ಮಂಗಳೂರಿನಿಂದ ಬೆಂಗಳೂರು ಸಂಪರ್ಕಕ್ಕೆ ಬದಲಿ ಮಾರ್ಗವಾಗಿ ನಾರಾವಿ – ಕಳಸ – ಮೂಡಿಗೆರೆ- ಬೇಲೂರು ಮಾರ್ಗ ಹಾಗೂ ಬಿ.ಸಿ.ರೋಡ್ – ಸುಳ್ಯ – ಮಡಿಕೇರಿ – ಮೈಸೂರು ಮಾರ್ಗದಲ್ಲಿ ಸಂಚಾರ ಮಾಡಬಹುದಾಗಿದೆ.

    ಮಂಗಳೂರು – ಬೆಂಗಳೂರು ಸಂಪರ್ಕಕ್ಕೆ ಶಿರಾಡಿ ಘಾಟ್ ಬಿಟ್ಟರೆ ಸುಲಭದ ದಾರಿ ಚಾರ್ಮಾಡಿ ಮಾತ್ರ. ಇದು ಹೊರತುಪಡಿಸಿದರೆ ಮಡಿಕೇರಿ, ಮೈಸೂರು ರಾಜ್ಯ ಹೆದ್ದಾರಿಯಿಂದ ತೆರಳಬೇಕು. ಶಿರಾಡಿ ಘಾಟ್ ಹೆದ್ದಾರಿ ಕಾಂಕ್ರೀಟ್ ರಸ್ತೆ ಮಾಡುವ ಸಲುವಾಗಿ ಕಳೆದ ಆರು ತಿಂಗಳಿಂದ ಬಂದ್ ಮಾಡಲಾಗಿದೆ. ಮಳೆಗಾಲಕ್ಕೆ ಮುನ್ನ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಹೇಳಿದ್ದರೂ, ಕಾಮಗಾರಿ ವಿಳಂಬದಿಂದಾಗಿ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಒತ್ತಡ ಹೆಚ್ಚದ ಕಾರಣ ಭೂಕುಸಿತ ಆಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • 30 ಅಡಿ ಆಳದ ಕಂದಕಕ್ಕೆ ಬಿತ್ತು ಸರ್ಕಾರಿ ಬಸ್ – 20 ಕ್ಕೂ ಅಧಿಕ ಮಂದಿಗೆ ಗಾಯ, ಮೂವರು ಗಂಭೀರ

    30 ಅಡಿ ಆಳದ ಕಂದಕಕ್ಕೆ ಬಿತ್ತು ಸರ್ಕಾರಿ ಬಸ್ – 20 ಕ್ಕೂ ಅಧಿಕ ಮಂದಿಗೆ ಗಾಯ, ಮೂವರು ಗಂಭೀರ

    ಚಿಕ್ಕಮಗಳೂರು: ಸರ್ಕಾರಿ ಬಸ್ಸೊಂದು ಸುಮಾರು 30 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕಡೂರು ತಾಲೂಕು ತಂಗಲಿ ಸಮೀಪದ ವೇದಾ ನದಿ ಸೇತುವೆಯಿಂದ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 20 ಅಧಿಕ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಬಸ್ ಬೆಂಗಳೂರಿನಿಂದ ಕುಂದಾಪುರಕ್ಕೆ ಹೋಗುತ್ತಿತ್ತು. ಬಸ್ ತಂಗಲಿ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ವೇದಾ ನದಿ ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ.

    ಬಸ್ ನದಿಗೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಇನ್ನು ಈ ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕಡೂರು ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇದಾ ನದಿ ಸುಮಾರು ವರ್ಷಗಳಿಂದ ನೀರಿಲ್ಲದೇ ಬತ್ತಿಹೋಗಿತ್ತು. ಈ ಘಟನೆ ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ನಟ ಪ್ರಕಾಶ್ ರೈ, ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ಎಫ್‍ಐಆರ್ ದಾಖಲು

    ನಟ ಪ್ರಕಾಶ್ ರೈ, ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ಎಫ್‍ಐಆರ್ ದಾಖಲು

    ಚಿಕ್ಕಮಗಳೂರು: ನಟ ಪ್ರಕಾಶ್ ರೈ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇವರು ಅನುಮತಿಯನ್ನು ಪಡೆಯದೆ ಕಾರ್ಯಕ್ರಮ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

    ಸಂವಿಧಾನ ಉಳಿವಿಗಾಗಿ ಕರ್ನಾಟಕ ಹಾಗೂ ಹೋರಾಟ ಗೀತೆ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಅನುಮತಿ ಕೇಳಿದ್ದರು. ಆದರೆ ಜಿಲ್ಲಾಡಳಿತ ಕುವೆಂಪು ಕಲಾಮಂದಿರದಲ್ಲಿ ನಡೆಯಬೇಕಿದ ಕಾರ್ಯಕ್ರಮಕ್ಕೆ ಅನುಮತಿಯನ್ನು ನಿರಾಕರಣೆ ಮಾಡಿದೆ.

    ಜಿಲ್ಲಾಡಳಿತ ಅನುಮತಿ ಪಡೆಯದೆ ಚಿಕ್ಕಮಗಳೂರು ನಗರದ ಅಂಡೇ ಛತ್ರದ ಬಳಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಅನುಮತಿ ನಿರಾಕರಣೆ ನಡುವೆಯೂ ಕಾರ್ಯಕ್ರಮ ನಡೆಸಿದ ಆರೋಪದಡಿ ನಟ ಪ್ರಕಾಶ್ ರೈ ಹಾಗೂ ಜಿಗ್ನೇಶ್ ಮೇವಾನಿ ಸೇರಿದಂತೆ 15 ಕ್ಕೂ ಅಧಿಕ ಮಂದಿಯ ಮೇಲೆ ದೂರು ದಾಖಲು ಮಾಡಲಾಗಿದ್ದು, ಐಪಿಸಿ 143, 147, 341, 188, 149 (37,109) ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ.

  • ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ

    ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ

    ಚಿಕ್ಕಮಗಳೂರು: ಸಾಲಬಾಧೆ ತಾಳಲಾರದೇ ರೈತ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 38 ವರ್ಷದ ಮೋಹನ್ ಕುಮಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ. ಇವರು ಹಲವು ವರ್ಷಗಳಿಂದ ಕೃಷಿಯಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದರು. ಆದರೆ ಮಳೆಯಿಲ್ಲದೆ ಬರಗಾಲದ ಹಿನ್ನಲ್ಲೆಯಲ್ಲಿ ಕಾಫಿ-ಮೆಣಸು ಬೆಳೆ ಬರಲಿಲ್ಲ. ಅಷ್ಟೇ ಅಲ್ಲದೇ ಮೋಹನ್ ಕುಮಾರಿ, ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು ಐದು ಲಕ್ಷ ಸಾಲ ಮಾಡಿದ್ದರು.

    ಒಂದು ಕಡೆ ಬೆಳೆ ಬರಲಿಲ್ಲ. ಇನ್ನೊಂದೆಡೆ ಸಾಲ ತೀರಿಸಲಾಗದೇ ಮೋಹನ್ ಕುಮಾರಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಗೋಣಿಬೀಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭಾರತೀಯ ಸಂಸ್ಕೃತಿಯನ್ನು ಸಾರುವ ಪರಂಪರಾ ದಿನವನ್ನ ಆಚರಿಸಿದ ಚಿಕ್ಕಮಗಳೂರು ವಿದ್ಯಾರ್ಥಿನಿಯರು

    ಭಾರತೀಯ ಸಂಸ್ಕೃತಿಯನ್ನು ಸಾರುವ ಪರಂಪರಾ ದಿನವನ್ನ ಆಚರಿಸಿದ ಚಿಕ್ಕಮಗಳೂರು ವಿದ್ಯಾರ್ಥಿನಿಯರು

    ಚಿಕ್ಕಮಗಳೂರು: ದೇಶದ ಒಂದೊಂದು ಹಬ್ಬಗಳು ಒಂದೊಂದು ದಿನ ಬಂದರೆ ಕಾಫಿನಾಡಿಗರಿಗೆ ಮಾತ್ರ ಆ ಎಲ್ಲಾ ಹಬ್ಬಗಳು ಒಂದೇ ದಿನ ಬರುತ್ತವೆ. ಕಾಫಿನಾಡಿನ ಎಸ್‍ಟಿಜೆ ಕಾಲೇಜು ವಿದ್ಯಾರ್ಥಿನಿಯರು ಆಚರಿಸಿದ ಪರಂಪರಾ ದಿನದ ಆಚರಣೆ ಆಧುನಿಕ ಭಾರತದಲ್ಲಿ ಮರೆಯಾಗುತ್ತಿರುವ ಸಂಪ್ರದಾಯದ ಉಳಿವಿಗೆ ಸಾಕ್ಷಿಯಾಗಿತ್ತು.

    ಬಣ್ಣ-ಬಣ್ಣದ ಸೀರೆಯುಟ್ಟ ನಾರಿಯರು, ಸ್ಟೈಲಾಗಿ ಜೀನ್ಸ್-ಟೀ ಶರ್ಟ್ ತೊಟ್ಟ ಯುವತಿಯರು, ಮುತ್ತೈದೆಯಂತೆ ಮೈತುಂಬಾ ಸೆರಗೊದ್ದು ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸುತ್ತಿರುವ ಹುಡುಗಿಯರು, ಮಲೆಯಾಳಿ ಕುಟ್ಟಿಗಳಂತೆ ಬಾರ್ಡರ್ ನ ಬಿಳಿ ಸೀರೆಯುಟ್ಟು ಸೆಲ್ಫಿ ಕ್ಲಿಕ್ಕಿಸುತ್ತಿರುವ ಸುಂದರಿಯರು. ಕಿರೀಟ ತೊಟ್ಟು, ಕೈಯಲ್ಲಿ ತ್ರಿಶೂಲ ಇಟ್ಕೊಂಡು ದುರ್ಗೆಯರಾಗಿರೋ ಯುವತಿಯರು, ಇವರೆಲ್ಲಾ ಚಿಕ್ಕಮಗಳೂರಿನ ಎಸ್‍ಟಿಜೆ ಕಾಲೇಜಿನಲ್ಲಿ ಕಂಡು ಬಂದರು.

    ವಿದ್ಯಾರ್ಥಿನಿಯರು ಪ್ರತಿ ವರ್ಷ ಪರಂಪರಾ ದಿನದ ಅಂಗವಾಗಿ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಸಂಸ್ಕೃತಿಯನ್ನ ಸಾರುವಂತಹ ಕಾರ್ಯಕ್ರಮವನ್ನ ಆಚರಿಸುತ್ತಾರೆ. ಈ ಬಾರಿ ಕೃಷ್ಣ ಜನ್ಮಾಷ್ಟಮಿ, ಹೋಳಿ ಹುಣ್ಣಿಮೆ, ನವದುರ್ಗೆಯರ ವೈಭವ, ಪರಿಸರ ಉಳಿಸಿ-ದೇಶ ರಕ್ಷಿಸಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ಹಬ್ಬಗಳನ್ನ ಆಚರಿಸಿದ್ದಾರೆ. ಜೊತೆಗೆ ಕೃಷಿ ಮೇಳ, ಹಳ್ಳಿಸೊಗಡಿನ ಜೀವನ ಶೈಲಿ, ಹಳ್ಳಿಗಳ ಸಂಪ್ರದಾಯಗಳೆಲ್ಲವೂ ಅಲ್ಲಿದ್ದವು. ಅಷ್ಟೇ ಅಲ್ಲದೇ ಹಿಂದೂ, ಮುಸ್ಲಿಂ ಎಂಬ ಭಾವವಿಲ್ಲದೆ ಒಟ್ಟಾಗಿ ಸೇರಿ ಆಚರಣೆ ಮಾಡಿದ್ದಾರೆ.

    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಫಲಿತಾಂಶಕ್ಕಾಗಿ ಪೋಷಕರು, ಉಪನ್ಯಾಸಕರು ಓದಿನ ಮೇಲೆ ಒತ್ತಡ ಹಾಕುತ್ತಾರೆ. ಆದರೆ ಇಲ್ಲಿನ ಉಪನ್ಯಾಸಕರು ಓದಿನ ಜೊತೆ ರೂಢಿ-ಸಂಪ್ರದಾಯ ಉಳಿಸೋಕು ಹೆಗಲು ಕೊಟ್ಟಿದ್ದಾರೆ. ವರ್ಷಪೂರ್ತಿ ಕಾಲೇಜು, ಓದು, ಮನೆ ಎನ್ನುವ ವಿದ್ಯಾರ್ಥಿನಿಯರು ಮನೋರಂಜನೆ ಜೊತೆ ಅವರೇ ಇಷ್ಟ ಪಟ್ಟು ನಡೆಸುವ ಇಂತಹ ಸಂಸ್ಕೃತಿ ಹಬ್ಬಕ್ಕೆ ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರ ಬೆಂಬಲವಿದೆ.

    ಕಳೆದ ನಾಲ್ಕು ವರ್ಷಗಳಿಂದಲೂ ಪ್ರತಿ ವರ್ಷ ಈ ರೀತಿಯ ಒಂದೊಂದು ವಿಭಿನ್ನ ರೀತಿಯ ಆಚರಣೆಯಿಂದ ನಾವು ಸಂಭ್ರಮಿಸುತ್ತೇವೆ. ಜೊತೆಗೆ ಭಾರತೀಯ ಸಂಸ್ಕೃತಿಯನ್ನ ಕಾಲೇಜಿನ ವಿದ್ಯಾರ್ಥಿನಿಯರು ಉಳಿಸಿ, ಬೆಳೆಸುತ್ತಿದ್ದಾರೆ. ನಾಡಿನ ಸಂಸ್ಕೃತಿಯ ಬಗ್ಗೆ ತಮ್ಮ ಮಕ್ಕಳಿಗಿರುವ ಗೌರವನ್ನ ಕಂಡು ಕಾಲೇಜಿನ ಉಪನ್ಯಾಸಕರೆಲ್ಲರೂ ಕೂಡ ಮಕ್ಕಳೊಂದಿಗೆ ಸೇರಿ ಮಕ್ಕಳಾಗಿದ್ದರು ಎಂದು ಪ್ರಾಂಶುಪಾಲರಾದ ಭಾರತಿ ಹೇಳಿದ್ದಾರೆ.

  • ಕಾಫಿನಾಡಿನಲ್ಲಿ ಅಪರೂಪದ ಬ್ಲೂ ಬುಲ್ ಪ್ರತ್ಯಕ್ಷ

    ಕಾಫಿನಾಡಿನಲ್ಲಿ ಅಪರೂಪದ ಬ್ಲೂ ಬುಲ್ ಪ್ರತ್ಯಕ್ಷ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯದಲ್ಲಿ ಅತೀ ಅಪರೂಪದ ಬ್ಲೂ ಬುಲ್ ಪ್ರಾಣಿಯೊಂದು ಪ್ರತ್ಯಕ್ಷವಾಗಿದೆ.

    ಶುಕ್ರವಾರ ಪ್ರವಾಸಿಗರು ಮುತ್ತೋಡಿ ಅರಣ್ಯದಲ್ಲಿ ಸಫಾರಿಗೆ ಹೋಗಿದ್ದ ವೇಳೆ ಈ ಅಪರೂಪದ ಬ್ಲೂ ಬುಲ್ ಪ್ರಾಣಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭದ್ರಾ ಮುತ್ತೋಡಿ ಅರಣ್ಯದಲ್ಲಿ ಈ ಹಿಂದೆ ಬ್ಲೂ ಬುಲ್ ಪ್ರಾಣಿ ಕಂಡಿರಲಿಲ್ಲ. ಈ ಪ್ರಾಣಿ ಇರುವ ಬಗ್ಗೆ ಯಾರ ಗಮನಕ್ಕೂ ಬಂದಿರಲಿಲ್ಲ.

    ಕೇವಲ ಹುಲ್ಲುಗಾವಲಲ್ಲಿ ವಾಸಿಸುವ ಪ್ರಾಣಿ ಇದಾಗಿದ್ದು, ಯಾರೋ ತಂದು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. 1950 ರಲ್ಲಿ ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡಿತ್ತು. ಈ ಪ್ರಾಣಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಮಾತ್ರ ಹೆಚ್ಚಾಗಿವೆ ಕಂಡುಬರುತ್ತದೆ. ಇದನ್ನ ನೀಲ್ ಗಾಯ್ ಎಂತಲೂ ಕರೆಯುತ್ತಾರೆ.

    ಹುಲಿ ಹಾಗೂ ಚಿರತೆಯಂತಹ ಮಾಂಸಾಹಾರಿ ಪ್ರಾಣಿಗಳ ಕಣ್ಣಿಗೆ ಬಿದ್ದರೆ ಇದನ್ನ ಸುಲಭವಾಗಿ ಬೇಟೆ ಆಡುತ್ತವೆ. ಈ ಪ್ರಾಣಿ ಕಾಡಿನೊಳಗೆ ಬಹಳ ದಿನ ಬದುಕುವುದು ಕಷ್ಟ. ಆದ್ದರಿಂದ ಕೂಡಲೇ ಇದನ್ನ ಪತ್ತೆ ಮಾಡಿ ರಕ್ಷಣೆ ಮಾಡಿ ಎಂದು ಅರಣ್ಯ ಸಿಬ್ಬಂದಿಗೆ ಭದ್ರಾ ಹುಲಿ ಯೋಜನೆ ನಿರ್ದೇಶಕ ಕಾಂತರಾಜ್ ಸೂಚನೆ ನೀಡಿದ್ದಾರೆ.

  • ನಿಷೇಧಿತ ಪ್ರದೇಶದಲ್ಲಿ ದಾಂಧಲೆ – ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರಿಂದ ಹೈ ಅಲರ್ಟ್

    ನಿಷೇಧಿತ ಪ್ರದೇಶದಲ್ಲಿ ದಾಂಧಲೆ – ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರಿಂದ ಹೈ ಅಲರ್ಟ್

    ಚಿಕ್ಕಮಗಳೂರು: ಭದ್ರತೆಗಾಗಿ ನಾಲ್ಕು ಸಾವಿರ ಪೊಲೀಸರು ನಿಯೋಜನೆಗೊಂಡಿದ್ದರೂ ದತ್ತಜಯಂತಿಯನ್ನ ಶಾಂತಿಯುತವಾಗಿ ನಿಭಾಯಿಸುವಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಧಿಕಾರಿ ಶ್ರೀರಂಗಯ್ಯ, ಎಸ್ಪಿ ಅಣ್ಣಾಮಲೈ ಹಾಗೂ ಪಶ್ವಿಮ ವಲಯದ ಐಜಿಪಿ ಹೇಮಂತ್ ನಿಂಬಾಳ್ಕರ್ ಅದೇ ಸ್ಥಳದಲ್ಲಿದ್ದರೂ ಕೂಡ ದತ್ತಪೀಠದಲ್ಲಿ ನಡೆಯಬಾರದೆಲ್ಲ ನಡೆದಿದೆ.

    ಕಳೆದ ಮೂರು ದಿನಗಳಿಂದ ಶಾಂತಿಯುತವಾಗಿದ್ದ ಚಿಕ್ಕಮಗಳೂರಿನ ದತ್ತಜಯಂತಿ ಕಾರ್ಯಕ್ರಮ ಭಾನುವಾರ ಮಧ್ಯಾಹ್ನ ಅಕ್ಷರಶಃ ಧರ್ಮಪ್ರತಿಪಾದನೆಯ ಕಾರ್ಯಕ್ರಮದಂತಾಯ್ತು. ಸಾವಿರಾರು ಮಾಲಾಧಾರಿಗಳು ಏಕಕಾಲದಲ್ಲಿ ದತ್ತಪೀಠದ ನಿಷೇಧಿತ ಪ್ರದೇಶಕ್ಕೆ ನುಗ್ಗಿ ಅಲ್ಲಿ ಕೇಸರಿ ಬಾವುಟಗಳನ್ನ ನೆಟ್ಟು ಅಲ್ಲಿಂದ ಗೋರಿಗಳನ್ನ ಕಾಲಲ್ಲಿ ತುಳಿದು, ಅವುಗಳ ಮೇಲೆ ಕಲ್ಲುಗಳನ್ನ ಎತ್ತಿಹಾಕಿದ್ದಾರೆ.

    ಒಂದು ಗೋರಿಯನ್ನು ಸಂಪೂರ್ಣ ಒಡೆದು ಹಾಕಿದ್ದಾರೆ. ಪೊಲೀಸರು ಎಷ್ಟೇ ಹರ ಸಾಹಸಪಟ್ಟರೂ ಒಬ್ಬರಾದ ಮೇಲೆ ಒಬ್ಬರಂತೆ ನಿಷೇಧಿತ ಸ್ಥಳಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಪೊಲೀಸರಿಗೂ ಬಯ್ಯುತ್ತಾ, ಮಾಧ್ಯಮದವರಿಗೂ ಶೋಕಿ ನನ್ಮಕ್ಳು ಎಂದು ಹೇಳಿ ಕ್ಯಾಮೆರಾ ಕಸಿದು ಕೆಲವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಪೊಲೀಸರು ಲಘು ಲಾಠಿ ಪ್ರಹಾರವನ್ನೂ ನಡೆಸಿ ಗುಂಪನ್ನು ಚದುರಿಸಿದ್ದಾರೆ.

    ದತ್ತಪೀಠದಲ್ಲಿ ಮತ್ತೊಂದು ಕೋಮಿನ ಭಾವನೆಗೆ ದಕ್ಕೆ ತಂದಿದ್ರಿಂದ ಇದೀಗ ಚಿಕ್ಕಮಗಳೂರು ಬೂದಿಮುಚ್ಚಿದ ಕೆಂಡದಂತಾಗಿದೆ. ಯಾಕಂದ್ರೆ, ಬೈಕಿನಲ್ಲಿ ಬರುತ್ತಿದ್ದ ಇಬ್ಬರು ಯುವಕರ ಮೇಲೆ ಮತ್ತೊಂದು ಕೋಮಿನ ಯುವಕರು ಹಲ್ಲೆ ಮಾಡಿ ಬೈಕನ್ನು ಪುಡಿ ಮಾಡಿದ್ದಾರೆ. ಖಾಸಗಿ ಬಸ್ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ.

    ಕ್ರಮೇಣ ಚಿಕ್ಕಮಗಳೂರಿನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗ್ತಿದ್ದು, ನಗರದ ಉಪ್ಪಳ್ಳಿ, ಆಲೇನಹಳ್ಳಿ, ಹೌಸಿಂಗ್ ಬೋರ್ಡ್, ಐಜಿ ರೋಡ್, ಮಾರ್ಕೆಟ್‍ನಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ದತ್ತಪೀಠದಲ್ಲಿದ್ದ ಎಸ್ಪಿ ಅಣ್ಣಾಮಲೈ ವಿಷಯ ತಿಳಿದು ನಗರಕ್ಕೆ ಬಂದು ಮಾರ್ಕೆಟ್ ರಸ್ತೆ, ಉಪ್ಪಳ್ಳಿಯಲ್ಲಿ ಯಾರೂ ನಿಲ್ಲದಂತೆ ಎಚ್ಚರಿಸುತ್ತಿದ್ದಾರೆ. ದತ್ತಪೀಠದಿಂದ ಬರುತ್ತಿರುವ ವಾಹನಗಳ ಮೇಲೆ ಮತ್ತೊಂದು ಕೋಮಿನ ಯುವಕರು ಗಿಡ-ಗಂಟೆಗಳ ಮಧ್ಯೆ ನಿಂತು ಕಲ್ಲು ಹೊಡೆಯುತ್ತಿದ್ದಾರೆ. ಚಿಕ್ಕಮಗಳೂರು ಅಕ್ಷರಶಃ ಬೂದಿಮುಚ್ಚಿದ ಕೆಂಡದಂತಾಗಿದೆ. ದತ್ತಪೀಠದಿಂದ ಬರುತ್ತಿರುವ ದತ್ತಮಾಲಾಧಾರಿಗಳ ವಾಹನಗಳನ್ನು ಪೊಲೀಸರ ಸರ್ಪಗಾವಲಲ್ಲಿ ನಗರ ದಾಟಿಸಲಾಗುತ್ತಿದೆ.

    ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುಂಜಾಗೃತ ಕ್ರಮವಾಗಿ ಎಷ್ಟೇ ಕ್ರಮಕೈಗೊಂಡಿದ್ದರೂ ಚುನಾವಣೆ ವರ್ಷದ ದತ್ತಜಯಂತಿಯಲ್ಲಿ ನಡೆಯಬಾರದ್ದೆಲ್ಲಾ ನಡೆದಿದೆ. ಆದರೆ ಇಂತಹ ಸೂಕ್ಷ್ಮ ಪ್ರದೇಶದಲ್ಲೇ ಇದ್ದ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಐಜಿಪಿ ಏನ್ ಮಾಡುತ್ತಿದ್ದರು ಅನ್ನೋದು ರಾಜ್ಯದ ಜನಕ್ಕೆ ಉತ್ತರ ಸಿಗದ ಪ್ರಶ್ನೆಯಾಗಿದೆ. ಈ ಘಟನೆಯ ಮೂಲಕ 11 ದಿನಗಳಿಂದ ನಡೆಯುತ್ತಿದ್ದ ದತ್ತಜಯಂತಿ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ.

  • ಕೊಪ್ಪದಲ್ಲಿ ವಿಚಿತ್ರ ಮಗು ಜನನ

    ಕೊಪ್ಪದಲ್ಲಿ ವಿಚಿತ್ರ ಮಗು ಜನನ

    ಚಿಕ್ಕಮಗಳೂರು: ಕೊಪ್ಪದ ಖಾಸಗಿ ಆಸ್ಪತ್ರೆಯಲ್ಲೊಂದು ವಿಚಿತ್ರ ಮಗು ಜನಿಸಿದೆ.

    ಲಕ್ಷ್ಮೀ ಎಂಬವರು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಅಸಹಜ ದೇಹ ಬೆಳವಣಿಗೆ ಪೋಷಕರಲ್ಲಿ ಆತಂಕ ಮೂಡಿಸಿದೆ.

    ಈ ಮಗುವಿನ ತಲೆಯಿಂದ ಹೊರಗೆ ಮೆದುಳು ಬೆಳವಣಿಗೆಯಾಗಿದೆ. ಅಸಹಜ ಮಗುವಿನ ಬೆಳವಣಿಗೆ ಕಂಡು ವೈದ್ಯರು ಆಶ್ಚರ್ಯ ಪಟ್ಟಿದ್ದಾರೆ. ಹೀಗಾಗಿ ಶಸ್ತ್ರ ಚಿಕಿತ್ಸೆ ಮಾಡಲು ವೈದ್ಯರ ಹಿಂದೇಟು ಮಾಡಿದರಿದ್ದ ಮಗು ಸಾವನ್ನಪ್ಪಿದೆ.

  • ರಾಹುಲ್ ಗಾಂಧಿಯನ್ನೇ ಸಿಎಂ ತನಿಖೆಯ ಮುಖ್ಯಸ್ಥರನ್ನಾಗಿ ಮಾಡಲಿ: ಸಿಟಿ ರವಿ

    ರಾಹುಲ್ ಗಾಂಧಿಯನ್ನೇ ಸಿಎಂ ತನಿಖೆಯ ಮುಖ್ಯಸ್ಥರನ್ನಾಗಿ ಮಾಡಲಿ: ಸಿಟಿ ರವಿ

    ಚಿಕ್ಕಮಗಳೂರು: ನಮ್ಮ ಪುಣ್ಯ, ಮನೆಯಲ್ಲಿ ಮಕ್ಕಳಾದ್ರೆ ಅದಕ್ಕೆ ಆರ್‍ಎಸ್‍ಎಸ್ ಕಾರಣ ಎಂದು ಹೇಳಿಲ್ಲ. ಕಾಂಗ್ರೆಸ್ಸಿನವರಿಗೆ ಆರ್‍ಎಸ್‍ಎಸ್ ದೂಷಿಸುವುದು ಚಾಳಿಯಾಗಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆಗೆ ಆರ್‍ಎಸ್‍ಎಸ್ ಕಾರಣ ಎಂದು ಹೇಳಿರೋ ರಾಹುಲ್ ಹೇಳಿಕೆಯನ್ನ ಖಂಡಿಸಿ ಸಿಎಂ ಸಿದ್ದರಾಮಯ್ಯ ರಾಹುಲ್‍ಗಾಂಧಿ ಅವರನ್ನೇ ತನಿಖೆಯ ಮುಖ್ಯಸ್ಥರನ್ನಾಗಿ ಮಾಡಲಿ. ಆಗ ರಾಹುಲ್ ಗಾಂಧಿಯೇ ಜೇಮ್ಸ್ ಬಾಂಡ್ ರೀತಿಯಲ್ಲಿ ಆರೋಪಿಗಳನ್ನ ಪತ್ತೆ ಹಚ್ಚಿ ಹಿಡಿದುಕೊಂಡು ಬರ್ತಾರೆ ಎಂದು ಹೇಳಿದರು.

    ರಾಹುಲ್ ಗಾಂಧಿಗೆ ಎಲ್ಲಿ, ಏನು ನಡೆಯುತ್ತೆ ಅನ್ನೋದನ್ನ ತಿಳಿದುಕೊಳ್ಳೋ ಸಾಮರ್ಥ್ಯವಿದೆ. ಅವರನ್ನ ತನಿಖಾ ದಳದ ಮುಖ್ಯಸ್ಥರನ್ನಾಗಸಿದರೆ ಎಂಎಂ ಕಲಬುರುಗಿ ಸೇರಿದಂತೆ ಎಲ್ಲಾ ಪ್ರಕರಣವನ್ನ ಪತ್ತೆ ಹಚ್ಚುತ್ತಾರೆ ಎಂದು ವ್ಯಂಗ್ಯವಾಡಿದರು.

  • ಕಾಫಿನಾಡಲ್ಲಿ ಕಣ್ಮನ ತಣಿಸಿದ ಬೈಕ್ ರೇಸ್

    ಕಾಫಿನಾಡಲ್ಲಿ ಕಣ್ಮನ ತಣಿಸಿದ ಬೈಕ್ ರೇಸ್

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಮುಗುಳುವಳ್ಳಿಯಲ್ಲಿ ನಡೆದ ಮನಮೋಹಕ ಬೈಕ್ ರೇಸ್ ನೋಡುಗರ ಮನ ತಣಿಸ್ತು. ಕಳೆದ 10 ವರ್ಷಗಳಿಂದ ನಿಂತಿದ್ದ ಬೈಕ್ ರೇಸ್‍ಗೆ ಇಂದು ಚಾಲನೆ ಸಿಕ್ಕಂತಾಗಿದ್ದು ಮುಂದಿನ ದಿನಗಳಲ್ಲಿ ಕಾರ್ ರೇಸ್‍ನಂತೆ ಬೈಕ್ ರೇಸನ್ನೂ ಪ್ರತಿವರ್ಷ ನಡೆಸೋದಾಗಿ ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ರು. ಇಷ್ಟು ದಿನಗಳ ಕಾಲ ಕಾಫಿನಾಡಿನ ಕಾರ್ ರೇಸನ್ನೇ ನೋಡಿ ಎಂಜಾಯ್ ಮಾಡ್ತಿದ್ದ ಕಾಫಿನಾಡಿಗರು ಇಂದು ಬೈಕ್ ರೇಸ್ ನೋಡಿ ಪುಳಕಗೊಂಡ್ರು.

    ಚಿಕ್ಕಮಗಳೂರು 13 ತಂಡದ ನೇತೃತ್ವದಲ್ಲಿ ನಡೆದ ಬೈಕ್ ರೇಸ್‍ಗೆ ಚಿಕ್ಕಮಗಳೂರು, ಮಂಡ್ಯ, ಮೈಸೂರು, ಶಿವಮೊಗ್ಗ, ಬೆಂಗಳೂರು, ತುಮಕೂರು, ಉಡುಪಿ ಸೇರಿದಂತೆ ಕೇರಳ, ಕೊಚ್ಚಿ, ತಿರುವನಂತಪುರ, ಮುಂಬೈ ಸೇರಿದಂತೆ ಅಂತಾರಾಷ್ಟ್ರೀಯ ರೈಡರ್‍ಗಳು ಭಾಗವಹಿಸಿ ನೋಡುಗರನ್ನು ರಂಜಿಸಿದ್ರು. ರೇಸ್‍ನಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಈ ರೇಸ್‍ಗೆ ಕಾರ್ ರೇಸ್ ನಡೆಸಿ ಅನುಭವವಿರೋ ಚಿಕ್ಕಮಗಳೂರು ಮೋಟರ್ ಸ್ಪೋರ್ಟ್ಸ್  ಕ್ಲಬ್ ಕೂಡ ಸಾಥ್ ನೀಡಿತ್ತು.

    ಒಟ್ಟು 150ಕ್ಕೂ ಹೆಚ್ಚು ಬೈಕ್‍ಗಳು ಭಾಗವಹಿಸಿದ್ವು. ಓರ್ವ ರೈಡರ್‍ಗಿಂತ ಮತ್ತೊಬ್ಬ ಚಾಣಾಕ್ಷನಂತೆ ಡ್ರೈವ್ ಮಾಡ್ತಿದ್ದಿದ್ದನ್ನ ಕಂಡ ನೋಡುಗರಿಗೆ ಮಿಂಚಿನ ವೇಗದಲ್ಲಿ ಓಡ್ತಿರೋ ಬೈಕಿನ ರೈಡ್‍ಗಳು ತಮ್ಮ ಎದೆಮೇಲೆ ಓಡಿದಂತಹ ಅನುಭವವಾಗ್ತಿತ್ತು. ಒಂದೇ ಬಾರಿಗೆ 10ಕ್ಕೂ ಹೆಚ್ಚು ಬೈಕ್‍ಗಳು ಟ್ರ್ಯಾಕ್ ಇಳಿದಾಗ ಗೆಲುವಿನ ಜಿದ್ದಾಜಿದ್ದಿಗೋಸ್ಕರ ನಾಮುಂದು-ತಾಮುಂದು ಅಂತಾ ರೈಡರ್‍ಗಳು ರೈಡ್ ಮಾಡುವಾಗ ನೋಡುಗರು ಕೂಡ ಈ ಟ್ರ್ಯಾಕ್‍ನಿಂದ ಆ ಟ್ರ್ಯಾಕ್‍ಗೆ ಓಡಿ ಚಪ್ಪಾಳೆ, ಶಿಳ್ಳೆ ಹೊಡೆದು ರೈಡರ್‍ಗಳಿಗೆ ಸಾಥ್ ನೀಡಿದ್ರು. ರೈಡರ್‍ಗಳು ಕೂಡ ನೋಡುಗರಿಗೆ ರಂಜಿಸೋಕೆ ಕೆಲಸ ಸಾಹಸದ ಸ್ಟಂಟ್‍ಗಳನ್ನ ಮಾಡಿದ್ರು.

    ಸದಾ ತಂಪೆರೆಯೋ ಕಾಫಿನಾಡಿನ ವಾತಾವರಣ ಬೈಕ್ ರೇಸ್‍ಗೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಈ ಬಾರಿಯ ಭೀಕರ ಬರಗಾಲದಿಂದ ಬೈಕ್ ರೇಸ್‍ಯ ಟ್ರ್ಯಾಕ್ ನೋಡಿದ್ರೆ ಇದು ಚಿಕ್ಕಮಗಳೂರೋ ಇಲ್ಲ ಉತ್ತರಕರ್ನಾಟಕವೋ ಎಂದು ನೋಡುಗರಿಗೆ ಭಾಸವಾಗ್ತಿತ್ತು. ಆದ್ರೆ, ಈ ಟ್ರ್ಯಾಕ್ ಬೈಕ್ ರೇಸ್‍ಗೆ ಹೇಳಿ ಮಾಡಿಸಿದಂತಿತ್ತು. 10ಕ್ಕೂ ಹೆಚ್ಚು ಬೈಕ್‍ಗಳು ಗೆಲುವಿಗಾಗಿ ಟ್ರ್ಯಾಕ್‍ಗೆ ಇಳಿದಾಗ ಮುನ್ನುಗ್ಗೋ ವೇಗದಲ್ಲಿ ರೈಡರ್‍ಗಳು ಎಕ್ಸಲೇಟರ್ ರೈಸ್ ಮಾಡಿದಂತೆ ಕ್ರೀಡಾಂಗಣವೆಲ್ಲಾ ಧೂಳುಮಯವಾಗ್ತಿತ್ತು. ನೋಡುಗರಿಗೆ ಯಾವ ಬೈಕ್ ಎಲ್ಲಿದೆ ಎಂಬುದೇ ಅರ್ಥವಾಗದಂತ ಪರಿಸ್ಥಿತಿ ನಿರ್ಮಾಣವಾಗ್ತಿತ್ತು. ಆದ್ರೂ, ಉರಿಯೋ ಬಿಸಿಲಲ್ಲೂ ಜನ ಬೈಕ್ ರೇಸ್ ಕಂಡು ಖುಷಿ ಪಟ್ರು.

    ಮೂರು ವಿಭಾಗದಲ್ಲಿ ನಡೆಯುತ್ತಿರೋ ರೇಸ್‍ಯಲ್ಲಿ ಒಂದೊಂದು ವಿಭಾಗಕ್ಕೂ ಪ್ರತ್ಯೇಕ ಬಹುಮಾನವಿದ್ದು, ಇಲ್ಲಿ ಗೆದ್ದೋರು ರಾಷ್ಟ್ರ ಮಟ್ಟದಲ್ಲೂ ಭಾಗವಹಿಸೋ ಅವಕಾಶ ಸಿಗಬಹುದು ಅನ್ನೋದು ಆಯೋಜಕರ ಅಭಿಲಾಷೆ. ರೇಸ್‍ಯಲ್ಲಿ ಲೋಕಲ್ ರೈಡರ್‍ಗಳಿಗೂ ಉತ್ತೇಜಿಸೋ ದೃಷ್ಟಿಯಿಂದ ಅವರಿಗೂ ಒಂದು ಹಂತದಲ್ಲಿ ಭಾಗವಹಿಸೋ ಅವಕಾಶ ಕಲ್ಪಿಸಿದ್ರು ಆಯೋಜಕರು. ಯಾಕಂದ್ರೆ, ದಾರಿ, ಜನವಸತಿ ಪ್ರದೇಶದಲ್ಲಿ ವೇಗವಾಗಿ ಅಥವಾ ವಿಭಿನ್ನವಾಗಿ ಬೈಕ್ ಓಡಿಸಿ ಅನಾಹುತ ಮಾಡೋದಕ್ಕಿಂತ ಇಂತಹಾ ರೇಸ್‍ಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನ ಇಲ್ಲಿ ತೋರಿಸಲಿ ಎಂಬ ಕಾರಣಕ್ಕೆ ಅವಕಾಶ ನೀಡಿದ್ವಿ, ಇಂತಹಾ ರೇಸ್‍ಗಳು ಪ್ರತಿವರ್ಷ ನಡೆದ್ರೆ ರಸ್ತೆಯಲ್ಲಿ ಬೈಕ್ ರೇಸ್ ನಡೆಸೋರ ಸಂಖ್ಯೆ ಕಡಿಮೆಯಾಗಲಿದೆ ಅನ್ನೋ ನಂಬಿಕೆ ಇದೆ, ನಮ್ಮ ಈ ಉದ್ದೇಶ ಶೇ.50 ರಷ್ಟು ಈಡೇರುತ್ತೆ ಅಂತಾರೆ ಆಯೋಜಕರು. ರೇಸ್‍ನಲ್ಲಿ ರಾಷ್ಟ್ರಮಟ್ಟದ ರೈಡರ್‍ಗಳಿಗೂ ಸ್ಥಳಿಯ ರೈಡರ್‍ಗಳು ಸೆಡ್ಡು ಹೊಡೆಯೋ ರೀತಿಯಲ್ಲಿ ರೈಡ್ ಮಾಡಿ ನೋಡುಗರ ಮನಸೂರೆಗೊಳಿಸಿದ್ರು.

    ಇನ್ನು ಬೈಕ್ ರೇಸ್‍ಗೆ ತಕ್ಕಂತೆ ಟ್ರ್ಯಾಕ್ ಕೂಡ ನಿರ್ಮಾಣವಾಗಿತ್ತು. ಹಾವು ಬಳುಕಿನ ಮೈಕಟ್ಟಿನ ಟ್ರ್ಯಾಕ್‍ನಲ್ಲಿ ಅದೇ ಆಕಾರದಲ್ಲಿ ವೇಗವಾಗಿ ಬೈಕ್‍ಗಳು ಓಡ್ತಿದ್ರೆ ನೋಡುಗರ ದೃಷ್ಟಿ ಕೂಡಾ ಅಷ್ಟೇ ವೇಗವಾಗಿರ್ತಿತ್ತು. ಟ್ರ್ಯಾಕ್‍ನ ಒಂದು ಸುತ್ತು ಬರುವಷ್ಟರಲ್ಲಿ ಅಂದಾಜು ಒಂದರಿಂದ ಒಂದೂವರೆ ಕಿ.ಮೀ. ಸಾಗಿದಂತಾಗ್ತಿತ್ತು. ಒಂದು ಸುತ್ತನ್ನ ಮುಗಿಸಲು ಈ ಟ್ರ್ಯಾಕ್‍ನಲ್ಲಿ ಐದು ಬಾರಿ ರೌಂಡ್ ಹೊಡೆಯಬೇಕಿತ್ತು. ಟ್ರ್ಯಾಕ್‍ನಲ್ಲಿ ಅಲ್ಲಲ್ಲೇ ಹಾಕಿದ್ದ ಸಣ್ಣ-ಸಣ್ಣ ಹಂಪ್‍ಗಳು, ಚಿಕ್ಕ-ಚಿಕ್ಕ ಗುಂಡಿಗಳಲ್ಲಿ ಬೈಕ್ ಹಾರುವಾಗ ನೋಡುಗರು ಕುಣಿದು ಕುಪ್ಪಳಿಸಿ ಕೇಕೆ ಹಾಕಿ ಸಂಭ್ರಮಿಸಿದ್ರು.

    ರಾಜ್ಯದೆದುರು ಕಾಫಿನಾಡು ಹಲವು ವಿಚಾರಗಳಲ್ಲಿ ಉಳಿದೆಲ್ಲಾ ಜಿಲ್ಲೆಗಳಿಗಿಂತ ತುಸು ಭಿನ್ನ ಎಂದೇ ಹೇಳಬಹುದು. ಯಾಕಂದ್ರೆ, ಕ್ರೀಡೆಯನ್ನೇ ಕೇಂದ್ರೀಕೃತವಾಗಿ ಹೇಳೋದಾದ್ರೆ ಕಾಫಿನಾಡಲ್ಲಿ ಆಗಾಗ ಕೆಸರುಗದ್ದೆ ಓಟ, ಕೆಸರುಗದ್ದೆ ವಾಲಿಬಾಲ್, ಎತ್ತಿನಗಾಡಿ ಸ್ಫರ್ದೆ, ಕಬ್ಬಡ್ಡಿ, ಕುಸ್ತಿ ಸೇರಿದಂತೆ ಪುರಾತನವಾದ ಸಾಂಪ್ರದಾಯಿಕ ಕ್ರೀಡೆಗಳು ಕಾಫಿನಾಡಲ್ಲಿ ಇಂದಿಗೂ ಜೀವಂತ. ಇದ್ರ ಜೊತೆ ಆಗಾಗ್ಗೆ ಕ್ರಿಕೆಟ್, ವಾಲಿಬಾಲ್‍ನಂತಹಾ ಆಧುನಿಕ ಕ್ರೀಡೆಗಳು ನಡೆಯುತ್ತಿರುತ್ವೆ. ಕಾಫಿನಾಡು ಚಿಕ್ಕಮಗಳೂರು ಆಧುನಿಕ ಜಗತ್ತಿಗೂ ಒಗ್ಗಿಕೊಂಡು ಬದುಕ್ತಾ, ಪುರಾತನ ಕ್ರೀಡೆಯನ್ನೂ ಉಳಿಸಿ-ಬೆಳೆಸಿ ಪೋಷಿಸ್ತಿದೆ ಅಂದ್ರೆ ತಪ್ಪಿಲ್ಲ.