Tag: chikmagaluru

  • ಕಾಫಿನಾಡಲ್ಲಿ ಸೀಳುದುಟಿಯ ವಿಚಿತ್ರ ಕರು ಜನನ

    ಕಾಫಿನಾಡಲ್ಲಿ ಸೀಳುದುಟಿಯ ವಿಚಿತ್ರ ಕರು ಜನನ

    ಚಿಕ್ಕಮಗಳೂರು: ಹುಟ್ಟುವಾಗಲೇ ನಾಲಿಗೆಯನ್ನು ಬಾಯಿಯ ಒಂದು ತುದಿಯಿಂದ ಹೊರಹಾಕಿಕೊಂಡು ಮೇಲ್ದುಟಿಯನ್ನ ಸೀಳಿಕೊಂಡ ವಿಚಿತ್ರವಾದ ಕರು ಹುಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‍ನ ಸಮೀಪದ ಬಿನ್ನಡಿ ಗ್ರಾಮದ ಸುರೇಶ್‍ಗೌಡ ಎಂಬವರ ಕೆಂಪಿ ಎಂಬ ಹಸು ಸೋಮವಾರ ಬೆಳಗ್ಗೆ ಕರುವಿಗೆ ಜನ್ಮ ನೀಡಿತ್ತು. ಆದರೆ ಹೆಣ್ಣು ಕರು ಹುಟ್ಟುವಾಗಲೇ ವಿಚಿತ್ರವಾಗಿ ಹುಟ್ಟಿದ್ದು ನಾಲಿಗೆಯನ್ನು ಹೊರಹಾಕಿಕೊಂಡು ಮೇಲ್ದುಟಿಯನ್ನ ಸೀಳಿಕೊಂಡಿದೆ.

    ಪ್ರಾಣಿಗಳನ್ನು ಇಷ್ಟಪಟ್ಟು ಸಾಕುವ ಸುರೇಶ್ ಗೌಡರು ಕರುವಿನ ಸ್ಥಿತಿ ಕಂಡು ಮಮ್ಮಲು ಮರುಗಿದ್ದಾರೆ. ಅಲ್ಲದೆ ಕರುವಿಗೆ ಎದ್ದು ನಿಲ್ಲುವ ಶಕ್ತಿಯೂ ಇಲ್ಲದಂತಾಗಿದೆ. ಎಬ್ಬಿಸಿ ನಿಲ್ಲಿಸಿದ್ರು ಸೊಂಟ ಹಾಗೂ ಕಾಲಿನಲ್ಲಿ ಬಲವಿಲ್ಲದೆ ಕೆಳಗೆ ಬಿಳುತ್ತಿದೆ. ತಾಯಿಯ ಬಳಿ ನಿಂತು ಹಾಲು ಕುಡಿಯುವ ಶಕ್ತಿಯೂ ಕರುವಿಗೆ ಇಲ್ಲದಂತಾಗಿದೆ.

    ಸ್ಥಳಕ್ಕೆ ಭೇಟಿ ನೀಡಿರುವ ಪಶು ವೈದ್ಯ ಚಿಕಿತ್ಸಿಕರು, ನಾಲ್ಕು ದಿನ ಕಳೆಯಲಿ, ಹಾಲು ಕುಡಿದ ಮೇಲೆ ದೇಹಕ್ಕೆ ಶಕ್ತಿ ಬಂದು ಎದ್ದು ನಿಲ್ಲಬಹುದು ಎಂದು ಹೇಳಿದ್ದಾರೆ. ಆದರೆ ನಾಲ್ಕು ದಿನಗಳ ಕಾಲ ಹಸುವಿನಿಂದ ಹಾಲು ಕರೆದು ಒಳಲೆ ಮೂಲಕ ಹಾಲು ಕುಡಿಸುವಂತೆ ವೈದ್ಯರು ಸುರೇಶ್ ಗೌಡರವರಿಗೆ ಸೂಚಿಸಿದ್ದಾರೆ.

  • ದತ್ತಪೀಠಕ್ಕೆ ಸರ್ಕಾರಿ ಬಸ್ – ಪೂಜೆ ಮಾಡಿ ಸ್ವಾಗತಿಸಿಕೊಂಡ ಕಾಫಿನಾಡಿಗರು

    ದತ್ತಪೀಠಕ್ಕೆ ಸರ್ಕಾರಿ ಬಸ್ – ಪೂಜೆ ಮಾಡಿ ಸ್ವಾಗತಿಸಿಕೊಂಡ ಕಾಫಿನಾಡಿಗರು

    ಚಿಕ್ಕಮಗಳೂರು: ದತ್ತಪೀಠಕ್ಕೆ ಸರ್ಕಾರಿ ಬಸ್ ಬಿಡಬೇಕೆಂಬ ಸ್ಥಳೀಯರು ಹಾಗೂ ಪ್ರವಾಸಿಗರ ಬಹುದಿನದ ಬೇಡಿಕೆ ಕೊನೆಗೂ ಈಡೇರಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಕೂಡ ಚಿಕ್ಕಮಗಳೂರಿನಿಂದ ದತ್ತಪೀಠ ಬಸ್ ಸೌಲಭ್ಯ ಇರಲಿಲ್ಲ. ಈ ಭಾಗದ ಜನ ಹಾಗೂ ಪ್ರವಾಸಿಗರು ಈ ಭಾಗಕ್ಕೆ ಬಸ್ ಬಿಡಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಆದರೆ ಕಿರಿದಾದ ಹಾಗೂ ಹಾವು-ಬಳುಕಿನ ಮೈಕಟ್ಟಿನ ರಸ್ತೆಯಾಗಿರುವುದರಿಂದ ಸರ್ಕಾರ ಬಸ್ ಸೌಲಭ್ಯ ಕಲ್ಪಿಸಿರಲಿಲ್ಲ.

    ಗಿರಿ ಭಾಗದ ಅತ್ತಿಗುಂಡಿ, ಪಂಡರವಳ್ಳಿ, ಎನ್‍ಎಂಡಿಸಿ, ಬ್ಯಾಗದಹಳ್ಳಿ, ಮಹಲ್, ತಿಪ್ಪನಹಳ್ಳಿ ಎಸ್ಟೇಟ್ ಸೇರಿದಂತೆ ಹಲವು ಗ್ರಾಮದ ಜನ ಆಗೊಮ್ಮೆ-ಈಗೊಮ್ಮೆ ಬರುವ ಖಾಸಗಿ ಬಸ್ ಹಾಗೂ ಆಟೋ, ಜೀಪ್ ಗಳನ್ನೇ ಆಶ್ರಯಿಸಿದ್ದರು. ದೈನಂದಿನ ಕೆಲಸಕ್ಕೆ ನಗರ ಪ್ರದೇಶಗಳಿಗೆ ಬರುವ ಈ ಭಾಗದ ಜನ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಗ್ರಾಮೀಣ ಭಾಗದಿಂದ ಶಾಲಾ-ಕಾಲೇಜಿಗೆ ಬರುವ ಮಕ್ಕಳು ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದರು. ಆದ್ದರಿಂದ ಈ ಭಾಗದ ಜನ ಬಸ್‍ಗಾಗಿ ಸರ್ಕಾರಕ್ಕೆ ಹತ್ತಾರು ಮನವಿ ಸಲ್ಲಿಸಿದ್ದರು. ದತ್ತಪೀಠದ ಮಾರ್ಗದಲ್ಲಿ ಕಿರಿದಾಗಿದ್ದ ರಸ್ತೆಯನ್ನು ಸರ್ಕಾರ ಅಗಲೀಕರಣ ಮಾಡಿದ್ದು, ಈಗ ದತ್ತಪೀಠಕ್ಕೆ ಬಸ್ ಸೌಲಭ್ಯ ಕಲ್ಪಿಸಿದ್ದು ಸ್ಥಳೀಯರಲ್ಲಿ ಸಂತಸ ಮೂಡಿದೆ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸಂಚರಿಸುವ ಬಸ್ಸಿಗೆ ಸಚಿವ ಸಿ.ಟಿ ರವಿ ಚಾಲನೆ ನೀಡಿದ್ದಾರೆ.

    ತಮ್ಮ ಮಾರ್ಗಕ್ಕೆ ಬಸ್ ಬಂದ ಖುಷಿಗೆ ಈ ಮಾರ್ಗದ ಗ್ರಾಮಸ್ಥರೆಲ್ಲಾ ಬಸ್ಸಿಗೆ ಪೂಜೆ ಮಾಡಿ ಸ್ವಾಗತಿಸಿಕೊಂಡಿದ್ದು, ಬಳಿಕ ದತ್ತಪೀಠದಲ್ಲೂ ಪೂಜೆ ಸಲ್ಲಿಸಲಾಗಿದೆ. ತಮ್ಮ ಮಾರ್ಗಕ್ಕೆ ಬಸ್ ಬಂದಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಭಾಗದಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರೇ ಹೆಚ್ಚಿದ್ದರು. ಅವರ ನಗರ ಪ್ರದೇಶಕ್ಕೆ ಬರಬೇಕಂದರೆ ಖಾಸಗಿ ಜೀಪ್, ಆಟೋಗಳಿಗೆ ಅವರು ಕೇಳಿದಷ್ಟು ಹಣವನ್ನು ನೀಡಬೇಕಿತ್ತು. ಈಗ ಸರ್ಕಾರ ಬಸ್ ಬಿಟ್ಟಿರುವುದರಿಂದ ಸ್ಥಳೀಯರಲ್ಲಿ ಸಂತಸ ಮನೆ ಮಾಡಿದೆ.

  • ಪ್ರವಾಸಿಗರ ಹಾಟ್‍ಸ್ಪಾಟ್ ಆದ ಕಾಮೇನಹಳ್ಳಿ ಜಲಪಾತ

    ಪ್ರವಾಸಿಗರ ಹಾಟ್‍ಸ್ಪಾಟ್ ಆದ ಕಾಮೇನಹಳ್ಳಿ ಜಲಪಾತ

    ಚಿಕ್ಕಮಗಳೂರು: ಮಳೆನಾಡು ಮಲೆನಾಡಲ್ಲಿ ಮಳೆ ಬಹುತೇಕ ಕಡಿಮೆಯಾಗಿದ್ದು, ನಿಂತಲ್ಲೇ ದೇಹವನ್ನ ನಡುಗಿಸುವ ರಣಚಳಿ ಆರಂಭವಾಗಿದೆ. ಆದರೆ ವರ್ಷಪೂರ್ತಿ ನೀರನ್ನು ಹಿಡಿದಿಟ್ಟು ಹರಿಸುವ ಅರಣ್ಯದ ಶಕ್ತಿ ಶೋಲಾ ಕಾಡುಗಳಲ್ಲಿ ನೀರಿನ ಪ್ರಮಾಣ ಹಾಗೆ ಇದ್ದು ಜಲಪಾತಗಳಿಗೆ ನವ ಚೈತನ್ಯ ಬಂದಿದೆ. ಚಂದ್ರದ್ರೋಣ ಪರ್ವತಗಳ ಸೆರಗಲ್ಲಿರುವ ಕಲ್ಲತ್ತಿಗರಿ, ಡೈಮಂಡ್, ಶಬರಿ ಹಾಗೂ ಹೆಬ್ಬೆ ಜಲಪಾತಗಳ ವೈಭೋಗವನ್ನು ನೋಡಲೆರಡು ಕಣ್ಣುಗಳು ಸಾಲದಂತಾಗಿದೆ. ಅದರಲ್ಲೂ, ಚಿಕ್ಕಮಗಳೂರಿನಿಂದ ಅನತಿ ದೂರದಲ್ಲಿರುವ ಕಾಮೇನಹಳ್ಳಿ ಜಲಪಾತ ಬಂಡೆಗಳ ಹಾಲು ಸುರಿಯುತ್ತಿರುವಂತೆ ಭಾಸವಾಗುತ್ತಿದೆ.

    ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಜಲಪಾತದಲ್ಲೀಗ ದೃಶ್ಯ ಕಾವ್ಯವೇ ಮನೆ ಮಾಡಿದೆ. ಪಶ್ಚಿಮ ಘಟ್ಟಗಳ ಸಾಲಿನಿಂದ ಹರಿದು ಬರುವ ಗಂಗಾ ಮಾತೆ ಕಾಮೇನಹಳ್ಳಿಯಲ್ಲಿ ಸುಮಾರು 70-90 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದ್ದಾಳೆ. ಮೇಲಿಂದ ಶಾಂತವಾಗಿ ಹರಿದು ಬಂದು ಒಮ್ಮೆಲೇ ಎತ್ತರದಿಂದ ಧುಮ್ಮಿಕ್ತಿದ್ದು, ನೀರಿನ ಶಬ್ಧದೊಂದಿಗೆ ಹಕ್ಕಿ-ಪಕ್ಷಿಗಳ ಕಲರವ ಹೊಸದೊಂದು ಲೋಕವನ್ನೇ ಸೃಷ್ಟಿಸಿದೆ. ಇಲ್ಲಿಗೆ ಬರುತ್ತಿರುವ ಪ್ರವಾಸಿಗರು ಇಲ್ಲಿನ ರಮಣೀಯ ದೃಶ್ಯವನ್ನು ಕಂಡು ಒಬ್ಬೊಬ್ಬರು ಒಂದೊಂದು ಹೆಸರಿನಿಂದ ನಾಮಕರಣ ಮಾಡುತ್ತಿದ್ದಾರೆ. ಕೆಲವರು ಡೈಮಂಡ್ ಫಾಲ್ಸ್ ಎಂದರೆ, ಮತ್ತೆ ಕೆಲವರು ಕುಮಾರಗಿರಿ ಫಾಲ್ಸ್ ಅಂತಾರೆ. ಆದರೆ ಈ ಜಲಪಾತ ವಾಟರ್ ಫಾಲ್ಸ್ ಎಂದೇ ಖ್ಯಾತಿ. ಇದನ್ನೂ ಓದಿ: ಪ್ರವಾಸಿಗರ ಸ್ವರ್ಗ ಕಾಫಿನಾಡಿನ 9 ಗುಡ್ಡಗಳ ನಡುವಿನ ‘ಎತ್ತಿನಭುಜ’

    ಗಿರಿಶ್ರೇಣಿಗಳಲ್ಲಿ ಮಳೆ ನಿಂತರು ನಿರಂತರವಾಗಿ ಹರಿಯುತ್ತಿರುವ ನೀರಿನಿಂದ ಜಲಪಾತವೀಗ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರ ಹಾಟ್‍ಸ್ಪಾಟ್ ಆಗಿ ಬದಲಾಗಿದೆ. ಗಿರಿ ಮಧ್ಯೆಯಿಂದ ಮಣ್ಣಿನ ಬಣ್ಣದಲ್ಲಿ ಹರಿದು ಬರುವ ನೀರು ಜಲಪಾತದಿಂದ ಧುಮ್ಮಿಕ್ಕುವಾಗ ಹಾಲ್ನೋರೆಯಂತೆ ಭಾಸವಾಗುತ್ತಿರುವುದು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಚಿಕ್ಕಮಗಳೂರಿನಿಂದ 30 ಕಿಮೀ ದೂರದಲ್ಲಿರುವ ಈ ಜಲಪಾತಕ್ಕೆ ಸರಿಯಾದ ದಾರಿ ಇಲ್ಲ.

    ಸಖರಾಯಪಟ್ಟಣದ ಸಮೀಪ ಬರುವ ಈ ಜಲಪಾತಕ್ಕೆ ಹೋಗುವುದು ಕೂಡ ಸವಾಲೇ. ಚಿಕ್ಕಮಗಳೂರಿನಿಂದ ಮಲ್ಲೆನಹಳ್ಳಿ ಮಾರ್ಗವಾಗಿ 30 ಕಿ.ಮೀ. ಸಾಗಿ ಕಾಮೇಹಳ್ಳಿಗೆ ಎಂಟ್ರಿಯಾದರೆ ನೀರಿನ ಶಬ್ಧವೇ ನೋಡುಗರಿಗೆ ದಾರಿ ತೋರಿಸುತ್ತೆ. ಬೈಕ್ ಅಥವಾ ಕಾರು ಯಾವುದನ್ನಾದರು ನಿಲ್ಲಿಸಿ ಸುಮಾರು ಒಂದೂವರೆ ಕಿ.ಮೀ. ನಡೆದರೆ ಈ ಪ್ರಕೃತಿಯ ನೈಜ ಸೊಬಗು ಅನಾವರಣಗೊಳ್ಳುತ್ತೆ. ಇದನ್ನೂ ಓದಿ: ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿ ಮಂತ್ರಮುಗ್ಧರಾದ ಪ್ರವಾಸಿಗರು

    ಇಲ್ಲಿನ ನೈಸರ್ಗಿಕ ಸೌಂದರ್ಯಕ್ಕೆ ಮನಸೋಲುವ ಪ್ರವಾಸಿಗರು ಜಲಧಾರೆಯಲ್ಲಿ ಮಿಂದೆದ್ದು, ತಮ್ಮದೇ ಲೋಕದಲ್ಲಿ ಸ್ವಚ್ಚಂದವಾಗಿ ಮೈ ಮರೆಯುತ್ತಾರೆ. ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಳ್ಳುವ ಪ್ರವಾಸಿಗರು ಇಲ್ಲಿನ ಸೌಂದರ್ಯ ಫಿದಾ ಆಗುತ್ತಿದ್ದಾರೆ. ಇಲ್ಲಿನ ಹತ್ತಾರು ಬಂಡೆಗಳು ಡೈಮಂಡ್ ಆಕೃತಿಯಲ್ಲಿರುವುದರಿಂದ ಈ ಜಲಪಾತವನ್ನು ಡೈಮಂಡ್ ಜಲಪಾತ ಎಂದು ಹೇಳುತ್ತಾರೆ. ಅಲ್ಲದೆ ಕಲ್ಲಿನ ಮೇಲೆ ನಿರಂತರವಾಗಿ ಹರಿಯುವ ನೀರು ನಾನಾ ಆಕಾರದಲ್ಲಿ ಕಲ್ಲನ್ನು ಕೊರೆದಿದೆ. ಇದು ನೋಡುಗರಿಗೆ ಮತ್ತಷ್ಟು ಮುದ ನೀಡ್ತಿದೆ.

    ಈ ಸುಂದರ ತಾಣ ಸ್ಥಳಿಯರನ್ನು ಬಿಟ್ಟರೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಈ ಜಾಗದ ಬಗ್ಗೆ ಗೊತ್ತಿರುವವರುವೀಕೆಂಡ್‌ನಲ್ಲಿ ಬಂದು ಕೊರೆಯುವ ನೀರಿನಲ್ಲಿ ಮಿಂದೆದ್ದು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇಲ್ಲಿಗೆ ಹೋಗುವುದಕ್ಕೆ ಸೂಕ್ತ ಮಾರ್ಗವಿಲ್ಲ. ಸರ್ಕಾರ ಈ ತಾಣವನ್ನು ಪ್ರವಾಸೋಧ್ಯಮ ತಾಣವನ್ನಾಗಿಸಿದ್ರೆ ಪ್ರವಾಸಿಗರು ಕಾಫಿನಾಡಿನ ಸೌಂದರ್ಯವನ್ನು ಸವಿಯಬಹುದು, ಸರ್ಕಾರಕ್ಕೂ ಆದಾಯ ಬರಲಿದೆ.

  • ಸೋಮೇಶ್ವರದಲ್ಲಿ ರಕ್ಕಸ ಅಲೆಗಳ ಭೀತಿ – ಉಡುಪಿ, ಕಾರವಾರ, ಕೊಡಗಿನಲ್ಲಿ ಭಾರೀ ಮಳೆ

    ಸೋಮೇಶ್ವರದಲ್ಲಿ ರಕ್ಕಸ ಅಲೆಗಳ ಭೀತಿ – ಉಡುಪಿ, ಕಾರವಾರ, ಕೊಡಗಿನಲ್ಲಿ ಭಾರೀ ಮಳೆ

    ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಮುಂಗಾರು ಮಳೆ ಮತ್ತೊಂದು ಕಡೆ ವಾಯು ಚಂಡಮಾರುತದ ಎಫೆಕ್ಟ್ ಜೋರಾಗಿದೆ. 3 ದಿನಗಳಿಂದ  ದಕ್ಷಿಣ ಕನ್ನಡದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಉಳ್ಳಾಲದ ಸೋಮೇಶ್ವರದಲ್ಲಿ ಹೆಚ್ಚಿದ ಕಡಲ್ಕೊರೆತದಿಂದ ರೆಸಾರ್ಟ್‍ನ ಶೌಚಾಲಯ ಕಟ್ಟಡ ಸಮುದ್ರ ಪಾಲಾಗಿದೆ.

    ಮಂಗಳೂರಿನ ಉಳ್ಳಾಲದಲ್ಲಿನ ಸಮ್ಮರ್ ಸ್ಯಾಂಡ್ ರೆಸಾರ್ಟಿನ ಶೌಚಾಲಯ ಕಟ್ಟಡ ನೋಡ ನೋಡುತ್ತಿದ್ದಂತೆ ನೆಲಸಮವಾಗಿದೆ. ಕಡಲ ತೀರದ ನಿವಾಸಿಗಳು ಜೀವಭಯದಿಂದ ದಿನ ಕಳೆಯುತ್ತಿದ್ದಾರೆ.

    ಉಡುಪಿ: ಉಡುಪಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಮಳೆ ಆಗಿದೆ. ಬೈಂದೂರು, ಕುಂದಾಪುರದಲ್ಲಿ ಗಾಳಿ ಸಹಿತ ರಾತ್ರಿ ಸುರಿದ ಮಳೆ ತಂಪೆರೆದಿದೆ. ಹವಾಮಾನ ಇಲಾಖೆ ಜೂನ್ 15ರವರೆಗೆ ಕರಾವಳಿಯಲ್ಲಿ ಸಾಧಾರಣ ಮಳೆ, ಜೂನ್ 20ರ ನಂತರ ಅಬ್ಬರದ ಮುಂಗಾರು ಮಳೆಯನ್ನು ನಿರೀಕ್ಷೆ ಮಾಡಬಹುದು ಎಂದಿದೆ. ಭಾರೀ ಮಳೆಯ ನಡುವೆಯೂ ರಾತ್ರಿ ಉಡುಪಿ ಕೃಷ್ಣನ ಉತ್ಸವ ನಡೆದಿದೆ.

    ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸುರಿದ ಭಾರೀ ಮಳೆಗೆ ಶೇಜಾವಾಡದ ಗುಡ್ಡದ ಬಳಿ ಇರುವ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಇದರಿಂದಾಗಿ ಕಾರವಾರದ ಅರ್ಧ ಭಾಗ ವಿದ್ಯುತ್ ವ್ಯತ್ಯಯವಾಗಿದೆ. ನಿನ್ನೆಯಿಂದ ಕಂಬಗಳ ರಿಪೇರಿ ಕೆಲಸ ಸಾಗಿದ್ದರೂ ಪೂರ್ಣವಾಗಿಲ್ಲ. ಹಾಗಾಗಿ, 2 ದಿನದಿಂದ ಜನ ಕತ್ತಲಲ್ಲಿ ಇರುವಂತಾಗಿದೆ.

    ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರು, ಕಳಸ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರದಲ್ಲಿ ಕಾರ್ಮೋಡ ಕವಿದಿದ್ದು ಎಡೆಬಿಡದೆ ಮಳೆ ಸುರಿಯುತ್ತಿದೆ.

    ಒಮ್ಮೆ ಜೋರು ಗಾಳಿ, ಮತ್ತೊಮ್ಮೆ ಭಾರೀ ಮಳೆಗೆ ಅಡಿಕೆ, ಕಾಫಿ, ಮೆಣಸು ಬೆಳೆಗಾರರು ಮಳೆಗಾಳಿಯಿಂದ ಕಂಗಾಲಾಗಿದ್ದಾರೆ. ಮರ, ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಗಳು  ನೆಲಕಚ್ಚಿವೆ.

    ಕೊಡಗು: ಮಳೆ ಎಂದರೆ ಬೆಚ್ಚಿಬೀಳುವಂತಹ ಪರಿಸ್ಥಿತಿ ಇರುವ ಕೊಡಗಿನಲ್ಲೂ ವರುಣಾ ಅಬ್ಬರಿಸಿದ್ದಾನೆ. ಬೆಳಗ್ಗೆಯಿಂದ ಕೊಂಚ ಬಿಡುವು ಕೊಟ್ಟಿದ್ದ ಮಳೆ ಮಧ್ಯಾಹ್ನದ ವೇಳೆ ಶುರುವಾಗಿ ಕೆಲಗಂಟೆಗಳ ಕಾಲ ಸುರಿಯಿತು. ಇದರಿಂದಾಗಿ ವಾಹನ ಸಂಚಾರದಲ್ಲಿ ಕೆಲ ಕಾಲ ಅಸ್ತವ್ಯಸ್ತ ಉಂಟಾಯಿತು. ಮಣ್ಣಿನ ರಸ್ತೆಗಳು ಕೆಸರುಮಯವಾಗಿ ಸಂಚಾರಕ್ಕೆ ಅಡ್ಡಿಯಾಯ್ತು.

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮುಂದಿನ 2ರಿಂದ 3 ದಿನ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ನಗರದ ಕೆಲವು ಕಡೆ ಈಗಾಗಲೇ ಸಾಧಾರಣ ಮಳೆ ಆಗುತ್ತಿದ್ದು, ಗಾಳಿ ಜೊತೆ ವರುಣನ ಸಿಂಚನ ಮಾಡುತ್ತಿದ್ದಾನೆ. ದಿನವಿಡೀ ಮೋಡ ಕವಿದ ವಾತಾವರಣ ಇರಲಿದ್ದು ರಾತ್ರಿ ವೇಳೆಗೆ ಮಳೆಯಾಗುವ ಸಂಭವ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

  • ಟಿಕೆಟ್ ಯಾರಿಗೆ ಕೊಟ್ರು ಎಲ್ಲರೂ ಕೆಲಸ ಮಾಡ್ತೇವೆ: ಶೋಭಾ ಕರಂದ್ಲಾಜೆ

    ಟಿಕೆಟ್ ಯಾರಿಗೆ ಕೊಟ್ರು ಎಲ್ಲರೂ ಕೆಲಸ ಮಾಡ್ತೇವೆ: ಶೋಭಾ ಕರಂದ್ಲಾಜೆ

    ಚಿಕ್ಕಮಗಳೂರು: ಕ್ಷೇತ್ರದಲ್ಲಿ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲರೂ ಪಕ್ಷದ ಪರ ಕೆಲಸ ಮಾಡುತ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರ ಪ್ರವಾಸ ಆರಂಭ ಮಾಡಿರುವ ಶೋಭಾ ಕರಂದ್ಲಾಜೆ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಪಕ್ಷದ ಹೈಕಮಾಂಡ್ ಕ್ಷೇತ್ರದಲ್ಲಿ ಓಡಾಡಲು ಸೂಚನೆ ನೀಡಿದೆ. ಆದ್ದರಿಂದ ಚುನಾವಣೆಯಲ್ಲಿ ಪಕ್ಷಕ್ಕೆ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ. ನಾಳೆ ಯಾರಿಗೆ ಟಿಕೆಟ್ ನೀಡಿದರೂ ಕೂಡ ಒಟ್ಟಿಗೆ ಜವಾಬ್ದಾರಿ ನಿರ್ವಹಿಸುತ್ತೇವೆ ಎಂದರು.

    ಇದೇ ವೇಳೆ ಟಿಕೆಟ್ ನೀಡುವುದು ಅಂತಿಮವಾಗಿ ಹೈಕಮಾಂಡ್ ಎಂದು ಸ್ಪಷ್ಟಪಡಿಸಿದ ಅವರು, ಈ ಕ್ಷೇತ್ರದಲ್ಲಿ ಪಕ್ಷ ಗೆಲ್ಲುವುದು ಖಚಿತ ಆಗಿರುವುದರಿಂದ ಸಾಕಷ್ಟು ಮಂದಿ ಟಿಕೆಟ್ ಕೇಳುತ್ತಾರೆ. ಆದರೆ ಟಿಕೆಟ್ ಪಡೆಯುವ ರಭಸದಲ್ಲಿ ಪಕ್ಷದ ವಿರುದ್ಧ ಮಾತನಾಡಬಾರದು ಎಂದು ತಿಳಿಸಿದರು.

    ಜಯಪ್ರಕಾಶ್ ಹೆಗ್ಡೆ ಅವರು ನಮ್ಮ ಪಕ್ಷದ ನಾಯಕರೇ ಆಗಿದ್ದು, ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಕೊಟ್ಟರೂ ಪ್ರಚಾರ ಮಾಡಲು ಸಿದ್ಧ. ಆದರೆ ಕಾರ್ಯಕರ್ತರ ಜೊತೆ ಸಭೆ ನಡೆಸುವುದು ತಪ್ಪಲ್ಲ. ಗೆಲ್ಲುವ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುತ್ತದೆ. ಇದಕ್ಕೆ ವಿಶೇಷ ಅರ್ಥ ನೀಡುವ ಅವಶ್ಯಕತೆ ಇಲ್ಲ. ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿರುವ ಚಳುವಳಿ ನಮ್ಮ ಕಾರ್ಯಕರ್ತರು ಮಾಡಿಲ್ಲ. ಟಿಕೆಟ್ ಆಕಾಂಕ್ಷಿಗಳ ಹಿಂಬಾಲಕರು ಗೋ ಬ್ಯಾಕ್ ಚಳವಳಿ ಮಾಡುತ್ತಿದ್ದಾರೆ. ಅಂತಿಮವಾಗಿ ನಾವು ಟಿಕೆಟ್ ಹಂಚಿಕೆ ಕುರಿತು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು!

    ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು!

    ಚಿಕ್ಕಮಗಳೂರು: ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ತುಂಗಾ ನದಿಯಲ್ಲಿ ನಡೆದಿದೆ.

    ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಲಸೂರು ಪ್ರಿಯದರ್ಶಿನಿ ಪ್ರೌಢಶಾಲೆಯ 9ನೇ ತರಗತಿ ಓದುತ್ತಿದ್ದ ತರುಣ್ ಗೌಡ ಮೃತ ವಿದ್ಯಾರ್ಥಿ. ಶಾಲೆಯಿಂದ ಸುಮಾರು 60 ವಿದ್ಯಾರ್ಥಿಗಳು ಬಸ್ ಮಾಡಿಕೊಂಡು ಶೃಂಗೇರಿಗೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಮಕ್ಕಳು ಸ್ನಾನಕ್ಕೆ ಬಂದಾಗ ಶೌಚಗೃಹದವರು ಒಬ್ಬರಿಗೆ 20 ರೂಪಾಯಿ ಎಂದಿದ್ದಾರೆ.

    20 ರೂ. ಜಾಸ್ತಿಯಾಗುತ್ತದೆ ಎಂದು ತಿಳಿದು ಮಕ್ಕಳು ಸ್ನಾನ ಮಾಡಲು ತುಂಗಾ ನದಿಗೆ ಇಳಿದಿದ್ದಾರೆ. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.

    ಸ್ಥಳೀಯರು ಹಾಗೂ ಪೊಲೀಸರ ಸಹಕಾರದಿಂದ ಸುಮಾರು ಒಂದು ಗಂಟೆಯ ಬಳಿಕ ವಿದ್ಯಾರ್ಥಿಯ ಮೃತದೇಹವನ್ನ ನೀರಿನಿಂದ ಮೇಲೆತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಮಕ್ಕಳು ಪ್ರವಾಸಕ್ಕೆ ಖರ್ಚಿಗೆಂದು ಹೆಚ್ಚಿನ ಹಣ ತಂದಿರಲಿಲ್ಲ. ಒಬ್ಬರಿಗೆ 20 ರೂ. ಆಗುತ್ತದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ನದಿಯಲ್ಲೇ ಸ್ನಾನ ಮಾಡಲು ಇಳಿದಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಸ್ಸಾಂ ಮೂಲದ ಕಳ್ಳರ ಗ್ಯಾಂಗ್ ಪತ್ತೆ!

    ಅಸ್ಸಾಂ ಮೂಲದ ಕಳ್ಳರ ಗ್ಯಾಂಗ್ ಪತ್ತೆ!

    ಚಿಕ್ಕಮಗಳೂರು: ಅಸ್ಸಾಂ ಮೂಲದ ಕಳ್ಳರ ಗ್ಯಾಂಗ್‍ವೊಂದು ಮನೆಯ ಹೆಂಚು ತೆಗೆದು ಕಳ್ಳತನಕ್ಕೆ ಯತ್ನಿಸುವಾಗ ಸೆರೆಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ.

    ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಹೊಸಪೇಟೆ ಗ್ರಾಮದ ಜಾನ್ ಎಂಬವರ ಮನೆಯ ಹೆಂಚು ತೆಗೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಮನೆಯ ಒಳಗೆ ಶಬ್ಧ ಕೇಳಿ ಪರಿಶೀಲಿಸಿದಾಗ ಮಹಿಳೆಯೊಬ್ಬಳು ಸಿಕ್ಕಿಕೊಂಡಿದ್ದು, ಸ್ಥಳೀಯರು ಆಕೆಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆದರೆ ಮಾಹಿತಿ ತಿಳಿಯುತ್ತಿದ್ದಂತೆ ಆಕೆಯೊಂದಿಗೆ ಇದ್ದ ಇಬ್ಬರು ಪುರುಷರು ಎಸ್ಕೇಪ್ ಆಗಿದ್ದಾರೆ.

    ವಶಕ್ಕೆ ಪಡೆದ ಮಹಿಳೆ ಬಳಿ ಐದಾರು ಸಿಮ್ ಕಾರ್ಡ್, ಕ್ರೆಡಿಟ್ ಕಾರ್ಡ್, ಕತ್ತರಿ, ಪರ್ಸ್ ಪತ್ತೆಯಾಗಿದ್ದು, ಜೊತೆಗೆ ಮುಂಬೈ, ರಾಜಸ್ಥಾನ್, ಅಸ್ಸಾಂ, ರಾಜ್ಯದ ಬಿಲ್ ಗಳು ಪತ್ತೆಯಾಗಿವೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಎಚ್‍ಡಿಡಿ ಗ್ರೀನ್ ಸಿಗ್ನಲ್

    ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಎಚ್‍ಡಿಡಿ ಗ್ರೀನ್ ಸಿಗ್ನಲ್

    ಚಿಕ್ಕಮಗಳೂರು: ಕರ್ನಾಟಕದಲ್ಲಿ ಹೇಗೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆಯೋ ಅದೇ ರೀತಿಯಾಗಿ ಸ್ಥಳೀಯ ಸಂಸ್ಥೆಗಳಲ್ಲೂ ಹೊಂದಾಣಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

    ಕಡೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಮೈತ್ರಿ ಸರ್ಕಾರದ ಈ ಸನ್ನಿವೇಶದಲ್ಲಿ ಜಿಜೆಪಿ ಹೊರತಾಗಿ ಕಾಂಗ್ರೆಸ್- ಜೆಡಿಎಸ್ ಎಲ್ಲಾ ಕಡೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಾವು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದರು.

    ಹಾಸನದಲ್ಲಿ ಬಿಜೆಪಿ ಸ್ಥಾನಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕೆಲವೆಡೆ ಅತಂತ್ರ ಪರಿಸ್ಥಿತಿ ಹಿನ್ನೆಲೆ ಪೂರ್ಣ ಫಲಿತಾಂಶ ಪ್ರಕಟವಾದ ನಂತರ ಈ ಬಗ್ಗೆ ಮಾತನಾಡುತ್ತೇನೆ. ಜೆಡಿಎಸ್-ಕಾಂಗ್ರೆಸ್ ಒಟ್ಟಿಗೆ ಇರುತ್ತದೆ ಎಂದು ತಿಳಿಸಿದರು. ದೇವೇಗೌಡರು ಈಗಾಗಲೇ ಮೈತ್ರಿಗೆ ಒಪ್ಪಿಗೆ ನೀಡಿದ್ದು ಕಾಂಗ್ರೆಸ್ ಕಡೆಯಿಂದ ಈ ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕ್ಕಮಗಳೂರಿನ ಕೊಗ್ರೆ ಗ್ರಾಮಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಭೇಟಿ

    ಚಿಕ್ಕಮಗಳೂರಿನ ಕೊಗ್ರೆ ಗ್ರಾಮಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಭೇಟಿ

    ಚಿಕ್ಕಮಗಳೂರು: ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕೊಗ್ರೆ ಗ್ರಾಮಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದರು.

    ಕಳೆದ ಮೂರು ತಿಂಗಳಿಂದ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸುತ್ತಿದ್ದು, ಈ ಕುರಿತು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಹೀಗಾಗಿ ಬೆಂಗಳೂರು ಹಾಗೂ ಕುಣಿಗಲ್ ನಿಂದ ಅಧಿಕಾರಿಗಳ ತಂಡ ಭೇಟಿ ನೀಡಿದೆ.

    ಎರಡು ದಿನಗಳ ಹಿಂದೆ ಸಂಜೆ ವೇಳೆ ಭೂಮಿ ಕಂಪಿಸಿದ ಅನುಭವ ಆಗಿತ್ತು. ಪರಿಣಾಮ ಮನೆಯಲ್ಲಿದ್ದ ಪಾತ್ರೆ ಪಿಠೋಪಕರಣಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿತ್ತು. ಸೋಮವಾರ ಮಧ್ಯಾಹ್ನದ ವೇಳೆಯಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಲೆನಾಡು, ಕರಾವಳಿಯಲ್ಲಿ ಬಿರುಸುಗೊಂಡ ಮಳೆರಾಯ- ಎಲ್ಲಿ ಎಷ್ಟು ಮಿಮೀ ಮಳೆಯಾಗಿದೆ?

    ಮಲೆನಾಡು, ಕರಾವಳಿಯಲ್ಲಿ ಬಿರುಸುಗೊಂಡ ಮಳೆರಾಯ- ಎಲ್ಲಿ ಎಷ್ಟು ಮಿಮೀ ಮಳೆಯಾಗಿದೆ?

    ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಮಳೆ ಇನ್ನಷ್ಟು ಬಿರುಸುಗೊಂಡಿದ್ದು ಇವತ್ತೂ ಕೂಡ ಮಳೆರಾಯನ ಆರ್ಭಟ ಮುಂದುವರೆದಿದೆ.

    ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯಕ್ಕೆ ವಾಡಿಕೆಯಂತೆ ಆರು ಮೀಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 12 ಮಿಲಿ ಮೀಟರ್ ಮಳೆಯಾಗಿದ್ದು ಶೇ117 ರಷ್ಟು ಹೆಚ್ಚು ಮಳೆಯಾಗಿದೆ.

    ಇನ್ನೂ ನಾಲ್ಕು ದಿನಗಳ ಕಾಲ ಇದೇ ರೀತಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಮಾಹಿತಿ ನೀಡಿದೆ.

    ಇಂದು ಕೂಡಗಿನಲ್ಲಿ 136 ಮಿ.ಮೀ, ಚಿಕ್ಕಮಗಳೂರಿನಲ್ಲಿ 65 ಮೀ.ಮೀ ದಕ್ಷಿಣ ಕನ್ನಡದಲ್ಲಿ 100 ಮೀ.ಮೀ. ಶಿವಮೊಗ್ಗದಲ್ಲಿ 208 ಮಿ.ಮೀ ಹಾಸನ 38 ಮಿ.ಮೀ, ಉತ್ತರಕನ್ನಡ 50 ಮಿ.ಮೀ, ಮೈಸೂರು 17 ಮಿಮೀ ನಷ್ಟು ಮಳೆಯಾಗಿದೆ.

    ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಹಿನ್ನಲೆ ಕೆಆರ್‍ಎಸ್ ನ ಒಳ ಹರಿವು ಹೆಚ್ಚಳ ಕಂಡಿದ್ದು 17,883 ಕ್ಯೂಸೆಕ್ ನಷ್ಟಿದೆ ಹಾಗೂ ಹೊರ ಹರಿವು 342 ಕ್ಯೂಸೆಕ್ ನಷ್ಟಿದೆ. ಒಂದೇ ದಿನದಲ್ಲಿ ಮೂರು ಅಡಿ ನೀರು ಹೆಚ್ಚಳವಾಗಿದೆ. 124.80 ಅಡಿ ಗರಿಷ್ಟ ಮಟ್ಟವನ್ನು ಹೊಂದಿರುವ ಕೆಆರ್‍ಎಸ್ ನಲ್ಲಿ ಸೋಮವಾರ 79.50 ಅಡಿ ನೀರಿದ್ದರೆ ಮಂಗಳವಾರ 82.80 ಅಡಿಗೆ ಏರಿಕೆಯಾಗಿದೆ.