Tag: chikmagaluru

  • ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ- ಕಾರ್ ಮೇಲೆ ಬಿದ್ದ ಬೃಹತ್ ಮರ

    ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ- ಕಾರ್ ಮೇಲೆ ಬಿದ್ದ ಬೃಹತ್ ಮರ

    ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದ್ದು, ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರ ಬಿದ್ದಿ ಪರಿಣಾಮ ಕಾರ್ ಜಖಂ ಆಗಿದೆ.

    ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದ್ದು, ತರೀಕೆರೆಯಲ್ಲಿ ಕಾರಿನ ಮೇಲೆ ಬೃಹತ್ ಮರ ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನಿರಂತರ ಮಳೆಯಿಂದಾಗಿ ಹೆಚ್ಚಿದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಕೊರೊನಾ, ಲಾಕ್‍ಡೌನ್ ಮಧ್ಯೆ ಮಳೆಯೂ ಸುರಿಯುತ್ತಿದೆ ಎಂದು ಭಯಭೀತರಾಗಿದ್ದಾರೆ.

    ತರೀಕೆರೆ, ಮೂಡಿಗೆರೆ, ಕಡೂರು ತಾಲೂಕಿನ ಹಲವೆಡೆ ಮಳೆಯಾಗಿದೆ. ಮಳೆ ನೀರು ರಸ್ತೆ ಮೇಲೆ ತುಂಬಿ ಹರಿದಿದ್ದು, ವಾಹನ ಸವಾರರ ಪರದಾಡುವಂತಾಯಿತು. ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಎಫೆಕ್ಟ್ ಕುಡುಕರಿಗೂ ತಟ್ಟಿದ್ದು, ಎಷ್ಟೇ ಮಳೆ ಸುರಿದರೂ ಕ್ಯೂನಿಂದ ಮಾತ್ರ ಕದಲಿಲ್ಲ. ಎಣ್ಣೆಯನ್ನು ಪಡೆಯುವ ವರೆಗೂ ಮಳೆಯಲ್ಲೇ ನನೆದು ತಮ್ಮ ಸರತಿ ಬಂದ ನಂತರ ಎಣ್ಣೆ ಖರಿದಿಸಿ ಮರಳಿದ್ದಾರೆ.

  • ಕಾಫಿನಾಡಲ್ಲಿ ನಾಳೆಯಿಂದ ರಸ್ತೆಗಿಳಿಯಲಿವೆ KSRTC ಬಸ್

    ಕಾಫಿನಾಡಲ್ಲಿ ನಾಳೆಯಿಂದ ರಸ್ತೆಗಿಳಿಯಲಿವೆ KSRTC ಬಸ್

    ಚಿಕ್ಕಮಗಳೂರು: ಕಳೆದ 40 ದಿನಗಳಿಂದ ಸಂಪೂರ್ಣ ಬಂದ್ ಆಗಿದ್ದ ಸರ್ಕಾರಿ ಬಸ್ ಗಳು ನಾಳೆಯಿಂದ ರಸ್ತೆಗಿಳಿಯಲಿವೆ.

    ಚಿಕ್ಕಮಗಳೂರಿನಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಸ್ ಬಂತು ಎಂದು ಪ್ರಯಾಣಿಕರು ದಿಢೀರ್ ಅಂತ ಹತ್ತುವಂತಿಲ್ಲ. ತಮ್ಮ ಸಂಪೂರ್ಣ ವಿವರ ನೀಡಿ ನಂತರ ಪ್ರಯಾಣಿಸುವ ನಿಯಮ ಜಾರಿಗೆ ತರಲಾಗಿದೆ. ಹೀಗಾಗಿ ಬಸ್ ಹೊರಡುವ ಅರ್ಧ ಗಂಟೆ ಮುಂಚೆ ನಿಲ್ದಾಣಕ್ಕೆ ಬರಬೇಕಾಗಿದೆ.

    ಮಾಹಿತಿ ನೀಡುವ ವೇಳೆ ಪ್ರಯಾಣಿಕರ ಹೆಸರು, ವಿಳಾಸ, ಮೊಬೈಲ್ ನಂಬರ್ ಎಲ್ಲಿಂದ-ಎಲ್ಲಿಗೆ ಹೋಗಬೇಕು ಎಂಬೆಲ್ಲ ಮಾಹಿತಿ ನೀಡಬೇಕು. ಬರುವಾಗ ಐ.ಡಿ.ಕಾರ್ಡ್ ತರುವುದು ಕಡ್ಡಾಯ. ಅಷ್ಟೇ ಅಲ್ಲದೆ ಒಂದು ಬಸ್ಸಿನಲ್ಲಿ 27 ಜನರಿಗೆ ಮಾತ್ರ ಅವಕಾಶ. ಮೊದಲು ಒಂದು ಬಸ್ ನಲ್ಲಿ 50-60 ಜನ ಪ್ರಯಾಣ ಮಾಡಬಹುದಿತ್ತು. ಆದರೀಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ 27 ಜನರಿಗೆ ಸೀಮಿತಗೊಳಿಸಲಾಗಿದೆ.

    ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಮತ್ತು ಅಲ್ಲಿಂದ ಜಿಲ್ಲಾ ಕೇಂದ್ರಕ್ಕೆ ಬಸ್ ಗಳು ಓಡಾಡಲಿವೆ. ಈಗಾಗಲೇ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿ ಬಸ್ ನಿಲ್ದಾಣದ ತುಂಬೆಲ್ಲ ಗೆರೆ ಎಳೆದಿದ್ದಾರೆ. ಪ್ರಯಾಣಿಕರು ಆ ಬಾಕ್ಸ್ ಒಳಗೆ ನಿಂತು, ಮಾಹಿತಿ ನೀಡಿ ಬಸ್ ಹತ್ತಬೇಕು.

    ಕೆಎಸ್‍ಆರ್ ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ ವಿರೇಶ್ ಎಚ್.ಟಿ. ಬಸ್ ನಿಲ್ದಾಣದಲ್ಲಿ ಸಿಬ್ಬಂದಿ ಯಾವ ರೀತಿ ಬಂದೋಬಸ್ತ್ ಇರಬೇಕು, ಪ್ರಯಾಣಿಕರ ಸಂಚಾರ ಹೇಗಿರಬೇಕೆಂದು ಕೃತಕವಾಗಿ ತರಬೇತಿ ನೀಡಿದ್ದಾರೆ. ನಾಳೆಯಿಂದ ಜಿಲ್ಲಾದ್ಯಂತ ಶೇ.25 ರಷ್ಟು ಅಂದರೆ, 100-125 ಬಸ್ ಗಳು ಸಂಚಾರ ಆರಂಭಿಸಲಿವೆ. ಗ್ರಾಮೀಣ ಭಾಗಕ್ಕೆ ಹೋಗುವ ಪ್ರಯಾಣಿಕರಿಗೂ ಬಸ್ಸಿನ ಸೌಲಭ್ಯವಿದ್ದು, ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಬಸ್ ಗಳು ಓಡಾಡಲಿವೆ.

  • ರಾಜ್ಯದ ಹಲವೆಡೆ ಮಳೆಯ ಆರ್ಭಟ- ಗುಡುಗು ಸಹಿತ ಭಾರೀ ಮಳೆ

    ರಾಜ್ಯದ ಹಲವೆಡೆ ಮಳೆಯ ಆರ್ಭಟ- ಗುಡುಗು ಸಹಿತ ಭಾರೀ ಮಳೆ

    ಬೆಂಗಳೂರು: ಸೋಮವಾರ ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯಾಗುವ ಮೂಲಕ ಆತಂಕ ಸೃಷ್ಟಿಸಿತ್ತು. ಇದೀಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಸಂತಸಗೊಂಡಿದ್ದಾರೆ. ಆದರೆ ಹಾವೇರಿಯಲ್ಲಿ ಲಕ್ಷಾಂತರ ರೂ. ಬಾಳೆ ಬೆಳೆ ನಾಶವಾಗಿದೆ.

    ಹಾವೇರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ ವಿವಿಧೆಡೆ ಮಳೆಯಾಗಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಬಿರುಗಾಳಿ ಸಹಿತ ಮಳೆಗೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಭಾರೀ ಮಳೆಯಿಂದಾಗಿ ರೈತರಲ್ಲಿ ಮಂದಹಾಸ ಮೂಡಿದೆ.

    ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜಿಲ್ಲೆಯ ಶೃಂಗೇರಿ, ಕೊಪ್ಪ, ಕಳಸ, ಹೊರನಾಡು, ಮೂಡಿಗೆರೆ ಸೇರಿದಂತೆ ಹಲವೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ಭಾರೀ ಗಾಳಿ ಮಳೆಗೆ ತತ್ತರಿಸಿದ್ದು, ಗಾಳಿ, ಮಳೆಯಿಂದಾಗಿ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಮಳೆ ಸುರಿದಿದೆ.

    ಗಾಳಿ-ಮಳೆ ಹಲವೆಡೆ ಅವಾಂತರ ಸೃಷ್ಟಿಸಿದ್ದು, ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪದಲ್ಲಿ ಬಿರುಗಾಳಿ-ಮಳೆಗೆ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಇದರಿಂದಾಗಿ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬಿಕ್ಕರಣೆಕಟ್ಟೆಯಲ್ಲಿ ಬೃಹತ್ ಮರ ಕೊಟ್ಟಿಗೆಯ ಮೇಲೆ ಬಿದ್ದಿದ್ದು, ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಸಂಪೂರ್ಣ ಜಖಂ ಆಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸಹ ಭಾರೀ ಮಳೆಯಾಗಿದ್ದು, ಬೆಳ್ತಂಗಡಿ ತಾಲೂಕಿನ ಕೊಯ್ಯೂರು, ಧರ್ಮಸ್ಥಳ, ಉಜಿರೆ ಸುತ್ತಮುತ್ತ ಬಿರುಗಾಳಿ-ಮಳೆಗೆ ಹಲವು ಮರಗಳು, ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.

    ಹಾವೇರಿ ಜಿಲ್ಲೆಯಲ್ಲಿ ಸಹ ಭಾರೀ ಮಳೆಯಾಗಿದ್ದು, ಶಿಗ್ಗಾಂವಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಮಳೆ ಗಾಳಿಗೆ ಬಾಳೆ ಗಿಡಗಳು ನೆಲಕ್ಕುರುಳಿವೆ. ಆರು ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಧರೆಗುರುಳಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ.

  • 300 ಅಡಿ ಪ್ರಪಾತಕ್ಕೆ ಬೀಳಬೇಕಿದ್ದ ಕಾರು ಪಾರು

    300 ಅಡಿ ಪ್ರಪಾತಕ್ಕೆ ಬೀಳಬೇಕಿದ್ದ ಕಾರು ಪಾರು

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್​ಗೆ ಆಲ್ಟೋ ಕಾರು ಡಿಕ್ಕಿ ಹೊಡೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಈ ಅವಘಡ ಸಂಭವಿಸಿದೆ. ಕೇರಳ ಮೂಲದ ಆಲ್ಟೋ ಕಾರು ಮಂಗಳೂರು ಕಡೆಯಿಂದ ಚಿಕ್ಕಮಗಳೂರು ಬರುವಾಗ ಈ ದುರ್ಘಟನೆ ಸಂಭವಿಸಿದೆ.

    ಒಂದು ವೇಳೆ ಡಿವೈಡರ್ ಇರದಿದ್ರೆ ಕಾರು ಅಂದಾಜು 300 ಅಡಿ ಆಳದ ಪ್ರಪಾತಕ್ಕೆ ಬೀಳುತ್ತಿತ್ತು. ಕಾರಿನ ಚಾಲಕ ಬದುಕುಳಿಯುವ ಸಂಭವ ತೀರಾ ಕಡಿಮೆ ಇರುತ್ತಿತ್ತು. ಆದರೆ ರಸ್ತೆಯಲ್ಲಿ ಡಿವೈಡರ್ ಇದ್ದಿದ್ರಿಂದ ಚಾಲಕ ಪಾರಾಗಿದ್ದಾನೆ.

    ಕಾರು ಡಿವೈಡರ್​ಗೆ ಗುದ್ದಿದ ರಭಸಕ್ಕೆ ಡಿವೈಡರ್ ಸಂಪೂರ್ಣ ಕಳಚಿ ಬಿದ್ದಿದ್ದು, ಕಾರಿನ ಮುಂಭಾಗ ಕೂಡ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಆಲ್ಟೋ ಕಾರು ಅಪಘಾತವಾಗುವಾಗ ಎದುರಿನಿಂದಲೂ ಕೂಡ ಯಾವುದೇ ವಾಹನಗಳು ಬಂದಿಲ್ಲ. ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಹೆಡ್‍ಲೈಟ್ ಇಲ್ಲದೆ ಅಂಬುಲೆನ್ಸ್ 190 ಕಿ.ಮೀ ಪ್ರಯಾಣ – ಸಹಾಯಕ್ಕೆ ಯಾರೂ ಬರಲಿಲ್ಲ

    ಹೆಡ್‍ಲೈಟ್ ಇಲ್ಲದೆ ಅಂಬುಲೆನ್ಸ್ 190 ಕಿ.ಮೀ ಪ್ರಯಾಣ – ಸಹಾಯಕ್ಕೆ ಯಾರೂ ಬರಲಿಲ್ಲ

    ಚಿಕ್ಕಮಗಳೂರು: ಅಂಬುಲೆನ್ಸಿನ ಹೆಡ್‍ಲೈಟ್ ಹಾಳಾದರೂ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಪ್ರಾಣ ಉಳಿಸಲು ಚಾಲಕ 190 ಕಿ.ಮೀ ಸಂಚರಿಸಿ ಅವರನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ಕರೆದುಕೊಂಡು ಹೋಗಿದ್ದಾರೆ.

    ನಗರದ ಟಿಪ್ಪು ನಗರದಲ್ಲಿ ವೃದ್ಧರೊಬ್ಬರು ಮಂಗಳವಾರ ರಾತ್ರಿ ಅಪಘಾತದಲ್ಲಿ ತೀವ್ರ ಗಾಯಗೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಅವರನ್ನು ನಗರದ ಇಸ್ಲಾಮಿಕ್ ಬೈತುಲ್‍ಮಾಲ್‍ನ ಅಂಬುಲೆನ್ಸ್ ಚಾಲಕ ಜೀಷಾನ್ ಬೆಂಗಳೂರಿನ ನಿಮ್ಹಾನ್ಸ್‌ಗೆ ಕರೆದುಕೊಂಡು ಹೋಗುತ್ತಿದ್ದರು.

    ಹಾಸನದ ಮೊದಲ ಟೋಲ್ ದಾಟುತ್ತಿದ್ದಂತೆ ಅಂಬುಲೆನ್ಸಿನ ಹೆಡ್‍ಲೈಟ್‍ಗಳು ಕೆಟ್ಟು ಆನ್ ಆಗಲಿಲ್ಲ. ತಕ್ಷಣ ಜೀಷಾನ್ ಪೊಲೀಸ್ ತುರ್ತು ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಿದರು. ಅವರ ಸ್ನೇಹಿತರು ಹಾಗೂ ಅಪಘಾತಕ್ಕೊಳಗಾದ ವೃದ್ಧರ ಸಂಬಂಧಿಗಳಿಗೂ ಕರೆ ಮಾಡಿದರು. ಎಲ್ಲರ ಉತ್ತರವೂ ಬರುತ್ತೇವೆ ಎಂದೇ ಬಂದಿತ್ತು. ಆದರೆ ಯಾರ ನೆರವು ಸಿಗಲಿಲ್ಲ.

    ಈ ವೇಳೆ ಹಾಸನದಿಂದ ಬೆಂಗಳೂರಿನತ್ತ ಹೊರಟ ಮತ್ತೊಂದು ಅಂಬುಲೆನ್ಸ್ ಹಿಂದೆಯೇ ಚಲಿಸುತ್ತಾ ಲೈಟ್ ಇಲ್ಲದ ಅಂಬುಲೆನ್ಸ್ 190 ಕಿ.ಮೀ. ಸಾಗಿ ನಿಮ್ಹಾನ್ಸ್ ತಲುಪಿ ವೃದ್ಧರ ಜೀವ ಉಳಿಸಿದ್ದಾರೆ. ಹಾಸನದ ಚಾಲಕ ರೋಗಿಯನ್ನು ಬೆಂಗಳೂರಿಗೆ ಸಾಗಿಸುತ್ತಿದ್ದರು. ಈ ವೇಳೆ ಜೀಷಾನ್ ಮನವಿಗೆ ಸ್ಪಂದಿಸಿ ನಿಮ್ಹಾನ್ಸ್‌ವರೆಗೂ ಹೆಡ್‍ಲೈಟ್ ಇಲ್ಲದ ಅಂಬುಲೆನ್ಸ್ ಗೆ ದಾರಿಯಾಗಿ ಮಾನವೀಯತೆ ಮೆರೆದಿದ್ದಾರೆ.

  • ಜಾನಪದ ಹಾಡಿಗೆ ಸಚಿವ ಸಿ.ಟಿ ರವಿ ಭರ್ಜರಿ ಸ್ಟೆಪ್ಸ್

    ಜಾನಪದ ಹಾಡಿಗೆ ಸಚಿವ ಸಿ.ಟಿ ರವಿ ಭರ್ಜರಿ ಸ್ಟೆಪ್ಸ್

    ಚಿಕ್ಕಮಗಳೂರು: 21 ವರ್ಷಗಳ ಬಳಿಕ ಕಾಫಿನಾಡಲ್ಲಿ ನಡೆಯುತ್ತಿರುವ ಜಿಲ್ಲಾ ಉತ್ಸವದಲ್ಲಿ ಸಚಿವ ಸಿ.ಟಿ ರವಿ ಮನಸ್ಸೋ ಇಚ್ಛೆ ಭರ್ಜರಿ ಕುಣಿದು ಕುಪ್ಪಳಿಸಿದ್ದಾರೆ.

    ಶುಕ್ರವಾರ ಸಂಜೆ 6.30ಕ್ಕೆ ಆರಂಭವಾದ ಕಾರ್ಯಕ್ರಮ 10.30ರ ವೇಳೆಗೆ ಮುಗಿಯುತ್ತಿದ್ದಂತೆ ಕೊನೆಗೆ ಸಚಿವರು ಮಕ್ಕಳು ಹಾಗೂ ಸ್ಥಳಿಯರ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಡೊಳ್ಳಿನ ಒಂದೊಂದು ಹೊಡೆತಕ್ಕೂ ಒಂದೊಂದು ಸ್ಟೆಪ್ ಹಾಕ್ತಾ ಡೊಳ್ಳಿನ ಸದ್ದು ಜೋರಾಗ್ತಿದ್ದಂತೆ ಸಿ.ಟಿ ರವಿಯ ಕುಣಿತವೂ ಜೋರಾಗಿದೆ.

    ಸಿ.ಟಿ.ರವಿ ಸಾಕಷ್ಟು ಜಾಗದಲ್ಲಿ ಹಲವು ಬಾರಿ ಕುಣಿದಿದ್ದಾರೆ. ಆದರೆ ಡೊಳ್ಳಿನ ಒಂದೊಂದು ಶಬ್ಧಕ್ಕೂ ಒಂದೊಂದು ಸ್ಟೆಪ್ ಹಾಕಿ ಮನಸ್ಸೋ ಇಚ್ಛೆ ಕುಣಿದಿದ್ದು ಇದೇ ಮೊದಲು ಎಂದು ಅನಿಸುತ್ತೆ. ಸಾವಿರಾರು ಜನರ ಎದುರೇ ಸಿ.ಟಿ ರವಿ ಎದ್ದು ಕುಣಿದು ಕುಪ್ಪಳಿಸಿದ್ದಾರೆ.

    ಸಚಿವರ ಕುಣಿತ ನೋಡ್ತಿದ್ದಂತೆ ಸುಮ್ಮನೆ ಕೂರಲಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಕೂಡ ಸಚಿವರಿಗೆ ಸಾಥ್ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಕಲ್ಮುರುಡಪ್ಪ ಸೇರಿದಂತೆ ಸ್ಥಳಿಯರು ಹಾಗೂ ಬಿಜೆಪಿ ಕಾರ್ಯಕರ್ತರು ಸಚಿವ ಸಿ.ಟಿ ರವಿಯೊಂದಿಗೆ ಕುಣಿದಿದ್ದಾರೆ.

  • ಬಿಸಿಲ ಬೇಗೆಯ ಮಧ್ಯೆ ವರುಣ ಸಿಂಚನ- ರಾಜ್ಯದ ಹಲವೆಡೆ ಇಂದು ಮಳೆ

    ಬಿಸಿಲ ಬೇಗೆಯ ಮಧ್ಯೆ ವರುಣ ಸಿಂಚನ- ರಾಜ್ಯದ ಹಲವೆಡೆ ಇಂದು ಮಳೆ

    – ವರ್ಷದ ಮೊದಲ ಮಳೆ ಕಂಡು ಮಲೆನಾಡಿಗರಲ್ಲಿ ಸಂತಸ
    – ನಾಳೆಯೂ ಮಳೆ ಸಾಧ್ಯತೆ

    ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಆಗಿದ್ದು, ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನರು ವರುಣನ ಸಿಂಚನದಿಂದ ಸಂತಸಗೊಂಡಿದ್ದಾರೆ.

    ಮಳೆನಾಡು ಎಂದೇ ಖ್ಯಾತಿಯಾಗಿರೋ ಕಾಫಿನಾಡಲ್ಲಿ ವರ್ಷದ ಮೊದಲ ಮಳೆ ಸುರಿದಿದ್ದು ಮಲೆನಾಡಿಗರು ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ಶೃಂಗೇರಿ ತಾಲೂಕಿನ ಸುತ್ತಮುತ್ತ ಸುಮಾರು ಅರ್ಧಗಂಟೆಗಳ ಕಾಲ ಸಾಧಾರಣ ಮಳೆಯಾಗಿದ್ದು, ಮಲೆನಾಡಿಗರು ವರ್ಷದ ಮೊದಲ ಮಳೆ ಕಂಡು ಪುಳಕಿತರಾಗಿದ್ದಾರೆ. ಕಳೆದ ವರ್ಷ ಮಲೆನಾಡೇ ಅಲ್ಲೋಲ-ಕಲ್ಲೋಲವಾಗುವಂತಹಾ ಮಳೆ ಸುರಿದಿದ್ರೆ ಈ ವರ್ಷದ ಮಲೆನಾಡ ಉರಿ ಬಿಸಿಲಿಗೆ ಜನ ಹೈರಾಣಾಗಿದರು. ಕಾದ ಕಾವಲಿಯಂತಾಗಿದ್ದ ಮಲೆನಾಡಲ್ಲಿ ವರುಣದೇವನ ಆಗಮನ ಜನರಲ್ಲಿ ಸಂತಸ ತಂದಿದೆ.

    ಜಿಲ್ಲೆಯ ಇತರೆ ಮಲೆನಾಡು ಭಾಗದಲ್ಲೂ ಮೋಡ ಕವಿದ ವಾತಾವರಣವಿದ್ದು, ಉಳಿದ ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಆದರೆ ಮಳೆ ಕಂಡು ಕೆಲವರು ಸಂತಸ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವರಲ್ಲಿ ಆತಂಕ ಕೂಡ ಮನೆ ಮಾಡಿದೆ. ಏಕೆಂದರೆ 2018 ಹಾಗೂ 2019ರ ಮಳೆ ನೆನೆದು ವರುಣದೇವ ಈ ವರ್ಷ ಮತ್ತಿನ್ನೇನು ಅವಾಂತರ ಸೃಷ್ಟಿಸುತ್ತಾನೋ ಎಂದು ಆತಂಕಕ್ಕೀಡಾಗಿದ್ದಾರೆ. ಕಳೆದ ವರ್ಷದ ಮಳೆಯಿಂದ ನಿರ್ಗತಿಕರಾದವರಿಗೆ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಹೀಗಿರುವಾಗ ಈಗ ಮತ್ತೆ ಮಳೆ ಆರಂಭವಾಗಿದ್ದು, ಈ ವರ್ಷದ ಮಳೆರಾಯ ಹೇಗಿರ್ತಾನೋ ಎನ್ನುವ ಆತಂಕವನ್ನು ಮಲೆನಾಡಿಗರು ಆತಂಕ ವ್ಯಕ್ತಪಡಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಕೆಲ ಗಂಟೆಗಳಿಂದ ಎಡಬಿಡದೇ ಮಳೆ ಸುರಿದಿದ್ದು, ಇಳೆಗೆ ವರುಣ ತಂಪೆರೆದಿದ್ದಾನೆ. ಇನ್ನೂ ಮಳೆ ಸುರಿದಿದ್ದರಿಂದ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಇದೆ.

    ರಾಜ್ಯದ ಹಲವೆಡೆ ಇಂದು ಹಾಗೂ ನಾಳೆ ಸಾಧಾರಣ ಮಳೆ ಆಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ಪಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಸೇರಿದಂತೆ ಕೆಲವು ಭಾಗಗಳಿಲ್ಲಿ ಮಳೆ ಆಗಲಿದೆ ಎಂದು ತಿಳಿಸಿದೆ.

  • ಕೆಸರು ಗದ್ದೆಯಲ್ಲಿ ಎರಡು ಬಾರಿ ಬಿದ್ದರೂ ಎದ್ದು ಓಡಿದ ಸಿ.ಟಿ ರವಿ

    ಕೆಸರು ಗದ್ದೆಯಲ್ಲಿ ಎರಡು ಬಾರಿ ಬಿದ್ದರೂ ಎದ್ದು ಓಡಿದ ಸಿ.ಟಿ ರವಿ

    – ಹಗ್ಗಜಗ್ಗಾಟ ಕ್ರೀಡೆಯಲ್ಲಿ ಕಿತ್ತುಕೊಂಡ ಬಂದ ಹೆಬ್ಬರಳಿನ ಉಗುರು

    ಚಿಕ್ಕಮಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಕೆಸರು ಗದ್ದೆಯಲ್ಲಿ ಎರಡು ಬಾರಿ ಜಾರಿ ಬಿದ್ದು ಮತ್ತೆ ಎದ್ದು ಓಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಚಿಕ್ಕಮಗಳೂರಿನ ನಲ್ಲೂರಿನಲ್ಲಿ ಮೂರು ದಿನಗಳ ಕಾಲ ಉತ್ಸವದ ಅಂಗವಾಗಿ ಗ್ರಾಮೀಣ ಕ್ರೀಡೆ ಆಯೋಜನೆಗೊಂಡಿದೆ. ಇಂದು ಈ ಕ್ರೀಡೆಗೆ ಸಚಿವ ಸಿ.ಟಿ ರವಿ ಚಾಲನೆ ನೀಡಿದರು. ಸುಮಾರು ಅರ್ಧ ಅಡಿ ಆಳ ಇರುವಷ್ಟು ಕೆಸರು ಗದ್ದೆಯಲ್ಲಿ ಸಿ.ಟಿ ರವಿ ಓಡಿದ್ದಾರೆ.

    ಸಿ.ಟಿ ರವಿ ಓಡುವಾಗ ಹಿಂದೆ ಮುಂದೆ ಇದ್ದ ಸ್ಪರ್ಧಿಗಳು ಕೂಗಿ ಕೇಕೆ ಹಾಕಿದರು. ಓಡುವಾಗ ಸಿ.ಟಿ ರವಿ ಜಾರಿ ಬಿದ್ದಿದ್ದಾರೆ. ಜಾರಿ ಬಿದ್ದ ನಂತರ ಅವರು ಅಲ್ಲಿಂದ ಹೋಗದೇ ಮತ್ತೆ ಓಡಿದ್ದಾರೆ. ಸಿ.ಟಿ ರವಿ ಮತ್ತೊಮ್ಮೆ ಓಡುವಾಗ ಎರಡನೇ ಬಾರಿಯೂ ಜಾರಿ ಬಿದ್ದಿದ್ದಾರೆ. ಆದರು ಸಹ ಹಿಂತಿರುಗದೇ ಮತ್ತೆ ಓಡಿದ್ದಾರೆ.

    ಎರಡು ಬಾರಿ ಬಿದ್ದರೂ ಸಿ.ಟಿ ರವಿ ನಗುತ್ತಾ ತಮ್ಮ ಓಟವನ್ನು ಪೂರ್ಣಗೊಳಿಸಿದ್ದಾರೆ. ಫೆ.29 ಹಾಗೂ ಮಾರ್ಚ್ 1ರಂದು ಚಿಕ್ಕಮಗಳೂರು ಹಬ್ಬ ನಡೆಯಲಿದೆ. ಇಂದಿನಿಂದ ವಿವಿಧ ಗ್ರಾಮೀಣ ಕ್ರೀಡಾಕೂಟ ಆರಂಭವಾಗಿದೆ. ಕೇವಲ ಓಟ ಅಲ್ಲದೆ ಸಿ.ಟಿ ರವಿ ಹಗ್ಗಜಗ್ಗಾಟ ಸೇರಿದಂತೆ ಬೇರೆ ಬೇರೆ ಕ್ರೀಡೆಗಳಲ್ಲಿ ಭಾಗವಹಿಸಿದರು.

    ಕೆಸರುಗದ್ದೆಯ ಹಗ್ಗಜಗ್ಗಾಟ ಕ್ರೀಡೆಯಲ್ಲಿ ಭಾಗವಹಿಸಿದ ವೇಳೆ ಸಿ.ಟಿ ರವಿ ಕಾಲಿನ ಹೆಬ್ಬರಳಿನ ಉಗುರು ಕಿತ್ತುಕೊಂಡಿದೆ. ಹೆಬ್ಬರಳಿನ ಉಗುರು ಬಂದರು ಅರಿವಿಲ್ಲದೆ ಸಿ.ಟಿ ರವಿ ಆಟದಲ್ಲಿ ಮೈ ಮರೆತ್ತಿದ್ದರು. ಬಳಿಕ ಕೆಸರು ಗದ್ದೆಯಿಂದ ಮೇಲೆ ಬಂದು ಕಾಲು ತೊಳೆಯುವಾಗ ಅರಿವಿಗೆ ಬಂದಿದೆ.

  • ನಟಿ ರಚಿತಾ ರಾಮ್ ಶೃಂಗೇರಿಗೆ ಭೇಟಿ

    ನಟಿ ರಚಿತಾ ರಾಮ್ ಶೃಂಗೇರಿಗೆ ಭೇಟಿ

    ಚಿಕ್ಕಮಗಳೂರು: ಡಿಂಪಲ್ ಬೆಡಗಿ ರಚಿತಾ ರಾಮ್ ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ.

    ದೇವಸ್ಥಾನಕ್ಕೆ ಬಂದು ಶಾರದಾಂಬೆ ಹಾಗೂ ತೋರಣ ಗಣಪತಿ ದರ್ಶನ ಪಡೆದು ಹೊರನಾಡಿಗೆ ಹೋಗಬೇಕು ಎಂದು ಹಿಂದಿರುಗಿದ್ದಾರೆ.

    ರಚಿತಾ ಅವರನ್ನು ನೋಡಿದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಎಲ್ಲರಿಗೂ ಸೆಲ್ಫಿಗೆ ಪೋಸ್ ಕೊಟ್ಟ ರಚಿತಾ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಅಲ್ಲದೆ “ಪರ್ಸನಲ್ ಆಗಿ ಬಂದಿದ್ದೇನೆ. ಸಾರಿ. ಹೊರನಾಡಿಗೆ ಹೋಗಬೇಕು ತಡವಾಗುತ್ತದೆ” ಎಂದು ಹೇಳಿ ಹೋಗಿದ್ದಾರೆ.

    ಕಳೆದ ಐದು ದಿನಗಳಿಂದ ಶೃಂಗೇರಿ ಶಾರದಾಂಭೆ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಸಹಸ್ರ ಚಂಡಿಕಾ ಯಾಗ ಮಾಡಿಸುತ್ತಿದ್ದಾರೆ. ಇಂದು ಯಾಗದ ಪೂರ್ಣಾಹುತಿ ಹಿನ್ನೆಲೆಯಲ್ಲಿ ಇಂದು ದೇವೇಗೌಡರ ಇಡೀ ಕುಟುಂಬವೇ ಶೃಂಗೇರಿಯಲ್ಲಿದೆ.

    ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ, ಅನಿತಾ ಕುಮಾರಸ್ವಾಮಿ, ಹೆಚ್.ಡಿ ಬಾಲಕೃಷ್ಣ ಸೇರಿದಂತೆ ದೊಡ್ಡಗೌಡರ ಇಡೀ ಕುಟುಂಬ ಶೃಂಗೇರಿಯಲ್ಲಿದೆ.

  • ಐದು ದಿನಗಳ ಕಾಲ ಶೃಂಗೇರಿಯಲ್ಲಿ ದೊಡ್ಡ ಗೌಡರ ಯಾಗ

    ಐದು ದಿನಗಳ ಕಾಲ ಶೃಂಗೇರಿಯಲ್ಲಿ ದೊಡ್ಡ ಗೌಡರ ಯಾಗ

    ಚಿಕ್ಕಮಗಳೂರು: ರಾಜಕೀಯವಾಗಿ ಒಂದಲ್ಲ ಒಂದು ರೀತಿ ಹಿನ್ನೆಡೆ ಕಾಣುತ್ತಿರುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹೊಸ ವರ್ಷದ ಆರಂಭದಲ್ಲಿ ಶಕ್ತಿ ದೇವತೆ ಶೃಂಗೇರಿಯ ಶಾರದಾಂಬೆಯ ಮೊರೆ ಹೋಗಿದ್ದಾರೆ. ಪತ್ನಿ ಜೊತೆ ಶೃಂಗೇರಿಗೆ ಆಗಮಿಸಿರುವ ದೊಡ್ಡಗೌಡರು ಮಂಗಳವಾರದವರೆಗೂ ಶಾರದಾಂಬೆ ಸನ್ನಿಧಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮಂಗಳವಾರ ಯಾಗದ ಪೂರ್ಣಾಹುತಿ ನಡೆಯಲಿದ್ದು, ಅಂದು ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಇಡೀ ಕುಟುಂಬ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

    ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ದೊಡ್ಡ ಗೌಡರು ಶಾರದಾಂಬೆ ಮೊರೆ ಹೋಗುವುದು ಮಾಮೂಲಿ. ಇದೀಗ 5 ದಿನಗಳ ಕಾಲ ಶಾರದೆ ಸನ್ನಿಧಿಯಲ್ಲಿ ಗೌಡರು ಯಾಗ ಕೈಗೊಂಡಿರುವುದು ಭವಿಷ್ಯದಲ್ಲಿ ಮಹತ್ವದ ನಿರ್ಧಾರದ ಮುನ್ಸೂಚನೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ. ಸಂಕ್ರಾಂತಿಯ ಮರುದಿನವೇ ಶೃಂಗೇರಿಗೆ ಆಗಮಿಸಿದ ಗೌಡರು, ಭಾರತಿ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಐದು ದಿನಗಳ ಕಾಲ ವಿಶೇಷ ಪೂಜೆ-ಹೋಮ-ಹವನದ ಬಳಿಕ ಹಿಂದಿರುಗಲಿದ್ದಾರೆ. ವಿಶೇಷ ಪೂಜೆ ಹಾಗೂ ಯಾಗಗಳನ್ನು ನಡೆಸುವ ದೇವೇಗೌಡರು, ಶಾರದಾಂಬೆಯಲ್ಲಿ ಏನನ್ನು ಬೇಡಿಕೊಳ್ಳುತ್ತಾರೆ, ಯಾವುದರ ಸಂಕಲ್ಪ ಮಾಡಲಿದ್ದಾರೆ ಎನ್ನುವುದು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.

    2018ರಲ್ಲಿ ಮೈತ್ರಿ ಸರ್ಕಾರ ರಚನೆಯಾಗುವ ಮೊದಲು ದೇವೇಗೌಡರ ಕುಟುಂಬ ಶಾರದಾಂಬೆ ಸನ್ನಿಧಿಯಲ್ಲಿ 11 ದಿನಗಳ ಕಾಲ ನಡೆದ ಅತಿರುದ್ರ ಮಹಾಯಾಗ ನಡೆಸಿದರು. 2018ರ ಜನವರಿ 4 ರಿಂದ 15ರವರೆಗೆ ಈ ಯಾಗ ನಡೆದಿತ್ತು. ಇದಾದ ಕೆಲವೇ ತಿಂಗಳಲ್ಲಿ ಕುಮಾರಸ್ವಾಮಿ 2ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಬಳಿಕ ಕುಮಾರಸ್ವಾಮಿ ಪ್ರಮಾಣ ವಚನಕ್ಕೂ ಮೊದಲು ನಿಯೋಜಿತ ಸಿಎಂ ಆಗಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಸಿಎಂ ಆದ ಬಳಿಕವೂ ಕುಮಾರಸ್ವಾಮಿ ಹಾಗೂ ದೇವೇಗೌಡರು ನಾಲ್ಕೈದು ಬಾರಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ್ದರು. ಸಮ್ಮಿಶ್ರ ಸರ್ಕಾರ ಬೀಳುವ ಸಂದರ್ಭದಲ್ಲಿ ರಾಜಕೀಯದ ಹಗ್ಗಜಗ್ಗಾಟದಲ್ಲೂ ದೇವೇಗೌಡರ ಕುಟುಂಬ ಸರ್ಕಾರ ಉಳಿಸಲು ಇದೇ ಶಾರದಾಂಬೆ ಮೊರೆ ಹೋಗಿದ್ದರು.


    ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದ ಉಪ ಚುನಾವಣೆಯಲ್ಲೂ ಜೆಡಿಎಸ್ ಸೋತು ಪಕ್ಷಕ್ಕೆ ತೀವ್ರ ಹಿನ್ನೆಡೆಯಾಗಿದೆ. ಹಾಗಾಗಿ ದೊಡ್ಡಗೌಡ್ರು ಮತ್ತೊಮ್ಮೆ ಪಕ್ಷ ಸಂಘಟನೆಗೆ ಪಣ ತೊಟ್ಟಿದ್ದಾರೆ. ಈ ಹಿನ್ನೆಲೆ ಜೆಡಿಎಸ್ ಬಲವರ್ಧನೆಗೆ ಪಣ ತೊಟ್ಟ ಗೌಡರು ಶಕ್ತಿ ಕೊಡು ತಾಯಿ ಎಂದು ಮತ್ತೊಮ್ಮೆ ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ-ಹೋಮ-ಹವನ ಸೇರಿದಂತೆ ಯಾಗಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ.