Tag: Chikmagalur

  • “ಅಮ್ಮನ ಅಂತ್ಯಸಂಸ್ಕಾರಕ್ಕೆ ಹೋಗಲಾಗಲಿಲ್ಲ, ಕೊರೊನಾದಿಂದ ದೂರವಿರಿ”

    “ಅಮ್ಮನ ಅಂತ್ಯಸಂಸ್ಕಾರಕ್ಕೆ ಹೋಗಲಾಗಲಿಲ್ಲ, ಕೊರೊನಾದಿಂದ ದೂರವಿರಿ”

    – ಕೊರೊನಾಗೆ ಬಲಿಯಾದ ಮಹಿಳೆಯ ಮಗನ ಮನವಿ
    – ನನ್ನ ಸ್ಥಿತಿ ಬೇರೆಯವರಿಗೆ ಬರೋದು ಬೇಡ

    ಚಿಕ್ಕಮಗಳೂರು: ನನಗಂತೂ ಅಮ್ಮನ ಶವ ಸಂಸ್ಕಾರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಕೊರೊನಾದಿಂದ ದೂರವಿರಿ, ನನ್ನ ಸ್ಥಿತಿ ಬೇರೆಯವರಿಗೆ ಬರೋದು ಬೇಡ ಎಂದು ಕೊರೊನಾದಿಂದ ತಾಯಿಯನ್ನು ಕಳೆದುಕೊಂಡ ನಾಗರಾಜ್ ಭಾವನಾತ್ಮಕ ವಿಡಿಯೋವನ್ನು ಹರಿ ಬಿಟ್ಟಿದ್ದಾರೆ.

    ವಿಡಿಯೋದಲ್ಲಿ ಮಾಡಿರುವ ಅವರು, ನಾನು ಜಿಲ್ಲೆಯ ಅಜ್ಜಂಪುರ ತಾಲೂಕಿನ ಡಣಾಯಕನಪುರ ಗ್ರಾಮದವ, ಇತ್ತೀಚೆಗೆ ನನ್ನ ತಾಯಿಗೆ ಅನಾರೋಗ್ಯ ಕಾರಣ ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆ. ಆಗ ವೈದ್ಯರು ನಿಮ್ಮ ತಾಯಿಗೆ ಕೊರೊನಾ ಪರೀಕ್ಷೆ ಮಾಡಿಸಿ, ಅವರಿಗೆ ಉಸಿರಾಟದ ತೊಂದರೆ ಇದೆ ಎಂದು ಹೇಳಿದರು. ಅಮ್ಮ 6 ತಿಂಗಳಿಂದ ಅಕ್ಕನ ಮನೆಯಲ್ಲಿದ್ದರು. ಅಲ್ಲಿ ಯಾವುದೇ ಪ್ರಕರಣಗಳಿಲ್ಲ ಎಂದು ವೈದ್ಯರಿಗೆ ತಿಳಿಸಿದೆ. ಆದರೂ ಅವರು ಟೆಸ್ಟ್ ಮಾಡಿಸಿ ಎಂದರು. ನಂತರ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿಗೆ ಕೊರೊನಾ ಪರೀಕ್ಷೆ ಮಾಡಿಸಿದೆ. ಈ ವೇಳೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಯಿತು. ಈ ವೇಳೆ ತುಂಬಾ ಆಘಾತವಾಯಿತು. ಅಜ್ಜಂಪುರದ ಆಸ್ಪತ್ರೆಯಲ್ಲಿ ಮೂರು ದಿನ ಸೇವೆ ಮಾಡಿದ್ದೆ. ಆದರೆ ಕೊರೊನಾ ಸೋಂಕಿನ ಕಾರಣ ಚಿಕ್ಕಮಗಳೂರು ಆಸ್ಪತ್ರೆಯ ಒಳಗೆ ನನ್ನನ್ನು ಬಿಡಲಿಲ್ಲ. ಆಗ ಅಮ್ಮನಿಂದ ದೂರವಾದೆ ಎಂದು ವಿವರಿಸಿದ್ದಾರೆ.

    ಅಮ್ಮ ನನ್ನನ್ನು ಬಿಟ್ಟು ಅರೆ ಕ್ಷಣವೂ ಇರುತ್ತಿರಲಿಲ್ಲ. ಆಸ್ಪತ್ರೆಯಲ್ಲಿಯೂ ರಾಜ, ರಾಜ ಎಂದು ಕನವರಿಸಿದ್ದಾರೆ. ಅಲ್ಲಿನ ನರ್ಸ್‍ಗಳಿಗೆ ಮಗ, ಮಗಳು ಬೇಕು ಎಂದು ಕೇಳಿದ್ದಾರೆ. ಆದರೆ ನಾವು ಅಲ್ಲಿಗೆ ಹೋಗುವ ಪರಿಸ್ಥಿತಿಯಲ್ಲಿ ಇರಲಿಲ್ಲ. ನಂತರ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು. 72 ವರ್ಷದ ನಮ್ಮಮ್ಮನಿಗೆ ಯೂರಿನ್ ಇನ್ಫೆಕ್ಷನ್, ಹೊಟ್ಟೆ ನೋವು, ಕಫದ ಸಮಸ್ಯೆ ಇತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಅಮ್ಮನ ಜೊತೆ ನಾನು ಇದ್ದಿದ್ದಕ್ಕೆ ಹೋಮ್ ಕ್ವಾರಂಟೈನ್‍ನಲ್ಲಿದ್ದೆ. ನಂತರ ಅಮ್ಮನನ್ನು ನೋಡಲು ಆಸ್ಪತ್ರೆಗೆ ಹೋದೆ, ಅಮ್ಮನನ್ನು ನೋಡಿದೆ. ಆದರೆ ಶವಸಂಸ್ಕಾರಕ್ಕೆ ಹೋಗಲು ಬಿಡಲಿಲ್ಲ. ಈಗ ನನ್ನನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ದಯವಿಟ್ಟು ಯಾರೂ ಕೊರೊನಾ ಕುರಿತು ನಿರ್ಲಕ್ಷ್ಯ ಮಾಡಬೇಡಿ. ಎಲ್ಲರೂ ಮಾಸ್ಕ್ ಧರಿಸಿ, ಅಪರಿಚಿತರನ್ನು ದೂರ ನಿಂತು ಮಾತನಾಡಿಸಿ. ಅಮ್ಮನಿಗೆ ಯಾವ ರೀತಿ ಕೊರೊನಾ ಬಂದಿತು ಗೊತ್ತಿಲ್ಲ. ಆದರೆ ಈಗ ನಮ್ಮ ಅಮ್ಮನನ್ನು ಕಳೆದುಕೊಂಡಿದ್ದೇನೆ. ಶವ ಸಂಸ್ಕಾರಕ್ಕೂ ಹೋಗಲು ಆಗಿಲ್ಲ, ದಯಮಾಡಿ ನಿಮ್ಮ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ. ಅಮ್ಮನ ಶವ ಸಂಸ್ಕಾರಕ್ಕೆ ಹೋಗುವ ಯೋಗ ನನಗೆ ಸಿಗಲಿಲ್ಲ. ನೀವೆಲ್ಲರೂ ಕೊರೊನಾದಿಂದ ದೂರ ಇರಬೇಕೆಂದು ಮನವಿ ಮಾಡಿದ್ದಾರೆ.

    ಗುರುವಾರ ವೃದ್ಧೆ ಸಾವು

    ಗುರುವಾರ ನಗರದ ಕೋವಿಡ್ ಆಸ್ವತ್ರೆಯಲ್ಲಿ 72 ವರ್ಷದ ವೃದ್ಧೆ ಸಾವನ್ನಪ್ಪಿದ ಪ್ರಕರಣ ಸಂಬಂಧ ವೃದ್ಧೆಯ 52 ವರ್ಷದ ಮಗನಿಗೂ ಕೊರೊನಾ ಪಾಸಿಟಿವ್ ದೃಢ ಪಟ್ಟಿದೆ. ಈಗ ವೃದ್ಧೆಯ ಟ್ರಾವೆಲ್ ಹಿಸ್ಟರಿ ಜಿಲ್ಲೆಯಲ್ಲಿ ಆತಂಕ ಹುಟ್ಟಿಸುತ್ತಿದ್ದು, ಬೀರೂರು, ಅಜ್ಜಂಪುರ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಮೃತರಿಗೆ ಕೊರೊನಾ ಸೋಂಕು ತಗುಲಿತ್ತು ಎಂದು ಹೇಳಲಾಗುತ್ತಿದೆ.

    ಚನ್ನಗಿರಿಯ ಕುಂಬಾರ ಬೀದಿಯಲ್ಲಿ ಮೃತ ವೃದ್ಧೆಯ ಮಗಳ ಮನೆಯಿದ್ದು, ವೃದ್ಧೆ ಮಗಳ ಮನೆಗೆ ತೆರಳಿದ್ದರು. ಅವರ ಎದುರು ಮನೆಯ 52 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿ ಶಿವಮೊಗ್ಗದಲ್ಲಿ ಮೃತರಾಗಿದ್ದರು. ವೃದ್ಧೆಯಿಂದ ಕುಂಬಾರು ಬೀದಿಯನ್ನು ಸೀಲ್‍ಡೌನ್ ಮಾಡಲಾಗಿತ್ತು. ಚನ್ನಗಿರಿಯಲ್ಲಿ ವೃದ್ಧೆಗೆ ಆರೋಗ್ಯ ಸಮಸ್ಯೆ ಕಾಡಿದ್ದು ಚನ್ನಗಿರಿಯ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲಿ ಹುಷಾರಾಗದ ಕಾರಣ ಬೀರೂರಿಗೆ ಬಂದು ಸೋಮವಾರ ಪರಿಚಯವಿದ್ದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

    ನಂತರದಲ್ಲಿ ಮಂಗಳವಾರ ಅಜ್ಜಂಪುರದ ಖಾಸಗಿ ಹಾಗೂ ಸರ್ಕಾರಿ ಆಸ್ವತ್ರೆಯಲ್ಲಿ ವೃದ್ಧೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಮಂಗಳವಾರ ಶಿವಮೊಗ್ಗದಲ್ಲಿ ಮಗಳ ಮನೆಯ ಎದುರಿನ ಮಹಿಳೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ವೃದ್ಧೆಯನ್ನು ತರೀಕೆರೆಗೆ ಕಳುಹಿಸಿ ಗಂಟಲು ದ್ರವವನ್ನು ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಬುಧವಾರ ಸಂಜೆ ಸುಮಾರಿಗೆ ಚಿಕ್ಕಮಗಳೂರು ಕೊವೀಡ್ ಆಸ್ವತ್ರೆಗೆ ವೃದ್ಧೆಯನ್ನು ದಾಖಲು ಮಾಡಲಾಯಿತು. ಗುರುವಾರ ಸಂಜೆ ವೇಳೆಗೆ ಮೃತ ವೃದ್ಧೆಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ.

    ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಮೃತರಾಗಿದ್ದಾರೆ. ಅಜ್ಜಂಪುರ, ಬೀರೂರಿನ ಖಾಸಗಿ ಆಸ್ವತ್ರೆ ಮಾತ್ರವಲ್ಲದೇ ಸರ್ಕಾರಿ ಆಸ್ವತ್ರೆಯಲ್ಲಿಯೂ ಚಿಕಿತ್ಸೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಮೃತ ವೃದ್ಧೆಗೆ ಒಟ್ಟು ಆರು ವೈದ್ಯರು ಹಾಗೂ ದಾದಿಯರು ಚಿಕಿತ್ಸೆ ನೀಡಿದ್ದರು. ಇವರಿಗೆ ಕೊರೊನಾ ಕಂಟಕ ಎದುರಾಗುವ ಸಾಧ್ಯತೆಯೂ ಇದೆ. ವೃದ್ಧೆಯ ಸಂಪರ್ಕದಲ್ಲಿದ್ದ 30ಕ್ಕೂ ಹೆಚ್ಚು ಜನರನ್ನು ಜಿಲ್ಲಾಡಳಿತ ಕೋವಿಡ್ ಪರೀಕ್ಷೆ ಮಾಡಿದ್ದು, ಕ್ವಾರಂಟೈನ್‍ಗೆ ಸೂಚಿಸಿದೆ.

    ವೃದ್ಧೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ದಾದಿಯರು ಹಾಗೂ ವೈದ್ಯರಿಂದ ಹೊರ ರೋಗಿಗಳಿಗೂ ಸೋಂಕು ಹರಡು ಸಾಧ್ಯತೆ ಇದೆ ಎಂದು ಸಾರ್ವಜನಿಕರು ಭಯಭೀತರಾಗಿದ್ದಾರೆ. ವೃದ್ಧೆಯ ಸಾವಿನ ವಿಷಯ ತಿಳಿಯುತ್ತಿದ್ದಂತೆ, ಡಣಯಕಾಪುರ ಗ್ರಾಮದಲ್ಲೂ ಹಲವರು ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ. ಮನೆಯಿಂದ ಹೊರ ಬರಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಗುರುವಾರ ತಡರಾತ್ರಿ ವೃದ್ಧೆಯ ಜಮೀನಿನಲ್ಲಿ ಜಿಲ್ಲಾಡಳಿತ ಸೀಮಿತ ಅಧಿಕಾರಿಗಳ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದೆ.

  • ಚಿಕ್ಕಮಗಳೂರಿಗೆ ಬರುತ್ತಿದೆ ಪ್ರವಾಸಿಗರ ದಂಡು- ಜಿಲ್ಲೆಯ ಜನರಲ್ಲಿ ಆತಂಕ

    ಚಿಕ್ಕಮಗಳೂರಿಗೆ ಬರುತ್ತಿದೆ ಪ್ರವಾಸಿಗರ ದಂಡು- ಜಿಲ್ಲೆಯ ಜನರಲ್ಲಿ ಆತಂಕ

    ಚಿಕ್ಕಮಗಳೂರು: ಕೊರೊನಾ ಲೆಕ್ಕಿಸದೆ ಜನ ಮೋಜು ಮಸ್ತಿ ಮಾಡಲು ಮುಂದಾಗಿದ್ದು, ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಆತಂಕ ಎದುರಾಗಿದೆ.

    ನೂರಾರು ಕೊರೊನಾ ಪ್ರಕರಣಗಳಿರುವ ಜಿಲ್ಲೆಗಳಿಂದ ಎಗ್ಗಿಲ್ಲದೆ ಪ್ರವಾಸಿಗರು ಕಾಫಿನಾಡಿನತ್ತ ಧಾವಿಸುತ್ತಿದ್ದು, ಜಿಲ್ಲೆಯ ಜನರಲ್ಲಿ ಭಯ ಶುರುವಾಗಿದೆ. ಉಡುಪಿ, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಜೊತೆ, ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಚಾರ್ಮಾಡಿ, ಘಾಟಿಕಲ್, ದೇವರಮನೆ ಗುಡ್ಡ ಸೇರಿದಂತೆ ಜಿಲ್ಲೆಯ ವಿವಿಧ ತಾಣಗಳಿಗೆ ಪ್ರವಾಸಿಗರ ದಂಡು ಎಗ್ಗಿಲ್ಲದೆ ಬರುತ್ತಿದೆ. ಪ್ರವಾಸಿಗರನ್ನು ಕಂಡು ಕಾಫಿನಾಡಿನ ಜನ ಕಂಗಾಲಾಗಿದ್ದಾರೆ.

    ಜಿಲ್ಲೆಯಲ್ಲಿ ಈವರೆಗೆ 17 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇವುಗಳಲ್ಲಿ 16 ಮುಂಬೈ ನಂಟು ಹೊಂದಿವೆ. ಟ್ರಾವೆಲ್ ಹಿಸ್ಟರಿ ಇಲ್ಲದ ಒಂದು ಪ್ರಕರಣ ಮಾತ್ರ ಇದೆ. ಇದೀಗ ಎಗ್ಗಿಲ್ಲದೆ ಬರುತ್ತಿರುವ ಪ್ರವಾಸಿಗರಿಂದ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜನ ಭಯಗೊಂಡಿದ್ದಾರೆ. ಈಗಾಗಲೇ ಕಳೆದ ಮೂರು ದಿನಗಳಿಂದ ಕೇವಲ ಮುಳ್ಳಯ್ಯನಗರಿ, ಸೀತಾಳಯ್ಯನಗಿರಿ, ದತ್ತಪೀಠಕ್ಕೆ ಬಂದಿರುವ ಪ್ರವಾಸಿಗರ ಸಂಖ್ಯೆಯೇ ಐದಾರು ಸಾವಿರ ಇದೆ. ಇದಲ್ಲದೆ ಧಾರ್ಮಿಕ ಕ್ಷೇತ್ರ ಹಾಗೂ ಜಿಲ್ಲೆಯ ಇತರೆ ಪ್ರವಾಸಿ ತಾಣಗಳಿಗೂ ಸಾವಿರಾರು ಪ್ರವಾಸಿಗರು ಬಂದಿದ್ದಾರೆ.

    ಕಳೆದ ಎರಡು ತಿಂಗಳಿಂದ ವ್ಯಾಪಾರ ವಹಿವಾಟು ಇಲ್ಲದೆ ಕಂಗಾಲಾಗಿರುವವರು ಪ್ರವಾಸಿಗರು ಬರಲಿ, ವ್ಯಾಪಾರವಾದರೂ ಆಗುತ್ತದೆ ಎನ್ನುತ್ತಿದ್ದಾರೆ. ಆದರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿರ ಸಂಖ್ಯೆಯಿಂದ ಭಯ ಪಡುತ್ತಿದ್ದಾರೆ.

  • ಮಾಸ್ಕ್ ಹಾಕದ, ಸಾಮಾಜಿಕ ಅಂತರ ಪಾಲಿಸದ ನಾಲ್ವರ ವಿರುದ್ಧ ಕೇಸ್

    ಮಾಸ್ಕ್ ಹಾಕದ, ಸಾಮಾಜಿಕ ಅಂತರ ಪಾಲಿಸದ ನಾಲ್ವರ ವಿರುದ್ಧ ಕೇಸ್

    ಚಿಕ್ಕಮಗಳೂರು: ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಪಾಲಿಸದೆ ಜನವಸತಿ ಪ್ರದೇಶದಲ್ಲಿ ಒಬ್ಬರಿಗೊಬ್ಬರು ಕೈಹಿಡಿದುಕೊಂಡು ಬೇಜವಾಬ್ದಾರಿಯಾಗಿ ಮಾತನಾಡುತ್ತಿದ್ದ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಚಿಕ್ಕಮಗಳೂರು ನಗರದ ನಾಲ್ವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪೋಸ್ಟ್ ಆಫೀಸ್ ರಸ್ತೆ ಮಧ್ಯೆ ಕೈಹಿಡಿದುಕೊಂಡು ಮಾತನಾಡುತ್ತಿದ್ದ ಸಾಗರ್, ಅಭಿಲಾಷ್, ಕಿರಣ್, ವಾಸುದೇವ್ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಸುಮಾರು ಎರಡು ತಿಂಗಳುಗಳ ಕಾಲ ಲಾಕ್‍ಡೌನ್ ಕೂಡ ಮಾಡಲಾಗಿತ್ತು. ಇದೀಗ ಲಾಕ್‍ಡೌನ್ ಸಡಿಲಿಸಿ, ಅನವಶ್ಯಕವಾಗಿ ಓಡಾಡದಂತೆ, ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದೆ. ಆದರೂ ಕೆಲವರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಹೀಗಾಗಿ ಪೊಲೀಸರು ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

  • ಕ್ವಾರಂಟೈನ್ ಕೇಂದ್ರದಲ್ಲಿ ಸೌಲಭ್ಯವಿಲ್ಲ- ಮನೆಗೆ ಕಳಿಸಿ

    ಕ್ವಾರಂಟೈನ್ ಕೇಂದ್ರದಲ್ಲಿ ಸೌಲಭ್ಯವಿಲ್ಲ- ಮನೆಗೆ ಕಳಿಸಿ

    ಚಿಕ್ಕಮಗಳೂರು: ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು, ಕುಡಿಯುವ ನೀರು ಸರಿ ಇಲ್ಲ. ಊಟವನ್ನು ಬಾಗಿಲಲ್ಲಿ ಇಟ್ಟು ಹೋಗುತ್ತಾರೆ. ಶೌಚಾಲಯಕ್ಕೆ ಹೋಗುವಂತಿಲ್ಲ. ಅಂತಹ ಪರಿಸ್ಥಿತಿ ಇದೆ. ಹೀಗಾಗಿ ನಮ್ಮನ್ನು ಮನೆಗೆ ಕಳುಹಿಸಿ ಎಂದು ಕ್ವಾರಂಟೈನ್ ಕೇಂದ್ರದಲ್ಲಿದ್ದವರು ಗೋಳಿಡುತ್ತಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕಿನ ಕಾಮನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಘಟನೆ ನಡೆದಿದ್ದು, ಕಾಮನಕೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೆ.ದಾಸರಹಳ್ಳಿಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ವಿದ್ಯಾರ್ಥಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 55 ಜನರನ್ನು ಕಾಮನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

    ಅಲ್ಲಿ ಯಾವ ಸೌಲಭ್ಯವೂ ಇಲ್ಲ ಎಂದು ಕ್ವಾರಂಟೈನ್ ಕೇಂದ್ರದಲ್ಲಿರುವವರು ಗೋಳಿಡುತ್ತಿದ್ದಾರೆ. ಸ್ಯಾನಿಟೈಸರ್, ಮಾಸ್ಕ್ ಯಾವುದನ್ನೂ ಕೊಟ್ಟಿಲ್ಲ. ಕುಡಿಯುವ ನೀರು ಸಹ ಸರಿ ಇಲ್ಲ. ಶೌಚಾಲಯಕ್ಕೆ ಹೋಗದಂತಹ ಕೆಟ್ಟ ಪರಿಸ್ಥಿತಿ ಇದೆ. ನಾವು ಶಂಕಿತರು, ಸೋಂಕಿತರಲ್ಲ. ಊಟವನ್ನು ಬಾಗಿಲಲ್ಲಿ ಇಟ್ಟು ಹೋಗುತ್ತಾರೆ. ಅಲ್ಲದೆ ರೂಮಿನಲ್ಲಿ ಬಿಟ್ಟು ಬೀಗ ಹಾಕಿಕೊಂಡು ಹೋಗುತ್ತಾರೆ. ಚಿಕ್ಕ ಮಕ್ಕಳಿದ್ದಾರೆ, ಮಾತ್ರೆ ಕೂಡ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

    ನಮ್ಮನ್ನು ಮನೆಗೆ ಕಳುಹಿಸಿ, ನಾವು ಇಲ್ಲಿ ಇರುವುದಿಲ್ಲ. ಮನೆಯಲ್ಲೇ ಚೆನ್ನಾಗಿ ಇರುತ್ತೇವೆ. ಊಟಕ್ಕೆ, ನೀರು ಕುಡಿಯಲು ಹೋದಾಗ ಎಲ್ಲರೂ ಒಟ್ಟಿಗೆ ಇರುತ್ತೇವೆ. ಕ್ವಾರಂಟೈನ್ ಮಾಡಿ ಏನು ಪ್ರಯೋಜನ. ಮನೆಯಲ್ಲೇ ಎಚ್ಚರದಿಂದ ಇರುತ್ತೇವೆ, ದಯವಿಟ್ಟು ನಮ್ಮನ್ನು ಮನೆಗೆ ಕಳುಹಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

  • ಆಟೋಗೆ ಅಡ್ಡ ಬಂದ ಕಾರ್, ಸಿನಿಮಾ ಸ್ಟೈಲಲ್ಲಿ ಆಟೋದಿಂದ ಹಾರಿದ ಚಾಲಕ

    ಆಟೋಗೆ ಅಡ್ಡ ಬಂದ ಕಾರ್, ಸಿನಿಮಾ ಸ್ಟೈಲಲ್ಲಿ ಆಟೋದಿಂದ ಹಾರಿದ ಚಾಲಕ

    ಚಿಕ್ಕಮಗಳೂರು: ಮುಖ್ಯರಸ್ತೆಯಲ್ಲಿ ಚಲಿಸುತ್ತಿದ್ದ ಆಟೋಗೆ ಕಾರ್ ಅಡ್ಡ ಬಂದಿದ್ದು, ಚಾಲಕ ಸಿನಿಮಾ ಸ್ಟೈಲಲ್ಲಿ ಆಟೋದಿಂದ ಹಾರಿದ್ದಾನೆ. ಮೈ ಜುಮ್ ಎನ್ನಿಸುವ ಈ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕೊಪ್ಪ ತಾಲೂಕಿನ ಬಾಳಗಡಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಮುಖ್ಯರಸ್ತೆಯಲ್ಲಿ ಆಟೋ ಬರುತ್ತಿದೆ, ಇನ್ನೊಂದೆಡೆ ರಸ್ತೆ ಬದಿಯಲ್ಲಿ ಕಾರ್ ನಿಂತಿದೆ. ಆಟೋ ಬರುವುದನ್ನು ನೋಡದ ಕಾರ್ ಚಾಲಕ ಇದ್ದಕ್ಕಿದ್ದಂತೆ ಮುಖ್ಯ ರಸ್ತೆ ಕಡೆಗೆ ಕಾರ್ ತಿರುಗಿಸಿದ್ದಾನೆ. ಹಿಂದೆ ಆಟೋ ವೇಗವಾಗಿ ಬರುತ್ತಿದ್ದರಿಂದ ನಿಯಂತ್ರಿಸಲು ಸಾಧ್ಯವಾಗಿಲ್ಲ. ಪರಿಣಾಮ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾನೆ.

    ಕಾರಿಗೆ ಆಟೋ ಅಪ್ಪಳಿಸುತ್ತಿದ್ದಂತೆ ಇನ್ನೊಂದು ರಸ್ತೆಯ ಇನ್ನೊಂದು ಬದಿಗೆ ಬಂದಿದ್ದು, ರಸ್ತೆ ಪಕ್ಕದಲ್ಲಿ ನಿಂತಿದ್ದ ಅಂಬುಲೆನ್ಸ್ ವ್ಯಾನ್‍ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಚಾಲಕ ಆಟೋದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ. ಕಾರ್ ತಪ್ಪಿಸಲು ಹೋಗಿ ನಿಂತಿದ್ದ ಅಂಬುಲೆನ್ಸ್‍ಗೆ ಆಟೋ ಡಿಕ್ಕಿ ಹೊಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಸ್ನಾನ ಮಾಡುವ ವಿಡಿಯೋ ಮಾಡಿ, ಅಪ್ಪನಿಂದಲೇ ಲೈಂಗಿಕ ಕಿರುಕುಳ- 18ರ ಮಗಳು ಆತ್ಮಹತ್ಯೆ

    ಸ್ನಾನ ಮಾಡುವ ವಿಡಿಯೋ ಮಾಡಿ, ಅಪ್ಪನಿಂದಲೇ ಲೈಂಗಿಕ ಕಿರುಕುಳ- 18ರ ಮಗಳು ಆತ್ಮಹತ್ಯೆ

    ಚಿಕ್ಕಮಗಳೂರು: ಮಗಳು ಸ್ನಾನ ಮಾಡುತ್ತಿರುವ ಫೋಟೋ ತೆಗೆದು, ವಿಡಿಯೋ ಮಾಡಿ, ಹೆತ್ತ ಅಪ್ಪನೇ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದು, ಮನನೊಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೌಟುಂಬಿಕ ಜಗಳದಿಂದ ಯುವತಿಯ ಅಮ್ಮ ಬೇರೆಡೆ ವಾಸವಿದ್ದಳು. ಅಪ್ಪ-ಮಗಳು ಒಂದೇ ಮನೆಯಲ್ಲಿ ವಾಸವಿದ್ದರು. ಈ ವೇಳೆ 40 ವರ್ಷದ ಪಾಪಿ ಅಪ್ಪ ತಾನೇ ಸಾಕಿದ 18 ವರ್ಷದ ಮಗಳು ಸ್ನಾನ ಮಾಡುವ ವಿಡಿಯೋ ಮಾಡಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ತಂದೆಯ ವರ್ತನೆಗೆ ಬೇಸತ್ತ ಮಗಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ತಂದೆಯ ಕಿರುಕುಳದಿಂದ ಬೇಸತ್ತು ಮೇ.20ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಇದನ್ನು ಗಮನಿಸಿದ ಸ್ಥಳೀಯರು ಯುವತಿಯನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಂಜೆ ಯುವತಿ ಮೃತಪಟ್ಟಿದ್ದಾಳೆ.

    ಪಾಪಿ ಅಪ್ಪನ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕರೋನಾ ಪರೀಕ್ಷೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಚಿಕ್ಕಮಗಳೂರಿನಲ್ಲಿ ಮಾಂಸ, ಮೀನಿನಂಗಡಿ ತೆರೆದಿದ್ದರೂ ಕೊಳ್ಳೋರಿಲ್ಲ

    ಚಿಕ್ಕಮಗಳೂರಿನಲ್ಲಿ ಮಾಂಸ, ಮೀನಿನಂಗಡಿ ತೆರೆದಿದ್ದರೂ ಕೊಳ್ಳೋರಿಲ್ಲ

    – ಲಾಕ್‍ಡೌನ್ ಹಿನ್ನೆಲೆ ಮನೆಯಿಂದ ಹೊರ ಬಾರದ ಜನ

    ಚಿಕ್ಕಮಗಳೂರು: ಕೊರೊನಾ ಆತಂಕದಿಂದಾಗಿ ಸರ್ಕಾರ ನಾಲ್ಕನೇ ಹಂತದ ಲಾಕ್‍ಡೌನ್ ವಿಸ್ತರಿಸಿದೆ. ಆದರೆ ಕೆಲ ಸಡಿಲಿಕೆಯನ್ನು ನೀಡಿದ್ದು, ಅಗತ್ಯ ವಸ್ತುಗಳ ಖರೀದೆಗೆ ಅವಕಾಶ ಕಲ್ಪಿಸಿದೆ. ಅಲ್ಲದೆ ಇಡೀ ವಾರ ಓಡಾಡಲು ಅವಕಾಶ ನೀಡಲಾಗಿದೆ. ಭಾನುವಾರ ಮಾತ್ರ ಕಟ್ಟುನಿಟ್ಟಿನ ಲಾಕ್‍ಡೌನ್ ವಿಧಿಸಲು ನಿರ್ಧರಿಸಲಾಗಿದೆ. ಅದರಂತೆ ಚಿಕ್ಕಮಗಳೂರಿನಲ್ಲಿ ಮಳಿಗೆಗಳು ತೆರೆದಿವೆ ಆದರೆ ಭಾನುವಾರ ಲಾಕ್‍ಡೌನ್ ಇರುವುದರಿಂದ ಜನ ಮನೆಯಿಂದ ಹೊರ ಬರುತ್ತಿಲ್ಲ.

    ತರಕಾರಿ, ಹಣ್ಣು, ಚಿಕನ್-ಮಟನ್, ಮೀನು ಸೇರಿದಂತೆ ಅಗತ್ಯ ಹಾಗೂ ದಿನಬಳಕೆ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದೆ. ಸರ್ಕಾರ ಅನುಮತಿ ನೀಡಿದ್ದರೂ ಲಾಕ್‍ಡೌನ್ ಹಿನ್ನೆಲೆ ಜನ ಹೊರಗಡೆ ಬರುತ್ತಿಲ್ಲ. ಹೀಗಾಗಿ ಅಂಗಡಿ ಮುಂಗಟ್ಟುಗಳು ಬಿಕೋ ಎನ್ನುತ್ತಿವೆ. ಇದರಿಂದಾಗಿ ವರ್ತಕರಿಗೆ ನಷ್ಟದ ಆತಂಕ ಎದುರಾಗಿದೆ.

    ಲಾಕ್‍ಡೌನ್ ಹಿನ್ನೆಲೆ ಜನ ಮನೆಯಿಂದ ಹೊರ ಬರುತ್ತಿರುವುದು ತೀರಾ ವಿರಳವಾಗಿದ್ದು, ಸಾವಿರರು ರೂ. ಮೌಲ್ಯದ ಚಿಕನ್, ಮಟನ್, ಮೀನು ತಂದು ವ್ಯಾಪಾರ ಮಾಡುತ್ತಿರುವ ವರ್ತಕರಿಗೆ ನಷ್ಟ ಉಂಟಾಗಿದೆ. ಮಧ್ಯಾಹ್ನ 2 ಗಂಟೆ ವೇಳೆಗೆ ವ್ಯಾಪಾರ ಮುಗಿಸಿ ಮನೆಗೆ ಹೋಗುತ್ತಿದ್ದೆವು. ಆದರೆ ಇಂದು ಬೆಳಗ್ಗೆಯಿಂದ ಶೇ20ರಷ್ಟು ಸಹ ವ್ಯಾಪಾರವಾಗಿಲ್ಲ ಎಂದು ಚಿಂತಾಕ್ರಾಂತರಾಗಿದ್ದಾರೆ. ಚಿಕ್ಕಮಗಳೂರು ಮೀನು ಮಾರುಕಟ್ಟೆಯಲ್ಲಂತೂ ಜನರೇ ಇಲ್ಲದಂತಾಗಿದೆ.

  • ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿ ಹಾವಿನ ಬೆನ್ನು ಮೂಳೆ ಮುರಿತ- ಶಸ್ತ್ರಚಿಕಿತ್ಸೆ ಮಾಡಿಸಿದ ರೈತ

    ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿ ಹಾವಿನ ಬೆನ್ನು ಮೂಳೆ ಮುರಿತ- ಶಸ್ತ್ರಚಿಕಿತ್ಸೆ ಮಾಡಿಸಿದ ರೈತ

    ಚಿಕ್ಕಮಗಳೂರು: ಜಮೀನು ಉಳುಮೆ ಮಾಡುವಾಗ ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ ಭಾರೀ ಗಾತ್ರದ ನಾಗರಹಾವಿಗೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ರೈತರೊಬ್ಬರು ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಗುಬ್ಬಿಗಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ರೈತ ಗೋಪಾಲಾಚಾರ್ ಅವರು ಜಮೀನಿನಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ನೇಗಿಲಿಗೆ ಭೂಮಿಯೊಳಗಿದ್ದ ಬೃಹತ್ ಗಾತ್ರದ ನಾಗರಹಾವು ಸಿಲುಕಿಕೊಂಡಿದೆ. ನೇಗಿಲಿಗೆ ಸಿಕ್ಕ ನಾಗರಹಾವು ಬಿಡಿಸಿಕೊಳ್ಳಲಾಗದೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದೆ. ಹಾವಿನ ಸ್ಥಿತಿ ಕಂಡ ಜಮೀನಿನ ಮಾಲೀಕ ಗೋಪಾಲಾಚಾರ್, ಕೂಡಲೇ ಕುದುರೆಗುಂಡಿಯ ಉರಗತಜ್ಞ ಹರೀಂದ್ರಾಗೆ ವಿಷಯ ಮುಟ್ಟಿಸಿದ್ದಾರೆ.

    ಸ್ಥಳಕ್ಕೆ ಬಂದ ಹರೀಂದ್ರ, ನೇಗಿಲಿಗೆ ಸಿಲುಕಿಕೊಂಡಿದ್ದ ನಾಗರಹಾವನ್ನು ಬಿಡಿಸಿ ಸ್ಥಳೀಯರಾದ ಅರುಣ್ ಹಾಗೂ ಸಾಜು ಅವರ ಸಹಾಯದಿಂದ ಎನ್.ಆರ್.ಪುರದ ಪಶು ಆಸ್ಪತ್ರೆಗೆ ತಂದಿದ್ದಾರೆ. ಪಶು ಆಸ್ಪತ್ರೆ ವೈದ್ಯ ವಿಜಯ್ ಕುಮಾರ್ ಹಾಗೂ ಶಿವಕುಮಾರ್ ಸುಮಾರು ಅರ್ಧ ಗಂಟೆಗಳ ಕಾಲ ಹಾವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ ಹಾವು ಸುಮಾರು 11 ವರ್ಷದ್ದು. ಈ ಬೃಹತ್ ನಾಗರಹಾವು ಹಾವು ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ್ದರಿಂದ ಹಾವಿನ ತಲೆ, ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಹೀಗಾಗಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹಾವಿನ ಹೊಟ್ಟೆ ಭಾಗದಲ್ಲಿ ಸುಮಾರು ಒಂದು ಇಂಚಿನಷ್ಟು ಹೊಲಿಗೆ ಹಾಕಿದ್ದಾರೆ.

    ಬೆನ್ನಿನ ಒಂದು ಎಲುಬು ಮುರಿದಿದ್ದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿದ್ದರಿಂದ ಹಾವಿಗೆ ಸುಮಾರು ಮೂರ್ನಾಲ್ಕು ದಿನಗಳ ಚಿಕಿತ್ಸೆಯ ಅಗತ್ಯವಿದ್ದು, ಪಶು ಆಸ್ಪತ್ರೆಯಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಹಾವನ್ನು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಇಡಬೇಕು, ಹಾವಿಗೆ ಮೂರು ಆ್ಯಂಟಿಬಯೋಟಿಕ್ ಹಾಕಬೇಕೆಂದು ಎಂದು ವೈದ್ಯರು ಹರೀಂದ್ರಾ ಅವರಿಗೆ ತಿಳಿಸಿದ್ದಾರೆ.

  • ಅಗತ್ಯವಿದ್ದವರಿಗೆ ಕಿಟ್ ನೀಡಿ ಮಾದರಿಯಾದ ಮಂಗಳಮುಖಿಯರು

    ಅಗತ್ಯವಿದ್ದವರಿಗೆ ಕಿಟ್ ನೀಡಿ ಮಾದರಿಯಾದ ಮಂಗಳಮುಖಿಯರು

    ಚಿಕ್ಕಮಗಳೂರು: ದಾನಿಗಳು ನೀಡಿದ ದಿನಸಿ ಕಿಟ್ ಸಂಗ್ರಹಿಸಿಟ್ಟುಕೊಂಡು ಬಡವರಿಗೂ ಸಿಗದಹಾಗೆ ಮಾಡುವ ಜನರಿದ್ದಾರೆ. ಆದರೆ ಈ ವಿಚಾರದಲ್ಲಿ ಮಂಗಳಮುಖಿಯರು ಮಾದರಿಯಾಗಿದ್ದು, ದಾನಿಗಳು ತಮಗೆ ನೀಡಿದ ಕಿಟ್‍ನ್ನು ಕಷ್ಟದಲ್ಲಿರುವವರಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಹಲವು ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಧನವಂತರು ಬಡವರಿಗೆ ಸಹಾಯ ಮಾಡುತ್ತಿದ್ದಾರೆ, ಅದೇ ರೀತಿ ಮಂಗಳಮುಖಿಯರಿಗೂ ನೀಡಿದ್ದಾರೆ. ಆದರೆ ಮಂಗಳಮುಖಿಯರು ಸಾಮಾನ್ಯ ಜನರಂತೆ ಸಂಗ್ರಹಿಸಿಟ್ಟುಕೊಳ್ಳದೆ, ಬೇಕಾದಷ್ಟು ಇಟ್ಟುಕೊಂಡು ಉಳಿದಿದ್ದನ್ನು ಮತ್ತೊಬ್ಬರಿಗೆ ನೀಡುತ್ತಿದ್ದಾರೆ. ಸ್ವತಃ ಮಂಗಳಮುಖಿಯರೇ ಕಿಟ್‍ಗಳನ್ನು ಬಡವರಿಗೆ ಹಂಚುತ್ತಿದ್ದಾರೆ.

    ಇಂತಹ ಕೆಲಸ ಸೇವೆಯಾಗಿರಬೇಕು, ಪ್ರಚಾರವಾಗಬಾರದು ಎಂದು ವಿಡಿಯೋ ಕೂಡ ಮಾಡಿಕೊಂಡಿಲ್ಲ. ತಮ್ಮ ನೆನಪು ಹಾಗೂ ಸಮಾಧಾನಕ್ಕಾಗಿ ಫೋಟೋ ಮಾತ್ರ ಕ್ಲಿಕ್ಕಿಸಿಕೊಂಡು ಯಾರಿಗೂ ಹೇಳದೆ ಏನೂ ಗೊತ್ತಿಲ್ಲದಂತೆ ಇದ್ದಾರೆ. ಜಿಲ್ಲೆಯ ಬಹುತೇಕ ಭಾಗಗಳಿಗೆ ತೆರಳಿ ಬಡವರಿಗೆ ಕಿಟ್ ಕೊಡುತ್ತಿದ್ದಾರೆ.

    ಜಿಲ್ಲೆಯ ಮಂಗಳಮುಖಿಯರ ಮಡಿಲು ಸಂಘದಿಂದ ಕಿಟ್ ವಿತರಿಸುತ್ತಿದ್ದಾರೆ. ಕೊರೊನಾ ಆರಂಭವಾದಾಗಿನಿಂದ ಇವರು ಕಿಟ್ ವಿತರಿಸುತ್ತಿದ್ದು, ಇದು ಯಾರಿಗೂ ತಿಳಿದಿಲ್ಲ. ತಮಗೆ ಬೇಕಾದಷ್ಟು ದಿನಸಿ ಇಟ್ಟಿಕೊಂಡು ಇಳಿದದ್ದೆಲ್ಲವನ್ನೂ ದಾನ ಮಾಡಿದ್ದಾರೆ.

  • ಗ್ರಾಮಕ್ಕೆ ಬರಬೇಕಂದ್ರೆ ಕ್ವಾರಂಟೈನ್ ಕಡ್ಡಾಯ- ಗ್ರಾಮ ಪಂಚಾಯಿತಿಗಳಿಂದ ಆದೇಶ

    ಗ್ರಾಮಕ್ಕೆ ಬರಬೇಕಂದ್ರೆ ಕ್ವಾರಂಟೈನ್ ಕಡ್ಡಾಯ- ಗ್ರಾಮ ಪಂಚಾಯಿತಿಗಳಿಂದ ಆದೇಶ

    – ಹೊರ ಜಿಲ್ಲೆ, ರಾಜ್ಯಗಳಿಂದ ಬರುವವರಿಗೆ ಸೀಲ್, ಕ್ವಾರಂಟೈನ್

    ಚಿಕ್ಕಮಗಳೂರು: ರೆಡ್, ಆರೆಂಜ್, ಗ್ರೀನ್ ಯಾವುದೇ ಝೋನ್‍ನಿಂದ ಜಿಲ್ಲೆಗೆ ಬರುವವರು ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿ ಇರಲೇಬೇಕೆಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಐದಾರು ಗ್ರಾಮ ಪಂಚಾಯಿತಿಗಳು ನಿರ್ಣಯ ಮಾಡಿಕೊಂಡು ಹೊಸ ಕಾನೂನನ್ನು ಜಾರಿಗೆ ತಂದಿವೆ.

    ಈಗಾಗಲೇ ಚಾರ್ಮಾಡಿ ಘಾಟ್ ಮೂಲಕ ಕೊಟ್ಟಿಗೆಹಾರ ಚೆಕ್‍ಪೋಸ್ಟ್ ಮಾರ್ಗವಾಗಿ ಮಂಗಳೂರಿನಿಂದ ನೂರಾರು ವಾಹನಗಳು ಜಿಲ್ಲೆಗೆ ಬರುತ್ತಿವೆ. ಇದು ಕೂಡ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಕಳಸ ಪಟ್ಟಣ ಮಂಗಳೂರು ಹಾಗೂ ಉಡುಪಿಯ ಗಡಿ. ಜೊತೆಗೆ ಕಾಸರಗೋಡಿನಿಂದ ಬರುವವರು ಇದೇ ಮಾರ್ಗವಾಗಿ ಸಂಚರಿಸುವುದರಿಂದ ಈ ಭಾಗದ ಜನರ ಆತಂಕ ಹೆಚ್ಚಾಗಿದೆ. ಹೀಗಾಗಿ ಕಳಸ, ಹೊರನಾಡು, ಸಂಸೆ, ತೋಟದೂರು, ಇಡಕಿಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳು ತಾವೇ ರೆಸ್ಯೂಲ್ಯೂಷನ್ ಪಾಸ್ ಮಾಡಿಕೊಂಡು ಕಾನೂನನ್ನು ಜಾರಿಗೆ ತಂದಿದ್ದಾವೆ.

    ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಯಾರೇ ಬರಲಿ, ಬಂದವರು ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿ ಇರುವಂತೆ ಕಾನೂನು ಜಾರಿ ತಂದಿದ್ದಾರೆ. ಸರ್ಕಾರವೇ ಈ ಕಾನೂನ್ನು ಜಾರಿಗೆ ತಂದಿದೆ. ಆದರೆ ಕೊರೊನಾ ಸಮುದಾಯಕ್ಕೆ ಹರಡುತ್ತಿಲ್ಲವಾದ್ದರಿಂದ ಸರ್ಕಾರ ಹೊರ ಜಿಲ್ಲೆಯಿಂದ ಬರುವವರ ಕೈಗೆ ಮುದ್ರೆಯನ್ನಾಗಲಿ ಅಥವಾ ಕ್ವಾರಂಟೈನ್ ಮಾಡುವುದನ್ನು ಕೈಬಿಟ್ಟಿತ್ತು. ಚಿಕ್ಕಮಗಳೂರಿನಲ್ಲಿ ಕೆಲ ಗ್ರಾಮ ಪಂಚಾಯಿತಿಗಳು ಇದನ್ನು ಜಾರಿಗೆ ತರುತ್ತಿವೆ.

    ಜಿಲ್ಲೆಯ ಅಕ್ಕಪಕ್ಕದ ಶಿವಮೊಗ್ಗ ಹಾಗೂ ಹಾಸನದಲ್ಲೂ 8-9 ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಉಡುಪಿ ಹಾಗೂ ಮಂಗಳೂರು ಗಡಿಯ ಗ್ರಾಮ ಪಂಚಾಯಿತಿಗಳು ಈ ಕಾನೂನು ಜಾರಿಗೆ ತಂದಿವೆ. ಹಾಸನದಲ್ಲಿ ಐದು ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡವೋ ಕೂಡಲೇ ಮೂಡಿಗೆರೆಯಿಂದ ಸಖಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳಿಗೆ ಬೃಹತ್ ಬಂಡೆಗಳನ್ನ ಹಾಕಿ ಮುಚ್ಚಿದ್ದಾರೆ. ಅಲ್ಲದೆ ಇಂದು ಗ್ರಾಮ ಪಂಚಾಯಿತಿಗಳು ಹೊಸ ನಿರ್ಣಯ ಜಾರಿಗೆ ತಂದಿವೆ. ತಮ್ಮ ಜಿಲ್ಲೆಯ ಗಡಿಯಿಂದ ಒಳಬರುವ ಪ್ರತಿಯೊಬ್ಬರೂ ಕೈಗೆ ಸೀಲ್ ಹಾಕಿ, ಕ್ವಾರಂಟೈನ್‍ನಲ್ಲಿರುವುದು ಕಡ್ಡಾಯ ಎಂಬ ಹೊಸ ಕಾನೂನನ್ನು ಜಾರಿಗೆ ತಂದಿವೆ. ಈ ಮೂಲಕ ಮಲೆನಾಡನ್ನು ಕೊರೊನಾ ಮುಕ್ತ ಮಾಡಲು ಪಣ ತೊಟ್ಟಿವೆ.