Tag: Chikmagalur

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – 7 ದಶಕದ ಹಳ್ಳದ ಬದುಕಿಗೆ ಮುಕ್ತಿ, ಸೇತುವೆ ನಿರ್ಮಾಣದ ಸರ್ವೇ ಕಾರ್ಯ ಶುರು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – 7 ದಶಕದ ಹಳ್ಳದ ಬದುಕಿಗೆ ಮುಕ್ತಿ, ಸೇತುವೆ ನಿರ್ಮಾಣದ ಸರ್ವೇ ಕಾರ್ಯ ಶುರು

    ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕಣತಿ ಸಮೀಪದ ಐದಳ್ಳಿ ಗ್ರಾಮದ ಜನ ಕಳೆದ ಏಳೆಂಟು ದಶಕಗಳಿಂದ ಐದಳ್ಳಿ ಗ್ರಾಮದಲ್ಲಿ ಹರಿಯೋ ಆನೆ ಬಿದ್ದ ಹಳ್ಳದ ಮಾರ್ಗವೇ ಗತಿಯಾಗಿತ್ತು. ಇಲ್ಲಿನ ಜನರು ನಿತ್ಯ ಸಂಚಾರ ಮಾಡಲು ಪಡುತ್ತಿದ್ದ ಕಷ್ಟವನ್ನು ಹಲವು ಬಾರಿ ಸರ್ಕಾರದ ಮುಂದಿಟ್ಟರೂ ಪರಿಹಾರ ಸಿಕ್ಕಿರಲಿಲ್ಲ. ಹಳ್ಳಿಗರ ಪರಿಸ್ಥಿತಿ ಅರಿತು ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತ್ತು. ಇದೀಗ ಪಬ್ಲಿಕ್ ಟಿವಿ ವರದಿಯ ಫಲಶೃತಿಯ ಫಲವಾಗಿ ಕಳೆದ 70 ವರ್ಷದಿಂದ ನದಿ ಮಾರ್ಗವಾಗಿ ಓಡಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಗ್ರಾಮದ ಜನರಿಗೆ ಸೇತುವೆಯ ಭಾಗ್ಯ ಲಭಿಸಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    ಈ ಊರಿನ ಜನರಿಗೆ ಹುಟ್ಟು-ಸಾವಿಗೂ ಇದೊಂದೆ ದಾರಿಯಾಗಿತ್ತು. ಮಕ್ಕಳು ಶಾಲೆಗೆ ಹೋಗಲು ಇದ್ದದ್ದು ಇದೊಂದೆ ಮಾರ್ಗವಾಗಿವಾಗಿತ್ತು. ಮಳೆಗಾಲದಲ್ಲಿ ಮಕ್ಕಳು ಎರಡ್ಮೂರು ತಿಂಗಳು ಶಾಲೆಗೆ ಹೋಗುತ್ತಿರಲಿಲ್ಲ. ಅನಿವಾರ್ಯವಾಗಿ ಐದಳ್ಳಿಯಿಂದ ಅರ್ಧ ಕಿ.ಮೀ. ದೂರದ ಕಣತಿ ಗ್ರಾಮಕ್ಕೆ ಬರಬೇಕೆಂದರೆ ಸುಮಾರು ಐದಾರು ಕಿ.ಮೀ. ಸುತ್ತಿ ಬರಬೇಕಿತ್ತು.

    ಸ್ಥಳೀಯರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದರು. ಆದರೆ, ಮಳೆಗಾಲ ಮುಗಿಯಲಿ, ಬೇಸಿಗೆಯಲ್ಲಿ ಸೇತುವೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳುತ್ತಾ ಸರ್ಕಾರ ದಶಕಗಳನ್ನೇ ದೂಡಿತ್ತು. ಹಳ್ಳಿಗರ ಪರಿಸ್ಥಿತಿ ಅರಿತು ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತ್ತು. ಇದೀಗ ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಸರ್ವೇ ಮಾಡಿದ್ದಾರೆ. ಶಾಸಕರು ಕೂಡ 50 ಲಕ್ಷದಲ್ಲಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಇದರಿಂದ ಹರ್ಷಗೊಂಡ ಹಳ್ಳಿಗರು ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಗ್ರಾಮದಿಂದ ಅರೆನೂರು, ಬೆಟ್ಟದಹಳ್ಳಿ ಹಾಗೂ ದುರ್ಗ ಗ್ರಾಮಕ್ಕೂ ಸಂಪರ್ಕವಿದೆ. ಐದಳ್ಳಿ ಗ್ರಾಮದಲ್ಲಿ ಸುಮಾರು 30-35 ಮನೆಗಳಿವೆ. ಇಲ್ಲಿಂದ ಚಿಕ್ಕಮಗಳೂರು-ಶೃಂಗೇರಿ ಮಾರ್ಗದ ರಾಜ್ಯ ಹೆದ್ದಾರಿಯ ಕಣತಿ ಗ್ರಾಮಕ್ಕೆ ಕೇವಲ ಒಂದು ಕಿ.ಮೀ. ಆದರೆ, ಐದಳ್ಳಿ ಜನ ಕಣತಿಗೆ ಬರಬೇಕೆಂದರೆ ಸುಮಾರು ಐದಾರು ಕಿ.ಮೀ. ಸುತ್ತಿ ಬರಬೇಕು.

    ಈ ಆನೆ ಬಿದ್ದ ಹಳ್ಳಕ್ಕೆ ಸೇತುವೆ ನಿರ್ಮಾಣವಾದರೆ ಮುಕ್ಕಾಲು ಅಥವಾ ಒಂದು ಕಿ.ಮೀ ನಲ್ಲಿ ಕಣತಿ ಗ್ರಾಮಕ್ಕೆ ಬರುತ್ತಾರೆ. ಆದರೆ, ಏಳು ದಶಕಗಳಿಂದ ಇವರಿಗೆ ಒಂದು ಸೇತುವೆ ಭಾಗ್ಯ ಒದಗಿಬಂದಿರಲಿಲ್ಲ. ಯಾರಿಗಾದರೂ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಳಿಗೆ ಕಟ್ಟಿಕೊಂಡು ಹೊತ್ತುಕೊಂಡೇ ಹೋಗಬೇಕಾಗಿತ್ತು. ಈ ಹಳ್ಳದಲ್ಲಿ ಹೋಗುವಾಗ ಕೆಲ ಹುಡುಗರ ಕೊಚ್ಚಿ ಹೋಗಿರುವ ಪ್ರಸಂಗವು ನಡೆದಿತ್ತು. ಆದರೆ ಇದೀಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೇತುವೆ ನಿರ್ಮಾಣಕ್ಕೆ ಸರ್ವೇ ಮಾಡಿರುವುದು, ಕಳೆದ ಏಳೆಂಟು ದಶಕಗಳಿಂದ ಕಾಡು ಮನುಷ್ಯರಂತೆ ಜೀವಿಸಿದ್ದ ಈ ಗ್ರಾಮದ ಜನರಲ್ಲಿ ಸಂತಸ ಮೂಡಿಸಿದೆ.

  • ಧರ್ಮಸ್ಥಳದ ಪಾದಯಾತ್ರಿಗಳಿಗೆ ಟಿಟಿ ವಾಹನ ಡಿಕ್ಕಿ- 12 ಜನರಿಗೆ ಗಾಯ

    ಧರ್ಮಸ್ಥಳದ ಪಾದಯಾತ್ರಿಗಳಿಗೆ ಟಿಟಿ ವಾಹನ ಡಿಕ್ಕಿ- 12 ಜನರಿಗೆ ಗಾಯ

    ಚಿಕ್ಕಮಗಳೂರು: ಪಾದಯಾತ್ರೆ ಹೊರಟಿದ್ದ ಭಕ್ತರಿಗೆ ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ನಡೆದಿದೆ. ಶಿವರಾತ್ರಿ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲಕ್ಕೆ ಭಕ್ತರು ಹೊರಟಿದ್ದರು.

    ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ 12 ಪಾದಯಾತ್ರಿಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಗೆ ಬರುವ ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವ ಭಕ್ತರಿಗೂ ದೊಡ್ಡ ಪ್ರಮಾಣದ ಅನಾಹುತ ಸಂಭವಿಸಿಲ್ಲ. ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನ ಭಕ್ತರಿಗೆ ಡಿಕ್ಕಿಯಾಗಿ ರಸ್ತೆ ಎರಡೂ ಬದಿಯ ಪ್ರಪಾತಕ್ಕೆ ನಿರ್ಮಿಸಿರುವ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.

    ಪಾದಯಾತ್ರೆ ಹೊರಟಿದ್ದ ಭಕ್ತರು ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಗರೆ ಗ್ರಾಮದವರಾಗಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನ ಉಜಿರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ನಿರ್ಮಾಣವಾಗದ 2019ರಲ್ಲಿ ಕೊಚ್ಚಿ ಹೋದ ಸೇತುವೆ – ಆತಂಕದಲ್ಲಿ ಮಲೆನಾಡಿಗರು

    ನಿರ್ಮಾಣವಾಗದ 2019ರಲ್ಲಿ ಕೊಚ್ಚಿ ಹೋದ ಸೇತುವೆ – ಆತಂಕದಲ್ಲಿ ಮಲೆನಾಡಿಗರು

    ಚಿಕ್ಕಮಗಳೂರು: 2019ರ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆಗೆ ಕೊಚ್ಚಿ ಹೋದ ಸೇತುವೆ ಇನ್ನೂ ನಿರ್ಮಾಣವಾಗದ ಹಿನ್ನೆಲೆ ಮತ್ತೆ ಮಳೆಗಾಲ ಬಂತೆಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿ ಜನ ಆತಂಕಕ್ಕೀಡಾಗಿದ್ದಾರೆ. ಸರ್ಕಾರ ತಾತ್ಕಾಲಿಕವಾಗಿ ಕಬ್ಬಣದ ಕಾಲುಸಂಕವನ್ನ ನಿರ್ಮಾಣ ಮಾಡಿತ್ತು. ಆದರೆ ಈ ವರ್ಷ ಸುರಿದ ಅಕಾಲಿಕ ಮಳೆಯಿಂದ ಆ ಸೇತುವೆಯೂ ಇಂದೋ-ನಾಳೆಯೋ ಎಂದು ದಿನ ಎಣಿಸುತ್ತಿರೋದ್ರಿಂದ ಬಂಕೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಏಳೆಂಟು ಹಳ್ಳಿಯ ಜನ ಕಂಗಾಲಾಗಿದ್ದಾರೆ. ತಾತ್ಕಾಲಿಕವಾಗಿ ಕಬ್ಬಿಣದ ಕಾಲುಸಂಕ ನಿರ್ಮಿಸಿದ್ದ ಶಾಸಕರು ಹಾಗೂ ಅಧಿಕಾರಿಗಳು ಇಂದಿಗೂ ಇತ್ತ ತಲೆ ಹಾಕಿ ಹಾಕಿಲ್ಲ. ಆ ಕಾಲು ಸಂಕ ಕೂಡ ಹೇಮಾವತಿ ನೀರಿನ ರಭಸಕ್ಕೆ ಕಾಲುಸಂಕ ನಿಂತಿರೋ ಹಿಂದೆ-ಮುಂದಿನ ಮಣ್ಣು ಕುಸಿಯುತ್ತಿರುವುದರಿಂದ ಈ ಸಂಕವೂ ಶೀಘ್ರದಲ್ಲೇ ಹೇಮಾವತಿಗೆ ಬಲಿಯಾಗುವ ಆತಂಕ ಸ್ಥಳೀಯರಲ್ಲಿ ಮೂಡಿದೆ.

    ಸಂಕ ನಿರ್ಮಿಸಿದ ಅಧಿಕಾರಿಗಳು ಅದಕ್ಕೆ ಬೇಕಾದ ಸೂಕ್ತ ಭದ್ರತೆ ಕಲ್ಪಿಸಿಲ್ಲ ಅನ್ನೋದು ಸ್ಥಳೀಯರ ಮಾತು. ಕಬ್ಬಣದ ಕಾಲುಸೇತುವೆ ತಂದರು. ಈ ತುದಿಯಿಂದ ಆ ತುದಿಗೆ ಇಟ್ಟು ಹೋದರು. ಅದರ ಪರಿಣಾಮವೇ ಸೇತುವೆ ಈ ಸ್ಥಿತಿ ತಲುಪಿದ ಅಂತಾರೆ ಸ್ಥಳೀಯರು. ಅಷ್ಟೆ ಅಲ್ಲದೆ, ಸೇತುವೆ ಮಧ್ಯ ಹಾಗೂ ನೀರು ಹರಿಯುವ ಜಾಗದಲ್ಲಿ ಸಂಕಕ್ಕೆ ಸಪೋರ್ಟಿಂಗ್ ಪಿಲ್ಲರ್ ಇಟ್ಟಿರೋ ಅಧಿಕಾರಿಗಳು ಸಿಮೆಂಟ್ ಪೈಪಿನ ಮೇಲೆ ಸೇತುವೆಯನ್ನ ನಿಲ್ಲಿಸಿದ್ದಾರೆ. ಇದು ತಡೆಯುತ್ತಾ, ಮಳೆ ಬಂದರೆ ಕೊಚ್ಚಿ ಹೋಗುತ್ತೆ, ಸೇತುವೆಯ ಎರಡೂ ಬದಿ ಹಾಗೂ ಮಧ್ಯದಲ್ಲಿ ಗಟ್ಟಿಯಾದ ಗ್ರಿಪ್ ಇಲ್ಲ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈಗ ಮತ್ತೆ ನಾಳೆ-ನಾಡಿದ್ದು ಎನ್ನುವಷ್ಟರಲ್ಲಿ ಮಳೆಗಾಲ ಆರಂಭವಾಗುತ್ತೆ. ಒಂದು ವೇಳೆ ಈ ಸೇತುವೆಯೂ ಕೊಚ್ಚಿ ಹೋದರೆ ನಮ್ಮ ಬದುಕು ಹೇಗೆಂದು ಸ್ಥಳೀಯರು ಚಿಂತಾಕ್ರಾಂತರಾಗಿದ್ದಾರೆ.

    ಸ್ಥಳೀಯರೇ ನಿರ್ಮಿಸಿಕೊಂಡಿದ್ದ ಸೇತುವೆ ಕೊಚ್ಚಿ ಹೋಗಿತ್ತು: 2019ರಲ್ಲಿ ಕೊಚ್ಚಿ ಹೋಗಿದ್ದ ಸೇತುವೆಯಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದ ಜನ ನಗರ ಪ್ರದೇಶಕ್ಕೆ ಬರಬೇಕೆಂದರೆ ಸುಮಾರು ಏಳೆಂಟು ಕಿ.ಮೀ. ಸುತ್ತಿಕೊಂಡು ಬರಬೇಕಿತ್ತು. ಅದಕ್ಕಾಗಿ 2019ರ ಮಳೆಗಾಲ ಮುಗಿಯುತ್ತಿದ್ದಂತೆ ಸ್ಥಳೀಓಯರೇ ಸೇತುವೆ ನಿರ್ಮಿಸಿಕೊಂಡಿದ್ದರು. 2020ರ ಮಳೆಗೆ ಅದೂ ಕೂಡ ಕೊಚ್ಚಿ ಹೋಗಿತ್ತು. ಆಗ ಸ್ಥಳಕ್ಕೆ ಬಂದಿದ್ದ ಶಾಸಕ ಕುಮಾರಸ್ವಾಮಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆಗೆ ಸ್ಥಳೀಯರು ಕ್ಲಾಸ್ ತೆಗೆದುಕೊಂಡಿದ್ದರು. ಆಗ ತಾತ್ಕಾಲಿಕವಾಗಿ ಕಬ್ಬಿಣದ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಅತ್ತು ಕರೆದು ಔತಣ ಮಾಡಿಸಿಕೊಂಡರೆಂಬಂತೆ ಘೇರಾವ್ ಹಾಕಿ ಮಾಡಿಸಿಕೊಂಡ ಸೇತುವೆಯೂ ಈಗ ಅವನತಿಯ ಅಂಚಿನಲ್ಲಿದೆ.

    ಜನನಾಯಕರ ಭೇಟಿ: 2019ರಲ್ಲಿ ಕಾಫಿನಾಡು ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆ ಕಂಡಿತ್ತು. ಸ್ಥಳೀಯರ ಪ್ರಕಾರ 45 ವರ್ಷಗಳ ಹಿಂದಿನ ಮಳೆ ಸುರಿದಿತ್ತು. ಆಗ ಆದ ಅನಾಹುತಗಳು ಇಂದಿಗೂ ಸರಿಯಾಗಿಲ್ಲ. ಆಗ ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್, ಅಂದಿನ ಮಂತ್ರಿ ಸಿ.ಟಿ.ರವಿ, ಮಾಧುಸ್ವಾಮಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕುಮಾರಸ್ವಾಮಿ ಭೇಟಿ ನೀಡಿ ಸ್ಥಳಿಯರಿಗೆ ಶೀಘ್ರವೇ ಸೇತುವೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಿಕೊಡುವಂತೆ ಭರವಸೆ ನೀಡಿದ್ದರು.

    3 ಕೋಟಿ ಅನುದಾನ, ಕಮಿಷನ್ ಕ್ಯಾತೆ : ಸೇತುವೆ ನಿರ್ಮಾಣಕ್ಕೆ 3 ಕೋಟಿ ಅನುದಾನ ಬಂದಿದೆ ಅಂತ ಹೇಳಿಯೇ ಒಂದು ವರ್ಷ ಕಳೆದಿದೆ. ಆದರೆ ಕೆಲಸ ಮಾತ್ರ ಇನ್ನೂ ಆರಂಭವಾಗಿಲ್ಲ. ಸೇತುವೆ ನಿರ್ಮಾಣಕ್ಕೆ ಗುತ್ತಿಗೆ ಪಡೆದರೆ ಇಂಜಿನಿಯರ್ ಹಾಗೂ ಕಂಟ್ರಾಕ್ಟ್‍ದಾರರು ಸಿಕ್ಕಪಟ್ಟೆ ಕಮಿಷನ್ ನೀಡಬೇಕಂತೆ. ಅದಕ್ಕೆ ಅಧಿಕಾರಿ ಹಾಗೂ ರಾಜಕಾರಣಿಗಳಿಗೆ ಕಮಿಷನ್ ಕೊಡಲಾಗದೆ ಯಾರೂ ಸೇತುವೆ ನಿರ್ಮಾಣಕ್ಕೆ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.

    ಮೋದಿ ಗುಡ್, ಉಳಿದವರು ಬ್ಯಾಡ್ : ನರೇಂದ್ರ ಮೋದಿಗೆ ಒಳ್ಳೆ ಉದ್ದೇಶವಿದೆ. ಇಲ್ಲ ಎಂದು ಹೇಳಲ್ಲ. ಉಳಿದ ಪುಡಾರಿಗಳು ಅವರ ಆಸೆ ನೆರವೇರಿಸಲು ಬಿಡಲ್ಲ ಎಂದು ರಾಜ್ಯ ನಾಯಕರ ಬಗ್ಗೆ ಹಳ್ಳಿಗರು ಕಿಡಿಕಾರಿದ್ದಾರೆ. ನಾವು ಬಿಜೆಪಿಯವರೆ. ಇವತ್ತು ಯಾಕಾದ್ರು ಬಿಜೆಪಿಗೆ ವೋಟು ಹಾಕಿದ್ವೋ ಎಂದು ನಮಗೆ ಬೇಜಾರಾಗಿ ಪಶ್ಚಾತ್ತಾಪ ಪಡುವಂತಾಗಿದೆ ಎಂದು ತಮ್ಮ ಮೇಲೆ ತಾವೇ ಅಸಮಾಧಾನ ಹೊರಹಾಕಿಕೊಂಡಿದ್ದಾರೆ. ಸರ್ಕಾರ, ಶಾಸಕರು, ಸಂಸದರು, ಅಧಿಕಾರಿಗಳಿಗೆ ಬೇಡಿ ಬೇಜಾರಾಗಿ ಈಗ ಪ್ರಧಾನಿ ಮೋದಿಗೆ ಪತ್ರ ಬರೆದು ಸೇತುವೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ.

  • ಇಬ್ಬರು ನಾಯಕರನ್ನು ಕಳೆದುಕೊಂಡ್ರೂ ಕಾಂಗ್ರೆಸ್ ಇತಿಹಾಸದಿಂದ ಬುದ್ಧಿ ಕಲಿತಿಲ್ಲ: ಸಿ.ಟಿ ರವಿ

    ಇಬ್ಬರು ನಾಯಕರನ್ನು ಕಳೆದುಕೊಂಡ್ರೂ ಕಾಂಗ್ರೆಸ್ ಇತಿಹಾಸದಿಂದ ಬುದ್ಧಿ ಕಲಿತಿಲ್ಲ: ಸಿ.ಟಿ ರವಿ

    – ನಿಮಗೆ ಸಿ.ಟಿ.ರವಿ ಗೊತ್ತಿತ್ತು, ದಿಶಾ ರವಿ ಗೊತ್ತಿತ್ತಾ..?

    ಚಿಕ್ಕಮಗಳೂರು: ಬಿಂದರ್ ವಾಲೆಗೆ ಬೆಂಬಲ ಕೊಟ್ಟಿದ್ದಕ್ಕೆ ಇಂದಿರಾಗಾಂಧಿ ಬಲಿಯಾಗಬೇಕಾಯ್ತು. ಕಾಂಗ್ರೆಸ್ಸಿಗೆ ನೆನಪಿರಲಿ. ಎಲ್.ಟಿ.ಟಿ. ಬೆಂಬಲಿಸಿ ರಾಜೀವ್ ಗಾಂಧಿ ಬಲಿಯಾಗಬೇಕಾಯ್ತು. ಜಿನ್ನಾನನ್ನ ಬೆಂಬಲಿಸಿ ಜಿನ್ನಾನ ಮಾನಸಿಕತೆಯನ್ನ ಅರ್ಥ ಮಾಡಿಕೊಳ್ಳದ ಕಾರಣ ದೇಶ ವಿಭಜನೆ ಆಗಬೇಕಾಯ್ತು. ಮತ್ತೆ ಅಂತದ್ದೇ ಪರಿಸ್ಥಿತಿಯನ್ನ ದೇಶಕ್ಕೆ ತಂದಿಡುವಂತಹ ಹೀನ ಕೃತ್ಯ ಮಾಡಬೇಡಿ. ಕಾಂಗ್ರೆಸ್ ಇಬ್ಬರೂ ನಾಯಕರನ್ನು ಕಳೆದುಕೊಂಡರು ಇನ್ನೂ ಬುದ್ಧಿ ಕಲಿತಂತೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಅರಾಜಕತೆ ಹುಟ್ಟು ಹಾಕೋದು ಪ್ರಜಾಪ್ರಭುತ್ವದ ಲಕ್ಷಣನಾ ಕಾಂಗ್ರೆಸ್ಸಿಗರಿಗೆ ನಾಚಿಕೆ ಆಗಲ್ವಾ. ದಿಶಾ ರವಿಯನ್ನು ಬಂಧನ ಮಾಡಿರೋದು ಪ್ರಜಾಪ್ರಭುತ್ವವನ್ನ ಉಳಿಸಿದರು ಎಂಬ ಕಾರಣಕ್ಕಲ್ಲ, ಅರಾಜಕತೆ ಸೃಷ್ಟಿಸುವ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬ ಕಾರಣಕ್ಕೆ ಬಂಧಿಸಿರುವುದು. ಜನವರಿ 26ನೇ ರಂದು ಏನೇನಾಗುತ್ತೆ, ಮುಂದೆ ಏನು ಮಾಡಬೇಕು ಎಂಬ ಪ್ಲಾನ್ ರೂಪಿಸಿರುವ ಸಂಚಿನ ಮೂಲವನ್ನು ಭೇದಿಸಿ ದಿಶಾ ರವಿಯನ್ನು ಬಂಧಿಸಿರುವುದು. ದಿಶಾ ರವಿ ಯಾರಿಗೆ ಗೊತ್ತಿತ್ತು, ಸಿ.ಟಿ.ರವಿ ನಿಮಗೆ ಗೊತ್ತಿತ್ತು. ಈ ಮುಂಚೆ ನೀವು ಯಾರಾದರೂ ದಿಶಾ ರವಿ ಹೆಸರು ಕೇಳಿದ್ರಾ. ಈಗ ಚರ್ಚೆಗೆ ಬರುತ್ತಿರೋದು. ಈಗ ಬಹಳ ವೈಭವೀಕರಿಸಿ ಮಾತನಾಡುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅವರು ಅರಾಜಕತೆ ಸೃಷ್ಠಿಸುವ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಬಂಧಿಸಲಾಗಿದೆ. ಮುಂದೆ ಹೆಚ್ಚಿನ ಮಾಹಿತಿ ಸಿಕ್ಕಂತೆ ಯಾರ್ಯಾರು ಭಾಗಿಯಾಗಿದ್ದರು, ಎಲ್ಲರೂ ಬಂಧನವಾಗಬೇಕು. ಎಷ್ಟೆ ದೊಡ್ಡವರಾಗಿದ್ದರೂ ಬಂಧನವಾಗಬೇಕು ಎಂದು ಆಗ್ರಹಿಸಿದರು.

    ನಮ್ಮ ದೇಶದ ಸಾರ್ವಭೌಮತೆ ಮುಂದೆ ಯಾರೂ ಅಲ್ಲ. ನಮ್ಮ ದೇಶದ ಸಂವಿಧಾನ ನಮಗೆ ದೊಡ್ಡದ್ದು. ನಮ್ಮ ದೇಶದ ಅಖಂಡತೆ ನಮಗೆ ದೊಡ್ಡದ್ದು. ಅಖಂಡತೆ ಹಾಗೂ ಅರಾಜಕತೆಗೆ ಭಂಗ ತರುವವರನ್ನು ಕ್ಷಮಿಸುವ ಮಾತೇ ಇಲ್ಲ. ಅಕಾಲಿದಳದ ವಿರುದ್ಧ ಬಿಂದ್ರನ್ ವಾಲೆಯನ್ನು ಎತ್ತಿಕಟ್ಟಿ, ಖಲಿಸ್ಥಾನ ಚಳುವಳಿಯ ಬೀಜ ಬಿತ್ತಿ ಅದಕ್ಕೆ ಬೆಂಬಲ ಕೊಟ್ಟರು. ಅದರ ಪರಿಣಾಮ ಸಾವಿರಾರು ಜನ ಅಮಾಯಕರು ಬಲಿಯಾದರು. ಸ್ವತಃ ಪ್ರಧಾನಿ ಇಂದಿರಾಗಾಂಧಿಯವರು ಕೂಡ ಆ ಸಣ್ಣ ರಾಜಕೀಯಕ್ಕೆ ಬಲಿಯಾಗಬೇಕಾದ ಕೆಟ್ಟಪರಿಸ್ಥಿತಿ ಬಂತು. ಎಲ್.ಟಿ.ಟಿ. ವಿರುದ್ಧ ಪರ-ವಿರೋಧ ಹಾವು ಏಣಿ ಆಟ ಆಡ್ತಾ ಆಡ್ತಾ ಎಲ್.ಟಿ.ಟಿ.ಗೆ ಬೆಂಬಲ ಕೊಟ್ಟ ಪರಿಣಾಮ ಕೆಟ್ಟ ಪರಿಸ್ಥಿತಿ ಹೇಗೆ ಬಂತೆಂದರೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ದಾರುಣ ಸಾವಿಗೀಡಾಗುವ ಪರಿಸ್ಥಿತಿ ಬಂತು ಎಂದು ವಾಗ್ದಾಳಿ ನಡೆಸಿದರು.

    ಜಿನ್ನಾ ನಿಲುವಿಗೆ ಸಮರ್ಥನೆ ಒದಗಿಸಿದ ಕಾರಣಕ್ಕೆ ದೇಶ ವಿಭಜನೆಯಾಗಬೇಕಾದ ಕೆಟ್ಟ ಪರಿಸ್ಥಿತಿ ಬಂತು. ಇವತ್ತು ಮತ್ತೆ ಅಂತಹದೇ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಪ್ರಧಾನಿ ಮೋದಿಯನ್ನು ವಿರೋಧಿಸಬೇಕೆಂದು ಅರಾಜಕ ಶಕ್ತಿಗಳಿಗೆ ದೇಶ ಒಡೆಯುವ ಶಕ್ತಿಗಳಿಗೆ ಬೆಂಬಲ ಕೊಡುವಂತಹ ಕೈಜೋಡಿಸುವಂತೆ ಸಣ್ಣ ಕೆಲಸವನ್ನು ಮಾಡುತ್ತಿದ್ದಾರೆ. ನಿಮಗೆ ಬಾಕಿ ಇನ್ನೇನು ಉಳಿದಿದೆ ಎಂದರು. ತಾವು ಮಾಡಿದ ಕೆಟ್ಟ ನೀತಿಯ ಸಲುವಾಗಿ ತಮ್ಮಿಬ್ಬರು ನಾಯಕರನ್ನು ಕಳೆದುಕೊಳ್ಳಬೇಕಾಯಿತು. ಇನ್ನೇನು ಆಗಬೇಕೆಂದು ನೀವು ಬಯಸಿದ್ದೀರಾ ಎಂದು ಕಾಂಗ್ರೆಸ್ಸಿಗರಿಗೆ ಪ್ರಶ್ನಿಸಿ, ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರರು. ಇತಿಹಾಸದಿಂದ ಪಾಠ ಕಲಿಯದವರು ಬದುಕಿನಲ್ಲಿ ಮುಂದೆ ಹೋಗಲು ಸಾಧ್ಯವಿಲ್ಲ. ಕಾಂಗ್ರೆಸ್ಸಿನವರು ಇತಿಹಾಸವನ್ನು ಗಮನದಲ್ಲಿಟ್ಟುಕೊಳ್ಳಿ. ನೀವು ಪಾಠ ಕಲಿಯಿರಿ. ಇಲ್ಲವಾದರೆ ದೇಶ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಪಾಪದ ಕೆಲಸಕ್ಕೆ ಮುಂದಾಗಬೇಡಿ ಎಂದರು.

    ಇದೇ ವೇಳೆ, ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮನಸ್ಸಿಗೆ ಮೊಳೆ ಹೊಡೆಯುವ ವಿಚಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಶ್ರೇಯಸ್ಸಲ್ಲ. ಕುಮಾರಸ್ವಾಮಿ ಸಣ್ಣ ಮಟ್ಟಕ್ಕೆ ಆಲೋಚನೆ ಮಾಡುತ್ತಾರೆ ಅಂತ ನನಗೆ ಅನಿಸಿರಲಿಲ್ಲ. ಎಲ್ಲಿ, ಯಾರು ಮೊಳೆ ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಎಲ್ಲಾ ಜಾತಿಯ ಜನರು ರಾಮ ಮಂದಿರ ನಿರ್ಮಾಣಕ್ಕೆ ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡುತ್ತಿದ್ದಾರೆ. ಜನರು ಭಕ್ತಿಯಿಂದ ಕೊಡುವ ಹಣ ಬೇಕೇ ವಿನಾ ದಬ್ಬಾಳಿಕೆಯಿಂದ ಪಡೆಯುವಂತಹದ್ದಲ್ಲ. ಸುಳ್ಳು ಹೇಳುವ ಕೆಲಸ ಖಂಡನೀಯ ಎಂದು ಹೆಚ್.ಡಿ.ಕೆ ವಿರುದ್ಧ ಕಿಡಿಕಾರಿದರು.

    ಇದೇ ವೇಳೆ ಸಚಿವ ಉಮೇಶ್ ಕತ್ತಿ ಹೇಳಿಕೆಯನ್ನ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದು, ಇದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ತೆಗೆದುಕೊಂಡ ನಿಲುವು. ಈ ನಿಯಮದ ಪುನರುಚ್ಛಾರವನ್ನು ಈಗಿನ ಸಚಿವರು ಮಾಡಿದ್ದಾರೆ. ನಿಯಮ ಮಾಡಬೇಕಾದರೆ ಕಾಂಗ್ರೆಸ್ಸಿನವರು ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ರಾ ಎಂದು ಪ್ರಶ್ನಿಸಿದ್ದಾರೆ. ಈಗ ಅರೆ ಪ್ರಜ್ಞಾವಸ್ಥೆಯಿಂದ ಹೊರ ಬಂದಿದ್ದಾರೆಯೇ ಎಂದು ಕಾಂಗ್ರೆಸ್ಸಿಗರ ವಿರುದ್ಧ ಕಿಡಿಕಾರಿದರು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟವಿದೆ. ಬಹುಶಃ ಗುದ್ದಾಟದ ಕಾರಣಕ್ಕೆ ಸಿದ್ದರಾಮಯ್ಯ ದೆಹಲಿಗೆ ಭೇಟಿ ಕೊಡುತ್ತಿರಬಹುದು. ನಾವು ಸಿದ್ದರಾಮಯ್ಯ ಪರವೂ ಅಲ್ಲ. ಡಿ.ಕೆ.ಶಿವಕುಮಾರ್ ಪರವೂ ಅಲ್ಲ. ನಾವು ಕಾಂಗ್ರೆಸ್ ವಿರುದ್ಧ. ಅವರು ಏನು ಮಾಡಿದರೂ ನಮಗೆ ಸಂಬಂಧ ಇಲ್ಲ ಎಂದು ಗುಡುಗಿದರು.

  • ಸರ ಕಳೆದುಕೊಂಡವರು ಕರೆ ಮಾಡಿ- ಆಟದ ಮೈದಾನದಲ್ಲಿ ವಿಭಿನ್ನ ಬೋರ್ಡ್

    ಸರ ಕಳೆದುಕೊಂಡವರು ಕರೆ ಮಾಡಿ- ಆಟದ ಮೈದಾನದಲ್ಲಿ ವಿಭಿನ್ನ ಬೋರ್ಡ್

    ಚಿಕ್ಕಮಗಳೂರು: ನಿಮ್ಮ ಸರ ನನ್ನ ಬಳಿ ಇದೆ. ಸರ ನಿಮ್ಮದೇ ಆಗಿದ್ದರೆ ಕಳೆದುಕೊಂಡವರು ನನಗೆ ಕರೆ ಮಾಡಿ ಎಂದು ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಸರ ಸಿಕ್ಕವರು ಹಾಕಿರುವ ವಿಭಿನ್ನ ನಾಮಫಲಕ ಜನಮೆಚ್ಚುಗೆ ಪಾತ್ರವಾಗಿದೆ.

    ಚಿಕ್ಕಮಗಳೂರು ತಾಲೂಕಿನ ಬೊಗಸೆ ಗ್ರಾಮದ ವಿನೋದ್ ಎಂಬವರಿಗೆ ಇದೇ ಫೆಬ್ರವರಿ 6ರಂದು ನಗರದ ಆಟದ ಮೈದಾನದಲ್ಲಿ ಸುಮಾರು 11 ಗ್ರಾಂ ಚಿನ್ನದ ಸರ ಸಿಕ್ಕಿತ್ತು. ಸರ ಸಿಕ್ಕಿದ ದಿನವೇ ಆಟದ ಮೈದಾನದ ಸುತ್ತ ಹಾಗೂ ಬೋಳರಾಮೇಶ್ವರ ದೇವಾಲಯದ ಅಕ್ಕಪಕ್ಕ ಸೇರಿ ಸುಮಾರು 15 ಕಡೆ ಚಿನ್ನದ ಸರ ಸಿಕ್ಕಿದೆ. ಕಳೆದುಕೊಂಡವರು ಕರೆ ಮಾಡಿ ಎಂದು ಬೋರ್ಡ್ ಹಾಕಿದ್ದರು.

    ಏಳು ದಿನಗಳ ಬಳಿಕ ಬೋರ್ಡ್ ನೋಡಿ ಸರ ಕಳೆದುಕೊಂಡ ಪೊಲೀಸರ ಹೆಂಡತಿ ವಿನೋದ್ ಅವರಿಗೆ ಕರೆ ಮಾಡಿ ಅದು ನನ್ನ ಸರ ಎಂದು ಹೇಳಿದ್ದಾರೆ. ಅವರಿಂದ ಸ್ಪಷ್ಟನೆ ಪಡೆಯಲು ಹಲವು ರೀತಿಯ ಪ್ರಶ್ನೆಗಳನ್ನೂ ಕೇಳಿದ್ದಾರೆ. ಎಷ್ಟು ಗ್ರಾಂ ಇತ್ತು, ಮಾರ್ಕ್ ಎಲ್ಲಿತ್ತು ಎಂದು ಪ್ರಶ್ನೆ ಕೇಳಿದ್ದಾರೆ. ಸರ ಕಳೆದುಕೊಂಡ ಪೊಲೀಸರ ಹೆಂಡತಿ ಎಲ್ಲಾ ಮಾಹಿತಿ ನೀಡಿದ್ದಾರೆ. ಜೊತೆಗೆ ಸರ ಖರೀದಿ ಮಾಡಿದ ಬಗ್ಗೆ ಎಲ್ಲಾ ದಾಖಲೆಗಳನ್ನೂ ಕೊಡುವುದಾಗಿ ಹೇಳಿದ್ದಾರೆ. ಆಗ ಸರ ಅವರದ್ದೇ ಎಂದು ಕನ್ಫರ್ಮ್ ಆದ ಹಿನ್ನೆಲೆ ಅವರಿಗೆ ಸರವನ್ನ ಹಿಂದಿರುಗಿಸಲು ವಿನೋದ್ ಮುಂದಾಗಿದ್ದಾರೆ.

    ಸಿಕ್ಕ ಚಿನ್ನದ ಸರವನ್ನ ಅವರಿಗೆ ಹಿಂದಿರುಗಿಸಲು ವಿನೋದ್ ಮಾಡಿದ ರೀತಿಯ ಜನ ಕೂಡ ಶ್ಲಾಘನೆ ವ್ಯಕ್ತಪಡಿಸಿ, ಯುವಕ ವಿನೋದ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಸರ ಕಳೆದುಕೊಂಡವರು ಕೂಡ ವಿನೋದ್‍ಗೆ ಅಭಿನಂದನೆ ಸಲ್ಲಿಸಿದ್ದಾರೆ.

  • ಉಂಗುರದ ಬದಲು ಭಾರತಾಂಬೆ ಫೋಟೋ ಬದಲಿಸಿಕೊಂಡ ಜೋಡಿ

    ಉಂಗುರದ ಬದಲು ಭಾರತಾಂಬೆ ಫೋಟೋ ಬದಲಿಸಿಕೊಂಡ ಜೋಡಿ

    – ಟೆಕ್ಕಿಗಳಿಂದ ಅರ್ಥಪೂರ್ಣ ನಿಶ್ಚಿತಾರ್ಥ

    ಚಿಕ್ಕಮಗಳೂರು: ವಿಶ್ವವೇ ಪ್ರೇಮಿಗಳ ದಿನಾಚರಣೆಯ ಸಂಭ್ರಮದಲ್ಲಿದ್ದರೆ ಭಾರತ ಮಾತ್ರ ಪ್ರೇಮಿಗಳ ದಿನಾಚರಣೆಯ ಜೊತೆ ಪುಲ್ವಾಮ ದಾಳಿಯಲ್ಲಿ ಮೃತ ಯೋಧರ ದಿನಾಚರಣೆಯನ್ನೂ ಆಚರಿಸುತ್ತಿದೆ. ಈ ಮಧ್ಯೆ ನವಜೀವನಕ್ಕೆ ಕಾಲಿಡುತ್ತಿರುವ ಜೋಡಿ ನಿಶ್ಚಿತಾರ್ಥದ ವೇಳೆ, ಉಗುರು ಬದಲಿಸಿಕೊಳ್ಳುವ ಬದಲು ಭಾರತಾಂಬೆಯ ಭಾವಚಿತ್ರವನ್ನ ಬದಲಿಸಿಕೊಳ್ಳುವ ನಿಶ್ಚಿತಾರ್ಥ ಆಚರಿಸಿಕೊಂಡಿದ್ದಾರೆ.

    ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಹಿರೇಮಗಳೂರಿನಲ್ಲಿ ರವೀಶ್ ಪಟೇಲ್ ಹಾಗೂ ವಿದ್ಯಾಶ್ರೀ ಎಂಬವರು ನಿಶ್ಚಿತಾರ್ಥ ಆಚರಿಸಿಕೊಳ್ಳುತ್ತಿದ್ದರು. ಈ ವೇಳೆ ಪರಸ್ಪರ ಉಂಗುರದ ಬದಲು ಭಾರತಾಂಬೆಯ ಫೋಟೋವನ್ನ ಬದಲಿಸಿಕೊಂಡು ವಿಭಿನ್ನವಾಗಿ ನಿಶ್ಚಿತಾರ್ಥ ಆಚರಿಸಿಕೊಂಡಿದ್ದಾರೆ. ವಿದ್ಯಾಶ್ರೀ ಮೂಲತಃ ಚಿಕ್ಕಮಗಳೂರಿನ ಹುಡುಗಿ. ಹಿರೇಮಗಳೂರು ಪೈ ಕಲ್ಯಾಣ ಮಂಟದ ಹಿಂಭಾಗದ ವಧುವಿನ ನಿವಾಸದಲ್ಲಿ ಈ ಅಪರೂಪ ಹಾಗೂ ಅರ್ಥಪೂರ್ಣ ನಿಶ್ಚಿತಾರ್ಥ ನಡೆದಿದೆ.

    ರವೀಶ್ ಹಾಗೂ ವಿದ್ಯಾಶ್ರೀ ಇಬ್ಬರೂ ಬೆಂಗಳೂರಿನಿಲ್ಲಿ ಸಾಫ್ಟ್‍ವೇರ್ ಉದ್ಯೋಗಿಗಳಾಗಿದ್ದು, ಪ್ರೇಮಿಗಳ ದಿನವನ್ನ ಭಾರತಾಂಬೆಯ ದಿನವೆಂದು ವಿಭಿನ್ನವಾಗಿ ನಿಶ್ಚಿತಾರ್ಥ ಆಚರಿಸಿಕೊಂಡಿದ್ದಾರೆ. ಈ ವೇಳೆ ರವೀಶ್ ಹಾಗೂ ವಿದ್ಯಾಶ್ರೀ ಕುಟುಂಬದವರು ಜೊತೆಗಿದ್ದು ಮಕ್ಕಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಅಪರೂಪ ಹಾಗೂ ಅರ್ಥಪೂರ್ಣ ಕಾರ್ಯಕ್ರಮಕ್ಕೆ ನಾಗಲಕ್ಷ್ಮಿ, ವೆಂಕಟೇಶ್, ಉಷಾ, ಕೇಶವಮೂರ್ತಿ, ಸ್ನೇಹಿತರು ಹಾಗೂ ಬಂಧುಮಿತ್ರರು ಸಾಕ್ಷಿಯಾಗಿದ್ದರು.

  • ಅತ್ಯಾಚಾರಗೈದು ವೀಡಿಯೋ ಶೇರ್ – ಶೃಂಗೇರಿ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೇಸ್

    ಅತ್ಯಾಚಾರಗೈದು ವೀಡಿಯೋ ಶೇರ್ – ಶೃಂಗೇರಿ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೇಸ್

    ಚಿಕ್ಕಮಗಳೂರು: ಶೃಂಗೇರಿಯಲ್ಲಿ 15 ವರ್ಷದ ಅಪ್ರಾಪ್ತೆ ಮೇಲೆ 30ಕ್ಕೂ ಹೆಚ್ಚು ಜನ ಅತ್ಯಾಚಾರಗೈದ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಶಾಲೆಗೆ ಹೋಗುತ್ತಿದ್ದ 15 ವರ್ಷದ ಬಾಲಕಿಯನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ ಹೆದರಿಸಿ ಮನೆಗೆ ಕರೆದೊಯ್ದು ಅತ್ಯಾಚಾರಗೈದು ವೀಡಿಯೋ ಮಾಡಿಕೊಂಡು ಸ್ನೇಹಿತರಿಗೆ ಶೇರ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

    ಜಿಲ್ಲೆಯ ಗ್ರಾಮೀಣ ಭಾಗದ ಕುಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಶೃಂಗೇರಿ ಹಾಗೂ ಈ ಘಟನೆಯಿಂದ ಜಿಲ್ಲೆಯ ಮಲೆನಾಡು ಭಾಗದ ಜನ ಆತಂಕಕ್ಕೀಡಾಗಿ, ಮಕ್ಕಳನ್ನು ಹೇಗೆ ಶಾಲೆಗೆ ಕಳಿಸುವುದು ಎಂದು ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ.

    ಶಾಲೆಗಾಗಿ 4 ಕಿ.ಮೀ. ನಡಿಗೆ

    ಎಂಟನೇ ತರಗತಿ ಓದುತ್ತಿದ್ದ ಬಾಲಕಿ ಶಾಲೆಗಾಗಿ ಪ್ರತಿ ದಿನ ನಾಲ್ಕು ಕಿ.ಮೀ. ನಡೆದು ಬರುತ್ತಿದ್ದಳು. ಹೀಗೆ ಆ ದಿನ ಶಾಲೆಗೆ ಬರುವಾಗ ಅದೇ ಊರಿನ ಯುವಕ ಅಡ್ಡಗಟ್ಟಿ ಮನೆಗೆ ಕರೆದು ಹೆದರಿಸಿ ಕೃತ್ಯ ಎಸಗಿ ವಿಡಿಯೋ ಹಾಗೂ ಫೋಟೋ ಮಾಡಿಕೊಂಡು ಸ್ನೇಹಿತರಿಗೆ ಶೇರ್ ಮಾಡಿದ್ದ. ಕರೆದಾಗ ಬರಬೇಕು. ಇಲ್ಲವಾದರೆ, ಸಾಮಾಜಿಕ ಜಾಲತಾಣಕ್ಕೆ ಹಾಕುವುದಾಗಿ ಹೆದರಿಸಿದ್ದಾನೆ. ಬಾಲಕಿ ನಡೆದ ವಿಷಯನ್ನು ಪೋಷಕರಿಗೆ ತಿಳಿಸಿದ್ದು ನಂತರ ಸಂಬಂಧಪಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೊ ಶೇರ್ ಮಾಡಿದ್ದ ವಿಡಿಯೋವನ್ನು ನೋಡಿದ್ದ ಗೆಳೆಯರನ್ನ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಐದು ತಿಂಗಳ ಹಿಂದೆ 15 ವರ್ಷದ ಅಪ್ರಾಪ್ತೆ ಮೇಲೆ 30ಕ್ಕೂ ಹೆಚ್ಚು ಜನ ಅತ್ಯಾಚಾರಗೈದ ಸುದ್ದಿ ಕೇಳಿಯೇ ಮಲೆನಾಡಿಗರು ಬೆಚ್ಚಿ ಬಿದ್ದಿದ್ದರು. ಶೃಂಗೇರಿ ಪ್ರಕರಣ ಮಾಸುವೇ ಮುನ್ನವೇ ಮತ್ತೊಂದು ಅದೇ ರೀತಿಯ ಪ್ರಕರಣ ನಡೆದಿರುವುದು ಜಿಲ್ಲೆಯ ಜನರನ್ನು ದೃತಿಗೇಡುವಂತೆ ಮಾಡಿದೆ.

    ಭವಿಷ್ಯದ ಬಗ್ಗೆ ಮಲೆನಾಡಿಗರು ಕಂಗಾಲು 

    ಜಿಲ್ಲೆಯ ಮಲೆನಾಡು ಭಾಗ ಬಹುತೇಕ ಬೆಟ್ಟಗುಡ್ಡಗಳಿಂದ ಕೂಡಿದೆ. ಕುಗ್ರಾಮಗಳೇ ಹೆಚ್ಚು. ಇಲ್ಲಿನ ಬಹುತೇಕ ಭಾಗದ ಮಕ್ಕಳು ಶಾಲೆಗೆ ಬರಬೇಕೆಂದರೆ ಕನಿಷ್ಟ 2-3 ಕಿ.ಮೀ ನಡೆಯಬೇಕು. ಮೇಲಿಂದ ಮೇಲೆ ಇಂತಹ ಪ್ರಕರಣ ನಡೆಯುತ್ತಿದ್ದು ಮಲೆನಾಡಿಗರು ಭವಿಷ್ಯದ ಬಗ್ಗೆ ಭಯಗೊಂಡಿದ್ದಾರೆ. ಮಕ್ಕಳನ್ನು ಹೇಗೆ ಶಾಲೆಗೆ ಕಳಿಸೋದು ಎಂದು ಕಂಗಾಲಾಗಿದ್ದಾರೆ. ಎರಡು ಪ್ರಕರಣಗಳಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಯಾವುದೇ ಮುಲಾಜಿಗೂ ಒಳಗಾಗದೆ ಆರೋಪಿಗಳಿಗೆ ತಕ್ಕ ಶಾಸ್ತಿ ಮಾಡಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.

  • 500 ವರ್ಷಗಳಿಂದ ಕಾಫಿನಾಡಲ್ಲಿ ಸೃಷ್ಠಿಕರ್ತನೇ ಕಬ್ಬಿಣದ ಸರಪಳಿಯಲ್ಲಿ ಬಂಧಿ

    500 ವರ್ಷಗಳಿಂದ ಕಾಫಿನಾಡಲ್ಲಿ ಸೃಷ್ಠಿಕರ್ತನೇ ಕಬ್ಬಿಣದ ಸರಪಳಿಯಲ್ಲಿ ಬಂಧಿ

    ಚಿಕ್ಕಮಗಳೂರು: 2036 ಎಕರೆ ನೀರನ್ನು ಮೂರೇ ಬೊಗಸೆಗೆ ಕುಡಿದು ಖಾಲಿ ಮಾಡುತ್ತಾನೆಂದು ಸೃಷ್ಠಿಕರ್ತ ಕೆಂಚರಾಯ ಸ್ವಾಮಿಯನ್ನೇ 500 ವರ್ಷಗಳಿಂದ ಕಬ್ಬಿಣದ ಸರಪಳಿಯಿಂದ ಬಂಧಿಸಿರುವ ಅಪರೂಪದ ನಂಬಿಕೆಗೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ದೇವಾಲಯ ಸಾಕ್ಷಿಯಾಗಿದೆ.

    ಸಖರಾಯಪಟ್ಟಣದ ಸರಪಳಿ ಕೆಂಚರಾಯ ಸ್ವಾಮಿ ಅಂದರೆ ಸ್ಥಳೀಯರಿಗೆ ಅಷ್ಟು ಭಯ, ಭಕ್ತಿ. ಪಕ್ಕದ ಏಳು ಗುಡ್ಡಗಳ ಮಧ್ಯದ ಅಯ್ಯನಕೆರೆ ನೀರು ಈ ಕೆಂಚರಾಯ ಸ್ವಾಮಿಗೆ ಒಂದು ಹೊತ್ತಿಗೂ ಸಾಲೋದಿಲ್ಲ. ಮೂರೇ ಬೊಗಸೆಗೆ ಇಡೀ ಕೆರೆ ನೀರನ್ನು ಖಾಲಿ ಮಾಡುತ್ತಾನೆ ಎಂಬುದು ನಂಬಿಕೆ. ಹಾಗಾಗಿ ಇಲ್ಲಿಯ ಜನ ಈ ದೇವರಿಗೆ ಹೆದರಿ ಕಳೆದ 500 ವರ್ಷಗಳಿಂದ ದೇವರ ಮೂರ್ತಿಯನ್ನು ಕಬ್ಬಿಣದ ಸರಪಳಿಯಿಂದ ಬಂಧಿಸಿದ್ದಾರೆ.

    ಸುಮಾರು ಐದು ಶತಮಾನಗಳ ಹಿಂದೆ ಈ ಕೆಂಚರಾಯ ಬಳ್ಳಾರಿಯಿಂದ ಬಂದು ನೆಲೆಯೂರಲು ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಊರೂರು ಸುತ್ತಿ ನೆಲೆಯೂರಲು ದೇವರ ಬಳಿ ಜಾಗ ಕೇಳಿ ಕೊನೆಗೆ ಸಖರಾಯಪಟ್ಟಣದ ಸಗನಿ ರಂಗನಾಥ ಸ್ವಾಮಿ ಬಳಿ ಬಂದಿದ್ದನಂತೆ. ಆಗ ರಂಗನಾಥ ಸ್ವಾಮಿ ನನಗೆ ಏನು ಕೊಡುತ್ತೀಯಾ ಎಂದು ಕೇಳಿದ್ದಕ್ಕೆ ನೀನು ಏನು ಕೇಳಿದರು ಕೊಡುತ್ತೇನೆ ಎಂದಿದ್ದನಂತೆ ಕೆಂಚರಾಯ. ಆಗ ರಂಗನಾಥ ಸ್ವಾಮಿ ದಾರಿಯಲ್ಲಿ ಹೋಗುತ್ತಿದ್ದ ಆನೆ ಕೊರಳಲ್ಲಿದ್ದ ಗಂಟೆ ಬೇಕು ಎಂದಿದ್ದನಂತೆ. ಗಂಟೆ ತಂದು ಕೊಟ್ಟರೆ ಅಡಿಕೆ ಮರದ ಉದ್ದ ಮುದ್ದೆ. ತೆಂಗಿನ ಮರದ ಉದ್ದ ಅನ್ನ, ತಾಳೆ ಮರದ ಉದ್ದ ಮಾಂಸ, ಬಾಳೆ ಮರದ ಉದ್ದ ಹೆಂಡ ಕೊಡುತ್ತೇನೆ ಎಂದಿದ್ದನಂತೆ. ಆದರೆ ಆನೆ ಕೊರಳಲ್ಲಿದ್ದ ಗಂಟೆ ತಂದು ಕೊಟ್ಟರೂ ರಂಗನಾಥ ಸ್ವಾಮಿ ಹೇಳಿದ್ದನ್ನು ಕೊಡಲಿಲ್ಲ. ಅದಕ್ಕೆ ಪಕ್ಕದಲ್ಲಿ ತುಂಬಿದ್ದ ಕೆರೆ ನೀರನ್ನು ಮೂರೇ ಬೊಗಸೆಗೆ ಕುಡಿದು ಖಾಲಿ ಮಾಡಿದ್ದನಂತೆ. ಆಗ ದನಕರು-ಹೊಲಗದ್ದೆ-ಜನರಿಗೆ ನೀರಿನ ಅಭಾವ ಎದುರಾಗಿತ್ತು. ಅದಕ್ಕಾಗಿ ಅಂದಿನಿಂದ ಇಂದಿನವರೆಗೂ ದೇವರನ್ನು ಕಬ್ಬಿಣದ ಸರಪಳಿಯಿಂದ ಬಂಧಿಸಿದ್ದಾರೆ ಎಂಬುದು ಪ್ರತೀತಿ.

    ರಂಗನಾಥ ಸ್ವಾಮಿಯೂ ದಿನಕ್ಕೆ ಮೂರು ಬಾರಿ ಸ್ನಾನ ಮಾಡುತ್ತಾನೆ. ಆತನ ಸ್ನಾನ, ಪೂಜೆಗೂ ಇದೇ ನೀರು ಬೇಕು. ಕೆರೆಯಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದರಿಂದ ರಂಗನಾಥ ಸ್ವಾಮಿ ಪೂಜೆಗೂ ನೀರು ಇಲ್ಲದಂತಾಯ್ತು. ಆಗ ರಂಗನಾಥ ಸ್ವಾಮಿಯೇ ಈ ಕೆಂಚರಾಯನನ್ನ ಹೀಗೆ ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿದ್ದಾನೆ ಅನ್ನೋದು ಸ್ಥಳೀಯರ ನಂಬಿಕೆ. ಅದಕ್ಕಾಗಿ ಇಲ್ಲಿನ ಜನ ಕಳೆದ ಐನೂರು ವರ್ಷಗಳಿಂದ ದೇವರನ್ನು ಬಂಧಿಸಿದ್ದು, ಒಂದು ವೇಳೆ ದೇವರನ್ನು ಬಂಧನದಿಂದ ಮುಕ್ತ ಮಾಡಿದರೆ ಅಯ್ಯನಕೆರೆ ನೀರು ಒಂದೇ ದಿನದಲ್ಲಿ ಖಾಲಿಯಾಗುತ್ತದೆ ಎನ್ನುವುದು ಗ್ರಾಮಸ್ಥರ ಭಯವಾಗಿದೆ.

    ದಿನಂ ಪ್ರತಿ ರಂಗನಾಥ ಸ್ವಾಮಿಯನ್ನು ನೋಡಲು ಬರುವ ಭಕ್ತರು ರಂಗನಾಥ ಸ್ವಾಮಿಗೆ ಪೂಜೆ ಮಾಡಿಸಿ ಹಣ್ಣು-ತುಪ್ಪ ನೈವೆದ್ಯ ಮಾಡಿದರೆ, ಕೆಂಚರಾಯನಿಗೆ ಕುರಿ, ಕೋಳಿಯನ್ನು ಬಲಿಕೊಟ್ಟು ಹೊಟ್ಟೆ ತುಂಬಿಸುತ್ತಿದ್ದಾರೆ. ದೇವರ ಮೈಮೇಲಿನ ಕಬ್ಬಿಣದ ಸರಪಳಿಯನ್ನು ಕಳೆದ ಐನೂರು ವರ್ಷಗಳಿಂದ ಒಮ್ಮೆಯೂ ತೆಗೆದಿಲ್ಲವಂತೆ. ಈ ಕೆಂಚರಾಯ ಸ್ವಾಮಿ ಬರೀ ಊಟಕ್ಕೆ ಮಾತ್ರ ಹೆಸರಾಗಿಲ್ಲ. ಮಕ್ಕಳಾಗದವರು ರಂಗನಾಥ ಸ್ವಾಮಿ ಗುಡ್ಡಕ್ಕೆ ಹೋಗಿ ಪೂಜೆ ಮಾಡಿ ಬಂದರೆ ಮಕ್ಕಳಾಗುತ್ತದೆ ಎನ್ನುವ ನಂಬಿಕೆಯೂ ಸ್ಥಳೀಯರಲ್ಲಿ ಅಚಲವಾಗಿದೆ.

  • ಪಟಾಕಿ ತರುವಾಗ ಅಪಘಾತ – ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ

    ಪಟಾಕಿ ತರುವಾಗ ಅಪಘಾತ – ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ

    ಚಿಕ್ಕಮಗಳೂರು: ಮನೆಗೆ ಪಟಾಕಿ ತೆಗೆದುಕೊಂಡು ವಾಪಸ್ ಹಿಂದಿರುಗುವಾಗ ಬೈಕಿಗೆ ಜೀಪ್ ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.

    ಮೃತನನ್ನು 25 ವರ್ಷದ ಅರುಣ್ ಎಂದು ಗುರುತಿಸಲಾಗಿದೆ. ಬಾವಿಕೆರೆಯಿಂದ ಸುಮಾರು 8 ಕಿ.ಮೀ ದೂರದ ರಂಗೇನಹಳ್ಳಿಗೆ ಪಟಾಕಿ ತರಲು ಹೋದವನು ಇನ್ನೇನು ಬಂದೇ ಬಿಟ್ಟ ಎಂದು ಮನೆಯವರು ದಾರಿ ಕಾಯುತ್ತಿದ್ದರು. ಆದರೆ ಅರುಣ್ ದಾರಿ ಎದುರು ನೋಡುತ್ತಿದ್ದ ಮನೆಯವರಿಗೆ ಬಿಗ್ ಶಾಕ್ ಕಾದಿತ್ತು. ಬೆಳಗ್ಗೆಯಿಂದ ಮನೆಯಲ್ಲಿದ್ದವನು ಸಂಜೆ ಪಟಾಕಿ ತರಲು ಹೋಗಿ ವಾಪಸ್ ಬರಲಿಲ್ಲ ಎಂಬ ವಿಷಯ ಕೇಳಿ ಆತನ ಮನೆಯಲ್ಲಿ ಹಬ್ಬದ ಸಂಭ್ರಮವೇ ಇಲ್ಲದಂತಾಗಿತ್ತು.

    ಮೃತ ಅರುಣ್ ಬಾವಿಕೆರೆ ಗ್ರಾಮದಿಂದ ರಂಗೇನಹಳ್ಳಿಗೆ ಪಟಾಕಿ ತರಲು ತನ್ನ ಸ್ನೇಹಿತ ಕಿರಣ್ ಜೊತೆ ಹೋಗಿದ್ದ. ಪಟಾಕಿಯನ್ನು ತೆಗೆದುಕೊಂಡು ವಾಪಸ್ ಬರುವಾಗ ಬಾವಿಕೆರೆ ಸಮೀಪ ಎದುರಿನಿಂದ ಬಂದ ಜೀಪ್ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅರುಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರ ಕಿರಣ್‍ಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಕಿರಣ್ ಸ್ಥಿತಿ ಕೂಡ ಚಿಂತಾಜನಕವಾಗಿದೆ. ಕಿರಣ್ ಕೂಡ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ದೀಪಾವಳಿ ಹಬ್ಬಕ್ಕಾಗಿ ಊರಿಗೆ ಬಂದಾಗ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 90 ಮನೆ, 150 ಜನ ಇಡೀ ಹಳ್ಳಿಗೆ ಒಂದೇ ಟಿವಿ

    90 ಮನೆ, 150 ಜನ ಇಡೀ ಹಳ್ಳಿಗೆ ಒಂದೇ ಟಿವಿ

    – ಒಂದೊಂದು ದಿನ ಒಂದೊಂದು ಭಾಷೆ

    ಚಿಕ್ಕಮಗಳೂರು: ಮನೆಗೆ ಒಂದು ಟಿವಿ ಇದ್ದರೆ ಜಗಳ ನಡೆಯುವುದು ಸಾಮಾನ್ಯ. ಒಬ್ಬರು ನ್ಯೂಸ್ ನೋಡಬೇಕು ಅಂತಾರೆ. ಮತ್ತೊಬ್ಬರು ಸಿನಿಮಾ ಬೇಕು ಅಂತಾರೆ. ಮಗದೊಬ್ಬರು ಧಾರಾವಾಹಿ ಬೇಕು ಅಂತಾರೆ. ಕೆಲವರು ಸಿಟ್ಟಾಗಿ ರೂಂ ಸೇರುತ್ತಾರೆ. ಆದರೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಮುಖ ಸಮೀಪದ ಗೋಪಾಲ ಕಾಲೋನಿಯಲ್ಲಿ ಇಡೀ ಗ್ರಾಮಕ್ಕೆ ಇರೋದೊಂದೆ ಟಿವಿ.

    ಆಶ್ಚರ್ಯ ಅನ್ನಿಸಿದರು ನಂಬಲೇಬೇಕು. ಇಲ್ಲಿ ಸುಮಾರು 80-90 ಮನೆಗಳಿವೆ. 150 ಜನರಿದ್ದಾರೆ. ಈ 150 ಜನರಿಗೆ ಇರುವುದೊಂದೆ ಟಿವಿ. ಅದರಲ್ಲೇ ಎಲ್ಲರೂ ನೋಡಬೇಕು. ಅದು ಕೂಡ ಸಂಜೆ ಆರಕ್ಕೆ ಬಂದು ಬೆಳಗ್ಗೆ ಆರಕ್ಕೆ ಹೋಗೋ ಕರೆಂಟ್‍ನಲ್ಲಿ. ಈ ಗ್ರಾಮದಲ್ಲಿ ಕರೆಂಟ್ ಕೂಡ ಇಲ್ಲ. ಇಂದಿಗೂ ಇಲ್ಲಿ ಸಿಮೇಎಣ್ಣೆ ದೀಪದ ಬೆಳಕಲ್ಲಿ ಜನ ಬದುಕುತ್ತಿದ್ದಾರೆ. ಬೀದಿ ದೀಪವನ್ನು ಸಮುದಾಯ ಭವನಕ್ಕೆ ಎಳೆದುಕೊಂಡಿದ್ದಾರೆ. ಅದರಲ್ಲೇ ಮೊಬೈಲ್ ಚಾರ್ಜ್, ಟಿವಿ ಎಲ್ಲಾ. ಆದರೆ ಇಡೀ ಊರಿಗೆ ಒಂದೇ ಒಂದು ಟಿವಿ ಇದ್ದರೂ ಕೂಡ ಒಂದೇ ಒಂದು ದಿನ ಕೂಡ ಗ್ರಾಮಸ್ಥರ ಮಧ್ಯೆ ಮನಸ್ತಾಪ ಬಂದಿಲ್ಲ ಅನ್ನೋದು ಮತ್ತೊಂದು ವಿಶೇಷ.

    ಗ್ರಾಮಸ್ಥರ ಮಧ್ಯ ಈ ಒಗ್ಗಟ್ಟಿಗೆ ಗ್ರಾಮಸ್ಥರೇ ಮಾಡಿಕೊಂಡ ನಿರ್ಣಯವೇ ಕಾರಣ. ಅದನ್ನ ಕೇಳಿದರೆ ನೀವು ಮತ್ತೊಮ್ಮೆ ಆಶ್ಚರ್ಯಚಕಿತರಾಗುತ್ತೀರಾ. ಯಾಕೆಂದರೆ ಬುಧವಾರ ಮಲೆಯಾಳಿಗಳು. ಗುರುವಾರ ತಮಿಳಿಗರು. ಶುಕ್ರವಾರ ಮುಸ್ಲಿಮರು. ಶನಿವಾರ-ಭಾನುವಾರ ಹಿಂದುಗಳು. ಸೋಮವಾರ ಧಾರಾವಾಹಿ. ಮಂಗಳವಾರ ಸಿನಿಮಾ. ಬುಧವಾರ ಮತ್ತದೆ ರೊಟೀನ್. ಭಾರತದ ಕ್ರಿಕೆಟ್ ಮ್ಯಾಚ್ ಇದ್ದರೆ ಯಾರೂ ನೋಡುವಂತಿಲ್ಲ. ಹುಡುಗರು ಕ್ರಿಕೆಟ್ ನೋಡುತ್ತಾರೆ. ಅಷ್ಟೆ ಅಲ್ಲದೆ ಇವರು ದಿನಕ್ಕೆ ಟಿವಿ ನೋಡೋದು ಕೇವಲ ನಾಲ್ಕೈದು ಗಂಟೆಯಷ್ಟೇ. ಸಂಜೆ ಆರರಿಂದ ರಾತ್ರಿ ಹತ್ತು ಅಥವಾ ಹನ್ನೊಂದು ಗಂಟೆವರೆಗೆ ಅಷ್ಟೇ. ಇರೋದು ಎರಡೇ ಪ್ಲಗ್. ಒಂದು ಟಿವಿಗೆ ಮತ್ತೊಂದು ಮೊಬೈಲ್‍ಗೆ. ಒಬ್ಬರಾದ ಮೇಲೆ ಒಬ್ಬರು ಮೊಬೈಲ್ ಚಾರ್ಜ್‍ಗೆ ಹಾಕಿಕೊಳ್ಳಬೇಕು. ಕಳೆದ ಒಂದೂವರೆ ದಶಕದಿಂದಲೂ ಇವರ ಟಿವಿ ಬದುಕು ಹೀಗೆ ಇರೋದು.

    ಇಲ್ಲಿ ವಾಸವಿರೋರೆಲ್ಲಾ ಕುದುರೆಮುಖ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು. ಬಹುತೇಕರು ಹುಟ್ಟಿ ಬೆಳೆದಿರೋದು ಇದೇ ಊರಲ್ಲಿ. ಕಂಪನಿ ಕ್ಲೋಸ್ ಆದ ಮೇಲೆ ಸುತ್ತಮುತ್ತಲಿನ ಹಳ್ಳಿ, ತೋಟಗಳಲ್ಲಿ ಕೆಲಸ ಮಾಡಿಕೊಂಡು ಇಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಪಡಿತರ ಚೀಟಿ ಪ್ರಕಾರ ಇಲ್ಲಿ 250 ಕುಟುಂಬಗಳು ವಾಸವಿವೆ. ಆದರೆ ಮಕ್ಕಳ ಓದು, ಕೂಲಿ, ಬದುಕಿನ ಅನಿವಾರ್ಯವಾಗಿ ಸುತ್ತಮುತ್ತಲಿನ ಊರುಗಳಲ್ಲಿ ವಾಸವಿದ್ದಾರೆ. ಇಲ್ಲಿ 80-90 ಕುಟುಂಬಗಳು ವಾಸವಿವೆ. ಕುದುರೆಮುಖ ಅಂದರೆ ಕೇಳೋದೆ ಬೇಡ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶ. ಇಲ್ಲಿ ವರ್ಷದಲ್ಲಿ ಸರಿಸುಮಾರು ಆರೇಳು ತಿಂಗಳು ಕರೆಂಟ್ ಇರಲ್ಲ. ಇದ್ದಾಗ ಸಂಜೆ ಆರರ ಬಳಿಕ ಬರುವ ಕರೆಂಟನ್ನೇ ಇವರು ನೆಚ್ಚಿಕೊಂಡಿದ್ದಾರೆ.

    ಆಗ ಸಂಜೆ ಆರರಿಂದ ರಾತ್ರಿ 10 ರಿಂದ 11 ಗಂಟೆವರೆಗೆ ಟಿವಿ ನೋಡುತ್ತಾರೆ. 2005 ರಿಂದ ಇವರ ಟಿವಿ ಬದುಕು ಹೀಗೆ ಇರೋದು. ಆದರೆ ಇಂದಿಗೂ ಗ್ರಾಮಸ್ಥರ ಮಧ್ಯೆ ಒಂದೇ ಒಂದು ಸಣ್ಣ ಮನಸ್ತಾಪ ಕೂಡ ಬಂದಿಲ್ಲ. ದುರಂತ ಅಂದರೆ, ಇದೀಗ ಈ ಟಿವಿ ಕೂಡ ಕೆಟ್ಟೋಗಿದೆ. ಈಗ ಇವರಿಗೆ ಕರೆಂಟ್ ಇದ್ದಾಗ ರಾತ್ರಿ ಚಾರ್ಚ್ ಆದ ಮೊಬೈಲ್ ಬದುಕಾಗಿದೆ. 2021ನೇ ಇಸವಿಯಲ್ಲಿ ಕರೆಂಟ್ ಇಲ್ಲದ ಗ್ರಾಮ ಅಂದರೆ ಇದೊಂದೆ ಅಂತ ನೋವಿನಿಂದ ಮಾತನಾಡುತ್ತಾರೆ ಇಲ್ಲಿನ ಜನ.

    ಇಲ್ಲಿನ ಜನ ಮೂಲಭೂತ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಆದರೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಈ ಊರನ್ನು ಎಂ.ಪಿ. ಅಥವಾ ಎಂ.ಎಲ್.ಎ. ಇವರಿಬ್ಬರೇ ಅಭಿವೃದ್ಧಿ ಮಾಡಬೇಕು. ಇವರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಲ್ಲ. ಆದರೆ ಶಾಸಕರು ಹಾಗೂ ಸಂಸದರಿಂದ ಯಾವುದೇ ಅಭಿವೃದ್ಧಿಯಾಗಿಲ್ಲ ಅಂತಾರೆ ಸ್ಥಳೀಯರು.