Tag: Chikmagalur

  • ಮಾಲೀಕನನ್ನು ಚಿರತೆ ಬಾಯಿಂದ ತಪ್ಪಿಸಿದ ಶ್ವಾನ

    ಮಾಲೀಕನನ್ನು ಚಿರತೆ ಬಾಯಿಂದ ತಪ್ಪಿಸಿದ ಶ್ವಾನ

    ಚಿಕ್ಕಮಗಳೂರು: ಮಾಲೀಕನ ಪಕ್ಕದಲ್ಲಿ ಮಲಗಿದ್ದ ನಾಯಿಯನ್ನು ಹಿಡಿಯಲು ಬಂದ ಚಿರತೆಯೊಂದು ವಿಫಲ ಯತ್ನ ನಡೆಸಿರೋ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಚೀರನಹಳ್ಳಿ ಗ್ರಾಮದ ರಾಜೀವ್ ಎಂಬವರ ಅಡಿಕೆ ಸುಲಿಯುವ ಮನೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ತರೀಕೆರೆ, ಕಡೂರು, ಬೀರೂರು ಹಾಗೂ ಅಜ್ಜಂಪುರ ಭಾಗದಲ್ಲಿ ಈಗ ಅಡಿಕೆ ಸುಲಿಯುವ ಕಾಲ. ಹೆಂಗಸರೆಲ್ಲಾ ಒಂದೆಡೆ ಕೂತು ಅಡಿಕೆ ಸುಲಿಯುವ ಜಾಗಕ್ಕೆ ಅಡಿಕೆ ಚೇಣಿ ಮನೆ ಅಂತಾರೆ. ಈ ಚೇಣಿ ಮನೆಯಲ್ಲಿ ಹಗಲಿರುಳು ಅಡಿಕೆ ಇರುವ ಕಾರಣ ಇಡೀ ರಾತ್ರಿ ಅಡಿಕೆಯ ಕಾಯುವಿಕೆಗಾಗಿ ಕೆಲಸಗಾರರು ಇರುತ್ತಾರೆ. ಇದೇ ರೀತಿ ಕಳೆದ ರಾತ್ರಿ ಅಡಿಕೆ ಮನೆ ಕಾಯಲು ಇಬ್ಬರು ಕಾರ್ಮಿಕರು ಇದ್ದು, ಈ ವೇಳೆ ಚಿರತೆ ಬಂದಿದೆ. ಅದು ಅಲ್ಲದೇ ಈ ಇಬ್ಬರು ಕಾರ್ಮಿಕರ ಪಕ್ಕದಲ್ಲಿ ನಾಯಿಯೊಂದು ಮಲಗಿತ್ತು. ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಸಾವು

    ನಾಯಿಯನ್ನು ಸೆರೆಹಿಡಿಯಲು ಚಿರತೆ ಸುಮಾರು ಹೊತ್ತು ಹೊಂಚು ಹಾಕಿದೆ. ನಿಧಾನವಾಗಿ ಹೋಗಿ ನಾಯಿಯನ್ನು ಕಚ್ಚಿ ಎಳೆದು ತರುವಷ್ಟರಲ್ಲಿ, ನಾಯಿ ಜೋರಾಗಿ ಕೂಗಿ ಚಿರತೆ ಬಾಯಿಂದ ತಪ್ಪಿಸಿಕೊಂಡಿದೆ. ಆಗ ಕೂಡಲೇ ಎಚ್ಚರಗೊಂಡ ಇಬ್ಬರು ಕೂಲಿ ಕಾರ್ಮಿಕರು ಚಿರತೆಯನ್ನು ಕಂಡು ಗಾಬರಿಯಿಂದ ಕೂಗಾಡಿದ್ದಾರೆ. ಕಾರ್ಮಿಕರು ಕೂಗಾಡುತ್ತಿದ್ದಂತೆ ಚಿರತೆಯೂ ಗಾಬರಿಬಿದ್ದು ಅಲ್ಲಿಂದ ಓಡಿದೆ.

    ಒಂದು ವೇಳೆ ಕಾರ್ಮಿಕರ ಜೊತೆ ನಾಯಿ ಇರದಿದ್ದರೆ ಬಹುಶಃ ಇಬ್ಬರು ಕಾರ್ಮಿಕರಲ್ಲಿ ಒಬ್ಬರು ಚಿರತೆ ಬಾಯಿಗೆ ಆಹಾರವಾಗುವ ಸಾಧ್ಯತೆ ಇತ್ತು. ಆದರೆ ನಾಯಿಯಿಂದ ಮಾಲೀಕನ ಪ್ರಾಣ ಉಳಿದಂತಾಗಿದೆ. ನಾಯಿಯ ಸೂಕ್ಷ್ಮ ಹಾಗೂ ಸಮಯ ಪ್ರಜ್ಞೆಯಿಂದ ತನ್ನ ಪ್ರಾಣ ಉಳಿಸಿಕೊಳ್ಳುವುದರ ಜೊತೆ ತನ್ನ ಮಾಲೀಕನ ಪ್ರಾಣವನ್ನೂ ಉಳಿಸಿದೆ. ಈ ಭಾಗಗಳಲ್ಲಿ ಕಳೆದ ಹಲವು ತಿಂಗಳಿಂದ ಚಿರತೆ ಕಾಟ ಯಥೇಚ್ಛವಾಗಿದೆ. ಕೂಡಲೇ ಅರಣ್ಯ ಅಧಿಕಾರಿಗಳು ಚಿರತೆಯನ್ನ ಸೆರೆ ಹಿಡಿದು ಕಾಡಿಗೆ ಬಿಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಚಿರತೆ ಭಯದಿಂದ ಈ ಭಾಗದ ಜನ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ‘ಚಿಣ್ಣರ ಧಾಮ’ – ಬೆ.ವಿಮಾನ ನಿಲ್ದಾಣ ಫೌಂಡೇಷನ್

  • ಹುಟ್ಟಿದಾಗಿನಿಂದಲೂ ಶಾಲಾ-ಕಾಲೇಜು ಮೆಟ್ಟಿಲು ಹತ್ತದ ಯುವತಿ ಪಿಯುಸಿ ಪಾಸ್

    ಹುಟ್ಟಿದಾಗಿನಿಂದಲೂ ಶಾಲಾ-ಕಾಲೇಜು ಮೆಟ್ಟಿಲು ಹತ್ತದ ಯುವತಿ ಪಿಯುಸಿ ಪಾಸ್

    – ಕೋಟಿ ಜನರಲ್ಲಿ ಒಬ್ಬರಿಗೆ ಬರುವ ಕಾಯಿಲೆಯಿಂದ ಬಳಲುತ್ತಿರುವ ಯುವತಿ

    ಚಿಕ್ಕಮಗಳೂರು: ಹುಟ್ಟಿದಾಗಿನಿಂದ ಶಾಲಾ-ಕಾಲೇಜು ಮೆಟ್ಟಿಲು ಹತ್ತದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅರಳಿಕೊಪ್ಪ ಗ್ರಾಮದ ಯುವತಿ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಪಾಸ್ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ.

    ಶಾಲಾ-ಕಾಲೇಜಿಗೆ ಹೋಗದೆ, ಮನೆಯಲ್ಲೇ ಓದಿ ದೀಪಿಕಾ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಪಾಸ್ ಮಾಡಿದ್ದಾಳೆ. ಕೋಟಿ ಜನರಲ್ಲಿ ಒಬ್ಬರಿಗೆ ಬರುವ ಕಾಯಿಲೆಯಿಂದ ಈಕೆ ಬಳಲುತ್ತಿದ್ದಾಳೆ. ಶಾಲಾ-ಕಾಲೇಜು ಸೇರಿದಂತೆ ಮನೆಯಿಂದ ಹೊರ ಹೋಗುವಂತಿಲ್ಲ. ಈಕೆಯದ್ದು ಮನೆಯೊಳಗಿನ ಜೀವನ. ಆದರೂ ಬಾಳೆಹೊನ್ನೂರು ಸಮೀಪದ ಅರಳಿಕೊಪ್ಪ ಗ್ರಾಮದ ಸುಧಾಕರ್-ಪ್ರತಿಮಾ ದಂಪತಿಯ ಪುತ್ರಿ ದೀಪಕಾ ಮೊದಲ ಸಲವೇ ಪಿಯುಸಿ ಪಾಸ್ ಮಾಡಿ ಮಾದರಿಯಾಗಿದ್ದಾಳೆ. ಇದನ್ನೂ ಓದಿ: ರಾಜ್ಯ ಸರ್ಕಾರಗಳು ಜಿಎಸ್‍ಟಿಗೆ ಸೇರಿಸಲು ಒಪ್ಪದ ಹೊರತು ಪೆಟ್ರೋಲ್ ಬೆಲೆ ಇಳಿಯಲ್ಲ: ಹರ್ದೀಪ್ ಸಿಂಗ್ ಪುರಿ

    ಈಕೆ ಹುಟ್ಟಿದಾಗಿನಿಂದ ಯಾವುದೇ ಶಾಲಾ-ಕಾಲೇಜಿಗೆ ಹೋಗಿಲ್ಲ. ಯಾವ ಶಿಕ್ಷಕರ ಪಾಠವನ್ನೂ ಕೇಳಿಲ್ಲ. ಯಾವ ಟ್ಯೂಷನ್‍ಗೂ ಹೋಗಿಲ್ಲ. ತಾನೇ ಓದಿ, ತನ್ನ ಗ್ರಹಿಕಾ ಶಕ್ತಿಯಿಂದ ಮೊದಲ ಸಲ ಪರೀಕ್ಷೆ ಎದುರಿಸಿ ಪಿಯುಸಿ ಪಾಸ್ ಮಾಡಿದ್ದಾಳೆ. ಕಳೆದ ಎರಡು ವರ್ಷದ ಹಿಂದೆ ಸರ್ಕಾರ ಖಾಸಗಿಯಾಗಿ ನಡೆಸಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನೂ ಕೂಡ ಪಾಸ್ ಮಾಡಿದ್ದಳು. ಓದಿನ ಜೊತೆಗೆ ಚಿತ್ರಕಲೆ, ಎಂಬ್ರಾಯ್ಡಿಂಗ್, ಕಂಪ್ಯೂಟರ್, ಟೈಲರಿಂಗ್ ಕೂಡ ಮಾಡಿದ್ದಾಳೆ.

    ತನ್ನಂತೆ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ತನ್ನ ತಂಗಿಗೂ ತಾನೇ ಪಾಠ ಮಾಡುತ್ತಿದ್ದಾಳೆ. ಹೆತ್ತವರು ಕೂಡ ಕಳೆದ 20 ವರ್ಷಗಳಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮಕ್ಕಳನ್ನು ಯಾವುದೇ ಕೀಳಿರಿಮೆ ಬಾರದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳುತ್ತಿದ್ದಾರೆ. ಓದಿ ದೊಡ್ಡವಳಾಗಿ ತನ್ನಂತೆ ಅಪರೂಪದ ಕಾಯಿಲೆಯಿಂದ ಬಳಲುವವರ ಸೇವೆ ಮಾಡಬೇಕೆಂಬ ಆಸೆ ದೀಪಿಕಾಳದ್ದಾಗಿದೆ. ಹೆತ್ತವರು ಕೂಡ ಮಗಳಿಗೆ ಯಾವುದಾದರೂ ಒಂದು ಕೆಲಸ ಸಿಕ್ಕರೆ ಅವಳ ಜೀವನಕ್ಕೂ ಸಹಕಾರಿಯಾಗಲಿದೆ. ಜೊತೆಗೆ ನಮಗೂ ತುಸು ನೆಮ್ಮದಿ ಸಿಗಲಿದೆ ಎಂದಿದ್ದಾರೆ.

  • ಫೋನಿನಲ್ಲಿ ಮಾತಾಡ್ಕೊಂಡು ಒನ್ ವೇನಲ್ಲಿ ಬಂದು ಮತ್ತೊಬ್ಬನ ಕೈ ಕಟ್ ಮಾಡಿದ!

    ಫೋನಿನಲ್ಲಿ ಮಾತಾಡ್ಕೊಂಡು ಒನ್ ವೇನಲ್ಲಿ ಬಂದು ಮತ್ತೊಬ್ಬನ ಕೈ ಕಟ್ ಮಾಡಿದ!

    ಚಿಕ್ಕಮಗಳೂರು: ಫೋನಿನಲ್ಲಿ ಮಾತನಾಡಿಕೊಂಡು ಒನ್ ವೇ ನಲ್ಲಿ ಬಂದ ಯುವಕನಿಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಕೈ ಕಟ್ ಆಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ನಗರದ ಕೆ.ಎಂ.ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿ ಮುಂಭಾಗ ಈ ದುರ್ಘಟನೆ ಸಂಭವಿಸಿದೆ. ಫೋನ್ ನಲ್ಲಿ ಮಾತನಾಡಿಕೊಂಡು ಒನ್ ವೇನಲ್ಲಿ ಬಂದ ಯುವಕ ಕಾರಿನ ಪಕ್ಕ ನಿಲ್ಲಿಸಿದ್ದಾರೆ. ಫೋನ್ ನಲ್ಲಿ ಮಾತನಾಡಿಕೊಂಡು ಮುನ್ನುಗ್ಗಿದ ಪರಿಣಾಮ ಎದುರಿನಿಂದ ಬಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್ ಸವಾರ ಕೆಳಗೆ ಬೀಳುತ್ತಿದ್ದಂತೆ ಪಕ್ಕದಲ್ಲಿದ್ದ ಲಾರಿ ಆತನ ಎಡಗೈ ಮೇಲೆ ಹತ್ತಿದ ಪರಿಣಾಮ ಬೈಕ್ ಸವಾರನ ಎಡಗೈ ಕಟ್ ಆಗಿದೆ. ಇದನ್ನೂ ಓದಿ:  ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್

    ಫೋನಿನಲ್ಲಿ ಮಾತನಾಡಿಕೊಂಡು ಓನ್ ವೇನಲ್ಲಿ ಬಂದ ಯುವಕನನ್ನು ವಿಶ್ವಾಸ್ ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ನ್ಯಾಯಸಮ್ಮತವಾಗಿ, ರಸ್ತೆ ನಿಯಮಗಳಡಿ ಬಂದು ಅಪಘಾತಕ್ಕೀಡಾಗಿ ಕೈ ಕಳೆದುಕೊಂಡ ವ್ಯಕ್ತಿಯನ್ನ 55 ವರ್ಷದ ಸುಂದರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ:  ಮುಂದಿನ ದಿನಗಳಲ್ಲಿ ಕ್ಷೇತ್ರವಾರು ಶಾಸಕರ ಜೊತೆ ಸಭೆ ಮಾಡಿ ಲಸಿಕೆ ಅಭಿಯಾನ ಮಾಡ್ತೇವೆ: ಆರ್.ಅಶೋಕ್

    ಅಪಘಾತದಿಂದ ತೀವ್ರ ಗಾಯಾಗೊಂಡ ಸುಂದರ್ ಅವರನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಸುಂದರ್ ನಗರದ ಸಾಮಿಲ್ ವೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ.

    ಅಪಘಾತದದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಅಯ್ಯೋ ಮಗನೇ, ಆ ದೇವರು ನಿನ್ನ ಬದಲು ನನ್ನನ್ನು ಕರೆದುಕೊಳ್ಳಬೇಕಿತ್ತು

  • 85 ಗಂಟೆಯಲ್ಲಿ ಮೈಸೂರಿನ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸರಿಗೆ ನನ್ನ ಕೃತಜ್ಞತೆ: ಅರಗ ಜ್ಞಾನೇಂದ್ರ

    85 ಗಂಟೆಯಲ್ಲಿ ಮೈಸೂರಿನ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸರಿಗೆ ನನ್ನ ಕೃತಜ್ಞತೆ: ಅರಗ ಜ್ಞಾನೇಂದ್ರ

    – ಕುಸಿದು ಬಿದ್ದ ಸಿಬ್ಬಂದಿ, ಮಾನವೀಯತೆ ಮೆರೆದ ಚಿಕ್ಕಮಗಳೂರು ಎಸ್ಪಿ

    ಚಿಕ್ಕಮಗಳೂರು: 85 ಗಂಟೆಯಲ್ಲಿ ಮೈಸೂರಿನ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸರಿಗೆ ನನ್ನ ಕೃತಜ್ಞತೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಶಂಸಿದ್ದಾರೆ.

    ಜಿಲ್ಲೆಯ ಕಡೂರಿನಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ 5ನೇ ತಂಡ ತರಬೇತಿ ಪಡೆದು ನಿರ್ಗಮಿತ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮೈಸೂರಿನ ಗ್ಯಾಂಗ್ ರೇಪ್ ವಿಚಾರವಾಗಿ ಮಾತನಾಡಿದ್ದು, ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಯಾವ ಸಾಕ್ಷಿಗಳು ಇಲ್ಲ. ತೊಂದರೆಗೊಳಗಾದವರು ಹೇಳಿಕೆ ನೀಡಿಲ್ಲ. ಆದರೂ ನಮ್ಮ ಪೊಲೀಸರು ಪ್ರಕರಣವನ್ನು ಹೇಗೆ ಭೇದಿಸುತ್ತಾರೆ ಎಂದು ಅನ್ನಿಸಿತ್ತು. ಮಂತ್ರಿಯಾಗಿ ನಾನೇ ಕುತೂಹಲದಿಂದ ವೀಕ್ಷಿಸುತ್ತಿದ್ದೆ. ನಮ್ಮ ಪೊಲೀಸರು 85 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಆಗ ನನ್ನ ಹೃದಯ ತುಂಬಿ ಬಂತು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

    ನಮ್ಮ ಪೊಲೀಸರ ಇಮೇಜ್ ಜಾಸ್ತಿಯಾಯ್ತು. ನಮ್ಮ ಪೊಲೀಸ್ ವ್ಯವಸ್ಥೆ ಅತ್ಯಂತ ಬಿಗಿಯಾಗಿದೆ. ವೈಜ್ಞಾನಿಕವಾಗಿ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುವ ಎಲ್ಲಾ ಕಲೆ ನಮ್ಮ ಪೊಲಿಸರಿಗೆ ಕರಗತವಾಗಿದೆ. ನಮ್ಮ ಸೇನಾ ಪಡೆ ಜಗತ್ತಿನ ಅತ್ಯಂತ ಮೂರನೇ ದೊಡ್ಡ ಪಡೆ. ಜಗತ್ತಿನಲ್ಲಿ ನಮ್ಮ ಪೊಲೀಸ್ ಪಡೆಗೆ ಒಳ್ಳೆಯ ಹೆಸರಿದೆ. ಅದರಲ್ಲೂ ನಮ್ಮ ಕರ್ನಾಟಕದ ಪೊಲೀಸರಿಗೆ ಇದೆ ಎಂದು ತರಬೇತಿ ಪಡೆದ ನೂತನ ನಿರ್ಗಮಿತ ಪೊಲೀಸರಿಗೆ ಹುರಿದುಂಬಿಸಿದ್ದಾರೆ.ಇದನ್ನೂ ಓದಿ:KSRTC ಬಸ್ ತಡೆದು ವಿದ್ಯಾರ್ಥಿಗಳು, ಜನರಿಂದ ಪ್ರತಿಭಟನೆ

    ಮೈಸೂರು ಪ್ರಕರಣದ ಎಲ್ಲಾ ಅಪರಾಧಿಗಳನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಅವರಿಗೆ ಶಿಕ್ಷೆ ಆಗುವಂತೆ ನಮ್ಮ ಪೊಲೀಸರು ವಿಶೇಷ ಶ್ರಮ ವಹಿಸಿದ್ದಾರೆ. ಸರ್ಕಾರ ಕೂಡ ಅದರ ಬಗ್ಗೆ ವಿಶೇಷವಾದ ಆದ್ಯತೆ ನೀಡಿದೆ. ಮೈಸೂರಿನ ಎರಡೂ ಪ್ರಕರಣಗಳನ್ನು ಕಡಿಮೆ ಸಮಯದಲ್ಲಿ ಭೇದಿಸಿದ ಎಲ್ಲಾ ಪೊಲೀಸ್ ತಂಡಕ್ಕೆ ನನ್ನ ಕೃತಜ್ಞತೆ ಎಂದು ಪ್ರಶಂಸಿದ್ದಾರೆ.

    ಯಾರು ಅಪರಾಧ ಮಾಡುತ್ತಾರೋ ಅವರಿಗೆ ದೊಡ್ಡ ಸಂದೇಶ ಹೋಗಿದೆ. ಏನಾದರೂ ಮಾಡಿ ಹೇಗಾದರೂ ಬಚಾವ್ ಆಗಬಹುದು ಅನ್ನೋದು ಆಗಲ್ಲ. ಪೊಲೀಸರು ಅದರ ಹಿಂದೆ ಬೀಳುತ್ತಾರೆ. ಅದನ್ನು ಯಶಸ್ವಿಯಾಗಿ ಭೇದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ..ಇದನ್ನೂ ಓದಿ:ಚುನಾವಣೆ ಪ್ರಚಾರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಕಟೀಲ್

    ಸಂತ್ರಸ್ತೆ ಈಗ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಇಂತಹಾ ಸಮಯದಲ್ಲಿ ಹೆಚ್ಚು ಒತ್ತಡ ಹಾಕುವುದು ಸರಿಯಲ್ಲ. ನಮ್ಮ ಮಹಿಳಾ ಪೊಲೀಸ್ ಅಧಿಕಾರಿಗಳು ವಿಶೇಷ ಪ್ರಯತ್ನ ಮಾಡಿದರು. ಸ್ವಲ್ಪ ಸಮಯದ ನಂತರ ಹೇಳಬಹುದು. ಮಣಿಪಾಲ್ ಘಟನೆಯಲ್ಲಿ ಹೇಳಿಕೆ ಕೊಡುವುದಿಲ್ಲ ಎಂದವರು ಮೂರು ತಿಂಗಳ ಬಳಿಕ ಹೇಳಿಕೆ ನೀಡಿದ್ದರು. ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಜ್ಞಾನೇಂದ್ರ ಅವರು ಭಾಷಣ ಮಾಡುವ ವೇಳೆ ವೇದಿಕೆ ಮುಂಭಾಗ ಎಡ ಹಾಗೂ ಬಲಭಾಗದಲ್ಲಿ ನಿಂತಿದ್ದ ಪೊಲೀಸರಲ್ಲಿ ಮೈಸೂರಿನ ಅಶ್ವದಳದ ಮೈಲುದ್ದೀನ್ ಎಂಬ ಸಿಬ್ಬಂದಿ ಬಿಸಿಲಿಗೆ ತಲೆಸುತ್ತು ಬಂದು ಬಿದ್ದರು. ಕೂಡಲೇ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ವೇದಿಕೆ ಮೇಲಿಂದ ಎದ್ದು ಬಂದು ಸಿಬ್ಬಂದಿಯನ್ನು ಎತ್ತಿ ನೀರು ಕುಡಿಸಿ ಆಂಬುಲೆನ್ಸ್ ಗೆ ಕಾಲ್ ಮಾಡಿದ್ದಾರೆ. ಸ್ವತಃ ಎಸ್ಪಿಯೇ ಆ ಸಿಬ್ಬಂದಿಯನ್ನು ಎತ್ತಿಕೊಂಡು ಹೋಗಿ ಆಂಬುಲೆನ್ಸ್ ನಲ್ಲಿ ಕೂರಿಸಿದರು. ಅಲ್ಲಿವರೆಗೆ ಜ್ಞಾನೇಂದ್ರ ಅವರು ಕೂಡ ಮಾತು ನಿಲ್ಲಿಸಿದ್ದರು..ಇದನ್ನೂ ಓದಿ:ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ನೀಡಿದ ಎನ್.ಆರ್.ರಮೇಶ್

  • 350 ವಾಹನ, 5 ಸಾವಿರ ಜನ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ಜಾತ್ರೆ

    350 ವಾಹನ, 5 ಸಾವಿರ ಜನ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ಜಾತ್ರೆ

    – ಸ್ಥಳೀಯರಲ್ಲಿ ಕೊರೊನಾ ಆತಂಕ

    ಚಿಕ್ಕಮಗಳೂರು: ನಾಲ್ಕೈದು ದಿನ ರಜೆ ಅಥವ ವೀಕ್ ಎಂಡ್‍ನಲ್ಲಿ ತಾಲೂಕಿನ ಮುಳ್ಳಯ್ಯನಗಿರಿಗೆ ಭಾರೀ ಪ್ರವಾಸಿಗರು ಬರುವುದು ಮಾಮೂಲಿ. ಆದರೆ ಕಾಫಿನಾಡಿಗೆ ಈಗ ವೀಕ್ ಡೇಸ್‍ನಲ್ಲೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಬುಧವಾರ ಮುಳ್ಳಯ್ಯನಗಿರಿ ಭಾಗಕ್ಕೆ 350ಕ್ಕೂ ಹೆಚ್ಚು ವಾಹನಗಳಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ.

    ಕೊರೊನಾ ಲಾಕ್‍ಡೌನ್ ಹಿನ್ನೆಲೆ ಕಳೆದ ಮೂರು ತಿಂಗಳಿನಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿಷೇಧ ಹೇರಲಾಗಿತ್ತು. ನಿಷೇಧವಿದ್ದರೂ ನೂರಾರು ಪ್ರವಾಸಿಗರು ಬಂದು ವಾಪಸ್ ಹೋಗಿದ್ದರು. ಪ್ರವಾಸಿ ತಾಣಗಳು ಆರಂಭವಾಗುವುದನ್ನೇ ಕಾಯುತ್ತಿದ್ದ ಪ್ರವಾಸಿಗರು ಅನ್‍ಲಾಕ್ ಆದ ಮೇಲೆ ದಿನಂ ಪ್ರತಿ ಸಾವಿರಾರು ಜನ ಭೇಟಿ ನೀಡುತ್ತಿದ್ದಾರೆ. ಮೂರು ತಿಂಗಳ ಬಳಿಕ ಪ್ರವಾಸಿ ತಾಣಗಳು ಆರಂಭಗೊಂಡ ಹಿನ್ನೆಲೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದಾರೆ.

    ಜೂನ್-ಜುಲೈ-ಆಗಸ್ಟ್ ತಿಂಗಳಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಬಾಬಾಬುಡನ್ ಗಿರಿಯ ಸೌಂದರ್ಯವನ್ನ ನೋಡಲು ಅದ್ಭುತವಾಗಿರುತ್ತೆ. ಆದರೆ ಲಾಕ್‍ಡೌನ್ ಇದ್ದ ಕಾರಣ ಪ್ರವಾಸಿಗರು ಜಿಲ್ಲೆಗೆ ಬರಲು ಸಾಧ್ಯವಾಗಿರಲಿಲ್ಲ. ಈಗ ಮುಳ್ಳಯ್ಯನಗಿರಿ ಭಾಗಕ್ಕೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು ಜಿಲ್ಲೆಯ ಜನರಿಗೆ ಆತಂಕ ಕೂಡ ಉಂಟಾಗಿದೆ. ಇದನ್ನೂ ಓದಿ: ಕೋವಿಡ್ ನಿಯಮ ಪಾಲಿಸಿಲ್ಲ ಅಂದ್ರೆ ಈಗಿರುವ ವಿನಾಯ್ತಿ ರದ್ದು – ಮತ್ತೆ ಲಾಕ್‍ಡೌನ್ ಬಗ್ಗೆ ಸಿಎಂ ಮಾತು

    ಕಳೆದ ನಾಲ್ಕೈದು ದಿನದಿಂದ ಜಿಲ್ಲೆಯ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲೆಯ ಗಿರಿ ಭಾಗದ ಹೋಂ ಸ್ಟೇ, ರೆಸಾರ್ಟ್‍ಗಳು ಸಂಪೂರ್ಣ ಬುಕ್ ಆಗಿವೆ. ಪ್ರವಾಸಿಗರು ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ರೂಂಗಾಗಿ ದುಂಬಾಲು ಬಿದ್ದಿದ್ದಾರೆ. ರೂಂಗಳು ಸಿಗುತ್ತಿಲ್ಲ. ವಾರ, ಹದಿನೈದು ದಿನ ಬಿಟ್ಟು ಬರುತ್ತೇವೆ ಎಂದರೂ ಗಿರಿ ಭಾಗದ ಹೋಂ ಸ್ಟೇ, ರೆಸಾರ್ಟ್‍ನಲ್ಲಿ ರೂಂಗಳು ಸಿಗುತ್ತಿಲ್ಲ. ಬರುತ್ತಿರುವ ಪ್ರವಾಸಿಗರನ್ನ ಕಂಡು ಜಿಲ್ಲೆಯ ಜನರಿಗೆ ಕೊರೊನಾ ಮತ್ತೆ ಎಲ್ಲಿ ಹೆಚ್ಚಾಗುತ್ತೋ ಎಂಬ ಆತಂಕ ಮನೆಮಾಡಿದೆ. ಬರುತ್ತಿರುವ ಪ್ರವಾಸಿಗರಿಗೆ ಚೆಕ್‍ಪೋಸ್ಟ್ ಸಿಬ್ಬಂದಿ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸುವಂತೆ ಸೂಚಿಸಿ ಗಿರಿ ಭಾಗಕ್ಕೆ ಕಳಿಸುತ್ತಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಶಿಕ್ಷಣಕ್ಕಾಗಿ ಕೈಯಲ್ಲಿ ಮೊಬೈಲ್ ಹಿಡಿದು ಬೆಟ್ಟ-ಗುಡ್ಡ ಏರಿ, ಕಾಡುಮೇಡು ಅಲೆಯುತ್ತಿರುವ ಕಳಸದ ಮಕ್ಕಳು

  • ಕಡೆಗಣಿಸಿ ಮಾಡುವ ಸಾಧನೆಯಾದರೂ ಏನು- ಭೋಜೇಗೌಡಗೆ ಅಂಗಾರ ಟಾಂಗ್

    ಕಡೆಗಣಿಸಿ ಮಾಡುವ ಸಾಧನೆಯಾದರೂ ಏನು- ಭೋಜೇಗೌಡಗೆ ಅಂಗಾರ ಟಾಂಗ್

    ಚಿಕ್ಕಮಗಳೂರು: ಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ. ನಾನು ಯಾವತ್ತೂ, ಯಾರನ್ನೂ ಕಡೆಗಣಿಸಿಲ್ಲ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಭೋಜೇಗೌಡರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

    ತಮ್ಮ ಮೇಲಿನ ಆರೋಪಕ್ಕೆ ತಾಲೂಕಿನ ಸಖರಾಯಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಪಕ್ಷದ, ಯಾವುದೇ ಜನಪ್ರತಿನಿಧಿಯನ್ನು ಕಡೆಗಣಿಸಿಲ್ಲ. ಯಾವುದೇ ಸಭಾ ಕಾರ್ಯಕ್ರಮ ಮಾಡಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ಮೇಲೆ ಯಾವುದೇ ಪ್ರತ್ಯೇಕ ಇಲಾಖೆಯವರನ್ನು ಕರೆದು ಸಭೆಯನ್ನೇ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

    ಇತ್ತೀಚೆಗೆ ನ್ಯಾಷನಲ್ ಹೈವೇ, ಲೋಕೋಪಯೋಗಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಸಭೆ ಮಾಡಿದ್ದೇನೆ. ಯಾವುದೇ ಜನಪ್ರತಿನಿಧಿಯನ್ನು ಕಡೆಗಣಿಸಿ ಸಭೆ ಮಾಡಿಲ್ಲ. ಈಗ ಕೋವಿಡ್ ಇರುವುದರಿಂದ ಪಂಚಾಯಿತಿಗೆ ಭೇಟಿ ಕೊಡುತ್ತಿದ್ದೇನೆ. ಯಾವ ಸಮಸ್ಯೆ ಇದೆ, ಯಾವ ರೀತಿ ಕೋವಿಡ್ ಎದುರಿಸುತ್ತಿದ್ದಾರೆ. ಏನಾದರೂ ಸಮಸ್ಯೆ ಇದೆಯಾ, ಪರಿಹಾರವೇನು ಎಂದು ಚರ್ಚಿಸುತ್ತಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಓಡಾಡಿ ಕೆಲಸ ಮಾಡುತ್ತಿದ್ದೇನೆ, ಯಾವುದೇ ಕಾರ್ಯಕ್ರಮ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಸಭಾ ಕಾರ್ಯಕ್ರಮ ನಡೆಸಿ, ಅವರನ್ನು ಕರೆಯದಿದ್ದರೆ ಅಥವಾ ಅಪಮಾನ ಮಾಡಿದ್ದರೆ ಆಗ ಮಾತನಾಡಬಹುದು. ಸಣ್ಣಪುಟ್ಟ ವಿಷಯಕ್ಕೆ ರಾಜಕೀಯ ಮಾಡಿದರೆ ಏನೂ ಹೇಳಲು ಆಗುವುದಿಲ್ಲ ಎಂದು ನಯವಾಗೇ ಉತ್ತರಿಸಿದ್ದಾರೆ. ಕ್ಷೇತ್ರದ ಜನ ಆರು ಬಾರಿ ಆಯ್ಕೆ ಮಾಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಯಾರನ್ನೂ ಕಡೆಗಣಿಸಿಲ್ಲ. ಕಡೆಗಣಿಸಿ ಸಾಧನೆ ಮಾಡುವುದಾದರೂ ಏನು? ನನ್ನ ಇಲಾಖೆ, ನನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಕೆಲಸ ಮಾಡಬೇಕಿದೆ. ಭೋಜೇಗೌಡರು ರಾಜಕೀಯದಲ್ಲಿ ನನಗಿಂತ ಹಿರಿಯರು, ಅನುಭವಿಗಳು ಕೂಡ. ಸ್ಥಾನದ ಮಹತ್ವವನ್ನು ತಿಳಿದು ಕೆಲಸ ಮಾಡಿದರೆ ಯಾವ ಸಮಸ್ಯೆ ಬರುವುದಿಲ್ಲ ಎಂದರು.

  • ಆಸ್ಪತ್ರೆ ಬಾಗಿಲಲ್ಲೇ ಆಕ್ಸಿಜನ್ ವ್ಯವಸ್ಥೆ – ಸರ್ಕಾರಿ ಬಸ್ ಇದೀಗ ಆಕ್ಸಿಜನ್ ಬಸ್

    ಆಸ್ಪತ್ರೆ ಬಾಗಿಲಲ್ಲೇ ಆಕ್ಸಿಜನ್ ವ್ಯವಸ್ಥೆ – ಸರ್ಕಾರಿ ಬಸ್ ಇದೀಗ ಆಕ್ಸಿಜನ್ ಬಸ್

    ಚಿಕ್ಕಮಗಳೂರು: ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಸ್ಪತ್ರೆ ಬಾಗಿಲಲ್ಲೇ ಆಕ್ಸಿಜನ್ ಕೊಡುವ ವ್ಯವಸ್ಥೆಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ತಯಾರಿ ನಡೆಸಲಾಗಿದ್ದು, ಅದಕ್ಕಾಗಿ ಸರ್ಕಾರಿ ಬಸ್‍ನ್ನು ಆಕ್ಸಿಜನ್ ಬಸ್ ಆಗಿ ಮಾರ್ಪಡಿಸಲಾಗಿದೆ.

    ಈಗಾಗಲೇ ರಾಜಧಾನಿಯಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಬೆಂಗಳೂರಿನ ಬಳಿಕ ಈ ಯೋಜನೆಯನ್ನು ಚಿಕ್ಕಮಗಳೂರಿನಲ್ಲೂ ಜಾರಿಗೆ ತರಲು ಈಗಾಗಲೇ ಜಿಲ್ಲಾಡಳಿತ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದ್ದು, ಸರ್ಕಾರಿ ಬಸ್‍ನ್ನು ಆಕ್ಸಿಜನ್ ಬಸ್ ಆಗಿ ರೆಡಿ ಮಾಡಲು ಮುಂದಾಗಿದೆ. ಈ ಆಕ್ಸಿಜನ್ ಬಸ್‍ನಲ್ಲಿ ಆರರಿಂದ ಎಂಟು ಜನ ರೋಗಿಗಳಿಗೆ ಏಕಕಾಲದಲ್ಲಿ ಆಕ್ಸಿಜನ್ ನೀಡಬಹುದಾಗಿದೆ. ಬಸ್‍ನಲ್ಲಿ ಈ ಯೋಜನೆಗೆ ಬೇಕಾದ ಕೆಲ ತಾಂತ್ರಿಕ ಕೆಲಸಗಳು ನಡೆಯುತ್ತಿದ್ದ ಸೋಮವಾರ ಇದು ಸೇವೆಗೆ ಲಭ್ಯವಾಗಲಿದೆ.

    ಆಸ್ಪತ್ರೆಗೆ ಬರುವ ರೋಗಿಗಳಿಗೆ ಕೂಡಲೇ ಆಕ್ಸಿಜನ್ ಬೆಡ್ ನೀಡಲು ಸಾಧ್ಯವಾಗದಿರಬಹುದು. ಈ ವೇಳೆ ಅವರಿಗೆ ಯಾವಾಗಲು ಆಸ್ಪತ್ರೆ ಮುಂಭಾಗವೇ ಇರುವ ಬಸ್‍ನಲ್ಲಿ ಕೂರಿಸಿ ಆಕ್ಸಿಜನ್ ನೀಡಲಾಗುತ್ತದೆ. ತದನಂತರ ವೈದ್ಯರ ಪರೀಕ್ಷೆ ಮೂಲಕ ಆವರ ಆರೋಗ್ಯದ ಸ್ಥಿತಿಗತಿ ಆಧಾರದ ಮೇಲೆ ಅವರಿಗೆ ಮುಂದಿನ ಚಿಕಿತ್ಸೆ ನೀಡಬಹುದು. ರೋಗಿಗಳಿಗೆ ಈ ರೀತಿ ಬಂದ ಕೂಡಲೇ ಆಕ್ಸಿಜನ್ ಸೌಲಭ್ಯ ನೀಡಿದರೆ ಅವರಿಗೆ ಅರ್ಧ ಧೈರ್ಯ ಬರುತ್ತದೆ. ಅನ್ನೋದು ಜಿಲ್ಲಾಡಳಿತ ನಂಬಿಕೆ. ಈಗಾಗಲೇ ಆಕ್ಸಿಜನ್ ಬಸ್ ಕೆಲಸ ಬಹುತೇಕ ಮುಗಿದಿದ್ದು ನಾಳೆ ಮಧ್ಯಾಹ್ನ ಈ ಆಕ್ಸಿಜನ್ ಆನ್ ವೀಲ್ಸ್ ಯೋಜನೆಗೆ ಚಾಲನೆ ಸಿಗಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

  • ಕಾಫಿನಾಡು ಮಲೆನಾಡು ಭಾಗದಲ್ಲಿ ಭಾರೀ ಮಳೆ – ರೈತರ ಮೊಗದಲ್ಲಿ ಮಂದಹಾಸ

    ಕಾಫಿನಾಡು ಮಲೆನಾಡು ಭಾಗದಲ್ಲಿ ಭಾರೀ ಮಳೆ – ರೈತರ ಮೊಗದಲ್ಲಿ ಮಂದಹಾಸ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ. ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟ್, ಹೊರಟ್ಟಿ ಸುತ್ತಮುತ್ತ ಮಳೆರಾಯ ಅಬ್ಬರಿಸಿ ಬೊಬ್ಬರಿದಿದ್ದಾನೆ.

    ಕಳಸ ಭಾಗದಲ್ಲೂ ಮಳೆ ಸುರಿದಿದ್ದು, ಚಿಕ್ಕಮಗಳೂರು ನಗರದಲ್ಲೂ ಸುಮಾರು ಅರ್ಧ ಗಂಟೆಗಳ ಕಾಲ ಸಾಧಾರಣ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ. ಕಳೆದ ಎಂಟತ್ತು ದಿನದಿಂದ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮಧ್ಯಾಹ್ನದ ನಂತರ ಆರಂಭವಾಗುತ್ತಿರೋ ಮಳೆ ಒಂದೆರಡು ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯುತ್ತಿದೆ. ಇಂದು ಕೂಡ ಮಲೆನಾಡಿನ ಕೆಲ ಭಾಗಗಳಲ್ಲಿ ಮಳೆ ಮುಂದುವರಿದಿದೆ. ಸಂಜೆ ಬಳಿಕ ಆರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಗುಡುಗು-ಸಿಡಿಲಿನೊಂದಿಗೆ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ.

    ಕಳೆದ ಎಂಟತ್ತು ದಿನಗಳಿಂದ ಜಿಲ್ಲೆಯಲ್ಲಿ ಪ್ರತಿ ದಿನ ಮಧ್ಯಾಹ್ನ – ಸಂಜೆಯಾಗುತ್ತಿದ್ದಂತೆ ಮಳೆ ಆರಂಭವಾಗುತ್ತಿದ್ದು ರೈತರು, ಕಾಫಿ-ಅಡಿಕೆ-ಮೆಣಸು ಬೆಳೆಗಾರರಿಗೆ ಬೆಳೆಗೆ ಬೇಕಾಗುವಷ್ಟು ಮಳೆ ಸುರಿಯುತ್ತಿದ್ದು ಮಲೆನಾಡಿಗರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಮಲೆನಾಡು ಭಾಗದಲ್ಲಿ ಭಾರೀ ಗುಡುಗು-ಸಿಡಿಲಿನೊಂದಿಗೆ ಸುರಿದ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲೇ ಮರಗಳು ಮುರಿದು ಬಿದ್ದಿವೆ.

  • ಊಟಕ್ಕಾಗಿ 24 ವರ್ಷದ ಹಿಂದೆ ಗಲಾಟೆ – 17 ವರ್ಷಗಳ ಬಳಿಕ ಆರೋಪಿ ಸೆರೆ

    ಊಟಕ್ಕಾಗಿ 24 ವರ್ಷದ ಹಿಂದೆ ಗಲಾಟೆ – 17 ವರ್ಷಗಳ ಬಳಿಕ ಆರೋಪಿ ಸೆರೆ

    ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಮುಖ ಅದಿರು ಕಂಪನಿ ಉತ್ತುಂಗದ ಸ್ಥಿತಿಯಲ್ಲಿದ್ದಾಗ ಮೆಸ್‍ನಲ್ಲಿ ನಡೆದಿದ್ದ ಗಲಾಟೆ ಸಂಬಂಧ 24 ವರ್ಷಗಳ ಬಳಿಕ ಆರೋಪಿಯನ್ನು ಕೇರಳದ ಅಲೆಪ್ಪಿಯಲ್ಲಿ ಬಂಧಿಸಿ ಕರೆತರಲಾಗಿದೆ.

    ಬಂಧಿತನನ್ನು ಅಲೆಕ್ಸಾಂಡರ್ ಎಂದು ಗುರುತಿಸಲಾಗಿದೆ. ಬಂಧಿತ ಅಲೆಕ್ಸಾಂಡರ್ ಕುದುರೆಮುಖ ಕಂಪನಿಯಲ್ಲಿ ಕಾರ್ಮಿಕನಾಗಿದ್ದ. ಕ್ಷುಲ್ಲಕ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿತ್ತು. ಗಲಾಟೆ ವೇಳೆ ಚಾಕು ಹಾಕಿದ್ದ ಆರೋಪಿ ಅಲೆಕ್ಸಾಂಡರ್ 2004ರಲ್ಲಿ ಎಸ್ಕೇಪ್ ಆಗಿ ಕೇರಳಕ್ಕೆ ಪರಾರಿಯಾಗಿದ್ದ.

    1997ರಲ್ಲಿ ನಡೆದ ಗಲಾಟೆ ಕೇಸ್ 2004 ರವರೆಗೂ ನ್ಯಾಯಾಲಯದಲ್ಲಿತ್ತು. ಘಟನೆ ನಡೆದು ಹಲವು ವರ್ಷವಾದರೂ ಪೊಲೀಸರು ಹೋಗದ ಕಾರಣ ನಾನು ಬಚಾವ್ ಆದೆ ಎಂದು ಭಾವಿಸಿದ್ದ. ಆದರೆ, 17 ವರ್ಷಗಳ ಬಳಿಕ ಮಾಹಿತಿ ಕಲೆ ಹಾಕಿದ ಚಿಕ್ಕಮಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಈ ಮೂಲಕ ಖಾಕಿ ರೆಕಾರ್ಡಲ್ಲಿ ಎಂಟ್ರಿಯಾದರೆ ಪಾತಾಳದಲ್ಲಿದ್ದರೂ ಬಿಡಲ್ಲ ಅನ್ನೋದಕ್ಕೆ ಕಾಫಿನಾಡ ಪೊಲೀಸರು ಸಾಕ್ಷಿಯಾಗಿದ್ದಾರೆ. ಯಾಕೆಂದರೆ, ಅದು 1997ರ ಜೂನ್ ತಿಂಗಳಲ್ಲಿ ನಡೆದ ಗಲಾಟೆ. ಸುಮಾರು 25 ವರ್ಷಗಳ ಸಮೀಪ. ಕುದುರೆಮುಖ ಸಂಸ್ಥೆಯ ಕ್ಯಾಂಟೀನಲ್ಲಿ ಊಟದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಇಬ್ಬರಿಗೆ ಚಾಕು ಹಾಕಿದ್ದರು. ಕುದುರೆಮುಖ ಠಾಣೆಯಲ್ಲಿ ಕೇಸ್ ದಾಖಲಾಗಿ, ನಾಲ್ವರು ಮೇಲೆ ಎಫ್‍ಐಆರ್ ಆಗಿತ್ತು.

    2004ರಲ್ಲಿ ಅಲೆಕ್ಸಾಂಡರ್ ಎಸ್ಕೇಪ್ ಆಗಿದ್ದ. ಬಳಿಕ ಕುದುರೆಮುಖ ಕಂಪನಿ ಬಾಗಿಲು ಹಾಕಿತು. ಆದರೆ, ಪೊಲೀಸರು ಆರೋಪಿಗಾಗಿ ಹುಡುಕೋದನ್ನು ಬಿಡಲಿಲ್ಲ. 17 ವರ್ಷಗಳ ಕಾಲ ಎಲ್ಲಿದ್ದಾನೆ ಅಂತಾನೆ ಗೊತ್ತಾಗಲಿಲ್ಲ. 17 ವರ್ಷಗಳೇ ಕಳೆದು ಹೋದವು. ಪೊಲೀಸರು ಕೇಸನ್ನು ಮರೆತಿರುತ್ತಾರೆ ನಾನು ಬಚಾವ್ ಅಂತ ಅಂದುಕೊಂಡಿದ್ದ ಆರೋಪಿಗೆ ಕಾಫಿನಾಡ ಪೊಲೀಸರು ಅನ್‍ಎಕ್ಸ್ ಪೆಕ್ಟೆಡ್ ಶಾಕ್ ನೀಡಿ ಕರೆತಂದು ಕೋರ್ಟಿಗೆ ಹಾಜರು ಪಡಿಸಿದ್ದಾರೆ.

    ಕುದುರೆಮುಖ ಠಾಣೆಗೆ ಇತ್ತೀಚೆಗೆ ಪಿ.ಎಸ್.ಐ. ಆಗಿ ಕುಮಾರ್ ಚಾರ್ಜ್ ತೆಗೆದುಕೊಂಡು ಈ ಹಳೇ ಕೇಸಿನ ಬೆನ್ನು ಬಿದ್ದಿದ್ದರು. ಸ್ನೇಹಿತನ ಮೂಲಕ ಆರೋಪಿ ಕೇರಳದಲ್ಲಿ ಇರೋದನ್ನು ಖಚಿತಪಡಿಸಿಕೊಂಡು ಪೊಲೀಸ್ ಸಿಬ್ಬಂದಿಯಾದ ಸುರೇಶ್ ರಾವ್, ಯುವರಾಜ್, ಶ್ರೀಧರ್ ಎಂಬುವರನ್ನು ಕಳುಹಿಸಿ ಲಾಕ್ ಮಾಡಿಸಿದ್ದಾರೆ. ಇಬ್ಬರಿಗೆ ಚಾಕು ಹಾಕಿ 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. 17 ವರ್ಷಗಳ ಹಿಂದಿನ ಕೇಸು. ಬೇಲ್ ಸಿಗುತ್ತೆ ಎಂದು ಆರೋಪಿ ಅಲೆಕ್ಸಾಂಡರ್ ಕೂಡ ಭಾವಿಸಿದ್ದ. ಆದರೆ, ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  • ಬಸ್ಸನ್ನು ನೀವು ಓಡಿಸಿ, ಇಲ್ಲ ನಮಗೆ ಬಿಡಿ – ಸರ್ಕಾರಕ್ಕೆ ಖಾಸಗಿ ಬಸ್ ಮಾಲೀಕರ ಆಗ್ರಹ

    ಬಸ್ಸನ್ನು ನೀವು ಓಡಿಸಿ, ಇಲ್ಲ ನಮಗೆ ಬಿಡಿ – ಸರ್ಕಾರಕ್ಕೆ ಖಾಸಗಿ ಬಸ್ ಮಾಲೀಕರ ಆಗ್ರಹ

    ಚಿಕ್ಕಮಗಳೂರು: ಒಂದೋ ನೀವೇ ಬಸ್ ಓಡಿಸಿಕೊಳ್ಳಿ ಇಲ್ಲ, ನಮಗೆ ಬಿಡಿ. ಹೀಗೆ ನಿಮಗೆ ಬೇಕಾದಾಗ ಒಂದೊಂದೇ ಬಸ್ ತಂದು ಬಿಟ್ಟುಕೊಂಡರೆ ನಮಗೆ ನಷ್ಟವಾಗುತ್ತೆ ಎಂದು ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಡೆದಿದೆ.

    ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದಿರುವ ಸಾರಿಗೆ ನೌಕಕರು ಬಸ್‍ಗಳನ್ನು ತೆಗೆಯದ ಕಾರಣ ಸರ್ಕಾರ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಖಾಸಗಿ ಬಸ್ ಹಾಗೂ ಟ್ಯಾಕ್ಸಿಗಳು ಸಾರ್ವಜನಿಕ ಸೇವೆಗೆ ಮುಂದಾಗಿತ್ತು. ಆದರೆ ದಿನಕಳೆದಂತೆ ಒಬ್ಬೊಬ್ಬ ಡ್ರೈವರ್-ಕಂಡೆಕ್ಟರ್‍ಗಳು ಸೇವೆಗೆ ಬರುತ್ತಿರುವುದರಿಂದ ಒಂದೊಂದೆ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ರಸ್ತೆಗೆ ಇಳಿಯುತ್ತಿವೆ. ಇದು ಖಾಸಗಿ ಬಸ್ ಮಾಲೀಕರು-ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೋ ನೀವೇ ಬಸ್ ಓಡಿಸಿಕೊಳ್ಳಿ. ಇಲ್ಲ ನಮಗೆ ಬಿಡಿ ಎಂದು ಖಾಸಗಿ ಬಸ್ ಚಾಲಕರು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಸಿದ್ದಾರೆ.

    ನಾವು ಯಾರ ಬಳಿಯೂ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿಲ್ಲ. ಸರ್ಕಾರದ ದರ ನಿಗದಿಯಂತೆ ಸಾರ್ವಜನಿಕರ ಸೇವೆಗೆ ಬಂದಿದ್ದೇವೆ. ಇಡೀ ರಾತ್ರಿ ಸೊಳ್ಳೆಯಿಂದ ಕಚ್ಚಿಸಿಕೊಂಡು ಕ್ಯೂನಲ್ಲಿ ನಿಂತು ಬೆಳಗ್ಗೆ ಬಸ್ ಓಡಿಸುವವರು ನಾವು. ನೀವು ಡ್ರೈವರ್-ಕಂಡೆಕ್ಟರ್ ಬಂದ ಕೂಡಲೇ ಬಸ್ ತಂದರೆ ನಮಗೆ ಕಷ್ಟ ಹಾಗೂ ನಷ್ಟವಾಗುತ್ತದೆ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಹೋಗುವಾಗ ಜನ ಕರೆದುಕೊಂಡು ಹೋಗಿ ಬರುವಾಗ ಖಾಲಿ ಬಸ್ ಬರುತ್ತಿದೆ. ಡಿಸೇಲ್ ದರ ಸೇರಿದಂತೆ ಇತರೇ ಖರ್ಚುಗಳಿಂದ ಏನೂ ಉಳಿಯುತ್ತಿಲ್ಲ. ಅಧಿಕಾರಿಗಳು ಹೇಳಿರುವುದರಿಂದ ನಾವು ಬಂದಿರುವುದು, ನೀವು ಹೀಗೆ ಮಾಡೋದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.