Tag: Chikmagalur

  • ಫ್ಯಾನ್ಸಿ ಸ್ಟೋರ್ ಗೆ ನುಗ್ಗಿ, ಪ್ಲಾಸ್ಟಿಕ್ ವೈರ್ ನಲ್ಲಿ ಸಿಲುಕಿದ ನಾಗರಾಜ

    ಫ್ಯಾನ್ಸಿ ಸ್ಟೋರ್ ಗೆ ನುಗ್ಗಿ, ಪ್ಲಾಸ್ಟಿಕ್ ವೈರ್ ನಲ್ಲಿ ಸಿಲುಕಿದ ನಾಗರಾಜ

    ಚಿಕ್ಕಮಗಳೂರು: ಫ್ಯಾನ್ಸಿ ಸ್ಟೋರ್ ಗೆ ನುಗ್ಗಿ ಸ್ಟೋರ್ ನಲ್ಲಿದ್ದ ಪ್ಲಾಸ್ಟಿಕ್ ವೈರ್ ನಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ನಾಗರಹಾವನ್ನ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದಲ್ಲಿ ನಡೆದಿದೆ.

    ಕಳಸದ ದೊಡ್ಮನೆ ನಿವಾಸಿ ರಾಜೇಂದ್ರ ಪ್ರಸಾದ್ ಹೆಗ್ಡೆ ಎಂಬವರಿಗೆ ಸೇರಿದ ಫ್ಯಾನ್ಸಿ ಸ್ಟೋರ್ ನಲ್ಲಿ ನಾಗರಹಾವೊಂದು ಒಳಗೆ ಸೇರಿಕೊಂಡಿತ್ತು. ಈ ವೇಳೆ ಫ್ಯಾನ್ಸಿ ಸ್ಟೋರ್ ನಲ್ಲಿದ್ದ ಪ್ಲಾಸ್ಟಿಕ್ ವೈರ್ ನಲ್ಲಿ ಸಿಲುಕಿದ ನಾಗರಹಾವು ಸುಮಾರು ಎರಡು ಗಂಟೆಗಳ ಕಾಲ ಒದ್ದಾಡಿದೆ. ಕೂಡಲೇ ಸ್ಟೋರ್ ಮಾಲೀಕ ಸ್ಥಳೀಯ ಸ್ನೇಕ್ ಸುರೇಶ್ ಅವರಿಗೆ ವಿಷಯ ತಿಳಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸುರೇಶ್ ವೈರ್ ನಲ್ಲಿ ಸಿಲುಕಿದ್ದ ನಾಗರಾಜನನ್ನು ರಕ್ಷಣೆ ಮಾಡಿದ್ದಾರೆ. ನಂತರ ರಕ್ಷಣೆ ಮಾಡಿದ ನಾಗರಹಾವನ್ನು ಕಳಸ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

    https://youtu.be/S5PZn4PZ1BY

  • ಚಾಲಕನ ನಿಯಂತ್ರಣ ತಪ್ಪಿ ಮಂಡ್ಯದ ಮದುವೆ ದಿಬ್ಬಣದ ಬಸ್ ಶೃಂಗೇರಿಯಲ್ಲಿ ಪಲ್ಟಿ

    ಚಾಲಕನ ನಿಯಂತ್ರಣ ತಪ್ಪಿ ಮಂಡ್ಯದ ಮದುವೆ ದಿಬ್ಬಣದ ಬಸ್ ಶೃಂಗೇರಿಯಲ್ಲಿ ಪಲ್ಟಿ

    ಚಿಕ್ಕಮಗಳೂರು: ಮದುವೆ ಮುಗಿಸಿಕೊಂಡು ವಾಪಸ್ ಹೊರಟಿದ್ದ ಮದುವೆ ದಿಬ್ಬಣ ಬಸ್ ಒಂದು ಪಲ್ಪಿ ಹೊಡೆದಿರುವ ಘಟನೆ ಶೃಂಗೇರಿಯ ಆನೆಗುಂದ ಬಳಿ ನಡೆದಿದೆ.

    ಶೃಂಗೇರಿಯಲ್ಲಿ ಸೋಮವಾರ ನಡೆದ ಮದುವೆ ಆಗಮಿಸಿದ್ದ ಮದುವೆ ದಿಬ್ಬಣ ಬಸ್ ಇಂದು ಮಂಡ್ಯಕ್ಕೆ ಹಿಂದಿರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಮದುವೆ ಸೋಮವಾರ ಮುಗಿದಿದ್ದು, ಬಸ್ ನಲ್ಲಿ ಕೇವಲ 16 ಜನ ಪ್ರಯಾಣಿಸುತ್ತಿದ್ದರು. ಈ ವೇಳೆ ಶೃಂಗೇರಿಯ ಆನೆಗುಂದ ಬಳಿ ಬಂದಾಗ ಅಪಘಾತ ಸಂಭವಿಸಿದೆ. ಶೃಂಗೇರಿ ರಸ್ತೆ ಮಾರ್ಗವು ಅತ್ಯಂತ ಹೆಚ್ಚು ತಿರುವುಗಳಿರುವ ಪ್ರದೇಶವಾಗಿದ್ದು, ಚಾಲಕನಿಗೆ ಇಂತಹ ಪ್ರದೇಶದಲ್ಲಿ ಬಸ್ ಚಾಲನೆ ಮಾಡಲು ಅನುಭವ ಇಲ್ಲದ ಕಾರಣ ಬಸ್ ನಿಯಂತ್ರಣ ಕಳೆದು ಕೊಂಡು ಪಲ್ಟಿ ಹೊಡೆದಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

    ಘಟನೆ ಕುರಿತು ಮಾಹಿತಿ ಪಡೆದಿರುವ ಶೃಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಕ್ಸಲ್ ಮಾಹಿತಿದಾರ ಎಂದು ಶಂಕಿಸಿ ಪೊಲೀಸರಿಂದ ಎಫ್‍ಐಆರ್ -ಮನನೊಂದ ರೈತ ಆತ್ಮಹತ್ಯೆ

    ನಕ್ಸಲ್ ಮಾಹಿತಿದಾರ ಎಂದು ಶಂಕಿಸಿ ಪೊಲೀಸರಿಂದ ಎಫ್‍ಐಆರ್ -ಮನನೊಂದ ರೈತ ಆತ್ಮಹತ್ಯೆ

    ಚಿಕ್ಕಮಗಳೂರು: ನಕ್ಸಲರ ಮಾಹಿತಿದಾರ ಎಂದು ಶಂಕಿಸಿ ಪೊಲೀಸರು ಎಫ್‍ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಮನನೊಂದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.

    62 ವರ್ಷದ ಮಾತೊಳ್ಳಿ ಸತೀಶ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಇವರು ಶೃಂಗೇರಿಯ ನಕ್ಸಲ್ ಪೀಡಿತ ಪ್ರದೇಶದ ನಿವಾಸಿಯಾಗಿದ್ದರು. ಈ ಪ್ರದೇಶದಲ್ಲಿ ಹಲವು ಬಾರಿ ನಕ್ಸಲ್ ಪರ ಘೋಷಣೆಗಳನ್ನು ಹೊಂದಿರುವ ಕರಪತ್ರಗಳು ಪತ್ತೆಯಾಗಿದ್ದವು.

    ಸತೀಶ್ ನಕ್ಸಲರಿಗೆ ಮಾಹಿತಿ ನೀಡಿವ ವ್ಯಕ್ತಿ ಎಂದು ಶಂಕಿಸಿ ಶೃಂಗೇರಿಯ ಸರ್ಕಲ್ ಇನ್ಸ್ ಪೆಕ್ಟರ್ ಸತೀಶ್ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಅಲ್ಲದೇ ಹಲವು ಬಾರಿ ಅವರನ್ನ ಠಾಣೆಗೆ ಕರೆಸಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿದ್ದರು ಎಂದು ಸ್ಥಳೀಯ ರೈತ ಮುಖಂಡರು ಆರೋಪಿಸಿದ್ದಾರೆ.

    ಪೊಲೀಸರ ಕಿರುಕುಳದಿಂದ ಬೇಸತ್ತ ಸತೀಶ್ ಕಳೆದ ಎರಡು ತಿಂಗಳಿನಿಂದ ಮನೆ ಬಿಟ್ಟು ಹೋಗಿದ್ದರು. ಆದರೆ ಗುರುವಾರ ಸಂಜೆ ಮನೆಗೆ ಆಗಮಿಸಿದ ಸತೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸತೀಶ್ ಅವರ ಆತ್ಮಹತ್ಯೆಗೆ ಶೃಂಗೇರಿಯ ಸರ್ಕಲ್ ಇನ್ಸ್ ಪೆಕ್ಟರ್ ಕಾರಣವೆಂದು ಶೃಂಗೇರಿ ರೈತ ಮುಖಂಡರು ಹಾಗೂ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಆರೋಪಿಸಿದ್ದಾರೆ. ಅಲ್ಲದೇ ಶೃಂಗೇರಿಯ ಸರ್ಕಲ್ ಇನ್ಸ್ ಪೆಕ್ಟರ್ ರನ್ನು ಅಮಾನತುಗೊಳಿಸಿ, ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಅಗ್ರಹಿಸಿದ್ದಾರೆ.

    ಈ ಕುರಿತು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಗೃಹಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸರ್ಕಲ್ ಇನ್ಸ್ ಪೆಕ್ಟರ್ ವಿರುದ್ಧ ದೂರು ನೀಡಿದ್ದು, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೋರಿದ್ದಾರೆ.

  • ಡಾಕ್ಟರ್ ಎಡವಟ್ಟಿಗೆ ರೋಗಿ ಬಲಿ: ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ

    ಡಾಕ್ಟರ್ ಎಡವಟ್ಟಿಗೆ ರೋಗಿ ಬಲಿ: ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ

    ಚಿಕ್ಕಮಗಳೂರು: ಖಾಸಗಿ ಆಸ್ಪತ್ರೆಯೊಂದರಲ್ಲಿ ಡಾಕ್ಟರ್ ಇಂಜೆಕ್ಷನ್ ನೀಡಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಬಣಕಲ್ ಮತ್ತಿಕಟ್ಟೆಯಲ್ಲಿ ನಡೆದಿದೆ.

    ಬಾಳೂರು ಹೊರಟ್ಟಿ ಗ್ರಾಮದ ನಿವಾಸಿ ವಿಜಯ್ ಸಾವನ್ನಪ್ಪಿರುವ ದುರ್ದೈವಿ. ಭಾನುವಾರ ರಾತ್ರಿ ವಾಂತಿ ಭೇದಿ ಆರೋಗ್ಯ ಸಮಸ್ಯೆಯಿಂದ ಬಣಕಲ್ ಮತ್ತಿಕಟ್ಟೆಯ ರಸ್ತೆಯಲ್ಲಿರುವ ಕಾಂಪೌಂಡರ್ ಚನ್ನಪ್ಪ ಅವರ ಖಾಸಗಿ ಕ್ಲಿನಿಕ್‍ಗೆ ಚಿಕಿತ್ಸೆಗಾಗಿ ಬಂದಿದ್ದಾರೆ.

    ಚಿಕಿತ್ಸೆ ಪಡೆದುಕೊಂಡ ಸ್ವಲ್ಪ ಹೊತ್ತಿಗೆ ವಿಜಯ್ ಮೃತಪಟ್ಟಿದ್ದಾರೆ. ಆದರೆ ಡಾಕ್ಟರ್ 3 ಇಂಜೆಕ್ಷನ್ ಕೊಟ್ಟಿರುವುದರಿಂದಲೇ ವಿಜಯ್ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.

    ವಿಜಯ್ ಶವವನ್ನು ಅಸ್ಪತ್ರೆಯ ಮುಂಭಾಗದಲ್ಲಿಟ್ಟು ಸಂಬಂಧಿಕರು ಪ್ರತಿಭಟನೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

     

  • ಚಿಕ್ಕಮಗಳೂರಿಗೆ ಭೇಟಿ ನೀಡಿದ ಆಮಿ ಜಾಕ್ಸನ್ ಫೋಟೋಗಳು ವೈರಲ್-ಇಲ್ಲಿವೆ ಆ ಎಲ್ಲ ಫೋಟೋಗಳು

    ಚಿಕ್ಕಮಗಳೂರಿಗೆ ಭೇಟಿ ನೀಡಿದ ಆಮಿ ಜಾಕ್ಸನ್ ಫೋಟೋಗಳು ವೈರಲ್-ಇಲ್ಲಿವೆ ಆ ಎಲ್ಲ ಫೋಟೋಗಳು

    ಬೆಂಗಳೂರು: ಟಾಲಿವುಡ್, ಕಾಲಿವುಡ್, ಬಾಲಿವುಡ್ ಸೇರಿದಂತೆ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಿರುವ ಹಾಟ್ ಬೆಡಗಿ ಆಮಿ ಜಾಕ್ಸನ್ ಸೆಪ್ಟಂಬರ್ 7 ರಂದು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದು, ಸದ್ಯ ಆಮಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಆಮಿ ಸದ್ಯ `ದಿ ವಿಲನ್’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ತಮ್ಮ ಛಾಪನ್ನು ಮೂಡಿಸಲು ರೆಡಿಯಾಗಿದ್ದಾರೆ. ಈ ನಡುವೆ ಆಮಿ ದೇಶದ ಹಲವೆಡೆ ಪ್ರವಾಸವನ್ನು ಕೈಗೊಂಡಿದ್ದು, ಗುರುವಾರ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಆಮಿ ತಾವು ತೆಗೆಸಿಕೊಂಡ ಫೋಟೋಗಳನ್ನು ತಮ್ಮ ಇನ್‍ ಸ್ಟಾಗ್ರಾಂ ಮತ್ತು ಟ್ವಿಟರ್‍ನಲ್ಲಿ ಹರಿಬಿಟ್ಟಿದ್ದಾರೆ.

    ಹಳದಿ ಬಣ್ಣದ ತುಂಡುಡುಗೆ ಧರಿಸಿರುವ ಆಮಿ ಕಟ್ಟಿಗೆಯಿಂದ ಮಾಡಲ್ಪಟ್ಟ ಗೋಪುರದಲ್ಲಿ ನಿಂತು ಸೂರ್ಯಾಸ್ತವನ್ನು ನೋಡುವ ಫೋಟೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಫೋಟೋದೊಂದಿಗೆ ಸೂರ್ಯನ ಕಿರಣಗಳು ನನ್ನ ಪಾಕೆಟ್ ನಲ್ಲಿವೆ ಎಂಬ ಅಡಿಬರಹವನ್ನು ಬರೆದಿದ್ದಾರೆ. ಇನ್ನೂ ಹೀಗೆ ಎಳನೀರು ಕುಡಿಯುತ್ತಿರುವುದು, ಹಸುವನ್ನು ಮುದ್ದಾಡುವುದು, ದೇವಸ್ಥಾನದತ್ತ ಮುಗುಳ್ನಗೆಯ ನೋಟ ಮತ್ತು ಮುಳ್ಳಯ್ಯನಗಿರಿಯ ದೇವಸ್ಥಾನದ ಮುಂದೆ ನಿಂತಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

    ಟ್ವಿಟರ್ ನಲ್ಲಿ ತಾವು ಸುದೀಪ್ ಅವರೊಂದಿಗೆ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಚಿಕ್ಕಮಗಳೂರಿಗೆ ಭೇಟಿ ನೀಡಿರುವುದು ನನಗೆ ಅತೀವ ಸಂತೋಷವನ್ನು ಉಂಟು ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.

    ಕನ್ನಡ ಮಾಣಿಕ್ಯ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಜೋಡಿ ಮೊದಲ ಬಾರಿಗೆ `ದಿ ವಿಲನ್’ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದು, ನಾಯಕಿಯಾಗಿ ಆಮಿ ಜಾಕ್ಸನ್ ಬಣ್ಣ ಹಚ್ಚಿದ್ದಾರೆ.

    https://www.instagram.com/p/BYw1h44FLIO/?hl=en&taken-by=iamamyjackson

    https://www.instagram.com/p/BYuMMJmldJL/?hl=en&taken-by=iamamyjackson

    https://www.instagram.com/p/BYqQHkZlW_o/?hl=en&taken-by=iamamyjackson

  • ರಮಾನಾಥ ರೈಗೆ ಗೃಹ ಖಾತೆ: ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದು ಹೀಗೆ

    ರಮಾನಾಥ ರೈಗೆ ಗೃಹ ಖಾತೆ: ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದು ಹೀಗೆ

    ಚಿಕ್ಕಮಗಳೂರು: ರಮಾನಾಥ ರೈ ಗೃಹ ಸಚಿವ ಆಗುವುದು ನನಗೆ ಸಂತೋಷ ತಂದಿದೆ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಹೇಳಿದರು.

    ಮೂಡಿಗೆರೆಯ ಸಾರ್ವಜನಿಕ ಗಣಪತಿ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಮಾನಾಥ ರೈ ಅವರು ಸಿಟ್ಟಿನಿಂದ, ದ್ವೇಷದಿಂದ, ಆವೇಷದಿಂದ ಧರ್ಮವಿರೋಧಿ ಕೆಲಸ ಮಾಡಬಾರದು. ಏಕೆಂದರೆ ಗೃಹ ಅಂದರ ಮನೆ, ಮನೆ ಆನಂದ, ಸಂತೋಷ ನೀಡುವಂತಹ ಜಾಗ. ರೈ ಅವರಿಗೆ ಇಡೀ ರಾಜ್ಯವೇ ಮನೆ ಇದ್ದ ಹಾಗೆ. ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ನೀಡಿ ರಾಜಕೀಯ ವೈರತ್ವ ಮರೆತು ಕೆಲಸ ಮಾಡಲಿ ಎಂದು ರೈ ಅವರಿಗೆ ಸಲಹೆ ನೀಡಿದರು.

    ಕೊಲ್ಲೂರು ದೇವಾಲಯದಿಂದ ಕಲ್ಲಡ್ಕ ಶ್ರೀರಾಮ ಶಾಲೆಗೆ ಅನುದಾನ ನಿಲ್ಲಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಕಾನೂನು ಸಮರ ನಿಲ್ಲಿಸೋದು ಇಲ್ಲ, ಅವರ ಕಾಲಿಗೂ ಬೀಳೋದಿಲ್ಲ. ಸರ್ಕಾರ ಮಕ್ಕಳಿಗೆ ಮೋಸ ಮಾಡುತ್ತಿದೆ ಎಂದು ಹೇಳಿದರು.

    ಸಿದ್ದರಾಮಯ್ಯ ನಾನು ಅಹಿಂದ ಸಿಎಂ ಎಂದು ಹೇಳುತ್ತಾರೆ. ಆದರೆ ಕಲ್ಲಡ್ಕ ಶಾಲೆಯಲ್ಲಿ ಶೇ.94 ರಷ್ಟು ಅಹಿಂದ ಮಕ್ಕಳಿದ್ದಾರೆ. ಈ ಸರ್ಕಾರ ಮಕ್ಕಳ ಹೊಟ್ಟೆ ಮೇಲೆ ಹೊಡೆದಿದೆ. ಇದು ಅಧರ್ಮದಲ್ಲಿ ನಡೆಯುತ್ತಿರೋ ಸರ್ಕಾರ. ಇವರಿಗೆ ರಾಜಕೀಯ ದ್ವೇಷವಿದ್ದರೆ ಅಖಾಡಕ್ಕೆ ಬರಲಿ ಹೋರಾಡೋಣ. ಅದನ್ನು ಬಿಟ್ಟು ಮಕ್ಕಳ ಜೊತೆ ಹೋರಾಡಬಾರದು ಯಾರೇ ಆಗಲಿ ಯಾವ ಪಕ್ಷದವರೇ ಆಗಲಿ, ಮಕ್ಕಳ ಅನ್ನಕ್ಕೆ ಕನ್ನ, ಕಲ್ಲು ಹಾಕಬಾರದು ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.

    ಮೂಡಿಗೆರೆಯ ಹ್ಯಾಂಡ್ ಪೋಸ್ಟ್‍ನಿಂದ ಬೈಕ್ ಜಾಥಾ ಮಾಡುವ ಮೂಲಕ ಪ್ರಭಾಕರ್ ಭಟ್ ಅವರನ್ನು ಸ್ವಾಗತಿಸಿಕೊಂಡರು. ಕಲ್ಲಡ್ಕ ಪ್ರಭಾಕರ್ ಭಟ್ ಮೆರವಣಿಗೆಗಾಗಿ ಸ್ಥಳೀಯರು ತೆರೆದ ಜೀಪ್ ಸಿದ್ಧಪಡಿಸಿಕೊಂಡಿದ್ದರು. ಆದರೆ ಪ್ರಭಾಕರ್ ಭಟ್ ಮೆರವಣಿಗೆಯಲ್ಲಿ ಪಾಲ್ಗೊಳ್ಳದೆ ತಮ್ಮ ಕಾರಿನಲ್ಲಿ ನೇರವಾಗಿ ರಂಗಮಂದಿರದ ಬಳಿ ಬಂದು ಗಣಪತಿಯ ಹೋಮ-ಹವನ ಪೂಜೆಯಲ್ಲಿ ಪಾಲ್ಗೊಂಡು ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.

    ನಗರದಾದ್ಯಂತ 800 ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅನೇಕ ಷರತ್ತು ವಿಧಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಆಗಮನಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದರು.

  • ಬೈಕ್‍ಗೆ ಡಿಕ್ಕಿ ಹೊಡೆದ ಶಾಸಕರ ಕಾರು-ಅಪಘಾತದ ಬಳಿಕ ಕಾರ್ ನಿಲ್ಲಿಸದೇ ಹೋದ ಶಾಸಕ

    ಬೈಕ್‍ಗೆ ಡಿಕ್ಕಿ ಹೊಡೆದ ಶಾಸಕರ ಕಾರು-ಅಪಘಾತದ ಬಳಿಕ ಕಾರ್ ನಿಲ್ಲಿಸದೇ ಹೋದ ಶಾಸಕ

    ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಕಬ್ಬಿಣ ಸೇತುವೆ ಬಳಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಬೈಕ್‍ಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸದೇ ತಮ್ಮ ಅಧಿಕಾರದ ದರ್ಪ ಮೆರೆದಿದ್ದಾರೆ.

    ಜನರು ಕಾಶಪ್ಪನವರ ಕಾರನ್ನು ಬೆನ್ನತ್ತಿ, ಬಿಳುಗುಳದ ಬಳಿ ಕಾರಿಗೆ ಮುತ್ತಿಗೆ ಹಾಕಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಪಘಾತದ ಬಳಿಕ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಯುವಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  • ಮಗಳಿಗೆ ನೇಣು ಹಾಕಿ-ಆತ್ಮಹತ್ಯೆಗೆ ಶರಣಾದ ತಂದೆ

    ಮಗಳಿಗೆ ನೇಣು ಹಾಕಿ-ಆತ್ಮಹತ್ಯೆಗೆ ಶರಣಾದ ತಂದೆ

    ಚಿಕ್ಕಮಗಳೂರು: ಮಗಳಿಗೆ ನೇಣು ಹಾಕಿ, ಕೊನೆಗೆ ತಂದೆಯೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ನಡೆದಿದೆ.

    ಮೋಹನ್(33) ಮತ್ತು ಲಕ್ಷ್ಮಿ(8) ಆತ್ಮಹತ್ಯೆಗೆ ಶರಣಾದ ತಂದೆ-ಮಗಳು. ಮೋಹನ್ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ತಂದೆ ಮಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೋಹನ್ ಮಗಳಿಗೆ ನೇಣು ಹಾಕಿದ್ದು, ಕೊನೆಗೆ ತಾನು ಮಗಳ ಪಕ್ಕದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಉರುಳಿಗೆ ಸಿಲುಕಿ ನರಳಾಟ: ಚಿರತೆ ನೋಡಲು ಮುಗಿಬಿದ್ದ ಜನ

    ಉರುಳಿಗೆ ಸಿಲುಕಿ ನರಳಾಟ: ಚಿರತೆ ನೋಡಲು ಮುಗಿಬಿದ್ದ ಜನ

    ಚಿಕ್ಕಮಗಳೂರು:  5 ವರ್ಷದ ಚಿರತೆಯೊಂದು ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಗ್ರಾಮದಲ್ಲಿ ಉರುಳಿಗೆ ಬಿದ್ದಿದೆ

    ಗ್ರಾಮಸ್ಥರು ಪ್ರಾಣಿ ಬೇಟೆಗಾಗಿ ಕಾಫಿ ತೋಟದಲ್ಲಿ ಉರುಳನ್ನು ಹಾಕಿದ್ದರು. ಈ ಉರುಳಿಗೆ ಚಿರತೆ ಬಿದ್ದಿತ್ತು. ಚಿರತೆಯ ಒಂದು ಕಾಲು ಉರುಳಿನಲ್ಲಿ ಸಿಕ್ಕಿಕೊಂಡ ಕಾರಣ ನರಳಾಡುತಿತ್ತು.

    ಉರುಳಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ತಂಡೋಪತಂಡವಾಗಿ ಜನರು ಬಸರವಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದು ಚಿರತೆಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಅದನ್ನು ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿದೆ.

    ಉರುಳು ಹಾಕಿದವರ ವಿರುದ್ಧ ಅರಣ್ಯಾಧಿಕಾರಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಎಂಜಿನಿಯರಿಂಗ್ ಓದಿದ್ರೂ ಗೋವು, ರೈತರ ರಕ್ಷಣೆಗೆ ನಿಂತ ಚಿಕ್ಕಮಗಳೂರಿನ ಶಿವಪ್ರಸಾದ್

    ಎಂಜಿನಿಯರಿಂಗ್ ಓದಿದ್ರೂ ಗೋವು, ರೈತರ ರಕ್ಷಣೆಗೆ ನಿಂತ ಚಿಕ್ಕಮಗಳೂರಿನ ಶಿವಪ್ರಸಾದ್

    ಚಿಕ್ಕಮಗಳೂರು: ನಿಜವಾದ ಗೋವು ರಕ್ಷಕ ಅಂದ್ರೆ ಇವತ್ತಿನ ಪಬ್ಲಿಕ್ ಹೀರೋ ಆದ ಚಿಕ್ಕಮಗಳೂರಿನ ಶಿವಪ್ರಸಾದ್. ಗಂಡು ಕರು ಅನ್ನೋ ಕಾರಣಕ್ಕೆ ಆ ಕರುವನ್ನ ಕಸಾಯಿಖಾನೆಗೆ ಕೊಡೋದನ್ನ ನೋಡಿ ಮನನೊಂದು ಅವತ್ತಿನಿಂದಲೇ ಗೋಶಾಲೆ ಆರಂಭಿಸಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ನಿವಾಸಿಯಾದ ಶಿವಪ್ರಸಾದ್ ಮೆಕಾನಿಕಲ್ ಎಂಜಿನಿಯರ್ ಓದಿದ್ದಾರೆ. ಆದ್ರೂ ಗೋವು ಹಾಗೂ ರೈತರ ರಕ್ಷಣೆಗೆ ನಿಂತಿದ್ದಾರೆ. ಗಂಡು ಕರು ಅನ್ನೋ ಕಾರಣಕ್ಕೆ ಕಸಾಯಿಖಾನೆಗೆ ಕರೆದೊಯ್ಯುತ್ತಿದ್ದದನ್ನ ಕಂಡು ಅತೀವವಾಗಿ ಮನನೊಂದು ಸ್ವಂತ ಖರ್ಚಿನಲ್ಲಿ ಗೋಶಾಲೆ ತೆರೆದಿದ್ದಾರೆ.

    ಈ ಗೋಶಾಲೆಗೆ ಯಾರು ಬೇಕಾದ್ರು ತಮ್ಮ ದನಕರುಗಳನ್ನ ತಂದು ಇಲ್ಲಿ ಬಿಡಬಹುದು. ಸದ್ಯಕ್ಕೆ ಇಲ್ಲಿ ಹತ್ತು ರಾಸುಗಳಿವೆ. ದೊಡ್ಡ ಪ್ರಮಾಣದಲ್ಲಿ ಗೋಶಾಲೆ ತೆರೆಯಬೇಕೆಂದೇ ತಮ್ಮ ಜಮೀನಿನಲ್ಲಿ ಒಂದು ಎಕರೆಯಷ್ಟು ಭೂಮಿಯನ್ನ ಮೀಸಲಿಟ್ಟಿದ್ದಾರೆ. ಹಾಗೆ ಗೋವಿನ ಸಗಣಿ ಹಾಗೂ ಗಂಜಲದಿಂದ 20ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನ ಮಾಡಿ ಸ್ವಂತ ಕಂಪನಿಯೊಂದನ್ನ ನಿರ್ಮಿಸಿದ್ದಾರೆ.

    ಅಷ್ಟೇ ಅಲ್ಲ ರೈತರೊಂದಿಗೆ ಕೈಜೋಡಿಸಿ 128 ಎಕರೆಯಲ್ಲಿ ಸಾವಯವ ಗೊಬ್ಬರ ಮಾತ್ರ ಬಳಸಿ ತರಕಾರಿ ಬೆಳೆಯುತ್ತಿದ್ದಾರೆ. ಈ ತರಕಾರಿಯನ್ನ ಬೆಂಗಳೂರಿನ ದೊಡ್ಡ-ದೊಡ್ಡ ಅಪಾರ್ಟ್‍ಮೆಂಟ್‍ಗೆ ಪೂರೈಸ್ತಿದ್ದಾರೆ. ಮಾರ್ಕೆಟ್ ರೇಟ್‍ಗಿಂತ ಶೇ.25ರಷ್ಟು ಹೆಚ್ಚಿನ ಹಣವನ್ನ ರೈತರಿಗೆ ಕೊಟ್ಟು, ತಾವೂ ಬದುಕುತ್ತಿದ್ದಾರೆ. ಇವರ ಈ ಸಹಕಾರದ ಯೋಜನೆಯಿಂದ ಪಾಳುಬಿದ್ದ ಭೂಮಿ ಈಗ ಕೃಷಿ ಭೂಮಿಯಾಗಿದೆ. ಕೆಲಸಕ್ಕಾಗಿ ನಗರಗಳತ್ತ ಹೋಗ್ತಿದ್ದ ಯುವಕರು ಕೃಷಿಯತ್ತ ಮುಖಮಾಡಿದ್ದಾರೆ.

    ಒಟ್ಟಿನಲ್ಲಿ ಗೋವನ್ನ ಹಿಂಸಿಸದೆ ಪೋಷಿಸಿ ಹೀಗೂ ಬದುಕು ಕಟ್ಟಿಕೊಳ್ಳಬಹುದು ಅಂತ ತೋರಿಸಿರೋ ಶಿವಪ್ರಸಾದ್‍ಗೆ ನಮ್ಮದೊಂದು ಸಲಾಂ.