Tag: Chikmagalur

  • ಸರ್ಕಾರ ನಿರ್ಲಕ್ಷಿಸಿದ್ರೂ 14 ವರ್ಷಗಳಿಂದ ಗ್ರಾಮಕ್ಕೆ ಜೀವಜಲ ಪೂರೈಸುತ್ತಿದ್ದಾರೆ ಚಿಕ್ಕಮಗ್ಳೂರಿನ ಹುಸೇನ್

    ಸರ್ಕಾರ ನಿರ್ಲಕ್ಷಿಸಿದ್ರೂ 14 ವರ್ಷಗಳಿಂದ ಗ್ರಾಮಕ್ಕೆ ಜೀವಜಲ ಪೂರೈಸುತ್ತಿದ್ದಾರೆ ಚಿಕ್ಕಮಗ್ಳೂರಿನ ಹುಸೇನ್

    ಚಿಕ್ಕಮಗಳೂರು: ನೀರು ಪೂರೈಸಲು ಸರ್ಕಾರ ನಿರ್ಲಕ್ಷಿಸಿದರೂ, ಕಳೆದ 14 ವರ್ಷಗಳಿಂದ ವ್ಯಕ್ತಿಯೊಬ್ಬರು ಗ್ರಾಮಕ್ಕೆ ಜೀವಜಲ ಪೂರೈಕೆ ಮಾಡುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.

    ಚಿಕ್ಕಮಗಳೂರು ತಾಲೂಕಿನ ಗಡಬನಹಳ್ಳಿ ಔರಂಗ್ ಹತಿಕ್ ಹುಸೇನ್ ಅವರೇ ಆಧುನಿಕ ಭಗೀರಥ. ಮೋಡಿಗೆರಿ ವಿಧಾನಸಭೆ ಮತಕ್ಷೇತ್ರದ ಶಾಸಕ ಬಿ.ಬಿ.ನಿಂಗಯ್ಯ ಅವರು ಗ್ರಾಮದಲ್ಲಿ ಎರಡು ಬೋರ್ ಕೊರೆಸಿದ್ದರು. ಆದರೆ ಒಂದರಲ್ಲಿ ಕೆಸರು ಬಂದರೆ, ಮತ್ತೊಂದರಲ್ಲಿ ನೀರು ಬರಲಿಲ್ಲ. ಇದರಿಂದಾಗಿ ಸರ್ಕಾರ ಸುಸ್ತಾಗಿತ್ತು. ಸರ್ಕಾರದಿಂದ ಆಗದಿರುವ ಕೆಲಸವನ್ನು ಹುಸೇನ್ ಅವರು ಮಾಡಿ ತೋರಿಸಿದ್ದಾರೆ.

    ಗಡಬನಹಳ್ಳಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿದ್ದು, 200ಕ್ಕೂ ಅಧಿಕ ಜನ ವಾಸವಿದ್ದಾರೆ. ಎಲ್ಲರೂ ಕೂಲಿ ಕಾರ್ಮಿಕರು. ಆದರೆ ಇಲ್ಲಿ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ. ಹೀಗಾಗಿ ಹುಸೇನ್ ಅವರು 14 ವರ್ಷಗಳಿಂದ ವಾರಕ್ಕೆ ಎರಡು ದಿನದಂತೆ (ಮಂಗಳವಾರ ಮತ್ತು ಶುಕ್ರವಾರ) ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ.

    ಹುಸೇನ್ ಅವರು ಗ್ರಾಮಸ್ಥರಿಗಾಗಿಯೇ 2 ವರ್ಷದ ಹಿಂದೆ ಕೊಳವೆ ಬಾವಿ ಕೊರೆಸಿದ್ದು, ಅದರಲ್ಲಿ 4 ಇಂಚು ನೀರು ಸಿಗುತ್ತಿದೆ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ 5 ಸಾವಿರ ಲೀಟರ್‍ನ ಸಿಂಟೆಕ್ಸ್ ತಂದಿಟ್ಟು, ವಿದ್ಯುತ್ ಲಭ್ಯವಿದ್ದಾಗ ನೀರು ತುಂಬಿ, ಬೇಕಾದಾಗ ಜನರಿಗೆ ಬಿಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿಮ್ಮ ನೀರಿಗೆ ಹಣ ನೀಡುತ್ತೇವೆ, ವಿದ್ಯುತ್ ಬಿಲ್ ಕೊಡುತ್ತೇವೆ ಅಂತಾ ಬೆಲೆಕಟ್ಟಲು ಮುಂದಾಗಿದ್ದರು. ಆದರೆ ಹುಸೇನ್ ಅವರು, ನಾನು ನೀರನ್ನ ಮಾರುತ್ತಿಲ್ಲ. ನೀರನ್ನು ಮಾರಿ ದುಡಿಯುವ ಸ್ಥಿತಿ ಇನ್ನು ನನಗೆ ಬಂದಿಲ್ಲ ಅಂತ ತಿರುಗೇಟು ನೀಡಿದ್ದಾರೆ.

    https://youtu.be/gQbYOWvPxe0

  • ಎಲಿಫೆಂಟ್ ಗೋಲ್ಮಾಲ್: ಕಾಫಿ ತೋಟದ ಕೆಲಸಕ್ಕೆ ಆನೆ ಬಳಕೆ

    ಎಲಿಫೆಂಟ್ ಗೋಲ್ಮಾಲ್: ಕಾಫಿ ತೋಟದ ಕೆಲಸಕ್ಕೆ ಆನೆ ಬಳಕೆ

    -ಟಿಂಬರ್ ಮಾಫಿಯಾಕ್ಕಾಗಿ ಆನೆಯನ್ನು ಕರೆತಂದಿರೋ ಶಂಕೆ!

    ಚಿಕ್ಕಮಗಳೂರು: ಕಾಡು ಪ್ರಾಣಿಗಳನ್ನ ಸರ್ಕಸ್ ಅಥವಾ ದುಡಿಸಿಕೊಳ್ಳುವದಕ್ಕಾಗಿ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಚಿಕ್ಕಮಗಳೂರಿನ ಪಂಡರವಳ್ಳಿ ಕಾಫಿತೋಟದ ಕೆಲಸಕ್ಕೆ ಆನೆಯನ್ನ ಅಕ್ರಮವಾಗಿ ಕರೆತರಲಾಗಿತ್ತು. ಆರ್‍ಎಫ್‍ಓ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಿ ಕೇರಳದಿಂದ ಬಂದಿದ್ದ ಆನೆಯನ್ನ ರಕ್ಷಣೆ ಮಾಡಲಾಗಿದೆ.

    ಅರಣ್ಯ ಅಧಿಕಾರಿಗಳು ಶನಿವಾರ ರಾತ್ರಿ ಆನೆಯನ್ನ ಅದೇ ಲಾರಿಯಲ್ಲಿ ಪುನಃ ಕೇರಳಕ್ಕೆ ಕಳುಹಿಸಿದ್ದಾರೆ. ಆನೆ ಮೂಲತಃ ಅಸ್ಸಾಂ ರಾಜ್ಯದ ಜೋನೋರಾಂ ಬಹುರಾ ಎಂಬವರಿಗೆ ಸೇರಿದೆ. ಆನೆಗೆ ಅಳವಡಿಸಿರೋ ಮೈಕ್ರೋ ಚಿಪ್ ಕೂಡ ಅಸ್ಸಾಂ ಅಂತಾ ತೋರಿಸುತ್ತಿದೆ.

    ಆನೆ ನಮ್ಮದೆಂದು ಹೇಳಿಕೊಳ್ಳುವ ಕೇರಳದ ಪಿ.ಕೋಯಾ ಮತ್ತು ಸೈದಲಿ ಕುಟ್ಟಿ ಎಂಬವರ ಮೇಲೆ ಅಥವಾ ಆನೆಯ ಮೂಲ ಮಾಲೀಕನ ಮೇಲಾಗಲಿ ಪ್ರಕರಣ ದಾಖಲು ಮಾಡದೆ ಕೇವಲ ಮಾವುತ ಹಾಗೂ ಲಾರಿಯ ಚಾಲಕನ ಮೇಲೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಟಿಂಬರ್ ಮಾಫಿಯಾ ಪ್ರಭಾವಕ್ಕೆ ಕಟ್ಟುಬಿದ್ದು ಅಧಿಕಾರಿಗಳು ಆನೆಯ ಮಾಲೀಕರನ್ನು ರಕ್ಷಿಸಿದ್ದಾರೆಂದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.

    ಆನೆಯನ್ನ ಅಸ್ಸಾಂನಿಂದ ಕೇರಳಾಕ್ಕೆ ತಂದಿರೋ ಬಗ್ಗೆಯೂ ಅಥವಾ ಸಾಗಾಟದ ಅನುಮತಿ ಪತ್ರವೂ ಯಾರ ಬಳಿಯೂ ಇಲ್ಲ. ನಕಲಿ ದಾಖಲೆ ಸೃಷ್ಟಿಸಿ ಆನೆಯನ್ನ ಕೇರಳದಲ್ಲಿ ಇಟ್ಟುಕೊಂಡು ಟಿಂಬರ್ ಕೆಲಸಕ್ಕೆ ಕರ್ನಾಟಕಕ್ಕೆ ತರಲಾಗಿದೆ. ಇದೊಂದು ದೊಡ್ಡ ಪ್ರಕರಣವಾಗಿದ್ದು ಸೂಕ್ತ ತನಿಖೆಯಾಗಬೇಕು. ರಾಜ್ಯದ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಆನೆ ಕಳ್ಳಸಾಗಾಣೆ ದಂಧೆಕೋರರ ಮತ್ತು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪ್ರಕರಣವನ್ನು ಕೈಬಿಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸುವ ಪರಿಸರವಾದಿಗಳು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

  • ಶೌಚಾಲಯ ಪರಿಶೀಲನೆ ನಡೆಸಿದ ಸಚಿವ ತಿಮ್ಮಣ್ಣ: ಮುಜುಗರಕ್ಕೀಡಾದ ಮಹಿಳೆಯರು

    ಶೌಚಾಲಯ ಪರಿಶೀಲನೆ ನಡೆಸಿದ ಸಚಿವ ತಿಮ್ಮಣ್ಣ: ಮುಜುಗರಕ್ಕೀಡಾದ ಮಹಿಳೆಯರು

    ಚಿಕ್ಕಮಗಳೂರು: ಬಸ್ ನಿಲ್ದಾಣದ ಶೌಚಾಲಯ ವ್ಯವಸ್ಥೆ ತಿಳಿಯಲು ಸಾರಿಗೆ ಸಚಿವ ಡಿಸಿ ತಿಮ್ಮಣ್ಣ ಅವರೇ ನೇರವಾಗಿ ಮಹಿಳಾ ಶೌಚಾಲಯಕ್ಕೆ ಹೋದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಸಾರಿಗೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಸಚಿವರು ಮುಂದಾಗಿದ್ದು, ಇಂದು ಚಿಕ್ಕಮಗಳೂರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ್ದರು. ಹೀಗಾಗಿ ಶೌಚಾಲಯದ ವ್ಯವಸ್ಥೆ ತಿಳಿಯಲು ಪುರುಷರು ಹಾಗೂ ಮಹಿಳಾ ಶೌಚಾಲಯಗಳಿಗೆ ಸ್ವತಃ ತಾವೇ ಭೇಟಿ ನೀಡಿ ಪರಿಶೀಲನೆಗೆ ಮುಂದಾದರು. ಮಹಿಳಾ ಶೌಚಾಲಯಕ್ಕೆ ಸಚಿವರ ಭೇಟಿಯಿಂದಾಗಿ ನಿಲ್ದಾಣದಲ್ಲಿದ್ದ ಮಹಿಳೆಯರು ಮುಜುಗರಕ್ಕೆ ಒಳಗಾದರು.

    ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದಕ್ಕೆ ಸಚಿವ ತಿಮ್ಮಣ್ಣ ಅವರು ಅಸಮಾಧಾನ ಹೊರಹಾಕಿ, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಅಲ್ಲದೇ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

  • ಆಗುಂಬೆ ಘಾಟ್ ನಲ್ಲಿ ಬಸ್ ಸಂಚಾರ ಆರಂಭ

    ಆಗುಂಬೆ ಘಾಟ್ ನಲ್ಲಿ ಬಸ್ ಸಂಚಾರ ಆರಂಭ

    ಉಡುಪಿ: ಭೂ ಕುಸಿತದಿಂದಾಗಿ ಆಗುಂಬೆ ಘಾಟ್ ನಲ್ಲಿ ಕಳೆದೆರಡು ದಿನಗಳ ಹಿಂದೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ್ದು, ಇಂದು ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

    ಆಗುಂಬೆ ಘಾಟ್ ನಲ್ಲಿ ಇಂದಿನಿಂದ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಉಡುಪಿಯಿಂದ ಶಿವಮೊಗ್ಗ- ಚಿಕ್ಕಮಗಳೂರು ಮಾರ್ಗವಾಗಿ ಬಸ್ ಓಡಾಟ ಶುರುವಾಗಲಿದೆ. ಆಗುಂಬೆ ಘಾಟ್ ನಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆದಿದ್ದು ಮರಳು ಚೀಲ, ಕಾಂಕ್ರೀಟ್ ಜಲ್ಲಿ ಪುಡಿ ಹಾಕಲಾಗಿದೆ. ಲಾರಿ, ಟಿಪ್ಪರ್ ನಂಥ ಭಾರೀ ವಾಹನಗಳ ಸಂಚಾರ ನಿಷೇಧ ಮುಂದುವರೆದಿದ್ದು, ಬಸ್ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.

    ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಆಗುಂಬೆ ಘಾಟ್ ನ 7 ನೇ ತಿರುವಿನಲ್ಲಿ ಭೂ ಕುಸಿತ ಉಂಟಾಗಿತ್ತು. ಇದರಿಂದ ರಸ್ತೆ ಕುಸಿದು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಅಲ್ಲದೇ ಜಿಲ್ಲಾಡಳಿತ ಈ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿತ್ತು.

    ಇನ್ನೂ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು, ಸತತ 2 ದಿನಗಳಿಂದ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ನದಿ ತೀರದ ಜನರು ದೋಣಿ ಬಳಸಿ ಸಂಚಾರ ಮಾಡುತ್ತಿದ್ದಾರೆ. ಇತ್ತ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುಂಜಾಗೃತೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಉಡುಪಿ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು ದಿನಪೂರ್ತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಧ್ಯಾಹ್ನದಿಂದ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

    ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ ತಾಲೂಕಿನಲ್ಲಿ ಸಾಧಾರಣ ಮಳೆ ಕಂಡುಬಂದರೆ, ಚಾರ್ಮಾಡಿ, ಕಳಸ, ಬಾಳೆಹೊನ್ನೂರು ಭಾಗದಲ್ಲಿ ಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ. ಮಲೆನಾಡು ಭಾಗ ಮಂಜಿನಿಂದ ಮುಚ್ಚಿಕೊಂಡಿದ್ದು, ಭಾರೀ ಮಳೆಯಿಂದಾಗಿ ತುಂಗಾ-ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

    ರಾಜ್ಯದಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಂಭವ ಇದೆ. ಇನ್ನೂ ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಂಭವ ಇದೆ. ಈಗಾಗಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆಯ ವಿಜ್ಞಾನಿ ಗವಾಸ್ಕರ್ ಪಬ್ಲಿಕ್ ಟಿವಿಗೆ ತಿಳಿಸಿದ್ದರು.

  • ಕಾಫಿ ತೋಟಕ್ಕೆ ನುಗ್ಗಿ ಕಾಡು ಕುರಿಯನ್ನು ನುಂಗಿದ ಹೆಬ್ಬಾವು!

    ಕಾಫಿ ತೋಟಕ್ಕೆ ನುಗ್ಗಿ ಕಾಡು ಕುರಿಯನ್ನು ನುಂಗಿದ ಹೆಬ್ಬಾವು!

    ಚಿಕ್ಕಮಗಳೂರು: ಕಾಫಿ ತೋಟಕ್ಕೆ ನುಗ್ಗಿದ ಹೆಬ್ಬಾವು ಕಾಡು ಕುರಿಯೊಂದನ್ನು ನುಂಗಿಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪ ನಡೆದಿದೆ.

    ಮೂಡಿಗೆರೆ ತಾಲೂಕಿನ ಸಮೀಪದ ಕಾಫಿ ತೋಟವೊಂದರಲ್ಲಿ ಕಾಡುಕುರಿಯೊಂದನ್ನು ಅರ್ಧ ನುಂಗಿದ ಹೆಬ್ಬಾವು ಮುಂದೆ ತೆವಳಲಾಗದೇ, ಕಾಡಿಗೆ ಹೊಂದಿಕೊಂಡಿರುವ ತೋಟದ ಪಕ್ಕದಲ್ಲಿ ಬಿದ್ದುಕೊಂಡಿತ್ತು.

    ತೋಟಗಳಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕರು ಹೆಬ್ಬಾವನ್ನ ಕಂಡು ಕೂಗಾಡಿದ್ದಾರೆ. ಹಾವನ್ನ ಕಂಡ ತೋಟದ ಮಾಲೀಕ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ.

    ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಹಾಗೂ ಸ್ನೇಕ್ ಆರೀಫ್ ಮಲೆನಾಡಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುವ ಹೆಬ್ಬಾವನ್ನ ರಕ್ಷಿಸಿದ್ದಾರೆ. ಅದನ್ನು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯಕ್ಕೆ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಆದರೆ ಹೆಬ್ಬಾವಿನ ಬಾಯಿಗೆ ಅರ್ಧಂಬರ್ಧ ತುತ್ತಾಗಿದ್ದ ಕಾಡು ಕುರಿ ಹಾವಿನ ಬಾಯಿಂದ ಹೊರಬರುವಷ್ಟರಲ್ಲೇ ಅಸುನೀಗಿದೆ.

  • ಮೃತ ಬಿಜೆಪಿ ಮುಖಂಡ ಅನ್ವರ್ ಸಹೋದರ ಕಬೀರ್ ಹೇಳೋದು ಹೀಗೆ

    ಮೃತ ಬಿಜೆಪಿ ಮುಖಂಡ ಅನ್ವರ್ ಸಹೋದರ ಕಬೀರ್ ಹೇಳೋದು ಹೀಗೆ

    ಚಿಕ್ಕಮಗಳೂರು: ಶಾಸಕ ಸಿ.ಟಿ. ರವಿ ಆಪ್ತ ಹಾಗೂ ಚಿಕ್ಕಮಗಳೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನ್ವರ್ ಅವರ ಕೊಲೆಗೆ ಸುಪಾರಿ ನೀಡಲಾಗಿತ್ತು ಎಂದು ಮೃತ ಅನ್ವರ್ ಸಹೋದರ ಕಬೀರ್ ಆರೋಪಿಸಿದ್ದಾರೆ.

    ಅನ್ವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸಿಫ್ ಹಾಗೂ ಯುಸೂಫ್ ಹಾಜಿ ಎಂಬವರ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಬೀರ್ ದೂರು ದಾಖಲಿಸಿದ್ದಾರೆ.

    ಅನ್ವರ್ ಸಹೋದರ ಕಬೀರ್ ಹೇಳಿದ್ದೇನು?
    ಸುಮಾರ ಎಂಟು ವರ್ಷದ ಬಿಜೆಪಿ ಮುಖಂಡ ಅನ್ವರ್ ಮೇಲೆ ಯೂಸಫ್ ಹಾಜಿ ಮಗ ಮನ್ಸೂರ್, ಬದ್ರು, ಫಾರುಕ್, ಉಸ್ಮಾನ್ ಮತ್ತು ರಫೀಕ್ ಎಂಬವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆ ವೇಳೆ ಅನ್ವರ್ ಕಾಲನ್ನು ಕತ್ತರಿಸಿದ್ದರು. ಮಾರಣಾಂತಿಕ ಹಲ್ಲೆ ಪ್ರಕರಣ ಸಂಬಂಧ ಜಿಲ್ಲಾ ನ್ಯಾಯಾಲಯದಲ್ಲಿ ಆರು ತಿಂಗಳು ವಿಚಾರಣೆ ನಡೆಯಿತು. ನಂತರ ಜಿಲ್ಲಾ ನ್ಯಾಯಾಲಯ ಹುಸೇನ್ ಮತ್ತು ಮನ್ಸೂರ್‍ಗೆ ಎರಡು ವರ್ಷ, ಉಳಿದವರಿಗೆ ಆರು ತಿಂಗಳ ಜೈಲು ಶಿಕ್ಷೆ ಘೋಷಿಸಿತ್ತು.

    ಜಿಲ್ಲಾ ನ್ಯಾಯಲಯದ ತೀರ್ಪನ್ನು ಪ್ರಶ್ನಿಸಿ ಎಲ್ಲರೂ ಹೈಕೋರ್ಟ್ ಮೊರೆ ಹೋಗಿದ್ದರು. ಆದ್ರೆ ಅಲ್ಲಿಯೂ ನ್ಯಾಯ ನಮ್ಮ ಪರವಾಗಿಯೇ ಸಿಕ್ಕಿತ್ತು. ಪಟ್ಟು ಬಿಡದ ಅವರು ದ್ವಿಸದಸ್ಯ ಪೀಠ ನ್ಯಾಯಾಲಯಕ್ಕೆ ಮೊರೆ ಹೋದರು. ಅಲ್ಲಿಯೂ ತೀರ್ಪು ನಮ್ಮ ಪರವಾಗಿತ್ತು. ಜೈಲಿನಲ್ಲಿ ಇದ್ದುಕೊಂಡೆ ಆಸಿಫ್ ಹಾಗೂ ಯುಸೂಫ್ ಅನ್ವರ್ ಅನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು.

    ನಿನ್ನನ್ನು ಕೊಲೆ ಮಾಡುತ್ತೇವೆ ಅಂತಾ ಒಂದು ತಿಂಗಳ ಹಿಂದಷ್ಟೇ ಮನ್ಸೂರ್ ಬೆದರಿಕೆ ಹಾಕಿದ್ದನು. ಅಲ್ಲದೇ ಎಲ್ಲರೂ ಜೈಲಿನಲ್ಲಿದ್ದೇ ದ್ವೇಷ ಸಾಧನೆಗೆ ಸಂಚು ರೂಪಿಸಿದ್ದು, ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಮೃತ ಅನ್ವರ್ ಸಹೋದರ ಕಬೀರ್ ಆರೋಪಿಸಿದ್ದಾರೆ.

    https://youtu.be/VkV71CeyVDw

  • ಕರ್ನಾಟಕದ ಮೊದಲ ಫೈಟರ್ ಪೈಲಟ್ – ಕನ್ನಡತಿ ಮೇಘನಾ ಶಾನಭೋಗ್ ಸಾಧನೆ

    ಕರ್ನಾಟಕದ ಮೊದಲ ಫೈಟರ್ ಪೈಲಟ್ – ಕನ್ನಡತಿ ಮೇಘನಾ ಶಾನಭೋಗ್ ಸಾಧನೆ

    ನವದೆಹಲಿ: ಕರ್ನಾಟಕ ಮೊದಲ ಯುದ್ಧ ವಿಮಾನ ಮಹಿಳಾ ಪೈಲಟ್ ಆಗಿ ಮೇಘನಾ ಶಾನಭೋಗ್ ಶನಿವಾರ ಆಯ್ಕೆ ಆಗಿದ್ದು, ಇಂತಹ ಸಾಧನೆ ಮಾಡಿದ ಮೊದಲ ಕನ್ನಡತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಮೂಲತಃ ಕರ್ನಾಟಕ ಚಿಕ್ಕಮಗಳೂರಿನ ಜಿಲ್ಲೆಯವರಾದ ಮೇಘನಾ ಅವರ ಹೆಸರನ್ನು ಹೈದರಾಬಾದ್ ದುಂಡಿಗಲ್ ವಾಯುಪಡೆ ಅಕಾಡೆಮಿಯಲ್ಲಿ ನಡೆದ ಪದವಿ ಪಥಸಂಚಲನ ಕಾರ್ಯಕ್ರಮದ ಬಳಿಕ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಮೇಘನಾರೊಂದಿಗೆ ಮತ್ತೊಬ್ಬ ಯುವತಿಯನ್ನು ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆ ಮಾಡಿರುವ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೇಘನಾ ಅವರು, ಭಾರತೀಯ ವಾಯುಪಡೆಯ ಮೊದಲ ಮಹಿಳಾ ಪೈಲಟ್ ಆದ ಅವನಿ ಚತುರ್ವೇದಿ ಸೇರಿದಂತೆ ಭವನ ಕಾಂತ್, ಮೋಹನಾ ಸಿಂಗ್ ಅವರ ಕಥೆಗಳನ್ನು ಓದಿ 2016 ರಲ್ಲಿ ಫೈಟರ್ ಪೈಲಟ್ ಆಗಲು ಸ್ಫೂರ್ತಿ ಪಡೆದಿದ್ದಾಗಿ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಮೇಘನಾ ಅವರ ತಂದೆ ಎಂಕೆ ರಮೇಶ್ ವಕೀಲರಾಗಿದ್ದು, ತಾಯಿ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಅಂದಹಾಗೆ ಮೇಘನಾ ಅವರು ಹೈದರಾಬಾದ್‍ನ ದುಂಡುಗಲ್ ಏರ್ ಫೋರ್ಸ್ ಗೆ 2017 ರ ಜನವರಿಯಲ್ಲಿ ಪ್ರವೇಶ ಪಡೆದಿದ್ದರು. ಇವರೊಂದಿಗೆ ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಉತ್ತರ ಪ್ರದೇಶದ ಯುವತಿಯರು ಸಹ ಸೇರಿದ್ದರು. ಮೇಘನಾ ಅವರು ಮೈಸೂರಿನ ಶ್ರೀ ಜಯ ಚಾಮರಾಜೇಂದ್ರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯನ್ನು 2011 ರಿಂದ 2015 ರ ಅವಧಿಯಲ್ಲಿ ಓದಿದ್ದರು. ಬಳಿಕ ಮನಾಲಿ ಯಲ್ಲಿ ಪರ್ವತಾರೋಹಣ ಮತ್ತು ಗೋವಾ ದಲ್ಲಿ ಪ್ಯಾರಾಗ್ಲೈಡಿಂಗ್ ಕೋರ್ಸ್ ಅನ್ನು 2016 ರಲ್ಲಿ ಪೂರ್ಣಗೊಳಿಸಿದ್ದರು. ಹೈದರಾಬಾದ್ ಆಕಾಡೆಮಿಗೆ ಸೇರುವ ಮುನ್ನ ಏರ್ ಫೋರ್ಸ್ ಆಕಾಡೆಮಿಯ ಫ್ಲೈಯಿಂಗ್ ಬ್ರಾಂಚ್ ನ ನಲ್ಲಿ ಫೈಟರ್ ಸ್ಟ್ರೀಮ್ ತರಬೇತಿ ಪೂರ್ಣಗೊಳಿಸಿದ್ದರು.

  • ಟಿಂಬರ್ ಕೆಲಸಕ್ಕಾಗಿ ಆನೆಗಳನ್ನ ಹೊತ್ತೊಯ್ಯುತ್ತಿದ್ದ ಲಾರಿ ಸಹಿತ ಮಾವುತ ವಶಕ್ಕೆ!

    ಟಿಂಬರ್ ಕೆಲಸಕ್ಕಾಗಿ ಆನೆಗಳನ್ನ ಹೊತ್ತೊಯ್ಯುತ್ತಿದ್ದ ಲಾರಿ ಸಹಿತ ಮಾವುತ ವಶಕ್ಕೆ!

    ಚಿಕ್ಕಮಗಳೂರು: ಟಿಂಬರ್ ಕೆಲಸಕ್ಕಾಗಿ ಕೇರಳದಿಂದ ಚಿಕ್ಕಮಗಳೂರಿಗೆ ಲಾರಿಯಲ್ಲಿ ಸಾಗಿಸುತ್ತಿದ್ದ ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

    ಇಲ್ಲಿನ ಸೀತಾಳಯ್ಯನ ಗಿರಿ ಮಂಜುನಾಥ ಕಾಫಿ ತೋಟದಲ್ಲಿ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಲಾರಿಯಲ್ಲಿ ಆನೆಗಳನ್ನು ಸಾಗಿಸುತ್ತಿದ್ದ ವಿಚಾರವನ್ನು ಪರಿಸರವಾದಿ ಗಿರೀಶ್ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗಿರೀಶ್ ಅವರು ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ(ಆರ್.ಎಫ್.ಓ) ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿದ್ದು, ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಕಾಡು ಪ್ರಾಣಿಗಳನ್ನು ಯಾವುದೇ ಕೆಲಸಕ್ಕೆ ಬಳಸಬಾರದು ಎಂಬ ನಿಯಮದ ಹಿನ್ನೆಲೆ ಆನೆಗಳನ್ನು ವಶಕ್ಕೆ ಪಡೆಯಲಾಗಿದ್ದು, ತೋಟದ ಮಾಲೀಕರಿಂದ ನಿಯಮ ಬಾಹಿರ ಕೃತ್ಯ ನಡೆದಿದೆ. ಮಾವುತ ಹಾಗೂ ಲಾರಿ ಚಾಲಕ ವಿರುದ್ಧ ಪ್ರಕರಣ ದಾಖಲಾಗಿದೆ.

  • ಜಲಕ್ರೀಡೆ ವಿಡಿಯೋ ಮಾಡ್ತಿದ್ದ ಪ್ರವಾಸಿಗರ ಮೇಲೆ ಎರಗಿಬಂದ ಆನೆಗಳು: ವಿಡಿಯೋ ವೈರಲ್

    ಜಲಕ್ರೀಡೆ ವಿಡಿಯೋ ಮಾಡ್ತಿದ್ದ ಪ್ರವಾಸಿಗರ ಮೇಲೆ ಎರಗಿಬಂದ ಆನೆಗಳು: ವಿಡಿಯೋ ವೈರಲ್

    ಚಿಕ್ಕಮಗಳೂರು: ತಾಯಿ ಆನೆ ತನ್ನ ಮರಿ ಆನೆಗಳೊಂದಿಗೆ ನೀರಲ್ಲಿ ಆಟವಾಡ್ತಿದ್ದ ದೃಶ್ಯ ಸೆರೆ ಹಿಡಿಯುತ್ತಿದ್ದ ಪ್ರವಾಸಿಗರ ಜೀಪಿನ ಮೇಲೆ ಆನೆಯೊಂದು ದಾಳಿಗೆ ಮುಂದಾದ ಘಟನೆ ವಿಡಿಯೋ ವೈರಲ್ ಆಗಿದೆ.

    ಜಿಲ್ಲೆಯ ಮುತ್ತೋಡಿ ಭದ್ರಾ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಜೂನ್ 5 ರಂದು ಸಫಾರಿ ಹೋಗಿದ್ದ ಪ್ರವಾಸಿಗರ ತಂಡವೊಂದು ಆನೆಗಳ ವಿಡಿಯೋ ಮಾಡುವ ವೇಳೆ ಈ ಘಟನೆ ನಡೆದಿದೆ.

    ಹೊಂಡದಲ್ಲಿ ಐದು ಆನೆಗಳು ನೀರಿನಲ್ಲಿ ಆಟವಾಗುತ್ತಿದ್ದವು. ಆ ಹಿಂಡಿನಲ್ಲಿ ಎರಡು ದೊಡ್ಡ ಆನೆ ಹಾಗೂ ಮೂರು ಮರಿ ಆನೆಗಳು ಇದ್ದವು. ನೀರಿನಲ್ಲಿ ಆಟವಾಡುತ್ತಿದ್ದ ಆನೆಗಳನ್ನು ಕಂಡ ಪ್ರವಾಸಿಗರು ವಿಡಿಯೋ ಮಾಡುತ್ತಿದ್ದರು. ಇದನ್ನು ಗಮನಿಸಿದ ಆನೆಯೊಂದು ತನ್ನ ಮೂರು ಮರಿಗಳೊಂದಿಗೆ ಕೆರೆಯಿಂದ ಹೊರ ಬಂದು, ದಾಳಿಗೆ ಮುಂದಾಗಿವೆ. ಇದರಿಂದ ತಬ್ಬಿಬ್ಬಾದ ಪ್ರವಾಸಿಗರು ಜೀಪನ್ನು ವೇಗವಾಗಿ ಚಾಲನೆ ಮಾಡುವ ಮೂಲಕ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.youtube.com/watch?v=yxSVOXIWmpk