Tag: Chikmagalur

  • ಅಂಬುತೀರ್ಥದಲ್ಲಿ ಸೆಲ್ಫಿ ಕ್ಲಿಕ್ಕಿಸೋ ವೇಳೆ ಬಿದ್ದಿದ್ದ ಟೆಕ್ಕಿಯ ಮೃತದೇಹ ನದಿಯಲ್ಲಿ ತೇಲಿ ಬಂತು!

    ಅಂಬುತೀರ್ಥದಲ್ಲಿ ಸೆಲ್ಫಿ ಕ್ಲಿಕ್ಕಿಸೋ ವೇಳೆ ಬಿದ್ದಿದ್ದ ಟೆಕ್ಕಿಯ ಮೃತದೇಹ ನದಿಯಲ್ಲಿ ತೇಲಿ ಬಂತು!

    ಚಿಕ್ಕಮಗಳೂರು: ಕಳಸ ಸಮೀಪದ ಅಂಬುತೀರ್ಥದಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲುಜಾರಿ ಬಿದ್ದಿದ್ದ ಯುವಕನ ಮೃತದೇಹವು 15 ದಿನಗಳ ನಂತರ ಜಿಲ್ಲೆಯ ಮಾಗುಂಡಿ ಸಮೀಪದ ಭದ್ರಾ ನದಿಯಲ್ಲಿ ಪತ್ತೆಯಾಗಿದೆ.

    ಜುಲೈ 26 ರಂದು ಮಂಗಳೂರಿನ ಟೆಕ್ಕಿ ಕಿರಣ್ ಕೋಟ್ಯಾನ್ ಕಳಸ ಸಮೀಪದ ಅಂಬುತೀರ್ಥದಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲುಜಾರಿ ಬಿದ್ದು, ನದಿಯಲ್ಲಿ ಕೊಚ್ಚಿಹೋಗಿದ್ದರು. ಕೊಚ್ಚಿಹೋಗಿದ್ದ ಕಿರಣ್ ಮೃತದೇಹ 15 ದಿನಗಳ ಬಳಿಕ ಮಾಗುಂಡಿ ಸಮೀಪದ ಭದ್ರಾ ನದಿಯಲ್ಲಿ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿಯ ನೀರಿನ ಹರಿಯು ಹೆಚ್ಚಾಗಿದ್ದರಿಂದ ಮೃತದೇಹ ತೇಲಿ ಬಂದಿದೆ.

    ಕಿರಣ್ ಕೋಟ್ಯಾನ್ ಮೂಲತಃ ಮಂಗಳೂರಿನ ತುಂಬೆ ಗ್ರಾಮದವರಾಗಿದ್ದು, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕಳೆದ ಜುಲೈ 26ರಂದು ತಮ್ಮ 13 ಮಂದಿ ಸ್ನೇಹಿತರ ತಂಡದೊಂದಿಗೆ ಜಿಲ್ಲೆಯ ಕುದುರೆಮುಖ ಸುತ್ತಮುತ್ತ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಅಂಬುತೀರ್ಥದ ಬಳಿ ಬಂಡೆ ಮೇಲಿಂದ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದರು. ಕೂಡಲೇ ಸ್ನೇಹಿತರು ಹುಡುಕಾಡುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದನ್ನೂ ಓದಿ: ಕಾಲುಜಾರಿ ಭದ್ರಾ ನದಿಗೆ ಬಿದ್ದು ಕೊಚ್ಚಿ ಹೋದ ಮಂಗ್ಳೂರು ಎಂಜಿನಿಯರ್

    ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಎನ್.ಡಿ.ಆರ್.ಎಫ್ ರಕ್ಷಣಾ ತಂಡ ಕಿರಣ್ ಗಾಗಿ ವ್ಯಾಪಕ ಶೋಧ ಕೈಗೊಂಡಿತ್ತು. ಆದರೆ ಭದ್ರಾ ನದಿಯಲ್ಲಿ ನೀರಿನ ರಭಸ ಜಾಸ್ತಿಯಾಗಿದ್ದರಿಂದ ಇತ್ತೀಚೆಗೆ ರಕ್ಷಣಾ ಕಾರ್ಯಚರಣೆಯನ್ನು ಕೈಬಿಟ್ಟಿತ್ತು. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಳೆ ಹಾನಿ – ಕೊಡಗು ಜಿಲ್ಲೆಗೆ 20 ಕೋಟಿ ರೂ. ಬಿಡುಗಡೆ

    ಮಳೆ ಹಾನಿ – ಕೊಡಗು ಜಿಲ್ಲೆಗೆ 20 ಕೋಟಿ ರೂ. ಬಿಡುಗಡೆ

    ಬೆಂಗಳೂರು: ಮಳೆ ಹಾನಿಯಿಂದ ತೊಂದರೆಗೆ ಒಳಗಾಗಿರುವ ಕೊಡಗು ಜಿಲ್ಲೆಗೆ 20 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳಿಗಾಗಿ ಸರ್ಕಾರ 20 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.

    ರಾಜ್ಯ ಸರಕಾರ ಕೊಡಗು ಜಿಲ್ಲೆಯ ಬಗ್ಗೆ ತಾರತಮ್ಯ ಮಾಡುತ್ತಿದೆ. ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ನಾನು ಕಳೆದ ನಾಲ್ಕು ವರ್ಷಗಳಿಂದ ಕೇಳುತ್ತಿದ್ದರೂ ಸರ್ಕಾರ ಕ್ಯಾರೆ ಅನ್ನುತ್ತಿಲ್ಲ. ಇನ್ನೊಂದೆಡೆ ಕೇಂದ್ರ ಸರಕಾರ ರಾಜ್ಯಕ್ಕೆ ಹಿಂದೆಂದಿಗಿಂತಲೂ ಅಧಿಕ ಅನುದಾನ ನೀಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಲೋಕಸಭೆಯಲ್ಲಿ ರಾಜ್ಯ ಸರ್ಕಾರವನ್ನು ಈ ಹಿಂದೆ ದೂರಿದ್ದರು.

    ಕಾವೇರಿ ನದಿ ಹುಟ್ಟುವುದು ನನ್ನ ಕ್ಷೇತ್ರದಲ್ಲಿ. ಈ ಬಾರಿ ಕೊಡಗು, ಕರಾವಳಿ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ತಮಿಳುನಾಡು-ಕರ್ನಾಟಕ ನಡುವಿನ ನೀರಾವರಿ ಸಮಸ್ಯೆಗೆ ವಿರಾಮ ಬಿದ್ದಿದೆ. ಉತ್ತಮ ಮಳೆಯಿಂದ ಕ್ಷೇತ್ರದ 4 ಡ್ಯಾಂ ಗಳು ತುಂಬಿದ್ದು, ತಮಿಳುನಾಡಿಗೆ ಹೆಚ್ಚಿನ ನೀರು ಹರಿದುಹೋಗುತ್ತಿದೆ. ಎಷ್ಟೇ ಮಳೆಯಾದರೂ ಕ್ಷೇತ್ರದ ಜನರು ಅದನ್ನು ಸ್ವಾಗತಿಸುತ್ತಾರೆ. ಆದರೆ ಭಾರೀ ಮಳೆಯಿಂದ ಈ ಭಾಗದ ಜನರು ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಸಂಪೂರ್ಣವಾಗಿ ರಸ್ತೆಗಳು ಹಾಳಾಗಿದೆ. ನೂರಾರು ಮನೆಗಳು ಕುಸಿದಿದೆ. ಇಂಥ ಸ್ಥಿತಿ ಇದ್ದರೂ ಕೊಡಗು ಜಿಲ್ಲೆಯನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದರು.

    ಇದಕ್ಕೂ ಮೊದಲು ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮದ ಫತಹ್ ಕೊಡಗಿಗೆ ಸರ್ಕಾರದಿಂದಾಗಿರುವ ಅನ್ಯಾಯದ ಬಗ್ಗೆ ಮಾತನಾಡಿದ್ದ. ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಬಾಲಕ ಕಿಡಿಕಾರಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಟೀಕೆಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ ಈಗ ಕೊಡಗಿಗೆ 20 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.

  • 12 ಅಡಿ ಉದ್ದವಿರೋ ಬೃಹತ್ ಕಾಳಿಂಗ ಸರ್ಪ ಸೆರೆ

    12 ಅಡಿ ಉದ್ದವಿರೋ ಬೃಹತ್ ಕಾಳಿಂಗ ಸರ್ಪ ಸೆರೆ

    ಚಿಕ್ಕಮಗಳೂರು: ಮೂಡಿಗೆರೆ ತಾಲೂಕು, ಕಳಸಾದ ಮರಕೋಡು ಗ್ರಾಮದ ಕಾಫಿ ಎಸ್ಟೇಟ್ ವೊಂದರಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಅದನ್ನು ಸೆರೆ ಹಿಡಿದಿದ್ದಾರೆ.

    ಅರುಣ್ ಎಂಬವರ ಕಾಫಿ ಎಸ್ಟೇಟ್ ನಲ್ಲಿ ಬೀಡುಬಿಟ್ಟಿದ್ದ ಕಾಳಿಂಗ ಸರ್ಪ, ಕಳೆದ 3 ದಿನಗಳಿಂದಲೂ ಒಂದೇ ಜಾಗದಲ್ಲಿತ್ತು. ಹಾಗಾಗಿ ಅದನ್ನು ಸೆರೆ ಹಿಡಿಯಲು ಉರಗತಜ್ಞ ಅರ್ಜುನ್ ಅವರಿಗೆ ಮಾಹಿತಿ ರವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಅವರು, ಕಾಳಿಂಗವನ್ನು ಸೆರೆ ಹಿಡಿದು ಕೆರೆಕಟ್ಟೆ ಅರಣ್ಯಕ್ಕೆ ಬಿಟ್ಟರು.

    ಈ ಕಾಳಿಂಗ ಸರ್ಪ ಸುಮಾರು 12 ಅಡಿ ಉದ್ದವಿದೆ ಎಂದು ಹೇಳಲಾಗಿದೆ.

  • ಜ್ಯೋತಿಷ್ಯಕ್ಕೆ ಹೆದರಿ ಅರ್ಧ ದಿನದಲ್ಲಿಯೇ ಚಿಕ್ಕಮಗಳೂರಿನ ಊರು ಖಾಲಿ ಖಾಲಿ!

    ಜ್ಯೋತಿಷ್ಯಕ್ಕೆ ಹೆದರಿ ಅರ್ಧ ದಿನದಲ್ಲಿಯೇ ಚಿಕ್ಕಮಗಳೂರಿನ ಊರು ಖಾಲಿ ಖಾಲಿ!

    ಚಿಕ್ಕಮಗಳೂರು: ಜ್ಯೋತಿಷ್ಯಕ್ಕೆ ಹೆದರಿ 15 ವರ್ಷಗಳಿಂದ ವಾಸವಿದ್ದ ಊರನ್ನು ಬಿಟ್ಟು ಬೇರೊಂದು ಕಡೆಗೆ ನೆಲೆ ಅರಸಿ ಹೊರಟು ಹೋದ ಘಟನೆ ಜಿಲ್ಲೆಯ ಎನ್.ಆರ್.ಪುರದ ಬಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

    ಶಿಗುವಾನಿ ಗ್ರಾಮಸ್ಥರೇ ಮೂಢನಂಬಿಕೆಗೆ ಒಳಗಾದವರು. ಈ ಗ್ರಾಮದಲ್ಲಿ 50ಕ್ಕೂ ಹೆಚ್ಚು ಹಾವುಗೊಲ್ಲರು, ಹಕ್ಕಿಪಿಕ್ಕಿ ಕುಟುಂಬಗಳು ವಾಸವಾಗಿದ್ದವು. ಆದರೆ ಕಳೆದ 8 ದಿನಗಳಿಂದ 25 ಪುರುಷರು, ನಾಲ್ವರು ಮಹಿಳೆಯರು ಮೃತಪಟ್ಟಿದ್ದರು.

    ನಿರಂತರ ಸಾವಿನ ಸಂಗತಿಗೆ ಹೆದರಿದ ಗ್ರಾಮಸ್ಥರು ಜ್ಯೋತಿಷಿಗಳ ಬಳಿ ಸಮಸ್ಯೆಗೆ ಪರಿಹಾರ ಕೇಳಿದ್ದರು. ಆಗ ಅವರು ಅಲ್ಲಿ ನಾಗ ದೋಷವಿದೆ, ನಾಗಪ್ಪನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ತಿಳಿಸಿದ್ದರಂತೆ. ಅದರಂತೆ ನಾಗ ದೋಷ ನಿವಾರಣೆಗೆ ಪೂಜೆ ಮಾಡಿ, ನಾಗ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಾದ ನಂತರವೂ ಕೆಲವರು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಯಿತು.

    ಕೊನೆಯ ಪರಿಹಾರ ಎಂದರೇ ನೀವು ಗ್ರಾಮ ಬಿಟ್ಟು ಹೋಗುವುದೇ ಒಳಿತು ಎಂದು ಜ್ಯೋತಿಷಿ ಹೇಳಿದ್ದರಂತೆ. ಹೀಗಾಗಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದ ಗ್ರಾಮವು ಗುರುವಾರ ಸಂಜೆಯೊಳಗಾಗಿ ಖಾಲಿ ಖಾಲಿ ಆಗಿದೆ. ಗ್ರಾಮಸ್ಥರು ತಮ್ಮ ಬಟ್ಟೆ, ಪಾತ್ರೆ ಸೇರಿದಂತೆ ಬೆಲೆಪಾಳುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದು, ಉಳಿದಂತೆ ಗುಡಿಸಲು, ಸಾಕು ನಾಯಿ, ಕೋಳಿ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

    ಹಾವು ಹಿಡಿಯುವುದು, ಹಕ್ಕಿಪುಕ್ಕ ಸೇರಿಸಿ ಮಾರುವುದು ಶಿಗುವಾನಿ ಗ್ರಾಮಸ್ಥರ ಮೂಲ ವೃತ್ತಿಯಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಗಾರೆ ಕೆಲಸ, ಕಾಫಿ ತೋಟ, ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ನಿರಂತರ ಸಾವಿನ ಸಂಗತಿಯಿಂದ ಬೆಚ್ಚಿಬಿದ್ದು ಗ್ರಾಮವನ್ನು ಬಿಟ್ಟು ಹೋಗುವ ನಿರ್ಧಾರ ಕೈಗೊಂಡಿದ್ದರು. ಸದ್ಯ ಅವರು ಕುದುರೆಮುಖ, ಕುದ್ರೆಗುಂಡಿ ಮಾರ್ಗವಾಗಿ ತೀರ್ಥಹಳ್ಳಿ ತಲುಪಿದ್ದಾರೆ ಎನ್ನಲಾಗುತ್ತಿದೆ.

  • 800 ಅಡಿ ಉದ್ದದ ರಾಷ್ಟ್ರಧ್ವಜ ಹಿಡಿದು ವಿದ್ಯಾರ್ಥಿಗಳ ಮೆರವಣಿಗೆ

    800 ಅಡಿ ಉದ್ದದ ರಾಷ್ಟ್ರಧ್ವಜ ಹಿಡಿದು ವಿದ್ಯಾರ್ಥಿಗಳ ಮೆರವಣಿಗೆ

    ಚಿಕ್ಕಮಗಳೂರು: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಜಿಲ್ಲೆಯ ವಿದ್ಯಾರ್ಥಿಗಳು ಸುಮಾರು 800 ಅಡಿ ಉದ್ದದ ಧ್ವಜವನ್ನು ಹಿಡಿದು ನಗರದಾದ್ಯಂತ ಮೆರವಣಿಗೆ ನಡೆಸಿದ್ದಾರೆ.

    ಇಂದು ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು 800 ಅಡಿ ಉದ್ದದ ಧ್ವಜವನ್ನ ಮೆರವಣಿಗೆ ಮಾಡಿದ್ದಾರೆ. ನಗರದ ಹನುಮಂತಪ್ಪ ವೃತ್ತದಿಂದ ಮೆರವಣೆಗೆ ಹೊರಟ ವಿದ್ಯಾರ್ಥಿಗಳು ಎಂ.ಜಿ.ರಸ್ತೆ ಹಾಗೂ ಐ.ಜಿ. ರಸ್ತೆ ಮೂಲಕ ಸಾಗಿ ಕುವೆಂಪು ಕಲಾಮಂದಿರದವರೆಗೂ ಮೆರವಣಿಗೆ ನಡೆಸಿದ್ದಾರೆ.

    ಮೆರವಣಿಗೆಯುದ್ದಕ್ಕೂ ಸೈನಿಕರ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳು, ಮೆರವಣಿಗೆಯ ಬಳಿಕ ಕುವೆಂಪು ಕಲಾಮಂದಿರದಲ್ಲಿ ಮಾಜಿ ಸೈನಿಕರಿಗೆ ಸನ್ಮಾನ ಮಾಡಿದ್ದಾರೆ. ಸಮಾರಂಭದಲ್ಲಿ ಸೈನಿಕರು ತಮ್ಮ ವೃತ್ತಿ ಜೀವನದ ರೋಚಕ ಮಾಹಿತಿಗಳನ್ನು ವಿದ್ಯಾರ್ಥಿಗಳ ಬಳಿ ಹಂಚಿಕೊಂಡಿದ್ದಾರೆ.

  • ಕೋಡಿ ಬೀಳುವ ಹಂತಕ್ಕೆ ತಲುಪಿದೆ ಪ್ರಸಿದ್ಧ ಮದಗದ ಕೆರೆ!

    ಕೋಡಿ ಬೀಳುವ ಹಂತಕ್ಕೆ ತಲುಪಿದೆ ಪ್ರಸಿದ್ಧ ಮದಗದ ಕೆರೆ!

    ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಪ್ರಸಿದ್ಧ ಕೆರೆಯಾದ ಮದಗದ ಕೆರೆಯು ಸಂಪೂರ್ಣ ತುಂಬಿದ್ದು, ಕೆರೆ ಕೋಡಿ ಬೀಳಲು ಕೆಲವೇ ಅಡಿಗಳು ಬಾಕಿ ಇದೆ.

    ಜಿಲ್ಲೆಯ ಗಿರಿ ಭಾಗದಲ್ಲಿ ಸುರಿಯುತ್ತಿರೋ ಧಾರಾಕಾರ ಮಳೆಯಿಂದಾಗಿ ಸುಮಾರು 2,036 ಎಕರೆ ವಿಸ್ತಿರ್ಣದ ಕಡೂರಿನ ಪ್ರಸಿದ್ಧ ಮದಗದ ಕೆರೆ ಸಂಪೂರ್ಣ ತುಂಬಿಹೋಗಿದೆ. ಈ ಹಿನ್ನೆಲೆಯಲ್ಲಿ ಕೆರೆ ಕೋಡಿ ಬೀಳಲು ಕೆಲವೇ ಅಡಿಗಳು ಬಾಕಿ ಇವೆ.

    ಮದಗದ ಕೆರೆಯು ಎಂತಹುದೇ ಬರಗಾಲ ಬಂದರೂ, ಬತ್ತದೆ ಇರುವುದು ಇದರ ಇತಿಹಾಸವಾಗಿದೆ. ಕಳೆದೆರಡು ವರ್ಷಗಳ ಹಿಂದಿನ ಭೀಕರ ಬರಗಾಲದಲ್ಲೂ ಈ ಕೆರೆ ಕೋಡಿ ಬಿದ್ದಿತ್ತು. ಮದಗದ ಕೆರೆಗೆ ಬರೋದೆ ಮಾಯದಂತ ಮಳೆ ಎಂಬ ಜಾನಪದ ಗೀತೆ ಕೂಡ ಇದೆ.

    ಕಳೆದ ವರ್ಷ ನೀರಿನ ಪ್ರಮಾಣ ಕಡಿಮೆಯಾಗಿದ್ದ ಈ ಕೆರೆಯಲ್ಲಿ, ಈ ವರ್ಷ ನೀರು ತುಂಬಿರುವುದರಿಂದ ಕಡೂರು ಹಾಗೂ ಬೀರೂರಿನ ರೈತರಿಗೆ ಕುಡಿಯಲು ಹಾಗೂ ಬೆಳೆಗೆ ನೀರಿನ ಸೌಲಭ್ಯ ಸಿಕ್ಕಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಭೂಕುಸಿತದಿಂದಾಗಿ ನದಿಯಲ್ಲಿ ಕೊಚ್ಚಿ ಹೋದ ಅಡಿಕೆ ಬೆಳೆ

    ಭೂಕುಸಿತದಿಂದಾಗಿ ನದಿಯಲ್ಲಿ ಕೊಚ್ಚಿ ಹೋದ ಅಡಿಕೆ ಬೆಳೆ

    ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿ ಭೂಕುಸಿತದಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

    ಪಶ್ಚಿಮ ಘಟ್ಟಗಳ ಸಾಲಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜಿಲ್ಲೆಯ ಕೊಪ್ಪ, ಕಳಸ, ಹೊರನಾಡು ಹಾಗೂ ಕುದುರೆಮುಖದ ಗುಡ್ಡಗಾಡು ಪ್ರದೇಶಗಳಿಂದ ನೀರು ಹರಿದು ಬರುತ್ತಿವೆ. ಮಳೆ ನೀರಿನಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

    ಮೂಡಿಗೆರೆ ತಾಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ನಾಲ್ಕು ವರ್ಷಗಳ ಬಳಿಕ ಹೇಮಾವತಿ ಕಳೆದೊಂದು ತಿಂಗಳಿಂದಲೂ ಮೈದುಂಬಿ ಹರಿಯುತ್ತಿದ್ದಾಳೆ. ನೀರಿನ ಹರಿವಿನ ಪ್ರಮಾಣ ಯಥೇಚ್ಛವಾಗಿರುವುದರಿಂದ ನದಿಪಾತ್ರದ ಜಮೀನಿನಲ್ಲಿ ಭೂಕುಸಿತ ಉಂಟಾಗಿದೆ. ಭೂಕುಸಿತದಿಂದಾಗಿ 30 ಕ್ಕೂ ಹೆಚ್ಚು ಅಡಿಕೆ ಮರಗಳು ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿವೆ.

    ನೀರು ತೋಟದ ದಡದ ಮಣ್ಣನ್ನ ಕೊರೆಯುತ್ತಿರುವುದರಿಂದ ಅಡಿಕೆ, ಕಾಫಿ ಹಾಗೂ ಮೆಣಸು ಬೆಳೆಗಳು ನಾಶಹೊಂದಿ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಇನ್ನು ಅಪಾಯದಮಟ್ಟ ಮೀರಿ ಹರಿಯುತ್ತಿರುವ ಹೇಮಾವತಿ ನದಿಯಿಂದಾಗಿ ತೋಟದ ಮಾಲೀಕರು ಹಾಗೂ ಸ್ಥಳಿಯರಲ್ಲಿ ಆತಂಕ ಹೆಚ್ಚಾಗಿದೆ.

  • ಚಿಕ್ಕಮಗ್ಳೂರಿನಲ್ಲಿದ್ದಾರೆ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ!

    ಚಿಕ್ಕಮಗ್ಳೂರಿನಲ್ಲಿದ್ದಾರೆ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ!

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಗೆ ಬಾಲಿವುಡ್ ನಟಿಯರಾದ ಸನ್ನಿ ಲಿಯೋನ್ ಹಾಗೂ ದೀಪಿಕಾ ಪಡುಕೋಣೆ ಆಗಮಿಸಲಿದ್ದಾರೆ. ಅಯ್ಯೋ, ಹೌದಾ ನಮ್ಗೆ ಗೊತ್ತೇ ಇಲ್ಲ ಅಂತ ಗಾಬರಿಯಾಗಬೇಡಿ.

    ಕಳಸ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಚೆನ್ನಯ್ಯ ಮಾಡಿದ ರಸ್ತೆ ಮೂರೇ ತಿಂಗಳಿಗೆ ಅಡಿಯಷ್ಟು ಗುಂಡಿ ಬಿದ್ದು ಹಾಳಾಗಿ ಹೋಗಿದೆ. ಇದರಿಂದಾಗಿ ಸ್ಥಳೀಯರು ಸರ್ಕಾರದ ವಿರುದ್ಧ ಈ ರೀತಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

    ಕಳಸ ಪಟ್ಟಣದ ಯುವಕರು ಗುಂಡಿ ಬಿದ್ದ ರಸ್ತೆಯನ್ನ ಸ್ವಿಮ್ಮಿಂಗ್ ಪೂಲ್ ನಂತೆ ಫೋಟೋಶಾಪ್‍ನಲ್ಲಿ ಎಡಿಟ್ ಮಾಡಿ ಎಂಜಿನಿಯರ್ ಹಾಗೂ ಕಂಟ್ರಾಕ್ಟರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುಂಡಿ ಬಿದ್ದ ರಸ್ತೆಯಲ್ಲಿ ದೀಪಿಕಾ ಪಡುಕೋಣೆ ಹಾಗೂ ಸನ್ನಿ ಲಿಯೋನ್‍ರನ್ನು ಕೂರಿಸಿ ಇಂದು ಬೆಳಗ್ಗೆ ಸನ್ನಿ ಹಾಗೂ ಪಡುಕೋಣೆ 10 ಗಂಟೆಗೆ ಈಜು ಕೊಳವನ್ನ ಉದ್ಘಾಟಿಸಲಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಮತ್ಸ್ಯ ಕನ್ಯೆ ವೇಷ ಧರಿಸಿ ನಟಿ ಸೋನು ಗೌಡ ಬೆಂಗ್ಳೂರಲ್ಲಿ ವಿಶಿಷ್ಟ ಪ್ರತಿಭಟನೆ

    ಇದೇ ಈಜು ಕೊಳದ ಬಳಿ ತಮಿಳಿನ ಖ್ಯಾತ ನಟ ವಿಜಯ್ ಸೆಲ್ಫಿ ತೆಗೆದುಕೊಂಡಿರುವ ಫೋಟೋಗಳು ಕೂಡ ವಾಟ್ಸಾಪ್‍ನಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ. ಮೂರು ತಿಂಗಳ ಹಿಂದೆ ಬಾಳೂರು ಹ್ಯಾಂಡ್‍ಪೋಸ್ಟ್ ನಿಂದ ಕಳಸಾದ ಅಂಬಾತೀರ್ಥ ಬಸ್ ನಿಲ್ದಾಣದವರೆಗೆ ನಿರ್ಮಿಸಿರೋ ರಸ್ತೆ ಇದಾಗಿದೆ. ಎರಡು ವರ್ಷ ನಿರ್ವಹಣೆಯ ಜವಾಬ್ದಾರಿ ಹೊತ್ತಿರೋ ಎಂಜಿನಿಯರ್ ಹಾಗೂ ಕಂಟ್ರಾಕ್ಟರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳಿಯರು ಎಂಜಿನಿಯರ್ ಚೆನ್ನಯ್ಯ ಹಾಗೂ ಕಂಟ್ರಾಕ್ಟರ್ ಹಾಲಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ತಾಯಿ, ಪತ್ನಿ, ಮಗಳೆನ್ನದೇ ಸಿಕ್ಕ ಸಿಕ್ಕವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾತ ಪೊಲೀಸರ ವಶಕ್ಕೆ!

    ತಾಯಿ, ಪತ್ನಿ, ಮಗಳೆನ್ನದೇ ಸಿಕ್ಕ ಸಿಕ್ಕವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾತ ಪೊಲೀಸರ ವಶಕ್ಕೆ!

    ಚಿಕ್ಕಮಗಳೂರು: ತನ್ನ ಕುಟುಂಬಸ್ಥರು ಸೇರಿದಂತೆ ಸಿಕ್ಕ ಸಿಕ್ಕವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೇತೋಟ ಗ್ರಾಮದಲ್ಲಿ ಘಟನೆ ನಡೆದಿದೆ.

    ರವಿ ಎಂಬಾತನೇ ಮಚ್ಚಿನಿಂದ ಹಲ್ಲೆಗೈದ ವ್ಯಕ್ತಿ. ತಾಯಿ, ಪತ್ನಿ, ಮಗಳು, ಅತ್ತಿಗೆ ಸೇರಿದಂತೆ ಪಕ್ಕದ ಮನೆಯವರ ಮೇಲೆಯೂ ರವಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಏಕಾಏಕಿ ಮನೆಗೆ ನುಗ್ಗಿದ ರವಿ ಎದುರಿಗೆ ಸಿಕ್ಕವರ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ರವಿ ಪತ್ನಿ ಸುಜಾತ, ಮಗಳು ರಶ್ಮಿಕಾ, ತಾಯಿ ಲಕ್ಷ್ಮಿ, ಅತ್ತಿಗೆ ವಿನೋಧ, ಪಕ್ಕದ ಮನೆಯ ಶಾರದ ಹಲ್ಲೆಗೊಳಗಾದವರು.

    ಕೂಡಲೇ ಗ್ರಾಮಸ್ಥರು ರವಿಯನ್ನು ಸೆರೆ ಹಿಡಿದು ಥಳಿಸಿ ಸ್ಥಳೀಯರು ಪೊಲೀಸರ ವಶಕ್ಕೆ ನೀಡಿದ್ದಾರೆ. ಮಚ್ಚಿನೇಟು ತಿಂದು ಗಂಭೀರ ಗಾಯಗೊಂಡ ಆರು ಜನ ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮುಳ್ಳಯ್ಯನಗಿರಿಯಲ್ಲಿ ಗುಡ್ಡ ಕುಸಿತ: ಪ್ರವಾಸಿಗರ ಬಸ್ ಸ್ವಲ್ಪದರಲ್ಲೇ ಪಾರು

    ಮುಳ್ಳಯ್ಯನಗಿರಿಯಲ್ಲಿ ಗುಡ್ಡ ಕುಸಿತ: ಪ್ರವಾಸಿಗರ ಬಸ್ ಸ್ವಲ್ಪದರಲ್ಲೇ ಪಾರು

    ಚಿಕ್ಕಮಗಳೂರು: ಭಾರೀ ಮಳೆಗೆ ಭಾನುವಾರ ಮುಳ್ಳಯ್ಯನ ಗಿರಿಯಲ್ಲಿ ಮಣ್ಣು ಕುಸಿದಿದ್ದು, ಕೇರಳ ಮೂಲದ ಮಿನಿ ಬಸ್ಸಿನ ಮುಂಭಾಗಕ್ಕೆ ಬಂಡೆ ತಾಗಿದೆ.

    ಮುಳ್ಳಯ್ಯನ ಗಿರಿಯ ನಾಲ್ಕು ಭಾಗದಲ್ಲಿ ಮಣ್ಣು ಕುಸಿಯುತ್ತಿದ್ದು, ವಾರಾಂತ್ಯವಾಗಿದ್ದರಿಂದ ಸಾವಿರಕ್ಕೂ ವಾಹನಗಳು ಮುಳ್ಳಯ್ಯನಗಿರಿಗೆ ಆಗಮಿಸಿದ್ದವು. ಬಂಡೆ ಕುಸಿದ ಪರಿಣಾಮ ಸ್ವಲ್ಪದರಲ್ಲಿಯೇ ಭಾರೀ ಅನಾಹುತ ತಪ್ಪಿದೆ.

    ಜಿಲ್ಲೆಯ ಪ್ರಮುಖ ನೈಸರ್ಗಿಕ ಪ್ರವಾಸಿತಾಣ ಆಗಿರುವ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕೆಲ ಪ್ರವಾಸಿ ಪ್ರಿಯರು ಸುರಿಯುವ ಮಳೆಯಲ್ಲಿಯೇ ಬೈಕಿನಲ್ಲೇ ಟ್ರಿಪ್ ಬರುತ್ತಿದ್ದಾರೆ.

    ಮುಳ್ಳಯ್ಯನಗಿರಿಯಲ್ಲಿ ರಸ್ತೆ ಕಾಣದಷ್ಟು ದಟ್ಟ ಕಾನನದಂತೆ ಮಂಜು ಆವರಿಸಿಕೊಂಡಿದೆ. ಆದರೂ ಪ್ರವಾಸಿಗರು ತಮ್ಮ ವಾಹನಗಳನ್ನು ಸೀತಾಳಯ್ಯನಗಿರಿಯಲ್ಲಿ ನಿಲ್ಲಿಸಿ ತಣ್ಣನೆಯ ಗಾಳಿ, ಮಂಜಿನ ರಾಶಿ, ಸುರಿಯುವ ಮಳೆಯಲ್ಲಿ ನಡೆದುಕೊಂಡು ಬೆಟ್ಟದತ್ತ ಹೆಜ್ಜೆ ಹಾಕುತ್ತಿದ್ದಾರೆ.

    ಗಾಳಿಗೆ ಹಾರಿ ಹೋಗುತ್ತೇವೋ ಎಂಬ ಭಯದಿಂದ ಒಬ್ಬರಿಗೊಬ್ಬರು ಬಿಗಿಯಾಗಿ ಹಿಡಿದುಕೊಂಡು, ಬೆಟ್ಟ ಹತ್ತುತ್ತಾ, ಗಿರಿಯ ಸೌಂದರ್ಯ ಕಂಡು ಕುಣಿದು ಕುಪ್ಪಳಿಸುತ್ತಿದ್ದಾರೆ. ಗಿರಿಯ ರಸ್ತೆಗಳು ಹಾವು ಬಳುಕಿನ ಮೈಕಟ್ಟಿನ ರಸ್ತೆಯಂತಿದ್ದು, ಕೆಲ ತಿರುವುಗಳಲ್ಲಿ ಪ್ರವಾಸಿಗರು ಜಾರುವ ರಸ್ತೆಗಳಲ್ಲಿ ಸಾಹಸದಿಂದ ತಮ್ಮ ವಾಹನ ವಾಹನ, ಬೈಕ್ ಚಾಲನೆ ಮಾಡುತ್ತಿದ್ದಾರೆ. ಮಲೆನಾಡಿನ ಸೌಂದರ್ಯ ಕಂಡ ಹೊರಜಿಲ್ಲೆ ಪ್ರವಾಸಿಗರು ಕಾಫಿನಾಡಿನ ನಿತ್ಯಸುಮಂಗಲಿಯಂತ ಸೌಂದರ್ಯಕ್ಕೆ ಫುಲ್ ಫಿದಾ ಆಗಿದ್ದಾರೆ.