Tag: Chikmagalur

  • ಶೃಂಗೇರಿ ವಿದ್ಯಾರ್ಥಿನಿ ರೇಪ್ ಕೇಸ್ – ಆರೋಪ ಸಾಬೀತು, ಶಿಕ್ಷೆಯಷ್ಟೇ ಬಾಕಿ

    ಶೃಂಗೇರಿ ವಿದ್ಯಾರ್ಥಿನಿ ರೇಪ್ ಕೇಸ್ – ಆರೋಪ ಸಾಬೀತು, ಶಿಕ್ಷೆಯಷ್ಟೇ ಬಾಕಿ

    ಚಿಕ್ಕಮಗಳೂರು: ಕಾಲೇಜು ಮುಗಿಸಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರ ಹಾಗೂ ಕೊಲೆಗೈದಿದ್ದ ಇಬ್ಬರು ಆರೋಪಿಗಳ ಅಪರಾಧ ಸಾಬೀತಾಗಿದ್ದು ಶಿಕ್ಷೆಯ ಪ್ರಮಾಣವಷ್ಟೇ ಬಾಕಿ ಉಳಿದಿದೆ.

    2016, ಫೆಬ್ರವರಿ 16ರಂದು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದ್ದ ಈ ಘಟನೆಯಿಂದ ಮಲೆನಾಡೇ ಬೆಚ್ಚಿ ಬಿದ್ದಿತ್ತು. ಕಾಲು ದಾರಿಯಲ್ಲಿ ಮನೆಗೆ ಹೋಗ್ತಿದ್ದ ಪ್ರಥಮ ಬಿಕಾಂ ವಿದ್ಯಾರ್ಥಿಯನ್ನ ಅದೇ ಊರಿನ ಪ್ರದೀಪ್ ಹಾಗೂ ಸಂತೋಷ್ ಎಂಬುವರು ಅತ್ಯಾಚಾರಗೈದು, ಕೊಲೆ ಮಾಡಿ ಪಾಳು ಬಾವಿಗೆ ಎಸೆದಿದ್ರು. ಇದರಿಂದ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳಿಸುವುಕ್ಕೂ ಹೆತ್ತವರು ಯೋಚಿಸಿದ್ದರು. ಆದ್ರೀಗ, ಮೂರು ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಇಬ್ಬರ ಮೇಲಿನ ಆರೋಪ ಸಾಬೀತಾಗಿದೆ.

    ಏನಿದು ಪ್ರಕರಣ?
    2016, ಫೆಬ್ರವರಿ 16ರಂದು ಜಿಲ್ಲೆಯ ಶೃಂಗೇರಿಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಅದೇ ಊರಿನ ಸಂತೋಷ್ ಹಾಗೂ ಪ್ರದೀಪ್ ಎಂಬುವರು ಅತ್ಯಾಚಾರಗೈದು ಕೊಲೆ ಮಾಡಿದ್ರು. ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿದ್ದ ಕಾರಣ ಬೇಗ ಮನೆಗೆ ಹೋಗಿ ಓದಿಕೊಳ್ಳೋಣವೆಂದು ದಿನನಿತ್ಯದ ದಾರಿ ಬಿಟ್ಟು ಕಾಲುದಾರಿಯಲ್ಲಿ ಮನೆಗೆ ಹೋಗುತ್ತಿದ್ದ ಯುವತಿಯನ್ನು ಇಬ್ಬರು ಯುವಕರು ಅತ್ಯಾಚಾರಗೈದು, ಕೊಲೆಮಾಡಿ ಗಿಡಗಂಟೆಗಳಿಂದ ತುಂಬಿದ್ದ 50 ಅಡಿಯ ಪಾಳುಬಾವಿಯೊಂದಕ್ಕೆ ಎಸೆದಿದ್ದರು. ಘಟನೆ ಹೊರಬಂದ ನಂತರ ಪೊಲೀಸರು ಪ್ರಕರಣದ ಬೆನ್ನು ಬೀಳುತ್ತಿದ್ದಂತೆ ಇಬ್ಬರು ಆರೋಪಿಗಳಲ್ಲಿ ಓರ್ವ ಆತ್ಮಹತ್ಯೆಗೆ ಯತ್ನಿಸಿದ್ದ, ಮತ್ತೋರ್ವ ಪೊಲೀಸರ ಅತಿಥಿಯಾಗಿದ್ದ. ಈ ಕೇಸ್ ಹೊರತುಪಡಿಸಿಯೂ ಇಬ್ಬರ ಮೇಲೂ ಹಲವು ಕೇಸ್‍ಗಳಿದ್ದು, ಇದೀಗ ಮೂರು ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆಸಿರೋ ಜಿಲ್ಲಾ ಸತ್ರ ನ್ಯಾಯಾಲಯ ಸೆಕ್ಷನ್ 376 (ಡಿ), 302, 201 376 (2) (ಎಂ) ಸೆಕ್ಷನ್ ಅಡಿ ಇವರ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದೆ.

    ಈಡೇರಿದ ಊರಿನವರ ಆಸೆ:
    ಈ ಇಬ್ಬರು ಆರೋಪಿಗಳಿಗೆ ನೇಣಿಗೆ ಹಾಕಬೇಕು ಎಂದು ಊರಿನ ಗ್ರಾಮಸ್ಥರು ಹಾಗೂ ಯುವತಿಯ ಕುಟುಂಬಸ್ಥರು ಆಗ್ರಹಿಸಿದ್ದರು. ಅಷ್ಟೆ ಅಲ್ಲದೇ ಈ ಯುವಕರು ಊರಿನ ಯುವತಿಯರಿಗೆ ಹಣ ನೀಡಿ ಬಾ ಅನ್ನೋದು, ಒಂಟಿ ಮಹಿಳೆ ಮನೆಗೆ ನುಗ್ಗೋದು ಮಾಡುತ್ತಿದ್ದರು ಎಂದು ಊರಿನ ಜನ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಇಬ್ಬರ ಮೇಲಿನ ಆರೋಪ ಸಾಬೀತಾಗಿದ್ದು, ಇಬ್ಬರಿಗೂ ಶಿಕ್ಷೆಯಾಗುತ್ತೆಂದು ಊರಿನ ಜನರಿಗೆ ಸಂತೋಷವಾಗಿದೆ.

    ಘಟನೆ ಬೆಳಕಿಗೆ ಬರುವ ಮುನ್ನ ಊರಿನ ಜನ ಯುವತಿಗಾಗಿ ಹುಡುಕಾಟದಲ್ಲಿದ್ದರೆ ಈ ಇಬ್ಬರು ಯುವಕರು ಮಾತ್ರ ತಮಗೇನು ಗೊತ್ತಿಲ್ಲದಂತಿದ್ರು. ಘಟನೆ ಬೆಳಕಿಗೆ ಬಂದು ಕೇಸ್ ದಾಖಲಾಗುತ್ತಿದ್ದಂತೆ ಶೃಂಗೇರಿಯ ಅಂದಿನ ಸಬ್ ಇನ್ಸ್‍ಪೆಕ್ಟರ್ ಸುದೀರ್ ಹೆಗ್ಡೆ ಇಬ್ಬರನ್ನು ಬಂಧಿಸಿದ್ದರು. ಮೂರು ವರ್ಷಗಳ ವಿಚಾರಣೆಯ ಬಳಿಕ ಇವರ ತಪ್ಪು ಸಾಬೀತಾಗಿ ಕೇಸ್ ಶಿಕ್ಷೆಯ ಹೊಸ್ತಿಲಿಗೆ ಬಂದು ನಿಂತಿದೆ. ವಿದ್ಯಾರ್ಥಿನಿಯ ಪರವಾಗಿ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ಯಳಗೇರಿ ವಾದ ಮಂಡಿಸಿದ್ದರು.

  • ಮಹಾಮಳೆಗೆ ಕೊಚ್ಚಿ ಹೋಗಿದ್ದ ಆಟೋ ನಾಲ್ಕು ತಿಂಗಳ ಬಳಿಕ ಪತ್ತೆ

    ಮಹಾಮಳೆಗೆ ಕೊಚ್ಚಿ ಹೋಗಿದ್ದ ಆಟೋ ನಾಲ್ಕು ತಿಂಗಳ ಬಳಿಕ ಪತ್ತೆ

    – ಅಗಸ್ಟ್ 9 ರಂದು ಕೊಚ್ಚಿ ಹೋಗಿತ್ತು ರಿಕ್ಷಾ
    – 6 ಜನರನ್ನು ಕೂಡಲೇ ಇಳಿಸಿ ಪ್ರಾಣ ಉಳಿಸಿದ್ದ ಉಮೇಶ್
    – ಪೇಪರ್ ದೋಣಿಯಂತೆ ನೀರಿನಲ್ಲಿ ಹೋಗಿತ್ತು

    ಚಿಕ್ಕಮಗಳೂರು: ಜೂನ್, ಜುಲೈ, ಅಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಅಂದು ಕೊಚ್ಚಿ ಹೋಗಿದ್ದ ಆಟೋ ನಾಲ್ಕು ತಿಂಗಳ ಬಳಿಕ ಪತ್ತೆಯಾಗಿದೆ.

    ಅಗಸ್ಟ್ ತಿಂಗಳು ಅಂದ್ರೆ ಮಲೆನಾಡಿಗರು ಈಗಲೂ ಬೆಚ್ಚಿ ಬೀಳ್ತಾರೆ. ಅಷ್ಟರ ಮಟ್ಟಿಗೆ ರಾಕ್ಷಸನಂತೆ ಮಳೆ ಸುರಿದಿತ್ತು. ಅಗಸ್ಟ್ 9ರಂದು ಬಾಡಿಗೆಗೆ ಜನರನ್ನ ಕೂರಿಸಿಕೊಂಡು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಬರುವಾಗ ಸುರಿಯುತ್ತಿದ್ದ ಧಾರಾಕಾರ ಮಳೆಯಿಂದ ರಸ್ತೆ ಬದಿಯ ಮರಗಿಡಗಳು ಎತ್ತರದ ಪ್ರದೇಶದಿಂದ ರಸ್ತೆಗೆ ಬರುತ್ತಿದ್ದಾಗ ಎದುರಿಗೆ ಬಂದ ಆಟೋ ಕೂಡ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಆಟೋ ಚಾಲಕ ಉಮೇಶ್ ಕೂಡಲೇ ಎಚ್ಚೆತ್ತು ಆಟೋದಲ್ಲಿದ್ದವರನ್ನ ಕೆಳಗಿಸಿ ಎಲ್ಲರ ಪ್ರಾಣ ಉಳಿಸಿದ್ದರು. ಆದರೆ ಆಟೋವನ್ನ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

    ಕೊಟ್ಟಿಗೆಹಾರದಲ್ಲಿ ಮುಗಿಲೆತ್ತರದ ಬೆಟ್ಟಗುಡ್ಡಗಳೇ ಕಳಚಿ ಬಿದ್ದಿತ್ತು. ಭೂಮಿಯು ಬಾಯ್ಬಿಟ್ಟಿತ್ತು. ಅಂತಹಾ ಮಳೆಯಲ್ಲಿ ಅಂದು ಕೊಚ್ಚಿ ಹೋಗಿದ್ದ ಆಟೋವನ್ನು ಮಾಲೀಕ ಉಮೇಶ್ ಹುಡುಕಾಡಿದ್ದರೂ ಸಿಕ್ಕಿರಲಿಲ್ಲ. ಹುಡುಕುವಷ್ಟು ದಿನ ಹುಡುಕಿ ಉಮೇಶ್ ಕೂಡ ಕೈಚೆಲ್ಲಿದ್ರು. ಜೀವನ ನಿರ್ವಹಣೆಗೆ ಇದ್ದ ಆಟೋ ಮಳೆ ನೀರಿನಲ್ಲಿ ಪೇಪರ್ ದೋಣಿಯಂತೆ ತೇಲಿ ಹೋಗಿದ್ದ ಕಂಡು ಕಣ್ಣೀರಿಟ್ಟಿದ್ದರು. ಆದರೆ ಈಗ ಪತ್ತೆಯಾಗಿರುವ ಆಟೋವಿನ ಅವಶೇಷವನ್ನು ಕಂಡ ಉಮೇಶ್ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

     

    ಅಂದು ಆಟೋದಲ್ಲಿದ್ದವರು ನಾವು ಬದುಕುಳಿದಿದ್ದೇ ಪವಾಡ ಅಂತಾರೆ. ಯಾಕಂದ್ರೆ, ರಸ್ತೆಯ ಒಂದು ಬದಿಯಲ್ಲಿ ಎತ್ತರದಿಂದ ಪ್ರವಾಹದಂತೆ ನುಗ್ಗಿ ಬರುತ್ತಿರುವ ನೀರು. ಮತ್ತೊಂದೆಡೆ ಆಳವಾದ ಪ್ರದೇಶ. ಅಂದು ನಾವು ಆಟೋದಲ್ಲೇ ಇದ್ದಿದ್ರೆ ಇಂದು ಫೋಟೋದಲ್ಲಿ ನಾವು ಇರಬೇಕಿತ್ತು ಅಂತಾರೆ ಆಟೋದಲ್ಲಿದ್ದ ಸ್ಥಳೀಯರು. ನಾವು ಬದುಕಿದ್ದೆ ಪವಾಡ, ಉಮೇಶ್ ಅವರು ಕೂಡಲೇ ನಮ್ಮನ್ನ ಆಟೋದಿಂದ ಇಳಿಸದಿದ್ದರೆ ಆರು ಜನರಲ್ಲಿ ಯಾರೊಬ್ಬರು ಉಳಿಯುತ್ತಿರಲಿಲ್ಲ ಆ ದೃಶ್ಯವನ್ನ ನೆನೆದು ಇಂದಿಗೂ ಭಯಭೀತರಾಗ್ತಾರೆ.

    ಅಂದು ಕೊಚ್ಚಿ ಹೋಗಿದ್ದ ಆಟೋ ಇಂದು ಪತ್ತೆಯಾಗಿದ್ದರೂ ಕೂಡ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ. ತೂಕದ ಲೆಕ್ಕದಲ್ಲಿ ಗುಜರಿಗೆ ಮಾರುವ ಸ್ಥಿತಿ ತಲುಪಿದೆ. ಹಲವು ವರ್ಷಗಳ ಹೆಂಡತಿ-ಮಕ್ಕಳ ಹೊಟ್ಟೆ ತುಂಬಿಸಿದ್ದ ತನ್ನ ಬದುಕಿನ ಸಾರಥಿ ಸ್ಥಿತಿ ಕಂಡು ಉಮೇಶ್ ಮಮ್ಮುಲು ಮರುಗುತ್ತಿದ್ದಾರೆ. ಎತ್ತರದ ಪ್ರದೇಶದಿಂದ ಬಿದ್ದ ಆಟೋ ಬೃಹತ್ ಕಲ್ಲು-ಬಂಡೆಗಳ ಮಧ್ಯೆ ಸಿಲುಕಿ ಪುಡಿ-ಪುಡಿಯಾಗಿದೆ. ರಿಕ್ಷಾದ ಅವಶೇಷಗಳ ಬಳಿ ನಿಂತು ಉಮೇಶ್ ಭವಿಷ್ಯದ ದಾರಿ ನೆನೆದು ಕಣ್ಣೀರಿಡ್ತಿದ್ದಾರೆ.

    ಈ ವರ್ಷದ ಮಲೆನಾಡ ಮಳೆಗೆ ನಮಗೆ ಭವಿಷ್ಯವಿದ್ಯಾ ಅಂತ ಮಲೆನಾಡಿಗರೇ ಆತಂಕಕ್ಕಿಡಾಗಿದ್ರು. ಅದೆಷ್ಟೋ ಜೀವಗಳು ಜಲರಾಕ್ಷಸನ ಅಬ್ಬರಕ್ಕೆ ಮಣ್ಣಲ್ಲಿ ಮಣ್ಣಾಗಿ ಉಸಿರು ಚೆಲ್ಲಿದ್ವು. ಆದ್ರೆ, ಉಮೇಶ್‍ಗೆ ಜೀವನ ನೀಡಿದ್ದ ನಿರ್ಜಿವಿ ಆಟೋ ವರುಣನ ಮುಂದೆ ಮಂಡಿಯೂರಿತ್ತು. ಪ್ರಕೃತಿ ವಿಕೋಪಕ್ಕೆ ವಿಮೆ ಕೂಡ ಸಿಗದ ಕಾರಣ ಉಮೇಶ್‍ಗೆ ಅತ್ತ ಹಣವೂ ಇಲ್ಲ. ಇತ್ತ ಆಟೋವು ಇಲ್ಲ ಕೊನೆಗೆ ಜೀವನವೂ ಇಲ್ಲ ಎಂಬಂತಾಗಿದೆ. ಮೂರು ತಿಂಗಳಿಂದ ಆಟೋ ಹುಡುಕಿಕೊಂಡು ಕೂಲಿ ಮಾಡ್ತಿದ್ದ ಉಮೇಶ್ ಇಂದು ಮುಂದೆ ಏನ್ ಮಾಡೋದೆಂದು ತಲೆ ಮೇಲೆ ಕೈಹೊದ್ದು ಕೂತಿದ್ದಾರೆ.

    ಆಟೋ ಓಡಿಸಿಕೊಂಡೇ ಜೀವನ ರೂಪಿಸಿಕೊಂಡಿದ್ದ ಉಮೇಶ್ ಕುಟುಂಬ ಇಂದು ಬೀದಿಗೆ ಬಿದ್ದಿದೆ. ಸಾಲದ ಶೂಲವೂ ಉಮೇಶ್‍ರನ್ನ ಕಿತ್ತು ತಿಂತಿದೆ. ಒಂದೆಡೆ ದುಡಿಯಲು ಆಟೋವಿಲ್ಲ. ಕೂಲಿ ಮಾಡಿದ್ರೆ ಬದುಕಲು ಸಾಕಾಗುತ್ತೆ. ಹೆಂಡತಿ ಸಂಘದಲ್ಲಿ ಸಾಲ ಮಾಡಿ ಕೊಡಿಸಿದ್ದ ಆಟೋದ ಸಾಲವನ್ನೂ ಕಟ್ಟಬೇಕು. ಉಮೇಶ್ ದಂಪತಿಗೆ ಈಗ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿದೆ. ಇರೋ ಮೂವರು ಮಕ್ಕಳಲ್ಲಿ ಉಮೇಶ್ ಮಕ್ಕಳನ್ನ ಓದಿಸಿಕೊಂಡು ಜೀವನ ಸಾಗಿಸಲಾಗದೇ ಕೆಲ ತಿಂಗಳಿಂದ ಮಕ್ಕಳಿಗೆ ಶಾಲೆಯನ್ನೂ ಬಿಡಿಸಿದ್ದಾರೆ. ಬದುಕಿನ ಮೇಲೆ ವಿಧಿ ಸವಾರಿ ಮಾಡ ಹೊರಟರೇ ಬದುಕು ಯಾವಾಗ, ಹೇಗೆ, ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ ಎನ್ನುವುದಕ್ಕೆ ಈ ಕುಟುಂಬವೇ ಸಾಕ್ಷಿ. ಆದ್ರೆ, ಈತನ ಕಷ್ಟವನ್ನ ಜಿಲ್ಲಾಡಳಿತವೂ ಕೇಳಲಿಲ್ಲ. ಚುನಾವಣೆ ಸಂದರ್ಭದಲ್ಲಿ ಕೈಮುಗಿಯುವ ರಾಜಕಾರಣಿಗಳಿಗೆ ನೋವು ತಲುಪಿಲ್ಲ ಎನ್ನುವುದೇ ಬೇಸರದ ಸಂಗತಿ.

  • ಕಾಫಿನಾಡ ಸಿರಿ ಕನ್ಯೆ ಮುಂದೆ ಪ್ರವಾಸಿಗರ ಫೋಟೋ ಶೂಟ್

    ಕಾಫಿನಾಡ ಸಿರಿ ಕನ್ಯೆ ಮುಂದೆ ಪ್ರವಾಸಿಗರ ಫೋಟೋ ಶೂಟ್

    ಚಿಕ್ಕಮಗಳೂರು: ಹೊಸ ವರ್ಷ ಸ್ವಾಗತಿಸಲು ಪ್ರವಾಸಿಗರು ಕಾಫಿ ನಾಡಿಗೆ ಜಮಾಯಿಸಿದ್ದ ಪ್ರವಾಸಿಗರು ಕಾಫಿನಾಡ ಸಿರಿ ಕನ್ಯೆ ಮುಂದೆ ಫೋಟೋ ಶೂಟ್ ಮೂಲಕ ಎಂಜಾಯ್ ಮಾಡಿದ್ದಾರೆ.

    ದೂರದ ಊರುಗಳಿಂದ ಕುಟುಂಬ ಸಮೇತರಾಗಿ ಬಂದಿದ್ದ ಪ್ರವಾಸಿಗರು, ಮಕ್ಕಳ ಜೊತೆ ವಿವಿಧ ಭಂಗಿಯಲ್ಲಿ ಫೋಟೋ ತೆಗೆದುಕೊಂಡು ಸಂತಸಪಟ್ಟರು. ಕಾಫಿನಾಡಿನ ಗಿರಿ ಭಾಗದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠಕ್ಕೆ ಹೋಗುವ ದಾರಿಯಲ್ಲಿ ಈ ಸಿರಿ ಕನ್ಯೆ ಸಿಗುತ್ತಾಳೆ. ದಾರಿ ಮಧ್ಯೆಯೇ ಸಿಗುವ ಈ ಕನ್ಯೆ ಬಳಿ ಫೋಟೋ ತೆಗೆಸಿಕೊಂಡು, ಕಾಫಿನಾಡಿನ ಕಾಫಿ ರುಚಿ ಸವಿದು ಪ್ರವಾಸಿಗರು ಮುಂದೆ ಸಾಗುತ್ತಾರೆ.

    ಚಿಕ್ಕಮಗಳೂರಿನಿಂದ ಐದು ಕಿ.ಮೀ. ದೂರದಲ್ಲಿರೋ ಈ ಸಿರಿ ಕಾಫಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಮಹಿಳೆಯೊಬ್ಬರು ಮಲಗಿಕೊಂಡಿರುವ ಪ್ರತಿಮೆ ದಾರಿ ಹೋಕರನ್ನು ಮೂಕ ವಿಸ್ಮಿತರನ್ನಾಗಿಸುತ್ತಿದೆ. ಮಕ್ಕಳೊಂದಿಗೆ ಬಂದ ಪೋಷಕರು ಹಾಗೂ ಸ್ನೇಹಿತರು ಹೊಸ ವರ್ಷದ ಆಚರಣೆಗೂ ಮುನ್ನ ಈ ಕನ್ಯೆ ಬಳಿ ಸ್ವಲ್ಪ ಹೊತ್ತು ಕಾಲ ಕಳೆದು ಹೋದರು. ಮಕ್ಕಳನ್ನು ಆಡಲು ಬಿಟ್ಟು ಸಿರಿ ಕನ್ಯೆ ಮುಂದೆ ಫೋಟೋ ಶೂಟ್‍ಗೆ ನಡೆಸಿಕೊಂಡಿದ್ದಾರೆ.

    ಗಿರಿ ಭಾಗದ ಪ್ರವಾಸಿಗರಿಗೆ ಪೊಲೀಸ್ ಇಲಾಖೆ ಸಂಜೆ 6 ಗಂಟೆ ವರೆಗೆ ಮಾತ್ರ ಡೆಡ್ ಲೈನ್ ನೀಡಲಾಗಿತ್ತು. ಆರು ಗಂಟೆಯ ಬಳಿಕ ಯಾವುದೇ ಪ್ರವಾಸಿಗರನ್ನು ಗಿರಿಭಾಗಕ್ಕೆ ಬಿಡುವುದಿಲ್ಲ. ಹೀಗಾಗಿ ಬೆಳಗ್ಗೆಯಿಂದಲೇ ಪ್ರವಾಸಿಗರು ಹೊಸವರ್ಷದ ಆಚರಣೆಯಲ್ಲಿ ತೊಡಗಿದ್ದರು. ಸಂಜೆ ಈ ಸಿರಿ ಕನ್ಯೆ ಬಳಿ ಕಾಲ ಕಳೆದು, ಕಾಫಿ ಕುಡಿದು ಹಿಂದಿರುಗಿದ್ದರು.

  • ಪೊಲೀಸ್ ಜೀಪ್ ಕದ್ದು ಕಾಡಿನೊಳಗೆ ಓಡಿ ಹೋದ ಕಳ್ಳ

    ಪೊಲೀಸ್ ಜೀಪ್ ಕದ್ದು ಕಾಡಿನೊಳಗೆ ಓಡಿ ಹೋದ ಕಳ್ಳ

    ಚಿಕ್ಕಮಗಳೂರು: ನಡು ಮಧ್ಯಾಹ್ನ ರಸ್ತೆ ಮಧ್ಯದಲ್ಲಿ ನಿಂತಿದ್ದ ಪೊಲೀಸ್ ಜೀಪನ್ನೇ ಕಳ್ಳನೋರ್ವ ಕದ್ದು ಅಪಘಾತ ಮಾಡಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

    ನಗರದ ಹನುಮಂತಪ್ಪ ವೃತ್ತದ ಬಳಿ ಗ್ರಾಮಾಂತರ ಠಾಣೆಯ ರಕ್ಷಾ ಗಾಡಿಯನ್ನು ನಿಲ್ಲಸಿ ಪೊಲೀಸರು ಮೆಡಿಕಲ್ ಸ್ಟೋರ್ ಗೆ ಹೋಗಿ ಬರುವಷ್ಟರಲ್ಲಿ ಜೀಪ್ ಇದ್ದ ಜಾಗದಲ್ಲಿ ಇರಲಿಲ್ಲ. ಪೊಲೀಸರು ಜೀಪಿನಿಂದ ಇಳಿದು ಹೋಗ್ತಿದ್ದಂತೆ ಅದನ್ನು ಗಮನಿಸುತ್ತಿದ್ದ ಕಳ್ಳ ಜೀಪನ್ನು ತೆಗೆದುಕೊಂಡು ಪರಾರಿ ಆಗಿದ್ದಾನೆ.

    ಇದನ್ನು ಗಮನಿಸಿಸ ಪೊಲೀಸರು ಆತನನ್ನು ಹಿಂಬಾಲಿಸಿದ್ದಾರೆ. ನಗರದಿಂದ ಐದು ಕಿ.ಮೀ. ಸಾಗಿದ ಮೇಲೆ ಕಳ್ಳ ಪೊಲೀಸರ ಜೀಪನ್ನು ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ಬಳಿಕ ಗಾಡಿಯ ನಿಯಂತ್ರಣ ಸಿಗದೆ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದಿದ್ದಾನೆ. ಹಿಂದೆ ಪೊಲೀಸರು ಇರುವುದನ್ನು ಗಮನಿಸಿ ಜೀಪನ್ನು ಅಲ್ಲೇ ಬಿಟ್ಟು ಕಾಡಿನೊಳಗೆ ಓಡಿ ಪರಾರಿಯಾಗಿದ್ದಾನೆ.

    ಪೊಲೀಸರ ವಾಹನವನ್ನೇ ಕದ್ದ ಧೈರ್ಯವಂತನಿಗಾಗಿ ಗ್ರಾಮಾಂತರ ಪೊಲೀಸರು ಕಾಡಿನೊಳಗೆ ಹುಡುಕಾಟ ನಡೆಸಿದ್ದಾರೆ. ಆದರೆ ಆತನ ಸುಳಿವು ಸಿಕ್ಕಿಲ್ಲ.

  • ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ

    ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ

    – ಒಂದೇ ರೂಮಿನಲ್ಲಿ 1 ರಿಂದ 4ರವರೆಗೆ ಕ್ಲಾಸ್
    – ಹೆಡ್ ಮೇಷ್ಟ್ರಿಗೆ ಇಲ್ಲ ಜಾಗ

    ಚಿಕ್ಕಮಗಳೂರು: ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ ಮಾಡುತ್ತಾರೆ. ನಮ್ ಟೀಚರ್ ಹೇಳೋ ಪಾಠವನ್ನ ಮಾತ್ರ ಕೇಳ್ಬೇಕು. ಬೇರೆಯವ್ರು ಹೇಳೋದ್ನ ಕೇಳಂಗಿಲ್ಲ. ಮಕ್ಕಳಿಗೆ ಅರ್ಥ ಆಗುತ್ತೋ ಇಲ್ವೋ ಗೊತ್ತಿಲ್ಲ. ಶಿಕ್ಷಕರು ಪಾಠವನ್ನಂತು ಮಾಡ್ಲೇಬೇಕು. ಇದು ಕಾಫಿನಾಡಿನ ಸರ್ಕಾರಿ ಕನ್ನಡ ಶಾಲೆಯ ಕಥೆ. ಕ್ಲಾಸ್ ರೂಂ ಒಂದೇ. ಪಾಠ ಮಾಡೋ ಶಿಕ್ಷಕರು ನಾಲ್ಕು ಜನ. ಕೇಳೋ ಮಕ್ಕಳು 45. ಎಲ್ಲರೂ ಬೇರೆ-ಬೇರೆ ತರಗತಿಯವ್ರು. ಯಾವ ಶಿಕ್ಷಕರು ಯಾವ ಪಾಠವನ್ನ ಯಾವ ತರಗತಿಯವ್ರಿಗೆ ಮಾಡ್ತಿದ್ದಾರೆ ಅನ್ನೋದು ಮಕ್ಕಳಿಗಲ್ಲ ಶಿಕ್ಷಕರಿಗೆ ಕನ್ಫ್ಯೂಸ್. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಟೀಚರ್ ಪಾಠ ಮಾಡ್ತಾರೆ, ಮಕ್ಕಳು ಅದನ್ನ ಕೇಳ್ತಿದ್ದಾರೆ.

    ಕಡೂರು ತಾಲೂಕಿನ ಕೆ.ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಬಸವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ 2007ರವರಗೆ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಾಗಿತ್ತು. ಸರ್ಕಾರ ಈ ಶಾಲೆಯನ್ನು 2008ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಎಂದು ಮೇಲ್ದರ್ಜೆಗೇರಿಸಿದೆ. ಆದ್ರೆ ಶಾಲೆಗೆ ಕೊಡಬೇಕಾದ ಮೂಲಭೂತ ಸೌಕರ್ಯವನ್ನು ಕೊಟ್ಟೇ ಇಲ್ಲ. ಅಂದು ಇದ್ದ ಐದೇ ಕೊಠಡಿಯಲ್ಲಿ ಪಾಠ-ಪ್ರವಚನ ನಡೆಯುತ್ತಿತ್ತು. ಮಳೆ-ಗಾಳಿಗೆ ಎರಡು ಕೊಠಡಿಗಳು ಹಾಳಾಗಿದ್ದು ಅಲ್ಲಿ ಮಕ್ಕಳನ್ನು ಕೂರಿಸ್ತಿಲ್ಲ. ಉಳಿದ ಮೂರು ಕೊಠಡಿಯಲ್ಲಿ ಒಂದರಲ್ಲಿ 1ನೇ ತರಗತಿಯಿಂದ 4ನೇ ತರಗತಿ ಮಕ್ಕಳು. ಮತ್ತೊಂದರಲ್ಲಿ ಐದನೇ ತರಗತಿಯಿಂದ 6 ನೇ ತತರಗತಿ ಮಕ್ಕಳು. ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಏಳನೇ ತರಗತಿ ಮಕ್ಕಳು. ಹೆಡ್ ಮಾಸ್ಟ್ರು ಮೀಟಿಂಗ್ ಅಂದ್ರೆ ಆ ಮಕ್ಕಳು ಹೊರಗೆ ಹೋಗಬೇಕಾಗುತ್ತದೆ. ಇದೇ ರೀತಿ ಮೂರು ವರ್ಷದಿಂದ ನಡೆದುಕೊಂಡು ಬಂದಿದೆ.

    ಪೂರ್ವ ದಿಕ್ಕಿಗೆ 1ನೇ ತರಗತಿ ಮಕ್ಕಳು, ಎದುರಿಗೆ ಶಿಕ್ಷಕಿ. ಪಶ್ಚಿಮಕ್ಕೆ 2ನೇ ತರಗತಿ ಮಕ್ಕಳು, ಎದುರಿಗೆ ಶಿಕ್ಷಕಿ. ಉತ್ತರಕ್ಕೆ 3, ದಕ್ಷಿಣಕ್ಕೆ 4ನೇ ತರಗತಿ ಮಕ್ಕಳು, ಎದುರಿಗೆ ಶಿಕ್ಷಕರು. ಇಲ್ಲಿ ಒಬ್ಬೊರಿಗೊಬ್ಬುರು ಬೆನ್ ಹಾಕಿಕೊಂಡೇ ಪಾಠ ಕೇಳಬೇಕು. ಇಲ್ಲಿ ಒಂದೇ ಕೊಠಡಿಯೊಳಗೆ ಏಕಕಾಲಕ್ಕೆ ನಾಲ್ಕು ಕ್ಲಾಸ್ ನೆಡೆಯುತ್ತವೆ. ದಯವಿಟ್ಟು ಮೂರು ರೂಂ ಕೊಡಿ ಎಂದು ಮೂರು ವರ್ಷಗಳಿಂದ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರು ಸರ್ಕಾರಕ್ಕೆ ಮನವಿ ಮಾಡ್ತಿದ್ದಾರೆ. ಆದ್ರೆ ಯಾರೂ ಸ್ಪಂದಿಸಿಲ್ಲ. ಎಸ್‍ಡಿಎಂಸಿ. ಸದಸ್ಯರು ಕೊಟ್ಟ ಮನವಿಗಳಿಗೆ ಸಹಿ ಹಾಕಿ-ಹಾಕಿ ಕೈ ನೋವಾಗಿದೆ ಅಷ್ಟು ಮನವಿ ಮಾಡಿದ್ದೀವಿ ಎನ್ನುತ್ತಾರೆ. ಅಧಿಕಾರಿಗಳು ಮನವಿ ಪತ್ರಗಳನ್ನು ಇಸ್ಕೊಂಡ್ರೇ ವಿನಃ ಬಿಲ್ಡಿಂಗ್ ಮಾತ್ರ ಕೊಟ್ಟಿಲ್ಲ.

    ಈ ಊರಲ್ಲಿ ಶ್ರೀಮಂತರಿಲ್ಲ. ಇರೋರೆಲ್ಲಾ ಹಿಂದುಳಿದ ವರ್ಗ, ಅಲೆಮಾರಿ ಹಾಗೂ ಯಾದವ ಜನಾಂಗಕ್ಕೆ ಸೇರಿದವರು. ಎಲ್ಲರೂ ಕೂಲಿ ಮಾಡಿಕೊಂಡೆ ಬದುಕ್ತಿರೋರು. ಇವ್ರಿಗೆ ಕಾನ್ವೆಂಟ್‍ಗಳಲ್ಲಿ ಓದಿಸೋ ಶಕ್ತಿಯೂ ಇಲ್ಲ. ಮಕ್ಕಳು ನಮ್ಮಂತಾಗೋದು ಬೇಡ ಎಂದು ಶಾಲೆಗೆ ಕಳಿಸಿ ಕೂಲಿಗೆ ಹೋಗ್ತಿದ್ದಾರೆ. ಆದ್ರೆ ಸರ್ಕಾರ ಉಚಿತ ಶಿಕ್ಷಣದ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತೆ ಕಾಣ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಲ್ಲ ಎಂದೇಳೋ ಸರ್ಕಾರ ಉಳಿಯೋಕೆ ಬೇಕಾದ್ದನ್ನು ಮಾಡ್ತಿಲ್ಲ. ಈ ರೀತಿ ಸೌಲಭ್ಯ ಕೊಟ್ರೆ ಮಕ್ಕಳು ಓದು-ಬರಹ ಕಲಿಯೋದಾದ್ರು ಹೇಗೆ? ಇಲ್ಲಿ ಸಮರ್ಪಕವಾದ ಶಿಕ್ಷಕರಿದ್ದಾರೆ. ಮಕ್ಕಳೂ ಇದ್ದಾರೆ. ಆದರೆ ಬಿಲ್ಡಿಂಗ್ ಇಲ್ಲ. ಇದು ಹೀಗೆ ಮುಂದುವರೆದ್ರೆ ನಾಳೆ ಮಕ್ಕಳು ಹೆತ್ತವರ ಜೊತೆ ಕೂಲಿಗೆ ಹೋಗ್ತಾರೆ ಶಾಲೆಗೆ ಬೀಗ ಬೀಳುತ್ತೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಸ್ಥಳೀಯರು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಬಿಲ್ಡಿಂಗ್‍ಗಾಗಿ ಸಂಸದೆ ಶೋಭಾ ಕರಂದ್ಲಾಜೆಗೂ ಮನವಿ ಮಾಡಿದ್ದಾರೆ. ಆದರೆ ಅವರು ಇದು ನನ್ನ ವ್ಯಾಪ್ತಿಗೆ ಬರಲ್ಲ ಅಂದ್ರಂತೆ. ಶಾಸಕ ಬೆಳ್ಳಿ ಪ್ರಕಾಶ್‍ಗೆ ಮನವಿ ಮಾಡಿದ್ದಾರೆ. ಅವರು ಕೇವಲ ಆಯ್ತು ಎಂದು ಸುಮ್ಮನಾಗಿದ್ದಾರೆ. ಅಧಿಕಾರಿಗಳಿಗೆ ಕೊಟ್ಟ ಮನವಿ ಪತ್ರಗಳಿಗೆ ಇಂದಿಗೂ ಬೆಲೆ ಸಿಕ್ಕಿಲ್ಲ. ಊರಿನ ಜನ ಮುಖ್ಯಮಂತ್ರಿ ಯಡಿಯೂರಪ್ಪನವರು ಇನ್ಮುಂದೆ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಎಂದು ಹೇಳಿದ್ದಾರೆ. ಆ ಪರ್ವ ಈ ಬಡ ಮಕ್ಕಳ ಶಾಲೆಯಿಂದಲೇ ಆರಂಭವಾಗಲಿ ಅನ್ನೋದು ಸ್ಥಳೀಯರ ಅಶಯವಾಗಿದೆ.

  • ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

    ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

    ಚಿಕ್ಕಮಗಳೂರು: ಕೇರಳದಲ್ಲಿ ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮಹಿಳೆ ಸೇರಿ ಇಬ್ಬರು ನಕ್ಸಲರು ಮೃತಪಟ್ಟಿದ್ದಾರೆ.

    ಮೃತಪಟ್ಟವನ್ನು ಶ್ರೀಮತಿ ಮತ್ತು ಸುರೇಶ್ ಅಲಿಯಾಸ್ ಮಹೇಶ್ ಎಂದು ಗುರುತಿಸಲಾಗಿದೆ. ಸೋಮವಾರ ಕೇರಳದ ಪಾಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರ ಗುಂಡಿಗೆ ಮೂವರು ಮಾವೋವಾದಿಗಳು ಹತರಾಗಿದ್ದರು. ಈ ಮೂವರಲ್ಲಿ ಶ್ರೀಮತಿ ಮತ್ತು ಸುರೇಶ್ ಕೂಡ ಇದ್ದರು ಎಂಬ ಮಾಹಿತಿ ಸಿಕ್ಕಿದೆ.

    ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದವಳಾದ ಶ್ರೀಮತಿ 2008ರಲ್ಲಿ ನಕ್ಸಲ್ ಚಟುವಟಿಕೆಗೆ ಸೇರಿದಳು. ಈಕೆಯ ವಿರುದ್ಧ ಸುಮಾರು 10 ರಿಂದ 12 ಪ್ರಕರಣಗಳಿವೆ. ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನಾದ ಸುರೇಶ್ ಕೂಡ 2004ರಲ್ಲೇ ನಕ್ಸಲ್ ಗುಂಪಿಗೆ ಸೇರಿಕೊಂಡಿದ್ದು, ಇತನ ವಿರುದ್ಧ 40 ಪ್ರಕರಣಗಳಿವೆ. ಈಗ ಇಬ್ಬರೂ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ.

    ಸೋಮವಾರ ಬೆಳಗ್ಗೆ ಪಾಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರ ಗುಂಡಿಗೆ ಮೂವರು ಮಾವೋವಾದಿಗಳು ಹತರಾಗಿದ್ದರು. ಕೇರಳದ ಥಂಡರ್ ಬೋಲ್ಟ್ ಕಮಾಂಡೋ ತಂಡವು ಈ ಕಾರ್ಯಚರಣೆ ನಡೆಸಿದ್ದು, ಯಶಸ್ವಿಯಾಗಿ ಮೂವರನ್ನು ಹತ್ಯೆ ಮಾಡಿತ್ತು.

    ಇತ್ತೀಚಿಗೆ ಮಾವೋವಾದಿಗಳ ಉಪಟಳ ಕೇರಳದಲ್ಲಿ ಜಾಸ್ತಿಯಾಗಿದ್ದು, ಇವರನ್ನು ಸದೆಬಡಿಯಲು ಕೇರಳ ಪೊಲೀಸರು ಕಾದು ಕುಳಿತಿದ್ದರು. ಅದರಂತೆ ಸೋಮವಾರ ಬೆಳಗ್ಗೆ ಮಾವೋವಾದಿಗಳು ಪಾಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದರು. ಈ ವೇಳೆ ಪಾಲಕ್ಕಾಡ್ ಅರಣ್ಯದ ಮಂಚಕತ್ತಿ ಎಂಬ ಪ್ರದೇಶದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿಯಾಗಿ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ಕರ್ನಾಟಕ ತಮಿಳುನಾಡು ಮತ್ತು ಕೇರಳದಲ್ಲಿ ಮಾವೋವಾದಿಗಳು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದ್ದರಿಂದ ಕೆಲ ಸೂಕ್ಷ್ಮ ಪ್ರದೇಶದ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಆದರೆ ಕೇರಳದಲ್ಲಿ ಬಿಟ್ಟರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾವೋವಾದಿಗಳು ಕಾಣಿಸಿಕೊಂಡಿರಲಿಲ್ಲ. 2014 ರಿಂದ 2017ರವರೆಗೆ ಕೇರಳದಲ್ಲಿ ಮಾವೋವಾದಿಗಳ ವಿರುದ್ಧ 23 ವಿವಿಧ ಕೇಸ್‍ಗಳು ದಾಖಲಾಗಿದ್ದವು.

  • ಪಶ್ಚಿಮ ಘಟ್ಟದಲ್ಲಿ ಜಲಸ್ಫೋಟ – ಎರಡು ಕವಲುಗಳಾಗಿ ಬೇರ್ಪಟ್ಟ ಅಣಿಯೂರು ಹೊಳೆ

    ಪಶ್ಚಿಮ ಘಟ್ಟದಲ್ಲಿ ಜಲಸ್ಫೋಟ – ಎರಡು ಕವಲುಗಳಾಗಿ ಬೇರ್ಪಟ್ಟ ಅಣಿಯೂರು ಹೊಳೆ

    – ಚಾರ್ಮಾಡಿ ಬಳಿ ಉಕ್ಕಿ ಹರಿದ ಮೃತ್ಯುಂಜಯ ಹೊಳೆ
    – ವಿಚಿತ್ರವಾಗಿ ಅಬ್ಬರಿಸುತ್ತಿದೆ ನೇತ್ರಾವತಿಯ ಉಪನದಿಗಳು

    ಮಂಗಳೂರು: ಕರಾವಳಿ ಭಾಗದಲ್ಲಿ ಮಳೆ ಕಡಿಮೆಯಾದರೂ, ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಳೆರಾಯ ಪ್ರತಾಪ ತೋರುತ್ತಿದ್ದು, ಹಠಾತ್ತನೆ ಮೇಘ ಸ್ಫೋಟದ ರೀತಿಯಲ್ಲಿ ಮಳೆಯಾಗಿ ಘಟ್ಟಗಳ ಮಧ್ಯೆ ಜಲಸ್ಫೋಟ ಸಂಭವಿಸಿದೆ. ಇದರಿಂದ ಸ್ಥಳೀಯರಲ್ಲಿ ಭಾರೀ ಆತಂಕ ಮನೆ ಮಾಡಿದೆ.

    ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಳೆರಾಯ ಪ್ರತಾಪ ತೋರುತ್ತಲೇ ಇದ್ದಾನೆ. ಇದೀಗ ಹಠಾತ್ತನೆ ಮೇಘ ಸ್ಫೋಟದ ರೀತಿಯಲ್ಲಿ ಮಳೆಯಾಗಿ ಘಟ್ಟಗಳ ಮಧ್ಯೆ ಜಲಸ್ಫೋಟ ಸಂಭವಿಸುತ್ತಿದೆ. ದಟ್ಟಾರಣ್ಯದಲ್ಲಿ ಬೆಟ್ಟಗಳ ನಡುವೆ ಸ್ಫೋಟ ಉಂಟಾಗುತ್ತಿದ್ದು, ಕಲ್ಲು, ಮಣ್ಣು, ಭಾರೀ ಪ್ರಮಾಣದ ಮರಗಳು ಛಿದ್ರಗೊಂಡು ನೀರಿನೊಂದಿಗೆ ಕೊಚ್ಚಿ ಬರುತ್ತಿದೆ. ಘಟ್ಟದಲ್ಲಿನ ಜಲ ಸ್ಫೋಟದಿಂದ ನಿನ್ನೆ ಚಾರ್ಮಾಡಿ ಬಳಿಯ ಮೃತ್ಯುಂಜಯ ಹೊಳೆ ಇದ್ದಕ್ಕಿದ್ದಂತೆ ಉಕ್ಕಿಹರಿದಿದ್ದು, ನದಿ ಪಾತ್ರದ ನಿವಾಸಿಗಳು ಭಯಭೀತರಾಗಿ ಸುರಕ್ಷಿತ ಸ್ಥಳಕ್ಕೆ ತೆರಳಿ ರಾತ್ರಿ ಕಳೆದಿದ್ದಾರೆ.

    ಭಾರೀ ಮಳೆಯಾದಾಗ ನೇತ್ರಾವತಿಯ ಉಪನದಿಗಳು ಹೀಗೆ ವಿಚಿತ್ರವಾಗಿ ಅಬ್ಬರಿಸುತ್ತಿರುವುದು ಘಟ್ಟದ ತಪ್ಪಲಿನ ಗ್ರಾಮಸ್ಥರಲ್ಲಿ ಭೀತಿ ಸೃಷ್ಟಿಸಿದೆ. ಇತಿಹಾಸದಲ್ಲಿ ಎಂದೂ ಕಂಡರಿಯದ ಆತಂಕಕಾರಿ ಘಟನೆಗಳು ಘಟ್ಟಗಳಲ್ಲಿ ಸಂಭವಿಸುತ್ತಿರುವುದು ಆತಂಕ ಸೃಷ್ಟಿಸಿದೆ. ಈ ವೈಪರೀತ್ಯದ ಪರಿಣಾಮ ಚಾರ್ಮಾಡಿಯಲ್ಲಿ ಒಂದಾಗಿ ಹರಿಯುತಿದ್ದ ಅಣಿಯೂರು ಹೊಳೆ ಹೊಸ್ಮಠ ಎಂಬಲ್ಲಿ ಎರಡು ಕವಲುಗಳಾಗಿ ಬೇರ್ಪಟ್ಟಿದೆ. ಭಾರೀ ಪ್ರಮಾಣದ ನೀರಿನೊಂದಿಗೆ ಕಲ್ಲುಗಳು ಹಾಗೂ ಮರದ ಅವಶೇಷಗಳು ಕೊಚ್ಚಿ ಬಂದು ನದಿ ಮಧ್ಯೆ ನಡುಗಡ್ಡೆ ಸೃಷ್ಟಿಯಾಗಿದೆ.

    ಕೃಷಿ ತೋಟಗಳಿದ್ದ ಜಾಗದಲ್ಲಿ ಹೊಸ ಹೊಳೆಯೇ ಸೃಷ್ಟಿಯಾಗಿದೆ. ಅಲ್ಲಿಂದ ನೋಡಿದರೆ, ಘಟ್ಟದ ಮೇಲ್ಭಾಗದಲ್ಲಿ ಬೆಟ್ಟಗಳ ಮಧ್ಯೆ ಬೃಹತ್ತಾಗಿ ಬಿರುಕು ಬಿಟ್ಟು ಅರಣ್ಯ ನಾಶವಾಗಿರುವುದೂ ಕಂಡುಬರುತ್ತಿದೆ. ಇದರಿಂದ ಸ್ಥಳೀಯರು ಭಯಗೊಂಡಿದ್ದು ಸ್ಥಳಾಂತರಗೊಳ್ಳುತ್ತಿದ್ದಾರೆ.

    ಭೀಕರ ಮಳೆಯಿಂದಾಗಿ ಚಾರ್ಮಾಡಿ ಘಾಟ್‍ನಲ್ಲಿ ಭೂ ಕುಸಿತ ಸಂಭವಿಸಿತ್ತು. ಅಲ್ಲದೆ, ಮರಗಳು ಸಹ ರಸ್ತೆಗೆ ಬಿದ್ದಿದ್ದವು, ರಸ್ತೆಯನ್ನು ಸ್ವಚ್ಛಗೊಳಿಸಿ, ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಆದರೆ, ಆಗಸ್ಟ್ 30 ರಂದು ಮತ್ತೆ ಆದೇಶ ಹೊರಡಿಸಿ, ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಮತ್ತೆ ಬ್ರೇಕ್ ಹಾಕಿತ್ತು.

    ಪೊಲೀಸರು ನೀಡಿರುವ ವರದಿಯಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಚಾರ್ಮಾಡಿ ಘಾಟ್ ಸಹಜ ಸ್ಥಿತಿಗೆ ಬರಲು ಇನ್ನಷ್ಟು ದಿನಗಳು ಬೇಕಾಗುತ್ತದೆ ಎಂದು ತಿಳಿಸಲಾಗಿತ್ತು. ಪೊಲೀಸರ ವರದಿ ಪಡೆದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್, ಎಲ್ಲ ರೀತಿಯ ವಾಹನ ಸಂಚಾರ ನಿಷೇಧಗೊಳಿಸಿ ಆದೇಶ ಹೊರಡಿಸಿದ್ದರು. ಹೀಗಾಗಿ ಅನಿರ್ಧಿಷ್ಟಾವಧಿಗೆ ಮತ್ತೆ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.

  • ವಿವಿಧ ಹಣ್ಣುಗಳಿದ್ದರೂ ಮೊಸ್ರನ್ನ ತಿಂದು ಹೋದ ಕೋತಿ

    ವಿವಿಧ ಹಣ್ಣುಗಳಿದ್ದರೂ ಮೊಸ್ರನ್ನ ತಿಂದು ಹೋದ ಕೋತಿ

    – ನೆರೆದವರಲ್ಲಿ ಅಚ್ಚರಿ

    ಚಿಕ್ಕಮಗಳೂರು: ಎಲ್ಲ ಬಗೆಯ ಹತ್ತಾರು ಹಣ್ಣುಗಳಿದ್ದರೂ ಮಂಗವೊಂದು ಯಾವ ಹಣ್ಣನ್ನು ಮುಟ್ಟದೆ ಪ್ರಸಾದಕ್ಕಿಟ್ಟಿದ್ದ ಮೊಸರನ್ನ ತಿಂದು ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಶಿವು ಕುಟುಂಬ ಕಳೆದ ತಿಂಗಳು ಕಾಶಿ ಯಾತ್ರೆಗೆ ಹೋಗಿದ್ದರು. ಊರಿಗೆ ವಾಪಸ್ಸಾದ ಬಳಿಕ ಮನೆಯಲ್ಲಿ ಪವಮಾನ ಹಾಗೂ ಕಾಶಿ ಸಮಾರಾಧಾನೆ ಹೋಮ ಹಮ್ಮಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಅಕ್ಕಪಕ್ಕದವರ ಸೇರಿ 300ಕ್ಕೂ ಹೆಚ್ಚು ಜನ ಹೋಮದಲ್ಲಿ ಪಾಲ್ಗೊಂಡಿದ್ದರು.

    ಹೋಮ ಮುಗಿಯುತ್ತಿದ್ದಂತೆ ಯಾರ ಭಯವೂ ಇಲ್ಲದೆ ಸ್ಥಳಕ್ಕೆ ಬಂದ ಕೋತಿ, ಪ್ರಸಾದಕ್ಕಿಟ್ಟಿದ್ದ ಮೊಸರನ್ನ ತಿಂದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಹೋಮ ಕುಂಡದ ಸುತ್ತಲೂ ಬಗೆಬಗೆಯ ಹಣ್ಣುಗಳಿದ್ದರೂ ಯಾವುದನ್ನೂ ತಿನ್ನದೆ ಪ್ರಸಾದ ಸೇವಿಸಿದೆ.

    ನಂತರ ಉದ್ಧರಣೆಯಿಂದ ನೀರು ನೀಡಿದಾಗ ಕೈ ತೊಳೆದುಕೊಂಡು ಯಾರಿಗೂ ತೊಂದರೆ ಕೊಡದೆ ಮನೆಯಿಂದ ಹೊರಹೋಗಿದೆ. ಈ ದೃಶ್ಯವನ್ನು ಕಣ್ಣಾರೆ ಕಂಡ ನೆರೆದಿದ್ದವರು ಮಂಗ ಹಣ್ಣನ್ನ ಬಿಟ್ಟು ಮೊಸರನ್ನ ತಿಂದು ಕೈತೊಳೆದುಕೊಂಡು ವಾಪಸ್ಸಾಗಿದ್ದನ್ನು ಕಂಡು ಆಶ್ಚರ್ಯಕ್ಕೀಡಾಗಿದ್ದಾರೆ.

  • ಚಾಲಕನ ನಿಯಂತ್ರಣ ತಪ್ಪಿ ಸಿಎಂ ಬೆಂಗಾವಲು ವಾಹನ ಪಲ್ಟಿ

    ಚಾಲಕನ ನಿಯಂತ್ರಣ ತಪ್ಪಿ ಸಿಎಂ ಬೆಂಗಾವಲು ವಾಹನ ಪಲ್ಟಿ

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಪಲ್ಟಿಯಾಗಿದೆ.

    ಮೂಡಿಗೆರೆ ತಾಲೂಕಿನ ಶಂಕರ್ ಫಾಲ್ಸ್ ಬಳಿ ಈ ಘಟನೆ ನಡೆದಿದ್ದು. ಇಬ್ಬರು ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಕೊಪ್ಪ ತಾಲೂಕಿನ ಕುಡ್ನಳ್ಳಿಯಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದ ಸಿ.ಎಂ ಕುಮಾರಸ್ವಾಮಿ ಅವರ ಕುಟುಂಬದವರು ಪೂಜೆ ಮುಗಿಸಿ ಹಾಸನಕ್ಕೆ ವಾಪಸ್ ಹೋಗುವ ವೇಳೆ ಈ ಅಪಘಾತವಾಗಿದೆ.

  • ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕರಂದ್ಲಾಜೆಗೆ ಎಂಪಿ ಟಿಕೆಟ್ ಅನುಮಾನ!

    ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕರಂದ್ಲಾಜೆಗೆ ಎಂಪಿ ಟಿಕೆಟ್ ಅನುಮಾನ!

    -ಲೋಕಲ್ ಕ್ಯಾಂಡಿಡೇಟ್ ಬೇಡಿಕೆಯಿಟ್ಟ ಬಿಜೆಪಿ ಕಾರ್ಯತರ್ಕರು

    ಉಡುಪಿ: ಮುಂಬರುವ ಲೋಕಸಭಾ ಚುನಾವಣೆಗೆ ಸ್ಥಳೀಯ ಅಭ್ಯರ್ಥಿಯೇ ಸ್ಪರ್ಧೆ ಮಾಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಯಾವ ಕ್ಷೇತ್ರದಿಂದ ಸಿಗುತ್ತದೆ ಎನ್ನುವುದು ಭಾರೀ ಚರ್ಚೆಯಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಶೋಭಾ ಕರಂದ್ಲಾಜೆ ಅವರ ಹೆಸರು ರಾಜ್ಯ ರಾಜಕಾರಣದಲ್ಲಿ ಓಡಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶೋಭಾ ಕರಂದ್ಲಾಜೆ ಅವರು ರಾಷ್ಟ್ರರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಪ್ರಭಾವಿ ರಾಜಕಾರಣಿ. 2019ರ ಲೋಕಸಭಾ ಚುನಾವಣೆಗೆ ಸಿದ್ಧತೆಗಳು ಶುರುವಾಗಿದ್ದು, ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಬಾರದು ಎಂಬ ಒಂದು ಕೂಗು ಜೋರಾಗಿಯೇ ಕೇಳಿಬರುತ್ತಿದೆ ಎನ್ನಲಾಗಿದೆ.

    2019ರ ಲೋಕಸಭಾ ಚುನಾವಣೆಗೆ ಇನ್ನೂ ಆರು ತಿಂಗಳು ಬಾಕಿಯಿದೆ. ಆದರೆ ಚುನಾವಣೆಗೆ ಸಿದ್ಧತೆಗಳನ್ನು ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಮಾಡಿಕೊಳ್ಳುತ್ತಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನ್ನುವುದಲ್ಲಿ ಸಂದೇಹವೇ ಇಲ್ಲ. ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರದಲ್ಲಿ ಏಳು ಕಡೆ ಕಮಲ ಅರಳಿದೆ. 2014ರಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಮತದಾರರು ಭಾರೀ ಬಹುಮತದಿಂದ ಗೆಲ್ಲಿಸಿದ್ದರು. ಆದರೆ ಈ ಬಾರಿ ಫೀಲ್ಡ್ ಶೋಭಾ ಕರಂದ್ಲಾಜೆಗೆ ಪೂರಕವಾಗಿಲ್ಲವಂತೆ. ತಳಮಟ್ಟದ ಕಾರ್ಯಕರ್ತರು ಈ ಬಾರಿ ಕರಂದ್ಲಾಜೆ ಅಭ್ಯರ್ಥಿ ಆಗುವುದು ಬೇಡ ಅಂತಿದ್ದಾರಂತೆ. ನಮಗೆ ಲೋಕಲ್ ಅಭ್ಯರ್ಥಿ ಬೇಕು. ನಮ್ಮ ಜೊತೆ ಇರುವವರು ಬೇಕು ಅನ್ನೋದನ್ನು ನಿರೀಕ್ಷಿಸುತ್ತಿದ್ದಾರೆ.

    ಶೋಭಾ ಕರಂದ್ಲಾಜೆ ಅವರು ಸಂಸದೆಯಾಗಿ ನಾಲ್ಕೂವರೆ ವರ್ಷವಾಗಿದೆ. ಆದರೆ ಕರಂದ್ಲಾಜೆ ತಿಂಗಳಿಗೆ ಎರಡು ಬಾರಿಯೂ ಕ್ಷೇತ್ರಕ್ಕೆ ಆಗಮಿಸಿಲ್ಲ. ಜನರ ಸಮಸ್ಯೆ ಕೇಳಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಹೇಳಿಕೊಳ್ಳುವ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಲ್ಲ ಎಂಬ ಆರೋಪ ಇದೆ. ವಿಧಾನಸಭೆ, ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಯಾವುದೇ ಕ್ಯಾಂಪೇನ್‍ಗಳನ್ನು ಹರಕೆ ತೀರಿಸಿದಂತೆ ಕರಂದ್ಲಾಜೆ ಮಾಡಿ ಹೋಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿರುವ ಐದು ಶಾಸಕರನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಳ್ಳವುದರಲ್ಲಿ ಸಂಸದರು ವಿಫಲವಾಗಿದ್ದಾರೆ. ಇಷ್ಟೆಲ್ಲದರ ನಡುವೆ ಸ್ವತಃ ಶೋಭಾ ಕರಂದ್ಲಾಜೆ ಅವರು ಸೆಂಟ್ರಲ್ ನಿಂದ ರಾಜ್ಯ ರಾಜಕಾರಣಕ್ಕೆ ಬರುವ ತಯಾರಿ ನಡೆಸಿದ್ದಾರೆ. ತಾನು ಸ್ಪರ್ಧೆ ಮಾಡದೇ ಇದ್ದರೆ ಮಾಜಿ ಶಾಸಕ ಜೀವರಾಜ್ ಅವರಿಗೆ ಟಿಕೆಟ್ ಕೊಡಿಸುವ ಭರವಸೆಯನ್ನೂ ಈ ಹಿಂದೆಯೇ ಕೊಟ್ಟಿದ್ದಾರೆ. ಇದನ್ನು ಸ್ವತಃ ಶೋಭಾ ಕರಂದ್ಲಾಜೆ ಅವರೇ ಒಪ್ಪಿಕೊಂಡಿದ್ದಾರೆ.

    ಈ ನಡುವೆ ಚುನಾವಣೆಗೆ ನಾಲ್ಕು ತಿಂಗಳು ಇದೆ ಎನ್ನುವಾಗ ಸಂಸದರು ಮತ್ತೆ ಉಡುಪಿ ಚಿಕ್ಕಮಗಳೂರು ರೌಂಡಪ್ ಶುರುಮಾಡಿದ್ದಾರೆ. ಹೋರಾಟ, ಸಮಾರಂಭ- ಉದ್ಘಾಟನಾ ಕಾರ್ಯಕ್ರಮಗಳಿಗೆ ಗೆಸ್ಟ್ ಆಗುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಲೋಕಸಭಾ ಟಿಕೆಟ್ ಯಾರಿಗೆ ಕೊಡಬೇಕು ಎನ್ನವುದು ಹೈಕಮಾಂಡ್‍ಗೆ ಬಿಟ್ಟದ್ದು ಎಂದು ಜಿಲ್ಲೆಯ ಬಿಜೆಪಿ ನಾಯಕರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv