Tag: Chikmagalur

  • ಕೆಎಸ್ಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿ- ತಪ್ಪಿದ ಭಾರೀ ಅನಾಹುತ

    ಕೆಎಸ್ಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿ- ತಪ್ಪಿದ ಭಾರೀ ಅನಾಹುತ

    ಚಿಕ್ಕಮಗಳೂರು: ಸ್ಟೀಯರಿಂಗ್ ಲಾಕ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‍ಆರ್‍ಟಿಸಿ ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದು, ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಸಮೀಪ ಈ ಅವಘಡ ಸಂಭವಿಸಿದೆ. ಬಸ್ ಮೂಡಿಗೆರೆಯಿಂದ ಚಿಕ್ಕಮಗಳೂರಿಗೆ ಬರುತ್ತಿದ್ದಾಗ ಹಾಂದಿ ಬಳಿ ಬಸ್ಸಿನ ಸ್ಟೇರಿಂಗ್ ಲಾಕ್ ಆಗಿ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಿದ್ದರು. ಈ ಪೈಕಿ ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯದೆ ಸ್ವಲ್ಪ ಮುಂದಕ್ಕೆ ಹೋಗಿದ್ದಲ್ಲಿ ಪ್ರಪಾತಕ್ಕೆ ಬೀಳುವ ಸಂಭವವಿತ್ತು. ಚಾಲಕನ ಸಮಯಪ್ರಜ್ಞೆಯಿಂದ ಸ್ವಲ್ಪದರಲ್ಲಿಯೇ ಭಾರೀ ಅನಾಹುತ ತಪ್ಪಿದಂತಾಗಿದೆ. ಕೂಡಲೇ ಸ್ಥಳಕ್ಕೆ ಆಲ್ದೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಎಸ್ಆರ್‌ಟಿಸಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೊಲೀಸ್ರ ಲಾಠಿಯಿಂದ ತಪ್ಪಿಸಿಕೊಳ್ಳಲು ಹೋಗಿ ಟಿಪ್ಪರ್‌ಗೆ ಬೈಕ್ ಡಿಕ್ಕಿ- ಇಬ್ಬರ ಸಾವು

    ಪೊಲೀಸ್ರ ಲಾಠಿಯಿಂದ ತಪ್ಪಿಸಿಕೊಳ್ಳಲು ಹೋಗಿ ಟಿಪ್ಪರ್‌ಗೆ ಬೈಕ್ ಡಿಕ್ಕಿ- ಇಬ್ಬರ ಸಾವು

    – ಓರ್ವನ ದೇಹ ಛಿದ್ರ ಛಿದ್ರ, ಸ್ಥಳದಲ್ಲೇ ಮೃತದೇಹವಿಟ್ಟು ಪ್ರತಿಭಟನೆ
    – ಪೊಲೀಸರಿಂದ ಲಘು ಲಾಠಿಜಾರ್ಜ್

    ಚಿಕ್ಕಮಗಳೂರು: ಪೊಲೀಸರ ಲಾಠಿಯಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಎದುರಿಗೆ ಬರುತ್ತಿದ್ದ ಟಿಪ್ಪರ್‍ಗೆ ಬೈಕ್‍ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಹುಣಸಹಳ್ಳಿ ಗ್ರಾಮದ ಶನಿದೇವರ ದೇವಾಲಯದ ಬಳಿ ನಡೆದಿದೆ.

    ಮೃತರನ್ನ 35 ವರ್ಷದ ಮೋಹನ್ ಹಾಗೂ 25 ವರ್ಷದ ಕುಮಾರ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಕೂಡ ಶಿವಮೊಗ್ಗದ ನವಿಲೆ ಗ್ರಾಮದವರಾಗಿದ್ದಾರೆ. ಶಿವಮೊಗ್ಗದ ಪ್ರತಿಷ್ಠಿತ ಮಾರಿ ಜಾತ್ರೆಗೆ ಸಂಬಂಧಿಗಳನ್ನು ಆಹ್ವಾನಿಸಲು ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    ಶಿವಮೊಗ್ಗದಿಂದ ಬೈಕಿನಲ್ಲಿ ಲಕ್ಕವಳ್ಳಿಗೆ ಬರುತ್ತಿದ್ದ ಯುವಕರು ತಲೆಗೆ ಹೆಲ್ಮೆಟ್ ಹಾಕಿರಲಿಲ್ಲ. ಲಕ್ಕವಳ್ಳಿಯ ಭದ್ರಾ ಜಲಾಶಯದ ಬಳಿಕ ಪೊಲೀಸರು ಗಾಡಿಗಳನ್ನು ತಪಾಸಣೆ ಮಾಡುತ್ತಿದ್ದರು. ಆಗ ಪೊಲೀಸರ ಜೊತೆ ಇದ್ದ ಹೋಂ ಗಾರ್ಡ್ ಬೈಕ್ ನಿಲ್ಲಿಸುವಂತೆ ಇವರ ಮೇಲೆ ಲಾಠಿ ಬೀಸಿದ್ದಾರೆ. ಲಾಠಿಯಿಂದ ತಪ್ಪಿಸಿಕೊಲ್ಳುವ ಆತುರದಲ್ಲಿ ಮುನ್ನುಗಿದಾಗ ಎದುರಿಗೆ ಬಂದ ಟಿಪ್ಪರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ದೇಹ ಛಿದ್ರ ಛಿದ್ರವಾಗಿದೆ.

    ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲೇ ಮೃತದೇಹ ತೆಗೆಯದಂತೆ ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗದಿಂದ ಬಂದ ನೂರಕ್ಕೂ ಹೆಚ್ಚು ಜನ ಪೊಲೀಸರ ವಿರುದ್ಧ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಸ್ಥಳಕ್ಕೆ ಎಸ್‍ಪಿ ಬರುವಂತೆ ಆಗ್ರಹಿಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಮೃತದೇಹವನ್ನು ಮೇಲೆತ್ತಲು ಬಿಡದೆ ಆಕ್ರೋಶ ಹೊರಹಾಕಿದ್ದಾರೆ.

    ಜನ ಪ್ರತಿಭಟನೆಯಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆದ ಪರಿಣಾಮ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ಪ್ರತಿಭಟನಾನಿರತರನ್ನು ಚದುರಿಸಿದ್ದಾರೆ. ಲಕ್ಕವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಅವಳಿಗೆ ಗಂಡ ಬೇಡವಾಗಿದ್ದ, ಇವನಿಗೆ ಹೆಂಡ್ತಿ ಬೇಡವಾಗಿದ್ಳು- ಇಬ್ಬರು ಸೇರಲು ಪತ್ನಿಯನ್ನ ಕೊಂದ ಡಾಕ್ಟರ್

    ಅವಳಿಗೆ ಗಂಡ ಬೇಡವಾಗಿದ್ದ, ಇವನಿಗೆ ಹೆಂಡ್ತಿ ಬೇಡವಾಗಿದ್ಳು- ಇಬ್ಬರು ಸೇರಲು ಪತ್ನಿಯನ್ನ ಕೊಂದ ಡಾಕ್ಟರ್

    – ಕೊಲೆಗೈದು ‘ಈಟಿಂಗ್ ದೋಸೆ ವಿಥ್ ಸನ್’ ಅಂತ ಸ್ಟೇಟಸ್ ಹಾಕ್ದ
    – ಶವದ ಜೊತೆ 6 ತಿಂಗ್ಳ ಕಂದಮ್ಮನ ಬಿಟ್ಟು ಹೋದ
    – ಪರಸ್ತ್ರೀ ಸೆರಗಲ್ಲಿ ಮಲಗಲು ಹೆಂಡ್ತಿಯನ್ನ ಕೊಂದ
    – ಒಂದು ಕೊಲೆ, ಎರಡು ಆತ್ಮಹತ್ಯೆ, ಮೂರು ಮಕ್ಕಳು ಅನಾಥ
    – ಅವ್ಳು ಬಿಟ್ಟು ಬಂದ್ಳು, ಇವ್ನು ಕೊಂದು ಹೋಗಲು ರೆಡಿಯಾಗಿದ್ದ

    ಚಿಕ್ಕಮಗಳೂರು: ಜಿಲ್ಲೆಯ ಕಡೂರಿನಲ್ಲಿ ನಡೆದಿದ್ದ ಒಂಟಿ ಮಹಿಳೆ ಕತ್ತು ಸೀಳಿ ಮನೆ ದೋಚಿದ್ದ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ಹೆಂಡತಿ ಸತ್ತಾಗ ಮೊಸಳೆ ಕಣ್ಣೀರಿಟ್ಟಿದ್ದ ವೈದ್ಯ ಮಹಾಶಯನೇ ಮರ್ಡರ್ ಮಿಸ್ಟರಿ ಹಿಂದಿರುವ ಸರ್ಜರಿ ಎಕ್ಸ್ ಪರ್ಟ್ ಆಗಿದ್ದಾನೆ.

    ದಂತವೈದ್ಯ ರೇವಂತ್ ಪತ್ನಿ ಕವಿತಾಳನ್ನು ಕೊಂದ ಪ್ರಕರಣಕ್ಕೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಈ ಮೂಲಕ ಒಂಟಿ ಮಹಿಳೆಯ ಕೊಲೆ ಪ್ರಕರಣದಿಂದ ಇಡೀ ಕಡೂರು ತಲ್ಲಣವಾಗಿದೆ. ಆರು ತಿಂಗಳ ಮಗು ನೋಡಿ ಕಣ್ಣೀರಿಟ್ಟಿದ್ದ ಕಡೂರಿನ ಜನತೆ ಮೂಕ ವಿಸ್ಮಿತರಾಗಿದ್ದಾರೆ. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ವೈದ್ಯನ ಕಣ್ಣಲ್ಲೇ ಹಂತಕ ಕಂಡಿದ್ದು, ಬುದ್ಧಿವಂತ ಡಾಕ್ಟರ್ ಏನು ಆಟವಾಡುತ್ತಾನೋ ಆಡಲಿ ಎಂದು ಪೊಲೀಸರು ಮೂಕ ಪ್ರೇಕ್ಷಕರಂತೆ ನಟಿಸಿದ್ದರು. ಆದರೆ ವಿಚಾರಣೆಯಲ್ಲಿ ಪೊಲೀಸರ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾಗಿದ್ದ ವೈದ್ಯ ಅಂದರ್ ಆಗೋದು ಗ್ಯಾರಂಟಿ ಎಂದು ಖಚಿತವಾಗುತ್ತಿದ್ದಂತೆ ಭಯ ಭೀತನಾಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಾಣಾಗಿದ್ದ.

    ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಡೂರಿನ ಜನ ಬೇಸರ ವ್ಯಕ್ತಪಡಿಸಿದ್ದರು. ಹೆಂಡತಿ ಸತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಭಾವಿಸಿದ್ದರು. ಅಲ್ಲದೆ ವೈದ್ಯನ ಎರಡು ಮಕ್ಕಳನ್ನು ಕಂಡು ಕಣ್ಣೀರಿಟ್ಟಿದ್ದರು. ಆದರೆ ಅಸಲಿ ವಿಷಯ ಪೊಲೀಸರಿಗೆ ಮಾತ್ರ ತಿಳಿದಿತ್ತು. ನಾಲ್ಕು ದಿನದಿಂದ ಹಗಲಿರುಳು ಮಾಹಿತಿ ಸಂಗ್ರಹಿಸಿದ್ದೆವು, ಬಂಧಿಸುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡ ಬುದ್ಧಿವಂತ, ಹಂತಕ ಜಸ್ಟ್ ಮಿಸ್ ಎಂದು ಬೇಸರ ವ್ಯಕ್ತಪಡಿಸಿದರು. ಮತ್ತೊಬ್ಬಳ ಮೇಲಿನ ಆಸೆಗೆ ವೈದ್ಯ ತನ್ನ ಪತ್ನಿಯನ್ನೇ ಕೊಂದ, ಪೊಲೀಸರ ಮೇಲಿನ ಭಯಕ್ಕೆ ತಾನೂ ಆತ್ಮಹತ್ಯೆ ಮಾಡಿಕೊಂಡ. ಆದರೆ ಅನಾಥವಾಗಿದ್ದು ಮಾತ್ರ ನಾಲ್ಕು ಹಾಗೂ ಆರು ತಿಂಗಳ ಕಂದಮ್ಮಗಳು.

    ಪತ್ನಿ ಕೊಲ್ಲಲು ಕಾರಣವೇನು?
    ಬೀರೂರಿನಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದ ದಂತವೈದ್ಯ ರೇವಂತ್‍ಗೆ, ಉಡುಪಿ ಮೂಲದ ಕವಿತಾ ಜೊತೆಗೆ ಏಳು ವರ್ಷದ ಹಿಂದೆ ಮದುವೆಯಾಗಿತ್ತು. ನಾಲ್ಕು ವರ್ಷ ಹಾಗೂ ಆರು ತಿಂಗಳ ಎರಡು ಮಕ್ಕಳಿದ್ದರು. ಸುಖಿ ಕುಟುಂಬ, ಕವಿತಾ ಕೂಡ ಸುಂದರ ಹೆಣ್ಣು. ಇಬ್ಬರದ್ದು ಸುಂದರ ಸಂಸಾರ. ಆದರೆ ಡಾಕ್ಟರ್ ರೇವಂತ್‍ಗೆ ಪತ್ನಿಯಿಂದ ದೂರವಿರುವ ಮಾಯಾಂಗನೆಯ ಸ್ನೇಹವಾಗಿತ್ತು. ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯಂದು 45ರ ಹರೆಯದ ಡಾಕ್ಟರ್ ಅಂಕಲ್ ಪರಸ್ತ್ರೀಯೊಂದಿಗೆ ಲವರ್ಸ್ ಡೇ ಆಚರಿಸಿದ್ದ. ಈ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಗಲಾಟೆ ಕೂಡ ನಡೆದಿತ್ತಂತೆ. ಹಾಗಾಗಿ ಏಳು ವರ್ಷದಿಂದ ಸಂಸಾರ ಮಾಡಿ ಬೇಜಾರಾಗಿದ್ದ ವೈದ್ಯ ಪರ ಸ್ತ್ರೀಯ ಸೆರಗಲ್ಲಿ ಸರಸವಾಡಲು ಹೆಂಡತಿಯನ್ನೇ ಮರ್ಡರ್ ಮಾಡಲು ಸ್ಕೆಚ್ ಹಾಕಿದ್ದ. ದರೋಡೆಕೋರರ ತಲೆಗೆ ಕಟ್ಟುವಂತೆ ಪತ್ನಿಯ ಕೊಲೆ ಮಾಡಿದ್ದ.

    ಬ್ಲೂಪ್ರಿಂಟ್ ರೆಡಿ ಮಾಡಿದ್ದ:
    ವೈದ್ಯ ಆವೇಶದಲ್ಲೋ-ಆತಂಕದಲ್ಲೋ ಅಥವಾ ಮುಗಿಸಿ ಬಿಡೋಣವೆಂದೋ ಏಕಾಏಕಿ ಕೊಲೆ ಮಾಡಿಲ್ಲ. ಬದಲಿಗೆ ಹೀಗೆ ಮಾಡಿದರೆ ಹೀಗೆ ಆಗುತ್ತದೆ. ಏನು ಮಾಡಬೇಕು ಎಂದೆಲ್ಲ ಬ್ಲೂಪ್ರಿಂಟ್ ಸಿದ್ಧ ಮಾಡಿಕೊಂಡಿದ್ದ. ಪೊಲೀಸರನ್ನ ದಡ್ಡರೆಂದು ಭಾವಿಸಿದ್ದ ಡಾಕ್ಟರ್, ಪ್ಲ್ಯಾನ್ ಮಾಡಿದ ರೀತಿಯಲ್ಲೇ ಎಲ್ಲ ಮಾಡಿ ಮುಗಿಸಿದ್ದ. ಆದರೆ ಘಟನೆ ನಡೆದು ಮೂರೇ ದಿನಕ್ಕೆ ಹಂತಕನಿವನೇ ಎಂದು ಕಡೂರು ಪೊಲೀಸರಿಗೆ ಖಚಿತವಾಗಿತ್ತು. ಆದರೆ ಇರಲಿ ನೋಡೋಣ ಎಂದು ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದರು. ನಂತರ ಕೊಲೆಗಡುಕ ಯಾರೂ ಅಲ್ಲ ಅವನೇ ಎಂಬುದು ಪಕ್ಕಾಗಿದೆ. ನಂತರ ಬಂಧಿಸುವಷ್ಟರಲ್ಲಿ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ದೃಶ್ಯಂ ಚಿತ್ರದ ರೀತಿಯಲ್ಲೇ ಮರ್ಡರ್ ಗೆ ಸ್ಕೆಚ್:
    ಫೆಬ್ರವರಿ 17ರ ಮಧ್ಯಾಹ್ನ 3.30ಕ್ಕೆ ಪತ್ನಿಗೆ ಆಭರಣ ಕೊಡಿಸಿಕೊಂಡು ಬಂದಿದ್ದಾನೆ. ಆಗ ನಾಲ್ಕು ವರ್ಷದ ಮಗುವೂ ಜೊತೆಗಿತ್ತು. ಮನೆಗೆ ಬಂದವನೇ ಸಿದ್ಧವಿದ್ದ ಪ್ಲ್ಯಾನ್‍ನಂತೆ ಔಷಧಿಯಿಂದ ಪತ್ನಿಯ ಜ್ಞಾನ ತಪ್ಪಿಸಿ, ಹೊಟ್ಟೆಗೆ ಇಂಜಕ್ಷನ್ ನೀಡಿದ್ದಾನೆ. ಜ್ಞಾನ ತಪ್ಪಿದ ನಂತರ ಕಾರ್ ಶೆಡ್‍ಗೆ ಎಳೆದೊಯ್ದು, ಎದೆಹಾಲು ಕುಡಿಯುವ ಆರು ತಿಂಗಳ ಮಗುವಿನ ಎದುರೇ ಒಂದು ಬಾರಿ ಬ್ಲೆಡ್‍ನಿಂದ ಕುತ್ತಿಗೆಗೆ ಹೊಡೆದು, ರಕ್ತ ಹರಿಯಬಾರದೆಂದು ಕಾಲು ಓರೆಸುವ ಮ್ಯಾಟ್‍ಗಳನ್ನು ದೇಹದ ಸುತ್ತ ಹಾಕಿ, ಬಾಗಿಲು ಹಾಕಿ ಬಂದಿದ್ದಾನೆ. ನಂತರ ಮನೆಯಲ್ಲಿನ ವಸ್ತುಗಳನ್ನ ಕದಲಿದ್ದಾನೆ. ಬೀರೂವಿನಲ್ಲಿದ್ದ ಹಣ-ಬೆಳ್ಳಿ-ಬಂಗಾರವನ್ನು ಅವನೇ ಎಸ್ಕೇಪ್ ಮಾಡಿದ್ದಾನೆ. ನಾಲ್ಕು ವರ್ಷದ ಮಗ ಅಮ್ಮ ಎಂದು ಕೂಗಿದಾಗ ವಾಶ್ ರೂಂಗೆ ಹೋಗಿದ್ದಾಳೆಂದು ಮಗನ ಬುಕ್‍ಗಳನ್ನು ಬ್ಯಾಗಿಗೆ ಹಾಕಿಕೊಂಡು ಕ್ಲಿನಿಕ್‍ನಲ್ಲೇ ಹೋಂ ವರ್ಕ್ ಮಾಡುವಂತೆ ಬಾ ಎಂದು ಕರೆದೊಯ್ದಿದ್ದಾನೆ. ಪತ್ನಿಯ ಹೆಣ ಜೊತೆ ಆರು ತಿಂಗಳ ಕೂಸನ್ನೂ ಬಿಟ್ಟು ಬೀಗ ಹಾಕಿ ಹೋಗಿದ್ದಾನೆ.

    ದೋಸೆ ತಿನ್ನೋ ಫೋಟೋ ಹಾಕಿ ಫೋನ್:
    ಮನೆಯಿಂದ ಕ್ಲಿನಿಕ್‍ಗೆ ಮಗನ ಜೊತೆ ಹೋದ ವೈದ್ಯ, ‘ಐ ಆ್ಯಮ್ ಈಟೀಂಗ್ ದೋಸಾ, ವಿಥ್ ಮೈ ಸನ್ ಅಟ್ ಫೇಮಸ್ ಹೋಟೆಲ್ ಇನ್ ಬೀರೂರು’ ಎಂದು ವಾಟ್ಸಪ್‍ನಲ್ಲಿ ಸ್ಟೇಟಸ್ ಹಾಕಿದ್ದಾನೆ. ಅಲ್ಲದೆ ಫ್ರೆಂಡ್ಸ್‍ಗಳಿಗೆ ಸಹ ಫೋಟೋ ಕಳುಹಿಸಿದ್ದಾನೆ. ತಾನು ಅಮಾಯಕ ಎಂದು ತೋರಿಸಲು ಎಲ್ಲಾ ಮಾಡಿದ್ದಾನೆ. ಅಲ್ಲದೆ ಬೀರೂರಿನ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನಿಗೆ ಫೋನ್ ಮಾಡಿ ಕ್ಲಿನಿಕ್‍ಗೆ ಕರೆಸಿಕೊಂಡಿದ್ದಾನೆ. ನಂತರ ಮನೆಗೆ ಹೋಗೋಣ ಬಾ ಎಂದು ತಾಯಿ ಕರೆದರೆ, ಇರು ಅಮ್ಮ ಕೆಲಸ ಇದೆ ಹೋಗೋಣ ಎಂದು ಎರಡು ಗಂಟೆ ಸಮಯ ತಳ್ಳಿದ್ದಾನೆ. ಅಲ್ಲದೆ ಸಾಯಿಸಿ ಬಂದ ಹೆಂಡತಿಗೆ ಬೇಕೆಂದೇ ಫೋನ್ ಮಾಡಿದ್ದಾನೆ.

    ಇಬ್ಬರು ಸಂಬಂಧಿಕರಿಗೆ ಕರೆ ಮಾಡಿ, ಕ್ಲಿನಿಕ್ ಬಳಿ ಕರೆಸಿಕೊಂಡ. ಬಾಳೆಕಾಯಿ ಮಂಡಿಗೆ ಹೋಗ್ಬೇಕು ಎಂದರೂ ಬಿಡದೆ ಹೇ.. ಬರ್ರೋ.. ಎಂದು ಜೊತೆಗೆ ಕರೆತಂದಿದ್ದಾನೆ. ಅಲ್ಲದೆ ಮನೆಯಿಂದ ಹೊರಡುವಾಗ ತನ್ನ ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ತಾನೇ ಎರಡ್ಮೂರು ಬಾರಿ ನೋಡಿದ್ದ. ಬರುವಾಗಲು ಮತ್ತೆ-ಮತ್ತೆ ನೋಡಿದ್ದಾನೆ. ಮನೆಗೆ ಹೋದವನೆ ಸೋಫಾ ಮೇಲೆ ಕೂತು ಕವಿತಾ… ಕವಿತಾ… ಎಂದು ಕೂಗಿದ್ದಾನೆ. ಹುಡುಕಿಲ್ಲ, ಮಗು ಅಮ್ಮ.. ಅಮ್ಮ.. ಎಂದು ಹುಡುಕಿದೆ. ತಮ್ಮಂದಿರು ಅತ್ತಿಗೆ… ಅತ್ತಿಗೆ… ಎಂದು ಕೂಗಿದ್ದಾರೆ. ವೈದ್ಯ ರೇವಂತ್ ತಾಯಿ ಕೂಡ ಕೂಗಿದ್ದಾರೆ, ನಂತರ ಒಳಗೆ ಹೋಗಿ ನೋಡಿದಾಗ ದಿಗ್ಭ್ರಾಂತರಾಗಿದ್ದಾರೆ. ಆಗ ವೈದ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.

    ವಿಷಯ ಕೇಳಿ ಸ್ಥಳಕ್ಕೆ ಬಂದ ಪೊಲೀಸರಿಗೂ ಶಾಕ್ ಆಗಿತ್ತು. 206 ರಾಷ್ಟ್ರೀಯ ಹೆದ್ದಾರಿ ಸದಾ ಜನ ಓಡಾಡೋ ಜಾಗ ಹೀಗಾಯ್ತಲ್ಲ ಎಂದು ಪೊಲೀಸರು ತಲೆಕೆಡಿಸಿಕೊಂಡು ಹುಡುಕಾಟ ನಡೆಸಿದ್ದಾರೆ. ಆದರೆ ಮಡದಿ ಕಳೆದುಕೊಂಡ ವೈದ್ಯನ ಮುಖದ ಭಾವ ಕಂಡು ಎಲ್ಲೋ ಮಿಸ್ ಹೊಡೀತಿದೆಯಲ್ಲಾ ಎಂದು ಕಡೂರು ಸರ್ಕಲ್ ಇನ್ಸ್‍ಪೆಕ್ಟರ್ ಮಂಜುನಾಥ್ ಭಾವಿಸಿದ್ದಾರೆ. ಬೀರೂರಿನ ಪಿಎಸ್‍ಐ ರಾಜಕುಮಾರ್, ಸಖರಾಯಪಟ್ಟಣ ಸಬ್ ಇನ್ಸ್‍ಪೆಕ್ಟರ್ ಮೌನೇಶ್, ಕಡೂರಿನ ಪಿಎಸ್‍ಐ ವಿಶ್ವನಾಥ್ ಹಾಗೂ ಸಿಬ್ಬಂದಿ ನಾಲ್ಕು ದಿನಗಳ ಕಾಲ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿ, ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನೇನು ವೈದ್ಯನನ್ನು ಬಂಧಿಸುವಷ್ಟರಲ್ಲಿ ಪಾಪ ಪ್ರಜ್ಞೆಯೋ ಅಥವಾ ಪೊಲೀಸರ ಮೇಲಿನ ಭಯಕ್ಕೋ ಆತ್ಮಹತ್ಯಗೆ ಶರಣಾಗಿದ್ದಾನೆ. ಆದರೆ ಎರಡು ಮಕ್ಕಳು ಮಾತ್ರ ಅನಾಥವಾಗಿವೆ.

    ಡಾ.ರೇವಂತ್ ಏನೋ ಆತ್ಮಹತ್ಯೆಗೆ ಶರಣಾದ. ಹೆಂಡತಿ ಕೊಲೆ ಹಿಂದೆ ಅವನೊಬ್ಬನೇ ಇಲ್ಲ. ಅವನು-ಅವಳ ಮಧ್ಯೆ ಮತ್ತೊಬ್ಬಳಾಗಿದ್ದ ಹರ್ಷಿತಾ ಹಾಗೂ ಮತ್ತಿಬ್ಬರ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಅವನನ್ನು ಬಂಧಿಸಿದ ಬಳಿಕ ಆ ಮೂವರನ್ನು ಬಂಧಿಸಲು ಯೋಚಿಸಿದ್ದರು. ಆದರೆ ಇದೀಗ ನಾನೂ ಪ್ರಕರಣದಲ್ಲಿ ಭಾಗಿಯಾಗುತ್ತೇನೆ, ಪೊಲೀಸರು ನನ್ನನ್ನೂ ಬಂಧಿಸುತ್ತಾರೆ ಎಂಬ ಭಯದಿಂದಲೋ, ಕುಟುಂಬ ಸರ್ವನಾಶ ಮಾಡಿದ ಪಾಪಪ್ರಜ್ಞೆಯಿಂದಲೋ ವೈದ್ಯನ ಲವರ್ 32ರ ಹರ್ಷಿತಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಗ ಅವಳ ಮಗುವೂ ಅನಾಥವಾಗಿದೆ. ಹರ್ಷಿತಾಳಿಗೂ ಗಂಡ ಬೇಡವಾಗಿದ್ದ, ರೇವಂತ್‍ಗೆ ಪತ್ನಿ ಕವಿತಾ ಬೇಡವಾಗಿದ್ದಳು, ಅವಳು ಬಿಟ್ಟು ಬಂದಳು, ಇವನು ಕೊಲೆ ಮಾಡಿಯೇ ಬರಲು ರೆಡಿಯಾಗಿದ್ದ. ಆದರೆ ಇದೀಗ ಒಂದು ಕೊಲೆ, ಎರಡು ಆತ್ಮಹತ್ಯೆಯಲ್ಲಿ ಮೂರು ಮಕ್ಕಳು ಅನಾಥವಾಗಿವೆ.

  • ಕೆಸರು ಗದ್ದೆಯಲ್ಲಿ ಎರಡು ಬಾರಿ ಬಿದ್ದರೂ ಎದ್ದು ಓಡಿದ ಸಿ.ಟಿ ರವಿ

    ಕೆಸರು ಗದ್ದೆಯಲ್ಲಿ ಎರಡು ಬಾರಿ ಬಿದ್ದರೂ ಎದ್ದು ಓಡಿದ ಸಿ.ಟಿ ರವಿ

    – ಹಗ್ಗಜಗ್ಗಾಟ ಕ್ರೀಡೆಯಲ್ಲಿ ಕಿತ್ತುಕೊಂಡ ಬಂದ ಹೆಬ್ಬರಳಿನ ಉಗುರು

    ಚಿಕ್ಕಮಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಕೆಸರು ಗದ್ದೆಯಲ್ಲಿ ಎರಡು ಬಾರಿ ಜಾರಿ ಬಿದ್ದು ಮತ್ತೆ ಎದ್ದು ಓಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಚಿಕ್ಕಮಗಳೂರಿನ ನಲ್ಲೂರಿನಲ್ಲಿ ಮೂರು ದಿನಗಳ ಕಾಲ ಉತ್ಸವದ ಅಂಗವಾಗಿ ಗ್ರಾಮೀಣ ಕ್ರೀಡೆ ಆಯೋಜನೆಗೊಂಡಿದೆ. ಇಂದು ಈ ಕ್ರೀಡೆಗೆ ಸಚಿವ ಸಿ.ಟಿ ರವಿ ಚಾಲನೆ ನೀಡಿದರು. ಸುಮಾರು ಅರ್ಧ ಅಡಿ ಆಳ ಇರುವಷ್ಟು ಕೆಸರು ಗದ್ದೆಯಲ್ಲಿ ಸಿ.ಟಿ ರವಿ ಓಡಿದ್ದಾರೆ.

    ಸಿ.ಟಿ ರವಿ ಓಡುವಾಗ ಹಿಂದೆ ಮುಂದೆ ಇದ್ದ ಸ್ಪರ್ಧಿಗಳು ಕೂಗಿ ಕೇಕೆ ಹಾಕಿದರು. ಓಡುವಾಗ ಸಿ.ಟಿ ರವಿ ಜಾರಿ ಬಿದ್ದಿದ್ದಾರೆ. ಜಾರಿ ಬಿದ್ದ ನಂತರ ಅವರು ಅಲ್ಲಿಂದ ಹೋಗದೇ ಮತ್ತೆ ಓಡಿದ್ದಾರೆ. ಸಿ.ಟಿ ರವಿ ಮತ್ತೊಮ್ಮೆ ಓಡುವಾಗ ಎರಡನೇ ಬಾರಿಯೂ ಜಾರಿ ಬಿದ್ದಿದ್ದಾರೆ. ಆದರು ಸಹ ಹಿಂತಿರುಗದೇ ಮತ್ತೆ ಓಡಿದ್ದಾರೆ.

    ಎರಡು ಬಾರಿ ಬಿದ್ದರೂ ಸಿ.ಟಿ ರವಿ ನಗುತ್ತಾ ತಮ್ಮ ಓಟವನ್ನು ಪೂರ್ಣಗೊಳಿಸಿದ್ದಾರೆ. ಫೆ.29 ಹಾಗೂ ಮಾರ್ಚ್ 1ರಂದು ಚಿಕ್ಕಮಗಳೂರು ಹಬ್ಬ ನಡೆಯಲಿದೆ. ಇಂದಿನಿಂದ ವಿವಿಧ ಗ್ರಾಮೀಣ ಕ್ರೀಡಾಕೂಟ ಆರಂಭವಾಗಿದೆ. ಕೇವಲ ಓಟ ಅಲ್ಲದೆ ಸಿ.ಟಿ ರವಿ ಹಗ್ಗಜಗ್ಗಾಟ ಸೇರಿದಂತೆ ಬೇರೆ ಬೇರೆ ಕ್ರೀಡೆಗಳಲ್ಲಿ ಭಾಗವಹಿಸಿದರು.

    ಕೆಸರುಗದ್ದೆಯ ಹಗ್ಗಜಗ್ಗಾಟ ಕ್ರೀಡೆಯಲ್ಲಿ ಭಾಗವಹಿಸಿದ ವೇಳೆ ಸಿ.ಟಿ ರವಿ ಕಾಲಿನ ಹೆಬ್ಬರಳಿನ ಉಗುರು ಕಿತ್ತುಕೊಂಡಿದೆ. ಹೆಬ್ಬರಳಿನ ಉಗುರು ಬಂದರು ಅರಿವಿಲ್ಲದೆ ಸಿ.ಟಿ ರವಿ ಆಟದಲ್ಲಿ ಮೈ ಮರೆತ್ತಿದ್ದರು. ಬಳಿಕ ಕೆಸರು ಗದ್ದೆಯಿಂದ ಮೇಲೆ ಬಂದು ಕಾಲು ತೊಳೆಯುವಾಗ ಅರಿವಿಗೆ ಬಂದಿದೆ.

  • ಸ್ಕೂಟಿಗೆ ಬೈಕ್ ಡಿಕ್ಕಿ – ಒಂದು ಬದಿಯಿಂದ ಮತ್ತೊಂದು ಬದಿಗೆ ಹಾರಿ ಬಿದ್ದ ಸವಾರ

    ಸ್ಕೂಟಿಗೆ ಬೈಕ್ ಡಿಕ್ಕಿ – ಒಂದು ಬದಿಯಿಂದ ಮತ್ತೊಂದು ಬದಿಗೆ ಹಾರಿ ಬಿದ್ದ ಸವಾರ

    ಚಿಕ್ಕಮಗಳೂರು: ಸ್ಕೂಟಿಲ್ಲಿ ಹೋಗುತ್ತಿದ್ದ ಇಬ್ಬರಿಗೆ ಹಿಂಬದಿಯಿಂದ ವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಕಗ್ಗಿನಗದ್ದೆ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸ್ಕೂಟಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ಬರುತ್ತಿದ್ದ ಬೈಕ್ ಸವಾರ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹಾರಿ ಬಿದ್ದಿದ್ದಾನೆ.

    ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಸ್ತೆಯ ಪಕ್ಕದಲ್ಲೇ ಕಲ್ಲಿನ ಕಟ್ಟೆಯಿದ್ದು, ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಕೂಟಿ ಸವಾರ ಹಾಗೂ ಸ್ಕೂಟಿಯ ಹಿಂಭಾಗ ಕುಳಿತಿದ್ದ ವ್ಯಕ್ತಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರು ಮೂವರು ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸ್ಕೂಟಿಗೆ ಬೈಕ್ ಡಿಕ್ಕಿ ಹೊಡೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಹಿಂಬದಿಯಿಂದ ಬಂದ ಬೈಕ್ ಸವಾರನ ಅಜಾಗರೂಕತೆ ಎದ್ದು ಕಾಣುತ್ತಿದ್ದು, ಆತನ ಬೇಜವಾಬ್ದಾರಿಯಿಂದಲೇ ಈ ಅಪಘಾತ ಸಂಭವಿಸಿದೆ.

  • ದರಿದ್ರದ ಮೂಲವೇ ಸಿದ್ದರಾಮಯ್ಯ, ಜನರ ಕಣ್ಣೀರಿಗೆ ಅವರೇ ಕಾರಣ: ಸಿ.ಟಿ.ರವಿ

    ದರಿದ್ರದ ಮೂಲವೇ ಸಿದ್ದರಾಮಯ್ಯ, ಜನರ ಕಣ್ಣೀರಿಗೆ ಅವರೇ ಕಾರಣ: ಸಿ.ಟಿ.ರವಿ

    ಚಿಕ್ಕಮಗಳೂರು: ದರಿದ್ರದ ಮೂಲವೇ ಸಿದ್ದರಾಮಯ್ಯ. ಜನ ಇಂದು ಬೀದಿಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಾರೆ ಅಂದರೆ, ಅದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಸಚಿವ ಸಿ.ಟಿ.ರವಿ ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ಪ್ರಭೋದಿನಿ ಗುರುಕುಲದ ಅರ್ಧಮಂಡಲೋತ್ಸವದಲ್ಲಿ ಮಾತನಾಡಿದ ಅವರು, ಸಿದ್ದು ಸರ್ಕಾರದಲ್ಲಿ 11 ಲಕ್ಷ ಮನೆಗೆ ಮಂಜೂರಾತಿ ನೀಡಲಾಗಿತ್ತು. ಹಣ ಇಡದೆ ಮನೆಗಳನ್ನ ಮಂಜೂರಾತಿ ಮಾಡಿದರಿಂದ ಮನೆಗಳು ಅರ್ಧಕ್ಕೆ ನಿಂತಿವೆ. ಹಣ ಇಟ್ಟಿದ್ದರೆ ಇಂದು ಮನೆಗಳು ಅರ್ಧಕ್ಕೆ ನಿಲ್ಲುತ್ತಿರಲಿಲ್ಲ. ಜನ ಬೀದಿಯಲ್ಲಿ ನಿಂತು ಕಣ್ಣೀರು ಹಾಕುತ್ತಿರಲಿಲ್ಲ. ಚುನಾವಣೆ ವರ್ಷವೆಂದು ವರ್ಷಕ್ಕೆ 2-3 ಲಕ್ಷ ಮನೆಗೆ ಮಂಜೂರಾತಿ ಮಾಡಿದ್ದರಿಂದ ಇವತ್ತು ಜನ ಕಣ್ಣೀರು ಹಾಕುತ್ತಿದ್ದಾರೆ ಎಂದು ಸಿದ್ದು ವಿರುದ್ಧ ಕಿಡಿ ಕಾರಿದ್ದಾರೆ.

    ಆರ್.ಎಸ್.ಎಸ್ ಪಥಸಂಚಲನದ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಅವರು ಹಲವು ಬಾರಿ ಸದನದಲ್ಲಿ ನಾನೂ ಸ್ವಯಂ ಸೇವಕನೆಂದು ಪರಿಚಯಿಸಿಕೊಂಡಿದ್ದರು. ನಾನೂ ಸಂಘದ ಪ್ರಾರ್ಥನೆ ಹೇಳುತ್ತೇನೆ. ರವಿ ನಿನಗೆ ಪ್ರಾರ್ಥನೆ ಬರುತ್ತಾ, ನಾನ್ ಹೇಳ್ತೀನಿ ಎನ್ನುತ್ತಿದ್ದರು. ಸ್ವಯಂಸೇವಕದ ಭಾವನೆ ಇದ್ರೆ ಅವರು ಒಳ್ಳೆಯದ್ದನ್ನೇ ಬಯಸುತ್ತಾರೆ ಎಂದು ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.

  • ಕೋಣದ ರಂಪಾಟ – ರಸ್ತೆಯಲ್ಲಿ ಜನರು ಹೈರಾಣು

    ಕೋಣದ ರಂಪಾಟ – ರಸ್ತೆಯಲ್ಲಿ ಜನರು ಹೈರಾಣು

    ಚಿಕ್ಕಮಗಳೂರು: ಕೋಣವೊಂದು ರಸ್ತೆ ಮಧ್ಯೆ ಮನಸ್ಸೋ ಇಚ್ಛೆ ಓಡಾಡಿ ಎದುರಿಗೆ ಬಂದ ಜನ, ಅಡ್ಡ ಬಂದ ಕಾರು-ಬೈಕ್‍ಗಳನ್ನು ಹಾನಿಗೊಳಿಸಿದೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಕೋಡಿಕ್ಯಾಂಪ್ ಬಳಿ ರಸ್ತೆ ಮಧ್ಯೆ ಕೋಣ ನಡೆಸಿದ ದಾಳಿಗೆ ಜನ ಹೈರಾಣಾಗಿದ್ದಾರೆ. ಕೋಣದ ಆರೋಗ್ಯ ಸ್ಥಿತಿ ಏನಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಕೋಣದ ರಂಪಾಟಕ್ಕೆ ಜನ ಕಂಗಾಲಾಗಿದ್ದಾರೆ. ಬೈಕ್‍ನಲ್ಲಿ ಬರುತ್ತಿದ್ದ ದಂಪತಿಗೆ ಕೋಣ ಗುದ್ದಿರುವುದರಿಂದ ದಂಪತಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

    ಕೋಣದ ಅರ್ಭಟ ನೋಡಿ ಹಿಡಿದು ಕಟ್ಟಿಹಾಕಲು ಹೋದ ಸ್ಥಳೀಯ ಕೆಲ ಯುವಕರಿಗೂ ಗಾಯವಾಗಿದೆ. ಒಂದೂವರೆ-ಎರಡು ಕಿ.ಮೀ. ದೂರದಿಂದ ಏಕಾಏಕಿ ಮನಸ್ಸೋ ಇಚ್ಛೆ ಓಡಿ ಬಂದ ಕೋಣ ನಾಲ್ಕು ಬೈಕ್‍ಗಳ ಮೇಲೆ ದಾಳಿ ಮಾಡಿದೆ. ಸೇಡನ್ನು ತೀರಿಸಿಕೊಳ್ಳುವಂತೆ ನಿಂತಿದ್ದ ಬೈಕ್ ಮೇಲೆ ಮೇಲಿಂದ ಮೇಲೆ ದಾಳಿ ಮಾಡಿದೆ. ಕೋಣವನ್ನು ಸ್ಥಳೀಯರು ಹರಸಾಹಸ ಪಟ್ಟು ಕಟ್ಟಿಹಾಕಿದರೂ ಹಗ್ಗದ ಸಮೇತ ಕಿತ್ತುಕೊಂಡು ಬಂದ ಕೋಣ ಮತ್ತೆ ಕಾರು-ಬೈಕ್‍ಗಳ ಮೇಲೆ ದಾಳಿ ಮಾಡಿದೆ.

    ಕೋಣದ ದಾಳಿಯಿಂದ ಎಂಟಕ್ಕೂ ಹೆಚ್ಚು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ನಾಲ್ಕಕ್ಕೂ ಹೆಚ್ಚು ಬೈಕ್‍ಗಳು ಕೂಡ ಡ್ಯಾಮೇಜ್ ಆಗಿವೆ. ಕೋಣಕ್ಕೆ ಹುಚ್ಚು ಹಿಡಿದಿರಬಹುದೆಂದು ಎಂದು ಹೇಳಲಾಗಿದೆ.

  • ಚಿಕ್ಕಮಗಳೂರಿನಲ್ಲಿ ಕೆಎಫ್‍ಡಿ ವೈರಸ್ ಪತ್ತೆ

    ಚಿಕ್ಕಮಗಳೂರಿನಲ್ಲಿ ಕೆಎಫ್‍ಡಿ ವೈರಸ್ ಪತ್ತೆ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೆಎಫ್‍ಡಿ ವೈರಸ್ ಪತ್ತೆಯಾಗಿದೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಶಾಂತಿಗ್ರಾಮದಲ್ಲಿ ವೈರಸ್ ಪತ್ತೆಯಾಗಿದ್ದು ಮಂಗನ ಕಾಯಿಲೆ ಭೀತಿಯಲ್ಲಿ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ.

    ಜನವರಿ 9ರಂದು ಪ್ರಾಣಿಗಳ ಉಣ್ಣೆಯಲ್ಲಿ ಪಾಸಿಟಿವ್ ಅಂಶ ಇರುವುದನ್ನು ಶಿವಮೊಗ್ಗ ಪ್ರಯೋಗಾಲಯ ಪತ್ತೆಹಚ್ಚಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 35 ಮಂಗಗಳು ಸಾವನ್ನಪ್ಪಿದ್ದವು, ಅದರಲ್ಲಿ 18 ಮಂಗಗಳ ಅಂಗಾಂಗ ಪರೀಕ್ಷೆ ನಡೆಸಲಾಗಿತ್ತು. ಆ ವೇಳೆ ಒಂದು ಮಂಗದ ದೇಹದಲ್ಲಿ ಪಾಸಿಟಿವ್ ವೈರಸ್ ಪತ್ತೆಯಾಗಿತ್ತು. ಅಲ್ಲದೆ ಕೊಪ್ಪ ತಾಲೂಕಿನ ಜಯಪುರದ ವ್ಯಕ್ತಿಯೊಬ್ಬರ ದೇಹದಲ್ಲೂ ಕೂಡ ಪಾಸಿಟಿವ್ ಅಂಶ ಪತ್ತೆಯಾಗಿತ್ತು. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಇದೀಗ ಕೆಎಫ್‍ಡಿ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜನರಿಗೆ ಔಷಧಿ ನೀಡಲು ವೈದ್ಯರ ತಂಡ ಮುಂದಾಗಿದೆ. ಜಿಲ್ಲಾ ವಿಚಕ್ಷಣ ಅಧಿಕಾರಿ ಮಂಜುನಾಥ್ ನೇತೃತ್ವದ ತಂಡದಿಂದ ತರೀಕೆರೆ ಮೂಡಿಗೆರೆ ಕೊಪ್ಪ ತಾಲೂಕಿನ ನೂರಾರು ಜನರಿಗೆ ಔಷಧಿ ನೀಡಲಾಗುತ್ತಿದೆ. ಅಲ್ಲದೆ ಮಂಗನ ಕಾಯಿಲೆ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

  • ಮಂಗಳೂರಲ್ಲಿ ಬಾಂಬ್ ಪತ್ತೆ, ಪೊಲೀಸರು ಮತ್ತೊಂದು ಕಥೆ ಸೃಷ್ಟಿಸದಿರಲಿ: ಹೆಚ್‍ಡಿಕೆ

    ಮಂಗಳೂರಲ್ಲಿ ಬಾಂಬ್ ಪತ್ತೆ, ಪೊಲೀಸರು ಮತ್ತೊಂದು ಕಥೆ ಸೃಷ್ಟಿಸದಿರಲಿ: ಹೆಚ್‍ಡಿಕೆ

    ಚಿಕ್ಕಮಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ಕೂಡಲೇ ಆರೋಪಿ ಪತ್ತೆ ಮಾಡಬೇಕು. ಇದಕ್ಕೇ ಹದಿನೈದು ದಿನ ಅಥವಾ ತಿಂಗಳ ಸಮಯ ಪಡೆದು, ಬಳಿಕ ಪೊಲೀಸರು ಮತ್ತೊಂದು ಕಥೆ ಸೃಷ್ಟಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಜಿಲ್ಲೆಯ ಶೃಂಗೇರಿಯಲ್ಲಿ ಕುಟುಂಬದಿಂದ ನಡೆಯುತ್ತಿರುವ ಯಾಗದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಎಚ್‍ಡಿಕೆ, ಅಲ್ಲಿ ಸುತ್ತ ಸಿಸಿಟಿವಿಗಳಿವೆ. ಬಾಂಬ್ ಯಾರು ಇಟ್ಟಿದ್ದೆಂದು ಪತ್ತೆ ಹಚ್ಚುವುದು ದೊಡ್ಡದಲ್ಲ. ತನಿಖೆ ನಡೆಸಲು ಪೊಲೀಸರು ಮತ್ತೊಂದು ತಿಂಗಳು ತಗೆದುಕೊಳ್ಳಬಾರದು. ನಂತರ ತಿಂಗಳು ಬಿಟ್ಟು ಮತ್ತೊಂದು ಕಥೆ ಸೃಷ್ಟಿಸಬಾರದು. ವಾಸ್ತವಾಂಶವನ್ನು ಜನರ ಮುಂದಿಡಬೇಕು ಎಂದರು.

    ಸರ್ಕಾರ ಕೆಲ ಪೊಲೀಸರಿಂದ ಜನತೆಯಲ್ಲಿ ಗೊಂದಲದ ವಾತಾವರಣ ನಿರ್ಮಿಸುತ್ತಿದೆ ಎಂಬುದು ನನ್ನ ಭಾವನೆ. ಟೌನ್‍ಹಾಲ್ ಬಳಿ ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ ಕಲ್ಲು ತೂರಿದ ಘಟನೆಗೆ ಸಂಬಂಧಿಸಿದಂತೆ ಭಾಸ್ಕರ್ ರಾವ್ ಏಳು ಕಲ್ಲುಗಳು ಬಿದ್ದಿವೆ ಎನ್ನುತ್ತಾರೆ. ಆದರೆ ಒಂದು ತಿಂಗಳಿಂದ ಯಾಕೆ ಹೇಳಿಲ್ಲ, ಒಂದು ವರ್ಗದ ಜನರನ್ನು ಓಲೈಸಲು ಅಮಾಯಕರನ್ನು ಬಲಿ ಕೊಡಲಾಗುತ್ತಿದೆ. ಅಲ್ಲಿ ಮಾಧ್ಯಮದ ಕ್ಯಾಮರಾಗಳು ಇದ್ದವು. ಕಲ್ಲು ಹೊಡೆದ ಸೂಕ್ಷ್ಮ ವಸ್ತುವು ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ದೇಶದ ಜನರ ನಡುವೆ ಪರಸ್ಪರ ಅಪನಂಬಿಕೆಯನ್ನುಂಟು ಮಾಡುವ ಕೆಲಸವನ್ನು ಸರ್ಕಾರವೇ ಮಾಡುತ್ತಿದ್ದು, ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

    ನಾನೇ ದಾಖಲೆ ಕೊಡುತ್ತಿದ್ದೆ: ಕಲ್ಲಡ್ಕ ಪ್ರಭಾಕರ್ ಭಟ್ ರಾಜ್ಯವನ್ನು ಸುತ್ತಲು ಪ್ರಾರಂಭಿಸಿದ್ದಾರೆ. ಈಗ ಅವರೇ ಪ್ರಮುಖರಾಗಿದ್ದಾರೆ. ರಾಮನಗರಕ್ಕೆ ಎಸ್.ಆರ್.ಹಿರೇಮಠ್ ಹಾಗೂ ರವಿಕೃಷ್ಣಾರೆಡ್ಡಿ ತೆರಳಿದ್ದರು. ಅವರಿಗೆ ಯಾವುದೇ ದಾಖಲೆ ಬೇಕಾಗಿದ್ದರೂ ನಾನೇ ಕೊಡುತ್ತಿದ್ದೆ. 1985 ರಲ್ಲಿ ನಾನು ರಾಜಕಾರಣಕ್ಕೆ ಬಂದಿರಲಿಲ್ಲ. ನಾನು ಸಿನಿಮಾ ಕ್ಷೇತ್ರದಲ್ಲಿ ಇದ್ದೆ. ಆ ಸಮಯದಲ್ಲಿ ನಾನು ಭೂಮಿ ಖರೀದಿ ಮಾಡಿದ್ದು. ಆ ಭೂಮಿ ಖರೀದಿ ಮಾಡಿ 35 ವರ್ಷಗಳೇ ಕಳೆದಿವೆ. 35 ವರ್ಷದ ವಿಚಾರವನ್ನಿಟ್ಟುಕೊಂಡು ಖಾಲಿ ಡಬ್ಬದಂತೆ ಅಲ್ಲಾಡಿಸುತ್ತಿದ್ದಾರೆ. ಅವರಿಗೆ ಯಾವುದೇ ಮಾಹಿತಿ ಬೇಕಾದರೂ ನಾನೇ ಕೊಡುತ್ತಿದ್ದೆ. ನಾನು ಯಾರಿಗೂ ತೊಂದರೆ ಮಾಡಿಲ್ಲ. ರಾಜಕಾರಣದ ನಂತರ ನನ್ನ ಎಲ್ಲಾ ಆಸ್ತಿ ವಿವರಗಳನ್ನು ನೀಡಲು ಸಿದ್ಧನಿದ್ದೇನೆ ಎಂದರು.

    ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮೊದಲು ನೆರೆ ಪೀಡಿತರಿಗೆ ಪರಿಹಾರ ನೀಡಲಿ. ನಂತರ ಎಷ್ಟು ಜನಕ್ಕೆ ಬೇಕಾದರೂ ಮಂತ್ರಿ ಸ್ಥಾನ ನೀಡಲಿ. ಬೇಕಾದರೆ 34 ಜನರನ್ನೂ ಉಪ ಮುಖ್ಯಮಂತ್ರಿ ಮಾಡಲಿ ನನಗೆ ಸಂಬಂಧವಿಲ್ಲ. ಕಷ್ಟಪಟ್ಟು ಅಧಿಕಾರ ಹಿಡಿದಿದ್ದಾರೆ. ಎಲ್ಲವನ್ನೂ ಜನರೇ ತೀರ್ಮಾನ ಮಾಡಲಿ. ರಾಜಕೀಯ ಪಕ್ಷಗಳ ಡ್ರಾಮಾವನ್ನು ಜನರೇ ತೀರ್ಮಾನಿಸುತ್ತಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

  • ಅಳಿವಿನಂಚಿನಲ್ಲಿದೆ 15ನೇ ಶತಮಾನದಲ್ಲಿ ರಾಣಿ ಕಾಳಲಾದೇವಿ ನಿರ್ಮಿಸಿದ ಕೆರೆ

    ಅಳಿವಿನಂಚಿನಲ್ಲಿದೆ 15ನೇ ಶತಮಾನದಲ್ಲಿ ರಾಣಿ ಕಾಳಲಾದೇವಿ ನಿರ್ಮಿಸಿದ ಕೆರೆ

    ಚಿಕ್ಕಮಗಳೂರು: ಹದಿನೈದನೇ ಶತಮಾನದಲ್ಲಿ ಬಗ್ಗುಂಜಿಯಿಂದ ಮೇಗೂರಿನವರೆಗೆ ಆಳಿದ ರಾಣಿ ಕಾಳಲಾದೇವಿ ತನ್ನ ಮಗಳು ಅಕಾಲಿಕ ಮರಣಕ್ಕೆ ತುತ್ತಾದಾಗ, ಮಗಳ ಆತ್ಮಕ್ಕೆ ಶಾಂತಿ ಕೋರಿ ನಿರ್ಮಿಸಿದ್ದ ಕೆರೆ ಇಂದು ಅಳಿವಿನಂಚಿನಲ್ಲಿದ್ದು, ಪಾಳು ಬಿದ್ದಿದೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಬೆಳವಾಡಿ ಗ್ರಾಮದ ಕಲ್ಬಸ್ತಿಯಲ್ಲಿ ಹನ್ನೆರಡು ಹೆಕ್ಟೇರ್ ಜಮೀನಿನ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಈ ಕೆರೆ, ತನ್ನದೆಯಾದ ಪ್ರಾಚೀನ ಇತಿಹಾಸ ಹೊಂದಿದೆ. ಆದರೆ ಇದೀಗ ಸಂಪೂರ್ಣ ಕಸದ ಗಿಡಗಳಿಂದ ಆವೃತವಾಗಿದ್ದು, ಪಾಳು ಬಿದ್ದಿದೆ.

    ಕ್ರಿ.ಶ.1530ರಲ್ಲಿ ಕಲ್ಬಸ್ತಿಯ ಪಾಶ್ರ್ವನಾಥನಿಗೆ ಜಮೀನು ದತ್ತಿ ನೀಡುವ ರಾಣಿ ಕಾಳಲಾದೇವಿ, 39 ಸಾಲುಗಳ ಶಿಲಾಶಾಸನವನ್ನು ಕೆತ್ತಿಸುತ್ತಾಳೆ. ಆಗ ರಾಣಿ ಕಾಳಲಾದೇವಿ ಈ ಕಲ್ಬಸ್ತಿ ಕೆರೆಯನ್ನು ದುರಸ್ತಿ ಮಾಡಿಸಿ, ದಂಡೆ ನಿರ್ಮಿಸಿ, ಈ ಕೆರೆ ನೀರನ್ನು ಉಪಯೋಗಿಸುವ ಗದ್ದೆಗಳನ್ನು ಪಾಶ್ರ್ವನಾಥ ಸ್ವಾಮಿಯ ಪೂಜೆಗೆ ದಾನವಾಗಿ ನೀಡುತ್ತಾಳೆ. ಇಂತಹ ವಿಶಿಷ್ಟತೆ ಹೊಂದಿರುವ, ಸಾಕಷ್ಟು ದೊಡ್ಡದಾಗಿರುವ ಈ ಕೆರೆ ಇಂದು ಅಳಿವಿನಂಚಿನಲ್ಲಿದ್ದು, ಗಿಡಗಳೆಲ್ಲ ಬೆಳೆದು, ಹೂಳು ತುಂಬಿ ಮುಚ್ಚಿ ಹೋಗುವ ಹಂತ ತಲುಪಿದೆ.

    ಕೆರೆಯ ಸ್ಥಿತಿಯನ್ನು ಗಮನಿಸಿ ಕರ್ನಾಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆಯಡಿ 2010ರಲ್ಲಿ ಗ್ರಾಮಸ್ಥರ ಸಹಕಾರದಿಂದ ಸುಮಾರು ಎಂಟು ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾಗಿತ್ತು. ಆದರೆ ಕೆರೆಯ ಹೂಳೆತ್ತುವ ಅಸಮರ್ಪಕ ವ್ಯವಸ್ಥೆಯಿಂದ ದುರಸ್ತಿಯಾದ ಕೆಲವೇ ವರ್ಷಗಳಲ್ಲಿ ಕೆರೆ ಮತ್ತೆ ಮೊದಲಿನ ಸ್ಥಿತಿಗೆ ಬಂದು ನಿಂತಿದೆ.

    ಕೆರೆಯ ಸುತ್ತಲೂ ಕಾಡು ಬೆಳೆದಿದೆ. ಕೆರೆಯ ಒಳಗೆ ಹೂಳು ತುಂಬಿ, ಹುಲ್ಲು ಬೆಳೆದು ಸಂಪೂರ್ಣ ಮುಚ್ಚಿ ಹೋಗುವಂತಾಗಿದೆ. ಅಲ್ಲದೆ ಕೆರೆಯಲ್ಲಿ ಮೊದಲಿನಂತೆ ನೀರು ನಿಲ್ಲುವ ಸಾಮಥ್ರ್ಯವೂ ಇಲ್ಲವಾಗಿದೆ. ವರ್ಷದಿಂದ ವರ್ಷಕ್ಕೆ ಅಧೋಗತಿ ತಲುಪಿ, ವಿನಾಶದತ್ತ ಸಾಗುತ್ತಿರುವ ಐತಿಹಾಸಿಕ ಕೆರೆಯನ್ನು ಉಳಿಸಬೇಕಿದೆ. ಈ ಕೆರೆಗೆ ನೀರು ತುಂಬಿಸಿದಲ್ಲಿ ಸುತ್ತಮುತ್ತಲಿನ ನಾಲ್ಕೈದು ಗ್ರಾಮಗಳ ಬಾವಿಗಳಿಗೆ ಅಂತರ್ಜಲ ಲಭಿಸುತ್ತಿದೆ. ಈ ಮೂಲಕ ಕೆರೆಯನ್ನೇ ನಂಬಿ ಬದುಕುತ್ತಿರುವ ಹತ್ತಾರು ಕುಟುಂಬಗಳ ಬದುಕೂ ಅತಂತ್ರವಾಗುವುದು ತಪ್ಪುತ್ತದೆ. ಕೆರೆಯ ಹೂಳನ್ನು ವೈಜ್ಞಾನಿಕವಾಗಿ ತೆಗೆದು ದುರಸ್ತಿ ಮಾಡಿಸಿ ಪುನರ್ಜನ್ಮ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.