Tag: Chikmagalur

  • ಕೊಡಗು, ಬೆಳಗಾವಿ, ಚಿಕ್ಕಮಗಳೂರಿನಲ್ಲಿ ಗುಡುಗು ಸಹಿತ ಮಳೆ

    ಕೊಡಗು, ಬೆಳಗಾವಿ, ಚಿಕ್ಕಮಗಳೂರಿನಲ್ಲಿ ಗುಡುಗು ಸಹಿತ ಮಳೆ

    ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲ ಝಳಕ್ಕೆ ಕಾಯ್ದು ಕಾವಲಿಯಂತಿದ್ದ ಇಳೆಗೆ ಮಳೆ ತಂಪೆರೆದಿದೆ.

    ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಇತ್ತು. ಆದರೆ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ನಂತರ ಸಂಜೆ ವೇಳಗೆ ದಿಢೀರನೆ ಜೋರು ಮಳೆ ಶುರುವಾಯಿತು. ಗುಡುಗು ಸಮೇತ ಭಾರೀ ಮಳೆ ಸುರಿದಿದೆ. ನಾಪೋಕ್ಲು, ಭ್ರಹ್ಮಗಿರಿ, ಭಾಗಮಂಡಲ, ತಲಕಾವೇರಿ ಹಾಗೂ ಮಡಿಕೇರಿ ವ್ಯಾಪ್ತಿಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಜೋರು ಮಳೆ ಸುರಿಯಿತು. ವರ್ಷದ ಮೊದಲ ಹಬ್ಬ ಯುಗಾದಿಗೂ ಪ್ರಾರಂಭದಲ್ಲಿ ವರುಣ ಮುಂದಡಿ ಇಟ್ಟಿರುವುದು ಜಿಲ್ಲೆಯ ಜನತೆಯಲ್ಲಿ ಸಂತಸ ಮೂಡಿಸಿದೆ.

    ಬೆಳಗಾವಿ ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದಂತೆ ಆಗಿದೆ. ಅಕಾಲಿಕ ಮಳೆ ಅಬ್ಬರಕ್ಕೆ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಅರ್ಧ ಗಂಟೆಗೂ ಅಧಿಕ ಕಾಲ ಮಳೆ ಬಂದಿದೆ. ಸುರಿದ ಭಾರಿ ಮಳೆಗೆ ಮನೆಯ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಐದು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಹುಬ್ಬಳ್ಳಿಯ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಈ ಜಿಲ್ಲೆಯಲ್ಲೂ ಕೂಡ ಅರ್ಧ ಗಂಟೆಗೂ ಅಧಿಕಕಾಲ ಮಳೆಯಾಗಿದೆ. ಚಿಕ್ಕಮಗಳೂರಿನ ಕಳಸ, ಬಾಳೆಹೊನ್ನೂರು, ಕೊಪ್ಪ, ಜಯಪುರ ಸೇರಿದಂತೆ ಹಲವೆಡೆ ಗುಡುಗು ಸಹಿತ ವರುಣ ದೇವ ಅರ್ಭಟಿಸಿದ್ದಾನೆ. 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಹಲವೆಡೆ ಮೋಡಕವಿದ ವಾತವರಣವಿದೆ.

    ಇಂದು ಗದಗ ಜಿಲ್ಲೆಯ ಹಲವಡೆ ಮಳೆಯಾಗಿದ್ದು, ಗುಡುಗು, ಸಿಡಿಲು, ಗಾಳಿ ಸಹಿತ ಮಳೆ ಬಂದಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಹಲವು ಕಡೆ ಧಾರಾಕಾರ ಮಳೆ ಸುರಿದ್ದು, ಬಿಸಿಲಿನಿಂದ ಬೆಂದ ಜನರಿಗೆ ತಂಪೆರೆದಿದ್ದಾನೆ. ಸಂಜೆ ಶಿವಮೊಗ್ಗದಲ್ಲೂ ಕೂಡ ಗುಡುಗು ಮಿಂಚು ಸಹಿತ ಮಳೆಯಾಗಿದೆ. 20 ನಿಮಿಷಕ್ಕೂ ಅಧಿಕ ಕಾಲ ಮಳೆ ಸುರಿದಿದೆ.

  • ಶೃಂಗೇರಿ ಮಠದಲ್ಲಿ ಆಯೋಜಿಸಿದ್ದ ‘ಹೊರೆಕಾಣಿಕೆ’ ಕಾರ್ಯಕ್ರಮ ರದ್ದು

    ಶೃಂಗೇರಿ ಮಠದಲ್ಲಿ ಆಯೋಜಿಸಿದ್ದ ‘ಹೊರೆಕಾಣಿಕೆ’ ಕಾರ್ಯಕ್ರಮ ರದ್ದು

    ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶೃಂಗೇರಿ ಮಠದಲ್ಲಿ ಆಯೋಜನೆಗೊಂಡಿದ್ದ ಮಠದ ಹಿರಿಯ ಗುರುಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿಯವರ 70ನೇ ದಿವ್ಯ ಸಪ್ತತಿ ಮಹೋತ್ಸವ ಹಾಗೂ ಹೊರೆಕಾಣಿಕೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

    ಪ್ರಧಾನಿ ಮೋದಿ ದೇಶದ ಜನರಲ್ಲಿ ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆವರೆಗೂ ಯಾರೂ ಮನೆ ಬಿಟ್ಟು ಬರಬೇಡಿ. ಕೊರೊನಾ ವೈರಸ್ ವಿರುದ್ಧ ಸಂಘಟಿತರಾಗಿ ಹೋರಾಡೋಣ ಎಂದು ಜನತಾ ಕರ್ಫ್ಯೂಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಠದ ಆಡಳಿತಾಧಿಕಾರಿ ಗೌರಿ ಶಂಕರ್ ಮಠದ ಆವರಣದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ.

    ಕೊರೊನಾ ವೈರಸ್ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮೂರು ದಿನಗಳ ಕಾಲ ಶೃಂಗೇರಿ ಮಠ ಕೂಡ ಬಂದ್ ಆಗಿರಲಿದೆ. ಶಾರದಾಂಬೆಗೆ ಪೂಜಾ ಕೈಂಕರ್ಯಗಳು ಎಂದಿನಂತೆಯೇ ನಡೆಯಲಿದ್ದು, ಶಾರದಾಂಬೆ ದರ್ಶನಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಮಠದಲ್ಲಿ ಅನ್ನದಾಸೋಹ ಹಾಗೂ ಭಕ್ತರು ಉಳಿಯಲು ರೂಂಗಳ ಸೌಲಭ್ಯ ಇರುವುದಿಲ್ಲ.

    ಸೋಮವಾರದವರೆಗೂ ಮಠದಲ್ಲಿ ಅನ್ನದಾಸೋಹ ಹಾಗೂ ರೂಂಗಳ ಸೌಲಭ್ಯ ಇರುವುದಿಲ್ಲ. ಸೋಮವಾರದ ನಂತರ ಸರ್ಕಾರದ ಆದೇಶದ ಮೇಲೆ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಮಠದ ಆಡಳಿತಾಧಿಕಾರಿ ತಿಳಿಸಿದ್ದಾರೆ. ಸದ್ಯಕ್ಕೆ ಮುಂದೂಡಿರುವ ಹೊರೆಕಾಣಿಕೆ ಹಾಗೂ ದಿವ್ಯ ಸಪ್ತತಿ ಮಹೋತ್ಸವ ಕಾರ್ಯಕ್ರಮವನ್ನು ನಡೆಸುವ ಮುನ್ನ ಮುಂಚಿತವಾಗಿ ಭಕ್ತರಿಗೆ ತಿಳಿಸುವುದಾಗಿ ಮನವಿ ಮಾಡಿಕೊಂಡಿದ್ದಾರೆ.

  • ಕೊರೊನಾ, ಕೆ.ಎಫ್.ಡಿ ಜೊತೆ ಕಾಫಿನಾಡಿಗರಿಗೆ ಹಕ್ಕಿಜ್ವರದ ಭೀತಿ

    ಕೊರೊನಾ, ಕೆ.ಎಫ್.ಡಿ ಜೊತೆ ಕಾಫಿನಾಡಿಗರಿಗೆ ಹಕ್ಕಿಜ್ವರದ ಭೀತಿ

    ಚಿಕ್ಕಮಗಳೂರು: ಕೊರೊನಾ ಭೀತಿಯ ಬೆನ್ನಲ್ಲೇ ಕಾಫಿನಾಡಲ್ಲಿ ಮಂಗನ ಖಾಯಿಲೆ ಹಾಗೂ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಆತಂಕಕ್ಕೀಡು ಮಾಡಿವೆ.

    ಕಾಫಿನಾಡಿನಲ್ಲಿ ಒಂದೂ ಕೊರೊನಾ ಪ್ರಕರಣ ಪತ್ತೆಯಾಗದಿದ್ದರೂ, ವೈರಸ್‍ಗೆ ಹೆದರಿ ಜನ ಮನೆಯಿಂದ ಆಚೆ ಬರುತ್ತಿಲ್ಲ. ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪು ತಾಲೂಕಿನ ಜನ ಕೊರೊನಾಗಿಂತ ಕೆಎಫ್‍ಡಿ (ಮಂಗನ ಖಾಯಿಲೆ)ಗೆ ಬೆಚ್ಚಿ ಬೀಳುತ್ತಿದ್ದಾರೆ. ಮಂಗನ ಕಾಯಿಲೆಯಿಂದ ಜಿಲ್ಲೆಯಲ್ಲಿ ಈಗಾಗಲೇ ಆರೇಳು ಜನ ಬಳಲುತ್ತಿದ್ದಾರೆ.

    ಈ ಎರಡು ಖಾಯಿಲೆಗಳ ಭಯದ ನಡುವೆ ಇದೀಗ ಅಲ್ಲಲ್ಲಿ ಹಕ್ಕಿಗಳು ಸಾಯುತ್ತಿದ್ದು, ಚಿಕ್ಕಮಗಳೂರಿಗೆ ಹಕ್ಕಿ ಜ್ವರವೂ ಕಾಲಿಟ್ಟಿದ್ಯ ಎಂಬ ಆತಂಕ ಸ್ಥಳಿಯರನ್ನು ಕಾಡುತ್ತಿದೆ. ಗುರುವಾರ ನಗರದ ಕೋಟೆ ಬಡಾವಣೆಯಲ್ಲಿ ಎರಡು ಪಾರಿವಾಳಗಳು ಸಾವನ್ನಪ್ಪಿದ್ದವು. ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೆ ಮುಂದೆ ಎರಡು ಮೈನಾ ಹಕ್ಕಿಗಳು ಸಾವನ್ನಪ್ಪಿವೆ. ಗುರುವಾರ ಎರಡು, ಇಂದು ಎರಡು ಹಕ್ಕಿಗಳು ಸಾವನ್ನಪ್ಪಿರುವುದರಿಂದ ಮೈಸೂರು, ದಾವಣಗೆರೆಯಲ್ಲಿದ್ದ ಹಕ್ಕಿಜ್ವರ ಕಾಫಿನಾಡಿಗೂ ಕಾಲಿಟ್ಟಿತೇ ಎಂದು ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ.

    ದೇಶದ ಜನ ಕೊರೊನಾ ಭಯದಲ್ಲಿ ಬದುಕುತ್ತಿದ್ದರೆ, ಮಲೆನಾಡಿಗರು ಕೊರೊನಾ ಜೊತೆಗೆ ಕೆಎಫ್‍ಡಿ ಹಾಗೂ ಹಕ್ಕಿಜ್ವರದ ಆತಂಕದಲ್ಲಿ ದಿನ ದೂಡುವಂತಾಗಿದೆ. ಹಕ್ಕಿಗಳು ಸಾವನ್ನಪ್ಪಿದ ನಂತರ ಸ್ಥಳ ಪರಿಶೀಲನೆ ನಡೆಸಿ ಹಕ್ಕಿಗಳ ಕಳೆಬರಹವನ್ನು ಶಿವಮೊಗ್ಗದ ಲ್ಯಾಬಿಗೆ ಕಳುಸಲಾಗಿದೆ. ವರದಿ ಬಂದ ಬಳಿಕ ಹಕ್ಕಿಗಳು ಯಾವ ಕಾರಣಕ್ಕೆ ಸಾವನ್ನಪ್ಪಿವೆ ಎಂಬುದನ್ನು ತಿಳಿಯಲಿದೆ.

  • ಶಾಸಕ ರಾಜೇಗೌಡ ಮಗಳ ಮದುವೆಯಲ್ಲಿ ಡಿಕೆಶಿ ಭಾಗಿ

    ಶಾಸಕ ರಾಜೇಗೌಡ ಮಗಳ ಮದುವೆಯಲ್ಲಿ ಡಿಕೆಶಿ ಭಾಗಿ

    ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಡಿ.ಕೆ.ಶಿವಕುಮಾರ್ ಇದೇ ಮೊದಲ ಬಾರಿಗೆ ಕಾಫಿನಾಡು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದು, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದರು.

    ಈ ವೇಳೆ ರಂಭಾಪುರಿ ಶ್ರೀಗಳು ಡಿ.ಕೆ.ಶಿವಕುಮಾರ್ ಅವರಿಗೆ ರಂಭಾಪುರಿ ಮಠದ 119ನೇ ಜಗದ್ಗುರುಗಳಾದ ವೀರ ಗಂಗಾಧರ ಶ್ರೀಗಳ ಫೋಟೋವನ್ನು ಉಡುಗೊರೆಯಾಗಿ ನೀಡಿದರು. ಆಗ ಡಿ.ಕೆ.ಶಿವಕುಮಾರ್ ಜೊತೆಗಿದ್ದ ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮತ್ ಜೊತೆ ಮಾತನಾಡಿ, ರೀ, ಅಧ್ಯಕ್ಷರೇ, ಇವರೇ ನಮ್ಮ ಹೈಕಮಾಂಡ್, ಇವರ ಫೋಟೋವನ್ನು ನಮ್ಮ ಕೆಪಿಸಿಸಿ ಕಚೇರಿಯ ನನ್ನ ಕೊಠಡಿಯಲ್ಲಿ ಹಾಕಬೇಕು, ಅದು ನಿಮ್ಮ ಜವಾಬ್ದಾರಿ ಎಂದು ಫೋಟೋವನ್ನು ಮುಟ್ಟಿ ತೋರಿಸಿದರು.

    ಶ್ರೀಗಳ ಆಶೀರ್ವಾದದ ಬಳಿಕ ಬಾಳೆಹೊನ್ನೂರು ಸಮೀಪದ ಬಾಸಾಪುರ ತೋಟದಲ್ಲಿ ನಡೆಯುತ್ತಿದ್ದ ತಮ್ಮ ಪಕ್ಷದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ಮಗಳ ಮದುವೆಯಲ್ಲಿ ಭಾಗಿಯಾಗಿ, ನೂತನ ವಧುವರರಿಗೆ ಶುಭ ಕೋರಿದರು.

    ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕೊರೊನಾದಿಂದ ರಾಜ್ಯಾದ್ಯಂತ ಆರ್ಥಿಕ ಸಂಕಷ್ಟ ಎದುರಾಗಿದೆ. ಹಾಗಾಗಿ, ಸರ್ಕಾರ ಎಲ್ಲ ಬ್ಯಾಂಕುಗಳ ಇ.ಎಮ್.ಐಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸಿದರು. ಜನಸಾಮಾನ್ಯರಿಗೆ ಆರ್ಥಿಕವಾಗಿ ಉಸಿರಾಡಲು ಆಗುತ್ತಿಲ್ಲ. ವ್ಯಾಪಾರಿಗಳು, ಸಣ್ಣ ಉದ್ಯಮಿಗಳು ತೀವ್ರ ಸಂಕಷ್ಟದಲ್ಲಿದ್ದು, ಬ್ಯಾಂಕುಗಳಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಹೀಗಾಗಿ ಈ ಪವಿತ್ರ ಕೆಲಸವನ್ನು ರಾಜ್ಯ ಸರ್ಕಾರ ತುರ್ತಾಗಿ ಮಾಡಬೇಕು ಎಂದರು.

  • ಕೊರೊನಾ ಭೀತಿ- ಬರಬೇಡಿ ಅಂದ್ರು ಬಂದ ಪ್ರವಾಸಿಗರು, ವಾಪಸ್ ಕಳುಹಿಸಿದ ಪೊಲೀಸರು

    ಕೊರೊನಾ ಭೀತಿ- ಬರಬೇಡಿ ಅಂದ್ರು ಬಂದ ಪ್ರವಾಸಿಗರು, ವಾಪಸ್ ಕಳುಹಿಸಿದ ಪೊಲೀಸರು

    ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಜನರ ಆತಂಕ ಹೆಚ್ಚಾಗ್ತಾನೆ ಇದೆ. ಈ ಹಿನ್ನೆಲೆ ಸರ್ಕಾರ ಕೂಡ ಪ್ರವಾಸಿ ತಾಣಗಳಿಗೆ ನಿಷೇಧ ಹೇರಿದೆ. ಹೋಮ್ ಸ್ಟೇ, ರೆಸಾರ್ಟ್ ಗಳನ್ನು ಏಪ್ರಿಲ್ 15ರ ತನಕ ಬಂದ್ ಮಾಡುವಂತೆ ಆದೇಶಿಸಲಾಗಿದೆ. ಆದರೆ ಕಾಫಿನಾಡಿಗೆ ಬರ್ತಿರೋ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿಲ್ಲ. ಹೀಗಾಗಿ ಬಂದ ಪ್ರವಾಸಿಗರನ್ನು ಕೈಮರ ಚೆಕ್ ಪೋಸ್ಟ್ ನಲ್ಲಿ ವಾಪಸ್ ಕಳುಹಿಸಲಾಗುತ್ತಿದೆ.

    ದೂರದಿಂದ ಬಂದಿದ್ದೇವೆ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠಕ್ಕೆ ಹೋಗುತ್ತಿದ್ದೇವೆ, ಬೇಗ ಹೋಗಿ ಬರುತ್ತೇವೆ ಎಂದು ಚೆಕ್ ಪೋಸ್ಟ್ ಸಿಬ್ಬಂದಿ ಬಳಿ ಪ್ರವಾಸಿಗರು ಗೋಗರೆದರು. ಆದರೆ ಸ್ಥಳದಲ್ಲೇ ಬೀಡು ಬಿಟ್ಟಿರೋ ಚೆಕ್ ಪೋಸ್ಟ್ ಸಿಬ್ಬಂದಿ ಹಾಗೂ ಪೊಲೀಸರು ಯಾರೊಬ್ಬರನ್ನೂ ಒಳಗೆ ಬಿಡುತ್ತಿಲ್ಲ. ಇನ್ನೊಂದು ತಿಂಗಳು ಬರಬೇಡಿ ಎಂದು ವಾಪಸ್ ಕಳುಹಿಸುತ್ತಿದ್ದಾರೆ.

    ಬುಧವಾರ ಕೂಡ ಸುಮಾರು 50ಕ್ಕೂ ಹೆಚ್ಚು ವಾಹನಗಳು ಬಂದಿವೆ. ಹಾವೇರಿ, ಬಾಗಲಕೋಟೆ, ಚಿತ್ರದುರ್ಗದಿಂದ ಬಂದಿದ್ದೇವೆ ಎಂದು ಸಿಬ್ಬಂದಿಗಳ ಮನವೊಲಿಕೆಗೆ ಯತ್ನಿಸಿದ್ದಾರೆ. ಆದರೆ ಸಿಬ್ಬಂದಿ ಗಿರಿಭಾಗದಲ್ಲಿ ವಾಸವಿರೋರಿಗೆ ಮಾತ್ರ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದು, ಬೇರೆ ಯಾರಿಗೂ ಅವಕಾಶ ಕಲ್ಪಿಸುತ್ತಿಲ್ಲ.

    ಯಾರೂ ಎಲ್ಲೂ ಹೋಗ್ಬೇಡಿ, ಅನಗತ್ಯ ಪ್ರವಾಸ ರದ್ದುಗೊಳಿಸಿ, ಮನೆಯಲ್ಲೇ ಇರಿ ಎಂದು ಸರ್ಕಾರ ಹಾಗೂ ಜಿಲ್ಲಾಡಳಿತ ಸೂಚಿಸಿದೆ. ಮುಂಜಾಗೃತಾ ಕ್ರಮವಾಗಿ ಸರ್ಕಾರ ರಜೆ ನೀಡಿದೆ. ಆದರೆ ಪ್ರವಾಸಿಗರು ಕಾಫಿನಾಡಿಗೆ ಬರ್ತಾನೆ ಇದ್ದಾರೆ. ಬಂದವರು ಅಲ್ಲಿಂದ ಬಂದ್ವಿ, ಇಲ್ಲಿಂದ ಬಂದ್ವಿ ಅಂತ ಸಪ್ಪೆ ಮುಖ ಹಾಕ್ಕೊಂಡು ವಾಪಸ್ ಹೋಗುತ್ತಿದ್ದಾರೆ.

  • ಏಪ್ರಿಲ್ 15ರವರೆಗೆ ಕಾಫಿನಾಡಿಗೆ ಬರಬೇಡಿ – ಪ್ರವಾಸಿಗರಿಗೆ ಜಿಲ್ಲಾಧಿಕಾರಿ ಮನವಿ

    ಏಪ್ರಿಲ್ 15ರವರೆಗೆ ಕಾಫಿನಾಡಿಗೆ ಬರಬೇಡಿ – ಪ್ರವಾಸಿಗರಿಗೆ ಜಿಲ್ಲಾಧಿಕಾರಿ ಮನವಿ

    ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಮುಂದಿನ ಒಂದು ತಿಂಗಳು ತುಂಬಾ ಕ್ರಿಟಿಕಲ್ ಪರಿಸ್ಥಿತಿಯಾಗಿದೆ. ಹಾಗಾಗಿ ಕಾಫಿನಾಡಿಗೆ ಏಪ್ರಿಲ್ 15ರವರೆಗೂ ಯಾವ ಪ್ರವಾಸಿಗರು ಬರಬೇಡಿ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಈವರೆಗೆ ಜಿಲ್ಲಾದ್ಯಂತ ಒಂದೇ ಒಂದು ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿಲ್ಲ. ದಾಖಲಾಗಿದ್ದ ಇಬ್ಬರು ರೋಗಿಗಳಲ್ಲೂ ನೆಗೆಟಿವ್ ಬಂದಿದೆ. ಪರಿಸ್ಥಿತಿಯನ್ನ ನಿಯಂತ್ರಿಸೋದಕ್ಕೆ ಜಿಲ್ಲಾಡಳಿತ ಕೂಡ ಸನ್ನದ್ಧವಾಗಿದೆ. ಆದರೆ ಜನಸಾಮಾನ್ಯರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

    ಮುಂದಿನ ಒಂದು ತಿಂಗಳುಗಳ ಕಾಲ ತುಂಬಾ ಮುಖ್ಯವಾದ ಕಾಲಘಟ್ಟವಾಗಿದೆ. ಆದ್ದರಿಂದ ಪ್ರಕೃತಿ ಪ್ರವಾಸಿಗರು, ಧಾರ್ಮಿಕ ಪ್ರವಾಸಿಗರು, ಅಡ್ವೆಂಚರ್ ಪ್ರವಾಸಿಗರು ಸೇರಿದಂತೆ ಮತ್ಯಾವುದೇ ರೀತಿಯ ಪ್ರವಾಸಿಗರು ಕಾಫಿನಾಡಿಗೆ ಬರಬಾರದು ಎಂದು ಜಿಲ್ಲಾಧಿಕಾರಿ ಗೌತಮ್ ತಿಳಿಸಿದರು.

    ಪ್ರವಾಸಿಗರು ತಮ್ಮ ಟೂರ್ ಶೆಡ್ಯೂಲನ್ನ ಒಂದು ತಿಂಗಳ ನಂತರಕ್ಕೆ ಬದಲಾಯಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಈಗಾಗಲೇ ಜಿಲ್ಲಾದ್ಯಂತ ಸರ್ಕಾರಿ ಆಸ್ಪತ್ರೆಯಲ್ಲಿ 38 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 74 ಐಸೋಲೇಷನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

  • ಕೊರೊನ ಭೀತಿ – ತೋಟದಲ್ಲಿ ಶಾಸಕರ ಮಗಳ ಸರಳ ಮದುವೆ

    ಕೊರೊನ ಭೀತಿ – ತೋಟದಲ್ಲಿ ಶಾಸಕರ ಮಗಳ ಸರಳ ಮದುವೆ

    – ಸರ್ಕಾರದ ಆದೇಶ ಸ್ವಾಗತಿಸಿದ ಕೈ ನಾಯಕ

    ಚಿಕ್ಕಮಗಳೂರು: ದಿನದಿಂದ ದಿನಕ್ಕೆ ವ್ಯಾಪಿಸುತ್ತಿರುವ ಕೊರೊನ ವೈರಸ್ ಹಾಗೂ ಸರ್ಕಾರದ ಆದೇಶದ ಹಿನ್ನೆಲೆ ಜಿಲ್ಲೆಯ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಕೂಡ ತಮ್ಮ ಮಗಳ ಮದುವೆಯನ್ನು ಸರಳವಾಗಿ ಆಚರಿಸಲು ಮುಂದಾಗಿದ್ದಾರೆ.

    ಇದೇ 19ರಂದು ನಗರದ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ಮಾಡಲು ನಿರ್ಧರಿಸಿದ್ದರು. ಈಗಾಗಲೇ 12 ಸಾವಿರಕ್ಕೂ ಅಧಿಕ ಲಗ್ನಪತ್ರಿಕೆಗಳನ್ನು ಸಹ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಹಂಚಿದ್ದಾರೆ. ಆದರೆ ಈಗ ಕೊರೊನಾ ವೈರಸ್ ಭೀತಿ ಹಾಗೂ ಸರ್ಕಾರದ ಆದೇಶದ ಹಿನ್ನೆಲೆ ಸರಳ ಮದುವೆಗೆ ಎರಡು ಕುಟುಂಬದವರು ಮುಂದಾಗಿದ್ದಾರೆ.

    ನಗರದಲ್ಲಿ ಮಾತನಾಡಿದ ಶಾಸಕ ರಾಜೇಗೌಡ, ತಮ್ಮ ಮಗಳು ಹಾಗೂ ಕಾಫಿ ಬೆಳೆಗಾರ ಅತ್ತಿಕಟ್ಟೆ ಜಗನ್ನಾಥ್‍ರವರ ಮಗನೊಂದಿಗೆ ನಿಶ್ಚಯವಾಗಿದ್ದ ಮದುವೆಯನ್ನ ಸರಳವಾಗಿ ಬಂಧುಗಳ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ಸ್ವಗೃಹ ಬಾಸಾಪುರದ ಕಾಫಿ ತೋಟದಲ್ಲಿ ನಡೆಯಲಿದೆ. ನಿಗದಿಯಾಗಿದ್ದ ದಿನದಂದೇ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು. ರಾಜೇಗೌಡ ಮಗಳು ಡಾ.ಸಂಜನಾ ಮತ್ತು ಅತ್ತಿಕಟ್ಟೆ ಜಗನ್ನಾಥ್ ಪುತ್ರ ವಚನ್‍ಲಕ್ಷ್ಮಣ್ ರವರ ವಿವಾಹ ಮಹೋತ್ಸವ ಇದೇ ಮಾರ್ಚ್ 19ಕ್ಕೆ ನಿಗದಿಯಾಗಿತ್ತು.

    ಮದುವೆ ಅಂಗವಾಗಿ ಮಾ. 16ರಂದು ನಡೆಯಬೇಕಾಗಿದ್ದ ದೇವತಾಕಾರ್ಯವನ್ನು ಮಾ 18ರ ಬುಧವಾರ ಹಾಗೂ ವಿವಾಹ ಮಹೋತ್ಸವನ್ನು ಮಾ 19ರ ಗುರುವಾರ ಬಾಸಾಪುರ ಎಸ್ಟೇಟಿನಲ್ಲಿ ಸರಳವಾಗಿ ಬಂಧುಗಳೊಂದಿಗೆ ನಡೆಸಲು ತೀರ್ಮಾನಿಸಿದ್ದಾರೆ. ಮಾ 21ರ ಶನಿವಾರ ಚಿಕ್ಕಮಗಳೂರು ಕ್ಲಬ್‍ನಲ್ಲಿ ಏರ್ಪಡಿಸಿದ್ದ ಆರತಕ್ಷತೆ ಕಾರ್ಯಕ್ರಮವನ್ನು ಕೊರೊನಾ ವೈರಸ್ ಕಾರಣದಿಂದ ಮುಂದೂಡಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ, ಈ ವಿವಾಹವನ್ನು ಸರಳವಾಗಿ ನಡೆಸಲು ನಿಶ್ಚಯಿಸಿದ್ದಾರೆ. ದೊಡ್ಡವರ ಈ ತೀರ್ಮಾನವನ್ನ ವಧುವರರಾದ ಸಂಜನಾ ಹಾಗೂ ವಚನ್‍ಲಕ್ಷ್ಮಣ್ ಕೂಡ ಸ್ವಾಗತಿಸಿದ್ದಾರೆ.

  • ತುಮಕೂರಿನಲ್ಲಿ ಮರಗಳ ಹನನ- ಪಿಐಎಲ್ ಸಲ್ಲಿಸಲು ನಿರ್ಧಾರ

    ತುಮಕೂರಿನಲ್ಲಿ ಮರಗಳ ಹನನ- ಪಿಐಎಲ್ ಸಲ್ಲಿಸಲು ನಿರ್ಧಾರ

    ಚಿಕ್ಕಮಗಳೂರು: ತುಮಕೂರಿನಲ್ಲಿ ತೆಂಗು- ಅಡಿಕೆ ಮರಗಳ ಹನನ ಪ್ರಕರಣದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಲ್ಲಿ ಪಿಐಎಲ್ ಸಲ್ಲಿಸಲು ರಾಜ್ಯ ಕಿಸಾನ್ ಕಾಂಗ್ರೆಸ್ ತೀರ್ಮಾನಿಸಿದೆ.

    ಮಾ.18ರಂದು ವಕೀಲ ಗೋಪಾಲ್ ಸಿಂಗ್ ಮೂಲಕ ಸುಪ್ರೀಂ ಕೋರ್ಟ್ ಅನುಮತಿ ಪಡೆದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಲ್ಲಿ ಪಿಐಎಲ್ ಸಲ್ಲಿಸಲು ರಾಜ್ಯ ಕಿಸಾನ್ ಕಾಂಗ್ರೆಸ್ ತೀರ್ಮಾನಿಸಿದೆ.

    ಯಾವುದೇ ನ್ಯಾಯಾಲಯ ಮರಗಳನ್ನು ಕಡಿದು ಹಾಕುವಂತೆ ನಿರ್ದೇಶನ ಮಾಡಿಲ್ಲ. ಈ ಮಧ್ಯೆಯೂ ಮಕ್ಕಳಂತೆ ಸಾಕಿದ ಮರಗಳನ್ನು ಕಡಿದ ಹಾಗೂ ಕಡಿಯಲು ಪರೋಕ್ಷವಾಗಿ ಕಾರಣರಾದ ವ್ಯಕ್ತಿಗಳ ಮೇಲೆ ದೂರು ದಾಖಲಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ತುಮಕೂರು ಜಿಲ್ಲಾಧಿಕಾರಿ, ಗುಬ್ಬಿ ತಹಸಿಲ್ದಾರ್, ಗ್ರಾಮ ಲೆಕ್ಕಿಗನ ವಿರುದ್ಧ ದೂರು ದಾಖಲು ಮಾಡಲು ಕಾಂಗ್ರೆಸ್ ಕಿಸಾನ್ ಘಟಕ ನಿರ್ಧರಿಸಿದೆ. ನೊಂದ ರೈತರಿಗೆ ನ್ಯಾಯ ಒದಗಿಸಲು ಕಿಸಾನ್ ಕಾಂಗ್ರೆಸ್ ಬದ್ಧವಾಗಿದೆ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಹೇಳಿದ್ದಾರೆ.

    ಸುಮಾರು 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟವನ್ನು ಏಕಾಏಕಿ ಉರುಳಿಸಿ ತಹಶೀಲ್ದಾರ್ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಹಶೀಲ್ದಾರ್ ಮಮತಾ ಅವರ ಮೇಲೆ ಆರೋಪ ಕೇಳಿ ಬಂದಿದ್ದು, ತಾಲೂಕಿನ ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಅವರ ತೋಟವನ್ನು ನಾಶ ಮಾಡಲಾಗಿದೆ. ಉಡುಸಲಮ್ಮ ದೇವಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನನ್ನು ಈ ಕುಟುಂಬಕ್ಕೆ ನೀಡಲಾಗಿದೆ. ಕಳೆದ 30 ವರ್ಷಗಳಿಂದಲೂ ತೆಂಗು, ಅಡಿಕೆ, ಬಾಳೆ ಬೆಳೆದುಕೊಂಡು ಬಂದಿದ್ದಾರೆ. ಈ ನಡುವೆ ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗುವುದಿಲ್ಲ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಹಶಿಲ್ದಾರ್ ಮಮತಾ ಅವರು ತೋಟವನ್ನು ಉರುಳಿಸಲು ಆದೇಶ ಕೊಟ್ಟಿದ್ದಾರೆ ಎನ್ನಲಾಗಿದೆ.

    ಅದರಂತೆ ಗ್ರಾಮ ಲೆಕ್ಕಿಗ ಮುರುಳಿ ಯಾವುದೇ ನೋಟಿಸ್ ನೀಡದೇ ಏಕಾಏಕಿ ತೋಟಕ್ಕೆ ನುಗ್ಗಿ ಫಸಲಿಗೆ ಬಂದಿದ್ದ 300 ಅಡಿಕೆ, 30 ತೆಂಗು ಮತ್ತು ಬಾಳೆ ಗಿಡಗಳನ್ನು ಉರುಳಿಸಿದ್ದಾರೆ. ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮ ಕುಟುಂಬ ಉಡುಸಲಮ್ಮ ದೇವಸ್ಥಾನದ ಅರ್ಚಕರಾಗಿದ್ದಾರೆ. ಹೀಗಾಗಿ ಈ ಕುಟುಂಬಕ್ಕೆ ದೇವಸ್ಥಾನದಿಂದಲೇ ಜಮೀನು ಕೊಡುಗೆಯಾಗಿ ಕೊಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಜಮೀನು ಪೂರ್ಣ ಸ್ವಾಧೀನ ಕೋರಿ ಜಿಲ್ಲಾ ನ್ಯಾಯಾಲಯದಲ್ಲಿ ಮುನಿ ಕೆಂಪಯ್ಯ ಕುಟುಂಬ ಅರ್ಜಿ ಸಲ್ಲಿಸಿತ್ತು. ಆದರೆ ಅಧಿಕಾರಿಗಳು ಏಕಾಏಕಿ ಗಿಡಗಳನ್ನು ನಾಶ ಮಾಡಿದ್ದಾರೆ.

    ಗುಬ್ಬಿ ಪೊಲೀಸರ ಸಮುಖದಲ್ಲೇ ಗ್ರಾಮ ಲೆಕ್ಕಿಗ ಮುರುಳಿ ಮರಗಳನ್ನು ಕಡಿದಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಕುಟುಂಬ ದುಃಖದ ಮಡುವಿನಲ್ಲಿದೆ. ಮುನಿ ಕೆಂಪಯ್ಯ ಕುಟುಂಬದ ಆಕ್ರಂದನದ ವಿಡಿಯೋ ವೈರಲ್ ಆಗಿದೆ.

  • ಪ್ರಧಾನಿ ಮೋದಿ ಪತ್ನಿ ಜಶೋಧಾ ಬೆನ್ ಶೃಂಗೇರಿಗೆ ಭೇಟಿ

    ಪ್ರಧಾನಿ ಮೋದಿ ಪತ್ನಿ ಜಶೋಧಾ ಬೆನ್ ಶೃಂಗೇರಿಗೆ ಭೇಟಿ

    ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋಧಾ ಬೆನ್ ಶೃಂಗೇರಿ ಶಾರದಾಂಬೆ ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

    ಬುಧವಾರ ಬೆಳಗ್ಗೆ ಶಿವಮೊಗ್ಗದ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ್ದ ಜಶೋಧಾ ಬೆನ್, ಸಂಜೆ ಆರು ಗಂಟೆ ವೇಳೆಗೆ ಶೃಂಗೇರಿ ಶಾರದಾಂಬೆ ಸನ್ನಿದಿಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ತುಂಗಾ ನದಿ ಹಾಗೂ ಸುತ್ತಮುತ್ತಲಿನ ಪರಿಸರ ಕಂಡು ಪುಳಕಿತರಾಗಿದ್ದಾರೆ.

    ಬಳಿಕ ಶೃಂಗೇರಿ ಶಾರದಾಂಬೆ ದರ್ಶನ ಪಡೆದು, ಶಾರದಾಂಬೆ ಸನ್ನಿಧಿಯಲ್ಲಿ ಗರ್ಭಗುಡಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ನಂತರ ಎರಡು ನಿಮಿಷಗಳ ಕಾಲ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ಶ್ರೀಮಠಕ್ಕೆ ತೆರಳಿದ ಜಶೋಧಾ ಬೆನ್, ಶೃಂಗೇರಿ ಮಠದ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

    ಮಠದ ಆಡಳಿತ ಅಧಿಕಾರಿಗಳು ಕೂಡ ಜಶೋಧಾ ಬೆನ್ ಅವರಿಗೆ ಸ್ವಾಗತ ಕೋರಿದರು. ಪೂಜೆ ಹಾಗೂ ಶ್ರೀಗಳ ದರ್ಶನದ ಬಳಿಕ ಹೊರಡುವ ಮುನ್ನ ಹಲವರು ಅವರೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡ ಅವರು, ಬಳಿಕ ಬೆಂಗಳೂರಿಗೆ ಹಿಂದಿರುಗಿದರು.

  • ಕರ್ತವ್ಯ ಲೋಪ, ಚಿಕ್ಕಮಗಳೂರು ಡಿಎಚ್‍ಓ ಅಮಾನತು

    ಕರ್ತವ್ಯ ಲೋಪ, ಚಿಕ್ಕಮಗಳೂರು ಡಿಎಚ್‍ಓ ಅಮಾನತು

    ಚಿಕ್ಕಮಗಳೂರು: ಕರ್ತವ್ಯ ಲೋಪದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಅಮಾನತುಗೊಳಿಸಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಆದೇಶ ಹೊರಡಿಸಿದ್ದಾರೆ.

    ಡಾ.ಪ್ರಭು ಅಮಾನತುಗೊಂಡ ಅಧಿಕಾರಿ. ಚಿಕ್ಕಮಗಳೂರಿನ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಸರ್ಕಾರದ ಆದೇಶ ಅನುಸಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಬೇಕಿತ್ತು. ಆದರೆ ಸರ್ಕಾರದ ಆದೇಶ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ದಾಖಲಾಗಿತ್ತು.

    ಈ ಹಿನ್ನೆಲೆ ಕಡತಗಳು ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿತ್ತು. ತನಿಖೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಮಾರ್ಗಸೂಚಿಗೆ ಅನುಗುಣವಾಗಿ ಕ್ರಮ ವಹಿಸದಿರುವುದು ಕಂಡುಬಂದಿದೆ. ಈ ಹಿನ್ನೆಲೆ ಮೇಲಾಧಿಕಾರಿಗಳ ಸೂಚನೆಯಂತೆ ಕೆಲಸ ಮಾಡದೆ, ದೈನಂದಿನ ಕಾರ್ಯನಿರ್ವಹಣೆ ಮತ್ತು ಕಡತ ಮಂಡನೆಯಲ್ಲಿ ಸ್ವತಃ ಲಿಖಿತವಾಗಿ ಅಭಿಪ್ರಾಯ ಸೂಚಿಸದೆ ಸರ್ಕಾರಿ ಸೇವೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಡಾ.ಪ್ರಭು ಆಮಾನತುಗೊಂಡಿದ್ದಾರೆ.