Tag: Chikkmagaluru

  • ಗೂಗಲ್ ಮ್ಯಾಪ್ ನಂಬಿ ಗದ್ದೆಗೆ ಬಂದು ನಿಂತ ಟಿಟಿ!

    ಗೂಗಲ್ ಮ್ಯಾಪ್ ನಂಬಿ ಗದ್ದೆಗೆ ಬಂದು ನಿಂತ ಟಿಟಿ!

    ಚಿಕ್ಕಮಗಳೂರು: ಗೂಗಲ್ ಮ್ಯಾಪ್ (Google Map) ನಂಬಿ ಬಂದಿದ್ದ ಪ್ರವಾಸಿಗರು, ವಾಹನವನ್ನು ಗದ್ದೆಗೆ ಇಳಿಸಿಕೊಂಡು ಪರದಾಡಿದ ಘಟನೆ ಆಲ್ದೂರು ಬಳಿ ನಡೆದಿದೆ.

    ಬೆಂಗಳೂರು ಮೂಲದ ಪ್ರವಾಸಿಗರು ಬಾಳೆಹೊನ್ನೂರು ಕಡೆಯಿಂದ ಮೂಡಿಗೆರೆಗೆ (Mudigere) ತೆರಳುತ್ತಿದ್ದರು. ಈ ವೇಳೆ, ಗೂಗಲ್ ಮ್ಯಾಪ್ ಕೈ ಕೊಟ್ಟಿದ್ದು, ವಾಹನ ಗದ್ದೆ ಬಳಿ ಹೋಗಿ ಸಿಕ್ಕಿ ಹಾಕಿಕೊಂಡಿದೆ. ಇದರಿಂದ ವಾಹನ ವಾಪಸ್ ತೆಗೆಯಲಾಗದೆ ಪ್ರವಾಸಿಗರು ಕೆಲವು ಕಾಲ ಅಲ್ಲೇ ಪರದಾಡಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ತಂಡಕ್ಕೆ ಸೇರಿಸೋದಾಗಿ ರಾಜ್ಯಮಟ್ಟದ ಕ್ರಿಕೆಟಿಗನಿಗೆ 24 ಲಕ್ಷ ವಂಚನೆ

    ಪ್ರವಾಸಿಗರ ಪರದಾಟ ನೋಡಿ, ಸ್ಥಳೀಯರು ಟ್ರ್ಯಾಕ್ಟರ್‌ಗೆ ಟಿಟಿಯನ್ನು ಕಟ್ಟಿ, ರಸ್ತೆಯ ಬಳಿ ತಂದು ಬಿಟ್ಟಿದ್ದಾರೆ. ಬಳಿಕ ಸ್ಥಳಿಯರಿಂದ ರಸ್ತೆಯ ಬಗ್ಗೆ ಮಾಹಿತಿ ಪಡೆದು, ಗೂಗಲ್ ಮ್ಯಾಪ್ ಆಫ್ ಮಾಡಿ ಪ್ರವಾಸಿಗರು ಅಲ್ಲಿಂದ ತೆರಳಿದ್ದಾರೆ. ಇದನ್ನೂ ಓದಿ: ದರ್ಶನ್‌ & ಗ್ಯಾಂಗ್‌ ಸದಸ್ಯರಿಗೆ 2 ತಿಂಗಳು ರಿಲೀಫ್‌

  • ಫಾರಿನ್ ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ ಮಾಡಲು ಹೋಗಿ 75 ಲಕ್ಷ ಕಳ್ಕೊಂಡ ಮಹಿಳೆ

    ಫಾರಿನ್ ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ ಮಾಡಲು ಹೋಗಿ 75 ಲಕ್ಷ ಕಳ್ಕೊಂಡ ಮಹಿಳೆ

    ಚಿಕ್ಕಮಗಳೂರು: ಫಾರಿನ್ ಪಿ.ಎಚ್.ಡಿ. ಸರ್ಟಿಫಿಕೇಟ್ ಹಿಂದೆ ಬಿದ್ದು ಮಹಿಳೆಯೊಬ್ಬಳು ನಾಲ್ಕು ವರ್ಷದಲ್ಲಿ 75 ಲಕ್ಷ ಹಣ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ.

    ಕಳೆದ ನಾಲ್ಕು ವರ್ಷಗಳ ಹಿಂದೆ ನಗರದ ಸಾಫ್ಟ್‌ವೇರ್ ಇಂಜಿನಿಯರ್ ಮಹಿಳೆಯೊಬ್ಬರು ಆನ್‍ಲೈನ್‍ನಲ್ಲಿ ನೆಸ್ಟರ್ ಎಂಬ ಯುನಿವರ್ಸಿಟಿಯನ್ನು ಹುಡುಕಿ, ಫಾರ್ಮೆಟ್ ಪೇಪರ್ಸ್ ಎಲ್ಲಾ ಫಿಲ್ ಮಾಡಿ ಕಳಿಸಿದ್ದರು. 2018 ರಿಂದಲೂ ಆಗಾಗ್ಗೆ ನೆಸ್ಟರ್ ಯುನಿವರ್ಸಿಟಿ ಎಂದು ಹೇಳಿ ಕರೆ ಮಾಡಿದಾಗಲೆಲ್ಲಾ ಸುಮಾರು 4 ವರ್ಷದಿಂದಲೂ ಮಹಿಳೆ ಹಣ ಕಳುಹಿಸಿದ್ದಾರೆ. ಇದೀಗ ಆ ಹಣ ಒಟ್ಟು 75 ಲಕ್ಷ ರೂಪಾಯಿ ಆಗಿದೆ. ಇದನ್ನೂ ಓದಿ: ತಪ್ಪಾದ ಇಂಜೆಕ್ಷನ್ ನೀಡಿದ್ದರಿಂದ ಮಹಿಳೆ ಸಾವು – ನರ್ಸ್‌ ವಿರುದ್ಧ ಕುಟುಂಬಸ್ಥರ ಆಕ್ರೋಶ

    ನಾಲ್ಕು ವರ್ಷಗಳ ಬಳಿಕ 75 ಲಕ್ಷ ಹಣ ಹಾಕಿದ್ದರೂ ಕೋರ್ಸ್ ಮುಗಿದಿಲ್ಲ ಎಂದಾಗ ಯೂನಿವರ್ಸಿಟಿ ಅವರು ಒಂದು ಪಿ.ಎಚ್.ಡಿ. ಸರ್ಟಿಫಿಕೇಟ್ ಕಳಿಸಿದ್ದಾರೆ. ಆದರೆ ಈ ಸರ್ಟಿಫಿಕೇಟ್ ಫೇಕ್ ಎಂದು ಮಹಿಳೆಗೆ ಮತ್ತೊಬ್ಬರು ತಿಳಿಸಿದ್ದಾರೆ. ಆಗ ಆಕೆಗೆ ತಾನು ಮೋಸ ಹೋಗಿದ್ದು, ಅಸಲಿಗೆ ಆ ಯುನಿವರ್ಸಿಟಿಯೇ ಇರಲಿಲ್ಲ ಎಂಬ ವಿಚಾರ ಗೊತ್ತಾಗಿದೆ.

    ಮಹಿಳೆ ಮಾಡಿರುವ ಎಲ್ಲಾ ವ್ಯವಹಾರ ಕೂಡ ಬ್ಯಾಂಕ್ ಮೂಲಕ ಆಗಿದ್ದು, ಹಣವನ್ನು ಯಾರ ಖಾತೆಗೆ ಹಾಕಿದ್ದಾಳೋ ಎಂಬುವುದು ತಿಳಿದು ಬಂದಿಲ್ಲ. ಇದೀಗ ಪಿ.ಎಚ್.ಡಿ. ಸರ್ಟಿಫಿಕೇಟ್‍ಗಾಗಿ ನಾಲ್ಕು ವರ್ಷದಲ್ಲಿ 75 ಲಕ್ಷ ಹಣ ಕಳೆದುಕೊಂಡು ಫೇಕ್ ಸರ್ಟಿಫಿಕೇಟ್ ಸಿಕ್ಕ ಮೇಲೆ ತಾನು ಮೋಸ ಹೋಗಿದ್ದೇನೆ ಎಂದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಸಿಇಒ ಪರಾಗ್‌ ಅಗರ್‌ವಾಲ್‌ ಸೇರಿದಂತೆ ಪ್ರಮುಖರು ವಜಾ

    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸಿಐಡಿ, ಬೆಂಗಳೂರು ಸೈಬರ್ ಜೊತೆ ಜಿಲ್ಲಾ ಪೊಲೀಸರು ಸಂಪರ್ಕದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಫಾರಿನ್ ಯೂನಿವರ್ಸಿಟಿಯೇ ಇಲ್ಲ. ಈ ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ. ಮಾಡಿದರೆ ನಿಮಗೆ ಫಾರಿನ್ ಹೋಗಲು ಅನುಕೂಲವಾಗುತ್ತದೆ ಎಂದು ನಂಬಿಸಿ ಈ ರೀತಿ ಯಾಮಾರಿಸಿದ್ದಾರೆ ಎಂದು ಮಹಿಳೆಗೆ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಮ್ಮ ಅವಧಿಯಲ್ಲೇ ದತ್ತಪೀಠಕ್ಕೆ ಮುಕ್ತಿ: ಶೋಭಾ ಕರಂದ್ಲಾಜೆ

    ನಮ್ಮ ಅವಧಿಯಲ್ಲೇ ದತ್ತಪೀಠಕ್ಕೆ ಮುಕ್ತಿ: ಶೋಭಾ ಕರಂದ್ಲಾಜೆ

    ಚಿಕ್ಕಮಗಳೂರು: ಹೇಗೆ ರಾಮ ಮಂದಿರದ ಕಲ್ಪನೆ ಇತ್ತೋ ಅದು ಇಂದು ಸಕಾರಗೊಂಡಿದೆ. ಅದೇ ರೀತಿ ನಮ್ಮ ದತ್ತಪೀಠದಲ್ಲಿ ದತ್ತಮಂದಿರ ನಿರ್ಮಾಣವಾಗುತ್ತೆ. ನಮ್ಮ ಸರ್ಕಾರದ ಅವಧಿಯಲ್ಲೇ ಈ ಸಮಸ್ಯೆ ಬಗೆಹರಿಯುತ್ತೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

    ಜಿಲ್ಲೆಯಲ್ಲಿ ನಡೆಯುತ್ತಿರುವ ದತ್ತ ಜಯಂತಿಯ ಮೊದಲ ದಿನವಾದ ಇಂದು ಅನುಸೂಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾಮಧೇನು ಗಣಪತಿ ದೇವಾಲಯದವರೆಗೂ ಮೆರವಣಿಗೆ ಬಡಡೆಸಲಾಯಿತು. ಬಳಿಕ ಶೋಭಾ ಕರಂದ್ಲಾಜೆ ಮಾಧ್ಯಮಗಳ ಜೊತೆ ಮಾತನಾಡಿದರು.

    ಇದೊಂದು ವಿಶೇಷ ಪೀಠ. ಜಗತ್ತಿನಾದ್ಯಂತ ದತ್ತ ಭಕ್ತರಿದ್ದಾರೆ. ಆದರೆ ದತ್ತನ ಪಾದುಕೆ ಇರೋದು ನಮ್ಮ ಚಿಕ್ಕಮಗಳೂರಲ್ಲಿ. ದತ್ತ ಪೀಠ ನಮ್ಮದು, ಇದು ನಮ್ಮದಾಗಬೇಕು. ಇದು ನಮ್ಮ ಸಂಕಲ್ಪ. ನ್ಯಾಯಾಲಯದಲ್ಲಿ ಹಲವು ರೀತಿಯ ತೀರ್ಮಾನಗಳು ಬಂದಿವೆ. ನಮಗೆ ವಿಶ್ವಾಸವಿದೆ ಮುಂದಿನ ದಿನಗಳಲ್ಲಿ ದತ್ತಪೀಠ ನಮ್ಮದಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

    ಕೊರೊನಾದಂತ ಮಹಾಮಾರಿ ದೂರವಾಗಬೇಕು, ಈ ದೇಶದಲ್ಲಿ ಸುಭೀಕ್ಷೆ ನೆಲೆಸಬೇಕು. ಅದಕ್ಕಾಗಿ ದತ್ತಾತ್ರೇಯನ ಬಳಿ ಪ್ರಾರ್ಥನೆ ಸಲ್ಲಿಸುತ್ತೇವೆ. ದತ್ತಪೀಠವನ್ನ ಹಿಂದೂಗಳ ಪೀಠವೆಂದು ಘೋಷಿಸಲು ಕಾನೂನಿನ ಅಡೆತಡೆಯಿದೆ. ನಮ್ಮ ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾನೂನಿನ ಸಲಹೆಯಂತೆ ರಾಜ್ಯ ಸರ್ಕಾರ ನಡೆದುಕೊಳ್ಳೂತ್ತೆ. ನಮ್ಮ ಅವಧಿಯಲ್ಲೇ ದತ್ತಪೀಠದ ಸಮಸ್ಯೆ ಬಗೆಹರಿಯುತ್ತೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.

    ಎಲ್ಲ ಸಮಸ್ಯೆ ಹಾಗೂ ನ್ಯಾಯಾಲಯದಲ್ಲಿರುವ ಎಲ್ಲ ಅಡೆತಡೆಗಳನ್ನು ದತ್ತ ದೂರಗೊಳಿಸುತ್ತಾನೆ. ಈ ಪೀಠದಲ್ಲಿ ದತ್ತಾತ್ರೇಯ ಮಂದಿರ ನಿರ್ಮಾಣವಾಗುತ್ತೆ. ಬಾಬಾಬುಡನ್‍ಗೆ ಯಾವ ಜಾಗ ಮೀಸಲಿಟ್ಟಿದ್ಯೋ ಆ ಜಾಗದಲ್ಲಿ ಅವರಿಗೆ ಪೂಜೆಯಾಗುವಂತಹದ್ದು ಬರುವ ದಿನಗಳಲ್ಲಿ ಆಗುತ್ತೆ ಎಂದರು.

    ದತ್ತ ಪೀಠದಲ್ಲಿ ದತ್ತ ಜಯಂತಿ ಹಾಗೂ ಅನುಸೂಯ ಜಯಂತಿಯನ್ನು ಆಚರಿಸುತ್ತಿದ್ದೇವೆ. ಈ ವರ್ಷ ಕೋವಿಡ್ ಇರುವ ಕಾರಣ ಕೇವಲ ಪ್ರಮುಖರು ಮಾತ್ರ ಸಂಕೀರ್ತನಾ ಯಾತ್ರೆ ಕೈಗೊಂಡು ದತ್ತಪೀಠಕ್ಕೆ ಹೋಗಬೇಕೆಂದು ತೀರ್ಮಾನವಾಗಿದೆ. ಅನುಸೂಯ ಜಯಂತಿ ಅಂಗವಾಗಿ ರಾಜ್ಯದ ಪ್ರಮುಖ ಮಹಿಳೆಯರು ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. ಅನುಸೂಯ ಜಯಂತಿ ಹಾಗೂ ದತ್ತನ ದರ್ಶನ ಮಾಡುತ್ತೇವೆ ಎಂದರು.

    ಮೆರವಣಿಗೆ ಹಾಗೂ ದತ್ತಪೀಠದಲ್ಲಿ ನಡೆದ ಹೋಮ-ಹವನದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ನಟಿ ತಾರಾ ಹಾಗೂ ಮಾಳವಿಕ ಸೇರಿದಂತೆ ವಿವಿಧ ಮುಖಂಡರು ಪಾಲ್ಗೊಂಡಿದ್ದರು.

  • ಸಿದ್ದರಾಮಯ್ಯ ಉರ್ದು ದಿವಸ್ ಆಚರಿಸಿ, ಹಿಂದಿ ದಿವಸ್‍ಗೆ ವಿರೋಧ ಮಾಡ್ತಾರೆ: ಸಿಟಿ ರವಿ

    ಸಿದ್ದರಾಮಯ್ಯ ಉರ್ದು ದಿವಸ್ ಆಚರಿಸಿ, ಹಿಂದಿ ದಿವಸ್‍ಗೆ ವಿರೋಧ ಮಾಡ್ತಾರೆ: ಸಿಟಿ ರವಿ

    – ಕಾಂಗ್ರೆಸ್ಸಿಗರು ಗುಲಾಮಗಿರಿಯ ಮಾನಸಿಕತೆಯಿಂದ ಹೊರಬಂದಿಲ್ಲ

    ಚಿಕ್ಕಮಗಳೂರು: ಸಿದ್ದರಾಮಯ್ಯ ಉರ್ದು ದಿವಸ್ ಆಚರಣೆ ಮಾಡಿ, ಹಿಂದಿ ದಿವಸ್‍ಗೆ ವಿರೋಧ ಮಾಡುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು ವ್ಯಂಗ್ಯ ಮಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು. ದಾಸ್ಯದ ನೆನಪು ಅಳಿಸೋದಕ್ಕೆ ಕಾಂಗ್ರೆಸ್ ಹೈದ್ರಾಬಾದ್ ಕರ್ನಾಟಕ ಎಂದೇ ಹೇಳುತ್ತಿದ್ದರು. ಕಾಂಗ್ರೆಸ್ಸಿಗರು ಗುಲಾಮಗಿರಿಯ ಮಾನಸಿಕತೆಯಿಂದ ಹೊರಬಂದಿರಲಿಲ್ಲ, ಅದಕ್ಕೆ ಬಿಜೆಪಿ ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟಿತ್ತು ಎಂದು ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡಿದರು.

    ಇದೇ ವೇಳೆ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಸಿಟಿ ರವಿ, ಸಿದ್ದರಾಮಯ್ಯ ಉರ್ದು ದಿವಸ್ ಆಚರಣೆ ಮಾಡಿ ಬರುತ್ತಾರೆ. ಆದರೆ ಹಿಂದಿ ದಿವಸ್‍ಗೆ ವಿರೋಧ ಮಾಡುತ್ತಾರೆ ಇದು ನಾಟಕ ಅಲ್ವಾ? ಟಿಪ್ಪು ಜಯಂತಿಯ್ನ ಕಾಂಗ್ರೆಸ್ ವೈಭವಿಸಕರಿಸಿ ಆಚರಿಸುತ್ತೆ. ಕಾಂಗ್ರೆಸ್‍ಗೆ ಕನ್ನಡದ ಬಗ್ಗೆ ಮಾತನಾಡೋ ನೈತಿಕತೆ ಎಲ್ಲಿದೆ. ಕನ್ನಡದ ಉಳಿವಿಗಾಗಿ ಮಾಡುವ ಎಲ್ಲಾ ಪ್ರಯತ್ನಕ್ಕೂ ನಮ್ಮ ಬೆಂಬಲವಿದೆ. ಕಾಂಗ್ರೆಸ್ ಹೋರಾಟ ಕನ್ನಡದ ಉಳಿವಿಗೋ, ಹಿಂದಿ ದ್ವೇಷಕ್ಕೋ ಎಂದು ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.

    ಹಿಂದಿ ಕಾರಣಕ್ಕೆ ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆ ಬಂದ್ ಆಗಿಲ್ಲ. ಇಂಗ್ಲಿಷ್ ಕಾರಣಕ್ಕೆ ಸಾವಿರಾರು ಶಾಲೆ ಬಂದ್ ಆಗಿವೆ. ಇಂಗ್ಲಿಷ್ ಓಕೆ ಎಂದು ಹಿಂದಿ ದ್ವೇಷಿಸುವ ನಿಮ್ಮ ಉದ್ದೇಶವೇನು? ಹಿಂದಿಯನ್ನು ವಿರೋಧಿಸುವವರು ಸಂವಿಧಾನ, ಅಂಬೇಡ್ಕರ್ ಅವರನ್ನು ವಿರೋಧ ಮಾಡುತ್ತಾರೆ. ಅವತ್ತು ಒಪ್ಪಿಕೊಂಡ ಕಾಂಗ್ರೆಸ್ ಇವತ್ತು ಬಣ್ಣ ಬದಲಿಸಿದೆ ಅಂದರೆ ಅದು ಗೋಸುಂಬೆತನ ಎಂದು ಕಿಡಿಕಾರಿದ್ದಾರೆ.

  • ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಮಳೆ – ಕೊಡಗು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್

    ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಮಳೆ – ಕೊಡಗು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್

    ಧಾರವಾಡ/ಮಡಿಕೇರಿ: ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಕಾವೇರಿ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ. ಒಂದೆಡೆ ಕೊರೊನಾ ಭೀತಿ ಹಾಗೂ ಮತ್ತೊಂದೆಡೆ 2 ವರ್ಷದಿಂದ ಪ್ರಾಕೃತಿಕ ವಿಕೋಪದಿಂದ ನಲುಗಿಹೋಗಿದ್ದ ಕೊಡಗಿನಲ್ಲಿ ಮತ್ತೆ ಮಳೆ ಆರ್ಭಟ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಭೀತಿಯನ್ನು ಮೂಡಿಸಿದೆ. ಅಲ್ಲದೇ ಹಾರಂಗಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದೆ.

    ಕೊಡಗು ಜಿಲ್ಲೆಯಲ್ಲಿ ಅಲ್ಲಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಹವಾಮಾನ ಇಲಾಖೆಯ ಮುನ್ಸೂಚನೆ ಮೇರೆಗೆ ಜಿಲ್ಲಾಡಳಿತ ಯಲ್ಲೋ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರೀ ಮಳೆ ಸಾಧ್ಯತೆ. ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದ್ದು, ಜಿಲ್ಲೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುವ ಸಂಭವಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಸಂಜೆಯಿಂದ ನಾಳೆವರೆಗೆ 115.6 ಮಿ.ಮೀಟರ್ ನಿಂದ 204.4 ಮಿ.ಮೀಟರ್ ಹಾಗೂ ನಂತರದ ದಿನಗಳಲ್ಲಿ 64.5 ಮಿ.ಮೀಟರ್ ನಿಂದ 115.5 ಮಿ.ಮೀಟರ್ ಪ್ರಮಾಣದ ಮಳೆ ಆಗಲಿದೆ ಎಂದು ತಿಳಿಸಿದೆ. ಅಲ್ಲದೇ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದೆ.

    ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾದರೆ, ಜಿಲ್ಲಾಡಳಿತ ನೀಡಿರುವ ತುರ್ತು ದೂರವಾಣಿ ಸಂಖ್ಯೆ 08272-221077 ಸಂಪರ್ಕಿಸಲು ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಮನವಿ ಮಾಡಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಹಲವೆಡೆ ಬೆಳ್ಳಂಬೆಳಗ್ಗೆ ಮಳೆ ಆರಂಭವಾಗಿದ್ದು, ಸೋನೆ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಮಲೆನಾಡಿನಲ್ಲೂ ರಾತ್ರಿಯಿಂದ ಎಡಬಿಡದೆ ಧಾರಾಕಾರ ಮಳೆ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ, ಕೊಪ್ಪ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಭಾರೀ ಮಳೆ ಹಿನ್ನೆಲೆ ಮಲೆನಾಡಿನ ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಧಾರಾಕಾರ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

    ಧಾರವಾಡ ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾ ರಣಕೇಕೆ ಹಾಕುತ್ತಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. ಹೀಗಾಗಿ ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಜಿಲ್ಲಾಡಳಿತ ಲಾಕ್‍ಡೌನನ್ನು ಕಠಿಣಗೊಳಿಸಲು ಮುಂದಾಗಿದೆ. ಜನರು ಮಾತ್ರ ಧಾರಾಕಾರ ಮಳೆಯನ್ನು ಸಹ ಲೆಕ್ಕಿಸದೇ ಖರೀದಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

  • ಕೊರೊನಾ ಫಿಯರ್ ಮಧ್ಯೆಯೂ ಮದ್ಯ ಮಾರಾಟ – ಗ್ರಾಮಸ್ಥರಿಂದ ತರಾಟೆ

    ಕೊರೊನಾ ಫಿಯರ್ ಮಧ್ಯೆಯೂ ಮದ್ಯ ಮಾರಾಟ – ಗ್ರಾಮಸ್ಥರಿಂದ ತರಾಟೆ

    ಚಿಕ್ಕಮಗಳೂರು: ಇಡೀ ದೇಶವೇ ಕೊರೊನಾ ಫಿಯರ್ ನಿಂದ ಕಂಗಾಲಾಗಿದ್ರೆ, ತಾಲೂಕಿನ ಕರಿಸಿದ್ದನಹಳ್ಳಿಯಲ್ಲಿ ಈ ಭಯವನ್ನೇ ಅಡ್ವಾಂಟೇಜ್ ಮಾಡಿಕೊಂಡಿದ್ದಾರೆ.

    ವೈರಸ್ ಭಯದಿಂದ ಜನ ಮನೆಯಿಂದ ಹೊರಬಾರದೆ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕರಿಸಿದ್ದನಹಳ್ಳಿಯ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಮದ್ಯ ಸಿಗುತ್ತಿದೆ ಎಂದು ಗೊತ್ತಾದ ಕೂಡಲೇ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಕದ್ದು-ಮುಚ್ಚಿ ಮದ್ಯ ಖರೀದಿಸೋದಕ್ಕೆ ಬರುತ್ತಿದ್ದರು.

    ಜನ ಗುಂಪಾಗಿ ಸೇರಬಾರದು ಎಂದು ದೇಶದ ಪ್ರಧಾನಿಯೇ ಮನವಿ ಮಾಡಿಕೊಂಡು ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ್ದಾರೆ. ಹೀಗಿರುವಾಗ 25-30 ಮಂದಿ ಮದ್ಯ ಖರೀದಿಸುವುದಕ್ಕೆ ಕರಿಸಿದ್ದನಹಳ್ಳಿಯಲ್ಲಿ ಜಮಾಯಿಸುತ್ತಿದ್ದರು. ಕೆಲವರು ಕುಡಿದು ಗಲಾಟೆ ಮಾಡುತ್ತಿದ್ದರು. ಇದರಿಂದ ಸ್ಥಳಿಯರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿ, ಕರಿಸಿದ್ದನಹಳ್ಳಿ ಜನ ಕೆಂಗೇನಹಳ್ಳಿ ಗೇಟ್ ಬಳಿ ಗ್ರಾಮಕ್ಕೆ ಮದ್ಯ ಖರೀದಿಸಲು ಬರುತ್ತಿದ್ದ ಜನರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾರ್ಗ ಮಧ್ಯೆಯೇ ಅಡ್ಡಗಟ್ಟಿ ಕೊರೊನಾದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗ್ರಾಮಸ್ಥರ ವಿರುದ್ಧ ಗ್ರಾಮಸ್ಥರೇ ತಿರುಗಿ ಬಿದ್ದಿದ್ದು ಮದ್ಯ ಮಾರಾಟ ಮಾಡದಂತೆ ತಾಕೀತು ಮಾಡಿದ್ದಾರೆ.

  • ಸರ್ಕಾರದ್ದು ಒಡೆದು ಆಳುವ ನೀತಿ – ವಿದ್ಯಾರ್ಥಿಗಳ ಆಕ್ರೋಶ

    ಸರ್ಕಾರದ್ದು ಒಡೆದು ಆಳುವ ನೀತಿ – ವಿದ್ಯಾರ್ಥಿಗಳ ಆಕ್ರೋಶ

    ಚಿಕ್ಕಮಗಳೂರು: ಕಳೆದ ಶೈಕ್ಷಣಿಕ ವರ್ಷದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಯೋಜನೆಯನ್ನ ಜಾರಿಗೆ ತಂದ ರಾಜ್ಯ ಸರ್ಕಾರ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವುದಾಗಿ ಹೇಳಿತ್ತು. ಆದರೆ ಈಗ ಸರ್ಕಾರ ಕೇವಲ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‍ಟಾಪ್ ನೀಡಲು ಮುಂದಾಗಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.

    ಸರ್ಕಾರ ವಿದ್ಯಾರ್ಥಿಗಳ ಮಧ್ಯೆ ಬೇಧ-ಭಾವ ಮಾಡುತ್ತಿರೋದು ಸರಿಯಲ್ಲ ಎಂದು ಜಿಲ್ಲೆಯ ಕೊಪ್ಪ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ಆರೋಪಿಸಿ ಪ್ರತಿಭಟಿಸಿದ್ದಾರೆ. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿದ್ದಾರೆ.

    ಕಾಲೇಜು ಪ್ರಾಂಶುಪಾಲರ ಒಪ್ಪಿಗೆ ಪಡೆದ ವಿದ್ಯಾರ್ಥಿಗಳು ತಾಲೂಕು ಕಛೇರಿ ಮುಂಭಾಗ ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದರು. ಪ್ರತಿಭಟನೆಯ ಬಳಿಕ ನ್ಯಾಯಕ್ಕಾಗಿ ಒತ್ತಾಯಿಸಿದ ವಿದ್ಯಾರ್ಥಿಗಳು ಶೀರಸ್ತೆದಾರರ ಮೂಲಕ ಮನವಿ ಸಲ್ಲಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

  • ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಚಿಕ್ಕಮಗಳೂರಲ್ಲಿ ಅನಾವರಣ

    ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಚಿಕ್ಕಮಗಳೂರಲ್ಲಿ ಅನಾವರಣ

    ಚಿಕ್ಕಮಗಳೂರು : ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ ಆತ್ಮಹತ್ಯೆಗೆ ಶರಣಾದಾಗ ಇಡೀ ರಾಜ್ಯ ಕಂಬನಿ ಮಿಡಿದಿತ್ತು. ವಿಷಯ ಕೇಳಿ ಬೆಳೆಗಾರರಿಗೆ ಹಾಗೂ ಉದ್ಯಮಕ್ಕೆ ಸಿಡಿಲು ಬಡಿದಂತಾಗಿತ್ತು. ದೇಶದ ಕಾಫಿಗೆ ಅಂತರಾಷ್ಟ್ರಿಯ ಮಟ್ಟದ ಖ್ಯಾತಿ ತಂದಿದ್ದು ಸಿದ್ಧಾರ್ಥ್ ಹೆಗ್ಡೆ. ಲಕ್ಷಾಂತರ ಜನರಿಗೆ ಅನ್ನದಾತರಾಗಿದ್ದ ಅವರ ಅಗಲಿಕೆಯನ್ನ ಇಂದಿಗೂ ಜನಸಾಮಾನ್ಯರಿಗೆ ಅರಗಿಸಿಕೊಳ್ಳಲಾಗ್ತಿಲ್ಲ. ಕಾಫಿಯ ದರ ಏರಿಳಿತ ಕಂಡಾಗ ಸಿದ್ಧಾರ್ಥ್ ಹೆಗ್ಡೆ ಇರಬೇಕಿತ್ತು ಅನ್ನೋರು ಇಂದಿಗೂ ಸಾವಿರಾರು ಜನ. ವಿಧಿಲಿಖಿತ ಅವರಿಂದು ನಮ್ಮೊಂದಿಗಿಲ್ಲ. ಆದ್ರೆ ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದಿದ್ರು ಮಾನಸಿಕವಾಗಿ ಪ್ರತಿಯೊಬ್ಬ ಕೂಲಿ ಕಾರ್ಮಿಕನ ಹೃದಯದಲ್ಲೂ ಚಿರಸ್ಥಾಯಿ. ಹಾಗಾಗಿಯೇ ಅವರ ನೆನಪಿಗಾಗಿ ವಿಶ್ವದ ಮೊದಲ ಜಿ.ವಿ.ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಕಾಫಿನಾಡಲ್ಲಿ ಅನಾವರಣಗೊಂಡಿದೆ.

    ಬದುಕಿದ್ದಾಗಲೇ ಸತ್ತಿರೋ ಕೊಟ್ಯಾಂತರ ಜನರ ಮಧ್ಯೆ, ಸತ್ತ ಮೇಲೂ ಬದುಕಿರೋರಲ್ಲಿ ಸಿದ್ಧಾರ್ಥ್ ಹೆಗ್ಡೆ ಕೂಡ ಒಬ್ರು. ಅವರ ಸರಳತೆ ಬೆರಗಾಗದವರೇ ಇಲ್ಲ. ಕಾಫಿಯ ಬಗ್ಗೆ ಅವರಿಗಿದ್ದ ಜ್ಞಾನ. ಕೊಡುತ್ತಿದ್ದ ಸಲಹೆಗಳನ್ನ ಕಾಫಿನಾಡಿನ ಜನ ಇಂದಿಗೂ ಮರೆತಿಲ್ಲ. ಹಾಗಾಗಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಸಿಗೋಡು ಹಾಗೂ ದೇವಗೋಡು ಗ್ರಾಮಸ್ಥರು ತಮ್ಮೂರಿನ ಸರ್ಕಲ್ ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಎಂದು ನಾಮಫಲಕ ನೆಟ್ಟು ನಾಮಕರಣ ಮಾಡಿಕೊಂಡಿದ್ದಾರೆ. ಸಿದ್ಧಾರ್ಥ್ ಹೆಗ್ಡೆ ಎಂದೇ ನಾಮಕರಣಗೊಂಡ ದೇಶದ ಮೊದಲ ವೃತ್ತ ಇದು. ಅವರಿಂದ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉಪಯೋಗವಾಗಿದೆ. ಅವರ ಮೇಲಿನ ಅಭಿಮಾನ, ಗೌರವಕ್ಕೆ ಕೊನೆ ಇಲ್ಲ. ಹಾಗಾಗಿ ಅವರ ಹೆಸರು ಶಾಶ್ವತವಾಗಿರಲೆಂದು ನಮ್ಮೂರಿನ ಸರ್ಕಲ್‍ಗೆ ಅವರ ಹೆಸರಿಟ್ಟಿದ್ದೇವೆ ಎಂದು ಕಾಫಿ ಬೆಳೆಗಾರರು ಹೇಳುತ್ತಾ ಭಾವುಕರಾಗುತ್ತಾರೆ. ಇದನ್ನೂ ಓದಿ:  ಯೋಧನಾಗುವ ಆಸೆ ಕಂಡಿದ್ದ ಸಿದ್ಧಾರ್ಥ್ ಕಾಫಿ ಕಿಂಗ್ ಆದ ಕಹಾನಿ

    ಪ್ರಿಯದರ್ಶಿನಿ ಎಸ್ಟೇಟ್ ಅಚ್ಚುಮೆಚ್ಚು : ಪ್ರಿಯದರ್ಶಿನಿ ಎಸ್ಟೇಟ್ ಅಂದ್ರೆ ಸಿದ್ಧಾರ್ಥ್ ಹೆಗ್ಡೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಯಾಕಂದ್ರೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚೇತನಹಳ್ಳಿಯಲ್ಲಿದ್ದ ಅವರ ಸ್ವಂತ ತೋಟ ಬಿಟ್ಟು ಅವರೇ ಖರೀದಿಸಿದ ಮೊದಲ ತೋಟ ಅಂದ್ರೆ ಬಾಳೆಹೊನ್ನೂರು ಬಳಿಯ ಪ್ರಿಯದರ್ಶಿನಿ ಎಸ್ಟೇಟ್. ಅವರಿಗೆ ಈ ತೋಟದ ಮೇಲೆ ಒಲವು ಜಾಸ್ತಿ. ಇಲ್ಲಿ ತೋಟ ಮಾಡಿದಾಗ ಸ್ಥಳೀಯರ ಜೊತೆ ಸಾಮಾನ್ಯನಂತೆ ಬೆರೆಯುತ್ತಿದ್ದರು. ಸ್ಥಳೀಯ ನೂರಾರು ಜನರಿಗೆ ಕೆಲಸ ಕೊಟ್ಟಿದ್ದರು. ಕೂಲಿ ಜೊತೆ ಕೂಲಿಯಾಗೇ ಮಾತನಾಡುತ್ತಿದ್ದರು. ಸರಳತೆಗೆ ಮತ್ತೊಂದು ಹೆಸರೇ ಸಿದ್ಧಾರ್ಥ್ ಹೆಗ್ಡೆ. ಅವರಿಂದ ನಮಗೆ ಸಾಕಷ್ಟು ಸಹಾಯವಾಗಿದೆ. ಹಾಗಾಗಿ, ಅವರ ಋಣ ತೀರಿಸಲು ನಮ್ಮೂರಿನ ಸರ್ಕಲ್‍ಗೆ ಅವರ ಹೆಸರಿಟ್ಟಿದ್ದೇವೆ ಅನ್ನೋದು ಸ್ಥಳೀಯರ ಮಾತು. ಇದನ್ನೂ ಓದಿ: ಸಿದ್ಧಾರ್ಥ್ ‘ಕಾಫಿರಾಜ’ನಾದ ಕಥೆಯನ್ನು ಓದಿ

     

    ಸಹ್ಯಾದ್ರಿ ಬೆಳೆಗಾರರ ಸಂಘದ ಅಧ್ಯಕ್ಷ ರಂಗನಾಥ್ ನಾಮಫಲಕವನ್ನ ಅನಾವರಣಗೊಳಿಸಿದರು. ಉಪಾಧ್ಯಕ್ಷ ಕೆ.ಟಿ.ವೆಂಕಟೇಶ್ ಸ್ವಾಗತಿಸಿದರು. ಸಂಘದ ಕಾರ್ಯಕಾರಿಣಿ ನಿರ್ದೇಶಕ ಸಂತೋಷ್ ಅರೆನೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸೀಗೋಡು-ದೇವಗೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಗೂ ಕಾಫಿ ಬೆಳೆಗಾರರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿ, ಕೇಂದ್ರದ ವಿರುದ್ಧ ಹರಿಹಾಯ್ದ ದೀದಿ

  • ದನದ ಕೊಟ್ಟಿಗೆಯಲ್ಲಿದ್ದ 14 ಅಡಿಯ ಬೃಹತ್ ಕಾಳಿಂಗ ಸರ್ಪ ಸೆರೆ

    ದನದ ಕೊಟ್ಟಿಗೆಯಲ್ಲಿದ್ದ 14 ಅಡಿಯ ಬೃಹತ್ ಕಾಳಿಂಗ ಸರ್ಪ ಸೆರೆ

    ಚಿಕ್ಕಮಗಳೂರು: ದನ ಕೊಟ್ಟಿಗೆಯಲ್ಲಿ ವಾಸವಿದ್ದ 14 ಅಡಿಯ ಬೃಹತ್ ಸರ್ಪವನ್ನ ಸೆರೆ ಹಿಡಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕೆರೆಮನೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ತಿಪ್ಪಯ್ಯ ಎಂಬುವರ ಮನೆಯ ಪಕ್ಕದ ಕೊಟ್ಟಿಗೆಯಲ್ಲಿದ್ದ ಹಸುವನ್ನ ಹೊರಗೆ ಕಟ್ಟಲು ತರುವಾಗ ಕೊಟ್ಟಿಗೆಯಲ್ಲಿ ಕಾಳಿಂಗ ಬುಸುಗುಟ್ಟುವ ಶಬ್ದ ಕೇಳಿ ಹುಡುಕಿದ್ದಾರೆ. ಈ ವೇಳೆ ಬೃಹತ್ ಸರ್ಪವನ್ನ ನೋಡಿ ಭಯದಿಂದ ಹೊರ ಓಡಿದ್ದು ಕೂಡಲೇ ಸ್ಥಳಿಯ ಉರಗತಜ್ಞ ಸ್ನೇಕ್ ಹರೀಂದ್ರ ಅವರಿಗೆ ವಿಷಯ ಮುಟ್ಟಿಸಿದ್ದಾರೆ.

    ಮಾಹಿತಿ ಪಡೆದು ಸ್ಥಳಕ್ಕೆ ಬಂದ ಹರೀಂದ್ರ ಸುಮಾರು ಒಂದೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದ ಕಾಳಿಂಗವನ್ನ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿಯುವಾಗ ಕಾಳಿಂಗ ಎರಡು ಬಾರಿ ಹರೀಂದ್ರ ಮೇಲೆ ಬಾಯ್ತೆರೆದು ದಾಳಿಗೆ ಮುಂದಾಗಿದೆ. ಆದರೆ, ಒಂದೂವರೆ ಗಂಟೆಯ ಬಳಿಕ ಕಾಳಿಂಗ ಸರ್ಪವನ್ನು ಸೆರೆಹಿಡಿದು ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.

  • ಎಲ್ಲಾ ಸಿನಿಮಾದವರು ಈಗ ರಾಜ್ಯದ ಜನತೆಯ ಬಗ್ಗೆ ಬಂದಿದ್ದಾರೆ, ಬರಲಿ ಬಿಡಿ ಸಂತೋಷ: ಸಿಎಂ ಎಚ್‍ಡಿಕೆ

    ಎಲ್ಲಾ ಸಿನಿಮಾದವರು ಈಗ ರಾಜ್ಯದ ಜನತೆಯ ಬಗ್ಗೆ ಬಂದಿದ್ದಾರೆ, ಬರಲಿ ಬಿಡಿ ಸಂತೋಷ: ಸಿಎಂ ಎಚ್‍ಡಿಕೆ

    ಚಿಕ್ಕಮಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅವರು ಸ್ಪರ್ಧೆ ಮಾಡುವುದನ್ನು ಖಚಿತ ಪಡಿಸುತ್ತಿದಂತೆ ಇತ್ತ ಸಿಎಂ ಕುಮಾರಸ್ವಾಮಿ ಅವರು ಸುಮಲತಾ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಜಿಲ್ಲೆಯ ಶೃಂಗೇರಿಯ ಶಾರದಂಬೆಯ ದರ್ಶನಕ್ಕೆ ಆಗಮಿಸಿದ್ದ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಚುನಾವಣೆ ಎಂಬ ಯುದ್ಧ ಗೆಲ್ಲಲು ಶಾರದಾಂಬೆಯ ಆರ್ಶೀವಾದ ಬೇಕು. ಇಂದು ತಾಯಿ ಸನ್ನಿದಿಗೆ ಕೇವಲ ನಿಖಿಲ್ ಒಬ್ಬರಿಗಾಗಿ ಬಂದಿಲ್ಲ. 28 ಕ್ಷೇತ್ರದ ಜೆಡಿಎಸ್, ಕಾಂಗ್ರೆಸ್ ಮೈತ್ರಿಯ ಎಲ್ಲಾ ಅಭ್ಯರ್ಥಿಗಳ ಗೆಲುವಿಗಾಗಿ ಬಂದಿದ್ದೇನೆ ಎಂದರು.

    ನಮ್ಮ ಕುಟುಂಬದ ದೇವಿಯ ಮೇಲೆ ನಂಬಿಕೆಯನ್ನು ಹೊಂದ್ದಿದ್ದು, ಈ ಹಿನ್ನಲೆಯಲ್ಲಿ ಶೃಂಗೇರಿ ತಾಯಿಯ ಆರ್ಶೀವಾದ ಪಡೆಯಲು ಬಂದಿದ್ದೇನೆ. ಜಿಲ್ಲೆಯಲ್ಲಿ ಪ್ರಮೋದ್ ಮಧ್ವರಾಜ್ ಬೇರೆಯವರಲ್ಲ, ಅವರು ನಮ್ಮವರೇ ಕುಳಿತು ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು. ಇದೇ ವೇಳೆ ಸುಮಲತಾ ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸುಮಲತಾ ಅವರ ಸ್ಪರ್ಧೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲಾ ಸಿನಿಮಾದವರು ಈಗ ರಾಜ್ಯದ ಜನತೆಯ ಬಗ್ಗೆ ಬಂದಿದ್ದಾರೆ. ಬರಲಿ ಬಿಡಿ ಸಂತೋಷ. ಮಂಡ್ಯ ಜಿಲ್ಲೆಯ ಜನರ ಪರವಾಗಿ ಏನೇನು ಮಾಡುತ್ತಾರೆ ನೋಡೋಣ ಎಂದು ಟಾಂಗ್ ನೀಡಿದರು.

    ಇತ್ತ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ ಸುಮಲತಾ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ವೈಯಕ್ತಿಕವಾಗಿ ಯಾರಿಗೂ ನೋಯಿಸುವಂತಹ ಮಾತುಗಳನ್ನು ಹೇಳುವುದು ಬೇಡ ಎಂದು ಮನವಿ ಮಾಡಿಕೊಂಡರು. ಅಲ್ಲದೇ ರಾಜಕಾರಣ ಇರಬಹುದು ಅಥವಾ ಚುನಾವಣೆ ಇರಬಹುದು. ಜನಕ್ಕೆ ಏನೇನು ಒಳ್ಳೆಯದನ್ನು ಮಾಡಬೇಕು ಎಂಬುದರ ಬಗ್ಗೆ ಮಾತಾಡೋಣ. ಅದನ್ನು ಬಿಟ್ಟು ವೈಯಕ್ತಿಕವಾಗಿ ನೋವು ಕೊಡುವಂತಹ ಮಾತುಗಳು ಬೇಕಾಗಿಯೇ ಇಲ್ಲ. ಯುವಕರಿಗೆ ಮಾರ್ಗದರ್ಶನವಾಗಿ ನಿಂತುಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಅಂದ್ರು.