Tag: Chikkmagalur

  • ನುಂಗಿದ್ದ ಮೂರು ಮೊಟ್ಟೆಗಳನ್ನು ನಾಗರಹಾವು ಬಾಯಿಂದ ಹೊರ ಹಾಕೋದನ್ನು ನೋಡಿ

    ನುಂಗಿದ್ದ ಮೂರು ಮೊಟ್ಟೆಗಳನ್ನು ನಾಗರಹಾವು ಬಾಯಿಂದ ಹೊರ ಹಾಕೋದನ್ನು ನೋಡಿ

    ಚಿಕ್ಕಮಗಳೂರು: ಮೂರು ಮೊಟ್ಟೆಗಳನ್ನು ತಿಂದ ಮೇಲೆ ಮುಂದಕ್ಕೆ ಹೋಗದೇ ಒದ್ದಾಡುತ್ತಿದ್ದ ನಾಗರ ಹಾವನ್ನು ಉರಗತಜ್ಞರು ಯಶಸ್ವಿಯಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿರುವ ಚಂದ್ರು ಎಂಬವರ ಮನೆಗೆ ಆಹಾರ ಅರಸಿ ನಾಗರಹಾವೊಂದು ಬಂದಿತ್ತು. ಬಂದಿದ್ದ ಹಾವು ಅಡುಗೆಗೆ ತಂದಿಟ್ಟಿದ್ದ ಮೂರು ಕೋಳಿ ಮೊಟ್ಟೆಗಳನ್ನು ಸೇವಿಸಿ ಮುಂದಕ್ಕೆ ಚಲಿಸಲು ಆಗದೇ ಮನೆಯಲ್ಲೇ ಬೀಡುಬಿಟ್ಟಿತ್ತು.

    ಇದರಿಂದ ಭಯಗೊಂಡ ಮನೆಯವರು ಕೂಡಲೇ ಸ್ನೇಕ್ ಆರಿಫ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಆರಿಫ್ ಮನೆಯಿಂದ ಹೊರ ತಂದು ಅಂಗಳದಲ್ಲಿ ಆಟವಾಡಿಸುವ ವೇಳೆ ಹಾವು ತಾನು ನುಂಗಿದ್ದ ಮೂರು ಕೋಳಿ ಮೊಟ್ಟೆಗಳನ್ನು ಹೊರ ಹಾಕಿದೆ.

    ಈ ದೃಶ್ಯ ನೋಡಿ ಅಲ್ಲೇ ಇದ್ದ ಸ್ಥಳೀಯರು ಅಪರೂಪದ ಘಟನೆ ಕಂಡು ಆಶ್ಚರ್ಯ ಪಟ್ಟಿರುವುದಲ್ಲದೆ, ತಮ್ಮ ಮೊಬೈಲ್ ನಲ್ಲಿ ಹಿಡಿದಿದ್ದು ವಿಡಿಯೋ ವೈರಲ್ ಆಗಿದೆ. ಹಾವನ್ನು ಸೆರೆ ಹಿಡಿದ ಸ್ನೇಕ್ ಆರಿಫ್ ಸುರಕ್ಷಿತವಾಗಿ ಚಾರ್ಮಾಡಿ ಕಾಡಿಗೆ ಬಿಟ್ಟಿದ್ದಾರೆ.

    https://www.youtube.com/watch?v=xeNn7czYHvA

     

  • ನೀರಿಗಾಗಿ ಎರಡು ಗ್ರಾಮಗಳ ನಡುವೆ ಗಲಾಟೆ-ಉದ್ರಿಕ್ತರ ಮೇಲೆ ಲಾಠಿ ಚಾರ್ಜ್

    ನೀರಿಗಾಗಿ ಎರಡು ಗ್ರಾಮಗಳ ನಡುವೆ ಗಲಾಟೆ-ಉದ್ರಿಕ್ತರ ಮೇಲೆ ಲಾಠಿ ಚಾರ್ಜ್

    ಚಿಕ್ಕಮಗಳೂರು: ಕೆರೆ ನೀರಿಗಾಗಿ ಎರಡು ಗ್ರಾಮಗಳ ನಡುವೆ ಮಾರಾಮಾರಿ ನಡೆದಿದ್ದು, ಪ್ರತಿಭಟನಾನಿರತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.

    ಸಖರಾಯಪಟ್ಟಣದ ಅಯ್ಯನಕೆರೆ ನೀರನ್ನು ಜಿಗಣೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಮುದ್ರ ಕೆರೆಗೆ ಹರಿಸಬಾರದೆಂದು ಸಖರಾಯಪಟ್ಟಣ ಗ್ರಾಮಸ್ಥರು ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173 ನ್ನು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಎರಡೂ ಗ್ರಾಮಗಳ ಗ್ರಾಮಸ್ಥರ ನಡುವೆ ಗಲಾಟೆ ನಡೆದು, ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

    ಪ್ರಸ್ತುತ ತಹಶೀಲ್ದಾರ್ ಭಾಗ್ಯ ಅವರು ಈ ಪ್ರದೇಶದಲ್ಲಿ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿ ಮಾಡಿದ್ದಾರೆ. ಇದೀಗ ಸಖರಾಯಪಟ್ಟಣ ಸುತ್ತಮುತ್ತ ಬಿಗಿ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಗಣೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಮುದ್ರ ಕೆರೆಗೆ ನೀರು ಹರಿಸಿದರೆ ಬೋರ್‍ವೆಲ್‍ಗಳು ಅಂತರ್ಜಾಲ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಮತ್ತು ಹೊಲಗದ್ದೆಗಳಿಗೂ ನೀರು ಲಭಿಸಲಿದೆ ಎಂದು ಗುರುವಾರ ಜಿಗಣೇಹಳ್ಳಿಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದನ್ನು ವಿರೋಧಿಸಿ ಸಖರಾಯಪಟ್ಟಣ ಗ್ರಾಮಸ್ಥರು ಕಡೂರು-ಮಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.

    https://www.youtube.com/watch?v=AmB7U5-ug8o

  • ಒಂದೇ ದಿನ ದತ್ತ ಜಯಂತಿ, ಈದ್-ಮಿಲಾದ್: ಶಾಂತಿ-ಸುವ್ಯವಸ್ಥೆ ಕಾಪಾಡಲು ಚಿಕ್ಕಮಗಳೂರು ಪೊಲೀಸರ ವಿನೂತನ ಪ್ರಯತ್ನ

    ಒಂದೇ ದಿನ ದತ್ತ ಜಯಂತಿ, ಈದ್-ಮಿಲಾದ್: ಶಾಂತಿ-ಸುವ್ಯವಸ್ಥೆ ಕಾಪಾಡಲು ಚಿಕ್ಕಮಗಳೂರು ಪೊಲೀಸರ ವಿನೂತನ ಪ್ರಯತ್ನ

    ಚಿಕ್ಕಮಗಳೂರು: ದತ್ತ ಜಯಂತಿ ಹಾಗೂ ಈದ್-ಮಿಲಾದ್ ಒಂದೇ ದಿನ ಬಂದಿರೋದ್ರಿಂದ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

    ಈಶ್ವರ್ ಅಲ್ಲಾ ತೇರೋ ನಾಮ್, ಸಬಕೋ ಸನ್ಮತಿ ದೇ ಭಗವಾನ್ ಎಂದು ಮಹಾತ್ಮ ಗಾಂಧಿಜೀ ಹಿಂದೂ ಹಾಗೂ ಮುಸ್ಲಿಂ ಯುವಕರನ್ನು ತಬ್ಬಿಕೊಂಡಿರೋ ಕಾರ್ಟೂನ್ ಸೇರಿದಂತೆ, ನೀವು ಪರಿಶೀಲಿಸದೆ ಫಾವರ್ಡ್ ಮಾಡೋ ಒಂದೊಂದು ಸಂದೇಶ ಕೂಡ ಮಾರಕಾಯುಧಗಳಷ್ಟೇ ಅಪಾಯಕಾರಿ ಹಾಗೂ ದೇಶ ಗೆಲ್ಲೋದಕ್ಕೆ ಮತೀಯ ಪಾರ್ಟ್ನ ರ್‍ಶಿಪ್ ಬೇಕು ಎಂಬ ಸಂದೇಶಗಳುಳ್ಳ ಬೋರ್ಡ್ ಮಾಡಿಸಿ ಚಿಕ್ಕಮಗಳೂರು ನಗರದ ಪ್ರಮುಖ ಭಾಗಗಳಲ್ಲಿ ಹಾಕಲಾಗಿದೆ.

    ದತ್ತ ಜಯಂತಿಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಅತೀ ಸೂಕ್ಷ್ಮವಾಗಿದ್ದು, ಮೂರು ದಿನಗಳ ಕಾಲ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಿಲಾಗಿದೆ. 4 ಸಾವಿರ ಪೊಲೀಸರ ಸರ್ಪಗಾವಲಿದ್ದರೂ ಪೊಲೀಸ್ ಇಲಾಖೆ ಈ ರೀತಿಯ ಸಂದೇಶಗಳ ಮೂಲಕ ಸಮಾಜದಲ್ಲಿ ಶಾಂತಿ ಕಾಪಾಡಿ ದತ್ತ ಜಯಂತಿ ಹಾಗೂ ಈದ್- ಮಿಲಾದ್ ಕಾರ್ಯಕ್ರಮವನ್ನು ಶಾಂತಿಯುತವಾಗಿ ಅಂತ್ಯಗೊಳಿಸಲು ಪ್ರಯತ್ನಿಸುತ್ತಿದೆ.

  • ದಟ್ಟ ಕಾನನದ ಮಧ್ಯೆ ಅವಿತಿದೆ ಅದ್ಭುತ ಫಾಲ್ಸ್- ನೀವೂ ಒಂದು ಬಾರಿ ಭೇಟಿ ನೀಡಿ

    ದಟ್ಟ ಕಾನನದ ಮಧ್ಯೆ ಅವಿತಿದೆ ಅದ್ಭುತ ಫಾಲ್ಸ್- ನೀವೂ ಒಂದು ಬಾರಿ ಭೇಟಿ ನೀಡಿ

    ಚಿಕ್ಕಮಗಳೂರು: ಆ ಫಾಲ್ಸ್ ನೋಡೋಕೆ ಅದ್ಭುತ, ಅತ್ಯದ್ಭುತ ಹಾಗೂ ಅನನ್ಯ. ಆದರೆ ಅದೆಷ್ಟೋ ಕಾಫಿನಾಡಿಗರಿಗೆ ಈ ಜಲಪಾತದ ಪರಿಚಯವಿಲ್ಲ. ಆದರೆ ಇಲ್ಲಿಗೆ ಹೋಗಬೇಕೆಂದರೆ ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡಂತೆ. ಇತ್ತೀಚಿನ ಸೆಲ್ಫಿಗಳಿಗೆ ಇಲ್ಲೂ ಕೂಡ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

    ಪ್ರವಾಸಿ ಜಿಲ್ಲೆ ಚಿಕ್ಕಮಗಳೂರಿನಲ್ಲಿ ಅದೆಷ್ಟೋ ಪ್ರವಾಸಿಗರ ಕಣ್ಣಿಗೆ ಕಾಣದೇ ಮರೆಯಾಗಿರೋ ಫಾಲ್ಸ್ ಅಂದರೆ ಅದು ಕುಮಾರಗಿರಿ ಫಾಲ್ಸ್. ಚಿಕ್ಕಮಗಳೂರಿನಿಂದ ಕೈಮರ ಮಾರ್ಗವಾಗಿ ಮಲ್ಲೇನಹಳ್ಳಿಯಿಂದ ಕುಮಾರಗಿರಿ ದೇವಸ್ಥಾನ ದಾಟಿ ಕಾಮೇನಹಳ್ಳಿಗೆ ಹೋದರೆ ಆ ಫಾಲ್ಸ್ ಸಿಗುತ್ತೆದೆ. ಕಾಡಿನೊಳಗೆ ಒಂದು ಕಿಲೋಮೀಟರ್ ನಡೆದೇ ಹೋಗಬೇಕು. ಹೋಗುವಾಗ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕು. ಅದರಲ್ಲೂ ಮಳೆಗಾಲದಲ್ಲಿ ಬಿದ್ದು-ಏಳೋರ ಸಂಖ್ಯೆಯೇ ಹೆಚ್ಚು. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ.

    ಈ ಜಾಗ ಪ್ರವಾಸಿಗರಿಗೆ ಸಖತ್ ಖುಷಿ ಕೊಡುತ್ತೆ. ಹಾಗೆ ಪ್ರವಾಸಿಗರ ಪ್ರಾಣವನ್ನೂ ಕಸಿಯುತ್ತೆ. ಅಂತಾ ಡೆಡ್ಲೀ ಫಾಲ್ಸ್ ಇದು. ಕಳೆದ ವರ್ಷ ಸೆಲ್ಫಿ ತೆಗೆಯಲು ಹೋಗಿ ಇಬ್ಬರು ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಅವರ ಮೃತ ದೇಹವನ್ನು ಹುಡುಕಲು ಪೊಲೀಸ್, ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಎರಡು ದಿನಗಳ ಕಾಲ ಹರಸಾಹಸಪಟ್ಟಿದ್ದರು. ಪ್ರವಾಸಿಗರಿಗೆ ಈ ಸ್ಥಳದ ಪರಿಚಯವಿಲ್ಲ ಹಾಗಾಗಿ ಇಂತಹ ಅನಾಹುತಗಳು ಸಂಭವಿಸ್ತಾನೇ ಇರುತ್ತದೆ. ಸ್ಥಳಿಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬುದ್ಧಿವಾದ ಹೇಳಿ ಕಳುಹಿಸುತ್ತಿದ್ದಾರೆ. ಆದರೂ ಆಗಾಗ ಇಂತಹ ಅನಾಹುತಗಳು ನಡೆಯುತ್ತಿರುತ್ತದೆ.

    ಸುತ್ತಲೂ ದಟ್ಟಕಾನನದಿಂದ ಕೂಡಿರೋ ಇಲ್ಲಿ ಒಬ್ಬಿಬ್ಬರು ಹೋದರೆ ಅನಾಹುತ ಸಂಭವಿಸೋದು ಕಟ್ಟಿಟ್ಟ ಬುತ್ತಿ. ಜಲಪಾತ ತೀವ್ರವಾದ ಆಳವಿರೋದರಿಂದ ಸತ್ತರೆ ಹೆಣ ಕೂಡ ಸಿಗಲ್ಲ. ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಿದರೆ ಇದೊಂದು ಅದ್ಭುತ ಪ್ರವಾಸಿ ತಾಣ ಮಾಡಬಹುದು.

  • ಕೇಸ್ ಕ್ಲೋಸ್ ಆಗಿಲ್ಲ, ಕಳ್ಳರೂ ಸಿಕ್ಕಿಲ್ಲ, ಆದ್ರೂ ಡ್ರಾ ಆಗಿದ್ದ 20,89,558 ರೂ. ಅಕೌಂಟ್‍ಗೆ ವಾಪಸ್

    ಕೇಸ್ ಕ್ಲೋಸ್ ಆಗಿಲ್ಲ, ಕಳ್ಳರೂ ಸಿಕ್ಕಿಲ್ಲ, ಆದ್ರೂ ಡ್ರಾ ಆಗಿದ್ದ 20,89,558 ರೂ. ಅಕೌಂಟ್‍ಗೆ ವಾಪಸ್

    ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿ ಅವರು ಯೂರೋಪ್ ಪ್ರವಾಸದಲ್ಲಿದ್ದ ವೇಳೆ ಅವರ ಎಟಿಎಂ ಕಾರ್ಡ್ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಕೇಸ್ ಕ್ಲೋಸ್ ಆಗದಿದ್ದರೂ, ಕಳ್ಳರೂ ಇನ್ನೂ ಸಿಗದಿದ್ದರೂ 20 ಲಕ್ಷದ 89 ಸಾವಿರದ 558 ರೂ. ಅಕೌಂಟ್‍ಗೆ ವಾಪಸ್ ಬಂದಿದ್ದು, ಹಲವು ಅನುಮಾನಗಳು ಹುಟ್ಟಿಕೊಂಡಿದೆ.

    ಕಳಸಾದ ಕರ್ನಾಟಕ ಬ್ಯಾಂಕಿನ ಜೋಷಿ ಅವರ ಅಕೌಂಟಿನಿಂದ ದುಷ್ಕರ್ಮಿಗಳು 20 ಲಕ್ಷಕ್ಕೂ ಅಧಿಕ ಹಣವನ್ನ ಡ್ರಾ ಮಾಡಿಕೊಂಡಿದ್ದರು. ವಿದೇಶದಿಂದ ಹಿಂದಿರುಗಿದ ಭೀಮೇಶ್ವರ ಜೋಷಿ ಕಳಸಾದ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಕಳೆದ 29 ದಿನದಿಂದ ತನಿಖೆ ನಡೆಯುತ್ತಿದೆ. ಕಳ್ಳರಿನ್ನೂ ಅರೆಸ್ಟ್ ಆಗಿಲ್ಲ. ಈ ನಡುವೆ ಅಷ್ಟು ದೊಡ್ಡ ಮೊತ್ತದ ಹಣ ಜೋಷಿಯವರ ಅಕೌಂಟ್‍ಗೆ ಹಿಂದಿರುಗಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಖಾತೆಗೆ ಹಣವನ್ನು ಹಿಂದಿರುಗಿರೋದ್ರಿಂದ ನಿಜಕ್ಕೂ ಹಣ ಡ್ರಾ ಆಗಿತ್ತಾ? ಅಥವಾ ಬ್ಯಾಂಕ್‍ನವರೇ ಲೆಕ್ಕದಲ್ಲಿ ಹೆಚ್ಚು ಕಡಿಮೆ ಮಾಡಿದ್ದಾರಾ? ಕಳ್ಳರು ಸಿಗದೆ ಆ ಹಣ ಹೇಗೆ ಸಿಕ್ತು? ಅನ್ನೋ ಅನುಮಾನ ಮೂಡಿದೆ. ಜನಸಾಮಾನ್ಯರು ಒಂದು ಸಾವಿರ ಕಳೆದುಕೊಂಡರೆ ಅರ್ಜಿ, ಐಡಿ ಪ್ರೂಫ್ ಅಂತೆಲ್ಲಾ 45 ದಿನಕ್ಕೂ ಹೆಚ್ಚು ಕಾಲ ಅಲೆಯಬೇಕು. ಆದರೆ ಕಳ್ಳರೇ ಸಿಗದೆ ಇಷ್ಟು ದೊಡ್ಡ ಮೊತ್ತದ ಹಣ ವಾಪಸ್ ಬರೋಕೆ ಹೇಗೆ ಸಾಧ್ಯ ಎಂದು ಬ್ಯಾಂಕ್ ಸಿಬ್ಬಂದಿಗಳೇ ಸ್ಪಷ್ಟಪಡಿಸಬೇಕಿದೆ.

  • ಅತ್ತಿಗೆ ಮೇಲಿನ ಆಸೆಗಾಗಿ ತಲಾಖ್ ನೀಡುವಂತೆ ಹೆಂಡತಿಗೆ ಕಿರುಕುಳ

    ಅತ್ತಿಗೆ ಮೇಲಿನ ಆಸೆಗಾಗಿ ತಲಾಖ್ ನೀಡುವಂತೆ ಹೆಂಡತಿಗೆ ಕಿರುಕುಳ

    ಚಿಕ್ಕಮಗಳೂರು: ಡೈವೋರ್ಸ್ ಕೊಟ್ಟರೆ ಜೀವನಾಂಶ ಕೊಡಬೇಕಾಗುತ್ತದೆ. ಆದರೆ ಹೆಂಡತಿಯೇ ತನಗೆ ಗಂಡ ಬೇಡವೆಂದು ಬಿಟ್ಟು ಹೋದ್ರೆ ಜೀವನಾಂಶ ಕೊಡೋ ದುಡ್ಡು ಉಳಿಯುತ್ತದೆ ಎಂದು ಎಂಜಿನಿಯರ್ ಗಂಡನೊಬ್ಬ ತನ್ನ ಹೆಂಡತಿಗೆ ತಲಾಖ್ ನೀಡುವಂತೆ ಪೀಡಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಕೋಡಿಕ್ಯಾಂಪ್ ನಿವಾಸಿಯಾಗಿರುವ ಖಾಸಿಮ್ ಒಂದು ವರ್ಷದ ಹಿಂದೆ ಸುಮಯ್ಯ ಎಂಬವರನ್ನು ಮದುವೆಯಾಗಿದ್ದ. ಆದರೆ ತನ್ನ ಅತ್ತಿಗೆಯ ಮೇಲಿನ ಆಸೆಗಾಗಿ ಹೆಂಡ್ತಿಗೆ ಡೈವೋರ್ಸ್ ನೀಡುವಂತೆ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ.

    ಇದನ್ನೂ ಓದಿ: ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ಬಿಬಿಎಂ ಓದಿರುವ ಸುಮಯ್ಯ ಅವರನ್ನು ಹೆತ್ತವರು ಎಂಜಿನಿಯರ್ ಅಳಿಯ ಎಂದು ಖಾಸಿಮ್ ಜೊತೆ ಮದುವೆ ಮಾಡಿಕೊಟ್ಟಿದ್ರು. ಆದ್ರೀಗ ಖಾಸಿಮ್ ಮಾನಸಿಕ ಹಿಂಸೆ ನೀಡ್ತಿದ್ದಾನೆ. ಅತ್ತಿಗೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಕಿರುಕುಳ ನೀಡ್ತಿದ್ದು, ತಲಾಖ್‍ಗೆ ಪೀಡಿಸ್ತಿದ್ದಾನೆ ಎಂದು ಸುಮಯ್ಯ ಆರೋಪಿಸಿದ್ದಾರೆ.

    ಮದುವೆಯಾದ ಬಳಿಕ ಭದ್ರಾವತಿಯಲ್ಲೇ ಇದ್ದ ಸುಮಯ್ಯಗೆ ಖಾಸಿಮ್ ತಾಯಿ ಸಹ ಹಿಂಸೆ ಕೊಡ್ತಿದ್ದರು. ವರದಕ್ಷಿಣ ಕಿರುಕುಳ ನೀಡ್ತಿದ್ದರು ಎಂದು ಆರೋಪಿಸಿದ್ದಾರೆ. 8 ಲಕ್ಷ ಸಾಲ ಮಾಡಿ ಮದುವೆ ಮಾಡಿದ ಸುಮಯ್ಯ ತಂದೆ ಈಗ ಒಂದೇ ವರ್ಷಕ್ಕೆ ಮಗಳ ಸ್ಥಿತಿ ಕಂಡು ಚಿಂತೆಗೀಡಾಗಿದ್ದಾರೆ.

     

  • ಚಿಕ್ಕಮಗಳೂರು: ಬೆಂಕಿಗಾಹುತಿಯಾದ ಮೆರುತಿ ಗುಡ್ಡದ ವಿಶೇಷತೆ ಏನ್ ಗೊತ್ತಾ..?

    ಚಿಕ್ಕಮಗಳೂರು: ಬೆಂಕಿಗಾಹುತಿಯಾದ ಮೆರುತಿ ಗುಡ್ಡದ ವಿಶೇಷತೆ ಏನ್ ಗೊತ್ತಾ..?

    ಚಿಕ್ಕಮಗಳೂರು: ಈ ಬಾರಿಯ ಭೀಕರ ಬರಗಾಲದಿಂದ ರಾಜ್ಯಾದ್ಯಂತ ಸಾವಿರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಅರಣ್ಯಕ್ಕೆ ಬೆಂಕಿ ಬಿದ್ದಾಗೆಲ್ಲಾ ಸ್ಥಳಿಯರು ಮಾಹಿತಿ ನೀಡಿದ್ರು ಅರಣ್ಯ ಅಧಿಕಾರಿಗಳು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬರೋದಿಲ್ಲ ಅನ್ನೋದು ರಾಜ್ಯದ ಜನರ ಆರೋಪ. ಅದೇ ರೀತಿ, ರಾಜ್ಯದ ಅತಿ ಎತ್ತರದ ಶಿಖರಗಳಲ್ಲಿ ಒಂದಾದ ಚಿಕ್ಕಮಗಳೂರಿನ ಮೆರುತಿ ಗುಡ್ಡಕ್ಕೂ ಬೆಂಕಿ ಬಿದ್ದು ಮುನ್ನೂರು ಎಕರೆಗೂ ಅಧಿಕ ಅರಣ್ಯ ನಾಶವಾದ್ರು ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಸಮುದ್ರಮಟ್ಟದಿಂದ 5700 ಅಡಿ ಎತ್ತರದಲ್ಲಿರೋ ಈ ಗುಡ್ಡಕ್ಕೆ ರಾಜ್ಯದಲ್ಲಿ ಏಳನೇ ಸ್ಥಾನವಿದೆ. ಪಿರಮಿಡ್ ಆಕಾರದಲ್ಲಿರೋ ಈ ಗುಡ್ಡ ಲಕ್ಷಾಂತರ ಪ್ರವಾಸಿ ಪ್ರಿಯರಗೂ ಇಷ್ಟವಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಕೊಪ್ಪ ತಾಲೂಕಿನ ವ್ಯಾಪ್ತಿಗೆ ಬರೋ ಈ ಗುಡ್ಡ ಎರಡೂ ತಾಲೂಕಿನ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಆದ್ರೆ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಬಿದ್ದಿದ್ದು, ಮುನ್ನೂರು ಎಕರೆಗೂ ಅಧಿಕ ಅರಣ್ಯ ನಾಶವಾಗಿದೆ. ಆದರೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಾರದಿರೋದು ಮಾತ್ರ ದುರಂತ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಗುಡ್ಡ ಉಡುಪಿಯ ಕೊಬ್ರಿ ಹಾಗೂ ಹೊರನಾಡಿಗೂ ಕಾಣುವಷ್ಟು ಎತ್ತರದಲ್ಲಿದೆ. ಈ ಗುಡ್ಡಕ್ಕೆ ಪ್ರತಿ ವರ್ಷ ಬೆಂಕಿ ಬೀಳುತ್ತೆ. ಆದರೆ ಯಾವಾಗ ಮಾಹಿತಿ ನೀಡಿದ್ರು ಅರಣ್ಯ ಇಲಾಖೆಯ ಸಿಬ್ಬಂದಿ ಸರಿಯಾದ ಸಮಯಕ್ಕೆ ಬರೋದಿಲ್ಲ ಅನ್ನೋದು ಸ್ಥಳಿಯರ ಆರೋಪ. ಗುಡ್ಡಕ್ಕೆ ಬೆಂಕಿ ಬಿದ್ದಿದ್ರಿಂದ ನೂರಾರು ಪ್ರಾಣಿ ಪಕ್ಷಿಗಳು ಬೆಂಕಿಗಾಹುತಿಯಾಗಿವೆ. ಚಿಕ್ಕಮಗಳೂರಿನ ಸೌಂದರ್ಯವನ್ನ ಹೆಚ್ಚಿಸೋದ್ರಲ್ಲಿ ಈ ಗುಡ್ಡ ಪ್ರಮುಖ ಪಾತ್ರ ವಹಿಸಿತ್ತು. ಕೊಪ್ಪ, ಶೃಂಗೇರಿ, ಹೊರನಾಡು, ಕಳಸಕ್ಕೆ ಭೇಟಿ ನೀಡೋ ಪ್ರವಾಸಿಗ್ರು ಪಿರಮಿಡ್ ಆಕಾರದ ಈ ಬೆಟ್ಟವನ್ನ ನೋಡಿ ಆನಂದಿಸುತ್ತಿದ್ದರು.

  • ಚಿಕ್ಕಮಗಳೂರು: ಮೇವಿನಲ್ಲಿ ವಿಷಾಹಾರ ಸೇವನೆ ಆರು ಹಸು ಸಾವು

    ಚಿಕ್ಕಮಗಳೂರು: ವಿಷಾಹಾರ ಸೇವನೆ ಹಿನ್ನೆಲೆಯಲ್ಲಿ 6 ಹಸುಗಳು ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ಚಿಕ್ಕಮಗಳೂರು ತಾಲೂಕಿನ ಗಿಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ರೈತ ರೇಣುಕಪ್ಪ ಎಂಬುವರಿಗೆ ಸೇರಿದ ಸುಮಾರು 7 ಲಕ್ಷ ರೂಪಾಯಿ ಬೆಲೆಬಾಳುವ ಆರು ಹಸುಗಳು ಸಾವನ್ನಪ್ಪಿವೆ. ಶುಕ್ರವಾರ ರಾತ್ರಿ ಹಸುಗಳು ಮೇವು ತಿಂದ ನಂತರ ಏಕಾಏಕಿ ಹಸುಗಳು ಸಾವಿಗೀಡಾಗಿದ್ದು, ತನಗಾಗದೇ ಇರುವರು ಮೇವಿನಲ್ಲಿ ವಿಷ ಬೆರೆಸಿದ್ದಾರೆಂದು ರೇಣುಕಪ್ಪ ದುಃಖದಿಂದ ಹೇಳುತ್ತಾರೆ.

    ಮನೆಗೆ ಆಸರೆಯಾಗಿದ್ದ ಹಸುಗಳು ಏಕಾಏಕಿ ಸಾವನನಪ್ಪಿದ ಪರಿಣಾಮ ರೈತ ರೇಣುಕಪ್ಪ ದಿಕ್ಕು ತೋಚದಂತಾಗಿದೆ ಎಂದು ತಿಳಿಸಿದರು. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.