Tag: Chikkamgaluru

  • ಹೆಡ್‍ಲೈಟ್ ಡಿಮ್ ಅಂಡ್ ಡಿಪ್ ಮಾಡದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ

    ಹೆಡ್‍ಲೈಟ್ ಡಿಮ್ ಅಂಡ್ ಡಿಪ್ ಮಾಡದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ

    ಚಿಕ್ಕಮಗಳೂರು: ಬೈಕಿನ ಹೆಡ್‍ಲೈಟ್ ಡಿಮ್ ಅಂಡ್ ಡಿಪ್ ಮಾಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯ ಸೇರಿ ನಾಲ್ವರ ತಂಡ ಬಜರಂಗದಳ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಯುವಕನ ಮೇಲೆ ಹಲ್ಲೆ  ಮಾಡಿರುವ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದ ಹೊರಹೊಲಯದಲ್ಲಿ ನಡೆದಿದೆ.

    ಬಜರಂಗದಳ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಪ್ರದೀಪ್ ಹಾಗೂ ನಿತಿನ್ ಎಂಬ ಯುವಕರು ಕೊಪ್ಪ ತಾಲೂಕಿನ ಗುಣವಂತೆ ಸಮೀಪ ವಾಷಿಂಗ್ ಮೆಷಿನ್ ರಿಪೇರಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ಮಕ್ಕಿಮನೆ ಮಾರ್ಗವಾಗಿ ಕೊಪ್ಪ ಪಟ್ಟಣದ ವಾಪಸ್ ಬರುವಾಗ ಈ ಹಲ್ಲೆ ನಡೆದಿದೆ.

    ದಾರಿಯಲ್ಲಿ ಲೈಟ್ ಡಿಮ್ ಅಂಡ್ ಡಿಪ್ ಮಾಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಹರಂದೂರು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಮೂವರು ಸೇರಿ ಬೈಕ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ : ಠಾಣೆಗೆ ದೂರು ಕೊಡಲು ಬಂದ ಬಾಲಕಿಗೆ ಕಿರುಕುಳ – ಮಂಗಳೂರಿನ ಹೆಡ್ ಕಾನ್ಸ್‌ಟೇಬಲ್ ಅಂದರ್ 

    ಹಲ್ಲೆಗೊಳಗಾದ ಪ್ರದೀಪ್ ಕೊಪ್ಪ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣವಂತೆ ರಸ್ತೆಯ ಸರ್ಕಾರಿ ಶಾಲೆಯ ಸರ್ಕಲ್‍ನಲ್ಲಿ ಹರಂದೂರು ಗ್ರಾಮ ಪಂಚಾಯಿತಿ ಸದಸ್ಯ ಚೇತನ್, ಮಂಜು, ಪವನ್, ಹರೀಶ್ ಎಂಬುವವರು ಬೈಕನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕೊಪ್ಪ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಸ್ತೆ ಮಧ್ಯೆಯೇ ವಾಮಾಚಾರ, ಆತಂಕಕ್ಕೀಡಾದ ಜನ

    ರಸ್ತೆ ಮಧ್ಯೆಯೇ ವಾಮಾಚಾರ, ಆತಂಕಕ್ಕೀಡಾದ ಜನ

    ಚಿಕ್ಕಮಗಳೂರು: ರಸ್ತೆ ಮಧ್ಯೆಯೇ ನಡೆಸಿರೋ ವಾಮಾಚಾರ ಕಂಡು ಹಳ್ಳಿ ಜನ ಆತಂಕಕ್ಕೀಡಾಗಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ರಂಗನೇಹಳ್ಳಿ ಗ್ರಾಮದಲ್ಲಿ ನಡೆದಿದೆ.

    ರಂಗೇನಹಳ್ಳಿ ಗ್ರಾಮದಿಂದ ಬರಗೇನಹಳ್ಳಿಗೆ ಹೋಗುವ ಮಾರ್ಗ ಮಧ್ಯೆ ಕಿಡಿಗೇಡಿಗಳು ಈ ವಾಮಾಚಾರ ನಡೆಸಿದ್ದಾರೆ. ಬೆಳ್ಳಮಬೆಳಗ್ಗೆಯೇ ಕೃಷಿ ಕೆಲಸಕ್ಕೆ ಜಮೀನಿಗೆ ಹೋಗುವ ರೈತರು ಇದನ್ನ ಕಂಡು ಕಂಗಾಲಾಗಿದ್ದಾರೆ. ವಾಮಾಚಾರ ನಡೆಸಿದ ದುಷ್ಕರ್ಮಿಗಳು ವಾಮಾಚಾರದ ಬಳಿಕ ಅವರು ತಂದಿದ್ದ ಎಲ್ಲಾ ವಸ್ತುಗಳನ್ನ ಅಲ್ಲೇ ಬಿಟ್ಟು ಹೋಗಿದ್ದಾರೆ. ಕೋಳಿ, ನಿಂಬೆಹಣ್ಣು, ಮೊಟ್ಟೆ, ಹೊಸ ಬಟ್ಟೆ, ಅನ್ನ, ತೆಂಗಿನಕಾಯಿ, ಅರಿಶಿನ-ಕುಂಕುಮ, ಮೂರು ತರದ ದಾರ, ಬಳೆ, ತಲೆಗೂದಲು ಸೇರಿದಂತೆ ವಿವಿಧ ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿವೆ.

    ವಾಮಾಚಾರ ನಡೆಸುವವರು ಸಾಮಾನ್ಯವಾಗಿ ಮೂರು ದಾರಿ ಕೂಡಿರುವ ಕಡೆ ವಾಮಾಚಾರ ನಡೆಸುತ್ತಾರೆ. ಆದರೆ ಇಲ್ಲಿ ನೇರ ರಸ್ತೆಯಲ್ಲಿ ಈ ರೀತಿ ಕೆಟ್ಟದ್ದಾಗಿ ವಾಮಾಚಾರ ಮಾಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ರಸ್ತೆಯಲ್ಲಿ ಬರಗೇನಹಳ್ಳಿ, ರಂಗೇನಹಳ್ಳಿ, ಅರುವನಹಳ್ಳಿ, ಗೌಳಿಗರ ಕ್ಯಾಂಪ್ ಸೇರಿದಂತೆ ಏಳೆಂಟು ಗ್ರಾಮದ ಜನ ದಿನಂ ಪ್ರತಿ ಓಡಾಡುತ್ತಾರೆ. ಸಾಲದಕ್ಕೆ ಕೃಷಿ ಕೆಲಸಕ್ಕೂ ನೂರಾರು ರೈತರು ಓಡಾಡುತ್ತಾರೆ. ಇಂತಹಾ ಜನವಸತಿ ಪ್ರದೇಶದಲ್ಲಿ ರಸ್ತೆ ಹೀಗೆ ವಾಮಾಚಾರ ಮಾಡಿರುವುದರಿಂದ ಸ್ಥಳೀಯರು ಕೂಡ ಭಯಭೀತರಾಗಿದ್ದಾರೆ. ಲಕ್ಕವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮುಗಿಯದ ಚಾರ್ಮಾಡಿ ಕಾಮಗಾರಿ- ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

    ಮುಗಿಯದ ಚಾರ್ಮಾಡಿ ಕಾಮಗಾರಿ- ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

    – ಎರಡು ವರ್ಷವಾದ್ರೂ ಪೂರ್ಣಗೊಳ್ಳದ ಕಾಮಗಾರಿ
    – ಸರ್ಕಾರದ ಮಂದಗತಿ ಕಾರ್ಯಕ್ಕೆ ಸ್ಥಳೀಯರ ಕಿಡಿ

    ಚಿಕ್ಕಮಗಳೂರು: 2019ರ ಆಗಸ್ಟನಲ್ಲಿ ಸುರಿದ ಮಳೆಯಿಂದಾಗಿ ಚಾರ್ಮಾಡಿ ರಸ್ತೆಯಲ್ಲಾದ ಅನಾಹುತ ಇನ್ನೂ ದುರಸ್ತಿಯಾಗಿಲ್ಲ, ಇದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ರಸ್ತೆ ಕಾಮಗಾರಿಯನ್ನ ಪೂರ್ಣಗೊಳಿಸಿ ಚಾರ್ಮಾಡಿ ಘಾಟ್ ರಸ್ತೆಯನ್ನ ಸಂಚಾರ ಮುಕ್ತಗೊಳಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    2019 ಆಗಸ್ಟ್ ತಿಂಗಳಲ್ಲಿ ಜಿಲ್ಲೆಯ ಮಲೆನಾಡು ಭಾಗ 45 ವರ್ಷಗಳಿಂದ ಕಾಣದಂತಹ ಮಳೆಯನ್ನ ಕಂಡು ಕಂಗಾಲಾಗಿದ್ದರು. ಸೇತುವೆಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದಕ್ಕೆ ಲೆಕ್ಕವೇ ಇರಲಿಲ್ಲ. ರಸ್ತೆಗಳು ಮಳೆ ನೀರಲ್ಲಿ ಕೊಚ್ಚಿ ಹೋಗಿತ್ತು. ಅದರಲ್ಲೂ ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ತೀವ್ರ ಕುಸಿತಕ್ಕೆ ಒಳಗಾಗಿತ್ತು. ಕೊಟ್ಟಿಗೆಹಾರದಿಂದ 22 ಕಿ.ಮೀ. ಅಂತರದ ಚಾರ್ಮಾಡಿ ಘಾಟ್ ಸುಮಾರು 20ಕ್ಕೂ ಹೆಚ್ಚು ಕಡೆ ಕುಸಿತ ಕಂಡಿತ್ತು. ಅಂದು ಸರ್ಕಾರ ಮೂರು ತಿಂಗಳಲ್ಲಿ ದುರಸ್ತಿ ಮಾಡುತ್ತೇವೆ ಎಂದಿತ್ತು. ಎರಡು ವರ್ಷವಾದರೂ ಚಾರ್ಮಾಡಿ ಘಾಟ್ ಸಂಚಾರ ಮುಕ್ತವಾಗಿಲ್ಲ.

    ಜಿಲ್ಲೆ ಸೇರಿದಂತೆ ರಾಜ್ಯದ ಜನ ಚಾರ್ಮಾಡಿ ಘಾಟ್ ಮೇಲೆ ಅವಲಂಬಿತರಾಗಿದ್ದಾರೆ. ಆರೋಗ್ಯ ಸಂಬಂಧಿಸಿದಂತೆ ತುರ್ತು ಸಂದರ್ಭದಲ್ಲಿ ಮಂಗಳೂರು-ಉಡುಪಿ ಹೋಗಲು ಚಾರ್ಮಾಡಿ ಅತ್ಯಂತ ಸಹಾಯಕಾರಿ. ಆದರೆ ಈ ಬಹುಪಯೋಗಿ ರಸ್ತೆ ದುರಸ್ತಿಯಾಗುತ್ತಿದ್ದ ಕಾರಣ ಸಂಚಾರಕ್ಕೆ ಅವಕಾಶವಿರಲಿಲ್ಲ. ಈ ಮಾರ್ಗ ತಿಂಗಳುಗಟ್ಟಲೇ ಬಂದ್ ಆಗಿತ್ತು. ಮೂರೇ ತಿಂಗಳಲ್ಲಿ ಸಂಚಾರಮುಕ್ತ ಮಾಡುತ್ತೇವೆ ಎಂದಿದ್ದ ಸರ್ಕಾರ ಎರಡು ವರ್ಷವಾದರೂ ಕಾಮಗಾರಿ ಮುಗಿಸಿಲ್ಲ. ಇದು ಮಲೆನಾಡಿಗರು ಸೇರಿದಂತೆ ಇಡೀ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ. ಈಗ ಮತ್ತೆ ಮಳೆಗಾಲದ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮತ್ತೆ ಮಳೆಯಾದ್ರೆ ಇಡೀ ಚಾರ್ಮಾಡಿಯೇ ಇಲ್ಲದಂತಾಗುತ್ತೇನೋ ಅನ್ನೋ ಆತಂಕ ಸ್ಥಳೀಯರು ಹಾಗೂ ರಾಜ್ಯದ ಜನರನ್ನ ಕಾಡುತ್ತಿದೆ. ಸರ್ಕಾರದ ಮಂದಗತಿಯ ಕೆಲಸದ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಒಂದೆಡೆ ಚಾರ್ಮಾಡಿ ಘಾಟ್‍ನಲ್ಲಿ ಕೆಲಸವೂ ಮಂದಗತಿಯಲ್ಲಿ ನಡೆಯುತ್ತಿದೆ. ಮತ್ತೊಂದೆಡೆ ಭಾರೀ ವಾಹಗಳಿಗೆ ಬ್ರೇಕ್ ಬಿದ್ದಿದೆ. ಈ ಎರಡೂ ಬೆಳೆವಣಿಗೆ ಕೂಡ ಮಲೆನಾಡಿಗರಿಗೆ ಮತ್ತಷ್ಟು ಸಮಸ್ಯೆ ತಂದಿದೆ. ಅದರಲ್ಲೂ ಕೆ.ಎಸ್.ಆರ್.ಟಿ.ಸಿ ಬಸ್‍ಗಳಿಗೆ ಚಾರ್ಮಾಡಿಯಲ್ಲಿ ಸಂಚಾರಕ್ಕೆ ನಿಷೇಧವಿರೋದು ಕೂಡ ಜನಸಾಮಾನ್ಯರ ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಸದ್ಯಕ್ಕೆ ಮಿನಿ ಬಸ್‍ಗಳ ಸಂಚಾರವಿದ್ದರೂ ಅದು ಸೂಕ್ತ ಸಮಯಕ್ಕೆ ಜನಸಾಮಾನ್ಯರ ಕಷ್ಟಕ್ಕೆ ಆಗುತ್ತಿಲ್ಲ. ಗಂಟೆಗೊಂದು ಬಸ್ ಇರೋದು ಬಂದಾಗಲೇ ಬಂತೆಂದು. ಹೋದಾಗಲೇ ಹೊರಡ್ತು ಎಂದು ಜನರಿಗೆ ಮಿನಿ ಬಸ್‍ಗಳ ಮೇಲೂ ಅಸಮಾಧಾನವಿದೆ.

    ಮಿನಿ ಬಸ್ ಕೂಡ ಬೆಳಗ್ಗೆ 6 ರಿಂದ ಸಂಜೆ 4ರವರೆಗೆ ಮಾತ್ರ ಇರೋದು. ಪ್ರತಿ 10 ನಿಮಿಷಕ್ಕೆ ಒಂದು ಬಸ್ಸಿದ್ದ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಗಂಟೆಗೊಂದು ಬಸ್ ಇರುವುದರಿಂದ ಜನ ತೀವ್ರ ಸಂಕಷ್ಟಕ್ಕೀಡಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಸಮರ್ಪಕವಾದ ಆರೋಗ್ಯ ಸೇವೆ ಸೌಲಭ್ಯವಿಲ್ಲದ ಕಾರಣ ಜಿಲ್ಲೆಯ ಜನ ಮಂಗಳೂರು-ಉಡುಪಿ ಮೇಲೆ ಅವಲಂಬಿತರಾಗಿದ್ದಾರೆ. ತುರ್ತು ಸಂದರ್ಭದಲ್ಲಿ ಯಾರಾದರೂ ಮಂಗಳೂರು-ಉಡುಪಿ ಹೋಗಬೇಕಂದರೆ ಖಾಸಗಿ ವಾಹನಗಳಿಗೆ ಸಾವಿರಾರು ರೂಪಾಯಿ ಹಣ ನೀಡಬೇಕೆಂಬುದು ಸ್ಥಳೀಯರು ಅಳಲು. ಆದ್ದರಿಂದ, ಸರ್ಕಾರ ಕೂಡಲೇ ಕೆಲಸ ಮುಗಿಸಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಂಡಬೇಕೆಂದು ಆಗ್ರಹಿಸಿದ್ದಾರೆ.

    ಜನರಿಗೆ ಅನಿವಾರ್ಯ ಹಾಗೂ ಅಗತ್ಯವಾಗಿರುವ ರಸ್ತೆ ಕುಸಿದು ಎರಡು ವರ್ಷವಾದರೂ ಸರ್ಕಾರ ಇನ್ನೂ ಕಾಮಗಾರಿಯನ್ನ ಪೂರ್ಣಗೊಳಿಸದಿರೋದು ಸ್ಥಳೀಯರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೇನು ನಾಳೆ-ನಾಡಿದ್ದು ಎನ್ನುವಷ್ಟರಲ್ಲಿ ಮಲೆನಾಡಲ್ಲಿ ಮಳೆಗಾಲ ಆರಂಭವಾಗಲಿದೆ. ಹೆದ್ದಾರಿ ಪ್ರಾಧಿಕಾರದವರು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಯಾರೂ ಮುಂದೆ ಬರುತ್ತಿಲ್ಲ ಅಂತ ಕಾರಣ ಹೇಳಿಕೊಂಡು ದಿನದೂಡುತ್ತಿದ್ದಾರೆ ಎಂದು ಸ್ಥಳಿಯರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

  • ಡಿಸೆಂಬರ್ 25ರಿಂದ 30ರವರೆಗೆ ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿಷೇಧ

    ಡಿಸೆಂಬರ್ 25ರಿಂದ 30ರವರೆಗೆ ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿಷೇಧ

    ಚಿಕ್ಕಮಗಳೂರು: ಡಿಸೆಂಬರ್ ಕೊನೆಯ ವಾರದಲ್ಲಿ ಚಿಕ್ಕಮಗಳೂರಿಗೆ ಹೋಗಿ ವಾರ ಅಲ್ಲೇ ಇದ್ದು ಹೊಸ ವರ್ಷಕ್ಕೆ ಸ್ವಾಗತ ಕೋರಿ ಜನವರಿ ಒಂದಕ್ಕೋ, ಎರಡಕ್ಕೋ ವಾಪಸ್ ಬರೋಣ ಅನ್ನೋ ಪ್ಲಾನ್ ಏನಾದ್ರು ಇದ್ರೆ ನಿಮ್ಮ ಪ್ಲಾನನ್ನು ಡಿಸೆಂಬರ್ 30ಕ್ಕೆ ಬರುವಂತೆ ಬದಲಿಸಿಕೊಳ್ಳಿ. ಯಾಕೆಂದರೆ ಇದೇ ತಿಂಗಳ 25ರಿಂದ 30ರವರೆಗೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗದ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಬಗಾಧಿ ಗೌತಮ್ ಆದೇಶ ಹೊರಡಿಸಿದ್ದಾರೆ.

    ಇದೇ ತಿಂಗಳ 19ನೇ ತಾರೀಖಿನಿಂದ ದತ್ತಜಯಂತಿ ಆರಂಭವಾಗಿದ್ದು, 29ನೇ ತಾರೀಖಿನಿವರೆಗೂ ಇರಲಿದೆ. ಈಗಾಗಲೇ ದತ್ತಭಕ್ತರು ಮಾಲೆ ಧರಿಸಿ ವೃತ್ತದಲ್ಲಿದ್ದಾರೆ. ವೃತದಲ್ಲಿರುವ ಭಕ್ತರು ಡಿಸೆಂಬರ್ 27 ರಂದು ಅನಸೂಯ ಜಯಂತಿ, 28ರಂದು ನಗರದಲ್ಲಿ ಸಾಂಕೇತಿಕ ಶೋಭಾಯಾತ್ರೆ ಹಾಗೂ 29ರಂದು ದತ್ತಪೀಠದಲ್ಲಿ ಪೂಜೆ ನಡೆಸಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ.

     

    ಈ ಮೂರು ದಿನಗಳ ಕಾಲ ಕೂಡ ದತ್ತಪೀಠದಲ್ಲಿ ಪೂಜೆ ನಡೆಯಲಿದೆ. ಜೊತೆಗೆ, ರಾಜ್ಯಾದ್ಯಂತ ಮಾಲೆ ಧರಿಸಿರುವ ಭಕ್ತರು ಕೂಡ ಅಂದು ದತ್ತಪೀಠಕ್ಕೆ ಬಂದು ಪೂಜೆ ಸಲ್ಲಿಸಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಹಾಗೂ ಪ್ರವಾಸಿಗರು ಸೇರಿದಂತೆ ದತ್ತಭಕ್ತರಿಗೂ ಕೂಡ ಯಾವುದೇ ತೊಂದರೆ ಆಗಬಾರದೆಂದು ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಹೊನ್ನಮ್ಮನ ಹಳ್ಳ ಹಾಗೂ ಮಾಣಿಕ್ಯಧಾರ ಪ್ರವಾಸಿ ತಾಣಗಳ ಭೇಟಿಗೆ ಸಂಪೂರ್ಣ ನಿಷೇಧ ಹೇರಿದೆ.

    ಡಿಸೆಂಬರ್ 25 ಸಂಜೆ ಆರು ಗಂಟೆಯಿಂದ ಡಿಸೆಂಬರ್ 30ರ ಬೆಳಗ್ಗೆ ಆರು ಗಂಟೆಯವರೆಗೆ ಪ್ರವಾಸಿಗರಿಗೆ ಮುಳ್ಳಯ್ಯನಗಿರಿ ಭಾಗದ ಟೂರಿಸ್ಟ್ ಪ್ಲೇಸ್‍ಗಳಿಗೆ ನಿಷೇಧ ಹೇರಲಾಗಿದೆ.

  • 7 ದಿನಗಳಲ್ಲಿ ಸಾಲ ಕಟ್ಟದಿದ್ರೆ ಕೇಸ್- ರೈತರಿಗೆ ಬ್ಯಾಂಕ್ ನೋಟಿಸ್

    7 ದಿನಗಳಲ್ಲಿ ಸಾಲ ಕಟ್ಟದಿದ್ರೆ ಕೇಸ್- ರೈತರಿಗೆ ಬ್ಯಾಂಕ್ ನೋಟಿಸ್

    ಚಿಕ್ಕಮಗಳೂರು: ಏಳು ದಿನಗಳ ಒಳಗಾಗಿ ಸಾಲ ಮರುಪಾವತಿಸದಿದ್ದಲ್ಲಿ ನಿಮ್ಮ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವುದಾಗಿ ಜಿಲ್ಲೆಯ ಕಡೂರು ತಾಲೂಕಿನ ಕಾವೇರಿ ಗ್ರಾಮೀಣ ಬ್ಯಾಂಕ್ ರೈತರಿಗೆ ನೋಟಿಸ್ ನೀಡಿದ್ದು, ರೈತರು ಕಂಗಾಲಾಗಿದ್ದಾರೆ.

    ಕಡೂರಿನ ಟಿ.ಬಿ.ರಸ್ತೆ ನಿವಾಸಿ ಶಂಕರ್ ಎಂಬವರು 2016ರಲ್ಲಿ ಭೂ ಅಭಿವೃದ್ಧಿ ಉದ್ದೇಶದಿಂದ ಎರಡು ಲಕ್ಷ ಹಣ ಸಾಲ ಪಡೆದಿದ್ದರು. ಆದರೆ ಶಂಕರ್ ಸಾಲ ಮರುಪಾವತಿಸಿಲ್ಲ. ಈ ಬಗ್ಗೆ ಶಂಕರ್ ಅವರಿಗೆ ಬ್ಯಾಂಕ್‍ನವರು ಆಗಾಗ್ಗೆ ಸಾಲ ಮರುಪಾವತಿಸುವಂತೆ ನೋಟಿಸ್ ಕೂಡ ನೀಡಿದ್ದಾರೆ. ಆದರೆ ಕಾರಣಾಂತರಿಂದ ಶಂಕರ್ ಸಾಲ ಕಟ್ಟಿರಲಿಲ್ಲ. ಈಗ ಬ್ಯಾಂಕ್‍ನವರು ನೋಟಿಸ್ ಕಳಿಸಿದ್ದು, ಇನ್ನು ಏಳು ದಿನಗಳ ಒಳಗಾಗಿ ಸಾಲ ಹಾಗೂ ಬಡ್ಡಿ ಎಲ್ಲಾ ಸೇರಿ 3 ಲಕ್ಷದ 9 ಸಾವಿರ ಹಣ ಕಟ್ಟುವಂತೆ ನೋಟಿಸ್ ನೀಡಿದ್ದಾರೆ. ಕಟ್ಟದಿದ್ದಲ್ಲಿ ನಿಮ್ಮ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಚ್ಚರಿಸಿದ್ದಾರೆ.

    ಕಳೆದ 37 ದಿನಗಳಿಂದ ಕೊರೊನಾ ಆತಂಕದಲ್ಲಿ ದೇಶವೇ ಲಾಕ್‍ಡೌನ್ ಆಗಿ ಇಡೀ ದೇಶವೇ ಸ್ಥಬ್ಧವಾಗಿದೆ. ಆರ್ಥಿಕ ಚಟುವಟಿಕೆ ಹಾಗೂ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಜನ ಹೊತ್ತಿನ ತುತ್ತಿಗೂ ಪರದಾಡುತ್ತಿದ್ದಾರೆ. ರೈತರ ಬೆಳೆಗೆ ಬೆಲೆ ಇಲ್ಲ. ಬೆಳೆಗಳನ್ನ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ರೈತರು ದಿನದಿಂದ ದಿನಕ್ಕೆ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ನೋಟಿಸ್ ನೀಡಿರೋದು ರೈತರನ್ನ ಮತ್ತಷ್ಟು ಜರ್ಜರಿತರನ್ನಾಗಿಸಿದೆ.