Tag: Chikkamagaluru

  • ಬಾಲಕ ಪ್ರಾಣ ಕಳೆದುಕೊಂಡ್ರೂ ಬುದ್ಧಿ ಕಲಿಯದ ಪ್ರವಾಸಿಗರು – ವೀಕ್ಷಣಾ ಗೋಪುರದಿಂದ ಅಯ್ಯನಕೆರೆಗೆ ಜಿಗಿದು ಹುಚ್ಚಾಟ

    ಬಾಲಕ ಪ್ರಾಣ ಕಳೆದುಕೊಂಡ್ರೂ ಬುದ್ಧಿ ಕಲಿಯದ ಪ್ರವಾಸಿಗರು – ವೀಕ್ಷಣಾ ಗೋಪುರದಿಂದ ಅಯ್ಯನಕೆರೆಗೆ ಜಿಗಿದು ಹುಚ್ಚಾಟ

    ಚಿಕ್ಕಮಗಳೂರು: ದಸರಾ ರಜೆ ಇರುವುದರಿಂದ ಚಿಕ್ಕಮಗಳೂರಿನ (Chikkamagaluru) ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಹೀಗೆ ಬಂದ ಪ್ರವಾಸಿಗರು (Tourist) ಅಪಾಯಕಾರಿ ಸ್ಥಳಗಳಲ್ಲಿ ಹುಚ್ಚಾಟ ಮಾಡುತ್ತಿದ್ದಾರೆ.

    ಕಡೂರು (Kadur) ತಾಲೂಕಿನ ಅಯ್ಯನಕೆರೆಯ (Ayyana Kere) ವೀಕ್ಷಣಾ ಗೋಪುರದ ಮೇಲಿಂದ ಯುವಕ, ಯುವತಿಯರು, ಮಕ್ಕಳು ನೀರಿಗೆ ಜಿಗಿಯುತ್ತಿದ್ದಾರೆ. ವೇಗವಾಗಿ ಜಾರುವ ನೀರಿನಲ್ಲಿ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನೂ ಶುಕ್ರವಾರ (ಅ.3) ಇದೇ ಜಾಗದಲ್ಲಿ ಈಜಲು ಹೋಗಿ ಬಾಲಕ ಮೃತಪಟ್ಟಿದ್ದ. ಇಷ್ಟಾದರೂ ಪ್ರವಾಸಿಗರು ಮಾತ್ರ ಪುಂಡಾಟ ನಿಲ್ಲಿಸಿಲ್ಲ. ಇದನ್ನೂ ಓದಿ: ಕಾಫಿನಾಡಿಗೆ ಹರಿದು ಬಂದ ಪ್ರವಾಸಿಗರ ದಂಡು – ಮುಳ್ಳಯ್ಯನಗಿರಿ ಬಳಿ 5 ಕಿ.ಮೀ ಸಾಲುಗಟ್ಟಿ ನಿಂತ ವಾಹನಗಳು

    ಏಳು ಗುಡ್ಡದ ಮಧ್ಯೆ ಇರುವ ಅಯ್ಯನಕೆರೆ ಸುಂದರ ಪ್ರವಾಸಿ ತಾಣವೂ ಹೌದು. ಸಾಲು ಸಾಲು ರಜೆ ಇರುವುದರಿಂದ ಇಲ್ಲಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಹೀಗೆ ಬಂದವರು ಪ್ರಕೃತಿ ಸೌಂದರ್ಯ ಸವಿಯದೇ ಪುಂಡಾಟ ಮಾಡಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.

    ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಯ್ಯನಕೆರೆ ಇದ್ದು, ಪೊಲೀಸರು ಪ್ರವಾಸಿಗರ ಪುಂಡಾಟದ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೆಮ್ಮಣ್ಣುಗುಂಡಿ | ಪತ್ನಿ ಜೊತೆ ಸೆಲ್ಫಿ ತೆಗೆಯಲು ಹೋಗಿ 60 ಅಡಿ ಪ್ರಪಾತಕ್ಕೆ ಬಿದ್ದು ಶಿಕ್ಷಕ ಸಾವು

  • ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ವಿಶ್ವಕ್ಕೆ ಶಾಂತಿಯ ಭಂಗ, ಸರ್ವರು ಎಚ್ಚರ ಪರಾಕ್!

    ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ವಿಶ್ವಕ್ಕೆ ಶಾಂತಿಯ ಭಂಗ, ಸರ್ವರು ಎಚ್ಚರ ಪರಾಕ್!

    ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಬೀರೂರು (Birur) ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ (Mlaralingana Karnika) ನುಡಿ ಇಂದು (ಅ.3) ಬೆಳಗಿನ ಜಾವ ಹೊರಬಿದ್ದಿದೆ.

    ಬೀರೂರಿನ ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಅರ್ಚಕ ದಶರಥ ಪೂಜಾರ್ ಬಿಲ್ಲನ್ನೇರಿ ಕಾರ್ಣಿಕ ನುಡಿದಿದ್ದಾರೆ. `ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಧರ್ಮ – ಅಧರ್ಮ ಸಂಕಷ್ಟವಾಯಿತು. ವಿಶ್ವಕ್ಕೆ ಶಾಂತಿಯ ಭಂಗವಾಯಿತು. ಧರೆಗೆ ವರುಣನ ಆಗಮನವಾಯಿತು. ಸರ್ವರು ಎಚ್ಚರದಿಂದಿರಬೇಕು ಪರಾಕ್ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ಪರಮೇಶ್ವರ್‌ಗೆ ಮುಖ್ಯಮಂತ್ರಿ ಭಾಗ್ಯ: ಹಾಲುಮತ ಗೊರವಯ್ಯರಿಂದ ಕಾರ್ಣಿಕ ಭವಿಷ್ಯ

    ಕಾರ್ಣಿಕದ ಸಂದೇಶ
    ಧರ್ಮ ಮತ್ತು ಅಧರ್ಮಗಳ ನಡುವಿನ ಸಂಘರ್ಷವು ಹೆಚ್ಚಾಗಿ ಜಾಗತಿಕ ಶಾಂತಿಗೆ ಭಂಗ ಉಂಟಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ಇದರೊಂದಿಗೆ, ಧರೆಗೆ ವರುಣನ ಆಗಮನವಾಯಿತು ಎಂಬ ನುಡಿಯು ಉತ್ತಮ ಮಳೆ ಮತ್ತು ಸುಭಿಕ್ಷತೆಯ ನಿರೀಕ್ಷೆಯನ್ನು ಹುಟ್ಟಿಸಿದೆ.

    ಇಲ್ಲಿ ನುಡಿಯುವ ಕಾರ್ಣಿಕವು ವರ್ಷದೊಳಗೆ ನೆರವೇರುತ್ತದೆ ಎಂಬ ನಂಬಿಕೆ ಈ ಪ್ರದೇಶದ ಜನರಲ್ಲಿದೆ. ದಶರಥ ಪೂಜಾರರು ದಸರಾದ 9-10 ದಿನಗಳ ಕಾಲ ಅತ್ಯಂತ ಮಡಿಯಿಂದಿದ ಇದ್ದು ಕಾರ್ಣಿಕ ನುಡಿಯುವ ಕೊನೆ ದಿನ ನೀರನ್ನೂ ಕುಡಿಯದೇ ಉಪವಾಸದಿಂದಿದ್ದು ಪೂಜೆ ಬಳಿಕ ಉಪಹಾರ ಸೇವಿಸುತ್ತಾರೆ. ಈ ಪ್ರಸಿದ್ಧ ಮೈಲಾರಲಿಂಗಸ್ವಾಮಿಯ ಕಾರ್ಣಿಕಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇದನ್ನೂ ಓದಿ: ನ್ಯಾಯದ ತಕ್ಕಡಿ ಜರುಗಿತು, ಜೀವರಾಶಿ ಸಂಪಾದಲೆ ಪರಾಕ್ – ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ

  • ಫಿಲಿಪಿನ್ಸ್‌ನಲ್ಲಿ ಪ್ರಬಲ ಭೂಕಂಪ – ಸಂಕಷ್ಟಕ್ಕೆ ಸಿಲುಕಿದ ಚಿಕ್ಕಮಗಳೂರಿನ ವೈದ್ಯ ವಿದ್ಯಾರ್ಥಿನಿ

    ಫಿಲಿಪಿನ್ಸ್‌ನಲ್ಲಿ ಪ್ರಬಲ ಭೂಕಂಪ – ಸಂಕಷ್ಟಕ್ಕೆ ಸಿಲುಕಿದ ಚಿಕ್ಕಮಗಳೂರಿನ ವೈದ್ಯ ವಿದ್ಯಾರ್ಥಿನಿ

    ಚಿಕ್ಕಮಗಳೂರು: ಫಿಲಿಪಿನ್ಸ್‌ನಲ್ಲಿ (Philippines) ಪ್ರಬಲ ಭೂಕಂಪ (Earthquake) ಸಂಭವಿಸಿದೆ. ಇದರ ನಡುವೆ ಸುನಾಮಿ ಆತಂಕ ಎದುರಾಗಿದೆ. ಇದರಿಂದಾಗಿ ಅಲ್ಲಿಗೆ ಮೆಡಿಕಲ್ ಕೋರ್ಸ್ ಓದಲು ತೆರಳಿದ್ದ ಚಿಕ್ಕಮಗಳೂರಿನ ವೈದ್ಯ ವಿದ್ಯಾರ್ಥಿನಿಯೊಬ್ಬರು (Student) ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಚಿಕ್ಕಮಗಳೂರು (Chikkamagaluru) ನಗರದ ಸತ್ಯಪಾಲ್ ಅವರ ಮಗಳು ಐಶ್ವರ್ಯ ಮೆಡಿಕಲ್ ಕೋರ್ಸ್ ಓದಲು ಫಿಲಿಪಿನ್ಸ್‌ಗೆ ತೆರಳಿದ್ದರು. ಇದೀಗ ಸಿಬುನಗರದಲ್ಲಿ ಅವರು ಸಿಲುಕಿದ್ದಾರೆ. ಭಾರತಕ್ಕೆ ವಾಪಸ್ ಆಗಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಅವರು ಐದು ವರ್ಷದ ಕೋರ್ಸ್ ಮುಗಿಸಿದ್ದರು. ಇನ್ನೇನೂ ಕೆಲವೇ ದಿನಗಳಲ್ಲಿ ಊರಿಗೆ ವಾಪಸ್‌ ಆಗುವವರಿದ್ದರು ಎಂದು ತಿಳಿದುಬಂದಿದೆ.‌ ಇದನ್ನೂ ಓದಿ: ನ್ಯೂಯಾರ್ಕ್‌ ಏರ್‌ಪೋರ್ಟ್‌ನಲ್ಲಿ ಎರಡು ವಿಮಾನಗಳ ಡಿಕ್ಕಿ – ವೀಡಿಯೋ ವೈರಲ್‌

    ಮಗಳನ್ನ ವಾಪಸ್ ಕರೆಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪೋಷಕರು ಮನವಿ ಮಾಡಿದ್ದಾರೆ. ಇನ್ನೂ ಹಲವು ಭಾರತೀಯ ವಿದ್ಯಾರ್ಥಿಗಳು ಭೂಕಂಪದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಊಟ, ತಿಂಡಿ, ನೀರು ಯಾವುದೂ ಸಿಗದೇ ಪರದಾಡುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಫಿಲಿಪಿನ್ಸ್‌ನಲ್ಲಿ ಪ್ರಬಲ ಭೂಕಂಪ – 31 ಮಂದಿ ಸಾವು

    ಐಶ್ಚರ್ಯ ಮೆಡಿಕಲ್ ಓದುತ್ತಿರುವ ಕಾಲೇಜಿನಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯದ ಸುಮಾರು 50-60 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ತಿಳಿದುಬಂದಿದೆ.

  • ಕಾಫಿನಾಡಿಗೆ ಹರಿದು ಬಂದ ಪ್ರವಾಸಿಗರ ದಂಡು – ಮುಳ್ಳಯ್ಯನಗಿರಿ ಬಳಿ 5 ಕಿ.ಮೀ ಸಾಲುಗಟ್ಟಿ ನಿಂತ ವಾಹನಗಳು

    ಕಾಫಿನಾಡಿಗೆ ಹರಿದು ಬಂದ ಪ್ರವಾಸಿಗರ ದಂಡು – ಮುಳ್ಳಯ್ಯನಗಿರಿ ಬಳಿ 5 ಕಿ.ಮೀ ಸಾಲುಗಟ್ಟಿ ನಿಂತ ವಾಹನಗಳು

    ಚಿಕ್ಕಮಗಳೂರು: ಸಾಲು ಸಾಲು ರಜೆ ಹಿನ್ನೆಲೆ ಜಿಲ್ಲೆಯ (Chikkamagaluru) ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಇದರಿಂದ ಮುಳ್ಳಯ್ಯನಗಿರಿ (Mullayanagiri) ಮಾರ್ಗದಲ್ಲಿ 4-5 ಕಿ.ಮೀ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ.

    ಮುಳ್ಳಯ್ಯನಗಿರಿ, ದತ್ತಪೀಠ (Datta peeta), ಮಾಣಿಕ್ಯಾಧಾರ ಭಾಗಕ್ಕೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಆಯುಧಪೂಜೆ, ವಿಜಯದಶಮಿ ಹಿನ್ನೆಲೆ ಸಾಲು ಸಾಲು ರಜೆಗಳಿದ್ದು, ಪ್ರವಾಸಿಗರು ಈ ಭಾಗದ ಪ್ರವಾಸಿ ತಾಣಗಳಿಗೆ ಬಂದಿದ್ದಾರೆ. ಗಿರಿ ಭಾಗಕ್ಕೆ ನಿತ್ಯ 1200 ವಾಹನಗಳಿಗೆ ಮಾತ್ರ ಅವಕಾಶವಿದೆ. ಬೆಳಗ್ಗೆ 600, ಮಧ್ಯಾಹ್ನ 600 ವಾಹನಗಳಿಗಷ್ಟೆ ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ: ಚಿಕ್ಕಮಗಳೂರು | ಮದ್ಯ ಕುಡಿದು ನನ್ನ ಬಳಿ ಬರಬೇಡಿ – ವಾಹನ ಸವಾರರಿಗೆ ಯಮರಾಜನ ಎಚ್ಚರಿಕೆ!

    ಈಗಾಗಲೇ ಗಿರಿ ಭಾಗಕ್ಕೆ ಸಾಕಷ್ಟು ವಾಹನಗಳು ತೆರಳಿದ್ದು, ಎನ್.ಎಂ.ಡಿ.ಸಿ.ಯಿಂದ ಕೈಮರ ಚೆಕ್ ಪೋಸ್ಟ್‌ವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ. ಮೇಲೆ ಹೋಗಿರುವ ವಾಹನಗಳು ಕೆಳಗಿಳಿದ ಮೇಲೆ ಬೇರೆ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ: ಚಿಕ್ಕಮಗಳೂರು | ಮಲೆನಾಡಿಗರ ಸ್ಪೆಷಲ್‌ ಬರಗಾಪಿಗೆ ಮನಸೋತ ಪ್ರವಾಸಿಗರು!

  • ಚಿಕ್ಕಮಗಳೂರು | ಮದ್ಯ ಕುಡಿದು ನನ್ನ ಬಳಿ ಬರಬೇಡಿ – ವಾಹನ ಸವಾರರಿಗೆ ಯಮರಾಜನ ಎಚ್ಚರಿಕೆ!

    ಚಿಕ್ಕಮಗಳೂರು | ಮದ್ಯ ಕುಡಿದು ನನ್ನ ಬಳಿ ಬರಬೇಡಿ – ವಾಹನ ಸವಾರರಿಗೆ ಯಮರಾಜನ ಎಚ್ಚರಿಕೆ!

    ಚಿಕ್ಕಮಗಳೂರು: ಕರ್ನಾಟಕದಲ್ಲಿ ರಸ್ತೆಗಳು ಚೆನ್ನಾಗಿವೆಯೋ ಇಲ್ಲವೋ, ಸರ್ಕಾರ ಬಡವರಿಗೆ ಒಳ್ಳೆಯ ಅಕ್ಕಿ ನೀಡುತ್ತಿದೆಯೋ ಇಲ್ಲವೋ ಎಂದು ದೇವಲೋಕದ ಯಮರಾಜ ಹಾಗೂ ಚಿತ್ರಗುಪ್ತ ಕಾಫಿನಾಡಿಗೆ (Chikkamagaluru) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ! ಅಲ್ಲದೇ ಕುಡಿದು ವಾಹನ ಚಾಲನೆ ಮಾಡುವವರು, ರಸ್ತೆಗುಂಡಿಗಳ ಬಗ್ಗೆಯೂ ಜಾಗೃತಿ ಮೂಡಿಸಿದ್ದಾರೆ.

    ಮೂಡಿಗೆರೆ (Mudigere) ತಾಲೂಕಿನ ನಿಡುವಾಳೆ ಗ್ರಾಮದ ರಸ್ತೆಗಳ ಪರಿಸ್ಥಿತಿ ಕಂಡು ನಿಡುವಾಳೆ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಹಾವಳಿ ಹಾಗೂ ಖಾಸಗಿ ವಾಹಿನಿಯ ʻಕಾಮಿಡಿ ಕಿಲಾಡಿಗಳುʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಮೇಶ್ ಯಾದವ್ ಈ ಪ್ರಯೋಗ ಮಾಡಿದ್ದಾರೆ. ಇಬ್ಬರೂ ಯಮರಾಜ ಹಾಗೂ ಚಿತ್ರಗುಪ್ತನ ವೇಷ ಧರಿಸಿ ಗುಂಡಿಗಳನ್ನ ಅಳತೆ ಮಾಡಿ ದಾಖಲು ಮಾಡಿಕೊಂಡಿದ್ದಾರೆ. ಈ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ

    ರಾಜ್ಯಾದ್ಯಂತ ರಸ್ತೆಗಳು ತೀವ್ರ ಗುಂಡಿ ಬಿದ್ದು ಜನ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಇದರಿಂದ ಈ ವಿನೂತನ ಪ್ರಯೋಗಕ್ಕೆ ಇಬ್ಬರು ಮುಂದಾಗಿದ್ದಾರೆ. ಜೊತೆಗೆ ಹಳ್ಳಿಗಳ ಸೊಸೈಟಿಗೆ ತೆರಳಿದ್ದ ಯಮರಾಜ-ಚಿತ್ರಗುಪ್ತರು ಸೊಸೈಟಿಯಲ್ಲಿ ಅಕ್ಕಿಯನ್ನೂ ಚೆಕ್ ಮಾಡಿದ್ದಾರೆ. ಸೊಸೈಟಿಯಲ್ಲಿ ಅಕ್ಕಿ ಚೀಲದ ಆಳಕ್ಕೆ ಕೈಹಾಕಿ ಅಕ್ಕಿ ಗುಣಮಟ್ಟದ ಬಗ್ಗೆಯೂ ತಪಾಸಣೆ ನಡೆಸಿದ್ದಾರೆ.

    ವಾಹನಗಳನ್ನ ಚಾಲನೆ ಮಾಡುವಾಗ ಮದ್ಯ ಕುಡಿದು ಚಾಲನೆ ಮಾಡುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಯುವಜನತೆ ಪ್ರಾಣ ಕೂಡ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಯಾರೂ ನನ್ನ ಬಳಿ ಬರಬೇಡಿ ಎಂದು ʻಯಮʼ ಎಚ್ಚರಿಕೆ ನೀಡಿದ್ದಾನೆ.

    ಆಗ ನಿಡುವಾಳೆ ಗ್ರಾಮದ ಜನ ರಸ್ತೆ ತುಂಬಾ ಹಾಳಾಗಿದೆ. ನಾವು ಮದ್ಯಸೇವಿಸದೆ ವಾಹನ ಚಾಲನೆ ಮಾಡಿದರೂ ಗುಂಡಿಗಳಿಗೆ ಬಿದ್ದು ಜನ ಸಾಯ್ತಿದ್ದಾರೆ. ಕೆಲವರು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ ಎಂದು ಯಮರಾಜನಿಗೆ ತಮ್ಮೂರಿನ ರಸ್ತೆ ಬಗ್ಗೆ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಮಲೆನಾಡಿಗರ ಸ್ಪೆಷಲ್‌ ಬರಗಾಪಿಗೆ ಮನಸೋತ ಪ್ರವಾಸಿಗರು!

  • ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ

    ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ

    ಚಿಕ್ಕಮಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ (T.D.Rajegowda) ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

    ಕೋರ್ಟ್ ನಿರ್ದೇಶನದಂತೆ ರಾಜೇಗೌಡ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ದಾಖಲು ಬೆನ್ನಲ್ಲೇ ಲೋಕಾಯುಕ್ತ ತನಿಖೆ ಚುರುಕುಗೊಳಿಸಿದೆ. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್‌ಗಾಗಿ ಬಡವರ ಹಣಕ್ಕೆ ಕನ್ನ – 10 ಲಕ್ಷ ವಂಚಿಸಿ ಪರಾರಿಯಾದ ಪೋಸ್ಟ್ ಮಾಸ್ಟರ್

    ಶೃಂಗೇರಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಶಾಸಕ ರಾಜೇಗೌಡ, ಪತ್ನಿ‌ ಪುಷ್ಪ ಹಾಗೂ ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಟಿ.ಡಿ.ರಾಜೇಗೌಡ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಆಸ್ತಿ ಘೋಷಣೆ ಮಾಡದ ದೂರು ನೀಡಲಾಗಿತ್ತು.

    ಶಾಸಕರಾಗಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಬಗ್ಗೆ ಬಿಜೆಪಿ ಮುಖಂಡ ದಿನೇಶ್‌ ಹೊಸೂರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜನಪ್ರತಿನಿಧಿಗಳ ನ್ಯಾಯಾಲಯದ ಸೂಚನೆ ಮೇರೆಗೆ ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಪತ್ನಿ ಕೊಲೆ ಮಾಡಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಜೇಗೌಡರ ನಿವಾಸ ಬಸಾಪುರದ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  • ಚಿಕ್ಕಮಗಳೂರು | ಮಲೆನಾಡಿಗರ ಸ್ಪೆಷಲ್‌ ಬರಗಾಪಿಗೆ ಮನಸೋತ ಪ್ರವಾಸಿಗರು!

    ಚಿಕ್ಕಮಗಳೂರು | ಮಲೆನಾಡಿಗರ ಸ್ಪೆಷಲ್‌ ಬರಗಾಪಿಗೆ ಮನಸೋತ ಪ್ರವಾಸಿಗರು!

    ಚಿಕ್ಕಮಗಳೂರು: ವರ್ಷದ ಎಂಟೊಂಬತ್ತು ತಿಂಗಳು ಮಳೆ, ವರ್ಷಪೂರ್ತಿ ತಣ್ಣನೆಯ ಗಾಳಿ, ಚಳಿ ಹೀಗೆ ಅರ್ಧ ವರ್ಷ ಮಂಜಿನಿಂದಲೇ ಮುಳುಗೋ ಕಾಡಂಚಿನ ಗ್ರಾಮ (Kottigehara) ಕೊಟ್ಟಿಗೆಹಾರ. ರಾಷ್ಟ್ರೀಯ ಹೆದ್ದಾರಿ 173ರ ಚಾರ್ಮಾಡಿ ಘಾಟಿಯಂತಹಾ ಮುಗಿಲೆತ್ತರದ ಬೆಟ್ಟಗುಡ್ಡಗಳ ಮಧ್ಯೆ ಸಿಗುವ ಈ ಪುಟ್ಟ ಕೊಟ್ಟಿಗೆಹಾರ ಪ್ರವಾಸಿಗರ (Tourist) ಹಾಟ್‍ಸ್ಪಾಟ್ ಕೂಡ ಹೌದು. ಈ ಮಾರ್ಗದಲ್ಲಿ ಧರ್ಮಸ್ಥಳ, ಉಡುಪಿ ಹಾಗೂ ಮಂಗಳೂರಿಗೆ ಸಂಚರಿಸೋ ವಾಹನಗಳು ಇಲ್ಲೊಂದು ಸ್ಟಾಪ್ ಕೊಡದೇ ಮುಂದೆ ಹೋಗಲ್ಲ. ಈ ಮಾರ್ಗದಲ್ಲಿ ಹೋಗುವಾಗ ಹಲವು ದಶಕಗಳಿಂದಲೂ ಟೀ, ಕಾಫಿ (Coffee), ಲೆಮನ್ ಟೀ ಸವಿಯುತ್ತಿದ್ದ ಪ್ರವಾಸಿಗರು ಕೂಡ ಈಗ ಮಲೆನಾಡಿಗರ ಜೊತೆ ಬರಗಾಪಿಗೆ (Black coffee) ಫಿದಾ ಆಗಿದ್ದಾರೆ.

    ಚಾರ್ಮಾಡಿ ಘಾಟಿಯ ತಪ್ಪಲು ಅಂದ್ರೆ ಕೇಳೋದೇ ಬೇಡ. ಗಾಳಿ-ಮಳೆ-ಚಳಿಗೆ ಬರವಿಲ್ಲ. ಒಂದಕ್ಕೊಂದು ಅಂಟಿಕೊಂಡ ಚೈನ್ ಲಿಂಕ್‍ನಂತೆ ವರ್ಷಪೂರ್ತಿ ಮಲೆನಾಡಿಗರ ಜೊತೆ ಪ್ರವಾಸಿಗರನ್ನು ಗಡಗಡ ನಡುಗಿಸುತ್ತೆ. ಅದರಲ್ಲೂ ಮೇ-ಜೂನ್‍ನಿಂದ ಅಕ್ಟೋಬರ್-ನವೆಂಬರ್‌ ವರೆಗೂ ಇಲ್ಲಿನ ಗಾಳಿ-ಚಳಿ-ಮಳೆಯ ಅಬ್ಬರ ಹೇಳೋದು ಅಸಾಧ್ಯ. ಆ ಚಳಿ-ಗಾಳಿ-ಮಳೆಯನ್ನ ಪ್ರವಾಸಿಗರಿಗಿಂತ ಮಲೆನಾಡಿಗರೇ ಹೆಚ್ಚು ಪ್ರೀತಿಸ್ತಾರೆ! ಅದನ್ನು ಪ್ರಕೃತಿಯ ಜೊತೆ ಸೇರಿ ಎಂಜಾಯ್‌ ಮಾಡ್ತಾರೆ. ಅಂತಹಾ ಕಾಡಂಚಿನ ಗ್ರಾಮದಲ್ಲೀಗ ಮಲೆನಾಡಿಗರು ಹಾಲಿಲ್ಲದ ಬರಗಾಪಿಗೆ ಮನಸೋತಿದ್ದಾರೆ. ಹೋಟೇಲ್-ಕ್ಯಾಂಟೀನ್ ಬಾಗಿಲಲ್ಲಿ ಬರಗಾಪಿ ಕುಡಿಯುತ್ತಿರುವುದನ್ನ ಕಂಡು ಪ್ರವಾಸಿಗರು ಕೂಡ ಅದೇ ಬೇಕು ಅಂತಿದ್ದಾರೆ. ಆ ಸ್ವಾದವನ್ನ ಅನುಭವಿಸುತ್ತಿದ್ದಾರೆ!

    ಮೂಡಿಗೆರೆ ದಾಟಿ ಕೊಟ್ಟಿಗೆಹಾರ ಹೋಗುತ್ತಿದ್ದಂತೆ ಗಾಡಿ ಪಾರ್ಕ್ ಮಾಡುವ ಪ್ರವಾಸಿಗರು ಮೊದಲು ಕೇಳೋದು ನೀರು ದೋಸೆ. ನೆಕ್ಸ್ಟ್ ಬರಗಾಪಿ. ಇಲ್ಲಿನ ನೀರುದೋಸೆ ಕೂಡ ಅಷ್ಟೆ ಫೇಮಸ್. ಅದೇ ಸಾಲಿಗೆ ಈಗ ಬರಗಾಪಿಗೆ ಕೂಡ ಸೇರಿದೆ. ಕೊಟ್ಟಿಗೆಹಾರದಲ್ಲಿ ತಿಂಡಿ ತಿಂದು ಬರಗಾಪಿ ಕುಡಿದ ಹೋದ ಪ್ರವಾಸಿಗರು ಧರ್ಮಸ್ಥಳ-ಉಡುಪಿ-ಮಂಗಳೂರಿನಿಂದ ಹಿಂದಿರುಗುವಾಗ ಮತ್ತದೇ ನೀರುದೋಸೆ-ಬರಗಾಪಿಯನ್ನ ಮಿಸ್ ಮಾಡಿಕೊಳ್ಳಲ್ಲ. ಕೊಟ್ಟಿಗೆಹಾರ ತಪ್ಪಲಿನ ಹೋಟೆಲ್-ಕ್ಯಾಂಟೀನ್ ಮಾಲೀಕರು ಕೂಡ ಕಾಫಿ-ಟೀಗಿಂದ ಬರಗಾಪಿಯಲ್ಲೇ ಹೆಚ್ಚಾಗಿ ಲಾಭ ಕಾಣ್ತಿದ್ದಾರೆ. ಹಾಲಿನ ಟೀ-ಕಾಫಿ ಮಾಡೋದನ್ನ ಬಹುತೇಕ ಕಡಿಮೆ ಮಾಡಿದ್ದು, ಕೇಳಿದವರಿಗೆ ಮಾತ್ರ ಹಾಲಿನ ಕಾಫಿ-ಟೀ ಮಾಡಿಕೊಡ್ತಿದ್ದಾರೆ. ಈ ಬರಗಾಪಿಯ ಜಮಾನದಲ್ಲಿ ದಶಕಗಳಿಂದ ಖ್ಯಾತಿಯಾಗಿದ್ದ ಲೆಮನ್ ಟೀ ಕೂಡ ನೇಪಥ್ಯಕ್ಕೆ ಸರಿದಿದೆ.

    ವರ್ಷಪೂರ್ತಿ ಮಳೆ-ಚಳಿ-ಗಾಳಿ ಎದುರಿಸೋ ಮಲೆನಾಡಿಗರು ಶೀತದ ವಾತಾವರಣದಲ್ಲಿ ದೇಹವನ್ನ ಉಷ್ಣದಲ್ಲಿಟ್ಟುಕೊಳ್ಳಲು ಬರಗಾಪಿಯ ಮೊರೆಹೋಗಿದ್ದಾರೆ. ಕೆಲವರು ಹಾಟ್ ಡ್ರಿಂಕ್ಸ್ ಮೊರೆ ಹೋದ್ರೆ ಕುಡಿತದ ಅಭ್ಯಾಸ ಲಿಮಿಟ್ ಹಾಗೂ ಇಲ್ಲದವರು ದೇಹವನ್ನ ಬೆಚ್ಚಗೆ ಇಟ್ಟುಕೊಳ್ಳಲು ಬರಗಾಪಿಯ ದಾರಿ ಹುಡುಕಿಕೊಂಡಿದ್ದಾರೆ. ಸ್ಥಳಿಯರು ಕ್ಯಾಂಟೀನ್ ಬಾಗಿಲಿಗೆ ಬರುತ್ತಿದ್ದಂತೆ ಮಾಲೀಕ ಏನು ಬೇಕೆಂದು ಕೇಳೋದೇ ಇಲ್ಲ. ಸೀದಾ ಬಿಳಿ ಗಾಜಿನ ಲೋಟದಲ್ಲಿ ಬಿಸಿ-ಬಿಸಿಯಾಗಿ ಕಪ್ಪು ಕಾಫಿಯನ್ನ ತಂದಿಡ್ತಾನೆ. ಹಾಲಿಲ್ಲದ ಈ ಬರಗಾಪಿಯನ್ನ ಸ್ಥಳಿಯರು ಕೂಡ ಅಷ್ಟೆ ಖುಷಿಯಿಂದ ಆ ಸ್ವಾದವನ್ನ ಹೀರುತ್ತಾ ಕುಡಿಯುತ್ತಿದ್ದಾರೆ. ಮಲೆನಾಡ ಚಳಿಯಲ್ಲಿ ಬರಗಾಪಿಯ ರುಚಿ ಕಂಡಿರೋ ಕೆಲ ಪ್ರವಾಸಿಗರು ಕೂಡ ಹಾಲಿನ ಕಾಫಿ-ಟೀ ಬೇಡ. ಬರಗಾಪಿ ಕೊಡಿ ಎಂದು ಚಳಿ ಮಧ್ಯೆ ಹಾಲಿಲ್ಲದ ಬರಗಾಪಿ ಕುಡಿಯುತ್ತಾ ಎಂಜಾಯ್ ಮಾಡ್ತಿದ್ದಾರೆ.

  • ಜಿಎಸ್‍ಟಿ ಜಾಸ್ತಿ ಮಾಡಿದಾಗಲೂ ಶಬ್ಬಾಷ್‍ಗಿರಿ, ಕಡಿಮೆ ಮಾಡಿದ್ರೂ ಶಬ್ಬಾಷ್‍ಗಿರಿ – ಬಿಜೆಪಿ ವಿರುದ್ಧ ಸಂತೋಷ್ ಲಾಡ್ ವಾಗ್ದಾಳಿ

    ಜಿಎಸ್‍ಟಿ ಜಾಸ್ತಿ ಮಾಡಿದಾಗಲೂ ಶಬ್ಬಾಷ್‍ಗಿರಿ, ಕಡಿಮೆ ಮಾಡಿದ್ರೂ ಶಬ್ಬಾಷ್‍ಗಿರಿ – ಬಿಜೆಪಿ ವಿರುದ್ಧ ಸಂತೋಷ್ ಲಾಡ್ ವಾಗ್ದಾಳಿ

    ಚಿಕ್ಕಮಗಳೂರು: ಜಿಎಸ್‍ಟಿ (GST) ಏರಿಸಿದ್ದೇ ಅವರು ಆಗಲೂ ಬಿಜೆಪಿಗರು (BJP) ಸಂಭ್ರಮಾಚರಣೆ ಮಾಡಿದ್ದರು. ಈಗ ಇಳಿಸಿದ್ದೂ ಅವರೇ ಈಗಲೂ ಸಂಭ್ರಮಾಚರಣೆ ಮಾಡ್ತಿದ್ದಾರೆ. ಜಿಎಸ್‍ಟಿ ಜಾಸ್ತಿ ಮಾಡಿದಾಗಲೂ ಅವರದ್ದೇ ಶಬ್ಬಾಷ್‍ಗಿರಿ, ಕಡಿಮೆ ಮಾಡಿದ್ರೂ ಅವರದ್ದೇ ಶಬ್ಬಾಸ್‍ಗಿರಿ. ಈ ದೇಶವನ್ನು ನಾವೀಗ ಒಂದು ಕಾಮಿಡಿಗೆ ಇಟ್ಟುಕೊಂಡಿದ್ದೇವೆ ಎಂದು ಸಚಿವ ಸಂತೋಷ್ ಲಾಡ್ (Santosh Lad) ಕಿಡಿಕಾರಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕೇಂದ್ರ ಸರ್ಕಾರ ಜಿಎಸ್‍ಟಿ ಇಳಿಸಿದ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ಜಿಎಸ್‍ಟಿ ಕಡಿಮೆಯಾಗಿದ್ರೂ ಇನ್ಪುಟ್ ಸಬ್ಸಿಡಿಯಲ್ಲಿ ಬಹಳಷ್ಟು ಗೊಂದಲಗಳಿವೆ. 18% ಗಿಂತ ಜಾಸ್ತಿ ಬೇಡ ಎಂದು ರಾಹುಲ್ ಗಾಂಧಿಯವರು ಹೇಳಿದಾಗ ಎಲ್ಲರೂ ನಕ್ಕರೂ, ಈಗ ಅದನ್ನೇ ಮಾಡಿದ್ದಾರೆ. ಜನರೇಷನ್ ನೆಕ್ಸ್ಟ್ ಟ್ಯಾಕ್ಸ್ ಅಂತ ಪ್ರಪಂಚದಲ್ಲಿ ಎಲ್ಲಾದರೂ ಇರುತ್ತಾ? ಇವೆಲ್ಲಾ ಏನ್ ಟೈಟಲ್‍ಗಳು ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

    ಪಹಲ್ಗಾಮ್ ದಾಳಿ, ವೋಟ್ ಚೋರಿ ಆರಂಭವಾದಾಗ ಜನರಿಗೆ ದಾರಿ ತಪ್ಪಿಸಲು ಕೇಂದ್ರ ಸರ್ಕಾರ ಯತ್ನಿಸಿತ್ತು. ಎದ್ದು ಬಂದು ನಾವು ಓಬಿಸಿ ಜಾತಿಗಣತಿ ಮಾಡ್ತೀವಿ ಎಂದಿದ್ದರು. ನೀವೆಲ್ಲಾ ಜಾತಿಗಣತಿ ಎನ್ನುತ್ತಿದ್ದೀರಿ. ಕೇಂದ್ರ ಸರ್ಕಾರ ಹೇಳಿದ್ದು ಓಬಿಸಿ ಜಾತಿಗಣತಿ ಮಾಡ್ತೀವಿ ಎಂದಿತ್ತು.

    ಕೇಂದ್ರ ಸರ್ಕಾರ ಭಾರತದಾದ್ಯಂತ ಮಾಡೋದು ಜಾತಿ ಒಡೆಯೋ ಕೆಲಸ ಅಲ್ಲ, ನಾವು ಮಾಡಿದ್ರೆ ಜಾತಿ ಒಡೆಯೋ ಕೆಲಸ. ಕಾಂಗ್ರೆಸ್ ಇರುವಲ್ಲಿ ಕಾಲು ಕರೆದು ಜಗಳ ಮಾಡಲು ಮುಂದಾಗ್ತಾರೆ. ಕಾಂಗ್ರೆಸ್ಸಿಗರಿಗೆ ತೊಂದರೆ ಕೊಡುವುದು ಬಿಟ್ಟರೆ ಅವರಿಗೆ ಬೇರೆ ಏನಿದೆ ಹೇಳಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಉಳಿತಾಯ ಹಬ್ಬ| ನಾವು ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?

  • ಎಡಗಾಲಲ್ಲಿದ್ದ ರಾಡ್ ತೆಗೆಯಲು ಬಲಗಾಲಿಗೆ ಆಪರೇಷನ್ – ಹಿಮ್ಸ್ ಆಸ್ಪತ್ರೆ ವೈದ್ಯರ ಯಡವಟ್ಟು

    ಎಡಗಾಲಲ್ಲಿದ್ದ ರಾಡ್ ತೆಗೆಯಲು ಬಲಗಾಲಿಗೆ ಆಪರೇಷನ್ – ಹಿಮ್ಸ್ ಆಸ್ಪತ್ರೆ ವೈದ್ಯರ ಯಡವಟ್ಟು

    ಹಾಸನ: ಮಹಿಳೆಯೊಬ್ಬರ ಎಡಗಾಲಲ್ಲಿದ್ದ ರಾಡ್ ತೆಗೆಯಲು ಬಲಗಾಲಿಗೆ ಆಪರೇಷನ್ ಮಾಡಿರುವುದು ಹಿಮ್ಸ್ ಆಸ್ಪತ್ರೆಯಲ್ಲಿ (HIMS  Hospital) ನಡೆದಿದೆ. ಜಿಲ್ಲಾಸ್ಪತ್ರೆ ವೈದ್ಯ (Doctor) ಸಂತೋಷ್ ಈ ಯಡವಟ್ಟು ಮಾಡಿದ್ದಾರೆ.

    ಮಹಿಳೆಯ ಎಡಗಾಲಿನಲ್ಲಿ ಅಳವಡಿಸಿದ್ದ ರಾಡ್ ತೆಗೆಯಲು ವೈದ್ಯರು ಬಲಗಾಲನ್ನು ಕೊಯ್ದಿದ್ದಾರೆ. ಈ ವೇಳೆ ವೈದ್ಯರಿಗೆ ತಮ್ಮ ತಪ್ಪಿನ ಅರಿವಾಗಿದೆ. ಬಳಿಕ ಎಡಗಾಲಿಗೆ ಆಪರೇಷನ್ ಮಾಡಿ ರಾಡ್ ತೆಗೆದಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ | ವೈದ್ಯರ ಯಡವಟ್ಟು – ಎಡಗಣ್ಣಿನ ಆಪರೇಷನ್‌ಗೆ ಬಂದಿದ್ದ ಬಾಲಕನಿಗೆ ಬಲಗಣ್ಣಿನ ಆಪರೇಷನ್‌!

    ಎರಡುವರೆ ವರ್ಷದ ಹಿಂದೆ ನಡೆದಿದ್ದ ಅಪಘಾತದಲ್ಲಿ ಚಿಕ್ಕಮಗಳೂರು (Chikkamagaluru) ಬೂಚನಹಳ್ಳಿ ಕಾವಲು ಗ್ರಾಮದ ಜ್ಯೋತಿಯವರ ಎಡಗಾಲಿಗೆ ಪೆಟ್ಟಾಗಿತ್ತು. ಈ ವೇಳೆ ವೈದ್ಯರು ರಾಡ್ ಅಳವಡಿಸಿದ್ದರು. ಇತ್ತೀಚಿಗೆ ಕಾಲಿಗೆ ಅಳವಡಿಸಿದ್ದ ರಾಡ್‍ನಿಂದ ಜ್ಯೋತಿಯವರಿಗೆ ನೋವು ಕಾಣಿಸಿಕೊಳ್ಳುತ್ತಿತ್ತು. ಬಳಿಕ ಅವರು ಹಿಮ್ಸ್ ಆಸ್ಪತ್ರೆಯ ವೈದ್ಯ ಸಂತೋಷ್ ಬಳಿ ತೋರಿಸಿದ್ದರು. ಅವರು ರಾಡ್ ತೆಗೆಸುವಂತೆ ಹೇಳಿದ್ದರು.

    ವೈದ್ಯರ ಸಲಹೆಯಂತೆ ಶನಿವಾರ (ಸೆ.20) ಹಿಮ್ಸ್ ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದರು. ಈಗ ವೈದ್ಯರ ಯಡವಟ್ಟಿನಿಂದ ಮಹಿಳೆಯ ಎರಡೂ ಕಾಲುಗಳಿಗೆ ಗಾಯವಾಗಿದ್ದು, ಓಡಾಡಲು ಸಾಧ್ಯವಾಗದೇ ಹಾಸಿಗೆಯಲ್ಲೇ ಮಲಗಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆಯ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕಲಬುರಗಿ | ಜಿಮ್ಸ್ ಆಸ್ಪತ್ರೆಯ ವೈದ್ಯರ ಎಡವಟ್ಟು – ಬಾಣಂತಿ ಹೊಟ್ಟೆಯಲ್ಲೇ ಬಟ್ಟೆ ಉಂಡೆ, ಹತ್ತಿ ಬಿಟ್ಟು ಹೊಲಿಗೆ

  • ಗಣೇಶ ವಿಗ್ರಹಕ್ಕೆ ಅಪಮಾನ – ಕಿಡಿಗೇಡಿ ಮಹಿಳೆಗಾಗಿ ಚಿಕ್ಕಮಗಳೂರಲ್ಲಿ ಹುಡುಕಾಟ

    ಗಣೇಶ ವಿಗ್ರಹಕ್ಕೆ ಅಪಮಾನ – ಕಿಡಿಗೇಡಿ ಮಹಿಳೆಗಾಗಿ ಚಿಕ್ಕಮಗಳೂರಲ್ಲಿ ಹುಡುಕಾಟ

    ಚಿಕ್ಕಮಗಳೂರು: ಹಾಸನ (Hassan) ಜಿಲ್ಲೆಯ ಬೇಲೂರಲ್ಲಿ (Beluru) ಗಣಪತಿ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ ಕಿಡಿಗೇಡಿ ಮಹಿಳೆಗಾಗಿ ಪೊಲೀಸರು ಚಿಕ್ಕಮಗಳೂರಿನಲ್ಲಿ ಹುಡುಕಾಟ ನಡೆಸಿದ್ದಾರೆ.

    ಚಿಕ್ಕಮಗಳೂರು (Chikkamagaluru) ಬಸ್ ನಿಲ್ದಾಣದಲ್ಲಿ ಮಹಿಳೆ ಓಡಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೇಲೂರು ಪೊಲೀಸರು ಚಿಕ್ಕಮಗಳೂರಿಗೆ ಬಸ್ ನಿಲ್ದಾಣದಲ್ಲಿ ಹುಡುಕಾಟ ನಡೆಸಿದ್ದಾರೆ. ಚಿಕ್ಕಮಗಳೂರು ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ಚಿಕ್ಕಮಗಳೂರು ಪೊಲೀಸರು ಸಹ ಕಿಡಿಗೇಡಿ ಮಹಿಳೆಯ ಹುಡುಕಾಟದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: Hassan | ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು

    ಏನಿದು ಪ್ರಕರಣ?
    ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಮುಂಭಾಗದ ಬೇಲೂರು ಪುರಸಭೆ ಆವರಣದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಾಲಯದ ಕಬ್ಬಿಣದ ಬಾಗಿಲು ತೆರೆದು ಕಲ್ಲಿನ ಗಣೇಶ ಮೂರ್ತಿಗೆ (Ganesha Idol) ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದರು. ಇಂದು (ಸೆ.21) ಬೆಳಿಗ್ಗೆ ಭಕ್ತಾಧಿಗಳು ಕೈಮುಗಿಯಲು ಹೋದಾಗ ಗಣಪತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿತ್ತು. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಮಹಿಳೆಯೊಬ್ಬಳು ರಾತ್ರಿ ವೇಳೆ ಈ ದುಷ್ಕೃತ್ಯ ಎಸಗಿರುವುದು ಗೊತ್ತಾಗಿದೆ.

    ಗೇಟ್ ತೆಗೆದು ದೇವರಿಗೆ ಚಪ್ಪಲಿ ಹಾರ ಹಾಕಿರುವ ದುರುಳರ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದನ್ನೂ ಓದಿ: ಪಿತೃಪಕ್ಷ ಹಬ್ಬದ ಬ್ಯುಸಿಯಲ್ಲಿದ್ದ ಅಕ್ಕನ ಚಿನ್ನದ ಸರವನ್ನೇ ಎಗರಿಸಿದ ತಮ್ಮ