Tag: Chikkamagaluru

  • 15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ಮಾಡಿದ ಉರಗತಜ್ಞ

    15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ಮಾಡಿದ ಉರಗತಜ್ಞ

    ಚಿಕ್ಕಮಗಳೂರು: 15 ಅಡಿ ಉದ್ದದ ಕಾಳಿಂಗ ಸರ್ಪವನ್ನ ಮೈ ರೋಮಾಂಚನಗೊಳ್ಳುವಂತೆ ಉರಗ ತಜ್ಞರೊಬ್ಬರು ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಮಡಬೂರಿನಲ್ಲಿ ನಡೆದಿದೆ.

    ತಾಲೂಕಿನ ಮಡಬೂರು ಗ್ರಾಮದ ಉದಯ್ ಪೂಜಾರಿ ಎಂಬವರ ತೋಟದಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಇದರಿಂದ ಅತಂಕಗೊಂಡ ಉದಯ್ ಪೂಜಾರಿ ಕುಟುಂಬ ತಕ್ಷಣ ಉರಗತಜ್ಞ ಹರೀಂದ್ರಗೆ ವಿಷಯ ಮುಟ್ಟಿಸಿದ್ದಾರೆ.

    ತಕ್ಷಣ ತೋಟಕ್ಕೆ ಆಗಮಿಸಿದ ಉರಗ ತಜ್ಞ ತಮ್ಮ ಜೀವ ಭಯಬಿಟ್ಟು ಕಾಳಿಂಗ ಸರ್ಪವನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಎರಡು ದಿನದ ಹಿಂದೆ ಕೂಡ ಕೊಪ್ಪ ತಾಲೂಕಿನ ಗಡಿಗೇಶ್ವರ ಗ್ರಾಮದ ಪೈಪ್‍ನಲ್ಲಿ ಸಿಲುಕಿದ್ದ ಕಾಳಿಂಗ ಸರ್ಪವನ್ನು ಕೂಡ ಉರಗ ತಜ್ಞ ಹರೀಂದ್ರ ರಕ್ಷಣೆ ಮಾಡಿದ್ದರು. ಅದೇ ರೀತಿ ಕೊಪ್ಪ ತಾಲೂಕಿನ ಉತ್ತಮೇಶ್ವರ ಗ್ರಾಮದ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಈ ಕಾಳಿಂಗನನ್ನು ಕೂಡ ಉರಗ ತಜ್ಞರು ಸೆರೆ ಹಿಡಿದು ರಕ್ಷಣೆ ಮಾಡಿ, ಅರಣ್ಯ ಪ್ರದೇಶಕ್ಕೆ ಬಿಡಲಿದ್ದಾರೆ ಅಂತಾ ತಿಳಿಸಿದ್ದಾರೆ.

    https://www.youtube.com/watch?v=cH3VE7r-Dkc

     

  • ಪ್ರಧಾನಿ ಮೋದಿ ವಿರುದ್ಧ ಮತ್ತೊಮ್ಮೆ ನಾಲಗೆ ಹರಿಬಿಟ್ಟ ಸಿಎಂ ಇಬ್ರಾಹಿಂ- ವಿಡಿಯೋ ನೋಡಿ

    ಪ್ರಧಾನಿ ಮೋದಿ ವಿರುದ್ಧ ಮತ್ತೊಮ್ಮೆ ನಾಲಗೆ ಹರಿಬಿಟ್ಟ ಸಿಎಂ ಇಬ್ರಾಹಿಂ- ವಿಡಿಯೋ ನೋಡಿ

    ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂ.. ಎಂದು ಕರೆಯುವ ಮೂಲಕ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ತಮ್ಮ ನಾಲಗೆಯನ್ನು ಮತ್ತೊಮ್ಮೆ ಹರಿಬಿಟ್ಟಿದ್ದಾರೆ.

    ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಾವೇಶ ಕಾರ್ಯಕ್ರಮದ ವೇಳೆ ಮಾತನಾಡಿದ ಸಿಎಂ ಇಬ್ರಾಹಿಂ, ಪ್ರಧಾನಿ ಮೋದಿ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೆಚ್ಚು ಮಾತನಾಡುತ್ತಿರಲಿಲ್ಲ, ಕೆಲಸ ಮಾಡುತ್ತಿದ್ದರು. ಆದರೆ ಪ್ರಧಾನಿ ಮೋದಿ ಅವರ ಆಡಳಿತವನ್ನು ಟೀಕಿಸಿ, ಈ ಮುಂ.. ಬರೀ ಮಾತನಾಡುತ್ತೆ ಹೊರತು ಕೆಲಸ ಮಾಡಲ್ಲ. `ಅಚ್ಚೇ ದಿನ್’ ಬರುತ್ತದೆ ಎಂದು ಜನರನ್ನು ನಂಬಿಸಿ ಆಡಳಿತ ಪಡೆದರು. ಆದರೆ ಇವರು ಅಧಿಕಾರವಹಿಸಿದ ಬಳಿಕ ಅಚ್ಚೇ ದಿನ್ ಪದದ ಅರ್ಥವೇ ಬದಲಾಗಿದೆ. ನಮಗೆ ಅಚ್ಚೇ ದಿನ್ ಬೇಡ ಎಂದರು.

    ಯಾವುದೇ ಬ್ಯಾಂಕ್ ಗೆ ಭೇಟಿ ನೀಡಿದ್ರೂ ಹಣ ಸಿಗುತ್ತಿಲ್ಲ. ಎಲ್ಲರಿಗೂ ಕೇವಲ ಡೆಬಿಟ್ ಕಾರ್ಡ್ ನೀಡುತ್ತಿದ್ದಾರೆ. ಆದರೆ 500 ರೂ. ಬಂಡವಾಳ ಹೂಡಿ ತರಕಾರಿ ವ್ಯಾಪಾರ ನಡೆಸುವ ಅನಕ್ಷರಸ್ಥ ಮಹಿಳೆಯರು ಹೇಗೆ ತಮ್ಮ ಜೀವನ ನಡೆಸುತ್ತಾರೆ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

    ಹಲವು ಉದ್ಯಮಿಗಳು ಬ್ಯಾಂಕ್ ಗಳಿಗೆ ಮೋಸ ಮಾಡಿ ದೇಶ ಬಿಟ್ಟಿದ್ದಾರೆ. ನೀರವ್ ಮೋದಿ, ವಿಜಯ್ ಮಲ್ಯರಂತಹ ಉದ್ಯಮಿಗಳು ದೇಶ ಬಿಟ್ಟಿದ್ದಾರೆ. ಬ್ಯಾಂಕ್ ಗಳನ್ನು ದಿವಾಳಿ ಮಾಡಿದ್ದಾರೆ. ದೈನಂದಿನ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗಿದೆ ಎಂದು ಆರೋಪಿಸಿದರು.  ಇದನ್ನೂ ಓದಿ: ಮೋದಿಗೆ ಅಧಿಕಾರ ಕೊಟ್ಟಿರೋದು ಹುಚ್ಚನ ಕೈಗೆ ಶೇವಿಂಗ್ ಕತ್ತಿ ಕೊಟ್ಟಂಗಾಗಿದೆ: ಸಿಎಂ ಇಬ್ರಾಹಿಂ ಲೇವಡಿ

  • ಹನಿಟ್ರ್ಯಾಪ್ ಮಾಡಿ 4.85ಲಕ್ಷ ರೂ. ಪಡೆದಿದ್ದರೂ, ಮತ್ತೆ ಸಿಂಗಲ್ ಸೆಟ್ಲ್ ಮೆಂಟ್ ಗೆ ಮಹಿಳೆಯಿಂದ ಬ್ಲ್ಯಾಕ್ ಮೇಲ್!

    ಹನಿಟ್ರ್ಯಾಪ್ ಮಾಡಿ 4.85ಲಕ್ಷ ರೂ. ಪಡೆದಿದ್ದರೂ, ಮತ್ತೆ ಸಿಂಗಲ್ ಸೆಟ್ಲ್ ಮೆಂಟ್ ಗೆ ಮಹಿಳೆಯಿಂದ ಬ್ಲ್ಯಾಕ್ ಮೇಲ್!

    ಚಿಕ್ಕಮಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಮೂಡಿಗೆರೆ ಮೂಲದ ಮಹಿಳೆಯಿಂದ ಚಿಕ್ಕಮಗಳೂರಿನ ಯುವಕನೊಬ್ಬ ಹನಿಟ್ರ್ಯಾಪ್‍ಗೆ ಒಳಗಾಗಿ 4.85 ಲಕ್ಷ ರೂ. ಸಾವಿರ ಕಳೆದುಕೊಂಡು ಆಕೆಯಿಂದ ಮತ್ತೆ ಬ್ಲ್ಯಾಕ್ ಮೇಲ್‍ಗೆ ಒಳಗಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ನಗರದ ಕಲ್ಯಾಣ ನಗರದ ನಿವಾಸಿ ಗೌರಿ ಶಂಕರ್ ಗೆಕಳೆದೊಂದು ವರ್ಷದ ಹಿಂದೆ ಫೇಸ್ ಬುಕ್‍ನಲ್ಲಿ ಮೈತ್ರಿಯ ಪರಿಚಯವಾಗಿತ್ತು. ಸ್ನೇಹ ಪ್ರೀತಿಯಾಗಿ ಇಬ್ಬರ ನಡುವೆ ಸಾಕಷ್ಟು ಬಾರಿ ದೈಹಿಕ ಸಂಪರ್ಕ ಕೂಡ ನಡೆದಿತ್ತು.

    ಗೌರಿ ಶಂಕರ್ ನಿಂದ ಇದೂವರೆಗೆ ಸುಮಾರು 4 ಲಕ್ಷದ 85 ಸಾವಿರ ಹಣ ಪಡೆದಿರುವ ಮೈತ್ರಿ ಸಿಂಗಲ್ ಸೆಟ್ಲ್ ಮೆಂಟ್‍ಗಾಗಿ ಮತ್ತೆ ಐದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ಆಕೆಗೆ ಹಣ ಕೊಟ್ಟು ಸುಸ್ತಾಗಿರುವ ಗೌರಿಶಂಕರ್ ಮಾನಸಿಕ ನೆಮ್ಮದಿಗಾಗಿ ಮಾಧ್ಯಮಗಳು ಹಾಗೂ ಪೊಲೀಸರ ಮೊರೆ ಹೋಗಿದ್ದಾರೆ.

    ಮೈತ್ರಿಯ ಮೇಲೆ ಇದೊಂದೆ ಕೇಸಲ್ಲ. ಬೆಂಗಳೂರಿನ ಪೀಣ್ಯದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಮೈತ್ರಿ ಪಕ್ಕದ ಮಳಿಗೆ ವೈದ್ಯ ಡಾ. ಬಿರಾದಾರ್ ಎಂಬುವರಿಗೂ ಇದೇ ರೀತಿ ಬ್ಲಾಕ್ ಮೇಲ್ ಮಾಡ್ತಿದ್ದಾಳೆ. ಅವರಿಂದಲೂ ಆಗಾಗ ಸುಮಾರು 9 ಲಕ್ಷ ಹಣ ಪಡೆದಿದ್ದಾಳೆ. ಕೊನೆಗೆ ಸಿಂಗಲ್ ಸೆಟ್ಲ್ ಮೆಂಟ್‍ಗೆ 15 ಲಕ್ಷ ಕೇಳಿದ್ದಾಳೆ. ಹೀಗೆ ಹಾವೇರಿ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದ ಜನರಿಗೆ ಇದೇ ರೀತಿ ಮೋಸ ಮಾಡಿರುವ ಎಲ್ಲಾ ದಾಖಲೆಗಳು ಗೌರಿಶಂಕರ್ ಬಳಿ ಇದೆ.

    ಈ ಪ್ರಕರಣ ಬೆಳಕಿಗೆ ಬಂದ ನಂತರ ಎಸ್ಟೇಟ್ ಮಾಲೀಕರು ಗೌರಿಶಂಕರ್ ಅವರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಈಕೆಯ ಮೇಲೆ ಬೆಂಗಳೂರಿನ ಪೀಣ್ಯ ಠಾಣೆಯಲ್ಲಿ ಎರಡು ಪ್ರಕರಣ ಕೂಡ ದಾಖಲಾಗಿದೆ. ಮೈತ್ರಿ ಮೇಲೆ ಗಂಡನೇ ಒಂದು ದೂರು ದಾಖಲಿಸಿದ್ದಾರೆ. ಮಂಜುನಾಥ್ ಎಂಬುವರು ಹಣ ನೀಡದ ಕಾರಣ ಆತನ ಮೇಲೂ ರೇಪ್ ಕೇಸ್ ನೀಡಿದ್ದಾಳೆ ಎನ್ನಲಾಗಿದೆ.

    ಈಕೆಯಿಂದ ಸಂಸಾರ, ಉದ್ಯೋಗ ಮತ್ತು ಮಾನಸಿಕ ನೆಮ್ಮದಿ ಕಳೆದುಕೊಂಡಿರುವ ಗೌರಿಶಂಕರ್ ಮಾಧ್ಯಮಗಳು ಹಾಗೂ ಪೊಲೀಸರ ಮೊರೆ ಹೋಗಿದ್ದಾನೆ.

  • ಶೃಂಗೇರಿ ಮಠದಲ್ಲಿ ಪಂಚೆ-ಶಲ್ಯದಲ್ಲಿ ದರ್ಶನ ಪಡೆದ ರಾಹುಲ್ – ಕಾಂಗ್ರೆಸ್ ಅಧ್ಯಕ್ಷರಿಗೆ ಹಳೆಯದನ್ನ ನೆನಪಿಸಿದ ಭಾರತೀತೀರ್ಥ ಶ್ರೀ

    ಶೃಂಗೇರಿ ಮಠದಲ್ಲಿ ಪಂಚೆ-ಶಲ್ಯದಲ್ಲಿ ದರ್ಶನ ಪಡೆದ ರಾಹುಲ್ – ಕಾಂಗ್ರೆಸ್ ಅಧ್ಯಕ್ಷರಿಗೆ ಹಳೆಯದನ್ನ ನೆನಪಿಸಿದ ಭಾರತೀತೀರ್ಥ ಶ್ರೀ

    ಚಿಕ್ಕಮಗಳೂರು: ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ.

    ಚಿಕ್ಕಮಗಳೂರಿನ ಶೃಂಗೇರಿ ಮಠಕ್ಕೆ ಭೇಟಿ ನೀಡಿದ ರಾಹುಲ್ ಅವರು ಮಠದ ಭಾರತೀತೀರ್ಥ ಸ್ವಾಮೀಜಿ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ರಾಹುಲ್ ಸ್ವಾಮೀಜಿ ಅವರನ್ನು ಭೇಟಿ ಮಡುವ ಸಂದರ್ಭದಲ್ಲಿ ಉಳಿದ ಕಾಂಗ್ರೆಸ್ ನಾಯಕರನ್ನು ಹೊರಗೆ ಕಳುಹಿಸಿದ್ದು, ಈ ವೇಳೆ ರಾಹುಲ್ ಗೆ ಶ್ರೀಗಳು ಆಶೀರ್ವಚನ ನೀಡಿದ್ದಾರೆ.

    ಇದೇ ವೇಳೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಭೇಟಿಯ ಬಗ್ಗೆ ಶ್ರೀಗಳು ಮೆಲುಕು ಹಾಕಿದ್ರು. 1975ರಲ್ಲಿ ಅಜ್ಜಿ ಇಂದಿರಾ ಗಾಂಧಿ ಭೇಟಿ ನೀಡಿದ್ದರ ಬಗ್ಗೆ ಶ್ರೀಗಳು ರಾಹುಲ್‍ಗೆ ಮಾಹಿತಿ ನೀಡಿದ್ರು. ಅಲ್ಲದೇ ಇಂದಿರಾ ಗಾಂಧಿ ತಮ್ಮ ಭೇಟಿ ವೇಳೆ ಆಡಿದ್ದ ಮಾತುಗಳ ಬಗ್ಗೆ ಉಲ್ಲೇಖಿಸಿದರು ಎನ್ನಲಾಗಿದೆ.


    ಬಳಿಕ ಯಾವುದರ ರಕ್ಷಣೆಗೆ ಕಟಿಬದ್ಧರಾಗಿರಬೇಕು ಎಂದು ಶ್ರೀಗಳು ಧರ್ಮಬೋಧನೆ ಮಾಡಿದ್ರು. ನಿಮಗೆ ಉಜ್ವಲ ಭವಿಷ್ಯ ಇದೆ. ಆದರೆ ಅದಕ್ಕೆ ಇನ್ನಷ್ಟು ಕಷ್ಟಪಡಬೇಕು. ಹಿಂದೂ ಧರ್ಮದ ರಕ್ಷಣೆಗೆ ಸದಾ ಕಟಿಬದ್ಧರಾಗಿರಿ. ಯಾವುದೇ ರೀತಿಯಲ್ಲೂ ಧರ್ಮ ವಿರೋಧಿ ಕೆಲಸಕ್ಕೆ ಅವಕಾಶ ನೀಡಬೇಡಿ. ನಿಮಗೆ ಒಳ್ಳೆದಾಗಲಿ, ನಿಮ್ಮ ಸಕಲ ಇಷ್ಟಾರ್ಥ ಸಿದ್ಧಿಸಲಿ ಅಂತ ರಾಹುಲ್ ಗಾಂಧಿ ಶಿರದ ಮೇಲೆ ಕೈ ಇಟ್ಟು ಭಾರತೀತೀರ್ಥ ಸ್ವಾಮೀಜಿ ಹರಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ನಂತರ ಸ್ವಾಮೀಜಿಯವರು ರಾಹುಲ್ ಅವರಿಗೆ ಶಾಲು ಹೊದಿಸಿ, ಫಲ-ತಾಂಬೂಲ ಕೊಟ್ಟು ಆಶೀರ್ವಾದ ನೀಡಿದ್ದಾರೆ.

  • ಶೃಂಗೇರಿ ಶಾರದಾ ಪೀಠಕ್ಕೂ ಗಾಂಧಿ ಕುಟುಂಬಕ್ಕೆ ಇದೆ ಅವಿನಾಭಾವ ಸಂಬಂಧ!

    ಶೃಂಗೇರಿ ಶಾರದಾ ಪೀಠಕ್ಕೂ ಗಾಂಧಿ ಕುಟುಂಬಕ್ಕೆ ಇದೆ ಅವಿನಾಭಾವ ಸಂಬಂಧ!

    ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇವತ್ತು ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡುತ್ತಿದ್ದು ಇದು ಐತಿಹಾಸಿಕ ಹಾಗೂ ಮಹತ್ವದ ಭೇಟಿ ಎನಿಸಿಕೊಳ್ಳಲಿದೆ.

    ಶೃಂಗೇರಿ ಶಾರದಾ ಪೀಠಕ್ಕೂ ಗಾಂಧಿ ಕುಟುಂಬಕ್ಕೆ ಅವಿನಾಭಾವ ಸಂಬಂಧ ಇದೆ. ರಾಷ್ಟ್ರಾದ್ಯಂತ ಕಾಂಗ್ರೆಸ್ ನೆಲಕಚ್ಚಿದ್ದ ಸಂದರ್ಭದಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರು. ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಶೃಂಗೇರಿಗೆ ಭೇಟಿ ನೀಡಿದ್ದ ಇಂದಿರಾಗಾಂಧಿ ಶಕ್ತಿ ದೇವತೆ ಶಾರದಾಂಬೆಯ ದರ್ಶನ ಮಾಡಿ ಗೆಲುವಿನ ಆಶಿರ್ವಾದ ಬೇಡಿದ್ದರು. ಗೆದ್ದ ನಂತರವು ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆದಿದ್ದರು. ಶೃಂಗೇರಿ ಮಠದ ಜೊತೆ ಇಂದಿರಾಗಾಂಧಿ ನಿಕಟ ಸಂಪರ್ಕ ಹೊಂದಿದ್ದರು. ಇದಾದ ಬಳಿಕ ರಾಜೀವ್ ಗಾಂಧಿ ಸಹ ಹಲವು ಬಾರಿ ಶೃಂಗೇರಿಗೆ ಭೇಟಿ ನೀಡಿದ್ದರು.

    ಈಗ ಗಾಂಧಿ ಕುಟುಂಬದ ನಾಲ್ಕನೆಯ ಕುಡಿ ಶೃಂಗೇರಿಗೆ ಭೇಟಿ ನೀಡುತ್ತಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಚಿಕ್ಕಮಗಳೂರಿನ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಲಿರುವ ರಾಹುಲ್ ಗಾಂಧಿ ಈ ಹಿಂದೆ ತಮ್ಮ ಅಜ್ಜಿ ಭಾಷಣ ಮಾಡಿದ್ದ ಮೈದಾನದಲ್ಲೇ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಚಿಕ್ಕಮಗಳೂರು ಭೇಟಿ ಬಳಿಕ ಹಾಸನದಲ್ಲಿ ಬೃಹತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ತವರಲ್ಲಿ ರಾಹುಲ್ ಗಾಂಧಿ ಭಾಷಣ ಏನಿರಬಹುದು ಎನ್ನುವ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಮಾದರಿಯಲ್ಲಿ ದೇವೇಗೌಡರ ವಿರುದ್ದ ವಾಗ್ದಾಳಿ ಮಾಡ್ತಾರಾ? ಅಥವಾ ಮುಂದಿನ ರಾಜಕೀಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸಾಫ್ಟ್ ಕಾರ್ನರ್ ನ ದಾಳ ಉರುಳಿಸ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.

  • ಕಾರ್ಯಕ್ರಮದಲ್ಲಿ ಕುಣಿಯುವಾಗ ಮೈ-ಕೈ ತಾಗಿದ್ದಕ್ಕೆ ಉಪನ್ಯಾಸಕರೆದುರೇ ವಿದ್ಯಾರ್ಥಿಗಳ ಮಾರಾಮಾರಿ

    ಕಾರ್ಯಕ್ರಮದಲ್ಲಿ ಕುಣಿಯುವಾಗ ಮೈ-ಕೈ ತಾಗಿದ್ದಕ್ಕೆ ಉಪನ್ಯಾಸಕರೆದುರೇ ವಿದ್ಯಾರ್ಥಿಗಳ ಮಾರಾಮಾರಿ

    ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಉಪನ್ಯಾಸಕರ ಎದುರೇ ಹೊಡೆದಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

    ಕೊಪ್ಪಾ ಡಿಗ್ರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇಳೆ ವಿದ್ಯಾರ್ಥಿಗಳ ಮಾರಾಮಾರಿ ನಡೆದಿದೆ. ಕಾರ್ಯಕ್ರಮದಲ್ಲಿ ಕುಣಿಯುವಾಗ ಮೈ-ಕೈ ತಾಗಿದ್ದಕ್ಕೆ ಗಲಾಟೆಯಾಗಿದ್ದು, ಮಾತಿಗೆ ಮಾತು ಬೆಳೆದು ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ.

    ಉಪನ್ಯಾಸಕರ ಎದುರೇ ವಿದ್ಯಾರ್ಥಿಗಳ ಹೊಡೆದಾಟ ನಡೆದಿದ್ದು, ಬಿಡಿಸಲು ಹೋದ ಕೆಲ ಉಪನ್ಯಾಸಕರಿಗೂ ಧರ್ಮದೇಟು ಬಿದ್ದಿದೆ. ವಿದ್ಯಾರ್ಥಿಗಳು ಹೊಡೆದಾಡುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

  • ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕೋಡಿಯಲ್ಲಿ ವರುಣನ ಅಬ್ಬರ

    ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕೋಡಿಯಲ್ಲಿ ವರುಣನ ಅಬ್ಬರ

    ಬಳ್ಳಾರಿ: ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಭಾನುವಾರವೂ ಮುಂದುವರೆದಿತ್ತು.

    ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬಳ್ಳಾರಿ ಜಿಲ್ಲೆಯ ಹಲವು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಲ್ಲದೇ ಭಾರೀ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲೂ ಸಹ ಕಳೆದ ರಾತ್ರಿ ಧಾರಕಾರವಾಗಿ ಸುರಿದ ಮಳೆಗೆ ಮೋರಗೇರಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ. ಅಲ್ಲದೇ ಹಗರಿಬೊಮ್ಮನಹಳ್ಳಿ- ಹಡಗಲಿ ಮಾರ್ಗದ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು.

    ಮೋರಗೇರಿ ಗ್ರಾಮದ ಹಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಜನರು ಯುಗಾದಿ ಹಬ್ಬದ ದಿನದಂದು ಮನೆಗೆ ನುಗ್ಗಿದ ನೀರನ್ನು ಹೊರಹಾಕುವಲ್ಲಿ ನಿರತರಾಗಿದ್ದರು. ಒಟ್ಟಾರೆ ಬಿರುಬಿಸಿಲಿನ ಸಮಯದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ ನಿರ್ಮಿಸಿದೆ.

    ಭಾರೀ ಮಳೆಯಿಂದಾಗಿ ಕಾಫಿನಾಡಿನ ಮಲೆನಾಡು ಭಾಗ ಅಕ್ಷರಶಃ ತತ್ತರಿಸಿ ಹೋಗಿದೆ. ಬಾಳೆಹೊನ್ನೂರು, ಜೈಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆಯಲ್ಲಿ ಭಾರೀ ಮಳೆ ಸುರಿದಿರೋದ್ರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮೂಡಿಗೆರೆಯಲ್ಲಿ ಭಾರೀ ಗಾಳಿ-ಮಳೆಯಾಗಿದ್ರಿಂದ ಚಿಕ್ಕಮಗಳೂರು-ಮೂಡಿಗೆರೆಗೆ ಸಂಪರ್ಕ ಕಲ್ಪಿಸೋ ಕಬ್ಬಿಣ ಸೇತುವೆ ಬಳಿಯ ಸೇತುವೆ ಕುಸಿದು ಬಿದ್ದಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಮಳೆ ಆಗಮನ ರೈತರಲ್ಲಿ ಹರ್ಷ ಮೂಡಿಸಿದೆ. ಆದ್ರೆ ಮಾವಿನ ಫಸಲು ನಾಶವಾಗುತ್ತದೇನೋ ಎಂಬ ಚಿಂತೆಯಲ್ಲಿ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ. ಮಳೆ ಹೀಗೇ ಮುಂದುವರೆದರೆ ಮುಂಗಾರಿನ ಪೂರ್ವದಲ್ಲೇ ಕೃಷಿ ಚಟುವಟಿಕೆಗಳು ಪ್ರಾರಂಭವಾಗುವ ಸಾಧ್ಯತೆ ಇದೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ನಿರಂತರ ಮಳೆ ಸುರಿದಿದ್ದು, ವರ್ಷದ ಮೊದಲ ಮಳೆಗೆ ಜನರು ಫುಲ್ ಕುಶ್ ಆಗಿದ್ದಾರೆ. ಯುಗಾದಿ ದಿನದಂದೇ ಮಳೆಯಾಗಿರುವುದಕ್ಕೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಸಿಡಿಲಿಗೆ ಟಿವಿ ಸ್ಫೋಟಗೊಂಡು ಹೊತ್ತಿ ಉರಿದ ಮನೆ!

    ಸಿಡಿಲಿಗೆ ಟಿವಿ ಸ್ಫೋಟಗೊಂಡು ಹೊತ್ತಿ ಉರಿದ ಮನೆ!

    ಚಿಕ್ಕಮಗಳೂರು: ರಾಜ್ಯದ ಕೆಲವೆಡೆ ಗುರುವಾರ ಧಾರಕಾರ ಮಳೆ ಸುರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸಿಡಿಲಿನ ಹೊಡೆತಕ್ಕೆ ಮನೆಯೊಂದು ಸುಟ್ಟು ಭಸ್ಮವಾಗಿದೆ.

    ಬಾಳೆಹೊನ್ನೂರಿನ ಎನ್ ಆರ್ ಪುರ ರಸ್ತೆಯಲ್ಲಿರುವ ಅವಿನಾಶ್ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಸಿಡಿಲಿನ ರಭಸಕ್ಕೆ ಟಿವಿ ಸ್ಫೋಟಗೊಂಡಿದೆ. ಬಳಿಕ ಬೆಂಕಿಯ ಕೆನ್ನಾಲಿಗೆ ಇಡೀ ಮನೆಯನ್ನು ಆವರಿಸಿದೆ. ಪರಿಣಾಮ ಮನೆಯಲ್ಲಿದ್ದ ಪೀಠೋಪಕರಣಗಳು ಬೆಂಕಿಗಾಹುತಿಯಾಗಿ ಸಾವಿರಾರು ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಿದೆ.

    ಘಟನೆಯಿಂದಾಗಿ ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಕಸ್ಮಿಕ ಬೆಂಕಿ ತಗುಲಿ 6 ಏಕರೆ ದಾಳಿಂಬೆ ತೋಟ ಸುಟ್ಟು ಭಸ್ಮ

    ಆಕಸ್ಮಿಕ ಬೆಂಕಿ ತಗುಲಿ 6 ಏಕರೆ ದಾಳಿಂಬೆ ತೋಟ ಸುಟ್ಟು ಭಸ್ಮ

    ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ತಗುಲಿ 6 ಏಕರೆ ದಾಳಿಂಬೆ ತೋಟ ಸುಟ್ಟು ಭಸ್ಮವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ತ್ಯಾಗದಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಸುದೀಶ್ ಎಂಬುವರಿಗೆ ಸೇರಿದ ತೋಟದಲ್ಲಿ ಬೆಂಕಿ ಅವಘಡ ನಡೆದಿದೆ. ಆರು ಏಕರೆ ತೋಟದ ಜೊತೆ ಮನೆ ಸಹ ಬೆಂಕಿಗಾಹುತಿಯಾಗಿದೆ. ಒಟ್ಟು ಒಂಭತ್ತು ಏಕರೆ ತೋಟದಲ್ಲಿ ಆರು ಏಕರೆ ಬೆಂಕೆಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

    ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಹೇಮಾವತಿ ನದಿಯಲ್ಲಿ ಮೀನುಗಳ ಮಾರಣಹೋಮ

    ಹೇಮಾವತಿ ನದಿಯಲ್ಲಿ ಮೀನುಗಳ ಮಾರಣಹೋಮ

    ಚಿಕ್ಕಮಗಳೂರು: ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿಯ ಹೇಮಾವತಿ ನದಿಯಲ್ಲಿ ಸಾವಿರಾರು ಮೀನುಗಳ ಮಾರಾಣ ಹೋಮ ನಡೆದಿದೆ.

    ಮೀನು ಹಿಡಿಯಲು ಕಿಡಿಗೇಡಿಗಳು ನೀರಿಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಇದ್ರಿಂದ ಮಲೆನಾಡಿನ ಜೀವನದಿಯಾಗಿರುವ ಹೇಮಾವತಿ ನದಿ ಕಲುಷಿತಗೊಂಡಿದೆ. ಹೇಮಾವತಿ ನದಿ ಇಲ್ಲಿನ ಜಾವಳಿಯಲ್ಲಿ ಹುಟ್ಟಿ ಮೂಡಿಗೆರೆ ಮೂಲಕ ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಡ್ಯಾಂಗೆ ನೀರು ಸೇರುತ್ತದೆ.

    ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.