Tag: Chikkamagaluru

  • ಪಲ್ಟಿಯಾದ ಲಾರಿಯನ್ನು ಕ್ರೇನ್ ನಲ್ಲಿ ಎತ್ತಲು ಹೋಗಿ ಮತ್ತೆ ಪಲ್ಟಿ!

    ಪಲ್ಟಿಯಾದ ಲಾರಿಯನ್ನು ಕ್ರೇನ್ ನಲ್ಲಿ ಎತ್ತಲು ಹೋಗಿ ಮತ್ತೆ ಪಲ್ಟಿ!

    ಚಿಕ್ಕಮಗಳೂರು: ಮಳೆಯ ಅವಾಂತರಕ್ಕೆ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಪಲ್ಟಿಯಾಗಿದ್ದು, ಪರಿಣಾಮ ಶೃಂಗೇರಿ ಮತ್ತು ಚಿಕ್ಕಮಗಳೂರು ರಸ್ತೆ ಸಂಚಾರ ಕಡಿತಗೊಂಡಿತ್ತು.

    ಚಿಕ್ಕಮಗಳೂರು ತಾಲೂಕಿನ ಎಲೆಕಲ್ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಪರಿಣಾಮ ಸುಮಾರು 2 ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಕಡಿತಗೊಂಡಿತ್ತು.

    ಈ ಬಗ್ಗೆ ಮಾಹಿತಿ ತಿಳಿದ ಬಾಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪಲ್ಟಿಯಾದ ಲಾರಿಯನ್ನು ಕ್ರೇನ್ ಮೂಲಕ ಎತ್ತಿ ನಿಲ್ಲಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಕ್ರೇನ್ ನಲ್ಲಿ ಎತ್ತುವ ವೇಳೆ ಲಾರಿ ಕಾಫಿ ತೋಟಕ್ಕೆ ಹಿಂಬದಿ ಚಲಿಸಿ ಮತ್ತೆ ಪಲ್ಟಿಯಾಗಿದೆ.

    ಈ ಅವಘಡದಿಂದ ಅದೃಷ್ಟವಶಾತ್ ಟಿಪ್ಪರ್ ಚಾಲಕ ಹಾಗೂ ಕಂಡಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ತಪ್ಪು ಮಾಡಿದವ್ರಿಗೆ ಶಿಕ್ಷೆಯಾಗುತ್ತೆ, ಉಪ್ಪು ತಿಂದವರು ನೀರು ಕುಡೀತಾರೆ: ಶೋಭಾ ಕರಂದ್ಲಾಜೆ

    ತಪ್ಪು ಮಾಡಿದವ್ರಿಗೆ ಶಿಕ್ಷೆಯಾಗುತ್ತೆ, ಉಪ್ಪು ತಿಂದವರು ನೀರು ಕುಡೀತಾರೆ: ಶೋಭಾ ಕರಂದ್ಲಾಜೆ

    ಚಿಕ್ಕಮಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆ ದಾಳಿಗೆ ಕೇಂದ್ರ ಸರ್ಕಾರವೇ ಕಾರಣ ಎಂಬ ಕಾಂಗ್ರೆಸ್ ನಾಯಕರುಗಳ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

    ಕೇಂದ್ರ ಸರ್ಕಾರವು ಕೇವಲ ಕಾಂಗ್ರೆಸ್ ಮುಖಂಡರ ಮನೆಗೆ ಮಾತ್ರ ಐಟಿ ದಾಳಿ ನಡೆಸುತ್ತಿದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರಿ ಸಂಸ್ಥೆಗಳು ಅವ್ಯವಹಾರಗಳ ಹಿನ್ನೆಲೆಯಲ್ಲಿ ದಾಳಿ ನಡೆಸುತ್ತಿವೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ. ಆರೋಪಗಳಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಮುಖಂಡರುಗಳು ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸುತ್ತಿದ್ದಾರೆ.

    ಅವ್ಯವಹಾರ ಮಾಡಿದ್ದರಿಂದ ನಾಯಕರುಗಳಿಗೆ ಭಯ ಕಾಡುತ್ತಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯಾರು ನ್ಯಾಯಯುತವಾಗಿರುತ್ತಾರೆ ಅವರು ಹೆದರಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ತಪ್ಪು ಮಾಡಿದವರಿಗೆ ಭಯ ಇದ್ದೇ ಇರುತ್ತದೆ. ಯಾರು ತಪ್ಪು ಮಾಡಿರುತ್ತಾರೋ ಅವರು ಖಂಡಿತವಾಗಿಯೂ ಶಿಕ್ಷೆ ಅನುಭವಿಸುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ತಿರುಗೇಟು ನೀಡಿದರು.

    ದೇಶದಲ್ಲಿ ಆದಾಯ ತೆರಿಗೆ ದಾಳಿಯು ಸುಮಾರು 70 ವರ್ಷಗಳಿಂದ ದಾಳಿ ನಡಸುತ್ತಿದೆ. ಇದೇನೂ ಮೊದಲೇನಲ್ಲ ಕಾಂಗ್ರೆಸ್ ಸರ್ಕಾರದ 50 ವರ್ಷಗಳ ಅಧಿಕಾರ ಅವಧಿಯಲ್ಲಿ ನಡೆದ ಐಟಿ ದಾಳಿಗಳು ರಾಜಕೀಯ ಪ್ರೇರಿತವೇ ಎಂದು ಈ ವೇಳೆ ಪ್ರಶ್ನಿಸಿದರು.

    ನನ್ನ ಬಳಿ ಹಲವು ಡೈರಿ ಇದೆ ಅಂತ ಡಿಕೆಶಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈವಾಗ ನಿಮ್ಮದೇ ಸರ್ಕಾರ ಹಾಗೂ ನಿಮ್ಮದೇ ಮುಖ್ಯಮಂತ್ರಿಗಳಿದ್ದಾರೆ. ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ನಿಮಗೆ ಇದೆ. ನಿಮ್ಮ ಬಳಿ ಯಾರದ್ದು ಬೇಕಾದರೂ ಡೈರಿ ಇರಲಿ, ಇದ್ದರೆ ಅದರಲ್ಲಿರುವವರ ವಿರುದ್ಧ ತನಿಖೆ ಕೈಗೊಳ್ಳಿ ಎಂದು ಖಾರವಾಗಿ ಉತ್ತರಿಸಿದ್ದಾರೆ.

  • ವಿರಾಮ ಮುಗಿಸಿ ಮತ್ತೆ ಚಿಕ್ಕಮಗಳೂರು, ಕರಾವಳಿಯಲ್ಲಿ ಆರ್ಭಟಿಸುತ್ತಿದ್ದಾನೆ ಮಳೆರಾಯ!

    ವಿರಾಮ ಮುಗಿಸಿ ಮತ್ತೆ ಚಿಕ್ಕಮಗಳೂರು, ಕರಾವಳಿಯಲ್ಲಿ ಆರ್ಭಟಿಸುತ್ತಿದ್ದಾನೆ ಮಳೆರಾಯ!

    ಚಿಕ್ಕಮಗಳೂರು/ಉಡುಪಿ/ದಕ್ಷಿಣಕನ್ನಡ: ಒಂದು ವಾರ ವಿರಾಮ ನೀಡಿದ ಬಳಿಕ ಮಳೆರಾಯ ಇಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರ್ಭಟ ಮುಂದುವರಿಸಿದ್ದಾನೆ.

    ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದ ಹಿಂದೆ ಆದ ಅವಾಂತರಗಳಿಂದ ಜನಸಾಮಾನ್ಯರು ಹೊರಬರುವಷ್ಟರಲ್ಲಿ ಮತ್ತೆ ಮಳೆರಾಯನ ಆಗಮನ ಜೋರಾಗಿದೆ. ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಕಳಸ ಭಾಗದಲ್ಲಿ ಬೆಳಗ್ಗಿನಿಂದಲೂ ಕಪ್ಪನೆಯ ಕಾರ್ಮೋಡ ಕವಿದು ಮಳೆ ಸುರಿಯುತ್ತಿದೆ. ಇದರ ನಡುವೆಯೂ ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿಕೊಂಡು, ಬಿತ್ತನೆ ಕೆಲಸಕ್ಕೆ ಮುಂದಾಗಿದ್ದಾರೆ.

    ಚಾರ್ಮಾಡಿ ಘಾಟ್‍ನಲ್ಲೂ ಕೂಡ ಮಳೆ ಬೀಳುತ್ತಿದ್ದು, ದಟ್ಟವಾದ ಮಂಜು ಕವಿದಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ವಾಹನ ಚಲಾಯಿಸಲು ಪರದಾಡುತ್ತಿದ್ದಾರೆ. ಹೆಚ್ಚಿನ ಮಂಜು ಕವಿದ ಕಾರಣದಿಂದ ಚಾರ್ಮಾಡಿ ಘಾಟ್‍ನಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ದಕ್ಷಿಣಕನ್ನಡದಲ್ಲಿ ಬೆಳಗ್ಗಿನಿಂದಲೂ ವರುಣ ತನ್ನ ಆರ್ಭಟ ಮುಂದುರಿಸಿದ್ದಾನೆ. ಹಲವು ರಸ್ತೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿರುವುದರಿಂದ ಮತ್ತೆ ನೆರೆಯ ಆತಂಕ ಸೃಷ್ಟಿಯಾಗಿದೆ.

    ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ, ಬೈಂದೂರಲ್ಲೂ ಬಿರುಸಿನ ಮಳೆ ಬೀಳುತ್ತಿದೆ. ಭಾರೀ ಮೋಡ ಮುಸುಕಿದ ವಾತಾವರಣವಿದ್ದು, ದಿನವಿಡೀ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಮಳೆ ಜೊತೆ ಗಾಳಿ ಬೀಸುತ್ತಿದೆ. ನಾಡದೋಣಿ ಮೀನುಗಾರರಿಗೆ ಜಿಲ್ಲಾಡಳಿತ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಂದೇಶ ರವಾನಿಸಿದೆ.

    ಜಿಲ್ಲೆಯ ನದಿ, ಕೆರೆ ತೊರೆಗಳು ತುಂಬಿ ಹರಿಯುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅರಬ್ಬೀ ಸಮುದ್ರದಲ್ಲಿ ಗಂಟೆಗೆ ಸುಮಾರು 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಸಮುದ್ರ ತೀರದ ಜನ ಎಚ್ಚರಿಕೆಯಿಂದ ಇರುವಂತೆ ಮುನ್ಸೂಚನೆ ನೀಡಲಾಗಿದೆ.

    ಸೋಮವಾರ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿಯವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದರು. ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಹೆಚ್ಚು ಮಳೆ ಬೀಳಲಿದೆ. ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಅವರು ತಿಳಿಸಿದ್ದರು.

  • ಸೇತುವೆಗೆ ಡಿಕ್ಕಿಯಾಗಿ ಲಾರಿ ಪಲ್ಟಿಯಾದ ರಭಸಕ್ಕೆ ಚಕ್ರಗಳೇ ಉರುಳಿದವು!

    ಸೇತುವೆಗೆ ಡಿಕ್ಕಿಯಾಗಿ ಲಾರಿ ಪಲ್ಟಿಯಾದ ರಭಸಕ್ಕೆ ಚಕ್ರಗಳೇ ಉರುಳಿದವು!

    ಚಿಕ್ಕಮಗಳೂರು: ಕೊಬ್ಬರಿ ತುಂಬಿದ್ದ ಲಾರಿ ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಜಿಲ್ಲೆಯ ತರೀಕೆರೆಯ ಎಪಿಎಂಸಿ ಯಾರ್ಡ್ ಬಳಿ ನಡೆದಿದೆ.

    ಹಾಸನದ ಅರಸೀಕೆರೆಯಲ್ಲಿ ಕೊಬ್ಬರಿ ಲೋಡ್ ಮಾಡಿಕೊಂಡ ಲಾರಿ ಮಹಾರಾಷ್ಟ್ರದತ್ತ ಹೊರಟಿತ್ತು. ಇಂದು ಬೆಳಗ್ಗಿನ ಜಾವ ತರೀಕೆರೆಗೆ ಬರುತ್ತಿದ್ದಂತೆ ಲಾರಿ ಚಾಲಕ ನಿದ್ರೆ ಮಂಪರಿನಲ್ಲಿದ್ದ ಪರಿಣಾಮ ಲಾರಿ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.

    ಪಲ್ಟಿಯಾದ ರಭಸಕ್ಕೆ ಒಂದೇ ಒಂದು ಟೈರ್ ಕೂಡ ಲಾರಿಯಲ್ಲಿ ಇಲ್ಲ. ಅಷ್ಟೇ ಅಲ್ಲದೇ ಸೇತುವೆಯಿಂದ ಪಲ್ಪಿಯಾದ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವತಾಶ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಲಾರಿ ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ತರೀಕೆರೆ ಸರ್ಕಾರಿ ಆಸ್ಪತೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆ ನಡೆದ ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಶಿಥಿಲಾವಸ್ಥೆಯಲ್ಲಿದೆ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ!

    ಶಿಥಿಲಾವಸ್ಥೆಯಲ್ಲಿದೆ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ!

    ಚಿಕ್ಕಮಗಳೂರು: ಭದ್ರಾ ನದಿಯ ನೀರಿನ ರಭಸಕ್ಕೆ ಹೊರನಾಡು ಅನ್ನಪೂಣೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಶಿಥಿಲಾವಸ್ಥೆಯಲ್ಲಿರುವ ಹೆಬ್ಬಾಳೆ ಸೇತುವೆ ಇಕ್ಕೆಲಗಳಲ್ಲಿದ್ದ ತಡೆಗೋಡೆಯ ಕಂಬಗಳು ಮುರಿದು ಬಿದ್ದಿದೆ.

    ಸೇತುವೆಯೂ ಪಾಳು ಬಿಟ್ಟು, ಸೇತುವೆಯೇ ಮಧ್ಯದಲ್ಲೇ ರಂಧ್ರಗಳಾಗಿವೆ. ಮಳೆ ನಿಂತ ಮೇಲೆ ಭದ್ರೆಯ ರಭಸ ಕಡಿಮೆಯಾದ ಮೇಲೆ ನೀರಿನಲ್ಲಿ ತೇಲಿ ಬಂದಿದ್ದ ದೊಡ್ಡ ಮರದ ದಿಣ್ಣೆಗಳನ್ನ ಜೆಸಿಬಿ ಮೂಲಕ ಸ್ವಚ್ಛ ಮಾಡಲಾಗಿದೆ.

    ಸೇತುವೆಯ ಮಧ್ಯದಲ್ಲೇ ಬಿರುಕು ಬಿಟ್ಟಿದೆ. ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೋಗುವ ಬಹುತೇಕ ವಾಹನಗಳು ಈ ಸೇತುವೆಯ ಮೂಲಕವೇ ಸಂಚರಿಸುತ್ತದೆ. ನೀರಿನ ರಭಸಕ್ಕೆ ಸೇತುವೆಯ ಪಿಲ್ಲರ್ ಗಳು ಯಾವ ಹಂತದಲ್ಲಿವಯೋ ಗೊತ್ತಿಲ್ಲ.

    30 ಮೀಟರ್ ಉದ್ದದ ಸೇತುವೆಯನ್ನು 1992ರಲ್ಲಿ ಸಿಎಂ ಬಂಗಾರಪ್ಪನವರು ಉದ್ಘಾಟಿಸಿದ್ದಾರೆ. ಮುಂದೊಂದು ದಿನ ಮತ್ತೊಂದು ಅನಾಹುತ ಸಂಭವಿಸಿದ ಮೇಲೆ ಜಿಲ್ಲಾಡಳಿತ ಮುಜುಗರಕ್ಕೀಡಾಗೋ ಬದಲು ಕೂಡಲೇ ಸೇತುವೆ ದುರಸ್ಥಿಗೊಳಲಿಸೋದು ಒಳ್ಳೆಯದು ಎಂದು ಸಾರ್ವಜನಿಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

  • ಚಿಕ್ಕಮಗ್ಳೂರು, ಮಡಿಕೇರಿಯಲ್ಲಿ ತಗ್ಗಿದ ಮಳೆ- ಇಂದಿನಿಂದ ಚಾರ್ಮಾಡಿ ಘಾಟ್ ಓಪನ್

    ಚಿಕ್ಕಮಗ್ಳೂರು, ಮಡಿಕೇರಿಯಲ್ಲಿ ತಗ್ಗಿದ ಮಳೆ- ಇಂದಿನಿಂದ ಚಾರ್ಮಾಡಿ ಘಾಟ್ ಓಪನ್

    ಚಿಕ್ಕಮಗಳೂರು/ಮಡಿಕೇರಿ: ಚಿಕ್ಕಮಗಳೂರು, ಹಾಸನ ಹಾಗೂ ಮಡಿಕೇರಿಯಲ್ಲಿ ಸತತ ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಇಂದು ಇಳಿಮುಖವಾಗಿದೆ.

    ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ಮೂಡಿಗೆರೆ ನಾಲ್ಕು ತಾಲೂಕಿನಲ್ಲೂ ನಿನ್ನೆ ಸಂಜೆಯಿಂದಲೇ ಮಳೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಹೀಗಾಗಿ ಕಾಫಿನಾಡಿನ ಮಲೆನಾಡು ಭಾಗ ಸಹಜ ಸ್ಥಿತಿಯತ್ತ ಮರಳಿದೆ.

    ತುಂಗಾ, ಭದ್ರಾ ನದಿ ಮೈದುಂಬಿ ಹರಿಯುತ್ತಿವೆ. ಇನ್ನು ಜಲಾವೃತವಾಗಿದ್ದ ರಸ್ತೆಗಳಲ್ಲಿ ಸಂಚಾರ ಆರಂಭವಾಗಿದೆ. ಹೊರನಾಡು, ಕುದುರೆಮುಖ ಮಾರ್ಗದಲ್ಲಿ ಸೇತುವೆಗಳು ಮುಳುಗಡೆಯಾಗಿತ್ತು. ಇದೀಗ ವರುಣನ ಅಬ್ಬರ ತಗ್ಗಿದ್ದು ಸೇತುವೆಗಳು ಸಂಚಾರ ಮುಕ್ತವಾಗಿದೆ. ಇತ್ತ ಇಂದಿನಿಂದ ಚಾರ್ಮಾಡಿಯಲ್ಲೂ ಕೂಡ ಸಂಚಾರ ಆರಂಭವಾಗಿದೆ.

    ಜಲಾವೃತಗೊಂಡಿದ್ದ ಶೃಂಗೇರಿ ಶಾರದಾ ಪೀಠದಲ್ಲಿ ಕೂಡ ಮಳೆ ನೀರಿನ ಪ್ರಂಆನ ತಗ್ಗಿದ್ದು, ಎಂದಿನಂತೆ ಮುಂಜಾನೆಯಿಂದ ದೇವರ ದರ್ಶನ ಕಾರ್ಯದಲ್ಲಿ ಭಕ್ತರು ತೊಡಗಿದ್ದಾರೆ.

    ಮಡಿಕೇರಿಯಲ್ಲೂ ಮಳೆ ನಿಂತಿದ್ದು, ತಲಕಾವೇರಿ, ಭಾಗಮಂಡಲದಲ್ಲಿ ರಸ್ತೆಗಳು ವಾಹನ ಸಂಚಾರಕ್ಕೆ ಮುಕ್ತವಾಗಿದೆ. ವೀರಾಜಪೇಟೆಯ ತಾಲೂಕಿನ ಹಲವು ಮನೆಗಳು ಮುಳುಗಡೆ ಭೀತಿಯಲ್ಲಿವೆ. ಭಗಂಡೇಶ್ವರ ದೇವಾಲಯ ಜಲಾವೃತ, ಮನೆಗಳಿಗೆ ನೀತು ನಿಗಿತ್ತು. ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

  • ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ-ಸಂಚಾರ ಅಸ್ತವ್ಯಸ್ತ

    ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ-ಸಂಚಾರ ಅಸ್ತವ್ಯಸ್ತ

    ಮಂಗಳೂರು: ಜಿಲ್ಲೆಯ ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಭೂ ಕುಸಿತ ಸಂಭವಿಸಿದೆ.

    ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾರ್ಮಾಡಿಘಾಟ್ ನಲ್ಲಿ ಮತ್ತೆ ಭೂಮಿ ಕುಸಿದಿದೆ. ಘಾಟ್ ನ 6ನೇ ತಿರುವಿನಲ್ಲಿರುವ ತಡೆಗೋಡೆ ಕುಸಿದ ಪರಿಣಾಮ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ. ಮಳೆ ನಿರಂತರವಾಗಿ ಸುರಿದಿದ್ದು ಮರಗಿಡಗಳು ಕುಸಿಯುವ ಹಂತದಲ್ಲಿವೆ.

    ಸ್ಥಳಕ್ಕೆ ಜಿಲ್ಲಾಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಚಾರ್ಮಾಡಿ ಘಾಟ್ ಮಾರ್ಗವನ್ನು ಬಂದ್ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಇಂದು, ನಾಳೆ ಹಾಗೂ ನಾಡಿದ್ದು ಘಾಟ್‍ನಲ್ಲಿ ರಸ್ತೆ ಸಂಚಾರವನ್ನು ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

    ಸೋಮವಾರ ಸುರಿದ ಮಳೆಗೆ ಎರಡನೇ ತಿರುವಿನಲ್ಲಿದ್ದ ತಡೆಗೋಡೆ ಕುಸಿದಿತ್ತು. ಸಾಕಷ್ಟು ಮಳೆ ಇದ್ದ ಕಾರಣ ತೆರವು ಕಾರ್ಯಚಾರಣೆ ಸಾಧ್ಯವಾಗಿರಲಿಲ್ಲ. ಸುಮಾರು 3 ಕಿಮೀ ದೂರದಷ್ಟು ವಾಹನಗಳು ನಿಂತು ಟ್ರ್ಯಾಫಿಕ್ ಜಾಂ ಆಗಿತ್ತು. ಹಾಗಾಗಿ ಭೂಕುಸಿತ ಉಂಟಾಗಿರುವುದನ್ನು ತೆರವುಗೊಳಿಸಲು ಜಿಲ್ಲಾಡಳಿತ 48 ಗಂಟೆಗಳ ಕಾಲಾವಕಾಶವನ್ನು ಜಿಲ್ಲಾಡಳಿತ ಕೇಳಿತ್ತು. ಅಲ್ಲೆದೇ ಪ್ರಯಾಣಿಕರಿಗೆ ಮಂಗಳೂರಿನಿಂದ ನಿಂದ ಬೆಂಗಳೂರಿಗೆ ನಾರಾವಿ, ಕಳಸ ಮೂಲಕ ಬದಲಿ ಮಾರ್ಗವನ್ನು ಕಲ್ಪಿಸಲಾಗಿತ್ತು.

    ಆದರೆ ಈಗ ಮತ್ತೆ ಭೂ ಕುಸಿತ ಉಂಟಾಗಿರುವುದರಿಂದ ಮತ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಈ ಮಾರ್ಗವಾಗಿ ಚಲಿಸುವ ಪ್ರಯಾಣಿಕರು ಇನ್ನಿಲ್ಲದ ಪಾಡು ಪಡುವಂತಾಗಿದೆ.

  • ಎಚ್‍ಡಿಡಿ ಪಾದಪೂಜೆ ಮಾಡಿದ್ದ ವಿನಯ್ ಗುರೂಜಿ 6 ತಿಂಗ್ಳು ಭಕ್ತರಿಗೆ ದರ್ಶನ ನೀಡಲ್ಲ!

    ಎಚ್‍ಡಿಡಿ ಪಾದಪೂಜೆ ಮಾಡಿದ್ದ ವಿನಯ್ ಗುರೂಜಿ 6 ತಿಂಗ್ಳು ಭಕ್ತರಿಗೆ ದರ್ಶನ ನೀಡಲ್ಲ!

    ಚಿಕ್ಕಮಗಳೂರು: ನಡೆದಾಡುವ ದೇವರೆಂದೇ ಎಂದೇ ಖ್ಯಾತಿಯಾಗಿರೋ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆಯ ಸ್ವರ್ಣ ಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಇನ್ನು ಆರು ತಿಂಗಳು ಭಕ್ತರಿಗೆ ದರ್ಶನ ನೀಡುವುದಿಲ್ಲ.

    ಕಳೆದ ಎಂಟು ವರ್ಷದಿಂದ ಪ್ರತಿ ಗುರುವಾರ ಭಕ್ತರಿಗೆ ದರ್ಶನ ನೀಡ್ತಿದ್ದ ಗುರೂಜಿ ಇದೀಗ, ಮೌನ ವ್ರತಕ್ಕೆ ಮುಂದಾಗಿದ್ದಾರೆ. ಆರು ತಿಂಗಳು ಗೌಪ್ಯ ಸ್ಥಳದಲ್ಲಿ ಮೌನ ವ್ರತ ನಡೆಸಲಿದ್ದು, ಎಲ್ಲಿರುತ್ತಾರೆಂಬ ಮಾಹಿತಿ ಆಶ್ರಮದ ಸಿಬ್ಬಂದಿಗೂ ತಿಳಿದಿಲ್ಲ. ಇದನ್ನೂ ಓದಿ: ಎಚ್‍ಡಿಕೆ ಸಿಎಂ ಆಗ್ತಾರೆ ಅಂತ 2 ವರ್ಷದ ಹಿಂದೆಯೇ ಭವಿಷ್ಯ – ಗುರೂಜಿಗೆ ದೇವೇಗೌಡ್ರು, ಸ್ಪೀಕರ್ ಪಾದಪೂಜೆ

    ಇತ್ತೀಚೆಗೆ ರಾಜಕಾರಣಿಗಳ ಭೇಟಿಯಿಂದ ಗುರೂಜಿ ಸಾಕಷ್ಟು ಸುದ್ದಿಯಾಗಿದ್ದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಗುರೂಜಿಯ ಪಾದಪೂಜೆ ನಡೆಸಿದ್ರೆ, ಸ್ಪೀಕರ್ ರಮೇಶ್ ಕುಮಾರ್ ಗುರೂಜಿಗೆ ಆರತಿ ಬೆಳಗಿದ್ರು. ಇದೆಲ್ಲಾ ಮಾಧ್ಯಮದಲ್ಲಿ ಸುದ್ದಿಯಾದ ಮೇಲೆ ಬರುವ ಭಕ್ತರ ಸಂಖ್ಯೆ ಕೂಡ ಡಬಲ್ ಆಗಿತ್ತು.

    ಪ್ರಚಾರ ಬೇಡವೆಂದರೂ ಸಾಕಷ್ಟು ಪ್ರಚಾರ ಸಿಕ್ಕಿದ್ರಿಂದ ಮೌನ ವ್ರತಕ್ಕೆ ಮುಂದಾಗಿದ್ದಾರೆ. ಹೀಗಾಗಿ ಸದ್ಯ ಗುರೂಜಿಯನ್ನ ಕಾಣಲು ಬರುತ್ತಿರುವ ಭಕ್ತರು ಬೇಸರದಿಂದ ವಾಪಸ್ ಹೋಗ್ತಿದ್ದಾರೆ.

  • ಮಣ್ಣಿನ ಮಕ್ಳು ಅಂತ ಪೇಟೆಂಟ್ ಹಾಕ್ಕೊಂಡು ಹುಟ್ಟಿರೋರಿಗೆ ಖಾತೆ ಯಾಕೆ- ಸಿಟಿ ರವಿ ವ್ಯಂಗ್ಯ

    ಮಣ್ಣಿನ ಮಕ್ಳು ಅಂತ ಪೇಟೆಂಟ್ ಹಾಕ್ಕೊಂಡು ಹುಟ್ಟಿರೋರಿಗೆ ಖಾತೆ ಯಾಕೆ- ಸಿಟಿ ರವಿ ವ್ಯಂಗ್ಯ

    ಚಿಕ್ಕಮಗಳೂರು: ಮಣ್ಣಿನ ಮಕ್ಕಳು ಎಂದು ಪೇಟೆಂಟ್ ಹಾಕಿಕೊಂಡೇ ಹುಟ್ಟಿರೋರಿಗೆ ಅಬಕಾರಿ, ಇಂಧನ, ಲೋಕೋಪಯೋಗಿ ಇಲಾಖೆಗಳೇ ಏಕೆ ಬೇಕು ಅಂತ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಪ್ರಶ್ನಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜೆಡಿಎಸ್ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ. ಮಣ್ಣಿಗೂ ಈ ಖಾತೆಗೂ ಏನು ಸಂಬಂಧ ಅನ್ನೋದು ನನಗೆ ಅರ್ಥವಾಗದೇ ಇರುವ ಸಂಗತಿಯಾಗಿದೆ. ಮಣ್ಣಿನ ಮಕ್ಕಳಿಗೆ ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಸಣ್ಣ ನೀರಾವರಿ ಖಾತೆಗಳು ಬೇಡ ಅಂತ ಹೇಳಿ ಪರೋಕ್ಷವಾಗಿ ದೇವೇಗೌಡರ ಕುಟುಂಬದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

     

    ಜನಪರ, ಕಾಳಜಿಯುಳ್ಳ ಯೋಜನೆಯಲ್ಲೂ ಕೂಡ ಸಮನ್ವಯ ತೋರಿಸುತ್ತಿಲ್ಲ. ಬದಲಾಗಿ ಯಾರಿಗೆ ಯಾವ ಖಾತೆ ಎನ್ನುವುದರ ಬಗ್ಗೆ ಮಾತ್ರ ಕಾಳಜಿಯಿದೆ. ಜನರಿಗೆ ಕೊಟ್ಟ ಭರವಸೆಗಳ ಬಗ್ಗೆ ಕಾಳಜಿ ಇದ್ರೆ ಅವರು ಜನಪರ ಯೋಜನೆಗಳನ್ನು ರೂಪಿಸುತ್ತಿದ್ದರು. ಆದ್ರೆ ಈಗ ಅವರಲ್ಲಿ ಜಟಾಪಟಿ ನಡೆಯುತ್ತಿರುವುದು ಜನಪರ ಕಾಳಜಿಯ ಪರ ಅಲ್ಲ ಅಂತ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಖಾತೆಗಾಗಿ ನಡೆಯುತ್ತಿರೋ ಕಿತ್ತಾಟದ ಬಗ್ಗೆ ಲೇವಡಿ ಮಾಡಿದ್ದಾರೆ.

  • ಮನೆಯ ಮೇಲ್ಛಾವಣಿಯಲ್ಲಿ ವಾಸವಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪದ ರಕ್ಷಣೆ

    ಮನೆಯ ಮೇಲ್ಛಾವಣಿಯಲ್ಲಿ ವಾಸವಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪದ ರಕ್ಷಣೆ

    ಚಿಕ್ಕಮಗಳೂರು: ಕಳೆದ ಮೂರು ದಿನದಿಂದ ಮನೆಯ ಚಾವಣಿಯಲ್ಲಿ ವಾಸವಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿರುವ ಘಟನೆ ಮೂಡಿಗೆರೆಯ ಆಲೆಖಾನ್ ಹೊರಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಗಿರೀಶ್ ಎಂಬವರ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಕಾಳಿಂಗ ಸರ್ಪ ವಾಸವಿದ್ದು, ಕೆರೆ ಹಾವು ನುಂಗಿ ಕಾರಣ ಬೇರೆಡೆ ತೆರಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ವೇಳೆ ಕಾಳಿಂಗ ಸರ್ಪ ನೋಡಿ ಭಯಗೊಂಡ ಮನೆ ಮಾಲೀಕ ಗಿರೀಶ್ ಉರಗ ತಜ್ಞ ಸ್ನೇಕ್ ನರೇಶ್ ಅವರಿಗೆ ಮಾಹಿತಿ ನೀಡಿದ್ದಾರೆ.

    ಗಿರೀಶ್ ಅವರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಉರಗ ತಜ್ಞ ಸ್ನೇಕ್ ನರೇಶ್ ಸ್ಥಳಕ್ಕೆ ಬಂದು ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲು ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಮನೆಯ ಚಾವಣೆಯಲ್ಲಿದ್ದ ಕಾಳಿಂಗ ಸರ್ಪವನ್ನು ಬಿದಿರಿನ ಮೂಲಕ ಕೆಳಗೆ ಬೀಳಿಸಿ, ಬಳಿಕ ಸೆರೆ ಹಿಡಿಯುವ ಸಂದರ್ಭದಲ್ಲಿ ಕಾಳಿಂಗ ಸರ್ಪ ನುಂಗಿದ ಹಾವನ್ನು ಹೊರ ಹಾಕಲು ಯತ್ನಿಸಿ ಸಾಧ್ಯವಾಗದೆ ತಪ್ಪಿಸಿಕೊಳ್ಳು ಯತ್ನಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ವಿಜಯಕುಮಾರ್ ಹಾಗೂ ಸುರೇಶ್ ನೇತೃತ್ವದಲ್ಲಿ ಕಾಳಿಗ ಸೆರೆ ಹಿಡಿಯಲಾಯಿತು. ಸದ್ಯ ಸೆರೆ ಹಿಡಿರುವ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ನೇತೃತ್ವದಲ್ಲಿ ಚಾರ್ಮಾಡಿ ಕಾಡಿಗೆ ಬಿಡಲಾಗಿದೆ. ಸದ್ಯ ಸರ್ಪದ ರಕ್ಷಣೆಯಿಂದ ಮನೆಯ ಮಾಲೀಕ ಗೀರಿಶ್ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.