Tag: Chikkamagaluru

  • ನೋವನ್ನು ಮರೆಯಲು ಕಂಚಿ ರೇಷ್ಮೆ ಸೀರೆಯಲ್ಲಿ ಮೂಡಿತು ಲಲಿತ ಸಹಸ್ರನಾಮ!

    ನೋವನ್ನು ಮರೆಯಲು ಕಂಚಿ ರೇಷ್ಮೆ ಸೀರೆಯಲ್ಲಿ ಮೂಡಿತು ಲಲಿತ ಸಹಸ್ರನಾಮ!

    ಚಿಕ್ಕಮಗಳೂರು: ತನ್ನ ನೋವನ್ನ ಮರೆಯೋಕೆ ಮಹಿಳೆಯೊಬ್ಬರು ಸೀರೆಯ ಮೇಲೆ ಲಲಿತ ಸಹಸ್ರ ನಾಮವನ್ನು ಬರೆದು ಶೃಂಗೇರಿ ಶಾರದಾಂಬೆಗೆ ಅರ್ಪಣೆ ಮಾಡಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ.

    ಕಳೆದ ವರ್ಷ ತಮಿಳುನಾಡು ಮೂಲದ ಪದ್ಮ ಮಂಜುನಾಥ್ ಅವರ ಮಗ ಮೃತಪಟ್ಟಿದ್ದರು. ಆ ನೋವನ್ನ ಮರೆಯೋಕೆ ಪದ್ಮ ಮಂಜುನಾಥ್ ಸೀರೆಯ ಮೇಲೆ ಸಾವಿರ ನಾಮವನ್ನು ಹೆಣೆದಿದ್ದಾರೆ.

    ಒಂಭತ್ತು ಗಜ (15 ಅಡಿ ಉದ್ದ) ಉದ್ದದ ಕಂಚಿ ರೇಷ್ಮೆ ಸೀರೆಯ ಮೇಲೆ ಹಳದಿ ದಾರದಲ್ಲಿ ಸಣ್ಣ ಸೂಜಿಯಿಂದ ಲಲಿತ ಸಹಸ್ರ ನಾಮ ಸೋತ್ರವನ್ನ ಸೀರೆಯ ಮೇಲೆ ಹೆಣೆದಿದ್ದಾರೆ. ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿರುವ ಈ ಪವಿತ್ರ ಸ್ತೋತ್ರವನ್ನು ಪಠಿಸುತ್ತಾ ಸೀರೆಯ ಮೇಲೆ ಹೆಣೆದು ದಾಖಲಿಸಿದ್ದಾರೆ.

    ಈ ಸೀರೆಯನ್ನ ಮನೋಹರ ಹಾಗೂ ವೈಭವಯುತವಾಗಿ ಮುತ್ತು, ಹವಳ, ನವರತ್ನಗಳಿಂದ ಅಲಂಕರಿಸಿದ್ದಾರೆ. ಈ ಸೀರೆಯನ್ನ ಪದ್ಮ ಮಂಜುನಾಥ್ ಕಳೆದ ವರ್ಷ ಶೃಂಗೇರಿ ಮಠಕ್ಕೆ ಆಗಮಿಸಿ ಸೀರೆಯನ್ನ ಉಭಯ ಶ್ರೀಗಳ ಮುಂದೆ ತೋರಿಸಿ ಈಗ ಶೃಂಗೇರಿಯ ಶಾರದಾ ದೇವಿಗೆ ಅರ್ಪಣೆ ಮಾಡಿದ್ದಾರೆ.

  • ಗ್ರಾಹಕರಂತೆ ವೇಷಹಾಕಿ ವನ್ಯಜೀವಿಗಳ ಬೇಟೆಗಾರರ ಬಂಧನ: 16.5 ಕೆ.ಜಿ. ಜಿಂಕೆಗಳ ಕೊಂಬು ವಶ

    ಗ್ರಾಹಕರಂತೆ ವೇಷಹಾಕಿ ವನ್ಯಜೀವಿಗಳ ಬೇಟೆಗಾರರ ಬಂಧನ: 16.5 ಕೆ.ಜಿ. ಜಿಂಕೆಗಳ ಕೊಂಬು ವಶ

    ಚಿಕ್ಕಮಗಳೂರು: ಸಿನಿಮೀಯ ರೀತಿಯಲ್ಲಿ ಗ್ರಾಹಕರಂತೆ ಹೋಗಿ, ಕಾಡು ಪ್ರಾಣಿಗಳನ್ನು ಬೇಟಿ ಆಡುತ್ತಿದ್ದ ಆರು ಜನರ ತಂಡವನ್ನು ತರೀಕೆರೆ ತಾಲೂಕಿನ ಲಕ್ಕವಳ್ಳಿ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

    ಭಾನುವಾರ ಮಾಹಿತಿ ದೊರೆತಿದ್ದು, ಶಿವಮೊಗ್ಗದ ಸತೀಶ್, ಗಾಜನೂರಿನ, ತರೀಕೆರೆ ತಾಲೂಕಿನ ಉಪ್ಪಾರ ಬಸವಣ ಹಳ್ಳಿಯ ಸಹೋದರರಾದ ರವಿ ಹಾಗೂ ಲಕ್ಷ್ಮಣ ಬಂಧಿತ ಆರೋಪಿಗಳಾಗಿದ್ದು, ಉಳಿದ ಇಬ್ಬರ ಬಗ್ಗೆ ಇನ್ನು ಮಾಹಿತಿ ದೊರೆತಿಲ್ಲ ಎಂದು ವಲಯ ಅರಣ್ಯಾಧಿಕಾರಿ ಕಾಂತರಾಜು ತಿಳಿಸಿದ್ದಾರೆ.

    ಸುಮಾರು ದಿನಗಳಿಂದ ಆರೋಪಿಗಳು ಜಾಲದ ಬಗ್ಗೆ ಮಾಹಿತಿ ದೊರೆತಿತ್ತು. ಆದರೆ ಬಂಧಿಸಲು ಸಾಧ್ಯವಾಗಿರಲಿಲ್ಲ. ಭಾನುವಾರ ಖಚಿತ ಮಾಹಿತಿ ದೊರೆಯಿತು. ಹೀಗಾಗಿ ಗ್ರಾಹಕರಂತೆ ಮಾರುವೇಷ ಹಾಕಿಕೊಂಡು ಅರಣ್ಯ ಇಲಾಖೆ ಪೊಲೀಸ್ ಸಿಬ್ಬಂದಿ ತಂಡ ದಾಳಿ ಮಾಡಿದ ಪರಿಣಾಮ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದರು.

    ಬಂಧಿತ ಆರೋಪಿಗಳಿಂದ 4 ಕೆ.ಜಿ. ಆನೆದಂತ, 11 ಕೆ.ಜಿ. ಚಿಪ್ಪು ಹಂದಿಯ ಚಿಪ್ಪು, 16.5 ಕೆ.ಜಿ. ಜಿಂಕೆಗಳ ಕೊಂಬು ಹಾಗೂ 4.5 ಕೆ.ಜಿ. ಕಾಡು ಕೋಣಗಳ ಕೊಂಬುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಹಿಂದೆ ದೊಡ್ಡ ಜಾಲವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಬಂಧಿತರು ಕಾಡು ಪ್ರಾಣಿಗಳ ದೇಹದ ಬೆಲೆಬಾಳುವ ವಸ್ತುಗಳನ್ನು ವಿದೇಶಕ್ಕೆ ಮಾರಾಟ ಮಾಡುತ್ತಿದ್ದರು. ಹೀಗಾಗಿ ಭದ್ರಾ ಹುಲಿ ಅಭಯಾರಣ್ಯ ಸೇರಿದಂತೆ ಮಲೆನಾಡು ಭಾಗದ ಕಾಡುಗಳಲ್ಲಿ ವನ್ಯಜೀವಿಗಳನ್ನ ಭೇಟಿಯಾಡುತ್ತಿದ್ದರು. ಅಲ್ಲದೇ ಅವರ ಬಳಿ ಇನ್ನು ಹೆಚ್ಚಿನ ಪ್ರಾಣಿಗಳ ಚರ್ಮ, ಕೊಂಬು, ಮೂಳೆ, ದಂತಗಳಿವೆ ಎನ್ನುವ ಸಂದೇಹ ವ್ಯಕ್ತವಾಗಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

    ಆನೆ ದಂತಗಳನ್ನು ಏನು ಮಾಡುತ್ತಾರೆ?
    ಆನೆ ದಂತಗಳನ್ನು ಹಣ ಪಡೆದು ಮಾರಾಟ ಮಾಡುವುದುನ್ನು ಕಾನೂನಿನಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ಅರಣ್ಯ ಇಲಾಖೆ ದಾಳಿ ವೇಳೆ ಸಿಕ್ಕಿದ ಆನೆ ದಂತಗಳನ್ನು ರಕ್ಷಣಾ ಇಲಾಖೆಗೆ ನೀಡುತ್ತದೆ. ಕೆಲವು ದಂತಗಳನ್ನು ಸಂಶೋಧನೆ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತದೆ. ಯಾರಿಗೂ ಮಾರಾಟ ಮಾಡಲು ಅನುಮತಿ ಇಲ್ಲದ ಕಾರಣ ದಂತಗಳನ್ನು ಸುಡಲಾಗುತ್ತದೆ.

  • ಇನ್ನೆರಡು ದಿನಗಳಲ್ಲಿ ರಾಜ್ಯದ ಜನರಿಗೆ ಸಹಿ ಸುದ್ದಿ – ಸಚಿವ ರೇವಣ್ಣ

    ಇನ್ನೆರಡು ದಿನಗಳಲ್ಲಿ ರಾಜ್ಯದ ಜನರಿಗೆ ಸಹಿ ಸುದ್ದಿ – ಸಚಿವ ರೇವಣ್ಣ

    ಚಿಕ್ಕಮಗಳೂರು: ಸರ್ಕಾರ ಸುಭದ್ರವಾಗಿದೆ, ಆರಾಮಾಗಿದೆ ಮಾಧ್ಯಮದವರು ಧೃತಿಗೇಡುವುದು ಬೇಡ. ಇನ್ನು ಎರಡು ದಿನಗಳಲ್ಲಿ ರಾಜ್ಯದ ಜನರಿಗೆ ಸಹಿ ಸುದ್ದಿ ಸಿಗಲಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

    ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಚಿಕ್ಕಮಗಳೂರಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೈದು ದಿನಗಳಲ್ಲಿ ರಾಜ್ಯದ ಜನರಿಗೆ ಸಿಹಿ ಸುದ್ದಿ ಸಿಗಲಿದೆ. ರೈತರ ಸಾಲ ಸಂಪೂರ್ಣ ಮನ್ನಾ ಆಗುತ್ತಾ ಅಥವಾ ಭಾಗಶಃ ಮನ್ನಾ ಆಗುತ್ತಾ ಎಂಬ ಗೊಂದಲ ಬೇಡ. ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡೇ ಮಾಡುತ್ತಾರೆ ಎಂಬ ಭರವಸೆ ನೂರಕ್ಕೆ ನೂರು ಇದೆ ಎಂದರು.

    ಈ ಬಾರಿಯ ಹೊಸ ಬಜೆಟ್ ನಲ್ಲಿ ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಜೊತೆಗೆ, ನಮ್ಮ ಕೆಲ ಅಂಶಗಳನ್ನು ಸೆರಿಸಲಾಗುತ್ತೆ ಎಂದರು. ಅಲ್ಲದೇ ಮಲೆನಾಡಿನ ಚಾರ್ಮಾಡಿ, ಆಗುಂಬೆ, ಶಿರಾಡಿಘಾಟ್ ಸೇರಿದಂತೆ ನಾಲ್ಕು ಘಾಟಿಗಳನ್ನು ಪರಿಶೀಲನೆ ನಡೆಸಿದ್ದೇನೆ. ಚಾರ್ಮಾಡಿ ದುರಸ್ಥಿಗಾಗಿ 250 ಕೋಟಿ ರೂ. ಪ್ರಸ್ತಾವನೆ ಕಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

  • ಅಂಗಡಿಗಳ ಶೆಟರ್ ಮುರಿದು ಸರಣಿ ಕಳ್ಳತನ!

    ಅಂಗಡಿಗಳ ಶೆಟರ್ ಮುರಿದು ಸರಣಿ ಕಳ್ಳತನ!

    ಚಿಕ್ಕಮಗಳೂರು: ರಾತ್ರೋರಾತ್ರಿ ಅಂಡಿಗಳ ಶೆಟರ್ ಮುರಿದು ಸರಣಿ ಕಳ್ಳತನ ಮಾಡಿದ ಘಟನೆ ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ.

    ಶನಿವಾರ ತಡರಾತ್ರಿ ಕಳ್ಳರು ಮೂಡಿಗೆರೆಯ ಕೆ.ಎಂ ರಸ್ತೆಯಲ್ಲಿಯ ವೈನ್ ಶಾಪ್, ಬಾರ್ ಹಾಗೂ ಮೆಡಿಕಲ್ ಸ್ಟೋರ್‍ಗಳಲ್ಲಿ ತಮ್ಮ ಕೈ ಕಳಚ ತೋರಿಸಿದ್ದಾರೆ. ಅಂಗಡಿಗಳ ಶೆಟರ್ ಗಳನ್ನು ಮುರಿದು ಅಂಗಡಿಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಹಾಗೂ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

    ನಗರದ ಸುದರ್ಶನ್ ವೈನ್ಸ್, ಎಸ್ ಬಿ ಜಿ ಬಾರ್ ಮತ್ತು ಶಿಫಾ ಮೆಡಿಕಲ್ ಗಳಲ್ಲಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ಕಳ್ಳತನ ನಡೆದಿದೆ ಎಂದು ತಿಳಿದು ಬಂದಿದೆ. ಘಟನ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಳಸ-ಹೊರನಾಡು ಸಂಪರ್ಕ ಕಡಿತ- 2ನೇ ಬಾರಿ ಮುಳುಗಿತು ಹೆಬ್ಬಾಳೆ ಸೇತುವೆ

    ಕಳಸ-ಹೊರನಾಡು ಸಂಪರ್ಕ ಕಡಿತ- 2ನೇ ಬಾರಿ ಮುಳುಗಿತು ಹೆಬ್ಬಾಳೆ ಸೇತುವೆ

    ಚಿಕ್ಕಮಗಳೂರು/ಕಾರವಾರ/ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಎರಡನೇ ಬಾರಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ.

    ಮೂಡಿಗೆರೆ ತಾಲೂಕಿನ ಕಳಸ ಮತ್ತು ಕುದುರೆಮುಖ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಳಸ-ಹೊರನಾಡು ಸಂಪರ್ಕ ಸೇತುವೆಯಾದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಕಳೆದ 15 ದಿನಗಳಲ್ಲಿ ಇದು ಎರಡನೇ ಬಾರಿ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ.

    ವಾಹನ ಸವಾರರು ಮತ್ತು ಪ್ರವಾಸಿಗರು ಸೇತುವೆಯ ಎರಡೂ ಬದಿಯಲ್ಲಿ ನೀರು ನಿಲ್ಲುವುದಕ್ಕಾಗಿ ಕಾದುನಿಂತಿದ್ದಾರೆ. ಹದಿನೈದು ದಿನಗಳ ಹಿಂದೆ ಸುರಿದ ಮಳೆಗೆ ಸೇತುವೆಯ ತಡೆಗೋಡೆಗಳು ಮುರಿದು ಬಿದ್ದಿದ್ದು, ರಸ್ತೆ ಮಧ್ಯೆಯಲ್ಲೇ ಸೇತುವೆ ಗುಂಡಿ ಬಿದ್ದಿದೆ. ಈಗ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮತ್ತೆ ಸೇತುವೆ ಮುಳುಗಡೆಯಾಗಿದೆ.

    1992ರಲ್ಲಿ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಿರ್ಮಿಸಿದ್ದ ಈ ಸೇತುವೆಗೆ ತಡೆಗೋಡೆಗಳು ಇರಲಿಲ್ಲ. ತೀರಾ ಕೆಳಮಟ್ಟದಲ್ಲಿರುವುದರಿಂದ ಭದ್ರಾ ನದಿ ಉಕ್ಕಿ ಹರಿದರೆ ಸೇತುವೆ ಮುಳುಗಡೆಯಾಗುತ್ತೆ. ಅಂದಿನಿಂದಲೂ ಸೇತುವೆ ಎತ್ತರಿಸಿ, ತಡೆಗೋಡೆ ನಿರ್ಮಿಸಿ ಎಂದು ಸ್ಥಳೀಯರು ಸರ್ಕಾರಕ್ಕೆ ಒತ್ತಾಯಿಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

    ಇನ್ನು ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಜಾನೆಯಿಂದ ಮಳೆ ಸುರಿಯುತ್ತಿದೆ. ಶಿರಸಿ, ಸಿದ್ಧಾಪುರ, ಯಲ್ಲಾಪುರ, ಜೋಯಿಡಾ ಭಾಗದಲ್ಲಿ ಅಧಿಕ ಮಳೆಯಾಗುತ್ತಿದ್ದು, ಸಿದ್ಧಾಪುರ ಒಂದರಲ್ಲಿಯೇ 106.8 ಮಿ.ಮೀ ಮಳೆಯಾಗಿದೆ. ಹೆಚ್ಚಿನ ಮಳೆಯಿಂದಾಗಿ ಈ ಭಾಗದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಕರಾವಳಿ ಭಾಗದ ಭಟ್ಕಳದಲ್ಲಿ ಅತಿಹೆಚ್ಚು ಮಳೆಯಾಗುತ್ತಿದ್ದು, ಸಮುದ್ರ ತೀರದಲ್ಲಿ 10 ರಿಂದ 12 ಅಡಿಯಷ್ಟು ಎತ್ತರದ ಅಲೆಗಳ ಏಳತೊಡಗಿದೆ. ಮುಂಜಾಗೃತಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

    ಸೋಮವಾರ ರಾತ್ರಿಯಿಂದ ಶಿವಮೊಗ್ಗ ಜಿಲ್ಲಾದ್ಯಂತ ಭರ್ಜರಿ ಮಳೆ ಸುರಿಯುತ್ತಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಾಲೂಕಿನಾದ್ಯಂತ ಜನ ಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ತುಂಗಾ, ಕುಶಾವತಿ, ವರದಾ ನದಿಗಳು ತುಂಬಿ ಹರಿಯುತ್ತಿವೆ. ತೀರ್ಥಹಳ್ಳಿಯಲ್ಲಿ ತುಂಗಾ ನದಿ ಆಪಾಯದಮಟ್ಟದಲ್ಲಿ ಹರಿಯುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಇದೂವರೆಗೂ ಯಾವುದೇ ಹಾನಿ ಮಾಡಿಲ್ಲ. ಆದರೆ ಈ ದಿನ ಕೂಡ ಮಳೆ ಸುರಿದರೆ ಮಲೆನಾಡಿನ ಹಲವೆಡೆ ಧರೆ ಕುಸಿಯುವ ಅಪಾಯವಿದೆ.

  • ಮುಂದುವರಿದ ಮಳೆಯ ಅಬ್ಬರ – ಅಪಾಯದ ಮಟ್ಟ ಮೀರಿದ ನದಿಗಳು, ಮುಳುಗಿದ ದೇವಾಲಯ

    ಮುಂದುವರಿದ ಮಳೆಯ ಅಬ್ಬರ – ಅಪಾಯದ ಮಟ್ಟ ಮೀರಿದ ನದಿಗಳು, ಮುಳುಗಿದ ದೇವಾಲಯ

    ಬೆಂಗಳೂರು: ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬುಧವಾರ ಧಾರಾಕಾರ ಮಳೆಯಾಗಿದ್ದು, ಇಂದು ಉಡುಪಿ ಜಿಲ್ಲೆಯಲ್ಲಿ ಮುಂಜಾನೆಯಿಂದಲೇ ಮಳೆ ಆರಂಭವಾಗಿದೆ.

    ನಗರದ ಬೈಂದೂರು, ಕಾಪು ಮತ್ತು ಹೆಬ್ರಿಯಲ್ಲಿ ಭಾರೀ ಮಳೆಯಾಗಿದೆ. ಇನ್ನು ಮಳೆಯಿಂದ ಬೈಂದೂರಿನ ಒತ್ತಿನೆಣೆಯಲ್ಲಿ ಗುಡ್ಡಕುಸಿತವಾಗಿದೆ. ಗುಡ್ಡ ಕುಸಿಯದಂತೆ ರಚಿಸಿದ್ದ ಸ್ಲೋಪ್ ಪ್ರೊಟೆಕ್ಷನ್ ವಾಲ್ ಬಳಿಯೇ ಕುಸಿತವಾಗಿದೆ. ಗುಡ್ಡ ಕುಸಿತದಿಂದ ಹೆದ್ದಾರಿಗೆ ಮಣ್ಣು ಬಿದ್ದಿದ್ದರಿಂದ ತೆರವು ಕಾರ್ಯ ಆರಂಭವಾಗಿದೆ.

    ಇನ್ನು ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಜಿಲ್ಲೆಯ ಸೋಮವಾರಪೇಟೆ ಶುಂಟಿಕೊಪ್ಪ, ಸಿದ್ದಾಪುರ ವೀರಾಜಪೇಟೆ, ಹಾಗೂ ಜಿಲ್ಲೆಯ ವಿವಿಧೆಡೆಗಳಲ್ಲಿ ಸುರಿದ ಮಳೆಯಿಂದಾಗಿ ಇಳೆ ತಂಪಾಗಿದೆ. ಬುಧವಾರ ಬಹುತೇಕ ಕಡೆಗಳಲ್ಲಿ ಸುಮಾರು ಎರಡು ಘಂಟೆಗಳ ಕಾಲ ಧಾರಕಾರವಾಗಿ ವರುಣನ ಅರ್ಭಟ ಹೆಚ್ಚಾಗಿತ್ತು. ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೇ ಗ್ರಾಮೀಣ ಭಾಗದ ಜನರು ಕತ್ತಲೆಯಲ್ಲಿಯೇ ದಿನ ದೂಡುವಂತೆಯಾಗಿತ್ತು. ಮಳೆಯಿಂದ ಕಾವೇರಿ ಲಕ್ಮಣ ತೀರ್ಥ ನದಿ ತುಂಬಿದ್ದು, ಆತಂಕದಲ್ಲಿ ನದಿ ಪಾತ್ರದ ಜನರ ಜೀವನ ಅಸ್ತವ್ಯಸ್ತವಾಗಿದೆ. ಜೊತೆಗೆ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ.

    ಮಡಿಕೇರಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ಎಂದಿನಂತೆ ನಡೆಯಲಿದೆ ಎಂದು ಡಿಡಿಪಿಐ ಮಂಜುಳಾ ಅವರು ಪ್ರಕಟಿಸಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರದಲ್ಲಿ ಗಾಳಿ ಸಹಿತ ವರುಣನ ಅಬ್ಬರ ಮುಂದುವರೆದಿದೆ. ಕಳೆದ ಹದಿನೈದು ದಿನಗಳ ಹಿಂದೆ ಸುರಿದ ಮಳೆಯ ಅವಾಂತರಗಳಿಂದ ಜನಸಾಮಾನ್ಯರು ಹೊರಬರುವ ಮುನ್ನವೇ ಮಲೆನಾಡಿನಲ್ಲಿ ಮತ್ತೆ ವರುಣನ ಅಬ್ಬರ ಮುಂದುವರೆದಿದೆ.

    ಕಳಸ, ಚಾರ್ಮಾಡಿ, ಬಾಳೆಹೊನ್ನೂರು ಭಾಗದಲ್ಲಿ ದಟ್ಟ ಮಂಜು ಸೇರಿದಂತೆ ಧಾರಾಕಾರ ಮಳೆಯಾಗಿದೆ. ತುಂಗಾಭದ್ರಾ ಹಾಗೂ ಹೇಮಾವತಿ ಮೈದುಂಬಿ ಹರಿಯುತ್ತಿದ್ದು, ನದಿಪಾತ್ರದ ಹೊಲಗದ್ದೆಗಳು ಮಳೆಯಿಂದ ತೋಯ್ದು ಹೋಗಿವೆ. ಇನ್ನೂ ಶೃಂಗೇರಿ ಸುತ್ತಮುತ್ತಲೂ ಭಾರೀ ಮಳೆಯಾಗಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶಾರದಾಂಬೆ ದೇಗುಲದ ಕಪ್ಪೆಶಂಕರನಾರಾಯಣ, ಶ್ರೀಗಳ ಸಂಧ್ಯಾವಂದನೆ ಮಂಟಪ ಮುಳುಗುವ ಹಂತ ತಲುಪಿದೆ. ಶೃಂಗೇರಿ ದೇವಾಲಯಕ್ಕೆ ಹೋಗುವುದಕ್ಕೆ ಇದ್ದ ಮತ್ತೊಂದು ರಸ್ತೆ ಕೂಡ ಮುಳುಗಡೆಯಾಗಿದ್ದು, ಗಾಂಧಿ ಮೈದಾನಕ್ಕೂ ಆವರಿಸಿದೆ. ಮಲೆನಾಡಿನ ಸರಾಸರಿ ಮಳೆಗಿಂತ ಈ ಬಾರಿ ಶೇಕಡಾ 82ರಷ್ಟು ಮಳೆ ಹೆಚ್ಚಾಗಿರುವುದರಿಂದ ಮಲೆನಾಡು ಮಳೆಯಿಂದ ಮುಚ್ಚಿಕೊಂಡಂತಾಗಿದೆ.

  • ಶುಕ್ರವಾರದ ಸಭೆಯಲ್ಲಿನ ನಿರ್ಧಾರಗಳೇ ಸರ್ಕಾರದ ಗೈಡ್‍ಲೈನ್ಸ್: ಆರ್ ವಿ ದೇಶಪಾಂಡೆ

    ಶುಕ್ರವಾರದ ಸಭೆಯಲ್ಲಿನ ನಿರ್ಧಾರಗಳೇ ಸರ್ಕಾರದ ಗೈಡ್‍ಲೈನ್ಸ್: ಆರ್ ವಿ ದೇಶಪಾಂಡೆ

    ಚಿಕ್ಕಮಗಳೂರು: ಸಮ್ಮಿಶ್ರ ಸರ್ಕಾರದ ಗುದ್ದಾಟದ ನಡುವೆ ಶುಕ್ರವಾರ ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳೇ ಸರ್ಕಾರಕ್ಕೇ ಗೈಡ್‍ಲೈನ್ಸ್ ಅಂತ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ಇದೇ ಶುಕ್ರವಾರ 29ನೇ ತಾರೀಖಿನಂದು ನಡೆಯಲಿದೆ. ಸಭೆಯಲ್ಲಿ ಅಧ್ಯಕ್ಷರಾದ ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ರಾಜ್ಯ ಕಾರ್ಯದರ್ಶಿ ವೇಣುಗೋಪಾಲ್, ಜೆಡಿಎಸ್ ಕಾರ್ಯದರ್ಶಿ ಡ್ಯಾನಿಶ್ ಅಲಿ ಹಾಗೂ ಮುಖಂಡರನ್ನು ಒಳಗೊಂಡಿದ್ದು, ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳೇ ಸರ್ಕಾರಕ್ಕೆ ಗೈಡ್‍ಲೈನ್ಸ್ ಆಗಿದೆ. ಸರ್ಕಾರ ಇದನ್ನೇ ಭಗವದ್ಗೀತೆ, ಕುರಾನ್, ಬೈಬಲ್ ಅಂತಾ ತಿಳಿದುಕೊಂಡು ಇದರ ಆಧಾರದಲ್ಲಿ ಸರ್ಕಾರ ನಡೆಯಬೇಕು ಎಂದು ತಿಳಿಸಿದ್ದಾರೆ.

    ಸಮ್ಮಿಶ್ರ ಸರ್ಕಾರದ ಗುದ್ದಾಟದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸರ್ಕಾರ ಬಲಿಷ್ಟ ಹಾಗೂ ಸುಭದ್ರವಾಗಿದ್ದು, ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡ್ತಿದೆ. ಎಲ್ಲಾ ಸಚಿವರು ತಮ್ಮ ತಮ್ಮ ಇಲಾಖೆಗಳ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಕಾನೂನಿನ ಪ್ರಕಾರ ಸರ್ಕಾರ ಐದು ವರ್ಷ ಉಳಿಯಬೇಕು, ಯಾವುದೇ ತೊಂದರೆ ಇಲ್ಲದೆ ಸರ್ಕಾರ ಐದು ವರ್ಷ ಆಡಳಿತ ನಡೆಸಲಿದೆ ಎಂದು ಹೇಳಿಕೆ ನೀಡಿದ್ದಾರೆ.

  • ಜಮೀನು ವಿವಾದ: ಗಂಡಸರೂ, ಹೆಂಗಸರನ್ನದೇ ಹೊಡೆದಾಡಿಕೊಂಡ ಎರಡು ಕುಟುಂಬಗಳು

    ಜಮೀನು ವಿವಾದ: ಗಂಡಸರೂ, ಹೆಂಗಸರನ್ನದೇ ಹೊಡೆದಾಡಿಕೊಂಡ ಎರಡು ಕುಟುಂಬಗಳು

    ಚಿಕ್ಕಮಗಳೂರು: ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಕುಟುಂಬದವರು ಗಂಡಸ್ರು-ಹೆಂಗಸ್ರು ಅನ್ನದೆ ಹೊಡೆದಾಡಿಕೊಂಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಬೆಟ್ಟತಾವರೆಕೆರೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ವೆ ನಂಬರ್ 163ನಲ್ಲಿಯ 3 ಎಕರೆ 21 ಗುಂಟೆ ಜಮೀನು ಈ ಗಲಾಟೆಗೆ ಕಾರಣವಾಗಿದೆ. ಈ ಜಾಗ ಗಂಗಾಧರಪ್ಪ ಭೋವಿ ಅವರ ಪಿತ್ರಾರ್ಜಿತ ಆಸ್ತಿಯಾಗಿದೆ. ಆದರೆ ಈ ಜಮೀನು ನಮ್ಮದು ಎಂದು ಗೌರೀಶ್ ಕುಟುಂಬ ವಾದ ಮಾಡುತ್ತಿದೆ. ಮೂರು ವರ್ಷಗಳಿಂದ ಗಂಗಾಧರಪ್ಪ ಭೋವಿ ಮತ್ತು ಗೌರೀಶ್ ಕುಟುಂಬದ ನಡುವೆ ವಿವಾದ ನಡೆಯುತ್ತಲೇ ಇದೆ.

    ಪ್ರಕರಣ ತಹಶೀಲ್ದಾರ್ ಕೋರ್ಟ್ ಹಾಗೂ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಆದರೆ 2 ದಿನಗಳ ಹಿಂದೆ ಗಂಗಾಧರಪ್ಪ ಭೋವಿ ತಮ್ಮ ಕುಟುಂಬಸ್ಥರೊಂದಿಗೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುವಾಗ ಗೌರೀಶ್ ಕುಟುಂಬದ ಏಳೆಂಟು ಜನ ಬಂದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಪರಸ್ಪರ ಎರಡು ಕುಟುಂಬದವರು ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ.

    ಈ ಸಂಬಂಧ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಗಂಗಾಧರಪ್ಪ ಬೋವಿ ಆರೋಪಿಸಿದ್ದಾರೆ.

  • ಆಪ್ತನ ಕೊಲೆಯ ಬಗ್ಗೆ ಶಾಸಕ ಸಿಟಿ ರವಿ ಹೇಳಿದ್ದು ಹೀಗೆ

    ಆಪ್ತನ ಕೊಲೆಯ ಬಗ್ಗೆ ಶಾಸಕ ಸಿಟಿ ರವಿ ಹೇಳಿದ್ದು ಹೀಗೆ

    ಚಿಕ್ಕಮಗಳೂರು: ಸಮಾಜಘಾತುಕ ಶಕ್ತಿಗಳು ತಲೆ ಎತ್ತುವುದನ್ನು ತಡೆಯಲು ತಡೆಗೋಡೆಯಾಗಿದ್ದ ಬಿಜೆಪಿ ಮುಖಂಡ ಮಹಮದ್ ಅನ್ವರ್ ಅವರನ್ನು ಜೈಲಿನಲ್ಲಿ ಇದ್ದುಕೊಂಡೇ ಆಗಂತುಕರು ಸ್ಕೆಚ್ ಹಾಕಿ ಹತ್ಯೆ ಮಾಡಿಸಿದ್ದಾರೆ ಅಂತ ಶಾಸಕ ಸಿಟಿ ರವಿ ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಕಾಣುತ್ತಿದ್ದ ಹತ್ಯಾ ರಾಜಕಾರಣ ಚಿಕ್ಕಮಗಳೂರಿನಲ್ಲಿಯೂ ಕಾಲಿಟ್ಟಿರುವುದು ಬಹಳ ಗಂಭೀರವಾದ ವಿಷಯ ಅಂತ ಹೇಳಿದ್ರು.

    ಮೃತ ಮಹಮದ್ ಅನ್ವರ್ ಸಮಾಜಘಾತುಕ ಶಕ್ತಿಗಳು ತಲೆ ಎತ್ತುವುದನ್ನು ತಡೆಯಲು ತಡೆಗೋಡೆಯಾಗಿದ್ದನು. ಇದೀಗ ಆಗಂತುಕರು ಜೈಲಿನಲ್ಲಿ ಇದ್ದುಕೊಂಡೇ ಸ್ಕೆಚ್ ಹಾಕಿ ಹತ್ಯೆ ಮಾಡಿಸಿದ್ದಾರೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಬೇಕಿದೆ ಅಂತ ತಿಳಿಸಿದ್ರು.

    ಜೈಲಿನಿಂದಲೇ ಕೊಲೆ ಮಾಡಿಸಲು ಅವಕಾಶ ಕೊಟ್ಟಿರುವುದರ ಬಗ್ಗೆಯೂ ತನಿಖೆ ನಡೆಯಬೇಕು. ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯಬಾರದು. ಚಿಕ್ಕಮಗಳೂರು ಜನತೆ ಹತ್ಯೆಯನ್ನು ಖಂಡಿಸಿ ಒಂದು ಗಂಟೆಗಳ ಕಾಲ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್‍ಮಾಡಿ ಮೃತರಿಗೆ ಗೌರವ ಸಲ್ಲಿಸಬೇಕು ಅಂತ ಇದೇ ವೇಳೆ ಕರೆ ಕೊಟ್ಟರು.

    ಏನಿದು ಪ್ರಕರಣ?:
    ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಪ್ತನೆಂದೇ ಗುರುತಿಸಿಕೊಂಡಿದ್ದ ಹಾಗೂ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಅಲ್ವಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿಯೂ ಬಿಜೆಪಿಯಲ್ಲಿ ಕೆಲಸ ಮಾಡಿದ್ದ ಅನ್ವರ್(40) ಅವರನ್ನು ಶುಕ್ರವಾರ ರಾತ್ರಿ ಸುಮಾರು 9.30ಕ್ಕೆ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಗೌರಿ ಕಾಲುವೆ ಬಳಿ ಉಪ್ಪಳ್ಳಿ ನಿವಾಸಿಯಾಗಿರೋ ಅನ್ವರ್ ರನ್ನ ದುಷ್ಕರ್ಮಿಗಳು ಚೂರಿಯಿಂದ ಐದು ಬಾರಿ ಇರಿದಿದ್ದಾರೆ. ಹೊಟ್ಟೆಯಲ್ಲಿರುವ ಕರುಳು ಕಿತ್ತು ಬರುವಂತೆ ಅನ್ವರ್ ನ ಹೊಟ್ಟೆ ಸೀಳಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಅನ್ವರ್ ನನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • ಕರುಳು ಕಿತ್ತು ಬರುವಂತೆ ತಿವಿದು ಬಿಜೆಪಿ ಮುಖಂಡನ ಬರ್ಬರ ಹತ್ಯೆ!

    ಕರುಳು ಕಿತ್ತು ಬರುವಂತೆ ತಿವಿದು ಬಿಜೆಪಿ ಮುಖಂಡನ ಬರ್ಬರ ಹತ್ಯೆ!

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಮತ್ತೆ ನೆತ್ತರು ಹರಿದಿದೆ. ಚಿಕ್ಕಮಗಳೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಯನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

    ಗೌರಿ ಕಾಲುವೆ ಬಳಿ ಉಪ್ಪಳ್ಳಿ ನಿವಾಸಿ ಬಿಜೆಪಿ ಮುಖಂಡ 46 ವರ್ಷದ ಅನ್ವರ್ ಮೃತ ದುರ್ದೈವಿ. ಶುಕ್ರವಾರ ರಾತ್ರಿ ಸುಮಾರು 9.30ಕ್ಕೆ ಈ ಘಟನೆ ನಡೆದಿದ್ದು, ಅನ್ವರ್ ರನ್ನ ದುಷ್ಕರ್ಮಿಗಳು ಚೂರಿಯಿಂದ ಐದು ಬಾರಿ ಇರಿದಿದ್ದಾರೆ. ಹೊಟ್ಟೆಯಲ್ಲಿರುವ ಕರುಳು ಕಿತ್ತು ಬರುವಂತೆ ಅನ್ವರ್ ನ ಹೊಟ್ಟೆ ಸೀಳಿದ್ದಾರೆ.

    ರಕ್ತದ ಮಡುವಿನಲ್ಲಿ ರಸ್ತೆ ಮಧ್ಯೆ ಬಿದ್ದು ಒದ್ದಾಡುತ್ತಿದ್ದ ಅನ್ವರ್ ನನ್ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದಾರೆ. ಇನ್ನು ಸ್ಥಳಕ್ಕೆ ಎಎಸ್ಪಿ ಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಹಳೇ ದ್ವೇಷದ ಹಿನ್ನೆಲೆಯಲ್ಲಿ ಅನ್ವರ್ ನನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸುತ್ತಿದ್ದಾರೆ. ಸದ್ಯ ಅನ್ವರ್ ಮೃತದೇಹವನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿದೆ. ದುಷ್ಕರ್ಮಿಗಳನ್ನು ಬಂಧಿಸುವಂತೆ ಸಂಬಂಧಿಕರು ಹಾಗೂ ಬಿಜೆಪಿ ಮುಖಂಡರು ಒತ್ತಾಯಿಸುತ್ತಿದ್ದಾರೆ. ಇತ್ತ ಮೃತರ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ.

    40 ವರ್ಷದ ಅನ್ವರ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಪ್ತನೆಂದೇ ಗುರುತಿಸಿಕೊಂಡಿದ್ದರು. ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಅನ್ವರ್ ಅಲ್ವಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿಯೂ ಬಿಜೆಪಿಯಲ್ಲಿ ಕೆಲಸ ಮಾಡಿದ್ದರು.