Tag: Chikkamagaluru

  • ಹಿಡಿಯಲು ಬಂದವರ ಬೆವರಿಳಿಸ್ತು 15 ಅಡಿಯ ದೈತ್ಯ ಕಾಳಿಂಗ ಸರ್ಪ!- ವಿಡಿಯೋ ನೋಡಿ

    ಹಿಡಿಯಲು ಬಂದವರ ಬೆವರಿಳಿಸ್ತು 15 ಅಡಿಯ ದೈತ್ಯ ಕಾಳಿಂಗ ಸರ್ಪ!- ವಿಡಿಯೋ ನೋಡಿ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೆಗದ್ದೆ ಗ್ರಾಮದಲ್ಲಿ ಮೈತುಂಬಾ ಪೊರೆ ತುಂಬಿಕೊಂಡಿದ್ದ ಬರೋಬ್ಬರಿ 15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಸೆರೆಹಿಡಿಯಲು ಬಂದವರ ಬೆವರಿಳಿಸಿದೆ.

    ಬರೋಬ್ಬರಿ 15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಕಳೆದ ಒಂದು ವರ್ಷದಿಂದ ಬಾಳೆಗದ್ದೆ ಗ್ರಾಮದ ತೋಟವೊಂದರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದನ್ನು ಕಂಡು ತೋಟದ ಕೆಲಸಗಾರರು ತುಂಬಾ ಭಯಪಟ್ಟಿದ್ದರು. ಹಲವು ಬಾರಿ ಕಾಳಿಂಗ ಸರ್ಪವನ್ನು ಹಿಡಿಯಲು ಪ್ರಯತ್ನಿಸಿದರೂ ಅದು ತಪ್ಪಿಸಿಕೊಂಡು ಕಣ್ಮರೆಯಾಗುತ್ತಿತ್ತು. ಆದರೆ ಬುಧವಾರ ಸರ್ಪವನ್ನು ಸ್ನೇಕ್ ಮಹಮದ್ ಎಂಬವರು ಸೆರೆಹಿಡಿದಿದ್ದಾರೆ.

    ಕಾಳಿಂಗ ಸರ್ಪವನ್ನು ಮಹಮದ್ ಅವರು ಸುಮಾರು ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಕಷ್ಟಪಟ್ಟು ಸೆರೆಹಿಡಿದಿದ್ದಾರೆ. ಮೈತುಂಬಾ ಪೊರೆ ಹೊಂದಿದ್ದ ಕಾರಣಕ್ಕೆ ಕಾಳಿಂಗ ಸರ್ಪ ಕೆಲಕಾಲ ಸೆರೆ ಸಿಗೋದಕ್ಕೂ ಸತಾಯಿಸಿ ಉರಗ ತಜ್ಞರ ಬೆವರಿಳಿಸಿದೆ. ಕಾಳಿಂಗ ಸರ್ಪ ಒಮ್ಮೆ ಕಣ್ಣಿಗೆ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಮಾಯವಾಗಿ ಸತಾಯಿಸಿದಲ್ಲದೆ ಬಾಯ್ತೆರೆದು, ಉಸಿರುಬಿಡುತ್ತಾ ಉರಗ ತಜ್ಞರನ್ನು ಹೆದರಿಸಲು ಪ್ರಯತ್ನಿಸಿದೆ. ಆದರೂ ಕೊನೆಗೆ ದೈತ್ಯ ಕಾಳಿಂಗ ಸರ್ಪವನ್ನು ಮಹಮದ್ ಅವರು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.

    ಈ ರೋಚಕ ದೃಶ್ಯವನ್ನು ನೋಡಲು ಜನರು ತೋಟದ ಬಳಿ ಬಂದಿದ್ದರು. ಅಷ್ಟೇ ಅಲ್ಲದೆ ಅವರಲ್ಲೊಬ್ಬರು ಮೊಬೈಲ್‍ನಲ್ಲಿ ಕಾಳಿಂಗವನ್ನು ಹಿಡಿದಿರುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಹಾಗೆಯೇ ಅದರ ಜೊತೆ ಜನರು ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಹಾವಿನ ಪೊರೆ ತೆಗೆದು ಅದನ್ನು ಚಾರ್ಮಾಡಿ ಅರಣ್ಯಕ್ಕೆ ಮಹಮದ್ ಅವರು ಸುರಕ್ಷಿತವಾಗಿ ಬಿಟ್ಟಿದ್ದಾರೆ.

    https://www.youtube.com/watch?v=l2Bb_-Qc2ow

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆರೆಯಾಯ್ತು ಕಾಳಿಂಗ Vs ಕೆರೆಹಾವಿನ ಕದನ: ವಿಡಿಯೋ ನೋಡಿ

    ಸೆರೆಯಾಯ್ತು ಕಾಳಿಂಗ Vs ಕೆರೆಹಾವಿನ ಕದನ: ವಿಡಿಯೋ ನೋಡಿ

    – ಒಂದಕ್ಕೆ ಹಸಿವಿನ ದಾಹ, ಮತ್ತೊಂದಕ್ಕೆ ಬದುಕುವ ಹಂಬಲ

    ಚಿಕ್ಕಮಗಳೂರು: ಕಾಳಿಂಗ ಸರ್ಪಕ್ಕೆ ಹಸಿವನ್ನು ನೀಗಿಸಿಕೊಳ್ಳೋ ಆತುರ. ಕೆರೆಹಾವಿಗೆ ಬದುಕುವ ಹಂಬಲ. ನಾನಾ-ನೀನಾ ಅಂತ ಎರಡು ಹಾವುಗಳು ಗಂಟೆಗೂ ಅಧಿಕ ಹೊತ್ತು ಹೋರಾಡಿವೆ. ಆದರೆ 14 ಅಡಿಗೂ ಉದ್ದದ ದೈತ್ಯ ಕಾಳಿಂಗನೆದುರು 5 ಐದು ಅಡಿಯ ಕೆರೆ ಹಾವು ಸೊಲೊಪ್ಪಿ ಶರಣಾಗಿದೆ.

    ಕಾಳಿಂಗ ಸರ್ಪ ಹಾಗೂ ಕೆರೆಹಾವಿನ ಒಂದು ಗಂಟೆಯ ರೋಚಕ ಕದನದ ಬಳಿಕವೂ ಕಾಳಿಂಗ ಸರ್ಪವನ್ನ ಹೆದರಿಸಲಾಗದೆ ಕೆರೆ ಹಾವು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಕಾಂಬ್ಳೆ ಗ್ರಾಮದಲ್ಲಿ ನಡೆದಿದೆ.

    ಕೆರೆಹಾವು ಸಾವನ್ನಪ್ಪಿದ ಬಳಿಕ ಕಾಳಿಂಗ ನುಂಗಿದೆ. ಕಾಳಿಂಗ ಹಾಗೂ ಕೆರೆ ಹಾವಿನ ಕದನ ಹಾಗೂ ಕಾಳಿಂಗ ಹಾವನ್ನ ನುಂಗುತ್ತಿರುವ ದೃಶ್ಯ ಮಾತ್ರ ಮತ್ತಷ್ಟು ರೋಚಕವಾಗಿದೆ. ಸ್ಥಳಿಯರು ಕೂಡ ಆತಂಕದಿಂದಲೇ ಈ ಅಪರೂಪದ ವಿಡಿಯೋವನ್ನ ಸೆರೆ ಹಿಡಿದಿದ್ದಾರೆ.

    ಕಾಳಿಂಗ ಸರ್ಪ ಹಾವು, ಕಪ್ಪೆ ಸೇರಿದಂತೆ ಚಿಕ್ಕ-ಚಿಕ್ಕ ಪ್ರಾಣಿ, ಜಲಚರಗಳನ್ನ ನುಂಗೋದು ಮಾಮೂಲಿ. ಆದರೆ ಅದು ಸೆರೆ ಸಿಗೋದು ವಿರಳಾತಿ ವಿರಳ. ಕಾಡಿನಲ್ಲೇ ಬದುಕುವ ಮಲೆನಾಡಿಗರಿಗೂ ಅಂತಹ ದೃಶ್ಯ ಸಿಗೋದು ತುಂಬಾ ಅಪರೂಪ. ಅಂತಹಾ ಅಪರೂಪದ ಕ್ಷಣವನ್ನ ಕಾಂಬ್ಳೆ ಗ್ರಾಮದ ಜನ ಸೆರೆ ಹಿಡಿದಿದ್ದಾರೆ.

    https://www.youtube.com/watch?v=harRE5nVNDg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿಗೆ ಗುಂಡಿಕ್ಕಿ ಕೊಲೆಗೈದು ಠಾಣೆಗೆ ಶರಣಾದ ನಿವೃತ್ತ ಶಿಕ್ಷಕ..!

    ಪತ್ನಿಗೆ ಗುಂಡಿಕ್ಕಿ ಕೊಲೆಗೈದು ಠಾಣೆಗೆ ಶರಣಾದ ನಿವೃತ್ತ ಶಿಕ್ಷಕ..!

    ಚಿಕ್ಕಮಗಳೂರು: ನಿವೃತ್ತ ಶಿಕ್ಷಕನೊಬ್ಬ ತನ್ನ ಪತ್ನಿಯನ್ನ ಪಿಸ್ತೂಲಿನಿಂದ ಗುಂಡಿಕ್ಕಿ ಕೊಂದು ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಕಂಚಿಗೂರು ಗ್ರಾಮದಲ್ಲಿ ನಡೆದಿದೆ.

    ಕಂಚಿಗೂರು ನಿವಾಸಿ ಬಸಪ್ಪ(63) ಕೊಲೆಗೈದ ನಿವೃತ್ತ ಶಿಕ್ಷಕ. ಜಯಮ್ಮ(53) ಪತಿಯಿಂದ್ಲೇ ಕೊಲೆಯಾದ ದುರ್ದೈವಿ. ಹಲವು ವರ್ಷಗಳಿಂದ ದಂಪತಿ ನಡುವೆ ವೈಮನಸಿತ್ತು. ಆದರೂ ಹೇಗೋ ಇಬ್ಬರು ಮನಸ್ತಾಪದ ನಡುವೆಯೂ ಜೀವನ ಸಾಗಿಸುತ್ತಿದ್ದರು. ಯಾವಾಗಲು ಇವರಿಬ್ಬರ ನಡುವೆ ಜಗಳವಾಗುತ್ತಲೇ ಇದರಿಂದ ಬಸಪ್ಪ ಬೇಸತ್ತು ಹೋಗಿದ್ದನು.

    ಆದರೆ ಸೋಮವಾರ ಬಸಪ್ಪ ಹಾಗೂ ಆತನ ಪತ್ನಿ ಜಯಮ್ಮನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಅಲ್ಲದೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಈ ವೇಳೆ ಕೋಪಗೊಂಡ ಬಸಪ್ಪ ಇದಕ್ಕೆಲ್ಲ ಒಂದು ಅಂತ್ಯ ಹಾಡಬೇಕೆಂದು ಪಿಸ್ತೂಲಿನಿಂದ ಗುಂಡು ಹಾರಿಸಿ ಪತ್ನಿಯನ್ನು ಕೊಂದು ಹಾಕಿದ್ದಾನೆ. ಅಷ್ಟೇ ಅಲ್ಲದೆ ತಾನೇ ಪತ್ನಿಯನ್ನು ಕೊಲೆ ಮಾಡಿದ್ದು ಅಂತ ಪೋಲೀಸ್ ಠಾಣೆಗೆ ಬಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಘಟನೆ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆರೆ ಹಿಡಿಯಲು ಬಂದವರನ್ನೇ ಹೆದರಿಸ್ತು ಕಾಳಿಂಗ ಸರ್ಪ! – ವಿಡಿಯೋ ನೋಡಿ

    ಸೆರೆ ಹಿಡಿಯಲು ಬಂದವರನ್ನೇ ಹೆದರಿಸ್ತು ಕಾಳಿಂಗ ಸರ್ಪ! – ವಿಡಿಯೋ ನೋಡಿ

    ಚಿಕ್ಕಮಗಳೂರು: ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದ ವೇಳೆ ಉರಗ ತಜ್ಞರನ್ನು ಹೆದರಿಸಿ ಬೃಹತ್ ಕಾಳಿಂಗ ಸರ್ಪ ದಾಳಿ ಮಾಡಲು ಮುಂದಾದ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕೆರೆಗದ್ದೆ ಗ್ರಾಮದಲ್ಲಿ ನಡೆದಿದೆ.

    ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಶನಿವಾರ ಮಧ್ಯಾಹ್ನ ಕೆರೆಗದ್ದೆ ನಿವಾಸಿ ರಾಘವೇಂದ್ರ ಎಂಬವರ ಮನೆಯ ಆವರಣದ ಬಳಿ ಕಾಣಿಸಿಕೊಂಡಿತ್ತು. ಕಾಳಿಂಗ ಸರ್ಪವನ್ನು ಕಂಡು ಆತಂಕಗೊಂಡ ರಾಘವೇಂದ್ರ ಅವರು ಉರಗ ತಜ್ಞ ಹರೀಂದ್ರ ಅವರಿಗೆ ವಿಷಯ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.

    ಕೇರೆ ಹಾವನ್ನ ನುಂಗಿದ್ದರಿಂದ ವೇಗವಾಗಿ ಸಂಚರಿಸಲು ಸಾಧ್ಯವಾಗದೇ ಮಂದಗತಿಯಲ್ಲಿ ಕಾಳಿಂಗ ಸರ್ಪ ಸಾಗುತ್ತಿತ್ತು. ಸೆರೆಹಿಡಿಯಲು ಮುಂದಾದಾಗ ಎರಡು ಬಾರಿ ಉರಗ ತಜ್ಞರ ಮೇಲೆ ದಾಳಿ ಮಾಡಲು ಕಾಳಿಂಗ ಸೊಂಟದ ಮಟ್ಟಕ್ಕೆ ನಿಂತಿತ್ತು. ಈ ಸನ್ನಿವೇಶವನ್ನ ಕಣ್ಣಾರೆ ಕಂಡು ಸ್ಥಳೀಯರು ಕಾಳಿಂಗನ ಆಕ್ರೋಶ ಹಾಗೂ ಹರೀಂದ್ರರವರ ಧೈರ್ಯ ಎರಡನ್ನೂ ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ.

    ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಕಾರ್ಯಾಚರಣೆ ನಡೆಸಿದ ಹರೀಂದ್ರ ಅವರು ಯಶಸ್ವಿಯಾಗಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.

    https://www.youtube.com/watch?v=6K4M6aKoN2o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿಗಾಗಿ ಶಾಸಕ ಸಿ.ಟಿ ರವಿಯಿಂದ ಭಿಕ್ಷಾಟನೆ

    ಪ್ರಧಾನಿ ಮೋದಿಗಾಗಿ ಶಾಸಕ ಸಿ.ಟಿ ರವಿಯಿಂದ ಭಿಕ್ಷಾಟನೆ

    ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಶಾಸಕ ಸಿ.ಟಿ.ರವಿ ದತ್ತಾತ್ರೇಯ ಸ್ವಾಮಿಯ ಬಳಿ ಹರಕೆ ಕಟ್ಟಿಕೊಂಡಿದ್ದು, ಅವರಿಗಾಗಿ ಭಿಕ್ಷಾಟನೆ ಮಾಡಿದ್ದಾರೆ.

    ದತ್ತಜಯಂತಿಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಶಾಸಕ ಸಿ.ಟಿ ರವಿ ದತ್ತಾತ್ರೇಯ ಸ್ವಾಮಿ ಭಜನೆ ಮೂಲಕ ಭಿಕ್ಷಾಟನೆ ಮಾಡಿದ್ದಾರೆ. ಶಾಸಕ ಸಿ.ಟಿ.ರವಿ ಹಾಗೂ ದತ್ತ ಮಾಲಾಧಾರಿಗಳು ನಗರದ ನಾರಾಯಣಪುರದ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಪಡಿ ಸಂಗ್ರಹ ಮಾಡಿದ್ದಾರೆ. ಪಡಿ ಸಂಗ್ರಹಕ್ಕೆ ಆಗಮಿಸಿದ ದತ್ತಭಕ್ತರಿಗೆ ಅಕ್ಕಿ, ಬೆಲ್ಲ, ವೀಳ್ಯದೆಲೆಯನ್ನು ಜನರು ನೀಡಿದ್ದಾರೆ.

    ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಟಿ ರವಿ, ಪ್ರಧಾನಿ ಮೋದಿ ಅವರ ನೇತೃತ್ವ ಭಾರತಕ್ಕೆ ಅವಶ್ಯಕತೆ ಇದೆ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಭಾರತದ ಭವಿಷ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಹೀಗಾಗಿ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 350ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ನಾನು ಹರಕೆ ಕಟ್ಟಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

    ದೇಶಕ್ಕೆ ಸ್ವಾರ್ಥ ರಹಿತ ರಾಜಕಾರಣದ ಅವಶ್ಯವಿದೆ. ನರೇಂದ್ರ ಮೋದಿ ಅವರು ನಿಸ್ವಾರ್ಥ ಅಧಿಕಾರಿಯಾಗಿ ಸ್ವಾರ್ಥ ರಹಿತ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಧಾನಿ ಆದ ನಂತರ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿದೆ. ಆ ಗೌರವ ಉಳಿಯಲು ಮತ್ತು ದೇಶದ ಪ್ರಗತಿಗೆ ಮೋದಿ ಪ್ರಧಾನಿಯಾಗಬೇಕೆಂದು ಹರಕೆ ಹೊತ್ತಿದ್ದೇವೆ ಎಂದು ಹೇಳಿದರು.

    ಶನಿವಾರ ಅಂದರೆ ನಾಳೆ ಇರುಮುಡಿ ರೂಪದಲ್ಲಿ ದತ್ತಪೀಠಕ್ಕೆ ಭಕ್ತರು ತೆರಳಲಿದ್ದಾರೆ. ಶೋಭಾಯಾತ್ರೆ ಹಾಗೂ ದತ್ತಜಯಂತಿಯಲ್ಲಿ ಭಾಗವಹಿಸುವಂತೆ ಜನರಲ್ಲಿ ಮಾಲಾಧಾರಿಗಳು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಓರ್ವ ಪೊಲೀಸ್ ಸೇರಿದಂತೆ 17ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಹುಚ್ಚು ನಾಯಿ!

    ಓರ್ವ ಪೊಲೀಸ್ ಸೇರಿದಂತೆ 17ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಹುಚ್ಚು ನಾಯಿ!

    ಚಿಕ್ಕಮಗಳೂರು: ಓರ್ವ ಪೊಲೀಸ್ ಸೇರಿದಂತೆ 17ಕ್ಕೂ ಹೆಚ್ಚು ಜನರಿಗೆ ಹುಚ್ಚುನಾಯಿ ಕಚ್ಚಿದ ಘಟನೆ ನಗರದಲ್ಲಿ ನಡೆದಿದ್ದು, ದಾಳಿಗೊಳಗಾದವರು ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಗರದ ಕೋಟೆ ರಸ್ತೆ, ತೊಗರಿ ಅಂಕಲ್ ಸರ್ಕಲ್, ಲಕ್ಷ್ಮೀಶ ನಗರ, ಶಂಕರಪುರ ಹಾಗೂ ಎಂ.ಜಿ.ರಸ್ತೆಯ ದಾರಿಯಲ್ಲಿ ಹೋಗುತ್ತಿದ್ದ ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ. ಪರಿಣಾಮ ದತ್ತಪೀಠದ ಬಂದೋಬಸ್ತ್ ಗಾಗಿ ತೆರಳಿದ್ದ ಓರ್ವ ಪೊಲೀಸ್ ಸೇರಿದಂತೆ ಲಕ್ಷ್ಮಮ್ಮ, ರೂಪ, ನವೀನ್, ನಾಗರಾಜ್ ಎಂಬವರ ಮೇಲೆ ದಾಳಿ ಮಾಡಿದೆ.

    ನಾಯಿ ದಾಳಿಗೆ ಒಳಗಾದ ಪುಟ್ಟ ಮಕ್ಕಳು, ಮಹಿಳೆಯರು ಸೇರಿದಂತೆ 17ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ಹುಚ್ಚು ನಾಯಿ ದಾಳಿಯಿಂದಾಗಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಚಿಕ್ಕಮಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದು ವೇಳೆ ಬೇರೊಂದು ನಾಯಿ ಮೇಲೆ ಹುಚ್ಚು ನಾಯಿ ದಾಳಿ ಮಾಡಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ. ನಾವು ರಸ್ತೆಯಲ್ಲಿ ಸುರಕ್ಷಿತವಾಗಿ ನಡೆದಾಡುವುದೇ ಕಷ್ಟವಾಗುತ್ತದೆ. ಜಿಲ್ಲಾಡಳಿತ ಹಾಗೂ ನಗರಸಭೆ ಬೀದಿ ನಾಯಿಗಳ ಹಾವಳಿಗೆ ಅಂಕುಶ ಹಾಕಬೇಕೆಂದು ಹಾಗೂ ಹುಚ್ಚು ನಾಯಿಯನ್ನು ಹಿಡಿಯಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತಿಸಿ ಮದುವೆಯಾಗಿದ್ದ ಯುವತಿ ಅನುಮಾನಸ್ಪದ ಸಾವು

    ಪ್ರೀತಿಸಿ ಮದುವೆಯಾಗಿದ್ದ ಯುವತಿ ಅನುಮಾನಸ್ಪದ ಸಾವು

    ಚಿಕ್ಕಮಗಳೂರು: ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ 22 ವರ್ಷದ ಯುವತಿಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ನಡೆದಿದೆ.

    ಸವಿತ (22) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವತಿ. ಮೂಲತಃ ಪಂಚನಹಳ್ಳಿ ಗ್ರಾಮದ ಸವಿತಾ ಎರಡು ವರ್ಷದ ಹಿಂದೆ ತಿಮ್ಮಾಪುರ ಗ್ರಾಮದ ರಘು ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂಬತ್ತು ತಿಂಗಳ ಮುದ್ದಾದ ಹೆಣ್ಣು ಮಗು ಇದೆ.

    ಶನಿವಾರ ತವರು ಮನೆಗೆ ತೆರಳಿದ್ದ ಪತ್ನಿ ಸವಿತಾರನ್ನು ರಘು ಕರೆದುಕೊಂಡು ಬಂದಿದ್ದರು. ಆದರೆ ತಡರಾತ್ರಿ ಏಕಾಏಕಿ ಸವಿತಾ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಸವಿತಾ ಪೋಷಕರು, ಪತಿ ರಘು ಹಾಗೂ ಅವನ ತಾಯಿಯೇ ಕೊಲೆ ಮಾಡಿ ನೇಣು ಹಾಕಿದ್ದಾರೆಂದು ಆರೋಪಿಸಿದ್ದಾರೆ.

    ಸದ್ಯ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂರು ದಿನ ಪ್ರವಾಸಿಗರು ಕಾಫಿನಾಡಿಗೆ ನೋ ಎಂಟ್ರಿ..!

    ಮೂರು ದಿನ ಪ್ರವಾಸಿಗರು ಕಾಫಿನಾಡಿಗೆ ನೋ ಎಂಟ್ರಿ..!

    ಚಿಕ್ಕಮಗಳೂರು: ಕಾಫಿನಾಡಲ್ಲಿ ದತ್ತಜಯಂತಿ ಹಿನ್ನೆಲೆಯಲ್ಲಿ ಗಿರಿಶ್ರೇಣಿ ನೋಡಲು ಬರುವ ಪ್ರವಾಸಿಗರನ್ನು ಚಿಕ್ಕಮಗಳೂರು ಜಿಲ್ಲಾಡಳಿತ ಮೂರು ದಿನಗಳ ಕಾಲ ನಿರ್ಬಂಧಿಸಿದೆ.

    ಡಿಸೆಂಬರ್ 21, 22, 23 ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತ ಜಯಂತಿ ಆಚರಣೆ ನಡೆಯುತ್ತಿದೆ. ಆದರಿಂದ ಈ ಮೂರು ದಿನಗಳು ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಶ್ರೇಣಿ ಪ್ರವಾಸಿಗರಿಗೆ ಅಲ್ಲಿನ ಜಿಲ್ಲಾಡಳಿತ ನಿರ್ಬಂಧವೇರಿದೆ. ವಿ.ಎಚ್.ಪಿ, ಬಜರಂಗದಳ ಸಂಘಟನೆಗಳ ಕಾರ್ಯಕರ್ತರಿಂದ ಜಿಲ್ಲೆಯಲ್ಲಿ ದತ್ತ ಜಯಂತಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದತ್ತ ಪೀಠಕ್ಕೆ ಆಗಮಿಸುವ ನಿರೀಕ್ಷೆಯಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಭದ್ರತಾ ದೃಷ್ಟಿಯಿಂದ ಗಿರಿಶ್ರೇಣಿ ಪ್ರದೇಶಗಳಿಗೆ ಪ್ರವಾಸಿಗರು ಹೋಗದಂತೆ ನಿರ್ಬಂಧಿಸಲಾಗಿದೆ.

    ದತ್ತ ಜಯಂತಿ ಪ್ರಯುಕ್ತ ದತ್ತ ಪೀಠದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿ ಆಗಿರುವುದರಿಂದ ಇಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿರುವ ಗಿರಿಶ್ರೇಣಿಗಳನ್ನು ವೀಕ್ಷಿಸಿ ಖುಷಿ ಪಡುತ್ತಾರೆ. ಆದರೆ ಮೂರು ದಿನಗಳ ಕಾಲ ಗಿರಿಶ್ರೇಣಿಗಳಿಗೆ ಪ್ರವಾಸಿಗರನ್ನು ನಿರ್ಬಂಧ ಹೇರಿರುವುದರಿಂದ ನಿಸರ್ಗದ ಸೌಂದರ್ಯ ಸವಿಯಲು ಬರುವ ಜನರಿಗೆ ಕೊಂಚ ಬೇಸರವಾಗಲಿದೆ.

    ದತ್ತ ಜಯಂತಿ ಆಚರಣೆ ಪ್ರಯುಕ್ತ ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದು ಎಂದು ಜಿಲ್ಲಾಡಳಿತವು ದತ್ತಪೀಠ ಸೇರಿದಂತೆ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಶಾಲೆಯಿಂದ ಮಗನನ್ನು ಕರೆತರುತ್ತಿರುವಾಗ ಅಪಘಾತ – ಬಾಲಕ ಸಾವು, ತಂದೆ ಸ್ಥಿತಿ ಗಂಭೀರ

    ಶಾಲೆಯಿಂದ ಮಗನನ್ನು ಕರೆತರುತ್ತಿರುವಾಗ ಅಪಘಾತ – ಬಾಲಕ ಸಾವು, ತಂದೆ ಸ್ಥಿತಿ ಗಂಭೀರ

    ಚಿಕ್ಕಮಗಳೂರು: ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಏಳು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಸಂಗಮೇಶ್ವರ ಪೇಟೆಯಲ್ಲಿ ನಡೆದಿದೆ.

    ಮೃತ ಬಾಲಕ ಸ್ಥಳೀಯ ಪೂರ್ಣ ಪ್ರಜ್ಞಾ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದನು. ತಂದೆ ಸಲೀಂ ಮಗನನ್ನು ಶಾಲೆಯಿಂದ ಬೈಕಿನಲ್ಲಿ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಮನೆ ಬಳಿ ರೋಡ್ ಕ್ರಾಸ್ ಮಾಡುವಾಗ ವೇಗವಾಗಿ ಬಂದ ಟ್ರ್ಯಾಕ್ಟರ್ ಇವರ ಬೈಕಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕ ಸ್ಥಳದಲ್ಲೇ ಮೃತಪಟ್ಟರೇ, ಸಲೀಂ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಕೂಡಲೇ ಗಾಯಗೊಂಡಿದ್ದ ಸಲೀಂರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಮನೆಯೇ ಮುಂದೆಯೇ ಅವಘಡ ಸಂಭವಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಘಟನೆಗೆ ಟ್ರ್ಯಾಕ್ಟರ್ ಚಾಲಕನ ಅತೀ ವೇಗವೇ ಕಾರಣವೆಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಿಖಿಲ್ ಕುಮಾರಸ್ವಾಮಿಗೆ ಶೀಘ್ರವೇ ಕಂಕಣ ಭಾಗ್ಯ?

    ನಿಖಿಲ್ ಕುಮಾರಸ್ವಾಮಿಗೆ ಶೀಘ್ರವೇ ಕಂಕಣ ಭಾಗ್ಯ?

    ಚಿಕ್ಕಮಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯ ಮದುವೆ ಬಗ್ಗೆ ಶೃಂಗೇರಿ ಶ್ರೀಗಳೊಂದಿಗೆ ಚರ್ಚೆ ನಡೆಸುತ್ತೇನೆಂದು ಹೇಳಿದ್ದಾರೆ.

    ಜಿಲ್ಲೆಯ ಸುಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬ ದೇವಾಲಯಕ್ಕೆ ಆಗಮಿಸಿರುವ ಎಚ್‍ಡಿಕೆ ಮಾಧ್ಯಮಗಳೊಂದಿಗೆ ಮಾತನಾಡಿ, ಗುರುಗಳ ಅಶೀರ್ವಾದ, ಶಾರದಾಂಬೆ ದರ್ಶನ ಪಡೆಯಲು ಬಂದಿದ್ದೇನೆ. ಕ್ಷೇತ್ರಕ್ಕೆ ಬಂದು ದೇವಿಯ ದರ್ಶನ, ಗುರುಗಳ ಆಶೀರ್ವಾದದಿಂದ ಹಲವಾರು ರೀತಿಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಂಡಿದ್ದೇನೆ. ಎಲ್ಲಾ ಒಳ್ಳೆಯ ಕಾರ್ಯಕ್ಕೂ ಗುರುಗಳ ಆಶೀರ್ವಾದ ಇರಬೇಕು. ಹೀಗಾಗಿ ಮಗ ನಿಖಿಲ್ ಕುಮಾರಸ್ವಾಮಿಯ ಮದುವೆ ವಿಷಯವನ್ನೂ ಸಹ ಶ್ರೀಗಳ ಬಳಿ ಚರ್ಚೆ ನಡೆಸುತ್ತೇನೆ. ಇಂದಿನ ಭೇಟಿಯಲ್ಲಿ ಮದುವೆ ವಿಚಾರಕ್ಕೆ ಗುರುಗಳ ಆಶೀರ್ವಾದ ಪಡೆಯುವ ಉದ್ದೇಶವನ್ನು ಹೊಂದಿದ್ದೇನೆಂದು ಹೇಳಿದ್ದಾರೆ.

    ಈ ವೇಳೆ ಸುದ್ದಿಗಾರರು ಬಿಎಸ್‍ವೈ ಕೇರಳ ಭೇಟಿ ಹಿನ್ನೆಲೆ ಶೃಂಗೇರಿಗೆ ಭೇಟಿ ನೀಡಿದ್ದೀರಾ ಎಂದು ಪ್ರಶ್ನಿಸಿದಾಗ, ನಾವು ಕದ್ದು ಮುಚ್ಚಿ ವಾಮಾಚಾರ, ಯಾಗ ಮಾಡಿಸುವ ಪ್ರಶ್ನೆಯೇ ಇಲ್ಲ. ಆ ಉದ್ದೇಶದಿಂದ ಯಾಗ ನಡೆಸುತ್ತಿಲ್ಲ. ನಾವು ದೇವರನ್ನು ನಂಬಿದ್ದೇವೆ. ದೇವರ ಬಳಿ ಪ್ರಾರ್ಥನೆ ಮಾಡುತ್ತೇವೆ. ಈ ಬಾರಿಯ ಚಳಿಗಾಲದ ಅಧಿವೇಶನ ಸುಸೂತ್ರವಾಗಿ ನಡೆಯಬೇಕು. ಹೀಗಾಗಿ ತಾಯಿಯ ಆಶೀರ್ವಾದ ಪಡೆಯಲು ಬಂದಿದ್ದೇನೆ. ವಿಶೇಷ ಪೂಜೆ ಏನು ಇಲ್ಲ. ಶೃಂಗೇರಿ ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ, ಹಿಂದಿನಿಂದಲೂ ಸಂಬಂಧ ಹಾಗೂ ನಂಬಿಕೆ ಇದೆ. ಕ್ಷೇತ್ರಕ್ಕೆ ಬಂದರೆ ಸಮಸ್ಯೆ ಬಗೆಹರಿಯುತ್ತದೆನ್ನುವ ನಂಬಿಕೆ ಇದೆ ಎಂದು ಹೇಳಿದರು.

    ಕಂಪ್ಲಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಏನಾದರೂ ಹೇಳಿಕೆ ನೀಡಲು ಸ್ವಾತಂತ್ರ್ಯವಿದೆ. ಅದಕ್ಕೆ ಸುಮ್ಮನೆ ಯಾಕೆ ತಲೆ ಕೆಡಿಸಿಕೊಂಡಿದ್ದೀರೆಂದು ತಿಳಿಸಿದರು.

    ಶೃಂಗೇರಿಗೆ ಆಗಮಿಸುತ್ತಿದ್ದಂತೆ ಸಿಎಂ ನೇರವಾಗಿ ಶಾರದಾಂಬೆಯ ದರ್ಶನ ಪಡೆದುಕೊಂಡರು. ಬಳಿಕ ಶ್ರೀ ಮಠಕ್ಕೆ ತೆರಳಿ ಜಗದ್ಗುರು ಭಾರತೀತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಸಿಎಂ ಶುಕ್ರವಾರ ದೇವಾಲಯದಲ್ಲಿ ನಡೆಯುವ ಪ್ರತಿಶೂಲಿನಿ ಯಾಗದ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಚಳಿಗಾಲದ ಅಧಿವೇಶನ, ಆಪರೇಷನ್ ಕಮಲದ ಭೀತಿ ಹಾಗೂ ಸಚಿವ ಸಂಪುಟದ ಕಸರತ್ತು ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಿಎಂ ಕುಮಾರಸ್ವಾಮಿಯವರಿಗೆ ಪತ್ನಿ ಅನಿತಾ ಕುಮಾರಸ್ವಾಮಿ, ಸಚಿವ ರೇವಣ್ಣ, ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರೂ ಸಾಥ್ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv