Tag: Chikkamagaluru

  • ಟಿಕೆಟ್‍ಗಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ- ಶೋಭಾ ವಿರುದ್ಧ ಸ್ವಪಕ್ಷಿಯರೇ ಸಮರ

    ಟಿಕೆಟ್‍ಗಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ- ಶೋಭಾ ವಿರುದ್ಧ ಸ್ವಪಕ್ಷಿಯರೇ ಸಮರ

    – ಟಿಕೆಟ್ ತಪ್ಪಿಸಲು ಸಿಟಿ ರವಿ ಯತ್ನ

    ಚಿಕ್ಕಮಗಳೂರು: ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಚಾರ್ಮ್ ಬೆಳೆಸಿಕೊಳ್ತಿರೋ ಶೋಭಾ ಕರಂದ್ಲಾಜೆಯ ರಾಜಕೀಯ ಭವಿಷ್ಯವನ್ನ ಬಿಜೆಪಿಗರೇ ಮುಗಿಸೋಕೆ ಸ್ಕೆಚ್ ಹಾಕಿರುವಂತಿದೆ. ಬಿಎಸ್‍ವೈ ಬೆಂಬಗಲಿಗರೆಂದು ಗುರುತಿಸಿಕೊಳ್ಳದ ಸಿ.ಟಿ.ರವಿ, ರಘುಪತಿ ಭಟ್ ಹಾಗೂ ಸುನಿಲ್ ಕುಮಾರ್ ಆಂತರಿಕವಾಗಿ ಜಯಪ್ರಕಾಶ್ ಹೆಗ್ಡೆ ಬೆನ್ನಿಗೆ ನಿಂತಿದ್ದಾರೆ. ಕಾಫಿನಾಡ ಬಿಜೆಪಿ ಮುಖಂಡರು, ನಗರಸಭೆ ಹಾಗೂ ಜಿಪಂ ಸದಸ್ಯರನ್ನ ಮುಂದೆ ಬಿಟ್ಟು ಸಿ.ಟಿ ರವಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋಕೆ ಸ್ಕೆಚ್ ಹಾಕಿದ್ದಾರಾ ಎಂಬ ಅನುಮಾನ ದಟ್ಟವಾಗಿದೆ.

    ಬಿಜೆಪಿ ಎಂಪಿ ಮತ್ತು ಶಾಸಕರ ನಡುವೆಯೇ ಲೋಕಸಮರದ ಟಿಕೆಟ್‍ಗಾಗಿ ಆಂತರಿಕ ಕಲಹ ಏರ್ಪಟ್ಟಂತಿದೆ. ಗೋ ಬ್ಯಾಕ್ ಶೋಭಕ್ಕ ಚಳವಳಿ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಲೋಕಸಮರದಲ್ಲಿ ಶೋಭಾ ಹೆಸರನ್ನು ತೆರೆಮರೆಗೆ ಸರಿಸಲು ಸ್ವಪಕ್ಷೀಯರೇ ಯತ್ನಿಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ರಾಜ್ಯ ಮತು ರಾಷ್ಟ್ರ ರಾಜಕಾರಣದಲ್ಲೂ ಸಕ್ರಿಯರಾಗಿರುವ ಸಂಸದೆ ಶೋಭಾ ಕರಂದ್ಲಾಜೆಗೆ ಈ ಬಾರಿ ಎಂಪಿ ಟಿಕೆಟ್ ತಪ್ಪಿಸಲು ಒಳಗೊಳಗೆ ಹುನ್ನಾರ ನಡೆಸುತ್ತಿದ್ದಾರೆ ಎಂಬುದಾಗಿ ಮೂಲಗಳಿಂದ ಮಾಹಿತಿ ಲಭಿಸಿದೆ.

    ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ ಅತ್ಯಾಪ್ತರೇ ಶೋಭರಿಗೆ ಟಿಕೆಟ್ ಬೇಡ ಎನ್ನುತ್ತಿದ್ದಾರೆ. ಇದರ ಹಿಂದೆ ಸಿ.ಟಿ ರವಿಯೇ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದು ರಾಜ್ಯ, ಜಿಲ್ಲೆಯ ನಾಯಕತ್ವದ ಸ್ಥಾನವನ್ನು ಗಟ್ಟಿ ಮಾಡಿಕೊಂಡು ಶೋಭಾ ರಾಜಕೀಯ ಜೀವನವನ್ನು ಮುಗಿಸೋಕೆ ಪ್ಲಾನ್ ಮಾಡ್ತಿದ್ದಾರಾ ಎಂಬ ಅನುಮಾನ ಮೂಡಿದೆ ಎಂದು ಬಿಜೆಪಿ ನಗರಸಭೆ ಸದಸ್ಯ ರಾಜಶೇಖರ್ ತಿಳಿಸಿದ್ದಾರೆ.

    ಶೋಭಾ ರಾಷ್ಟ್ರ ಮತ್ತು ರಾಜ್ಯ ನಾಯಕಿ ಆದರೆ ಅವರನ್ನು ಭೇಟಿಯೇ ಮಾಡೋಕಾಗಲ್ಲ. ಸಂಸದರ ಕಚೇರಿಯಲ್ಲೂ ಸಿಗಲ್ಲ. ಸಿಕ್ಕರೂ ಮಾತಾಡಿಸಲ್ಲ. ಒಂದೂ ಸಭೆ ನಡೆಸಿಲ್ಲ. ಹೀಗಾಗಿ ಶೋಭಾರಿಗೆ ಟಿಕೆಟ್ ಬೇಡವೆಂದು ಕಾಫಿನಾಡಿನ ಜನ ಹೇಳುತ್ತಿದ್ದಾರೆ. ಜೊತೆಗೆ ಸ್ಥಳೀಯರಿಗೆ ಟಿಕೆಟ್ ಕೊಡಿ ಅಂತ ಜಯಪ್ರಕಾಶ್ ಹೆಗ್ಡೆ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಈ ಮಧ್ಯೆ ಆರ್.ಎಸ್.ಎಸ್ ಮುಖಂಡ ನಾಗೇಶ್ ಅಂಗೀರಸ ಶೋಭಾ ಡಮ್ಮಿ ಕ್ಯಾಂಡಿಡೇಟ್ ಎಂದು ವ್ಯಂಗ್ಯವಾಡಿದ್ದಾರೆ.

    ಇತ್ತ ಶೋಭಾಗೆ ಟಿಕೆಟ್ ಕೊಡಿಸಲು ಬಿಎಸ್‍ವೈ ಕಸರತ್ತು ನಡೆಸುತ್ತಿದ್ದರೆ, ಅತ್ತ ಬಿಎಸ್‍ವೈ ಬೆಂಬಲಿರೆಂದು ಗುರುತಿಸಿಕೊಳ್ಳದ ಸಿ.ಟಿ ರವಿ, ಸುನಿಲ್ ಕುಮಾರ್ ಹಾಗೂ ರಘುಪತಿ ಭಟ್ ಒಳಗೊಳಗೆ ಜಯಪ್ರಕಾಶ್ ಹೆಗ್ಡೆ ಬೆನ್ನಿಗೆ ನಿಂತಿದ್ದಾರೆ. ಒಂದು ವೇಳೆ ಶೋಭಾಗೆ ಟಿಕೆಟ್ ತಪ್ಪಿದ್ರೆ ಬಿಎಸ್‍ವೈ ಬೆಂಬಲಿಗ ಶಾಸಕರಾದ ಮೂಡಿಗೆರೆ ಕುಮಾರಸ್ವಾಮಿ, ತರೀಕೆರೆ ಸುರೇಶ್, ಕಡೂರಿನ ಬೆಳ್ಳಿ ಪ್ರಕಾಶ್ ಏನ್ ಮಾಡ್ತಾರೆ ಎಂಬುದನ್ನು ಕಾದುನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಧರ ಭಾವಚಿತ್ರದ ಮುಂದೆ ಪಾಕಿಸ್ತಾನ ಜಿಂದಾಬಾಂದ್ ಎಂದ ಯುವಕ – ಸ್ಥಳೀಯರಿಂದ ಧರ್ಮದೇಟು

    ಯೋಧರ ಭಾವಚಿತ್ರದ ಮುಂದೆ ಪಾಕಿಸ್ತಾನ ಜಿಂದಾಬಾಂದ್ ಎಂದ ಯುವಕ – ಸ್ಥಳೀಯರಿಂದ ಧರ್ಮದೇಟು

    ಚಿಕ್ಕಮಗಳೂರು: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರದ ಮುಂದೆ ನಿಂತು ಪಾಕಿಸ್ತಾನ ಜಿಂದಾಬಾಂದ್ ಎಂದು ಕೂಗಿದ ವ್ಯಕ್ತಿಗೆ ಸ್ಥಳಿಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್‍ಪೋಸ್ಟ್ ಬಳಿ ನಡೆದಿದೆ.

    ಚಿತ್ರದುರ್ಗದಿಂದ ಬಸ್ ಮಾಡಿಕೊಂಡು ಮುಳ್ಳಯ್ಯನಗಿರಿ ಪ್ರವಾಸಕ್ಕೆ ಬಂದಿದ್ದ ಯುವಕರ ತಂಡ ಕಾಫಿ ಕುಡಿಯಲೆಂದು ಚಿಕ್ಕಮಗಳೂರಿನ ಕೈಮರ ಹ್ಯಾಡ್‍ಪೋಸ್ಟ್ ಬಳಿ ಬಸ್ ನಿಲ್ಲಿಸಿದ್ದರು. ಈ ವೇಳೆ ಬಸ್ಸಿನಲ್ಲಿದ್ದ ಯುವಕ ಯೂನಸ್ ಪುಲ್ವಾಮ ಹುತಾತ್ಮ ಯೋಧರ ಭಾವಚಿತ್ರವನ್ನು ನೋಡಿ ಅದರ ಮುಂದೆ ನಿಂತು ‘ಪಾಕಿಸ್ತಾನ ಜಿಂದಾಬಾಂದ್’ ಎಂದು ಭಾರತದ ವಿರುದ್ಧ ಘೋಷಣೆ ಕೂಗಿದ್ದಾನೆ.

    ಸ್ಥಳದಲ್ಲಿದ್ದ ಜನರು ಘೋಷಣೆಯನ್ನು ಕೇಳಿಕೊಂಡು ಯುವಕನ ಬಳಿ ಬಂದು ಯಾಕೆ ಹೀಗೆ ದೇಶ ದ್ರೋಹದ ಘೋಷಣೆ ಕೂಗುತ್ತೀಯಾ ಎಂದು ಕೇಳಿದ್ದಾರೆ. ಅದಕ್ಕೆ ಯೂನಸ್ ಸ್ಥಳೀಯರಿಗೂ ಅಚಾಚ್ಯ ಶಬ್ಧಗಳಿಂದ ನಿಂಧಿಸಿದ್ದಾನೆ. ಇದರಿಂದ ಕೋಪಗೊಂಡ ಯುವಕರು ಯೂನಸ್‍ನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಫೋನ್ ಮಾಡಿ ಅವರಿಗೆ ಒಪ್ಪಿಸಿದ್ದಾರೆ.

    ಯೂನಸ್‍ನನ್ನ ವಶಕ್ಕೆ ಪಡೆದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಫಿನಾಡಲ್ಲಿ ಕೇಳಿ ಬಂತು ಚುನಾವಣೆ ಬಹಿಷ್ಕಾರದ ಕೂಗು

    ಕಾಫಿನಾಡಲ್ಲಿ ಕೇಳಿ ಬಂತು ಚುನಾವಣೆ ಬಹಿಷ್ಕಾರದ ಕೂಗು

    ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಫಿನಾಡಲ್ಲಿ ಬಹಿಷ್ಕಾರದ ಕೂಗು ಕೇಳಿಬಂದಿದೆ. ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಸಾರ್ವಜನಿಕರು ಈ ಬಾರಿ ಮತ ಹಾಕಲ್ಲ ಎಂದು ಚುನಾವಣೆಯನ್ನು ಬಹಿಷ್ಕಾರಿಸಿದ್ದಾರೆ.

    ಹೌದು, ಚಿಕ್ಕಮಗಳೂರಿನ ಕಳಸ, ಮೊದಲಮನೆ ಹಾಗೂ ಬಾಳೆಹೊಳೆ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕಾರಿಸಿದ್ದಾರೆ. ಅಲ್ಲದೆ ಈ ಬಾರಿ ಮತದಾನ ಮಾಡಲ್ಲ ಎಂಬ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಚುನಾವಣಾ ಬಹಿಷ್ಕಾರದ ಫೋಟೋ ಫುಲ್ ವೈರಲ್ ಆಗಿದೆ.

    ನಮಗಾಗಿ ಕೆಲಸ ಮಾಡದವರಿಗೆ ನಾವು ಯಾಕೆ ಮತದಾನ ಮಾಡಬೇಕು? ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳಿಗೆ ಮತದಾರರ ಮೇಲೆ ಪ್ರೀತಿ ಬರುತ್ತೆ. ಬಳಿಕ ಅಧಿಕಾರ ಬಂದಮೇಲೆ ಜನರನ್ನು ಮರೆತು ಬಿಡುತ್ತಾರೆ. ಆದರಿಂದ ಈ ಬಾರಿ ಮತ ಹಾಕಲ್ಲ ಎಂದು ಗ್ರಾಮಸ್ಥರು ಸಿಡಿದೆದ್ದಿದ್ದಾರೆ.

    ಈ ಗ್ರಾಮಗಳಲ್ಲಿ ಸರಿಯಾದ ರಸ್ತೆ ವ್ಯವಸ್ಥೆಯಿಲ್ಲ. ಕೆಲವು ಕಡೆ ಹೊಳೆಗಳು ಇರುವ ಸ್ಥಳಗಳಲ್ಲಿ ಸೇತುವೆಗಳಿಲ್ಲ. ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಆದರಿಂದ ಚುನಾವಣೆ ನಡೆಯುವ ಒಳಗೆ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿದರೆ ಮತ ಹಾಕುತ್ತೇವೆ. ಎಲ್ಲವಾದರೆ ಮತ ಹಾಕಲ್ಲ ಎಂದು ಜನಪ್ರತಿನಿಧಿಗಳಿಗೆ ಜನರು ಎಚ್ಚರಿಗೆ ನೀಡಿದ್ದಾರೆ.

    ಲೋಕಸಭೆ ಚುನಾವಣೆ ದಿನಾಂಕ ನಿಗದಿಯಾದ 2 ದಿನದಲ್ಲಿ ಮತ ಬಹಿಷ್ಕಾರಕ್ಕೆ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈ ಬಾರಿ ಮತದಾನದಿಂದ ದೂರ ಉಳಿಯಲು ಜನರು ತೀರ್ಮಾನಿಸಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮದ ಮುಂಭಾಗದಲ್ಲಿ ಬಹಿಷ್ಕಾರದ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಬಹಿಷ್ಕರಿಸಿದ ಗ್ರಾಮಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಮತದಾರರು ಇದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಕೊಲೆ

    ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಕೊಲೆ

    ಚಿಕ್ಕಮಗಳೂರು: ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಗಣಪತಿ ಪೆಂಡಾಲ್ ಬಳಿ ನಡೆದಿದೆ.

    ತರೀಕೆರೆ ತಾಲೂಕಿನ ಕನಮಹಟ್ಟಿ ಗ್ರಾಮದ ಅರುಣ್ ಕುಮಾರ್(23) ಕೊಲೆಯಾದ ಯುವಕ. ಸೋಮವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ 3-4 ಜನರ ತಂಡ ಬೈಕಿನಲ್ಲಿ ಬರುತ್ತಿದ್ದ ಅರುಣ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸದ್ಯಕ್ಕೆ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಕುರಿತು ತನಿಖೆ ಮಾಡಲು ತರೀಕೆರೆ ಹಾಗೂ ಬೀರೂರು ಠಾಣಾ ವ್ಯಾಪ್ತಿ ಎರಡು ತಂಡಗಳ ರಚನೆ ಮಾಡಲಾಗಿದೆ. ಹಲವರ ಮೇಲೆ ಅನುಮಾನ ಕೂಡ ಬಂದಿದೆ. ವೈಯಕ್ತಿಕ ದ್ವೇಷ ಹಾಗೂ ಕೆಲ ದಿನಗಳ ಹಿಂದೆ ನಡೆದ ಜಾತ್ರೆ ವೇಳೆ ನಡೆದ ಸಣ್ಣ ಗಲಾಟೆಯಿಂದ ಕೊಲೆಯಾಗಿರಬಹುದೆಂಬ ಅನುಮಾನವಿದೆ. ಎಲ್ಲಾ ವಿಧದಲ್ಲೂ ತನಿಖೆ ನಡೆಯುತ್ತಿದೆ. ಶೀಘ್ರವೇ ಆರೋಪಿಗಳನ್ನ ಬಂಧಿಸಲಾಗುವುದು. ಕೊಲೆ ಮಾಡಿರುವವರು ಕೂಡ 23 ರಿಂದ 26-27 ವಯಸ್ಸಿನವರೆ ಆಗಿದ್ದಾರೆ ಎಂದು ಎಸ್‍ಪಿ ಹರೀಶ್ ಪಾಂಡೆ ಹೇಳಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೋ ಬ್ಯಾಕ್ ನಿಖಿಲ್ ಅಭಿಯಾನಕ್ಕೆ ಮಹತ್ವ ಕೊಡಬೇಕಿಲ್ಲ- ಕುಮಾರಸ್ವಾಮಿ

    ಗೋ ಬ್ಯಾಕ್ ನಿಖಿಲ್ ಅಭಿಯಾನಕ್ಕೆ ಮಹತ್ವ ಕೊಡಬೇಕಿಲ್ಲ- ಕುಮಾರಸ್ವಾಮಿ

    – ಜನರ ನಾಡಿಮಿಡಿತ ಅರ್ಥಮಾಡ್ಕೊಂಡಿದ್ದೇನೆ ಅಂದ್ರು ನಿಖಿಲ್

    ಚಿಕ್ಕಮಗಳೂರು: ನಟ ನಿಖಿಲ್ ಕುಮಾರಸ್ವಾಮಿಯವರು ಬರಬೇಕು ಅನ್ನೋರು ಇರ್ತಾರೆ. ಹೋಗ್ಬೇಕು ಅನ್ನೋರು ಇರ್ತಾರೆ. ಇದಕ್ಕೆಲ್ಲ ದೊಡ್ಡ ಮಹತ್ವ ಕೊಡಬೇಕಿಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ.

    ಶೃಂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ಒಳಿತಾಗಲಿ ಎಂದು ದೇವಾಲಯಕ್ಕೆ ಬಂದಿದ್ದೇನೆ. ರಾಜ್ಯದಲ್ಲಿ ಒಳ್ಳೆ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ನಿಖಿಲ್ ಬರಬೇಕು ಹಾಗೂ ಹೋಗ್ಬೇಕು ಅನ್ನೋರು ಇರುತ್ತಾರೆ. ಇದಕ್ಕೆಲ್ಲ ದೊಡ್ಡ ಮಹತ್ವ ಕೊಡಬೇಕಿಲ್ಲ. ಪೂರ್ವಸಿದ್ಧತೆ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಇಂತಹ ಕೆಲಸ ಮಾಡುತ್ತಾರೆ ಎಂದು ನಿಖಿಲ್ ಸ್ಪರ್ಧೆ ವಿರೋಧಿಸುವವರಿಗೆ ಟಾಂಗ್ ನೀಡಿದ್ದಾರೆ.

    ವೋಟು ಹಾಕುವವರು ಎಲ್ಲೋ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುವ ವಿಂಗ್ ಇದೆ. ನಿಜವಾದ ಪ್ರೀತಿ ವಿಶ್ವಾಸ ಇಟ್ಟವರು ವೋಟು ಮಾಡುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಗೆಲುತ್ತೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ರು.

    ಇದೇ ವೇಳೆ ತಮ್ಮ ಸ್ವ ಕ್ಷೇತ್ರ ರಾಮನಗರದಲ್ಲಿ ಗನ್ ಹಿಡಿದು ರೌಡಿಸಂ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕ ಸ್ಥಳದಲ್ಲಿ ಬಂದೂಕು ಹಿಡಿದು ಯಾರಾದರೂ ಓಡಾಡುತ್ತಿದ್ದರೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ. ಜನರನ್ನ ಭಯ ಬೀಳಿಸುವಂತಹ ಪ್ರಯತ್ನ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡುತ್ತಿದ್ದೇನೆ ಅಂದ್ರು.

    ಇದೇ ಸಂದರ್ಭದಲ್ಲಿ ಮಾತನಾಡಿದ ನಿಖಿಲ್, ಇದು ನಾವು ನಂಬಿಕೊಂಡಿರುವ ದೇವಸ್ಥಾನವಾಗಿದೆ. ಶಾರದಾಂಬೆ ಹಾಗೂ ಜಗದ್ಗುರುಗಳ ಆಶೀರ್ವಾದಕ್ಕೆ ಬಂದಿದ್ದೇವೆ. ಶ್ರೀಗಳ ಜೊತೆ ದೊಡ್ಡವರ ನಂಟು ಹಿಂದಿನಿಂದಲೂ ಇದೆ. ಗುರುಗಳು ಹಾಗೂ ತಾಯಿಯ ಆಶೀರ್ವಾದ ತಂದೆಯನ್ನ ಇಂದು ಈ ಸ್ಥಾನದಲ್ಲಿ ಕೂರಿಸಿದೆ. ಪಕ್ಷದ ವರಿಷ್ಠರು, ಕಾರ್ಯಕರ್ತರು ಹಾಗೂ ಶಾಸಕರ ಜೊತೆ ಚರ್ಚಿಸಿ ತಿರ್ಮಾನಿಸಿದ್ದಾರೆ. ಮಂಡ್ಯ ಜನರ ನಾಡಿ ಮಿಡಿತವನ್ನ ಅರ್ಥಮಾಡಿಕೊಂಡಿದ್ದೇನೆ. ಹಾಗಾಗಿ ಪಕ್ಷ ಟಿಕೆಟ್ ಕೊಡಲು ಮುಂದಾಗಿದೆ. ಮಂಡ್ಯ ಜನತೆಯ ಸೇವೆ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಮ್ಮಕ್ಕಳ ಗೆಲುವಿಗಾಗಿ ದೊಡ್ಡ ಗೌಡ್ರ ಪಣ- ಶೃಂಗೇರಿಯಲ್ಲಿ ಯಾಗ, ಯಜ್ಞ

    ಮೊಮ್ಮಕ್ಕಳ ಗೆಲುವಿಗಾಗಿ ದೊಡ್ಡ ಗೌಡ್ರ ಪಣ- ಶೃಂಗೇರಿಯಲ್ಲಿ ಯಾಗ, ಯಜ್ಞ

    ಚಿಕ್ಕಮಗಳೂರು: ಕುಟುಂಬ ರಾಜಕಾರಣ ಅನ್ನೋ ಮಾತಿಗೂ ಹೆದರದೆ, ದೋಸ್ತಿ ಸರ್ಕಾರದಲ್ಲಿ ಕುಸ್ತಿ ಮಾಡ್ತಾ ಮೊಮ್ಮಕ್ಕಳನ್ನು ಹೇಗಾದ್ರೂ ಮಾಡಿ ಗೆಲ್ಲಿಸಬೇಕೆಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಪಣ ತೊಟ್ಟಿದ್ದಾರೆ. ಅಧಿಕಾರದ ಮೊದಲು ಮತ್ತು ಅಧಿಕಾರ ಉಳಿಸಿಕೊಳ್ಳಲು ಶಾರದಾಂಬೆಯ ಸನ್ನಿಧಿಯಲ್ಲಿ ಕೈಮುಗೀತಿದ್ದ ದೇವೇಗೌಡ್ರು ಈಗ ಮೊಮ್ಮಕ್ಕಳ ಗೆಲುವಿಗಾಗಿ ಅದೇ ಸನ್ನಿಧಿಯಲ್ಲಿ ಚಂಡಿಕಾಯಾಗಕ್ಕೆ ಕೂತಿದ್ದಾರೆ.

    ದೊಡ್ಡ ಗೌಡ್ರು ಮೈಸೂರಲ್ಲಿ, ಇಬ್ಬರು ಮೊಮ್ಮಕ್ಕಳಲ್ಲಿ ಓರ್ವ ಹಾಸನ ಮತ್ತೊಬ್ಬ ಮಂಡ್ಯದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಮೋದಿ ಅಲೆಯಲ್ಲಿ ಮೊಮ್ಮಕ್ಕಳ ರಾಜಕೀಯ ಭವಿಷ್ಯವನ್ನ ಓರೆಗಲ್ಲಿಗೆ ಹಚ್ಚಿರೋ ಗೌಡ್ರ ಕುಟುಂಬ ಲೋಕಸಭಾ ಚುನಾವಣೆಗೂ ಮುನ್ನ ಕುಟುಂಬದ ಇಷ್ಟದೈವ ಶೃಂಗೇರಿ ಶಾರದಾಂಬೆಯ ಮೊರೆ ಹೋಗಿದ್ದಾರೆ.

    ಇಷ್ಟರವರೆಗೆ ಶೃಂಗೇರಿ ಶಾರದಾಂಬೆಯ ಸನ್ನಿಧಿಗೆ ಅಧಿಕಾರಕ್ಕಾಗಿ, ಅಧಿಕಾರದ ಉಳಿವಿಗಾಗಿ ಭೇಟಿ ನೀಡ್ತಿದ್ದ ಗೌಡ್ರ ಕುಟುಂಬ ಈಗ ಮೊಮ್ಮಕ್ಕಳನ್ನು ಗೆಲ್ಲಿಸಿಯೇ ತೀರುತ್ತೇವೆ ಎಂದು ಬೇಡಿಕೊಳ್ಳೋಕೆ ಯಾಗ ಯಜ್ಞ ಮಾಡ್ತಿದೆ. ಬುಧವಾರವೇ ಶೃಂಗೇರಿಗೆ ಬಂದಿರೋ ದೇವೇಗೌಡರ ಕುಟುಂಬ ಯಾಗಕ್ಕೆ ಸಂಕಲ್ಪ ಮಾಡಿಕೊಂಡಿದೆ. ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿರೋ ನಿಖಿಲ್ ಇದೇ ಮೊದಲ ಬಾರಿಗೆ ಅಪ್ಪ-ಅಮ್ಮನ ಜೊತೆ ಮಠಕ್ಕೆ ಬಂದು ಗೆಲುವಿಗಾಗಿ ಪ್ರಾರ್ಥಿಸಿಕೊಂಡಿದ್ದಾರೆ. ದೇವೇಗೌಡ, ಪತ್ನಿ ಚೆನ್ನಮ್ಮ, ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್, ರೇವಣ್ಣ, ಭವಾನಿ ಹಾಗೂ ಪ್ರಜ್ವಲ್ ಚಂಡಿಕಾಯಾಗದಲ್ಲಿ ಪಾಲ್ಗೊಂಡಿದ್ದಾರೆ. ಇಂದು ಯಾಗದ ಪೂರ್ಣಾಹುತಿ ನಡೆಯಲಿದೆ.

    ಗೌಡ್ರು ಮಂಡ್ಯದಲ್ಲಿ ಮೊಮ್ಮಗನನ್ನ ಗೆಲ್ಲಿಸಿಯೇ ಗೆಲ್ಲಿಸ್ತೀನಿ ಎಂದು ಶಪಥಗೈದಿದ್ದಾರೆ. ಸುಮಲತಾ ಸ್ವತಂತ್ರವಾಗಿ ನಿಂತ್ರೆ ನಾವು ಬೆಂಬಲ ಕೊಡ್ತೀವಿ ಅಂದ ಬಿಜೆಪಿಗೆ ಹಾಗೂ ಪರೋಕ್ಷವಾಗಿ ಸುಮಲತಾಗೂ ಟಾಂಗ್ ಕೊಡಲಿಕ್ಕೆ ಮೊಮ್ಮಗನನ್ನ ಕರೆತಂದು ಇಷ್ಟ ದೈವದ ಮುಂದೆ ಬೇಡಿಕೊಂಡಿದ್ದಾರೆ. ಮೈತ್ರಿ ಸರ್ಕಾರದ ಜಂಜಾಟ-ಹೊಡೆದಾಟದ ಮಧ್ಯೆಯೂ ಮಂಡ್ಯ-ಹಾಸನ ಬಿಡೋದಿಲ್ಲ ಎಂದು ಕಾಂಗ್ರೆಸ್ ಜೊತೆಗಿನ ತೆರೆಮರೆಯ ಮನಸ್ತಾಪದ ಮಧ್ಯೆಯೂ ಮೊಮ್ಮಕ್ಕಳ ರಾಜಕೀಯಕ್ಕೆ ಗೌಡ್ರು ಬುನಾದಿ ಹಾಕಹೊರಟಿದ್ದಾರೆ. ಆದ್ರೆ ಈ ಭೇಟಿಗೂ ರಾಜಕೀಯಕ್ಕೂ ಸಂಬಂಧವೇ ಇಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೊಂದು ಬೆಂಕಿ ದುರಂತ

    ಮತ್ತೊಂದು ಬೆಂಕಿ ದುರಂತ

    ಚಿಕ್ಕಮಗಳೂರು: ಕಳೆದ ಆರು ದಿನಗಳಿಂದ ಬಂಡಿಪುರ ಅರಣ್ಯದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಸಾವಿರಾರು ಎಕರೆ ಅರಣ್ಯ ನಾಶವಾಗಿದೆ. ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಂದು ಬೆಂಕಿ ದುರಂತ ನಡೆದಿದೆ.

    ತಡರಾತ್ರಿ ಕೊಪ್ಪ ತಾಲೂಕಿನ ಗುಂಡಿಕ್ಕಿ ಅರಣ್ಯ ಹೊತ್ತಿ ಉರಿದಿದ್ದು, ಸುಟ್ಟು ಕರಕಲಾಗಿದೆ. ನೂರಾರು ಎಕರೆ ಸಸ್ಯ ಸಂಪತ್ತು ಬೆಂಕಿಗಾಹುತಿಯಾಗಿದ್ದು, ಗಾಳಿ ಹೆಚ್ಚಾದಂತೆ ಬೆಂಕಿಯ ತೀವ್ರತೆಯು ಹೆಚ್ಚಾದ ಕಾರಣ ಬೆಂಕಿ ನಂದಿಸುವ ಕಾರ್ಯಾಚರಣೆಗೆ ತೊಡಕಾಗಿದೆ. ಸೋಮವಾರ ಮಧ್ಯಾಹ್ನ ಗುಂಡಿಕ್ಕಿ ಅರಣ್ಯಕ್ಕೆ ಬೆಂಕಿ ಬಿದ್ದಿತ್ತು. ಇದನ್ನೂ ಓದಿ: ಬಂಡೀಪುರ ಬೆಂಕಿ ನಂದಿಸುವ ಕಾರ್ಯ ಶುರು – ಕರಡಿಹಳ್ಳಿ, ಚಮ್ಮನಹಳ್ಳಿಯಲ್ಲಿದೆ ಕಾಪ್ಟರ್

    ಅಗ್ನಿಶಾಮಕ ವಾಹನಗಳು ನಿಂತಲ್ಲೇ ನಿಂತಿವೆ. ಅರಣ್ಯ ಹೊತ್ತಿ ಉರಿಯುತ್ತಿರುವ ಘಟನೆಯಿಂದ ಹೇರೂರು ಮತ್ತು ಗುಂಡಿಕ್ಕಿ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಇತ್ತ ಗೋಪಾಲಸ್ವಾಮಿ ಬೆಟ್ಟದ ಚಿಮ್ಮನಹಳ್ಳ ಬಳಿ ಸೇನಾ ಹೆಲಿಕಾಪ್ಟರ್ ನಿಂದ ಕಾರ್ಯಚರಣೆ ಆರಂಭವಾಗಿದೆ.

    ಹೆಲಿಕಾಪ್ಟರ್ ಮದ್ದೂರು ಕೆರೆಯಿಂದ ನೀರು ತುಂಬಿಸಿಕೊಂಡು ಬಂದು ಅರಣ್ಯದಲ್ಲಿ ಬೆಂಕಿ ಕಂಡ ಸ್ಥಳದಲ್ಲಿ ಮೇಲಿನಿಂದ ನೀರನ್ನು ಹಾಕುತ್ತಿದೆ. ಎರಡು ಇಂಡಿಯನ್ ಏರ್ ಪೋರ್ಸ್ ಹೆಲಿಕಾಪ್ಟರ್ ನಿಂದ ಬೆಂಕಿ ನಂದಿಸುವ ಕಾರ್ಯಚರಣೆ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಂಡಸು ಎಂಪಿಗಳಿಗೆ ಶೋಭಾ ಕರಂದ್ಲಾಜೆ ಚಾಲೆಂಜ್

    ಗಂಡಸು ಎಂಪಿಗಳಿಗೆ ಶೋಭಾ ಕರಂದ್ಲಾಜೆ ಚಾಲೆಂಜ್

    ಉಡುಪಿ: ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಆಯ್ಕೆಯಾದ ಎಲ್ಲಾ ಗಂಡಸು ಎಂಪಿಗಳಿಗೆ ಶೋಭಾ ಕರಂದ್ಲಾಜೆ ಚಾಲೆಂಜ್ ಹಾಕಿದ್ದಾರೆ. ನೀವು ಇಷ್ಟು ವರ್ಷದಲ್ಲಿ ಏನು ಮಾಡಿದ್ದೀರಿ ಲಿಸ್ಟ್ ಕೊಡಿ, ನನ್ನ ಅಭಿವೃದ್ಧಿ ಕಾರ್ಯಗಳ ಪಟ್ಟಿ ಕೊಡುತ್ತೇನೆ ಎಂದು ಸವಾಲು ಹಾಕಿದ್ದು, ಚರ್ಚೆಗೆ ಬರಲಿ ಅಂತ ಆಹ್ವಾನ ನೀಡಿದ್ದಾರೆ.

    ಗೋ ಬ್ಯಾಕ್ ಶೋಭಾ ಅಭಿಯಾನ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕ್ಷೇತ್ರದ ಈ ಹಿಂದಿನ ಗಂಡಸು ಸಂಸದರಿಗೆ ನಾನು ಚಾಲೆಂಜ್ ಮಾಡುತ್ತೇನೆ. ನನಗೆ ಹಣಬಲ, ಜಾತಿ ಬಲ ಇಲ್ಲದೇ ಇರಬಹುದು. ಬಾಹುಬಲ ಇಲ್ಲ, ಬೆಂಬಲ ಕೊಡುವವರು ಇಲ್ಲದಿರಬಹುದು. ಆದರೆ ಎಲ್ಲರಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಟಿಕೆಟ್ ಕೇಳುವ ಯಾರೋ ಒಬ್ಬರು ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:‘ಶೋಭಕ್ಕನ ಮನೆಗೆ ಕಳ್ಸಿ, ಮೋದಿಯನ್ನ ಉಳಿಸಿ’- ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯಿಂದ್ಲೇ ಅಭಿಯಾನ

    ಇಷ್ಟು ವರ್ಷ ಗಂಡಸು ಎಂಪಿಗಳು ಕ್ಷೇತ್ರದಲ್ಲಿ ಏನು ಮಾಡಿದ್ದೀರಿ? ಒಬ್ಬ ಮಹಿಳೆಯಾಗಿ ನಾನು ರಾಜ್ಯಾದ್ಯಂತ ಓಡಾಡಿಕೊಂಡು ಇಷ್ಟೆಲ್ಲಾ ಮಾಡಿದ್ದೇನೆ. ನಿಮ್ಮ ಕೈಯಲ್ಲಿ ಆಗದ ಕೆಲಸ ನಾನು ಮಾಡಿದ್ದೇನೆ. ಟಿಕೆಟ್ ನ ಆಸೆಗಾಗಿ ನಾನು ಇಷ್ಟೆಲ್ಲ ಮಾಡಿದ್ದಲ್ಲ. 10-20 ಹುಡುಗರ ಗುಂಪು ಕಟ್ಟಿಕೊಂಡು ಅಪಪ್ರಚಾರ ನಡೆಯುತ್ತಿದೆ. ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದರು. ಇದನ್ನೂ ಓದಿ:ಬಿಎಸ್‍ವೈ ಸೇರಿದಂತೆ ಬಿಜೆಪಿ ಹೈಕಮಾಂಡ್‍ಗೆ ತಲೆನೋವಾದ ಕೇಸ್

    ಧನಿ ಎತ್ತಿದವರ ಕೊಡುಗೆಯೇನು? ನಾನು 25 ವರ್ಷದಿಂದ ಪಕ್ಷಕ್ಕೆ ಮಣ್ಣು ಹೊತ್ತಿದ್ದೇನೆ. ರಾಜ್ಯದಲ್ಲೆಲ್ಲಾ ಓಡಾಡಿದ್ದೇನೆ. ನೀವು ಬಿಜೆಪಿಗೆ ಏನು ಮಾಡಿದ್ದೀರಿ? ನನ್ನ ಜೊತೆ ಚರ್ಚೆಗೆ ಬನ್ನಿ ಆಮೇಲೆ ಟಿಕೆಟ್ ಕೇಳಿ ಎಂದು ಹೆಸರು ಹೇಳದೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ವಿರುದ್ಧ ಗರಂ ಆದರು.

    ಸಾಧನೆ ವಿವರಿಸಿದ ಶೋಭಾ:
    ನನ್ನ ಅವಧಿಯಲ್ಲಿ ಉಡುಪಿಗೆ ಪಾಸ್ ಪೋರ್ಟ್ ಆಫೀಸ್ ತಂದಿದ್ದೇನೆ. ರಾಜ್ಯದ ಏಕೈಕ ಸಖಿ ಸೆಂಟರ್ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿದೆ. ಎರಡು ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯಾಗಿದೆ. ಜಿಟಿಡಿಸಿ ಕಟ್ಟಡ, ಕೌಶಲ್ಯ ತರಬೇತಿ ಕೇಂದ್ರ, ವಜ್ರದ ಹರಳು ಮತ್ತು ಆಭರಣ ತಯಾರಿಕಾ ತರಬೇತಿ ಸಂಸ್ಥೆ ಉಡುಪಿಯಲ್ಲಿ ನಿರ್ಮಾಣವಾಗಿದೆ. ಇಲ್ಲಿನ ಸರ್ಟಿಫಿಕೇಟ್ ದೇಶಾದ್ಯಂತ ಉಪಯೋಗಕ್ಕೆ ಬರುತ್ತದೆ. ರಾಜ್ಯದಲ್ಲೇ ಅತೀ ಹೆಚ್ಚು ಸಿಆರ್ ಎಫ್ ಫಂಡ್ ನನ್ನ ಕ್ಷೇತ್ರಕ್ಕೆ ಬಂದಿದೆ. 550 ಕೋಟಿ ರೂ. ರಸ್ತೆ ನಿರ್ಮಾಣಕ್ಕೆ ಖರ್ಚಾಗಿದೆ ಎಂದು ಹೇಳಿದರು. ಎರಡು ಜಿಲ್ಲೆಯ ಎಲ್ಲಾ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗುತ್ತಿದೆ. ನೀವೇನು ಮಾಡಿದ್ದೀರಿ ಅಂತ ಹೆಸರು ಹೇಳದೇ ಜಯಪ್ರಕಾಶ್ ಹೆಗ್ಡೆಗೆ ಶೋಭಾ ಟಾಂಗ್ ಕೊಟ್ಟರು.

    ಯಾರೆಲ್ಲ ಗಂಡಸರು ಎಂಪಿ ಆಗಿದ್ದರು..?
    ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಈ ಹಿಂದೆ ಕಾಂಗ್ರೆಸ್ ನಿಂದ ಆಸ್ಕರ್ ಫರ್ನಾಂಡೀಸ್ ಸುದೀರ್ಘ ಸಂಸದರಾಗಿದ್ದರು. ಜಯಪ್ರಕಾಶ ಹೆಗ್ಡೆ, ವಿನಯಕುಮಾರ್ ಸೊರಕೆ, ಟಿ.ಎ ಪೈ, ಪಿ.ರಂಗನಾಥ ಶೆಣೈ, ಯು.ಎಸ್ ಮಲ್ಯ, ಸ್ವತಂತ್ರ ಪಾರ್ಟಿಯಿಂದ ಜೆ.ಎಂ ಲೋಬೋ, ಬಿಜೆಪಿಯಿಂದ ಐಎಂ ಜಯರಾಮ ಶೆಟ್ಟಿ, ಸದಾನಂದ ಗೌಡ ಅವರು ಈ ಹಿಂದೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕ್ಕಮಗಳೂರಿನ ಉದುಸೆಯಲ್ಲಿ ಕಾಡ್ಗಿಚ್ಚು – ಬೆಲೆ ಬಾಳುವ ಮರಗಳು ಸುಟ್ಟು ಕರಕಲು

    ಚಿಕ್ಕಮಗಳೂರಿನ ಉದುಸೆಯಲ್ಲಿ ಕಾಡ್ಗಿಚ್ಚು – ಬೆಲೆ ಬಾಳುವ ಮರಗಳು ಸುಟ್ಟು ಕರಕಲು

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಲೆ ಬಾಳುವ ಮರಗಳು ಸುಟ್ಟು ಕರಕಲಾಗಿವೆ.

    ಸುಮಾರು 30 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಒಂದು ಕಡೆ ನಂದಿಸಿದರೆ ಮತ್ತೊಂದು ಕಡೆಗೆ ಬೆಂಕಿ ಆವರಿಸಿಕೊಳ್ಳುತ್ತಿದ್ದರಿಂದ ಕಾಡು ಧಗಧಗನೆ ಹೊತ್ತು ಉರಿಯುತ್ತಿದೆ. ಉದುಸೆ ಗ್ರಾಮದ ಸುತ್ತ-ಮುತ್ತ ಬೆಂಕಿ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

    ಶನಿವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮದಲ್ಲಿಯೂ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಇತ್ತ ಚಾಮರಾಜನಗರದ ಬಂಡೀಪುರ ರಕ್ಷಿತಾರಣ್ಯದಲ್ಲಿಯೂ ಕಳೆದ ನಾಲ್ಕು ದಿನಗಳಿಂದ ಬೆಂಕಿ ಕಾಣಿಸಿಕೊಂಡಿದ್ದರಿಂದ ಸಫಾರಿಯನ್ನು ಬಂದ್ ಮಾಡಲಾಗಿದೆ. ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಶೋಭಕ್ಕನ ಮನೆಗೆ ಕಳ್ಸಿ, ಮೋದಿಯನ್ನ ಉಳಿಸಿ’- ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯಿಂದ್ಲೇ ಅಭಿಯಾನ

    ‘ಶೋಭಕ್ಕನ ಮನೆಗೆ ಕಳ್ಸಿ, ಮೋದಿಯನ್ನ ಉಳಿಸಿ’- ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯಿಂದ್ಲೇ ಅಭಿಯಾನ

    ಉಡುಪಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸದ್ದು ಮಾಡುತ್ತಿದೆ. ಸಂಸದೆ ಶೋಭಾ ಕರಂದ್ಲಾಜೆಗೆ ಈ ಬಾರಿ ಟಿಕೆಟ್ ಕೊಡಬಾರದು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ನಡೀತಾ ಇದೆ. ಬಿಜೆಪಿ ಕಾರ್ಯಕರ್ತನ ಮೇಲೆಯೇ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಿಕ್ಕಮಗಳೂರು ತರೀಕೆರೆಯಲ್ಲಿ ಸಂಸದೆ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆದಿದೆ.

    ಉಡುಪಿ ಚಿಕ್ಕಮಗಳೂರು ಕ್ಷೇತ್ರ ಮೊದಲಿನಿಂದಲೂ ವಲಸಿಗರ ಕ್ಷೇತ್ರ ಎಂದೇ ಪ್ರಸಿದ್ಧಿ. ಕಾಂಗ್ರೆಸ್ ಅಧಿನಾಯಕಿ ದಿವಂಗತ ಇಂದಿರಾ ಗಾಂಧಿಯಿಂದ ಈಗಿನ ಶೋಭಾ ಕರಂದ್ಲಾಜೆ ತನಕ ಇಲ್ಲಿ ಹೊರಗಿನವರೇ ಸಂಸದರಾಗಿದ್ದಾರೆ. ಪುತ್ತೂರಿನ ವಿನಯಕುಮಾರ್ ಸೊರಕೆ, ಮಾಜಿ ಸಿಎಂ ಡಿ.ವಿ.ಸದಾನಂದಗೌಡರಿಗೂ ಇದು ಮರು ಜನ್ಮನೀಡಿದ ಕ್ಷೇತ್ರ. ಇಂಥ ಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯ ಹೊತ್ತಿಗೆ ಮೋದಿ ಅಲೆಯಲ್ಲಿ ತೇಲಿ ಬಂದು ಗೆದ್ದವರು ದಕ್ಷಿಣ ಕನ್ನಡದ ಶೋಭಾ ಕರಂದ್ಲಾಜೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ, ರಾಷ್ಟ್ರ ರಾಜಕಾರಣದಲ್ಲೇ ಬ್ಯುಸಿಯಿದ್ದ ಶೋಭಾ ಕರಂದ್ಲಾಜೆ ಈ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಿಲ್ಲ ಎಂಬುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಶೋಭಾ ಗೋ ಬ್ಯಾಕ್ ಅಭಿಯಾನ ಉಡುಪಿ- ಚಿಕ್ಕಮಗಳೂರಿನಲ್ಲಿ ಶುರುವಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಬರೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಯಕ್ಷಿಮಠ ಎಂಬವರ ವಿರುದ್ಧ ರಾಜ್ಯ ಬಿಜೆಪಿ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ಆಪ್ತ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ದೂರು ದಾಖಲಿಸಿದ್ದಾರೆ. ಈ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:ಲೋಕಸಭಾ ಚುನಾವಣೆ- ಸಂಸದ ನಳಿನ್ ಬದಲಾವಣೆಗೆ ಕೇಸರಿ ಪಡೆಯಿಂದ್ಲೇ ಒತ್ತಡ

    ಸಂಸದರಾದ ಬಳಿಕ ಕ್ಷೇತ್ರವನ್ನೇ ಮರೆತಿದ್ದೀರಿ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರತ್ಯಕ್ಷವಾಗಿದ್ದೀರಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ತರೀಕೆರೆಗೆ ರೈಲ್ವೆ ಫ್ಲಾಟ್ ಫಾರಂ ಮೇಲ್ದರ್ಜೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದರು. ಈ ವೇಳೆ, ವಕೀಲರು ಹಾಗೂ ತರೀಕೆರೆ ಸಾರ್ವಜನಿಕರು ಹೆದ್ದಾರಿ ಅಗಲೀಕರಣ ಹಾಗೂ ದುರಸ್ತಿ ಮಾಡುವಂತೆ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಗಾಂಧಿ ವೃತ್ತದಲ್ಲಿ ವಕೀಲರು ಮಾನವ ಸರಪಳಿ ನಿರ್ಮಿಸಿ ಸಂಸದರ ವಿರುದ್ಧ ಕಿಡಿಕಾರಿದ್ರು. ಒಂದು ಗಂಟೆಗೂ ಹೆಚ್ಚು ಹೊತ್ತು ರಾಷ್ಟ್ರೀಯ ಹೆದ್ದಾರಿ 206ರನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ರು.

    ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಸ್ ಬಿಟ್ಟು ಕಾಂಗ್ರೆಸ್ ಬಂದು ಗೆದ್ದು ನಂತರ ಸೋತು ಬಿಜೆಪಿಗೆ ವಲಸೆ ಬಂದಿರುವ ಜಯಪ್ರಕಾಶ್ ಹೆಗ್ಡೆ ಎಂಪಿ ಸೀಟಿಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅದು ಬಿಟ್ಟು ಐದಾರು ಹೆಸರು ಚಾಲ್ತಿಯಲ್ಲಿದೆ. ಉಡುಪಿ-ಚಿಕ್ಕಮಗಳೂರು ಜಿಲ್ಲೆಯ 8 ಎಂಎಲ್‍ಎಗಳ ಪೈಕಿ 7 ಮಂದಿ ಬಿಜೆಪಿಯಿಂದ ಆಯ್ಕೆಯಾದವರು. ಹೀಗಾಗಿ ಅಭ್ಯರ್ಥಿಯನ್ನು ಗೆಲ್ಲಿಸುವ ಸವಾಲಿಗಿಂತ ಅಭ್ಯರ್ಥಿ ಆಯ್ಕೆಯೇ ತಲೆನೋವಾಗಿದೆ. ಕಳೆದ ಐದು ವರ್ಷಗಳಲ್ಲಿ ನಡೆದ ಸ್ಥಳೀಯ ಚುನಾವಣೆ ಸಂದರ್ಭದಲ್ಲೂ ಪ್ರಚಾರದಲ್ಲಿ ಪಾಲ್ಗೊಳ್ಳದಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

    ಶೋಭಾ ಕರಂದ್ಲಾಜೆ ಅಭ್ಯರ್ಥಿಯಾಗಿ ಪುನರಾಯ್ಕೆಯಾಗುವ ಸಂಭವವಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಸ್ಫೋಟಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಪಕ್ಷದ ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡುತ್ತದೆ. ಭಾರತೀಯ ಜನತಾ ಪಕ್ಷ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.

    ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿರುವ ಶೋಭಾ ಕರಂದ್ಲಾಜೆ ಸ್ವ-ಕ್ಷೇತ್ರದಲ್ಲಿ ಮುಜುಗರ ಅನುಭವಿಸುವಂತಾಗಿದೆ. ಶೋಭಾ ಕರಂದ್ಲಾಜೆ ಸಂಸದೆಯಾದ ಬಳಿಕ ಉಡುಪಿ ಜಿಲ್ಲಾ ಬಿಜೆಪಿ ಮೂರು ಬಣಗಳು ಸೃಷ್ಟಿಯಾಗಿದೆ ಎಂಬೂದು ಸುಳ್ಳಲ್ಲ. ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದ್ದು, ಎರಡೂ ಜಿಲ್ಲೆಗಳ ಪರಿಚಿತ ಮತ್ತು ಸಮರ್ಥ ನಾಯಕನನ್ನು ಆಯ್ಕೆ ಮಾಡಿದ್ರೆ ಭಧ್ರಕೋಟೆಯೊಳಗೆ ಬಿಜೆಪಿಗೆ ಗೆಲುವು ಸುಲಭವಲ್ಲ ಅನ್ನೋದು ಸತ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv