Tag: Chikkamagaluru

  • ಮೋದಿ ಟೀಕಿಸೋ ಭರದಲ್ಲಿ ಪಾಕ್ ಮೇಲೆ ಪ್ರೀತಿ ತೋರಿದ ಕಾಂಗ್ರೆಸ್ ಶಾಸಕ

    ಮೋದಿ ಟೀಕಿಸೋ ಭರದಲ್ಲಿ ಪಾಕ್ ಮೇಲೆ ಪ್ರೀತಿ ತೋರಿದ ಕಾಂಗ್ರೆಸ್ ಶಾಸಕ

    ಚಿಕ್ಕಮಗಳೂರು: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಜ್ಜನ, ಸೌಮ್ಯ ವ್ಯಕ್ತಿತ್ವ ಹೊಂದಿರುವವನು. ಪಾಕ್‍ನೊಳಗೆ ಬಿದ್ದ ಭಾರತದ ಪೈಲಟ್‍ನನ್ನ ವಾಪಸ್ ಕಳಿಸಿದ್ದಾರೆ ಎಂದರೆ ಅದು ಅವರ ಸೌಜನ್ಯ, ಭಯಕ್ಕಲ್ಲ ಎಂದು ಪಾಕಿಸ್ತಾನ ಪರ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮೃದು ಧೋರಣೆ ತೋರಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಎನ್.ಆರ್.ಪುರ ತಾಲೂಕಿನ ಮೆಣಸೂರಿನಲ್ಲಿ ಮತಯಾಚನೆ ಮಾಡುವ ವೇಳೆ ಪ್ರಧಾನಿ ಮೋದಿಯನ್ನ ಟೀಕಿಸುವ ಭರದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ರನ್ನ ಹಾಡಿ ಹೊಗಳಿದ್ದಾರೆ. ಆದ್ದರಿಂದ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

    ಇದೇ ಆಡಿಯೋದಲ್ಲಿ ಗೋವಾದಿಂದ 2 ಬಾಟಲಿ ವಿಸ್ಕಿ ತಂದರೆ ದಂಡ ಹಾಕುತ್ತಾರೆ. 350 ಕೆ.ಜಿ. ಆರ್.ಡಿ.ಎಕ್ಸ್ ನ ಜೀಪಿನಲ್ಲಿ ತಂದು ಸೈನಿಕರ ಬಸ್ಸಿಗೆ ಗುದ್ದಿ ಸೈನಿಕರ ಹತ್ಯೆ ಮಾಡುತ್ತಾರೆ. ಮೋದಿಯವರೆ ಆಗ ಎಲ್ಲೋಗಿತ್ತು ನಿಮ್ಮ ಭದ್ರತೆ, 56 ಇಂಚಿನ ಎದೆ, ನಿಮ್ಮ ಶೌರ್ಯ ಎಂದು ಮೋದಿಯನ್ನ ಟೀಕಿಸುವಾಗ ಪಾಕಿಸ್ತಾನದ ಅಭಿಮಾನಿಯಾಗಿದ್ದಾರೆ. ಮೋದಿ ನೋಡಿ ಪಾಕಿಸ್ತಾನ ಹೆದರಲ್ಲ. ನಮ್ಮ ದೇಶದ ಜನ, ಸೈನಿಕರು ಹಾಗೂ ಭಾವನೆಗಳಿಗೆ ಬೇರೆ ದೇಶಗಳು ಬೆಲೆ ಕೊಡುತ್ತಿವೆ ಎಂದು ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ನೀವು ಅಧಿಕಾರದಲ್ಲಿದ್ದಾಗಲೇ ಹಲವು ದಾಳಿಗಳಾಗಿದ್ವು. ಆಗ ಎಲ್ಲೋಗಿತ್ತು ನಿಮ್ಮ ಪೌರುಷ, 56 ಇಂಚಿನ ಎದೆಗಾರಿಕೆ. ನಮ್ಮ ದೇಶದ ಭದ್ರತೆ ಹಾಗೂ ಸೈನಿಕರ ಬಗ್ಗೆ ಮಾತನಾಡಲು ನಿಮಗೆ ಅಧಿಕಾರವಿಲ್ಲ. ಪ್ರಧಾನಿ ಕುರ್ಚಿ ಅಂದರೆ ಮಹಾರಾಜನಿದ್ದಂತೆ, ನೀವು ಮಹಾರಾಜನಂತೆ ನಡೆದುಕೊಳ್ಳಬೇಕಿತ್ತು. ನಿಮ್ಮ ಸರ್ಕಾರ ಮಸೀದಿ ಹಾಗೂ ಚರ್ಚ್ ಕಟ್ಟಲಿಲ್ಲ. ನಮ್ಮ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಸರ್ಕಾರ ಮಸೀದಿ ಹಾಗೂ ಕ್ರೈಸ್ತ ದೇವಾಲಯಗಳನ್ನ ನಿರ್ಮಾಣ ಮಾಡಿಕೊಟ್ಟಿದ್ದೇವೆ ಎಂದು ಮೋದಿ ಟೀಕಿಸುವ ಭರದಲ್ಲಿ ಪಾಕಿಸ್ತಾನವನ್ನ ಹೊಗಳಿ ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಿದ್ದಾರೆ.

    ಸ್ಥಳೀಯ ಮಟ್ಟದಲ್ಲಿ ಆಡಿಯೋ ವೈರಲ್ ಆಗಿದ್ದು, ಇದೂವರೆಗೂ ಶಾಸಕರು ಯಾವುದೇ ಸ್ಪಷ್ಟನೆ ನೀಡಿಲ್ಲ.

  • ಚಿಕ್ಕಮಗಳೂರು ಕೈ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಮೃತ್ ಶೆಣೈ ಅಮಾನತು

    ಚಿಕ್ಕಮಗಳೂರು ಕೈ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಮೃತ್ ಶೆಣೈ ಅಮಾನತು

    ಚಿಕ್ಕಮಗಳೂರು: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸುತ್ತಿರುವ ಅಮೃತ್ ಶೆಣೈ ಅವರ ಎಐಸಿಸಿ ಸದಸ್ಯತ್ವವನ್ನು ಕೆಪಿಸಿಸಿ ಅಮಾನತು ಮಾಡಿದೆ.

    ಕ್ಷೇತ್ರದಲ್ಲಿ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಎರವಲು ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಅಮೃತ್ ಶೆಣೈ ಬಂಡಾಯ ಹೂಡಿ ಪಕ್ಷೇತರರಾಗಿ ಸ್ಪರ್ಧೆಗೆ ನಿರ್ಧರಿಸಿದ್ದರು. ಪರಿಣಾಮ ಎಐಸಿಸಿ ಸದಸ್ಯರಾಗಿದ್ದ ಅಮೃತ್ ಶೆಣೈ ಅವರನ್ನು ಸದ್ಯ 6 ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಿ ಆದೇಶಿಸಲಾಗಿದೆ.

    ಕ್ಷೇತ್ರದಲ್ಲಿ ಅಸ್ತಿತ್ವವೇ ಇಲ್ಲದ ಜೆಡಿಎಸ್ ಪಕ್ಷಕ್ಕೆ ಟಿಕೆಟ್ ನೀಡಿರೋದರಿಂದ ಕಾಂಗ್ರೆಸ್ ಕಾರ್ಯಕರ್ತರು ಬೇಸರಗೊಂಡಿದ್ದರು. ಪರಿಣಾಮ ಕಾರ್ಯಕರ್ತರ ಬೆಂಬಲ ಕೋರಿದ್ದ ಉದ್ಯಮಿ ಅಮೃತ್ ಶೆಣೈ ಬಂಡಾಯವಾಗಿ ಪಕ್ಷೇತರರಾಗಿ ಸ್ಪರ್ಧೆ ನಡೆಸುವುದಾಗಿ ಈ ಹಿಂದೆ ತಿಳಿಸಿದ್ದರು. ಮೈತ್ರಿ ಬೆಂಬಲಿತ ಅಭ್ಯರ್ಥಿ ವಿರುದ್ಧ ಸ್ಪರ್ಧೆ ನಡೆಸಿದ ಕಾರಣ ಶಿಸ್ತು ಕ್ರಮದ ಹೆಸರಿನಲ್ಲಿ ಕಾಂಗ್ರೆಸ್ ಕ್ರಮಕೈಗೊಂಡಿದೆ. ಶೆಣೈ ಕಣಕ್ಕಿಳಿದಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರ ಮತಗಳು ವಿಭಜನೆಯಾಗುವುದು ಖಚಿತವಾಗಿದ್ದು, ಇದು ಮೈತ್ರಿ ಬೆಂಬಲಿತ ಅಭ್ಯರ್ಥಿಯ ಮೇಲೆ ಪ್ರಭಾವ ಬೀರಲಿದೆ.

    ಇತ್ತ ಬೀದರ್ ಲೋಕಸಭಾ ಕ್ಷೇತ್ರದಿಂದ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಶಾನುಲ್ ಹಖ್ ಬುಖಾತಿ ಅವರನ್ನು ಕೂಡ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ ಅಮಾನತು ಮಾಡಲಾಗಿದೆ.

  • ಪರಮೇಶ್ ಬಗ್ಗೆ ನನ್ನ ಹತ್ತಿರ ಯಾಕೆ ಪ್ರಶ್ನೆ ಕೇಳ್ತಾ ಇದ್ದೀರಾ: ಸಿಎಂ ಫುಲ್ ಗರಂ

    ಪರಮೇಶ್ ಬಗ್ಗೆ ನನ್ನ ಹತ್ತಿರ ಯಾಕೆ ಪ್ರಶ್ನೆ ಕೇಳ್ತಾ ಇದ್ದೀರಾ: ಸಿಎಂ ಫುಲ್ ಗರಂ

    ಚಿಕ್ಕಮಗಳೂರು: ಆದಾಯ ತೆರಿಗೆ (ಐಟಿ) ಇಲಾಖೆ ನಡೆಸಿರುವ ಪರಮೇಶ್ ಬಗ್ಗೆ ನನ್ನ ಹತ್ತಿರ ಯಾಕೆ ಪ್ರಶ್ನೆ ಕೇಳುತ್ತಿರುವಿರಿ ಎಂದು ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಫುಲ್ ಗರಂ ಆಗಿದ್ದಾರೆ.

    ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಪರಮೇಶ್ ಯಾರು? ಐಟಿ ದಾಳಿ ಆಗಿದ್ದಕ್ಕೆ ನಾನು ಏನು ಮಾಡಬೇಕು? ಅವರು ವ್ಯವಹಾರ ಮಾಡಿಕೊಂಡಿದ್ದರೆ ಅಧಿಕಾರಿಗಳು ಕಾನೂನು ರೀತಿಯ ಕ್ರಮಕೈಗೊಳುತ್ತಾರೆ ಎಂದು ಹೇಳಿದರು.

    ಪರಮೇಶ್ 25 ವರ್ಷಗಳಿಂದ ಬಿಸಿನೆಸ್ ಮಾಡುತ್ತಿದ್ದಾರೆ. ಅವರೇನು ರಾಜಕೀಯ ವ್ಯಕ್ತಿನಾ? ಕಾನೂನಿನ ವಿರುದ್ಧವಾಗಿ ಯಾರೇ ಕೆಲಸ ಮಾಡಿದರು ತಪ್ಪೇ. ಐಟಿ ದಾಳಿಯ ವೇಳೆ ಪರಮೇಶ್ ಅವರ ಲಾಕರ್ ನಲ್ಲಿ ಸುಮಾರು 6.50 ಕೋಟಿ ರೂ. ಹಣ ಪತ್ತೆಯಾಗಿದ್ದು, ನನಗೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಪಕ್ಷದ ಅಭಿಮಾನಿಯೂ ಅಲ್ಲ. ದೂರದ ಸಂಬಂಧಿ ಅಷ್ಟೇ. ಅವರ ವಿರುದ್ಧ ಕ್ರಮ ತಗೆದುಕೊಳ್ಳಲು ನಾನೇನು ಬೇಡ ಅಂತ ಹೇಳಿಲ್ಲ ಎಂದು ತಿಳಿಸಿದರು.

    ಏನಿದು ಪ್ರಕರಣ?:
    ಶಿವಮೊಗ್ಗದ ಪರಮೇಶ್ ಅವರ ಮನೆ, ಶೋ ರೂಂ ಮೇಲೆ ಮಾರ್ಚ್ 28ರಂದು ಐಟಿ ದಾಳಿ ನಡೆಸಲಾಗಿತ್ತು. ಸತತ 20 ಗಂಟೆಗಳ ಸಮಯ 30 ಅಧಿಕಾರಿಗಳ ತಂಡ ಮನೆ ಶೋ ರೂಂನಲ್ಲಿ ಪರಿಶೀಲನೆ ನಡೆಸಿತ್ತು. ಈ ವೇಳೆ ಪತ್ತೆಯಾಗಿದ್ದ ಬ್ಯಾಂಕ್ ಲಾಕರಿನ ವಿವರಣೆ ಪಡೆದು ಐಟಿ ಅಧಿಕಾರಿಗಳು ತನಿಖೆ ನಡೆಸಿದ್ದರು.

    ಐಟಿ ಅಧಿಕಾರಿಗಳು ಗುರುವಾರ ರಾಷ್ಟ್ರೀಕೃತ ಬ್ಯಾಂಕಿಗೆ ತೆರಳಿ ಲಾಕರ್ ತೆರೆದ ಸಂದರ್ಭದಲ್ಲಿ ಕವರ್ ಗಳಲ್ಲಿ ತುಂಬಿದ್ದ ಹಣ ಪತ್ತೆಯಾಗಿದೆ. ಭಾರೀ ಹಣವನ್ನು ಕಂಡು ಐಟಿ ಆಧಿಕಾರಿಗಳು ಶಾಕ್ ಆಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಬ್ಯಾಂಕ್ ಲಾಕರ್ ಪಡೆದಿರುವ ಬಗ್ಗೆ ದಾಖಲೆ ಸಿಕ್ಕ ಬಳಿಕ ಅಧಿಕಾರಿಗಳ ಲಾಕರ್ ಕೀ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಕೀ ಕಳೆದು ಹೋಗಿದ್ದಾಗಿ ಪರಮೇಶ್ವರ್ ತಿಳಿಸಿದ್ದರು ಎನ್ನಲಾಗಿದೆ. ಸದ್ಯ ಹಣವನ್ನು ಜಪ್ತಿ ಮಾಡಿರುವ ಐಟಿ ಇಲಾಖೆ ಸೂಕ್ತ ದಾಖಲೆ ನೀಡುವಂತೆ ನೋಟಿಸ್ ನೀಡಿದೆ.

  • ಬಸ್ ನಿಲ್ದಾಣ ಉಳಿಸಿತು ಹದಿನೈದು ಮಕ್ಕಳ ಪ್ರಾಣ

    ಬಸ್ ನಿಲ್ದಾಣ ಉಳಿಸಿತು ಹದಿನೈದು ಮಕ್ಕಳ ಪ್ರಾಣ

    – ಮಿಸ್ಸಾಗಿದ್ರೆ 150 ಅಡಿ ಕಂದಕಕ್ಕೆ ಶಾಲಾ ಬಸ್

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ಸೊಂದು ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದು ಸುಟ್ಟು ಹೋಗಿದೆ. ಆದರೆ ಕೂದಲೆಳೆ ಅಂತರದಲ್ಲಿ ಮಕ್ಕಳು ಹಾಗೂ ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ದಿನಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಕೊಪ್ಪ ತಾಲೂಕಿನ ಬಸರೀಕಟ್ಟೆ ಗ್ರಾಮದ ಸದ್ಗುರು ಶಾಲೆಯ ಮಕ್ಕಳನ್ನ ಶಾಲಾ ಬಸ್ ಕಳಸ, ಹಳುವಳ್ಳಿಯಿಂದ ಕರೆದುಕೊಂಡು ಬಸರೀಕಟ್ಟೆಗೆ ಹೂಗುತಿತ್ತು. ಇದೇ ವೇಳೆ ಬಸ್ಸಿನ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಬಸ್ ಇಳಿದು ನೋಡುವಷ್ಟರಲ್ಲಿ ಹಿಂಬದಿಯಲ್ಲಿ ಇಳಿಜಾರು ಇದ್ದಿದ್ದರಿಂದ ನಿಧಾನವಾಗಿ ಹಿಂದಕ್ಕೆ ಚಲಿಸಿ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿದೆ.

    ಬಸ್ ಹಿಮ್ಮುಖವಾಗಿ ಚಲಿಸುತ್ತಿದ್ದಂತೆ ಕೆಲ ಮಕ್ಕಳು ಹಾಗೂ ಶಿಕ್ಷಕರು ಇಳಿದುಕೊಂಡಿದ್ದಾರೆ. ಇನ್ನು ಕೆಲವರು ಬಸ್‍ನಲ್ಲೇ ಇದ್ದರು. ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದು ನಿಲ್ಲುತ್ತಿದ್ದಂತೆ ಬಸ್ಸಿನಲ್ಲಿದ್ದ ಮಕ್ಕಳು-ಶಿಕ್ಷಕರು ಇಳಿದಿದ್ದಾರೆ. ನಂತರ ಸ್ಥಳಿಯರು ಹಳ್ಳದಲ್ಲಿ ಹರಿಯುತ್ತಿದ್ದ ನೀರನ್ನ ತಂದು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ.

    ಈ ಘಟನೆಯಿಂದ ಮಕ್ಕಳ ಪುಸ್ತಕ ಹಾಗೂ ಬ್ಯಾಗ್‍ಗಳು ಸಂಪೂರ್ಣ ಸುಟ್ಟುಹೋಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನಿಲ್ದಾಣ ಸಂಪೂರ್ಣ ಜಖಂಗೊಂಡಿದ್ದು, ಸ್ಥಳಿಯರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಸ್ಸಿನಲ್ಲಿ ಮಕ್ಕಳು ಹಾಗೂ ಶಿಕ್ಷಕರು ಸೇರಿ ಸುಮಾರು 15 ಮಂದಿ ಪ್ರಯಾಣಿಸುತ್ತಿದ್ದರು. ಬಸ್ಸಿಗೆ ಬಸ್ ನಿಲ್ದಾಣ ಅಡ್ಡವಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಬಸ್ ನಿಲ್ದಾಣ ಇಲ್ಲದಿದ್ದರೆ ಬಸ್ ಸುಮಾರು 100-150 ಅಡಿ ಆಳದ ಕಂದಕಕ್ಕೆ ಬೀಳುತಿತ್ತು.

  • ರಾತ್ರೋರಾತ್ರಿ 1.75 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ – ಬೆಳಗ್ಗೆ ರೊಟ್ಟಿಯಂತೆ ಎದ್ದ ಡಾಂಬರು!

    ರಾತ್ರೋರಾತ್ರಿ 1.75 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ – ಬೆಳಗ್ಗೆ ರೊಟ್ಟಿಯಂತೆ ಎದ್ದ ಡಾಂಬರು!

    ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಅಭ್ಯರ್ಥಿಗಳು ತಮ್ಮ ಮತದಾರರನ್ನು ಸೆಳೆಯಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಈಗ ಜಿಲ್ಲೆಯಲ್ಲಿ ಮತದಾರರ ಮನ ಸೆಳೆಯಲು ರಾತ್ರೋರಾತ್ರಿ ರಸ್ತೆ ನಿರ್ಮಾಣ ಮಾಡಲಾಗಿದೆ.

    ಚಿಕ್ಕಮಗಳೂರಿನ ಎನ್‍ಆರ್ ಪುರ ತಾಲೂಕಿನ ಗಡಿಗೇಶ್ವರ ಗ್ರಾಮದಲ್ಲಿ ಒಂದೇ ದಿನಕ್ಕೆ 5 ಕಿಲೋಮೀಟರ್ ಕಳಪೆ ರಸ್ತೆ ನಿರ್ಮಾಣ ಮಾಡಲಾಗಿದೆ. ತಳದಲ್ಲಿ ಜಲ್ಲಿ ಹಾಕಿಲ್ಲ, ಮಣ್ಣಿನ ಮೇಲೆ ಡಾಂಬರ್ ರಸ್ತೆ ಮಾಡಿದ್ದಾರೆ. ಪರಿಣಾಮ ಪರೀಕ್ಷೆ ಮಾಡಿದರೆ ರೊಟ್ಟಿಯಂತೆ ಡಾಂಬರು ಎದ್ದು ಬರುತ್ತಿದೆ.

    ಗ್ರಾಮಸ್ಥರು ಬರಿಗೈಲ್ಲಿ ರಸ್ತೆಯ ಡಾಂಬರನ್ನು ಕಿತ್ತು ಬಿಸಾಡುತ್ತಿದ್ದಾರೆ. ಸುಮಾರು 1.75 ಕೋಟಿ ವೆಚ್ಚದಲ್ಲಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಕಾಂಟ್ರಾಕ್ಟರ್ ರೆಡ್ಡಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕಟ್ಟಿನಮನೆ-ಗಡಿಗೇಶ್ವರ ರಸ್ತೆಯಲ್ಲಿ ಬರಿಗೈಯಲ್ಲಿ ಡಾಂಬರ್ ಕಿತ್ತು ಪ್ರತಿಭಟನೆ ಮಾಡುತ್ತಿದ್ದಾರೆ.

  • ಬಿಜೆಪಿಯವರ ಮನೆಗೆ ಭೇಟಿ ನೀಡ್ಬೇಕೆಂಬ ಆಸೆ- ಕಮಲ ನಾಯಕರ ಕಾಲೆಳೆದ ಪ್ರಮೋದ್ ಮಧ್ವರಾಜ್

    ಬಿಜೆಪಿಯವರ ಮನೆಗೆ ಭೇಟಿ ನೀಡ್ಬೇಕೆಂಬ ಆಸೆ- ಕಮಲ ನಾಯಕರ ಕಾಲೆಳೆದ ಪ್ರಮೋದ್ ಮಧ್ವರಾಜ್

    ಚಿಕ್ಕಮಗಳೂರು : ಹಿಂದುತ್ವ-ಗೋಮಾತೆ ಅಂತ ಮಾತನಾಡುವ ಬಿಜೆಪಿಯವರು ಯಾರಾದರೂ ಮನೆಯಲ್ಲಿ ದನಗಳನ್ನ ಸಾಕಿದ್ದರೆ ಹೇಳಿ, ಅವರ ಮನೆಗೆ ಭೇಟಿ ನೀಡಬೇಕೆಂಬ ಆಸೆ ನನಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿರುವ ನಾಯಕರು ಯಾರಾದರೂ ದನಗಳು, ಗಂಡು ಕರು, ಹೋರಿ ಹಾಗೂ ಬಂಜೆ ದನಗಳನ್ನ ಸಾಕಿದ್ದರೆ ನನಗೆ ತಿಳಿಸಿ, ನಿಮ್ಮ ಮನೆಗೆ ಒಮ್ಮೆ ಭೇಟಿ ನೀಡಬೇಕೆಂಬ ಆಸೆ ಇದೆ ಎಂದರು. ಬಳಿಕ “ಐ ಆಯಮ್ ಸೆಕ್ಯೂಲರ್ ಬೈ ಹಾರ್ಟ್ ಅಂಡ್ ಥಾಟ್” ನಾನು ಜಾತ್ಯಾತೀತ ವ್ಯಕ್ತಿ. ಅದರ ಬಗ್ಗೆ ಯಾರಿಗೂ ಅನುಮಾನವೇ ಬೇಡ. ಎಲ್ಲಾ ಜಾತಿ, ಧರ್ಮದವರನ್ನ ಸಮಾನವಾಗಿ ನಾನು ಪ್ರೀತಿಸುತ್ತೇನೆ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಎಂದು ನಾನು ಬೇಧ ಭಾವ ಮಾಡಲ್ಲ. ನನ್ನ ಬಳಿ 2004ರಿಂದ ಗೋಶಾಲೆ ಇದೆ. ನನ್ನ ಬಳಿ ಇರೋ ಹಸುಗಳು ಗಂಡು ಕರು ಹಾಕಿದಾಗಲೂ ನಾನು ಸಾಕಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ:ಮೋದಿ ಅವಧಿಯಲ್ಲಿ ಆದಾಯ ಹೆಚ್ಚಾಗಿದೆಯೆಂದು ಹೇಳಿದ್ರೆ ಸನ್ಮಾನ- ಪ್ರಮೋದ್

    ಹಾಗೆಯೇ ತಮ್ಮ ಗೋಶಾಲೆಯಲ್ಲಿ ಹಸುಗಳು ಹಾಕಿದ್ದ 25 ಗಂಡು ಕರುಗಳಲ್ಲಿ 17 ಗಂಡು ಕರುಗಳು ನನ್ನಷ್ಟೆ ಎತ್ತರ ಬೆಳೆದಿವೆ. ಎರಡು ಬಂಜೆ ದನಗಳನ್ನೂ ಕೂಡ ನಾನು ಸಾಕುತ್ತಿದ್ದೇನೆ. ಆದ್ರೆ ನಾನು ಇವತ್ತು ಬಿಜೆಪಿ ಅವರನ್ನ ಕೇಳುತ್ತಿದ್ದೇವೆ ಹಿಂದೂ, ಗೋಮಾತೆಯೆಂದು ಹೇಳುವ ನೀವು ಎಷ್ಟು ದನಕರುಗಳನ್ನು ಸಾಕಿದ್ದೀರಿ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಯವರದ್ದು ಬಾಯ್ಮಾತಿನ ಪ್ರೀತಿ ಎಂದು ಪರೋಕ್ಷವಾಗಿ ಕಿಡಿಕಾರಿದರು.

  • ಬಿಸಿಲಿನ ಝಳಕ್ಕೆ ಗುಡುಗು ಸಹಿತ ಆಲಿಕಲ್ಲು ಮಳೆ

    ಬಿಸಿಲಿನ ಝಳಕ್ಕೆ ಗುಡುಗು ಸಹಿತ ಆಲಿಕಲ್ಲು ಮಳೆ

    – ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ

    ಚಿಕ್ಕಮಗಳೂರು/ಹಾವೇರಿ: ಹೇಳೋಕೆ ಮಲೆನಾಡಾದರೂ ಬಿಸಿಲಿನ ತಾಪ 36 ರಿಂದ 38 ಸೆಲ್ಸಿಯಸ್ ನಷ್ಟಿದ್ದ ಕಾಫಿನಾಡು, ಮಲೆನಾಡು ಭಾಗದಲ್ಲಿ ವರುಣನ ಮೊದಲ ಅಬ್ಬರಕ್ಕೆ ಹೈರಾಣಾಗಿದ್ದಾರೆ.

    ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸುಮಾರು 45 ನಿಮಿಷಗಳ ಕಾಲ ಸುರಿದ ಭಾರೀ ಮಳೆ-ಗಾಳಿಗೆ ಜನ ಕಂಗಾಲಾಗಿದ್ದಾರೆ. ಇದೇ ವೇಳೆ ಬಾಳೆಹೊನ್ನೂರಿನ ರೇಣುಕಾ ನಗರದಲ್ಲಿ ಸುಮಾರು 90 ಅಡಿ ಎತ್ತರದ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಸಂಪೂರ್ಣ ಸುಟ್ಟು ಕರಕಲಾಗಿದೆ. ಸಿಡಿಲಿನ ರಭಸಕ್ಕೆ ತೆಂಗಿನ ಮರ ಹೊತ್ತಿ ಉರಿಯುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ದಿಢೀರನೆ ಸುರಿದ ಮಳೆಗೆ ಮಕ್ಕಳು ಭಯದಿಂದ ಮನೆಯತ್ತ ಓಡುತ್ತಿದ್ದ ದೃಶ್ಯವೂ ಕೂಡ ಮನೋಜ್ಞವಾಗಿತ್ತು. ಬಾಳೆಹೊನ್ನೂರಿನ ಸುತ್ತಮುತ್ತ ಭಾರೀ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಮಿತಿ ಮೀರುತ್ತಿದೆ. ಜನರು ವರುಣನ ಆಗಮನಕ್ಕಾಗಿ ಜಾತಕ ಪಕ್ಷಿಗಳಂತೆ ಕಾದು ಕೂತಿದ್ದರು. ಬಿಸಿಲಿನ ತಾಪಕ್ಕೆ ಕಾಫಿ, ಮೆಣಸು, ಅಡಿಕೆ ಹಾಗೂ ಇತರೆ ಆಹಾರ ಹಾಗೂ ವಾಣಿಜ್ಯ ಬೆಳೆಗಳು ಸೊರಗಿದ್ದವು. ದಿಢೀರನೆ ಭಾರೀ ಮಳೆಯಾಗಿದ್ದರಿಂದ ಜನ ಸಂತಸ ವ್ಯಕ್ತಪಡಿಸಿದ್ದಾರೆ.

    ಇನ್ನೂ ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಹಾವೇರಿ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಶುಕ್ರವಾರ ಸಂಜೆ ವೇಳೆ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದ್ದ ಜಿಲ್ಲೆಯ ಜನರಿಗೆ ಆಲಿಕಲ್ಲು ಮಳೆ ಕೊಂಚ ರಿಲ್ಯಾಕ್ಸ್ ನೀಡಿದೆ. ಮಳೆರಾಯ ತನ್ನೊಂದಿಗೆ ಆಲಿಕಲ್ಲುಗಳನ್ನ ಸುರಿಸಿದ್ದು, ಜಿಲ್ಲೆಯ ಜನರಿಗೆ ಖುಷಿ ನೀಡಿದ್ದಾನೆ. ಸೂರ್ಯನ ತಾಪದಿಂದ ಬೇಸತ್ತು ಆಕಾಶ ನೋಡುತ್ತಿದ್ದ ಜನರಿಗೆ ಹದಿನೈದು ನಿಮಿಷಗಳ ಕಾಲ ಸುರಿದ ಮಳೆ ತಂಪು ತಂಪು ಕೂಲ್ ಕೂಲ್ ಎನ್ನುವ ವಾತಾವರಣ ಸೃಷ್ಟಿಸಿತ್ತು.

  • ಕರಾವಳಿ ಕೇಸರಿ ಭದ್ರಕೋಟೆಯಲ್ಲಿ ಬಿರುಕು- ಸುಲಭವಾಗಿಲ್ಲ ನಳಿನ್, ಶೋಭಾ ಗೆಲುವು!

    ಕರಾವಳಿ ಕೇಸರಿ ಭದ್ರಕೋಟೆಯಲ್ಲಿ ಬಿರುಕು- ಸುಲಭವಾಗಿಲ್ಲ ನಳಿನ್, ಶೋಭಾ ಗೆಲುವು!

    ಮಂಗಳೂರು: ರಾಜ್ಯದ ಕರಾವಳಿ ಭಾಗ ಬಿಜೆಪಿಯ ಭದ್ರಕೋಟೆ. ಆದರೆ ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೇಸರಿ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿದೆ. 2 ಕ್ಷೇತ್ರಗಳಲ್ಲಿ ಹಾಲಿ ಸಂಸದರೇ ಕಣಕ್ಕಿಳಿದ ಪರಿಣಾಮ ಅನಿವಾರ್ಯವಾಗಿ ಮೋದಿ ನೋಡಿ ವೋಟು ಕೋಡಿ ಅನ್ನೋ ಪ್ರಚಾರ ನಡೆಯುತ್ತಿದೆ. ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲೂ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಧ್ವನಿ ಕೇಳಿ ಬರುತ್ತಿದೆ.


    ಹೌದು. ರಾಜ್ಯದ ಮಟ್ಟಿಗೆ ಕರಾವಳಿ ಪ್ರದೇಶ ಹೆಚ್ಚು ಕಡಿಮೆ ಕೇಸರಿ ಫೇವರ್ ಬೆಲ್ಟ್. ಇಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವಿನ ಕುದುರೆಗಳು. ಹೀಗಾಗಿ ಬಿಜೆಪಿ ಈ ಬಾರಿಯೂ ಅದೇ ರೀತಿಯ ಫಲಿತಾಂಶ ದಕ್ಕಿಸಿಕೊಳ್ಳುವ ಭರವಸೆಯಲ್ಲಿದೆ. ಆದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸದ್ಯದ ಸ್ಥಿತಿಗತಿ ನೋಡಿದರೆ ಬಿಜೆಪಿಗೆ ವರವಾಗುವ ಲಕ್ಷಣ ಕಾಣುತ್ತಿಲ್ಲ. ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್ ಮತ್ತು ಉಡುಪಿ- ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.

    ಮಿಥುನ್ ರೈಗೆ ವರವಾಗುತ್ತಾ?
    ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಹಾಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಸಿಡಿದೆದ್ದಿದ್ದಾರೆ. ಅಲ್ಲದೆ ಸಂಘ ಪರಿವಾರದ ಹಲವು ನಾಯಕರು ನಳಿನ್ ಗೆ ಈ ಬಾರಿ ಟಿಕೆಟ್ ನೀಡಬಾರದೆಂದು ಹೇಳಿದ್ದರು. ಆದರೂ ಟಿಕೆಟ್ ಗಿಟ್ಟಿಸಿಕೊಂಡಿರುವ ನಳಿನ್ ಕುಮಾರ್ ಕಟೀಲ್ ಗೆಲುವಿಗಾಗಿ ತಿಣುಕಾಡಬೇಕಾದ ಪರಿಸ್ಥಿತಿ ಎದುರಾಗಿದೆ. ವಿಶೇಷವಾಗಿ ಸಂಸದರ ಅಸಮರ್ಥನೆ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ನಡೆದಿದೆ. ಹೀಗಾಗಿ ಕಾಂಗ್ರೆಸ್‍ನಿಂದ ಕಣಕ್ಕಿಳಿದಿರೋ ಮಿಥುನ್ ರೈಗೆ ಕೊಂಚ ವರವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕರಾವಳಿ ಭಾಗದಲ್ಲಿ ಕೇಳಿಬರುತ್ತಿದೆ.

    ಮೋದಿಗಾಗಿ ವೋಟು ಕೊಡಿ!
    ಈ ಅಸಮಾಧಾನದ ಬೆಂಕಿ ಕಿಡಿಯನ್ನು ಆರಿಸಲು ಮೋದಿ ಮೊದಿಯೆಂಬ ಕೂಗು ಕೇಳಿ ಬರುತ್ತಿದೆ. ವ್ಯಕ್ತಿಗಿಂತ ದೇಶ ಮೊದಲು ಎನ್ನುತ್ತಲೇ ಪಕ್ಷ ಕಟ್ಟಿದ್ದ ಬಿಜೆಪಿ ಈಗ ಮೋದಿಯ ಹೆಸರನ್ನೇ ಜಪ ಮಾಡತೊಡಗಿದೆ. ಎಲ್ಲಿ ಅಭ್ಯರ್ಥಿ ದುರ್ಬಲವಾಗಿದ್ದಾರೆಯೋ ಅಲ್ಲೆಲ್ಲಾ ಈ ಜಪವೇ ಮಂತ್ರವಾಗಿಬಿಟ್ಟಿದೆ.

    ಇತ್ತ ಉಡುಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಶೋಭಾ ಕರಂದ್ಲಾಜೆ ವಿರುದ್ಧ ಅಸಮಾಧಾನ ಸ್ವಲ್ಪ ಜೋರಾಗಿಯೇ ಇದೆ. ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿ ಹೊಂದಿರೋ ಕ್ಷೇತ್ರದಲ್ಲಿ ಶೋಭಾಗೆ ಟಿಕೆಟ್ ನೀಡದಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆದಿತ್ತು. ಆದರೆ ಸದ್ಯ ಅದು ಸೈಲೆಂಟ್ ಆಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಕರೆದುಕೊಂಡು ಬಂದು ನಾಮಪತ್ರ ಸಲ್ಲಿಸಿರುವ ಶೋಭಾಗೆ ಈ ಬಾರಿ ಜಯ ಸುಲಭ ಆಗಿಲ್ಲ ಅನ್ನೋದು ಮನದಟ್ಟಾಗಿದೆ. ದೋಸ್ತಿ ಅಭ್ಯರ್ಥಿಯಾಗಿರೋ ಪ್ರಮೋದ್ ಮಧ್ವರಾಜ್ ಮೊಗವೀರ ಸಮುದಾಯದ ಮತಗಳನ್ನ ಸುಲಭವಾಗಿ ಸೆಳೆಯೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಉತ್ತರ ಕನ್ನಡದಲ್ಲೂ ಬಿರುಕು..!
    ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇಲ್ನೋಟಕ್ಕೆ ಬಿಜೆಪಿಗೆ ಉತ್ತಮ ಸ್ಥಿತಿ ಇರುವಂತೆ ಕಾಣುತ್ತಿದ್ದರೂ ಒಳಗೊಳಗೆ ಬೇಗುದಿ ಇದೆ. 6ನೇ ಬಾರಿ ಮರು ಆಯ್ಕೆ ಬಯಸಿ ಸ್ಪರ್ಧೆಗೆ ನಿಂತಿರೋ ಹೆಗ್ಡೆಗೆ ಕೆಲವು ಸ್ವಪಕ್ಷೀಯರದ್ದೇ ಭೀತಿ ಕಾಡುತ್ತಿದೆ. ಆದರೆ ಜೆಡಿಎಸ್ ನಿಂದ ಸ್ಪರ್ಧಿಸಿರೋ ಆನಂದ್ ಅಸ್ನೋಟಿಕರ್ ಬಗ್ಗೆ ಕ್ಷೇತ್ರದಲ್ಲಿ ಅಷ್ಟಾಗಿ ಪರಿಚಯವಿಲ್ಲ. ಹೀಗಾಗಿ ಇದು ಅನಂತ್ ಕುಮಾರ್ ಗೆ ಪ್ಲಸ್ ಪಾಯಿಂಟ್ ಆಗಿದೆ. ಒಟ್ಟಿನಲ್ಲಿ ಕರಾವಳಿ ಪ್ರದೇಶದಲ್ಲಿ ಈ ಬಾರಿ ಬಿಜೆಪಿಗೆ ಗೆಲುವು ಮಾತ್ರ ಸುಲಭವಾಗಿಲ್ಲ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

  • ಓರ್ವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ನಾಲ್ವರು ನೀರುಪಾಲು

    ಓರ್ವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ನಾಲ್ವರು ನೀರುಪಾಲು

    ಚಿಕ್ಕಮಗಳೂರು: ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರದ ತುಂಗಾ ನದಿಯಲ್ಲಿ ನಡೆದಿದೆ.

    ನಾಗೇಂದ್ರ, ಪ್ರದೀಪ್, ರಾಮಣ್ಣ ಮತ್ತು ರತ್ನಾಕರ್ ಮೃತ ದುರ್ದೈವಿಗಳು. ಮೂವರು ಸಂಬಂಧಿಗಳು ರಾಮಣ್ಣ ಮನೆಗೆ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಹಾಗೆಯೇ ಎಲ್ಲರೂ ಇಂದು ತುಂಗಾ ನದಿಗೆ ಈಜಲು ಹೋಗಿದ್ದಾರೆ. ಆಗ ಪ್ರದೀಪ್ ನದಿಯಲ್ಲಿ ಸುಳಿಗೆ ಸಿಲುಕೊಂಡಿದ್ದಾರೆ. ಇದನ್ನು ಗಮನಿಸಿದ ಮೂವರು ಅವರನ್ನ ರಕ್ಷಿಸಲು ಹೋಗಿದ್ದು, ಪ್ರದೀಪ್ ಜೊತೆ ರಕ್ಷಿಸಲು ಹೋದ ಮೂವರೂ ನೀರು ಪಾಲಾಗಿದ್ದಾರೆ. ರತ್ನಾಕರ್ ಕೊಪ್ಪ ತಾಲೂಕಿನ ಬಾಳೆಹಕ್ಲು ಗ್ರಾಮದವರು ಎನ್ನಲಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಶೃಂಗೇರಿ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ನುರಿತ ಈಜು ತಜ್ಞರು ಬಂದು ಹುಡುಕಾಟ ಶುರುಮಾಡಿದ್ದಾರೆ. ಸದ್ಯಕ್ಕೆ ಮೂವರ ಮೃತ ದೇಹ ಪತ್ತೆಯಾಗಿದ್ದು, ಇನ್ನೂ ಉಳಿದ ಓರ್ವನ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಈ ಘಟನೆ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ರಾಜ್ಯ ನಕಲಿ ಸರ್ಕಾರದಂತೆ ನಕಲಿ ಸಿಡಿ, ನಕಲಿ ಡೈರಿ ಬಿಡುಗಡೆ: ಶೋಭಾ ಕರಂದ್ಲಾಜೆ

    ರಾಜ್ಯ ನಕಲಿ ಸರ್ಕಾರದಂತೆ ನಕಲಿ ಸಿಡಿ, ನಕಲಿ ಡೈರಿ ಬಿಡುಗಡೆ: ಶೋಭಾ ಕರಂದ್ಲಾಜೆ

    – ಕರಾವಳಿ ಜನರ ತಿಳುವಳಿಕೆ ಬಗ್ಗೆ ಕುಮಾರಸ್ವಾಮಿ ಸರ್ಟಿಫಿಕೇಟ್ ಅಗತ್ಯವಿಲ್ಲ

    ಉಡುಪಿ: ಕರಾವಳಿ ಜನರ ತಿಳುವಳಿಕೆ ಬಗ್ಗೆ ಸಿಎಂ ಕುಮಾರಸ್ವಾಮಿ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ. ಇಲ್ಲಿನ ಜನ ದೇಶಕ್ಕಾಗಿ ಕೆಲಸ ಮಾಡುವವರಿಗೆ ಮತ ಹಾಕುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಉಡುಪಿ- ಚಿಕ್ಕಮಗಳೂರು ಜನ ದೇಶ ಭಕ್ತರು. ದೇಶಕ್ಕಾಗಿ ಕೆಲಸ ಮಾಡುವವರಿಗೆ ವೋಟ್ ಹಾಕುತ್ತಾರೆ. ಕುಟುಂಬ ರಾಜಕಾರಣ ಮಾಡುವವರಿಗೆ ಇಲ್ಲಿನ ಜನ ಓಟು ಹಾಕಲ್ಲ. ವಂಶಪಾರಂಪರ್ಯ ರಾಜಕಾರಣ ಬೆಳೆಸುವವರಿಗೆ ದೇಶಭಕ್ತಿ ಭಾಷೆ ಅರ್ಥವಾಗುವುದಿಲ್ಲ. ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಸರ್ಟಿಫಿಕೇಟ್ ಬೇಕಾಗಿಲ್ಲ. ಮೋದಿ ಪ್ರಪಂಚ ಕಂಡ ಅದ್ಭುತ ನಾಯಕ. ಮೋದಿ ಆನೆಯ ರೀತಿಯಲ್ಲಿ ಚಲಿಸುವ ವ್ಯಕ್ತಿ. ಯಾರು ಏನೇ ಬಡ್ಕೊಂಡ್ರೂ ಮೋದಿ ಮೇಲೆ ಪರಿಣಾಮ ಬೀರಲ್ಲ ಎಂದರು.

    ಮೋದಿಯ ಐದು ವರ್ಷದ ಸಾಧನೆ ಜನ ನೋಡಿದ್ದಾರೆ. ಅಭಿವೃದ್ಧಿ, ದೇಶ ರಕ್ಷಣೆ ನೋಡಿ, ಹೊಸ ಯೋಜನೆಗಳನ್ನು ಕಂಡು ಕರಾವಳಿ ಮಲೆನಾಡಿನ ಜನ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿಗೆ ಮತ ಹಾಕುವ ಕರಾವಳಿ ಜನರಿಗೆ ತಿಳುವಳಿಕೆ ಇಲ್ಲ ಎಂದಿದ್ದ ಸಿಎಂ ಕುಮಾರಸ್ವಾಮಿಗೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.

    ನಕಲಿ ಸರ್ಕಾರ:
    ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಿಡಿ ಬಿಡುಗಡೆ ಮಾಡಿರುವ ಬೆದರಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಬಂದಾಗ ಕಾಂಗ್ರೆಸ್ ಅವರಿಗೆ ಸಿಡಿ ನೆನಪಾಗುತ್ತೆ. ಅಭಿವೃದ್ಧಿಯಲ್ಲಿ ಗೆಲ್ಲಲಾಗದವರು ಸಿಡಿ ರಾಜಕಾರಣ ಮಾಡುತ್ತಾರೆ. ಸಿಡಿ ಮತ್ತು ಡೈರಿ ಇವೆಲ್ಲಾ ಸುಳ್ಳು, ಎಲ್ಲವೂ ನಕಲಿ. ರಾಜ್ಯದಲ್ಲಿರುವ ನಕಲಿ ಸರ್ಕಾರದಂತೆ ನಕಲಿ ಸಿಡಿ, ನಕಲಿ ಡೈರಿ ಬಿಡುಗಡೆಯಾಗಬಹುದು ಅಷ್ಟೇ. ಚುನಾವಣೆ ಎದುರಿಸಲಾಗದೇ ಪುಕ್ಕಲು ರಾಜಕಾರಣಿಗಳು ತಾವೇ ಡೈರಿ, ಸಿಡಿ ಸೃಷ್ಟಿ ಮಾಡಿ ತೇಜೋವಧೆ ಮಾಡುತ್ತಾರೆ. ಅಭಿವೃದ್ಧಿ ತೋರಿಸಿ ಮತ ಕೇಳುವ ನೈತಿಕತೆ ಇವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.

     

    ನಾಮಪತ್ರ ಸಲ್ಲಿಕೆ:
    ಇದಕ್ಕೂ ಮುನ್ನ ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಗೆ ಶೋಭಾ ಕರಂದ್ಲಾಜೆ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ಕರಂದ್ಲಾಜೆ ಜ್ಯೋತಿಷ್ಯರ ಸಲಹೆ ಪಡೆದುಕೊಂಡಿದ್ದರು. ಉಡುಪಿ- ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ಬಿಜೆಪಿ ಜಿಲ್ಲಾಧ್ಯಕ್ಷರು, ಬಿಜೆಪಿ ನಾಯಕಿ ಭಾರತಿ ಶೆಟ್ಟಿ ಜೊತೆ ತೆರಳಿ ಶೋಭಾ ಕರಂದ್ಲಾಜೆ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಶುಭ ಶುಕ್ರವಾರ ಅಂತ ಇಂದು ನಾಮಪತ್ರ ಸಲ್ಲಿಸಿದ್ದೇನೆ. ಶುಕ್ರವಾರ ಮಹಾಕಾಳಿ ದುರ್ಗೆಯ ದಿನ. ಒಳ್ಳೆ ಸಮಯ ನೋಡಿ ನಾಮಪತ್ರ ಸಲ್ಲಿಸಿದ್ದು, ಸಾರ್ವಜನಿಕವಾಗಿ 26ಕ್ಕೆ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಮಾರ್ಚ್ 26 ಕೂಡಾ ಮಂಗಳವಾರ. ಮಂಗಳವಾರ ಕೂಡ ದೇವಿಯ ಪವಿತ್ರ ದಿನ ಎಂದರು.