Tag: Chikkamagaluru

  • ಕಾಫಿನಾಡಿನಲ್ಲಿ ಒಂದೆಡೆ ಮಳೆ, ಇನ್ನೊಂದೆಡೆ ಬರ- ಎರಡಕ್ಕೂ ಪ್ರತ್ಯಕ್ಷ ಸಾಕ್ಷಿಯಾದ ಫೋಟೋಗಳು

    ಕಾಫಿನಾಡಿನಲ್ಲಿ ಒಂದೆಡೆ ಮಳೆ, ಇನ್ನೊಂದೆಡೆ ಬರ- ಎರಡಕ್ಕೂ ಪ್ರತ್ಯಕ್ಷ ಸಾಕ್ಷಿಯಾದ ಫೋಟೋಗಳು

    ಚಿಕ್ಕಮಗಳೂರು: ಸಾವಿರ ಪದಗಳಲ್ಲಿ ಹೇಳಲಾಗದ್ದನ್ನ ಒಂದು ಫೋಟೋ ಹೇಳುತ್ತೆ ಅನ್ನೋದು ಅಕ್ಷರಶಃ ಸತ್ಯ. ಯಾಕೆಂದರೆ, ಅಂತಹ ಅಪರೂಪದ ಫೋಟೋಗಳಿಗೆ ಕಾಫಿನಾಡಿನ ಮಲೆನಾಡು ಹಾಗೂ ಬಯಲುಸೀಮೆ ಭಾಗ ಸಾಕ್ಷಿಯಾಗಿದೆ.

    ಹೌದು. ಕಳೆದ ಎರಡು ದಶಕಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿರೋ ಕಡೂರು ತಾಲೂಕಿನಲ್ಲಿ ಹನಿ ನೀರಿಗೂ ಹಾಹಾಕಾರವಿದೆ. ಜಾನುವಾರುಗಳ ಸ್ಥಿತಿಯಂತೂ ಶೋಷಣೀಯ ಆಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಮತಿಘಟ್ಟ ಗ್ರಾಮದಲ್ಲಿ ನೀರಿಗಾಗಿ ಇಟ್ಟಿದ್ದ ಖಾಲಿಕೊಡಗಳಲ್ಲಿ ಜಾನುವಾರು ನೀರು ಕುಡಿಯಲು ಪ್ರಯತ್ನಿಸ್ತಿರೋ ಫೋಟೋ ಭಾವನಾತ್ಮಕವಾಗಿದ್ದು, ಕಲ್ಲು ಮನಸ್ಸಿನವರನ್ನು ಕರಗಸುವಂತಿದೆ.

    ಅಲ್ಲದೆ ಅಪ್ಪಟ ಮಲೆನಾಡು ಎನ್.ಆರ್.ಪುರ ತಾಲೂಕಿನ ಖಾಂಡ್ಯದಲ್ಲಿ ಎರಡು ದಿನ ಹಿಂದೆ ಸುರಿದ ಮಳೆ-ಗಾಳಿಗೆ ಬೃಹತ್ ಮರವೊಂದು ಮನೆ ಮೇಲೆ ಬಿದ್ದಿದ್ದು, ಆ ಮನೆಯ ಹೊರಭಾಗದಲ್ಲಿ ಇಬ್ಬರು ಪುಟ್ಟ ಮಕ್ಕಳು ನಿಂತು ಮನೆಯನ್ನ ನೋಡ್ತಿರೋ ದೃಶ್ಯ ಕೂಡ ಮನಮುಟ್ಟುವಂತಿದೆ. ಇಂತಹ ಫೋಟೋಗಳು ಸಾಮಾನ್ಯವಾಗಿದ್ದರು ಅದರ ಹಿಂದಿನ ಭಾವನೆ, ನೋವು, ಕಷ್ಟ-ಕಾರ್ಪಣ್ಯಗಳು ಮಾತ್ರ ಬಹುದೊಡ್ಡದಾಗಿದೆ.

  • ಕಾಫಿನಾಡಿನ ನಿಸರ್ಗದ ಮಡಿಲಿನಲ್ಲಿ ನವಿಲುಗಳ ಸಂಭಾಷಣೆ- ವಿಡಿಯೋ ನೋಡಿ

    ಕಾಫಿನಾಡಿನ ನಿಸರ್ಗದ ಮಡಿಲಿನಲ್ಲಿ ನವಿಲುಗಳ ಸಂಭಾಷಣೆ- ವಿಡಿಯೋ ನೋಡಿ

    ಚಿಕ್ಕಮಗಳೂರು : ನವಿಲೊಂದು ತನ್ನ ಪ್ರೇಯಸಿಯನ್ನ ಕರೆಯುತ್ತಿರೋ ವಿರಳಾತಿವಿರಳ ವಿಡಿಯೋ ಕಾಫಿನಾಡಿನ ವೈಲ್ಡ್ ಲೈಫ್ ಛಾಯಾಗ್ರಾಹಕರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಲ್ಲಿ ಸಂಚರಿಸುವಾಗ ಈ ಅತ್ಯಾಪರೂಪ ವಿಡಿಯೋ ಸೆರೆ ಸಿಕ್ಕಿದೆ.

    ವೈಲ್ಡ್ ಲೈಫ್ ಛಾಯಾಗ್ರಾಹಕ ಶಿವಕುಮಾರ್ ಮುತ್ತೋಡಿ ಅರಣ್ಯದಲ್ಲಿ ಸಂಚರಿಸುವಾಗ ಈ ಅದ್ಭುತ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಮುತ್ತೋಡಿ ಅರಣ್ಯದಲ್ಲಿ ಈಗಾಗಲೇ ಅಲ್ಪ-ಸ್ವಲ್ಪ ಮಳೆಯಾಗಿದೆ. ಮುತ್ತೋಡಿಯೊಳಗಿನ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳಲ್ಲಿ ನೀರು ತುಂಬಿದೆ. ನೀರಲ್ಲಿ ಮಿಂದು ಮೇಲೆ ಬಂದಿರೋ ನವಿಲು ಮತ್ತೊಂದು ನವಿಲಿನ ಆಗಮನಕ್ಕೇ ಗೀಳಿಟ್ಟಿದೆ. ಈ ನವಿಲಿನ ಗೀಳನ್ನ ಆಲಿಸಿದ ಮತ್ತೊಂದು ನವಿಲು ಕೂಡ ಕೂಗುವ ಮೂಲಕ ಬರುವ ಸೂಚನೆ ನೀಡಿದೆ. ಈ ಎರಡೂ ನವಿಲುಗಳೂ ಮಾತನಾಡುವ ಅಪರೂಪದ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

    ಈ ಕಾಲ ನವಿಲುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವ ಸಮಯ. ಹೀಗಾಗಿ ಒಂದು ನವಿಲು ಮತ್ತೊಂದು ನವಿಲಿಗಾಗಿ ಈ ರೀತಿ ಗೀಳಿಡುತ್ತೆ ಅನ್ನೋದು ಪರಿಸರವಾದಿಗಳ ಮಾತಾಗಿದೆ. ಅದೇನೆ ಇದ್ದರೂ ಎರಡು ನವಿಲುಗಳ ಸಂಭಾಷಣೆ ಮಾತ್ರ ಅತ್ಯದ್ಭುತವಾಗಿದ್ದು, ವಿಡಿಯೋ ನೋಡಿದವರ ಮನ ಗೆದ್ದಿದೆ.

  • ಬಸ್ ಆಯ್ತು, ಈಗ ಟೆಂಪೋ ಅಡ್ಡ ಹಾಕಿದ ಗಜರಾಜ – ವಿಡಿಯೋ ನೋಡಿ

    ಬಸ್ ಆಯ್ತು, ಈಗ ಟೆಂಪೋ ಅಡ್ಡ ಹಾಕಿದ ಗಜರಾಜ – ವಿಡಿಯೋ ನೋಡಿ

    ಚಿಕ್ಕಮಗಳೂರು: ವಾರದ ಹಿಂದೆ ರಸ್ತೆ ಮಧ್ಯೆ ಒಂಟಿ ಸಲಗವನ್ನ ಕಂಡ ಚಾಲಕ ಕೆಎಸ್‌ಆರ್‌ಟಿಸಿ ಬಸ್ಸನ್ನು ಒಂದು ಕಿ.ಮೀ. ಹಿಮ್ಮುಖವಾಗಿ ಓಡಿಸಿ ಪ್ರಯಾಣಿಕರ ಆತಂಕವನ್ನ ದೂರ ಮಾಡಿದ್ದರು. ಇದೀಗ ಮತ್ತದೇ ಸಂತವೇರಿ ಘಾಟ್‍ನಲ್ಲಿ ಹಣ್ಣಿನ ಟೆಂಪೋವನ್ನು ಕಾಡಾನೆ ಅಡ್ಡ ಹಾಕಿದ್ದ ಘಟನೆ ಬೆಳಕಿಗೆ ಬಂದಿದೆ.

    ಕಳೆದ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ. ಸಂತವೇರಿ ಘಾಟ್‍ನಲ್ಲಿ ಸಾಗುತ್ತಿದ್ದ ಹಣ್ಣಿನ ಟೆಂಪೋವೊಂದನ್ನ ಅಡ್ಡಗಟ್ಟಿದ ಕಾಡಾನೆ ವಾಹನದಲ್ಲಿದ್ದ ಹಣ್ಣನ್ನ ತಿಂದಿದೆ. ಬಳಿಕ ಟೆಂಪೋವನ್ನ ರಸ್ತೆ ಬದಿಗೆ ನೂಕಿದೆ.

    ರಸ್ತೆ ಮಧ್ಯೆ ಒಂಟಿ ಸಲಗವನ್ನು ಕಂಡ ಚಾಲಕ ಹಾಗೂ ಕ್ಲೀನರ್ ಟೆಂಪೋವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ಹದಿನೈದು ದಿನದ ಹಿಂದೆಯೂ ಇದೇ ಮಾರ್ಗದಲ್ಲಿ ರಸ್ತೆ ಮಧ್ಯೆ ನಿಂತಿದ್ದ ಒಂಟಿ ಸಲಗವನ್ನ ಕಂಡು ಪ್ರವಾಸಿಗರು ಆತಂಕಗೊಂಡು 40 ಕಿ.ಮೀ. ವಾಪಸ್ ಬಂದು, ಚಿಕ್ಕಮಗಳೂರು ಮೂಲಕ ಶಿವಮೊಗ್ಗ ತಲುಪಿ ತಮ್ಮ ಪ್ರಯಾಣ ಮುಂದುವರಿಸಿದ್ದರು.

    ಮಲ್ಲೇನಹಳ್ಳಿ ಸುತ್ತಮುತ್ತ ಕಾಡಾನೆ ದಾಳಿಗೆ ಕಳೆದ ಮೂರು ತಿಂಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆನೆಗಳ ಹಾವಳಿಗೆ ಬೇಸತ್ತಿರುವ ಸ್ಥಳೀಯರು ಆನೆಗಳನ್ನು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಅಲ್ಲದೆ ಬಿದಿರು ತಿನ್ನುವ ಆಸೆಗೆ ಕಾಡಂಚಿನ ರಸ್ತೆಯಲ್ಲಿ ಠಿಕಾಣಿ ಹೂಡಿರೋ ಕಾಡಾಣೆಯಿಂದ ಜನಸಾಮಾನ್ಯರು ಹೈರಾಣಾಗಿದ್ದು, ಸಂತವೇರಿ ಘಾಟ್ ಮಾರ್ಗದಲ್ಲಿ ಜನರು ಓಡಾಡದಂತ ಸ್ಥಿತಿ ನಿರ್ಮಾಣವಾಗಿದೆ.

    https://www.youtube.com/watch?v=afOhLRWdGW0

  • ಆನೆ ಕಂಡು 1 ಕಿ.ಮೀ. ಹಿಮ್ಮುಖವಾಗಿ ಬಸ್ ಚಲಾಯಿಸಿದ ಚಾಲಕ- ವಿಡಿಯೋ ನೋಡಿ

    ಆನೆ ಕಂಡು 1 ಕಿ.ಮೀ. ಹಿಮ್ಮುಖವಾಗಿ ಬಸ್ ಚಲಾಯಿಸಿದ ಚಾಲಕ- ವಿಡಿಯೋ ನೋಡಿ

    ಚಿಕ್ಕಮಗಳೂರು: ರಸ್ತೆ ಮಧ್ಯೆ ಒಂಟಿ ಸಲಗವನ್ನ ಕಂಡು ಒಂದು ಕಿ.ಮೀ. ಹಿಮ್ಮುಖವಾಗಿ ಬಸ್ ಚಲಾಯಿಸಿದ ಚಾಲಕ 50ಕ್ಕೂ ಅಧಿಕ ಪ್ರಯಾಣಿಕರ ಆತಂಕವನ್ನ ದೂರಮಾಡಿದ್ದಾರೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಸಂತವೇರಿ ಘಾಟ್ ಬಳಿ ನಡೆದಿದೆ. ಹಳ್ಳಿಗಳ ಮಾರ್ಗವಾಗಿ ತರೀಕೆರೆಯಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಸರ್ಕಾರಿ ಬಸ್ ಸಂತವೇರಿ ಘಾಟ್ ರಸ್ತೆಯಲ್ಲಿ ಬರುತ್ತಿತ್ತು. ಈ ವೇಳೆ ಚಾಲಕ ನಡುರಸ್ತೆಯಲ್ಲಿ ರಾಜಗಾಂಭೀರ್ಯದಿಂದ ನಡೆದು ಬರುತ್ತಿದ್ದ ಆನೆ ಕಂಡು ಗಾಬರಿಯಾಗಿದ್ದಾರೆ. ತಕ್ಷಣ ಆತಂಕಗೊಳ್ಳದೇ ಬಸ್ ಹಿಮ್ಮುಖವಾಗಿ ಸುಮಾರು ಒಂದು ಕಿ.ಮೀ. ಚಲಾಯಿಸಿದ್ದಾರೆ. ಆನೆ ಹಾಗೂ ಅದರ ಉದ್ದನೆ ದಂತಗಳನ್ನ ನೋಡುತ್ತಿದ್ದಂತೆ ಪ್ರಯಾಣಕರು ಭಯದಿಂದ ಕೂಗಾಡಲು ಶುರುಮಾಡಿದ್ದರು. ಆದ್ರೆ, ಚಾಲಕ ಹಾಗೂ ನಿರ್ವಾಹಕರ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಪ್ರಯಾಣಿಕರ ಆತಂಕ ದೂರಾಗಿದೆ.

    ನಿರ್ವಾಹಕ ಹಿಂದೆ ನಿಂತು ಮಾರ್ಗ ಹೇಳುತ್ತಿದ್ದಂತೆ ಚಾಲಕ ಸುಮಾರು ಒಂದು ಕಿ.ಮೀ. ಬಸ್ಸನ್ನ ಹಿಮ್ಮುಖವಾಗಿಯೇ ಚಲಾಯಿಸಿದ್ದಾರೆ. ಬಳಿಕ ಬಸ್ಸನ್ನ ಹಿಂಬಾಲಿಸಿಕೊಂಡೇ ಬಂದ ಗಜರಾಜ ಕಾಡಿನೊಳಗೆ ಕಣ್ಮರೆಯಾಗಿದ್ದಾನೆ. ಈ ಮಾರ್ಗದ ರಸ್ತೆಯ ಇಕ್ಕೆಲಗಳಲ್ಲಿ ಬಿದಿರು ಯಥೇಚ್ಛವಾಗಿದ್ದು ಚಿಗುರಿ ಬಂದಿದೆ. ಆದ್ದರಿಂದ ಬಿದಿರು ತಿನ್ನಲು ಬಂದ ಆನೆ 15 ದಿನಗಳಲ್ಲಿ ಮೂರ್ನಾಲ್ಕು ಜನರಿಗೆ ಗೋಚರವಾಗಿದೆ. ಆದ್ರೆ ಭಯಪಡದೆ ಧೈರ್ಯದಿಂದ ಬಸ್ ಚಲಾಯಿಸಿದ್ದಕ್ಕೆ ಪ್ರಯಾಣಿಕರು ಚಾಲಕ-ನಿರ್ವಾಹಕನಿಗೆ ಭೇಷ್ ಎಂದಿದ್ದಾರೆ.

  • ವರ್ಷದ ಮೊದ್ಲ ಅಮಾವಾಸ್ಯೆ ಜೊತೆಗೆ ಶನಿವಾರ – ಚಿಕ್ಕಮಗ್ಳೂರಲ್ಲಿ ಸಿಎಂ ಶತ್ರುಸಂಹಾರ ಯಾಗ

    ವರ್ಷದ ಮೊದ್ಲ ಅಮಾವಾಸ್ಯೆ ಜೊತೆಗೆ ಶನಿವಾರ – ಚಿಕ್ಕಮಗ್ಳೂರಲ್ಲಿ ಸಿಎಂ ಶತ್ರುಸಂಹಾರ ಯಾಗ

    – ತಿರುಪತಿಯಲ್ಲಿ ಬಿಎಸ್‍ವೈ ಪೂಜೆ

    ಚಿಕ್ಕಮಗಳೂರು: ಇಂದು ವರ್ಷದ ಮೊದಲ ಅಮಾವಾಸ್ಯೆ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಬಳಿಕದ ಪ್ರಪ್ರಥಮ ಅಮಾವಾಸ್ಯೆ. ಒಂದೆಡೆ ಪ್ರಚಂಡ ಮಾರುತವಾದ್ರೆ, ಮತ್ತೊಂದೆಡೆ ಕರ್ನಾಟಕ ರಾಜಕೀಯದಲ್ಲಿ ಮತ್ತೆ ಅಸ್ಥಿರತೆಯ ಭೀತಿ ಎದುರಾಗಿದೆ. ಯಾಕಂದ್ರೆ ಲೋಕಸಭಾ ಫಲಿತಾಂಶಕ್ಕೆ ಕೇವಲ 19 ದಿನವಷ್ಟೇ ಉಳಿದಿದೆ.

    ಇಂತಹ ಹೊತ್ತಲ್ಲಿ ಈಗ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಧಿಕಾರ ಹಾಗೂ ಇಬ್ಬರಿಗೂ ಅವರ ಮಕ್ಕಳದ್ದೇ ಚಿಂತೆಯಾಗಿದೆ. ತಮ್ಮ ಮಕ್ಕಳು ಗೆಲ್ಲುತ್ತಾರಾ ಇಲ್ವಾ ಅನ್ನೋ ಟೆನ್ಷನ್ ಆರಂಭವಾಗಿದೆ ಎನ್ನಲಾಗಿದೆ.

    ತಮ್ಮ ರಾಜಕೀಯ ವಾರಸುದಾರ ನಿಖಿಲ್ ಗೆಲ್ಲುತ್ತಾರಾ ಇಲ್ವಾ ಅನ್ನೋ ಚಿಂತೆ ಎಚ್‍ಡಿಕೆಗೆ ಕ್ಷಣಕ್ಷಣವೂ ಕಾಡುತ್ತಿದೆ. ಅದರ ಜೊತೆಗೆ ಕಾಂಗ್ರೆಸ್ ಜೊತೆ ಸೇರಿಕೊಂಡು ಹುಟ್ಟುಹಾಕಿದ್ದ ಸಮ್ಮಿಶ್ರ ಸರ್ಕಾರ ಮೇ 23ರ ಬಳಿಕವೂ ಜೀವಂತವಾಗಿ ಉಸಿರಾಡುತ್ತಾ..? ಪದೇ ಪದೇ ಅಲುಗಾಡುತ್ತಿರುವ ಸಿಎಂ ಕುರ್ಚಿ ಪರ್ಮೆನೆಂಟ್ ಆಗಿ ಉರುಳುತ್ತಾ ಅನ್ನೋ ಆತಂಕದಲ್ಲಿ ಕುಮಾರಸ್ವಾಮಿ ಇದ್ದಾರೆ ಎಂಬುದಾಗಿ ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.

    ಇತ್ತ ಶಿವಮೊಗ್ಗದಲ್ಲಿ ಬಿಎಸ್‍ವೈಗೆ ಸುಪುತ್ರ ರಾಘವೇಂದ್ರ ಗೆಲ್ತಾನಾ ಅನ್ನೋ ಆತಂಕವಾದ್ರೆ, ಮತ್ತೊಂದೆಡೆ 54 ಗಂಟೆಯಷ್ಟೇ ಕೈಗೆ ದಕ್ಕಿದ್ದ ಸಿಎಂ ಕುರ್ಚಿ ಲೋಕಸಭಾ ಫಲಿತಾಂಶ ಬಳಿಕ ಮತ್ತೆ ಸಿಗುತ್ತಾ ಅನ್ನೋದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನ ಕಾಡುತ್ತಿದೆ. ಪುತ್ರರ ರಾಜಕೀಯ ಭವಿಷ್ಯ ಮತ್ತು ಸಿಎಂ ಪಟ್ಟದ ಚಿಂತೆಯಲ್ಲಿರುವ ಸಿಎಂ ಮತ್ತು ಮಾಜಿ ಸಿಎಂ ಶನಿವಾರದ ಅಮಾವಾಸ್ಯೆಯಂದು ದೇವರ ಮೊರೆ ಹೋಗಿದ್ದಾರೆ.

    ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಐದು ದಿನಗಳ ಪ್ರಕೃತಿ ಚಿಕಿತ್ಸೆ ಬಳಿಕ ಕುಮಾರಸ್ವಾಮಿ ಮತ್ತು ದೇವೇಗೌಡರು ಯಜ್ಞ ಯಾಗಾದಿಗಳಲ್ಲಿ ಬ್ಯುಸಿ ಆಗಿದ್ದಾರೆ. ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಡ್ನಳ್ಳಿಯ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ಸತತ 5 ಗಂಟೆ ಪೂಜೆಯಲ್ಲಿ ಕೈಗೊಂಡಿದ್ದಾರೆ. ಸಂಜೆ ಐದೂವರೆಯಿಂದ ಶುರುವಾಗಿದ್ದ ಪೂಜೆ ರಾತ್ರಿ ಹತ್ತೂವರೆಗೆ ಮುಗೀತು.

    ಬಳಿಕ ತಲವಾನೆಯ ಗುಡ್ಡೇತೋಟ ರೆಸಾರ್ಟ್ ನಲ್ಲಿ ಸಿಎಂ ಉಳಿದುಕೊಂಡರು. ಇಂದು ಬೆಳಗ್ಗೆ 6 ಗಂಟೆಯಿಂದಲೇ ಗಣಪತಿ ಹೋಮ, ರುದ್ರಯಾಗ ಆರಂಭವಾಗಿದೆ. ಸಿಎಂ, ಮಾಜಿ ಪ್ರಧಾನಿ ಪೂಜೆ ಹಿನ್ನೆಲೆಯಲ್ಲಿ ದೇವಸ್ಥಾನ ಸುತ್ತಮುತ್ತ 200 ಮೀಟರ್ ದೂರದವರೆಗೂ ಕಟ್ಟೆಚ್ಚರ ವಹಿಸಲಾಗಿದ್ದು, ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಇನ್ನು ಯಡಿಯೂರಪ್ಪ ಅವರು ಬೆಳಗ್ಗೆ 6.30ಕ್ಕೆ ತಿರುಪತಿಯಲ್ಲಿ ಪೂಜೆ ನೆರವೇರಿಸಿದ್ದಾರೆ.

  • ತೆಪ್ಪದಲ್ಲೇ ರೋಗಿಯನ್ನು ನದಿ ದಾಟಿಸಿದ ಸ್ಥಳೀಯರು- ಚಿಕ್ಕಮಗ್ಳೂರಲ್ಲಿ ಮನಕಲಕುವ ಘಟನೆ

    ತೆಪ್ಪದಲ್ಲೇ ರೋಗಿಯನ್ನು ನದಿ ದಾಟಿಸಿದ ಸ್ಥಳೀಯರು- ಚಿಕ್ಕಮಗ್ಳೂರಲ್ಲಿ ಮನಕಲಕುವ ಘಟನೆ

    ಚಿಕ್ಕಮಗಳೂರು: ತೆಪ್ಪದಲ್ಲಿ ರೋಗಿಯನ್ನು ಕುರ್ಚಿಯಲ್ಲಿ ಕೂರಿಸಿಕೊಂಡು ಸ್ಥಳೀಯರು ಭದ್ರಾ ನದಿ ದಾಟಿಸಿದ ಮನಕಲಕುವ ಘಟನೆಯೊಂದು ಚಿಕ್ಕಮಗಳೂರಲ್ಲಿ ನಡೆದಿದೆ.

    ಮೂಡಿಗೆರೆ ತಾಲೂಕಿನ ಹಿರೆಕೂಡಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರುದ್ರಯ್ಯ ಅವರು ಉಬ್ಬಸದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯರು ತೆಪ್ಪದ ಮೂಲಕ ಕಳುಹಿಸಿದ್ದಾರೆ. ನಂತರ ಕುಟುಂಬಸ್ಥರು ಅವರನ್ನು ಮಂಗಳೂರಿಗೆ ಕರೆದೊಯ್ದಿದ್ದಾರೆ.

    ಕೆಲ ತಿಂಗಳ ಹಿಂದೆ ಮೃತದೇಹವನ್ನು ಕೂಡ ಇದೇ ರೀತಿ ಸಾಗಿಸಿದ್ದರು. ಇಲ್ಲಿನ ಜನರು ಮೂರ್ನಾಲ್ಕು ದಶಕಗಳಿಂದ ಇದೇ ರೀತಿ ಬದುಕುತ್ತಿದ್ದಾರೆ. ತೆಪ್ಪ ಇಲ್ಲದಿದ್ದರೆ ಇವರಿಗೇ ಬದುಕೇ ಇಲ್ಲ. ಮಳೆಗಾಲದಲ್ಲಿ ಮಕ್ಕಳು ವಾರಗಟ್ಟಲೆ ಶಾಲೆಗೆ ಹೋಗುವುದಿಲ್ಲ. ಮನೆಗೆ ಒಂದು ಬೆಂಕಿ ಪೊಟ್ಟಣ ಬೇಕಂದ್ರೂ ನದಿ ದಾಟಿಯೇ ಬರಬೇಕು ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಈ ಹಿಂದೆ ಸ್ಥಳಕ್ಕೆ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಭೇಟಿ ನೀಡಿದ್ದು, ರಸ್ತೆ ಅಥವಾ ತೂಗು ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಶಾಸಕರ ಭರವಸೆ, ಭರವಸೆಯಾಗಿಯೇ ಉಳಿದಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸಾಕಷ್ಟು ಮನವಿ ಕೂಡ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಯಾರೊಬ್ಬರು ಬಡಜನರ ಮನವಿಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

  • ಸಿಡಿಲಿಗೆ ದಂಪತಿ ಸೇರಿ ಮೂವರ ಬಲಿ

    ಸಿಡಿಲಿಗೆ ದಂಪತಿ ಸೇರಿ ಮೂವರ ಬಲಿ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅರ್ಧ ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಜನಜೀವನ ಕಂಗಲಾಗಿದ್ದು, ಸಿಡಿಲು ಬಡಿದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದಿದೆ. ಇತ್ತ ಬಳ್ಳಾರಿಯಲ್ಲಿ ಕಾಲೇಜು ವಿದ್ಯಾರ್ಥಿಯನ್ನ ಸಿಡಿಲು ಬಲಿ ಪಡೆದಿದೆ.

    ಮೃತರನ್ನ ಮಂಜುನಾಥ್ ಆಚಾರ್ (50) ಹಾಗೂ ಭಾರತಿ (43) ಎಂದು ಗುರುತಿಸಲಾಗಿದೆ. ಬಳ್ಳಾರಿ ವೆಂಕಟೇಶ್ (20) ಮೃತ ವಿದ್ಯಾರ್ಥಿ. ಗೌತಮ ನಗರದ ಹಾಸ್ಟೆಲ್ ನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ವೆಂಕಟೇಶ್ ಸಂಜೆ ಹೊರ ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ.

    ಇತ್ತ ಬೆಳಗ್ಗೆಯಿಂದ ಸಂಜೆಯವರೆಗೂ ತೇಗೂರು ಬಳಿಯ ತಮ್ಮ ಜಮೀನಿನಲ್ಲಿ ದಂಪತಿ ಕೆಲಸ ಮಾಡುತ್ತಿದ್ದರು. ಸಂಜೆ ವೇಳೆಗೆ ಮಳೆ ಬಂದ ಕಾರಣ ಮೇಯಲು ಬಿಟ್ಟಿದ್ದ ಹಸುಗಳನ್ನು ಹೊಡೆದುಕೊಂಡು ಮನೆಗೆ ಬರುವಾಗ ತೇಗೂರು ಕೆರೆ ಏರಿ ಮೇಲೆ ಸಿಡಿಲು ಬಡಿದು ದುರ್ಘಟನೆ ನಡೆದಿದೆ.

    35-38 ಡಿಗ್ರಿ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಚಿಕ್ಕಮಗಳೂರು ಜನ ಭಾರೀ ಗುಡುಗು-ಸಿಡಿಲು ಸಮೇತ ಸುರಿದ ಮಳೆಗೆ ಹೈರಾಣಾಗಿದ್ದಾರೆ. ಇತ್ತ ರೈತರು ತೋಟಗಾರಿಕೆ ಹಾಗೂ ಕೃಷಿ ಚಟುವಟಿಕೆ ನಡೆಸಲು ಮಳೆಯ ಅಗತ್ಯವಿದ್ದರಿಂದ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತ ಶಿವಮೊಗ್ಗ, ರಾಯಚೂರು, ಯಾದಗಿರಿ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ. ಭಾರೀ ಮಳೆಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಶಕುನವಳ್ಳಿ, ಶಂಕರಿಕೊಪ್ಪದಲ್ಲಿ ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ಗ್ರಾಮದ ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ.

  • ಕಾಫಿನಾಡಿನ ರಣಬಿಸಿಲಿಗೆ ನಿತ್ರಾಣಗೊಂಡಿದ್ದ ಹದ್ದು ರಕ್ಷಣೆ

    ಕಾಫಿನಾಡಿನ ರಣಬಿಸಿಲಿಗೆ ನಿತ್ರಾಣಗೊಂಡಿದ್ದ ಹದ್ದು ರಕ್ಷಣೆ

    ಚಿಕ್ಕಮಗಳೂರು: ರಣಬಿಸಿಲಿಗೆ ನಿತ್ರಾಣಗೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ರಣಹದ್ದಿಗೆ 16 ರೂಪಾಯಿಯ ಔಷಧಿ ನೀಡುತ್ತಿದ್ದಂತೆ ಮುಗಿಲೆತ್ತರಕ್ಕೆ ಹಾರಿರುವಂತ ಘಟನೆ ನಗರದ ಭೋಳರಾಮೇಶ್ವರ ದೇವಾಲಯದ ಆವರಣದಲ್ಲಿ ನಡೆದಿದೆ.

    ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರೋ ಬೆಸುಗೆ ಮೂರ್ತಿ ಭವನದ ಮುಂಭಾಗವಿರೋ ಮರದಲ್ಲಿದ್ದ ರಣಹದ್ದು ಆಹಾರದ ವ್ಯತ್ಯಯದಿಂದ ನೀರಿಲ್ಲದೇ ನಿತ್ರಾಣಗೊಂಡು ಭವನದ ಮುಂದೆ ಬಿದ್ದಿತ್ತು. ಇದನ್ನ ಗಮನಿಸಿದ ಸ್ಥಳೀಯರು ಹದ್ದನ್ನ ನೆರಳಿನಲ್ಲಿ ಬಿಟ್ಟು ನೀರು ಕುಡಿಸಿ ಸುಮಾರು ಅರ್ಧ ಗಂಟೆಗಳ ಕಾಲ ಆರೈಕೆ ಮಾಡಿದ್ದಾರೆ. ಆದರೆ ಇದರಿಂದ ಪ್ರಯೋಜನವಾಗದ ಕಾರಣ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

    ಚಿಕಿತ್ಸೆಗಾಗಿ ಹದ್ದನ್ನು ಕರೆದೊಯ್ಯುತ್ತಿದ್ದನ್ನು ಗಮನಿಸಿದ ಅರಣ್ಯ ಇಲಾಖೆ ಜೀಪ್ ಚಾಲಕ ಪ್ರಾಣಿ, ಪಕ್ಷಿಗಳಿಗೆ ನಿತ್ರಾಣವನ್ನು ಕಡಿಮೆ ಮಾಡುವ ಡ್ರಾಪ್ಸ್ ತಂದು ನೀಡಿದ್ದಾರೆ. ಡ್ರಾಪ್ಸ್ ಹಾಕಿದ ಅರ್ಧಗಂಟೆಯಲ್ಲಿ ಹದ್ದು ಸುಧಾರಿಸಿಕೊಂಡು ರೆಕ್ಕೆ ಅಗಲಿಸಿ ಮುಗಿಲಿನತ್ತ ಹಾರಿ ಹೋಗಿದೆ. ಕೂಲ್ ಸಿಟಿ ಕಾಫಿನಾಡಿನ ಹಾಟ್ ಸ್ಥಿತಿಗೆ ಜನಸಾಮಾನ್ಯರೇ ತತ್ತರಿಸಿ ಹೋಗುತ್ತಿದ್ದು, ನೀರಿಗಾಗಿ ಮೂಕಪ್ರಾಣಿಗಳು ಕೂಡ ಸಮಸ್ಯೆಗಳನ್ನು ಎದುರಿಸುತ್ತಿವೆ. ಸದ್ಯ ಘಟನೆಯಿಂದ ಪ್ರೇರಣೆ ಪಡೆದ ಸ್ಥಳೀಯರು ಮನೆ ಮೇಲೆ ಹಕ್ಕಿಗಳಿಗೆ ನೀರಿಡುವ ನಿರ್ಧಾರ ಮಾಡಿದ್ದಾರೆ.

  • ಜಿಲ್ಲಾ ನಾಯಕರಿಗೆ ಕೋಟಿ-ಕೋಟಿ, ರಾಜ್ಯ ನಾಯಕರಿಗೆ ಇನ್ನೆಷ್ಟೋ: ಸಿ.ಟಿ ರವಿ

    ಜಿಲ್ಲಾ ನಾಯಕರಿಗೆ ಕೋಟಿ-ಕೋಟಿ, ರಾಜ್ಯ ನಾಯಕರಿಗೆ ಇನ್ನೆಷ್ಟೋ: ಸಿ.ಟಿ ರವಿ

    ಚಿಕ್ಕಮಗಳೂರು: ಜಿಲ್ಲಾ ನಾಯಕರಿಗೆ ಕೋಟಿ-ಕೋಟಿ ಕೊಟ್ಟು ಸೆಟ್ಲ್ ಮಾಡಿದ್ದಾರಂದರೆ, ರಾಜ್ಯ ಮಟ್ಟದ ನಾಯಕರಿಗೆ ಇನ್ನು ಹೆಚ್ಚಾಗಿ ಕೊಟ್ಟಿರಬಹುದು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಶಾಸಕ ಸಿ.ಟಿ ರವಿ ಆಗ್ರಹಿಸಿದ್ದಾರೆ.

    ನಾಮಪತ್ರ ಹಿಂಪಡೆಯಲು ರಾಜಣ್ಣ ಹಾಗೂ ಮುದ್ದುಹನುಮೇಗೌಡ ಮೂರುವರೆ ಕೋಟಿ ಹಣ ಪಡೆದಿದ್ದಾರೆಂಬ ಆಡಿಯೋ ವೈರಲ್‍ಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಈ ಪ್ರಮಾಣದಲ್ಲಿ ಹಣದ ಅವ್ಯವಹಾರ ನಡೆಯುತ್ತದೆ ಅಂದರೆ, ಪಾರದರ್ಶಕ ಚುನಾವಣೆ ಎಲ್ಲಿ ನಡೆದಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಯಾರು ಯಾರು ಯಾವಯಾವ ಹೇಳಿಕೆಗಳನ್ನು ಕೊಡೋದಕ್ಕೆ ಎಷ್ಟೆಷ್ಟು ಹಣ ಪಡೆದಿದ್ದಾರೆ ಅನ್ನೋದು ಹೊರಬರಬೇಕಿದೆ. ದೇವೇಗೌಡರು ಜಾತಿ, ಹಣ ಹಾಗೂ ಅಧಿಕಾರದ ಬಲದ ಮೇಲೆ ಎಲ್ಲವನ್ನೂ ಮ್ಯಾನೇಜ್ ಮಾಡಬಹುದು ಎಂದು ಹೊರಟಿದ್ದಾರೆಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

    ಹಾಸನ, ತುಮಕೂರು, ಮಂಡ್ಯ ಸೇರಿ ಬೇರೆ ಕಡೆಯೂ ದೊಡ್ಡ ಪ್ರಮಾಣದ ಹಣದ ವ್ಯವಹಾರ ನಡೆದಿದೆ ಅನ್ನಿಸುತ್ತದೆ. ರಾಜ್ಯ ಸಮ್ಮಿಶ್ರ ಸರ್ಕಾರ ವಿಶ್ವಾಸ ಹಾಗೂ ಅಜೆಂಡಾ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಹಣ ಮತ್ತು ಅಧಿಕಾರದ ದುರ್ಬಳಕೆಗೆ ಕಾರ್ಯನಿರ್ವಹಿಸುತ್ತಿದೆ ಅನ್ನೋದು ಕಾಂಗ್ರೆಸ್‍ನ ಸೋಶಿಯಲ್ ಮಿಡಿಯಾ ಇನ್‍ಚಾರ್ಜ್ ಮಾತನಾಡಿರುವ ಮಾತಿನಿಂದ ವ್ಯಕ್ತವಾಗ್ತಿದೆ ಎಂದರು.

    ಈ ಆಡಿಯೋ ಸಂಬಂಧ ಸಮಗ್ರ ತನಿಖೆಯಾಗಿ ಹಣ ಎಲ್ಲಿಂದ ಬಂತು, ಯಾರ್ಯಾರು ತೆಗೆದುಕೊಂಡರು, ಕೊಟ್ಟೋರು ಯಾರು ಅನ್ನೋದು ಸಮಗ್ರ ತನಿಕೆಯಾಗಬೇಕು. ಕಾಂಗ್ರೆಸ್‍ನೊಳಗೆ ವಿಚಾರಿಸುತ್ತೇನೆ. ನೋಡುತ್ತೇನೆ, ನೋಟಿಸ್ ಕೊಡುತ್ತೇನೆ ಅನ್ನೋದಕ್ಕೆ ಇದು ಕಾಂಗ್ರೆಸ್‍ನೊಳಗಿನದ್ದಲ್ಲ. ಪ್ರಜಾಪ್ರಭುತ್ವವನ್ನ ಕಗ್ಗೊಲೆ ಮಾಡುವಂತ ಕೃತ್ಯ ಇದಾಗಿದೆ. ಹೀಗಾಗಿ ಈ ಬಗ್ಗೆ ರಾಜ್ಯದ ಜನಕ್ಕೆ ಉತ್ತರಿಸಬೇಕಾಗಿದೆ. ಹಣ ಕೊಡೋದು ತೆಗೆದುಕೊಳ್ಳೋದು ಎರಡೂ ಲಂಚದ ವ್ಯಾಪ್ತಿಯಲ್ಲಿ ಬರುತ್ತದೆ. ಆ ಇಬ್ಬರ ಮೇಲೂ ಲಂಚ ನಿಗ್ರಹ ಕಾಯ್ದೆ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಇದೇ ವೇಳೆ ಆಗ್ರಹಿಸಿದರು.

  • ಧರೆಗುರುಳಿದ ಬೃಹತ್ ಮರ – ಕ್ಷಣಾರ್ಧದಲ್ಲಿ ಮೂವರು ಪಾರು

    ಧರೆಗುರುಳಿದ ಬೃಹತ್ ಮರ – ಕ್ಷಣಾರ್ಧದಲ್ಲಿ ಮೂವರು ಪಾರು

    -ಒಬ್ಬರ ಕೈಯನ್ನೊಬ್ಬರು ಹಿಡಿದು ಮರ ಹತ್ತಿಳಿದ ಪ್ರಯಾಣಿಕರು

    ಚಿಕ್ಕಮಗಳೂರು: ಮಳೆ-ಗಾಳಿ ಇಲ್ಲದಿದ್ದರೂ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದು ಒಂದು ಗಂಟೆಗೂ ಹೆಚ್ಚು ಸಮಯ ರಾಜ್ಯ ಹೆದ್ದಾರಿ ಬಂದ್ ಆಗಿದ್ದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ತಲ್ಲಮಕ್ಕಿ ಬಳಿ ನಡೆದಿದೆ.

    ಬೃಹತ್ ಮರ ಬೀಳೋದು ಐದೇ ಐದು ಸೆಕೆಂಡ್ ತಡವಾಗಿದ್ದರೆ ಆಟೋ ಚಾಲಕ ಹಾಗೂ ಅದರಲ್ಲಿದ್ದ ಇಬ್ಬರು ಪ್ರಯಾಣಿಕರ ಮೇಲೆ ಬೀಳುತ್ತಿತ್ತು. ಆದರೆ ಮರ ಬೀಳೋದನ್ನ ಕಂಡ ಆಟೋ ಚಾಲಕ ಬ್ರೇಕ್ ಹಾಕಿದ್ದರಿಂದ ಆಟೋ ಚಾಲಕ ಸೇರಿ ಮೂವರು ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬೃಹತ್ ಮರ ಧರೆಗುರುಳಿದ್ದರಿಂದ ರಾಜ್ಯ ಹೆದ್ದಾರಿ ಕೊಪ್ಪ-ಶೃಂಗೇರಿ ಮಾರ್ಗ ಗಂಟೆಗೂ ಹೆಚ್ಚು ಕಾಲ ಬಂದ್ ಆಗಿತ್ತು. ಈ ಮಾರ್ಗದ ಪ್ರಯಾಣಿಕರು ಒಬ್ಬರ ಕೈಯನ್ನೊಬ್ಬರು ಹಿಡಿದುಕೊಂಡು ಮರ ಹತ್ತಿಳಿದು ಬೇರೆ ವಾಹನಗಳಲ್ಲಿ ಹೋಗಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಕೊಪ್ಪ ಪೊಲೀಸರು ಸ್ಥಳೀಯರ ಸಹಕಾರದಿಂದ ಮರವನ್ನ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.