ಚಿಕ್ಕಮಗಳೂರು: ಗ್ರಾಮದೊಳಗೆ ಓಡಾಡುತ್ತಿರುವ ಬೃಹತ್ ಕಾಡುಕೋಣವನ್ನು ಕಂಡು ಗ್ರಾಮಸ್ಥರು ಆತಂಕಕ್ಕೀಡಾಗಿದ್ದು, ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಹಾ ಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಹಂಗರವಳ್ಳಿಯಲ್ಲಿ ಬೃಹತ್ ಕಾಡುಕೋಣವೊಂದು ಶುಕ್ರವಾರ ಬೆಳಗ್ಗೆಯಿಂದಲೂ ಓಡಾಡುತ್ತಿದೆ. ಇದನ್ನು ಕಂಡ ಸ್ಥಳೀಯರು ಭಯದಿಂದಲೇ ಕಾಲ ಕಳೆಯುತ್ತಿದ್ದಾರೆ. ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ರಸ್ತೆ ಮಧ್ಯೆ ಹಿಂಡು ಹಿಂಡಾಗಿ ಕಾಡುಕೋಣಗಳು ಪ್ರತ್ಯಕ್ಷ – ವಿಡಿಯೋ ನೋಡಿ

ಕಾಡುಕೋಣವೊಂದು 15 ದಿನಗಳ ಹಿಂದಷ್ಟೆ ಬಾಳೆಹೊನ್ನೂರು ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ತಿವಿದು ಸಾಯಿಸಿತ್ತು. ಇದೇ ಕಾಡುವು ಗ್ರಾಮದ ಹೊರ ವಲಯದಲ್ಲಿ ಓಡಾಡುತ್ತಿದೆ ಎಂದು ಹಂಗರವಳ್ಳಿ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಜಯಪುರದ ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುತ್ತಿದ್ದಾಗ ಆವರಣಕ್ಕೆ ಕಾಡುಕೋಣವೊಂದು ನುಗ್ಗಿ, ಆಂತಕ ಸೃಷ್ಟಿಸಿತ್ತು. ಅಷ್ಟೇ ಅಲ್ಲದೆ ಬಸರೀಕಟ್ಟೆ ಗ್ರಾಮದ ಮಧ್ಯೆ ರಸ್ತೆಯಲ್ಲಿ ಕಾಣಿಸಿಕೊಂಡು, ಗ್ರಾಮಸ್ಥರಲ್ಲಿ ಭಯ ಮೂಡಿಸಿತ್ತು.
ಬಾಳೆಹೊನ್ನೂರಿನ ಬಳಿ ರಸ್ತೆ ಮಧ್ಯೆಯೇ ಕಾಡುಕೋಣವು ಆಟೋಗೆ ಅಡ್ಡ ಹಾಕಿತ್ತು. ಕಳೆದೊಂದು ವರ್ಷದಿಂದ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಹಾವಳಿ ಮೀತಿಮೀರಿದ್ದು, ಜನ ಆತಂಕದಲ್ಲಿ ಬದುಕುತ್ತಿದ್ದಾರೆ.




















