Tag: Chikkamagaluru

  • 14 ಕೋಳಿ ಮೊಟ್ಟೆಯನ್ನು ಬಾಯಿಂದ ಹೊರ ಹಾಕಿದ ನಾಗರಹಾವು – ವಿಡಿಯೋ ನೋಡಿ

    14 ಕೋಳಿ ಮೊಟ್ಟೆಯನ್ನು ಬಾಯಿಂದ ಹೊರ ಹಾಕಿದ ನಾಗರಹಾವು – ವಿಡಿಯೋ ನೋಡಿ

    ಚಿಕ್ಕಮಗಳೂರು: ಒಂದಲ್ಲ ಎರಡಲ್ಲ ಬರೋಬ್ಬರಿ 14 ಕೋಳಿ ಮೊಟ್ಟೆ ನುಂಗಿ, ತೆವಳಲಾಗದೆ ಜೀವ ಉಳಿಸಿಕೊಳ್ಳಲು ನರಳಾಡುತ್ತಿದ್ದ ಏಳು ಅಡಿ ಉದ್ದದ ನಾಗರಹಾವೊಂದನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಗ್ರಾಮದಲ್ಲಿ ನಡೆದಿದೆ.

    ಬಡವನದಿಣ್ಣೆ ಗ್ರಾಮದ ನಿವಾಸಿ ಮಂಜಯ್ಯ ಮನೆಯಲ್ಲಿ ಮರಿಗೆಂದು ಬುಟ್ಟಿಯಲ್ಲಿಟ್ಟಿದ್ದ 14 ಮೊಟ್ಟೆಗಳನ್ನು ನಾಗರ ಹಾವು ನುಂಗಿದೆ. ಮೊಟ್ಟೆ ಕಂಡ ಕೂಡಲೇ ಹಾವು ಆಸೆಯಿಂದ ಎಲ್ಲವನ್ನೂ ನುಂಗಿದೆ. ನಂತರ ಮುಂದೆ ಹೋಗಲಾಗದೆ ನರಳಾಡುತಿತ್ತು. ಇದನ್ನ ಗಮನಿಸ ಮನೆ ಮಾಲೀಕ ಮಂಜಯ್ಯ ಕೂಡಲೇ ಸ್ನೇಕ್ ಆರೀಫ್‍ಗೆ ವಿಷಯ ಮುಟ್ಟಿಸಿದ್ದಾರೆ.

    ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಅವರು ಮೊದಲು ಮನೆಯೊಳಗಿದ್ದ ಹಾವನ್ನ ಬಯಲು ಪ್ರದೇಶಕ್ಕೆ ತಂದಿದ್ದಾರೆ. ಬಳಿಕ ಅದರ ಬಾಲ ಹಿಡಿದು ಹೊರಳಾಡಿಸುತ್ತಿದ್ದಂತೆ ನುಂಗಿದ್ದ ಎಲ್ಲಾ ಮೊಟ್ಟೆಗಳನ್ನ ಹಾವು ಕಕ್ಕಿ ತನ್ನ ಜೀವ ಉಳಿಸಿಕೊಂಡಿದೆ.

    ಬಳಿಕ ಹಾವನ್ನು ರಕ್ಷಿಸಿ, ಅದನ್ನು ಸ್ನೇಕ್ ಆರೀಫ್ ಅವರು ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟುಬಂದಿದ್ದಾರೆ.

    https://www.youtube.com/watch?v=ICtheGVDfyk

  • ವಿನಯ್ ಗುರೂಜಿಗಾಗಿ ಸಿದ್ಧವಾಗ್ತಿದೆ ಕೃತಕ ಗುಹೆ

    ವಿನಯ್ ಗುರೂಜಿಗಾಗಿ ಸಿದ್ಧವಾಗ್ತಿದೆ ಕೃತಕ ಗುಹೆ

    ಚಿಕ್ಕಮಗಳೂರು: ನಡೆದಾಡುವ ದೇವರೆಂದೇ ಹೆಸರುವಾಸಿಯಾಗಿರುವ ವಿನಯ್ ಗುರೂಜಿಗಾಗಿ ಗುಹೆ ನಿರ್ಮಾಣವಾಗುತ್ತಿದೆ.

    ಹೌದು. ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮದಲ್ಲಿ ಗುಹೆ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ವಿನಯ್ ಗುರೂಜಿ ಗುಹೆಯಲ್ಲಿ ಧ್ಯಾನ ಮಾಡಲಿದ್ದಾರೆ. ಏಕಾಗ್ರತೆಗಾಗಿ ಭಕ್ತರಿಂದ ದೂರ ಉಳಿಯುವ ನಿಟ್ಟಿನಲ್ಲಿ ಗುರೂಜಿ ಈ ಗುಹೆ ಸೇರಲಿದ್ದಾರೆ ಎನ್ನಲಾಗಿದೆ.

    ಪ್ರತಿ ಶುಕ್ರವಾರ ಮಾತ್ರ ಭಕ್ರಿಗೆ ದರ್ಶನ ಕೊಡ್ತಿರೋ ಗುರೂಜಿಯವರು ಕೆಲ ದಿನಗಳಲ್ಲೇ ಗುಹೆಯೊಳಗೆ ಧ್ಯಾನದಲ್ಲಿ ತಲ್ಲೀನರಾಗಲಿದ್ದಾರೆ. ಸಿಮೆಂಟ್ ನಿಂದ ನಿರ್ಮಾಣವಾಗ್ತಿರೋ ಈ ಕೃತಕ ಗುಹೆಯನ್ನು ಗುರೂಜಿಯವರೇ ತಮ್ಮ ಸಿಬ್ಬಂದಿಗೆ ಹೇಳಿ ಸಿದ್ಧಪಡಿಸಿದ್ದಾರೆ.

    ಗುರೂಜಿ ಈ ಹಿಂದೆ ಹಿರಿಯ ರಾಜಕಾರಣಿಗಳಿಂದ ಪಾದಪೂಜೆ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಗುರೂಜಿಯ ಏಕಾಗ್ರತೆಗೆ ಭಂಗವಾಗಿದೆಯಂತೆ. ಇದರಿಂದ ದೂರವಾಗಲು ಗುಹೆ ಪ್ರವೇಶ ಮಾಡಲು ನಿರ್ಧಾರ ಮಾಡಿದ್ದು, ಇದೇ ತಿಂಗಳಲ್ಲಿ ಗುಹೆ ಸಿದ್ಧವಾಗಿ ಪ್ರವೇಶ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಅಭಿವೃದ್ಧಿ ಹೆಸ್ರಲ್ಲಿ ಮುಳ್ಳಯ್ಯನಗಿರಿ ಮುಗಿಸಲು ಸ್ಕೆಚ್

    ಅಭಿವೃದ್ಧಿ ಹೆಸ್ರಲ್ಲಿ ಮುಳ್ಳಯ್ಯನಗಿರಿ ಮುಗಿಸಲು ಸ್ಕೆಚ್

    ಚಿಕ್ಕಮಗಳೂರು: ಇಂದು ರಸ್ತೆ, ನಾಳೆ ಅಭಿವೃದ್ಧಿ, ನಾಡಿದ್ದು ಸೌಲಭ್ಯ, ಆಚೆನಾಡಿದ್ದು ಸರ್ಕಾರದಿಂದ್ಲೇ ಪ್ರವಾಸಿ ಮಂದಿರ. ಆಮೇಲೆ ಉಳ್ಳವರಿಂದ ಹೋಂ ಸ್ಟೇ, ರೆಸಾರ್ಟ್. ಅಷ್ಟೊತ್ತಿಗೆ ಎಲ್ಲ ಕೆಲಸ ಮುಗಿಸಿ ಮುಳ್ಳಯ್ಯನಗಿರಿಯನ್ನ ಮಣ್ಣು ಮಾಡಿರುತ್ತಾರೆ. ಸಮುದ್ರ ಮಟ್ಟದಿಂದ 6300 ಅಡಿ ಎತ್ತರದ ಪ್ರದೇಶ, ಕರ್ನಾಟಕದ ಎತ್ತರದ ಗಿರಿಶಿಖರ, ಮುಗಿಲೆತ್ತರದ ಬೆಟ್ಟಗುಡ್ಡಗಳು, ತಣ್ಣನೆಯ ಗಾಳಿ, ವರ್ಷಪೂರ್ತಿ ಮಳೆ ಸುರಿಯೋ ಪ್ರದೇಶ ಅಂತೆಲ್ಲಾ ನಾಮಾಂಕಿತ ಹೊಂದಿರೋ ಮುಳ್ಳಯ್ಯನಗಿರಿ ಕಾಂಕ್ರೀಟ್ ನಾಡಾಗಿ ಸಿಮೆಂಟ್ ಧೂಳಲ್ಲಿ ಮರೆಯಾಗೋ ಕಾಲ ದೂರವಿಲ್ಲ.

    ಹೌದು. ಕರ್ನಾಟಕದ ಅತ್ಯಂತ ಎತ್ತರದ ಗಿರಿಶಿಖರ ಎಂಬ ಖ್ಯಾತಿ ಗಳಿಸಿರುವ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಸಂಚಕಾರ ತಟ್ಟಿದೆ. ರಸ್ತೆ ಅಗಲೀಕರಣದ ಹೆಸರಲ್ಲಿ ಮುಳ್ಳಯ್ಯನಗಿರಿ ತುದಿಯಲ್ಲಿ ಕಲ್ಲುಗಳನ್ನ ಸರ್ಕಾರ ಸ್ಫೋಟಿಸುತ್ತಿದೆ. ರಸ್ತೆ ನೆಪದಲ್ಲಿ ಬ್ಲಾಸ್ಟ್ ಮಾಡ್ತಿರೋರು ನಾಳೆ ಅಭಿವೃದ್ಧಿ ಹೆಸರಲ್ಲಿ ಹೋಂ ಸ್ಟೇ, ರೆಸಾರ್ಟ್, ಬಿಲ್ಡಿಂಗ್ ನಿರ್ಮಿಸುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ, ಮುಳ್ಳಯ್ಯನಗಿರಿಯನ್ನು ಮುಂದಿನ ಪೀಳಿಗೆಯವರು ಬರೀ ಫೋಟೋ, ವಿಡಿಯೋ ಅಥವಾ ಹಿರಿಯರ ವರ್ಣನೆಯಲ್ಲಿ ನೋಡಬೇಕಾಗುತ್ತದೆ ಎಂದು ಪರಿಸರವಾದಿ ಗಿರಿಜಾಶಂಕರ್ ಗರಂ ಆಗಿದ್ದಾರೆ.

    ವಿಶ್ವದಲ್ಲೇ ಸೂಕ್ಷ್ಮವಾದ ಪ್ರದೇಶಗಳಲ್ಲಿ ಮುಳ್ಳಯ್ಯನಗಿರಿಯೂ ಒಂದು. ಇಲ್ಲಿ ಮಣ್ಣನ್ನ ಅಗೆಯೋದು, ಬ್ಲಾಸ್ಟ್ ಮಾಡೋದು ಮಾಡಿದರೆ ಮಳೆಗಾಲದಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ. ಆದರೆ, ನೈಸರ್ಗಿಕ ಸಂಪತ್ತು ಕಾಪಾಡಬೇಕಾಗಿರೋ ಸರ್ಕಾರವೇ ಕೊಡಲಿ ಹಾಕ್ತಿರೋದು ದುರಾದೃಷ್ಟ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಒಟ್ಟಾರೆ ಅಭಿವೃದ್ಧಿಯ ಹೆಸರಲ್ಲಿ ಮುಳ್ಳಯ್ಯನಗಿರಿಯಲ್ಲಿ ರಸ್ತೆ ನಿರ್ಮಿಸ್ತಿರೋ ಸರ್ಕಾರದ ಚಿಂತನೆ ರಸ್ತೆ ನಿರ್ಮಾಣಕ್ಕಷ್ಟೇ ಸೀಮಿತವಾಗಿದರೆ ಸರಿ. ಇಲ್ಲವಾದಲ್ಲಿ ಮುಳ್ಳಯ್ಯನಗಿರಿ ಇತಿಹಾಸದ ಪುಟ ಸೇರೋದು ಖಚಿತವಾಗಲಿದೆ.

  • ರಾಜ್ಯದ ಹಲವೆಡೆ ಧಾರಾಕಾರ ಮಳೆ- ಬೆಂಗ್ಳೂರಲ್ಲಿ ಮರಗಳು, ಕಾರ್, ಬೈಕ್ ಜಖಂ

    ರಾಜ್ಯದ ಹಲವೆಡೆ ಧಾರಾಕಾರ ಮಳೆ- ಬೆಂಗ್ಳೂರಲ್ಲಿ ಮರಗಳು, ಕಾರ್, ಬೈಕ್ ಜಖಂ

    – ಋಷ್ಯಶೃಂಗದಲ್ಲಿ ಡಿಕೆಶಿ ಪರ್ಜನ್ಯ ಹೋಮ

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಜನರ ನಿದ್ದೆಗೆಡಿಸಿವೆ. ಬುಧವಾರ ಸಂಜೆಯಿಂದ ಬೆಂಗಳೂರಿನಲ್ಲಿ ಗುಡುಗು ಸಹಿತ ಸುರಿದ ಮಳೆ ಆರ್ಭಟ ಜೋರಾಗಿತ್ತು.

    ಬಿರುಗಾಳಿ ಸಹಿತ ಬಿದ್ದ ಮಳೆಗೆ ಬೊಮ್ಮನಹಳ್ಳಿ, ಹುಳಿಮಾವು, ವಿಜಯನಗರ, ಜಯನಗರ, ರಾಜರಾಜೇಶ್ವರಿ ನಗರ, ಯಲಹಂಕ, ಚಂದ್ರಲೇಔಟ್ ಸೇರಿದಂತೆ ಹತ್ತಕ್ಕೂ ಹೆಚ್ಚು ಕಡೆ ಮರಗಳು ಧರೆಗುರುಳಿವೆ. ಅಲ್ಲದೆ ಕೆಲವು ಕಡೆ ರೆಂಬೆ ಕೊಂಬೆಗಳು ಸಹ ಮುರಿದು ರಸ್ತೆಗೆ ಬಿದ್ದಿದ್ದವು. ನಾಗರಬಾವಿ ಬಳಿ ಓಮಿನಿ ಕಾರಿನ ಮೇಲೆ ಮರ ಮತ್ತು ಕಂಬವೊಂದು ಬಿದ್ದಿದ್ದರೆ, ಚಂದ್ರಲೇಔಟ್ ನಲ್ಲಿ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿತ್ತು.

    ಇತ್ತ ಮಳೆಗಾಗಿ ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಸರ್ಕಾರದ ವತಿಯಿಂದ ಪೂಜೆ-ಹೋಮ-ಹವನ ನಡೆಯುತ್ತಿದೆ. ಅದೇ ರೀತಿ ಮಳೆದೇವ ಎಂದೇ ಖ್ಯಾತಿಯಾಗಿರೋ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಿಗ್ಗಾದಲ್ಲೂ ಕೂಡ ಸರ್ಕಾರದ ಪ್ರತಿನಿಧಿಯಾಗಿ ಡಿಕೆಶಿ ಹಾಗೂ ಪಿ.ಟಿ.ಪರಮೇಶ್ವರ್ ನಾಯಕ್ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

    ಬೆಳಗ್ಗೆ 5.30ಯಿಂದಲೇ ಪೂಜೆ ಆರಂಭವಾಗಿದೆ. ಋಷ್ಯಶೃಂಗ ದೇವಾಲಯದಲ್ಲಿ ಮಳೆಗಾಗಿ ಪರ್ಜನ್ಯ ಹೋಮ, ಜಪ ನಡೆಯುತ್ತಿದ್ದು ಬಳಿಕ ಶೃಂಗೇರಿ ಶಾರದಾಂಭೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಹಿಂದೆ ಕೂಡ ಮಳೆಗಾಗಿ ಡಿಕೆಶಿ ಇಲ್ಲಿ ಬೇಡಿಕೊಂಡಿದ್ರು. ಆಗ ನಾಡಿನಲ್ಲಿ ಸಮೃದ್ಧ ಮಳೆಯಾಗಿತ್ತು.

  • ಮಳೆಗಾಗಿ ಸಚಿವ ಡಿಕೆಶಿ ವಿಶೇಷ ಪೂಜೆ – ಋಷ್ಯಶೃಂಗ ದೇವಾಲಯದಲ್ಲಿ ಪರ್ಜನ್ಯ ಹೋಮ

    ಮಳೆಗಾಗಿ ಸಚಿವ ಡಿಕೆಶಿ ವಿಶೇಷ ಪೂಜೆ – ಋಷ್ಯಶೃಂಗ ದೇವಾಲಯದಲ್ಲಿ ಪರ್ಜನ್ಯ ಹೋಮ

    ಚಿಕ್ಕಮಗಳೂರು: ಮುಂಗಾರು ಮಳೆ ವಿಳಂಬ ಹಿನ್ನೆಲೆ ರಾಜ್ಯದಲ್ಲಿ ಜಪ-ತಪ ಶುರುವಾಗಿದೆ. ಇಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ಪಿ.ಟಿ ಪರಮೇಶ್ವರ್ ನಾಯ್ಕ್ ಶೃಂಗೇರಿಗೆ ತೆರಳಿದ್ದಾರೆ. ಮಳೆಗಾಗಿ ಶಾರದಾಂಬೆ ಹಾಗೂ ಋಷ್ಯಶೃಂಗನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

    ಮಳೆ ದೇವರೆಂದೇ ಖ್ಯಾತಿಯಾಗಿರುವ ಕಿಗ್ಗಾ ಸಮೀಪದ ಋಷ್ಯಶೃಂಗ ದೇವಾಲಯದಲ್ಲಿ ಡಿಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮಳೆಗಾಗಿ ಪರ್ಜನ್ಯ ಹೋಮ, ಜಪ ಮಾಡಲಿದ್ದಾರೆ.

    ಜಿಲ್ಲೆಯ ಶೃಂಗೇರಿಯಲ್ಲಿರೋ ಋಷ್ಯಶೃಂಗ ದೇವಾಲಯದಲ್ಲಿ ನಾಳೆ ಮುಂಜಾನೆ 5.30ಕ್ಕೆ ಮಳೆಗಾಗಿ ಪರ್ಜನ್ಯ ಹೋಮ, ಜಪ ನಡೆಯಲಿದೆ. ಈ ಹಿಂದೆ ಕೂಡ ಮಳೆಗಾಗಿ ಡಿಕೆಶಿ ಇಲ್ಲಿ ಬೇಡಿಕೊಂಡಿದ್ದರು. ಆ ಬಳಿಕ ನಾಡಿನಲ್ಲಿ ಸಮೃದ್ಧ ಮಳೆಯಾಗಿತ್ತು. ಮಳೆಯಾದ ಮೇಲೆ ಕ್ಷೇತ್ರಕ್ಕೆ ಮತ್ತೆ ಭೇಟಿ ನೀಡಿದ್ದ ಸಚಿವರು ಹರಕೆ ತೀರಿಸಿದ್ದರು.

  • ಎಸಿಯಿಂದ ಹೊರಬರುವ ಹನಿ ನೀರಿಗಾಗಿ ಒದ್ದಾಡಿದ ಕಪಿರಾಯ

    ಎಸಿಯಿಂದ ಹೊರಬರುವ ಹನಿ ನೀರಿಗಾಗಿ ಒದ್ದಾಡಿದ ಕಪಿರಾಯ

    ಚಿಕ್ಕಮಗಳೂರು: ರಾಜ್ಯಕ್ಕೆ ತಲೆದೂರಿರುವ ಭೀಕರ ಬರ ಮಲೆನಾಡಿಗೂ ಕಾಲಿಟಿದ್ಯಾ ಎಂಬ ಆತಂಕ ಕಾಡುತ್ತಿದ್ದು, ದಾಹವನ್ನು ತೀರಿಸಿಕೊಳ್ಳಲು ಮಂಗವೊಂದು ಕಟ್ಟಡವೊಂದರ ಎಸಿಯಿಂದ ಹೊರಬರುವ ನೀರಿನ ಪೈಪ್ ಹಿಡಿದು ಒದ್ದಾಡುತ್ತಿದ್ದ ಮನಕಲಕುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

    ಮಂಗವೊಂದು ಕುಡಿಯಲು ನೀರು ಸಿಗದೇ ಎಸಿಯಿಂದ ಹೊರಬರುವ ನೀರಿನ ಪೈಪ್‍ನಲ್ಲಿ ಬರುತ್ತಿದ್ದ ಹನಿ ನೀರಿನಿಂದ ದಾಹ ನೀಗಿಸಿಕೊಳ್ಳಲು ಪರದಾಡಿದ ದೃಶ್ಯ ಮಲೆನಾಡಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಮಳೆಯಿಲ್ಲದೆ ಮಲೆನಾಡಿನಲ್ಲಿ ಕೂಡ ನೀರಿಗಾಗಿ ಹಾಹಾಕಾರ ಎದುರಾಗಿದೆ.

    ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತಹಶೀಲ್ದಾರ್ ಕಛೇರಿ ಹಿಂಭಾಗದಲ್ಲಿದ್ದ ಎಸಿ ಪೈಪಿನಲ್ಲಿ ತೊಟ್ಟಿಕ್ಕುತ್ತಿದ್ದ ಹನಿ ನೀರನ್ನ ಕುಡಿಯಲು ಮಂಗವೊಂದು ಹರಸಾಹಸ ಪಟ್ಟಿರುವ ದೃಶ್ಯ ನೀರಿನ ಮಹತ್ವವನ್ನ ಸಾರಿ ಹೇಳುತ್ತಿದೆ. ದಾಹದಿಂದ ಅತ್ತ-ಇತ್ತ, ಮೇಲೆ-ಕೇಳಗೆ ನೋಡುತ್ತಾ ಪೈಪಿಗೆ ಬಾಯಿಟ್ಟು ಉಸಿರು ಕಟ್ಟಿ ನೀರನ್ನು ಮಂಗ ಎಳೆಯುತ್ತಿರುವ ದೃಶ್ಯ ಮನಕಲಕುವಂತಿದೆ.

  • ಮೆಸ್ಕಾಂ ತೋಡಿದ್ದ ಹಳ್ಳಕ್ಕೆ ಬಿದ್ದು ನರಳಾಡಿದ ದನಕರು

    ಮೆಸ್ಕಾಂ ತೋಡಿದ್ದ ಹಳ್ಳಕ್ಕೆ ಬಿದ್ದು ನರಳಾಡಿದ ದನಕರು

    ಚಿಕ್ಕಮಗಳೂರು: ವಿದ್ಯುತ್ ಇಲಾಖೆ ತೋಡಿದ್ದ ಗುಂಡಿಗೆ ಐದಾರು ದನಕರುಗಳು ಬಿದ್ದು ಇಡೀ ರಾತ್ರಿ ನರಳಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್‍ನಲ್ಲಿ ನಡೆದಿದೆ.

    ಚಿಕ್ಕಮಗಳೂರಿನ ಸುಭಾಷ್ ನಗರದಲ್ಲಿ ಮೆಸ್ಕಾಂ ಸಿಬ್ಬಂದಿ ಸುಮಾರು 10-15 ಅಡಿ ಆಳದ 20 ಗುಂಡಿಗಳನ್ನ ತೋಡಿದ್ದರು. ಆದರೆ ಅದರ ಸುತ್ತಲೂ ಯಾವುದೇ ಬೇಲಿಯನ್ನೂ ಹಾಕಿರಲಿಲ್ಲ. ಸೋಮವಾರ ಸಂಜೆ ಮೇವು ಮೇಯ್ದುಕೊಂಡು ಬಂದ ಆರು ದನಕರುಗಳು ಆ ಗುಂಡಿಯಲ್ಲಿ ಬಿದ್ದಿದೆ. ಇಡೀ ರಾತ್ರಿ ಅಲ್ಲೇ ಗೋಳಿಟ್ಟಿವೆ. ಬೆಳಗ್ಗೆ ಗುಂಡಿಯಿಂದ ದನಕರುಗಳು ಕೂಗುತ್ತಿದ್ದ ಸದ್ದನ್ನು ಕೇಳಿ ಸ್ಥಳೀಯರು ಹಗ್ಗದ ಸಹಾಯದಿಂದ ಹಸುಗಳನ್ನ ಮೇಲೆತ್ತಿದ್ದಾರೆ.

    ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಅಂಗನವಾಡಿಯೂ ಇದೆ. ಆದರೆ ಗುಂಡಿಯನ್ನು ತೋಡಿಟ್ಟು ಮೆಸ್ಕಾಂ ಅಧಿಕಾರಿ ಸುಮ್ಮನಿದ್ದಾರೆ. ಅಪಾಯವನ್ನ ಬಾಯ್ತೆರೆದು ಕುಳಿತುರುವ ಗುಂಡಿಗಳ ಸುತ್ತಲೂ ಇಲಾಖೆ ಯಾವುದೇ ಬಂದೋಬಸ್ತ್ ಕೂಡ ಮಾಡಿಲ್ಲ. ಇಂದು ದನಕರುಗಳು ಬಿದ್ದಿವೆ. ನಾಳೆ ಪುಟ್ಟ ಪುಟ್ಟ ಮಕ್ಕಳು ಬಿದ್ದು ಹೆಚ್ಚುಕಮ್ಮಿಯಾದರೆ ಏನು ಗತಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಇಲಾಖೆ ಗುಂಡಿಯ ಸುತ್ತಲೂ ಬೇಲಿ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • 8 ತಿಂಗಳ ಹಿಂದೆ ಮದ್ವೆಯಾಗಿದ್ದ ವಿವಾಹಿತೆ ಆತ್ಮಹತ್ಯೆ

    8 ತಿಂಗಳ ಹಿಂದೆ ಮದ್ವೆಯಾಗಿದ್ದ ವಿವಾಹಿತೆ ಆತ್ಮಹತ್ಯೆ

    ಚಿಕ್ಕಮಗಳೂರು: ಎಂಟು ತಿಂಗಳ ಹಿಂದೆ ಮದುವೆಯಾಗಿದ್ದ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ನೇರಲಕೆರೆ ಗ್ರಾಮದಲ್ಲಿ ನಡೆದಿದೆ.

    ಮೃತಳನ್ನ 20 ವರ್ಷದ ಕಾವ್ಯ ಎಂದು ಗುರುತಿಸಲಾಗಿದೆ. ಕಾವ್ಯ ಎಂಟು ತಿಂಗಳ ಹಿಂದೆ ಪ್ರಸನ್ನ ಎಂಬವನನ್ನ ಮದುವೆಯಾಗಿದ್ದಳು. ಆದರೆ ಸೋಮವಾರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮೃತ ಕಾವ್ಯಳ ಮೈಮೇಲಿನ ಗಾಯ ಹಾಗೂ ರಕ್ತ ಹೆಪ್ಪುಗಟ್ಟಿರೋದನ್ನ ಗಮನಿಸಿದರೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಶಂಕಿಸಲಾಗಿದೆ. ಮೃತ ಕಾವ್ಯಳ ಪೋಷಕರು ಕೂಡ ಹೊಡೆದು ಕೊಲೆ ಮಾಡಿ ಅನುಮಾನ ಬಾರದಂತೆ ನೇಣು ಹಾಕಿದ್ದಾರೆಂದು ಆರೋಪಿಸಿದ್ದಾರೆ. ಇತ್ತ ಪತಿ ಪ್ರಸನ್ನ ಕೂಡ ನಾಪತ್ತೆಯಾಗಿರುವುದರಿಂದ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಘಟನೆಯ ಬಗ್ಗೆ ಮಾಹಿತಿ ತಿಳಿದು ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಪ್ರಸನ್ನನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

  • ಹುಟ್ಟುಹಬ್ಬ ಆಚರಿಸಿಕೊಂಡ ಮಧ್ಯರಾತ್ರಿಯೇ ಮಹಿಳಾ ಪೇದೆ ಆತ್ಮಹತ್ಯೆ

    ಹುಟ್ಟುಹಬ್ಬ ಆಚರಿಸಿಕೊಂಡ ಮಧ್ಯರಾತ್ರಿಯೇ ಮಹಿಳಾ ಪೇದೆ ಆತ್ಮಹತ್ಯೆ

    ಚಿಕ್ಕಮಗಳೂರು: ಹುಟ್ಟುಹಬ್ಬದ ದಿನವೇ ಮಹಿಳಾ ತರಬೇತಿ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಮೃತ ತರಬೇತಿ ಪೇದೆಯನ್ನು 26 ವರ್ಷದ ಕವಿತಾ ಎಂದು ಗುರುತಿಸಲಾಗಿದೆ. ಕವಿತಾ ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನವಳಾಗಿದ್ದು, ಬೆಂಗಳೂರಿನಲ್ಲಿ ಪೊಲೀಸ್ ಹುದ್ದೆಗೆ ನೇಮಕವಾಗಿ, ಕಳೆದೊಂದು ತಿಂಗಳಿಂದ ಚಿಕ್ಕಮಗಳೂರಿನ ರಾಮನಹಳ್ಳಿ ತರಬೇತಿ ಕೇಂದ್ರದಲ್ಲಿ ಟ್ರೈನಿಯಾಗಿದ್ದರು.

    ಇಂದು ಕವಿತಾಳ ಹುಟ್ಟುಹಬ್ಬವಿತ್ತು. ತರಬೇತಿ ಕೇಂದ್ರದ ಊಟದ ಹಾಲ್‍ನಲ್ಲೇ ಶುಕ್ರವಾರ ರಾತ್ರಿ ಸುಮಾರು 12 ಗಂಟೆವರೆಗೂ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದಳು. ಬಳಿಕ ಊಟದ ಹಾಲ್‍ನ ಅಡುಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

    ಕಳೆದೊಂದು ತಿಂಗಳಿನಿಂದ ಚಿಕ್ಕಮಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದ ಕವಿತಾ ಆರೋಗ್ಯದ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಕವಿತಾ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

    ಸದ್ಯಕ್ಕೆ ಈ ಕುರಿತು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಪ್ತ ನದಿಗಳ ನಾಡಲ್ಲೇ ನೀರಿಗಾಗಿ ಪರದಾಟ

    ಸಪ್ತ ನದಿಗಳ ನಾಡಲ್ಲೇ ನೀರಿಗಾಗಿ ಪರದಾಟ

    -ಡ್ರಮ್ ಇರದಿದ್ರೆ ಬದುಕೇ ಇಲ್ಲ

    ಚಿಕ್ಕಮಗಳೂರು: ಸಪ್ತ ನದಿಗಳ ನಾಡು ಚಿಕ್ಕಮಗಳೂರಿನ ಹಿರೇಗೌಜ ಗ್ರಾಮದಲ್ಲಿ ಕುಡಿಯಲು ನೀರಿಲ್ಲದೆ ಜನರು ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ.

    ಹಿರೇಗೌಜ ಗ್ರಾಮದ ನಲ್ಲಿಗಳಲ್ಲಿ ನೀರು ಬಂದು ವರ್ಷಗಳೆ ಕಳೆದಿವೆ. ಈಗ 10-15 ದಿನಕ್ಕೊಮ್ಮೆ ಬರುವ ಟ್ಯಾಂಕರ್ ನೀರಿಗಾಗಿ ಜನ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಮನೆಯೊಂದಕ್ಕೆ 8-10 ದಿನಗಳಿಗೆ 3-4 ಡ್ರಮ್ ನೀರು. ಅದರಲ್ಲೇ ದನ-ಕರು, ಅಡುಗೆ, ಸ್ನಾನ ಎಲ್ಲ ಮಾಡಬೇಕು. ಇಲ್ಲಿ ಡ್ರಮ್ ಇರದಿದ್ದರೇ ಬದುಕೇ ಇಲ್ಲದಂತಾಗಿದೆ ಎಂದು ಸ್ಥಳೀಯ ಮಹಿಳೆಯರು ಹೇಳುತ್ತಿದ್ದಾರೆ.

    ವಾರಕ್ಕೊಮ್ಮೆ ಪಂಚಾಯಿತಿ ಬಿಡುತ್ತಿರುವ ಟ್ಯಾಂಕರ್ ನೀರು ಶುದ್ಧವೋ-ಫ್ಲೋರೈಡ್ ನೀರೋ ಗೊತ್ತಿಲ್ಲ. ನೀರನ್ನ ಡ್ರಮ್‍ಗೆ ತುಂಬಿದ್ದಂತೆ ಬಿಳಿಯ ಪಾಚಿ ಹರಡುತ್ತೆ. ಅದನ್ನೆ ಕುಡೀಬೇಕು. ಟ್ಯಾಂಕರ್ ಬರದಿದ್ದರೆ 2-3 ಕಿಲೋ ಮೀಟರ್ ನಷ್ಟು ದೂರ ನೀರನ್ನ ಹೊರಬೇಕು. ನೀರನ್ನ ಹೊತ್ತು-ಹೊತ್ತು ಗ್ರಾಮದ ಗಂಡಸರ ತೋಳಲ್ಲಿ ಶಕ್ತಿಯೇ ಇಲ್ಲದಂತಾಗಿದೆ. ಹಣ ಕೊಟ್ಟು ನೀರು ತಗೆದುಕೊಳ್ಳೋದಾದರೆ ಒಂದು ಡ್ರಮ್ ನೀರಿಗೆ 50 ರೂಪಾಯಿ. ಆದರೆ ಈಗ ಹಣ ಕೊಡುತ್ತೀವಿ ಅಂದರು ಖಾಸಗಿಯವರು ನೀರು ತರಲ್ಲ. ಯಾಕಂದರೆ ಟ್ಯಾಂಕರ್‍ಗೆ ನೀರು ತುಂಬಲು ಕರೆಂಟ್ ಇರಲ್ಲ. ಹಾಗಾಗಿ ಸ್ಥಳೀಯರು ಶಾಸಕರು ಹಾಗೂ ಸಂಸದರು ಕೆಂಡಕಾರುತ್ತಿದ್ದಾರೆ ಎಂದು ಸ್ಥಳೀಯ ದೇವೇಂದ್ರ ತಿಳಿಸಿದ್ದಾರೆ.

    ಚುನಾವಣೆಗು ಮುನ್ನ ನೀರು ಕೊಡುತ್ತೀವಿ, ರೋಡ್ ಮಾಡುತ್ತೀವಿ ನಿಮ್ಮ ಹಳ್ಳಿನ ಮಾದರಿ ಮಾಡುತ್ತೀವಿ ಅನ್ನೋ ಜನಪ್ರತಿನಿಧಿಗಳು ಗೆದ್ದ ಮೇಲೆ ಆ ಕಡೆ ತಲೆ ಹಾಕಿ ಮಲಗಲ್ಲ. ಅಧಿಕಾರಿಗಳಾದರೂ ನೀರು ಕೊಡುತ್ತಾರೆಂದರೆ ಅವರು ಬ್ಯುಸಿ. ಕಾಫಿನಾಡ ಜನ ಒಂದೆಡೆ ನೀರಿಗಾಗಿ ಗುಳೆ ಹೋಗುತ್ತಿದ್ದಾರೆ.