Tag: Chikkamagaluru

  • ನಾವು ಹಗಲುಗನಸು ಕಾಣೋರಲ್ಲ, ಕನಸು ನನಸು ಮಾಡೋ ಜನ- ಸಿ.ಟಿ ರವಿ

    ನಾವು ಹಗಲುಗನಸು ಕಾಣೋರಲ್ಲ, ಕನಸು ನನಸು ಮಾಡೋ ಜನ- ಸಿ.ಟಿ ರವಿ

    ಚಿಕ್ಕಮಗಳೂರು: ನಾವು ಹಗಲು ಕನಸು ಕಾಣೋ ಜನ ಅಲ್ಲ. ನಾವು ಕನಸು ನನಸು ಮಾಡುವ ಜನ. ಸಿಎಂ ಅವರು ಸಾಂದರ್ಭಿಕ ಶಿಶು. ಹಾಗಾಗಿ ಅವರಿಗೆ ಕನಸು ಬೀಳುವುದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಶಾಸಕ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಮ್ಮಿಶ್ರ ಸರ್ಕಾರ ಬೀಳಿಸುವ ಹಗಲುಗನಸು ಕಾಣುತ್ತಿದೆ ಎಂಬ ಮುಖ್ಯಮಂತ್ರಿಗಳ ಟ್ವೀಟ್ ಗೆ ತಿರುಗೇಟು ನೀಡಿದರು. ನಾವು ಸರ್ಕಾರ ಬೀಳಿಸುವ ನಿಟ್ಟಿನಲ್ಲಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ಬೀಳಿಸುವುದು ನಮ್ಮ ಕೆಲಸ ಅಲ್ಲ. ಸರ್ಕಾರ ಉಳಿಸಿಕೊಳ್ಳುವುದು ಅವರ ಕೆಲಸವಾಗಿದೆ. ಸರ್ಕಾರ ಯಾವಾಗ ಬೀಳುತ್ತದೆ ಎಂದು ನಾವು ಕಾಯುತ್ತಾ ಇದ್ದೇವೆ ಅಷ್ಟೇ ಎಂದು ಹೇಳಿದರು.

    ಇದೇ ವೇಳೆ ಶಾಸಕ ಆನಂದ್ ಸಿಂಗ್ ರಾಜೀನಾಮೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಶಾಸಕರು, ಜಿಂದಾಲ್ ಗೆ ಭೂಮಿ ಪರಭಾರೆ ಮಾಡಿದ್ದನ್ನ ಆನಂದ್‍ಸಿಂಗ್ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರಬಹುದು. ಅಥವಾ ರಾಜಕೀಯ ಕಾರಣವೂ ಇರಬಹುದು ನನಗೆ ಮಾಹಿತಿ ಇಲ್ಲ ಎಂದರು.

    ಈಗ ಕಾಂಗ್ರೆಸ್ ಹತಾಷೆಯಲ್ಲಿದೆ. ಕಾಂಗ್ರೆಸ್ ನಲ್ಲಿ ಭವಿಷ್ಯ ಇಲ್ಲ ಅನಿಸಿದ್ರೆ ಅದು ಅವರ ತೀರ್ಮಾನವಾಗುತ್ತದೆ. ರಾಷ್ಟ್ರೀಯ ನಾಯಕರೇ ಯಾವುದೇ ಭವಿಷ್ಯ ಇಲ್ಲದೇ ಹತಾಷೆಯಲ್ಲಿದ್ದಾರೆ. ಹಾಗಾಗಿ ಬೇರೆ ನಾಯಕರಿಗೂ ಇಲ್ಲಿದ್ದರೆ ಉದ್ಧಾರ ಆಗಲ್ಲ ಎಂದು ಅನಿಸಿರಬಹುದು. ಹಾಗಾಗಿ ರಾಜೀನಾಮೆ ನೀಡುತ್ತಿರಬಹುದು ಎಂದು ಅವರು ತಿಳಿಸಿದರು.

    ಸಿಎಂ ಟ್ವೀಟ್ ನಲ್ಲೇನಿತ್ತು?
    ಅಮೇರಿಕದ ನ್ಯೂಜೆರ್ಸಿಯಲ್ಲಿರುವ ಸಿಎಂ ಅವರು ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ಟ್ವೀಟ್ ಮಾಡಿ, ಅಮೇರಿಕದ ನ್ಯೂಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಸ್ಥಾನದ ಭೂಮಿ ಪೂಜೆ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದಿದೆ. ರಾಜ್ಯದ ವಿದ್ಯಮಾನವನ್ನು ಇಲ್ಲಿಂದಲೇ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ ನಿರಂತರ ಹಗಲುಗನಸು ಎಂದು ಟ್ವೀಟಿಸುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

  • ಸರ್.. ಪ್ಲೀಸ್ ಹೋಗ್ಬೇಡಿ, ನಮ್ಮನ್ನ ಬಿಟ್ಟು ಹೋಗ್ಬೇಡಿ – ಶಿಕ್ಷಕನನ್ನು ಬಿಗಿದಪ್ಪಿ ವಿದ್ಯಾರ್ಥಿಗಳ ಕಣ್ಣೀರು

    ಸರ್.. ಪ್ಲೀಸ್ ಹೋಗ್ಬೇಡಿ, ನಮ್ಮನ್ನ ಬಿಟ್ಟು ಹೋಗ್ಬೇಡಿ – ಶಿಕ್ಷಕನನ್ನು ಬಿಗಿದಪ್ಪಿ ವಿದ್ಯಾರ್ಥಿಗಳ ಕಣ್ಣೀರು

    ಚಿಕ್ಕಮಗಳೂರು: ಸರ್… ಪ್ಲೀಸ್ ಹೋಗಬೇಡಿ, ನಮ್ಮನ್ನು ಬಿಟ್ಟು ಹೋಗಬೇಡಿ. ಪ್ಲೀಸ್ ಸರ್. ಬಿಇಓಗೆ ಫೋನ್ ಮಾಡಿ ನಾವೇ ಮಾತಾಡುತ್ತೇವೆ. ನೀವು ಮಾತ್ರ ಹೋಗುವುದೇ ಬೇಡ ಸರ್. ಹೀಗೆ ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಕಣ್ಣೀರ ಧಾರೆಯನ್ನೇ ಹರಿಸಿರುವ ಅಪರೂಪದ ಘಟನೆ ಚಿಕ್ಕಮಗಳೂರಿನ ಕೈಮರದಲ್ಲಿ ನಡೆದಿದೆ.

    ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದುರ್ಗೇಶ್ ಅವರು ಸುಮಾರು 12 ವರ್ಷಗಳಿಂದ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪಾಠಕ್ಕೆ ಮಾತ್ರ ಸೀಮಿತವಾಗದ ಇವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೂ ಶ್ರಮಿಸಿದ್ದಾರೆ. ಇದರಿಂದ ಇವರು ಮಕ್ಕಳ ನೆಚ್ಚಿನ ಶಿಕ್ಷಕರಾಗಿದ್ದಾರೆ. ಆದರೆ ಶೈಕ್ಷಣಿಕ ವರ್ಷದಿಂದ ದುರ್ಗೇಶ್ ವರ್ಗಾವಣೆಯಾಗಿದ್ದಾರೆ.

    ಮಕ್ಕಳಿಗೆ ಈ ವಿಷಯ ಗೊತ್ತಾದರೆ ಬೇಜಾರಾಗುತ್ತಾರೆಂದು ಸಹೋದ್ಯೋಗಿಗಳಿಗೆ ಹೇಳಲು ಬಂದಿದ್ದರು. ನಂತರ ಮೆಲ್ಲಗೆ ಬಂದು ಬೈಕ್ ಹತ್ತುತ್ತಿದ್ದರು. ವಿಚಾರ ತಿಳಿದು ಓಡಿ ಬಂದ ಮಕ್ಕಳು ನೆಚ್ಚಿನ ಶಿಕ್ಷಕರನ್ನ ಬಿಗಿದಪ್ಪಿ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಪ್ಲೀಸ್ ಸರ್ ಹೋಗಬೇಡಿ, ಬಿಇಓ ಹತ್ರ ನಾವೇ ಮಾತಾಡುತ್ತೇವೆ ಸರ್.. ನಮ್ಮನ್ನ ಬಿಟ್ಟು ಹೋಗಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಪ್ರೀತಿ ಕಂಡು ಶಿಕ್ಷಕ ದುರ್ಗೇಶ್ ಅವರು ಕೂಡ ಅತ್ತಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಬಾಂಧವ್ಯ ಹೇಗಿರಬೇಕೆಂದು ಈ ಭಾವನಾತ್ಮಕ ದೃಶ್ಯ ಸಾರಿ ಹೇಳಿದೆ.

    ಶಿಕ್ಷಕರ ಕೆಲಸವೆಂದರೆ ತಿಂಗಳಾಂತ್ಯಕ್ಕೆ ಸಂಬಳಕ್ಕೆ ಸೀಮಿತವಾಗಿತ್ತೆ ಎಂಬ ಮಾತಿದೆ. ಬಹುತೇಕ ಅಂತವರ ಮಧ್ಯೆ ದುರ್ಗೇಶ್ ವಿಭಿನ್ನವಾಗಿ ನಿಂತಿದ್ದಾರೆ. ಇಂತಹ ಬಾಂಧವ್ಯ ಎಲ್ಲಾ ಶಿಕ್ಷಕರು-ವಿದ್ಯಾರ್ಥಿಗಳ ನಡುವೆ ಉಂಟಾದರೆ ಮಕ್ಕಳು ಭವ್ಯ ಭಾರತದ ಪ್ರಜೆಗಳಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಗ್ರಾಮದ ಜನರು ಮಾತನಾಡಿಕೊಂಡಿದ್ದಾರೆ.

  • ಟ್ಯಾಂಕರ್ ಲಾರಿ, ಬೈಕ್ ಮುಖಾಮುಖಿ ಡಿಕ್ಕಿ – ಅತ್ತಿಗೆ, ಮೈದುನ ದುರ್ಮರಣ

    ಟ್ಯಾಂಕರ್ ಲಾರಿ, ಬೈಕ್ ಮುಖಾಮುಖಿ ಡಿಕ್ಕಿ – ಅತ್ತಿಗೆ, ಮೈದುನ ದುರ್ಮರಣ

    ಚಿಕ್ಕಮಗಳೂರು: ನೀರಿನ ಟ್ಯಾಂಕರ್ ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಅತ್ತಿಗೆ ಮತ್ತು ಮೈದುನ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಳೆ ಲಕ್ಯಾ ಗ್ರಾಮದಲ್ಲಿ ನಡೆದಿದೆ.

    ಲತಾಮಣಿ (25) ಮತ್ತು ಮನೋಜ್ (19) ಮೃತ ಅತ್ತಿಗೆ-ಮೈದುನ. ಇನ್ನೂ ಬೈಕಿನಲ್ಲಿದ್ದ ಮಗುವಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಲತಾಮಣಿ ಪೊಲೀಸ್ ಪತ್ನಿಯಾಗಿದ್ದು, ಕಡೂರಿನ ಎಸ್. ಬಿದರೆ ಗ್ರಾಮದವರು ಎಂದು ತಿಳಿದು ಬಂದಿದೆ.

    ಬೈಕಿನಲ್ಲಿ ಅತ್ತಿಗೆ-ಮೈದುನ ಮತ್ತು ಮೃತ ಲತಾಮಣಿ ಮಗು ಮೂವರು ಎಸ್.ಬಿದರೆಯಿಂದ ಚಿಕ್ಕಮಗಳೂರಿಗೆ ಬರುತ್ತಿದ್ದರು. ಈ ವೇಳೆ ಬರುವಾಗ ಹಳೆ ಲಕ್ಯಾ ಗ್ರಾಮದಲ್ಲಿ ಬಳಿ ಇವರ ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ನೀರಿನ ಟ್ಯಾಂಕರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಅತ್ತಿಗೆ-ಮೈದುನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಗಾಯಗೊಂಡಿದ್ದ ಮಗುವನ್ನು ಟ್ಯಾಂಕರ್ ಚಾಲಕ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾನೆ. ಲಕ್ಯಾ ಗ್ರಾಮದ ಪಾಂಡು ಎಂಬವರಿಗೆ ಸೇರಿದ ಟ್ಯಾಂಕರ್ ಲಾರಿ ಇದಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಐಎಂಎ ಬೆನ್ನಲ್ಲೇ ಮತ್ತೊಂದು ವಂಚನೆ ಪ್ರಕರಣ ಬಯಲು

    ಐಎಂಎ ಬೆನ್ನಲ್ಲೇ ಮತ್ತೊಂದು ವಂಚನೆ ಪ್ರಕರಣ ಬಯಲು

    – ಹಣ ಡಬಲ್ ಮಾಡಿಕೊಡ್ತೀವಿ ಎಂದು ಲಕ್ಷ, ಲಕ್ಷ ಪಡೆದ್ರು
    – 2 ಸಾವಿರ ಜನರಿಗೆ ವಂಚನೆ

    ಚಿಕ್ಕಮಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಐಎಂಎ ಹಣಗರಣದ ಬೆನ್ನಲ್ಲೇ ಮತ್ತೊಂದು ವಂಚನೆ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಜನರಿಗೆ ಮೋಸ ಮಾಡಿ ಪರಾರಿಯಾಗುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಮೂವರು ಆರೋಪಿಗಳಿಗೆ ಶೋಧ ಕಾರ್ಯ ನಡೆಸಿದ್ದಾರೆ. ಹಣ ಕಳೆದುಕೊಂಡ ಜನರು ಕಣ್ಣೀರು ಹಾಕುತ್ತಾ ಆರೋಪಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಏನಿದು ಪ್ರಕರಣ?:
    ನಗರದ ಬಾರ್ ಲೈನ್ ರಸ್ತೆಯಲ್ಲಿ 5 ಜನರು ಸೇರಿ ಐ ಕಾಯಿನ್ ಹಣಕಾಸು ಕಂಪನಿ ಆರಂಭಿಸಿದ್ದರು. ನಿಮ್ಮ ಹಣಕ್ಕೆ ಭಾರೀ ಪ್ರಮಾಣದಲ್ಲಿ ಬಡ್ಡಿ ನೀಡುತ್ತೇವೆ ಹಾಗೂ ಹಣವನ್ನು ಡಬಲ್ ಮಾಡಿಕೊಡುತ್ತೇನೆ ಎಂದು ನಂಬಿಸಿದ್ದಾರೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಹಾಸನದ ಬೇಲೂರು ತಾಲೂಕಿನ 2 ಸಾವಿರ ಜನರಿಂದ ಹಣ ಪಡೆದಿದ್ದಾರೆ.

    ಹಣ ಡಬಲ್ ಆಗುತ್ತದೆ ಎಂಬ ಆಸೆಯಿಂದ ಕೆಲವರು ಲಕ್ಷಾಂತರ ರೂ.ವನ್ನು ಐ ಕಾಯಿನ್ ಕಂಪನಿಗೆ ನೀಡಿದ್ದರು. ಬಹಳ ದಿನಗಳಿಂದ ಈ ರೀತಿಯ ವ್ಯವಹಾರ ನಡೆಯುತ್ತಿತ್ತು. ಹೀಗಾಗಿ ನಾನು ಕೂಡ 1.35 ಲಕ್ಷ ರೂ. ನೀಡಿದ್ದೆ. ನನಗೆ 35 ಸಾವಿರ ರೂ. ಮರಳಿಸಿದ್ದು, ಉಳಿದ ಹಣವನ್ನು ಹಾಗೇ ಇಟ್ಟುಕೊಂಡಿದ್ದರು. ಈಗ ನೋಡಿದರೆ ಮೋಸ ಮಾಡಿ ಪರಾರಿಯಾಗಿದ್ದಾರೆ ಎಂದು ರುಕ್ಷನಾ ಬಾನು ಅಳಲು ತೋಡಿಕೊಂಡಿದ್ದಾರೆ.

    ವಂಚನೆಗೆ ಒಳಗಾದ ನೂರಾರು ಜನರು ಐ ಕಾಯಿನ್ ಕಂಪನಿ ಮುಂದೆ ಸೇರಿದ್ದು, ತಮ್ಮ ಹಣವನ್ನು ಮರಳಿ ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಮಗಳೂರು ಪೊಲೀಸರು, ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮಾಲೀಕ ಜೆಸಿಬಿ ತಂದಿದ್ದಕ್ಕೆ ಮಗಳ ಕುತ್ತಿಗೆಗೆ ಚಾಕು ಹಾಕಿದ್ಳು

    ಮಾಲೀಕ ಜೆಸಿಬಿ ತಂದಿದ್ದಕ್ಕೆ ಮಗಳ ಕುತ್ತಿಗೆಗೆ ಚಾಕು ಹಾಕಿದ್ಳು

    ಚಿಕ್ಕಮಗಳೂರು: ಜಾಗವನ್ನ ಕ್ಲೀನ್ ಮಾಡಿಸೋಕೆ ಮನೆ ಮಾಲೀಕ ಜೆಸಿಬಿ ತಂದಿದ್ದಕ್ಕೆ ಬಾಡಿಗೆ ಇದ್ದವಳು ನನಗೆ ಅನ್ಯಾಯ ಆಗುತ್ತಿದೆ, ನಾನು ನನ್ನ ಮಗಳು ಸಾಯುತ್ತೇವೆ ಎಂದು 5 ವರ್ಷದ ಮಗುವಿನ ಕುತ್ತಿಗೆಗೆ ತಾಯಿಯೇ ಚಾಕು ಇರಿದಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುತ್ತಿಕೊಪ್ಪದಲ್ಲಿ ನಡೆದಿದೆ.

    ಅನುಜೋಬಿ ಮಗಳಿಗೆ ಚಾಕು ಇರಿದ ತಾಯಿ. ಗ್ರಾಮದ ಸಯ್ಯದ್ ಶಫೀರ್ ಎಂಬವರ ಮನೆಯಲ್ಲಿ ಕೆಲ ವರ್ಷಗಳಿಂದ ಕೇರಳ ಮೂಲದ ಅನುಜೋಬಿ ವಾಸವಿದ್ದು, ಹೋಟೆಲ್ ನಡೆಸುತ್ತಿದ್ದಳು. ಬಾಡಿಗೆ ಸರಿಯಾಗಿ ನೀಡದ್ದಕ್ಕೆ ಮಾಲೀಕ ಖಾಲಿ ಮಾಡುವಂತೆ ಸೂಚಿಸಿದ್ದರು. ಅದಕ್ಕೆ ಕೋರ್ಟಿನಿಂದ ಇಂಜೆಕ್ಷನ್ ಆರ್ಡರ್ ಕೂಡ ತಂದಿದ್ದಳು. ಇದನ್ನೂ ಓದಿ: ಜ್ಯೋತಿಷಿ ಮಾತು ಕೇಳಿ ಒಂದೂವರೆ ತಿಂಗ್ಳ ಕಂದಮ್ಮನನ್ನ ಕೊಂದ ತಂದೆ

    ಕೋರ್ಟ್ ಅದೊಂದು ಮಳಿಗೆಗೆ ಮಾತ್ರ ಇಂಜೆಕ್ಷನ್ ಆರ್ಡರ್ ನೀಡಿತ್ತು. ಮಾಲೀಕ ಸಯ್ಯದ್ ಶಫೀರ್ ತನ್ನ ಪಕ್ಕದ ಜಾಗದಲ್ಲಿದ್ದ ಗಿಡಗಂಟೆಯನ್ನ ಕ್ಲೀನ್ ಮಾಡಲು ಜೆಸಿಬಿ ತರಿಸಿದ್ದಾರೆ. ಇದನ್ನು ನೋಡಿ ಆಕೆ ಆಕ್ರೋಶಗೊಂಡು ಮಾಡಿಸಬೇಡಿ ಎಂದು ರಂಪಾಟ ಮಾಡಿದ್ದಾಳೆ. ನಂತರ ಸಯ್ಯದ್ ಶಫೀರ್ ಪೊಲೀಸರಿಗೆ ದೂರು ನೀಡಿದ್ದಾರೆ.

    ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆಯೇ ಅನುಜೋಬಿ, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಐದು ವರ್ಷದ ಮಗುವಿನ ಕುತ್ತಿಗೆಗೆ ಇರಿದಿದ್ದಾಳೆ. ಕೂಡಲೇ ಸ್ಥಳೀಯರು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವ ಮಗುವಿನ ಕುತ್ತಿಗೆಗೆ ವೈದ್ಯರು ಮೂರು ಹೊಲಿಗೆ ಹಾಕಿದ್ದಾರೆ.

    ಬಾಡಿಗೆದಾರಳ ಕೂಗಾಟ, ಹಾರಾಟ, ರಂಪಾಟ ಕಂಡು ಪ್ರತಿ ವರ್ಷ ಕಂದಾಯ ಕಟ್ಟುವ ಮನೆ ಮಾಲೀಕ ಸಯ್ಯದ್ ಶಫೀರ್ ಕಂಗಾಲಾಗಿದ್ದರು. ಸದ್ಯಕ್ಕೆ ಅನುಜೋಬಿಯನ್ನ ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನದ ಬಳಿಕ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

  • ನಕ್ಸಲ್ ನೆಲೆಯನ್ನ ಬೆಳಕಿಗೆ ತಂದ ಚೀರಮ್ಮ ಇನ್ನಿಲ್ಲ

    ನಕ್ಸಲ್ ನೆಲೆಯನ್ನ ಬೆಳಕಿಗೆ ತಂದ ಚೀರಮ್ಮ ಇನ್ನಿಲ್ಲ

    ಚಿಕ್ಕಮಗಳೂರು: ನಕ್ಸಲ್ ನೆಲೆಯನ್ನು ಬೆಳಕಿಗೆ ತಂದಿದ್ದ ಶತಾಯುಷಿ ಚೀರಮ್ಮ ಅವರು ಕೊಪ್ಪ ತಾಲೂಕಿನ ಮೆಣಸಿನಹಾಡ್ಯದ ಜೇಡಿಹಟ್ಟಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

    ಚೀರಮ್ಮ ಅವರ ಮೂಲಕವೇ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಬೇರು ಬಿಡುತ್ತಿದೆ ಎನ್ನುವುದು ಗೊತ್ತಾಗಿದ್ದು. ಶೃಂಗೇರಿ ತಾಲೂಕು ಮೆಣಸಿನ ಹಾಡ್ಯದಲ್ಲಿ ಚೀರಮ್ಮ 2002ರ ಫೆಬ್ರವರಿ 10 ರಂದು ಸೌದೆ ತರಲು ತಮ್ಮ ಮನೆ ಹಿಂಬದಿಯ ಕಾಡಿಗೆ ಹೋಗಿದ್ದರು. ಈ ವೇಳೆ ತರಬೇತಿ ಪಡೆಯುತ್ತಿದ್ದ ನಕ್ಸಲರು ಹಾರಿಸಿದ ಗುಂಡು ಆಕಸ್ಮಿಕವಾಗಿ ಚೀರಮ್ಮ ಅವರಿಗೆ ತಗುಲಿತ್ತು.

    ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಚೀರಮ್ಮ ಕೂಳೆ ಚುಚ್ಚಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು, ಚೀರಮ್ಮ ಅವರ ಕಾಲಿನಲ್ಲಿ ಗುಂಡು ತಗುಲಿದೆ ಎಂದು ಖಚಿತಪಡಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಮೆಣಸಿನ ಹಾಡ್ಯದಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿರುವುದು ತಿಳಿದುಬಂದಿತ್ತು.

    ಈ ಮೂಲಕ ಜಿಲ್ಲೆಯ ಮೊದಲ ನಕ್ಸಲ್ ಪ್ರಕರಣ ಜಯಪುರ ಠಾಣೆಯಲ್ಲಿ ದಾಖಲಾಗಿದ್ದು ಇದೀಗ ಇತಿಹಾಸ. ಇದಕ್ಕೆ ಪರೋಕ್ಷವಾಗಿ ಕಾರಣಕರ್ತರಾಗಿದ್ದ 100 ವರ್ಷದ ಚೀರಮ್ಮ ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ. ಚೀರಮ್ಮ ಅವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಮಂಗಳವಾರ ಅಂತ್ಯಕ್ರಿಯೆ ನಡೆದಿದೆ.

  • ಜೋಕಾಲಿ ಆಡಲು ಹೋಗಿ ಬಾಲಕಿ ದುರ್ಮರಣ

    ಜೋಕಾಲಿ ಆಡಲು ಹೋಗಿ ಬಾಲಕಿ ದುರ್ಮರಣ

    ಚಿಕ್ಕಮಗಳೂರು: ಜೋಕಾಲಿ ಆಡಲು ಹೋಗಿ ಬಾಲಕಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ ನಡೆದಿದೆ.

    ನಿಸರ್ಗ (9) ಮೃತ ಬಾಲಕಿ. ನಿಸರ್ಗ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದಳು. ಸಂಜೆ ವೇಳೆ ಸೀರೆಯಲ್ಲಿ ಉಯ್ಯಾಲೆ ಕಟ್ಟಿಕೊಂಡು ಆಡುವಾಡುತ್ತಿದ್ದಳು.

    ಈ ವೇಳೆ ಬಾಲಕಿಯ ಕತ್ತಿಗೆ ಸೀರೆ ಸುತ್ತಿಕೊಂಡಿದೆ. ಪರಿಣಾಮ ನಿಸರ್ಗ ಕುತ್ತಿಗೆ ಬಿಗಿದು ಉಸಿರುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ತಕ್ಷಣ ಮನೆಯವರು ಸೀರೆ ಬಿಡಿಸಲು ಮುಂದಾಗಿದ್ದು, ಬಾಲಕಿಯನ್ನು ಕಾಪಾಡಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು.

    ಈ ಘಟನೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಡ್ರೋನ್ ಕಣ್ಣಲ್ಲಿ ಮುಳ್ಳಯ್ಯನಗಿರಿಯ ದೃಶ್ಯಕಾವ್ಯದ ಸೊಬಗನ್ನ ನೋಡಿ ಕಣ್ತುಂಬಿಕೊಳ್ಳಿ

    ಡ್ರೋನ್ ಕಣ್ಣಲ್ಲಿ ಮುಳ್ಳಯ್ಯನಗಿರಿಯ ದೃಶ್ಯಕಾವ್ಯದ ಸೊಬಗನ್ನ ನೋಡಿ ಕಣ್ತುಂಬಿಕೊಳ್ಳಿ

    ಚಿಕ್ಕಮಗಳೂರು: ಒಂದೇ ಬೆಟ್ಟ-ಗುಡ್ಡ ಆದರೆ ನೋಡೋ ಶೈಲಿ ಮಾತ್ರ ಹತ್ತಾರು. ಒಂದೇ ದಾರಿ, ಕೊಡೋ ಅನುಭವ ಭಿನ್ನ-ವಿಭಿನ್ನ. ಒಂದೇ ಪ್ರಕೃತಿ ಆದ್ರೆ, ಗೋಚರವಾಗೋ ರೀತಿ ನೂರಾರು. ಹೀಗೆ ಡ್ರೋನ್ ಕಣ್ಣಲ್ಲಿ ಸುಂದರ ಮುಳ್ಳಯ್ಯನಗಿರಿಯ ದೃಶ್ಯಕಾವ್ಯದ ಸೊಬಗನ್ನ ನೋಡಿದವರು ಎಷ್ಟು ಚಂದ ಪ್ರಕೃತಿಯ ಅಂದ ಎನ್ನುತ್ತಿದ್ದಾರೆ.

    ಹೌದು. ಭಾವನೆಗೆ ಬಿಟ್ಟಂತೆ ಲಕ್ಷಾಂತರ ಕಲ್ಪನೆಗಳು ಇವೆ. ಹೀಗೆ ನೋಡುಗನ ಕಲ್ಪನೆಗಳಿಗೆಲ್ಲಾ ಜೀವ ತುಂಬಿ, ಹಸಿರನ್ನೆ ಮೈದುಂಬಿಸಿಕೊಂಡು ತುಂಬು ಮುತ್ತೈದೆಯಂತೆ ಹಚ್ಚ-ಹಸಿರಿನಿಂದ ಕಂಗೊಳಿಸೋ ಕಾಫಿನಾಡಿನ ಪ್ರಕೃತಿ ಸೌಂದರ್ಯಕ್ಕೆ ಸರಿಸಾಟಿಯಾದದ್ದು ಮತ್ತೊಂದಿದ್ಯಾ ಅಂದರೆ, ಇದೆ ಅನ್ನೋರು ಯಾರೂ ಸಿಗಲ್ಲ. ಅದರಲ್ಲೂ, ಮಳೆಗಾಲದಲ್ಲಿ ಮಲೆನಾಡು ನವವಧುವಿನಂತೆ ನೈಸರ್ಗಿಕ ಸೊಬಗನ್ನೆ ಮುಡಿಯ ಮಲ್ಲಿಗೆಯನ್ನಾಗಿಸಿಕೊಂಡಂತೆ ಭಾಸವಾಗುತ್ತೆ.

    ಹೀಗೆ ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಕಾಫಿನಾಡಿನ ಮುಳ್ಯಯನಗಿರಿ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿಲ್ಲ, ಬದಲಾಗಿ ತನ್ನ ಸೌಂದರ್ಯದಿಂದಲೇ ಅವರನ್ನು ತನ್ನತ್ತ ಬರುವಂತೆ ಆಗ್ರಹಿಸುತ್ತಿದೆ. ಸಮುದ್ರಮಟ್ಟದಿಂದ 6 ಸಾವಿರ ಅಡಿಗೂ ಹೆಚ್ಚು ಎತ್ತರದಲ್ಲಿರೋ ಈ ಪರ್ವತದ ಸವಿಯನ್ನ ಸವಿಯಲು ಗಿರಿಗೆ ಪ್ರತಿನಿತ್ಯ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಸಮೃದ್ಧ ಮಳೆಯಿಂದ ಗಿರಿಶಿಖರಗಳಲ್ಲಿ ಹಸಿರು ಹಾಸಿದೆ. ಗಿಡ ಮರಗಳು ಚಿಗುರೊಡೆದು ಹಸಿರಿನಿಂದ ನಳನಳಿಸುತ್ತಿದ್ದರೆ, ಹಕ್ಕಿ-ಪಕ್ಷಿಗಳ ನಿನಾದ ಕೇಳೋರೆ ಪುಣ್ಯವಂತರು.

    ಅಂತಹಾ, ಅದ್ಭುತ, ಅನನ್ಯ ಪ್ರಕೃತಿಯ ಸೌಂದರ್ಯವನ್ನು ಹೇಳೋಕೆ ಪದ ಸಾಲದು. ಬರೆಯೋಕೆ ಪುಟ ಸಾಲದಂತ ಮುಳ್ಳಯ್ಯನಗಿರಿಯ ದೃಶ್ಯ ವೈಭವದ ಕಾವ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಕೃತಿಯ ನೈಜ ಚಿತ್ರಣಕ್ಕೆ ಸರಿಸಾಟಿ ಇಲ್ಲದಂತಾಗಿದೆ. ಈ ವೀಡಿಯೋ ನೋಡಿದವರು ನಿಜಕ್ಕೂ ನಿಸರ್ಗದ ಸುಂದರ ನೋಟಕ್ಕೆ ಮನ ಸೋತಿದ್ದಾರೆ.

  • ವಿನೂತನವಾಗಿ ನಿಶ್ಚಿತಾರ್ಥ ಮಾಡ್ಕೊಂಡ ಜೋಡಿ

    ವಿನೂತನವಾಗಿ ನಿಶ್ಚಿತಾರ್ಥ ಮಾಡ್ಕೊಂಡ ಜೋಡಿ

    ಚಿಕ್ಕಮಗಳೂರು: ಹೊಸ ಜೀವನಕ್ಕೆ ಕಾಲಿಡುತ್ತಿರುವ ವಧು-ವರರು ಉಂಗುರ, ಹೂವಿನ ಹಾರ ಹಾಕಿ ನಿಶ್ಚಿತಾರ್ಥ ಮಾಡಿಕೊಳ್ಳೋದು ಸಾಮಾನ್ಯವಾಗಿದೆ. ಆದರೆ ಜಿಲ್ಲೆಯಲ್ಲಿ ಜೋಡಿಯೊಂದು ಗಿಡ ನೆಡುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಚಿಕ್ಕಮಗಳೂರು ನಗರದ ಕಾವ್ಯ ಹಾಗೂ ರಂಜಿತ್ ಮಾವಿನ ಗಿಡ ನೆಡುವ ಮೂಲಕ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದಾರೆ. ಇವರು ಉಂಗುರ ಹಾಗೂ ಹಾರ ಬದಲಿಸಿಕೊಳ್ಳುವ ಬದಲು ಪರಿಸರ ಕಾಳಜಿ ಮೆರೆದು ಉಳಿದವರಿಗೂ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಉಪನಯನದಲ್ಲಿ ಸಿಹಿ ಬದಲಾಗಿ ಬೀಜದುಂಡೆ ನೀಡಿ ಪರಿಸರ ಕಾಳಜಿ ಮೆರೆದ ಕುಟುಂಬ

    ಕೇವಲ ಗಿಡ ನೆಡುವುದಲ್ಲದೇ ಮದುವೆ ದಿನಾಂಕ ನಿಗದಿಯಾಗಿ ತಾಳಿ ಕಟ್ಟುವ ಕೊನೆಯ ಘಳಿಗೆವರೆಗೂ ಗಿಡವನ್ನ ಸಂರಕ್ಷಿಸಿ, ಪೋಷಿಸುವ ಜವಾಬ್ಧಾರಿ ನವ ಜೋಡಿ ಹೊತ್ತಿರುವುದು ವಿಶೇಷವಾಗಿದೆ. ಗಿಡ ನೆಡುವ ಮೂಲಕ ಪರಿಸರ ಉಳಿಸಿ ಅಭಿಯಾನ ಆರಂಭಿಸುವ ಮೂಲಕ ಮದುವೆಗೂ ಮುನ್ನ ಈ ಜೋಡಿಗಳು ಪರಿಸರ ಜವಾಬ್ದಾರಿ ಮೆರೆದಿದ್ದಾರೆ.

    ಇತ್ತೀಚೆಗೆ ಮದುವೆಗೆ ಬಂದವರಿಗೆ ಉಡುಗೊರೆಯಾಗಿ ಗಿಡವನ್ನು ಕೊಡುವುದು ರೂಢಿಯಾಗಿದೆ. ಆದರೆ ಈ ಜೋಡಿ ಮದುವೆಗೂ ಮುನ್ನವೇ ಪರಿಸರದ ಬಗ್ಗೆ ಕಾಳಜಿ ಮೂಡಿಸುವಂತಹ ಕಾರ್ಯ ಮಾಡಿದ್ದಾರೆ.

  • ಕರಾವಳಿ, ಕಾಫಿನಾಡಿನಲ್ಲಿ ಮಳೆರಾಯನ ಆರ್ಭಟ

    ಕರಾವಳಿ, ಕಾಫಿನಾಡಿನಲ್ಲಿ ಮಳೆರಾಯನ ಆರ್ಭಟ

    ಕಾರವಾರ/ಉಡುಪಿ/ಚಿಕ್ಕಮಗಳೂರು: ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಇಂದು ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವೆಡೆ ಬಿರುಗಾಳಿ ಜೊತೆ ಮಳೆಯ ಆರ್ಭಟ ಪ್ರಾರಂಭವಾಗಿದೆ.

    ವಾಯುಭಾರ ಕುಸಿತ ಹಾಗೂ ಗಾಳಿಯ ಆರ್ಭಟಕ್ಕೆ ಅರಬ್ಬಿ ಸಮುದ್ರದಲ್ಲಿ ದೊಡ್ಡ ದೊಡ್ಡ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಹಾಗೆಯೇ ಉತ್ತರ ಕನ್ನಡದ ಹಲವೆಡೆ ಮಧ್ಯಾಹ್ನದಿಂದ ಮಳೆರಾಯನ ಆರ್ಭಟ ಜೋರಾಗಿದೆ. ಇತ್ತ ಕರಾವಳಿ ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆಯಿರುವ ಕಾರಣಕ್ಕೆ ಜಿಲ್ಲಾಡಳಿತ ಹಾಗೂ ಮೀನುಗಾರಿಕಾ ಇಲಾಖೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿ, ಕಟ್ಟೆಚ್ಚರ ವಹಿಸಲಾಗಿದೆ.

    ಅಷ್ಟೇ ಅಲ್ಲದೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಕೂಡ ಮಳೆರಾಯ ಆರ್ಭಟಿಸಿದ್ದಾನೆ. ಗುಡುಗು-ಸಿಡಿಲು ಸಹಿತ ವರುಣ ಸುರಿಯುತ್ತಿದ್ದಾನೆ. ಬಾಳೆಹೊನ್ನುರು, ಮೂಡಿಗೆರೆ, ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಬೆಳಗ್ಗಿನಿಂದಲೂ ಜಿಲ್ಲಾದ್ಯಂತ ಅಲ್ಲಲ್ಲೇ ತುಂತುರು ಮಳೆಯಾಗಿತ್ತು, ಆದರೆ ಸಂಜೆ ವೇಳೆಗೆ ಮಲೆನಾಡಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಇದರಿಂದ ಸದ್ಯ ಮಳೆಯಾಗುತ್ತಿರುವ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ.

    ಹಾಗೆಯೇ ಉಡುಪಿಯಲ್ಲಿ ಕೂಡ ಧಾರಾಕಾರ ಮಳೆಯಾಗಿದ್ದು ಮುಂಗಾರು ಮಳೆ ಪ್ರವೇಶದ ಮುನ್ಸೂಚನೆ ನೀಡಿದೆ. ಉಡುಪಿ, ಕಾಪು ತಾಲೂಕಿನ ಅಲ್ಲಲ್ಲಿ ಮಳೆಯಾಗಿದೆ. ಕುಂದಾಪುರ, ಬೈಂದೂರು ಕೆಲವೆಡೆ ತುಂತುರು ಮಳೆ ಸಿಂಚನವಾಗಿದೆ. ಇನ್ನೆರಡು ದಿನದಲ್ಲಿ ಭಾರೀ ಮಳೆ ನಿರೀಕ್ಷೆಯಿದ್ದು, ಜಿಲ್ಲೆಯಾದ್ಯಂತ ಕಾರ್ಮೋಡ ಆವರಿಸಿದ ವಾತಾವರಣ ನಿರ್ಮಾಣವಾಗಿದೆ.