Tag: Chikkamagaluru

  • ಮರಕ್ಕೆ ಟೊಯೋಟಾ ಡಿಕ್ಕಿ- ಮಂಜುನಾಥನ ದರ್ಶನ ಮಾಡಿ ಬರ್ತಿದ್ದ ಮೂವರ ದುರ್ಮರಣ

    ಮರಕ್ಕೆ ಟೊಯೋಟಾ ಡಿಕ್ಕಿ- ಮಂಜುನಾಥನ ದರ್ಶನ ಮಾಡಿ ಬರ್ತಿದ್ದ ಮೂವರ ದುರ್ಮರಣ

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಟೊಯೋಟಾ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು, ಮೂವರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಬಳಿ ನಡೆದಿದೆ.

    ಮಹೇಶ್, ನಾಗರಾಜ್ ಮತ್ತು ಸುರೇಶ್ ಮೃತ ದುರ್ದೈವಿಗಳು. ಮೃತರು ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ಮೂಲದವರು ಎಂದು ತಿಳಿದು ಬಂದಿದೆ. ಒಟ್ಟು ಆರು ಮಂದಿ ಟೊಯೋಟಾದಲ್ಲಿ ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಹೋಗಿದ್ದರು. ಮಂಜುನಾಥನ ದರ್ಶನ ಮುಗಿಸಿಕೊಂಡು ವಾಪಸ್ ಬಳ್ಳಾರಿ ಹೋಗುತ್ತಿದ್ದರು.

    ಇದೇ ವೇಳೆ ಉದ್ದೇಬೋರನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಟೊಯೋಟಾದಲ್ಲಿದ್ದ ಮಹೇಶ್, ನಾಗರಾಜ್ ಮತ್ತು ಸುರೇಶ್ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಮೂವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಚಿಕ್ಕಮಗಳೂರು ಜಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ಕುರಿತು ಕಡೂರು ತಾಲೂಕಿನ ಸಖರಾಯ ಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ.

  • ಜೀವ ಉಳಿಸಿಕೊಳ್ಳಲು ಇರುವೆಗಳ ಜೊತೆ ಬಾವಲಿ ಕಾಳಗ

    ಜೀವ ಉಳಿಸಿಕೊಳ್ಳಲು ಇರುವೆಗಳ ಜೊತೆ ಬಾವಲಿ ಕಾಳಗ

    ಚಿಕ್ಕಮಗಳೂರು: ಜೀವ ಉಳಿಸಿಕೊಳ್ಳಲು ಬಾವಲಿಯೊಂದು ಕೆಂಜಿಗ ಇರುವೆಗಳ ಜೊತೆ ಹೋರಾಟ ನಡೆಸಿದ ಘಟನೆಗೆ ಚಿಕ್ಕಮಗಳೂರಿನ ಪ್ರವಾಸಿ ಮಂದಿರ ಸಾಕ್ಷಿಯಾಗಿದೆ.

    ಆಹಾರದ ಅರಸಿ ಪ್ರವಾಸಿ ಮಂದಿರದ ಆವರಣಕ್ಕೆ ಬಂದಿದ್ದ ದೊಡ್ಡ ಗಾತ್ರದ ಬಾವಲಿ ಕೆಂಜಿಗಗಳ ಕೈಗೆ ಸಿಕ್ಕಿ ತಪ್ಪಿಸಿಕೊಳ್ಳಲು ಹೋರಾಡಿದೆ. ಮರವೊಂದರ ಕೆಳಗೆ ಕಂಡ ಕೆಂಜಿಗವನ್ನು ತಿನ್ನಲು ಬಂದ ಬಾವಲಿ ಅರಿವಿಲ್ಲದೆ ಕೆಂಜಿಗಗಳ ಗೂಡಿನ ಮೇಲೆ ಇಳಿದಿದೆ. ಒಂದೊಂದೇ ಕೆಂಜಿಗವನ್ನು ತಿನ್ನಲು ಪ್ರಾರಂಭಿಸುತ್ತಿದ್ದಂತೆ ರಾಶಿ-ರಾಶಿ ಪ್ರಮಾಣದ ಕೆಂಜಿಗ ಇರುವೆಗಳು ಬಾವಲಿಯನ್ನು ಸಂಪೂರ್ಣ ಮುತ್ತಿಕೊಂಡು ಕಚ್ಚಲು ಆರಂಭಿಸಿವೆ.

    ಹಾರಲು ಆಗದೆ, ತಪ್ಪಿಸಿಕೊಳ್ಳಲು ಆಗದ ಬಾವಲಿ ನೋವಿನಿಂದ ಸ್ಥಳದಲ್ಲೇ ಬಿದ್ದು ಒದ್ದಾಡಿದೆ. ಬಾವಲಿ ದೊಡ್ಡ ರೆಕ್ಕೆಗಳನ್ನು ಹರಡಿಕೊಂಡಿದ್ದರಿಂದ ಬೇರಿಗೆ ಸಿಕ್ಕಿಕೊಂಡು ತಪ್ಪಿಸಿಕೊಳ್ಳಲಾಗದೆ ವಿಫಲ ಹೋರಾಟ ನಡೆಸಿತ್ತು. ಆ ನೋವಿನ ಮಧ್ಯೆಯೂ ಬಾವಲಿ ಒಂದೊಂದೆ ಕೆಂಜಿಗವನ್ನು ತಿನ್ನಲು ಆರಂಭಿಸಿತು. ಆದರೆ ಕೆಂಜಿಗಗಳು ಕೂಡ ಮತ್ತೊಂದು ಕಡೆಯಿಂದ ಬಾವಲಿ ಮೇಲೆ ದಾಳಿ ಮಾಡಿದೆ.

    ಹಾಗೋ-ಹೀಗೋ ಕಷ್ಟಪಟ್ಟು ಮರ ಏರಲು ಪ್ರಾರಂಭಿಸಿದ ಬಾವುಲಿ ನೋವಿನಿಂದ ನಿಂತ್ರಾಣಗೊಂಡು ಮತ್ತದೇ ಕೆಂಜಿಗಗಳ ಗೂಡಿನ ಮೇಲೆ ಬಿದ್ದಿತ್ತು. ಸಾಮಾನ್ಯವಾಗಿ ರಾತ್ರಿ ಪಾಳಯದಲ್ಲಿ ಆಹಾರ ಸೇವನೆ ಮಾಡೋ ಬಾವಲಿಗಳು ಹಗಲಲ್ಲೇ ಆಹಾರ ಹುಡಿಕಿಕೊಂಡು ಬಂದು ಕೆಂಜಿಗಗಳನ್ನ ತಿನ್ನುತ್ತಿರುವುದು ವಿಶೇಷವಾಗಿದೆ.

  • ಭೂಮಿ ಒಳಗೆ-ಹೊರಗೆ ಹೆಚ್ಚಿದ ತೇವಾಂಶ, ರಸ್ತೆಗೆ ಬರ್ತಿವೆ ಹೆಬ್ಬಾವು

    ಭೂಮಿ ಒಳಗೆ-ಹೊರಗೆ ಹೆಚ್ಚಿದ ತೇವಾಂಶ, ರಸ್ತೆಗೆ ಬರ್ತಿವೆ ಹೆಬ್ಬಾವು

    ಚಿಕ್ಕಮಗಳೂರು: ಭೂಮಿಯ ಒಳಗೆ ಹಾಗೂ ಹೊರಗೆ ತೇವಾಂಶ ಹೆಚ್ಚುತ್ತಿರುವುದರಿಂದ ಕಾಳಿಂಗ ಸರ್ಪ, ಹೆಬ್ಬಾವಿನಂತ ಸರಿಸೃಪಗಳು ರಸ್ತೆ, ಮನೆ, ಕೊಟ್ಟಿಗೆಗಳಿಗೆ ಬರುತ್ತಿರುವುದರಿಂದ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ.

    ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಯತೇಚ್ಛವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಭೂಮಿ ಸಾಕಷ್ಟು ತೇವಗೊಂಡಿದ್ದು, ಬೆಚ್ಚಗಿದ್ದ ಹಾವುಗಳು ಜನಸಾಮಾನ್ಯರಂತೆ ರಸ್ತೆಗಳಿಯುತ್ತಿವೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿಯ ನಾಲ್ಕನೇ ತಿರುವಿನಲ್ಲಿ ಧೈತ್ಯ ಹೆಬ್ಬಾವೊಂದು ಸೇತುವೆ ಹತ್ತಿಳಿದು ರಸ್ತೆಗೆ ಬರಲು ಯತ್ನಿಸುತ್ತಿರುವ ಫೋಟೋವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಮಲೆನಾಡಿಗರು ಇಷ್ಟು ಗಾತ್ರದ ಹಾಗೂ ಈ ರೀತಿಯ ಹೆಬ್ಬಾವನ್ನು ಕಂಡಿರುವುದು ತೀರಾ ವಿರಳ. ಚಾರ್ಮಾಡಿ ಸಂಪೂರ್ಣ ಅರಣ್ಯದಿಂದ ಕೂಡಿದೆ. ನೂರಾರು ಜಾತಿಯ ಪ್ರಾಣಿ-ಪಕ್ಷಿ, ಸರಿಸೃಪಗಳ ಆವಾಸ ಸ್ಥಾನವಾಗಿದೆ. ನಿರಂತರ ಮಳೆಯಿಂದ ನೀರು ಹೆಚ್ಚಾಗಿ ಹರಿಯುತ್ತಿರುವುದರಿಂದ ಉರಗಗಳು ರಸ್ತೆ ಹಾಗೂ ನಗರಕ್ಕೆ ಬಂದು ವಾಸಕ್ಕೆ ಸೂಕ್ತ ಪ್ರದೇಶ ಹುಡುಕುವುದು ಸರ್ವೇ ಸಾಮಾನ್ಯವಾಗಿದೆ.

    ಚಾರ್ಮಾಡಿಯ 4ನೇ ತಿರುವಿನಲ್ಲಿ ಕಂಡ ಈ ಹೆಬ್ಬಾವು ಸೇತುವೆ ಮೇಲಿಂದ ಇಳಿಯುತ್ತಿರುವ ದೃಶ್ಯವೂ ಅದ್ಭುತವಾಗಿದೆ. ಅಷ್ಟೇ ಅಲ್ಲದೆ ಮಳೆಯಿಂದ ತೊಯ್ದಿರುವ ಹೆಬ್ಬಾವು ಫಳ-ಫಳನೇ ಹೊಳೆಯುತ್ತಿರುವುದು ನೋಡುಗರಿಗೆ ಆಶ್ಚರ್ಯ ಹಾಗೂ ಭಯದ ಜೊತೆ ಖುಷಿ ತಂದಿದೆ.

  • ಸರ್ಕಾರ ಉಳಿಸಲು ದೇವರ ಮೊರೆ ಹೋದ ರೇವಣ್ಣ

    ಸರ್ಕಾರ ಉಳಿಸಲು ದೇವರ ಮೊರೆ ಹೋದ ರೇವಣ್ಣ

    ಚಿಕ್ಕಮಗಳೂರು: ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಸಿಎಂ ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಇತ್ತ ಸರ್ಕಾರ ಉಳಿಸಲು ರೇವಣ್ಣ ದೇವರ ಮೊರೆ ಹೋಗಿದ್ದಾರೆ.

    ಇಂದು ಬೆಳಗ್ಗೆಯೇ ರೇವಣ್ಣ ಶೃಂಗೇರಿ ದೇವಾಲಯಕ್ಕೆ ಹೋಗಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಾರದಾಂಬೆ ದೇವೇಗೌಡರ ಕುಟುಂಬದ ಇಷ್ಟದ ದೇವರಾಗಿದ್ದು, ಹೀಗಾಗಿ ಒಂದೇ ವಾರದಲ್ಲಿ ಎರಡು ಬಾರಿ ಶೃಂಗೇರಿಗೆ ರೇವಣ್ಣ ಬಂದು ಪೂಜೆ ಸಲ್ಲಿಸಿದ್ದಾರೆ.

    ಈ ಹಿಂದೆ ದೇವೇಗೌಡರು ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ನಡೆಸಿದ್ದರು. ನಂತರ ಸರ್ಕಾರಕ್ಕೆ ಸಂಚಕಾರ ಬಂದಾಗ ದೇವೇಗೌಡರು ಒಂದೊಂದು ಯಾಗ ನಡೆಸಿದ್ದರು. ಅಷ್ಟೇ ಅಲ್ಲದೇ ಸಿಎಂ ಕೂಡ ತಮ್ಮ ಕುರ್ಚಿ ಉಳಿವಿಗಾಗಿ ಶೃಂಗೇರಿಯಲ್ಲಿ ಮೂರ್ನಾಲ್ಕು ಯಾಗ ಮಾಡಿಸಿದ್ದರು. ಇಂದು ರೇವಣ್ಣ ಮತ್ತೆ ಶಾರದಾಂಬೆ ದರ್ಶನ ಪಡೆದು ವಿಶೇಷ ಪೂಜೆ ಮಾಡಿಸಿದ್ದಾರೆ.

    ವಿಧಾನ ಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಬಿ ಫಾರಂಗಳನ್ನು ಶೃಂಗೇರಿಗೆ ತಂದು ಪೂಜೆ ಮಾಡಿ ಬಳಿಕ ನಾಮಪತ್ರ ಸಲ್ಲಿಸಲಾಗಿತ್ತು.

    ಇತ್ತ ಮಾಜಿ ಪ್ರಧಾನಿ ದೇವೇಗೌಡರು ಕೂಡ ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೋಗಿದ್ದಾರೆ. ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಈಶ್ವರನ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಪದ್ಮನಾಭ ನಗರದ ಮನೆಯಿಂದ ಹೋಗಿ ಪೂಜೆ ಮಾಡಿಸಿ ಬಂದಿದ್ದರು.

  • ಮಲೆನಾಡಲ್ಲಿ ಭಾರೀ ಮಳೆ – ಮೂಡಿಗೆರೆ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ

    ಮಲೆನಾಡಲ್ಲಿ ಭಾರೀ ಮಳೆ – ಮೂಡಿಗೆರೆ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ

    ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಳೆದ 24 ಗಂಟೆ ಸಮಯದಿಂದ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ಘೋಷಣೆ ಮಾಡಲಾಗಿದೆ.

    ಮೂಡಿಗೆರೆಯಲ್ಲಿ ಗುರುವಾರ ಹಾಗೂ ಶುಕ್ರವಾರ ಭಾರೀ ಮಳೆಯಾಗಿತ್ತು. ಪರಿಣಾಮ ಹೇಮಾವತಿ ಮೈದುಂಬಿ ಹರಿಯುತ್ತಿದೆ. ಇತ್ತ ತಾಲೂಕಿನಾದ್ಯಂತ ಗದ್ದೆ-ತೋಟಗಳು ಜಲಾವೃತವಾಗಿದ್ದು, ಮುಂಜಾಗ್ರತ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ. ಮೂಡಿಗೆರೆ ತಾಲೂಕು ಅಧಿಕಾರಿ ರಜೆ ಘೋಷಣೆ ಮಾಡಿದ್ದಾರೆ. ಮಳೆಯಿಂದ ಮುನ್ನೆಚ್ಛರಿಕೆಯ ಕ್ರಮವಾಗಿ ರಜೆ ನೀಡಲಾಗಿದೆ.

    ಇತ್ತ ಕಾವೇರಿ ಜಲಾನಯನ ಪ್ರದೇಶ ಮಡಿಕೇರಿಯ ಭಾಗಮಂಡಲದಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಕಳೆದ ವರ್ಷದ ಜಲಪ್ರವಾಹದಿಂದ ಆತಂಕ ಈಗಲೂ ಜನರ ಮನದಲ್ಲಿ ಮನೆ ಮಾಡಿದೆ. ಅದರಲ್ಲೂ ಮಡಿಕೇರಿ – ಮಂಗಳೂರು ಹೆದ್ದಾರಿಯ ಮದೆನಾಡು ಬಳಿ ದುರಸ್ತಿ ಮಾಡಿದ್ದರೂ ಬಿರುಕು ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಚರಿಸಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದಾರೆ. ಚಿಕ್ಕಮಗಳೂರು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿ, ಹೊರಟ್ಟಿ, ಕೊಟ್ಟಿಗೆಹಾರ, ಜಾಣಿಗೆ, ಗೋಣಿಬೀಡುವಿನಲ್ಲಿ ಹೊಲ-ಗದ್ದೆ, ಕಾಫಿ ತೋಟಗಳು ಜಲಾವೃತಗೊಂಡಿವೆ.

    ಭಾರೀ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳ ರಭಸವೂ ಹೆಚ್ಚಿದೆ. ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಕಾರವಾರ ನಗರದ ಅರಗಾದಲ್ಲಿರುವ ಕದಂಬ ನೌಕಾನೆಲೆ ಭಾಗದ ಹತ್ತು ಎಕರೆಗೂ ಹೆಚ್ಚು ಪ್ರದೇಶಗಳ ಜಲಾವೃತವಾಗಿದೆ. ಇತ್ತ ಬೆಂಗಳೂರಿನಲ್ಲೂ ಇಂದು ಸಂಜೆ ವೇಳೆಗೆ ವರುಣನ ಸಿಂಚನವಾಯ್ತು. ಮುಂದಿನ 4 ದಿನಗಳ ಕಾಲ ಮಳೆ ಆಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.

  • ಧಾರಾಕಾರ ಮಳೆ- ತೋಟಗಳು ಜಲಾವೃತ, ಮೈದುಂಬಿ ಹರೀತಿವೆ ನದಿಗಳು

    ಧಾರಾಕಾರ ಮಳೆ- ತೋಟಗಳು ಜಲಾವೃತ, ಮೈದುಂಬಿ ಹರೀತಿವೆ ನದಿಗಳು

    ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ತೋಟಗಳು ಜಲಾವೃತವಾಗಿ ನದಿಗಳು ಮೈ ದುಂಬಿ ಹರಿಯುತ್ತಿವೆ.

    ಮೂಡಿಗೆರೆ ತಾಲೂಕಿನಾದ್ಯಂತ ಗುರುವಾರದಿಂದ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಹೊಲ-ಗದ್ದೆ, ಕಾಫಿ ತೋಟಗಳು ಜಲಾವೃತಗೊಂಡಿವೆ. ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿ, ಹೊರಟ್ಟಿ, ಕೊಟ್ಟಿಗೆಹಾರ, ಜಾಣಿಗೆ, ಗೋಣಿಬೀಡು ಸೇರಿದಂತೆ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ.

    ಜಾಣಿಗೆ ಗ್ರಾಮದ ಹೇಮಾವತಿ ಸೇರುವ ಹುಕ್ಕೇರಿ ಹಳ್ಳದ ನೀರು ಅಕ್ಕಪಕ್ಕದ ತೋಟಗಳಿಗೆ ನುಗ್ಗಿದ್ದು, ತೋಟಗಳ ಮಧ್ಯೆ ಅಡಿ ಎತ್ತರದಲ್ಲಿ ನೀರು ನಿಂತಿದೆ. ಮೂಲರಹಳ್ಳಿಯಲ್ಲಿ ಭಾರೀ ಮಳೆಯಿಂದ ಗ್ರಾಮೀಣ ಭಾಗದ ರಸ್ತೆ ಕೂಡ ಕುಸಿದಿದೆ. ಪಶ್ಚಿಮಘಟ್ಟಗಳ ಸಾಲಲ್ಲೂ ಮೃಗಶೀರ ಮಳೆ ಅಬ್ಬರಕ್ಕೆ ಜೀವ ನದಿಗಳಾದ ತುಂಗಾ, ಭದ್ರಾ, ಹೇಮಾವತಿ ನದಿಗಳು ಕೂಡ ತಮ್ಮ ವೇಗವನ್ನ ಹೆಚ್ಚಿಸಿಕೊಂಡಿವೆ. ಎನ್.ಆರ್.ಪುರ, ಶೃಂಗೇರಿ, ಕೊಪ್ಪ ಸೇರಿದಂತೆ ದಟ್ಟ ಕಾನನದ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಲೆನಾಡಿಗರು ಸಂತಸದಿಂದಿದ್ದಾರೆ.

    ಇತ್ತ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆ ಮುಂದುವರಿದಿದ್ದು, ಬ್ರಹ್ಮಗಿರಿ ಬೆಟ್ಟದ ಶ್ರೇಣಿಯಲ್ಲಿ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಕನ್ನಿಕೆ ಸುಜೋತಿ ಮೈದುಂಬಿ ಹರಿಯುತ್ತಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಏರುತ್ತಿದೆ. ಒಂದು ವೇಳೆ ಮಳೆ ಇದೇ ರೀತಿ ಮುಂದುವರಿದಲ್ಲಿ ಎರಡು ದಿನದಲ್ಲಿ ಸಂಗಮ ಭರ್ತಿಯಾಗುವ ಸಾಧ್ಯತೆ ಇದೆ.

  • 50 ಅಡಿ ಬಂಡೆ ಮೇಲಿಂದ ಬಿದ್ದು ಗಂಡಾನೆ ಸಾವು

    50 ಅಡಿ ಬಂಡೆ ಮೇಲಿಂದ ಬಿದ್ದು ಗಂಡಾನೆ ಸಾವು

    ಚಿಕ್ಕಮಗಳೂರು: ಗಂಡಾನೆಯೊಂದು 50 ಅಡಿ ಬಂಡೆ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ಬಾಳೆಹೊನ್ನೂರು ಸಮೀಪದ ಹ್ಯಾರಂಬಿ ಗ್ರಾಮದಲ್ಲಿ ನಡೆದಿದೆ.

    ಭದ್ರಾ ವನ್ಯಜೀವಿ ಅರಣ್ಯದಿಂದ 2 ಕಾಡಾನೆಗಳು ಹೊರಬಂದಿದ್ದವು. ಅವುಗಳು ಕಳೆದ ವಾರದಿಂದ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸುತ್ತಮುತ್ತಲಿನ ಕಾಫಿ ತೋಟವನ್ನು ಹಾಳು ಮಾಡುತ್ತಿದ್ದವು. ಈ ಸಂಬಂಧ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

    ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ವನ್ಯಜೀವಿ ವಿಭಾಗದ ಸಿಬ್ಬಂದಿ ಆನೆಗಳನ್ನು ಕಾಡಿಗೆ ಅಟ್ಟಲು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬಂಡೆಯ ಮೇಲೆ ಓಡುತ್ತಿದ್ದ ಸುಮಾರು 50 ವರ್ಷದ ಗಂಡಾನೆ ಕಾಲು ಜಾರಿ ಕೆಳಗೆ ಬಿದ್ದಿದೆ. 50 ಅಡಿ ಬಂಡೆಯ ಮೇಲಿಂದ ಬಿದ್ದ ಪರಿಣಾಮ ಗಂಭೀರ ಗಾಯಗಳಿಂದ ನಿತ್ರಾಣಗೊಂಡು ಸಾವನ್ನಪ್ಪಿದೆ.

    ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆನೆಯ ಸಾವಿಗೆ ಸ್ಥಳೀಯರು ಮರುಕ ವ್ಯಕ್ತಪಡಿಸಿದ್ದಾರೆ.

  • ಮೈದುಂಬಿ ಹರಿಯುತ್ತಿದೆ ತುಂಗ-ಭದ್ರಾ, ಹೆಬ್ಬಾಳೆ ಸೇತುವೆ ಮುಳುಗಡೆಗೆ 4 ಅಡಿ ಬಾಕಿ

    ಮೈದುಂಬಿ ಹರಿಯುತ್ತಿದೆ ತುಂಗ-ಭದ್ರಾ, ಹೆಬ್ಬಾಳೆ ಸೇತುವೆ ಮುಳುಗಡೆಗೆ 4 ಅಡಿ ಬಾಕಿ

    ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಮಲೆನಾಡಿನ ಜೀವನದಿಗಳಾದ ತುಂಗ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

    ಜಿಲ್ಲೆಯ ಕುದುರೆಮುಖ, ಕೊಪ್ಪ, ಶೃಂಗೇರಿ, ಕಳಸ, ಸಂಸೆ, ಬಾಳೆಹೊಳೆ, ಬಸ್ರಿಕಟ್ಟೆ ಹಾಗೂ ತನಿಕೋಡು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ತುಂಗಾ-ಭದ್ರ ನದಿಗಳು ಮೈದುಂಬಿ ಹರಿಯುತ್ತಿವೆ. ಪಶ್ಚಿಮ ಘಟ್ಟದ ಸಾಲಿನಲ್ಲಿ ಕಳೆದ 3 ದಿನಗಳಿಂದ ಮುಂಗಾರು ಚುರುಕಾಗಿರುವ ಹಿನ್ನೆಲೆ ನದಿಗಳ ಒಳಹರಿವಿನ ಪ್ರಮಾಣದಲ್ಲೂ ಭಾರೀ ಏರಿಕೆಯಾಗಿದೆ.

    ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಪರ್ಕದ ಕೊಂಡಿಯಾಗಿರುವ ಹೆಬ್ಬಾಳೆ ಸೇತುವೆ ಮುಳುಗುವ ಹಂತದಲ್ಲಿದ್ದು, ನದಿ ನೀರು ಸೇತುವೆಯನ್ನು ಮುಳುಗಿಸಲು ಕೇವಲ ನಾಲ್ಕು ಅಡಿಯಷ್ಟೇ ಬಾಕಿ ಇದೆ. ಒಂದು ವೇಳೆ ಸೇತುವೆ ಮುಳುಗಡೆಯಾದರೆ ಕಳಸ ಹಾಗೂ ಹೊರನಾಡಿನ ಸಂಪರ್ಕ ಕಡಿತಗೊಳ್ಳಲಿದೆ.

    ಕಳೆದ 3 ದಿನಗಳಿಂದ ಮಲೆನಾಡಲ್ಲಿ ಮುಂಗಾರು ಚುರುಕಾಗಿರುವುದರಿಂದ ರೈತರು ಹಾಗೂ ಜನಸಾಮಾನ್ಯರ ಮೊಗದಲ್ಲಿ ಸಂತಸ ಮೂಡಿಸಿದೆ. ಈ ಬಾರಿ ಜೂನ್ ತಿಂಗಳ ಮುಂಗಾರು ಕೈಕೊಟ್ಟ ಕಾರಣಕ್ಕೆ ರೈತಾಪಿ ವರ್ಗ ಕಂಗಾಲಾಗಿ ಕುಳಿತಿತ್ತು. ಆದರೆ ಜುಲೈ ಆರಂಭದಲ್ಲಿ ಮಳೆರಾಯ ಆಗಮಿಸಿ ರೈತರ ಆತಂಕವನ್ನು ಕೊಂಚ ದೂರ ಮಾಡಿದ್ದಾನೆ. ಹೀಗಾಗಿ ಸದ್ಯ ಮಲೆನಾಡಿನಲ್ಲಿ ಚುರುಕುಗೊಂಡಿರುವ ಮಳೆಯನ್ನೇ ನಂಬಿ ಕೃಷಿ ಕಾರ್ಯವನ್ನು ಆರಂಭಿಸಿಸಲು ರೈತರು ನಿರ್ಧರಿಸಿದ್ದಾರೆ.

    ಈ ಭಾರಿ ಮಳೆಯ ಅಭಾವ ಎಷ್ಟರಮಟ್ಟಿಗೆ ಕಾಡಿತ್ತು ಎಂದರೆ ಮಲೆನಾಡಿನಲ್ಲೂ ನೀರಿಗಾಗಿ ಹಾಹಾಕಾರ ಎದುರಾಗಿತ್ತು. ಜನ ಜಾನುವಾರುಗಳಿಗೆ ಸರಿಯಾಗಿ ಕುಡಿಯುವ ನೀರು ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಸದ್ಯ ಮಲೆನಾಡು ಹಾಗೂ ಕಾಫಿನಾಡಿನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದು ಖುಷಿಯ ಸಂಗತಿಯಾಗಿದೆ.

  • ಸಿರಿಮನೆ ಜಲಪಾತದಲ್ಲಿ ಅಸಭ್ಯ ವರ್ತನೆ – ಯುವಕರಿಗೆ ಗೂಸಾ, ಯುವತಿಯರಿಗೆ ಕ್ಲಾಸ್

    ಸಿರಿಮನೆ ಜಲಪಾತದಲ್ಲಿ ಅಸಭ್ಯ ವರ್ತನೆ – ಯುವಕರಿಗೆ ಗೂಸಾ, ಯುವತಿಯರಿಗೆ ಕ್ಲಾಸ್

    ಚಿಕ್ಕಮಗಳೂರು: ಫಾಲ್ಸ್ ಬಳಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಮಂಗಳೂರು ಮೂಲದ ಯುವಕರಿಗೆ ಗೂಸ ಕೊಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತದ ಬಳಿ ನಡೆದಿದೆ.

    ಪ್ರವಾಸಕ್ಕೆ ಎಂದು ಮಂಗಳೂರಿನಿಂದ ಯುವಕ ಹಾಗೂ ಯುವತಿಯರು ಸಿರಿಮನೆ ಫಾಲ್ಸ್ ಗೆ ಬಂದಿದ್ದರು. ಈ ವೇಳೆ ಜಲಪಾತದಲ್ಲಿ ಸ್ನಾನ ಮಾಡುವಾಗ ಯುವಕ- ಯುವತಿಯರು ಅಸಭ್ಯವಾಗಿ ವರ್ತಿಸಿದ್ದಾರೆ. ಇವರು ಅಸಭ್ಯವಾಗಿ ವರ್ತಿಸುತ್ತಿರುವುದು ನೋಡಿ ಸ್ಥಳೀಯರು ಮುಜುಗರಗೊಂಡಿದ್ದಾರೆ.

    ಇವರ ವರ್ತನೆ ಮಿತಿ ಮೀರುತ್ತಿದ್ದಂತೆ ಸ್ಥಳೀಯ ಯುವಕರು ಮಂಗಳೂರು ಮೂಲದ ಪ್ರವಾಸಿಗರಿಗೆ ಗೂಸಾ ನೀಡಿದ್ದಾರೆ. ಯುವಕರ ಜೊತೆ ಪ್ರವಾಸಕ್ಕೆ ಬಂದಿದ್ದ ಯುವತಿಯರಿಗೂ ಸ್ಥಳೀಯರು ಎಲ್ಲರೂ ಸೇರಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಈ ಘಟನೆಯಾದ ಬಳಿಕ ಸ್ಥಳೀಯರು ಯುವಕ- ಯುವತಿಯರನ್ನು ಬೇರೆ ಬೇರೆಯಾಗಿ ಕಳುಹಿಸಿದ್ದಾರೆ.

  • ಸೆಲ್ಫಿ ತೆಗೆಯಲು ಹೋಗಿ 100 ಅಡಿ ಎತ್ತರದಿಂದ ಬಿದ್ದ ಯುವಕ – ಮೈ ನಡುಗಿಸುವ ದೃಶ್ಯ

    ಸೆಲ್ಫಿ ತೆಗೆಯಲು ಹೋಗಿ 100 ಅಡಿ ಎತ್ತರದಿಂದ ಬಿದ್ದ ಯುವಕ – ಮೈ ನಡುಗಿಸುವ ದೃಶ್ಯ

    ಚಿಕ್ಕಮಗಳೂರು: ಫಾಲ್ಸ್ ಬಳಿ ಸೆಲ್ಫಿ ತೆಗೆಯುವ ಸಂದರ್ಭದಲ್ಲಿ ಯುವಕ ಕಾಲು ಜಾರಿ ಸುಮಾರು 100 ಅಡಿ ಎತ್ತರದಿಂದ ಬಿದ್ದ ಘಟನೆ ಬಳಿಯ ಚಿಕ್ಕಮಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ.

    ಚಿತ್ರದುರ್ಗ ಮೂಲದ ಯುವಕ ಘಟನೆಯಲ್ಲಿ ಗಾಯಗೊಂಡಿದ್ದಾನೆ ಎಂಬ ಮಾಹಿತಿ ಲಭಿಸಿದ್ದು, ಯುವಕನ ತಲೆ, ಕೈ ಕಾಲು, ಸೊಂಟಕ್ಕೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಘಟನೆ ಬಗ್ಗೆ ಮಾಹಿತಿ ಪಡೆದ ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಜಲಪಾತವೊಂದರ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಈ ಘಟನೆ ನಡೆದಿದೆ. ಪ್ರವಾಸದ ನಿಮಿತ್ತ ಸ್ನೇಹಿತರ ತಂಡ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಭಾಗದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದರಿಂದ ಆನೇಕ ಸ್ಥಳಗಳಲ್ಲಿ ನೀರಿನ ಝರಿ ನಿರ್ಮಾಣವಾಗಿದ್ದು, ಪ್ರಕೃತಿ ಸೌಂದರ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲು ಯತ್ನಿಸಿದ ವೇಳೆ ಘಟನೆ ನಡೆದಿದೆ. ಏಕಾಏಕಿ ಯುವಕ ಮೇಲಿಂದ ಕೆಳಗೆ ಬೀಳುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.