Tag: Chikkamagaluru

  • ನೋಡ ನೋಡುತ್ತಿದ್ದಂತೆ ಹೇಮಾವತಿಯಲ್ಲಿ ಕೊಚ್ಚಿ ಹೋದ ಯುವಕ

    ನೋಡ ನೋಡುತ್ತಿದ್ದಂತೆ ಹೇಮಾವತಿಯಲ್ಲಿ ಕೊಚ್ಚಿ ಹೋದ ಯುವಕ

    – ಹಾಸನದಲ್ಲಿ ಶಾಲಾ ಕಾಲೇಜುಗಳಿಗೆ ರಜೆ

    ಚಿಕ್ಕಮಗಳೂರು/ಹಾಸನ: ನೋಡ ನೋಡುತ್ತಿದ್ದಂತೆ ಹೇಮಾವತಿ ನದಿಯಲ್ಲಿ ಯುವಕನೊಬ್ಬ ಕೊಚ್ಚಿ ಹೋದ ಘಟನೆ ಮೂಡಿಗೆರೆ ತಾಲೂಕಿನ ಆಲೂರಿನಲ್ಲಿ ನಡೆದಿದೆ.

    ಮೂಡಿಗೆರೆ ತಾಲೂಕು ಆಲೂರಿನ ಗ್ರಾಮದ ಶ್ರೀವತ್ಸ (22) ನದಿಯಲ್ಲಿ ಕೊಚ್ಚಿ ಹೋದ ಯುವಕ. ಜಮೀನಿಗೆ ಹೋಗಿದ್ದಾಗ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಶ್ರೀವತ್ಸ ಕಳೆದ ನಾಲ್ಕೈದು ದಿನಗಳಿಂದ ಗದ್ದೆಯನ್ನು ಹದ ಮಾಡುತ್ತಿದ್ದ. ಹೀಗಾಗಿ ಟ್ರ್ಯಾಕ್ಟರ್ ಮಾತ್ರ ಮನೆಗೆ ತಂದು, ಕಲ್ಟಿವೇಟರ್ ಅನ್ನು ಜಮೀನಿನಲ್ಲಿ ಬಿಟ್ಟು ಬಂದಿದ್ದ. ಆದರೆ ಭಾರೀ ಮಳೆಯಿಂದಾಗಿ ಹೇಮಾವತಿ ನದಿ ತುಂಬಿ ಹರಿಯುತ್ತಿದ್ದರಿಂದ ಕಲ್ಟಿವೇಟರ್ ನದಿಗೆ ಕೊಚ್ಚಿಕೊಂಡು ಹೋಯಿತಾ ಅಂತ ನೋಡಿಕೊಂಡು ಬರಲು ಶ್ರೀವತ್ಸ ಇಂದು ಜಮೀನಿಗೆ ಹೋಗಿದ್ದ. ಈ ವೇಳೆ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ.

    ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಹಾಸನ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದ್ದು, ಸಕಲೇಶಪುರ ತಾಲೂಕು, ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಗುರುವಾರ ರಜೆ ಘೋಷಿಸಿದ್ದಾರೆ.

    ಚನ್ನರಾಯಪಟ್ಟಣ, ಅರಸೀಕೆರೆ ತಾಲೂಕು ಹೊರತುಪಡಿಸಿ ಉಳಿದ ಐದು ತಾಲೂಕಿನ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ನೀಡಲಾಗಿತ್ತು. ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಕಲೇಶಪುರ ಹಾಗೂ ಅರೇಹಳ್ಳಿ ಹೋಬಳಿ ಶಾಲಾ-ಕಾಲೇಜಿಗೂ ನಾಳೆ ರಜೆ ನೀಡಲಾಗಿದೆ.

  • ವರುಣನ ರೌದ್ರನರ್ತನ- ಮಳೆಗೆ ಕುಸಿದು ಬೀಳುತ್ತಿದೆ ಗುಡ್ಡ, ಮನೆಗಳು

    ವರುಣನ ರೌದ್ರನರ್ತನ- ಮಳೆಗೆ ಕುಸಿದು ಬೀಳುತ್ತಿದೆ ಗುಡ್ಡ, ಮನೆಗಳು

    – ರಾಜ್ಯದ ಎಲ್ಲೆಲ್ಲಿ ಏನೇನಾಗಿದೆ..?

    ಬೆಂಗಳೂರು: ರಾಜ್ಯದಲ್ಲಿ ಮಳೆರಾಯನ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಒಂದೆಡೆ ಪ್ರವಾಹವಾದರೆ, ಇನ್ನೊಂದೆಡೆ ಗುಡ್ಡ, ಮನೆ, ವಿದ್ಯುತ್ ಕಂಬಗಳು ಕುಸಿದು ಬೀಳುತ್ತಿದ್ದು ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.

    ಚಿಕ್ಕಮಗಳೂರು, ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ ಯಾದಗಿರಿ, ಮಡಿಕೇರಿ, ಕೊಡಗು, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣನ ರೌದ್ರನರ್ತನಕ್ಕೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಾರ್ಮಾಡಿ ಘಾಟ್ ಹಾಗೂ ಚೋರ್ಲಾ ಘಾಟಿನ ರಸ್ತೆಯಲ್ಲಿ ಮಳೆಗೆ ಗುಡ್ಡದ ಮಣ್ಣು ಕುಸಿಯುತ್ತಿದೆ. ಪರಿಣಾಮ ಭಾರೀ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಬಿದ್ದಿದೆ.

    ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆ ಅರ್ಭಟ ಜೋರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಭಾಗಮಂಡಲದ ಸಂಗಮ ಕ್ಷೇತ್ರ ಜಲಾವೃತವಾಗಿದ್ದರೆ, ಇತ್ತ ವಿರಾಜಪೇಟೆ ತಾಲೂಕಿನ ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿಯೂ ತುಂಬಿ ಹರಿಯತೊಡಗಿದೆ. ದಕ್ಷಿಣ ಕೊಡಗಿನ ಕೆಲವೆಡೆ ಮಳೆಯ ರಭಸ ಹೆಚ್ಚಾದ ಪರಿಣಾಮ ಒಂದಷ್ಟು ಅನಾಹುತಗಳು ಸಂಭವಿಸಿವೆ. ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ವಿರಾಜಪೇಟೆ-ಮಾಕುಟ್ಟ ರಸ್ತೆಯ ಒಂದು ಭಾಗ ಕುಸಿದಿದ್ದು, ರಸ್ತೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ.

    ಮಡಿಕೇರಿಯಲ್ಲಿಯೂ ಗಾಳಿ ಸಮೇತ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಬಾರಿ ಪ್ರಾಕೃತಿಕ ವಿಕೋಪ ನಡೆದ ಸ್ಥಳವಾದ ಮದೆನಾಡು ಬಳಿ ನೀರಿನ ಹರಿವು ಹೆಚ್ಚಾಗಿ ಆಂತಕದ ವಾತಾವರಣ ಸೃಷ್ಟಿಯಾಗಿದೆ. ಇತ್ತ ಕಾಲೂರು ಗ್ರಾಮದಲ್ಲಿ ಸಣ್ಣ ಪುಟ್ಟದಾಗಿ ಗುಡ್ಡಗಳು ಕುಸಿಯುತ್ತಿದ್ದು, ಗ್ರಾಮಸ್ಥರಿಗೆ ಆತಂಕ ಎದುರಾಗಿದೆ.

    ಚಾರ್ಮಾಡಿ ಘಾಟ್ ಮಾರ್ಗದ ಚಿಕ್ಕಮಗಳೂರು- ದಕ್ಷಿಣ ಕನ್ನಡ ಸಂಪರ್ಕ ಕಡಿತಗೊಂಡಿದ್ದು, ರಸ್ತೆಗೆ ಬಿದ್ದಿದ್ದ ಮಣ್ಣನ್ನ ತೆರವುಗೊಳಿಸಲು ಹರಸಾಹಸ ಪಡಲಾಗುತ್ತಿದೆ. ರಾತ್ರಿಯಿಡೀ ಸಾರ್ವಜನಿಕರು, ಸಿಬ್ಬಂದಿ ಮಣ್ಣು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇತ್ತ ಬಣಕಲ್, ಬೆಳ್ತಂಗಡಿ ಪೊಲೀಸರು ಆಗಮಿಸಿ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ. ರಸ್ತೆಯಲ್ಲಿ ವಾಹನ ಸಿಲುಕಿಕೊಂಡು ಪ್ರಯಾಣಿಕರು ಪರದಾಡುತ್ತಿದ್ದಾರೆ. ಕುದುರೆಮುಖ, ಕಳಸ, ಸಂಸೆ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗಿದೆ. ಪರಿಣಾಮ ಕಳಸ-ಹೊರನಾಡು ಸಂಪರ್ಕ ಸ್ಥಗಿತಗೊಂಡಿದೆ. ಅಲ್ಲದೆ ಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ.

    ಇತ್ತ ಮಲೆನಾಡಲ್ಲಿ ಮಳೆ-ಗಾಳಿ ಮುಂದುವರಿದಿದ್ದು, ಬಿರುಗಾಳಿ ರಭಸಕ್ಕೆ ತರೀಕೆರೆ ತಾಲೂಕಿನ ಬರಗೇನಹಳ್ಳಿಯಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್, ಕಂಬಗಳು ಧರೆಗುರುಳಿದೆ. ಮಳೆಯ ಆರ್ಭಟಕ್ಕೆ ತೀರ್ಥಹಳ್ಳಿ ತಾಲೂಕು ಕೂಡ ತತ್ತರಿಸಿ ಹೋಗಿದೆ. ತುಂಗಾ ನದಿ ಅಪಾಯದ ಮಟ್ಟ ತಲುಪಿದ್ದು, ಐತಿಹಾಸಿಕ ರಾಮಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ರಥಬೀದಿಯ ಅರಳಿಕಟ್ಟೆವರೆಗೂ ನದಿ ನೀರು ಬಂದಿದೆ. ನೀರಿನ ಮಟ್ಟ ಇನ್ನೂ ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿರುವ ಮನೆಗಳನ್ನು ತೆರೆವುಗೊಳಿಸಲಾಗುತ್ತಿದೆ. ಹಲವೆಡೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ತೀರ್ಥಹಳ್ಳಿ -ಗುಡ್ಡೇಕೇರಿ- ಶೃಂಗೇರಿ ಮಾರ್ಗ ಬಂದ್ ಆಗಿದ್ದು, ನಾಬಳ ಸೇತುವೆ ಮೇಲೆ ಎರಡು ಅಡಿ ನೀರು ತುಂಬಿಕೊಂಡಿದೆ.

    ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಮುಂದುವರಿದ ಮಳೆಗೆ ಕರ್ನಾಟಕ ಗೋವಾ ಗಡಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿಯುತ್ತಿದೆ. ಚೋರ್ಲಾ ಘಾಟ್‍ನಲ್ಲಿ ಗುಡ್ಡ ಕುಸಿತಕ್ಕೆ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಗೋವಾ-ಬೆಳಗಾವಿ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಲಾರಿ ಮೇಲೆ ಗುಡ್ಡ ಕುಸಿತಗೊಂಡ ಕಾರಣಕ್ಕೆ ಲಾರಿಯಲ್ಲಿದ್ದ ಮೂವತ್ತು ಕುರಿಗಳು ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಅಲ್ಲದೆ ಬೆಳಗಾವಿ ತಾಲೂಕಿನ ಚಂದನಹೊಸುರು ಗ್ರಾಮದ ವ್ಯಕ್ತಿ ಮನೆಯ ಗೋಡೆ ಕುಸಿದು ಸಾವನ್ನಪ್ಪಿದ್ದಾನೆ.

    ಮಹಾರಾಷ್ಟ್ರದ ಕೊಯ್ನಾದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯ ಹಿನ್ನೆಲೆಯಲ್ಲಿ ಉತ್ತರ ಕರ್ನಾಟದ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಅಥಣಿ ತಾಲೂಕಿನಲ್ಲಿ ಪ್ರವಾಹ ಹೆಚ್ಚಾಗಿದ್ದು, ದರೂರ್ ಮುಖ್ಯ ಸೇತುವೆ ಸಂಚಾರ್ ಸ್ಥಗಿತಗೊಂಡಿದೆ. ಸೇತುವೆ ಜಲಾವೃತ್ತಗೊಂಡ ಕಾರಣಕ್ಕೆ ಜತ್ತ-ಜಾಂಬೋಟ ರಾಜ್ಯ ಹೆದ್ದಾರಿ ಸಂಚಾರ ಬಂದ್ ಆಗಿದೆ. ಅಲ್ಲದೆ ಅಥಣಿ ತಾಲೂಕು ಹಾಗೂ ರಾಯಭಾಗ, ಗೋಕಾಕ್ ತಾಲೂಕುಗಳ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಸೇತುವೆ ಮೇಲೆ ಜನರು ಓಡಾಡದಂತೆ ಪೊಲೀಸರು ನಿರ್ಬಂಧ ಹೇರಿದ್ದಾರೆ.

    ಸವದತ್ತಿಯ ಮಲಪ್ರಭಾ ಜಲಾಶಯದಿಂದ ನೀರು ಬಿಡುಗಡೆಯ ಹಿನ್ನೆಲೆಯಲ್ಲಿ ರಾಮದುರ್ಗದ ಹಳ್ಳಿಗಳಿಗೆ ನೀರು ನುಗ್ಗಿದೆ. ಮಲಪ್ರಭಾ ಜಲಾಶಯದಿಂದ ನಿನ್ನೆ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿತ್ತು, ಈ ಹಿನ್ನೆಲೆಯಲ್ಲಿ ತಾಲೂಕಿನ 30ಕ್ಕೂ ಹೆಚ್ಚು ಗ್ರಾಮಗಳಿಗೆ ಮಂಗಳವಾರದಿಂದಲೇ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ. ಸರಕಾರಿ ಶಾಲೆ ಸೇರಿದಂತೆ ಮನೆಗಳಿಗೆ ನೀರು ನುಗ್ಗಿದ್ದು, ನದಿಪಾತ್ರದ ಜನರ ಹಾಗೂ ಜಾನುವಾರುಗಳ ಸ್ಥಳಾಂತರ ಕಾರ್ಯ ಪ್ರಾರಂಭಗೊಂಡಿದೆ.

    ಹಿಡಿಕಲ್ ಜಲಾಶಯ ಸಂಪೂರ್ಣ ಬರ್ತಿ ಹಿನ್ನೆಲೆಯಲ್ಲಿ ಸುಮಾರು 90 ಸಾವಿರ ಕ್ಯೂಸೆಕ್ ನೀರನ್ನ ಹರಿಬಿಡಲಾಗಿದೆ. ಇದರಿಂದ ಗೋಕಾಕ ತಾಲೂಕಿನ ಕೊಣ್ಣುರು, ಲೋಳಸೂರು ಗ್ರಾಮಗಳು ಜಲಾವೃತಗೊಂಡಿದೆ. ಅಲ್ಲದೆ ಗೋಕಾಕ್ ಹೊರವಲಯದ ಸಿಂಗ್ಳಾಪುರ ಬಂಗ್ಲೆ ಪ್ರದೇಶದಲ್ಲಿ ಕುಸಿದ ಮನೆ ಘಟಪ್ರಭಾ ನದಿಯ ಹೊಡೆತಕ್ಕೆ ಮನೆಯೊಂದು ಧರೆಗುರುಳುತ್ತಿರುವ ಲೈವ್ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

    ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಂಗಳವಾರ ಒಂದೇ ರಾತ್ರಿ ಸುರಿದ ಮಳೆಗೆ 75ಕ್ಕೂ ಹೆಚ್ಚು ಮನೆ ನೆಲಸಮವಾಗಿದೆ. ಇತ್ತ ಧಾರವಾಡ ಜಿಲ್ಲೆಯಲ್ಲಿಯೂ ಮಳೆ ಮುಂದುವರಿದಿದ್ದು, ಸುಮಾರು 180 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

  • ಮೆಸ್ಕಾಂಗೆ ಸವಾಲಾಗಿರುವ ಮಲೆನಾಡ ಮಳೆ- ಸಿಬ್ಬಂದಿ ಮೇಲೆ ಬಿದ್ದ ಮರ

    ಮೆಸ್ಕಾಂಗೆ ಸವಾಲಾಗಿರುವ ಮಲೆನಾಡ ಮಳೆ- ಸಿಬ್ಬಂದಿ ಮೇಲೆ ಬಿದ್ದ ಮರ

    ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಲವು ಕಡೆ ಅವಾಂತರ ಸೃಷ್ಟಿಸಿದೆ. ಮೆಳೆಯ ಅಬ್ಬರಕ್ಕೆ ಆಗುತ್ತಿರುವ ಅನಾಹುತಗಳು ಮೆಸ್ಕಾಂಗೆ ತಲೆನೋವಾಗಿದೆ.

    ಹೌದು. ಮಲೆನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ರಸ್ತೆಗಳ ಮೇಲೆ ಬೃಹತ್ ಮರಗಳು ಉರುಳಿ ಬಿದ್ದು ಭಾರೀ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ ಧರೆಗುರುಳಿರುವ ಮರಗಳ ಜೊತೆಗೆ ಹಲವು ಕಡೆ ವಿದ್ಯುತ್ ಕಂಬಗಳು ಕೂಡ ನೆಲಕ್ಕುರುಳಿದೆ. ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಬಂಡೀಗಡಿ ಬಳಿ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದಿದೆ.

    ಈ ಹಿನ್ನೆಲೆ ಮಳೆಯಲ್ಲೇ ಮರ ತೆರವು ಕಾರ್ಯಾಚರಣೆ ಮಾಡಿ, ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಲೈನ್ ರಿಪೇರಿ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ ಲೈನ್ ರಿಪೇರಿ ಮಾಡುತ್ತಿದ್ದ ಮೆಸ್ಕಾಂ ಸಿಬ್ಬಂದಿ ಮೇಲೆ ಮರವೊಂದು ಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದವರು ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಸಿಬ್ಬಂದಿ ಪಾರಾಗಿದ್ದಾರೆ.

    ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ ಬಾರಿ 17 ಬಾರಿ ಮುಳುಗಿದ್ದ ಹೆಬ್ಬಾಳೆ ಸೇತುವೆ ಈ ವರ್ಷ ಮೊದಲ ಬಾರಿ ಮುಳುಗಡೆಯಾಗಿದ್ದು, ಮಹಾಮಳೆಗೆ ಜನ ಮನೆಯಿಂದ ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ.

    ರಾಜ್ಯದ ಹಲವೆಡೆ ಮಳೆರಾಯನ ರೌದ್ರನರ್ತನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲದೆ ಭಾರೀ ಮಳೆಯ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಸುರಿಯುತ್ತಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹ ಸೃಷ್ಟಿಸಿದೆ. ಮಳೆಯ ಅಬ್ಬರಕ್ಕೆ ರಾಜ್ಯದ ನದಿಗಳು ಭೋರ್ಗರೆದು ಹರಿಯುತ್ತಿದ್ದು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಸೇತುವೆಗಳು ಮುಳುಗಡೆಯಾಗಿದೆ, ರಸ್ತೆಗಳ ಮೇಲೆ ಮರಗಳು, ಗುಡ್ಡಗಳು ಕುಸಿದು ಸಂಚಾರ ಸ್ಥಗಿತಗೊಂಡಿದೆ.

  • ಭಾರೀ ಮಳೆಗೆ ಹೆಬ್ಬಾಳೆ ಸೇತುವೆ ಮುಳುಗಡೆ- ಗುಡ್ಡ ಕುಸಿತ, ಧರೆಗುರುಳಿದ ಮರಗಳು

    ಭಾರೀ ಮಳೆಗೆ ಹೆಬ್ಬಾಳೆ ಸೇತುವೆ ಮುಳುಗಡೆ- ಗುಡ್ಡ ಕುಸಿತ, ಧರೆಗುರುಳಿದ ಮರಗಳು

    ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ ಬಾರಿ 17 ಬಾರಿ ಮುಳುಗಿದ್ದ ಹೆಬ್ಬಾಳೆ ಸೇತುವೆ ಈ ವರ್ಷ ಮೊದಲ ಬಾರಿ ಮುಳುಗಡೆಯಾಗಿದ್ದು, ಮಹಾಮಳೆಗೆ ಜನ ಮನೆಯಿಂದ ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ.

    ಮೂರು ದಿನಗಳಿಂದ ಮೂಡಿಗೆರೆ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿತ್ತು. ಆದರೆ, ಸೋಮವಾರ ರಾತ್ರಿಯಿಂದ ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರದಲ್ಲಿ ಎಡೆಬಿಡದೆ ಧಾರಾಕಾರ ಮಳೆಯಾಗುತ್ತಿದ್ದು, ಜನ ಆತಂಕಕ್ಕೀಡಾಗಿದ್ದಾರೆ. ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಎನ್.ಆರ್.ಪುರ, ಮೂಡಿಗೆರೆ, ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ಜೀವ ನದಿಗಳಿಗೆ ಕಳೆ ಬಂದಿದ್ದು, ತುಂಗಾ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕೊಟ್ಟಿಗೆಹಾರ, ಚಾರ್ಮಾಡಿಯಲ್ಲಿ ಮಳೆಯ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಚಾರ್ಮಾಡಿಯಲ್ಲಿ ರಸ್ತೆ ಬದಿಯ ಗುಡ್ಡ ಕುಸಿತ ಉಂಟಾಗುತ್ತಿದ್ದು, ಮಳೆ-ಗಾಳಿಗೆ ಮರಗಳು ಧರೆಗುರುಳುತ್ತಿವೆ.

    ಶಾಲಾ-ಕಾಲೇಜುಗಳಿಗೆ ರಜೆ:
    ಮಹಾ ಮಳೆ, ಪ್ರವಾಹ ಹಿನ್ನೆಲೆ ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ರಾಮದುರ್ಗ ತಾಲೂಕು ಹೊರತುಪಡಿಸಿ ಬೆಳಗಾವಿಯಾದ್ಯಂತ ಶಾಲಾ-ಕಾಲೇಜಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಕರಾವಳಿ, ಮಲೆನಾಡು, ಉತ್ತರ ಕನ್ನಡದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಉತ್ತರ ಕನ್ನಡದ ಹಳಿಯಾಳ, ದಾಂಡೇಲಿ ತಾಲೂಕು ಹೊರತುಪಡಿಸಿ ಉಳಿದ 9 ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ.

    ಇತ್ತ ದಕ್ಷಿಣ ಕನ್ನಡದ ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಫೋಷಿಸಲಾಗಿದೆ. ಮಲೆನಾಡಿನ ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿಯಲ್ಲೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಶಿವಮೊಗ್ಗದ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲೂ ಶಾಲೆಗಳಿಗೆ ರಜೆ ನೀಡಲಾಗಿದೆ. ಶಿರಸಿ, ಸಿದ್ದಾಪುರ ಭಾಗದಲ್ಲಿಯೂ ರಜೆ ನೀಡಲಾಗಿದೆ. ಹಾಸನದ ಬೇಲೂರು ತಾಲೂಕಿನ ಅರೆಹಳ್ಳಿ, ಚೀಕನಹಳ್ಳಿ ನಾರ್ವೆ ಹೋಬಳಿ, ಆಲೂರು ತಾಲ್ಲೂಕಿನ ಹೊಸಕೋಟೆ, ಕುಂದೂರು, ಪಾಳ್ಯ ಹೋಬಳಿಗಳ ಶಾಲೆ ಕಾಲೇಜುಗಳಿಗೆ ರಜೆ ಫೋಷಿಸಲಾಗಿದೆ.

  • ಮುಂದುವರಿದ ಮಹಾಮಳೆಯ ಆರ್ಭಟ – ಮಲೆನಾಡಿನ ಶಾಲಾ, ಕಾಲೇಜುಗಳಿಗೆ ರಜೆ

    ಮುಂದುವರಿದ ಮಹಾಮಳೆಯ ಆರ್ಭಟ – ಮಲೆನಾಡಿನ ಶಾಲಾ, ಕಾಲೇಜುಗಳಿಗೆ ರಜೆ

    – ಎಲ್ಲೆಲ್ಲಿ ಏನೇನು ಅನಾಹುತವಾಗಿದೆ?

    ಬೆಂಗಳೂರು: ಉತ್ತರ ಕರ್ನಾಟಕದ ಕೆಲವು ಭಾಗಗಳು ಹಾಗೂ ಮಲೆನಾಡಿನ ಶಿವಮೊಗ್ಗ, ಉತ್ತರ ಕನ್ನಡ, ಕೊಡಗು ಭಾಗಗಳಲ್ಲಿ ಮಳೆಯ ಅರ್ಭಟ ಇಂದು ಕೂಡ ಮುಂದುವರಿದಿದೆ. ಮುಂದಿನ 2 ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಲಭಿಸಿರುವುದರಿಂದ ಮುಂಜಾಗೃತಾ ಕ್ರಮವಾಗಿ ಮಲೆನಾಡಿನ ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ, ಸಾಗರ, ಹೊಸನಗರ, ಶಿರಸಿ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮುನ್ನೆಚರಿಕಾ ಕ್ರಮವಾಗಿ 2 ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಮಹಾರಾಷ್ಟ್ರದಲ್ಲಿ ಮಳೆ ಮತ್ತು ಕೃಷ್ಣಾ ನದಿಯ ಅಬ್ಬರಕ್ಕೆ ಉತ್ತರ ಕರ್ನಾಟಕ ಭಾಗಶಃ ಮುಳುಗಡೆಯಾಗಿದೆ. ನಾರಾಯಣಪುರ ಜಲಾಶಯದಿಂದ 3 ಲಕ್ಷ ಕ್ಯೂಸೆಕ್‍ಗೂ ಹೆಚ್ಚು ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ನೂರಾರು ಹಳ್ಳಿಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

    ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಬೆಳೆ ನೀರುಪಾಲಾಗಿದೆ. ನದಿ ಪಾತ್ರದ ಪ್ರದೇಶಗಳಲ್ಲಿ ಜನರನ್ನು ಸುಕ್ಷಿತ ಪ್ರದೇಶಗಳಿಗೆ ಶಿಫ್ಟ್ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಕೊಳ್ಳೂರು ಸೇತುವೆ ಮುಳುಗಡೆಯಾಗಿದ್ದು, ಯಾದಗಿರಿ-ಶಹಪುರ ನಡುವಿನ ಸಂಪರ್ಕ ಸ್ಥಗಿತವಾಗಿದೆ. ಹಲವೆಡೆ ಗಂಜಿ ಕೇಂದ್ರ ಆರಂಭಿಸಲಾಗಿದೆ. ಚಿಕ್ಕೋಡಿ ಬಳಿ ಪೆಟ್ರೋಲ್ ಪಂಪ್‍ಗೆ ನೀರು ನುಗ್ಗಿದೆ. ಅಥಣಿ, ಕಾಗವಾಡ ಮಧ್ಯೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಮಾಂಜರಿ ಬಳಿ ಕೃಷ್ಣೆ ನದಿಯಲ್ಲಿ ವಿದ್ಯುತ್ ಕಂಬ, ಟ್ರಾನ್ಸ್‍ಫಾರ್ಮರ್ ಮುಳುಗಿದೆ. ಖಾನಾಪುರ ತಾಲೂಕಲ್ಲಿ ರಸ್ತೆ ಕುಸಿದು, ಸಂಚಾರ ಅಡ್ಡಿಯಾಗಿದೆ. ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮುಳುಗಿದೆ. ಜಮಖಂಡಿ-ಜತ್ತ್ ನಡುವಿನ ರಸ್ತೆ ಜಲಾವೃತವಾಗಿದೆ.

    ಮಡಿಕೇರಿ-ಚಿಕ್ಕಮಗಳೂರು ಭಾಗದಲ್ಲಿಯೂ ವರುಣ ಅಬ್ಬರಿಸುತ್ತಿದ್ದಾನೆ. ಈ ಬೆನ್ನಲ್ಲೇ ಭೂಕುಸಿತ ಶುರುವಾಗಿದೆ. ವಿರಾಜಪೇಟೆಯ ಮಾಕುಟ್ಟ ಬಳಿ ಕರ್ನಾಟಕ-ಕೇರಳ ಹೆದ್ದಾರಿಯಲ್ಲಿ ತಡೆಗೋಡೆ ಮತ್ತು ಹೆದ್ದಾರಿ ಕುಸಿದು, ಅಂತಾರಾಜ್ಯ ಹೆದ್ದಾರಿ ಬಂದ್ ಆಗಿದೆ. 3 ದಿನ ವಾಹನ ಸಂಚಾರ ಬಂದ್ ಆಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗಿದೆ. 1 ಅಡಿಯಷ್ಟು ನೀರು ರಸ್ತೆ ಮೇಲೆ ಹರಿಯುತ್ತಿದೆ. ಮಳೆ ಮುಂದುವರಿದಲ್ಲಿ ಭಾಗಮಂಡಲ ತಲಕಾವೇರಿ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ. ವಿರಾಜಪೇಟೆ ತಾಲೂಕಿನ ಚೆಂಬೇಬೆಳ್ಳೂರಿನಲ್ಲಿ ಬೃಹತ್ ಗಾತ್ರದ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ. ಪೂವಯ್ಯ ಎಂಬವರ ಮನೆ ಮೇಲೆ ತಡೆಗೋಡೆ ಕುಸಿದಿದೆ. ಅದೃಷ್ಟವಶಾತ್ ಪ್ರಾಣಹಾನಿ ತಪ್ಪಿದೆ.

    ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆ ಆಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರಿನ ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಚಾರ್ಮಾಡಿಯಲ್ಲಿ ಅಲ್ಲಲ್ಲಿ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದು, ಸಂಚಾರ ಏಕಮುಖವಾಗಿದೆ. ಆಲೇಖಾನ್ ಹೊರಟ್ಟಿ ರಸ್ತೆ ಬಳಿ ಗುಡ್ಡ ಕುಸಿತದಿಂದ ರಸ್ತೆ ಸಂಪೂರ್ಣ ಮುಚ್ಚಿ ಹೋಗಿದೆ. ಹೇಮಾವತಿ, ತುಂಗಾ-ಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ.

  • ಕುರಿಗಾಯಿಯ ಮುಂದೆಯೇ ಕುರಿ ಹೊತ್ತೊಯ್ದ ಚಿರತೆ

    ಕುರಿಗಾಯಿಯ ಮುಂದೆಯೇ ಕುರಿ ಹೊತ್ತೊಯ್ದ ಚಿರತೆ

    ಚಿಕ್ಕಮಗಳೂರು: ನಾಲ್ಕು ಕುರಿಗಳ ರಕ್ತ ಕುಡಿದ ಚಿರತೆ ಒಂದು ಕುರಿಯನ್ನು ಹೊತ್ತೊಯ್ದ ಘಟನೆ ಚಿಕ್ಕಮಗಳೂರು ತಾಲೂಕಿನ ಜಡಗನಹಳ್ಳಿಯ ಶಂಕರದೇವರ ಮಠದ ಬಳಿ ನಡೆದಿದೆ.

    ಭಾನುವಾರ ರಾತ್ರಿ ಸುಮಾರು 12.30ಕ್ಕೆ ಕುರಿ ಮಂದೆ ಮೇಲೆ ದಾಳಿ ಮಾಡಿದ ಚಿರತೆ, ನೂರಾರು ಕುರಿಗಳ ಪೈಕಿ ನಾಲ್ಕು ಕುರಿಗಳ ರಕ್ತವನ್ನ ಕುಡಿದು, ಒಂದನ್ನ ಎಳೆದೊಯ್ದಿದೆ. ಇದನ್ನು ಕಣ್ಣಾರೆ ಕಂಡ ಕುರಿಗಾಯಿಯವರು ಜೀವ ಭಯದಿಂದ ಓಡಿದ್ದಾರೆ. ಓಡುವಾಗ ಅವರು ಬಿದ್ದು ಮೈ-ಕೈಗೆ ಗಾಯ ಮಾಡಿಕೊಂಡಿದ್ದಾರೆ.

    ಈ ಗ್ರಾಮದ ಸುತ್ತಲು ಕಾಡಿದ್ದು ಚಿರತೆ ಹಾಗೂ ಕರಡಿಯನ್ನು ಕಂಡ ಸ್ಥಳೀಯರು ಹಿಂದೆಯೇ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಆದರೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕು ಕುರಿಗಳು ಸುಮಾರು 70 ಸಾವಿರ ಬೆಲೆ ಬಾಳುತ್ತಿದ್ದು, ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

  • ಆಗಸ್ಟ್ 9ರವರೆಗೆ ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ

    ಆಗಸ್ಟ್ 9ರವರೆಗೆ ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ

    – ಮಾಕುಟ್ಟ ರಾಷ್ಟ್ರೀಯ ಹೆದ್ದಾರಿ ಕುಸಿತ
    – ಮೂಡಿಗೆರೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

    ಮಡಿಕೇರಿ/ಚಿಕ್ಕಮಗಳೂರು: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು ಆಗಸ್ಟ್ 9ರವರೆಗೆ ಜಿಲ್ಲೆಯಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಪ್ರಸ್ತುತ ಜಿಲ್ಲೆಯಲ್ಲಿ ಮಳೆಯೊಂದಿಗೆ ಜೋರಾಗಿ ಗಾಳಿ ಬೀಸುತ್ತಿರುವುದನ್ನ ಕಂಡು ಜನರು ಆತಂಕಕ್ಕೊಳಗಾಗಿದ್ದಾರೆ. ಮಳೆಯಿಂದಾಗಿ ಕಾವೇರಿ ನದಿ ತೀರಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಭಾಗಮಂಡಲ ತಲಕಾವೇರಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಭಾಗಮಂಡಲ ನಾಪೋಕ್ಲು ರಸ್ತೆಗೆ ಒಂದು ಅಡಿ ನೀರು ಬಂದಿರುವ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

    ದಕ್ಷಿಣ ಕೊಡಗಿನ ಗೋಣಿಕೊಪ್ಪ, ಕುಟ್ಟ ಶ್ರೀಮಂಗಲ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಹೊಸದಾಗಿ ನಿರ್ಮಿಸಿರುವ ತಡೆಗೋಡೆ ಕುಸಿದು ರಸ್ತೆಯ ಅರ್ಧ ಭಾಗ ಕೊಚ್ಚಿ ಹೋಗಿದೆ. ಮಾಕುಟ್ಟ ರಾಷ್ಟ್ರೀಯ ಹೆದ್ದಾರಿ ಮಳೆಗೆ ಕುಸಿದು ಹೋಗಿರುವ ಕಾರಣಕ್ಕೆ ಕೇರಳ ಸಂಚಾರ ಬಂದ್ ಅಗಿದೆ.

    ಕಳೆದ ಬಾರಿಯು ಮಾಕುಟ್ಟ ಹೆದ್ದಾರಿ ಕುಸಿದುಹೋಗಿತ್ತು. ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿರುವ ಕಾರಣಕ್ಕೆ ಸಾರ್ವಜನಿಕರಿಗೆ ಪ್ರವಾಸಿಗರಿಗೆ ಎಚ್ಚರಿಕೆಯಿಂದ ಇರುವಂತೆ ಕೊಡಗು ಜಿಲ್ಲಾಡಳಿತ ಸೂಚನೆ ನೀಡಿದೆ.

    ಇನ್ನೊಂದೆಡೆ ಕಾಫಿನಾಡಲ್ಲಿ ಕೂಡ ಮಳೆ ಅಬ್ಬರ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಮೂಡಿಗೆರೆ ತಹಶೀಲ್ದಾರ್ ರಮೇಶ್ ಆದೇಶ ಹೊರಡಿಸಿದ್ದಾರೆ. ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಬೈರಾಪುರ, ದಾರದಹಳ್ಳಿ, ಕೊಟ್ಟಿಗೆಹಾರ, ಬಾಳೂರು ಸೇರಿದಂತೆ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇತ್ತ ಪಶ್ಚಿಮ ಘಟ್ಟಗಳ ಸಾಲಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಭಾರೀ ಮಳೆಯಿಂದ ತುಂಗಾ-ಭದ್ರಾ, ಹೇಮಾವತಿ ನದಿಗಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಮೈದುಂಬಿ ಹರಿಯುತ್ತಿದೆ.

  • ಸಿದ್ಧಾರ್ಥ್ ಮನೆಗೆ ನಿರ್ಮಲಾನಂದ ಸ್ವಾಮೀಜಿ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ

    ಸಿದ್ಧಾರ್ಥ್ ಮನೆಗೆ ನಿರ್ಮಲಾನಂದ ಸ್ವಾಮೀಜಿ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ

    – ಸಿದ್ಧಾರ್ಥ್ ಅಭಿಮಾನಿಗಳಿಂದ ಅಭಿಯಾನ

    ಚಿಕ್ಕಮಗಳೂರು: ನಿಗೂಢವಾಗಿ ಸಾವನ್ನಪ್ಪಿರುವ ಕೆಫೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ಮನೆಗೆ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಇಂದು ಭೇಟಿ ನೀಡಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟ್ ನಲ್ಲಿರುವ ಸಿದ್ದಾರ್ಥ್ ಮನೆಗೆ ಭೇಟಿ ನೀಡಿದ ಸ್ವಾಮೀಜಿಗಳು, ಸಿದ್ದಾರ್ಥ್ ತಾಯಿ ವಸಂತಿ ಹೆಗ್ಡೆ ಹಾಗೂ ಪತ್ನಿ ಮಾಳವಿಕಾ ಸೇರಿದಂತೆ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ.

    ಯುವಕರಿಂದ ಅಭಿಯಾನ:
    ಸಿದ್ಧಾರ್ಥ್ ಅವರು ಮೃತಪಟ್ಟ ಬಳಿಕ ಕಾಫಿ ಡೇ ಷೇರು ದಿನೇ, ದಿನೇ ಕುಸಿತ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಯುವಕರು ಅಭಿಯಾನಯೊಂದಕ್ಕೆ ಚಾಲನೆ ನೀಡಿದ್ದಾರೆ.

    ಸಿದ್ದಾರ್ಥ್ ಅವರ ಅಭಿಮಾನಿ ಯುವಕರು `ಟೀಮ್ ನಮ್ಮುಡುಗ್ರು’ ತಂಡದಿಂದ ಷೇರು ಖರೀದಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗುತ್ತಿದೆ. ಸಿದ್ಧಾರ್ಥ್ ಅವರು ಕೆಫೆ ಕಾಫಿ ಡೇ ಸೇರಿದಂತೆ ಅವರ ಸಂಸ್ಥೆಗಳಲ್ಲಿ ಯುವಕರಿಗೆ ಹೆಚ್ಚಿನ ಅದ್ಯತೆ ನೀಡುತ್ತಿದ್ದರು. ಅಷ್ಟೇ ಅಲ್ಲದೇ ಯುವಕರಿಗೆ ತರಬೇತಿ ನೀಡಲೆಂದೇ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

  • ವಿಶ್ರಾಂತಿಗಾಗಿ ಕಾಡಿನ ಮಧ್ಯೆ ಇರೋ ಕಾಫಿ ಎಸ್ಟೇಟ್ ಸೇರಿದ ಎಚ್‍ಡಿಕೆ

    ವಿಶ್ರಾಂತಿಗಾಗಿ ಕಾಡಿನ ಮಧ್ಯೆ ಇರೋ ಕಾಫಿ ಎಸ್ಟೇಟ್ ಸೇರಿದ ಎಚ್‍ಡಿಕೆ

    ಚಿಕ್ಕಮಗಳೂರು: ರಾಜಕೀಯ ಜಂಜಾಟದಿಂದ ಬೇಸತ್ತು, ವಿಶ್ರಾಂತಿಗಾಗಿ ಜೆಡಿಎಸ್ ನಾಯಕರೊಂದಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನ ಕಾಡಿನ ಮಧ್ಯದಲ್ಲಿ ಇರುವ ಕಾಫಿ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಉದ್ಯಮಿ ವಿ.ಜಿ ಸಿದ್ದಾರ್ಥ್ ಅವರ ಅಂತ್ಯಕ್ರಿಯೆಗೆ ಚಿಕ್ಕಮಗಳೂರಿಗೆ ಹೆಚ್‍ಡಿಕೆ ಆಗಮಿಸಿದ್ದರು. ಅಂದಿನಿಂದ ಚಿಕ್ಕಮಗಳೂರಿನಲ್ಲೇ ಮಾಜಿ ಸಿಎಂ ಇದ್ದಾರೆ. ಆತ್ಮೀಯ ಸ್ನೇಹಿತ ರಂಗನಾಥ್ ಅವರ ಮನೆಯಲ್ಲಿ ಹೆಚ್‍ಡಿಕೆ ವಾಸ್ತವ್ಯ ಹೂಡಿದ್ದಾರೆ.

    ಕೊಪ್ಪದ ಗುಡ್ಡೆತೋಟದಲ್ಲಿ ರಂಗನಾಥ್ ಅವರ ಮನೆಯಿದ್ದು ಅಲ್ಲಿಯೇ ಹೆಚ್‍ಡಿಕೆ ಅವರು ತಂಗಿದ್ದಾರೆ. ಅವರಿಗೆ ಮಾಜಿ ಸಚಿವ ಸಾ.ರಾ ಮಹೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಕೂಡ ಸಾಥ್ ನೀಡಿದ್ದಾರೆ.

    ಕೆಲ ದಿನಗಳಿಂದ ರಾಜ್ಯದಲ್ಲಿ ನಡೆದ ರಾಜಕೀಯ ಜಂಜಾಟದಿಂದ ಜೆಡಿಎಸ್ ನಾಯಕರು ರೋಸಿಹೋಗಿದ್ದರು. ಹೀಗಾಗಿ ಕಾಡಿನ ಮಧ್ಯೆ ಇರುವ ಕಾಫಿ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿ, ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

  • ‘T’ ಯಮ..!

    ‘T’ ಯಮ..!

    https://www.youtube.com/watch?v=ubn6UZ1R4pU