Tag: Chikkamagaluru

  • ಜಿಲ್ಲಾಡಳಿತದ ಆದೇಶದಿಂದ ಚಾರ್ಮಾಡಿಯಲ್ಲಿ ಕೋತಿಗಳು ಫುಲ್ ಖುಷ್

    ಜಿಲ್ಲಾಡಳಿತದ ಆದೇಶದಿಂದ ಚಾರ್ಮಾಡಿಯಲ್ಲಿ ಕೋತಿಗಳು ಫುಲ್ ಖುಷ್

    ಚಿಕ್ಕಮಗಳೂರು: ಕೋತಿಗಳ ಕೂಗು ಭಗವಂತನಿಗೂ ಕೇಳಿಸಿದೆ. ಹಣ್ಣು ಕೊಟ್ಟವರಿಗೆ ಖುಷಿ ಪಡಿಸಿ, ಕೊಡದಿದ್ದವರಿಗೆ ಹೆದರಿಸುತ್ತಿದ್ದ ಕೋತಿಗಳ ಮುಖದಲ್ಲಿ ಚೈತನ್ಯವೇ ಇರಲಿಲ್ಲ. ನೆಲದ ಮೇಲಿದ್ದರೂ ನೀರು, ಮರದ ಮೇಲಿದ್ದರೂ ನೀರು. ತಿನ್ನೋಕೂ ಆಹಾರವಿಲ್ಲದೆ ಆಂಜನೇಯನ ಅವತಾರ ಪುರುಷರು ಸೊರಗಿ ಹೋಗಿದ್ದವು. ಆದರೆ ಸರ್ಕಾರದ ಒಂದೇ ಒಂದು ಆದೇಶ ಇದೀಗ ಕೋತಿಗಳಿಗೆ ಜೀವ ತುಂಬಿದಂತಾಗಿದೆ.

    ಹೌದು. ವರುಣನ ಅಬ್ಬರಕ್ಕೆ ಇಡೀ ಮಲೆನಾಡೇ ಜಲಾವೃತಗೊಂಡಿತ್ತು. ಚಾರ್ಮಾಡಿ ರಸ್ತೆಯ 23 ಕಿ.ಮೀ. ವ್ಯಾಪ್ತಿಯಲ್ಲಿ 40 ಕಡೆ ಗುಡ್ಡ ಕುಸಿದು, ಎರಡು ತಿಂಗಳಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಮಾರ್ಗದಲ್ಲಿ ಪ್ರವಾಸಿಗರಿಂದಲೇ ಬದುಕಿದ್ದ ಕೋತಿಗಳ ಸಂತತಿ ತಿನ್ನೋಕೆ ಆಹಾರವಿಲ್ಲದೇ ಬರೀ ನೀರು ಕುಡಿದು ಬದುಕುತ್ತಿದ್ದವು. ಅವುಗಳ ಹಸಿವಿನ ದಾಹ ಆಂಜನೇಯನಿಗೂ ಮುಟ್ಟಿತ್ತು ಅನಿಸುತ್ತಿದೆ. ಯಾಕಂದರೆ ಇದೀಗ ಜಿಲ್ಲಾಡಳಿತ ಚಾರ್ಮಾಡಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದೆ. ಇದರಿಂದ ಹೊಟ್ಟೆ ತುಂಬಾ ಊಟ ಸಿಗುತ್ತದೆಂಬ ಒಂದೇ ಕಾರಣಕ್ಕೆ ಮನುಷ್ಯರಿಗಿಂತ ಮಂಗಗಳು ಡಬಲ್ ಖುಷಿಯಾಗಿವೆ.

    ಅಣ್ಣಪ್ಪಸ್ವಾಮಿ ದೇವಸ್ಥಾನ ಸೇರಿದಂತೆ ಚಾರ್ಮಾಡಿ ಘಾಟ್ ರಸ್ತೆಯುದ್ದಕ್ಕೂ ಹತ್ತಾರು ಜಲಪಾತಗಳಿವೆ. ಅಲ್ಲೆಲ್ಲ ನೂರಾರು ಪ್ರವಾಸಿಗರು ಇರುತ್ತಾರೆ. ಪ್ರವಾಸಿಗರ ಗಾಡಿಗಳು ನಿಂತ ಕೂಡಲೇ ಕೋತಿಗಳ ಹಿಂಡು ಮಕ್ಕಳಂತೆ ಓಡೋಡಿ ಬರುತ್ತಿದ್ದವು. ಅಲ್ಲದೇ ಬಂದು ಏನಾದರೂ ಹಾಕುತ್ತಾರಾ ಎಂದು ಕೈಯನ್ನೇ ನೋಡುತ್ತಿದ್ದವು. ಪ್ರವಾಸಿಗರು ಬಾಳೆಹಣ್ಣು, ಬಿಸ್ಕತ್ ಮೊದಲಾದವುಗಳನ್ನು ಹಾಕುತ್ತಿದ್ದರು. ಇತ್ತ ಮಕ್ಕಳಿಗೆ ಕೋತಿಗಳು ಪುಕ್ಕಟೆ ಮನರಂಜನೆ ನೀಡುತ್ತಿದ್ದವು. ಆದರೆ ಈ ಬಾರಿ ಒಂದೇ ದಿನ ಸುರಿದ ಭಾರೀ ಮಳೆಗೆ ಇಡೀ ಚಾರ್ಮಾಡಿಯೇ ಅಲ್ಲೋಲ-ಕಲ್ಲೋಲವಾಗಿತ್ತು. 40 ಕಡೆ ಗುಡ್ಡ ಕುಸಿದಿದ್ದರಿಂದ ಸಂಚಾರ ಬಂದ್ ಆಗಿತ್ತು. ಬೇರೆಡೆ ಹೋಗಲಾಗದೆ, ಊಟ ಸಿಗದೆ ಕೋತಿಗಳ ಸಂತತಿಯೇ ಮಮ್ಮಲ ಮರುಗಿತ್ತು. ಸದ್ಯ ಸರ್ಕಾರ ಚಾರ್ಮಾಡಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರೋದು ಕೋತಿಗಳಲ್ಲಿ ಬದುಕುವ ಆಸೆ ಮೂಡುವಂತಾಗಿದೆ.

    ಒಟ್ಟಾರೆ, ರಿಪೇರಿಯೇ ಆಗದಂತ ಸ್ಥಿತಿಯಲ್ಲಿದ್ದ ಚಾರ್ಮಾಡಿಯನ್ನ 300 ಕೋಟಿ ವ್ಯಯ ಮಾಡಿ ದುರಸ್ಥಿಗೆ ಸರ್ಕಾರ ಮುಂದಾಗಿದೆ. ಚಾರ್ಮಾಡಿ ಘಾಟ್ ಮೊದಲಿನಂತಿಲ್ಲ. ದುರಸ್ಥಿ ಮಾಡುತ್ತಿರೋ ಸರ್ಕಾರ ಇದೇ ರೀತಿ ಲಘು ವಾಹನಗಳಿಗಷ್ಟೇ ಅನುಮತಿ ನೀಡಿದರೆ ಉಳಿಯುತ್ತದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಚಾರ್ಮಾಡಿ ಘಾಟ್ ನೆನಪಾಗಷ್ಟೆ ಉಳಿಯೋದ್ರಲ್ಲಿ ಸಂದೇಹವಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಮಾತ್ರ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಿ ಆದೇಶ ಪ್ರಕಟಿಸಿದ್ದಾರೆ. ಬಿರುಗಾಳಿ ಸಹಿತ ಭಾರೀ ಮಳಯಾದ ಪರಿಣಾಮ ಹಾಳಾದ ರಸ್ತೆಯನ್ನು ಶಾಶ್ವತವಾಗಿ ದುರಸ್ತಿ ಮಾಡಲು ಸುಮಾರು 300 ಕೋಟಿ ರೂ. ಅನುದಾನದ ಅವಶ್ಯಕತೆಯಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

    ಷರತ್ತು ಏನು?
    ಘಾಟಿಯಲ್ಲಿ ಪ್ರತಿ ಗಂಟೆಗೆ 20 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುವುದು, ಭೂ ಕುಸಿತದಿಂದ ರಸ್ತೆಗೆ ಸಮಸ್ಯೆ ಆಗಿರುವುದರಿಂದ ಜಾಗರೂಕತೆಯಿಂದ ಚಾಲನೆ ಮಾಡುವುದು, ಫೋಟೋಗ್ರಫಿ, ಸೆಲ್ಫಿ ತೆಗೆಯುವುದಕ್ಕೆ ನಿಷೇಧ ವಿಧಿಸಲಾಗಿದೆ.

    ಕಾರುಗಳು, ಜೀಪು, ಟೆಂಪೋ, ವ್ಯಾನ್, ಎಲ್‍ಸಿವಿ(ಮಿನಿ ವ್ಯಾನ್), ಅಂಬುಲೆನ್ಸ್, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬುಲೆಟ್ ಟಾಂಕರ್ಸ್, ಷಿಪ್ ಕಾರ್ಗೋ ಕಾಂಟೈನರ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಸಾರ್ವಜನಿಕರು ಸಂಚರಿಸುವ ಎಲ್ಲ ಸರ್ಕಾರಿ, ಖಾಸಗಿ ಬಸ್ಸುಗಳ ಸಂಚಾರವನ್ನು ನಿಷೇಧಿಸಲಾಗಿದೆ.

  • ಷರತ್ತು ವಿಧಿಸಿ ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನಗಳಿಗೆ ಅನುಮತಿ

    ಷರತ್ತು ವಿಧಿಸಿ ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನಗಳಿಗೆ ಅನುಮತಿ

    ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಷರತ್ತು ವಿಧಿಸಿ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

    ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ಪ್ರಕಟಿಸಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಮಾತ್ರ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

    ಕಳೆದ ತಿಂಗಳು ಸುರಿದ ಮಹಾಮಳೆಯಿಂದಾಗಿ ಗುಡ್ಡ ಕುಸಿದು, ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿತ್ತು. ಹೀಗಾಗಿ ಆಗಸ್ಟ್ 9 ರಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚಾರ ಬಂದ್ ಆಗಿದ್ದರಿಂದ ಚಿಕ್ಕಮಗಳೂರು-ದಕ್ಷಿಣ ಕನ್ನಡ ಸಂಪರ್ಕ ಕಡಿತವಾಗಿತ್ತು.

    ಬಿರುಗಾಳಿ ಸಹಿತ ಭಾರೀ ಮಳಯಾದ ಪರಿಣಾಮ ಹಾಳಾದ ರಸ್ತೆಯನ್ನು ಶಾಶ್ವತವಾಗಿ ದುರಸ್ತಿ ಮಾಡಲು ಸುಮಾರು 300 ಕೋಟಿ ರೂ. ಅನುದಾನದ ಅವಶ್ಯಕತೆಯಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

    ಷರತ್ತು ಏನು?
    ಘಾಟಿಯಲ್ಲಿ ಪ್ರತಿ ಗಂಟೆಗೆ 20 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುವುದು, ಭೂ ಕುಸಿತದಿಂದ ರಸ್ತೆಗೆ ಸಮಸ್ಯೆ ಆಗಿರುವುದರಿಂದ ಜಾಗರೂಕತೆಯಿಂದ ಚಾಲನೆ ಮಾಡುವುದು, ಫೋಟೋಗ್ರಫಿ, ಸೆಲ್ಫಿ ತೆಗೆಯುವುದಕ್ಕೆ ನಿಷೇಧ ವಿಧಿಸಲಾಗಿದೆ.

    ಕಾರುಗಳು, ಜೀಪು, ಟೆಂಪೋ, ವ್ಯಾನ್, ಎಲ್‍ಸಿವಿ(ಮಿನಿ ವ್ಯಾನ್), ಅಂಬುಲೆನ್ಸ್, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬುಲೆಟ್ ಟಾಂಕರ್ಸ್, ಷಿಪ್ ಕಾರ್ಗೋ ಕಾಂಟೈನರ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಸಾರ್ವಜನಿಕರು ಸಂಚರಿಸುವ ಎಲ್ಲ ಸರ್ಕಾರಿ, ಖಾಸಗಿ ಬಸ್ಸುಗಳ ಸಂಚಾರವನ್ನು ನಿಷೇಧಿಸಲಾಗಿದೆ.

  • ನೆರೆಯಿಂದ ಮನೆ, ಜಮೀನು ಕಳೆದುಕೊಂಡ ರೈತ- ಮನನೊಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    ನೆರೆಯಿಂದ ಮನೆ, ಜಮೀನು ಕಳೆದುಕೊಂಡ ರೈತ- ಮನನೊಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    ಚಿಕ್ಕಮಗಳೂರು: ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಮನೆ ಹಾಗೂ ತೋಟದ ಜಮೀನು ಕಳೆದುಕೊಂಡಿದ್ದ ರೈತರೊಬ್ಬರು ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಕಾರ್ಗದ್ದೆ ಗ್ರಾಮದಲ್ಲಿ ನಡೆದಿದೆ.

    ಚನ್ನಪ್ಪಗೌಡ (65) ಆತ್ಮಹತ್ಯೆ ಮಾಡಿಕೊಂಡಿರುವ ರೈತರಾಗಿದ್ದು, ಎದೆಗೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ತೋಟದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮೃತ ರೈತ ಚನ್ನಪ್ಪಗೌಡ ಅವರು 5 ಎಕರೆ ಜಮೀನು ಹೊಂದಿದ್ದಾರೆ. ಕಳೆದ ಬಾರಿ ಮಳೆಯಿಂದ ಉಂಟಾಗಿದ್ದ ನೆರೆಯಿಂದ ಗುಡ್ಡ ಕುಸಿತ ಸಂಭವಿಸಿ ಮನೆ ಹಾಗೂ ತೋಟ ಬಹುತೇಕ ನಾಶವಾಗಿತ್ತು. ಇದರಿಂದ ಅವರು ಸಮಸ್ಯೆಗೆ ಸಿಲುಕಿದ್ದರು. ಗುಡ್ಡ ಕುಸಿತದಿಂದ ಸಂಭವಿಸಿದ ಪರಿಣಾಮ ತೋಟ ನಾಶವಾಗಿದ್ದ ಕುರಿತು ಮಾಹಿತಿ ನೀಡಿ ಸರ್ಕಾರದಿಂದ ನೆರವು ನಿರೀಕ್ಷೆ ಮಾಡಿದ್ದರು. ಆದರೆ ನಾಶವಾಗಿದ್ದ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ವರದಿ ನೀಡಿದ್ದರು ಎಂಬ ಮಾಹಿತಿ ಲಭಿಸಿದೆ. ಆದರೆ ಸರ್ಕಾರದಿಂದ ಯಾವುದೇ ಪರಿಹಾರ ಲಭ್ಯವಾಗದ ಕಾರಣ ಮನನೊಂದ ಚನ್ನಪ್ಪಗೌಡ ಅವರು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • ಎಚ್ಚರ ಎಂದು ಸಿಎಂರನ್ನು ತಬ್ಬಿಕೊಂಡು ಮುತ್ತಿಟ್ಟ ವಿನಯ್ ಗುರೂಜಿ

    ಎಚ್ಚರ ಎಂದು ಸಿಎಂರನ್ನು ತಬ್ಬಿಕೊಂಡು ಮುತ್ತಿಟ್ಟ ವಿನಯ್ ಗುರೂಜಿ

    ಚಿಕ್ಕಮಗಳೂರು: ಅಧಿಕಾರಕ್ಕೆ ಯಾವುದೇ ಸಂಚಕಾರ ಬಾರದಂತಿರಲಿ, ಉಳಿದ ಮೂರುವರೇ ವರ್ಷ ನಾನೇ ಸಿಎಂ ಆಗಿರಲೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಾಲ್ಕೈದು ಹೋಮ-ಹವನ, ಯಾಗ-ಯಜ್ಞವನ್ನು ಮಾಡಿದ್ದಾರೆ ಎನ್ನಲಾಗಿದೆ. ಆದರೆ ಯಜ್ಞದ ಬೆನ್ನಲ್ಲೇ ಸಿಎಂಗೆ ಅವಧೂತ ವಿನಯ್ ಗುರೂಜಿ ಎಚ್ಚರದಿಂದ ಹೆಜ್ಜೆ ಇಡಿ ಎಂದಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದಲ್ಲಿ ಅವಧೂತ ವಿನಯ್ ಗುರೂಜಿಯ ಸ್ವರ್ಣ ಪೀಠಿಕೇಶ್ವರಿ ಆಶ್ರಮದಲ್ಲಿ ಸಿಎಂ ಯಡಿಯೂರಪ್ಪ, ಶತರುದ್ರಯಾಗ, ವಿಷ್ಣು ಸಹಸ್ರ ನಾಮ, ಮೃತ್ಯುಂಜಯ ಹೋಮ, ಲಲಿತ ಸಹಸ್ರನಾಮ ಹಾಗೂ ಗಣಪತಿ ಹೋಮ ನಡೆಸಿದರು.

    ವಿನಯ್ ಗುರೂಜಿಯ ಹೋಮದ ಮುಂದಾಳತ್ವ ವಹಿಸಿ, 45 ಪುರೋಹಿತರ ನೇತೃತ್ವದಲ್ಲಿ ಸುಮಾರು ಆರು ಗಂಟೆ ಹೋಮ-ಹವನ ಮಾಡಿಸಿದರು. ಆದರೆ ಹೋಮ ಮುಗಿದು ಸಿಎಂ ಹೊರಡುತ್ತಿದ್ದಂತೆ, ಕಾರಿನ ಬಳಿ ಬಂದ ವಿನಯ್ ಗುರೂಜಿ, ಸಿಎಂ ಯಡಿಯೂರಪ್ಪಗೆ ತಬ್ಬಿಕೊಂಡು ನೆತ್ತಿಗೆ ಮುತ್ತಿಟ್ಟಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೂ ಮೊದಲು ಎಚ್ಚರ, ಎಚ್ಚರದ ಹೆಜ್ಜೆ ಇಡು ಎಂದು ಸಲಹೆ ನೀಡಿದರು.

    ಇದರ ಬೆನ್ನೆಲ್ಲೇ ಹೀಗೆ ಬಾಚಿ ತಬ್ಬಿ ಮುತ್ತಿಕ್ಕಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಯಡಿಯೂರಪ್ಪ ಅವರಿಗೆ ಅಧಿಕಾರ ಸಲೀಸಾಗಿಲ್ವಾ, ಅವರ ಮುಖ್ಯಮಂತ್ರಿ ಹಾದಿಯಲ್ಲೂ ಕಲ್ಲು-ಮುಳ್ಳುಗಳಿದ್ಯಾ, ಬಿಜೆಪಿ ಆಂತರಾಳದಲ್ಲಿ ಬಿಎಸ್‍ವೈ ಬಗ್ಗೆ ಏನಿದ್ಯೋ, ಅವಧೂತರಿಗೆ ಎಲ್ಲವೂ ಗೊತ್ತಿದ್ಯಾ ಎಂಬ ಹಲವು ಪ್ರಶ್ನೆಗಳು ಉದ್ಭವವಾಗಿವೆ.

    ವಿನಯ್ ಗುರುಜಿ ಎಚ್ಚರ ಎಂದಿದ್ದು ಉತ್ತರದ ನೆರೆ, ದಕ್ಷಿಣದ ಮಳೆಯ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡುವುದರಲ್ಲಿ ಎಚ್ಚರ ಎಂದರೋ ಅಥವಾ ನಿಮ್ಮ ಸಿಎಂ ಹಾದಿಯಲ್ಲೇ ಅನಾನುಕೂಲಗಳಿವೆ ಎಚ್ಚರ ಎಂದರೋ ಗೊತ್ತಿಲ್ಲ. ಆದರೆ ಎಚ್ಚರ ಎಂದು ತಬ್ಬಿಕೊಂಡು ನೆತ್ತಿಗೆ ಮುತ್ತಿಕ್ಕಿರೋದು ಮಾತ್ರ ಬಿಎಸ್‍ವೈ ಆತಂಕಕ್ಕಂತೂ ದೂಡಿದೆ.

  • ಮಳೆಗಾಲದಲ್ಲಿ ಮನೆ ತುಂಬಾ ಬೆಂಕಿ ಹರಡಿ ಮಲಗ್ತಿದ್ದಾರೆ ಜನ

    ಮಳೆಗಾಲದಲ್ಲಿ ಮನೆ ತುಂಬಾ ಬೆಂಕಿ ಹರಡಿ ಮಲಗ್ತಿದ್ದಾರೆ ಜನ

    ಚಿಕ್ಕಮಗಳೂರು: ಮಳೆಗಾಲದಲ್ಲಿ ಮನೆ ತುಂಬಾ ಬೆಂಕಿ ಹರಡಿ ಜನ ಮಲಗುತ್ತಿರುವ ದೃಶ್ಯವೊಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಉಗ್ಗೇಹಳ್ಳಿ ಗ್ರಾಮದಲ್ಲಿ ಕಂಡು ಬಂದಿದೆ.

    ಉಗ್ಗೇಹಳ್ಳಿಯ ಹೇಮಾವತಿ ನದಿ ತಟದಲ್ಲಿ 150ಕ್ಕೂ ಹೆಚ್ಚು ದಲಿತ ಕುಟುಂಬಗಳಿವೆ. ಪ್ರತಿ ಮಳೆಗಾಲದಲ್ಲೂ ಈ ಗ್ರಾಮದೊಳಗೆ ಹೇಮಾವತಿ ನದಿ ಹರಿಯುತ್ತದೆ. ಮನೆಯ ಗೋಡೆ ಹಾಗೂ ನೆಲದ ತಂಪನ್ನು ಗ್ರಾಮಸ್ಥರಿಗೆ ಅರಗಿಸಿಕೊಳ್ಳುವುದಕ್ಕೆ ಅಸಾಧ್ಯ. ಅದಕ್ಕಾಗಿ ಮಳೆಗಾಲದಲ್ಲಿ ಮನೆ ತುಂಬಾ ಬೆಂಕಿಯನ್ನು ಹರಡುತ್ತಾರೆ. ಭೂಮಿಯ ಬಿಸಿ ಹೆಚ್ಚಾದ ಮೇಲೆ ಮಲಗುತ್ತಾರೆ.

    ಕಳೆದ ಐವತ್ತು ವರ್ಷಗಳಿಂದ ಮಳೆ ಸುರಿಯುವ ವರ್ಷಗಳಲ್ಲಿ ಗ್ರಾಮಸ್ಥರು ಈ ರೀತಿ ಬದುಕುತ್ತಿದ್ದಾರೆ. ಗ್ರಾಮವನ್ನು ಸ್ಥಳಾಂತರಿಸಿ ಎಂದು ಮಾಡಿದ ಮನವಿ ಪತ್ರಗಳಿಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಕೂಡ ಬಂದಿಲ್ಲ. ಮಳೆ ಹೆಚ್ಚಾಗಿ ಸುರಿದರೆ ಈ ಗ್ರಾಮವೇ ಜಲಾವೃತಗೊಳ್ಳುತ್ತದೆ. ನೀರು ಮನೆಯೊಳಗೂ ಬರುತ್ತೆ ಹಾಗೂ ಮನೆಯೊಳಗಿಂದಲೂ ಉಕ್ಕುತ್ತೆ. ಪ್ರತಿ ಮಳೆಗಾಲದಲ್ಲೂ ಗ್ರಾಮಸ್ಥರು ನೆಮ್ಮದಿಯ ನಿದ್ದೆ ಇಲ್ಲದೆ ಭಯದಿಂದ ರಾತ್ರಿ ಕಳೆಯುತ್ತಾರೆ.

    ಮಳೆಗಾಲದಲ್ಲಿ ಗ್ರಾಮಕ್ಕೆ ಹತ್ತಾರು ತೊಂದರೆ ಜೊತೆ ಅನಾರೋಗ್ಯ ಕೂಡ ಹೆಚ್ಚಾಗುತ್ತದೆ. ಮಳೆಗಾಲ ಬಂದರೆ ಈ ಗ್ರಾಮದವರಿಗೆ ಶೀಥ, ಜ್ವರ ಸೇರಿದಂತೆ ಹಲವು ಸಮಸ್ಯೆ ಎದುರಾಗುತ್ತಿದ್ದು, ಆಸ್ಪತ್ರೆಗೆ ಹೋಗುವುದು ಮಾಮೂಲಿಯಾಗುತ್ತದೆ. ಕಳೆದ ಐವತ್ತು ದಶಕಗಳಿಂದ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಬದುಕುತ್ತಿರುವ ಈ ಗ್ರಾಮಸ್ಥರು ನಮ್ಮನ್ನು ಸ್ಥಳಾಂತರ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

  • ಮಲೆನಾಡಿಯಲ್ಲಿ ಮಳೆ- ಬಯಲುಸೀಮೆ ಕೊಳವೆ ಬಾವಿಯಲ್ಲಿ ಉಕ್ಕಿ ಹರಿಯುತ್ತಿದೆ ನೀರು

    ಮಲೆನಾಡಿಯಲ್ಲಿ ಮಳೆ- ಬಯಲುಸೀಮೆ ಕೊಳವೆ ಬಾವಿಯಲ್ಲಿ ಉಕ್ಕಿ ಹರಿಯುತ್ತಿದೆ ನೀರು

    ಚಿಕ್ಕಮಗಳೂರು: ಮಲೆನಾಡಿನಲ್ಲಿ ಸುರಿದ ಭಾರೀ ಮಳೆಗೆ ಬಯಲುಸೀಮೆಯ ಕೊಳವೆ ಬಾವಿಯೊಂದು ಉಕ್ಕಿ ಹರಿಯುತ್ತಿರುವ ಪ್ರಕೃತಿಯ ವೈಚಿತ್ರ್ಯಕ್ಕೆ ಕಾಫಿನಾಡು ಸಾಕ್ಷಿಯಾಗಿದೆ.

    ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದ ರಮೇಶ್ ಅವರ ತೋಟದ ಕೊಳವೆ ಬಾವಿಯಲ್ಲಿ ಮೋಟರ್ ಆನ್ ಮಾಡದಿದ್ದರೂ ನೀರು ಚಿಮ್ಮುತ್ತಿದೆ. ಇದನ್ನು ನೋಡಲು ಗ್ರಾಮಸ್ಥರು ತೋಟಕ್ಕೆ ಭೇಟಿ ನೀಡುತ್ತಿದ್ದಾರೆ. ಕೊಳವೆ ಬಾವಿಯಿಂದ ನೀರು ಉಕ್ಕುತ್ತಿರುವುದನ್ನು ಕಂಡು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಮಲೆನಾಡಿಗೆ ಹೋಲಿಸಿದರೆ ಬಯಲುಸೀಮೆಯಲ್ಲಿ ಮಳೆ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ಕಡೂರು ತಾಲೂಕು 2 ದಶಕಗಳಿಂದ ಶಾಶ್ವತ ಬರಗಾಲಕ್ಕೆ ತುತ್ತಾಗಿತ್ತು. ಆದರೆ ಈ ಬಾರಿ ಸುರಿದ ಕಡಿಮೆ ಪ್ರಮಾಣದ ಮಳೆಗೆ ಕೊಳವೆ ಬಾವಿ ತುಂಬಿ ಹರಿಯುತ್ತಿರುವುದನ್ನು ಜನರು ಕುತೂಹಲದಿಂದ ವೀಕ್ಷಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಮ್ಮೆದೊಡ್ಡಿ ಗ್ರಾಮಸ್ಥರೊಬ್ಬರು, ಮಲೆನಾಡಿಯಲ್ಲಿ ಆಕಾಶದಿಂದ ಮಳೆಯಾದರೆ, ಬಯಲುಸೀಮೆಯಲ್ಲಿ ಭೂಮಿಯಿಂದ ಜಲ ಉಕ್ಕುತ್ತಿದೆ. ಇಂತಹ ಪ್ರಕೃತಿ ವೈಚಿತ್ರ್ಯಕ್ಕೆ ಕಾಫಿನಾಡು ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

  • ರಕ್ಷಿಸಿಕೊಳ್ಳುವ ಭರದಲ್ಲಿ ಗುಡ್ಡದಿಂದ ಅಡುಗೆ ಮನೆಯೊಳಗೆ ಜಿಗಿದ ಜಿಂಕೆ

    ರಕ್ಷಿಸಿಕೊಳ್ಳುವ ಭರದಲ್ಲಿ ಗುಡ್ಡದಿಂದ ಅಡುಗೆ ಮನೆಯೊಳಗೆ ಜಿಗಿದ ಜಿಂಕೆ

    ಚಿಕ್ಕಮಗಳೂರು: ನಾಯಿಗಳಿಂದ ಪಾರಾಗಲು ಗುಡ್ಡದಿಂದ ಜಿಗಿದ ಜಿಂಕೆಯೊಂದು ಮನೆಯ ಅಡುಗೆ ಕೊಣೆಯೊಳಗೆ ಬಂದು ಬಿದ್ದ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಗುಡ್ಡದ ಮೇಲಿದ್ದ ಜಿಂಕೆಯನ್ನು ಕಂಡ ನಾಯಿಗಳು ಅದರ ಮೇಲೆ ದಾಳಿ ಮಾಡಲು ಮುಂದಾಗಿವೆ. ಈ ವೇಳೆ ಭಯದಿಂದ ಓಡಿದ ಜಿಂಕೆ ಸುಮಾರು 10-15 ಅಡಿ ಎತ್ತರದಿಂದ ಮನೆ ಮೇಲೆ ಜಿಗಿದಿದೆ. ಈ ವೇಳೆ ಮನೆಯ ಹೆಂಚು, ರೂಪಿಂಗ್ ಮುರಿದಿದ್ದು, ಜಿಂಕೆ ಅಡುಗೆ ಮನೆಯೊಳಗೆ ಬಿದ್ದಿದೆ.

    ಅಡುಗೆ ಮನೆಯಲ್ಲಿದ್ದ ಶ್ರೀನಿವಾಸ್ ಹಾಗೂ ಅನೂಪ್‍ಗೆ ಗಾಯವಾಗಿ ಇಬ್ಬರನ್ನೂ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಂಕೆ ಕೂಡ ಬಿದ್ದ ರಭಸಕ್ಕೆ ಗಾಯಗೊಂಡಿದ್ದು, ಪ್ರಾಣವನ್ನು ಉಳಿಸಿಕೊಳ್ಳಲು ಜಿಂಕೆ ಬಿದ್ದ ಕೂಡಲೇ ಎದ್ದು ಓಡಿ ಹೋಗಿದೆ. ಸ್ಥಳಕ್ಕೆ ಮೂಡಿಗೆರೆ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

  • ಮಲೆನಾಡಲ್ಲಿ ಮತ್ತೆ ವರುಣನ ಆರ್ಭಟ – ಮೈದುಂಬಿ ಹರೀತಿವೆ ನದಿಗಳು

    ಮಲೆನಾಡಲ್ಲಿ ಮತ್ತೆ ವರುಣನ ಆರ್ಭಟ – ಮೈದುಂಬಿ ಹರೀತಿವೆ ನದಿಗಳು

    ಚಿಕ್ಕಮಗಳೂರು: ಮಲೆನಾಡಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಭಾರೀ ಮಳೆಯಿಂದ ಜನ ಜೀವನ ತತ್ತರವಾಗಿದೆ.

    ಚಿಕ್ಕಮಗಳೂರಿನ ಮೂಡಿಗೆರೆಯ ದಾರದಹಳ್ಳಿ, ಬೈರಾಪುರ, ಬಣಕಲ್, ಕೊಟ್ಟಿಗೆಹಾರ, ಜಾವಳಿ, ಸುತ್ತಾಮುತ್ತ ಭಾರೀ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನ ಹನುಮನಹಳ್ಳಿಯಲ್ಲಿ ಎರಡು ಎಕರೆ ಪ್ರದೇಶದಲ್ಲಿ ಭೂಮಿ ಕುಸಿದಿದೆ. ಪರಿಣಾಮ 2 ಎಕರೆ ಕಾಫಿ ಸಂಪೂರ್ಣ ನಾಶವಾಗಿದೆ. ತಾರಾನಾಥ್ ಎಂಬವರಿಗೆ ಈ ತೋಟ ಸೇರಿದ್ದು, ಕಾಫಿ, ಮೆಣಸು, ಅಡಿಕೆ ಸಂಪೂರ್ಣ ಹಾನಿಯಾಗಿದೆ.

    ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು ತಾಲೂಕಿನಲ್ಲೂ ಮಳೆಯಾಗುತ್ತಿದ್ದು, ಪರಿಣಾಮ ನದಿಗಳ ಹರಿವಿನ ಮಟ್ಟ ಹೆಚ್ಚಾಗಿದೆ. ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದೆ. ಕುದುರೆಮುಖ, ಕಳಸ, ಸಂಸೆ, ಬಾಳೆಹೊಳೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಹೆಬ್ಬಾಳೆ ಸೇತುವೆ ಮುಳುಗಡೆಗೆ ಇನ್ನೂ ಒಂದೇ ಅಡಿ ಬಾಕಿ ಇದೆ.

    ಕಳಸ ಹೊರನಾಡಿನ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಒಂದು ವೇಳೆ ಹೆಬ್ಬಾಳೆ ಸೇತುವೆ ಮುಳುಗಡೆಯಾದರೆ ಹೊರನಾಡು ಸಂಪರ್ಕ ಸಂಪೂರ್ಣ ಕಡಿತವಾಗುತ್ತದೆ. ಕಳೆದ ವರ್ಷ 17 ಬಾರಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿತ್ತು. ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಪ್ರವಾಹದ ಭೀತಿಯಲ್ಲಿ ಜನರು ಜೀವಿಸುತ್ತಿದ್ದಾರೆ.

    ಇತ್ತ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಮಟ್ಟ ನೀರಿ ಮಲಪ್ರಭಾ ನದಿ ಹರಿಯುತ್ತಿದೆ. ಇದರಿಂದ ಮತ್ತೆ ರಾಮದುರ್ಗ ತಾಲೂಕಿನ ಹಲವು ಗ್ರಾಮಗಳು ಮುಳುಗಡೆ ಭೀತಿಯಿಂದ ಇದ್ದಾವೆ. ಈಗಾಗಲೇ ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದ ಒಳಗೆ ನೀರು ಬಂದಿದೆ. ಇದರಿಂದ ಮತ್ತೊಮ್ಮೆ ಗ್ರಾಮ ಮುಳುಗುವ ಆತಂಕದಲ್ಲಿ ಗ್ರಾಮಸ್ಥರು ತಾವಾಗಿಯೇ ಊರು ತೊರೆಯುತ್ತಿದ್ದಾರೆ.

  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ – ಭೂಮಿಯೊಳಗಿನ ಶಬ್ದಕ್ಕೆ ಹೆದರಿ ಮನೆ ಬಿಟ್ಟ ಮಾಲೀಕ

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ – ಭೂಮಿಯೊಳಗಿನ ಶಬ್ದಕ್ಕೆ ಹೆದರಿ ಮನೆ ಬಿಟ್ಟ ಮಾಲೀಕ

    ಚಿಕ್ಕಮಗಳೂರು: ಮೂರು ದಿನಗಳಿಂದ ದಿನ ಕಳೆದಂತೆ ಮಳೆ ಪ್ರಮಾಣ ಜಾಸ್ತಿ ಆಗುತ್ತಿದೆ. ಭಾರೀ ಮಳೆ-ಗಾಳಿಯಿಂದ ಮಲೆನಾಡಿಗರ ಆತಂಕ ಹೆಚ್ಚಾಗಿದ್ದು, ಶಬ್ದಕ್ಕೆ ಹೆದರಿ ಮಾಲೀಕ ಮನೆ ಖಾಲಿ ಮಾಡಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಕಮಕಿ ಗ್ರಾಮದ ಪ್ರಶಾಂತ್ ಎಂಬವರು ಭೂಮಿಯೊಳಗಿನ ಕೇಳಿ ಬಂದ ಶಬ್ದಕ್ಕೆ ಹೆದರಿ ಮನೆ ಖಾಲಿ ಮಾಡಿದ್ದಾರೆ. ಇಂದು ಬೆಳಗ್ಗೆ ಸುಮಾರು 4.45ಕ್ಕೆ 2-3 ಸೆಕೆಂಡ್ ಭೂಮಿಯೊಳಗಿಂದ ಭಾರೀ ಶಬ್ದ ಕೇಳಿ ಬಂದಿದೆ. ಈ ಶಬ್ದಕ್ಕೆ ಹೆದರಿದ ಮಾಲೀಕ ಪ್ರಶಾಂತ್ ಅವರು ತಮ್ಮ ಕುಟುಂಬದ ಜೊತೆ ಮನೆ ಖಾಲಿ ಮಾಡಿ ಮೂಡಿಗೆರೆಗೆ ಬಂದಿದ್ದಾರೆ.

    ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬೀಸುತ್ತಿರುವ ರಣಗಾಳಿಗೆ ಮಲೆನಾಡಿಗರು ಊರು ಬೀಡುವಂತೆ ಮಾಡುತ್ತಿದೆ. ಮೂಡಿಗೆರೆ ತಾಳೂಕಿನ ಚನ್ನಹಡ್ಲು, ಬಾಳೂರು, ಸುಂದರಬೈಲು, ಆಲೇಖಾನ್ ಹೊರಟ್ಟಿ, ಚಕ್ಕಮಕ್ಕಿ ಗ್ರಾಮಗಳಲ್ಲಿ ಭೂಮಿಯೊಳಗಿಂದ ನಾಲ್ಕೈದು ಸೆಕೆಂಡ್ ಭಾರೀ ಶಬ್ದ ಕೇಳಿ ಬರುತ್ತಿದ್ದು, ಜನ ರಾತ್ರೋರಾತ್ರಿ ಮನೆ ಬಿಟ್ಟು ಬರುತ್ತಿದ್ದಾರೆ.

    ಕಳೆದ ತಿಂಗಳ ಮಳೆಗೆ ಮನೆಯ ಮೇಲ್ಛಾವಣೆ ಕುಸಿಯುತ್ತಿತ್ತು. ಆದರೆ ಎರಡನೇ ರೌಂಡಿನ ಮಳೆರಾಯನ ಅಬ್ಬರಕ್ಕೆ ಮನೆಯ ತಳಪಾಯವೇ ಕುಸಿಯುವಂತಾಗಿದೆ. ಆಗಸ್ಟ್ ತಿಂಗಳ ಮಳೆಯಿಂದ ಕುಸಿದಿದ್ದ ಬೆಟ್ಟಗುಡ್ಡಗಳ ಹಾಸುಪಾಸಿನಲ್ಲೇ ಮತ್ತೆ ಕುಸಿತ ಉಂಟಾ ಆಗುತ್ತಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ದಾರಿ ಕಾಣದಂತಾಗಿದೆ. ಮೂಡಿಗೆರೆಯ ಕೊಟ್ಟಿಗೆಹಾರ, ದುರ್ಗದಹಳ್ಳಿ, ಮಲೆಮನೆ, ಹಿರೇಬೈಲು, ಜಾವಳಿ, ಬಣಕಲ್ ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

  • ಮತ್ತೆ ಭಾರೀ ಮಳೆ – ಉತ್ತರ ಕನ್ನಡ, ದಕ್ಷಿಣಕನ್ನಡ ಚಿಕ್ಕಮಗಳೂರು, ಕೊಡಗಿನಲ್ಲಿ ಪ್ರವಾಹ ಭೀತಿ

    ಮತ್ತೆ ಭಾರೀ ಮಳೆ – ಉತ್ತರ ಕನ್ನಡ, ದಕ್ಷಿಣಕನ್ನಡ ಚಿಕ್ಕಮಗಳೂರು, ಕೊಡಗಿನಲ್ಲಿ ಪ್ರವಾಹ ಭೀತಿ

    – ಕುಮಾರಾಧಾರ ಸ್ನಾನಘಟ್ಟ ಮುಳುಗಡೆ
    – ರಂಗನತಿಟ್ಟಿನಲ್ಲಿ ಬೋಟಿಂಗ್ ಸ್ಥಗಿತ

    ಬೆಂಗಳೂರು: ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಮಹಾಪ್ರವಾಹಕ್ಕೆ ನಲುಗಿ ಈಗಷ್ಟೇ ಚೇತರಿಸಿಕೊಳ್ತಿದೆ. ಆದರೆ ಅಷ್ಟರಲ್ಲೇ ವರುಣದೇವ ಸೆಕೆಂಡ್ ರೌಂಡ್ ಆಟಕ್ಕೆ ನಿಂತಿದ್ದಾನೆ.

    ಮಳೆಯಿಂದ ಉತ್ತರ ಕರ್ನಾಟಕ, ಕಾಫಿನಾಡು, ಶಿವಮೊಗ್ಗ ಈಗಾಗಲೇ ಹೈರಾಣಾಗಿದೆ. ಕಂಡು ಕೇಳರಿಯದ ಪ್ರವಾಹದಿಂದ ಬಸವಳಿದಿದೆ. ಆದರೆ ಅದರ ನಡುವೆ ಈಗ ವರುಣದೇವನ ಸೆಕೆಂಡ್ ರೌಂಡ್ ಅಬ್ಬರ ಶುರುವಾದಂತಿದೆ. ಉತ್ತರ ಕರ್ನಾಟಕ, ಚಿಕ್ಕಮಗಳೂರು, ಕೊಡಗಿನಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಕೊಯ್ನಾ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಅಧಿಕ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಚಿಕ್ಕೋಡಿಯ ಯಡೂರು-ಕಲ್ಲೋಳ ಸೇತುವೆ ಜಲಾವೃತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಸ್‍ಡಿಆರ್‍ಎಫ್ ತಂಡ ಆಗಮಿಸಿದ್ದು, ಜಾನುವಾರು, ಅಗತ್ಯ ವಸ್ತುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನಿವಾಸಿಗಳಿಗೆ ಮನವಿ ಮಾಡಲಾಗಿದೆ.

    ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯದ 5 ಗೇಟ್‍ಗಳನ್ನು ತೆರೆದು 69 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮದ 15 ಮನೆಗಳು ಸಂಪೂರ್ಣ ಜಲಾವೃತವಾಗಿದೆ. ಇತ್ತ ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಕಾಳಿ ನದಿ ಪ್ರವಾಹಕ್ಕೆ ಮನೆ ಕುಸಿದು ಬಿದ್ದಿದೆ. ಪಶ್ಚಿಮ ಘಟ್ಟಗಳಲ್ಲಿ ಮತ್ತೆ ಮಳೆ ಆರ್ಭಟ ಜೋರಾಗಿದ್ದು, ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕುಮಾರಾಧಾರ ನದಿಯ ಸ್ನಾನಘಟ್ಟ ಮುಳುಗಡೆ ಆಗಿದೆ. ಬೆಳ್ತಂಗಡಿ, ಸುಬ್ರಹ್ಮಣ್ಯ, ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಭಾರೀ ಮಳೆ ಆಗುತ್ತಿದ್ದು, ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ.

    ಕೆಆರ್‍ಎಸ್ ಡ್ಯಾಮ್‍ನಿಂದ 43 ಸಾವಿರ ಕ್ಯೂಸೆಕ್‍ಗೆ ನೀರನ್ನು ಹರಿಬಿಡಲಾಗುತ್ತಿದೆ. ಡ್ಯಾಮ್ ಭರ್ತಿಯಾಗಿರುವುದರಿಂದ ಮುಂಜಾಗೃತ ಕ್ರಮವಾಗಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಆದ್ದರಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಹಾಸನದಲ್ಲಿ ಕಳೆದ 15 ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸುತ್ತಿದ್ದಾನೆ. ಸಕಲೇಶಪುರ, ಅರಕಲಗೂಡು, ಆಲೂರು ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದ್ದು, ಜನರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

    ಕೊಡಗಿನಲ್ಲಿ ಮಳೆ ಹಿನ್ನೆಲೆಯಲ್ಲಿ ಮತ್ತೆ ಭೂಕುಸಿತದ ಆತಂಕ ಶುರುವಾಗಿದೆ. ಮಂಗಳೂರು-ಮಡಿಕೇರಿ ರಸ್ತೆಯ ಜೋಡುಪಾಲ ಬಳಿ ಭೂಕುಸಿತವಾಗಿದೆ. 2 ಮನೆಗಳು ಬಿರುಕುಬಿಟ್ಟಿದೆ. ಭಾಗಮಂಡಲ, ತಲಕಾವೇರಿ ಮತ್ತು ಬ್ರಹ್ಮಗಿರಿ ಬೆಟ್ಟಪ್ರದೇಶಗಳಲ್ಲಿ ಮಳೆ ಬಿಟ್ಟುಬಿಡದೆ ಧಾರಕಾರವಾಗಿ ಸುರಿಯುತ್ತಿದೆ. ಉಕ್ಕಿ ಹರಿದಿದ್ದ ಕಾವೇರಿ ಮತ್ತೆ ಪ್ರವಾಹ ಭೀತಿ ಸೃಷ್ಟಿಸುತ್ತಿದ್ದಾಳೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಾದ್ಯಂತ ಧಾರಾಕಾರ ಮಳೆ ಆಗ್ತಿದೆ. ಮಳೆ ನಡುವೆಯೇ ಭೂಮಿ ಒಳಗಿನಿಂದ ವಿಚಿತ್ರ ಶಬ್ಧ ಕೇಳಿ ಬರುತ್ತಿದೆ. ಶಬ್ದ ಕೇಳಿ ಜನ ಭಯ ಬೀಳುತ್ತಿದ್ದಾರೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿದೆ.