Tag: Chikkamagaluru

  • ಮೈದುಂಬಿದ ಭದ್ರೆಯ ಒಡಲಲ್ಲಿ ಮೊದಲ ಬಾರಿ ​​ರ‍್ಯಾಫ್ಟಿಂಗ್‌ ಆಯೋಜನೆ

    ಮೈದುಂಬಿದ ಭದ್ರೆಯ ಒಡಲಲ್ಲಿ ಮೊದಲ ಬಾರಿ ​​ರ‍್ಯಾಫ್ಟಿಂಗ್‌ ಆಯೋಜನೆ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬರಿ ಕಾರ್ ರ‍್ಯಾಲಿಯಲ್ಲ. ಮಲೆನಾಡಿನ ಗ್ರಾಮೀಣ ಕ್ರೀಡೆಗಳು ಕಾಫಿನಾಡಲ್ಲಿ ಇಂದಿಗೂ ಜೀವಂತ. ಮೈದುಂಬಿ ಹರಿಯುತ್ತಿರೋ ಭದ್ರೆಯ ಒಡಲಲ್ಲಿ ಮೊದಲ ಬಾರಿಗೆ ಸಾಹಸಮಯ ​​ರ‍್ಯಾಫ್ಟಿಂಗ್‌ ಆಯೋಜನೆ ಮಾಡಲಾಗಿದೆ.

    ಜಿಲ್ಲೆಯಲ್ಲಿ ಸುಮಾರು 300 ಕಿ.ಮೀ. ವ್ಯಾಪ್ತಿಯಲ್ಲಿ ಭದ್ರ ನದಿ ತುಂಬ ವೇಗವಾಗಿ ಹರಿಯುತ್ತದೆ. ಮಳೆಗಾಲದಲ್ಲಿ ಮೂಡಿಗೆರೆ ತಾಲೂಕಿನ ಬಾಳೆಹೊಳೆ ಬಳಿ ಕಳೆದ ಎಂಟತ್ತು ವರ್ಷಗಳಿಂದ ​​ರ‍್ಯಾಫ್ಟಿಂಗ್‌ ನಡೆಯುತ್ತಿದೆ. ಜಿಲ್ಲೆಯ ಏಸ್ ಪ್ಯಾಡಲರ್ರ್ಸ್ ಸಂಸ್ಥೆ ಇದೇ ಮೊದಲ ಬಾರಿಗೆ ಭದ್ರೆಯ ಒಡಲಲ್ಲಿ ​​ರ‍್ಯಾಫ್ಟಿಂಗ್‌ ನಡೆಸುತ್ತಿದೆ.

    ಏಸ್ ಸಂಸ್ಥೆ ಭದ್ರಾ ನದಿಯಲ್ಲಿ ಸಮೀಕ್ಷೆ ಕೂಡ ನಡೆಸಿದೆ. ಅಪಾಯವಿಲ್ಲದೇ ​​ರ‍್ಯಾಫ್ಟಿಂಗ್‌ ನಡೆಸಲು ಜಿಲ್ಲಾಡಳಿತದ ಅನುಮತಿಯೂ ಇದೆ. ಕುದುರೆಮುಖ, ಕಳಸ ಸೇರಿದಂತೆ ಘಟ್ಟಪ್ರದೇಶದಲ್ಲಿ ಮಳೆಯಾಗುತ್ತಿದ್ದರೂ ಮೈಕೊರೆಯೋ ಚಳಿಯನ್ನೂ ಲೆಕ್ಕಿಸಿದೆ ಪ್ರವಾಸಿಗರು ​​ರ‍್ಯಾಫ್ಟಿಂಗ್‌ನ ಎಂಜಾಯ್ ಮಾಡುತ್ತಿದ್ದಾರೆ. ಹಿಮಾಚಲ ಪ್ರದೇಶ, ಉತ್ತರಪ್ರದೇಶ, ಸೇರಿದಂತೆ ಉತ್ತರ ಭಾರತದಿಂದ ಬಂದಿರೋ ರಿವರ್ ಗೈಡರ್ಸ್‍ಗಳು ಉಪಯುಕ್ತವಾಗಿ ಗೈಡ್ ಮಾಡುತ್ತಿದ್ದಾರೆ.

    ಭದ್ರ ನದಿಯಲ್ಲಿ ಬೋಟ್ ಮೇಲೆ ಕುಳಿತವರಿಗೆ ಕೆಳಗಿಳಿಯಲು ಮನಸ್ಸಾಗೋಲ್ಲ. 4 ರಿಂದ 10 ಕಿ.ಮೀ. ವರೆಗೂ ಸಾಗಬಹುದಾದ ​​ರ‍್ಯಾಫ್ಟಿಂಗ್‌ನಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರು ಪಾಲ್ಗೊಳ್ಳುತ್ತಿದ್ದಾರೆ. ನದಿಯಲ್ಲಿ ದೊಡ್ಡ-ದೊಡ್ಡ ಗಾತ್ರದ ಬಂಡೆಗಳಿದ್ದು ಅಲ್ಲಲ್ಲೇ ಭಾರಿ ಗಾತ್ರದ ಅಲೆಗಳನ್ನು ಸೃಷ್ಠಿಸುತ್ತವೆ. ಬಂಡೆಯ ಮೇಲ್ಭಾಗದಲ್ಲಿ ಬೋಟ್‍ಗಳು ಸಾಗುವಾಗಿನ ಅನುಭವ ಮತ್ತಷ್ಟು ರೋಚಕ. ಈ ವೇಳೆ ರಬ್ಬರ್ ದೋಣಿಯನ್ನು ನಿಯಂತ್ರಿಸೋ ಗೈಡ್‍ಗಳ ಸಾಹಸ ನಿಜಕ್ಕೂ ಅಚ್ಚರಿ.

    ಹೊರಜಿಲ್ಲೆ, ಹೊರರಾಜ್ಯಗಳಿಂದ ಕಾಫಿನಾಡಿಗೆ ಆಗಮಿಸೋ ಪ್ರವಾಸಿಗರು ​​ರ‍್ಯಾಫ್ಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಸರ್ಕಾರ ಕೂಡ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲ್ಲಿ ವಿದ್ಯಾರ್ಥಿಗಳಿಗೆ ​​ರ‍್ಯಾಫ್ಟಿಂಗ್‌ ಆಯೋಜಿಸಿತ್ತು. ಸರ್ಕಾರ ಕೂಡ ಸಂಪೂರ್ಣ ಸಾಥ್ ನೀಡಿದರೆ ಕಾಫಿನಾಡಿನ ಪ್ರವಾಸಿ ತಾಣಗಳು ಮತ್ತಷ್ಟು ಜಗಜ್ಜಾಹಿರಾಗೋದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಸ್ಥಳೀಯರು.

  • ಪಶ್ಚಿಮಘಟ್ಟಗಳಲ್ಲಿ ಮುಂದುವರಿದ ಭಾರೀ ಮಳೆ – ಚಾರ್ಮಾಡಿ ಘಾಟ್ ರಸ್ತೆ ಮತ್ತೆ ಕುಸಿಯುವ ಭೀತಿ

    ಪಶ್ಚಿಮಘಟ್ಟಗಳಲ್ಲಿ ಮುಂದುವರಿದ ಭಾರೀ ಮಳೆ – ಚಾರ್ಮಾಡಿ ಘಾಟ್ ರಸ್ತೆ ಮತ್ತೆ ಕುಸಿಯುವ ಭೀತಿ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಮತ್ತೆ ವರುಣ ಎಂಟ್ರಿ ಕೊಟ್ಟಿದೆ. ಒಂದು ತಿಂಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ಈಗ ಮತ್ತೆ ಅಬ್ಬರಿಸುತ್ತಿದ್ದಾನೆ.

    ಹೌದು. ಆಗಸ್ಟ್ ಮೊದಲ ವಾರದ ಮಳೆಗೆ ಮಲೆನಾಡು ಅಲ್ಲೋಲ ಕಲ್ಲೋಲವಾಗಿತ್ತು. ತಿಂಗಳಿಂದ ಬಿಡುವು ಕೊಟ್ಟಿದ್ದರಿಂದ ಇನ್ನೇನು ಮಳೆ ನಿಂತೆಂದು ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮೂಡಿಗೆರೆಯ ಚಾರ್ಮಾಡಿ ಘಾಟ್, ಆಲೇಖಾನ್ ಹೊರಟ್ಟಿ, ಜಾವಳಿ, ಕೆಳಗೂರು, ಮಧುಗುಂಡಿ, ಸುಂಕಸಾಲೆ, ಕಳಸ, ಕುದುರೆಮುಖ ಸೇರಿದಂತೆ ಹಲವೆಡೆ ಸುರಿದ ಮಳೆ ಅಬ್ಬರಕ್ಕೆ ಜನ ಮತ್ತೆ ಕಂಗಾಲಾಗಿದ್ದಾರೆ.

    ಚಾರ್ಮಾಡಿ ಘಾಟಿನ ರಣಭೀಕರ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿದಿದ್ದರೆ, ರಸ್ತೆ ಮಧ್ಯೆ ಅರ್ಧ ಅಡಿ ನೀರು ನಿಂತು ಆತಂಕ ಸೃಷ್ಠಿಸಿತ್ತು. ಸದ್ಯ ಲಘು ವಾಹನಗಳಿಗಷ್ಟೇ ಅವಕಾಶ ಕಲ್ಪಿಸಿದ್ದು, ಮತ್ತೆ ಗುಡ್ಡ ಕುಸಿಯೋ ಭೀತಿ ಎದುರಾಗಿದೆ. ಹಾಗಾಗಿ ಮಳೆ ನಿಲ್ಲೋವರೆಗೂ ಚಿಕ್ಕಮಗಳೂರು-ದಕ್ಷಿಣ ಕನ್ನಡದ ಸಂಪರ್ಕ ಸೇತುವೆಯಾಗಿರೋ ಚಾರ್ಮಾಡಿ ಘಾಟ್ ಮಾರ್ಗವನ್ನ ಬಂದ್ ಮಾಡಿದರೆ ಒಳ್ಳೆಯದು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

    ಮಳೆ ಕೇವಲ ಚಾರ್ಮಾಡಿ ಘಾಟಿಗಷ್ಟೆ ಹೊಡೆತ ಕೊಟ್ಟಿಲ್ಲ. ಬದಲಾಗಿ ಚಾರ್ಮಾಡಿ ಘಾಟ್ ತಪ್ಪಲಲ್ಲಿರೋ ಜಿಲ್ಲೆಯ ಗಡಿಗ್ರಾಮ ಆಲೇಖಾನ್ ಹೊರಟ್ಟಿಗೂ ಕೊಟ್ಟಿದೆ. ಆಗಸ್ಟ್ ಮಳೆಗೆ ಗ್ರಾಮದ ರಸ್ತೆಯೇ ಸಂಪೂರ್ಣ ಕೊಚ್ಚಿ ಹೋಗಿತ್ತು. ಇದೇ ಗ್ರಾಮದಲ್ಲಿ ದಾರಿ ಕಾಣದೆ ಕಂಗಾಲಾಗಿದ್ದ ಜನರನ್ನ ಯೋಧರು ರಕ್ಷಿಸಿದ್ದರು. ತಿಂಗಳುಗಳ ಕಾಲ ನಿರಾಶ್ರಿತರ ಕೇಂದ್ರದಲ್ಲಿದ್ದ ಗ್ರಾಮಸ್ಥರು 20 ದಿನಗಳ ಹಿಂದಷ್ಟೇ ಗ್ರಾಮಕ್ಕೆ ತೆರಳಿದ್ದರು. ಕೊಚ್ಚಿ ಹೋಗಿದ್ದ ರಸ್ತೆಯನ್ನ ಇತ್ತೀಚೆಗಷ್ಟೇ ದುರಸ್ತಿ ಮಾಡಿದರು. ಆದರೆ ಇದೀಗ ಮತ್ತೆ ಸುರಿದ ಮಳೆಗೆ ಆಲೇಖಾನ್ ಹೊರಟ್ಟಿ ಗ್ರಾಮದ ರಸ್ತೆ ಪುನಃ ಕೊಚ್ಚಿಕೊಂಡು ಹೋಗಿದೆ. ಇಲ್ಲಿನ ನಿವಾಸಿಗಳಿಗೆ ನಾವು ಇಲ್ಲೇ ಇದ್ದರೆ ಮುಂದೊಂದು ದಿನ ನಾವು ಕೊಚ್ಚಿ ಹೋಗುತ್ತೇವಾ ಎಂಬ ಆತಂಕ ಶುರುವಾಗಿದೆ. ಹಾಗಾಗಿ ಇಲ್ಲಿನ ಜನ ಸರ್ಕಾರ ಕೂಡಲೇ ನಮ್ಮನ್ನ ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದಾರೆ.

    ಒಟ್ಟಾರೆ, ಭಾರೀ ಮಳೆಯಿಂದ ನೀರು ಎಲ್ಲೆಂದರಲ್ಲಿ ನುಗ್ಗಿರೋದರಿಂದ ಘಟ್ಟಪ್ರದೇಶದ ಆಸುಪಾಸಿನ ಗ್ರಾಮಗಳಲ್ಲಿ ಮತ್ತೆ ಆತಂಕ ಎದುರಾಗಿದೆ. ಮಧುಗುಂಡಿ, ಮಲೆಮನೆ, ದುರ್ಗದಹಳ್ಳಿ ಜನ ಭಯ ಇಮ್ಮಡಿಗೊಂಡಿದೆ. ಮಧುಗುಂಡಿ ಗ್ರಾಮದ ನೂರಕ್ಕೂ ಹೆಚ್ಚು ಜನ ಇಂದಿಗೂ ನಿರಾಶ್ರಿತ ಕೇಂದ್ರದಲ್ಲಿದ್ದಾರೆ. ಮಳೆ ಹೀಗೆ ಮುಂದುವರಿದರೆ ಮಲೆನಾಡಿನ ಕಥೆ ಏನೋ ಎಂಬ ಆತಂಕ ಮಲೆನಾಡಿಗರಲ್ಲಿ ದಟ್ಟವಾಗಿದೆ.

  • ಪ್ರಕೃತಿಯೇ ನಾಚುವ ಮುಳ್ಳಯ್ಯನಗಿರಿ ಸೊಬಗಿಗೆ ಪ್ರವಾಸಿಗರು ಫಿದಾ

    ಪ್ರಕೃತಿಯೇ ನಾಚುವ ಮುಳ್ಳಯ್ಯನಗಿರಿ ಸೊಬಗಿಗೆ ಪ್ರವಾಸಿಗರು ಫಿದಾ

    ಚಿಕ್ಕಮಗಳೂರು: ಹಸಿರು ಮುತ್ತೈದೆ ಮುಡಿಗೆ ದುಂಡು ಮಲ್ಲಿಗೆ ಸೊಬಗು ಎನ್ನುವಂತೆ, ಮೋಡವೇ ಗಿರಿಗೆ ಮುತ್ತಿಕುತ್ತಿರುವಂತೆ, ಪಶ್ಚಿಮ ಘಟ್ಟದಲ್ಲಿ ಪ್ರಕೃತಿಯೇ ನಾಚುವ ಸೌಂದರ್ಯ ಹೊತ್ತು ಬೀಗುತ್ತಿರುವ ಮುಳ್ಳಯ್ಯನಗಿರಿ ಸೊಬಗಿಗೆ ಪ್ರವಾಸಿಗರು ಫಿದಾ ಆಗಿದ್ದಾರೆ.

    ಹೌದು. ಪ್ರಕೃತಿ ಪ್ರಿಯರು, ಪ್ರವಾಸಿಗರ ಕಣ್ಣಿಗೆ ರಸದೌತಣ ನೀಡುವ ಕಾಫಿನಾಡ ಮುಳ್ಳಯ್ಯನಗಿರಿ ಸೌಂದರ್ಯದ ಬಗ್ಗೆ ಹೇಳಲು ಪದ ಸಾಲದು. ಬರೆಯಲು ಪುಟ ಸಾಲದು. ಪದಗಳಲ್ಲಿ ಪುಟದ ತುಂಬಾ ಬರೆದರೂ ಕಣ್ಣುಗಳು ಆನಂದಿಸುವ ವೈಭೋಗವೇ ಬೇರೆ. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತ ಕಾಫಿನಾಡಲ್ಲಿ ಹೊಸದೊಂದು ಲೋಕವನ್ನೇ ಸೃಷ್ಟಿಸಿದೆ. ಮುಳ್ಳಯ್ಯನಗರಿಯಲ್ಲಿನ ಮೋಡಕವಿದ ವಾತವಾರಣದಲ್ಲಿ ಮೋಡದ ಕಣ್ಣಾಮುಚ್ಚಾಲೆ ಆಟಕ್ಕೆ ಪ್ರವಾಸಿಗರು ಮನಸೋತಿದ್ದಾರೆ.

    ಮುಳ್ಳಯ್ಯನಗಿರಿ ಸೊಬಗಿಗೆ ಕೆಲವೇ ಕೆಲವು ಪ್ರವಾಸಿಗರು ಸಾಕ್ಷಿಯಾಗಿದ್ದಾರೆ. ನಿಮಿಷಕ್ಕೊಮ್ಮೆ ಬದಲಾಗೋ ಇಲ್ಲಿನ ಪ್ರಕೃತಿ ಸೌಂದರ್ಯ ನೋಡನೋಡುತ್ತಿದ್ದಂತೆ ಮತ್ತೊಂದು ಲೋಕ ಸೃಷ್ಟಿಸುತ್ತದೆ. ಅದರಲ್ಲೂ ಭಾನುವಾರದಂದು ಪ್ರವಾಸಿಗರು ಕಂಡ ಮುಳ್ಳಯ್ಯನಗಿರಿಯಂತೂ ಅದ್ಭುತ, ಅತ್ಯದ್ಭುತ ಎನ್ನುವಂತಿತ್ತು. ಇಲ್ಲಿನ ನೈಜ ಪ್ರಕೃತಿಯ ಸೊಬಗನ್ನ ಅಲ್ಲೇ ನಿಂತು ಸವಿಯೋದು ಕೋಟಿ ಪುಣ್ಯವೇ ಸರಿ ಎಂದು ಪ್ರವಾಸಿಗರು ಹಾಡಿ ಹೊಗಳಿದ್ದಾರೆ.

    ಮುಳ್ಳಯ್ಯನಗಿರಿಯ ಸೌಂದರ್ಯಕ್ಕೆ ಸೋತು ಹೋದ ಪ್ರವಾಸಿಗರು ಅಲ್ಲಿನ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಅದ್ಭುತ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ಪ್ರಕೃತಿಯ ಅದ್ಭುತ ಸೊಬಗು ಹೊತ್ತು ಬೀಗುತ್ತಿರುವ ಮುಳ್ಳಯ್ಯನಗಿರಿ ಎಲ್ಲರ ಮನ ಗೆದ್ದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರವಾಸಿಗರ ದಂಡೇ ಪ್ರಕೃತಿಯ ಸೊಬಗನ್ನು ಕಣ್ಣಾರೆ ಆನಂದಿಸಲು ಮುಳ್ಳಯ್ಯನಗಿರಿಯತ್ತ ಹರಿದು ಬರುತ್ತಿದೆ.

  • ಡೀಸೆಲ್ ಖಾಲಿಯಾಗಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ- ಇಬ್ಬರು ಸಾವು

    ಡೀಸೆಲ್ ಖಾಲಿಯಾಗಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ- ಇಬ್ಬರು ಸಾವು

    ಚಿಕ್ಕಮಗಳೂರು: ಡೀಸೆಲ್ ಖಾಲಿಯಾಗಿ ರಸ್ತೆ ಬದಿಗೆ ನಿಂತಿದ್ದ ಲಾರಿಗೆ ಈಶಾನ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ಕಡೂರು ತಾಲೂಕಿನ ಗೌರಿಹಳ್ಳ ಬಳಿ ನಡೆದಿದೆ.

    ಶಿವಮೊಗ್ಗ ಮೂಲದ ಲಾರಿ ಚಾಲಕ ಶರವಣ ಹಾಗೂ ಕಡೂರಿನ ಸರ್ವೆ ಡಿಪಾರ್ಟಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ರುಚಿತಾ (22) ಮೃತ ದುರ್ದೈವಿಗಳು. ರುಚಿತಾ ಮೂಲತಃ ಹಾಸನ ಬೇಲೂರು ತಾಲೂಕಿನ ಹಗರೆ ಗ್ರಾಮದ ನಿವಾಸಿ. ಘಟನೆಯಲ್ಲಿ ಒಟ್ಟು 6 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

    ಡೀಸೆಲ್ ಖಾಲಿಯಾಗಿದ್ದರಿಂದ ಚಾಲಕ ಶರವಣ ಲಾರಿಯನ್ನು ಗೌರಿಹಳ್ಳ ಸಮೀಪದ ರಸ್ತೆ ತಿರುವಿನಲ್ಲಿ ನಿಲ್ಲಿಸಿದ್ದರು. ಬಳಿಕ ಕ್ಯಾನ್‍ನಲ್ಲಿದ್ದ ಡಿಸೇಲ್ ಅನ್ನು ಲಾರಿಗೆ ಹಾಕುತ್ತಿದ್ದಾಗ ವೇಗವಾಗಿ ಬಂದ ಬಸ್ ಚಾಲಕ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಲ್ಲಿಯೆ ಇದ್ದ ಶರವಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಖರಾಯಪಟ್ಟಣ ಪೋಲಿಸರು, ಗಂಭೀರವಾಗಿ ಗಾಯಗೊಂಡಿದ್ದ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಬಸ್‍ನಲ್ಲಿದ್ದ ರುಚಿತಾ ಸೇರಿದಂತೆ 6 ಜನರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಕಡೂರು ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಪೈಕಿ ರುಚಿತಾ ಸೇರಿದಂತೆ ಮೂವರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರು. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ರುಚಿತಾ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  • ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

    ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

    ಚಿಕ್ಕಮಗಳೂರು: ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಸ್ಕ್ರೂ ಡ್ರೈವರ್‌ನಿಂದ ಇರಿದು ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವತಿ ಮೃತಪಟ್ಟಿದ್ದಾಳೆ.

    ಬಿಂದು(23) ಮೃತಪಟ್ಟ ಯುವತಿ. ಬಿಂದು ಎನ್.ಆರ್ ಪುರ ತಾಲೂಕಿನ ಬಾಸಾಪುರ ನಿವಾಸಿಯಾಗಿದ್ದು, ಆರೋಪಿ ಮಿಥುನ್ ಬಾಳೆಹೊನ್ನೂರಿನ ಗಡಿಗೇಶ್ವರದ ನಿವಾಸಿ. ಎನ್.ಆರ್ ಪುರ ತಾಲೂಕಿನ ದೀಪ್ತಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಇಬ್ಬರು 10ನೇ ತರಗತಿ ನಂತರ ಸಂಪರ್ಕದಲ್ಲಿ ಇರಲಿಲ್ಲ. ಬಳಿಕ ಬಿಂದು ಫೇಸ್‍ಬುಕ್‍ನಲ್ಲಿ ಆರೋಪಿ ಮಿಥುನ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದಳು. ಬಿಂದು ಯಾವಾಗಲೂ ಮಿಥುನ್‍ನನ್ನು ಕ್ಲೋಸ್ ಫ್ರೆಂಡ್ ಎಂದು ಹೇಳುತ್ತಿದ್ದಳು. ಮಿಥುನ್ ಯುವತಿಯನ್ನು ತುಂಬಾ ಪ್ರೀತಿಸುತ್ತಿದ್ದನು. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಯುವತಿಗೆ ಭಗ್ನ ಪ್ರೇಮಿಯಿಂದ ಚಾಕು ಇರಿತ

    ನಡೆದಿದ್ದೇನು?
    ಕಳೆದ 5 ದಿನದ ಹಿಂದೆ ಬಿಂದು ತನ್ನ ಫೇಸ್‍ಬುಕ್ ಗೆಳೆಯ ಮಿಥುನ್ ಜೊತೆ ಜಾಲಿ ರೇಡ್‍ಗೆ ಹೋಗಿದ್ದಾಳೆ. ಇಬ್ಬರು ಕಳಸ, ಹೊರನಾಡು ಹೋಗಿ ಹಿಂತಿರುಗಿ ಬರುವಾಗ ಕಗ್ಗನಹಳ್ಳದ ಬಳಿ ಭದ್ರಾ ನದಿ ದಂಡೆ ಮೇಲೆ ಕೂತು ಮಾತನಾಡುತ್ತಿದ್ದರು. ಈ ವೇಳೆ ಬಿಂದು ನನಗೆ ಬೆಂಗಳೂರು-ಮಂಗಳೂರಿನಲ್ಲಿ ಸ್ನೇಹಿತರು ಇದ್ದಾರೆ ಎಂದು ಹೇಳಿದ್ದಾಳೆ. ಬಳಿಕ ಮಾಜಿ ಪ್ರಿಯಕರನ ಹೆಸರು ಕೂಡ ಹೇಳಿದ್ದಾಳೆ. ಮಾಜಿ ಪ್ರಿಯಕರನ ಹೆಸರು ಹೇಳುತ್ತಿದ್ದಂತೆಯೇ ಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ಮಿಥುನ್ ಕೋಪ ನೆತ್ತಿಗೇರಿದೆ. ಈ ವೇಳೆ ಬೈಕಿನಲ್ಲಿದ್ದ ಸ್ಕ್ರೂ ಡ್ರೈವರ್‌ನಿಂದ ಮನಸ್ಸೋ ಇಚ್ಛೆ ಚುಚ್ಚಿ, ಎಸ್ಕೇಪ್ ಆಗಿದ್ದನು. ನಾಲ್ಕು ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಬಿಂದು ಈಗ ಮೃತಪಟ್ಟಿದ್ದಾಳೆ.

    ಆರೋಪಿ ಮಿಥುನ್, ಬಿಂದುವಿಗೆ ಒಂದು ಬಾರಿ ಚುಚ್ಚಿಲ್ಲ. ಆಕೆ ತನ್ನ ಮಾಜಿ ಪ್ರಿಯಕರನ ಹೆಸರು ಹೇಳುತ್ತಿದ್ದಂತೆ ಮಿಥುನ್ ಆಕೆಯನ್ನು ದಂಡೆಯಿಂದ ಭದ್ರಾ ನದಿಗೆ ನೂಕಿದ್ದಾನೆ. ಆಕೆ ಎದ್ದು ಬರುವಾಗ ಮನಸ್ಸೋ ಇಚ್ಛೆ ಕಲ್ಲು ಎಸೆದಿದ್ದಾನೆ. ಆಕೆ ಮೇಲೆ ಬಂದ ಕೂಡಲೇ ಕೈಯಲ್ಲಿದ್ದ ಸ್ಕ್ರೂ ಡ್ರೈವರ್‌ನಿಂದ ಕೆನ್ನೆ, ಕತ್ತು, ಪಕ್ಕೆಲುಬು ಸೇರಿದಂತೆ ದೇಹದ ಸೂಕ್ಷ್ಮ ಜಾಗಗಳಿಗೆ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದನು. ಹಲ್ಲೆಯಿಂದ ಯುವತಿ ನರಳುತ್ತಾ ರಸ್ತೆಯಲ್ಲೇ ಬಿದ್ದಿದ್ದಳು. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದವರು ನೋಡಿ ಆಕೆಯನ್ನು ಆಸ್ಪತ್ರೆ ಸೇರಿಸಿದ್ದರು.

    ಯುವತಿಯನ್ನು ಮೊದಲು ಚಿಕ್ಕಮಗಳೂರು ಹಾಗೂ ಹಾಸನದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಬಿಂದು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಕಾರಣ ಆಕೆಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಯುವತಿಯ ತಲೆಗೆ ಹತ್ತು ಹೊಲಿಗೆ ಹಾಕಲಾಗಿತ್ತು. ಆದರೆ ಗುಪ್ತಾಂಗಕ್ಕೆ ಚುಚ್ಚಿದ್ದರಿಂದ ಊದಿಕೊಂಡು ಕಿವುಗಟ್ಟಿದ್ರಿಂದ ಬಿಂದು ಮೃತಪಟ್ಟಿದ್ದಾಳೆ. ಬಿಂದು ಮೇಲೆ ಹಲ್ಲೆ ಮಾಡಿ ನಾಪತ್ತೆಯಾಗಿದ್ದ ಮಿಥುನ್ ನೇರ ನ್ಯಾಯಾಲಯದಲ್ಲಿ ಶರಣಾಗಿ, ನ್ಯಾಯಾಂಗ ಬಂಧನದಲ್ಲಿದ್ದಾನೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಮಿಥುನ್ ಯುವತಿಯನ್ನು ಚಾಕುವಿನಿಂದ ಇರಿದಿದ್ದಾನೆ ಎಂದು ವರದಿಯಾಗಿತ್ತು. ಈಗ ಮಿಥುನ್ ಸ್ಕ್ರೂ ಡ್ರೈವರ್‌ನಿಂದ ಯುವತಿಗೆ ಇರಿದಿದ್ದಾನೆ ಎಂಬ ವಿಷಯ ತಿಳಿದು ಬಂದಿದೆ.

  • ಹಾಲು ಕುಡಿದ ಮಕ್ಕಳೇ  ಬದ್ಕಲ್ಲ, ಇನ್ನು ವಿಷ ಕುಡಿದೋರು ಬದಕ್ತಾರಾ?: ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್

    ಹಾಲು ಕುಡಿದ ಮಕ್ಕಳೇ ಬದ್ಕಲ್ಲ, ಇನ್ನು ವಿಷ ಕುಡಿದೋರು ಬದಕ್ತಾರಾ?: ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್

    – ಮಧ್ಯಂತರ ಚುನಾವಣೆಗೆ ಸಿದ್ಧರಾದ್ರಾ ಮಾಜಿ ಸಿಎಂ
    – ಕೇವಲ ಭಾವನಾತ್ಮಕ ವಿಚಾರಗಳಿಂದ ದೇಶ ಆಳಲು ಸಾಧ್ಯವಿಲ್ಲ

    ಚಿಕ್ಕಮಗಳೂರು: ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದವರು ಬದುಕುತ್ತಾರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿ, ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

    ಕಡೂರಿನ ಸಖರಾಯಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಎಂ, ಬಿಜೆಪಿ ಸರ್ಕಾರ ಎಷ್ಟು ದಿನ ಅಧಿಕಾರದಲ್ಲಿ ಇರುತ್ತದೆ ಅಂತ ನನಗೆ ಗೊತ್ತಿಲ್ಲ. ವಿಧಾನಸಭಾ ಚುನಾವಣೆ ಯಾವಾಗ ಬರುತ್ತದೆ ಎಂದು ಹೇಳುವುದಕ್ಕೆ ಆಗಲ್ಲ. 2020ರ ಜನವರಿ, ಫೆಬ್ರವರಿ, ಏಪ್ರಿಲ್ ಮೇ… ಯಾವಾಗ ಬೇಕಾದರೂ ಚುನಾವಣೆ ನಡೆಯಬಹುದು ಎಂದು ಹೇಳಿದರು.

    ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, ಈ ಭಾಗದ ಸಚಿವ ಅವನೆಷ್ಟೋ ಗ್ರಾಮಗಳನ್ನು ದತ್ತು ಪಡೆದಿದ್ದಾನಂತೆ. ಅವನು ದತ್ತು ಪಡೆದಿದ್ದನ್ನು ಇನ್ನೊಬ್ಬರಿಗೆ ಯಾಕೆ ಹೇಳುತ್ತಾನೆ. ಮೊದಲು ಅವರು ನೆರೆಪೀಡಿತ ಗ್ರಾಮಗಳನ್ನು ದತ್ತು ಪಡೆಯಲಿ ನೋಡೋಣ. ನೀವು ಅಂತವರನ್ನೇ ಆಯ್ಕೆ ಮಾಡಿ ವಿಧಾನ ಸೌಧಕ್ಕೆ ಕಳುಹಿಸುತ್ತೀರಿ. ಅದಕ್ಕೆ ನಾವು ಏನು ಮಾಡುವುದಕ್ಕೆ ಆಗುತ್ತೆ ಹೇಳಿ ಎಂದು ಸಭೆಯಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದರು.

    ಸಿ.ಟಿ.ರವಿ ಅವರಿಗೆ ಏಪ್ರಿಲ್‍ನಲ್ಲಿ ಭಾರೀ ಆಘಾತ ಕಾದಿದೆ. ಕೇವಲ ಭಾವನಾತ್ಮಕ ವಿಚಾರಗಳ ಮೂಲಕವೇ ದೇಶವನ್ನು ಆಳಲು ಸಾಧ್ಯವಿಲ್ಲ. ಹಿಂದುತ್ವ, ರಾಮ ಮಂದಿರ, ಕಾಶ್ಮೀರ, ಪಾಕಿಸ್ತಾನ ಇಂತಹ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಾರೆ ಎಂದು ಗುಡುಗಿದರು.

  • ಟ್ವೀಟ್ ಮಾಡೋ ಬದಲು ಗ್ರಾಮಗಳನ್ನು ದತ್ತು ಪಡೆದುಕೊಳ್ಳಿ: ಕಾಂಗ್ರೆಸ್ಸಿಗರಿಗೆ ಸಿಟಿ ರವಿ ಟಾಂಗ್

    ಟ್ವೀಟ್ ಮಾಡೋ ಬದಲು ಗ್ರಾಮಗಳನ್ನು ದತ್ತು ಪಡೆದುಕೊಳ್ಳಿ: ಕಾಂಗ್ರೆಸ್ಸಿಗರಿಗೆ ಸಿಟಿ ರವಿ ಟಾಂಗ್

    ಚಿಕ್ಕಮಗಳೂರು: ಕಾಂಗ್ರೆಸ್ಸಿಗರೇ ನೀವು ತಾಕತ್ತಿರೋ ಜನರೇ ಇದ್ದೀರಾ. ನಿಮ್ಮ ಆಸ್ತಿ ಕೂಡ ಚಿಕ್ಕ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದು ಸದುಪಯೋಗ ಆಗಬೇಕಂದರೆ ಪುಣ್ಯದ ಕೆಲಸ ಮಾಡಬೇಕು. ಟ್ವೀಟ್ ಮಾಡೋ ಬದಲು, 5-10-20 ಗ್ರಾಮಗಳನ್ನು ದತ್ತು ಪಡೆದುಕೊಳ್ಳಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕಾಂಗ್ರೆಸ್ಸಿಗರಿಗೆ ಟಾಂಗ್ ಕೊಟ್ಟಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರೇ ನಿಮ್ಮದು ಕೇವಲ ರಾಜಕೀಯ ಅದನ್ನು ಬಿಟ್ಟು ಕಷ್ಟದಲ್ಲಿರುವವರ ನೆರವಿಗೆ ಬನ್ನಿ. ಒಳ್ಳೆಯ ಸ್ಪರ್ಧೆ ಬೆಳೆಯುತ್ತದೆ. ನೀವು 10 ಗ್ರಾಮ ಪಡೆದರೆ, ಬಿಜೆಪಿಯವರು 20 ಗ್ರಾಮ ಪಡೆಯುತ್ತಾರೆ. ನಾವೇನಾದರೂ ಮಾಡಬೇಕೆಂದು ಆ ಜೆಡಿಎಸ್‍ನವರು 8-10 ಗ್ರಾಮ ಪಡೆಯುತ್ತಾರೆ. ನಮ್ಮೆಲ್ಲರ ಸಹನೆ, ಸಿಟ್ಟನ್ನು ಕನ್ಟ್ರಷ್ಷನ್ ಆಗಿ ನಿರ್ಮಾಣ ಮಾಡೋಣ. ಪ್ರಶ್ನೆ ಮಾಡೋ ಬದಲು ಆ ರೀತಿ ಆರೋಗ್ಯಕರ ಸ್ಪರ್ಧೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ವಿಜಯನಗರವನ್ನು ಜಿಲ್ಲೆ ಮಾಡಬೇಕೆಂಬುದು ಅಲ್ಲಿನ ಶಾಸಕರ ಒತ್ತಡ ಹಾಕುತ್ತಿರುವ ವಿಚಾರವಾಗಿ ಮಾತನಾಡಿ, ಅದು ಇನ್ನೂ ಸಂಪುಟದ ಮುಂದೆ ಬಂದಿಲ್ಲ. ಆ ಸಂದರ್ಭ ಬಂದಾಗ ಅದರ ಸಾಧಕ-ಬಾಧಕ ಚರ್ಚಿಸೋಣ. ಸಿಎಂ ಅವರ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.

  • ಮದ್ಯದಂಗಡಿಯಾದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ

    ಮದ್ಯದಂಗಡಿಯಾದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ

    ಚಿಕ್ಕಮಗಳೂರು: ಒಂದೆಡೆ ಆರೋಗ್ಯ ಸಮಸ್ಯೆ ಇಟ್ಟುಕೊಂದು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಇನ್ನೊಂದೆಡೆ ಕುಡುಕರ ಹಾವಳಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯೇ ಮದ್ಯದಂಗಡಿ ರೀತಿ ಆಗಿಬಿಟ್ಟಿದೆ.

    ಹೌದು. ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಸರಿಯಾದ ಸೌಲಭ್ಯ ಸಿಗದೇ ಕಷ್ಟಪಡುತ್ತಿದ್ದಾರೆ. ಅಲ್ಲದೆ ಜಿಲ್ಲಾಸ್ಪತ್ರೆ ನಿರ್ವಹಣೆಯನ್ನು ಸಿಬ್ಬಂದಿ ಸರಿಯಾಗಿ ಮಾಡದೇ ನಿರ್ಲಕ್ಷ್ಯ ತೋರಿರುವುದಕ್ಕೆ ಆಸ್ಪತ್ರೆ ಕುಡುಕರಿಗೆ ಮದ್ಯ ಸೇವಿಸೋ ಅಡ್ಡೆಯಾಗಿಬಿಟ್ಟಿದೆ. ಆಸ್ಪತ್ರೆಯ ಸುತ್ತಮುತ್ತಲ ಆವರಣ, ಶೌಚಾಲಯಗಳು ಹೀಗೆ ಎಲ್ಲೆಂದರಲ್ಲಿ ಮದ್ಯದ ಬಾಟಲಿ ಹಾಗೂ ಪ್ಯಾಕೆಟ್‍ಗಳೇ ರಾರಾಜಿಸುತ್ತಿದೆ. ಎಲ್ಲೆಂದರಲ್ಲಿ ಮದ್ಯ ಸೇವಿಸಿ ಆಸ್ಪತ್ರೆ ಆವರಣವನ್ನು ಕುಡುಕರು ಗಬ್ಬೆಬ್ಬಿಸಿದ್ದಾರೆ.

    ಅಷ್ಟೇ ಅಲ್ಲದೆ ಮದ್ಯ ಕುಡಿದು ಆಸ್ಪತ್ರೆಯ ಗೋಡೆ ಮೇಲೆ ಬಾಟಲಿಗಳನ್ನು ಕುಡುಕರು ಸಾಲಾಗಿ ಜೋಡಿಸಿಟ್ಟಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ಜಿಲ್ಲಾಸ್ಪತ್ರೆ ಸಿಬ್ಬಂದಿ ಸುಮ್ಮನಿದ್ದು, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳು ಹೈರಾಣಾಗಿದ್ದಾರೆ. ಆಸ್ಪತ್ರೆ ಶೌಚಾಲಯಕ್ಕೆ ಹೋಗಲು ರೋಗಿಗಳಿಗೆ ವಾಕರಿಕೆ ಬರುವ ದುಸ್ಥಿತಿ ಇದೆ.

    ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಕಂಡು ಬೇಸತ್ತು ಹೋದ ಕೆಲ ರೋಗಿಗಳು ಆಸ್ಪತ್ರೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯ ಮದ್ಯದ ಅವಾಂತರ ಎಲ್ಲೆಡೆ ವೈರಲ್ ಆಗಿದ್ದು, ಸ್ವಚ್ಛತೆಗೆ ಆದ್ಯತೆ ಕೊಡದ ಅಧಿಕಾರಿ, ಸಿಬ್ಬಂದಿ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಆರೋಗ್ಯ ಸಚಿವರು ಗಮನಹರಿಸಿ, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಹಾರಕ್ಕೆ ಬ್ರೇಕ್ ಹಾಕಬೇಕಿದೆ.

  • ಪ್ರೀತಿ ನಿರಾಕರಿಸಿದ ಯುವತಿಗೆ ಭಗ್ನ ಪ್ರೇಮಿಯಿಂದ ಚಾಕು ಇರಿತ

    ಪ್ರೀತಿ ನಿರಾಕರಿಸಿದ ಯುವತಿಗೆ ಭಗ್ನ ಪ್ರೇಮಿಯಿಂದ ಚಾಕು ಇರಿತ

    ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚಾಕು ಇರಿದು, ಕೊಲೆಗೆ ಯತ್ನಿಸಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಬಾಳೆಹೊನ್ನೂರು ಸಮೀಪದ ಗಂಡಿಗೇಶ್ವರ ನಿವಾಸಿ ಮಿಥುನ್ ಯುವತಿಗೆ ಚಾಕು ಇರಿದ ಪಾಗಲ್ ಪ್ರೇಮಿ. ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮಹಲ್ಗೋಡಿನಲ್ಲಿ ಬುಧವಾರ ಘಟನೆ ನಡೆದಿದೆ. ಇದನ್ನೂ ಓದಿ: ಪ್ರೇಯಸಿಗೆ ಚಾಕು ಇರಿದ – ತಾನೂ ಇರಿದ್ಕೊಂಡು, ಆಕೆಯ ಮೇಲೆಯೇ ಬಿದ್ದ

    ಮಿಥುನ್ ತನ್ನನ್ನು ಪ್ರೀತಿಸುವಂತೆ ಖಾಂಡ್ಯದ ಯುವತಿಯನ್ನು ಪೀಡಿಸುತ್ತಿದ್ದ. ಆದರೆ ಯುವಕನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ. ಸಿಕ್ಕಾಗೆಲ್ಲಾ ಪ್ರೀತಿಸುವಂತೆ ಮಿಥುನ್ ಯುವತಿಗೆ ಒತ್ತಾಯಿಸುತ್ತಿದ್ದ. ಅಷ್ಟೇ ಅಲ್ಲದೆ ಬೆದರಿಕೆ ಕೂಡ ಹಾಕಿದ್ದ. ಮಿಥುನ್ ವರ್ತನೆಯಿಂದ ಬೇಸತ್ತ ಯುವತಿ ಆತನ ಪ್ರೀತಿಯನ್ನು ನಿರಾಕರಿಸುತ್ತಾ ಬಂದಿದ್ದಳು. ಇದರಿಂದ ಮನನೊಂದು ಯುವಕ ಮಹಲ್ಗೋಡು ಬಳಿ ಯುವತಿಯ ಹೊಟ್ಟೆ, ಬೆನ್ನು ಹಾಗೂ ಕುತ್ತಿಗೆಗೆ ಚಾಕು ಇರಿದು ನಾಪತ್ತೆಯಾಗಿದ್ದಾನೆ.

    ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಯುವತಿಯನ್ನು ಬಾಳೆಹೊನ್ನೂರು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ಹಾಸನಕ್ಕೆ ರವಾನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವತಿಯು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.

    ತಲೆಮರೆಸಿಕೊಂಡಿರುವ ಪಾಗಲ್ ಪ್ರೇಮಿ ಮಿಥುನ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಪ್ರವಾಹದಂತೆ ಹರಿಯುತ್ತಿದ್ದ ಕಲ್ಲತ್ತಿಗಿರಿ ಜಲಪಾತ

    ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಪ್ರವಾಹದಂತೆ ಹರಿಯುತ್ತಿದ್ದ ಕಲ್ಲತ್ತಿಗಿರಿ ಜಲಪಾತ

    ಚಿಕ್ಕಮಗಳೂರು: ತಿಂಗಳ ಹಿಂದೆ ಬರಬೇಡಿ ಎಂದು ಹೇಳುತ್ತಿದ್ದ ಈ ಸುಂದರ ತಾಣ ಈಗ ಪ್ರವಾಸಿಗರನ್ನು ಬನ್ನಿ ಎಂದು ಕೈಬೀಸಿ ಕರೆಯುತ್ತಿದೆ. ವರ್ಷಪೂರ್ತಿ ಧಾರಾಕಾರವಾಗಿ ಹರಿಯುವ ಆ ನೀರು ಎಲ್ಲಿಂದ ಬರುತ್ತೆ ಎನ್ನುವುದೇ ನಿಗೂಢ. ಆನೆಯ ಆಕಾರದಲ್ಲಿ ಧುಮ್ಮಿಕ್ಕುವ ಆ ಜಲಧಾರೆಗೆ ಧಾರ್ಮಿಕ ನಂಬಿಕೆಯೂ ಉಂಟು. ತಿಂಗಳ ಹಿಂದೆ ಪ್ರವಾಹದಂತೆ ಹರಿಯುತ್ತಿದ್ದ ಆ ಸುಂದರ ತಾಣವೀಗ ನಯನ ಮನೋಹರ.

    ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕಲ್ಲತ್ತಿಗರಿ ಜಲಪಾತವೀಗ ಪ್ರಕೃತಿಯ ಮಾನಸ ಪುತ್ರಿಯಂತಾಗಿದೆ. ಗುಡ್ಡದ ತುದಿಯಿಂದ ಹರಿಯುವ ಈ ಹಾಲ್ನೋರೆಯ ಜಲಕ್ಕೆ ಕಲ್ಲತ್ತಿಗರಿ ಜಲಪಾತ ಎಂಬ ಹೆಸರಿದೆ. ಈ ಜಲಪಾತ ಇತಿಹಾಸದಲ್ಲಿ ಬತ್ತಿದ ಉದಾಹರಣೆ ಇಲ್ಲ. ಬೆಟ್ಟ-ಗುಡ್ಡಗಳ ಔಷಧಿ ಶಕ್ತಿಯುಳ್ಳ ಮರ-ಗಿಡಗಳ ನಡುವೆ ಹರಿಯುವ ಈ ನೀರಲ್ಲಿ ಸ್ನಾನ ಮಾಡಿದರೆ ಕೆಲವು ಕಾಯಿಲೆಗಳು ದೂರವಾಗುತ್ತೆ ಎಂಬುದು ಜನರ ನಂಬಿಕೆ. ಆನೆ ಆಕಾರದಲ್ಲಿರುವ ಈ ಜಲಪಾತಕ್ಕೆ ಧಾರ್ಮಿಕ ಇತಿಹಾಸವೂ ಇದೆ. ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಶಾಲಾ ಮಕ್ಕಳೇ ಹೆಚ್ಚು. ಈ ತಾಣ ಇಡೀ ರಾಜ್ಯಕ್ಕೆ ಗೊತ್ತು. ಈಗ ಮಕ್ಕಳಷ್ಟೇ ಅಲ್ಲದೆ ಕುಟುಂಬ ಸಮೇತರಾಗಿ ಬಂದು ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ.

    ಶತಮಾನಗಳಿಂದ ಹೀಗೆ ನಿರಂತರವಾಗಿ ಹರಿಯುತ್ತಿರುವ ಈ ಜಲಪಾತದ ಬಳಿ ದತ್ತಾತ್ರೇಯ, ಈಶ್ವರ-ಪಾರ್ವತಿ, ಗಣಪತಿ, ಬೇಲೂರು ಚನ್ನಕೇಶವನ ಜೊತೆ ಶಿಲಾಬಾಲಿಕೆಯರ ಉದ್ಭವ ಮೂರ್ತಿಗಳಿವೆ. ಪುರಾಣದ ಪ್ರಕಾರ ನರ ಮನುಷ್ಯರು ಇಲ್ಲಿಗೆ ಬಂದು ಈ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ಇಲ್ಲಿನ ವೀರಭದ್ರೇಶ್ವರನಿಗೆ ಪೂಜೆ ಸಲ್ಲಿಸಿದರೆ ಅವರ ಪಾಪ-ಕರ್ಮಗಳೆಲ್ಲಾ ಪರಿಹಾರವಾಗುತ್ತೆ ಎನ್ನುವುದು ಸ್ಥಳೀಯರ ನಂಬಿಕೆ.

    ಪವಿತ್ರ ಗಂಗೆಯಾಗಿರುವ ಈ ಕ್ಷೇತ್ರದಲ್ಲಿ ಕಲ್ಲಿನ ಗುಹೆಯೊಳಗೆ ವೀರಭದ್ರಸ್ವಾಮಿ ಮೂರ್ತಿ ಕೂಡ ಉದ್ಭವವಾಗಿದೆ. ಇಲ್ಲಿ ಸ್ನಾನ ಮಾಡಿ, ಪೂಜೆ ಸಲ್ಲಿಸಿದರೆ ಜನರ ಮೈಮೇಲೆ ಬರುವ ದುಷ್ಟಶಕ್ತಿಗಳನ್ನು ವೀರಭದ್ರಸ್ವಾಮಿ ನಾಶ ಮಾಡುತ್ತಾನೆ ಎಂದು ಸ್ಥಳೀಯರು ಹೇಳುತ್ತಾರೆ. ಆದ್ದರಿಂದ, ಪ್ರತಿದಿನ ಹತ್ತಾರು ಜನ ಈ ಕ್ಷೇತ್ರಕ್ಕೆ ದೇವರುಗಳನ್ನು ಕರೆ ತಂದು ಪೂಜಾ-ಕೈಂಕರ್ಯ ಕೈಗೊಳ್ಳುತ್ತಾರೆ. ಪೂಜೆಯ ಬಳಿಕ ಇಲ್ಲಿನ ಬೆಟ್ಟ-ಗುಡ್ಡಗಳ ಪ್ರಕೃತಿ ಸೌಂದರ್ಯ ಕಂಡು ಪುಳಕಿತರಾಗುತ್ತಾರೆ.

    ಕಲ್ಲತ್ತಿಗಿರಿ ಕ್ಷೇತ್ರದ ಜಲಪಾತ ಹತ್ತಾರು ಆಶ್ಚರ್ಯಗಳಿಗೆ ಸಾಕ್ಷಿಯಾಗಿದೆ. ಮೂಲವೇ ಗೊತ್ತಿಲ್ಲದ ಗಂಗೆಯ ಉಗಮ ಸ್ಥಾನ ಒಂದೆಡೆಯಾದರೆ, ದುಷ್ಟಶಕ್ತಿಗಳನ್ನು ದೂರ ಮಾಡುವ ದೈವಶಕ್ತಿಗೆ ಈ ಕ್ಷೇತ್ರ ಹೆಸರುವಾಸಿ. ಪ್ರವಾಸಕ್ಕೂ ಸೈ, ಧಾರ್ಮಿಕ ನಂಬಿಕೆಗೂ ಸೈ ಎನ್ನುವ ಈ ಕ್ಷೇತ್ರ ಕಾಫಿನಾಡಿನ ವೈಭವಕ್ಕೆ ಹಿಡಿದ ಕೈಗನ್ನಡಿ ಎಂದರು ತಪ್ಪಿಲ್ಲ. ಆದರೆ ಇಲ್ಲಿನ ಮೂಲಭೂತ ಸಮಸ್ಯೆಗಳತ್ತ ಸರ್ಕಾರ ಗಮನ ಹರಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸುತ್ತಿದ್ದಾರೆ.