Tag: Chikkamagaluru

  • ರಾಜ್ಯದಲ್ಲಿ ಭಾರೀ ಮಳೆ: ನೀರು ನುಗ್ಗಿದ ಮನೆಗಳಲ್ಲಿ ಜಾಗರಣೆ, ರೈತರ ಬೆಳೆ ಜಲಾವೃತ

    ರಾಜ್ಯದಲ್ಲಿ ಭಾರೀ ಮಳೆ: ನೀರು ನುಗ್ಗಿದ ಮನೆಗಳಲ್ಲಿ ಜಾಗರಣೆ, ರೈತರ ಬೆಳೆ ಜಲಾವೃತ

    ಬೆಂಗಳೂರು: ಚಿಕ್ಕಮಗಳೂರು, ಬೆಂಗಳೂರು, ದಾವಣಗೆರೆ, ಹಾವೇರಿ, ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆ ಮಂಗಳವಾರವೂ ವರುಣ ಅಬ್ಬರಿಸಿದ್ದಾನೆ.

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆಯಾಗುತ್ತಿದ್ದಂತೆ ಮಳೆ ಸುರಿಯಲು ಆರಂಭಿಸಿತು. ಮೈಸೂರ್ ರೋಡ್, ಮೆಜೆಸ್ಟಿಕ್, ವಿಜಯನಗರ, ಚಾಮರಾಜಪೇಟೆ, ಬಸವನಗುಡಿ, ಯಶವಂತಪುರ, ಗಾಳಿ ಆಂಜನೇಯ ದೇವಾಲಯ ಸೇರಿದಂತೆ ಹಲವೆಡೆ ಮಳೆಯಾಗಿದೆ.

    ದಾವಣಗೆರೆ ಜಿಲ್ಲೆಯ ಕೆಲವೆಡೆ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ. ದಾವಣಗೆರೆ, ಹರಪ್ಪನಹಳ್ಳಿ, ಜಗಳೂರು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದ್ದು, ರೈತರ ಮುಗದಲ್ಲಿ ಮಂದಹಾಸ ಮೂಡಿದೆ.

    ಹಾವೇರಿ ಜಿಲ್ಲೆಯ ಹಲವೆಡೆ ಧಾರಕಾರ ಮಳೆಯಾಗಿದೆ. ವರುಣನ ಅಬ್ಬರದಿಂದಾಗಿ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯಿತು. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಯಿತು. ಕೆಲವು ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

    ಚಿಕ್ಕಮಗಳೂರು:
    ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮತ್ತೆ ವರುಣದೇವ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು ಜನ ಕಂಗಾಲಾಗಿದ್ದಾರೆ. ಮೂಡಿಗೆರೆ ತಾಲೂಕಿನ ಹೊರನಾಡು ಸುತ್ತಮುತ್ತ ಧಾರಾಕಾರ ಮಳೆ ಸುರಿಯುತ್ತಿದ್ದು, ಎಳ್ಳಕುಂಬ್ರಿ, ಬಲಿಗೆ, ಚಿಕ್ಕನಕೂಡಿಗೆ, ಕವನಹಳ್ಳ ಗ್ರಾಮದಲ್ಲಿ ನೀರಿನ ಅಬ್ಬರಕ್ಕೆ ಜನ ಹೈರಾಣಾಗಿದ್ದಾರೆ. ಮಧ್ಯಾಹ್ನದಿಂದ ಸುರಿದ ಮಳೆಗೆ ಮಲೆನಾಡಿಗರು ಮತ್ತೆ ಆತಂಕಕ್ಕೀಡಾಗಿದ್ದಾರೆ. ಎಡೆ ಬಿಡದೆ ಸುರಿಯುತ್ತಿರುವ ಮಳೆ ನೀರು ಮನೆಗಳಿಗೆ ನುಗ್ಗಲು ಯತ್ನಿಸಿದೆ. ಕೆಸರು ನೀರು ಕಾಫಿ, ಅಡಿಕೆ, ಗದ್ದೆಗಳಿಗೂ ನುಗ್ಗಿ ಹೊಲಗದ್ದೆ, ತೋಟಗಳು ಸಂಪೂರ್ಣ ಜಲಾವೃತವಾಗಿವೆ. ಹೊರನಾಡಿನಿಂದ ಹೊಸಮನೆಗೆ ಹೋಗುವ ಮಿನಿ ಸೇತುವೆ ಸಂಪರ್ಕ ಕಡಿತಗೊಂಡಿದ್ದು ಜನ ಭಯಭೀತರಾಗಿದ್ದಾರೆ. ಮಲೆನಾಡಲ್ಲಿ ಮತ್ತೆ ಸುರಿಯುತ್ತಿರೋದ್ರಿಂದ ಈ ಭಾಗದ ಜನ ಭಯದಿಂದ ಬದುಕುವಂತಾಗಿದೆ.

    ರಾಮನಗರ:
    ಬೊಂಬೆಗನರಿ ಚನ್ನಪಟ್ಟಣ ತಾಲೂಕಿನ ಜನರೆಲ್ಲ ಕಳೆದ ಹಲವು ದಿನಗಳಿಂದ ಮಳೆಯಿಲ್ಲ ಅಂತ ಕಂಗಾಲಾಗಿದ್ದರು. ಸೋಮವಾರ ಒಂದೇ ರಾತ್ರಿ ಸುರಿದ ಮಳೆಗೆ ಕೆರೆ ಕೋಡಿಗಳು ಬಿದ್ದು ರೈತರ ಜಮೀನಿಗೆ ನೀರು ನುಗ್ಗಿ ರೈತರು ಕಂಗಾಲಾಗಿದ್ದಾರೆ. ಮನೆಗಳಿಗೆ ನೀರು ನುಗ್ಗಿ ನೂರಕ್ಕೂ ಹೆಚ್ಚು ಮನೆಗಳ ಜನ ರಾತ್ರಿಯೆಲ್ಲ ಜಾಗರಣೆ ಮಾಡಿದ್ದಾರೆ.

    ಏಕಾಏಕಿ ಗುಡುಗು, ಮಿಂಚು ಸಹಿತ ಸುರಿದ ಜೋರು ಮಳೆ ತಾಲೂಕಿನಾದ್ಯಂತ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ನಗರದ ಹಲವು ಬಡಾವಣೆಗಳ ನಿವಾಸಿಗಳು ಪರದಾಡುವಂತಾಗಿತ್ತು. ಚನ್ನಪಟ್ಟಣ ನಗರದ ಆರ್‍ಎಂಸಿ ಯಾರ್ಡ್, ಇಂದಿರಾ ಕಾಟೇಜ್, ಆನಂದಪುರ ಬಡಾವಣೆಗಳಲ್ಲಿ 50ಕ್ಕೂ ಹೆಚ್ಚಿನ ಮನೆಗಳಿಗೆ ಚರಂಡಿ ನೀರು ನುಗ್ಗಿ, ಮನೆಯಲ್ಲಿದ್ದವರೆಲ್ಲ ಇಡೀ ರಾತ್ರಿ ಪರದಾಟ ಪಡುವಂತೆ ಆಗಿತ್ತು. ಇಡೀ ರಾತ್ರಿ ಮಳೆ ನೀರನ್ನ ಹೊರಹಾಕಲು ಕುಟುಂಬಸ್ಥರು ಮುಂದಾಗಿದ್ದು, ಅಲ್ಲದೆ ಮನೆಯಲ್ಲಿದ್ದ ವಸ್ತುಗಳೆಲ್ಲ ನೀರಿನಿಂದ ಜಲಾವೃತವಾಗಿದ್ದವು.

    ಕಳೆದ ವಾರವಷ್ಟೇ ಇದೇ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿತ್ತು. ಹೀಗಾಗಿ ಚನ್ನಪಟ್ಟಣ ಶಾಸಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿ, ಪರಿಶೀಲನೆ ನಡೆಸಿ, ಸಮಸ್ಯೆಗಳನ್ನ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಮಾಜಿ ಸಿಎಂ ಮಾತಿಗೂ ಬೆಲೆ ಕೊಡದ ಅಧಿಕಾರಿಗಳು ಈ ಕಡೆ ತಿರುಗಿ ನೋಡಿಲ್ಲ.

    ಒಂದೆಡೆ ಚನ್ನಪಟ್ಟಣ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದರೆ, ಮತ್ತೊಂದೆಡೆ ಗ್ರಾಮೀಣ ಭಾಗದಲ್ಲಿ ಮಳೆಯ ನೀರು ರೈತರ ಜಮೀನುಗಳಿಗೆ ನುಗ್ಗಿ ಸಾಕಷ್ಟು ನಷ್ಟವನ್ನುಂಟು ಮಾಡಿವೆ. ಏಕಾಏಕಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಎಂಟಕ್ಕೂ ಹೆಚ್ಚು ಕೆರೆಗಳು ತುಂಬಿ ಕೊಡಿ ಬಿದ್ದು, ಕೆರೆಯ ನೀರು ರೈತರ ಜಮೀನಿಗೆ ನುಗ್ಗಿದೆ.

    ತಾಲೂಕಿನ ಸುಳ್ಳೇರಿ, ಹೊಡಕೆ ಹೊಸಳ್ಳಿ, ಕುಡ್ಲೂರು, ಮಳೂರು ಪಟ್ಟಣ, ಸಂಕಲಗೆರೆ ಗ್ರಾಮಗಳಲ್ಲಿ ಕೆರೆ ನೀರು ಕೋಡಿ ಬಿದ್ದು, ರೈತರು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ರಾಗಿ, ಬಾಳೆ, ಟೊಮೆಟೋ, ಮುಸಕಿನ ಜೋಳ, ತೆಂಗಿನ ಗಿಡಗಳು, ಭತ್ತ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿದೆ. ಇನ್ನೇನೂ ಬೆಳೆಗಳು ಕೈಗೆ ಸೇರಲಿವೆ ಎಂದುಕೊಂಡಿದ್ದ ರೈತನ ಆಸೆಗಳೆಲ್ಲ ಒಂದೇ ರಾತ್ರಿಯಲ್ಲಿ ಮಳೆಯ ನೀರಿನ ಜೊತೆ ಕೊಚ್ಚಿ ಹೋಗಿವೆ. ಇಷ್ಟೆಲ್ಲ ಆನಾಹುತ ಸಂಭವಿಸಿದರೂ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಇದ್ರೂ ಕೂಡ ಯಾವೊಬ್ಬ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಇದು ರೈತರ ಆಕ್ರೋಶಕ್ಕೂ ಕಾರಣವಾಗಿದೆ.

  • ಕೆರೆಯಲ್ಲಿ ಸೈಕಲ್ ತೊಳೆದು, ಈಜಲು ಇಳಿದ ಮೂವರು ಬಾಲಕರು ನೀರುಪಾಲು

    ಕೆರೆಯಲ್ಲಿ ಸೈಕಲ್ ತೊಳೆದು, ಈಜಲು ಇಳಿದ ಮೂವರು ಬಾಲಕರು ನೀರುಪಾಲು

    ಚಿಕ್ಕಮಗಳೂರು: ಆಯುಧ ಪೂಜೆಯ ಹಿನ್ನೆಲೆ ಕೆರೆಯಲ್ಲಿ ತಮ್ಮ ಸೈಕಲ್‍ಗಳನ್ನು ತೊಳೆದು, ಬಳಿಕ ಈಜಲು ನೀರಿಗೆ ಇಳಿದಿದ್ದ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ.

    ಹೌಸಿಂಗ್ ಬೋರ್ಡ್ ನಿವಾಸಿಗಳಾದ ಮುರುಳಿ(15), ಜೀವಿತ್(14), ಚಿರಾಗ್(15) ಮೃತ ದುರ್ದೈವಿಗಳು. ಸೋಮವಾರ ಆಯುಧ ಪೂಜೆ ಇದ್ದ ಕಾರಣಕ್ಕೆ ಸಂಜೆ ತಮ್ಮ ಸೈಕಲ್‍ಗಳನ್ನು ತೊಳೆಯಲೆಂದು ಬಿಳೇಕಲ್ಲಳ್ಳಿ ಗ್ರಾಮದ ಕಂಚಿಕಟ್ಟೆ ಕೆರೆ ಬಳಿ ಮೂವರು ಬಾಲಕರು ತೆರೆಳಿದ್ದರು. ಹೀಗೆ ಕೆರೆಯಲ್ಲಿ ಸೈಕಲ್ ತೊಳೆದ ಬಳಿಕ ಈಜಲು ಬಾಲಕರು ನೀರಿಗೆ ಇಳಿದಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ಈಜಲು ಕೆರೆಯಲ್ಲಿ ಇಳಿದಿದ್ದ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮುರುಳಿ, ಜೀವಿತ್ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು, ಚಿರಾಗ್ ಮೃತ ದೇಹಕ್ಕಾಗಿ ಸ್ಥಳದಲ್ಲಿ ಪೊಲೀಸ್ ಹಾಗೂ ಸ್ಥಳೀಯರಿಂದ ಶೋಧಕಾರ್ಯ ಮುಂದುವರಿದಿದೆ.

    ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಬ್ಬ ಆಚರಿಸಿ ಸಂದೇಶ ಸಾರಿದ ಮುಸ್ಲಿಂ ಯುವಕ

    ಹಬ್ಬ ಆಚರಿಸಿ ಸಂದೇಶ ಸಾರಿದ ಮುಸ್ಲಿಂ ಯುವಕ

    ಚಿಕ್ಕಮಗಳೂರು: ರಾಜ್ಯಾದ್ಯಂತ ದಸರಾ ಸಂಭ್ರಮ. ಹಿಂದೂಗಳಿಗೆ ಶ್ರೇಷ್ಠವಾದ ಹಬ್ಬ. ಎಲ್ಲರೂ ತಮ್ಮ-ತಮ್ಮ ವಾಹನಗಳಿಗೆ ಅಲಂಕರಿಸಿ, ಪೂಜೆ ಮಾಡಿ ಓಡಾಡಿ ಸಂಭ್ರಮಿಸುತ್ತಾರೆ. ಆದರೆ ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಯುವಕ ಕೂಡ ತನ್ನ ಬಸ್ಸುಗಳಿಗೆ ಹಾಗೂ ವಾಹನಗಳಿಗೆ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    ಚಿಕ್ಕಮಗಳೂರಿನ ಎಸ್‍ಎಂಎಸ್ ಬಸ್ ಮಾಲೀಕನಾದ ಸಿರಾಜ್, ಹಿಂದೂಗಳು ನಾಚುವಂತೆ ಆಯುಧ ಪೂಜೆ ಆಚರಿಸಿದ್ದಾರೆ. ಸಿರಾಜ್ ಹಿಂದೂಗಳಂತೆ ತಾನೂ ಹಬ್ಬ ಮಾಡಿ, ಎಲ್ಲರಿಗೂ ಸಿಹಿ ಹಂಚಿ ನಾವೆಲ್ಲಾ ಒಂದೇ ಎಂಬ ಸಂದೇಶ ಸಾರಿದ್ದಾರೆ.

    ಸಿರಾಜ್ ಅವರು ತಮ್ಮ ಆರು ಬಸ್ಸುಗಳನ್ನು ಶುಚಿ ಮಾಡಿ, ನಂತರ ಬಸ್ಸಿಗೆ ಚೆಂಡು ಹೂ, ಬಲೂನ್, ಬಾಳೆ ದಿಂಡು ಹಾಗೂ ಮಾವಿನ ತೋರಣದಿಂದ ಸಿಂಗರಿಸಿದ್ದಾರೆ. ಬಳಿಕ ವಾಹನಗಳಿಗೆ ಅರಿಶಿನ-ಕುಂಕುಮ, ವಿಭೂತಿ ಬಳಿದು ಆರತಿ ಮಾಡಿ ಪೂಜೆ ಮಾಡಿದ್ದಾರೆ.

    ತನ್ನೆಲ್ಲಾ ಬಸ್ಸುಗಳನ್ನು ಅಲಂಕರಿಸಿ ಹಿಂದೂ-ಮುಸ್ಲಿಂ ಎಲ್ಲರನ್ನೂ ಕರೆಸಿ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಎಲ್ಲರಿಗೂ ಸಿಹಿ ಹಂಚಿ ಆಯುಧ ಪೂಜೆಯ ಶುಭಾಶಯ ವಿನಿಮಯ ಮಾಡಿಕೊಂಡು, ಹಿಂದೂ-ಮುಸ್ಲಿಂ ಬಾಯಿ-ಬಾಯಿ ಎಂದೂ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

  • ಆತ್ಮಹತ್ಯೆಗೆ ಶರಣಾದ ರೈತರಿಗೆ ಮಾಜಿ ಸಿಎಂರಿಂದ ಧನ ಸಹಾಯ

    ಆತ್ಮಹತ್ಯೆಗೆ ಶರಣಾದ ರೈತರಿಗೆ ಮಾಜಿ ಸಿಎಂರಿಂದ ಧನ ಸಹಾಯ

    ಚಿಕ್ಕಮಗಳೂರು: ಪರಿಹಾರ ಸಿಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಮನೆಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ಕೊಟ್ಟಿದ್ದು, ಧನ ಸಹಾಯ ಮಾಡಿದ್ದಾರೆ.

    ಪರಿಹಾರ ಸಿಗದ ಹಿನ್ನೆಲೆಯಲ್ಲಿ ಗದ್ದೆಯಲ್ಲಿ ಗುಂಡು ಹಾರಿಸಿಕೊಂಡು ಚನ್ನಪ್ಪಗೌಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಎನ್.ಕೆ.ಮೇಗಲ್ ಗ್ರಾಮದಲ್ಲಿ ವಿಷ ಕುಡಿದು ಚಂದ್ರೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮೂಡಿಗೆರೆ ತಾಲೂಕಿನ ಕಳಸಕ್ಕೆ ಭೇಟಿ ಕೊಟ್ಟಿದ್ದು, ಮೃತ ರೈತರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಅಷ್ಟೇ ಅಲ್ಲದೇ ಮೃತ ರೈತರ ಕುಟುಂಬಗಳಿಗೆ ಧನ ಸಹಾಯ ಮಾಡಿದ್ದಾರೆ.

    ಕುಮಾರಸ್ವಾಮಿ ಅವರು ವೈಯಕ್ತಿಕವಾಗಿ ಚಂದ್ರೇಗೌಡ ಹಾಗೂ ಚನ್ನಪ್ಪಗೌಡ ಕುಟುಂಬಸ್ಥರಿಗೆ ಧನ ಸಹಾಯ ಮಾಡಿದ್ದಾರೆ. ಚಂದ್ರೇಗೌಡ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಚನ್ನಪ್ಪಗೌಡ ಕುಟುಂಬಕ್ಕೆ 1 ಲಕ್ಷ ರೂ. ಧನ ಸಹಾಯ ಮಾಡಿದ್ದಾರೆ. ಪ್ರವಾಹ ಮತ್ತು ಗುಡ್ಡ ಕುಸಿತದ ಬಳಿಕ ಜಿಲ್ಲೆಗೆ 2ನೇ ಬಾರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.

  • ಕುಸಿದ ಮನೆಯ ಮೇಲ್ಛಾವಣಿ – ವೃದ್ಧ ದಂಪತಿ ಸೇರಿ ಮೂವರ ದುರ್ಮರಣ

    ಕುಸಿದ ಮನೆಯ ಮೇಲ್ಛಾವಣಿ – ವೃದ್ಧ ದಂಪತಿ ಸೇರಿ ಮೂವರ ದುರ್ಮರಣ

    ಬೆಂಗಳೂರು: ಬಾಗಲಕೋಟೆ ದಾವಣಗೆರೆ ಹಾಗೂ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವಡೆ ಮಳೆಯಾಗಿದ್ದು, ಕೆಲವೆಡೆ ಹಾನಿಯುಂಟಾಗಿದೆ.

    ನಿರಂತರವಾಗಿ ಸುರಿದ ಮಳೆಗೆ ನೆನೆದು ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಮಗ ಸೇರಿ ವೃದ್ಧ ದಂಪತಿ ದಾರುಣವಾಗಿ ಮೃತಪಟ್ಟ ಘಟನೆ ಬಾಗಲಕೋಟೆ ತಾಲೂಕಿನ ಕಿರಸೂರು ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಈರಪ್ಪ ಹಡಪದ (60), ಗೌರವ್ವ ಹಡಪದ(52) ಹಾಗೂ ಮಗ ಮಗ ನಿಂಗಪ್ಪ ಹಡಪದ(35) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನಿಂಗಪ್ಪನ ಪತ್ನಿ ಸವಿತಾ ಹಾಗೂ ಮಗಳು ತನು ಅಪಾಯದಿಂದ ಪಾರಾಗಿದ್ದಾರೆ.

    ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮನೆ ಕುಸಿದು ಈ ದುರ್ಘಟನೆ ಸಂಭವಿಸಿದ್ದು, ಕುಟುಂಬದ ರೋಧನ ಮುಗಿಲು ಮುಟ್ಟಿದೆ. ಶವಗಳು ಮನೆಯ ಅವಶೇಷಗಳಡಿ ಸಿಲುಕಿದ ಪರಿಣಾಮ ಅಗ್ನಿಶಾಮಕ ದಳ ಹಾಗೂ ಬಾಗಲಕೋಟೆ ಗ್ರಾಮೀಣ ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಶವಗಳ ಶೋಧಕಾರ್ಯ ಮುಂದುವರಿದಿದೆ.

    ದಾವಣಗೆರೆಯಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ಮೊಣಕಾಲು ಉದ್ದ ನೀರು ನಿಂತಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ರಸ್ತೆ ಕಾಣದೆ ಪರದಾಡಿದಾಡಿದ್ದಾರೆ. ಸತತ 1 ಗಂಟೆ ಕಾಲ ಸುರಿದ ಮಳೆಗೆ ತರಕಾರಿ ಮಾರುಕಟ್ಟೆಯಲ್ಲಿ ನೀರು ನಿಂತ ಪರಿಣಾಮ ರೈತರ ಪರದಾಟ ಅನುಭವಿಸಿದ್ದಾರೆ. ದಾವಣಗೆರೆ, ಜಗಳೂರು ಸೇರಿದಂತೆ ಹಲವು ಕಡೆ ಉತ್ತಮ ಮಳೆಯಾಗಿದೆ.

    ಮಲೆನಾಡಿನ ಹಲವೆಡೆ ಭಾರೀ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಹೊಕ್ಕಳ್ಳಿಕೊಪ್ಪದಲ್ಲಿ ಸೇತುವೆ ಕೊಚ್ಚಿಹೋಗಿದ್ದು, ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. 2 ತಿಂಗಳ ಹಿಂದಷ್ಟೇ ನಿರ್ಮಾಣವಾಗಿದ್ದ ಸೇತುವೆ ಕೊಚ್ಚಿಹೋಗಿದ್ದ ಪರಿಣಾಮ ಹೊರನಾಡು-ಹೊಕ್ಕಳ್ಳಿ-ಕೊಪ್ಪಕ್ಕೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಸೇತುವೆ ಭಾಗದಲ್ಲಿ ಚಲಿಸುತ್ತಿದ್ದ ಬೈಕ್ ಸವಾರ ಕೂಡ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 2 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಲೆನಾಡ ಮಂದಿ ಹೈರಾಣಾಗಿದ್ದಾರೆ.

  • ಸರ್ಕಾರದಿಂದ ಸಿಗದ ನೆರೆ ಪರಿಹಾರ- ಆತ್ಮಹತ್ಯೆಗೆ ಶರಣಾದ ರೈತ

    ಸರ್ಕಾರದಿಂದ ಸಿಗದ ನೆರೆ ಪರಿಹಾರ- ಆತ್ಮಹತ್ಯೆಗೆ ಶರಣಾದ ರೈತ

    ಚಿಕ್ಕಮಗಳೂರು: ಸರ್ಕಾರ ಸಂತ್ರಸ್ತರಿಗೆ ನೆರೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಹಿನ್ನೆಲೆ ಮಲೆನಾಡಿನಲ್ಲಿ ನಿರಾಶ್ರಿತ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮೂಡಿಗೆರೆ ತಾಲೂಕಿನ ಎಸ್.ಕೆ ಮೇಗಲ್ ಗ್ರಾಮದಲ್ಲಿ ವಿಷ ಸೇವಿಸಿ ಚಂದ್ರೇಗೌಡ(55) ಸಾವಿಗೆ ಶರಣಾಗಿದ್ದಾರೆ. ಮಲೆನಾಡ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಚಂದ್ರೆ ಗೌಡರ ಒಂದು ಎಕ್ರೆ ಗದ್ದೆ ಕೊಚ್ಚಿಕೊಂಡು ಹೋಗಿತ್ತು. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದರು. ಮಳೆಯಿಂದ ಹಾನಿಯಾಗಿದ್ದ ಗದ್ದೆ-ತೋಟವನ್ನು ಸರಿ ಮಾಡಲು ರೈತ ಕೈ ಸಾಲ ಕೂಡ ಮಾಡಿಕೊಂಡಿದ್ದರು.

    ಇತ್ತ ಸರ್ಕಾರ ಇಂದು ನೆರೆ ಪರಿಹಾರ ಕೊಡುತ್ತೆ ನಾಳೆ ಪರಿಹಾರ ನೀಡುತ್ತೆ ಎಂದು ಕಾದು ಕುಳಿತಿದ್ದ ಚಂದ್ರೇಗೌಡರು, ಸರ್ಕಾರ ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದಕ್ಕೆ ಸಾಕಷ್ಟು ಬೇಸತ್ತು ಹೋಗಿದ್ದರು. ಅತ್ತ ಬೆಳೆ ಹಾನಿಯಾಗಿ ನಷ್ಟವಾಗಿ, ಇತ್ತ ಸಾಲ ಕಟ್ಟಲು ಹಣವಿಲ್ಲದೆ ಕಂಗಾಲಾಗಿದ್ದರು. ಹೀಗಾಗಿ ಸಾಲಕ್ಕೆ ಹೆದರಿ, ಪರಿಹಾರ ಹಣ ಬರದಿದ್ದಕ್ಕೆ ನೊಂದು ಚಂದ್ರೆ ಗೌಡರು ಆತ್ಮಹತ್ಯೆಗೆ ಶರಣಾಗಿದ್ದಾರೆ.

  • ಅಯ್ಯನಕೆರೆಯಲ್ಲಿ ಸಂಭ್ರಮ- ಮಳೆ ಅಬ್ಬರಕ್ಕೆ ಪ್ರವಾಸಿ ತಾಣವಾದ ಸಖರಾಯಪಟ್ಟಣ

    ಅಯ್ಯನಕೆರೆಯಲ್ಲಿ ಸಂಭ್ರಮ- ಮಳೆ ಅಬ್ಬರಕ್ಕೆ ಪ್ರವಾಸಿ ತಾಣವಾದ ಸಖರಾಯಪಟ್ಟಣ

    ಚಿಕ್ಕಮಗಳೂರು: ಮಲೆನಾಡಿನ ಜಲಪ್ರಳಯಕ್ಕೆ ಮಲೆನಾಡಿಗರ ಬದುಕು ಮೂರಾಬಟ್ಟೆಯಾದ್ರೆ, ಬಯಲುಸೀಮೆ ಜನರಿಗೆ ಬದುಕುವ ಚೈತನ್ಯ ತಂದಿದೆ. ಅಲ್ಲಿ ಅಲ್ಲೋಲ-ಕಲ್ಲೋಲ, ಇಲ್ಲಿ ಹರ್ಷೋದ್ಘಾರ ಎನ್ನುವಂತೆ ಒಂದೆಡೆ ನೀರಿಂದಲೇ ಬದುಕು ಬೀದಿಗೆ ಬಂದಿದ್ದರೆ, ಇನ್ನೊಂದೆಡೆ ಅದೇ ನೀರು ಬದುಕುವ ಆಸೆ ತಂದಿದೆ.

    ಹೌದು. ಮೂರು ಹವಾಗುಣ ಹೊಂದಿರೋ ಕಾಫಿನಾಡಲ್ಲಿ ಒಂದೊಂದು ಭಾಗದ್ದು ಒಂದೊಂದು ಗೋಳು. ಶಾಶ್ವತ ಬರಗಾಲಕ್ಕೆ ತುತ್ತಾಗಿದ್ದ ಜಿಲ್ಲೆಯ ಕಡೂರು ತಾಲೂಕಿನ ಜನಕ್ಕೀಗ ಸಖರಾಯಪಟ್ಟಣದ ಐತಿಹಾಸಿಕ ಅಯ್ಯನಕೆರೆ ತುಂಬಿರೋದು ಮರಳುಗಾಡಲ್ಲಿ ಓಯಾಸೀಸ್ ಸಿಕ್ಕಂತಾಗಿದೆ. 100 ಎಕ್ರೆಗೂ ಹೆಚ್ಚಿನ ವಿಸ್ತಿರ್ಣವುಳ್ಳ ಅಯ್ಯನಕೆರೆ ಅಂದಾಜು 5 ರಿಂದ 6 ಸಾವಿರ ಹೆಕ್ಟೇರ್ ನೀರಾವರಿ ಕಲ್ಪಿಸೋ ಜೀವನಾಡಿಯಾಗಿದ್ದು, ಮಲೆನಾಡಿನ ಮಳೆ ಅಬ್ಬರಕ್ಕೆ ಕಳೆದೊಂದು ವಾರದಿಂದ ಅಯ್ಯನಕೆರೆ ಆಕರ್ಷಣೆಯ ಕೇಂದ್ರ ಬಿಂದುವಾಗಿ ಪ್ರವಾಸಿ ತಾಣವಾಗಿದೆ.

    ಏಳು ಗುಡ್ಡಗಳ ಮಧ್ಯೆ ಇರೋ ಈ ಕೆರೆಯ ಸೌಂದರ್ಯಕ್ಕೆ ಕೆರೆಯ ಸಾಕ್ಷಿಯಂತಾಗಿದೆ. ಹಸಿರ ನೀರಿನ ಸೌಂದರ್ಯವನ್ನ ಸವಿಯಲು ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು. ಇಲ್ಲಿ ಬೋಟಿಂಗ್ ವ್ಯವಸ್ಥೆಗೆ ಸರ್ಕಾರ ಚಿಂತನೆ ನಡೆಸಿದೆ. ಈ ಕೆರೆ ತುಂಬಿರೋದು ಒಂದೆಡೆ ಪ್ರವಾಸಿಗರಿಗೆ ಮನೋರಂಜನೆ ನೀಡುತ್ತಿದ್ದರೆ. ಇನ್ನೊಂದೆಡೆ ನೀರಿನ ಅಭಾವದಿಂದ ಪರದಾಡುತ್ತಿದ್ದ ಹಳ್ಳಿಗರು, ರೈತರು ನಿಟ್ಟುಸಿರು ಬಿಡುವಂತಾಗಿದೆ.

    ಚಂದ್ರದ್ರೋಣ ಪರ್ವತ ಶ್ರೇಣಿಗೆ ಭೇಟಿ ನೀಡೋ ಪ್ರವಾಸಿಗರು ಇಲ್ಲಿಗೂ ಬಂದು ಇಲ್ಲಿನ ಸೌಂದರ್ಯವನ್ನ ಸವಿಯುತ್ತಾರೆ. ಅದರಲ್ಲೂ ಇಲ್ಲಿ ಯುವಕ-ಯುವತಿಯರು, ಪ್ರೇಮಿಗಳ ಸಂಖ್ಯೆಯೇ ಹೆಚ್ಚಾಗಿರುತ್ತದೆ. ವೀಕೆಂಡ್‍ನಲ್ಲಿ ಇಲ್ಲಿಗೆ ಆಗಮಿಸೋ ಪ್ರವಾಸಿಗರು ದಿನವಿಡೀ ಕೆರೆ ಬಳಿ ಕುಣಿದು ಕುಪ್ಪಳಿಸ್ತಾರೆ. ಮತ್ತೊಂದೆಡೆ ಸಾಹಸಿ ಈಜುಪಟುಗಳು ಮನಸ್ಸಿಗೆ ತೋಚಿದಂತೆಲ್ಲಾ ನೀರಿಗೆ ಬಿದ್ದು, ಈಜಿ ತಮ್ಮ ಆಸೆ ಪೂರೈಸಿಕೊಳ್ತಿದ್ದಾರೆ. ಇಲ್ಲಿ ಹರಿಯೋ ನೀರು ಕಡೂರಿನ ಬಹುತೇಕ ಭಾಗಕ್ಕೆ ಕುಡಿಯೋ ನೀರಿನ ಸೌಲಭ್ಯ ಕಲ್ಪಿಸಿದೆ. ಇಲ್ಲಿನ ಊರುಕಾಲುವೆ, ಬಸವನಕಾಲುವೆ, ಕಡೇ ಕಾಲುವೆ, ಗೌರಿ ಹಳ್ಳಿ ಹೀಗೆ ನಾಲ್ಕು ಕಾಲುವೆಗಳಾಗಿ ಹರಿಯೋ ನೀರು ಸಾವಿರಾರು ಜನರಿಗೆ ಬದುಕುವ ಚೈತನ್ಯ ತಂದಿದೆ. ಅಲ್ಲದೆ ಈಗ ಸರ್ಕಾರ ಈ ಕೆರೆಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಿಕೊಡಲು ಮುಂದಾಗಿರುವುದು ವ್ಯವಹಾರದ ದೃಷ್ಠಿಯಿಂದ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಮತ್ತಷ್ಟು ಖುಷಿ ತಂದಿದೆ.

    ಮಲೆನಾಡಿನ ಮಳೆ ಒಂದೆಡೆ ಖುಷಿ ತಂದರೆ. ಮತ್ತೊಂದೆಡೆ ನೋವು ತರಿಸಿದೆ. ಮಲೆನಾಡಿಗರು ನಮಗೆ ಮಳೆಯೇ ಬೇಡ ಅಂತಿದ್ದರೆ, ಕಡೂರು ತಾಲೂಕಿನ ಮಂದಿ ಮಾತ್ರ ಇಂದಿಗೂ ಬಾರಪ್ಪ ಮಳೆರಾಯ ಅನ್ನೊದನ್ನ ಬಿಟ್ಟಿಲ್ಲ. ಪ್ರವಾಸಿ ತಾಣವಾಗಿ ಈ ನಯನ ಮನೋಹರ ಜಾಗವಾದ ಅಯ್ಯನಕೆರೆ ಪ್ರವಾಸಿಗರನ್ನ ಕೈ ಬಿಸಿ ಕರೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಕೆರೆಯ ಸೌಂದರ್ಯ ರಾಶಿ ಕೂಡ ಕಣ್ಣಲ್ಲಿ ಕಟ್ಟುವಂತಿದೆ. ಇಲ್ಲಿ ಬೋಟಿಂಗ್ ವ್ಯವಸ್ಥೆಯಾದರೆ ಸ್ಥಳೀಯ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ.

  • ಮದ್ವೆಗೆ ಒಪ್ಪದ ಪೋಷಕರು – ಆತ್ಮಹತ್ಯೆಗೆ ಶರಣಾದ ಜೋಡಿ

    ಮದ್ವೆಗೆ ಒಪ್ಪದ ಪೋಷಕರು – ಆತ್ಮಹತ್ಯೆಗೆ ಶರಣಾದ ಜೋಡಿ

    ಚಿಕ್ಕಮಗಳೂರು: ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

    ನೂತನ್(25) ಹಾಗೂ ಅಪೂರ್ವ(22) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಆತ್ಮಹತ್ಯೆಗೆ ಶರಣಾಗುವ ಮುನ್ನ ನೂತನ್ ಹಾಗೂ ಅಪೂರ್ವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ನೂತನ್ ಹಾಗೂ ಅಪೂರ್ವ ಬೇರೆ-ಬೇರೆ ಜಾತಿಯಾಗಿದರಿಂದ ಹೆತ್ತವರು ಇವರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನೂತನ್ ಮನೆ ಕಡೆ ಅನುಕೂಲಸ್ಥವಾಗಿದ್ದು, ಹತ್ತಾರು ಎಕರೆ ಕಾಫಿ ತೋಟವಿತ್ತು.

    ಆದರೆ ಅಪೂರ್ವಳದ್ದು ಮಧ್ಯಮ ಕುಟುಂಬವಾಗಿದ್ದು, ತಾಯಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಇಬ್ಬರ ಮದುವೆಗೆ ಹೆತ್ತವರು ವಿರೋಧ ವ್ಯಕ್ತಪಡಿಸಿದರಿಂದ ಎರಡು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

    ಈ ವಿಷಯ ತಿಳಿದ ನೂತನ್ ಹಾಗೂ ಅಪೂರ್ವ ಪೋಷಕರು ಕೂಡಲೇ ಇಬ್ಬರನ್ನು ಹೆಚ್ವಿನ ಚಿಕಿತ್ಸೆಗೆ ಮಂಗಳೂರಿಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಇಬ್ಬರೂ ಮೃತಪಟ್ಟು ಸಾವಿನಲ್ಲೂ ಒಂದಾಗಿದ್ದಾರೆ.

    ಈ ಬಗ್ಗೆ ಬಣಕಲ್ ಹಾಗೂ ಗೋಣಿಬೀಡು ಎರಡೂ ಠಾಣೆಯಲ್ಲೂ ಯುಡಿಆರ್(ಅಸ್ವಾಭಾವಿಕ ಸಾವಿನ ವರದಿ) ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

  • ಮಾವನ ಅಂತ್ಯ ಸಂಸ್ಕಾರಕ್ಕೆ ಹೊರಟು ಸ್ಮಶಾನ ಸೇರಿದ ಅಳಿಯ

    ಮಾವನ ಅಂತ್ಯ ಸಂಸ್ಕಾರಕ್ಕೆ ಹೊರಟು ಸ್ಮಶಾನ ಸೇರಿದ ಅಳಿಯ

    ಚಿಕ್ಕಮಗಳೂರು: ಮಾವನ ಅಂತ್ಯ ಸಂಸ್ಕಾರಕ್ಕೆ ಹೊರಟಿದ್ದ ಅಳಿಯನೂ ಸಾವನಪ್ಪಿರೋ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸುರೇಶ್ (47) ಮೃತ ದುರ್ದೈವಿ. ಪತ್ನಿ ತಂದೆಯ ಸಾವಿಗೆ ಹೋಗಲು ರಸ್ತೆ ಬದಿಯಲ್ಲಿ ಸುರೇಶ್, ಪತ್ನಿ ಸುನಂದಾ ಹಾಗೂ ಮಕ್ಕಳು ಬಸ್ಸಿಗಾಗಿ ಕಾಯುತ್ತಿದರು. ಈ ವೇಳೆ ಏಕಾಏಕಿ ರಸ್ತೆ ಬದಿಯಲ್ಲಿ ನಿಂತಿದ್ದ ಸುರೇಶ್ ಕುಟುಂಬಸ್ಥರ ಮೇಲೆ ಕಾರು ನುಗ್ಗಿದೆ. ಕೂದಲೆಳೆ ಅಂತರದಲ್ಲಿ ಕಾರು ಡಿಕ್ಕಿಯಿಂದ ಪತ್ನಿ ಸುನಂದಾ ಹಾಗೂ ಮಕ್ಕಳು ಪಾರಾಗಿದ್ದಾರೆ.

    ಈ ಘಟನೆಯಲ್ಲಿ ತಪ್ಪಿಸಿಕೊಳ್ಳಲು ಮುಂದಾದ ಸುರೇಶ್ ಮೇಲೆ ಕಾರು ಹರಿದ ಪರಿಣಾಮ ಸುರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಪಾನಮತ್ತನಾಗಿ ಕಾರು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದ್ದು, ಒಂದೆಡೆ ತಂದೆ ಸಾವು, ಮತ್ತೊಂದೆಡೆ ಪತಿಯ ಸಾವಿನಿಂದ ಮೃತ ಸುರೇಶ್ ಪತ್ನಿ ಸುನಂದಾ ಕಂಗಾಲಾಗಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿದ್ದರಾಮಯ್ಯ ಸಮಾಜ ಒಡೆದ ಕಾರ್ಯಗಳು ಮಾತ್ರ ಜನರಿಗೆ ನೆನಪಿದೆ: ಶೋಭಾ ಕರಂದ್ಲಾಜೆ

    ಸಿದ್ದರಾಮಯ್ಯ ಸಮಾಜ ಒಡೆದ ಕಾರ್ಯಗಳು ಮಾತ್ರ ಜನರಿಗೆ ನೆನಪಿದೆ: ಶೋಭಾ ಕರಂದ್ಲಾಜೆ

    ಚಿಕ್ಕಮಗಳೂರು: ಸಿದ್ದರಾಮಯ್ಯ ಅಂದರೆ ಟಿಪ್ಪು ಜಯಂತಿ ಮಾಡಿದರು, ಸಮಾಜ-ಸಮಾಜ ಒಡೆದರು, ಲಿಂಗಾಯುತ-ವೀರಶೈವರನ್ನ ಬೇರೆ ಮಾಡಿದರು ಎನ್ನುವುದನ್ನು ಬಿಟ್ಟರೆ ಜನರು ಬೇರೆ ಯಾವುದನ್ನು ನೆನಪಿಟ್ಟುಕೊಂಡಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಸಿಎಂ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸದಿಂದ ಜನರು ಸಿದ್ದರಾಮಯ್ಯನನ್ನ ನೆನಪಿಟ್ಟುಕೊಂಡಿಲ್ಲ. ಟಿಪ್ಪು ಜಯಂತಿ ಮಾಡಿದರು. ಸಮಾಜ-ಸಮಾಜ ಒಡೆದರು, ಲಿಂಗಾಯತ-ವೀರಶೈವರನ್ನ ಬೇರೆ ಮಾಡಿದರು ಎನ್ನುವುದನ್ನು ನೆನಪಿಟ್ಟುಕೊಂಡಿದ್ದಾರೆ. ಯಾಕೆಂದರೆ ಅವರು ಹೆಚ್ಚು ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಇಂತಹ ಒಳ್ಳೆ ಅಭಿವೃದ್ಧಿ ಕೆಲಸವಾಯ್ತು? ದೊಡ್ಡ ಪ್ರಾಜೆಕ್ಟ್ ಬಂತು ಎಂದು ಸಿದ್ದರಾಮಯ್ಯನನ್ನ ನೆನಪಿಟ್ಟುಕೊಂಡಿಲ್ಲ ಎಂದು ಟಾಂಗ್ ಕೊಟ್ಟರು.

    ಸಿದ್ದರಾಮಯ್ಯನವರು ಹತಾಶರಾಗಿದ್ದಾರೆ. ಅವರ ಪಕ್ಷದೊಳಗೆ ಅವರು ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಮುನಿಯಪ್ಪ-ಸಿದ್ದರಾಮಯ್ಯ ಅವರು ಹೇಗೆ ಕಿತ್ತಾಡಿದ್ದಾರೆ ಎನ್ನುವುದನ್ನು ನಾವು ನೋಡಿದ್ದೇವೆ. ಈ ಒಂದು ಹತಾಶೆ ಮನೋಭಾವದಿಂದ ಅವರು ಮಾತನಾಡುತ್ತಿದ್ದಾರೆ. ಅಧಿಕಾರವಿದ್ದಾಗ ಕಾಂಗ್ರೆಸ್ ಏನು ಮಾಡಿದೆ ಎನ್ನುವುದನ್ನು ನಾವೇ ನೋಡಿದ್ದೇವೆ ಎಂದು ಕಿಡಿಕಾರಿದರು.

    ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ ಎಂದು ಹೇಳಿದರು. ಹಾಗೆಯೇ ಕಾಂಗ್ರೆಸ್ಸಿಗರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಯಾಕೆಂದರೆ ಕಾಂಗ್ರೆಸ್ಸಿನವರು ಎನ್.ಡಿ.ಆರ್.ಎಫ್, ಹಾಗೂ ಎಸ್.ಟಿ.ಆರ್.ಎಫ್‍ನಲ್ಲಿ ರಾಜ್ಯಕ್ಕೆ ಎಷ್ಟು ದುಡ್ಡು ಕೊಟ್ಟಿದ್ದಾರೋ ಅದರ ಎರಡರಷ್ಟು ಹಣವನ್ನ ಐದು ವರ್ಷದಲ್ಲಿ ಮೋದಿ ಸರ್ಕಾರ ರಾಜ್ಯಕ್ಕೆ ಕೊಟ್ಟಿದೆ. ನೆರೆ ಪರಿಹಾರಕ್ಕೆ ತಾತ್ಕಾಲಿಕವಾಗಿ ಹಣ ಬಿಡುಗಡೆಯಾಗಿದೆ. ಎನ್.ಡಿ.ಆರ್.ಎಫ್‍ನಿಂದಲೂ ಹಣ ಬಿಡುಗಡೆಯಾಗಿದೆ. ಶಾಶ್ವತ ಪರಿಹಾರಕ್ಕೆ ಶೀಘ್ರವೇ ಹಣ ಬಿಡುಗಡೆಯಾಗುತ್ತದೆ ಎಂದು ತಿಳಿಸಿದರು.

    ನಮ್ಮಲ್ಲಿ ಯಾವುದೇ ಬಣ, ಗುಂಪುಗಾರಿಕೆ ಇಲ್ಲ. ಇದು ಸಿದ್ದರಾಮಯ್ಯ, ಮುನಿಯಪ್ಪ ಹಾಗೂ ಡಿಕೆಶಿ ವಿಚಾರ ಮುಚ್ಚಿ ಹಾಕುವ ಪ್ರಯತ್ನವಾಗಿದ್ದು, ಮಾಧ್ಯಮಗಳಲ್ಲಿ ಹೇಳಿಕೆ ಕೊಡುವ ಮೂಲಕ ಬಿಜೆಪಿ ಮೇಲೆ ಎಲ್ಲರ ಗಮನ ಹೋಗುವಂತೆ ಡೈವರ್ಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಮಾತನಾಡುವ ನೈತಿಕತೆ ಇಲ್ಲ. ಸಮಿಶ್ರ ಸರ್ಕಾರವನ್ನ ಹೇಗೆ ನಡೆಸಿಕೊಂಡರು ಎಂಬುದು ಗೊತ್ತಿದೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ರಾಜ್ಯದ ಹಣಕಾಸು ಪರಿಸ್ಥಿತಿಯನ್ನ ಹದಗೆಡಿಸಿ ಹೋಗಿದ್ದಾರೆ. ಅದನ್ನ ಮೇಲೆತ್ತಿ ಕೆಲಸ ಮಾಡಲು ಯಡಿಯೂರಪ್ಪ ಅವರಿಗೆ ಕಷ್ಟವಾಗುತ್ತಿದೆ. ಯಡಿಯೂರಪ್ಪ ಸರ್ಕಾರದ ಪರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.