Tag: Chikkamagaluru

  • ದಕ್ಷಿಣಕನ್ನಡ, ಉಡುಪಿ, ಮೂಡಿಗೆರೆಯಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ

    ದಕ್ಷಿಣಕನ್ನಡ, ಉಡುಪಿ, ಮೂಡಿಗೆರೆಯಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ

    – ಇನ್ನೊಂದು ವಾರದಲ್ಲಿ ಮತ್ತೆರಡು ಸೈಕ್ಲೋನ್

    ಬೆಂಗಳೂರು: ಇಷ್ಟು ದಿನ ಮಳೆಯಬ್ಬರ ಆಯ್ತು. ಇನ್ನೊಂದು ವಾರ ಚಂಡಮಾರುತದ ಭೀತಿ. ಇಂದು ದಕ್ಷಿಣ, ಉತ್ತರ ಕನ್ನಡ ಕರಾವಳಿ ಜಿಲ್ಲೆಗಳು, ಮಹಾರಾಷ್ಟ್ರದ ಕೊಂಕಣ ಮತ್ತು ಗೋವಾ ತೀರ ಪ್ರದೇಶಗಳಿಗೆ ಕ್ಯಾರ್ ಚಂಡಮಾರುತ ಅಪ್ಪಳಿಸಲಿದೆ.

    ಈ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ, ಉಡುಪಿ ಜಿಲ್ಲೆ ಹಾಗೂ ಮೂಡಿಗೆರೆ ತಾಲೂಕಿನ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಅರಬ್ಬೀ ಸಮುದ್ರದಲ್ಲಿ ಕ್ಯಾರ್ ಚಂಡಮಾರುತ ಎದ್ದಿದ್ದು, ಕರಾವಳಿಗೆ ಹಿಂಗಾರು ಅಪ್ಪಳಿಸುವ ಭೀತಿ ಎದುರಾಗಿದೆ.

    ಕ್ಯಾರ್ ಚಂಡಮಾರುತ ಗಾಳಿ ಮಳೆ ಹೊತ್ತು ತರುತ್ತಿದೆ. ಈ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಮೌಖಿಕ ಆದೇಶ ಹೊರಡಿಸಿದ್ದಾರೆ.

    ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ, ಮೀನುಗಾರರಿಗೆ, ನದಿ ಬದಿಯ ಜನ ನೀರಿಗಿಳಿಯದಂತೆ ಸೂಚಿಸಿದೆ. ಜಿಲ್ಲೆಯಾದ್ಯಂತ ಇಂದು ಬೆಳಗ್ಗೆಯವರೆಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಅದು ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ.

    ಇತ್ತ ಗೋವಾದ ಬೇತುಲ್‍ನಲ್ಲಿ ಅಲೆಯಬ್ಬರಕ್ಕೆ ಮುಳುಗ್ತಿದ್ದ ದೋಣಿಯಲ್ಲಿದ್ದವರನ್ನ ರಕ್ಷಣೆ ಮಾಡಲಾಗಿದೆ. ಮುರುಡೇಶ್ವರ ಕಡಲ ತೀರದಲ್ಲಿ ಅಂಗಡಿಗಳಿಗೆ ಸಮುದ್ರದ ಅಲೆ ನುಗ್ಗಿ ವಸ್ತುಗಳೆಲ್ಲ ಕೊಚ್ಚಿಕೊಂಡು ಹೋಗಿದೆ. ಗುರುವಾರದಿಂದಲೇ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗುತ್ತಿದ್ದು, ಸಮುದ್ರದಲ್ಲಿ ಅಲೆಗಳು ಅಬ್ಬರಿಸುತ್ತಿವೆ. ಸಮುದ್ರ ಕೊರೆತ ಉಂಟಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ನಿನ್ನೆ ಸಂಜೆಯಿಂದಲೇ ಬಿರುಗಾಳಿ ಮಳೆಯಾಗುತ್ತಿದ್ದು, ಮೂಡಿಗೆರೆ ತಾಲೂಕಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.

    ಕ್ಯಾರ್ ಚಂಡಮಾರುತ ಬಳಿಕ ಅಕ್ಟೋಬರ್ 27ರಂದು ಬಂಗಾಳಕೊಲ್ಲಿಯಲ್ಲಿ ಸೃಷ್ಟಿ ಆಗುವ ಮಹಾ ಚಂಡಮಾರುತ ಅಪ್ಪಳಿಸಿದ್ದು, ತಮಿಳುನಾಡು ಮತ್ತು ಪುದುಚೇರಿ, ಕೇರಳದಲ್ಲಿ ರಣ ಮಳೆ ನಿರೀಕ್ಷಿಸಲಾಗಿದೆ. ಅಕ್ಟೋಬರ್ 27ರಂದು ಹಿಂದೂಮಹಾಸಾಗರದಲ್ಲಿ ಸೃಷ್ಟಿ ಆಗಲಿರುವ ಬುಲ್‍ಬುಲ್ ಹೆಸರಿನ ಮತ್ತೊಂದು ಚಂಡಮಾರುತ ನವೆಂಬರ್ 1 ಅಥವಾ 2ರಂದು ಬಂಗಾಳಕೊಲ್ಲಿಯಲ್ಲಿ ರೌದ್ರರೂಪ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಆಗ ಮತ್ತೆ ಭಾರೀ ಮಳೆ ಆಗುವ ಸಾಧ್ಯತೆ ಇದೆ.

  • ಅ.23ರಂದು ಶೃಂಗೇರಿ, ಹೊರನಾಡು, ಕಳಸ ಸಂಚಾರ ಬಂದ್

    ಅ.23ರಂದು ಶೃಂಗೇರಿ, ಹೊರನಾಡು, ಕಳಸ ಸಂಚಾರ ಬಂದ್

    ಚಿಕ್ಕಮಗಳೂರು: ಬಾಳೆಹೊನ್ನೂರು ಸೇತುವೆ ಕುಸಿಯೋ ಹಂತದಲ್ಲಿರುವುದರಿಂದ ಶೃಂಗೇರಿ, ಹೊರನಾಡು ಮತ್ತು ಕಳಸ ವಾಹನ ಸಂಚಾರವನ್ನು ಬಂದ್ ಮಾಡಲಾಗುತ್ತದೆ.

    ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸೇತುವೆ ಮೇಲೆ ವಾಹನ ಸಂಚಾರಕ್ಕೆ ಸುಮಾರು 3 ಗಂಟೆಗಳ ಕಾಲ ನಿರ್ಬಂಧ ಹಾಕಲಾಗುತ್ತದೆ. ಅಕ್ಟೋಬರ್ 23ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಸೇತುವೆ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಿ ಎಂದು ಡಿ.ಸಿ ಬಗಾದಿ ಗೌತಮ್ ಸೂಚನೆ ಕೊಟ್ಟಿದ್ದಾರೆ.

    ಬಾಳೆಹೊನ್ನೂರು ಸೇತುವೆ ಕುಸಿಯೋ ಹಂತದಲ್ಲಿರುವುದರಿಂದ ಅಧಿಕಾರಿಗಳು ವೀಕ್ಷಣೆ ಮಾಡಲಿದ್ದಾರೆ. ಬ್ರಿಡ್ಜ್ ಟೆಸ್ಟಿಂಗ್ ಮೆಷಿನ್ ಬಳಸಿ ಪರಿವೀಕ್ಷಣೆ ನಡೆಸಲಿದ್ದಾರೆ. ಈ ವೇಳೆ ವಾಹನ ಸವಾರರಿಗೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಡಿ.ಸಿ ಆದೇಶ ಹೊರಡಿಸಿದ್ದಾರೆ.

    ಬಾಳೆಹೊನ್ನೂರು ಸೇತುವೆಯನ್ನು ವಿರಾಜಪೇಟೆ ಮತ್ತು ಬೈಂದೂರ್ ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಭದ್ರಾ ನದಿಗೆ ನಿರ್ಮಿಸಲಾಗಿದೆ.

  • ಒಂದು ಜಿಲ್ಲೆ ಹಲವು ಜಗತ್ತಿಗೆ ಸಾಕ್ಷಿಯಾದ ಕಾಫಿನಾಡು

    ಒಂದು ಜಿಲ್ಲೆ ಹಲವು ಜಗತ್ತಿಗೆ ಸಾಕ್ಷಿಯಾದ ಕಾಫಿನಾಡು

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾಡಂಚಿನ ಗ್ರಾಮ ಬಿದಿರುತಳದಲ್ಲಿ ಕಣ್ಣು ಹಾಯಿಸದಲೆಲ್ಲಾ ಕಾಡು ಪ್ರಾಣಿಗಳ ಹಿಂಡು ಗೋಚರವಾಗುತ್ತಿದೆ.

    ಗ್ರಾಮದ ಸತೀಶ್ ಎಂಬವರು ತಮ್ಮ ತೋಟಕ್ಕೆ ಹೋಗುವಾಗ ದಾರಿಯುದ್ದಕ್ಕೂ ಪ್ರಾಣಿಗಳು ಕಾಣಿಸಿಕೊಂಡಿದೆ. ಈ ಪ್ರಾಣಿಗಳನ್ನು ನೋಡಿದ ಅವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದ ಕಾಫಿನಾಡು ಒಂದು ಜಿಲ್ಲೆ ಹಲವು ಜಗತ್ತು ಎನ್ನುವ ಮಾತಿಗೆ ಪೂರಕವಾಗಿದೆ.

    ಒಂದೆಡೆ ನರಿ, ಮತ್ತೊಂದೆಡೆ ಆನೆ, ಮಗದೊಂದು ಕಡೆ ಜಿಂಕೆ, ಇನ್ನೊಂದೆಡೆ ಕಡವೆಗಳ ಗುಂಪು ಕಾಣಿಸಿಕೊಂಡಿದೆ. ಕಾಡು ಪ್ರಾಣಿಗಳನ್ನು ನೋಡಿ ಸ್ಥಳೀಯರಿಗೆ ಒಂದೆಡೆ ಖುಷಿ ಆದರೆ ಹಾಗೂ ಮತ್ತೊಂದೆಡೆ ಆತಂಕ ಶುರುವಾಗಿದೆ. ಗ್ರಾಮದಂಚಿನಲ್ಲಿ ಹೀಗೆ ಪ್ರಾಣಿಗಳ ಗುಂಪನ್ನು ಕಂಡ ಸ್ಥಳೀಯರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.

    ಸದ್ಯ ಸ್ಥಳೀಯರು ಸ್ಥಳಾಂತರ ಮಾಡಿ ಎಂದು ಹೇಳುತ್ತಿದ್ದಾರೆ. ಈಗಾಗಲೇ ಬಿದಿರುತಳ ಗ್ರಾಮದ ಸ್ಥಳಾಂತರದ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಇದೆ. ಸ್ಥಳೀಯರು ಕೂಡಲೇ ನಮ್ಮನ್ನು ಸ್ಥಳಾಂತರ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  • ಆತ್ಮೀಯ ಸ್ನೇಹಿತನ ಅಂತ್ಯಕ್ರಿಯೆಯನ್ನ ಇಣುಕಿ-ಇಣುಕಿ ನೋಡಿದ ಮೇಕೆ

    ಆತ್ಮೀಯ ಸ್ನೇಹಿತನ ಅಂತ್ಯಕ್ರಿಯೆಯನ್ನ ಇಣುಕಿ-ಇಣುಕಿ ನೋಡಿದ ಮೇಕೆ

    ಚಿಕ್ಕಮಗಳೂರು: ಆತ್ಮೀಯ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಮೇಕೆಯೊಂದು ಪಾಲ್ಗೊಂಡು ಸ್ಥಳೀಯರನ್ನು ನಿಬ್ಬೆರಗಾಗುವಂತೆ ಮಾಡಿದೆ.

    ಜಿಲ್ಲೆಯ ಕೊಪ್ಪ ಪಟ್ಟಣದ ಕುವೆಂಪು ನಗರದ ಮೀನು ವ್ಯಾಪಾರಿ ಹುಸೇನಬ್ಬ ಹೃದಯಾಘಾತದಿಂದ ಸಾವನ್ನಪ್ಪಿದರು. ಹುಸೇನಬ್ಬ ತೀರಿಕೊಂಡ ಕ್ಷಣದಿಂದ ಅವರ ಮೃತದೇಹದ ಬಳಿಯೇ ಮೇಕೆ ಇಡೀ ರಾತ್ರಿ ಕುಳಿತಿತ್ತು. ಮರು ದಿನ ಮೃತದೇಹವನ್ನ ಸ್ಮಶಾನಕ್ಕೆ ಕರೆದೊಯ್ಯುವ ಮಾರ್ಗದಲ್ಲೂ ಜನಸಾಮಾನ್ಯರಂತೆ ಜೊತೆಯಲ್ಲೇ ಬಂದು ಅಚ್ಚರಿ ಮೂಡಿಸಿದೆ.

    ಅಷ್ಟೆ ಅಲ್ಲದೇ ಹುಸೇನ್‍ರವರ ಅಂತ್ಯ ಸಂಸ್ಕಾರ ಮಾಡೋದನ್ನ ಇಣುಕಿ-ಇಣುಕಿ ನೋಡಿ, ಆತ್ಮೀಯ ಗೆಳೆಯನಿಗೆ ಕಂಬನಿ ಮಿಡಿದಿದೆ. ಅಷ್ಟಕ್ಕೂ ಈ ಮೇಕೆ ಹುಸೇನಬ್ಬ ಅವರದ್ದಲ್ಲ. ಅವರ ಪಕ್ಕದ ಮನೆಯವರು ಹರಕೆಗೆ ಬಿಟ್ಟಿದ್ದ ಮೇಕೆ. ದಿನದ ಹೆಚ್ಚಿನ ಸಮಯವನ್ನು ಹುಸೇನಬ್ಬ ಮೇಕೆ ಜೊತೆ ಕಳೆಯುತ್ತಿದ್ದರು. ಮೇಕೆ ಅವರ ಸಾವಿನ ಬಳಿಕವೂ ಅಂತಿಮ ವಿದಾಯದವರೆಗೂ ಜೊತೆಗಿದ್ದು ಸಂತಾಪ ಸೂಚಿಸಿದೆ. ಸತ್ತ ಮೇಲೂ ದ್ವೇಷ ಸಾಧಿಸೋ ಜನರ ಮಧ್ಯೆ ನಾಲ್ಕು ದಿನ ಪ್ರೀತಿಯನ್ನ ನೆನೆದು ಕಣ್ಣೀರಿಟ್ಟ ಮೇಕೆಯ ಮನುಷ್ಯತ್ವ ಮಾದರಿಯಾಗಿದೆ.

  • ಚಾರ್ಮಾಡಿಯಲ್ಲಿ ಅರಳಿ ನಿಂತ ನೀಲಾಂಜನಿ ಕುರಂಜಿ

    ಚಾರ್ಮಾಡಿಯಲ್ಲಿ ಅರಳಿ ನಿಂತ ನೀಲಾಂಜನಿ ಕುರಂಜಿ

    -12 ವರ್ಷಗಳಿಗೊಮ್ಮೆ ಅರಳುವ ಹೂವು

    ಚಿಕ್ಕಮಗಳೂರು: ಹೂ ಚೆಲುವೆಲ್ಲಾ ನಂದೆಂದಿತು ಅನ್ನೋ ಹಾಡು ಕಾಫಿನಾಡಿನಲ್ಲಿ ಅಕ್ಷರಶಃ ಸತ್ಯವಾಗಿದೆ. ಜಗತ್ತಿನ ಸೌಂದರ್ಯವನ್ನೆಲ್ಲಾ ತನ್ನಲ್ಲೇ ಹುದುಗಿಸಿಕೊಂಡಿರೋ ಪ್ರಕೃತಿಯ ಸಿರಿತನದೆದುರು ಉಳಿದದೆಲ್ಲವು ನಶ್ವರವೇ ಸರಿ ಎನಿಸುವಂತೆ ಕಾಫಿನಾಡಲ್ಲಿ ಅಪರೂಪದ ಹೂವೊಂದು ಅರಳಿ ನಿಂತು, ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನ ಇಮ್ಮಡಿಗೊಳಿಸಿದೆ.

    ಹೌದು. 12 ವರ್ಷಗಳಿಗೊಮ್ಮೆ ಅರಳುವ ಕುರಂಜಿ ಹೂವು ಕಾಫಿನಾಡಿನ ಸೌಂದರ್ಯದ ದಿಕ್ಕನ್ನೇ ಬದಲಿಸಲಿದೆ. ಕಣ್ಣು ಹಾಯಿಸಿದಲೆಲ್ಲ ಕಾಣೋ ಅಪರೂಪದ ಕುರಂಜಿ ನೋಡುಗರ ಕಣ್ಮನ ಸೆಳೆಯೋದರ ಜೊತೆಗೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

    ಮುಂಗಾರು ಮಳೆಯಿಂದಾಗಿ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಅನುಪಮ ಸೌಂದರ್ಯ ತುಂಬಿಕೊಂಡಿದೆ. ಅದರಲ್ಲೂ, 12 ವರ್ಷಗಳಿಗೊಮ್ಮೆ ಅರಳೋ ಕುರಂಜಿಯಿಂದಾಗಿ ಚಂದ್ರದ್ರೋಣ ಪರ್ವತ, ದೇವರ ಮನೆ ಬೆಟ್ಟ, ಚಾರ್ಮುಡಿ ಬೆಟ್ಟ ಸೇರಿದಂತೆ ಕಾಫಿನಾಡ ಬೆಟ್ಟಗುಡ್ಡಗಳು ಎಲ್ಲರ ಕಣ್ಮನ ಸೆಳೆಯುತ್ತಿದೆ. ಕಣ್ಣು ಹಾಯಿಸಿದಷ್ಟು ದೂರ ನೀಲಾಂಜಲಿಯೇ ಕಾಣುತ್ತಿದ್ದು, ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಚಿಕ್ಕಮಗಳೂರಿನತ್ತ ಹರಿದು ಬರುತ್ತಿದೆ.

    ಧಾರ್ಮಿಕ ಇತಿಹಾಸ ಹೊಂದಿರೋ ಈ ಹೂವು ಅರಳಿದ ಕೂಡಲೇ ಸುಬ್ರಹ್ಮಣ್ಯ ದೇವರಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಕುರಂಜಿ ಅರಳುತ್ತೆ. ಇದಕ್ಕೆ ಗುರ್ಗಿ ಅನ್ನೋ ಹೆಸರು ಕೂಡ ಇದ್ದು, ಇದರಲ್ಲಿ ನಾನಾ ವಿಧಗಳಿವೆ. 5, 7, 12, 14 ವರ್ಷಗಳಿಗೆ ಅರಳೋ ಪ್ರಭೇದದ ಹೂವುಗಳೂ ಇವೆ. ಈ ಹೂವುಗಳು ಅರಳಿದಾಗ ಕಾಂಡದಲ್ಲಿ ಔಷಧಿಯ ಗುಣಗಳನ್ನು ಹೊಂದಿರುತ್ತದೆ. ಹೀಗಾಗಿ ನಾನಾ ಕಾಯಿಲೆಗೂ ಇದನ್ನು ಬಳಸುತ್ತಾರೆ. ವರುಣನ ಆರ್ಭಟಕ್ಕೆ ಪ್ರವಾಹ, ಭೂಕುಸಿತದಿಂದ ಭೀತಿಗೊಂಡಿರೋ ಕಾಫಿನಾಡಿನ ಜನ ಈಗ ಕುರಂಜಿ ನೋಡಿ ಮಂದಸ್ಮಿತರಾಗ್ತಿದ್ದಾರೆ.

  • ಬೈಕ್ ಓಡಿಸ್ತಿದ್ದಾಗ್ಲೇ 40 ಅಡಿ ಕುಸಿದ ಸೇತುವೆ

    ಬೈಕ್ ಓಡಿಸ್ತಿದ್ದಾಗ್ಲೇ 40 ಅಡಿ ಕುಸಿದ ಸೇತುವೆ

    ಚಿಕ್ಕಮಗಳೂರು: ಬೈಕಿನಲ್ಲಿ ಸಂಚರಿಸುವಾಗಲೇ ಸೇತುವೆ ಕುಸಿದು ಬಿದ್ದ ಪರಿಣಾಮ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಲಿಂಗನಾಡು ಗ್ರಾಮದಲ್ಲಿ ನಡೆದಿದೆ.

    ಮಲೆನಾಡು, ಕಾಫಿನಾಡಿನಲ್ಲಿ ಸುರಿಯುತ್ತಿರುವ ಭೀಕರ ಮಳೆಗೆ ಜನ ಹೈರಾಣಾಗಿದ್ದಾರೆ. ಈ ನಡುವೆ ಭಾನುವಾರ ಸುರಿದ ಮಳೆ ಚಿಕ್ಕಮಗಳೂರಿನ ಮಾಲಿಂಗನಾಡು ಗ್ರಾಮದಲ್ಲಿ ಅವಾಂತರ ಸೃಷ್ಟಿಸಿದೆ. ಮಾಲಿಂಗನಾಡು ಗ್ರಾಮದ ಹಿರೇಬೈಲು-ಕೂವೆ ಗ್ರಾಮವನ್ನು ಸಂಪರ್ಕಿಸುವ ಸೇತುವೆ ಮಳೆಗೆ ಕುಸಿದು ಬಿದ್ದಿದೆ. ಬೈಕ್ ಸಂಚರಿಸುವಾಗಲೇ ಏಕಾಏಕಿ ಸೇತುವೆ ಕುಸಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಮೊದಲು ಆತನನ್ನು ಸ್ಥಳೀಯರು ಮೂಡಿಗೆರೆ ಆಸ್ಪತ್ರೆಗೆ ಸೇರಿಸಿದ್ದರು, ಆದರೆ ಸವಾರನ ಸ್ಥಿತಿ ಗಂಭೀರವಿದ್ದ ಕಾರಣಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಇದನ್ನೂ ಓದಿ:ಕುಸಿದ ಸೇತುವೆಯ ಮಧ್ಯೆ ಸಿಲುಕಿದ ಕಾರುಗಳು: ವಿಡಿಯೋ ವೈರಲ್

    ಸುಮಾರು 40-50 ಅಡಿ ಆಳಕ್ಕೆ ಸೇತುವೆ ಕುಸಿದಿದ್ದು, ಅದರ ನಡುವೆಯೇ ಬೈಕ್ ಸಿಕ್ಕಿಬಿದ್ದಿದೆ. ಅಲ್ಲದೆ ಸೇತುವೆ ಕುಸಿತದಿಂದ ಹಿರೇಬೈಲು-ಕೂವೆ ಸಂಪರ್ಕ ಕಡಿತಗೊಂಡಿದ್ದು, ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಬೇರೆ ಪರ್ಯಾಯ ಮಾರ್ಗಗಳು ಇಲ್ಲ. ಆದ್ದರಿಂದ ಇಲ್ಲಿನ ಜನರು ಪರದಾಡುತ್ತಿದ್ದಾರೆ.

  • ಚುನಾವಣೆ ಮೊದ್ಲು ‘ಶೋಭಾ ಗೋ ಬ್ಯಾಕ್’ ಅಂದೋರು ಆಯಮ್ಮನನ್ನೇ ಗೆಲ್ಲಿಸಿದ್ರು: ಸಿದ್ದರಾಮಯ್ಯ

    ಚುನಾವಣೆ ಮೊದ್ಲು ‘ಶೋಭಾ ಗೋ ಬ್ಯಾಕ್’ ಅಂದೋರು ಆಯಮ್ಮನನ್ನೇ ಗೆಲ್ಲಿಸಿದ್ರು: ಸಿದ್ದರಾಮಯ್ಯ

    ಚಿಕ್ಕಮಗಳೂರು: ಲೋಕಸಭೆ ಚುನಾವಣೆ ವೇಳೆ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರತಿಭಟನೆ ಮಾಡಿ, ಗೋ ಬ್ಯಾಕ್ ಅನ್ನುತ್ತಿದ್ದೋರು ಬಳಿಕ ಆಯಮ್ಮನನ್ನೇ ಗೆಲ್ಲಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಜನ ಶೋಭಾ ಅವರ ವಿರುದ್ಧ ಚುನಾವಣೆ ಮುಂಚೆ ಪ್ರತಿಭಟನೆ ಮಾಡುತ್ತಿದ್ದರು. ಆದರೆ ಮತ್ತೆ ಆಯಮ್ಮನಿಗೆ ವೋಟ್ ಹಾಕಿದ್ದಾರಲ್ಲಾ ಹೆಂಗಪ್ಪಾ? ಗೋ ಬ್ಯಾಕ್ ಅನ್ನುತ್ತಿದ್ದೋರು, ಮೂರು ಲಕ್ಷ ಮತಗಳಿಂದ ಗೆಲ್ಲಿಸಿದ್ದಾರೆ. ಇನ್ನ 5 ವರ್ಷ ಈ ಕಡೆ ಅವರು ಬರಲ್ಲ ಎಂದು ಟಾಂಗ್ ಕೊಟ್ಟರು.

    ನೆರೆ ಪರಿಹಾರ ಸಿಗದೇ, ಸಾಲ ಭಾದೆಯಿಂದ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬದ ಪರಿಸ್ಥಿತಿ ಬಗ್ಗೆ ಕೇಳದ ಶೋಭಾ ಕರಂದ್ಲಾಜೆ ಹಾಗೂ ಸಚಿವ ಸಿಟಿ ರವಿ ಅವರನ್ನು ಸಿದ್ದರಾಮಯ್ಯ ಟೀಕಿಸಿದರು. ಚಿಕ್ಕಮಗಳೂರಿನಲ್ಲಿ ಪ್ರವಾಹ ಪರಿಹಾರ ಸಿಗದೇ, ಸಾಲಬಾಧೆಗೆ ಇಬ್ಬರು ರೈತರು ಸಾವನ್ನಪ್ಪಿದ್ದಾರೆ. ಆದರೆ ಈವರೆಗೂ ಶೋಭಾ ಅಥವಾ ಸಚಿವ ಸಿಟಿ ರವಿ ಆ ಕಡೆ ಹೋಗಿಲ್ಲ. ರೈತರ ಕುಟುಂಬದ ಅಳಲನ್ನು ಆಲಿಸಿಲ್ಲ ಎಂದು ಕಿಡಿಕಾರಿದರು. ನಾನು ಚಿಕ್ಕಮಗಳೂರಿಗೆ ಬರುತ್ತಿದ್ದೇನೆ ಎಂದು ಗೊತ್ತಾದ ಬಳಿಕ ಮರುದಿನ ಬೆಳಗ್ಗೆಯೇ ಮೂಡಿಗೆರೆ ಎಂಎಲ್‍ಎ ಕುಮಾರಸ್ವಾಮಿ ರೈತರ ಮನೆಗೆ ಓಡಿ ಹೋದರು. ಅಲ್ಲಿಯವರೆಗೆ ಈ ಬಗ್ಗೆ ನೆನಪಿರಲಿಲ್ಲ ಎಂದು ವ್ಯಂಗ್ಯವಾಡಿದರು.

  • ಎಷ್ಟಿಂಚು ಎದೆಯಿದ್ದರೇನು ಪ್ರಯೋಜನ, ಮಾತೃ ಹೃದಯವಿರಬೇಕು: ಮೋದಿಗೆ ಸಿದ್ದು ಟಾಂಗ್

    ಎಷ್ಟಿಂಚು ಎದೆಯಿದ್ದರೇನು ಪ್ರಯೋಜನ, ಮಾತೃ ಹೃದಯವಿರಬೇಕು: ಮೋದಿಗೆ ಸಿದ್ದು ಟಾಂಗ್

    – ರಮೇಶ್ ಸಾವು ನಿಗೂಢವಾಗಿ ಕಾಣಿಸ್ತಿದೆ
    – ವಿಧಾನಸಭೆಯಲ್ಲಿ ಮಾಧ್ಯಮ ನಿಷೇಧಕ್ಕೆ ಕಿಡಿ

    ಚಿಕ್ಕಮಗಳೂರು: ಕರ್ನಾಟಕ ಪ್ರವಾಹಕ್ಕೆ ಸರಿಯಾಗಿ ಸ್ಪಂದಿಸದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಎಷ್ಟಿಂಚು ಎದೆಯಿದ್ದರೇನು ಪ್ರಯೋಜನ, ಮಾತೃ ಹೃದಯವಿರಬೇಕು. ಜನರ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿರಬೇಕು ಎಂದು ಮೋದಿಗೆ ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, ಈ ವರ್ಷ ರಾಜ್ಯದಲ್ಲಿ ಪ್ರವಾಹ ಹಾಗೂ ಬರ ಎರಡೂ ಇದೆ. ಇದನ್ನು ಸಚಿವ ಆರ್. ಅಶೋಕ್ ಅವರೇ ಒಪ್ಪಿಕೊಂಡಿದ್ದಾರೆ. ಪ್ರವಾಹದ ಪರಿಹಾರ ಎಷ್ಟು ದಿನಕ್ಕೆ ಬಂದಿದೆ ಎಂದು ಗೊತ್ತಾ? 60 ದಿನಗಳಾದ ಮೇಲೆ 1,200 ಕೋಟಿ ರೂ. ಕೇಂದ್ರ ಸರ್ಕಾರದಿಂದ ಕೊಟ್ಟಿದ್ದಾರೆ. ಧೂಪ ಹಾಕ್ತಾರಲ್ಲ ಆ ರೀತಿ 1,200 ಕೋಟಿ ಕೊಟ್ಟಿದ್ದಾರೆ. ನೆರೆ ಬಂದು ಜನರು ಸಂಕಷ್ಟಕ್ಕೆ ಸಿಲುಕಿ ಸಾಕಷ್ಟು ಸಾವು-ನೋವುಗಳು ಆದರೂ ಮೋದಿ ಕರ್ನಾಟಕಕ್ಕೆ ಬಂದೇ ಇಲ್ಲ. ಸುಮಾರು 2 ಕೋಟಿ ಜನರು ಕರ್ನಾಟಕದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಮೋದಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಬಿಹಾರದಲ್ಲಿ ನೆರೆ ಬಂದಾಗ ತಕ್ಷಣ ಟ್ವೀಟ್ ಮಾಡುತ್ತಾರೆ ಎಂದು ಹರಿಹಾಯ್ದರು.

    ಎದೆ ಎಷ್ಟು ಇಂಚು ಇದ್ದರೇನು, ಜನರ ಕಷ್ಟಕ್ಕೆ ಸ್ಪಂದಿಸಲು ಮಾತೃ ಹೃದಯ ಇರಬೇಕು. ನೂರು ಇಂಚು ಎದೆ ಬೇಕಾದರೆ ಇಟ್ಟುಕೊಳ್ಳಿ ಆದರೆ ಮಾತೃ ಹೃದಯ ಇರಬೇಕು ಅಷ್ಟೆ ಎಂದು ಮೋದಿಯರನ್ನು ಟೀಕಿಸಿದರು.

    ಇದೇ ವೇಳೆ ವಿಧಾನಸಭೆಯಲ್ಲಿ ಮಾಧ್ಯಮ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರನ್ನ ದೂರ ಇಟ್ಟು ಏನು ಮಾಡೋಕೆ ಆಗಲ್ಲ. ವಿಧಾನಸಭೆಯಲ್ಲಿ ನಡೆಯುವ ಕಲಾಪ ಎಲ್ಲರಿಗೂ ಗೊತ್ತಾಗಬೇಕು. ಕಲಾಪ ಗೌಪ್ಯವಾಗಿ ನಡೆಯೋದಿಲ್ಲ, ಎಲ್ಲರಿಗೂ ಗೊತ್ತಾಗಲಿ ಎಂದು ನಾವು ಚರ್ಚೆ ಮಾಡೋದು. ಆದ್ದರಿಂದ ಮಾಧ್ಯಮಕ್ಕೆ ನಿರ್ಬಂಧ ಹೇರಿರುವುದು ಸರಿಯಲ್ಲ. ಈ ನಿರ್ಧಾರ ಸಿಎಂ ಹಾಗೂ ಸ್ಪೀಕರ್ ಇಬ್ಬರೂ ಸೇರಿಯೇ ಮಾಡಿರುವುದು. ಸರ್ಕಾರಕ್ಕೆ ಗೊತ್ತಿಲ್ಲದೆ ಏನು ಮಾಡೋಕೆ ಆಗಲ್ಲ. ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಅಲ್ಲದೆ ಬಿಜೆಪಿ ಸರ್ಕಾರ ಸರ್ವಾಧಿಕಾರ ಧೋರಣೆ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ, ಪ್ರಜಾಪ್ರಭುತ್ವದ ಕೊಲೆ ಎಂದು ಕಿಡಿಕಾರಿದರು.

    ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ನಾಲ್ಕು ಅಂಗಗಳು ಮುಖ್ಯ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗ ಮುಖ್ಯ ಪಾತ್ರವಹಿಸುತ್ತದೆ. ಪ್ರತಿ ನಿಯಮಾವಳಿಗಳನ್ನ ನಾವೇ ಮಾಡಿಕೊಂಡಿರೋದು. ನಿಯಮಾವಳಿಗಳು ದೇವಲೋಕದಿಂದ ಇಳಿದು ಬಂದಿಲ್ಲ. ನಿಯಮಗಳ ಬಗ್ಗೆ ಬಿಜೆಪಿಯವರಿಗೇ ನಂಬಿಕೆ ಇಲ್ಲ. ಸರ್ಕಾರದ ಹುಳುಕು, ವೈಫಲ್ಯಗಳು ಗೊತ್ತಾಗುತ್ತದೆ ಎಂದು ಮಾಧ್ಯಮದವರನ್ನ ದೂರ ಇಟ್ಟಿದ್ದಾರೆ ಎಂದು ಆರೋಪಿಸಿದರು.

    ವಿರೋಧ ಪಕ್ಷದ ನಾಯಕರು ಮಾತಾನಾಡುವಾಗ ತಡೆಯೋದು ಸರಿಯಲ್ಲ. ನಾನು ಯಾವತ್ತೂ ಈ ರೀತಿಯ ಸ್ಪೀಕರ್ ನೋಡಿಲ್ಲ. ಮುಂದೆ ಇದೇ ರೀತಿ ನಡೆದರೆ ವಿಧಾನಸಭೆ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಜೊತೆಗೆ ಈ ಸಲ ಒಪ್ಪಿಕೊಂಡಿದ್ದೇನೆ. ಆದರೆ ಮೋದಿ, ಅಮಿತ್ ಶಾ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಆರ್‍ಎಸ್‍ಎಸ್ ಅವರಿಗೆ ನಂಬಿಕೆ ಬರೋಕೆ ಸಾಧ್ಯವಿಲ್ಲ ಎಂದು ಗುಡುಗಿದರು.

    ಹಾಗೆಯೆ ಪರಮೇಶ್ವರ್ ಪಿ.ಎ. ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ, ರಮೇಶ್ ಸಾವು ನಿಗೂಢವಾಗಿ ಕಾಣಿಸುತ್ತದೆ. ಡೆತ್ ನೋಟ್‍ನಲ್ಲಿ ನನಗೆ ಕಿರುಕುಳ ಕೊಟ್ಟಿದ್ದಾರೆಂದು ಉಲ್ಲೇಖಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಪ್ರಕರಣದ ಸೂಕ್ತ ತನಿಖೆಯಾಗಬೇಕು. ಈ ಸಂಬಂಧ ಯಾವ ಏಜೆನ್ಸಿ ತನಿಖೆ ಮಾಡಬೇಕು ಅನ್ನೋದು ಸರ್ಕಾರಕ್ಕೆ ಬಿಟ್ಟಿದ್ದು. ರಮೇಶ್ ಸಾವಿಗೆ ಕಾರಣರಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

  • ವರುಣನ ಅಬ್ಬರಕ್ಕೆ ಕುರಿಗಳ ಮಾರಣ ಹೋಮ, ಸಿಡಿಲು ಬಡಿದು ಮಹಿಳೆ ಸಾವು

    ವರುಣನ ಅಬ್ಬರಕ್ಕೆ ಕುರಿಗಳ ಮಾರಣ ಹೋಮ, ಸಿಡಿಲು ಬಡಿದು ಮಹಿಳೆ ಸಾವು

    ಬೆಂಗಳೂರು: ರಾಜ್ಯದ ವಿವಿಧೆಡೆ ವರುಣನ ಆರ್ಭಟ ಮುಂದುವರಿದಿದ್ದು, ಬುಧವಾರ ಸುರಿದ ಗುಡುಗು ಮಿಂಚು ಸಹಿತ ಮಳೆಗೆ ಸಾವು-ನೋವು ಸಂಭವಿಸಿವೆ.

    ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಬುಧವಾರವು ಕೂಡ ವರುಣನ ಅಬ್ಬರಿಸಿದ್ದಾನೆ. ಯಶವಂತಪುರ, ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಗೊರಗುಂಟೆ ಪಾಳ್ಯ, ಯಶವಂತಪುರ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ. ವರುಣನ ಆರ್ಭಟ ಹಿನ್ನೆಲೆ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಣೆ ಮಾಡಿದೆ.

    ಸಿಡಿಲಿಗೆ ಮಹಿಳೆ ಬಲಿ:
    ಮನೆಯ ಕಟ್ಟೆಯ ಮೇಲೆ ಕುಳಿತ್ತಿದ್ದಾಗ ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ನಡೆದಿದೆ. ಶಾಂತಾಬಾಯಿ ಶಿವಪಾದಯ್ಯ ಆಹೇರಿಮಠ (36) ಸಿಡಿಲಿಗೆ ಬಲಿಯಾದ ಮಹಿಳೆ. ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಾವೇರಿಯಲ್ಲಿ ಧಾರಾಕಾರ ಮಳೆಯಿಂದಾಗಿ ಐದು ಕುರಿಗಳು ಸಾವನ್ನಪ್ಪಿವೆ. ನಗರದ ಜಾನುವಾರು ಮಾರುಕಟ್ಟೆಯಲ್ಲಿ ಪ್ರತಿ ಗುರುವಾರ ಕುರಿ ಸಂತೆ ನಡೆಯುತ್ತದೆ. ಹೀಗಾಗಿ ಕುರಿಗಾಯಿಗಳು ಕುರಿಗಳನ್ನು ಮಾರಾಟ ಮಾಡಲು ತಂದಿದ್ದರು. ಆದರೆ ಮಳೆರಾಯನ ಅಬ್ಬರಕ್ಕೆ ಕುರಿಗಳು ಬಲಿಯಾಗಿವೆ.

    ಹಾವೇರಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದಾನೆ. ಸಂಜೆ ಆಗುತ್ತಿದ್ದಂತೆ ಎಂಟ್ರಿ ಕೊಡುವ ವರುಣ ಗುಡುಗು, ಸಿಡಿಲಿನೊಂದಿಗೆ ಆರ್ಭಟಿಸುತ್ತಿದ್ದಾನೆ. ಮಳೆ ಆರ್ಭಟಕ್ಕೆ ಜಿಲ್ಲೆಯ ಹಾನಗಲ್, ಸವಣೂರು ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಮನೆಗೆ ನುಗ್ಗಿದ ನೀರು ಹೊರಹಾಕಲು ಜನರ ಹರಸಾಹಸ ಮಾಡಿದ್ದಾರೆ. ಮತ್ತೊಂದೆಡೆ ಧಾರಾಕಾರ ಮಳೆಯಿಂದ ರಸ್ತೆಗಳ ತುಂಬ ಭರಪೂರ ನೀರು ತುಂಬಿ ಹರಿದು ಹರಿಯುತ್ತಿದೆ. ಧಾರಾಕಾರ ಮಳೆಗೆ ಜಿಲ್ಲೆಯ ಅನ್ನದಾತರು ಆತಂಕಕ್ಕೆ ಸಿಲುಕಿದ್ದಾರೆ. ಶೇಂಗಾ ಮತ್ತು ಮೆಕ್ಕೆಜೋಳ ನಿರಂತರ ಮಳೆಯಿಂದ ಸಂಪೂರ್ಣ ನಾಶವಾಗುವ ಹಂತಕ್ಕೆ ಬಂದಿದೆ.

    ಕುರಿಗಳ ಮಾರಣ ಹೋಮ:
    ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲೂಕಿನ ಭುಜಂಗ ನಗರದ ಬಳಿ ಭಾರೀ ಮಳೆಯಾಗುತ್ತಿತ್ತು. ಹೀಗಾಗಿ 43 ಕುರಿಗಳು ಲಾರಿ ಕೆಳಗೆ ಆಶ್ರಯ ಪಡೆದಿದ್ದವು. ಈ ವೇಳೆ ಲಾರಿಗೆ ಸಿಡಿಲು ಪಡಿದು ಕುರಿಗಳು ಮೃತಪಟ್ಟಿವೆ. ಅದೃಷ್ಟವಶಾತ್ ಲಾರಿ ಚಾಲಕ, ಕ್ಲೀನರ್ ಮತ್ತು ಇಬ್ಬರು ಕುರಿಗಾಯಿಗಳು ಪ್ರಣಾಪಾಯದಿಂದ ಪಾರಾಗಿದ್ದಾರೆ.

    ಕೋಲಾರ ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಮುಂದುವರಿದಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಸಣ್ಣ ಸಣ್ಣ ಕೆರೆ ಕುಂಟೆಗಳು ತುಂಬಿ ಹರಿಯುತ್ತಿವೆ. ನಗರದ ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿದ ಪರಿಣಾಮ ವಾಹನ ಸವಾರರ ಪರದಾಡುವಂತಾಯಿತು.

    ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣ ಅಬ್ಬರವನ್ನು ಮುಂದುವರಿಸಿದ್ದಾನೆ. ತರೀಕೆರೆ ತಾಲೂಕಿನ ಸುತ್ತಮುತ್ತ ಭಾರೀ ಮಳೆಯಾಗಿದ್ದು, ರಸ್ತೆ ಮೇಲೆ ಅಡಿಯಷ್ಟು ನೀರು ನಿಂತಿದ್ದರಿಂದ ಸವಾರರು ಪರದಾಡುವಂತಾಗಿದೆ. ಅಷ್ಟೇ ಅಲ್ಲ ಅಂಗಡಿ-ಮಳಿಗೆಗಳಿಗೆ ಮಳೆ ನೀರು ನುಗ್ಗಿದೆ.

    ಧಾರವಾಡದಲ್ಲಿ ಧಾರಾಕಾರ ಮಳೆಯಾಗಿದ್ದು, ನಗರದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಬಾಗಲಕೋಟೆ ಜಿಲ್ಲಾದ್ಯಂತ ಧಾರಾಕಾರ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಜಮಖಂಡಿ ಬಸ್ ನಿಲ್ದಾಣ ಜಲಾವೃತವಾಗಿದ್ದು, ಪ್ರಯಾಣಿಕರು, ಚಾಲಕರು ಪರದಾಡುವಂತಾಗಿದೆ.

  • ಮೈಲಾರಲಿಂಗಸ್ವಾಮಿಯ ಕಾರ್ಣಿಕ- ಸರ್ವರು ಎಚ್ಚರದಿಂದಿರಿ ಎಂದು ಭವಿಷ್ಯ

    ಮೈಲಾರಲಿಂಗಸ್ವಾಮಿಯ ಕಾರ್ಣಿಕ- ಸರ್ವರು ಎಚ್ಚರದಿಂದಿರಿ ಎಂದು ಭವಿಷ್ಯ

    ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಸರಸ್ವತಿಪುರಂನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗಸ್ವಾಮಿಯ ಕಾರ್ಣಿಕ ಇಂದು ಮುಂಜಾನೆ ಸಂಪನ್ನಗೊಂಡಿದ್ದು, ಕಾರ್ಣಿಕ ನಡೆಯುವಾಗ ಸರ್ವರು ಎಚ್ಚರದಿಂದಿರಿ ಎಂದು ದಶರಥ ಪೂಜಾರರು ಎಚ್ಚರಿಸಿದ್ದಾರೆ.

    ಇಂದು ಬೆಳಗ್ಗಿನ ಜಾವ 5 ಗಂಟೆಗೆ ಸರಸ್ವತಿಪುರಂನ ಮಹಾನವಮಿ ಬಯಲಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನ ಏರಿದ ಪೂಜಾರರು ಕಾರ್ಣಿಕದ ನುಡಿಗಳನ್ನಾಡಿದರು. ರಾಷ್ಟ್ರ ಮತ್ತು ರಾಜ್ಯದ ಆಗುಹೋಗುಗಳ ಮೇಲೆ ಶ್ರೀ ಮೈಲಾರಲಿಂಗಸ್ವಾಮಿ ದಶರಥ ಪೂಜಾರರ ಬಾಯಲ್ಲಿ ಬಂದ ಕಾರ್ಣಿಕದ ನುಡಿಗಳನ್ನಾಡಿದ್ದಾರೆ. ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಪಂಜರದ ಗಿಳಿಗಳು ಹಾರಿ ಹೋದಾವು. ಕಟ್ಟಿದ ಕೋಟೆ ಪರರದಾಯಿತು. ಉತ್ತಮ ಮಳೆ ಸುರಿಸಿದಾವು. ಸರ್ವರು ಎಚ್ಚರದಿಂದಿರಬೇಕು ಎಂದು ಹೇಳಿದರು.

    ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗ ಕುಣಿತ ಅದ್ಭುತವಾಗಿರುವುದನ್ನು ನೋಡಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ನಾ ಮುಂದು ತಾ ಮುಂದು ಎನ್ನುತ್ತಿರುತ್ತಾರೆ. ನಂತರ ಮೈಲಾರಲಿಂಗ ಸ್ವಾಮಿ ಪೂಜಾರರನ್ನು ಕಾರ್ಣಿಕ ನುಡಿಯಲು ಪ್ರೇರೆಪಿಸುತ್ತಿದ್ದಂತೆ ಗೊರವಯ್ಯನವರ ಢಮರುಗ ಶಬ್ದ ಎಂತವರನ್ನು ಭಕ್ತಿಯ ಅಲೆಯಲ್ಲಿ ತೇಲಿಸುತ್ತದೆ.

    ಮಹಾನವಮಿ ಬಯಲಿನಲ್ಲಿ ಅಂಬನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಜಯಘೋಷ ಮೊಳಗಿಸಿ, ಕಾರ್ಣಿಕ ನುಡಿಯುವ ಸಮಯ ಬಂದಾಗ ಹುಟ್ಟಿದ ಕೂಸು ಸಹ ಅಳು ನಿಲ್ಲಿಸುತ್ತದೆ ಎಂಬ ಮಾತಿದೆ. ಇಲ್ಲಿ ನುಡಿಯುವ ಕಾರ್ಣಿಕ ಕೇಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಮೈಲಾರಲಿಂಗನ ಕಾರ್ಣಿಕ ಕೇಳಿ ಅಂಬನ್ನು ಹೊಡೆದಾಗ ದಸರಾ ಮುಕ್ತಾಯವಾಗುತ್ತದೆ.