Tag: Chikkamagaluru

  • ಅಳುತ್ತಿದ್ದ ಮಗುವನ್ನ ನಾಲೆಗೆ ಎಸೆದ ತಾಯಿ

    ಅಳುತ್ತಿದ್ದ ಮಗುವನ್ನ ನಾಲೆಗೆ ಎಸೆದ ತಾಯಿ

    ಚಿಕ್ಕಮಗಳೂರು: ಮೂರು ತಿಂಗಳ ಗಂಡು ಮಗುವನ್ನ ಹೆತ್ತ ತಾಯಿಯೇ ನಾಲೆಗೆ ಎಸೆದು ಕೊಂದ ಅಮಾನವೀಯ ಘಟನೆ ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ.

    ಕಡೂರು ತಾಲೂಕಿನ ನಿಡಘಟ್ಟ ನಿವಾಸಿ ಕಮಲ ಮಗುವನ್ನು ನಾಲೆಗೆ ಎಸೆದ ತಾಯಿ. ಮೂರು ತಿಂಗಳ ತೇಜಸ್ ಮೃತ ಕಂದಮ್ಮ ಎಂದು ಗುರುತಿಸಲಾಗಿದೆ. ತರೀಕೆರೆ ತಾಲೂಕಿನ ಹಳಿಯಾರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಮಲ ಹಾಗೂ ಆಕೆಯ ಅತ್ತೆ ಮಗುವಿಗೆ ಹುಷಾರಿರಲಿಲ್ಲ ಎಂದು ತರೀಕೆರೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ತಡರಾತ್ರಿ ಮಗು ಅಳುತ್ತಿತ್ತು ಎಷ್ಟೇ ಸಮಾಧಾನ ಮಾಡಿದರೂ ಅಳು ನಿಲ್ಲಿಸಿರಲಿಲ್ಲ. ಈ ವೇಳೆ ಕಮಲ ಸಮಾಧಾನ ಮಾಡಿಸಿಕೊಂಡ ವಾಪಾಸ್ ಬರುತ್ತೇನೆ ಎಂದು ಅತ್ತೆ ಬಳಿ ಹೇಳಿ ಮಗುವನ್ನು ಎತ್ತುಕೊಂಡು ಹೋಗಿದ್ದಳು.

    ಆದರೆ ಮಗುವನ್ನು ಎತ್ತಿಕೊಂಡು ಬಂದ ತಾಯಿ ತರೀಕೆರೆಯಿಂದ ೪ ಕಿ.ಮೀ ದೂರವಿರುವ ಹಳಿಯಾರು ಗ್ರಾಮಕ್ಕೆ ನಡೆದುಕೊಂಡು ಬಂದು, ಅಲ್ಲಿರುವ ಭದ್ರಾ ನಾಲೆಯಲ್ಲಿ ಮಗುವನ್ನು ಎಸೆದು ಮತ್ತೆ ಆಸ್ಪತ್ರೆಗೆ ಹೋಗಿ ಏನು ಗೊತ್ತಿಲ್ಲದಂತೆ ಮಲಗಿಕೊಂಡಿದ್ದಳು. ಇತ್ತ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದ್ದು, ನೀರು ಹರಿಯುತ್ತಿದ್ದ ರಭಸಕ್ಕೆ ಮಗು ಮೃತದೇಹ ಹರಿದುಬಂದು ಹಳಿಯಾರು ಗ್ರಾಮದಿಂದ ೫ ಕಿ.ಮೀ ದೂರವಿರುವ ಬೆಟ್ಟತಾವರೆಕೆರೆ ಗ್ರಾಮದಲ್ಲಿ ಪತ್ತೆಯಾಗಿದೆ.

    ನಾಲೆಯಲ್ಲಿ ಮಗುವಿನ ಮೃತದೇಹ ಕಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಗುವಿನ ಮೃತದೇಹವನ್ನು ನಾಲೆಯಿಂದ ಹೊರತಗೆದು, ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಾಗ ಆರೋಪಿ ತಾಯಿ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಪುನರ್ವಸತಿ ಹೆಸರಲ್ಲಿ ಮಲೆನಾಡಿಗರ ಬದುಕು ನಾಶ – ಸರ್ಕಾರದ ನಿಯಮಗಳಿಗೆ ಜನ ಕಂಗಾಲು

    ಪುನರ್ವಸತಿ ಹೆಸರಲ್ಲಿ ಮಲೆನಾಡಿಗರ ಬದುಕು ನಾಶ – ಸರ್ಕಾರದ ನಿಯಮಗಳಿಗೆ ಜನ ಕಂಗಾಲು

    ಚಿಕ್ಕಮಗಳೂರು: ರಾಜ್ಯ ಸರ್ಕಾರ, ಪರಿಹಾರ-ಪುನರ್ವಸತಿ ಹೆಸರಲ್ಲಿ ಮಲೆನಾಡಿಗರ ಬದುಕನ್ನೇ ಸರ್ವನಾಶ ಮಾಡಲು ಹೊರಟಿದೆ. ಏಕೆಂದರೆ ಮಹಾಮಳೆಗೆ ನಿರ್ಗತಿಕರಾದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಆಲೇಖಾನ್ ಹೊರಟ್ಟಿ, ಮಧುಗುಂಡಿ, ದುರ್ಗದಹಳ್ಳಿ, ಮೇಗೂರು, ಮಲೆಮನೆ ಗ್ರಾಮಗಳ ಸ್ಥಳಾಂತರಕ್ಕೆ ಮುಂದಾಗಿದೆ. ಅಲ್ಲದೆ ದಾಖಲೆ ಇರುವವರಿಗಷ್ಟೇ ಜಮೀನು. ಒತ್ತುವರಿದಾರರಿಗೆ ಏನೂ ಸಿಗುವುದಿಲ್ಲ, ಕೇವಲ ಮನೆಯಷ್ಟೆ ಎಂದು ಸರ್ಕಾರ ಹೇಳಿದೆ. ಇದು ನಿರಾಶ್ರಿತರಿಗೆ ಬರಸಿಡಿಲು ಬಡಿದಂತಾಗಿದೆ.

    ಸರ್ಕಾರ ಕೊಟ್ಟ ಜಾಗಕ್ಕೆ ಹೋಗಬೇಕು. ಇಷ್ಟು ವರ್ಷ ವಾಸವಿದ್ದ ಜಾಗದಿಂದ ಏನ್ನನ್ನು ತರದೆವ, ಸರ್ಕಾರ ಕೊಟ್ಟಿದ್ದನ್ನು ತೆಗೆದುಕೊಂಡು ಕೊಟ್ಟ ಜಾಗಕ್ಕೆ ಹೋಗುವಾಗ ಪರಿಹಾರ ಪ್ರಶ್ನಿಸಿ ಕೋರ್ಟಿಗೆ ಹೋಗಲ್ಲವೆಂದು ಸೈನ್ ಮಾಡಿ ಹೋಗಬೇಕು. ಸರ್ಕಾರದ ಈ ರೀತಿ-ನೀತಿಗಳು ಮಲೆನಾಡಿಗರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದ್ದು, ಮುಂದಿನ ದಾರಿ ಕಾಣದೆ ಇಷ್ಟಕ್ಕೆಲ್ಲಾ ಕಾರಣಕರ್ತನಾದ ವರುಣದೇವನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

    ನಾವು ಕೊಟ್ಟಿದ್ದ ಜಾಗಕ್ಕೆ ಹೋಗಬೇಕು ಎಂದು ಸರ್ಕಾರ ಭೂಮಿ ಕೊಟ್ಟರೆ ಏನ್ ಮಾಡುವುದು ಎಂಬುದು ಮಲೆನಾಡಿಗರ ಆತಂಕ. ಏಕೆಂದರೆ ಅಡಿಕೆ, ಕಾಫಿ, ಮೆಣಸು ಯಾವುದ್ದನ್ನು ಬೆಳೆಯಬೇಕು ಎಂದರೆ ಏಳೆಂಟು ವರ್ಷ ಬೇಕು. ಆ ಏಳೆಂಟು ವರ್ಷ ದುಡಿಯುವುದೋ, ದುಡಿಯುವುದರಲ್ಲಿ ತಿನ್ನುವುದೋ, ಮಕ್ಕಳನ್ನು ಸಾಕುವುದು ಅಥವಾ ತೋಟ ಮಾಡುವುದೋ ಎನ್ನುವುದು ಮಲೆನಾಡಿಗರಿಗೆ ಚಿಂತೆಗೀಡು ಮಾಡಿದೆ.

    ಈಗಾಗಲೇ ಸರ್ಕಾರ 300ಕ್ಕೂ ಅಧಿಕ ಕುಟುಂಬಗಳ ಸ್ಥಳಾಂತರಕ್ಕೆ ಮುಂದಾಗಿ ಎಲ್ಲರ ಅಕೌಂಟ್‌ಗೂ ಒಂದೊಂದು ಲಕ್ಷ ಹಣ ಹಾಕಿದೆ. ಕೆಲವರು ಹಣವನ್ನು ಬಳಸಿಕೊಂಡಿದ್ದರೆ, ಮತ್ತೆ ಕೆಲವರು ಬಳಸಿಕೊಂಡಿಲ್ಲ. 300 ಜನರಲ್ಲಿ 40-45 ಜನ ಸರ್ಕಾರದ ನೀತಿಗೆ ಒಪ್ಪಿ ಸಹಿ ಹಾಕಿ ತಲೆ ಮೇಲೆ ಕೈ ಹಾಕಿ ಕೂತಿದ್ದಾರೆ. ಸರ್ಕಾರ ಜಮೀನುಗಳ ದಾಖಲೆ ಇದ್ದವರಿಗೆ ಮಾತ್ರ ಜಮೀನು ಎಂತಿದೆ. ನೆರೆ ವೀಕ್ಷಣೆಗೆ ಬಂದಿದ್ದ ಸಚಿವರು ಯಾರಿಗೂ ಅನ್ಯಾಯ ಮಾಡಲ್ಲ ಎಂದಿದ್ದರು. ಆದರೆ ಇದ್ಯಾವ ನ್ಯಾಯ ಎಂದು ಸರ್ಕಾರವೇ ಉತ್ತರಿಸಬೇಕಿದೆ.

    ಸರ್ಕಾರದ ರೀತಿ-ರಿವಾಜುಗಳು ಜನರ ಕಣ್ಣಲ್ಲಿ ನೀರು ತರಿಸುತ್ತಿದ್ದರೆ, ಅರಣ್ಯ ಇಲಾಖೆ ಮನಸಲ್ಲೇ ಮೊಸರನ್ನು ತಿಂತಿದೆ. ಏಕೆಂದರೆ ಮಲೆನಾಡಲ್ಲಿ ಲಕ್ಷಾಂತರ ಎಕ್ರೆ ಅರಣ್ಯ ಒತ್ತುವರಿಯಾಗಿದೆ. ಇಲಾಖೆಗೆ ಕಂಡಿದ್ದು ಸಣ್ಣವರದ್ದಷ್ಟೆ. ಅಧಿಕಾರಿಗಳು ತೆರವಿಗೆ ಮುಂದಾದರೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಮಹಾಮಳೆಗೆ ಬೆದರಿ ಜನರೇ ಸರ್ಕಾರದ ನೀತಿಗೆ ಒಪ್ಪಿ ಜಾಗ ಖಾಲಿ ಮಾಡುತ್ತಿದ್ದಾರೆ.

  • ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣುಮಗಳ ಪ್ರಾಣ ಹೋಯ್ತು – ಸಿಟಿ ರವಿಗೆ ಜನಸಾಮಾನ್ಯರ ತರಾಟೆ

    ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣುಮಗಳ ಪ್ರಾಣ ಹೋಯ್ತು – ಸಿಟಿ ರವಿಗೆ ಜನಸಾಮಾನ್ಯರ ತರಾಟೆ

    ಚಿಕ್ಕಮಗಳೂರು: ಭಾನುವಾರ ರಸ್ತೆ ಗುಂಡಿಗೆ ಬಿದ್ದು ಯುವತಿ ಸಾವನ್ನಪ್ಪಿದ್ದ ಪ್ರಕರಣದಿಂದ ಜನಸಾಮಾನ್ಯರು ಸಿಟ್ಟಿಗೆದ್ದಿದ್ದು, ಸಚಿವ ಸಿ.ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಸಚಿವರ ವಿರುದ್ಧ ಮಹಿಳೆಯೊಬ್ಬರು ಕಿಡಿಕಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಮಹಿಳೆ ಸಿಟಿ ರವಿ ಅವರು ಯುವತಿ ಸಾವಿಗೆ ಸಂತಾಪ ಸೂಚಿಸಿರುವ ಟ್ವೀಟ್ ಓದಿ ಹರಿಹಾಯ್ದಿದ್ದಾರೆ. ಭಾನುವಾರ ದಂಡರಮಕ್ಕಿ ಸಮೀಪ ರಸ್ತೆಯಲ್ಲಿ ನಡೆದ ಅಪಘಾತ ದುರದೃಷ್ಟಕರವಲ್ಲ, ಅದು ನಿಮ್ಮ ಬೇಜವಾಬ್ದಾರಿತನ. ಈ ರೀತಿ ಟ್ವೀಟ್ ಮಾಡೋದಕ್ಕೆ ನಿಮ್ಮ ಆತ್ಮಸಾಕ್ಷಿಗೆ ಒಂದು ಸ್ವಲ್ಪವು ಚುಕ್ಕಲಿಲ್ವಾ? ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣುಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂಬುದು ನಿಮ್ಮ ಪರಿಜ್ಞಾನಕ್ಕೆ ಬರಲಿಲ್ವಾ? ಸುಲಭವಾಗಿ ಅವರ ಸಾವಿನ ದುಃಖ ಬರಿಸುವಂತ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಹೇಳುತ್ತೀರಲ್ಲಾ, ನಿಮಗೆ ಜೀವದ ಬೆಲೆ ಗೊತ್ತಿದ್ಯಾ? ಈ ಹಿಂದೆ ಹೀಗೆ ಮಾಡಿಯೇ ಇಬ್ಬರ ಪ್ರಾಣ ತೆಗೆದಿದ್ದೀರಿ. ನಿಮಗೆ ಜೀವದ ಬೆಲೆ, ಜೀವನದ ಬೆಲೆ ಗೊತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಕೇಂದ್ರ, ರಾಜ್ಯ ಸಚಿವರಿದ್ರೂ ಹುಬ್ಬಳ್ಳಿಯಲ್ಲಿ ಎಲ್ಲೆಲ್ಲೂ ಗುಂಡಿಗಳ ದರ್ಶನ

    ಇನ್ನುಮುಂದೆ ಟ್ವಿಟ್ಟರ್‌ನಲ್ಲಿ ಬೇರೆಯವರನ್ನು ಟೀಕಿಸುವ ಮುನ್ನ ನೀವು ನಿಮ್ಮ ಕ್ಷೇತ್ರದಲ್ಲಿ ಏನು ಮಾಡಿದ್ದೀರಿ? ಹೇಗೆ ಅಭಿವೃದ್ಧಿ ಮಾಡಿದ್ದೀರಿ ಎನ್ನುವುದನ್ನು ಜನಕ್ಕೆ ಹೇಳಿ. ಇಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ತೋರಿಸಿ. ಚಿಕ್ಕಮಗಳೂರು ರಸ್ತೆಗಳ ಪರಿಸ್ಥಿತಿ ಹೇಗಿದೆ ಅನ್ನೋದನ್ನ ನೀವೇ ಸುತ್ತಿಕೊಂಡು ಬಂದು ನೋಡಿ. ಆಮೇಲೆ ಯುವತಿ ಸಾವಿಗೆ ನೀವು ಸಂತಾಪ ಸೂಚಿಸಲು ಅರ್ಹರ ಎಂದು ಯೋಚನೆ ಮಾಡಿ, ಟ್ವೀಟ್ ಮಾಡಿ. ನಿಮ್ಮ ಟ್ವೀಟನ್ನು ನಾವು ಖಂಡಿಸುತ್ತೇವೆ. ನೀವು ಸರಿಯಾಗಿ ಕೆಲಸ ಮಾಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಸಿ.ಟಿ ರವಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ:ಲಾರಿಯಿಂದ ಮಣ್ಣು ಸುರಿದು ರಸ್ತೆ ಗುಂಡಿ ಮುಚ್ಚಿದ ಟ್ರಾಫಿಕ್ ಪೊಲೀಸ್

    ಭಾನುವಾರ ಚಿಕ್ಕಮಗಳೂರಿನ ದಂಡರಮಕ್ಕಿ ಸಮೀಪ ರಸ್ತೆ ಗುಂಡಿಗೆ ಬಿದ್ದು ಬಿ.ಇ ವಿದ್ಯಾರ್ಥಿನಿ ಸಿಂಧೂಜ(23) ಸಾವನ್ನಪ್ಪಿದ್ದರು. ಪಾಸ್‌ಪೋರ್ಟ್ ವೆರಿಫಿಕೇಶನ್‌ಗಾಗಿ ತಂದೆಯ ಜೊತೆ ಬೈಕ್‌ನಲ್ಲಿ ಸಿಂಧೂಜ ತೆರಳುತ್ತಿದ್ದರು. ಈ ವೇಳೆ ಘಟನೆ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನ ಗಮನಿಸದೆ ಬೈಕ್‌ನಿಂದ ಬಿದ್ದು ತಂದೆ, ಮಗಳು ಗಾಯಗೊಂಡಿದ್ದರು. ದುರಾದೃಷ್ಟವಶಾತ್ ಗಂಭೀರವಾಗಿ ಗಾಯಗೊಂಡಿದ್ದ ಸಿಂಧೂಜಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದರು. ಇದನ್ನೂ ಓದಿ:ರಸ್ತೆ ಗುಂಡಿಯಲ್ಲಿ ಕಾಲಿಟ್ಟು ತನ್ನ ಎರಡು ಕಾಲು ಕಳೆದುಕೊಂಡ ಎತ್ತು

    ಈ ಸಾವಿನ ಬಳಿಕ ಸರ್ಕಾರದ ವಿರುದ್ಧ ಸಾರ್ವಜನಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಚಿಕ್ಕಮಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಳೆಗಿಡ, ಅಡಿಕೆ ಸಸಿ ನೆಟ್ಟು ಪ್ರತಿಭಟನೆ ನಡೆಸಿ, ಸಚಿವ ಸಿ.ಟಿ ರವಿ ಫೋಟೋಗೆ ನೀರು ಹಾಕಿ ಕಿಡಿಕಾರಿದ್ದರು. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಯುವತಿ ಸಾವಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಚಿವರ ಜೊತೆಗೆ ಪಿಡಬ್ಲೂಡಿ ವಿರುದ್ಧವೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

  • ಚಿಕ್ಕಮಗ್ಳೂರಲ್ಲಿ ಮಳೆಯಬ್ಬರಕ್ಕೆ 15 ಸೇತುವೆಗಳೇ ಕೊಚ್ಚಿ ಹೋದವು!

    ಚಿಕ್ಕಮಗ್ಳೂರಲ್ಲಿ ಮಳೆಯಬ್ಬರಕ್ಕೆ 15 ಸೇತುವೆಗಳೇ ಕೊಚ್ಚಿ ಹೋದವು!

    ಚಿಕ್ಕಮಗಳೂರು: ಈ ಬಾರಿ ಮಳೆ ಕೇವಲ ಜನಜೀವನವನ್ನಷ್ಟೇ ಅತಂತ್ರಗೊಳಿಸಿಲ್ಲ. ದೈನಂದಿನ ಬದುಕಿನ ಮೇಲೂ ಪರಿಣಾಮ ಬಿದ್ದಿದೆ. ಜಲರಾಕ್ಷಸನ ಅಟ್ಟಹಾಸಕ್ಕೆ ಸಂಪರ್ಕ ಕೊಂಡಿಗಳೇ ಕಳಚಿ ಬಿದ್ದಿವೆ.

    ಹೌದು. ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗಗಳಲ್ಲಿ ಈ ಬಾರಿ ಕಂಡು-ಕೇಳರಿಯದ ಮಳೆ ಸುರಿದಿದೆ. ಇದರಿಂದ ಒಂದಲ್ಲ-ಎರಡಲ್ಲ 15ಕ್ಕೂ ಹೆಚ್ಚು ಸೇತುವೆಗಳು, ಕಿರುಸೇತುವೆಗಳು, ಕಾಲು ಸಂಕಗಳು ಮಳೆ ನೀರಲ್ಲಿ ಕೊಚ್ಚಿಹೋಗಿವೆ. ಮೂಡಿಗೆರೆಯ ಮಾಳಿಗನಾಡು, ಬಂಕೇನಹಳ್ಳಿ, ಹೊಯ್ಸಳಲು, ಮುದ್ರೆಮನೆ, ಹೊಕ್ಕಳ್ಳಿಕೊಪ್ಪದಲ್ಲಿ ಈ ಹಿಂದೆ ಇದ್ದ ಸೇತುವೆಗಳು ಈಗಿಲ್ಲ. ಮುಗ್ರಹಳ್ಳಿ ಸೇರಿದಂತೆ ಹಲವೆಡೆ ಅಳಿದುಳಿದಿರೋ ಸೇತುವೆಗಳು ಬಿರುಕು ಬಿಟ್ಟಿವೆ. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಬಾರಿ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ಶಿವು ಬೇಸರ ವ್ಯಕ್ತಪಡಿಸಿದ್ದಾರೆ.

    ಸದ್ಯ, ಮಳೆರಾಯ ಕೊಂಚ ಬಿಡುವು ಕೊಟ್ಟಿದ್ದು, ಆದರೂ ಕೊಚ್ಚಿ ಹೋದ ಸೇತುವೆಗಳನ್ನ ದುರಸ್ತಿಗೊಳಿಸೋ ಕಾರ್ಯಕ್ಕೆ ಸರ್ಕಾರ ಮುಂದಾಗಿಲ್ಲ. ಕಡೂರು ಹಾಗೂ ತರೀಕೆರೆ ತಾಲೂಕಿನಲ್ಲೂ ಸೇತುವೆಗಳು ಕೊಚ್ಚಿ ಹೋಗಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರೋ ಬಾಳೆಹೊನ್ನೂರು ಸೇತುವೆಯೂ ಬಿರುಕು ಬಿಟ್ಟಿದೆ. ಮೂರು ತಿಂಗಳಿನಿಂದ ಒಂದರ ಮೇಲೊಂದರಂತೆ ಸೇತುವೆಗಳು ಕೊಚ್ಚಿ ಹೋಗ್ತಿದ್ದು, ಸಂಪರ್ಕ ಕಳೆದುಕೊಂಡು ಜನ ಪರದಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಇಲ್ಲಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ.

    ಒಟ್ಟಿನಲ್ಲಿ ಈ ಬಾರಿ ಮಳೆರಾಯ ಮಲೆನಾಡಿನ ಜನರಿಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾನೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡು ಸೇತುವೆ ಪುನರ್‌ನಿರ್ಮಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಕನ್ನಡದ ಬಾವುಟ ಹಾರಿಸಿಲ್ಲ- ನನ್ನ ಮಗನಿಗೆ ಪ್ರಶಸ್ತಿ ಬೇಡ

    ಕನ್ನಡದ ಬಾವುಟ ಹಾರಿಸಿಲ್ಲ- ನನ್ನ ಮಗನಿಗೆ ಪ್ರಶಸ್ತಿ ಬೇಡ

    ಚಿಕ್ಕಮಗಳೂರು: ಕನ್ನಡದ ಬಾವುಟ ಹಾರಿಸಿಲ್ಲ, ಹೀಗಾಗಿ ನನ್ನ ಮಗನಿಗೆ ಪ್ರಶಸ್ತಿ ಬೇಡ ಎಂದು ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯ ತಂದೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಶೃಂಗೇರಿ ತಾಲೂಕು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಯ ತಂದೆ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.

    ವಿದ್ಯಾರ್ಥಿ ಸಂಕೀರ್ತ್ 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದಿದ್ದ. ಹೀಗಾಗಿ ತಾಲೂಕು ಆಡಳಿತ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲು ಮುಂದಾಗಿತ್ತು. ಆದರೆ ಕನ್ನಡ ಬಾವುಟ ಹಾರಿಸದ ಕಾರಣ ವಿದ್ಯಾರ್ಥಿಯ ತಂದೆ ಸಿಟ್ಟಿಗೆದ್ದಿದ್ದು, ಕನ್ನಡ ಬಾವುಟ ಹಾರಿಸದ ಕಾರಣ ನನ್ನ ಮಗನಿಗೆ ಪ್ರಶಸ್ತಿ ನೀಡುವುದು ಬೇಡ ಎಂದು ಹೇಳಿ ತಿರಸ್ಕರಿಸಿದ್ದಾರೆ.

    ಇದೇ ವೇಳೆ ತಮ್ಮ ಪುತ್ರ ಅಂಕ ಗಳಿಸಲು ಸಹಕರಿಸಿದವರಿಗೆ ಧನ್ಯವಾದ ಹೇಳಿದ ಸಂಕೀರ್ತ್ ತಂದೆ ನವೀನ್ ಕುರುವಾನೆ, ಯಾವುದೇ ಕಾರಣಕ್ಕೂ ಪ್ರಶಸ್ತಿ ಸನ್ಮಾನ ಸ್ವೀಕರಿಸುವುದಿಲ್ಲ ಎಂದು ತಿರಸ್ಕರಿಸಿದ್ದಾರೆ.

    ಚಿಕ್ಕಮಗಳೂರಿನ ನೇತಾಜಿ ಸುಭಾಷ್ ಚಂದ್ರ ಭೋಸ್ ಆಟದ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವದಂದು ಕನ್ನಡದ ಬಾವುಟವೇ ಇಲ್ಲದೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸಿ.ಟಿ.ರವಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಇದೇ ವೇಳೆ, ಕನ್ನಡ ರಾಜ್ಯೋತ್ಸವದಂದು ಕನ್ನಡ ಬಾವುಟ ಹಾರಿಸದ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದೆಯೂ ಕನ್ನಡ ಬಾವುಟವನ್ನು ಹಾರಿಸಿರಲಿಲ್ಲ. ಹಾಗಾಗಿ, ಈ ವರ್ಷವೂ ಹಾರಿಸಿಲ್ಲ. ಬಾವುಟ ಕಟ್ಟೋದು ಬೇರೆ, ಹಾರಿಸೋದು ಬೇರೆ. ಸರ್ಕಾರ ನಾಡ ಧ್ವಜ ಹಾರಿಸುವುದು ಬೇಡವೆಂದು ಆದೇಶಿಸಿರುವುದು ನನಗೆ ಗೊತ್ತಿಲ್ಲ. ನಾನು ನಾಡಿಗೆ ಒಂದೇ ಧ್ವಜ ಎಂದು ಹೇಳಿಲ್ಲ. ಸಾಂಸ್ಕøತಿಕವಾಗಿ ನಾನೂ ಕನ್ನಡ ಧ್ವಜವನ್ನು ಒಪ್ಪಿಕೊಂಡಿದ್ದೇನೆ ಮತ್ತು ಕನ್ನಡದ ಧ್ವಜವನ್ನು ಹಿಡಿದು ಕುಣಿದಿದ್ದೇನೆ ಎಂದರು.

  • ಸರ್ಕಾರಿ ಬಸ್ ಪಲ್ಟಿ – 2 ವರ್ಷದ ಮಗು ಸಾವು

    ಸರ್ಕಾರಿ ಬಸ್ ಪಲ್ಟಿ – 2 ವರ್ಷದ ಮಗು ಸಾವು

    ಚಿಕ್ಕಮಗಳೂರು: ಚಾಲಕನ ಅಜಾಗರೂಕತೆಯಿಂದ ಸರ್ಕಾರಿ ಬಸ್ ಪಲ್ಟಿಯಾಗಿದ್ದು, 2 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕಾಟಿಗನಗೆರೆ ಬಳಿ ನಡೆದಿದೆ.

    ಈ ಘಟನೆ ತಡರಾತ್ರಿ ನಡೆದಿದ್ದು, ಮೃತ ಮಗುವನ್ನು ಎರಡು ವರ್ಷದ ಸುಹಾಸ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಹಲವರಿಗೆ ಗಂಭೀರವಾಗಿ ಗಾಯವಾಗಿದ್ದು, ಗಾಯಾಳುಗಳನ್ನು ತರೀಕೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.

    ಧರ್ಮಸ್ಥಳ ದಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್ ಇದಾಗಿದ್ದು, ಚಾಲಕ ರಾತ್ರಿ ನಿದ್ರೆಗೆ ಜಾರಿದ ಹಿನ್ನೆಲೆ ಕಂಡಕ್ಟರ್ ಬಸ್ ಚಾಲನೆ ಮಾಡುತ್ತಿದ್ದನು. ಈ ವೇಳೆ ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಫಿನಾಡಿನ ದೇಗುಲದಲ್ಲಿ ಕನ್ನಡ ಡಿಂಡಿಮ

    ಕಾಫಿನಾಡಿನ ದೇಗುಲದಲ್ಲಿ ಕನ್ನಡ ಡಿಂಡಿಮ

    ಚಿಕ್ಕಮಗಳೂರು: ಇಂದು 64ನೇ ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದೆಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಕಾಫಿನಾಡಲ್ಲೊಂದು ವಿಶೇಷ ದೇಗುಲವಿದೆ. ಇಲ್ಲಿ ಪ್ರತಿನಿತ್ಯ ಕನ್ನಡ ಕಂಪು ಮೇಳೈಸಿದೆ.

    ಚಿಕ್ಕಮಗಳೂರಿನ ಹಿರೇಮಗಳೂರಿನ ಕೋದಂಡರಾಮ ಸ್ವಾಮಿ ದೇಗುಲದಲ್ಲಿ ಕನ್ನಡ ಡಿಂಡಿಮ ಮೊಳಗುತ್ತಿದೆ. ಸಾಮಾನ್ಯವಾಗಿ ದೇಗುಲಗಳಲ್ಲಿ ಸಂಸ್ಕೃತದಲ್ಲಿ ಮಂತ್ರ ಹೇಳಿ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಕೋದಂಡರಾಮ ಸ್ವಾಮಿ ದೇಗುಲದಲ್ಲಿ ಮಾತ್ರ ಕನ್ನಡದಲ್ಲೇ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತೆ. ಹೀಗಾಗಿ ಈ ದೇಗುಲ ವಿಶೇಷವಾಗಿದೆ.

    ಈ ದೇಗುಲದಲ್ಲಿ ಅರ್ಚಕರಾಗಿರೋ ಹಿರೇಮಗಳೂರು ಕಣ್ಣನ್ ಅವರು ಕನ್ನಡದಲ್ಲೇ ಕೋದಂಡರಾಮ ಸ್ವಾಮಿ ಪ್ರತಿದಿನ ಪೂಜೆ ಮಾಡುತ್ತಾರೆ. ನಿತ್ಯವೂ ಕನ್ನಡದಲ್ಲೇ ಮಂತ್ರ ಪಠಣ, ಹೋಮ, ಹವನ ಕೂಡ ನಡೆಯುತ್ತೆ. ಅಷ್ಟೇ ಅಲ್ಲದೆ ಇಲ್ಲಿ ನಡೆಯೋ ಮದುವೆಗಳನ್ನು ಕೂಡ ಕನ್ನಡದಲ್ಲೇ ಮಾಡಿಸೋದು ವಿಶೇಷ. ದೇಗುಲದ ಒಳಗಿನ ಗೋಡೆಗಳ ಮೇಲೂ ಕನ್ನಡ ಬರಹಗಳನ್ನು ಕಾಣಬಹುದಾಗಿದ್ದು, ಕನ್ನಡದಲ್ಲಿರುವ ಜೀವನ ಸಂದೇಶಗಳು ದೇವರ ದರ್ಶನಕ್ಕೆ ಬರುವ ಭಕ್ತಾದಿಗಳ ಗಮನ ಸೆಳೆದಿದೆ.

  • ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಬೆಂಗಳೂರು: ಪಬ್ಲಿಕ್ ಟಿವಿ ಪಬ್ಲಿಕ್ ಹೀರೋ ದಾವಣಗೆರೆಯ ಸಾಲುಮರದ ವೀರಾಚಾರಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಇಂದು ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಸಿಟಿ ರವಿ, 25 ವಿಭಾಗಗಳಲ್ಲಿ ಸಾಧನೆಗೈದ 64 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿ, ಪಟ್ಟಿ ಪ್ರಕಟ ಮಾಡಿದರು. ಪರಿಸರ ವಿಭಾಗದಲ್ಲಿ ಸಾಲು ಮರಗಳನ್ನು ನೆಟ್ಟಿದ್ದ ವೀರಾಚಾರಿ ಅವರ ಹೆಸರು ಪ್ರಕಟಿಸಲಾಗಿದೆ. ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ವೀರಾಚಾರಿ ಅವರನ್ನು ಪಬ್ಲಿಕ್ ಟಿವಿ ಜನರಿಗೆ ಪರಿಚಯಿಸಿತ್ತು.

    ನಿಸ್ವಾರ್ಥ ಸೇವೆ ಮಾಡುತ್ತ, ಮರ ಗಿಡಗಳನ್ನು ಮಕ್ಕಳಂತೆ ಪೋಷಣೆ ಮಾಡುತ್ತಿರುವ ವೀರಾಚಾರಿ ಅವರ ಪರಿಸರ ಪ್ರೇಮವನ್ನು ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ. ಜನರು ಇವರನ್ನು ಪ್ರೀತಿಯಿಂದ ಸಾಲುಮರದ ವೀರಾಚಾರಿ ಎಂದು ಸಹ ಕರೆಯುತ್ತಾರೆ. ದಾವಣಗೆರೆಯ ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದವರಾದ ವೀರಾಚಾರಿ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಚಿತ್ರದುರ್ಗದ ನಂದಿಹಳ್ಳಿ ಗ್ರಾಮದಿಂದ ಕುಲುಮೆ ಕೆಲಸ ಮಾಡಲು 35 ವರ್ಷದ ಮಿಟ್ಲಕಟ್ಟೆ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ.

    ಪರಿಸರದ ಬಗ್ಗೆ ಕಾಳಜಿ ಇದ್ದ ವೀರಾಚಾರಿ ದೇವರಬೆಳಕೆರೆ ಗ್ರಾಮ ಪಂಚಾಯಿತಿಗೆ ತೆರಳಿ ಬಸ್ ನಿಲ್ದಾಣದ ಆವರಣದಲ್ಲಿ ನೆಡಲು ಎರಡು ಗಿಡಗಳನ್ನ ಕೇಳಿದ್ದಾರೆ. ಆದರೆ ಗಿಡಗಳನ್ನ ಕೊಡಲು ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ಬೇಸರಗೊಂಡ ವೀರಾಚಾರಿ ಗ್ರಾಮ ಪಂಚಾಯಿತಿಯವರಿಗೇ ಸವಾಲ್ ಹಾಕಿದ್ದಾರೆ. ಇನ್ನು ಮುಂದೆ ನಾನೇ ಇಡೀ ದಾವಣಗೆರೆ ಜಿಲ್ಲೆಯ ತುಂಬಾ ಗಿಡ ನೆಡುವುದಾಗಿ ಶಪಥ ಮಾಡಿದ್ದರು.

    ಅಂದಿನಿಂದ ಪ್ರಾರಂಭವಾದ ಗಿಡ ನೆಡುವ ಕಾರ್ಯಕ್ರಮ ಸತತ 35 ವರ್ಷಗಳಲ್ಲಿ ಎರಡೂವರೆ ಸಾವಿರಕ್ಕಿಂತ ಹೆಚ್ಚು ಗಿಡ ನೆಟ್ಟಿದ್ದಾರೆ. ಕೇವಲ ಗಿಡ ನೆಡುವುದು ಮಾತ್ರವಲ್ಲದೆ ಪ್ರತಿನಿತ್ಯ ಗಿಡಗಳಿಗೆ ನೀರು ಹಾಕಿ ಬೆಳೆಸುವುದು ಇವರ ನಿತ್ಯ ಕಾಯಕವಾಗಿದೆ. ಈ ವೇಳೆ ಬಡತನದಲ್ಲಿದ್ದ ವೀರಚಾರಿ ತಮ್ಮ ಚಿನ್ನಾಭರಣಗಳನ್ನು ಮಾರಿ ಗಿಡಗಳನ್ನ ಕೊಂಡು ತಂದು ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಪ್ರತಿ ಗ್ರಾಮದ ಬಸ್ ನಿಲ್ದಾಣಗಳಲ್ಲಿ ಗಿಡ ಹಚ್ಚಿದ್ದಾರೆ.

    ಆರಂಭದಲ್ಲಿ ವೀರಾಚಾರಿಯವರ ಕೆಲಸವನ್ನು ನೋಡಿ ಜನರು ನಗೆಪಾಟಲು ಮಾಡುತ್ತಿದ್ದರಂತೆ. ಆದರೆ ಜನರ ಮಾತುಗಳಿಗೆ ತಲೆಕೆಡಿಸಿಕೊಳ್ಳದ ವೀರಾಚಾರಿ ತಮ್ಮ ಕಾಯಕದಲ್ಲಿ ತೊಡಗಿಕೊಂಡಿದ್ದರು. ಇಂದು ವೀರಾಚಾರಿ ಅವರು ಬೆಳೆಸಿದ ಗಿಡಗಳು ಅದೆಷ್ಟೋ ಜನರಿಗೆ ನೆರಳು ನೀಡುತ್ತಿವೆ. ಹಾಗೆಯೇ ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣಗಳಾಗಿವೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ. ಮನೆಯವರು ಸಹ ಹೆಗಲಿಗೆ ಹೆಗಲು ನೀಡಿ ಮರ ಗಿಡಗಳನ್ನು ಬೆಳೆಸಲು ಸಹಾಯ ಮಾಡುತ್ತಿದ್ದಾರೆ. ಬಡತನದಲ್ಲಿ ಕೂಡ ಮನೆ ಒಡವೆ ಒತ್ತೆ ಇಟ್ಟು ಗಿಡಗಳನ್ನು ತರುತ್ತಿದ್ದರು. ನಾವು ಯಾವುದಕ್ಕೂ ವಿರೋಧ ಮಾಡುತ್ತಿರಲಿಲ್ಲ ಎಂದು ವೀರಾಚಾರಿ ಅವರ ಪತ್ನಿ ಅನಸೂಯಮ್ಮ ಹೇಳುತ್ತಾರೆ.

    https://www.facebook.com/publictv/videos/479892435937928/

  • 64 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    64 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಚಿಕ್ಕಮಗಳೂರು: 25 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಸಾಧಕರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಬಿಡುಗಡೆ ಮಾಡಲಾಗಿದೆ. ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

    ಸಾಹಿತ್ಯ :
    ಡಾ.ಮಂಜಪ್ಪ ಶೆಟ್ಟಿ ಮಸಗಲಿ
    ಪ್ರೊ. ಬಿ.ರಾಜಶೇಖರಪ್ಪ
    ಚಂದ್ರಕಾಂತ ಕರದಳ್ಳಿ
    ಡಾ.ಸರಸ್ಪತಿ ಚಿಮ್ಮಲಗಿ

    ರಂಗಭೂಮಿ
    ಪರಶುರಾಮಸಿದ್ದಿ
    ಪಾಲ್ ಸುದರ್ಶನ್
    ಹೂಲಿ ಶೇಖರ್
    ಎನ್.ಶಿವಲಿಂಗಯ್ಯ
    ಡಾ.ಎಚ್.ಕೆ.ರಾಮನಾಥ
    ಭಾರ್ಗವಿ ನಾರಾಯಣ

    ಸಂಗೀತ :
    ಛೋಟೆ ರೆಹಮತ್ ಖಾನ್
    ನಾಗವಲ್ಲಿ ನಾಗರಾಜ್
    ಡಾ.ಮುದ್ದು ಮೋಹನ
    ಶ್ರೀನಿವಾಸ ಉಡುಪ

    ಜಾನಪದ :
    ನೀಲ್ ಗಾರರು ದೊಡ್ಡಗವಿಬಸಪ್ಪ ಮಂಟೇಸ್ವಾಮಿ ಪರಂಪರೆ
    ಹೊಳಬಸಯ್ಯ ದುಂಡಯ್ಯ ಸಂಬಳದ
    ಭೀಮಸಿಂಗ್ ಸಕಾರಾಮ್ ರಾಥೋಡ್
    ಉಸ್ಮಾನ್ ಸಾಬ್ ಖಾದರ್ ಸಾಬ್
    ಕೊಟ್ರೇಶ ಚೆನ್ನಬಸಪ್ಪ ಕೊಟ್ರೆಶಪ್ಪನವರ
    ಕೆ.ಆರ್. ಹೊಸಳಯ್ಯ

    ಶಿಲ್ಪಕಲೆ :
    ವಿ.ಎ.ದೇಶಪಾಂಡೆ
    ಕೆ.ಜ್ಞಾನೇಶ್ವರ

    ಚಿತ್ರಕಲೆ :
    ಯು. ರಮೇಶ್ ರಾವ್
    ಮೋಹನ ಸೀತನೂರು

    ಕ್ರೀಡೆ :
    ವಿಶ್ವನಾಥ್ ಭಾಸ್ಕರ್ ಗಾಣಿಗ
    ಚೇನಂಡ ಎ.ಕುಟ್ಟಪ್ಪ
    ನಂದಿತ ನಾಗನಗೌಡರ್

    ಯೋಗ :
    ಶ್ರೀಮತಿ ವನಿತಕ್ಕ
    ಕು. ಖುಷಿ

    ಯಕ್ಷಗಾನ : ಶ್ರೀಧರ ಭಂಡಾರಿ ಪುತ್ತೂರು
    ಬಯಲಾಟ : ವೈ. ಮಲ್ಲಪ್ಪ ಗವಾಯಿ
    ಚಲನಚಿತ್ರ : ಶೈಲಶ್ರೀ

    ಪತ್ರಿಕೋದ್ಯಮ :
    ಬಿ.ವಿ. ಮಲ್ಲಕಾರ್ಜುನಯ್ಯ

    ಸಹಕಾರ :
    ರಮೇಶ್ ವೈದ್ಯ

    ಸಮಾಜಸೇವೆ :
    ಎಸ್.ಜಿ. ಭಾರತಿ
    ಶ್ರೀ ಕತ್ತಿಗೆ ಚನ್ನಪ್ಪ

    ಕೃಷಿ :
    ಬಿ.ಕೆ.ದೇವರಾಜ್
    ವಿಶ್ವೇಶ್ವರ ಸಜ್ಜನ್

    ಪರಿಸರ :
    ಸಾಲುಮರದ ವೀರಾಚಾರ್
    ಶಿವಾಜಿ ಛತ್ರಪ್ಪ ಕಾಗಣಿಕರ್

    ಕಿರುತೆರೆ :
    ಜಯಕುಮಾರ ಕೊಡಗನೂರ, ಕಿರುತರೆ

    ಶಿಕ್ಷಣ :
    ಎಸ್.ಆರ್.ಗುಂಜಾಳ್
    ಪ್ರೊ.ಟಿ.ಶಿವಣ್ಣ
    ಡಾ.ಕೆ.ಚಿದಾನಂದಗೌಡ
    ಡಾ.ಗುರುರಾಜ ಕರ್ಜಗಿ

    ಸಂಕೀರ್ಣ :
    ಡಾ.ವಿಜಯ ಸಂಕೇಶ್ವರ್
    ಎಸ್.ಟಿ.ಶಾಂತ ಗಂಗಾಧರ್
    ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರು
    ಲೆಫ್ಟಿನೆಂಟ್ ಜನರಲ್ ಬಿ.ಎಸ್.ಬಿ.ಎಂ.ಪ್ರಸಾದ
    ಡಾ. ನಾ.ಸೋಮೇಶ್ವರ್
    ಶ್ರೀ.ಕೆ.ಪ್ರಕಾಶಶೆಟ್ಟಿ, ಅಧ್ಯಕ್ಷರು ಎಂ.ಆರ್.ಜಿ.ಗ್ರೂಪ್

    ಸಂಘ ಸಂಸ್ಥೆ
    ಪ್ರಭಾತ್ ಆರ್ಟ ಇಂಟರ್ ನ್ಯಾಷನಲ್
    ಶ್ರೀ ಪಂಥಂಜಲಿ ಯೋಗ ಶಿಕ್ಷಣ ಸಮಿತಿ, (ರಿ) ಕರ್ನಾಟಕ, ಹನುಮಂತಪುರ

    ವೈದ್ಯಕೀಯ :
    ಡಾ. ಹನುಮಂತರಾಯ ಪಂಡಿತ್
    ಡಾ. ಆಂಜನಪ್ಪ
    ಡಾ. ನಾಗರತ್ನ
    ಡಾ. ಜಿ.ಟಿ. ಸುಭಾಷ್
    ಡಾ. ಕೃಷ್ಣ ಪ್ರಸಾದ

    ನ್ಯಾಯಾಂಗ :
    ಕುಮಾರ್. ಎನ್

    ಹೊರನಾಡು :
    ಜಯವಂತ ಮನ್ನೊಳಿ
    ಶ್ರೀ ಗಂಗಾಧರ್ ಬೇವಿನಕೊಪ್ಪ
    ಬಿ.ಜಿ. ಮೋಹನ್ ದಾಸ್

    ಗುಡಿ ಕೈಗಾರಿಕೆ :
    ನವರತ್ನ ಇಂದು ಕುಮಾರ

    ವಿಮರ್ಶೆ :
    ಕೆ.ವಿ. ಸುಬ್ರಹ್ಮಣ್ಯಂ

  • ಪ್ರವಾಸಿಗರ ಸ್ವರ್ಗ ಕಾಫಿನಾಡಿನ 9 ಗುಡ್ಡಗಳ ನಡುವಿನ ‘ಎತ್ತಿನಭುಜ’

    ಪ್ರವಾಸಿಗರ ಸ್ವರ್ಗ ಕಾಫಿನಾಡಿನ 9 ಗುಡ್ಡಗಳ ನಡುವಿನ ‘ಎತ್ತಿನಭುಜ’

    ಚಿಕ್ಕಮಗಳೂರು: ಎಲ್ಲಾ ಸೌಂದರ್ಯವನ್ನೂ ನಾಚಿಸುವಂತಹ ಅಮೋಘ ರೂಪರಾಶಿಯನ್ನು ತನ್ನಲ್ಲಿಯೇ ಇಟ್ಟುಕೊಂಡ ರಾಜ್ಯದ ಎತ್ತರದ ಶಿಖರದಲ್ಲಿ ಒಂದಕ್ಕೊಂದು ಅಂಟಿಕೊಂಡಿರೋ 9 ಗುಡ್ಡಗಳು ಇವೆ. ಈ ಗುಡ್ಡಗಳ ಮಧ್ಯೆ ಇರುವ ರೋಮಾಂಚಕಾರಿ ಅಡ್ವೆಂಚರಸ್ ಟ್ರಕ್ಕಿಂಗ್ ಸ್ಪಾಟ್‍ಗೆ ಪ್ರವಾಸಿಗರು ಬರದೇ ಇರುವ ದಿನವಿಲ್ಲ. ಅಪರೂಪದ ಸೌಂದರ್ಯ ಬಣ್ಣಿಸೋಕೆ ಪದಪುಂಜವೇ ಸಾಲದಂತಹ ಪ್ರವಾಸಿ ತಾಣವೊಂದು ಕಾಫಿನಾಡಿನಲ್ಲಿದೆ.

    ಹೌದು. ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪಾಲಿನ ಅಕ್ಷಯಪಾತ್ರೆ ಇದ್ದಂತೆ. ಇಲ್ಲಿನ ನಿಸರ್ಗ ವೈಭವ ನೋಡುಗರ ಕಣ್ಮನ ತಣಿಸುತ್ತದೆ. ಭೂಲೋಕದ ಸ್ವರ್ಗವೆನಿಸಿರೋ ಈ ನೆಲದಲ್ಲಿ ಮೂಡಿಗೆರೆಯ ಶಿಶಿಲಗುಡ್ಡ ಕೂಡ ಒಂದು. ದೂರದಿಂದ ನೋಡಿದರೆ ಇದು ಎತ್ತಿನಭುಜದಂತೆ ಕಾಣುತ್ತೆ, ಹೀಗಾಗಿ ಈ ಗುಡ್ಡವನ್ನು ಎತ್ತಿನಭುಜ ಅಂತ ಕರೀತಾರೆ. ಬೈರಾಪುರದಿಂದ 4 ಕಿ.ಮೀ ದೂರದಲ್ಲಿರೋ ಈ ಬೆಟ್ಟವನ್ನು ನಡೆದೇ ಏರಬೇಕು. ಕಡಿದಾದ ರಸ್ತೆಯಲ್ಲಿ ಕಲ್ಲು-ಮಣ್ಣು ಎನ್ನದೇ ಗುಡ್ಡ ಹತ್ತಬೇಕು. ಸಿಕ್ಕಾಪಟ್ಟೆ ಕಷ್ಟಪಟ್ಟು ಬೆಟ್ಟ ಏರಿದರೆ ಅಪರೂಪದ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

    9 ಗುಡ್ಡಗಳ ಮಧ್ಯೆ ಇರೋ ಎತ್ತಿನಭುಜದ ಬೆಟ್ಟದ ಮಧ್ಯೆ ನಿಂತರೆ ಯಾವುದೋ ದ್ವೀಪದಲ್ಲಿ ನಿಂತ ಹಾಗೆ ಆಗುತ್ತೆ. ಈ ಗುಡ್ಡವನ್ನ ಹತ್ತಿ ಇಳಿಯುವುದೇ ಪ್ರವಾಸಿಗರಿಗೆ ಒಂದು ರೀತಿ ಖುಷಿಕೊಡುತ್ತದೆ. ಬೆಟ್ಟ ಹತ್ತುವಾಗ ಬೀಸೋ ತಣ್ಣನೆಯ ಗಾಳಿ ಎಂತಹ ಆಯಾಸವನ್ನೂ ಇಲ್ಲವಾಗಿಸುತ್ತದೆ. ಹಾಗೆಯೇ ಬೆಟ್ಟ ಹತ್ತಿ ನಿಂತರೆ ಆಕಾಶಕ್ಕೆ ಮೂರೇ ಗೇಣು ಅನ್ನೋ ಅನುಭವ ಇಲ್ಲಿ ಬರುವ ಪ್ರಕೃತಿ ಪ್ರೇಮಿಗಳಿಗೆ ಆಗುತ್ತದೆ.

    ಎತ್ತಿನಭುಜದ ಮೇಲೆ ಫೋಟೋ ಕ್ಲಿಕ್ಕಿಸಿ, ಸೆಲ್ಫಿ ತಗೊಂಡರೆ ಇಲ್ಲಿ ಭೇಟಿ ಕೊಟ್ಟು ಎಂಜಾಯ್ ಮಾಡಿದ ನೆನಪು ಸದಾ ಹಸಿರಾಗಿರುತ್ತದೆ. ಬಿಸಿಲಿದ್ದಾಗ ಬೆಟ್ಟದ ವಿಹಂಗಮ ನೋಟ, ಪ್ರಕೃತಿ ತುಂಬೆಲ್ಲಾ ಹರಡೋ ಮಂಜಿನ ಮಧ್ಯೆ ನಿಂತಾಗ ಪ್ರವಾಸಿಗರಿಗೆ ಆಕಾಶದಲ್ಲೇ ತೇಲಿದ ಅನುಭವ ಆಗುತ್ತದೆ. ಬಿಡುವಿದ್ದಾಗ ಈ ಅಪರೂಪದ ಪ್ರವಾಸಿಗರ ಹಾಟ್-ಫೇವರಿಟ್ ಆಗಿರೋ ಎತ್ತಿನಭುಜ ಬೆಟ್ಟಕ್ಕೆ ನೀವೂ ಭೇಟಿ ಕೊಟ್ಟು ಸೌಂದರ್ಯವನ್ನ ಕಣ್ತುಂಬಿಕೊಳ್ಳಿ.