Tag: Chikkamagaluru

  • ಪ್ರೇಯಸಿ ಕೈ ಕೊಟ್ಟಳೆಂದು ಮನನೊಂದು ಪ್ರೇಮಿ ಆತ್ಮಹತ್ಯೆ

    ಪ್ರೇಯಸಿ ಕೈ ಕೊಟ್ಟಳೆಂದು ಮನನೊಂದು ಪ್ರೇಮಿ ಆತ್ಮಹತ್ಯೆ

    ಚಿಕ್ಕಮಗಳೂರು: ಪ್ರೇಯಸಿ ಕೈ ಕೊಟ್ಟಳೆಂದು ಮನನೊಂದು ಪ್ರೇಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹಿರೇಬೈಲ್‍ನಲ್ಲಿ ನಡೆದಿದೆ.

    ಸತೀಶ್(29) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೂಲತಃ ಬಸರಗಟ್ಟೆ ನಿವಾಸಿಯಾಗಿರುವ ಸತೀಶ್ ಹಿರೇಬೈಲ್‍ನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದನು. ಈ ವೇಳೆ ಪಕ್ಕದ ಮನೆಯಲ್ಲಿದ್ದ ಪಲ್ಲವಿ (ಹೆಸರು ಬದಲಾಯಿಸಲಾಗಿದೆ) ಮೇಲೆ ಪ್ರೀತಿಯಾಗಿ ಇಬ್ಬರು ಪರಸ್ಪರ 3 ವರ್ಷಗಳಿಂದ ಪ್ರೀತಿಸುತ್ತಿದ್ದರು.

    ಸತೀಶ್, ಪಲ್ಲವಿಗೆ ನರ್ಸಿಂಗ್ ಕೂಡ ಓದಿಸುತ್ತಿದ್ದನು. ನರ್ಸಿಂಗ್ ಮುಗಿಸಿ ಪಲ್ಲವಿ ಬೇರೆ ಕಡೆ ಟ್ರೈನಿಂಗ್‍ಗೆ ಎಂದು ಹೋಗಿದ್ದಳು. ಈ ವೇಳೆ ಸತೀಶ್ ಆಕೆಗೆ ಕರೆ ಮಾಡಿದ್ದಾನೆ. ಆದರೆ ಪಲ್ಲವಿ ಕರೆ ಸ್ವೀಕರಿಸದ ಕಾರಣ ಸತೀಶ್ ಆಕೆ ನನ್ನನ್ನು ನಿರ್ಲಕ್ಷ್ಯಿಸುತ್ತಿದ್ದಾಳೆ. ಆಕೆ ಬೇರೆಯವರನ್ನು ಪ್ರೀತಿಸುತ್ತಿದ್ದಾಳೆ ಎಂದು ಸ್ವತಃ ಸತೀಶ್ ಈ ರೀತಿ ಯೋಚಿಸಿ ತನ್ನ ಸಂಬಂಧಿಕರ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೊಬೈಲ್‍ನಲ್ಲಿ ಸ್ನೇಹಿತರಿಗೆ ಡೆತ್ ನೋಟ್ ಸಂದೇಶ ರವಾನಿಸಿ ಸತೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್‍ನೋಟ್‍ನಲ್ಲಿ ಸತೀಶ್, “ನನ್ನ ಸಾವಿಗೆ ಪಲ್ಲವಿನೇ (ಹೆಸರು ಬದಲಾಯಿಸಲಾಗಿದೆ) ಕಾರಣ. ದಯವಿಟ್ಟು ಇವಳಿಗೆ ತಕ್ಕ ಶಿಕ್ಷೆ ಆಗಲೇಬೇಕು. ನಮ್ಮ ಮನೆಯವರಿಗೆ ಏನು ಹೇಳಿಲ್ಲ. ದಯವಿಟ್ಟು ಎಲ್ಲಾ ವಿಷಯವನ್ನು ಹೇಳಿ. ಹೀರೆಬೈಲ್‍ನಲ್ಲಿ ಸೂಸೈಡ್ ಮಾಡಿಕೊಳ್ಳುತ್ತೀನಿ. 3 ವರ್ಷ ಪಲ್ಲವಿಗೆ ನರ್ಸಿಂಗ್ ಮಾಡಿಸಿದೆ ಎಂದು ಬರೆದುಕೊಂಡಿದ್ದಾನೆ.

    ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಡಿದು ಪತ್ನಿಯನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆಗೈದ ಪತಿ

    ಕುಡಿದು ಪತ್ನಿಯನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆಗೈದ ಪತಿ

    ಚಿಕ್ಕಮಗಳೂರು: ಪತ್ನಿಯ ಶೀಲ ಶಂಕಿಸಿ ಕುಡುಗೋಲಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಹಿರೇಖಾನವಂಗಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಿರೇಖಾನವಂಗಲ ಗ್ರಾಮದ ನಿವಾಸಿ ಗಂಗಾಧರಪ್ಪ ಪತ್ನಿಯನ್ನೇ ಕೊಲೆ ಮಾಡಿದ ಪಾಪಿ ಪತಿರಾಯ. ಮಂಜಮ್ಮ(45) ಮೃತ ದುರ್ದೈವಿ.

    ಪತ್ನಿಯ ಶೀಲ ಶಂಕಿಸಿ ಗಂಗಾಧರಪ್ಪ ಯಾವಾಗಲೂ ಕುಡಿದು ಬಂದು ಜಗಳವಾಡುತ್ತಿದ್ದನು. ಆದರೆ ಸೋಮವಾರ ಮನೆಗೆ ಕುಡಿದು ಬಂದಿದ್ದ ಗಂಗಾಧರಪ್ಪ ಏಕಾಏಕಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದನು. ಕುಡುಗೋಲಿನಿಂದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು.

    ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದರು. ಮಂಗಳವಾರ ರಾತ್ರಿ ತಲೆಮರೆಸಿಕೊಂಡಿದ್ದ ಗಂಗಾಧರಪ್ಪನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣ ಸಂಬಂಧ ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.

  • ಶಾರದಾಂಬೆ ದರ್ಶನ ಪಡೆದ ಡಿಕೆಶಿ- ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

    ಶಾರದಾಂಬೆ ದರ್ಶನ ಪಡೆದ ಡಿಕೆಶಿ- ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

    ಚಿಕ್ಕಮಗಳೂರು: ಜಾರಿ ನಿರ್ದೇಶನಾಲಯ(ಇಡಿ) ಪ್ರಕರಣದಿಂದ ಹೊರಬಂದ ಬಳಿಕ ಟೆಂಪಲ್ ರನ್ ಮಾಡುತ್ತಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಇಂದು ಕುಟುಂಬದ ಜೊತೆ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ.

    ಡಿಕೆಶಿ ಅವರು ಪತ್ನಿ ಉಷಾ, ಪುತ್ರಿ ಐಶ್ವರ್ಯ ಜೊತೆ ಚಿಕ್ಕಮಗಳೂರಿನ ಶೃಂಗೇರಿಗೆ ಬಂದು ಶಾರದಾಂಬೆಯ ದರ್ಶನ ಪಡೆದಿದ್ದಾರೆ. ಶಾರದಾಂಬೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ತಾಯಿಗೆ ನಮಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿಯಾಗೇ ಮತ್ತೆ ಬರಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಅವರಿಗೆ ಶುಭಹಾರೈಸಿದ್ದಾರೆ. ಶಾರದಾಂಬೆಗೆ ಪೂಜೆ ಸಲ್ಲಿಸಿದ ಬಳಿಕ ಡಿಕೆಶಿ ಹಾಗೂ ಪತ್ನಿ, ಮಗಳು ಜಗದ್ಗುರುಗಳ ಆಶೀರ್ವಾದ ಪಡೆದಿದ್ದಾರೆ.

    ಡಿಕೆಶಿ ಶಾರದಾಂಬೆ ದೇವಾಲಯದ ಪ್ರದಕ್ಷಿಣೆ ಹಾಕುತ್ತಿದ್ದ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ‘ಸರ್ ನಂಗೊಂದು ಸೆಲ್ಫಿ, ನಂಗೊಂದು ಸೆಲ್ಫಿ’ ಅಂತ ಡಿಕೆಶಿ ಹಿಂದೆ ಅಭಿಮಾನಿಗಳು ಬಿದ್ದಿದ್ದರು. ಕೊನೆಗೆ ಎಲ್ಲರಿಗೂ ಸೆಲ್ಫಿ ತೆಗೆದುಕೊಳ್ಳಲು ಡಿಕೆಶಿ ಅವಕಾಶ ಮಾಡಿಕೊಟ್ಟರು. ಈ ವೇಳೆ ಡಿಕೆಶಿ ಅವರಿಗೆ ಸ್ಥಳೀಯ ಶಾಸಕ ರಾಜೇಗೌಡ ಸಾಥ್ ನೀಡಿದ್ದರು.

  • ತಿರುಪತಿಯಿಂದ ಅಯ್ಯಪ್ಪ ಭಕ್ತರ ಜೊತೆ ಹೆಜ್ಜೆ ಹಾಕಿದ ಶ್ವಾನ ಕರ್ನಾಟಕಕ್ಕೆ ಬಂತು – ವಿಡಿಯೋ ನೋಡಿ

    ತಿರುಪತಿಯಿಂದ ಅಯ್ಯಪ್ಪ ಭಕ್ತರ ಜೊತೆ ಹೆಜ್ಜೆ ಹಾಕಿದ ಶ್ವಾನ ಕರ್ನಾಟಕಕ್ಕೆ ಬಂತು – ವಿಡಿಯೋ ನೋಡಿ

    ಚಿಕ್ಕಮಗಳೂರು: ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿರುವ ಭಕ್ತರ ಜೊತೆ ಶ್ವಾನವೊಂದು 480 ಕಿ.ಮೀ ದೂರದಿಂದ ನಡೆದುಕೊಂಡು ಬರುತ್ತಿದೆ.

    ಆಕ್ಟೋಬರ್ 31 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ತೋಡಾರು ಗ್ರಾಮದ ನಿವಾಸಿ ರಾಜೇಶ್ ಗುರುಸ್ವಾಮಿ ಅವರ ನೇತೃತ್ವದಲ್ಲಿ ಆರು ಜನ ಅಯ್ಯಪ್ಪನ ಭಕ್ತರು ಮಾಲೆ ಧರಿಸಿ ತಿರುಪತಿಯ ತಿರುಮಲದಿಂದ ಬರಿಗಾಲಿನಲ್ಲಿ ಪಾದಯಾತ್ರೆ ಶುರು ಮಾಡಿದ್ದಾರೆ. ಈ ವೇಳೆ ಇವರ ಜೊತೆ ಸೇರಿಕೊಂಡಿರುವ ನಾಯಿಯೊಂದು 480 ಕಿ.ಮೀ ನಡೆದು ಭಾನುವಾರ ಚಿಕ್ಕಮಗಳೂರಿನ ಕೊಟ್ಟಿಗೆಹಾರ ತಲುಪಿದೆ.

    ನಾಯಿಯ ಅಯ್ಯಪ್ಪ ಮೇಲಿನ ಭಕ್ತಿ ಕಂಡು ಬೆರಗಾಗಿರುವ ಅಯ್ಯಪ್ಪನ ಭಕ್ತರು ಅವರ ಜೊತೆ ಈ ನಾಯಿಯನ್ನು ಅಯ್ಯಪ್ಪನ ಸನ್ನಿಧಿಗೆ ಕರೆದುಕೊಂಡು ಹೋಗಲು ತೀರ್ಮಾನ ಮಾಡಿದ್ದಾರೆ. ಅದರಂತೆ ಅವರ ಜೊತೆ 480 ಕಿ.ಮೀ ಬಂದಿರುವ ನಾಯಿಗೆ ರಸ್ತೆ ಮಧ್ಯೆ ಕಾಲಿಗೆ ಕೆಲ ಗಾಯಗಳಾಗಿವೆ. ಆಗ ಹತ್ತಿರದ ಪಶುವೈದ್ಯರ ಬಳಿ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಅಯ್ಯಪ್ಪನ ಭಕ್ತರು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅಯ್ಯಪ್ಪನ ಭಕ್ತರು, ನಾವು ಪ್ರತಿ ವರ್ಷ ಪಾದಯಾತ್ರೆ ಮಾಡುತ್ತೇವೆ. ಆದರೆ ಈ ವರ್ಷ ಇದು ಹೊಸ ಅನುಭವದ ರೀತಿ ಇದೆ. ಮೊದಲು ನಾವು ಈ ಶ್ವಾನವನ್ನು ಗಮನಿಸಿರಲಿಲ್ಲ. ಬಹಳ ಮುಂದೆ ನಡೆದುಕೊಂಡು ಬಂದ ನಂತರ ಗಮನಿಸಿದ್ದೇವೆ. ನಾಯಿಗೆ ಅಯ್ಯಪ್ಪನ ಮೇಲಿರುವ ಭಕ್ತಿಯನ್ನು ನೋಡಿ ಸಂತೋಷವಾಗಿದೆ ಎಂದು ಹೇಳಿದ್ದಾರೆ.

  • ಕೋಣದ ಜೊತೆ ಕಾದಾಟ – ಒಂದು ಹೆಜ್ಜೆ ಇಡಲು ಬಿಡದೇ ರಸ್ತೆಯಿಂದ ಓಡಿಸಿದ ನಾಯಿ

    ಕೋಣದ ಜೊತೆ ಕಾದಾಟ – ಒಂದು ಹೆಜ್ಜೆ ಇಡಲು ಬಿಡದೇ ರಸ್ತೆಯಿಂದ ಓಡಿಸಿದ ನಾಯಿ

    ಚಿಕ್ಕಮಗಳೂರು: ಜೀಪಿಗೆ ಅಡ್ಡ ಬಂದ ಕೋಣದ ಜೊತೆ ನಾಯಿ ಕಾದಾಟ ನಡೆಸಿದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಕಾಫಿ ತೋಟದಲ್ಲಿ ನಡೆದಿದೆ.

    ಮಾಲೀಕ ತನ್ನ ನಾಯಿಯ ಜೊತೆ ಕಾಫಿ ತೋಟಕ್ಕೆ ಹೋಗುತ್ತಿದ್ದರು. ಈ ವೇಳೆ ಜೀಪಿಗೆ ಕಾಡು ಕೋಣ ಅಡ್ಡ ಬಂದು ನಿಂತುಕೊಂಡಿದೆ. ಇದನ್ನು ನೋಡಿದ ನಾಯಿ ಆ ಕೋಣದ ಜೊತೆ ಕಾದಾಟ ನಡೆಸಿದೆ. ನಾಯಿ ಹಾಗೂ ಕೋಣದ ಕಾದಾಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಕಾದಾಟದ ವೇಳೆ ನಾಯಿ ಕೋಣವನ್ನು ಒಂದು ಹೆಜ್ಜೆ ಮುಂದಿಡಲು ಬಿಡುತ್ತಿರಲಿಲ್ಲ. ಬಳಿಕ ನಾಯಿ ಹಾಗೂ ಕೋಣದ ಕಾದಾಟ ಹೆಚ್ಚಾಗುತ್ತಿರುವುದನ್ನು ನೋಡಿದ ಮಾಲೀಕ ನಾಯಿಯನ್ನು ವಾಪಸ್ ಕರೆದಿದ್ದಾರೆ. ಮಾಲೀಕ ಕರೆದರೂ ನಾಯಿ ಹಿಂದಿರುಗಲಿಲ್ಲ.

    ನಾಯಿಯ ಕಾದಾಟ ನೋಡಿ ಕಾಡುಕೋಣ ಕೆಲ ಹೊತ್ತು ಮಂಕಾಗಿ ನಿಂತಿತ್ತು. ಬಳಿಕ ನಾಯಿ ಕಾಡುಕೋಣವನ್ನು ರಸ್ತೆಯಿಂದ ಓಡಿಸಿದೆ. ನಾಯಿ ಹಾಗೂ ಕಾಡುಕೋಣದ ಕಾದಾಟವನ್ನು ಮಾಲೀಕ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿದ್ದಾರೆ.

  • ಜಾನುವಾರುಗಳ ದಾಹ ನೀಗಿಸಿದ ಜಲದಾತ-ಸ್ವಂತ ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿದ ಅನ್ನದಾತ

    ಜಾನುವಾರುಗಳ ದಾಹ ನೀಗಿಸಿದ ಜಲದಾತ-ಸ್ವಂತ ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿದ ಅನ್ನದಾತ

    ಚಿಕ್ಕಮಗಳೂರು: ಸ್ವಂತ ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿ ಜಾನುವಾರಗಳ ದಾಹ ನೀಗಿಸಿರುವ ಅನ್ನದಾತ ಕಾಫಿನಾಡಿನ ವೀರಣ್ಣ ಇವತ್ತಿನ ನಮ್ಮ ಪಬ್ಲಿಕ್ ಹೀರೋ.

    ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ವಿಟ್ಲಾಪುರದ ನಿವಾಸಿಯಾಗಿರುವ 63 ವರ್ಷದ ವೀರಣ್ಣ ಗೋಕಟ್ಟೆ ನಿರ್ಮಿಸಿದ್ದಾರೆ. 9ನೇ ತರಗತಿವರೆಗೆ ಮಾತ್ರ ಓದಿರುವ ವೀರಣ್ಣ, ಕೃಷಿಯೊಂದಿಗೆ ಮತ್ತು ಮೂಕ ಪ್ರಾಣಿಗಳ ಸೇವೆ ಮಾಡುತ್ತಿದ್ದಾರೆ. ಅರೆಮಲೆನಾಡಾಗಿರುವ ಚಿಕ್ಕಮಗಳೂರಲ್ಲಿ ಬೇಸಿಗೆ ವೇಳೆ ಜಾನುವಾರುಗಳಿಗೆ ನೀರು ಸಿಗೋದು ಕಷ್ಟ ಆಗಿತ್ತು. ಕುಡಿಯಲು ನೀರು ಸಿಗದೇ ದನಕರು ಪರದಾಡೋದನ್ನು ನೋಡಲಾಗದ ವೀರಣ್ಣ, ಮೂರು ವರ್ಷದ ಹಿಂದೆ ಅರಣ್ಯ ಇಲಾಖೆ ಅನುಮತಿ ಪಡೆದು ಒಂದು ಎಕರೆ ಜಾಗದಲ್ಲಿ ಐದು ಲಕ್ಷ ರೂ. ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿದ್ದಾರೆ.

    ಸಮೀಪದ ಕಾಡಲ್ಲಿ ಅನಾವಶ್ಯಕವಾಗಿ ಹರಿದು ಹೋಗುತ್ತಿದ್ದ ನೀರನ್ನು ಗೋಕಟ್ಟೆಗೆ ತಿರುಗಿಸಿದ್ದಾರೆ. ಈಗ ಗೋಕಟ್ಟೆ ನೀರಿನಿಂದ ತುಂಬಿದ್ದು, ಜಾನುವಾರುಗಳಲ್ಲದೇ ಕಾಡುಪ್ರಾಣಿಗಳ ದಾಹವೂ ನೀಗುತ್ತಿದೆ. ಗೋಕಟ್ಟೆ ನಿರ್ಮಿಸಲು ಇವರು ಬೇರೆಯವರಿಂದ ಚಿಕ್ಕಾಸು ಕೇಳಿರಲಿಲ್ಲ. ಆದರೆ ಸ್ವಾಮೀಜಿಯೊಬ್ಬರು ಸ್ವಂತ ಹಣದಲ್ಲಿ ಕೆರೆ ನಿರ್ಮಿಸಿದ್ರೆ ಸಾರ್ವಜನಿಕರದ್ದು ಅನ್ನಿಸಿಕೊಳ್ಳಲ್ಲ. ಹಾಗಾಗಿ ಜನರು ನೀಡುವ ಹಣ ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಸ್ವಾಮೀಜಿಗಳ ಸಲಹೆ ಮೇರೆಗೆ ಜನ ನೀಡಿದಷ್ಟು ಹಣ ಪಡೆದುಕೊಂಡಿದ್ದರು.

    ವೀರಣ್ಣ ಅವರು ಅಪ್ಪಟ ಸಾವಯವ ಕೃಷಿಕ. 20 ವರ್ಷಗಳಿಂದ ಸುತ್ತಮುತ್ತಲ ಹಳ್ಳಿಗರಿಗೆ ಇವ್ರೇ ಕೃಷಿ ಸಂಪನ್ಮೂಲ ವ್ಯಕ್ತಿಯಾಗಿ ಸಲಹೆ ನೀಡುತ್ತಿದ್ದಾರೆ. ಈ ಕಾಲದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡೋರು ಕಡಿಮೆ. ದನಕರುಗಳಿಗಾಗಿ ಗೋಕಟ್ಟೆ ನಿರ್ಮಿಸಿದ ವೀರಣ್ಣ ನಿಜಕ್ಕೂ ಇತರರಿಗೆ ಮಾದರಿಯಾಗಿದ್ದಾರೆ.

  • ಜ್ಯೂಸ್ ಎಂದು ಕಳೆನಾಶಕ ಕುಡಿದು 3ರ ಬಾಲಕ ಸಾವು

    ಜ್ಯೂಸ್ ಎಂದು ಕಳೆನಾಶಕ ಕುಡಿದು 3ರ ಬಾಲಕ ಸಾವು

    ಚಿಕ್ಕಮಗಳೂರು: ಜ್ಯೂಸ್ ಎಂದು ಭಾವಿಸಿ ಕಳೆನಾಶಕ ಕುಡಿದು 3 ವರ್ಷದ ಬಾಲಕ ಕಳೆದ 18 ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದನು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.

    ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯಲ್ಲಿ ಈ ಘಟನೆ ನಡೆದಿದೆ. ದುರ್ಗದಹಳ್ಳಿಯ ನಿವಾಸಿ ಪ್ರವೀಣ್ ಹಾಗೂ ಪೂಜಿತ ದಂಪತಿಯ ಏಕೈಕ ಪುತ್ರ ಅಗಸ್ತ್ಯ(3) ಸಾವನ್ನಪ್ಪಿದ್ದ ನತದೃಷ್ಟ ಬಾಲಕ.

    ಅಕ್ಟೋಬರ್ 24ರಂದು ಅಗಸ್ತ್ಯ ಜೂಸ್ ಎಂದು ತಿಳಿದು ಮನೆಯಲಿದ್ದ ಕಳೆನಾಶಕವನ್ನು ಕುಡಿದಿದ್ದನು. ಈ ಬಗ್ಗೆ ತಿಳಿದ ತಕ್ಷಣ ಪೋಷಕರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಸ್ಥಳೀಯ ಆಸ್ಪತ್ರೆ ವೈದ್ಯರ ಸೂಚನೆ ಮೇರೆಗೆ ಅಗಸ್ತ್ಯನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.

    ಕಳೆದ 18 ದಿನಗಳಿಂದ ಅಗಸ್ತ್ಯ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಬಾಲಕ ಸಾವನ್ನಪ್ಪಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

  • ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿ ಮಂತ್ರಮುಗ್ಧರಾದ ಪ್ರವಾಸಿಗರು

    ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿ ಮಂತ್ರಮುಗ್ಧರಾದ ಪ್ರವಾಸಿಗರು

    ಚಿಕ್ಕಮಗಳೂರು: ಚಳಿಗಾಲ ಆರಂಭವಾಗಿದ್ದು, ಕಾಫಿನಾಡಿನ ಫಾಲ್ಸ್‌ಗಳಿಗೆ ಜೀವಕಳೆ ಬಂದು ಗಿರಿಯ ಪ್ರಕೃತಿ ವಿಸ್ಮಯವನ್ನು ವರ್ಣಿಸುವುದಕ್ಕೆ ಪದಗಳೇ ಸಾಲದು. ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಚಳಿಯ ಗಾಳಿಯೊಂದಿಗಿನ ಮಂಜಿನಾಟ ನೋಡುಗರಿಗೆ ರಸದೌತಣ. ಇಲ್ಲಿನ ಮನಮೋಹಕ ತಾಣಗಳಿಗೆ ಫಿದಾ ಆಗಿರುವ ಪ್ರವಾಸಿಗರಿಗೆ ಕಾಫಿನಾಡೆಂದರೆ ಪುಣ್ಯಭೂಮಿ. ಅದರಲ್ಲೂ ಈ ಬಾರಿ ನವೆಂಬರ್ ನ ಚಳಿಯಲ್ಲೂ ಕಾಫಿನಾಡಿನ ಫಾಲ್ಸ್‌ಗಳು ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

    ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ ಜಲಪಾತಗಳು ನವೆಂಬರ್-ಡಿಸೆಂಬರ್ ವೇಳೆಗೆ ಶಾಂತವಾಗಿರುತ್ತವೆ. ಆದರೆ ಈ ಬಾರಿ ಗಿರಿಯಲ್ಲಿನ ನಿರಂತರ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿವೆ. ಚಿಕ್ಕಮಗಳೂರಿನ ಹೊನ್ನಮ್ಮನ ಹಳ್ಳ, ಕಲ್ಲತ್ತಿಗರಿ, ಝರಿ ಫಾಲ್ಸ್‌ಗಳು ನವೆಂಬರ್ ನ ಚಳಿಯಲ್ಲೂ ನೋಡುಗರಿಗೆ ಸಿಕ್ಕಾಪಟ್ಟೆ ಕಿಕ್ ಕೊಡುತ್ತಿವೆ.

    ಕಾಫಿನಾಡಿನ ಗಿರಿಭಾಗದ ಯಾವುದೇ ಸ್ಥಳಕ್ಕೆ ಹೋಗಬೇಕೆಂದರೂ ಈ ಝರಿಯೇ ಜಂಕ್ಷನ್, ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿಗೆ ಭೇಟಿ ನೀಡುವ ಪ್ರವಾಸಿಗರೆಲ್ಲ ಈ ಮಿನಿ ಜಲಪಾತದಲ್ಲಿ ಮಿಂದೇಳದೆ ಮುಂದೆ ಹೋಗಲ್ಲ. ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರತಿಯೊಬ್ಬರೂ ಇಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ನೀರಲ್ಲಿ ಆಡಿ, ಫೋಟೋ ಶೂಟ್ ಮಾಡಿಸಿಕೊಂಡೇ ಮುಂದೆ ಹೋಗುತ್ತಾರೆ.

    ಚಿಕ್ಕಮಗಳೂರಿನ ಕೈ ಮರದಿಂದ ಹೊರಟರೆ, ಹಾವು ಬಳುಕಿನ ಮೈಕಟ್ಟಿನ ರಸ್ತೆಯುದ್ದಕ್ಕೂ ಎಂಜಾಯ್ ಮಾಡುತ್ತಲೇ ಸಾಗುವ ಪ್ರವಾಸಿಗರು ಗಿರಿಭಾಗಕ್ಕೆ ಎಂಟ್ರಿ ಕೊಟ್ಟ ಕೂಡಲೇ ಹೆಜ್ಜೆ-ಹೆಜ್ಜೆಗೂ ಮಲೆನಾಡನ್ನ ಸುಖಿಸುತ್ತಾರೆ. ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ಕಂಡು ಮೂಕವಿಸ್ಮಿತರಾಗುತ್ತಾರೆ. ನೋಡ-ನೋಡುತ್ತಿದ್ದಂತೆಯೇ ಮೋಡ ದಾರಿಯೇ ಕಾಣದಂತೆ ಕವಿದರೆ, ಕ್ಷಣಾರ್ಧದಲ್ಲಿ ತಣ್ಣಗೆ ಬೀಸುವ ಗಾಳಿ ಪ್ರವಾಸಿಗರ ಅನುಕೂಲಕ್ಕೆಂದೇ ಇದೆ ಏನೋ ಎಂದು ಅನ್ನಿಸುತ್ತೆ.

    ಇಲ್ಲಿನ ಗಾಳಿ ಹಾಗೂ ಮೋಡದ ನಡುವಿನ ಚೆಲ್ಲಾಟ ನೋಡುಗರಿಗೆ ಇನ್ನಷ್ಟು ಖುಷಿ ನೀಡುತ್ತಿದೆ. ಮುಗಿಲೆತ್ತರದ ಬೆಟ್ಟಗುಡ್ಡಗಳ ಮೇಲೆ ನಿಂತು ಪ್ರಕೃತಿ ಸೌಂದರ್ಯ ಸವಿಯುವುದೇ ಪ್ರವಾಸಿಗರಿಗೆ ಬಲು ಪ್ರೀತಿ. ಇಂತಹ ಸಂಪದ್ಭರಿತ ನಾಡಿಗೆ ವರ್ಷಕ್ಕೆ ಮೂರ್ನಾಲ್ಕು ಬಾರಿಯಾದರೂ ಬರಬೇಕು ಎನ್ನುವುದು ಅದೆಷ್ಟೋ ಪ್ರವಾಸಿಗರ ಆಸೆಯಾಗಿದೆ. ಕಾಫಿನಾಡಲ್ಲಿ ಇಂತಹ ಅದೆಷ್ಟೋ ನೈಸರ್ಗಿಕ ತಾಣಗಳಿವೆ. ಅವುಗಳಲ್ಲಿ ಬೆಳಕಿಗೆ ಬಂದಿರುವುದು ಒಂದೆರೆಡಾದರೆ, ಬಾರದಿರೋದು ಹತ್ತಾರು ಇವೆ.

  • ಡಿಸಿಎಂಗಾಗಿ 4 ಬಾರಿ ಝೀರೋ ಟ್ರಾಫಿಕ್ – ಬಿಸಿಲಿನಲ್ಲಿ ನಿಂತು ಹೈರಾಣದ ಜನತೆ

    ಡಿಸಿಎಂಗಾಗಿ 4 ಬಾರಿ ಝೀರೋ ಟ್ರಾಫಿಕ್ – ಬಿಸಿಲಿನಲ್ಲಿ ನಿಂತು ಹೈರಾಣದ ಜನತೆ

    ಚಿಕ್ಕಮಗಳೂರು: ದೋಸ್ತಿ ಸರ್ಕಾರದಲ್ಲಿ ಡಿಸಿಎಂ ಪರಮೇಶ್ವರ್ ಝೀರೋ ಟ್ರಾಫಿಕ್ ಸೌಲಭ್ಯ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು. ಈಗ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಝೀರೋ ಟ್ರಾಫಿಕ್ ಪಡೆದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಡಿಸಿಎಂ ಅಶ್ವಥ್ ನಾರಾಯಣ್‍ಗಾಗಿ ಪೊಲೀಸರು ಒಂದಲ್ಲ ಎರಡಲ್ಲ ನಾಲ್ಕು ಬಾರೀ ಝಿರೋ ಟ್ರಾಫಿಕ್ ಸೌಲಭ್ಯ ನೀಡಿದ್ದು, ಬಿಸಿಲಿನಲ್ಲಿ ನಿಂತು ಚಿಕ್ಕಮಗಳೂರಿನ ಜನ ಹೈರಾಣಾಗಿ ಹೋಗಿದ್ದಾರೆ.

    ಇಂದು ಚಿಕ್ಕಮಗಳೂರು ಪ್ರವಾಸದಲ್ಲಿರೋ ಡಿಸಿಎಂ ಅಶ್ವಥ್ ನಾರಾಯಣ್ 4 ಬಾರಿ ಝಿರೋ ಟ್ರಾಫಿಕ್ ಬಳಸಿದ್ದಾರೆ. ಚಿಕ್ಕಮಗಳೂರು ನಗರದ ತೊಗರಿಹಂಕಲ್, ಹನುಮಂತಪ್ಪ ವೃತ್ತ, ಮಲಂದೂರು ಸರ್ಕಲ್ ನಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಬಿಸಿಲಲ್ಲೇ ನಿಂತು ವಾಹನ ಸವಾರರು ರೇಗಾಡಿದ್ದಾರೆ.

    ಈ ಹಿಂದೆ ಟ್ರಾಫಿಕ್ ವಿಚಾರದ ಬಗ್ಗೆ ಮಾತನಾಡಿದ್ದ ಡಿಸಿಎಂ ಅಶ್ವಥ್ ನಾರಾಯಣ್, ನಾನು ಜನರ ಜೊತೆ ಬೆಳೆದು ಬಂದವನು. ಜನರಿಗೆ ತೊಂದರೆಯಾಗುವ ರೀತಿಯಲ್ಲಿ ನಡೆದುಕೊಳ್ಳಲ್ಲ. ನನಗೆ ಝೀರೋ ಟ್ರಾಫಿಕ್ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ನಾನು ಜನರಿಗೆ ಅನಾನುಕೂಲತೆ ಆಗಾದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ. ನಾನು ಯಾವುದೇ ಕಾರಣಕ್ಕೂ ಝಿರೋ ಟ್ರಾಫಿಕ್ ಉಪಯೋಗಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಒಂದೇ ದಿನದಲ್ಲಿ ನಾಲ್ಕು ಬಾರಿ ಝಿರೋ ಟ್ರಾಫಿಕ್ ಬಳಸಿದ್ದು ಚರ್ಚೆಗೆ ಕಾರಣವಾಗಿದೆ.

    ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರು ಝಿರೋ ಟ್ರಾಫಿಕ್ ತೆಗೆದುಕೊಳ್ಳಬಾರದು. ಝಿರೋ ಟ್ರಾಫಿಕ್‍ನಿಂದ ಸಂಚಾರ ಅಸ್ತವ್ಯಸ್ತವಾಗಲಿದೆ. ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ಇದರಿಂದಾಗಿ ಜನರಿಗೆ ಕೆಟ್ಟ ಸಂದೇಶ ಹೋಗಿ ಪಕ್ಷಕ್ಕೆ ಮುಜುಗರ ಆಗಲಿದೆ ಎಂದು ಬಿಜೆಪಿ ಹೈಕಮಾಂಡ್ ಈ ಹಿಂದೆ ಎಚ್ಚರಿಕೆ ನೀಡಿತ್ತು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.

  • ಕಾಫಿನಾಡಿನಲ್ಲಿ ತೊಡೆ ತಟ್ಟಿ ನಿಂತು ಕುಸ್ತಿಯಾಡಿದ ಬಾಲಕ-ಬಾಲಕಿಯರು

    ಕಾಫಿನಾಡಿನಲ್ಲಿ ತೊಡೆ ತಟ್ಟಿ ನಿಂತು ಕುಸ್ತಿಯಾಡಿದ ಬಾಲಕ-ಬಾಲಕಿಯರು

    – ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪೋರಿಯರು

    ಚಿಕ್ಕಮಗಳೂರು: ಕುಸ್ತಿಯನ್ನ ನೋಡೋದೇ ಒಂದು ಕುತೂಹಲ. ಕುಸ್ತಿಯಲ್ಲಿ ಬಾಲಕ-ಬಾಲಕಿಯರು ತೊಡೆ ತಟ್ಟಿ ನಿಂತರೆ ನೋಡುಗರ ಮೈ ಝುಮ್ ಅನ್ನಿಸದೆ ಇರಲಾರದು. ಮೂರು ದಿನಗಳ ಕಾಲ ಕಾಫಿನಾಡಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ನೋಡಗರ ಮೈ ರೋಮಾಂಚನಗೊಳಿಸಿದೆ. ಪ್ರಶಸ್ತಿಗಾಗಿ ಪೋರ-ಪೋರಿಯರ ಬಲಾಬಲ ನೋಡಿದವರು ವಾಹ್ ಅಂತ ಉದ್ಗಾರ ತೆಗೆಯುತ್ತಿದ್ದರು.

    ಹೌದು. ಇಂಥದ್ದೊಂದು ರೋಮಾಂಚನಕಾರಿ ಸನ್ನಿವೇಶಕ್ಕೆ ಕಾಫಿನಾಡು ಚಿಕ್ಕಮಗಳೂರಿನ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಸಾಕ್ಷಿಯಾಯಿತು. ನಗರದ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನ ಏರ್ಪಡಿಸಿತ್ತು. ರಾಜ್ಯದ 24 ಜಿಲ್ಲೆಗಳಿಂದ ಸುಮಾರು 849 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

    ಸುಮಾರು 14 ರಿಂದ 17ನೇ ವಯಸ್ಸಿನ ಬಾಲಕ-ಬಾಲಕಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡು ಹತ್ತಾರು ಬಾಲಕ-ಬಾಲಕಿಯರು ಪ್ರಶಸ್ತಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಕುಸ್ತಿ ಪಂದ್ಯಾಟ ಶನಿವಾರ ಸಂಜೆ ವೇಳೆ ಸಂಪನ್ನಗೊಂಡಿತು. ಇದಕ್ಕೂ ಮುಂಚೆ ಕುಸ್ತಿಪಟುಗಳ ಹಣಾಹಣಿಯಂತು ರೋಮಾಂಚನವಾಗಿತ್ತು. ಬಾಲಕಿಯರು ಕೂಡ ನಾವ್ ಏನೂ ಕಮ್ಮಿ ಇಲ್ಲ ಅಂತ ತೊಡೆ ತಟ್ಟಿ ಶಕ್ತಿ ಪ್ರದರ್ಶನ ತೋರಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಬೀಗಿದರು.

    45 ರಿಂದ 110 ಕೆ.ಜಿವರೆಗಿನ ನಾನಾ ವಿಭಾಗದಲ್ಲಿ ಪೈಲ್ವಾನರು ಅಖಾಡದಲ್ಲಿ ತಮ್ಮ ತಾಕತ್ತನ್ನ ಪ್ರದರ್ಶನ ಮಾಡಿದರು. ಮಲೆನಾಡಲ್ಲಿ ನಡೆದ ಕುಸ್ತಿಯಲ್ಲಿ ರಾಜ್ಯದ 24 ಜಿಲ್ಲೆಗಳಿಂದ ಕುಸ್ತಿಪಟುಗಳು ಭಾಗಿವಹಿಸಿದ್ದು ಕ್ರೀಡಾಕೂಟದ ಯಶಸ್ಸಿಗೆ ಕಾರಣವಾಯ್ತು. ಪಂದ್ಯದಲ್ಲಿ ಭಾಗಿಯಾದ ಕ್ರೀಡಾಪಟುಗಳು ಈ ಪಂದ್ಯಾವಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಕುಸ್ತಿಯನ್ನು ನೋಡಿದ ಪ್ರೇಕ್ಷಕರು ಕೂಡ ಸಂತಸ ವ್ಯಕ್ತಪಡಿಸಿದರು. ಕುಸ್ತಿ ಪಂದ್ಯಾವಳಿ ನೋಡಿದ ಸ್ಥಳೀಯರು ಸಖತ್ ಎಂಜಾಯ್ ಮಾಡಿದರು. ಕಾಫಿನಾಡಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಿ ಸೈ ಎನ್ನಿಸಿಕೊಂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಚಿಕ್ಕಮಗಳೂರಿಗೆ ಪ್ರಶಸ್ತಿ ಬರಲಿಲ್ಲವಾದರೂ ಆಯೋಜನೆ ಮಾಡಿ ಅಚ್ಚುಕಟ್ಟಾಗಿ ನಡೆಸಿದ್ದಕ್ಕೆ ಖುಷಿ ವ್ಯಕ್ತಪಡಿಸಿದರು.

    ಇದೇ ಮೊದಲ ಬಾರಿಗೆ ಕಾಫಿನಾಡಲ್ಲಿ ಕುಸ್ತಿ ಪ್ರದರ್ಶನ ನಡೆದಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಚಿಕ್ಕಮಗಳೂರಿನ ಮಕ್ಕಳು ಕೂಡ ಭಾಗವಹಿಸಿ ಕುಸ್ತಿಯ ಮಸ್ತಿಯನ್ನ ಖುಷಿ ಖುಷಿಯಾಗಿಯೇ ಎಂಜಾಯ್ ಮಾಡಿದರು. ಬಹುತೇಕ ಪ್ರಶಸ್ತಿಗಳು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪಾಲಾಗಿದ್ದು, ಆ ಭಾಗದಲ್ಲಿ ಕುಸ್ತಿಗೆ ಹೆಚ್ಚು ಒತ್ತು ಕೊಡ್ತಿರೋದು ಮತ್ತೊಮ್ಮೆ ಸಾಬೀತಾಯಿತು.