Tag: Chikkamagaluru

  • ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದುಕೊಂಡ ಪಿಯುಸಿ ವಿದ್ಯಾರ್ಥಿಗಳು

    ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದುಕೊಂಡ ಪಿಯುಸಿ ವಿದ್ಯಾರ್ಥಿಗಳು

    ಚಿಕ್ಕಮಗಳೂರು: ಕಾಲೇಜು ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಒಂದು ಗುಂಪು ಮತ್ತೊಂದು ಗುಂಪಿನ ಮೇಲೆ ಚಾಕು ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮೂಡಿಗೆರೆ ಪಿಯು ಕಾಲೇಜಿನಲ್ಲಿ ಓದುತ್ತಿರುವ ವಿನಯ್, ಗಾಯನ್, ಸಾಗರ್ ಹಾಗೂ ಚೇತನ್ ಹೊಡೆದಾಡಿಕೊಂಡು ವಿದ್ಯಾರ್ಥಿಗಳು. ಕಾಲೇಜು ಮುಗಿಸಿಕೊಂಡು ಮನೆಗೆ ಹೋಗುವಾಗ ನಗರದ ಸಂತೇ ಮೈದಾನದಲ್ಲಿ ನಾಲ್ವರ ಮಧ್ಯೆ ಜಗಳ ನಡೆದಿದೆ.

    ಇದೇ ವೇಳೆ, ಯುವಕರಾದ ಸಾಗರ್ ಹಾಗೂ ಚೇತನ್, ವಿನಯ್ ಹಾಗೂ ಗಾಯನ್ ಎಂಬವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೂಡಿಗೆರೆ ಪೊಲೀಸರು ಗಾಯಾಳುಗಳನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಅಲ್ಲದೆ ಚಾಕುವಿನಿಂದ ಹಲ್ಲೆ ಮಾಡಿದವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದಾಗ ಅವರ ಬೈಕಿನಲ್ಲಿದ್ದ ಸೈಕಲ್ ಚೈನ್ ಹಾಗೂ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶಾಂತಿಯುತವಾಗಿ ಸಂಪನ್ನಗೊಳ್ತು ಕಾಫಿನಾಡ ದತ್ತ ಜಯಂತಿ

    ಶಾಂತಿಯುತವಾಗಿ ಸಂಪನ್ನಗೊಳ್ತು ಕಾಫಿನಾಡ ದತ್ತ ಜಯಂತಿ

    ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರಿನ ವಿವಾದಿತ ಹಾಗೂ ಧಾರ್ಮಿಕ ಕೇಂದ್ರ ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ನಡೆಯುತ್ತಿದ್ದ ದತ್ತ ಜಯಂತಿ ಕಾರ್ಯಕ್ರಮ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಡಿಸೆಂಬರ್ 1ರಂದು ಮಾಲೆ ಧರಿಸಿ, 12 ದಿನಗಳಿಂದ ವೃತಾಚರಣೆಯಲ್ಲಿದ್ದ ದತ್ತ ಭಕ್ತರು ಇಂದು ಇರುಮುಡಿಯನ್ನ ದತ್ತಾತ್ರೇಯನಿಗೆ ಒಪ್ಪಿಸಿ ಪುನೀತರಾದರು.

    ಮಾಗಿಯ ಭಾರೀ ಚಳಿಯಲ್ಲೂ ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಹೊನ್ನಮ್ಮನ ಹಳ್ಳದಲ್ಲಿ ಮಿಂದು ದತ್ತ ಪಾದುಕೆ ದರ್ಶನ ಮಾಡಿದ್ದಾರೆ. ಐದು ಸಾವಿರಕ್ಕೂ ಅಧಿಕ ಪೊಲೀಸರ ಸರ್ಪಗಾವಲಿನಲ್ಲಿ ಕಾರ್ಯಕ್ರಮ ಯಾವುದೇ ಸಮಸ್ಯೆಯಿಲ್ಲದೆ ಮುಕ್ತಾಯ ಕಂಡಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಕಾಫಿನಾಡಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ದತ್ತಪೀಠ ಹಿಂದೂಗಳ ಪೀಠವೆಂಬ ಆಕ್ರೋಶದ ಘೋಷಣೆ ಮಾತ್ರ ಹಾಗೇ ಇದೆ.

    ಚಿಕ್ಕಮಗಳೂರಿನ ದತ್ತಪೀಠವನ್ನು ದತ್ತಭಕ್ತರು ಕರ್ನಾಟಕದ ಅಯೋಧ್ಯೆ ಎಂದೇ ಕರೆಯುತ್ತಾರೆ. ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತಗಳ ಸಾಲಿನ ಮುಗಿಲೆತ್ತರದ ಬೆಟ್ಟಗುಡ್ಡಗಳ ಮಧ್ಯೆ ಸುಂದರ ವಾತಾವರಣದಲ್ಲಿರೋ ದತ್ತಪೀಠ ಉಮೇದುವಾರಿಕೆಗಾಗಿ ಮೂರ್ನಾಲ್ಕು ದಶಕಗಳ ವಿವಾದ ಹಾಗೇ ಇದೆ. ಇಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಳೆದೆರಡು ದಶಕಗಳಿಂದ ದತ್ತಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದು, ದತ್ತಪೀಠ ನಮಗೆ ಸೇರಿದ್ದು ಅಂತಿದ್ದಾರೆ. ಇಂದು ಕೂಡ ದತ್ತಭಕ್ತರು, ಇದು ಹಿಂದುಗಳ ಪೀಠ. ಸರ್ಕಾರ ದಾಖಲೆಗಳನ್ನ ಪರಿಶೀಲಿಸಿ ಪೀಠವನ್ನ ಹಿಂದೂಗಳಿಗೆ ಒಪ್ಪಿಸಿ, ತ್ರಿಕಾಲ ಪೂಜೆಗೆ ಅವಕಾಶ ನೀಡಿ ಹಿಂದೂ ಅರ್ಚಕರನ್ನ ನೇಮಕ ಮಾಡಬೇಕೆಂದು ಆಗ್ರಹಿಸಿದ್ದಾರೆ.

    ದತ್ತಜಯಂತಿಯ ಅಂಗವಾಗಿ ಕಾಫಿನಾಡು ಕಳೆದ ಮೂರು ದಿನಗಳಿಂದ ಒಂದೆಡೆ ಕೇಸರಿ, ಮತ್ತೊಂದೆಡೆ ಖಾಕಿಗಳ ನಾಡಾಗಿತ್ತು. ಎಲ್ಲಿ ನೋಡಿದ್ರು ಕೇಸರಿ-ಖಾಕಿ ಬಣ್ಣವೇ ಗೋಚರವಾಗ್ತಿತ್ತು. ಎರಡು ವರ್ಷಗಳ ಹಿಂದೆ ಇದೇ ದಿನ ದತ್ತಪೀಠದಲ್ಲಿದ್ದ ಗೋರಿಗಳಿಗೆ ಹಾನಿಯಾಗಿದ್ದರಿಂದ ಈ ವರ್ಷ ಬಂದೋಬಸ್ತ್‍ನ್ನು ಮತ್ತಷ್ಟು ಹೆಚ್ಚಿಸಲಾಗಿತ್ತು. ಹಾಸನ, ಮೈಸೂರು, ಮಡಿಕೇರಿ, ಚಾಮರಾಜನಗರ, ಉಡುಪಿ, ಮಂಡ್ಯ, ಮಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಬಂದಿದ್ದ ಐದು ಸಾವಿರಕ್ಕೂ ಅಧಿಕ ಪೊಲೀಸರು ಕಾಫಿನಾಡಿನ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಪೊಲೀಸರ ಜೊತೆ ನಗರ ಹಾಗೂ ದತ್ತಪೀಠದಲ್ಲಿ 600 ಕ್ಕೂ ಅಧಿಕ ಕ್ಯಾಮೆರಾಗಳನ್ನು ಹಾಕಲಾಗಿತ್ತು.

    ದತ್ತಪೀಠದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ ಸೇರಿದಂತೆ ವಿವಿಧ ಮಾಠಾಧೀಶರು ಭಾಗವಹಿಸಿ, ದತ್ತಪಾದುಕೆ ದರ್ಶನ ಮಾಡಿದರು. ದತ್ತಪೀಠ ಹಾಗೂ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪೊಲೀಸರ ಸರ್ಪಗಾವಲಿನಲ್ಲಿ ರಾಜ್ಯದ ಮೂಲೆ-ಮೂಲೆಗಳಿಂದ ಬಂದಿದ್ದ 25 ಸಾವಿರಕ್ಕೂ ಅಧಿಕ ಭಕ್ತರು ದತ್ತಗುಹೆ ಪ್ರವೇಶಿಸಿ ದತ್ತಾತ್ರೇಯ ಸ್ವಾಮಿಯ ಆಶೀರ್ವಾದ ಪಡೆದರು.

    ಐದು ಸಾವಿರಕ್ಕೂ ಅಧಿಕ ಪೊಲೀಸರ ನಿರಂತರ ಶ್ರಮದಿಂದ ಕೂಲ್ ಸಿಟಿಯ ಹಾಟ್ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಬಂದೋಬಸ್ತ್‍ಗಾಗಿ ಪೊಲೀಸರು ಮಾಲಾಧಾರಿಗಳಾಗಿ ದತ್ತಭಕ್ತರ ಮಧ್ಯೆ ಇದ್ದದ್ದು ವಿಶೇಷವಾಗಿತ್ತು. ಜೊತೆಗೆ ರಾಜ್ಯದ ಉತ್ತರ ಕರ್ನಾಟಕದಿಂದ ಪೊಲೀಸರು ಕಾಫಿನಾಡಿನ ಸೌಂದರ್ಯಕ್ಕೆ ಮಾರು ಹೋಗೊದರ ಜೊತೆ ಈ ವರ್ಷದ ಮೈ ಕೊರೆವ ಭಾರೀ ಚಳಿಯಲ್ಲಿ ಮೂರು ದಿನಗಳಿಂದ ನಡುಗಿರೋದಂತು ಸತ್ಯ.

  • ಮನೆ-ಮನೆಗೆ ತೆರಳಿ ಭಿಕ್ಷೆ ಬೇಡಿದ ಸಚಿವ ಸಿ.ಟಿ ರವಿ

    ಮನೆ-ಮನೆಗೆ ತೆರಳಿ ಭಿಕ್ಷೆ ಬೇಡಿದ ಸಚಿವ ಸಿ.ಟಿ ರವಿ

    ಚಿಕ್ಕಮಗಳೂರು: ದತ್ತಾತ್ರೇಯನಿಗೆ ಮಡಿ ಹಾಗೂ ಜಾತಿಭೇದ ಇಲ್ಲ. ಹೀಗಿರುವಾಗ ಅರ್ಚಕರಲ್ಲಿ ಮಡಿ ಹಾಗೂ ಜಾತಿ ಹುಡುಕುವ ಪ್ರಶ್ನೆಯೇ ಇಲ್ಲ. ದತ್ತಾತ್ರೇಯನಿಗೆ ಯಾರೇ ಅರ್ಚಕರಾದರೂ ಸರಿ. ಆದರೆ, ಹಿಂದೂ ಅರ್ಚಕರು ನೇಮಕವಾಗಿ ದತ್ತಪೀಠದಲ್ಲಿ ಹಿಂದೂ ಪದ್ಧತಿ ಪ್ರಕಾರ ಪೂಜೆಯಾಗಬೇಕು ಅನ್ನೋದಷ್ಟೆ ನಮ್ಮ ಬೇಡಿಕೆ ಎಂದು ಮಾಲಾಧಾರಿ, ಸಚಿವ ಸಿ.ಟಿ.ರವಿ ಹೇಳಿದ್ದಾರೆ.

    ಮಾಲಾಧಾರಿಯಾಗಿ ಚಿಕ್ಕಮಗಳೂರಿನ ನಾರಾಯಣಪುರದಲ್ಲಿ ಮನೆ-ಮನೆಗೆ ತೆರಳಿ ಭಿಕ್ಷಾಟನೆ (ಪಡಿ ಸಂಗ್ರಹ) ನಡೆಸಿ ಮಾತನಾಡಿದ ಅವರು, ಭಕ್ತಿ-ಭಾವದ ಸಮ್ಮಿಲನದೊಂದಿಗೆ ದತ್ತಪೀಠಕ್ಕೆ ಹೋಗುತ್ತಿದ್ದೇವೆ. 43 ವರ್ಷದ ಪರಿಶ್ರಮ-ಸಂಕಲ್ಪ, ಭಕ್ತಿ-ಶಕ್ತಿಯ ಆಂದೋಲನ ಅಯೋಧ್ಯೆ ಮಾದರಿಯಲ್ಲಿ ಗುರಿ ಮುಟ್ಟುವ ವಿಶ್ವಾಸ ನನಗಿದೆ. ಇದೊಂದು ನ್ಯಾಯ ಹಾಗೂ ತತ್ವಬದ್ಧವಾದ ಹೋರಾಟವಾಗಿದ್ದು, ದತ್ತಪೀಠದ ತೀರ್ಪು ನಮ್ಮಂತೆಯೇ ಬರುತ್ತದೆಂಬ ವಿಶ್ವಾಸ ವ್ಯಕ್ತಪಡಿಸಿದರು.

    ಜೆಡಿಎಸ್‍ಗೆ ನಿಲುವಿಗೆ ಸ್ವಾಗತ:
    ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಜೆಡಿಎಸ್ ದಲಿತ ಅರ್ಚಕರನ್ನ ನೇಮಕ ಮಾಡಲಿ ಎಂದು ಆಗ್ರಹಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ದಲಿತ ಅಥವಾ ವೇದ-ಆಗಮನ ಕಲಿತ ಯಾರೇ ಅರ್ಚಕರಾದರೂ ಅದನ್ನ ಸ್ವಾಗತಿಸುತ್ತೇವೆ. ಆದರೆ ಹಿಂದೂ ಅರ್ಚಕರು ನೇಮಕವಾಗಬೇಕು ಎಂದು ಜೆಡಿಎಸ್‍ಗೆ ಟಾಂಗ್ ಕೊಟ್ಟಿದ್ದಾರೆ. ಕಡೆಗೂ ಜೆಡಿಎಸ್ ತನ್ನ ನಿಲುವು ಬದಲಿಸಿಕೊಂಡು ಅರ್ಚಕರ ನೇಮಕಕ್ಕೆ ಒತ್ತಾಸೆಯಾಗಿ ನಿಂತು, ಬಹುಕಾಲದ ದತ್ತಪೀಠ ಮುಕ್ತಿಯ ಹೋರಾಟಕ್ಕೆ ತಾವು ಬೆಂಬಲಿಸುವಂತೆ ಸಹಕರಿಸಿರೋದನ್ನ ನಾನೂ ಬೆಂಬಲಿಸ್ತೇನೆ ಎಂದಿದ್ದಾರೆ.

    ಸಚಿವ ಸಿ.ಟಿ.ರವಿ ದತ್ತಪೀಠದ ಹೋರಾಟವನ್ನ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯೇ ನೀಡಿದ ಸಿ.ಟಿ.ರವಿ, ದತ್ತಪೀಠ ಮುಕ್ತಿಯ ಹೋರಾಟಕ್ಕೆ ತನ್ನನ್ನ ತಾನು ತೊಡಗಿಸಿಕೊಂಡಾಗ ನಾನು ಯಾವುದೇ ಪಕ್ಷದ ಸದಸ್ಯನೂ ಆಗಿರಲಿಲ್ಲ ಎಂದು ಆರೋಪಿತರಿಗೆ ತಿರುಗೇಟು ನೀಡಿದ್ದಾರೆ.

  • ಅದ್ಧೂರಿ ಅನುಸೂಯ ಜಯಂತಿ- ಇನ್ನೆರಡು ದಿನ ಕಾಫಿನಾಡು ಸೂಕ್ಷ್ಮಾತಿ ಸೂಕ್ಷ್ಮ

    ಅದ್ಧೂರಿ ಅನುಸೂಯ ಜಯಂತಿ- ಇನ್ನೆರಡು ದಿನ ಕಾಫಿನಾಡು ಸೂಕ್ಷ್ಮಾತಿ ಸೂಕ್ಷ್ಮ

    ಚಿಕ್ಕಮಗಳೂರು: ಜಿಲ್ಲೆಯ ಚಂದ್ರದ್ರೋಣ ಪರ್ವತಗಳ ಸಾಲಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ಇಂದಿನಿಂದ ಆರಂಭಗೊಂಡ ಮೂರು ದಿನಗಳ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರೆತಿದೆ.

    ದತ್ತ ಜಯಂತಿಯ ಮೊದಲ ದಿನವಾದ ಇಂದು ಮೂರು ಸಾವಿರಕ್ಕೂ ಅಧಿಕ ಮಹಿಳೆಯರು ಬೃಹತ್ ಸಂಕೀರ್ತನಾ ಯಾತ್ರೆ ನಡೆಸಿ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಮೆರವಣಿಗೆಯ ಬಳಿಕ ದತ್ತಪೀಠಕ್ಕೆ ತೆರಳಿ ಅನುಸೂಯ ದೇವಿಗೆ ವಿಶೇಷ ಪೂಜೆ-ಹೋಮ-ಹವನ ಸಲ್ಲಿಸಿ ದತ್ತಪಾದುಕೆ ದರ್ಶನ ಪಡೆದರು. ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸಬೇಕೆಂಬ ಕೂಗು ಎಂದಿನಂತೆ ಇತ್ತು.

    ಅನುಸೂಯ ಜಯಂತಿಗೆ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಮಹಿಳೆಯರು ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಯಾತ್ರೆ ಆರಂಭಿಸಿದರು. ಯಾತ್ರೆಯಲ್ಲಿ ದತ್ತಭಕ್ತರು ಹಾಗೂ ಮಹಿಳೆಯರಿಗೆ ಸಚಿವ ಸಿ.ಟಿ.ರವಿ ಮೆರೆವಣಿಗೆಯುದ್ದಕ್ಕೂ ಜೊತೆಗೆ ಬಂದು ಸಾಥ್ ನೀಡಿದರು. ಯಾತ್ರೆಯ ಬಳಿಕ ದತ್ತಪೀಠಕ್ಕೆ ತೆರಳಿದ ಮಹಿಳೆಯರು ದತ್ತಪೀಠದ ಪೂರ್ವ ದಿಕ್ಕಿಗೆ ಹಾಕಿರೋ ಚಪ್ಪರದಲ್ಲಿ ಭಜನೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನ ನೇರವೇರಿಸಿದರು. ಇದಕ್ಕೂ ಮುನ್ನ ಮೆರವಣಿಗೆಯ ಹಾದಿಯುದ್ದಕ್ಕೂ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

    ಮೂರು ದಿನದ ದತ್ತಜಯಂತಿ ಕಾರ್ಯಕ್ರಮದಲ್ಲಿ ಮೊದಲ ಪೂಜೆ ದತ್ತಾತ್ರೇಯ ಸ್ವಾಮಿಯ ತಾಯಿ ಅನುಸೂಯ ದೇವಿಗೆ ಮೀಸಲಾಗುತ್ತದೆ. ಪಂಚ ಪತಿವೃತೆಯರಲ್ಲಿ ಒಬ್ಬಳೆನಿಸಿಕೊಂಡಿರೋ ಅನುಸೂಯ ದೇವಿಯ ಪೂಜೆ ಮಾಡಿದ್ರೆ ಇಷ್ಟಾರ್ಥಗಳು ಸಿದ್ಧಿಸುತ್ತದೆಂಬ ನಂಬಿಕೆ ಭಕ್ತರಲ್ಲಿದೆ. ದತ್ತಪೀಠದಲ್ಲಿ ತ್ರಿಕಾಲ ಪೂಜೆಗೆ ಅವಕಾಶ ಕಲ್ಪಿಸಿ ಹಿಂದೂ ಅರ್ಚಕರ ನೇಮಕ ಮಾಡಬೇಕೆಂದು ಮಹಿಳಾ ಭಕ್ತರು ಸರ್ಕಾರಕ್ಕೆ ಆಗ್ರಹಿಸಿ, ದತ್ತಪೀಠವನ್ನು ಹಿಂದೂಗಳ ಪುಣ್ಯಕ್ಷೇತ್ರವೆಂದು ಘೋಷಿಸಿ, ಅನುಸೂಯ ದೇವಿಗೊಂದು ಭವನ ನಿರ್ಮಿಸಬೇಕೆಂದು ಆಗ್ರಹಿಸಿದರು. ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಹಿಳಾ ಭಕ್ತರು, ದತ್ತಪೀಠ ಹಿಂದೂಗಳ ಪೀಠ. ಅಯೋಧ್ಯೆ ನಮ್ಮದ್ದಾಯ್ತು, ಅದೇ ರೀತಿ ದತ್ತಪೀಠವೂ ಹಿಂದುಗಳಿಗೆ ಸೇರಬೇಕೆಂದು ಆಗ್ರಹಿಸಿದರು.

    ದತ್ತಪೀಠಕ್ಕೂ ವಕ್ಫ್ ಬೋರ್ಡ್‍ಗೂ ಸಂಬಂಧವಿಲ್ಲ:
    ದತ್ತಪೀಠದ ವಿವಾದ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಿ.ಟಿ.ರವಿ, ಈಗ ವಿವಾದವಿರೋದು ಹಿಂದೂ ಹಾಗೂ ಶಾಖಾದ್ರಿ ಕುಟುಂಬಕ್ಕೆ. ವಕ್ಫ್ ಬೋರ್ಡಿಗೆ ಯಾವುದೇ ಸಂಬಂಧವಿಲ್ಲ. ವಕ್ಫ್ ಬೋರ್ಡ್ ಅರ್ಜಿಯನ್ನ ಸುಪ್ರಿಂಕೋರ್ಟ್ ವಜಾ ಮಾಡಿದೆ. ಶಾಖಾದ್ರಿ ಕುಟುಂಬದೊಂದಿಗೆ ಮಾತನಾಡಬೇಕಿದೆ. ನ್ಯಾಯಾಲಯ ಕೂಡ ತ್ವರಿತಗತಿಯ ವಿಚಾರಣೆ ಮಾಡಬೇಕೆಂದು ವಿನಂತಿ ಮಾಡೋದರ ಜೊತೆ, ಆದಷ್ಟು ಬೇಗ ವಿವಾದವನ್ನ ಇತ್ಯರ್ಥಗೊಳಿಸುವಂತೆ ಸರ್ಕಾರಕ್ಕೆ ಒತ್ತಡ ತರುವ ಕೆಲಸವನ್ನ ಸಂಪುಟದ ಸಚಿವನಾಗಿ ನಾನು ಮಾಡ್ತೀನಿ ಎಂದಿದ್ದಾರೆ. 43 ವರ್ಷಗಳಿಂದ ದತ್ತಪೀಠದ ಮುಕ್ತಿ ಹೋರಾಟ ನ್ಯಾಯಾಲಯ ಹಾಗೂ ಹೊರಗಡೆ ನಿರಂತರವಾಗಿದೆ. ವಕ್ಫ್ ಬೋರ್ಡಿಗೆ ಸೇರಿಸಿದ್ದನ್ನ ಸುಪ್ರೀಂ ಕೋರ್ಟ್ ಇದು ವಕ್ಫ್ ಪ್ರಾಪರ್ಟಿ ಅಲ್ಲ ಅಂತ ಮತ್ತೆ ಮುಜರಾಯಿಗೆ ಸೇರಿಸಿದೆ ಎಂದಿದ್ದಾರೆ.

    ಮೂರು ದಿನಗಳ ಕಾಲ ನಡೆಯೋ ಈ ಕಾರ್ಯಕ್ರಮದಲ್ಲಿ ಬುಧವಾರ ಹಾಗೂ ಗುರುವಾರ ಕಾಫಿನಾಡು ಸೂಕ್ಷ್ಮಾತಿ ಸೂಕ್ಷ್ಮ ಜಿಲ್ಲೆಯಾಗಿರಲಿದೆ. ನಾಳೆ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಶೋಭಾಯಾತ್ರೆಯುದ್ದಕ್ಕೂ ದತ್ತಭಕ್ತರ ಒಂದು ಹೆಜ್ಜೆಗೆ ಪೊಲೀಸರು ಎರಡು ಹೆಜ್ಜೆ ಹಾಕೋದರ ಜೊತೆ, ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಗುರುವಾರ ರಾಜ್ಯದ ಮೂಲೆ-ಮೂಲೆಗಳಿಂದ ಬರುವ 25 ಸಾವಿರಕ್ಕೂ ಅಧಿಕ ಭಕ್ತರು ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿ ದತ್ತಪಾದುಕೆ ದರ್ಶನ ಮಾಡೋದ್ರ ಮೂಲಕ ದತ್ತಜಯಂತಿ ಸಮಾಪ್ತಿಗೊಳ್ಳಲಿದೆ.

  • ದತ್ತಜಯಂತಿಗೆ ಕಾಫಿನಾಡಲ್ಲಿ ಖಾಕಿಗಳ ಸರ್ಪಗಾವಲು

    ದತ್ತಜಯಂತಿಗೆ ಕಾಫಿನಾಡಲ್ಲಿ ಖಾಕಿಗಳ ಸರ್ಪಗಾವಲು

    – 3 ದಿನಗಳ ಕಾಲ ಪ್ರವಾಸಿಗರ ಆಗಮನಕ್ಕೆ ನಿಷೇಧ

    ಚಿಕ್ಕಮಗಳೂರು: ದತ್ತಜಯಂತಿ ಆಚರಣೆ ಹಿನ್ನೆಲೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ಜಿಲ್ಲಾದ್ಯಂತ 35 ಚೆಕ್ ಪೋಸ್ಟ್, 48 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು, 800ಕ್ಕೂ ಅಧಿಕ ಕ್ಯಾಮೆರಾ ಹಾಗೂ 5 ಸಾವಿರಕ್ಕಿಂತಲೂ ಅಧಿಕ ಪೊಲೀಸರು ಕಾಫಿನಾಡಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.

    ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳ ನೇತೃತ್ವದಲ್ಲಿ ಡಿಸೆಂಬರ್ 10 ರಿಂದ 12ರವರೆಗೆ ಮೂರು ದಿನಗಳ ಕಾಲ ನಡೆಯುವ ದತ್ತಜಯಂತಿಗೆ ಜಿಲ್ಲಾಡಳಿತ ಜಿಲ್ಲಾದ್ಯಂತ ಸರ್ಪಗಾವಲನ್ನು ಹಾಕಿದೆ. ಡಿಸೆಂಬರ್ 10 ರಿಂದ 12ರವರೆಗೆ ಮೂರು ದಿನಗಳ ಕಾಲ ಜಿಲ್ಲಾದ್ಯಂತ ಮದ್ಯ ಮಾರಾಟವನ್ನ ನಿಷೇಧಿಸಿಸಲಾಗಿದೆ.

    ನಿಷೇಧ: ಡಿ.12 ರಂದು ಚಿಕ್ಕಮಗಳೂರಿನ ಕೆ.ಎಂ.ರಸ್ತೆ, ಐ.ಜಿ. ರಸ್ತೆ, ಬಸವನಹಳ್ಳಿ ಮುಖ್ಯರಸ್ತೆ ಸೇರಿದಂತೆ ಆಲ್ದೂರು ಪಟ್ಟಣ, ಹಾಂದಿಯಿಂದ ವಸ್ತಾರೆವರೆಗೆ ಅಂಗಡಿ-ಮುಂಗಟ್ಟುಗಳನ್ನ ಮುಚ್ಚುವಂತೆ ಆದೇಶಿಸಲಾಗಿದೆ. ಡಿ. 10 ರಿಂದ 12ರವರೆಗೆ ಮುಳ್ಳಯ್ಯನಗಿರಿ, ಸೀತಾಳಯ್ಯನಿಗಿರಿ, ದತ್ತಪೀಠ, ಗಾಳಿಕೆರೆ, ಮಾಣಿಕ್ಯಾಧಾರಕ್ಕೆ ಪ್ರವಾಸಿಗರನ್ನು ಸಂಪೂರ್ಣ ನಿಷೇಧಿಸಿದ್ದಾರೆ.

    ಡಿ.10 ರಂದು ಅನಸೂಯ ಜಯಂತಿ. ನಗರದಲ್ಲಿ ಸಾವಿರಾರು ಮಹಿಳೆಯರು ಮೆರವಣಿಗೆ ನಡೆಸಿ ದತ್ತಪೀಠದಲ್ಲಿ ಪೂಜೆ-ಹೋಮ-ಹವನ ನಡೆಸಲಿದ್ದಾರೆ. ಡಿ.11 ರಂದು ನಗರದಲ್ಲಿ 10 ಸಾವಿರಕ್ಕೂ ಅಧಿಕ ದತ್ತಭಕ್ತರು ಬೃಹತ್ ಶೋಭಾಯಾತ್ರೆ ನಡೆಸಲಿದ್ದಾರೆ. ಡಿ.12 ರಂದು ರಾಜ್ಯಾದ್ಯಂತ ಬರಲಿರೋ 20 ಸಾವಿರಕ್ಕೂ ಅಧಿಕ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆದು ದತ್ತಪೀಠದಲ್ಲಿ ಹೋಮ-ಹವನ ನಡೆಸಲಿದ್ದಾರೆ. ಮೂರು ದಿನಗಳ ಕಾಲ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕೂಡ ಹೈ-ಅಲರ್ಟ್ ಘೋಷಿಸಿದೆ. ಜಿಲ್ಲಾದ್ಯಂತ 5 ಸಾವಿರಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದ್ದು, ಇಂದು ನಗರದ ಪ್ರಮುಖ ಬೀದಿಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಪೊಲೀಸರು ಪಥಸಂಚಲನ ನಡೆಸಿದರು.

  • ಭೂತಯ್ಯನ ಮಗ ಅಯ್ಯು ನೆನಪು – ಇಂದಿಗೂ ಹಾಗೆಯೇ ಇದೆ ಮನೆ, ಹೋಟೆಲ್

    ಭೂತಯ್ಯನ ಮಗ ಅಯ್ಯು ನೆನಪು – ಇಂದಿಗೂ ಹಾಗೆಯೇ ಇದೆ ಮನೆ, ಹೋಟೆಲ್

    – ಮೆರವಣಿಗೆ ಜಾಗಕ್ಕೆ ಭೂತಯ್ಯನ ಸರ್ಕಲ್ ಹೆಸರು
    – ಕಟ್ಟೆ ಕಟ್ಟಿ ಹೂವಿನ ಗಿಡ ನೆಟ್ಟು ಮರ ರಕ್ಷಣೆ

    ಚಿಕ್ಕಮಗಳೂರು: ಭೂತಯ್ಯನ ಮಗ ಅಯ್ಯು. ಭಾರತೀಯ ಚಿತ್ರರಂಗದ ಜೀವಂತ ದಂತಕಥೆ. 50 ವರ್ಷಗಳಲ್ಲಿ ಸಾವಿರಾರು ಸಿನಿಮಾಗಳು ಬಂದರೂ ಜನಮಾನಸದಲ್ಲಿ ಹಚ್ಚಹಸಿರಾಗಿರೋ ಸಿನಿಮಾ. ಆ ಚಿತ್ರದ ಒಂದೊಂದು ದೃಶ್ಯವೂ ಒಂದೊಂದು ಇತಿಹಾಸ. ದೇವಯ್ಯ ನೇಣು ಹಾಕಿಕೊಂಡಿದ್ದು, ಭೂತಯ್ಯನ ಮೃತನ ದೇಹವನ್ನ ಊರಲ್ಲಿ ಮೆರವಣಿಗೆ ಮಾಡಿದ್ದು, ಎರಡು ರೂಪಾಯಿಯಲ್ಲಿ ನಾಲ್ವರು ಅನ್ನ… ಅನ್ನ…. ಅಂತ ಊಟ ಮಾಡಿದ್ದು. ಎಷ್ಟೇ ಬಾರಿ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಎನ್ನುವ ದೃಶ್ಯಗಳವು. ಆದ್ರೆ, ದೇವಯ್ಯ ನೇಣು ಹಾಕಿಕೊಂಡ ಮರ, ನಾಲ್ವರು ಊಟ ಮಾಡಿದ ಆ ಮನೆ ಇಂದಿಗೂ ಹಾಗೆಯೇ ಇದೆ.

    ಕಳಸಾಪುರ ಗ್ರಾಮದ ಮಧ್ಯೆ ಇರೋ ಈ ಮರವನ್ನ ಊರಿನ ಯುವಕರು ಮರದ ಸುತ್ತಲೂ ಕಟ್ಟೆ ಕಟ್ಟಿ ಮರದ ಸುತ್ತಲೂ ಹೂವಿನ ಗಿಡ ಹಾಕಿ ರಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಭೂತಯ್ಯನನ್ನ ಮೆರವಣಿಗೆ ಮಾಡಿದ ಬೀದಿ ಕೂಡ ಹಾಗೆ ಇದ್ದು, ಮನೆಗಳಿಗೆ ಸುಣ್ಣ ಬಣ್ಣ ಬಳಿದಿರುವುದರಿಂದ ಹೊಸತು ಎಂದು ಅನ್ನಿಸಿಕೊಳ್ಳುತ್ತಿದೆ. ಊರಿನ ಜನ ಭೂತಯ್ಯನನ್ನ ಮೆರವಣಿಗೆ ಮಾಡಿದ ಬೀದಿಗೆ ಭೂತಯ್ಯನ ಸರ್ಕಲ್ ಎಂದೇ ಹೆಸರಿಟ್ಟಿದ್ದಾರೆ. ಅಂದು ಚಿಕ್ಕ ಹುಡುಗರಾಗಿದ್ದವರು ವೃದ್ಧರಾಗಿ ಎಲ್ಲಾ ಜಾಗವನ್ನು ನೆನೆದು “ಇದೇ ಆ ಜಾಗ, ಇದೇ ಜಾಗ” ಎಂದು ಚಿತ್ರಕ್ಕಾಗಿ ಸಹಕರಿಸಿದ್ದನ್ನ ನೆನೆಯುತ್ತಿದ್ದಾರೆ. ಇದೇ ಚಿತ್ರದಲ್ಲಿ ವಿಷ್ಣುವರ್ಧನ್ ತಂದೆ ದೇವಯ್ಯನ ಪಾತ್ರಧಾರಿ ನೇಣು ಬಿಗಿದುಕೊಂಡಿದ್ದು ಇದೇ ಮರದಲ್ಲಿ.

    1974 ರಲ್ಲಿ ತೆರೆಕಂಡ ಸಿದ್ದಲಿಂಗಯ್ಯ ನಿರ್ದೇಶನದ ಭೂತಯ್ಯನಮಗ ಅಯ್ಯು ಚಿತ್ರದಲ್ಲಿ ಎರಡು ರೂಪಾಯಿಗೆ ನಾಲ್ವರು “ಅನ್ನ ಅನ್ನ” ಅಂತ ಊಟ ಮಾಡಿದ ಹೋಟೆಲ್ ಈಗಲೂ ಹಾಗೆಯೇ ಇದೆ. ಮನೆ ಚಿತ್ರಕ್ಕಾಗಿ ಹೋಟೆಲ್ ಮಾಡಿಕೊಂಡಿದ್ದರು. ಹೊಟೇಲ್ ಮಾಲೀಕನೊಂದಿಗೆ ನಟ ದಿನೇಶ್ ಹಾಗೂ ಸಹಚರರು ಕೂರುವುದಕ್ಕೂ ದುಡ್ ಕೊಡ್ಬೇಕಾ ಸ್ವಾಮಿ ಅಂದಿದ್ದು ಇದೇ ಜಾಗದಲ್ಲಿ. ಇಂದಿಗೂ ಆ ದೃಶ್ಯ ಕಂಡು ಜನ ಹುಸಿ ನಗ್ತಾರೆ. ಲೋಕನಾಥ್ ಉಪ್ಪಿನಕಾಯಿ ಜಾಡಿ ಕದಿಯುತ್ತಿದ್ದದ್ದು ಮನೆ, ವಿಷ್ಣುವರ್ಧನ್ ಮಚ್ಚನ್ನ ಮಸೆದ ಜಾಗ ಸೇರಿ ಚಿತ್ರದ ಒಂದೊಂದು ದೃಶ್ಯದ ಜಾಗ ಕಂಡು ಸಿನಿಮಾವನ್ನ ನೆನೆಯುತ್ತಿದ್ದಾರೆ.

    ಹತ್ತಾರು ಕೋಟಿ ಬಂಡವಾಳ ಹೂಡಿ ತೆಗೆದ ಸಿನಿಮಾಗಳು ನೂರು ದಿನ ಓಡುವಷ್ಟರಲ್ಲಿ ಮಕಾಡೆ ಮಲಗಿರುತ್ತದೆ. ಸಾಲದಕ್ಕೆ ಸಿನಿಮಾದ ಗೆಲುವಿಗಾಗಿ ಚಿತ್ರತಂಡ ಐಟಂ ಸಾಂಗ್, ಅದು-ಇದು ಅಂತೆಲ್ಲಾ ಸರ್ಕಸ್ ಮಾಡಿರುತ್ತದೆ. ಆದರೆ ಅಪ್ಪಟ ಹಳ್ಳಿ ಸೊಗಡಿನ ಈ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. 45 ವರ್ಷವಾದ್ರು ಈ ಚಿತ್ರದ ಒಂದೊಂದು ದೃಶ್ಯ ಕೂಡ ಗ್ರಾಮಸ್ಥರಿಗೆ ಕಣ್ಣಿಗೆ ಕಟ್ಟಿದಂತಿದೆ.

  • ಕೀಟ್ಲೆ ಮಾಡಿದರೆಂದು ಮಕ್ಕಳಿಗೇ ಬರೆ ಹಾಕಿದ ಪಾಪಿ ತಂದೆ

    ಕೀಟ್ಲೆ ಮಾಡಿದರೆಂದು ಮಕ್ಕಳಿಗೇ ಬರೆ ಹಾಕಿದ ಪಾಪಿ ತಂದೆ

    ಚಿಕ್ಕಮಗಳೂರು: ಮಕ್ಕಳು ಕೀಟಲೆ ಮಾಡಿದರು ಎಂದು ತಂದೆಯೊಬ್ಬ ದೋಸೆ ಕಡ್ಡಿ ಬಿಸಿ ಮಾಡಿ ಬರೆ ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಸ್ಗಲ್‍ನಲ್ಲಿ ನಡೆದಿದೆ.

    ಹರೀಶ್ ಬರೆ ಹಾಕಿದ ಕ್ರೂರ ತಂದೆ. 10 ವರ್ಷದ ಹಿಂದೆ ಮದುವೆಯಾದ ಹರೀಶ್ ಹಾಗೂ ಪುಷ್ಪ ದಂಪತಿಗೆ 2 ಹೆಣ್ಣು, 2 ಗಂಡು ಮಕ್ಕಳಿವೆ. ಪಾಪಿ ತಂದೆಯ ಕೃತ್ಯದಿಂದ ಇದೀಗ ಎರಡು ಮಕ್ಕಳು ಓಡಾಡುವುದಕ್ಕೂ ಆಗದೇ ನರಕ ಅನುಭವಿಸುತ್ತಿದ್ದಾರೆ. ಮಕ್ಕಳ ದಯನೀಯ ಸ್ಥಿತಿ ಕಂಡು ಹೆತ್ತೊಡಲು ಕಣ್ಣೀರಲ್ಲಿ ಮುಳುಗಿದೆ.

    ಸೈಕೋ ಹರೀಶ್ ವರ್ಷದ ಹಿಂದೆಯೂ ಪತ್ನಿ, ಮಕ್ಕಳಿಗೆ ವೈರ್‍ನಿಂದ ಹೊಡೆದು, ಮನೆಗೆ ಬೆಂಕಿ ಇಟ್ಟಿದ್ದನು. ಆಗ ಪತ್ನಿಯೇ ದೂರು ನೀಡಿ ಜೈಲಿಗೆ ಹಾಕಿಸಿದ್ದರು. ಮತ್ತೆ ಅವರೇ ಪತಿ ಸರಿ ಹೋಗಬಹುದು ಎಂದು ತಾನೇ ಹೋಗಿ ಜಾಮೀನು ನೀಡಿ ಮನೆಗೆ ಕರೆ ತಂದಿದ್ದರು. ಜೈಲಿನಿಂದ ಬಂದ ನಂತರ ಹರೀಶ್ ಮತ್ತೆ ತನ್ನ ವರಸೆ ಮುಂದುವರಿಸಿದ್ದಾನೆ.

    ಮಕ್ಕಳ ಮುಗ್ಧತೆ ಕಂಡರೆ ಎಂಥವರು ಕೂಡ ಕರಗುತ್ತಾರೆ. ಇಲ್ಲಿ ಐ ಲವ್ ಯೂ ಅಪ್ಪ ಎಂದು ಎನಿಸಿಕೊಳ್ಳಬೇಕಿದ್ದ ಕುಡುಕ ಹರೀಶ್, ಮಕ್ಕಳ ಪಾಲಿಗೆ ವಿಲನ್ ಆಗಿದ್ದಾನೆ. ಸೈಕೋ ಪತಿಯ ಕಾಟ ತಡೆಯಲಾಗದೆ ಪುಷ್ಪ ತನ್ನ ನಾಲ್ಕು ಮಕ್ಕಳ ಸಮೇತ ತವರು ಸೇರಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರು ಕೂಡಲೇ ಹರೀಶ್ ವಿರುದ್ಧ ಕ್ರಮ ಕೈಗೊಂಡು, ಸುಟ್ಟ ಗಾಯಗಳಿಂದ ಬಳಲುತ್ತಿರುವ ಮಕ್ಕಳಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕಿದೆ.

  • ‘ದೆವ್ವ’ವನ್ನು ಕಂಬಕ್ಕೆ ಕಟ್ಟಿ ಹೊಡೆದ ಮಲೆನಾಡಿಗರು

    ‘ದೆವ್ವ’ವನ್ನು ಕಂಬಕ್ಕೆ ಕಟ್ಟಿ ಹೊಡೆದ ಮಲೆನಾಡಿಗರು

    ಚಿಕ್ಕಮಗಳೂರು: ಶ್ರೀಗಂಧದ ಮರಗಳ ಕಳ್ಳತನಕ್ಕೆ ಬಂದಿದ್ದ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿಯ ‘ದೆವ್ವ’ವನ್ನು ಮಲೆನಾಡಿಗರು ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ.

    ಕೇಳೋಕೆ ಆಶ್ಚರ್ಯ ಅನ್ನಿಸಿದರು ಸತ್ಯ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ ಗ್ರಾಮದಂಚಿನಲ್ಲಿದ್ದ ಐದು ಶ್ರೀಗಂಧದ ಮರಗಳನ್ನ ಕದಿಯಲೆಂದು ಅರೇಹಳ್ಳಿಯ ಐವರು ಕಳ್ಳರು ಬಂದಿದ್ದರು. ಊರ ಹೊರಗೆ ಮರ ಕಡಿಯುವ ಶಬ್ಧವನ್ನು ಆಲಿಸಿದ ಗ್ರಾಮಸ್ಥರು ಸ್ಥಳಕ್ಕೆ ಬಂದಾಗ ಗಂಧದ ಕಳ್ಳರು ಮುಖಕ್ಕೆ ವಿಚಿತ್ರ ಮಾಸ್ಕ್ ಹಾಕಿ ಗ್ರಾಮಸ್ಥರನ್ನ ಹೆದರಿಸಲು ಪ್ರಯತ್ನಿಸಿದ್ದಾರೆ.

    ದೆವ್ವಕ್ಕೆ ಹೆದರದ ಗ್ರಾಮಸ್ಥರು ಒಟ್ಟಾಗಿ ಮುನ್ನುಗ್ಗಿದಾಗ, ಮುಖದಿಂದ ಮಾಸ್ಕ್ ತೆಗೆದು ಎಲ್ಲರೂ ಓಡಲು ಆರಂಭಿಸಿದ್ದಾರೆ. ಆದರೆ ಊರಿನ ಜನ ಓರ್ವನನ್ನ ಹಿಡಿದು ಕಂಬಕ್ಕೆ ಕಟ್ಟಿ ಚೆನ್ನಾಗಿ ಹೊಡೆದು ಅರಣ್ಯ ಇಲಾಖೆಯ ವಶಕ್ಕೆ ನೀಡಿದ್ದಾರೆ. ಐವರಲ್ಲಿ ಓರ್ವ ಸಿಕ್ಕಿಬಿದ್ದಿದ್ದು, ನಾಲ್ವರು ತಪ್ಪಿಸಿಕೊಂಡಿದ್ದಾರೆ. ಬಂಧಿತರಿಂದ ಐದು ಗಂಧದ ತುಂಡು, ಆಟೋ, ಒಂದು ಬೈಕ್ ಹಾಗೂ ಮುಖವಾಡಗಳನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

  • ಲಾಂಗ್ ಹಿಡಿದು, ಡೈಲಾಗ್ ಹೊಡೆದು ಭರ್ಜರಿ ಸ್ಟೆಪ್ಸ್ ಹಾಕಿದ ವೈದ್ಯ

    ಲಾಂಗ್ ಹಿಡಿದು, ಡೈಲಾಗ್ ಹೊಡೆದು ಭರ್ಜರಿ ಸ್ಟೆಪ್ಸ್ ಹಾಕಿದ ವೈದ್ಯ

    ಚಿಕ್ಕಮಗಳೂರು: ಗೆರೆ ಎಳೆದಾಯ್ತು, ವೃತ್ತ ಬರೆದಾಯ್ತು, ವೃತ್ತದಲ್ಲಿರೋದೆಲ್ಲಾ ನಂದೇ ಎಂದು ಲಾಂಗ್ ಹಿಡಿದು ಚಿಕ್ಕಮಗಳೂರಿನಲ್ಲಿ ವೈದ್ಯರೊಬ್ಬರು ಭರ್ಜರಿ ಡೈಲಾಗ್ ಹೊಡೆಯುತ್ತಾ ಸ್ಟೆಪ್ಸ್ ಹಾಕಿದ್ದಾರೆ.

    ಜಿಲ್ಲೆಯ ಎನ್.ಆರ್ ಪುರದ ಬಾಳೆಹೊನ್ನೂರಿನ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ರಮೇಶ್ ಲಾಂಗ್ ಹಿಡಿದು ಕುಣಿದಿದ್ದಾರೆ. ಶೃಂಗೇರಿಯ ರೋಟರಿ ಕ್ಲಬ್‍ನಲ್ಲಿ ನಡೆದ ಕಲಾ ವೈಭವ ಕಾರ್ಯಕ್ರಮದಲ್ಲಿ ಲಾಂಗ್ ಹಿಡಿದು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಕನ್ನಡದ ‘ಉಗ್ರಂ’ ಚಿತ್ರದ ಡೈಲಾಗ್ ಹೊಡೆದು ವೈದ್ಯ ನಟನೆ ಮಾಡಿದ್ದಾರೆ. ಹಾಗೆಯೇ ‘ವಿಲನ್’ ಚಿತ್ರದ ಅಣ್ಣಾ ನಿನ್ನ ಊರು ಹಾಡಿಗೂ ಭರ್ಜರಿ ಹೆಜ್ಜೆ ಹಾಕಿದ್ದಾರೆ.

    ಲಾಂಗ್ ಹಿಡಿದು ಕುಣಿದ ವೈದ್ಯನ ನೃತ್ಯಕ್ಕೆ ಪ್ರೇಕ್ಷಕರು ಫಿದಾ ಆಗಿಬಿಟ್ಟಿದ್ದಾರೆ. ಈ ವೇಳೆ ಚಪ್ಪಾಳೆ, ಶಿಲ್ಲೆ ಹೊಡೆದು ನೆರೆದಿದ್ದ ಜನರು ವೈದ್ಯನಿಗೆ ಸಾಥ್ ನೀಡಿದ್ದು, ಲಾಂಗಿನೊಂದಿಗೆ ವೈದ್ಯನ ಕುಣಿತದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

  • ಕಾಫಿನಾಡಿನಲ್ಲಿ ಸೃಷ್ಟಿಯಾಯ್ತು ಬೆಳ್ಳಕ್ಕಿ ಪ್ರಪಂಚ

    ಕಾಫಿನಾಡಿನಲ್ಲಿ ಸೃಷ್ಟಿಯಾಯ್ತು ಬೆಳ್ಳಕ್ಕಿ ಪ್ರಪಂಚ

    ಚಿಕ್ಕಮಗಳೂರು: ಆಕಾಶದಲ್ಲಿ ಅಥವಾ ಮರಗಳ ಮೇಲೆ ಒಂದರೆಡು ಬೆಳ್ಳಕ್ಕಿಗಳನ್ನು ನೋಡಿದರೆ ಮನಸ್ಸು ಖುಷಿಯಾಗುತ್ತೆ. ಆದರೆ ಕಾಫಿನಾಡಿನಲ್ಲಿ ಬೆಳ್ಳಕ್ಕಿ ಪ್ರಪಂಚ ಸೃಷ್ಟಿ ಆಗುತ್ತಿದೆ.

    ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಇಟ್ಟಿಗೆ ಸೀಗೋಡು ಗ್ರಾಮದಲ್ಲಿ ಬೆಳ್ಳಕ್ಕಿಯ ಪ್ರಪಂಚ ಸೃಷ್ಟಿ ಆಗಿದೆ. ಬಾಳೆಹೊನ್ನೂರು ಸಮೀಪವಿರುವ ಈ ಗ್ರಾಮದ ವಿನಾಯಕ ಕೆರೆಯ ಅಂಗಳದಲ್ಲಿರುವ ಮರಗಳಲ್ಲಿ ನೆಲೆಸಿರುವ ಬೆಳ್ಳಕ್ಕಿಗಳ ಹಿಂಡು ನೋಡುಗರ ಮನಸ್ಸಿಗೆ ಮುದ ನೀಡುತ್ತಿದೆ.

    ಪ್ರತಿ ವರ್ಷವೂ ಚಳಿಗಾದಲ್ಲಿ ಸುತ್ತಮುತ್ತಲ ಬತ್ತದ ಗದ್ದೆ, ಹಳ್ಳ-ಕೊಳ್ಳಗಳಲ್ಲಿ ಮೀನು, ಸಣ್ಣ-ಪುಟ್ಟ ಕೀಟಗಳನ್ನು ತಿಂದು ವಿನಾಯಕ ಕೆರೆಯ ಅಂಗಳದಲ್ಲಿರುವ ಮರಗಳಲ್ಲಿ ಸಾವಿರಾರು ಬೆಳ್ಳಕ್ಕಿಗಳು ಆಶ್ರಯ ಪಡೆದಿವೆ. ಬೆಳಗ್ಗಿನ ಜಾವ 6 ಗಂಟೆ ಹಾಗೂ ಸಂಜೆ 6ರ ವೇಳೆಯ ಆಸುಪಾಸಿನಲ್ಲಿ ಹಸಿರು ಚೆಲ್ಲಿ ನಿಂತಿರುವ ಮರಗಳ ಮೇಲೆ ಒಮ್ಮೆಲೆ ಸಾವಿರಾರು ಬೆಳ್ಳಕ್ಕಿಗಳು ಹಾರಾಡುವ ದೃಶ್ಯ ನೋಡುಗರ ಮನಸ್ಸಿಗೆ ಮುದ ನೀಡುತ್ತಿದೆ. ಚಿವ್ ಚಿವ್ ಎನ್ನುವ ಮರಿ ಹಕ್ಕಿಗಳ ನಿನಾದದ ಜೊತೆ ಅತ್ತಿಂದತ್ತ ಇತ್ತಿಂದತ್ತ ಮರದಿಂದ ಮರಕ್ಕೆ ಹಾರಾಡುವ ಬೆಳ್ಳಕ್ಕಿಗಳ ರಂಗಿನಾಟ ಮತ್ತಷ್ಟು ಸುಂದರವಾಗಿದೆ.

    ಮುಸ್ಸಂಜೆಯಲ್ಲಿ ರವಿ ಮೆಲ್ಲಗೆ ಮರೆಯಾಗುತ್ತಿದ್ದಂತೆ ಬೆಳ್ಳಕ್ಕಿಗಳ ಗುಂಪು ಕೆರೆಯ ಬಳಗ ಸೇರಿಕೊಳ್ಳುತ್ತವೆ. ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಒಂದು ಎರಡು ಮೂರು ಎಂದು ಲೆಕ್ಕ ಹಾಕುವುದರಲ್ಲಿ ಒಮ್ಮೆಲೆ ಸಾವಿರಾರು ಬೆಳ್ಳಕ್ಕಿಗಳು ಕಣ್ಣಿಗೆ ಹಬ್ಬದೂಟ ಬಡಿಸುತ್ತವೆ. ಮರಗಳ ಮೇಲೆ ಒಟ್ಟೊಟ್ಟಾಗಿ ಆಟವಾಡುವ ಹಕ್ಕಿಗಳು ಕತ್ತಲು ಆವರಿಸುತ್ತಿದ್ದಂತೆ ಫುಲ್ ಸೈಲೆಂಟಾಗಿ ಗೂಡು ಸೇರುತ್ತವೆ.

    ಪ್ರತಿ ಬಾರಿ ಡಿಸೆಂಬರ್ ವೇಳೆಗೆ ನಾನಾ ಪ್ರದೇಶಗಳಿಂದ ಬರುತ್ತಿದ್ದ ಬೆಳ್ಳಕ್ಕಿಗಳು ಈ ಬಾರಿ ನವೆಂಬರ್ ತಿಂಗಳಿನಲ್ಲಿಯೇ ಆಹಾರವನ್ನು ಅರಸಿಕೊಂಡು ಮಲೆನಾಡಿಗೆ ಲಗ್ಗೆ ಇಟ್ಟಿವೆ. ಮಲೆನಾಡು ಭಾಗದಲ್ಲಿ ಈ ವೇಳೆ ಭತ್ತದ ಕಟಾವು ನಡೆಯುವುದರಿಂದ ಸಹಜವಾಗಿಯೇ ಬೆಳಕ್ಕಿಗಳು ಇಲ್ಲಿ ನೆಲೆಸಿ ವಂಶಾಭಿವೃದ್ಧಿ ನಡೆಸಿ ಬಳಿಕ ತಮ್ಮ ತಮ್ಮ ಊರುಗಳಿಗೆ ವಾಪಾಸ್ ಹೋಗುತ್ತವೆ. ಹೀಗೆ ಒಂದೆಡೆ ಸಾವಿರಾರು ಬೆಳ್ಳಕ್ಕಿಗಳು ಒಟ್ಟಿಗೆ ಸೇರಿ ಮಲೆನಾಡಿನ ಚುಮು-ಚುಮು ಚಳಿಯ ಮಂಜಿಗೆ ಮತ್ತಷ್ಟು ರಂಗು ನೀಡುತ್ತಿರುವುದು ಸ್ಥಳೀಯರು ಸೇರಿದಂತೆ ಪಕ್ಷಿಪ್ರಿಯರ ಪಾಲಿನ ನೆಚ್ಚಿನ ತಾಣವಾಗಿ ಕೆರೆ ಮಾರ್ಪಟ್ಟಿದೆ.