Tag: Chikkamagaluru

  • ನಾಡಗೀತೆ ಹಾಡಿ ಕುವೆಂಪು ಸಮಾಧಿಗೆ ನಮಸ್ಕರಿಸಿದ ಮಕ್ಕಳು

    ನಾಡಗೀತೆ ಹಾಡಿ ಕುವೆಂಪು ಸಮಾಧಿಗೆ ನಮಸ್ಕರಿಸಿದ ಮಕ್ಕಳು

    ಚಿಕ್ಕಮಗಳೂರು: ಕುವೆಂಪು ಹುಟ್ಟುಹಬ್ಬ ಮಾಸದ ಅಂಗವಾಗಿ ಮಕ್ಕಳನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋದಾಗ ಮಕ್ಕಳೆಲ್ಲಾ ಸ್ವಯಂಪ್ರೇರಿತರಾಗಿ ಸಾಲಾಗಿ ನಿಂತು ಕುವೆಂಪು ಸಮಾಧಿ ಎದುರು ನಾಡಗೀತೆ ಹಾಡಿ ರಾಷ್ಟ್ರಕವಿಗೆ ಗೌರವ ಸಲ್ಲಿಸಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕಿನ ಮುದ್ದೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಐದನೇ ತರಗತಿ ಓದುತ್ತಿರೋ 15 ಮಕ್ಕಳನ್ನ ಪ್ರವಾಸಕ್ಕೆಂದು ಕುಪ್ಪಳ್ಳಿಯ ಕವಿಶೈಲಕ್ಕೆ ಕರೆದುಕೊಂಡು ಹೋಗಿದ್ದರು. ಆಗ ಸಮವಸ್ತ್ರ ಧರಿಸಿದ್ದ ಮಕ್ಕಳೆಲ್ಲರೂ ಸಾಲಾಗಿ ನಿಂತು ನಾಡಗೀತೆಯನ್ನ ಸಂಪೂರ್ಣವಾಗಿ ಹಾಡಿ ಕುವೆಂಪು ಸಮಾಧಿಗೆ ನಮಸ್ಕರಿಸಿದ್ದಾರೆ.

    ಮಕ್ಕಳ ನಡೆ ಕಂಡು ಶಿಕ್ಷಕರಿಗೆ ಆಶ್ಚರ್ಯವಾಗೋದ್ರ ಜೊತೆ ನಾವು ಬರೀ ಶಿಕ್ಷಣವನ್ನಷ್ಟೇ ಕಲಿಸಿದ್ದೇವೆ. ಆದರೆ ಮಕ್ಕಳು ನಾವು ಕಲಿಸಿದ ಶಿಕ್ಷಣದ ಜೊತೆ ಅದಕ್ಕಿಂತ ದೊಡ್ಡದ್ದಾದ ಸಂಸ್ಕಾರವನ್ನೂ ಕಲಿತ್ತಿದ್ದಾರೆಂದು ಮಕ್ಕಳನ್ನ ಕಂಡು ಶಿಕ್ಷಕರು ಖುಷಿ ಪಟ್ಟಿದ್ದಾರೆ. ಶಾಲೆಯ ಶಿಕ್ಷಕರಾದ ಸರ್ದಾರ್ ಖಾನ್, ಸತೀಶ್, ಅತಿಥಿ ಶಿಕ್ಷಕರಾದ ಶಿವಲೀಲಾ ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಗೀತಾ ಮಕ್ಕಳ ಜೊತೆಯಲ್ಲಿದ್ದರು.

  • ದಾರಿಯಲ್ಲಿ ಸಿಕ್ಕ ಪರ್ಸ್ ಹಿಂದಿರುಗಿಸಿದ ಮಕ್ಕಳು

    ದಾರಿಯಲ್ಲಿ ಸಿಕ್ಕ ಪರ್ಸ್ ಹಿಂದಿರುಗಿಸಿದ ಮಕ್ಕಳು

    -2200 ಹಣ, ಪಾನ್, ಎಟಿಎಂ ಕಾರ್ಡ್ ಇತ್ತು

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ದಾರಿಯಲ್ಲಿ ಸಿಕ್ಕ ಪರ್ಸ್ ಅನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಿದ್ದಾರೆ.

    6ನೇ ತರಗತಿಯ ಭರತ್, ಶರತ್, 5ನೇ ತರಗತಿಯ ಚೈತ್ರಾ ಮತ್ತು 3ನೇ ತರಗತಿಯ ಭೂಮಿಕಾ ಒಂದೇ ಕುಟುಂಬದ ನಾಲ್ವರು ಮಕ್ಕಳು ಶನಿವಾರ ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು. ಆಗ ಶಿವಪುರ ರಸ್ತೆಯ ಸೂರ್ಯ ದೇವಸ್ಥಾನದ ಬಳಿ ಪರ್ಸ್ ಸಿಕ್ಕಿತ್ತು. ಅದರಲ್ಲಿ 2200 ರೂಪಾಯಿ ಹಣ, ಪಾನ್ ಹಾಗೂ ಎಟಿಎಂ ಕಾರ್ಡ್ ಇದ್ದವು.

    ಮಕ್ಕಳು ಸಿಕ್ಕ ಪರ್ಸ್ ಅನ್ನು ಸೋಮವಾರ ಶಾಲೆಗೆ ಬಂದು ಶಿಕ್ಷಕ ಸುಖೇಶ್ ಅವರಿಗೆ ಕೊಟ್ಟಿದ್ದಾರೆ. ಶಿಕ್ಷಕರು ಸಂಬಂಧಪಟ್ಟವರಿಗೆ ಹಿಂದಿರುಗಿಸಿ ಮಕ್ಕಳ ಪ್ರಾಮಾಣಿಕತೆಯನ್ನ ಕೊಂಡಾಡಿದ್ದಾರೆ. ಮಕ್ಕಳು ಕೊಟ್ಟ ಪರ್ಸ್ ಅನ್ನು ಶಿಕ್ಷಕ ಸುಖೇಶ್, ಸಂದೀಪ್ ಅವರನ್ನು ಸಂಪರ್ಕಿಸಿ ಮಕ್ಕಳ ಕೈಯಿಂದಲೇ ಅವರಿಗೆ  ಅವರ ಪರ್ಸ್  ಹಿಂದಿರುಗಿಸಿದ್ದಾರೆ. ಮಕ್ಕಳ ಪ್ರಾಮಾಣಿಕತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಭತ್ತದ ಕಣದಲ್ಲಿ ಕ್ರಿಕೆಟ್ ಆಡಿದ ಸಂಸದ ತೇಜಸ್ವಿ ಸೂರ್ಯ

    ಭತ್ತದ ಕಣದಲ್ಲಿ ಕ್ರಿಕೆಟ್ ಆಡಿದ ಸಂಸದ ತೇಜಸ್ವಿ ಸೂರ್ಯ

    ಚಿಕ್ಕಮಗಳೂರು: ರಾಜಕೀಯ ಜಂಜಾಟವನ್ನೆಲ್ಲಾ ಬದಿಗೊತ್ತಿ ಸಂಸದ ತೇಜಸ್ವಿ ಸೂರ್ಯ ಹುಡುಗರ ಜೊತೆ ಭತ್ತದ ಕಣದಲ್ಲಿ ಕ್ರಿಕೆಟ್ ಆಡಿದ್ದಾರೆ.

    ಬೆಂಗಳೂರಿನಲ್ಲಿ ವಾಸವಿರುವ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಚಿಗಸೆ ಮೂಲದ ಮಾಲತೇಶ್ ಸಂಸದ ತೇಜಸ್ವಿ ಸೂರ್ಯ ಸ್ನೇಹಿತ. ಇತ್ತೀಚಿಗೆ ಅವರ ಮನೆಯ ಗೃಹ ಪ್ರವೇಶ ನಡೆದಿತ್ತು. ಆದರೆ ಗೃಹಪ್ರವೇಶಕ್ಕೆ ತೇಜಸ್ವಿ ಸೂರ್ಯ ಬಂದಿರಲಿಲ್ಲ. ಅದಕ್ಕಾಗಿ ಸಂಸದರು ತಮ್ಮ ಸುಮಾರು 12 ಜನ ಸ್ನೇಹಿತರೊಂದಿಗೆ ಬಾಳೆಹೊನ್ನೂರಿಗೆ ಬಂದಿದ್ದರು. ಇದೇ ವೇಳೆ, ಸ್ನೇಹಿತನ ಮನೆ ಮುಂಭಾಗ ಭತ್ತದ ಕಣದಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿದ್ದನ್ನ ಗಮನಿಸಿ ತೇಜಸ್ವಿ ಸೂರ್ಯ ಅವರು ತಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗಿ ಭತ್ತದ ಕಣದಲ್ಲೇ ಸುಮಾರು ಒಂದು ಗಂಟೆಗಳ ಕಾಲ ಕ್ರಿಕೆಟ್ ಆಡಿದ್ದಾರೆ.

    ಕ್ರಿಕೆಟ್ ಆಡಿದ ಬಳಿಕ ತನ್ನ ಸ್ನೇಹಿತರೊಂದಿಗೆ ಬಾಳೆಹೊನ್ನೂರಿನ ಭದ್ರಾ ನದಿ, ಕಾಫಿ ತೋಟ, ಹೊಲಗದ್ದೆಗಳನ್ನು ಸುತ್ತು ಹೊಡೆದು, ಮಲೆನಾಡಿನ ಸೌಂದರ್ಯವನ್ನ ಸವೆದಿದ್ದಾರೆ. ಸಂಸದರೊಂದಿಗೆ ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಪುಣ್ಯಪಾಲ್, ನಾಗರಾಜ್ ಭಟ್, ಶಶಾಂಕ್, ಮಂಜುನಾಥ್ ಕ್ರಿಕೆಟ್ ಆಡಿ ಸೆಲ್ಫಿ ಹೊಡೆದುಕೊಂಡು ಖುಷಿ ಪಟ್ಟಿದ್ದಾರೆ.

    ಕ್ರಿಕೆಟ್ ಆಡುವಾಗ ಸಂಸದ ತೇಜಸ್ವಿ ಸೂರ್ಯ ಅವರು ಎಲ್ಲರೊಂದಿಗೆ ತಾವೂ ಕೂಡ ಒಬ್ಬನೆಂಬಂತೆ ಮಿಂಗಲ್ ಆಗಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮಾಡಿ ಉತ್ತಮ ಕ್ರಿಕೆಟ್ ಆಟಗಾರ ಎಂಬುದನ್ನು ತೋರಿಸಿದ್ದಾರೆ. ಬಾಳೆಹೊನ್ನೂರು ಹುಡುಗರು ಕೂಡ ಸಂಸದರ ಜೊತೆ ಕ್ರಿಕೆಟ್ ಆಡಿ ಖುಷಿ ಪಟ್ಟಿದ್ದಾರೆ.

  • ರಾಜ್ಯ ಹೆದ್ದಾರಿಯಲ್ಲಿ ಬಿರುಕು – ಪ್ರವಾಸಿಗರು, ಸ್ಥಳೀಯರಲ್ಲಿ ಆತಂಕ

    ರಾಜ್ಯ ಹೆದ್ದಾರಿಯಲ್ಲಿ ಬಿರುಕು – ಪ್ರವಾಸಿಗರು, ಸ್ಥಳೀಯರಲ್ಲಿ ಆತಂಕ

    ಚಿಕ್ಕಮಗಳೂರು: ರಾಜ್ಯ ಹೆದ್ದಾರಿ ಮಾರ್ಗ ಮಧ್ಯೆ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಯವರೆಗೂ ರಸ್ತೆ ಬಿರುಕು ಬಿಟ್ಟಿದ್ದು ಸ್ಥಳೀಯರು ಹಾಗೂ ವಾಹನ ಸವಾರರು ಆತಂಕಕ್ಕೀಡಾಗುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಎನ್‍ಆರ್ ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಇಟ್ಟಿಗೆ-ಸೀಗೋಡು ಗ್ರಾಮದಲ್ಲಿ ಭೂಮಿ ಬಿರುಕು ಬಿಟ್ಟಿದೆ. ಇದರಿಂದ ಜಯಪುರ, ಕೊಪ್ಪ, ಶೃಂಗೇರಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಸಂಚರಿಸುವ ಜನರಲ್ಲಿ ಭಯ ಮೂಡಿದೆ.

    ಬಾಳೆಹೊನ್ನೂರು ಸಮೀಪದ ಸೀಗೋಡು ಬಳಿಯ ಶಿವನಗರದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಾಣಕ್ಕಾಗಿ ಬೋರ್ ವೆಲ್ ಕೊರೆಸುವ ವೇಳೆ ರಸ್ತೆ ಬಿರುಕು ಬಿಟ್ಟಿದೆ. ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಜಯಪುರ ಸೇರಿದಂತೆ ಹತ್ತಾರು ಹಳ್ಳಿಗಳ ಸಂಚಾರಕ್ಕೆ ಇರುವುದು ಇದೊಂದೇ ಮಾರ್ಗ. ಈಗ ಈ ದಾರಿಯೂ ಬಿರುಕು ಬಿಟ್ಟಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಈ ಮಾರ್ಗ ಬಂದ್ ಆದ್ರೆ, ಶೃಂಗೇರಿ ಶಾರದಾಂಬೆ ದರ್ಶನಕ್ಕೆ ಹೋಗುವ ಭಕ್ತರು ಹಾಗೂ ಈ ಭಾಗದ ಜನ ಹತ್ತಾರು ಕಿಮೀ ಬಳಸಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಇದೇ ರಸ್ತೆ ಮೇಲೆ ಸರಕುಗಳನ್ನು ಸಾಗಿಸುವ ದೊಡ್ಡ ದೊಡ್ಡ ವಾಹನಗಳು ಸಂಚರಿಸಿದಲ್ಲಿ ರಸ್ತೆ ಕುಸಿಯುವ ಆತಂಕ ಸ್ಥಳೀಯರಲ್ಲಿ ದಟ್ಟವಾಗಿದೆ.

    2019ರ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಇಲ್ಲಿ ಯತೇಚ್ಛವಾಗಿ ಮಳೆ ಸುರಿದಿತ್ತು. ಮಳೆ ನೀರು ರಾಜ್ಯ ಹೆದ್ದಾರಿಯಲ್ಲಿ ನದಿಯಂತೆ ಹರಿದು ಅಲ್ಲಲ್ಲೇ ಭೂಕುಸಿತ ಸಂಭವಿಸಿತ್ತು. ಭೂಮಿಯ ತೇವಾಂಶ ಹೆಚ್ಚಿದ್ದು ರಸ್ತೆ ಬಿರುಕು ಬಿಟ್ಟಿರಬಹುದೆಂದು ಸ್ಥಳೀಯರೇ ಶಂಕಿಸಿದ್ದಾರೆ. ಆದರೆ ಮಲೆನಾಡಲ್ಲಿ ಮಳೆ ನಿಂತ್ರು ಮಳೆಯ ಅವಾಂತರ ನಿಂತಿಲ್ವಾ ಎಂಬಂತಾಗಿದ್ದು ಮುಂದೇನೋ ಎನ್ನುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಬೋರ್‍ಗೆ ಭೂಮಿ ಬಾಯ್ಬಿಟ್ಟಿದ್ದು ಮಲೆನಾಡಿನ ಇತಿಹಾಸದಲ್ಲಿ ಇದೇ ಮೊದಲು. ಭೂಮಿ ಬಾಯ್ಬಿಟ್ಟಿರುವುದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಿದ್ದರು ಕೂಡ, ಕೂಡಲೇ ಸಂಬಂಧಪಟ್ಟ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ರಸ್ತೆ ಹಾಗೂ ಭೂಮಿಯ ಸಾಮಥ್ರ್ಯ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

  • ಹಸಿರು ಬಣ್ಣಕ್ಕೆ ತಿರುಗಿದ ಕೆರೆ – ರಾಸಾಯನಿಕ ಮಿಶ್ರಣದ ಶಂಕೆ

    ಹಸಿರು ಬಣ್ಣಕ್ಕೆ ತಿರುಗಿದ ಕೆರೆ – ರಾಸಾಯನಿಕ ಮಿಶ್ರಣದ ಶಂಕೆ

    ಚಿಕ್ಕಮಗಳೂರು: 10 ವರ್ಷದ ಬಳಿಕ ಕೆರೆ ತುಂಬಿದೆ ಎಂದು ಗ್ರಾಮಸ್ಥರು ಖುಷಿಪಡುವಷ್ಟರಲ್ಲಿ ಕೆರೆಯ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿರುವುದು ಗ್ರಾಮಸ್ಥರನ್ನು ತಲೆ ಮೇಲೆ ಕೈಹೊದ್ದು ಕೂರುವಂತೆ ಮಾಡಿದೆ.

    ತಾಲೂಕಿನ ಆರದವಳ್ಳಿ ಕೆರೆ ಕಳೆದ 10 ವರ್ಷಗಳಿಂದ ತುಂಬಿರಲಿಲ್ಲ. ಈ ವರ್ಷ ತುಂಬಿದರಿಂದ ಜಾನುವಾರುಗಳು ಹಾಗೂ ಕೃಷಿಗೆ ಸಮೃದ್ಧ ನೀರು ದೊರೆಯಿತು ಎಂದು ಖುಷಿ ಪಟ್ಟಿದ್ದರು. ಆದರೆ ಕೆರೆಗೆ ರಾಸಾಯನಿ ಮಿಶ್ರಣವಾಗಿರುವುದರಿಂದ ಕೆರೆಯ ಬಣ್ಣ ಹಸಿರು ಬಣ್ಣಕ್ಕೆ ತಿರುಗಿರುವುದು ಸ್ಥಳಿಯರನ್ನು ಆತಂಕಕ್ಕೆ ದೂಡಿದೆ. ಅಲ್ಲದೆ ಕೆರೆ ತನ್ನ ರೂಪವನ್ನು ಬದಲಿಸಿಕೊಳ್ಳುತ್ತಿದ್ದಂತೆ ಊರಿನ ತುಂಬಾ ದುರ್ನಾತ ಬೀರಲಾರಂಭಿಸಿದೆ. ದಾರಿಹೊಕ್ಕರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿ, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

    ಕೆರೆಯ ಬಣ್ಣ ಬದಲಾಗುತ್ತಿದ್ದಂತೆ ಕೆರೆಯಲ್ಲಿದ್ದ ಮೀನು-ಏಡಿ ಸೇರಿದಂತೆ ಜಲಚರಗಳು ಸಾವಿಗೀಡಾಗಿವೆ. ಸದ್ಯ ಈ ನೀರನ್ನು ಯಾವುದಕ್ಕೂ ಬಳಸಲಾರದಂತಾಗಿದೆ. ಕೆರೆಯಲ್ಲಿ ಮೀನು ಸಾಕಾಣಿಕೆಗೆ ಗುತ್ತಿಗೆ ಪಡೆದವರು ಮೀನಿನ ಬೆಳವಣಿಗೆಗೆ ಅಥವಾ ಬೇರೆ ಯಾವುದೋ ಕಾರಣಕ್ಕೆ ರಾಸಾಯನಿಕ ಬಳಸಿರಬಹುದು. ಆದ್ದರಿಂದ ಕೆರೆ ನೀರು ಹಸಿರು ಬಣ್ಣಕ್ಕೆ ತಿರುಗಿದೆ ಎಂದು ಶಂಕಿಸಲಾಗಿದೆ.

    ಕೆರೆಯ ಪಕ್ಕದಲ್ಲೇ ಶಾಲೆ-ಅಂಗನವಾಡಿ ಇದ್ದು ಮಕ್ಕಳು ಮೂಗು ಮುಚ್ಚಿಕೊಂಡೇ ಓಡಾಡುತ್ತಿದ್ದಾರೆ. ಕೆರೆಯ ಪಕ್ಕದಲ್ಲೇ ಇರುವ ದೇವಸ್ಥಾನಕ್ಕೆ ಬರುವ ಭಕ್ತರು ಕೂಡ ಕೆರೆಯ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದಾರೆ. ಈ ನೀರನ್ನು ಈಗ ಜಾನುವಾರು ಕೂಡ ಕುಡಿಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಘಟನೆಗೆ ಸೂಕ್ತ ಕಾರಣ ತಿಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

    ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

    ಚಿಕ್ಕಮಗಳೂರು: ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮೃತನನ್ನು 22 ವರ್ಷದ ಅವಿನಾಶ್ ಎಂದು ಗುರುತಿಸಲಾಗಿದೆ. ಅವಿನಾಶ್ ಮೂಲತಃ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದವನಾಗಿದ್ದು, ಬಿ. ಹೊಸಳ್ಳಿ ಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ.

    ಯುವಕನ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಮೃತದೇಹಕ್ಕಾಗಿ ಪೊಲೀಸ್ ಹಾಗೂ ಸ್ಥಳಿಯರು ಹುಡುಕಾಟ ನಡೆಸಿದ್ದಾರೆ.

  • 45 ವರ್ಷದ ಹಿಂದೆ ವಿಷ್ಣುವರ್ಧನ್ ಬಳಸಿದ್ದ ಕಲ್ಲನ್ನು ಗಿಫ್ಟ್ ನೀಡಲಿದ್ದಾರೆ ಚಿಕ್ಕಮಗಳೂರಿನ ಜನ

    45 ವರ್ಷದ ಹಿಂದೆ ವಿಷ್ಣುವರ್ಧನ್ ಬಳಸಿದ್ದ ಕಲ್ಲನ್ನು ಗಿಫ್ಟ್ ನೀಡಲಿದ್ದಾರೆ ಚಿಕ್ಕಮಗಳೂರಿನ ಜನ

    ಚಿಕ್ಕಮಗಳೂರು: ಸಾಹಸಸಿಂಹ, ನಟ ವಿಷ್ಣುವರ್ಧನ್ ಅವರ ಮುಂದಿನ ಹುಟ್ಟುಹಬ್ಬಕ್ಕೆ ಅವರ ಕುಟುಂಬಸ್ಥರು ಹಾಗೂ ಪತ್ನಿ ಭಾರತಿ ವಿಷ್ಣುವರ್ಧನ್‍ಗೆ ಚಿಕ್ಕಮಗಳೂರಿನ ಜನ ಎಂದೂ ಮರೆಯದ ವಿಶೇಷವಾದ ಕಲ್ಲನ್ನು ಉಡುಗೊರೆಯಾಗಿ ನೀಡಲಿದ್ದಾರೆ.

    ಸ್ವತಃ ವಿಷ್ಣುವರ್ಧನ್ ಅವರೇ ಹಿಡಿದು ಚಿತ್ರಕ್ಕಾಗಿ ಬಳಸಿದ್ದ ಕಲ್ಲು. 45 ವರ್ಷಗಳಿಂದ ಆ ಸಾಧಾರಣ ಕಲ್ಲನ್ನು ರಕ್ಷಣೆ ಮಾಡಿಕೊಂಡು ಬಂದಿರುವ ಮಲೆನಾಡಿಗರು, ಈಗ ಆ ಕಲ್ಲನ್ನು ಅವರ ಕುಟುಂಬಸ್ಥರಿಗೆ ನೀಡಲು ಮುಂದಾಗಿದ್ದಾರೆ. ನೋಡೋಕೆ ಇದೊಂದು ಕಲ್ಲಷ್ಟೆ. ಆದರೆ ಈ ಕಲ್ಲನ್ನು ಹಿಡಿದು ವಿಷ್ಣುವರ್ಧನ್ ನಟಿಸಿದ್ದ ನಟನೆ, ತೋರಿದ ಭಾವ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿರೋದಂತು ಸತ್ಯ. ಅಂತಹ ಕಲ್ಲನ್ನು ಭಾರತಿ ವಿಷ್ಣುವರ್ಧನ್ ಉಡುಗೊರೆಯಾಗಿ ಪಡೆಯಲಿದ್ದಾರೆ. ಇದನ್ನು ಓದಿ: ಭೂತಯ್ಯನ ಮಗ ಅಯ್ಯು ನೆನಪು – ಇಂದಿಗೂ ಹಾಗೆಯೇ ಇದೆ ಮನೆ, ಹೋಟೆಲ್

    ಆ ಕಲ್ಲು ಭಾರತೀಯ ಚಿತ್ರರಂಗದ ಎವರ್ ಗ್ರೀನ್ ಸಿನಿಮಾ, ‘ಭೂತಯ್ಯನಮಗ ಅಯ್ಯು’ ಚಿತ್ರದಲ್ಲಿ ವಿಷ್ಣುವರ್ಧನ್ ಕತ್ತಿಯನ್ನ ಮಸೆದ ಕಲ್ಲು. ಈ ಚಿತ್ರದ ಶೇಕಡ 60ರಷ್ಟು ಭಾಗ ಚಿತ್ರೀಕರಣಗೊಂಡಿದ್ದು ಚಿಕ್ಕಮಗಳೂರು ತಾಲೂಕಿನ ಕಳಸಾಪುರದಲ್ಲಿ. ಆ ಕಲ್ಲನ್ನು ಅದೇ ಊರಿನ ಜನ 45 ವರ್ಷಗಳಿಂದ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಹಳೇ ಮನೆಯಲ್ಲಿದ್ದ ಕಲ್ಲನ್ನು ಹೊಸ ಮನೆಗೂ ಕೊಂಡೊಯ್ದಿದ್ದಾರೆ. ಬೇರೆ-ಬೇರೆ ಸಿನಿಮಾದವರು ಶೂಟಿಂಗ್‍ಗೆ ಬಂದಾಗ ಕೇಳಿದಾಗಲು ಕೊಟ್ಟಿಲ್ಲ. ದುಡ್ ಕೊಡುತ್ತೇವೆ ಎಂದರು ಇಲ್ಲ ಅಂದಿದ್ದಾರೆ. ಈಗ ಆ ಕಲ್ಲನ್ನು ಊರಿನ ಯುವಕರು ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಅವರ ಮನೆಯವರಿಗೆ ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ವಿಷ್ಣುವರ್ಧನ್ ಅವರ ಮುಂದಿನ ಹುಟ್ಟುಹಬ್ಬದಂದು ಅವರ ಮನೆಗೆ ತೆರಳಿ ಭಾರತಿ ಅವರ ಕೈಗೆ ಅದನ್ನು ನೀಡಲು ಗ್ರಾಮದ ಯುವಕರು ನಿರ್ಧರಿಸಿದ್ದಾರೆ.

    ಊರಿನ ಜನ ಅದರಲ್ಲಿ ವಿಷ್ಣುವರ್ಧರನ್ನು ಕಾಣುತ್ತಿದ್ದು, ಅವರ ಮಾತು-ಕಥೆ, ಜನರೊಂದಿಗೆ ಬೆರೆಯುತ್ತಿದ್ದ ಅವರ ಮುಕ್ತ ಮನಸ್ಸನು ಆ ಕಲ್ಲಿನಲ್ಲಿ ಕಾಣುತ್ತಿದ್ದಾರೆ. 45 ವರ್ಷದಿಂದ ಯಾರಿಗೂ ಕೊಟ್ಟಿಲ್ಲ. 45 ವರ್ಷಗಳಿಂದ ವಿಷ್ಣು ಅವರ ವ್ಯಕ್ತಿತ್ವವನ್ನು ಕಲ್ಲಿನಲ್ಲಿ ಕಾಣುತ್ತಿದ್ದಾರೆ. ಇದು ಬದುಕಿನ ಸಾರ್ಥಕತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಭಾರತಿ ವಿಷ್ಣುವರ್ಧನ್ ಅವರ ಜೀವಮಾನದಲ್ಲಿ ಸಾವಿರಾರು, ಲಕ್ಷಾಂತರ ಉಡುಗೊರೆಗಳನ್ನ ಪಡೆದಿರಬಹುದು. ಆದರೆ ಈ ಉಡುಗೊರೆಯಂತಹಾ ಸ್ಪೆಷಲ್ ಗಿಫ್ಟ್ ಅವರಿಗೆ ಎಂದೂ ಸಿಕ್ಕಿರೋದಿಲ್ಲ ಎಂಬ ಭಾವನೆ ಯುವಕರದ್ದು.

    https://www.facebook.com/publictv/videos/2503585009931141/

  • ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನೇಮಕಕ್ಕೆ ತೀವ್ರ ವಿರೋಧ

    ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನೇಮಕಕ್ಕೆ ತೀವ್ರ ವಿರೋಧ

    ಚಿಕ್ಕಮಗಳೂರು: ಜನವರಿ 10 ಮತ್ತು 11ರಂದು ಜಿಲ್ಲೆಯ ಶೃಂಗೇರಿಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಲ್ಕುಳಿ ವಿಠಲ್ ಹೆಗ್ಡೆ ವಿರುದ್ಧ ತೀವ್ರ ಅಸಾಮಾಧಾನ ವ್ಯಕ್ತವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಕಲ್ಕುಳಿ ವಿಠಲ್ ಹೆಗ್ಡೆ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದೆ.

    ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗುವವರು ವಿವಾದಗಳಿಂದ ದೂರವಿದ್ದು, ರಾಜಕೀಯಕ್ಕೂ ಅಂಟಿಕೊಂಡಿರದೆ ಸಾಹಿತ್ಯ ಕೃಷಿ ಮಾಡಿದ ಸರ್ವಮಾನ್ಯ ವ್ಯಕ್ತಿಗಳಾಗಿ ಕ್ರಿಮಿನಲ್ ಆರೋಪಗಳಿಂದ ಮುಕ್ತರಾಗಿರಬೇಕು. ಆದರೆ ಕಲ್ಕುಳಿ ವಿಠಲ್ ಹೆಗ್ಡೆ ವಿವಾದಿತ ವ್ಯಕ್ತಿಯಾಗಿದ್ದು, ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಯ ಎಲ್ಲಾ ಅಂಶಗಳನ್ನ ಗಾಳಿಗೆ ತೂರಿ ಏಕಪಕ್ಷೀಯವಾಗಿ ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ ಎಂದು ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಆರೋಪಿಸಿದೆ.

    ಕನ್ನಡ ರಾಜ್ಯೋತ್ಸವದಂದು ತಾಲೂಕು ಸಾಹಿತ್ಯ ಪರಿಷತ್ ಸನ್ಮಾನಕ್ಕಾಗಿ ಕಲ್ಕುಳಿ ವಿಠಲ್ ಹೆಗ್ಡೆ ಹೆಸರನ್ನು ಸೂಚಿಸಿತ್ತು. ಆದರೆ ಇವರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಇವರ ಹೆಸರನ್ನ ಕೈಬಿಡಲಾಗಿತ್ತು. ಈಗ ಮತ್ತೆ ಅವರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸಿ ಮತ್ತೊಂದು ವಿವಾದ ಸೃಷ್ಟಿಸುತ್ತಿರುವುದು ವಿಪರ್ಯಾಸ ಎಂದು ವೇದಿಕೆ ಹೇಳಿದೆ. ಇವರದ್ದು ನಕ್ಸಲ್ ಚಟುವಟಿಕೆಗಳನ್ನು ಬೆಂಬಲಿಸುವ ಪ್ರವೃತ್ತಿ ಎಂದು ಪೊಲೀಸ್ ವರದಿಗಳು ಸ್ಪಷ್ಟಪಡಿಸಿವೆ. ಇವರೊಂದಿಗೆ ಪ್ರಮುಖ ಹೋರಾಟಗಳಲ್ಲಿ ಭಾಗಿಯಾದವರು ಭೂಗತರಾಗಿ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಪ್ರಮುಖ ನಕ್ಸಲೈಟ್‍ಗಳೆಂದು ಪೊಲೀಸ್ ಇಲಾಖೆ ಘೋಷಿಸಿರುವ ವ್ಯಕ್ತಿಗಳೊಂದಿಗೆ ಇವರ ಸಂಬಂಧ ಹೊಂದಿದ್ದರು ಎಂದು ರಾಜ್ಯಕ್ಕೆ ಗೊತ್ತಿದೆ ಅಂತಿದೆ ವೇದಿಕೆ.

    2006-07ನೇ ಇಸವಿಯಲ್ಲಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಕ್ಸಲ್ ನಿಗ್ರಹ ದಳ ಹೊರತಂದ ‘ಮಲೆನಾಡಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ನಕ್ಸಲೀಯರ ವಿವರಗಳು’ ಎಂಬ ಕೈಪಿಡಿಯಲ್ಲಿ ಮಲೆನಾಡಿನಲ್ಲಿ ನಕ್ಸಲರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿರುವ ವ್ಯಕ್ತಿಗಳ ವಿವರಗಳು ಎಂಬ ತಲೆಬರಹದಲ್ಲಿ ಇವರ ಹೆಸರೇ ಮೊದಲಿನಲ್ಲಿದೆ. ಅಷ್ಟೇ ಅಲ್ಲದೆ, ದಲಿತ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಆಸ್ತಿಯನ್ನ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಬಗ್ಗೆ ಮೊಕದ್ದಮೆಗಳು ದಾಖಲಾಗಿದ್ದು, ನ್ಯಾಯಾಲಯದ ಕಟಕಟ್ಟೆ ಕೂಡ ಏರಿದೆ. ಆದ್ದರಿಂದ ಕೂಡಲೇ ಇವರನ್ನು ಬದಲಾವಣೆ ಮಾಡಬೇಕು ಹಾಗೂ ಸಾಹಿತ್ಯ ಸಮ್ಮೇಳನವನ್ನು ಮುಂದಕ್ಕೆ ಹಾಕಬೇಕೆಂದು ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಸದಸ್ಯರಾದ ಸಂತೋಷ್ ಕೋಟ್ಯಾನ್, ಸುಮಂತ್, ರಂಜಿತ್ ಶೆಟ್ಟಿ, ನೂತನ್, ಕಿಶೋರ್, ಜ್ಞಾನೇಂದ್ರ ಹಾಗೂ ಕಾರ್ತಿಕ್ ಎಂಬುವರು ಎಸ್‍ಪಿ ಹರೀಶ್ ಪಾಂಡೆಗೆ ಮನವಿ ಸಲ್ಲಿದ್ದಾರೆ.

  • ಕೆರೆ ತುಂಬಿದ ಖುಷಿಗೆ 70 ವರ್ಷದ ಬಳಿಕ ಸುಂದರ ತೆಪ್ಪೋತ್ಸವ

    ಕೆರೆ ತುಂಬಿದ ಖುಷಿಗೆ 70 ವರ್ಷದ ಬಳಿಕ ಸುಂದರ ತೆಪ್ಪೋತ್ಸವ

    ಚಿಕ್ಕಮಗಳೂರು: ಶಾಶ್ವತ ಬರದ ತವರಲ್ಲಿ 12 ವರ್ಷಗಳ ಬಳಿಕ ಕೆರೆ ತುಂಬಿದ ಖುಷಿಗೆ ಗ್ರಾಮಸ್ಥರು ಅದ್ಧೂರಿ ಹಾಗೂ ಸುಂದರ ತೆಪ್ಪೋತ್ಸವ ಮಾಡಿ ಬಸವೇಶ್ವರ ಸ್ವಾಮಿಗೆ ಉಘೇ ಅಂದಿದ್ದಾರೆ.

    ಕಡೂರು ತಾಲೂಕು ಸಿಂಗಟಗೆರೆ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದ ಕೆರೆ 12 ವರ್ಷಗಳಿಂದ ತುಂಬಿರಲಿಲ್ಲ. 70 ವರ್ಷಗಳಿಂದ ತೆಪ್ಪೋತ್ಸವ ನಿಂತಿದರಿಂದ ಈ ತಲೆಮಾರಿನ ಜನ ಗ್ರಾಮದ ತೆಪ್ಪೋತ್ಸವವನ್ನೇ ಕಂಡಿರಲಿಲ್ಲ. 75 ವರ್ಷಗಳ ಅವಧಿಯಲ್ಲಿ ಹತ್ತಾರು ಬಾರಿ ಕೆರೆ ತುಂಬಿದ್ರು ಹಣದ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ತೆಪ್ಪೋತ್ಸವ ನಡೆದಿರಲಿಲ್ಲ. ಈ ವರ್ಷ ಕೆರೆ ತುಂಬಿದ ಪರಿಣಾಮ ವೃದ್ಧರು, ಯುವಕ-ಯುವತಿಯರೆಲ್ಲಾ ಸೇರಿ ತೆಪ್ಪೋತ್ಸವ ನಡೆಸಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕು ಶಾಶ್ವತ ಬರಗಾಲಕ್ಕೆ ತುತ್ತಾದ ಕ್ಷೇತ್ರ. ಕಡೂರು ತಾಲೂಕಿನ ಜನ-ಜಾನುವಾರಗಳಿಗೆ ಕುಡಿಯೋ ನೀರಿಗೂ ಹಾಹಾಕಾರವಿತ್ತು. ಎಷ್ಟು ಹಾಹಾಕಾರವಂದರೆ ಗುಡ್ಡಕ್ಕೆ ಮೇವಿಗೆ ಹೊಡೆದ ದನಕರುಗಳನ್ನ ಅಲ್ಲೆ ಬಿಟ್ಟು ಬರುವಷ್ಟು ಮತ್ತು ಹೋದ ಬೆಲೆಗೆ ಮಾರುವಷ್ಟು ಇವರನ್ನು ಬರಗಾಲ ಕಾಡುತ್ತಿತ್ತು. ಆದರೆ ಈ ವರ್ಷ ಮಳೆಯಿಂದ ಕೆರೆ ತುಂಬಿದ್ದು, ಹಳ್ಳಿಗರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಅದೇ ಖುಷಿಯಲ್ಲಿ ಈ ವರ್ಷ ವಿಧ-ವಿಧದ ಹೂವುಗಳಿಂದ ಅಲಂಕಾರ ಮಾಡಿ ತೆಪ್ಪೋತ್ಸವ ನಡೆಸಿ ಖುಷಿ ಪಟ್ಟಿದ್ದಾರೆ.

    ಹಾಸನ-ಚಿತ್ರದುರ್ಗ-ಚಿಕ್ಕಮಗಳೂರಿನ ಗಡಿಗ್ರಾಮವಾದ ಈ ಹಳ್ಳಿಯ ತೆಪ್ಪೋತ್ಸವದಲ್ಲಿ ಹೊಸದುರ್ಗ, ಕಡೂರು, ಅರಸೀಕೆರೆ ತಾಲೂಕಿನ ಹತ್ತಾರು ಹಳ್ಳಿಯ ಜನ ಒಗ್ಗೂಡಿ ತೆಪ್ಪೋತ್ಸವ ನಡೆಸಿದರು. ಜಾತ್ರೆಯಲ್ಲಿ ಐದು ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು.

  • ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ

    ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ

    – 3 ದಿನದಲ್ಲಿ ಸಮಸ್ಯೆಗೆ ಪರಿಹಾರ ಅಂದ್ರು ಸುರೇಶ್‍ಕುಮಾರ್
    – ಇದು ಪಬ್ಲಿಕ್ ಟಿವಿ ಇಂಪ್ಯಾಕ್ಟ್

    ಚಿಕ್ಕಮಗಳೂರು: ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ ಮಾಡುತ್ತಿರುವ ಸುದ್ದಿಯನ್ನು ಪಬ್ಲಿಕ್ ಟಿವಿ ಸುದ್ದಿ ಪ್ರಸಾರ ಮಾಡಿತ್ತು. ಈ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ಸುರೇಶ್ ಕುಮಾರ್ ಅವರು ಸುದ್ದಿ ನೋಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಲು ಹೇಳಿದ್ದರು. ಸದ್ಯ ಸುರೇಶ್ ಕುಮಾರ್  ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸ್ಥಳಕ್ಕೆ ಭೇಟಿ ನೀಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  ಇದನ್ನೂ ಓದಿ: ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ

    ಪೋಸ್ಟ್ ನಲ್ಲಿ ಏನಿದೆ?
    ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಿ ಬಸವನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಸಮಸ್ಯೆ ಮೂರು ದಿನದಲ್ಲಿ ಬಗೆಹರಿಯುವುದು. ಒಂದೇ ಕೊಠಡಿಯಲ್ಲಿ ಮೂರು ತರಗತಿಗಳನ್ನು ನಡೆಸುತ್ತಿರುವ ಕಡೂರು ತಾಲೂಕಿನ ಬಸವನಹಳ್ಳಿ ಸರ್ಕಾರಿ ಶಾಲೆಯ ಸಮಸ್ಯೆ ಇನ್ನು ಒಂದು ವಾರದಲ್ಲಿ ಬಗೆಹರಿಯಲಿದೆ.

    ಶನಿವಾರ ಮಾಧ್ಯಮಗಳ ಮೂಲಕ ಈ ಸಮಸ್ಯೆ ಗಮನಕ್ಕೆ ಬಂದಿತ್ತು. ಈ ಶಾಲೆಗೆ ಭಾನುವಾರ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿದ್ದು, ಈ ಶಾಲೆಯಲ್ಲಿರುವ ಐದು ಕೊಠಡಿಗಳ ಪೈಕಿ ಕಳೆದ ಮಳೆಗಾಲದ ಸಂದರ್ಭದಲ್ಲಿ ಹಾನಿಗೊಳಗಾದ ಎರಡು ಕೊಠಡಿಗಳ ಹೆಂಚುಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದ್ದು ಒಂದು ವಾರದಲ್ಲಿ ಈ ಕೆಲಸ ಪೂರೈಸಲು ನಿರ್ದೇಶನ ನೀಡಲಾಗಿದೆ.  ಇದನ್ನೂ ಓದಿ: ಗಡಿಗ್ರಾಮ ಗೋಪಿನಾಥಂ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಿದ ಸಚಿವ ಸುರೇಶ್ ಕುಮಾರ್

    ಕಡೂರು ತಾಲೂಕಿನ ಕೆ.ಬಿದರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿ.ಬಸವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ 2007ರವರಗೆ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಾಗಿತ್ತು. ಸರ್ಕಾರ ಈ ಶಾಲೆಯನ್ನು 2008ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಎಂದು ಮೇಲ್ದರ್ಜೆಗೇರಿಸಿತ್ತು. ಆದ್ರೆ ಶಾಲೆಗೆ ಕೊಡಬೇಕಾದ ಮೂಲಭೂತ ಸೌಕರ್ಯವನ್ನು ಕೊಟ್ಟೇ ಇಲ್ಲ. ಅಂದು ಇದ್ದ ಐದೇ ಕೊಠಡಿಯಲ್ಲಿ ಪಾಠ-ಪ್ರವಚನ ನಡೆಯುತ್ತಿತ್ತು. ಮಳೆ-ಗಾಳಿಗೆ ಎರಡು ಕೊಠಡಿಗಳು ಹಾಳಾಗಿದ್ದು ಅಲ್ಲಿ ಮಕ್ಕಳನ್ನು ಕೂರಿಸ್ತಿಲ್ಲ. ಉಳಿದ ಮೂರು ಕೊಠಡಿಯಲ್ಲಿ ಒಂದರಲ್ಲಿ 1ನೇ ತರಗತಿಯಿಂದ 4ನೇ ತರಗತಿ ಮಕ್ಕಳು. ಮತ್ತೊಂದರಲ್ಲಿ ಐದನೇ ತರಗತಿಯಿಂದ 6 ನೇ ತತರಗತಿ ಮಕ್ಕಳು. ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಏಳನೇ ತರಗತಿ ಮಕ್ಕಳು. ಹೆಡ್ ಮಾಸ್ಟ್ರು ಮೀಟಿಂಗ್ ಅಂದ್ರೆ ಆ ಮಕ್ಕಳು ಹೊರಗೆ ಹೋಗಬೇಕಾಗುತ್ತದೆ. ಇದೇ ರೀತಿ ಮೂರು ವರ್ಷದಿಂದ ನಡೆದುಕೊಂಡು ಬಂದಿದೆ.